ಪಂಡಿತ್ ದೀನದಯಾಳ ಉಪಾಧ್ಯಾಯ – ಶತಮಾನೋತ್ಸವ ಸ್ಮರಣೆ
– ವಿಘ್ನೇಶ್, ಯಲ್ಲಾಪುರ
ಅವರು ಹುಟ್ಟಿದ್ದು 1916ರ ಸೆಪ್ಪೆಂಬರ್ 25ರಂದು, ರೈಲ್ವೆ ಇಲಾಖೆಯಲ್ಲಿ ಸ್ಟೇಷನ್ ಮಾಸ್ತರ್ ಆಗಿ ಕೆಲಸ ಮಾಡುತ್ತಿದ್ದ ಅಜ್ಜನ ಮನೆಯಲ್ಲಿ; ಇನ್ನೂ ಎರಡೂವರೆ ವರ್ಷವಾಗುವಷ್ಟರಲ್ಲೇ ತಂದೆ ಪಂ|| ಭಗವತಿಪ್ರಸಾದರ ದೇಹಾಂತ್ಯವಾಯಿತು; ತಾಯಿ ರಾಮಪ್ಯಾರಿ ಪುಟ್ಟ ಮಗು ಶಿವದಯಾಳನನ್ನು ಮಡಿಲಲ್ಲಿಟ್ಟುಕೊಂಡು, ಇವರನ್ನು ಕೈ ಹಿಡಿದು ಕರೆದುಕೊಂಡು ಹೋಗಿದ್ದು ತನ್ನ ತಮ್ಮನ ಮನೆಗೆ.. ಸೋದರಮಾವನ ಮನೆಯಲ್ಲಿ ನಾಲ್ಕೈದು ವರ್ಷ ಕಳೆಯಿತು ಎನ್ನುವಾಗ ತಾಯಿ ರಾಮಪ್ಯಾರಿ ರಾಮನಿಗೆ ಪ್ರಿಯಳಾದಳು, ವೈಕುಂಠಧಾಮ ಸೇರಿದಳು.. ಮುಂದೆ ಹತ್ತು ವರ್ಷ ಕಳೆಯುವಷ್ಟರಲ್ಲಿ ಇವರಿಗಿಂತ ಎರಡು ವರ್ಷಕ್ಕೆ ಚಿಕ್ಕವನಾದ ತಮ್ಮ ಶಿವದಯಾಳ ಗುಣವಾಗದ ಜ್ವರದಿಂದ ಇಹಲೋಕ ತ್ಯಜಿಸಿದ. ಅಲ್ಲಿಗೆ ತಮ್ಮ ಹದಿನೆಂಟರ ಹರೆಯದಲ್ಲೇ ಮೊದಲನೇ ಸುತ್ತಿನ ರಕ್ತಸಂಬಂಧಿಗಳೆಲ್ಲರನ್ನೂ ಕಳೆದುಕೊಂಡು ‘ವಿರಕ್ತ’ ರಾದರೀತ. ಆದರೆ, ಆ ವಿರಕ್ತಿಯಾದರೂ ವ್ಯಕ್ತಿಗತ ‘ಸಂಸಾರ’ವನ್ನು ಕುರಿತುದಾಗಿತ್ತಷ್ಟೆ; ‘ಸಮಷ್ಟಿಸಂಸಾರ’ದ ಸೇವೆಯಲ್ಲಿ ಅವರನ್ನು ಅನುರಕ್ತರನ್ನಾಗಿಸಿತು. ಕಾಲೇಜು ಶಿಕ್ಷಣದ ಸಮಯದಲ್ಲಿ ಬಾಳಾಸಾಹೇಬ ದೇವರಸರ ಸಂಪರ್ಕಕ್ಕೆ ಬಂದಮೇಲೆ ಅವರ ಜೀವನದ ದಾರಿ-ದಿಕ್ಕುಗಳು ಸ್ಪಷ್ಟವಾದುವು. ಅಲ್ಲಿಂದ ಮುಂದೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕರೂ ಆದರು. ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದರು; ಸಂಘಟನೆಯ ಅಪೇಕ್ಷೆಯಂತೆ ಸ್ವಾತಂತ್ರ್ಯೋತ್ತರ ಭಾರತದಲ್ಲಿ ರಾಜಕೀಯ ಕ್ಷೇತ್ರ ಪ್ರವೇಶಿಸಿದರು; ಜನಸಂಘದ ಜವಾಬ್ದಾರಿ ಹೊತ್ತರು. ವ್ಯಕ್ತಿಗತ ಜೀವನದಲ್ಲಿ ಪಾರದರ್ಶಕತೆ, ತಾವು ನಂಬಿದ ಸಿದ್ಧಾಂತದ ಅನುಷ್ಠಾನದಲ್ಲಿ-ಬೋಧನೆಯಲ್ಲಲ್ಲ-ಏಕನಿಷ್ಠೆ, ಆಚರಣೆಯ ಮೂಲಕ ಅನುಕರಣೀಯರಾಗುವ ಮೇಲ್ಪಂಕ್ತಿ, ಸಮಾಜದ ಎಲ್ಲ ಸ್ತರದ ಜನರನ್ನೂ ಜೀವನವನ್ನೂ ಕುರಿತು ಕಳಕಳಿ, ಭಾರತೀಯ ಸಂಸ್ಕೃತಿ-ಪರಂಪರೆಯನ್ನು ಕುರಿತ ಆತ್ಯಂತಿಕ ಶ್ರದ್ಧೆ – ಇವೆಲ್ಲವುಗಳಿಂದಾಗಿ ಅವರು ಕೇವಲ ಸಂಘದ, ಜನಸಂಘದ ವಲಯದಲ್ಲಷ್ಟೇ ಅಲ್ಲ; ಇಡೀ ದೇಶದಾದ್ಯಂತ ಪರಿಚಿತರಾದರು. ಪಕ್ಷಭೇದವಿಲ್ಲದೆ ಎಲ್ಲರ ಗೌರವಕ್ಕೆ ಪಾತ್ರರಾದರು.
ಆದರೆ, ಅದಾಗಲೇ ಅಧಿಕಾರ ರಾಜಕಾರಣ ದೇಶದಲ್ಲಿ ತನ್ನ ಕುರುಹುಗಳನ್ನು ತೋರಿಸಲಾರಂಭಿಸಿತ್ತು; ಮತೀಯ ತುಷ್ಟೀಕರಣವೂ ವ್ಯಾಪಕವಾಗಿ ನಡೆದಿತ್ತು. ಅವುಗಳ ನಡುವೆಯೇ ಇವರು ಮಾತ್ರ ಮೌಲ್ಯಯುತ ರಾಜಕಾರಣದ, ಕೇವಲ ದೇಶಕೇಂದ್ರಿತ-ಸ್ವಾರ್ಥರಹಿತ ರಾಜಕಾರಣದ ಮಾತನ್ನಾಡುತ್ತಿದ್ದುದು, ಮತ್ತು ಅದಕ್ಕೆ ಜನಸಾಮಾನ್ಯರಿಂದಲೂ ವ್ಯಾಪಕ ಬೆಂಬಲ ದೊರೆಯತೊಡಗಿದ್ದು, ವಿರೋಧಿಗಳ ನೆಮ್ಮೆದಿ ಕೆಡಿಸಿತ್ತು. ಪಂ|| ಶ್ಯಾಮಪ್ರಸಾದ ಮುಖರ್ಜಿಯವರು ಕಾಶ್ಮೀರದ ಜೈಲಿನಲ್ಲಿ ಅಸಹಜವಾಗಿ ಮರಣಿಸಿದಂತೆ, ಇವರು 1968ರ ಫೆಬ್ರುವರಿ 11ರಂದು ಬೆಳಗಿನ ಜಾವ ಮೊಗಲ್‍ಸರಾಯ್ ರೈಲ್ವೆ ನಿಲ್ದಾಣದ ಸಮೀಪ ಶವವಾಗಿ ಗೋಚರಿಸಿದರು. ರೈಲ್ವೆ ಸ್ಟೇಷನ್ ಮಾಸ್ತರರ ಮನೆಯಲ್ಲಿ ಹುಟ್ಟಿದ ಜೀವ ರೈಲ್ವೆ ಸ್ಟೇಷನ್ನೊಂದರ ಸಮೀಪದಲ್ಲಿಯೇ ತನ್ನ ಇಹಯಾತ್ರೆ ಮುಗಿಸಿತು! ಆದರೆ, ಕೇವಲ ಅರ್ಧಶತಮಾನದ ಜೀವನದಲ್ಲೇ ಅವರು ಸಾಧಿಸಿದ್ದೆಷ್ಟು! ಭಾರತದ ರಾಜಕಾರಣದಲ್ಲಿ ಸಜ್ಜನಿಕೆಗೆ, ಸೌಶಿಲ್ಯಕ್ಕೆ, ಸ್ವಾರ್ಥರಹಿತ-ದೇಶಹಿತ ರಾಜಕಾರಣಕ್ಕೆ ಅವರೊಂದು ಮಾದರಿಯೆನಿಸಿದ್ದರು; ಭಾರತೀಯ ಸಂಸ್ಕೃತಿ-ಪರಂಪರೆ-ಜೀವನಾದರ್ಶಗಳ ಬೆಳಕಿನಲ್ಲಿ – ಭಾರತವನ್ನು ಸಮರ್ಥವಾಗಿ ಮುನ್ನಡೆಸಬಲ್ಲ – ಹೊಸ ಆರ್ಥಿಕನೀತಿಯನ್ನು ಮಂಡಿಸಿದ್ದರು; ಭಾರತೀಯ ರಾಜ್ಯಾಂಗ-ಶಾಸಕಾಂಗ-ಕಾರ್ಯಾಂಗಗಳು ಕೆಲಸ ಮಾಡಬೇಕಾದ ದಿಕ್ಕು-ದಿಶೆಗಳನ್ನು ನಿರ್ದೇಶಿಸಿದ್ದರು; ಅಂದು ಪ್ರಚಲಿತವಿದ್ದ – ಇಂದಿಗೂ ಮುಂದುವರಿದಿರುವ – ವಿದೇಶೀ ಮಾದರಿಯ ರಾಜಕಾರಣ–ಆಡಳಿತಸೂತ್ರಗಳ ನಿಷ್ಟ್ರಯೋಜಕತೆಯನ್ನು ಅತ್ಯಂತ ಸಮರ್ಥವಾಗಿ ಪ್ರತಿಪಾದಿಸಿದ್ದರು. ಅವರು ಅಂದು ಪ್ರತಿಪಾದಿಸಿದ್ದ ‘ಏಕಾತ್ಮ ಮಾನವದರ್ಶನ’ವೇ ಇಂದಿಗೂ ಅವರನ್ನು ಅಮರರನ್ನಾಗಿಸಿದೆ; ಇಂದು, ಅವರ ಜನ್ಮಶತಮಾನೋತ್ಸವದ ಸಂದರ್ಭದಲ್ಲಿ ಎಲ್ಲೆಡೆ ಆ ‘ದರ್ಶನ’ವನ್ನು ಕುರಿತು ಮತ್ತೆ ವಿಚಾರಸಂಕಿರಣಗಳು, ವಿಶೇಷ ಭಾಷಣಗಳು, ಕಾರ್ಯಕ್ರಮಗಳು ನಡೆಯುತ್ತಿವೆ. ಅವರು ಅಸ್ತಂಗತರಾಗಿ ಅರ್ಧಶತಮಾನವೇ ಆಗುತ್ತ ಬಂದರೂ ದೇಶ ಅವರನ್ನು ಸ್ಮರಿಸುತ್ತಿದೆ – ಅವರೇ ಪಂಡಿತ್ ದೀನದಯಾಳ್ ಉಪಾಧ್ಯಾಯ!
————————————
ದೀನದಯಾಳರ ಜೀವನ ಎನ್ನುವುದು ಸಂಕಟಗಳ ಕೆಸರಿನಲ್ಲಿ ಅರಳಿನಿಂತ ಸುಮನೋಹರ ತಾವರೆ. ಬಾಲ್ಯದಲ್ಲೇ ತಂದೆ-ತಾಯಂದಿರನ್ನು ಕಳೆದುಕೊಂಡರು; ಸೋದರಮಾನವ ಮನೆಯಲ್ಲಿ ಬೆಳೆದರು; ಅಲ್ಲಿದ್ದುಕೊಂಡೇ ಓದಿದರು. ತಾರುಣ್ಯಕ್ಕೆ ಕಾಲಿಡುವಾಗಲೇ ಬೆನ್ನಿಗೇ ಬಂದಿದ್ದ ತಮ್ಮನೂ ಇಲ್ಲವಾದ. ಅಂಥ ಸಂದರ್ಭದಲ್ಲೂ ದೀನನ ಓದು ನಿಲ್ಲಲಿಲ್ಲ. ಸೋದರಮಾವಂದಿರ ಒತ್ತಾಸೆಯಲ್ಲಿ ಪ್ರತಿ ತರಗತಿಯಲ್ಲೂ ಪ್ರಥಮ ದರ್ಜೆ – ಸ್ಥಾನ ಪಡೆದರು; ನಗದು ಬಹುಮಾನ, ಸುವರ್ಣಪದಕಗಳು, ವಿದ್ಯಾರ್ಥಿವೇತನಗಳನ್ನು ಪಡೆದರು. ಕಾನಪುರದ ಸನಾತನಧರ್ಮ ಮಹಾವಿದ್ಯಾಲಯದಲ್ಲಿ ಬಿ.ಎ. ಓದಿದರು; ಆಸಕ್ತಿಯ ವಿಷಯಗಳಾದ ಗಣಿತ, ಸಂಸ್ಕೃತಗಳಲ್ಲಿ ಅತ್ಯುತ್ತಮ ಅಂಕ ಪಡೆದರು; ಪ್ರಥಮಸ್ಥಾನವೂ ದೊರೆಯಿತು. ಈ ಸಂದರ್ಭದಲ್ಲಿಯೇ ಬಾಳಾಸಾಹೇಬ ದೇವರಸರ ಸಂಪರ್ಕಕ್ಕೆ ಬಂದಿದ್ದು. ಅವರ ಎಂ.ಎ. ಶಿಕ್ಷಣ ಮುಗಿಯುವ ಹೊತ್ತಿಗೆ 250 ರೂಪಾಯಿ ಮಾಸಿಕ ವೇತನದ ಮುಖ್ಯೋಪಾಧ್ಯಾಯರ ಕೆಲಸವೂ ಅವರಿಗಾಗಿ ಕಾದಿತ್ತು. ಆದರೆ ದೀನದಯಾಳ ಅದನ್ನು ನಿರಾಕರಿಸಿ, ಸಂಘದ ಪ್ರಚಾರಕರಾದರು. ಬಹುತೇಕ ದಿನಗಳಲ್ಲಿ ಅವರ ರಾತ್ರಿಯ ಊಟ ಕಡಲೆಪುರಿಯೇ ಆಗಿತ್ತು.
ಅವರು ಅಪ್ರತಿಮ ಸಂಘಟಕ. ಸಾಮಾನ್ಯ ಜನರೊಂದಿಗೂ ಸುಲಭದಲ್ಲಿ ಬೆರೆಯುತ್ತಿದ್ದ ಸರಳ ಸಜ್ಜನಿಕೆ ಅವರದು. ಹಾಗಾಗಿಯೇ 1942ರಲ್ಲಿ ಪ್ರಚಾರಕರಾಗಿ ಹೊರಟ ಅವರು ಪ್ರಾರಂಭದಲ್ಲಿ ಒಂದು ವರ್ಷ ತಾಲ್ಲೂಕು ಪ್ರಚಾರಕರಾಗಿದ್ದರು; ಅನಂತರ ಎರಡು ವರ್ಷ ಜಿಲ್ಲಾ ಪ್ರಚಾರಕರಾಗಿ ಕೆಲಸ ಮಾಡಿದರು. 1945ರಲ್ಲಿ ಉತ್ತರಪ್ರದೇಶದ ಸಹ-ಪ್ರಾಂತಪ್ರಚಾರಕರಾಗಿ ನಿಯುಕ್ತರಾದರು! ಅವರಾಗ ರಾಜ್ಯದಾದ್ಯಂತ ಪ್ರವಾಸ ಮಾಡುತ್ತಿದ್ದರು. ಆ ಸಮಯದಲ್ಲಿ ಅದೆಷ್ಟೊ ರಾತ್ರಿಗಳಂದು ರೈಲ್ವೆ ನಿಲ್ದಾಣಗಳಲ್ಲಿ – ಬಸ್ ನಿಲ್ದಾಣಗಳಲ್ಲಿಯೇ ಮಲಗಿದರು. ‘ಲಂಘನಂ ಪರಮೌಷಧಮ್’ ಎಂಬುದು ಅವರ ಜಪವೇ ಆಗಿಬಿಟ್ಟಿತ್ತು. ಇದೇ ಸಂದರ್ಭದಲ್ಲಿ ಅವರು ‘ರಾಷ್ಟ್ರಧರ್ಮ ಪ್ರಕಾಶನ’ದ – ಪಾಂಚಜನ್ಯ ಮಾಸಪತ್ರಿಕೆಯ ಜವಾಬ್ದಾರಿಗಳನ್ನೂ ನಿರ್ವಹಿಸಿದರು. ಪಾಂಚಜನ್ಯದ ಮೊದಲ ಸಂಪಾದಕೀಯ ಬರೆದವರೂ ಅವರೇ!
————————
ದೀನದಯಾಳರು ಅಗ್ರಪಂಕ್ತಿಯ ಲೇಖಕರಾಗಿದ್ದರು. ‘ರಾಷ್ಟ್ರಧರ್ಮ ಪ್ರಕಾಶನ’ದ ಹುಟ್ಟು, ಬೆಳವಣಿಗೆಯಲ್ಲಿ ಅವರ ಪಾತ್ರ ಮಹತ್ತ್ವದ್ದು. ಪ್ರಕಾಶನವು ‘ಪಾಂಚಜನ್ಯ’ ಎಂಬ ವಾರಪತ್ರಿಕೆಯನ್ನು ಪ್ರಾರಂಭಿಸಿದಾಗ ಅದರ ಸಂಚಾಲನೆಯ ಹೊಣೆಯೂ ದೀನದಯಾಳರ ಹೆಗಲೇರಿತು. ದೀನದಯಾಳರು ಅದರ – ಸಂಪಾದಕೀಯ ಬರೆಯುವುದರಿಂದ ಹಿಡಿದು, ಮೊಳೆ ಜೋಡಿಸುವುದು. ಮುದ್ರಿಸುವುದು, ಬಂಡಲುಗಳನ್ನು ಕಟ್ಟಿ ರೈಲ್ವೆ ನಿಲ್ದಾಣಕ್ಕೊಯ್ಯುವುದು, ವಿಳಾಸಗಳನ್ನು ಬರೆಯುವುದೂ ಸೇರಿದಂತೆ – ಎಲ್ಲ ಕೆಲಸಗಳನ್ನೂ – ಯಾವುದನ್ನೂ ಮೇಲು-ಕೀಳು ಎಂದೆಣಿಸದೇ – ಮಾಡಿದರು, ಕೆಲಸಗಾರರಿಗೆಲ್ಲ ಮೇಲ್ಪಂಕ್ತಿಯಾದರು. ಅಂದಿನ ದುರ್ಭರ ಪರಿಸ್ಥಿತಿಯಲ್ಲೂ ಪಾಂಚಜನ್ಯ ಸಮಯಕ್ಕೆ ಸರಿಯಾಗಿ ಮುದ್ರಣವಾಗಿ ಓದುಗರ ಕೈಸೇರುವಂತೆ ನೋಡಿಕೊಂಡರು. ಕೆಲವು ಸಲ ಹಗಲೂರಾತ್ರಿಯೆನ್ನದೆ ತಾವೇ ನಿಂತು ಕೆಲಸಗಳನ್ನು ಮಾಡಿದರು.
‘ರಾಷ್ಟ್ರಧರ್ಮ ಪ್ರಕಾಶನ’ದ ಮೂಲಕ ಇಡೀ ರಾಷ್ಟ್ರಕ್ಕೇ ವೈಚಾರಿಕ-ಬೌದ್ಧಿಕ ಮಾರ್ಗದರ್ಶನ ಮಾಡಬೇಕಾಗಿದ್ದ ಆ ಸಂದರ್ಭದಲ್ಲಿ ದೀನದಯಾಳರು ಸ್ವತಃ ಲೇಖನಕಾರ್ಯವನ್ನೂ ನಡೆಸಿದರು. ಚಂದ್ರಗುಪ್ತನ ಶೌರ್ಯ-ಸಾಹಸಗಳನ್ನೂ ಅವನ ದೇಶಭಕ್ತಿ–ಆಡಳಿತನಿಷ್ಠೆಗಳನ್ನೂ ಕುರಿತು ‘ಯವನವಿಜೇತ ಚಂದ್ರಗುಪ್ತ’ ಎಂಬ ಪುಸ್ತಕವನ್ನು ಬರೆದರು. ಅದಾದ ನಂತರ, ಇಡೀ ದೇಶವನ್ನು ಚತುರಾಮ್ನಾಯ ಪೀಠಗಳ ಮೂಲಕ ಒಗ್ಗೂಡಿಸಿದ ಆಚಾರ್ಯ ಶಂಕರರನ್ನು ಕುರಿತೂ ಪುಸ್ತಕವೊಂದನ್ನು ಬರೆದರು. ಮರಾಠಿಯಲ್ಲಿದ್ದ ಡಾಕ್ಟರ್‍ಜಿಯವರ ಜೀವನಚರಿತ್ರೆಯನ್ನು ಸರಳ ಸುಂದರ ಭಾಷೆಯಲ್ಲಿ ಹಿಂದಿಗೆ ಅನುವಾದಿಸಿದರು. ‘ರಾಷ್ಟಜೀವನ್ ಕಿ ಸಮಸ್ಯಾಯೇ’, ‘ಕಚ್ಛ ಶರಣಾಗತಿ’, ‘ರೂಪಾಯಿ ಅಪಮೌಲ್ಯ’, ‘ಅಮೆರಿಕೆಯ ಗೋಧಿ’, ‘ಅಖಂಡ ಭಾರತ’, ‘ನಮ್ಮ ಕಾಶ್ಮೀರ’ – ಹೀಗೆ ಅನೇಕ ಕಿರುಹೊತ್ತಗೆಗಳನ್ನೂ ಬರೆದು ಪ್ರಕಟಿಸಿದರು. ಇವೆಲ್ಲದರ ನಡುವೆ, ಅವರ ಹೆಸರನ್ನು ಚಿರಸ್ಥಾಯಿಯಾಗಿಸಿದ ಎರಡು ಗ್ರಂಥಗಳೆಂದರೆ: 1. ಭಾರತದ ಅರ್ಥನೀತಿ – ಒಂದು ದಿಕ್ಕು; 2. ಏಕಾತ್ಮ ಮಾನವವಾದ.
————————
ದೀನದಯಾಳಜಿಯವರ ಸಂಘಟನಾಕೌಶಲದ ಲಾಭ ರಾಜಕೀಯ ಕ್ಷೇತ್ರಕ್ಕೂ ದೊರೆಯಿತು. ಸ್ವಾತಂತ್ರ್ಯ ದೊರೆತ ಮೂರ್ನಾಲ್ಕು ವರ್ಷಗಳಲ್ಲೇ ಭಾರತದ ರಾಜಕಾರಣದ ದಿಕ್ಕು-ದೆಸೆಗಳು ಪಡೆದುಕೊಂಡ ಅನೂಹ್ಯ ತಿರುವುಗಳು ಅವರನ್ನು ರಾಜಕೀಯ ಕ್ಷೇತ್ರ ಪ್ರವೇಶಿಸುವಂತೆ ಪ್ರೇರೇಪಿಸಿದವು. ಅದೇ ಸಮಯದಲ್ಲಿ ಕೇಂದ್ರದ ನೆಹರೂ ಸಂಪುಟಕ್ಕೆ ರಾಜೀನಾಮೆ ನೀಡಿ, ಸರಕಾರದಿಂದ ಹೊರಬಂದಿದ್ದ ಡಾ|| ಶ್ಯಾಮಪ್ರಸಾದ ಮುಖರ್ಜಿಯವರು ‘ಭಾರತೀಯ ಜನಸಂಘ’ವನ್ನು ಪ್ರಾರಂಭಿಸಿದ್ದರು. (1951ರಲ್ಲಿ.) ದೀನದಯಾಳ ಉಪಾಧ್ಯಾಯರು ಜನಸಂಘದ ಉತ್ತರ ಪ್ರದೇಶ ಘಟಕದ ಪ್ರಾಂತ ಸಂಘಟನಾ ಕಾರ್ಯದರ್ಶಿಗಳಾಗಿ ನಿಯುಕ್ತರಾದರು. 1952ರಲ್ಲಿ ಕಾನಪುರದಲ್ಲಿ ಜನಸಂಘದ ಅಖಿಲಭಾರತ ಅಧಿವೇಶನ ನಡೆಯಿತು. ವ್ಯವಸ್ಥೆಯ ಉಸ್ತುವಾರಿಯೆಲ್ಲ ದೀನದಯಾಳರದು. ಅಲ್ಲಿಯ ಅಚ್ಚುಕಟ್ಟುತನವನ್ನು ಕಂಡ ಶ್ಯಾಮಪ್ರಸಾದರು ಅದೇ ಅಧಿವೇಶನದಲ್ಲಿಯೇ ದೀನದಯಾಳರನ್ನು ಜನಸಂಘದ ಅಖಿಲಭಾರತೀಯ ಕಾರ್ಯದರ್ಶಿಗಳನ್ನಾಗಿ ನಿಯುಕ್ತಿಗೊಳಿಸಿದರು. ಮುಂದೆ ಕೆಲವೇ ದಿನಗಳಲ್ಲಿ ದೀನದಯಾಳರು ಜನಸಂಘದ ಪ್ರಧಾನ ಕಾರ್ಯದರ್ಶಿಗಳಾದರು.
ಜನಸಂಘ ಕೈಗೆತ್ತಿಕೊಂಡ ಮೊದಲ ಆಂದೋಲನವೇ ಕಾಶ್ಮೀರವನ್ನು ಕುರಿತಾದದ್ದು. ನೆಹರೂ ಸರಕಾರದ ನೀತಿಯನ್ನು ವಿರೋಧಿಸಿ ಶ್ಯಾಮಪ್ರಸಾದ ಮುಖರ್ಜಿಯವರ ನೇತೃತ್ವದಲ್ಲಿ ಬೃಹತ್ ಆಂದೋಲನ ನಡೆಯಿತು. 1953ರ ಮೇ 6ರಂದು, ಮುಖರ್ಜಿಯವರು, ಕಾಶ್ಮೀರ ಪ್ರವೇಶಕ್ಕೆ ಭಾರತೀಯರಿಗಿದ್ದ ನಿರ್ಬಂಧವನ್ನು ಮುರಿದು ಸತ್ಯಾಗ್ರಹ ಮಾಡಿದರು. ದೆಹಲಿಯಲ್ಲಿ ನಡೆದ ಸತ್ಯಾಗ್ರಹದಲ್ಲಿ ಹತ್ತು ಸಾವಿರಕ್ಕೂ ಹೆಚ್ಚುಜನ ಭಾಗವಹಿಸಿದರು. ಅನೇಕರು ಪೊಲೀಸರ ದರ್ಪಕ್ಕೆ, ಗುಂಡಿಗೆ ಆಹುತಿಯಾದರು. ಶ್ಯಾಮಪ್ರಸಾದ ಮುಖರ್ಜಿಯವರು 1953ರ ಜೂನ್ 23ರಂದು ಕಾಶ್ಮೀರದ ಜೈಲಿನಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಮೃತರಾದರು. ಇಡೀ ದೇಶದ ಗಮನ ಸೆಳೆದ ಈ ಆಂದೋಲನ ಜುಲೈ 7ರಂದು ಮುಕ್ತಾಯವಾಯಿತು; ಜನಸಂಘ ತನ್ನ ನೇತಾರನನ್ನು ಕಳೆದುಕೊಂಡಿತ್ತು.
‘ಇನ್ನು ಜನಸಂಘದ ಕಥೆ ಮುಗಿಯಿತು’ ಎಂದೇ ಎಲ್ಲರೂ ಎಣಿಸಿದ್ದರು. ಆದರೆ ದೀನದಯಾಳಜಿ ದೇಶದಾದ್ಯಂತ ಪ್ರವಾಸಮಾಡಿದರು. ಊರೂರಿನಲ್ಲೂ ಜನರನ್ನು ಹುಡುಕಿದರು; ಜನಸಂಘದ ಜವಾಬ್ದಾರಿಗಳನ್ನು ಕೊಟ್ಟರು. ಕೇವಲ ಎರಡು ವರ್ಷಗಳಲ್ಲೇ ಮತ್ತೊಂದು ಬೃಹತ್ ಆಂದೋಲನಕ್ಕೆ ಜನಸಂಘವನ್ನು ಸಜ್ಜುಗೊಳಿಸಿದರು. ಆಗ ‘ಗೋವಾ’ ಇನ್ನೂ ಪಾರತಂತ್ರ್ಯದಲ್ಲೇ ಇತ್ತು; ಪೋರ್ಚುಗೀಸರು ಆಳುತ್ತಿದ್ದರು. ಅದನ್ನು ಸ್ವತಂತ್ರಗೊಳಿಸುವುದು ಶೇಷಭಾರತದ ಆದ್ಯ ಕರ್ತವ್ಯ ಎಂದು ಜನಸಂಘ ನಿರ್ಣಯಿಸಿತು. ಅದಕ್ಕಾಗಿ ‘ಗೋವಾ ಮುಕ್ತಿ ಆಂದೋಲನ’ ಪ್ರಾರಂಭವಾಯಿತು. ಜನಸಂಘದ ಅ.ಭಾ. ಕಾರ್ಯದರ್ಶಿಗಳಲ್ಲೊಬ್ಬರಾಗಿದ್ದ ಜಗನ್ನಾಥರಾವ್ ಜೋಶಿಯವರಿಗೆ ಆಂದೋಲನದ ನೇತೃತ್ವ ವಹಿಸಿದರು, ದೀನದಯಾಳರು. ಜಗನ್ನಾಥರಾಯರು 1955ರ ಜೂನ್ 23ರಂದು ಗೋವಾ ಪ್ರವೇಶಿಸಿ ಬಂಧನಕ್ಕೊಳಗಾದರು.. ಅನೇಕ ಕಾರ್ಯಕರ್ತರ ಬಲಿದಾನವಾಯಿತು. ವರ್ಷದಿಂದ ವರ್ಷಕ್ಕೆ ಪ್ರಬಲಿಸಿದ ಆಂದೋಲನದ ಪರಿಣಾಮವಾಗಿ 1961ರಲ್ಲಿ ಗೋವಾ ಸ್ವತಂತ್ರಭಾರತದ ಭಾಗವಾಯಿತು.
ಜನಜಾಗೃತಿ ಆಂದೋಲನಗಳ ಮೂಲಕವೇ ಜನಸಂಘ ಬೆಳೆಯಿತು. 1962ರ ಚೀನಾ ಆಕ್ರಮಣ ಸಂದರ್ಭದಲ್ಲಿಯೂ ಜನಸಂಘ ಬೃಹತ್ ಪ್ರತಿಭಟನಾ ಸಭೆಗಳನ್ನು ಆಯೋಜಿಸಿ ಕೇಂದ್ರ ಸರಕಾರದ ನಿಷ್ಕಿೃಯತೆಯನ್ನು ಖಂಡಿಸಿತು. ಈ ಪ್ರತಿಭಟನೆಗಳ ಫಲವಾಗಿ ಅಂದಿನ ರಕ್ಷಣಾ ಸಚಿವ ಕೃಷ್ಣಮೆನನ್ ರಾಜೀನಾಮೆ ಕೊಡಬೇಕಾಯಿತು. ಒಂದು ರಾಜಕೀಯ ಪಕ್ಷವಾಗಿ ಚುನಾವಣೆಗಳನ್ನೆದುರಿಸುವಲ್ಲೂ ಜನಸಂಘ ಹಿಂದೆ ಬೀಳಲಿಲ್ಲ. ಆದರೆ, ಯಾವುದೇ ಕಾರಣಕ್ಕೂ ಹಣ-ಜಾತಿ ಆಧಾರಿತ ಚಟುವಟಿಕೆಗಳಿಗೆ ಅವರು ವಿರೋಧಿಯಾಗಿದ್ದರು. ಅವರೇ ಸ್ಪರ್ಧಿಸಿದ್ದ ಕ್ಷೇತ್ರದಲ್ಲಿ ಎದುರು ಪಕ್ಷದ ಅಭ್ಯರ್ಥಿ ಜಾತಿವಾದಕ್ಕೆ ಅಂಟಿಕೊಂಡಾಗ ಜನಸಂಘದ ಕಾರ್ಯಕರ್ತರೂ ಅದನ್ನೇ ಅನುಸರಿಸಲು ಮುಂದಾಗಿ, ದೀನದಯಾಳರನ್ನು ಕಂಡರು. ಆಗ ದೀನದಯಾಳರು ಹೇಳಿದ ಮಾತು ಇದು: “ಇಂತಹ ಗೆಲವು, ಸೋಲಿಗಿಂತಲೂ ಕೀಳು. ನಮ್ಮ ಸಿದ್ಧಾಂತಗಳಿಗೆ ತಿಲಾಂಜಲಿಯನ್ನಿತ್ತು ಜಾತೀಯತೆಗೆ ಪುಟಕೊಡುವ ಈ ಗೆಲವು ನನಗೆ ಸರ್ವಥಾ ಬೇಡ”. ಅವರು ಸದಾ ಹೇಳುತ್ತಿದ್ದ ಇನ್ನೊಂದು ಮಾತೂ ಮನನೀಯ: “ಕಾಂಗ್ರೆಸ್ಸಿನ ಟೀಕೆ ಮಾಡುವ ಮೂಲಕ ನೀವು ಕಾಂಗ್ರೆಸ್ಸಿನ ಪ್ರಚಾರವನ್ನೇ ಮಾಡುತ್ತಿದ್ದೀರಿ. ಕೇವಲ ಕಾಂಗ್ರೆಸ್ಸಿನ ಟೀಕೆಯೇ ನಿಮ್ಮ ಬಂಡವಾಳವಾಗಲಾರದು; ನೀವೇನು ಮಾಡುತ್ತಿದ್ದೀರಿ, ನಿಮ್ಮ ವಿಧಾಯಕ ವಿಚಾರಗಳು, ಕಾರ್ಯಕ್ರಮಗಳು ಏನು?-ಎಂಬುದನ್ನು ಜನರಿಗೆ ಹೇಳಬೇಕು.”
———————
ದೀನದಯಾಳರ ಪರಿಶುದ್ಧ ವ್ಯಕ್ತಿತ್ವ; ಸ್ನೇಹಪೂರ್ಣ ನಡವಳಿಕೆ; ಸರಳ-ಸಹಜ ಜೀವನ; ಸಿದ್ಧಾಂತವನ್ನು – ತತ್ತ್ವವನ್ನು ಸ್ವತಃ ಆಚರಿಸಿ ತೋರಿಸುವ ಮೇಲ್ಪಂಕ್ತಿ; ಎಲ್ಲರೊಂದಿಗೆ ಬೆರೆಯಬಲ್ಲ ನಿಗರ್ವಿತ್ವ; ಸೈಕಲ್ ಸಿಕ್ಕರೂ ಹತ್ತಿ ಹೊರಟು ಬಿಡುತ್ತಿದ್ದ ಕಾರ್ಯನಿಷ್ಠೆ; ಅಪ್ರತಿಮ ಸಂಘಟನಕೌಶಲ; ಜಾಗೃತ್-ಸ್ವಪ್ನ-ಸುಷುಪ್ತಿಗಳಲ್ಲೂ ಮರೆಯದ ಭಾರತೀಯತ್ವ; ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಅನ್ನ ನೀಡಬಲ್ಲ ವ್ಯವಸ್ಥೆಗಾಗಿನ ಚಿಂತನೆ; ಯಾರನ್ನೂ ಶೋಷಣೆಗೊಳಪಡಿಸದ ಆರ್ಥಿಕನೀತಿ; ಎದುರಾಳಿಗಳನ್ನೂ ಅಚ್ಚರಿಗೊಳಿಸುವ ಪ್ರಾಮಾಣಿಕತೆ – ಇವೆಲ್ಲವುಗಳಿಂದಾಗಿ ಜನಸಂಘ ಕ್ರಮೇಣ ಜನಮಾನಸದಲ್ಲಿ ಬೇರೂರಿತು, ಚುನಾವಣೆಯಿಂದ ಚುನಾವಣೆಗೆ ಜನಸಂಘದ ಅಭ್ಯರ್ಥಿಗಳು ಪಡೆಯುವ ಮತಗಳಲ್ಲಿ ಹೆಚ್ಚಳವಾಯಿತು. ಅನೇಕರು ಗೆಲುವನ್ನೂ ಕಾಣುವಂತಾಯಿತು. ಜನಸಂಘ ಕಾಂಗ್ರೆಸ್ಸಿಗೆ ಪರ್ಯಾಯಶಕ್ತಿಯಾಗಿ-ಪಕ್ಷವಾಗಿ ಬೆಳೆಯತೊಡಗಿತ್ತು. ಇಂಥ ಸಂದರ್ಭದಲ್ಲೇ ಎರಗಿಬಂದದ್ದು ಅನಿರೀಕ್ಷಿತ ಆಘಾತ: ದೀನದಯಾಳ್‍ಜಿ ನಿಗೂಢ ರೀತಿಯಲ್ಲಿ ಸಾವಿಗೀಡಾಗಿದ್ದರು. ರೈಲ್ವೆ ಹಳಿಯ ಪಕ್ಕದಲ್ಲಿ, ಶಾಲಿನಲ್ಲಿ ಸುತ್ತಿ ಎಸೆಯಲ್ಪಟ್ಟಿದ್ದ ಅವರ ದೇಹ ದೊರೆಯಿತು.
———————–
ಪಂಡಿತ ದೀನದಯಾಳ ಉಪಾಧ್ಯಾಯರ ಜನ್ಮಶತಮಾನೋತ್ಸವ ವರ್ಷದ ಸಂದರ್ಭದಲ್ಲಿ – ಜನಸಂಘದ ಇಂದಿನ ರೂಪವಾದ – ಭಾಜಪಾ ನೇತೃತ್ವದ ಸರಕಾರ ಕೇಂದ್ರದಲ್ಲಿ ಅಧಿಕಾರದಲ್ಲಿದೆ. ಅವರು ಅಂದು ಬಿತ್ತಿದ ಬೀಜ ಇಂದು ಫಲಿಸುತ್ತಿದೆ. ರಾಜ್ಯದಲ್ಲೂ ಒಮ್ಮೆ ಭಾಜಪಾದ ಆಡಳಿತವನ್ನು ನೋಡಿದ್ದೇವೆ. ದೀನದಯಾಳರು ಪ್ರತಿಪಾದಿಸಿದ ಚಿಂತನೆಗಳಿಗೆಲ್ಲ ತಿಲಾಂಜಲಿಯನ್ನಿತ್ತಿರುವ, ದೀನದಯಾಳರು ಬದುಕಿ ತೋರಿಸಿದ ಆದರ್ಶ-ಮೌಲ್ಯಗಳಿಗೆಲ್ಲ ಎಳ್ಳುನೀರು ಬಿಟ್ಟಿರುವ ನಾಯಕಶಿಖಾಮಣಿಗಳ ದೊಂಬರಾಟವನ್ನೂ ನೋಡುತ್ತಿದ್ದೇವೆ. ಇಂಥ ಸಂದರ್ಭದಲ್ಲಿ – ಓರ್ವ ಆದರ್ಶ ಸ್ವಯಂಸೇವಕನಾಗಿ ಬದುಕಿದ – ದೀನದಯಾಳರ ಮಾತನ್ನು ಪ್ರತಿಯೊಬ್ಬರೂ ನೆನಪಿಸಿಕೊಳ್ಳಬೇಕಾಗಿದೆ. ಅವರೊಮ್ಮೆ ಹೀಗೆ ಹೇಳಿದ್ದರು:
“ನಾವು ಸ್ವತಃ ಸ್ವಯಂಸೇವಕರೆಂದು ಹೇಳಿಕೊಳ್ಳುತ್ತೇವೆ. ಈ ಪದದ ಅರ್ಥ ನಮಗೆಲ್ಲ ಸರಿಯಾಗಿ ಗೊತ್ತಿರಬೇಕು. ಸಾಮಾನ್ಯವಾಗಿ ಜನರು ಸ್ವಯಂಸೇವಕನೆಂದರೆ ಪುಕ್ಕಟೆ ದುಡಿಯುವ ಕೂಲಿ ಎಂದು ತಿಳಿಯುತ್ತಾರೆ. ಹಣ ಖರ್ಚುಮಾಡದೆ ಬಿಟ್ಟಿ ಕೆಲಸ ಮಾಡಿಸಿಕೊಳ್ಳಲು ಸ್ವಯಂಸೇವಕರಿದ್ದಾರೆ ಎಂಬ ಕಲ್ಪನೆ ಮಾತ್ರ ಸರ್ವತ್ರ ಇದೆ. ಕೆಲವು ಸಂಸ್ಥೆಗಳು ಕಾರ್ಯಕ್ರಮಕ್ಕಾಗಿ ‘ಸ್ವಯಂಸೇವಕ’ರನ್ನು ‘ತಯಾರು’ ಮಾಡುತ್ತವೆ’ ಮತ್ತು ಆ ಕಾರ್ಯಕ್ರಮ ಮುಕ್ತಾಯವಾಗುತ್ತಲೇ ಅವರ ‘ಸ್ವಯಂಸೇವಕತ್ವ’ವೂ
ಮುಕ್ತಾಯವಾಗುತ್ತದೆ. “ಆದರೆ ನಮ್ಮ ಸ್ವಯಂಸೇವಕತ್ವ ಅಲ್ಪಕಾಲಿಕವಾಗಲಿ, ಬಿಟ್ಟಿ ಕೆಲಸ ಮಾಡುವುದಕ್ಕಾಗಲಿ ಅಲ್ಲ. ಇವೆಲ್ಲ ‘ಸ್ವಯಂಸೇವಕ’ನಿಗಾಗಿ ಮಾಡಿದ ಸಣ್ಣಪುಟ್ಟ ವ್ಯವಸ್ಥೆಗಳು. ನಾವಾದರೋ ಸಮಾಜದ ಒಂದು ಶ್ರೇಷ್ಠ ವ್ಯವಸ್ಥೆಯನ್ನು ಕಟ್ಟುವುದಕ್ಕಾಗಿ ಸ್ವಯಂಸೇವಕರಾಗಿದ್ದೇವೆ. ನಮ್ಮ ಸಮಾಜದ ಸಂಘಟನೆಗಾಗಿ ನಾವು ಹೊರಟಿದ್ದೇವೆ. ಯಾವ ಸಿದ್ಧಾಂತಕ್ಕಾಗಿ ನಮ್ಮ ಸಮಾಜವು ಜನ್ಮತಾಳಿದೆಯೋ ಅದೇ ಧ್ಯೇಯವನ್ನು ತತ್ತ್ವವನ್ನು ಇಡೀ ಮಾನವಕುಲವೇ ಅನುಸರಿಸುವಂತೆ ಮಾಡುವುದು ನಮ್ಮ ಕಾರ್ಯವಾಗಿದೆ. “ನಾವು ನಮ್ಮ ಜೀವನದ ಮಹಾನ್ ಧ್ಯೇಯವನ್ನು ಸಾಧಿಸುವಲ್ಲಿ ಪ್ರಯತ್ನಶೀಲರಾಗಿದ್ದರೆ, ನಾವು ಸಹ ಶ್ರೇಷ್ಠರಾಗುತ್ತೇವೆ. ಇದೇ ನಮ್ಮ ನಿಜವಾದ ಸ್ವಯಂಸೇವಕತ್ವ.
“ನಮಗೆ ಹಿಂದುತ್ವ ನಮ್ಮ ಸ್ವಯಂಸೇವಕತ್ವವಾಗಿದೆ. ನಾವು ಶಾಖೆಯಲ್ಲಷ್ಟೇ ಸ್ವಯಂಸೇವಕರಾಗಿಲ್ಲ, ಶಾಖೆಯ ಹೊರಗೂ ಸ್ವಯಂಸೇವಕರೇ ಆಗಿದ್ದೇವೆ. ನಾವು ಹಿಂದುಗಳ ಮಧ್ಯದಲ್ಲಿ ಮಾತ್ರ ಹಿಂದುಗಳಾಗಿಲ್ಲ, ಹಿಂದುಗಳಲ್ಲದವರ ಮಧ್ಯದಲ್ಲಿಯೂ ಹಿಂದುಗಳಾಗಿದ್ದೇವೆ. ನಮ್ಮ ನಡತೆಯಿಂದ ಎಲ್ಲರಿಗೂ ಹಿಂದುವಿನ ತೇಜಸ್ಸಿನ ಪರಿಚಯ ಆಗಬೇಕು. ಹಿಂದು ಸಂಸ್ಕೃತಿ, ಹಿಂದು ಪರಂಪರೆ, ಹಿಂದುಧರ್ಮ, ಹಿಂದು ಜೀವನಧಾರೆ, ಹಿಂದು ನಡವಳಿಕೆ, ಇವೆಲ್ಲದರ ಪ್ರತಿನಿಧಿಗಳು ನಾವಾಗಿದ್ದೇವೆ ಎಂಬುದು ನಮ್ಮ ನಂಬಿಕೆ. ಈ ದೃಷ್ಟಿಯಿಂದ ನಮ್ಮ ಸ್ವಯಂಸೇವಕತ್ವ ಹೆಚ್ಚು ಹೆಚ್ಚಾಗಿ ತೇಜೋವಂತವಾಗಬೇಕು; ಹೆಚ್ಚು ಹೆಚ್ಚು ಜನಗಳನ್ನು ನಮ್ಮೊಂದಿಗೆ ಒಂದುಗೂಡಿಸಲು ನಾವು ಸಮರ್ಥರಾಗಬೇಕು. ಈ ಭಾವವನ್ನು, ಈ ವಿಚಾರವನ್ನು, ಈ ಧ್ಯೇಯವನ್ನು ನಮ್ಮ ಮನೋಮಂದಿರದಲ್ಲಿ ಸದಾ ಜಾಗೃತವಾಗಿಟ್ಟುಕೊಂಡು ನಾವು ನಮ್ಮ ಕಾರ್ಯದಲ್ಲಿ ತೊಡಗಬೇಕಾಗಿದೆ.”
ದೀನದಯಾಳರು ಈ ಮಾತುಗಳನ್ನು ಹೇಳಿದ ಸಂದರ್ಭ – ಸನ್ನಿವೇಶ ಏನಿತ್ತು ಎಂಬುದು ನಮ್ಮ ಅನುಭವದಲ್ಲಿಲ್ಲ. ಆದರೆ, ಇಂದಿನ ಸಂದರ್ಭದಲ್ಲಿ ಅವರ ಒಂದೊಂದು ಮಾತೂ ಅತ್ಯಂತ ಪ್ರಸ್ತುತ ಎಂಬುದಕ್ಕೆ ಹತ್ತಾರು ಸಂದರ್ಭಗಳು ನಮ್ಮ ಕಣ್ಣೆದುರೇ ಇವೆ. ದೀನದಯಾಳಜಿ ಕಟ್ಟಿಕೊಟ್ಟ ‘ಸ್ವಯಂಸೇವಕತ್ವ’ದ ಈ ಚಿತ್ರಣ ನಮ್ಮ ಪಥಗಳನ್ನು ನಿರ್ದೇಶಿಸಲಿ ಎಂದು ಆಶಿಸೋಣ.