ವಿಷಯದ ವಿವರಗಳಿಗೆ ದಾಟಿರಿ

ಜುಲೈ 5, 2017

ಸಿಡಿಲು ಸನ್ಯಾಸಿಯ ಐದು ನಿಮಿಷದ ಮಾತುಗಳು ಇಡೀ ಜಗತ್ತಿಗೆ ಸನಾತನ ಧರ್ಮದ ಶ್ರೇಷ್ಠತೆಯನ್ನು ಬಿತ್ತರಿಸಿದ್ದವು.

‍ನಿಲುಮೆ ಮೂಲಕ

ಶಿವಾನಂದ ಶಿವಲಿಂಗ ಸೈದಾಪೂರ
(ಎಂ.ಎ.ವಿದ್ಯಾರ್ಥಿ.)
ರಾಣಿಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ.

ಸ್ವಾಮಿ ವಿವೇಕಾನಂದರ 115ನೇ ಪುಣ್ಯಸ್ಮರಣೆಯ  ವಿಶೇಷ ಲೇಖನ.

ಅದೊಂದು ತಮ್ಮ ಧರ್ಮ ಪ್ರಾಬಲ್ಯವನ್ನು ಜಗತ್ತಿನ ಇತರ ದೇಶದ ಮೇಲೆ ಹರಡಲು ನಡೆಸಿದ ಸಮಾರಂಭ. ಅದಕ್ಕೂ ಒಂದು ಇತಿಹಾಸ, ನೂರ ಐವತ್ತು ವರ್ಷಗಳ ಹಿಂದೆ ಕೊಲಂಬಸ್ ಶೋಧಿಸಿದ್ದು, ಅದರ ಸ್ಮರಣೆಯ ಹೆಸರಲ್ಲಿ ಕ್ರೈಸ್ತ ಧರ್ಮವನ್ನು ಜಗತ್ತಾದ್ಯಂತ ಬಿತ್ತಲು ಆಯೋಜನಗೊಂಡಿದ್ದೇ ವಿಶ್ವ ಸರ್ವಧರ್ಮ ಸಮ್ಮೇಳನ.. ಅದಕ್ಕೆ ಕಾರಣ ಒಂದು ಉದ್ದೇಶ ಹಲವು. ಅಷ್ಟೊತ್ತಿಗೆ ಕ್ರೈಸ್ತ ಧರ್ಮ ಜಗತ್ತಿನ ಹಲವಾರು ದೇಶಗಳನ್ನು ಆಕ್ರಮಿಸಿಕೊಂಡಿತ್ತು. ಅಂತಹ ಆಕ್ರಮಣಕ್ಕೆ ಒಳಗೊಂಡ ದೇಶಗಳಲ್ಲಿ ಭಾರತವು ಒಂದು. ಮತ ಸುಧಾರಣೆಗಾಗಿ ಬುದ್ಧ, ಬಸವ, ಮಹಾವೀರ, ಶಂಕರ, ಮದ್ವಾಚಾರ್ಯರು…. ಹೀಗೆ ಎಲ್ಲರು ಬಂದು ಹೋದರು. ಯಶಸ್ವಿಯು ಇಲ್ಲ, ವಿಫಲವು ಇಲ್ಲ. ಎಲ್ಲವೂ ಮಧ್ಯಂತರದಲ್ಲಿಯೇ ಸಾಗಿತ್ತೇ ಹೊರತು ಅವರ್ಯಾರು ಸಹ ದೇಶದ ಹೋರ ಹೋಗಿ ಸನಾತನ ಧರ್ಮವನ್ನು ಪ್ರಚಾರ ಮಾಡಲಿಲ್ಲ. ಸನಾತನ ಧರ್ಮದ ಮೇಲೆ ದಾಳಿ ಆದಾಗಲೆಲ್ಲ ತಕ್ಕ ಉತ್ತರಕ್ಕೆ ಸಿದ್ಧವಾಗಿಯೇ ಇತ್ತು ಭಾರತ. ತುರ್ಕರ ದಾಳಿಗೆ ವಿಜಯನಗರ, ಮರಾಠರಂತಹ ಮನೆಗಳು ಹುಟ್ಟುತ್ತಲೇ ಬಂದವು.

ಹದಿನೇಳನೇಯ ಶತಮಾನದಲ್ಲಿ ಬಂದ ಇಂಗ್ಲೀಷರು ಭಾರತದ ಮೇಲೆ ಮಾತ್ರವಲ್ಲದೇ ಧರ್ಮದ ಮೇಲೆಯೂ ದಾಳಿ ಆರಂಭಿಸಿದ್ದರು. ಮೊದಲಿಗೆ ವ್ಯಾಪಾರಿಗಳಾಗಿ ಬಂದ ಇಂಗ್ಲೀಷರು ಭಾರತವನ್ನು ಕ್ರಿಸ್ತಮಯ ಮಾಡಲು ಬೌಧ್ಧಿಕ ಭಯೋತ್ಪಾನೆಗೆ ಇಳಿದರು. ಪೂರ್ವಜರಿಂದ ನಿಸರ್ಗದ ಮಡಿಲಲ್ಲಿ ಗುರುಕುಲ ಪದ್ಧತಿಯಲ್ಲಿ ಶಿಕ್ಷಣ ಕಲಿಯುತ್ತಿದ್ದವರಿಗೆ ನಾಲ್ಕು ಗೋಡೆಗಳ ಮಧ್ಯೆ ಕಲಿಯುವ ಶಿಕ್ಷಣ ನೀತಿಯನ್ನು ಜಾರಿಗೆ ತಂದರು. ಸರ್ವರಿಗೂ ಸಮಾನ ಶಿಕ್ಷಣವೆಂಬ ನೆಪದಲ್ಲಿ ಸಾಂಪ್ರದಾಯಿಕ ಶಿಕ್ಷಣವನ್ನು ಅಳಿಸಿ ಹಾಕಿ ಪಾಶ್ಚಾತ್ಯ ಸಂಸ್ಕೃತಿ ಬಲೆಯಲ್ಲಿ ಕೆಡವಲು ತಂತ್ರ ರೂಪಿಸಿದರು. ಸಂಸ್ಕೃತದ ಬದಲಿಗೆ ಇಂಗ್ಲೀಷನ್ನು ವ್ಯಾಪಕವಾಗಿ ಬಿತ್ತಿ ಜನರನ್ನು ಪಾಶ್ಚಾತ್ಯದತ್ತ ಸೆಳೆಯಲಾರಂಭಿಸಿದರು. ಹಿಂದೂಧರ್ಮ ಗ್ರಂಥಗಳನ್ನು ಮ್ಯಾಕ್ಸ್ ಮುಲ್ಲರನಂತಹ ಆಸೆಬುರುಕ ಲೇಖಕನಿಂದ ಕ್ರೈಸ್ತ ಮಾದರಿಯಲ್ಲಿ ಪಾಶ್ಚಾತ್ಯ ಭಾಷೆಗೆ ಅನುವಾದಿಸಿ ಹಿಂದೂ ಧರ್ಮಕ್ಕೆ ನ್ಯೂನ್ಯತೆಯನ್ನು ಬಳಿಯಲಾರಂಭಿಸಿದ್ದರು. ಅಲ್ಪ ಸ್ವಲ್ಪ ಇಂಗ್ಲೀಷ್ ಕಲಿತ ಹಿಂದು ಜನರನ್ನು ತಮ್ಮತ್ತ ಸೆಳೆದು ಕ್ರೈಸ್ತನೇ ಎಲ್ಲವನೆಂಬ ಪ್ರಚಾರವನ್ನು ಹಬ್ಬಿಸತೊಡಗಿದರು. ಅದಕ್ಕೆ ಪೂರಕ ಎಂಬಂತೆ ರಾಜಾರಾಮ ಮೋಹನ ರಾಯರು ಹಿಂದೂ ಧರ್ಮದ ಸುಧಾರಣೆಗೆ ಕೈ ಹಾಕಿ ಇಸ್ಲಾಂ ಕ್ರಿಶ್ಚಿಯನ ಮಾದರಿಯ ಬ್ರಹ್ಮ ಸಮಾಜ ಉಗಮ ಮಾಡಿದರು. ಮುಂದೆ ಅವರ ಅಕಾಲಿಕ ಮರಣದ ನಂತರ ಅದು ವಿಭಿನ್ನ ಮನಸ್ಥಿತಿ ಉಳ್ಳ ದೇವೆಂದ್ರನಾಥ ಟ್ಯಾಗೋರ್ ಮತ್ತು ಕೇಶವ ಚಂದ್ರಸೇನರ ಕೈಗೆ ಸಿಕ್ಕಿ ಇಬ್ಭಾಗವಾಗಿ ಅನ್ಯಧರ್ಮದ ಬೆಳವಣಿಗೆಗೆ ಮತ್ತಷ್ಟು ಪುಷ್ಠಿ ನೀಡಿತು. ಮುಂದೆ ರಾನಡೆ ಅವರ ಪ್ರಾರ್ಥನಾ ಸಮಾಜ, ದಯಾನಂದರ ಆರ್ಯ ಸಮಾಜವು ಹುಟ್ಟಿದರು ಕೂಡ ಯಾವುದೇ ರೀತಿಯ ಪರಿಣಾಮಕಾರಿಯಾದ ಬದಲಾವಣೆಗಳು ಆಗಲಿಲ್ಲ.

ಬಂಗಾಳದಂತಹ ಪ್ರದೇಶಗಳಲ್ಲಿ ಅತೀ ವ್ಯಾಪಕವಾಗಿ ಧರ್ಮಾಂತರ ಪ್ರಕ್ರಿಯೇ ಅತೀ ವೇಗವಾಗಿ ಸಾಗಿತ್ತು. ಇಂತಹ ಸಮಯದಲ್ಲಿ ರಾಮಕೃಷ್ಣ ಮಹಾತ್ಮರ ಆಗಮನವಾಯಿತು. ಇಂಗ್ಲೀಷ್ ಗೊತ್ತಿಲ್ಲದಿದ್ದರು ಸ್ವದೇಶ ಮತ್ತು ವಿದೇಶಿ ಬುದ್ಧಿವಂತರ ತಲೆಯ ಮೇಲೆ ಕೈಯಾಡಿಸಿ ಹಿಂದೂ ಧರ್ಮದ ಶ್ರೇಷ್ಠತೆಯನ್ನು ಭೋದಿಸುತ್ತ ಮುನ್ನಡೆದ ಸಂದರ್ಭದಲ್ಲಿಯೇ ಪರಮಹಂಸರತ್ತ ಸಿಡಿಲು ಸನ್ಯಾಸಿಯ ಆಗಮನವಾಯಿತು. 1893 ರಲ್ಲಿ ನಡೆಯಬೇಕಾದ ಜಾಗತಿಕ ಮಟ್ಟದ ಸರ್ವಧರ್ಮ ಸಮ್ಮೇಳನಕ್ಕೆ 1889 ರಲ್ಲಿಯೇ ಚಾಲ್ರ್ಸ ಬಾನಿ ಎಂಬ ವಕೀಲ ಕನಸು ಕಂಡಿದ್ದ. ಆತನೇ ಹೇಳುವಂತೆ “ಮಾನವಕೋಟಿಗೆ ಸಂಬಂಧಿಸಿದ ಅತೀ ಮುಖ್ಯ ವಿಷಯಗಳೆಲ್ಲದರ ಮೇಲೆ ಸಮ್ಮೇಳನ ನಡೆಯಬೇಕು. ಹಾಗೂ ಅವು ವ್ಯಾಪಕವಾಗಿದ್ದು, ಜಗತ್ತಿನ ಎಲ್ಲಡೆಗಳಿಂದಲೂ ಪ್ರತಿನಿಧಿಗಳು ಬರುವಂತಾಗಬೇಕು” (ಉಲ್ಲೇಖ ಸ್ವಾಮಿ ಪುರುಷೋತ್ತಮಾನಂದರ ವಿಶ್ವ ವಿಜೇತ ವಿವೇಕಾನಂದ) ಮೊದಲ ಸಾಲಿನಲ್ಲಿ ಹೇಳಿದಂತೆ ಮಾನವಕೋಟಿಗೆ ಸಂಬಂಧಿಸಿದ ಅತೀ ಮುಖ್ಯ ವಿಷಯಗಳೆಲ್ಲದರ ಮೇಲೆ ಸಮ್ಮೇಳನ ನಡೆಯಬೇಕು. ಅಂದರೆ ಜಗತ್ತಿನ ಎಲ್ಲ ರಾಷ್ಟ್ರಗಳಲ್ಲಿದ್ದ ಸಾಮಾಜಿಕ ಜೀವನ ವ್ಯವಸ್ಥತೆಯನ್ನು ಅಲ್ಲಿ ಹರಾಜು ಹಾಕಿ ಅಲ್ಲಿರುವ ಲೋಪ ದೋಷಗಳನ್ನು ತಿಳಿದುಕೊಂಡು ಪರಿಹರಿಸುವ ನೆಪದಲ್ಲಿ ತಮ್ಮ ಬಾಹುಬಲವನ್ನು ಶುದ್ಧಿಕರಣ ಮುಖಾಂತರ ದುರಾಲೋಚನೆ ಇತ್ತು. ಈ ಕಾರ್ಯಕ್ರಮದ ಯೋಜಕನಾದ ಚಾಲ್ರ್ಸ್ ಬಾನಿ ಸ್ವಘೋಷಿತ ಪ್ರಾಮಾಣಿಕತೆಯನ್ನು ತೋರ್ಪಡಿಸುತ್ತ ‘ವಿಶ್ವ ಭ್ರಾತೃತ್ವದ ನಿರ್ಮಾಣ’ ‘ಜಗತ್ತಿನ ಧರ್ಮಗಳ ನಡುವೆ ಪರಸ್ಪರ ಅರಿವು ಹೊಂದಾಣಿಕೆಗಳನ್ನು ಉಂಟು ಮಾಡುವುದೆಂದು’ ‘ವಿಶ್ವಶಾಂತಿಗಾಗಿ ಶ್ರಮಿಸುವುದೆಂದು’ ಇದರ ಘನ ಉದ್ದೇಶವನ್ನು ಎಲ್ಲರ ಮುಂದೆ ಒಳ್ಳೆಯ ರೀತಿಯಲ್ಲಿ ಬಿಂಬಿಸಲಾಗಿತ್ತು. ಇದನ್ನು ನೋಡಿ ಸ್ವತಃ ಕ್ರೈಸ್ತ ಸಂಸ್ಥೆಗಳಿಂದಲೂ ಧರ್ಮ ಪ್ರಚಾರಕರಿಂದಲೂ ಇದರ ವಿರುದ್ಧ ಧ್ವನಿಗಳು ಎದ್ದವು. ಯಾವ ರೀತಿ ವಿರೋಧ ವ್ಯಕ್ತವಾದವೆಂದರೇ ಆಯೋಜಕರಿಗೆ ಕೆಲವು ಪಾದ್ರಿಗಳು ಪತ್ರ ಬರೆದು ನಿವೇದನೆಯನ್ನು ಮಾಡಿಕೊಳ್ಳುವ ಮಟ್ಟಕ್ಕೆ ಬಂದಿತ್ತು. ಕ್ರೈಸ್ತ ಧರ್ಮ ಅಲ್ಲದನ್ನು ಅನಾಗರಿಕ ಧರ್ಮವೆಂದು ಅದರ ಸಮಾನವಾಗಿ ನಿಲ್ಲಬಲ್ಲ ಮತ್ತೊಂದಿಲ್ಲವೆಂದು ಹಲುಬಿದರು.

ಆದರೆ ಸ್ವಾರ್ಥ ಸಾಧನೆಯ ವ್ಯವಹಾರಿಕ ಉದ್ದೇಶವುಳ್ಳ ಕೆಲವು ಅಮೇರಿಕ ಪಾದ್ರಿಯಂತಹವರು “ನನ್ನ ನಿಶ್ಚಿತ ಅಭಿಪ್ರಾಯದಂತೆ, ಕ್ರೈಸ್ತಧರ್ಮವು ಸರ್ವ ಶ್ರೇಷ್ಠವೆಂಬುದನ್ನು ಮನದಟ್ಟು ಮಾಡಿಸುವುದಕ್ಕಾಗಿ ಅದನ್ನು ವೈಭವಯುತವಾಗಿ ಮಂಡಿಸಲು ಯಾವ ಕ್ರೈಸ್ತನು ಹಿಂಜರಿಯಬೇಕಾಗಿಲ್ಲ. ಸಮ್ಮೇಳನದಲ್ಲಿ ಪ್ರಚಂಡ ಜನ ಸಮೂಹ ನೆರಯುವಂತಾಗಿ ಆ ಸುವರ್ಣ ಅವಕಾಶವನ್ನು ಬಳಸಿಕೊಂಡು ಕ್ರೈಸ್ತ ಹೇಗೆ ತನ್ನ ಸತ್ಯವನ್ನು ಮೊಳಗುತ್ತಾನೆ ಮತ್ತು ಹೇಗೆ ಕ್ರಿಸ್ತನ ಮುಂದೆ ಪ್ರತಿಯೊಬ್ಬರು ತಲೆ ಬಾಗುವಂತೆ ಮಾಡುತ್ತಾನೆ ಎಂಬುದನ್ನು ಅವನಲ್ಲದೇ ಬೇರಾರು ಬಲ್ಲರು” …..ಹೀಗೆ ಅನೇಕರು ಅದನ್ನು ಬೆಂಬಲಿಸಿದರು. ಆದರೆ ಅವರ ವೈಚಾರಿಕ ಚಿಂತನೆ ಹಾಗೂ ಚರ್ಚೆಯಲ್ಲಿ ಬೆತ್ತಲಾಗಿದ್ದು ಜಗತ್ತಲ್ಲ. ಜಗತ್ತಿನ ಮುಂದೆ ಭಾರತದ ಬೌದ್ಧಿಕ ಶಕ್ತಿಯಿಂದ ಬೆತ್ತಲಾಗಿದ್ದು ಅವರು… ಸ್ವಾಮಿ ವಿವೇಕಾನಂದರ ಚಿಕಾಗೋದಲ್ಲಿ ಭಾಷಣ. ಅಂದು ಸಪ್ಟಂಬರ 11, 1893 ನೇ ಇಸವಿಯ ಸೋಮವಾರ ಬೆಳಿಗ್ಗೆ ಸರಿಯಾಗಿ 10 ಗಂಟೆಗೆ ಸರ್ವಧರ್ಮದ ಸಮ್ಮೇಳನ ಪ್ರಾರಂಭವಾಗಿತ್ತು. ಸಮ್ಮೇಳನದ ವೇದಿಕೆಯ ಮೇಲೆ ವಿವಿಧ ಮತ ಧರ್ಮಗಳ ಪ್ರತಿನಿಧಿಗಳು ಆಸಿನರಾಗಿದ್ದರು. ಅವರಲ್ಲಿ ಸ್ವಾಮಿ ವಿವೇಕಾನಂದರು ಒಬ್ಬರು. ಸಮ್ಮೇಳನ ಪ್ರಾರಂಭವಾಗುತ್ತಿದ್ದಂತೆ ಏಳೆಂಟು ಜನಧರ್ಮ ಪ್ರತಿನಿಧಿಗಳು ಸರದಿಯಲ್ಲಿ ನಿಂತು ತಮ್ಮ ಬರೆದಿಟ್ಟುಕೊಂಡು ಬಂದ ಭಾಷಣ ಓದಿದರು. ಇವರಲ್ಲಿ ಅನೇಕರಿಗೆ ಚಪ್ಪಾಳೆ, ಶಿಳ್ಳೆಯ ಪ್ರತಿಕ್ರಿಯೆಗಳು ಸಿಕ್ಕಿದ್ದವು. ಅನಂತರದಲ್ಲಿ ಬ್ರಹ್ಮ ಸಮಾಜದ ಪ್ರತಿನಿಧಿ ಮಜುಮ್ದಾರರಿಗೆ ಹಾಗೂ ಶ್ರೀಲಂಕಾದ ಬೌದ್ಧ ಧರ್ಮದ ಪ್ರತಿನಿಧಿ ಧರ್ಮಪಾಲರಿಗೂ ಸಭೆಯಲ್ಲಿ ನೆರೆದಿದ್ದ ಜನರಿಂದ ಅತ್ಯತ್ತಮವಾದ ಚಪ್ಪಾಳೆಯ ಸುರಿಮಳೆ ಸಿಕ್ಕಿತು. ಅದುವರೆಗೆ, ಆಮೇಲೆ ಆಮೇಲೆ ಎಂದು ಕಾಯ್ದಿದ್ದ ಸ್ವಾಮೀಜಿಯವರ ಸರದಿ ಬಂತು. ಕೊನೆಗೆ ಸಭಾಧ್ಯಕ್ಷ ಚಾಲ್ರ್ಸ ಬಾನಿಯವರು ವಿವೇಕಾನಂದರನ್ನು ವೇದಿಕೆಗೆ ಆಹ್ವಾನಿಸಿಯೇ ಬಿಟ್ಟರು.

ಸಭಾಂಗಣದಲ್ಲಿ ಸುಮಾರು ಎಂಟು ಸಾವಿರ ಜನ ಸ್ವಾಮೀಜಿಯವರ ಭಾಷಣ ಕೇಳಲಿಕ್ಕೆ ಕಾಯ್ದಿದ್ದರು. ದಿವ್ಯ ತೇಜಸ್ಸಿನ ಮೂವತ್ತರ ಹರೆಯದ ಸಿಡಿಲು ಸನ್ಯಾಸಿ ತನ್ನ ಉಚ್ಛ ಕಂಠದಿಂದ ಜನರನ್ನು ಉದ್ದೇಶಿಸಿ “ಅಮೇರಿಕಾದ ಸಹೋದರ, ಸಹೋದರಿಯರೇ” ಎಂದು ಉಚ್ಛರಿಸಿದ್ದೇ ತಡ ಇಡೀ ಸಭಾಂಗಣ ತುಂಬಾ ಕರತಾಡನ, ಸ್ವದೇಶಿಯನಲ್ಲದ ವ್ಯಕ್ತಿಯೋರ್ವ ಸಂಬಂಧ ಸೂಚಕವಾಗಿ ಸಹೋದರ ಸಹೋದರಿಯರೇ ಎಂದಾಗ ನೆರೆದಿದ್ದ ಸಹಸ್ರಾರು ಸಂಖ್ಯೆಯ ಜನರಲ್ಲಿ ಹೊಸ ಆಶ್ಚರ್ಯದ ಅಲೆಗಳು ಅಪ್ಪಳಿಸಿದ್ದು ಸುಳ್ಳಲ್ಲ. ನವ ಸ್ಪೂರ್ತಿಯೊಂದು ಸಂಚರಿಸಿ ಪ್ರತಿಯೊಬ್ಬರು ತಮ್ಮ ಉಚ್ಛ ಕಂಠದಿಂದ ಜಯ ಘೋಷಣೆಯನ್ನು ಕೂಗುತ್ತಾ ತಮ್ಮ ಕರವಸ್ತ್ರಗಳನ್ನು, ತಲೆಯ ಹ್ಯಾಟ್ ಗಳನ್ನು ಬೀಸುವಷ್ಟು ಉತ್ಸಾಹಭರಿತರಾಗಿದ್ದರು. ಈ ಹಿಂದಿನ ಯಾವ ಧರ್ಮ ಪ್ರತಿನಿಧಿಗೂ ಇಲ್ಲದಷ್ಟು ಆವೇಶ ಭರಿತ ಉತ್ಸಾಹವನ್ನು ಕಂಡ ಸಭಾಧ್ಯಕ್ಷ ಚಾಲ್ರ್ಸ ಬಾನಿ ಸ್ವತಃ ತಾವೇ ಎದ್ದು ಸಭಿಕರನ್ನು ಶಾಂತಗೊಳಿಸುವ ಪರಿಸ್ಥಿತಿ ಎದುರಾಯಿತು. ಶ್ರೇಷ್ಠ ಸನಾತನ ಧರ್ಮವನ್ನು ಉದ್ದೇಶಿಸಿ ಮಾತನಾಡುತ್ತ ಸ್ವಾಮಿಜಿ “ಜಗತ್ತಿಗೆ ಸಹಿಷ್ಣುತೆಯನ್ನು ಸರ್ವಧರ್ಮ ಸ್ವಿಕಾರ ಭಾವವನ್ನು ಭೋದಿಸಿದ ಧರ್ಮಕ್ಕೆ ಸೇರಿದವನೆಂಬ ಹೆಮ್ಮೆ ನನ್ನದು. ನಾವು ಸರ್ವ ಸಮ್ಮತ ಸಹಿಷ್ಣುತೆಯನ್ನು ಒಪ್ಪುತ್ತೇವೆ. ಅಷ್ಟೇ ಅಲ್ಲದೇ ಸಕಲ ಧರ್ಮಗಳು ಸತ್ಯವೆಂದು ನಂಬುತ್ತೇವೆ. ಯಾವ ಧರ್ಮದ ಪವಿತ್ರ ಭಾಷೆಗೆ ಹೊರ ನೀಡುವುದು ಅಥವಾ ಬಹಿಷ್ಕಾರ ಹಾಕುವುದೆಂದು ಪದವನ್ನು ಅನುವಾದಿಸಲು ಸಾಧ್ಯವೇ ಇಲ್ಲವೋ ಅಂತಹ ಧರ್ಮಕ್ಕೆ ಸೇರಿದ ಹೆಮ್ಮೆ ನನ್ನದು. ಜಗತ್ತಿನ ಎಲ್ಲ ಧರ್ಮಗಳು, ಎಲ್ಲ ರಾಷ್ಟ್ರಗಳ ಸಂಕಟ ಪೀಡಿತ ನಿರಾಶ್ರಿತರಿಗೆ ಆಶ್ರಯವನಿತ್ತ ರಾಷ್ಟ್ರಕ್ಕೆ ಸೇರಿದವನೆಂಬ ಹೆಮ್ಮೆ ನನ್ನದು. ರೋಮನ್ನರ ದಬ್ಬಾಳಿಕೆಗೆ ಗುರಿಯಾಗಿ ತಮ್ಮ ಪವಿತ್ರ ದೇವಾಲಯವು ನುಚ್ಚು ನೂರಾದಾಗ ದಕ್ಷಿಣ ಭಾರತಕ್ಕೆ ವಲಸೆ ಬಂದ ಇಸ್ರೇಲಿಯರ ಒಂದು ಗುಂಪನ್ನು ನಮ್ಮ ಮಡಿಲಲ್ಲಿ ಇಟ್ಟುಕೊಂಡು ಆಶ್ರಯ ನೀಡಿದ್ದೇವೆ ಎಂದು ಹೇಳಲು ನನಗೆ ಹೆಮ್ಮೆ. ಘನ ಜರತುಷ್ಟ್ರ ಜನಾಂಗದ ಅವಶೇಷಕ್ಕೆ ಆಶ್ರಯವನಿತ್ತ ಹಾಗೂ ಅವರನ್ನು ಈಗಲೂ ಪೋಷಿಸುತ್ತಿರುವ ಧರ್ಮಕ್ಕೆ ನಾನು ಸೇರಿದವನೆಂಬುದು ನನಗೆ ಹೆಮ್ಮೆ.

ಸಹೋದರರೇ ನಾನು ಬಾಲ್ಯದಿಂದ ಪಠಿಸುತ್ತಿದ್ದ ಮತ್ತು ಈಗಲೂ ಲಕ್ಷಾಂತರ ಹಿಂದೂಗಳು ಪಠಿಸುವ ಶ್ಲೋಕವೊಂದರ ಸಾಲುಗಳನ್ನು ನಿಮಗೆ ಉದ್ಧರಿಸಿ ಹೇಳುತ್ತೇನೆ. ಎಂದು ಸ್ವಾಮೀಜಿತ್ರಯೀ ಸಾಂಖ್ಯಂ ಯೋಗಃ ಪಶುಪತಿಮತಂ ವೈಷಮತಿ |ಪ್ರಭಿನ್ನೇ ಪ್ರಸ್ಥಾನೇ ಪರಮಿದಮದಃ ಪಥ್ಯಮಿತಿ ಚ ||ರುಚೀನಾಂ ವೈಚಿತ್ರ್ಯಾತ್ ಋಜು ಕುಟಿಲ ನಾನಾ ಪಥ ಜುಷಾಂ |ನೈಣಾಮೇಕೋ ಗಮ್ಯ: ತಮಸಿ ಪಯಸಾಂ ಅರ್ಣವ ಇವ ||ಎಂದರೆ, ಹೇ ಭಗವಂತ! ಭಿನ್ನ ಭಿನ್ನ ಸ್ಥಾನಗಳಿಂದು ದಿನದ ನದಿಗಳೆಲ್ಲವು ಹರಿಯುತ್ತ ಹೋಗಿ ಕೊನೆಗೆ ಸಾಗರದೊಳಗೊಂದಾಗುವಂತೆ, ಮಾನವರು ತಮ್ಮ ತಮ್ಮ ವಿಭಿನ್ನ ಅಭಿರುಚಿಗಳಿಂದಾಗಿ ಅನುಸರಿಸುವ ಅಂಕುಡೊಂಕಿನ ಬೇರೆ ಬೇರೆ ದಾರಿಗಳೆಲ್ಲವೂ ಕೊನೆಗೆ ನಿನ್ನನ್ನೇ ಬಂದು ಸೇರುತ್ತವೆ. ಜಗತ್ತಿನಲ್ಲಿ ಇಲ್ಲಿಯವರೆಗೆ ನಡೆಸಲ್ಪಟ್ಟಿರುವ ಮಹಾ ಅದ್ಭುತ ಸಮ್ಮೆಳನಗಳಲ್ಲೊಂದಾದ ಇಂದಿನ ಈ ಸಭೆಯು ಭಗವದ್ಗೀತೆಯು ಭೋದಿಸಿರುವ ಅದ್ಭುತ ತತ್ವ ಅದನ್ನೇ ಸಾರುತ್ತದೆ. ಯೇ ಯಥಾಂ ಮಾಂ ಪ್ರಥದ್ಯಂತೇ ತಾಂಸ್ತಥೈವ ಭಜಾಮ್ಯಹಂಮಮ ವತ್ರ್ಯಾನುವರ್ತಂತೇ ಮನುಷ್ಯಾಃ ಪಾರ್ಥ ಸರ್ವಶಃ ||ಯಾರು ಯಾರು ನನ್ನಲ್ಲಿಗೆ ಯಾವ ಯಾವ ಮಾರ್ಗದಿಂದ ಬರುತ್ತಾರೋ ಅವರವರನ್ನು ನಾನು ಅದೇ ಮಾರ್ಗದಿಂದ ತಲಪುತ್ತೇನೆ. ಮಾನವರು ಅನುಸರಿಸುವ ಮಾರ್ಗಗಳನ್ನೆಲ್ಲ ಕೊನೆಯಲ್ಲಿ ನನ್ನನ್ನೇ ಬಂದು ಸೇರುತ್ತವೆ. ಗುಂಪುಗಾರಿಕೆ ಅತಿಯಾದ ಸ್ವಮತಾಭಿಮಾನ ಹಾಗೂ ಅದರ ಘೋರ ಪರಿಣಾಮವಾದ ಧರ್ಮಾಂದತೆಗಳು ಬಹು ಕಾಲದಿಂದ ಈ ಸುಂದರ ಪೃಥ್ವಿಯನ್ನು ಆಕ್ರಮಿಸಿಕೊಂಡಿವೆ. ಅವು ಭೂಮಿಯನ್ನು ಹಿಂಸೆಯಿಂದ ತುಂಬಿ ಮತ್ತೇ ಮತ್ತೇ ಮಾನವನ ರಕ್ತದಿಂದ ತೊಯಿಸಿವೆ; ನಾಗರಿಕತೆಗಳನ್ನು ನಾಶ ಮಾಡಿವೆ, ದೇಶಗಳನ್ನೇ ನಿರಾಶೆಯ ಕೋಪಕ್ಕೆ ತಳ್ಳಿವೆ. ಆ ಘೋರ ರಾಕ್ಷಸತನವಿಲ್ಲದಿದ್ದಲ್ಲಿ ಮಾನವನ ಸಮಾಜವು ಈಗಿರುವುದಕ್ಕಿತಲೂ ಎಷ್ಟೋ ಹೆಚ್ಚು ಮುಂದುವರೆಯುತ್ತಿತ್ತು. ಆದರೆ ಈಗ ರಾಕ್ಷಸತನದ ಅಂತ್ಯ ಕಾಲ ಸಮಿಪಿಸಿದೆ. ಈ ಸಮ್ಮೇಳನದ ಪ್ರತಿನಿಧಿಗಳ ಗೌರವಾರ್ಥವಾಗಿ ಇಂದು ಬೆಳಗ್ಗೆ ಮೊಳಗಿದ ಘಂಟಾನಾದವು ಎಲ್ಲ ಮತಾಂಧತೆಗೆ ಮೃತ್ಯುಘಾತವನ್ನಿಯುವುದೆಂದು ಆಶಿಸುತ್ತೇನೆ. ಮತ್ತು ಅದು ಖಡ್ಗ ಲೇಖನಿಗಳ ಮೂಲಕ ಸಂಭವಿಸುವ ಹಿಂಸಾ ದ್ವೇಷಗಳಿಗೆ ಹಾಗೂ ಒಂದೇ ಗುರಿಯಡೆಗೆ ಸಾಗುತ್ತಿರುವ ಪಥಕರೊಳಗಿನ ಅಸಹನೆ-ಮನಸ್ಥಾಪಗಳಿಗೆ ಮೃತ್ಯುಘಾತವನ್ನಿಯುವುದೆಂದು ಹೃತ್ಪೂರ್ವಕವಾಗಿ ಆಶಿಸುತ್ತೇನೆ. (ಉಲ್ಲೇಖ ಸ್ವಾಮಿ ಪುರುಷೊತ್ತಮಾನಂದರ ವಿಶ್ವ ವಿಜೇತನ ವಿವೇಕಾನಂದ) . ಆವತ್ತು ಸ್ವಾಮಿಜಿ ಕೇವಲ ಬಂಗಾಳಿ ಮಾತ್ರವಲ್ಲದೇ ಇಡೀ ಭರತಖಂಡದ ಮಹಾನ್ ನಾಯಕರಾಗಿ ಕಂಡರು.

ಜಗತ್ತಿನ ಎಲ್ಲಾ ದೇಶದ ಪ್ರತಿನಿಧಿಗಳು ಯಾವುದೇ ಒಂದು ಸಮಾಜವನ್ನೋ ಅಥವಾ ಯಾವುದೋ ಒಂದು ಪಂಥದ ಪರವಾಗಿಯೋ ಭಾಗವಹಿಸಿದ್ದರು. ಆದರೆ ವಿವೇಕಾನಂದರು ಮಾತ್ರ ಭರತಖಂಡದ ವಿವಿಧ ಬಗೆಯ ಧರ್ಮದ ನಾಯಕರಂತೆ ಅಲ್ಲಿ ತಮ್ಮ ವಾಗ್ಝರಿಯನ್ನು ಹರಿಸಿದರು. ಯಾವ ದೇಶಗಳು, ಯಾವ ಧರ್ಮಗಳು, ಯಾವ ಯಾವ ಧರ್ಮ ಪಾಲಕರು ಭರತಖಂಡದ ಮೂರ್ತಿ ಪೂಜೆಯನ್ನು ಹಿಯಾಳಿಸಿ ತಮ್ಮ ಬೇಳೆಯನ್ನು ಬೇಯಿಸಿಕೊಳ್ಳುತ್ತಿದ್ದರೋ ಅಂಥವರ ಮುಂದೇ ತಲೆ ಎತ್ತಿ ಎದೆಯುಬ್ಬಿಸಿ ನಿಂತು ‘ಸನಾತನ ಧರ್ಮವು ಅಧ್ಯಾತ್ಮೀಕ ಅನುಭವಗಳ ಖನಿಯಾದ ವೇದಗಳ ಮೇಲೆ ಆಧಾರಿತವಾಗಿದೆ. ಹಾಗೆಯೇ ಸನಾತನ ಧರ್ಮ ಮೂರ್ತಿ ಆರಾಧನೆಯನ್ನು ಅನುಮೋದನೆ ಮಾಡುವುದೆಂದು’ ತಮ್ಮ ವಾಗ್ಝರಿಯನ್ನು ಹರಿಸಿದರು. ಜನ ಹಸಿವೆಂದು ಬಳಲಿದಾಗ ಯಾವ ಧರ್ಮಿಯರು ಅನ್ನಕ್ಕೆ ಬದಲಾಗಿ ಧರ್ಮವನ್ನು ಧಿಕ್ಷೆಯಾಗಿ ನೀಡುತ್ತಿದ್ದರೋ ಅಂತಹವರಿಗೆ ಮುಖಕ್ಕೆ ಹೊಡೆದಂತೆ ಸನಾತನ ಧರ್ಮದ ಹೃದಯ ವೈಶಾಲತೆಯನ್ನು ಎತ್ತರದ ಧ್ವನಿಯಲ್ಲಿ ಇಡೀ ಜಗತ್ತಿಗೆ ಸಾರಿದರು. ಅಂತಹ ಸಿಡಿಲು ಸನ್ಯಾಸಿಯ ಐದು ನಿಮಿಷದ ಮಾತುಗಳು ಇಡಿ ಜಗತ್ತಿಗೆ ಸನಾತನ ಧರ್ಮದ ಶ್ರೇಷ್ಠತೆಯನ್ನು ಬಿತ್ತರಿಸಿದ್ದವು. ದೇಹ ತ್ಯಜಿಸಿ 115 ವರ್ಷ ಕಳೆದರೂ ಅವರು ನೀಡಿ ಹೋದ ತತ್ವ ಸಿದ್ಧಾಂತಗಳು ಅಚ್ಚಳಿಯದೆ ಹಾಗೆ ಇವೆ.

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments