ಸಾಲ ಮನ್ನಾ ಮಾಡುವ ಮುನ್ನ…
– ಸುಜೀತ್ ಕುಮಾರ್
ಸಾಲ ಮನ್ನಾ ಅಂದಾಕ್ಷಣ ಹೇಗೆ, ಎಷ್ಟು, ಎಲ್ಲಿ ಎಂಬ ಪ್ರಶ್ನೆಗಳೇ ಹೆಚ್ಚಾಗಿ ನಮ್ಮಲ್ಲಿ ಮೂಡುತ್ತವೆ ಅಲ್ಲವೇ? ರೈತರಾದರೆ ಆಫ್-ಕೋರ್ಸ್ ಯಸ್. ರೈತನ ಕನಸ್ಸು ಮನಸಲ್ಲೂ ಸದ್ಯಕ್ಕೆ ಹರಿದಾಡುತ್ತಿರುವ ಏಕೈಕ ಪದವೆಂದರೆ ಅದು ‘ಸಾಲಮನ್ನಾ’. ಆದರೆ ಈ ಪ್ರಶ್ನೆಗಳು ಒಂದು ವಿಧದಲ್ಲಿ ಪ್ರಶ್ನೆಗಳೇ ಅನಿಸಿಕೊಳ್ಳುವುದಿಲ್ಲ ಅಂದರೆ!? ಇನ್ ಫ್ಯಾಕ್ಟ್ ಇವು ಒಂತರ ಪಂದ್ಯದ ಮೊದಲೇ ಸೋಲೊಪ್ಪಿಕೊಂಡ ಮನೋಭಾವದ ಸಂಕೇತಗಳು ಎಂದರೂ ತಪ್ಪಾಗುವುದಿಲ್ಲ. ನಾ ಮಾಡಿದ ನಿರ್ಧಾರ ತಪ್ಪೆಂದು ಬೇರೆಯವರ ಮೇಲೆ ಗೂಬೆ ಕೂರಿಸಿ, ಇನ್ಯಾರಿಂದಲೋ ಅದಕ್ಕೊಂದು ಪರಿಹಾರವನ್ನು ಬಯಸುತ್ತ, ಕಾಯುತ್ತ, ಕೊನೆಗೆ ಹಿಂದಿನಕ್ಕಿಂತಲೂ ಮತ್ತೊಂದು ಬಾಲಿಶ ನಿರ್ಧಾರವನ್ನು ಕೈಗೊಂಡು ಇಡೀ ಸಂಸಾರವನ್ನು ನಡು ನೀರಿನಲ್ಲಿ ಕೈ ಬಿಟ್ಟು, ಯಾರೋ ಮಾಡಿಟ್ಟ ಚಟ್ಟವನ್ನು ಹತ್ತುವುದು ಯಾವ ಸೀಮೆಯ ಪುರುಷಾರ್ಥ? ರೈತನೆಂದರೆ ಇಷ್ಟೆಯೇ?
ಇಂದು ಬರಡು ಭೂಮಿಯೊಂದನ್ನು ಯಾವುದೇ ಯಂತ್ರಗಳ ಸಹಾಯವಿಲ್ಲದೆ ಅಗೆದು, ಗುದ್ದಿ ಹಸಿರನ್ನು ಹೊತ್ತಿಸಿ ಸಾವಿರ ಜನರ ಹಸಿವನ್ನು ನೀಗಿಸಬಲ್ಲ ಒಂದಾದರೂ ಪೇಟೆಯ ಕಂಪನಿಗಳನ್ನು ತೋರಿಸಿ ನೋಡುವ.? ಇವುಗಳು ನೂರು ಕೋಟಿ ಸುರಿದು ಸಾವಿರ ಕೋಟಿ ಮಾಡುವ ಮನಿ ಮೈಂಡ್ಸ್ ಗಳೇ ಹೊರತು ಬಿಡಿಗಾಸು ಹಣವಿಲ್ಲದೆ ಬೆವರನ್ನು ಬಸಿದು ಹಸಿವನ್ನು ನೀಗಿಸಬಲ್ಲ ನಮ್ಮ ರೈತನೆಂಬ ನೈಸರ್ಗಿಕ ಕಂಪೆನಿಗಳಂತಲ್ಲ. ಅಂತಹ ಎದೆಗಾರಿಕೆಯ ರೈತನೆಂಬ ಶಕ್ತಿ ಇಂದು ‘ಆತ್ಮಹತ್ಯೆ’ ಹಾಗು ‘ಸಾಲಮನ್ನಾ’ ಎಂಬೆರೆಡೇ ಪದಗಳಿಗೆ ಮೀಸಲಾಗಿರುವುದೇಕೆ? ಆತ್ಮಹತ್ಯೆ ಎಂಬುದು ಜೀವನದ ಅತಿ ಸಹಜ ಸವಾಲಿಗೆ ಹೆದರಿ ಓಟಕೀಳುವಂತಹ ಮನೋಭಾವವಾದರೆ, ಸಾಲಮನ್ನಾ ಎಂಬುದು ಎಲ್ಲವೂ ಇದ್ದರೂ ಇತರರ ಮುಂದೆ ಕೈಯೊಡ್ಡಿದಂತೆ! ಕುಂಟುತ್ತಿದ್ದ ದೇಶದ ಆರ್ಥಿಕತೆಗೇ ಬೆನ್ನೆಲುಬಾಗಿ ನಿಲ್ಲಬಲ್ಲ ತಾಕತ್ತಿದ್ದ ರೈತನೆಂಬ ಚೇತನ ಇಂದು ಸಾಲವೆಂಬ ಪುಡಿಗಾಸಿಗೆ ನಿಜವಾಗಿಯೂ ಹೆದರಬೇಕೇ? ಒಂದುಪಕ್ಷ ವಿಷಯ ಇಷ್ಟು ಸರಳವಲ್ಲ ಎಂದೇ ಇಟ್ಟುಕೊಳ್ಳೋಣ. ಸರಿ, ಸಾಲ ಎಂಬ ವಿಷಸರ್ಪವನ್ನು ಆತ ಕೆಣಕಿದ್ದಾದರೂ ಏತಕ್ಕೆ? ಗೊಬ್ಬರ ಕೊಳ್ಳಲು? ಜಮೀನಿನಲ್ಲಿ ದುಡಿಯುವ ಕಾರ್ಮಿಕರಿಗಾಗಿ? ನೀರಿಗಾಗಿ ? ಅಥವಾ ತನ್ನ ಸ್ವಂತ ಭೋಗಕ್ಕಾಗಿ? ವಿಷಯವಿರುವುದೇ ಇಲ್ಲಿ. ಕೃಷಿಯ ಯಾವುದೊ ಸಮಸ್ಯೆಯನ್ನು ಹೊತ್ತು ತನ್ನಲ್ಲಿಗೆ ಬರುವ ರೈತನಿಗೆ ಕೃಷಿಸಾಲವೆಂಬ ವಿಷ ಮುಲಾಮನ್ನು ಸವರುವುದೇ ಈ ಸರ್ಕಾರಗಳು. ಅವರ ಸಮಸ್ಯೆಗಳಿಗೊಂದು ಸೂಕ್ತ ಪರಿಹಾರವನ್ನು ಆಲೋಚಿಸುವುದ ಬಿಟ್ಟು ತೋರ್ಪಡಿಕೆಯ ಪ್ರೀತಿಗೆ ದುಡ್ಡಿನ ಅಮಲೇರಿಸಿ ಮಕ್ಕಳು ಹಾಳಾದಾಗ ಮುಂದೇನು ಮಾಡುವುದೆಂದು ಕೈ ಕೈ ಹಿಸುಕಿಕೊಳ್ಳುವ ಪೋಷಕರಂತಾಗಿದೆ ಇಂದಿನ ಸರ್ಕಾರಗಳ ವಸ್ತುಸ್ಥಿತಿ.
ಅಂಕಿ ಅಂಶಗಳ ಪ್ರಕಾರ ಪ್ರಸ್ತುತ ದೇಶದ ಮೇಲಿರುವ ಕೃಷಿ ಸಾಲ ಸುಮಾರು ಹದಿಮೂರು ಲಕ್ಷ ಕೋಟಿ ರೂಪಾಯಿಗಳು! ಇಡೀ ದೇಶದ ಈ ಬಾರಿಯ ಬಜೆಟ್ ನ ಮೊತ್ತವೇ 21 ಲಕ್ಷ ಕೋಟಿಗಳಿರುವಾಗ ಘಂಟೆ ಅಲ್ಲಾಡಿಸಿದಂತೆ ಸಿಕ್ಕ ಸಿಕ್ಕ ಕಡೆಯೆಲ್ಲ ಸಾಲಮನ್ನದ ಭಾಗ್ಯವನ್ನು ಕರುಣಿಸುತ್ತಾ ಹೋದರೆ ದೇಶದ ನಾಳಿನ ಸ್ಥಿತಿ ಏನಾಗಬಹುದೆಂದು ನೀವೇ ಊಹಿಸಬಹುದು. ಮೇಲಾಗಿ ಸಾಲ ಮನ್ನ ಅಂದಾಕ್ಷಣ ಬ್ಯಾಂಕುಗಳೇನು ಲೆಕ್ಕ ಪತ್ರಗಳನ್ನು ಹರಿದು ರೈತರ ಕಲ್ಯಾಣವೇ ನಮ್ಮ ಧ್ಯೇಯ ಎಂದು ಎಂದಿಗೂ ಹೇಳವು. ಅವು ಸರ್ಕಾರದ ಬೊಗಸೆಯಿಂದ ಹಣದ ರಾಶಿ ತಮ್ಮ ಜೋಳಿಗೆಗೆ ಬರುವ ತನಕ ಸುಮ್ಮನಿರವು. ಆಗ ಬರಿದಾದ ಸರ್ಕಾರದ ಜೋಳಿಗೆಯನ್ನು ತುಂಬಲು ದೇಶದ ಇತರೆ ನಾಗರಿಕರೊಂದಿಗೆ ರೈತನೂ ತನ್ನ ನೊಂದ ಹೆಗಲನ್ನು ನೀಡಬೇಕು ಎಂಬವುದ ಮರೆಯಬಾರದು. ಸರಿ, ಈ ಪ್ರಕ್ರಿಯೆಯಲ್ಲಿ ರಾಜ್ಯಸರಕಾರಗಳೂ ಕೈ ಜೋಡಿಸಿ ಒಂದು ಪಕ್ಷ ಅಷ್ಟೂ ಸಾಲವನ್ನು ಮನ್ನ ಮಾಡಿ ರೈತನನ್ನು ಉಳಿಕೊಂಡರೆ ಸಂತೋಷದ ಸಂಗತಿಯೇ. ಆದರೆ ಇಂದು ಸಾಲ ಮನ್ನ ಮಾಡಿ ನಾಳೆ ಪುನಃ ಸಾಲ ಕೊಳ್ಳುವಂತೆ ರೈತರಿಗೆ ತೆರೆದುಕೊಳ್ಳುವುದು ಮಾತ್ರ ಸಹಿಸಲಾಗದ ವಿಷಯವಾಗುತ್ತದೆ.
ಹಿಂದೆ 1990 ಹಾಗು 2008 ರಲ್ಲಿ ಅಂದಿನ ಕೇಂದ್ರ ಸರ್ಕಾರಗಳು ರೈತರ ಸಾಲಮನ್ನವೆಂಬ ಕಾರ್ಯಗಳನ್ನು ಮಾಡಿವೆಯಾದರು ಇಂದಿಗೂ ರೈತನ ಸ್ಥಿತಿ ಅರೆಬೆಂದ ಅನ್ನದಂತಾಗಿಯೇ ಉಳಿದಿದೆ ಎಂದರೆ ಸುಳ್ಳಾಗದು. ಸರ್ಕಾರಗಳೇನೋ ರಾಷ್ಟ್ರೀಕೃತ, ಸಹಕಾರಿ ಬ್ಯಾಂಕ್ ಗಳ ಸಾಲವನ್ನು ಮನ್ನಾ ಮಾಡುತ್ತವೆ. ಆದರೆ ನಮ್ಮ ನಿಮ್ಮೆಲ್ಲರ ಮನೆಯ ಸುತ್ತೊಮ್ಮೆ ಕಣ್ಣು ಹಾಯಿಸಿದರೆ ಸಿಗುವ ಹೆಚ್ಚಿನ ರೈತರ ಸಾಲಗಳು ಕೈಸಾಲವೋ ಅಥವಾ ಚಿನ್ನವನ್ನು ಅಡವಿಟ್ಟು ಮಾಡಿರುವ ಸಾಲವೋ ಆಗಿರುತ್ತದೆ. ಇಂತಹ ಸಾಲಗಳ ಮನ್ನಾ ಯಾರಿಂದ ಸಾಧ್ಯ? 2008 ರಲ್ಲಿ ಕೇಂದ್ರ ಸರ್ಕಾರ 65,000 ಕೋಟಿ ಸಾಲ ಮನ್ನ ಮಾಡಿ ಮುಂದಿನ ವರ್ಷ ಬಂದ ಲೋಕಸಭಾ ಚುನಾವಣೆಗೆ ಭದ್ರ ಬುನಾದಿ ಯನ್ನೇನೋ ಹಾಕಿಕೊಂಡಿತ್ತು. ನಂತರ ತಿಳಿದು ಬಂದ ವಿಷಾದದ ವಿಷಯವೆಂದರೆ ಅಂದು ಸಾಲಮನ್ನದಿಂದ ಪ್ರಯೋಜನಕ್ಕೊಳಪಟ್ಟವರು ಕೇವಲ ಸ್ಥಿತಿವಂತ ರೈತರೇ ವಿನಃ ಉಡಲು ಕನಿಷ್ಠ ಬಟ್ಟೆ ಇರದ ಗುಡಿಸಲು ಮನೆಯಲ್ಲಿ ವಾಸಿಸುವ ರೈತರಾಗಿರಲಿಲ್ಲ. ಕಾರಣ ,ಬಡಪಾಯಿ ರೈತರೆಲ್ಲ ಅಂದು ಅವಲಂಬಿಸಿದ್ದು ಹೆಚ್ಚಾಗಿ ಕೈಸಾಲವನ್ನೇ! ಇಲ್ಲದಿದ್ದರೆ ಸಾಲ ಮನ್ನದ ನಂತರವೂ ರಾಶಿ ರಾಶಿ ರೈತರರ ತಲೆಗಳು ಹಗ್ಗದ ಕುಣಿಕೆಗೇಕೆ ಬೀಳುತ್ತಿದ್ದವು?! ಇಷ್ಟೇ. ಕೇವಲ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಯಾರೋ ಊದಿದ ಪೀಪಿಗೆ ತಲೆಯಲ್ಲಾಡಿಸುತ್ತ ಎಡಬಿಡಂಗಿ ನಿರ್ಧಾರಗಳನ್ನು ಕೈಗೊಳ್ಳುವ ಸರ್ಕಾರಗಳು ಆರಕ್ಕೂ ಏರದ ಮೂರಕ್ಕೂ ಇಳಿಯದ ಸ್ಥಿತಿಯಲ್ಲಿ ರೈತರನ್ನು ಹಾಗು ಹೊತ್ತಷ್ಟು ಮತ್ತೂ ಹೊರುವ ಕತ್ತೆಗಳಂತೆ ಸಾಮಾನ್ಯ ಜನರನ್ನು ಮಾಡಿಬಿಡುತ್ತವೆ.
ಕೃಷಿ ಎಂದರೆ ಸಾಲ ಎಂದಾಗಿರುವ ಇಂದಿನ ಕಾಲದಲ್ಲಿ ಸಾಲದ ವಿನಃ ಬೆಳೆಯನ್ನು ಬೆಳೆಯಲು, ದೇಶದ ಹಸುವೆಯನ್ನು ನೀಗಿಸಲು ಸಾಧ್ಯವಿಲ್ಲವೇ ಎಂಬುದನ್ನು ವಿಮರ್ಷೆ ಮಾಡಲು ಇದು ಸೂಕ್ತ ಕಾಲ. ಆಧುನಿಕ ಕೃಷಿ ಪದ್ದತಿಯನ್ನು ಒಮ್ಮೆ ಅವಲೋಕಿಸಿದಾಗ ಕೆಲವು ವಿಷಯಗಳು ನಮಗೆ ಸ್ಪಷ್ಟವಾಗುತ್ತವೆ. ಕೃಷಿಗಾಗಿಯೇ ಪಡೆಯುವ ಸಾಲವನ್ನು ರೈತ ಹೆಚ್ಚಾಗಿ ಬಳಸುವುದು ರಸಗೊಬ್ಬರಗಳ, ಕೀಟನಾಶಕಗಳ ಖರೀದಿಗೆ. ಯೂರಿಯಾ, ಪೊಟ್ಯಾಷ್, ರಂಜಕ ಇತ್ಯಾದಿ ಇತ್ಯಾದಿಗಳಿಲ್ಲದೆ ಇಂದು ಕೃಷಿ ಎಂಬುದು ಸಾಧ್ಯವೇ ಇಲ್ಲವೇ? ಸಾವಿರಾರು ವರ್ಷಗಳಿಂದ ಅದೇ ನೆಲದಲ್ಲಿ ರಾಶಿ ರಾಶಿ ದವಸ ಧಾನ್ಯಗಳನ್ನು ಬೆಳೆದ ನಮ್ಮ ಹಿರಿಯರು ಅಂದೂ ಸಹ ಯೂರಿಯಾ, ಪೊಟ್ಯಾಷ್ ಗಳಿಗೇ ಅಂಟಿಕೊಂಡಿದ್ದರೆ? ಹಾಗಾದರೆ ಅಚ್ಚುಕಟ್ಟಾಗಿ ಮಾಡಿಕೊಂಡಿದ್ದ ಸಾವಯವ ಕೃಷಿಗೆ ಈ ರಾಸಾಯನಿಕ ಗೊಬ್ಬರಗಳ, ಕೀಟನಾಶಕಗಳ ಗೀಳು ಹುಟ್ಟಿಕೊಂಡಿದ್ದಾದರೂ ಏತಕ್ಕೆ? ಉತ್ತರ ನಮ್ಮಲಿಯೇ ಇದೆ. ಅದೇ ಅತಿಯಾಸೆ. ಹೌದು, ಒಂದು ಬೊಗಸೆ ಮಣ್ಣಿನಲ್ಲಿ ನಿಮಗೆ ಸಾವಿರ ಕೇಜಿಯಷ್ಟು ಆಹಾರವನ್ನು ಬೆಳೆಸಿಕೊಡುತ್ತೇವೆ ಎಂಬ ಭ್ರಮೆಯನ್ನು ಹುಟ್ಟಿಸಿದ ವಿದೇಶಿ ಕಂಪನಿಗಳ ವ್ಯಮೋಹಕ್ಕೆ ಬಲಿಯಾದ ನಮ್ಮ ರೈತ ಅಂದು ತನ್ನ ಕೈಯ ಅಸ್ತ ಸುಟ್ಟಾದರೂ ಸರಿಯೇ ಜಮೀನಿಗೆ ರಾಸಾಯನಿಕಗಳನ್ನು ಹಾಕಿಯೇ ತೀರುತ್ತೇನೆಂಬ ಹಠಕ್ಕೆ ಬಿದ್ದ. ಮುಂದಿನ ಒಂದೆರೆಡು ವರ್ಷ ಒಮ್ಮೆಲೇ ಊದಿದ ಬಲೂನಿನಂತೆ ಫಸಲು ಸೊಗಸಾಗಿಯೇ ಬಂದಿತು. ಆದರೆ ಸಮಯ ಕಳೆದಂತೆ ಆ ಬಲೂನಿನ ಗಾಳಿ ಮಾತ್ರ ಮಾಯವಾಗತೊಡಗಿತ್ತು. ಪರಿಣಾಮ ಈಗ ನಮ್ಮ ರೈತ ಬೇಡವೆಂದರೂ ರಸಗೊಬ್ಬರಗಳನ್ನು ಬಿಟ್ಟಿರಲಾರ. ಈ ರಸಗೊಬ್ಬರಗಳು ನೆಲದ ಸತ್ವವನ್ನು ಹೀರಿ ಹಿಪ್ಪೆ ಮಾಡುವುದು ಒಂದೆಡೆಯಾದರೆ, ಕೇಜಿಗಟ್ಟಲೆ ಕೆಮಿಕಲ್ ಗಳನ್ನು ಕಾಲಕಾಲಕ್ಕೆ ಜಮೀನಿಗೆ ಸುರಿಯದಿದ್ದರೆ ಆ ಭಾರಿಯ ಫಸಲೇ ಗೋತಾ! ಇಂತಹ ಕೆಮಿಕಲ್ ಪೂರಿತ ಆಹಾರ ಸವೆನೆಯಿಂದ ದೇಹಗಳಿಗಾಗುವ ಘಾಸಿ ಹೇಳತೀರದು. ಅಂದು ಒಂದಿಷ್ಟೂ ಖರ್ಚಿಲ್ಲದೆ ನೆಮ್ಮದಿಯಾಗಿ ಕೃಷಿಯನ್ನು ಮಾಡಿಕೊಂಡಿದ್ದ ರೈತ ಇಂದು ಹೆಚ್ಚಿನ ಹಣವನ್ನು ಇಂತಹ ರಸಗೊಬ್ಬರಗಳ ಕೊಳ್ಳುವಿಕೆಗೇ ಸುರಿಯುತ್ತಿದ್ದಾನೆ. ಮೇಲಾಗಿ ಭಾರತ ಒಂದರಲ್ಲೇ ಅದೆಷ್ಟೋ ಸಾವಿರ ಕೋಟಿಯಷ್ಟು ಹಣ ರಸಗೊಬ್ಬರ, ರಾಸಾಯನಿಕಗಳ ವಹಿವಾಟಿನಿಂದಲೇ ವಿದೇಶಿ ಕಂಪನಿಗಳ ಜೋಳಿಗೆಯನ್ನು ಸೇರುತ್ತಿದೆ. ಅಂತಹ ಒಂದು ಉದ್ಯಮವನ್ನು ಮಟ್ಟ ಹಾಕುವುದು ಸದ್ಯದ ಊಸರವಳ್ಳಿ ಸರಕಾರಗಳಿಂದಂತೂ ಸಾಧ್ಯವಿಲ್ಲ.
ಮರ್ಕಟ ಮನಸ್ಸಿನ ಇತ್ತೀಚಿನ ಮಳೆರಾಯನನ್ನು ನಂಬಲಾಗದ ರೈತ ಅಕ್ಷರ ಸಹ ನೀರಿನ ವಿಚಾರದಲ್ಲಿ ಕಂಗಾಲಾಗುತ್ತಿದ್ದಾನೆ. ಪಡೆಯುವ ಸಾಲದಿಂದ ಒಂದು ಕೃಷಿ ಹೊಂಡವೋ ಅಥವಾ ಕೊಳವೆ ಭಾವಿಯನ್ನೋ ತೊಡಲು ಹೋಗುವ ಆತ ಭಾಗಶಃ ಈ ಕಾರ್ಯದಲ್ಲಿ ಕೈ ಸುಟ್ಟುಕೊಳ್ಳುತ್ತಿದ್ದಾನೆ. ಸಾವಿರ ಅಡಿ ಆಳ ಕೊರೆದರೂ ನೀರು ಸಿಗದ ಈ ಕಾಲದಲ್ಲಿ ಸಾಲವನ್ನು ಹೆಗಲ ಮೇಲೆ ಹೊತ್ತ ಆತನಿಗೆ ನಷ್ಟವಾದರೆ ಅದನ್ನು ಭರಿಸಿಕೊಡುವವರ್ಯಾರು? ಈ ನಿಟ್ಟಿನಲ್ಲಿ ನಮ್ಮ ‘ಸಾಲಮನ್ನ ಸರ್ಕಾರ’ಗಳ ಯೋಚನೆಗಳು ಏನಿವೆ? ಬಾರದ ಮಳೆಯನ್ನೇನೋ ಜಪ ಮಾಡಿ ತರಲಾಗುವುದಿಲ್ಲ ಆದರೆ ಬೀಳುವ ಮಳೆಯನ್ನಾದರೂ ಶೇಖರಿಸಿಡುವ ಕಾರ್ಯ ಅದೆಷ್ಟು ಸರ್ಕಾರಗಳ ಕಾರ್ಯತಂತ್ರದಲ್ಲಿ ಇದೆ? ಪ್ರತಿ ವರ್ಷದ ಆಯವ್ಯಯದಲ್ಲಿ ಅದೆಷ್ಟು ನೀರಾವರಿ ಯೋಜನೆಗಳು ಜಾರಿಯಾಗುತ್ತಿವೆ. ನದಿ ಜೋಡಣೆಯ ವಿಚಾರ ಎಲ್ಲಿಯವರೆಗೆ ಬಂದಿದೆ? ಬ್ಯಾಂಕುಗಳಿಗೆ ಸಾಲವನ್ನು ಕೊಡಲೇಳುವ ಮುನ್ನ ಇಂತಹ ಪ್ರಶ್ನೆಗಳನ್ನು ಸರ್ಕಾರಗಳು ಕೇಳಿಕೊಳ್ಳಬೇಡವೇ?
ಹೀಗೆ ರೈತನ ಸಾಲ ಹಾಗು ಸಾವುಗಳಿಗೆ ಪರಿಹಾರ ಕೇವಲ ಸಾಲಮನ್ನ ಎಂಬುದೇ ಪರಿಹಾರವೆಂಬುದು ಅಕ್ಷರ ಸಹ ತಪ್ಪು ಕಲ್ಪನೆ. ಆತ ಬೆಳೆಯುವ ಫಸಲಿಗೆ ದಳ್ಳಾಳಿಗಳಿಲ್ಲದ ಒಂದು ಮುಕ್ತ ಮಾರುಕಟ್ಟೆಯನ್ನು ಶುರುಮಾಡುವುದು ಎಂದಿಗೆ? ಡಿಜಿಟಲ್ ಯುಗದಲ್ಲಿ ಆನ್ಲೈನ್ ಮುಖಾಂತರವೇ ತಾವು ಬೆಳೆದ ಫಸಲನ್ನು ಗ್ರಾಹಕರಿಗೆ ನೇರವಾಗಿ ಮಾರುವ ವ್ಯವಸ್ಥೆಯ ಉದ್ಘಾಟನೆ ಎಂದು? ಮುಂದೊಮ್ಮೆ ಅದು ಸಾದ್ಯವಾದರೂ ಅದರ ಬಗೆಗಿನ ತಿಳುವಳಿಕೆ ಅತಿಸಾಮಾನ್ಯ ರೈತನೊಬ್ಬನಿಗೆ ಮೂಡಿಸುವುದು ಹೇಗೆ? ಮುಕ್ತಮಾರುಕಟ್ಟೆಯ ಪ್ರಾರಂಭದಿಂದ ಕೊನೆ ಪಕ್ಷ ಹಿಂಗಾರು ಹಾಗು ಮುಂಗಾರಿನ ಕೊರತೆಯಲ್ಲಿಯೂ ಬಂದ ಕೊಂಚ ಬೆಳೆಯಲ್ಲೇ ಉತ್ತಮ ಆದಾಯವನ್ನು ರೈತ ಗಳಿಸಿಕೊಳ್ಳಬಹುದಲ್ಲವೇ?. ಅಲ್ಲದೆ ಈಗಾಗಲೇ ಬಹಳಷ್ಟು ಬಗೆಯ ಕೃಷಿ ವಿಮೆಗಳು ಜಾರಿಯಿದ್ದರೂ ರೈತಾಪಿ ವರ್ಗಕ್ಕೆ ಅದು ಗೊತ್ತಿರುವುದು ಬಹಳಾನೇ ವಿರಳ. ಕಾರಣ, ನಷ್ಟವೆಂಬುದು ಕಟ್ಟಿಟ್ಟ ಬುತ್ತಿಯಾಗಿರುವ ಇಂದಿನ ಕೃಷಿಯಲ್ಲಿ ಸರ್ಕಾರ ರೂಪಿಸುವ ಅಷ್ಟೂ ವಿಮೆಗಳನ್ನು ಚಾಚೂತಪ್ಪದೆ ಪ್ರತಿ ರೈತನಿಗೂ ಮಾಡಿಕೊಟ್ಟರೆ ವರ್ಷ ಪೂರ್ತಿ ಅವರ ಪರಿಹಾರದ ಹಣವನ್ನು ಹೊಂದಿಸುವುದರಲ್ಲೇ ಆಗಿಹೋಗಬಹುದೇನೋ ಎಂಬ ಭಯವೂ ಅದರ ಹಿಂದೆ ಅಡಗಿಕೊಂಡಿರುತ್ತದೆ. ಆದ ಕಾರಣ ಅರ್ಥಪೂರ್ಣ ವಿಮೆ ಯೋಜನೆಗಳನ್ನು ಜಾರಿಗೊಳಿಸುವುದಲ್ಲದೆ ಅದನ್ನು ರೈತಸಾಮಾನ್ಯನ ಮನೆಮನೆಗೂ ತಲುಪುವಂತೆ ನೋಡಿಕೊಳ್ಳಬೇಕಲ್ಲವೇ
ಒಟ್ಟಿನಲ್ಲಿ ಯಾವುದೇ ಲಂಗು ಲಗಾಮಿಲ್ಲದೆ ಸಾಲಮನ್ನ ಎಂದು ಕೋಟಿ ಕೋಟಿಗಳಷ್ಟು ಹಣದ ಹೊರೆಯನ್ನು ಜನರ ಹೆಗಲ ಮೇಲೆ ಹೊರಿಸುವ ಸರ್ಕಾರಗಳು ಸಾಲಮನ್ನದ ನಂತರ ಅಥವಾ ಸಾಲಮನ್ನದ ಮೊದಲು ಹಣಕ್ಕಿಂತಲೂ ಪರ್ಯಾಯವಾಗಿ ಯಾವ್ಯಾವ ವ್ಯವಸ್ಥೆಯನ್ನು ರೈತರಿಗೆ ಮಾಡಿಕೊಡಬೇಕು ಎಂದು ಆಲೋಚಿಸಬೇಕು. ಅಲ್ಲದೆ ಹಣವೆಂದರೆ ಸರ್ವಸ್ವವೇ ಆಗಿರುವ ಇಂದಿನ ಕಾಲದಲ್ಲಿ ಸಾಲಪಡೆದವರೆಲ್ಲರೂ ಕಡುಬಡವ ರೈತರೆಂದು ತಿಳಿಯುವುದೂ ಮೂರ್ಖತನದ ಕೆಲಸ. ಏಕೆಂದರೆ ಬಲು ಹತ್ತಿರದಲ್ಲೇ ಕಂಡಿರುವಂತೆ ಸರ್ಕಾರ ಸಾಲ ಮನ್ನ ಮಾಡುತ್ತದೆ ಎಂಬ ಭರವಸೆಯಲ್ಲೇ ಲಕ್ಷ ಲಕ್ಷ ಸಾಲವನ್ನು ಬ್ಯಾಂಕುಗಳಿಂದ ಪಡೆದು ತಿಂದು ತೇಗಿರುವವರೂ ಉಂಟು.
ಒಟ್ಟಿನಲ್ಲಿ ವಿಶ್ವಬ್ಯಾಂಕಿನ ಅತಿ ಹೆಚ್ಚು ಸಾಲ ಪಡೆದಿರುವ ನಂಬರ್ ಒನ್ ದೇಶವಾಗಿರುವ ಭಾರತ ಅಭಿವೃದ್ಧಿಯ ಮಂತ್ರ ಜಪಿಸುತ್ತ ಇಂತಹ ಮನಸಾ ಇಚ್ಛೆ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದರೆ ಸ್ವತಂತ್ರವಾಗಿಯೂ ಅತಂತ್ರವಾಗುವ ಕಾಲ ದೂರವಿಲ್ಲವೆಂದೆನಿಸುತ್ತಿದೆ.
ಎಲ್ಲರ ಸಂದಿಗ್ಧಗಳು ಹೀಗೇ ಇವೆ.
ಯೂರಿಯಾದಲ್ಲಿ ಬೇವಿನ ಸಾರ ಕಲಿಸಿದ್ದು ಒಂದು ವಳ್ಳೇ ಪ್ರಯತ್ನ. ಮತ್ತು ಮುಕ್ತ ಮಾರುಕಟ್ಟೆ, ಅಲ್ಲಲ್ಲಿ ಫುಡ್ ಪ್ರಾಸೆಸಿಂಗ್ ಯೂನಿಟ್ಸ್ ಪ್ರಪೋಜಲ್ಸ್ ಕೇಳುತ್ತಿದ್ದೇವೆ.
ಎಲ್ಲ ಸಫಲವಾಗಲಿ.