ದೇಶಕ್ಕಾಗಿ ನಿಮ್ಮ ಪ್ರಾಣಾರ್ಪಣ – ಇದೋ ನಿಮಗೆ ನಮ್ಮ ಅಶ್ರು ತರ್ಪಣ
– ಕ್ಯಾ. ನವೀನ್ ನಾಗಪ್ಪ
ರೈಫಲ್ ಮ್ಯಾನ್ ಮೋಹಿ೦ದರ್ ಸಿ೦ಗ್, ರೈಫಲ್ ಮ್ಯಾನ್ ರಾಕೇಶ್ ಕುಮಾರ್, ಲ್ಯಾನ್ಸ್ ನಾಯಕ್ ಹರೀಶ್ ಪಾಲ್, ಮೇಜರ್ ಅಜಯ್ ಸಿ೦ಗ್ ಜಸ್ರೋಟಿಯ, ಹವಲ್ದಾರ್ ಜಗನ್ನಾಥ್, ಲ್ಯಾನ್ಸ್ ನಾಯಕ್ ರಣಬೀರ್ ಸಿ೦ಗ್, ರೈಫಲ್ ಮ್ಯಾನ್ ಪವನ್ ಸಿ೦ಗ್, ರೈಫಲ್ ಮ್ಯಾನ್ ಅಶೋಕ್ ಕುಮಾರ್, ಲ್ಯಾನ್ಸ್ ನಾಯಕ್ ವೀರ್ ಸಿ೦ಗ್, ರೈಫಲ್ ಮ್ಯಾನ್ ಶ್ಯಾಮ್ ಸಿ೦ಗ್, ಹವಲ್ದಾರ್ ಕ್ರಿಷನ್ ಸಿ೦ಗ್, ರೈಫಲ್ ಮ್ಯಾನ್ ಮನೋಹರ್ ಲಾಲ್, ಲ್ಯಾನ್ಸ್ ನಾಯಕ್ ಕ್ರಿಷ್ಣನ್ ಮೋಹನ್, ರೈಫಲ್ ಮ್ಯಾನ್ ದೀಪ್ ಚಂದ್, ರೈಫಲ್ ಮ್ಯಾನ್ ಪ್ರವೀಣ್ ಕುಮಾರ್, ಕ್ಯಾಪ್ಟನ್ ವಿಕ್ರಮ್ ಬಾತ್ರಾ, ರೈಫಲ್ ಮ್ಯಾನ್ ಅಬ್ದುಲ್ ನಜ಼ಾರ್.
ಒಂದು ರಾಷ್ಟ್ರ, ಒಂದು ಕಾನೂನು, ಒಂದು ತೆರಿಗೆ ಎಂದು ಕನವರಿಸುತ್ತಿರುವ ದೇಶಕ್ಕೆ ಮೇಲೆ ಕಾಣಿಸುವ ೧೭ ಹೆಸರುಗಳನ್ನು ನೆನಪಿಸಿಕೊಳ್ಳುವ ಧಾವಂತ ಎಲ್ಲಿದೆ? ಸೈನಿಕರನ್ನು ಹೊರತುಪಡಿಸಿ.
ನೀವೀ ಬರಹವನ್ನು ಓದುತ್ತಿರುವುದಕ್ಕೆ ಸರಿಯಾಗಿ ೧೮ ವರ್ಷಗಳ ಹಿಂದೆ, ಜಮ್ಮು ಕಾಶ್ಮೀರ್ ರೈಫಲ್ಸಿನ ೧೩ನೇ ಬೆಟಾಲಿಯನ್ನಿನ ಹದಿನೇಳು ಸೈನಿಕರು ಶತ್ರುಗಳ ಕೈವಶವಾಗಿದ್ದ ನಮ್ಮ ಮಾತೃ ಭುಮಿಯ ಅಂಗುಲ-ಅಂಗುಲ ಪವಿತ್ರ ಭೂಮಿಯನ್ನು ಮರಳಿ ದೇಶಕ್ಕೆ ಸಮರ್ಪಿಸಲು, ಪಾಯಿಂಟ್ ೫೧೪೦ ಮತ್ತು ಪಾಯಿಂಟ್ ೪೮೭೫ ಎಂಬ ಹಿಮಶಿಖರಗಳ ತುದಿಯಲ್ಲಿ ನಮ್ಮ ತ್ರಿವರ್ಣ ಧ್ವಜವನ್ನು ಗಗನದೆತ್ತರಕ್ಕೆ ಹಾರಿಸಲು, ತಮ್ಮ ಪ್ರಾಣಾರ್ಪಣೆ ಮಾಡಿ ಅಮರರಾದರು.
ಈ ಅಮರ ಸೈನಿಕರ ಕುಟುಂಬ ವರ್ಗ ಹಾಗು ಕೆಲ ನಾಗರೀಕರನ್ನು ಹೊರತು ಪಡಿಸಿ ಯಾರೊಬ್ಬರು ಇವರನ್ನು ಸಂಸ್ಮರಿಸದಾದರು. ನನ್ನ ತುಕಡಿಯ ಈ ಅಮರರ ಜೊತೆ ಜೊತೆಯಲ್ಲಿ, ಕಾರ್ಗಿಲ್ ಯುದ್ದದಲ್ಲಿ ಅಮರರಾದ ಇನ್ನು ೫೨೭ ಸೈನಿಕರ ಹಾಗು ಗಾಯಗೊಂಡ ಸಾವಿರಾರು ವೀರ ಭಾರತ ಪುತ್ರರಿಗೆ ಅರ್ಪಣ ನನ್ನಿ ಕವನ.
………………………………………………………………………………………………………
ಸರ್ವರಿಂದ ಪ್ರೀತಿಸಲ್ಪಡುವವನು, ತಾನು ಪೀತಿಸುವ ಮಿತ್ರರನ್ನು ಕಾಪಾಡಲು ತನ್ನ ಪ್ರಾಣಾರ್ಪಣೆಯನ್ನೆ ಮಾಡುವನು
ವರ್ಷಗಳ ಹಿಂದೆ ಕಾರ್ಗಿಲ್ ಯುದ್ದದ ಸಮಯದಲ್ಲಿ, ಎದೆಗೆ ಎದೆ ಕೊಟ್ಟು, ಭುಜಕ್ಕೆ ಭುಜ ಕೊಟ್ಟು ಅಮರ ಸ್ನೇಹವನು ಸಾರುತ್ತ ನಿಂತವನು ನೀ ಗೆಳೆಯ,
ಹಗಲಿರುಳ ಪರಿವೆಯಿಲ್ಲದೆ, ದಾಳಿಯನ್ನೆದುರಿಸುತ, ಪ್ರತಿದಾಳಿಯಂಗಯ್ಯುತ ಬಿಡಾರವನು ಕಾಪಿತ್ತವ ನೀನೇ ಗೆಳೆಯ.
ಬಾಲ್ಯದಿಂ ತಾರುಣ್ಯಕೆ ಕಾಲಿಕ್ಕೇ, ಯುದ್ಧ ಭೂಮಿಗೆ ಬಂದೆ ನೀ ಗೆಳೆಯ.
ಆಪ್ತರ ಚಿತ್ರವನ್ನೆದೆಯಲ್ಲಿರಿಸಿದ ನೀ, ಗೆಲುವಿನಾಸೆಯ ಕಾಣ್ವೆ ಓ ಗೆಳೆಯ
ಕಾಲ ಕೈಗೂಡದಿರಲ್, ಧೃಡತೆ ಬಿಡದಿರದವ ನೀನ್ ಗೆಳೆಯ
ಬೆಲೆ ಎಂತಾದರು ತೆತ್ತಿ, ಧರಣಿಯ ಪಡೆಯ ಬೇಕೆಂಬ ಹಟವನ್ನು ತೊಟ್ಟವ ನೀನ್ ಗೆಳೆಯ
ಶತ್ರು ಸತ್ತೊಡೆ ನಕ್ಕು, ಮಿತ್ರ ಮಡಿದೊಡೆ ಅತ್ತ ಪರಮಾಪ್ತ ಮಿತ್ರನು ನೀನ್ ಗೆಳೆಯ.
ಭೀಕರ ಯುದ್ದದಿ ನೀನ್, ದೇವರ ಬಳಿ ಹೋಗೆ, ಇತರರ್ ಸುಖದಲಿರಲೆಂದು ಆಶಿಸಿದವ ನೀ ಗೆಳೆಯ
ನಿನ್ನ ಹೋರಾಟಕ್ಕಿತ್ತೊಂದು ಅರ್ಥ, ಅದಾಗಲೆ ನಿನ್ನುಸಿರು ನಿಂತಿತ್ತ,
ಕೋಟಿ ಇದ್ದವು ಆಸೆ, ಲಕ್ಷವಿದ್ದವು ಮಾತು, ಕೊನೆಗೂ ಹೇಳದೆ ಹೋದೆ ಬಾರದೂರಿಗೆ ನೀ ಗೆಳೆಯ.
ಧ್ವಜವುಡಿಸಿದ ಪೆಟ್ಟಿಗೆಯೋಳ್ ಶವವಾಗಿ ಬಂದೆಯಲ್ಲೋ ನೀ ಗೆಳೆಯ.
ಅಳುವ ತಾಯಂದಿರ, ಪ್ರಾರ್ಥಿಸುವ ತಂದೆಯರ ಕಂಡು ಮರುಗಿತು ನಾಡು ಓ ಗೆಳೆಯ.
ಬದುಕುಳಿದ ನಾವು ಘಾಸಿಗೊಳಗಾಗಿ, ನೊಂದೆವೊ, ಬೆಂದೆವೊ, ಬಸವಳಿದುಹೋದೆವೋ ನನ್ನ ಗೆಳೆಯ
ಗಾಯಕ್ಕೊಂದು ಕಲೆಯು, ಕಲೆಗೊಂದು ಕಥೆಯು ಇರುವುದು, ಇರುವ ಕಥೆಯೊಳಿರುವುದೇ ನೀನು ಕೇಳು ಬಾರೆಲೋ ನೀ ಗೆಳೆಯ
ತುಕಡಿಯೇ ಕುಟುಂಬ, ರಕ್ತ ಸಂಭಂದಿಯಂತೆ, ಎಲ್ಲವೂ ನೀನೆ ಆಗಿದ್ದೆ ಓ ನನ್ನ ಗೆಳೆಯ.
ಜೀವನದಿ ನಿಮಿತ್ತ ಕೆಲವು, ಮಹತ್ತ ಹಲವು, ಉಳಿಸಿ ಹೋದದ್ದು ನೀ ಗೌರವ ಮಾತ್ರ ಓ ಗೆಳೆಯ.
ಯುದ್ದವಿರುವರೆಗೂ ನಮ್ಮ ಸಾವು ಸಮಂಜಸವೆಂದುತ್ತರಿಸ ತಡಬಡಿಸುವುದೀ ನಾಡು ನೋಡು ನೀ ಗೆಳೆಯ
ಕಡೇ ಗಳಿಗೆಯು ಬರಲು ಧ್ವಜಕ್ಕೆ ವಂದಿಸುವುದಲ್ಲದೆ ಬೇರೆ ಏನನು ಯೋಚಿಸೆ ನೀ ಗೆಳೆಯ
ಮುಖವ ಮೇಲಕ್ಕೆ ಮಾಡಿ, ಅಶ್ರು ತರ್ಪಣವಿಕ್ಕಿ, ನಿನಗಿದೋ ನಮಿಸುವೆ ನನ್ನ ಒಲುಮೆಯ ಗೆಳೆಯ
ನಿನ್ನ ತ್ಯಾಗಕ್ಕೆ ಗೌರವ ಸಿಗದೊಡೆ, ಫಲಕ್ಕೇನು ಬೆಲೆಯು
ನಿನಗಿದೋ ನನ್ನ ಅಶ್ರು ತರ್ಪಣ, ನನ್ನ ನಮನ ನಮನ