ವಿಷಯದ ವಿವರಗಳಿಗೆ ದಾಟಿರಿ

ಜೂನ್ 24, 2017

1

ಹೌದು.ಐಟಿ ರಂಗ ಅಲ್ಲಾಡುತ್ತಿದೆ.ಆದರೆ,ಪ್ರಳಯವೇನೂ ಆಗಲಿಕ್ಕಿಲ್ಲ!

‍ನಿಲುಮೆ ಮೂಲಕ

– ರಾಕೇಶ್ ಶೆಟ್ಟಿ

ಭಾರತದ ಐಟಿ ವಲಯದೊಳಗೆ ಮತ್ತೊಮ್ಮೆ ಲಾವಾ ಕುದಿಯಲಾರಂಭಿಸಿದೆ.ಅಲ್ಲಲ್ಲಿ ಈ ಲಾವಾದ ಸ್ಪೋಟವೂ ಆಗಿದೆ.ಆದರಿದು ಆರಂಭ ಮಾತ್ರ ಎನಿಸುತ್ತಿದೆ.ಅಮೆರಿಕಾ ಮೂಲದ ಮಲ್ಟಿನ್ಯಾಷನಲ್ ಕಂಪೆನಿಯೊಂದರಲ್ಲಿ ದೊಡ್ಡ ಮಟ್ಟದಲ್ಲಿ ಉದ್ಯೋಗಿಗಳನ್ನು ತೆಗೆಯಲಾಗುತ್ತಿದೆ,ಸೀನಿಯರ್ ಹುದ್ದೆಯಲ್ಲಿದ್ದವರಿಗೆ ಬಲವಂತವಾಗಿ ನಿವೃತ್ತಿಯ ಹೆಸರಲ್ಲಿ ಎದ್ದು ಹೊರಡಿ ಎನ್ನುತ್ತಿದ್ದಾರೆ ಎಂದು ಇತ್ತೀಚೆಗೆ ಚೆನ್ನೈ ಕೋರ್ಟಿನಲ್ಲಿ ಕೇಸು ದಾಖಲಾಯಿತು. ಇತ್ತೀಚೆಗೆ ಬಂದ ಕೋರ್ಟಿನ ತೀರ್ಪಿನ ಪ್ರಕಾರ, ಉದ್ಯೋಗಿಗಳಿಗೆ ಇನ್ನೊಂದು ಅವಕಾಶವನ್ನು ಕೊಡಿ ಎಂದು ಕಂಪೆನಿಗೆ ಸೂಚಿಸಲಾಗಿದೆ.ಕಂಪೆನಿಯವರೇನೋ ಕೋರ್ಟಿನ ತೀರ್ಪು ಒಪ್ಪಿಕೊಂಡಿದ್ದಾರೆ.ಮತ್ತೆ ಒಳ ಕರೆದುಕೊಂಡವರನ್ನು ಮತ್ತೊಂದು ಕಾರಣ ನೀಡಿಯೋ ಅಥವಾ ಅವರಾಗಿಯೇ ಹೊರ ಹೋಗುವಂತೆ ಮಾಡುವುದನ್ನೇನು ಕಂಪೆನಿಯವರಿಗೆ ಹೇಳಿಕೊಡಬೇಕೆ?

ಹಾಗೆ ನೋಡಿದರೆ ಇದೊಂದೆ ಕಂಪೆನಿಯಲ್ಲಿ ಮಾತ್ರ ಹೀಗೆ ಉದ್ಯೋಗ ಕಡಿತ ಮಾಡುತ್ತಿಲ್ಲ. ಭಾರತ ಮೂಲದ ಹೆಸರಾಂತ ಐಟಿ ಕಂಪೆನಿಗಳೂ ಸಹ ಇದೇ ಕೆಲಸವನ್ನು ಮಾಡುತ್ತಿದೆ.ಆ ಅಮೆರಿಕನ್ ಮೂಲದ ಕಂಪೆನಿಯೇನೋ Mass Layoff ಮಾಡಲು ಕೈ ಹಾಕಿ ತನ್ನ ಹೆಸರು ಮೀಡಿಯಾಗಳಲ್ಲಿ ಕೆಟ್ಟ ಕಾರಣಕ್ಕೆ ಸುದ್ದಿಯಾಗುವಂತೆ ಮಾಡಿಕೊಂಡಿತು ಅಷ್ಟೇ. ಉಳಿದ “ದೊಡ್ಡ ದೊಡ್ಡ” ಹೆಸರಿನ ಕಂಪೆನಿಗಳು ಅದೇ ಕೆಲಸವನ್ನು ಸದ್ದಿಲ್ಲದೇ ಮಾಡುತ್ತಿವೆ.ಅದು Individually Target ಮಾಡುವ ಮೂಲಕ. ಒಂದಿಡೆ ಗುಂಪನ್ನು ಎದುರು ಹಾಕಿಕೊಳ್ಳುವ ಬದಲು ಒಬ್ಬೊಬ್ಬರನ್ನೇ ಹಿಡಿದು ಹೊರನೂಕಿದರೆ ದನಿಯೆತ್ತುವವರು ಯಾರಿರುತ್ತಾರೆ ಹೇಳಿ? ಮೊದಲೇ ಭಾರತೀಯ ಐಟಿ ಉದ್ಯೋಗಿಗಳಿಗೆ ಅಂತ ಯಾವುದೇ ಟ್ರೇಡ್ ಯೂನಿಯನ್,ಸಂಘಟನೆಗಳು ಇಲ್ಲ.ಹೀಗಿರುವಾಗ ಕಂಪೆನಿಗಳ ಪಾಲಿಗೆ ಆನೆ ನಡೆದಿದ್ದೆ ಹಾದಿಯೆಂಬಂತಾಗಿದೆ.

೨೦೦೮ರಲ್ಲಿ ಒಮ್ಮೆ ಇದೇ ರೀತಿಯ ಪರಿಸ್ಥಿತಿಯನ್ನು ನೋಡಿದವರು ನಾವು ಐಟಿ ಉದ್ಯೋಗಿಗಳು.ಆಗ ಜಾಗತಿಕ ಆರ್ಥಿಕ ಕುಸಿತ ನೆಪದಲ್ಲಿ ಪಿಂಕ್ ಸ್ಲಿಪ್ಪುಗಳನ್ನು ಪಡೆದ ನತದೃಷ್ಟರು ಬಹಳಷ್ಟು ಮಂದಿಯಿದ್ದರು.ಆ ಸಮಯದಲ್ಲಿ ಉದ್ಯಮಕ್ಕೆ ಹೊಸಬರಂತಿದ್ದ (೩-೫ ವರ್ಷದ ಅನುಭವವುಳ್ಳವರು) ಉದ್ಯೋಗಿಗಳ ಭವಿಷ್ಯದ ಮೇಲೆ ಈಗ ತೂಗುಗತ್ತಿ ಓಲಾಡುತ್ತಿದೆ. ಹೌದು.ಇದ್ದಕ್ಕಿದ್ದಂತೆ ಹೀಗೆ ಉದ್ಯೋಗ ಕಡಿತಕ್ಕೇನು ಕಾರಣ? ಕಂಪೆನಿಗಳು ನೀಡುತ್ತಿರುವ ಸಬೂಬು Re-Skill. ಉದ್ಯಮದಲ್ಲಿ ಈಗ ಹಳಬರಾಗಿರುವ ಬಹುತೇಕ ಮಂದಿ ಹೊಸ ತಂತ್ರಜ್ನಾನ,ಟೂಲ್ಸ್ ಗಳನ್ನು ಕಲಿಯುತ್ತಿಲ್ಲ.ಈಗಿನ ಉದ್ಯಮದ ರೂಲ್ಸುಗಳು ಬದಲಾಗಿವೆ. ಮೊದಲು ಮ್ಯಾನುವಲಿ ನಡೆಯುತ್ತಿದ್ದ ಕೆಲಸಗಳನ್ನು ಈಗ ಆಟೋಮೇಶನ್ ಮಾಡಲಾಗುತ್ತಿದೆ ಎನ್ನುತ್ತಿದ್ದಾರೆ. ಇದು ಭಾಗಶಃ ನಿಜವೂ ಹೌದು. ಐಟಿ ಉದ್ಯಮದಲ್ಲಿ ಪ್ರತಿ ವರುಷವೂ ಹೊಸ ಹೊಸ ತಂತ್ರಜ್ನಾನಗಳು ಹೊರಬರುತ್ತಿವೆ.ಆದರೆ ಹಾಗೆ ಹೊರಬರುವ ತಂತ್ರಜ್ನಾನಗಳೆಲ್ಲವೂ Practically Feasible ಆಗಿರುತ್ತವೆ ಎಂದೇನೂ ಇಲ್ಲ.ಇನ್ನು ಕೆಲವು ತಂತ್ರಜ್ನಾನಗಳು ದುಬಾರಿಯಾಗಿರುವುದರಿಂದ ಅದನ್ನು ದೊಡ್ಡ ದೊಡ್ಡ ಕಂಪೆನಿಗಳಷ್ಟೇ ಅಡಾಪ್ಟ್ ಮಾಡಿಕೊಳ್ಳಲು ಸಾಧ್ಯವಿರುತ್ತವೆ. ಸಣ್ಣ-ಪುಟ್ಟ ಕಂಪೆನಿಗಳು ಹಳೆಯ ರೀತಿಯಲ್ಲಿಯೇ ನಡೆಯುತ್ತಿರುತ್ತವೆ. ವಸ್ತುಸ್ಥಿತಿ ಹೀಗಿರುವಾಗ, ಈ Re-Skill ಎನ್ನುವುದು ಈಗಿನ ತಳಮಳಗಳಿಗೆ ಸಂಪೂರ್ಣ ಕಾರಣವಲ್ಲ. ನಿಜವಾದ ಕಾರಣವಿರುವುದು, protectionist measure ಎಂದು ಐಟಿ ಕಂಪೆನಿಗಳು ಕರೆಸಿಕೊಳ್ಳುವ ದುಡ್ಡು ಉಳಿಸುವ ವಿಧಾನ. ಅದರೆ ಜೊತೆಗೆ ಸೀನಿಯರ್ ಮ್ಯಾನೇಜ್ಮೆಂಟಿನ ತಲೆಕೆಟ್ಟ ನಿರ್ಧಾರಗಳಿಂದ ಜರ್ಜರಿತವಾಗಿರುವ ಕಂಪೆನಿಯ ಆರ್ಥಿಕ ಸ್ಥಿತಿಯನ್ನು ಸುಧಾರಿಸುವಂತ ಕಾರಣಗಳೇ ಹೆಚ್ಚಿವೆ. ಹೊಸ ತಂತ್ರಜ್ನಾನ ಕಲಿತವನಲ್ಲ ಎನ್ನುವ ಕಾರಣಕ್ಕಾಗಿ Mass Layoff ಮಾಡುವುದಾದರೆ, ಖಾಲಿಯಾದ ಅಷ್ಟು ಜಾಗಕ್ಕೆ ಹೊಸ ತಂತ್ರಜ್ನಾನ ಕಲಿತವರು ಮಾರುಕಟ್ಟೆಯಲ್ಲಿ ಸಿಗಬೇಕಲ್ಲ! ಸಿಕ್ಕಿದರು ಎಂದುಕೊಳ್ಳಿ ಅವರಿಗೆ ಅನುಭವವಿರದೇ ಯಾವ ಕಂಪೆನಿಯವರು ಸುಲಭವಾಗಿ ಹತ್ತಿರಬಿಟ್ಟುಕೊಳ್ಳುವುದಿಲ್ಲ.

ಉದಾಹರಣೆಗೆ, ಅದೊಂದು ಬಹಳ ಲಾಭದಲ್ಲಿ ನಡೆಯುತ್ತಿದ್ದ ಉದ್ಯೋಗಿ ಸ್ನೇಹಿಯೂ ಆಗಿದ್ದ ಪುರಾತನ ಐಟಿ ಕಂಪೆನಿ.ಅಂದಾಜು ಒಂದು ಲಕ್ಷದಷ್ಟು ಉದ್ಯೋಗಿಗಳಿದ್ದ ಆ ಕಂಪೆನಿ,ಮೂವತ್ತು ಸಾವಿರಕ್ಕೂ ಹೆಚ್ಚು ಜನರಿದ್ದ  ಅಮೇರಿಕನ್ ಮೂಲದ ಕಂಪೆನಿಯೊಂದನ್ನು ೨೦೧೫ರಲ್ಲಿ acquire ಮಾಡಿಕೊಂಡಿತು.ಈ ನಿರ್ಧಾರದಿಂದಾಗಿ ಕಂಪೆನಿ ಅಮೇರಿಕಾದ ಸಾಫ್ಟ್ವೇರ್ ಮಾರುಕಟ್ಟೆಯನ್ನು ಕೈವಶ ಮಾಡಿಕೊಳ್ಳಬಹುದು ಎನ್ನುವ ಕನಸು ಕಟ್ಟಿಕೊಂಡಿತ್ತು.ಆದರೆ ದಿನಕಳೆದಂತೆ ಇದೊಂದು ಲಾಭದಾಯಕವಲ್ಲದ ನಿರ್ಧಾರವೆನ್ನುವುದು ಅರಿವಾಗುತ್ತ ಬಂದಿತು. ಈ ಕಂಪೆನಿ ಉದ್ಯಮದಲ್ಲಿ ಬಹಳ ಹಳೆಯದು,ಉತ್ತಮವಾದ Process ಮತ್ತು ಲಾಭದಾಯಕ ಡೀಲುಗಳನ್ನೇ ಮಾಡಿಕೊಳ್ಳುತ್ತಿತ್ತು.ಆದರೆ ತಾವು ತೆಗೆದುಕೊಂಡ ಕಂಪೆನಿಯ Process ಅಷ್ಟೇನೂ Stable ಆಗಿಲ್ಲ ಮತ್ತು ಅವರು ಕ್ಲೈಂಟ್ಸುಗಳೊಂದಿಗೆ ಮಾಡಿಕೊಂಡಿರುವ ಒಪ್ಪಂದಗಳು ಆರ್ಥಿಕವಾಗಿ ಅಷ್ಟೇನೂ ಲಾಭ ತರುವಂತದಲ್ಲ ಎನ್ನುವುದು ಅರಿವಿಗೆ ಬರುವಷ್ಟರಲ್ಲಿ ಕಾಲ ಮಿಂಚಿತ್ತು.ಆಗುತ್ತಿರುವ ನಷ್ಟವನ್ನು ಸರಿದೂಗಿಸಲು ಇದ್ದ ಸುಲಭದ ದಾರಿ ನಸೀಬು ಕೆಟ್ಟ ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ನೀಡುವುದು.ಅಸಲಿಗೆ ಸರಿಯಾದ ನಿರ್ಧಾರ ತೆಗೆದುಕೊಳ್ಳದೇ ಎಡವಟ್ಟು ಮಾಡಿರುವುದು ಸೀನಿಯರ್ ಮ್ಯಾನೇಜ್ಮೆಂಟ್ ಆದರೂ,ಅವರ ತಪ್ಪಿಗೆ ಬಲಿಯಾಗಬೇಕಿರುವುದು ಮಿಡ್ ಸೀನಿಯರ್ ಲೆವೆಲ್ಲಿನ ಉದ್ಯೋಗಿಗಳು. ಹೀಗೆ ಮಿಡ್ ಸೀನಿಯರ್ ಲೆವೆಲ್ಲಿನವರನ್ನೇ ಟಾರ್ಗೆಟ್ ಮಾಡಲಿಕ್ಕಿರುವ ಮತ್ತೊಂದು ಕಾರಣವೆಂದರೇ, ಅವರನ್ನು ಹೊರ ಹಾಕಿದರೆ,ಅವರ ಜಾಗಕ್ಕೆ ಜ್ಯೂನಿಯರ್ ಲೆವೆಲ್ಲಿನವರನ್ನು ತಂದು ಕಡಿಮೆ ಸಂಬಳದಲ್ಲಿ ಅದೇ ಕೆಲಸವನ್ನು ಮಾಡಿಸಿಕೊಳ್ಳುವ ವ್ಯವಹಾರಸ್ಥರ ಲೆಕ್ಕಾಚಾರ..ಒಂದು ವಿಷಯದಲ್ಲಿ ಈ ಕಂಪೆನಿ ಜಾಣತನ ಮೆರೆಯಿತು. Mass Layoff ಮಾಡುವ ಬದಲಿಗೆ Individually Target ಮಾಡಿ ಒಂದೊಂದೆ ತಲೆ ಉರುಳಿಸಲಾರಂಭಿಸಿತು. ಒಮ್ಮೊಮ್ಮೆ ಮ್ಯಾನೇಜರ್ರುಗಳು ಒಪ್ಪದಿದ್ದರೂ ಅವನನ್ನು ಕಳುಹಿಸದಿದ್ದರೆ ನಿನ್ನನ್ನೇ ಕಳುಹಿಸಬೇಕಾಗುತ್ತದೆ ಎನ್ನುವ ಪರಿಸ್ಥಿತಿ ಸೃಷ್ಟಿಸಿತು. ಹೀಗೆ ಹೊರಗೆ ಕಳುಹಿಸಲು ಆರಿಸಿಕೊಂಡ ಸಬೂಬುಗಳು Increasing Bench Time ಮತ್ತು Poor Performance, Poor Performance Rating.

ದೊಡ್ಡ ದೊಡ್ಡ ಕಂಪೆನಿಗಳಲ್ಲಿ ಪ್ರಾಜೆಕ್ಟ್ ಇಲ್ಲದೇ ಖಾಲಿ ಇರುವವರ ಒಂದಿಷ್ಟು ಸಂಖ್ಯೆ ಯಾವಾಗಲೂ ಇದ್ದೇ ಇರುತ್ತದೆ. ಈ ಸಂಖ್ಯೆಗಳು ಹೊಸತಾಗಿ ಬರುವ ಪ್ರಾಜೆಕ್ಟುಗಳಿಗೆಂದು ಮೀಸಲಿಟ್ಟರೆ,ಹಲವು ಬಾರಿ ಕಂಪೆನಿಯ ಒಳಗೆ ಸ್ಥಾನಗಳು ತೆರವಾದಾಗ ತುರ್ತಾಗಿ ಹೊರಗಿನಿಂದ ಕರೆತರಲಾಗದು ಎಂಬ ದೃಷ್ಟಿಯಿಂದ ಇಟ್ಟುಕೊಂಡಿರುತ್ತಾರೆ.ಕಂಪೆನಿಯ ವ್ಯವಹಾರಗಳು ಏರುಪೇರಾಗಿ ನಿಗದಿತ ಪ್ರಾಜೆಕ್ಟುಗಳು ನಾನಾಕಾರಣಗಳಿಂದ ಕೈ ಜಾರಿದಾಗ,ಮುಂದೂಡಲ್ಪಟ್ಟಾಗ ಈ ಬೆಂಚ್ ರಿಸೋರ್ಸುಗಳಿಗೆ ಕಂಪೆನಿಯೇ ಹಣ ನೀಡಬೇಕಾಗುತ್ತದೆ (ಪ್ರಾಜೆಕ್ಟಿನ ಸಮಯದಲ್ಲಿ ಆ ಹಣ ಕ್ಲೈಂಟಿನಿಂದ ದೊರೆಯುತ್ತಿರುತ್ತದೆ).ವ್ಯವಹಾರದ ದೃಷ್ಟಿಯಿಂದ ಹೇಳುವುದಾದರೇ,ಉದ್ಯೋಗಿಯಿಂದ ಆ ಸಮಯದಲ್ಲಿ ಲಾಭವಿಲ್ಲದೇ ಕಂಪೆನಿ ಆತನನ್ನು ಸಾಕುತ್ತಿರುತ್ತದೆ.ಹೀಗೆ ಬೆಂಚಿನಲ್ಲಿರುವವರನ್ನು ನೋಡಿಕೊಳ್ಳಲೆಂದೇ ಮ್ಯಾನೇಜರ್,ಟೀಂಗಳಿರುತ್ತವೆ. ಅವರಿಗೆ ಸೂಕ್ತ ಕೆಲಸ ಹುಡುಕಿಕೊಡುವ ಜವಬ್ದಾರಿ ಅವರದ್ದೇ ಆಗಿರುತ್ತದೆ.ಯಾವುದೇ ಹೊಸ ಪ್ರಾಜೆಕ್ಟುಗಳು ಬರದಿರಲು ನಾನಾ ಕಾರಣಗಳಿರಬಹುದು.ಕೆಲವೊಮ್ಮೆ ಉತ್ತಮ ಅಭ್ಯರ್ಥಿಯಿದ್ದರೂ ಅವನ ಅರ್ಹತೆಗೆ ಸೂಕ್ತ ಪ್ರಾಜೆಕ್ಟ್,ಸ್ಥಾನ ಕೊಡಲು ಕಂಪೆನಿ ಸೋಲುತ್ತವೆ.ಇಂತಹ ಸಮಯದಲ್ಲಿ ಅವರನ್ನು ಕಂಪೆನಿಯಲ್ಲಿ ಇಟ್ಟುಕೊಳ್ಳುವುದಕ್ಕಿಂತ ಪಿಂಕ್ ಸ್ಲಿಪ್ ಕೊಡುವುದೇ ವ್ಯಾವಹಾರಿಕವಾಗಿ ಲಾಭವೆಂದು ನಿರ್ಧರಿಸಿ,ಒಂದು ಕೆಟ್ಟ ಘಳಿಗೆಯಲ್ಲಿ ಹೆಚ್.ಆರ್ ಮ್ಯಾನೇಜರ್ರುಗಳು ಉದ್ಯೋಗಿಯನ್ನು ಕೂರಿಸಿಕೊಂಡು ಇವತ್ತಿಗೆ ಈ ಕಂಪೆನಿಯಲ್ಲಿ ನಿನ್ನ ಕೆಲಸ ಮುಗಿಯಿತು ಎಂದು ಹೇಳಿ ಒಂದೆರಡು ತಿಂಗಳ ಹಣ ನೀಡುವುದಾಗಿ ತಿಳಿಸಿ ನಿರ್ದಾಕ್ಷಿಣ್ಯವಾಗಿ ಕೈ ತೊಳೆದುಕೊಳ್ಳುತ್ತಾರೆ.ಹೀಗೆ ಕಳುಹಿಸುವವರಲ್ಲಿ ಎಷ್ಟೋ ಜನರು ಕಂಪೆನಿ ಅಸ್ತಿತ್ವದಲ್ಲಿರುವ ಬೇರೆ ರಾಜ್ಯದ ಜಾಗಗಳಿಗೆ ಹೋಗಲು ತಯಾರಿದ್ದರೂ ಕಳುಹಿಸದೇ ಏನೇನೋ ಸಬೂಬುಗಳನ್ನು ಹೇಳಲಾಗುತ್ತದೆ. ಒಟ್ಟಿನಲ್ಲಿ ನಿಮ್ಮನ್ನು ಮನಗೆ ಕಳುಹಿಸಲೇ ಬೇಕು ಎಂದು ಅವರು ನಿರ್ಧರಿಸಿದ್ದರೆ ತಗಡು ಸಬೂಬುಗಳನ್ನೇ ನೀಡಿ ಕಳುಹಿಸುತ್ತಾರೆ ಅಷ್ಟೇ.

ಬೆಂಚಿನಲ್ಲಿರುವವರನ್ನು ಬಿಟ್ಟರೆ ಕಂಪೆನಿಗಳು ಆರಿಸಿಕೊಳ್ಳುವ ಮತ್ತೊಂದು ವಾಮ ಮಾರ್ಗ Performance Issue. ಇದಕ್ಕಿಂತ ದೊಡ್ಡ ಮೋಸ ಬಹುಶಃ ಮತ್ತೊಂದು ಇರಲಿಕ್ಕಿಲ್ಲ. ಪ್ರತಿ ಕಂಪೆನಿಗಳು ವರ್ಷಕ್ಕೊಮ್ಮೆ ತನ್ನ ಪ್ರತಿ ಉದ್ಯೋಗಿಯ Annual Performance Appraisal Cycle ಮಾಡುತ್ತವೆ. ಕೆಲವು ಕಂಪೆನಿಗಳು ಮೂರು-ಆರು ತಿಂಗಳಿಗೊಮ್ಮೆಯೂ ಮಾಡುವುದುಂಟು. ಹೀಗೆ ಮಾಡಲು ಹೆಚ್ಚಾಗಿ ಬಳಕೆಯಲ್ಲಿರುವ ಒಂದು ವಿಧಾನ Bell Curve. ಈ ವಿಧಾನವನ್ನು ಸರಳವಾಗಿ ವಿವರಿಸುವುದಾದರೇ, ಒಬ್ಬ ವ್ಯಕ್ತಿಯ ಪರ್ಫಾರ್ಮೆನ್ಸ್ ಆಧರಿಸಿ ಆತನಿಗೆ ೧ ರಿಂದ ೫ ರೊಳಗಿನ ಒಂದು ರೇಟಿಂಗ್ ನೀಡಲಾಗುತ್ತದೆ.ರೇಟಿಂಗ್ ೧ ಅತ್ಯುತ್ತಮ ಎಂದುಕೊಂಡರೆ, ರೇಟಿಂಗ್ ೫ ಅತಿ ಕಳಪೆ ಅಥವಾ ಕಂಪೆನಿಯಂದ ಹೊರಕಳುಹಿಸುವ ರೇಟಿಂಗ್ ಆಗಿರುತ್ತದೆ.ಈ ವಿಧಾನದ ಪ್ರಕಾರ ಕಂಪೆನಿಯೊಂದರಲ್ಲಿ ೧ ರೇಟಿಂಗ್ ಪಡೆಯುವವರ ಸಂಖ್ಯೆ ೧೦%,೨ ರೇಟಿಂಗ್ ೨೦%,೩ ರೇಟಿಂಗ್ ೬೦%, ೪ ಮತ್ತು ೫ ರೇಟಿಂಗಿನವರು ತಲಾ ೫% ಇರಬೇಕಾಗುತ್ತದೆ. ಕಂಪೆನಿಗಳು ಚೆನ್ನಾಗಿ ನಡೆಯುತ್ತಿರುವ ಸಂದರ್ಭದಲ್ಲಿ ಎಲ್ಲೋ ಕೆಲವರು ೪,೫ ನೇ ರೇಟಿಂಗ್ಗೆ ತಳ್ಳಲ್ಪಡುತ್ತಿದ್ದರು.ಆದರೆ ಈಗಿನ ಪರಿಸ್ಥಿತಿಯಲ್ಲಿ ೪ ರೇಟಿಂಗ್ ಕೊಡುವುದು ಕಡ್ಡಾಯವಾಗಿಬಿಟ್ಟಿದೆ.ಹೀಗೆ ಅನ್ಯಾಯವಾಗಿ ೪ ರೇಟಿಂಗ್ ಪಡೆದವರಿಗೆ ಪರ್ಫಾರ್ಮೆನ್ಸ್ ಇಂಪ್ರೂವ್ಮೆಂಟ್ ಪ್ಲಾನ್ (PIP) ಎಂಬ ನಿಗದಿತ ದಿನಗಳ (ಸಾಧರಣವಾಗಿ ಮೂರು ತಿಂಗಳು) ಗುರಿಯೊಂದನ್ನು ನೀಡಲಾಗುತ್ತದೆ. ಈ ಅವಧಿಯಲ್ಲಿ ಆತ, ಆತನಿಗೆ ನೀಡಲಾಗಿರುವ ಇಂಪ್ರೂವ್ಮೆಂಟ್ ಪ್ಲಾನಿನಂತೆ ಕಾರ್ಯ ನಿರ್ವಹಿಸಿದರೆ ಆತನ ಕೆಲಸ ಸೇಫ್.ಆದರೆ ಈಗಿನ ಪರಿಸ್ಥಿತಿಯ ದುರ್ಲಾಭ ಪಡೆಯುತ್ತಿರುವ ಕಂಪೆನಿಗಳು PIPಯನ್ನು ಯಶಸ್ವಿಯಾಗಿ ಮುಗಿಸಿದ್ದರೂ,ಮುಗಿಸಿಲ್ಲವೆಂದು ಹೇಳಿ ಕಂಪೆನಿಯಿಂದ ಹೊರಗಟ್ಟುತ್ತಾರೆ. ಹೊರಗಟ್ಟಲು ಅವರಿಗೊಂದು ಸಬೂಬು ಬೇಕಷ್ಟೇ!

ಇತ್ತೀಚೆಗೆ ಈ ಕಂಪೆನಿಗಳ ಮಾಸ್ ಲೇಆಫ್ ಎನ್ನುವ ಪ್ರಹಸನ ಎಷ್ಟು ಅತಿರೇಕಕ್ಕೆ ಏರಿದೆಯೆಂದರೆ,ಚೆನ್ನೈನಲ್ಲಿ ದಾಖಲಾದ ಕೇಸಿನ ನಂತರ ಪುಣೆಯಲ್ಲಿಯೂ ಐಟಿ ಉದ್ಯೋಗಿಗಳು ಲೇಬರ್ ಕಮಿಷನ್ ಮೊರೆ ಹೋಗಿದ್ದಾರೆ (ಬೆಂಗಳೂರಿನಲ್ಲಿಯೂ ಹೋಗುವ ದಿನಗಳೇನೂ ದೂರವಿಲ್ಲ). ಹೀಗೆ ಕಾನೂನು ಹೋರಾಟಕ್ಕೆ ಸಜ್ಜಾಗಿರುವ ಐಟಿ ಜನರು ಸದ್ಯಕ್ಕೆ ಒಂದಾಗಿರುವುದು Forum of IT Employees (FITE) ಎಂಬ ಸಂಘಟನೆಯ ಹೆಸರಿನಲ್ಲಿ.ತಮಿಳುನಾಡಿನಲ್ಲಿ ಶುರುವಾದ ಈ ಸಂಘಟನೆ ಈಗ ಐಟಿ ಉದ್ಯಮಗಳಿರುವ ಎಲ್ಲಾ ನಗರಗಳಿಗೂ ಹಬ್ಬುತ್ತಿದೆ. ಪುಣೆಯಲ್ಲಿ ದಾಖಲಾಗಿರುವ ಕೇಸಿನ ವಿಚಾರಣೆಗಾಗಿ ಕಂಪೆನಿಯ ಅಧಿಕಾರಿಗಳನ್ನು ಕರೆಸಿಕೊಳ್ಳಲಾಗಿದೆ. ಆ ಕ್ಷಣಕ್ಕೆನೋ ಕಂಪೆನಿಯವರ ಮೇಲೆ ಒತ್ತಡವೇರಿ ಅವರನ್ನು ಪುನಃ ಕಂಪೆನಿಯ ಒಳಗೆ ಕಳುಹಿಸಬಹುದು. ಆದರೆ ಹಾಗೆ ಒಳಹೊಕ್ಕವರನ್ನು ಕೆಲವೇ ಕೆಲವು ತಿಂಗಳಲ್ಲಿ ಟಾರ್ಚರ್ ಕೊಟ್ಟು ತಾವಾಗಿಯೇ ಓಡಿ ಹೋಗುವಂತೆ ಮಾಡುವುದನ್ನು ಕಂಪೆನಿಗಳಿಗೇನು ಹೇಳಿಕೊಡಬೇಕಿಲ್ಲ. ಕೆಲವು ಕಂಪೆನಿಗಳು ಈ ರೀತಿಯ ವಿಚಾರಣೆಗಳಿಗೂ ಹಾಜರಿಯಾಗದೆ ಸೆಡ್ಡು ಹೊಡೆಯುತ್ತಿವೆ. SEZನಲ್ಲಿ ಕಾರ್ಯ ನಿರ್ವಹಿಸುವ ನಮಗೆ ನಿಮ್ಮ ಕಾನೂನುಗಳೆಲ್ಲ ಅನ್ವಯಿಸುವುದಿಲ್ಲ ಎನ್ನುವಷ್ಟು ಧಾರ್ಷ್ಟ್ಯವನ್ನು ಬೆಳೆಸಿಕೊಂಡಿವೆ.

ಒಂದು ಅಂದಾಜಿನ ಪ್ರಕಾರ ತಿಂಗಳಿಗೆ ೫೦೦ರಿಂದ ೧೦೦೦ದಷ್ಟು ಜನರು ಕಂಪೆನಿಗಳಿಂದ ಹೊರ ದಬ್ಬಿಸಿಕೊಳ್ಳುತ್ತಿದ್ದಾರೆ.ಈ ಪ್ರಕ್ರಿಯೆ ಯಾವಾಗ ನಿಲ್ಲಬಹುದು ಎನ್ನುವುದು ನಿಖರವಾಗಿ ತಿಳಿದಿಲ್ಲ.ಕೆಲವರು ಹೇಳುವ ಪ್ರಕಾರ ಈ ವರ್ಷಾದಾಂತ್ಯವರೆಗೂ ಮುಂದುವರೆಯಬಹುದು,ಅಥವಾ ಇನ್ನೊಂದೆರಡು ವರ್ಷ ಪರಿಸ್ಥಿತಿ ಹೀಗೆ ಇರಬಹುದು.ಐಟಿ,ಬಿಪಿಓ,ಟೆಲೆಕಾಮ್ ಸೆಕ್ಟರಿನ ಉದ್ಯೋಗಗಳು ಕಳೆದ ವರ್ಷಕ್ಕೆ ಹೋಲಿಸಿದರೆ ೧೪ % ಕಡಿಮೆಯಾಗಿದೆ ಎನ್ನುತ್ತದೆ ಒಂದು ವರದಿ.ತಿಂಗಳಿಗೆ ನಿರುದ್ಯೋಗಿಗಳಾಗಿ ಹೊರಬರುತ್ತಿರುವ ಸಾವಿರದಷ್ಟು ಜನರು ಒಂದೆಡೆಯಾದರೆ,ಹೊಸ ಉದ್ಯೋಗಗಳ ಸೃಷ್ಟಿಗೂ ಕೊರತೆಯುಂಟಾಗಿರುವ ಪರಿಸ್ಥಿತಿಯಿದೆ.ನಾಸ್ಕಾಂನಂತಹ ಸರ್ಕಾರಿ ಸಂಸ್ಥೆ ಅಂತ ಪರಿಸ್ಥಿತಿ ಉಂಟಾಗಿಲ್ಲವೆಂದು ಸುಳ್ಳು ಹೇಳುತ್ತಿವೆ.ಆದರೆ ಅಖಾಡದಲ್ಲಿರುವವರಿಗೆ ವಸ್ತುಸ್ಥಿತಿಯ ಸ್ಪಷ್ಟ ಅರಿವಿದೆ.ಇವೆಲ್ಲದರ ಜೊತೆಗೆ ಅಮೇರಿಕಾದಲ್ಲಿ ಟ್ರಂಪ್ ಅಧ್ಯಕ್ಷರಾಗಿ ಬಂದ ನಂತರ H1B ವೀಸಾ ನೀಡುವಿಕೆಯಲ್ಲಿ ಕಠಿಣವಾಗಿದೆ,ಅಡ್ಡಗಾಲು ಹಾಕುವಂತಹ ಕಾನೂನುಗಳಾಗುತ್ತಿವೆ.ಉದ್ಯೋಗಗಳನ್ನು ಸ್ಥಳೀಯರಿಗೆ ಉಳಿಸಿಕೊಳ್ಳಲು ಎಲ್ಲಾ ಬಾಗಿಲನ್ನು ಹಾಕಲಾಗುತ್ತಿದೆ (ಒಂದರ್ಥದಲ್ಲಿ ಅಮೇರಿಕನ್ನರ ಅಧ್ಯಕ್ಷರಾಗಿ ಅವರು ಮಾಡುತ್ತಿರುವುದು ಸರಿಯಾಗಿಯೇ ಇದೆ). ಉದ್ಯೋಗಗಳನ್ನು ಸ್ಥಳೀಯ ಮಟ್ಟದಲ್ಲೆ ಉಳಿಸಿಕೊಳ್ಳುವ ಮತ್ತು ಹಾಗೆ ಉಳಿಸಿಕೊಳ್ಳುವವರನ್ನು ಪ್ರೋತ್ಸಾಹಿಸುವ ನೀತಿ ಯುಕೆ,ಯುರೋಪಿನಲ್ಲೂ ಬೆಳೆಯುತ್ತಿದೆ.

ಒಂದರ್ಥದಲ್ಲಿ ಐಟಿ ರಂಗದ ವೈಭವಯುತ ದಿನಗಳು ಮುಗಿಯುತ್ತ ಬರುತ್ತಿದೆಯೇನೋ ಎನ್ನುವ ನಿರಾಶಭಾವನೆ ಉದ್ಯೋಗಿಗಳಲ್ಲಿ ಮೂಡುತ್ತಿರುವುದು ಸುಳ್ಳಲ್ಲ.ಸಮಾಜದ ಒಂದು ವರ್ಗ ಕೆಲಸ ಕಳೆದುಕೊಂಡು ಭವಿಷ್ಯದ ಬಗ್ಗೆ ಅನಿಶ್ಚಿತತೆಯಲ್ಲಿ ಮುಳುಗುತ್ತದೆ ಎನ್ನುವಾಗ ಆರೋಗ್ಯಕರ ಸಮಾಜವೊಂದು ಸಾಂತ್ವಾನ ಹೇಳುವ,ಕೈ ಹಿಡಿಯುವಂತಹ ಮಾತುಗಳನ್ನಾಡಬೇಕಿರುತ್ತದೆ.ಆದರೆ ಐಟಿಯಲ್ಲಿ ಉದ್ಯೋಗ ಕಡಿತದ ಬಗ್ಗೆ ಕನ್ನಡದಲ್ಲಿ ಬಂದ ಮೂರು ಲೇಖನಗಳು ನನಗೆ ನೆನಪಾಗುತ್ತವೆ.ಅವುಗಳಲ್ಲಿ ಎರಡು ಬಂದಿದ್ದು ೨೦೦೮-೯ರ ಜಾಗತಿಕ ಆರ್ಥಿಕ ಕುಸಿತದ ದಿನಗಳಲ್ಲಿ.ಒಂದು ಲೇಖನ ಬಂದಿದ್ದು ಇವತ್ತಿಗೆ ಹೇಳ ಹೆಸರಿಲ್ಲದ ಟ್ಯಾಬೋಲಾಯ್ಡಿನಲ್ಲಿ ಮತ್ತೊಂದು ಲೇಖನ ಬರೆದವರೇ ಉದ್ಯೋಗ ಬದಲಾಯಿಸಿ ಇವತ್ತಿಗೆ ಸಂಸದರಾಗಿದ್ದಾರೆ. ಮೂರನೇ ಲೇಖನವನ್ನು ಯಾರೋ ವಯಸ್ಸಿನಲ್ಲಿ ಹಿರಿಯರಾಗಿರುವ ವ್ಯಕ್ತಿಯೊಬ್ಬರು ಬರೆದಿದ್ದರು.ಈ ಮೂರು ಲೇಖನಗಳು ಐಟಿ ಉದ್ಯೋಗಿಗಳೆಡೆಗೆ ಪೂರ್ವಗ್ರಹ ಪೀಡಿತರಾಗಿ, ಕಷ್ಟದಲ್ಲಿರುವವರನ್ನು ವ್ಯಂಗ್ಯವಾಗಿ ನೋಡುತ್ತ ಆನಂದಪಡುವ ಧಾಟಿಯಲ್ಲೇ ಇದ್ದವು.ಈ ಮಹಾನುಭಾವರುಗಳ ಪ್ರಕಾರ ಐಟಿ ಉದ್ಯೋಗಿಗಳೆಂದರೆ ದುಂದುವೆಚ್ಚ ಮಾಡುವವರು,ನಾಳಿನ-ನಾಡಿನ ಚಿಂತೆಯಿಲ್ಲದವರು,ಸಮಾಜದ ಸಂಕಷ್ಟಗಳನ್ನು ಅರಿಯದವರು ಹೀಗೆ ಸಾಗುತ್ತದೆ ಲೇಖನದೊಳಗಿನ ಸ್ಯಾಡಿಸಂನ ಲಹರಿ.ಹ್ಮ್ ಇರಲಿ ಬಿಡಿ ಅವರವರ ಸ್ಯಾಡಿಸಂನ್ನು ಅವರವರೇ ತೀರಿಸಿಕೊಳ್ಳಲಿ. ಐಟಿಯವರೆಂದರೇ ಕುಬೇರ ಪುತ್ರರು ಎನ್ನುವಂತಹ ಮನಸ್ಥಿತಿಯನ್ನು ಸಮಾಜದಲ್ಲಿ ಹುಟ್ಟು ಹಾಕಿದ ಕುಖ್ಯಾತಿ ನಿಸ್ಸಂಶಯವಾಗಿ ಮಾಧ್ಯಮಗಳಿಗೆ ಸಲ್ಲುತ್ತದೆ. ಐಟಿ ರಂಗಕ್ಕಿಂತಲೂ ಹೆಚ್ಚು ಸಂಬಳ ಕೊಡುವ ಬೇರೆ ಉದ್ಯೋಗಗಳಿದ್ದರೂ ಕೇವಲ ಐಟಿಯೊಂದೇ ದೊಡ್ಡ ಸಂಬಳ ಕೊಡುವ ಹುದ್ದೆಯೆಂದು ಜನರನ್ನು ನಂಬಿಸಲಾಯಿತು. ಇಲ್ಲಿ ಕೆಲವರ ಸಂಬಳ ನಾಲ್ಕೈದು ಸಾವಿರದಿಂದಲೂ ಶುರುವಾಗುತ್ತದೆ ಎಂದರೆ ನಂಬಲು ಜನರು ಸಿದ್ಧರಿರುವುದಿಲ್ಲ ಜನರನ್ನು ಹಾಗೆ ನಂಬಿಸಿರುವುದು ಮಾಧ್ಯಮಗಳು.

ಜಾಗತೀಕರಣ ಹೋರಾಟಗಳನ್ನು ನುಂಗಿ ಹಾಕಿತು ಎಂದು ಕೊರಗುವ ದಿನಗಳಿದ್ದವು. ಆದರೆ ನಂತರದ ದಿನಗಳಲ್ಲೇನಾಯಿತು ಗೊತ್ತಲ್ಲ. ೨೦೧೦ರ ಇಚೇಗೆ ಆದೇ ಜಾಗತೀಕರಣದಿಂದ ದಕ್ಕಿದ ಇಂಟರ್ನೆಟ್,ಸಾಮಾಜಿಕ ಜಾಲತಾಣಗಳು,ಬ್ಲಾಗುಗಳ ಮೂಲಕ ಹೊಸತನದ ಹೋರಾಟಗಳು ರೂಪು ತಳೆಯುತ್ತ ಹೋದವು. ಭಾರತದ ಮಟ್ಟಿಗೆ ಹೇಳುವುದಾದರೇ ಅಣ್ಣಾ ಹಜಾರೆಯವರ ಭ್ರಷ್ಟಚಾರ ವಿರೋಧಿ ಹೋರಾಟದ ವ್ಯಾಪ್ತಿ ವಿಸ್ತಾರಗೊಳ್ಳಲು,ನರೇಂದ್ರ ಮೋದಿಯವರ ಮೇಲೆ ದಶಕಗಳ ಕಾಲ ನಡೆದ ಸೆಕ್ಯುಲರ್ ಸುಳ್ಳನ್ನು ಹಿಮ್ಮೆಟ್ಟಿಸಲು,೨೦೧೪ರ ಚುನಾವಣೆಯಲ್ಲಿ ಮೋದಿಯವರು ಭರ್ಜರಿ ಗೆಲುವು ಸಾಧಿಸುವಲ್ಲಿಯೂ ಈ ಹೋರಾಟದ ಹೆಜ್ಜೆ ಗುರುತುಗಳನ್ನು ಗುರುತಿಸಬಹುದು ಮತ್ತು ಈ ಎಲ್ಲಾ ಹೋರಾಟಗಳಲ್ಲೂ ಐಟಿ ಉದ್ಯೋಗಿಗಳು ಬಹುಮುಖ್ಯಪಾತ್ರವಹಿಸಿರುವುದು ಸತ್ಯ. ನಮ್ಮ ಸಾಮಾಜಿಕ ಜವಬ್ದಾರಿಯ ಬಗ್ಗೆ ಪ್ರಶ್ನೆ ಮಾಡುತ್ತ ಪುಟಗಟ್ಟಲೇ ಬರೆಯುವ ಮಹಾನುಭಾವರಿಗೆ ಇವೆಲ್ಲ ತಿಳಿದಿರಬೇಕಲ್ಲ! ಕೇವಲ ಹೋರಾಟಗಳಲ್ಲ, ವೀಕೆಂಡುಗಳು ಬಂತೆಂದರೆ ಪಾರ್ಟಿ-ಪಬ್ಬುಗಳಿಗೆ ಅಲೆಯುವವರ ನಡುವೆಯೇ ದೂರದೂರದ ಹಳ್ಳಿಗಳ ಶಾಲೆಗಳಿಗೆ ಹೋಗಿ ಪಾಠ ಮಾಡುವ, ಅಗತ್ಯ ವ್ಯವಸ್ಥೆ ಕಲ್ಪಿಸಿಕೊಡುವಂತ ಎಷ್ಟೋ ಕೆಲಸಗಳನ್ನು ಮಾಡುತ್ತಿರುವ ಟೆಕ್ಕಿಗಳಿದ್ದಾರೆ.ಸಾಹಿತ್ಯ ವಿದ್ಯಾರ್ಥಿಗಳಿಗಿಂತಲೂ ಹೆಚ್ಚಾಗಿ ಸಾಹಿತ್ಯದಲ್ಲಿ ಆಸಕ್ತಿ ಬೆಳೆಸಿಕೊಂಡು ತಮ್ಮದೇ ಜೇಬಿನ ಹಣ ವ್ಯಯಿಸಿ ಸಾಹಿತ್ಯ,ಸಾಮಾಜಿಕ ಕೆಲಸಗಳಲ್ಲಿ ತೊಡಗಿಕೊಂಡವರೂ ಇದ್ದಾರೆ. ಹೀಗೆ ತೊಡಗಿಸಿಕೊಂಡಿರುವವರ ಬಗ್ಗೆ ಕೆಟ್ಟದಾಗಿ ಬರೆಯುವುದನ್ನು ಓದಿದಾಗ ಬೇಸರವಾಗದೇ ಇರುತ್ತದೆಯೇ.

ಐಟಿ ರಂಗ ಮುಳುಗುತ್ತಿದೆಯೆಂದು ಸಂತೋಷಪಡುತ್ತಿರುವ ಸ್ಯಾಡಿಸ್ಟುಗಳು ಅರ್ಥಮಾಡಿಕೊಳ್ಳಬೇಕಿರುವುದು, ಒಂದು ಸಮಾಜದಲ್ಲಿ ಒಂದು ಉದ್ಯಮದ ಸುತ್ತ ಹಲವು ಉದ್ಯಮಗಳು ಹುಟ್ಟಿಕೊಂಡು ಒಂದಕ್ಕೊಂದು ಪೂರಕವಾಗಿ ಬದುಕು ಸಾಗಿಸುತ್ತಿರುತ್ತವೆ.ಐಟಿ/ಬಿಪಿಓ ಉದ್ಯೋಗದಿಂದಾಗಿಯೇ ನಡೆಯುವ ಕ್ಯಾಟರಿಂಗ್,ಕ್ಯಾಬ್ ಸರ್ವೀಸುಗಳಿವೆ, ಪ್ರೈವೇಟ್ ಸೆಕ್ಯುರಿಟಿ ಏಜೆನ್ಸಿಗಳಿವೆ.ಕಂಪೆನಿಯ ಆಡಳಿತಾತ್ಮಕ (ಮ್ಯಾನೇಜರ್ರಿನಿಂದ ಹಿಡಿದು ಕ್ಲೀನರ್ ಅಂತಿಟ್ಟುಕೊಳ್ಳಿ) ಕೆಲಸಗಳನ್ನು ನೋಡಿಕೊಳ್ಳಲೆಂದು ಇರುವ ವರ್ಗವೇನೂ ಹೆಚ್ಚು ಓದಿಕೊಂಡೂ ಇರುವುದಿಲ್ಲ,ಸ್ಥಿತಿವಂತರೂ ಆಗಿರಬೇಕಿಲ್ಲ.ಅವರ ಬದುಕು ಇಲ್ಲಿಯೇ ರೂಪುಗೊಂಡಿರುತ್ತದೆ.ಬೆಂಗಳೂರಿ ರಿಯಲ್ ಎಸ್ಟೇಟ್ ವ್ಯವಹಾರ, ಆ ವ್ಯವಹಾರದ ಸುತ್ತಲೇ ಬದುಕು ಕಟ್ಟಿಕೊಂಡಿರುವ ಬೇರೆ ಬೇರೆ ಸ್ತರದ ವ್ಯಾಪರಿಗಳು,ಕುಟುಂಬಗಳೂ ಇದರ ಬಿಸಿಯನ್ನು ಒಂದಲ್ಲ ಒಂದು ರೀತಿಯಲ್ಲಿ ಅನುಭವಿಸುತ್ತವೆ. ಇಂತಹ ಸೂಕ್ಷ್ಮಗಳನ್ನು ನೋಡಲು ಪೂರ್ವಗ್ರಹಪೀಡಿತರಿಗೆ ಸಾಧ್ಯವಾಗುವುದಿಲ್ಲ ಬಿಡಿ.

ಹ್ಮ್… ಐಟಿ ರಂಗದ ತಲ್ಲಣಗಳನ್ನು ಹೇಳುವಾದ, ಐಟಿ ಉದ್ಯೋಗಿಗಳ ಬಗ್ಗೆ ಪೂರ್ವಗ್ರಹ ಪೀಡಿತರಾಗಿ ಬರೆದಿರುವವರ ಮತ್ತು ಬರೆಯುತ್ತಿರುವವರ ನೆನಪಾಗಿ ಇಷ್ಟೆಲ್ಲ ಹೇಳಬೇಕಾಯಿತು.ಅವರಿಗೆ ಬಯ್ಯುವುದರಿಂದ ನಮ್ಮ ಕಷ್ಟಗಳೇನೂ ದೂರವಾಗುವುದಿಲ್ಲ.

ಮುಂದಿನ ಹಾದಿಯೇನು?

ಹೊಸ ಹೊಸ ತಂತ್ರಜ್ನಾಗಳನ್ನು ಕಲಿತುಕೊಂಡು,Re skill ಆಗಿ ಉದ್ಯೋಗ ಉಳಿಸಿಕೊಳ್ಳುವುದು ಒಂದು ಮಾರ್ಗ.ಆದರೆ ಇಷ್ಟು ಸಫಲವಾಗುತ್ತದೆಯೋ ತಿಳಿದಿಲ್ಲ.ಹೀಗೆ Reskill ಆಗಿರುವವರನ್ನು ಹೊರದಬ್ಬಿರುವ ಉದಾಹರಣೆಗಳಿವೆ.ಐಟಿ ಉದ್ಯೋಗಿಗಳ ಉದ್ಯೋಗದ ಸುರಕ್ಷತೆಯೆಡೆಗೆ ಸರ್ಕಾರಗಳು ಗಮನ ಹರಿಸಲು ಇದು ಸೂಕ್ತ ಸಮಯ.ಇದುವರೆಗು ಉದ್ಯಮ ಸ್ನೇಹಿಯಾಗಿದ್ದ ಕಾನೂನಿನ ಜೊತೆಗೆ ಉದ್ಯೋಗಿ ಸ್ನೇಹಿ ಕಾನೂನು ಜಾರಿಯ ಅವಶ್ಯಕತೆಯಿದೆ.ಹೀಗೊಂದು ಕಾನೂನು ಜಾರಿಯಾಗದಿದ್ದರೆ ಕಂಪೆನಿಗಳು ಆಡಿದ್ದೆ ಆಟವಾಗಿಬಿಡುತ್ತದೆ.ಆದರೆ ಸರ್ಕಾರಗಳು ಯಾವುದೇ ಬಾಹ್ಯ ಒತ್ತಡವಿಲ್ಲದೇ ಇಂತಹ ನಿರ್ಧಾರಕ್ಕೆ ಕೈ ಹಾಕಲಾರವು. ಇದುವರೆಗೂ “ತಮಗಾಗಿ” ಮುಷ್ಕರ,ಪ್ರತಿಭಟನೆಗಿಳಿಯದ ಐಟಿ ಉದ್ಯೋಗಿಗಳು ಈಗ ಸಂಘಟನೆಗಳನ್ನು ಮಾಡಿಕೊಂಡು ಅಂತ ಕೆಲಸಕ್ಕೆ ಇಳಿಯಬೇಕಾದ ದಿನಗಳು ಹತ್ತಿರ ಬರುತ್ತಿದೆ ಎನಿಸುತ್ತದೆ.

ಇನ್ನು,ತೀರಾ ಆಶಾವಾದಿಯಾಗಿ ಹೇಳುವುದಾದರೇ, ಐಟಿ ರಂಗ ಬರುವ ಮೊದಲು ಬದುಕು ಸಾಗುತ್ತಿತ್ತು,ಅದು ಮುಗಿದರೂ ಬದುಕು ಸಾಗುತ್ತಲೇ ಇರುತ್ತದೆ.ಈ ರೀತಿಯಲ್ಲಿ ಅಲ್ಲದಿದ್ದರೆ ಮತ್ತೊಂದು ರೀತಿಯಲ್ಲಿ ಅಷ್ಟೇ.ಪ್ರಳಯವೇನೂ ಆಗುವುದಿಲ್ಲ…

1 ಟಿಪ್ಪಣಿ Post a comment
  1. Gopalkrishna
    ಜೂನ್ 24 2017

    Lekhana arthagarbhithavagide….
    IT employees goo strong organisation beku annodu nija…. Yakandre avaranna nambi kelavaru badukuttiruttaare…. Yaro ondishtu jana weekendu, adu idu antha odadoranna nodidaga IT andre hi-fi annodu sahaja….

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments