ವಿಷಯದ ವಿವರಗಳಿಗೆ ದಾಟಿರಿ

ಜುಲೈ 9, 2017

ಮರಳುಗಾಡಿನಲ್ಲಿ ಹಸಿರನ್ನೊತ್ತಿಸಿದ ದೇಶವೊಂದು ನಡೆದ ಹಾದಿಯಲ್ಲಿ…

‍ನಿಲುಮೆ ಮೂಲಕ

– ಸುಜಿತ್ ಕುಮಾರ್

1947….

ಅರಬ್ಬರ ಹಾಗು ಜ್ಯೂವರ (ಯಹೂದಿ) ಕಿತ್ತಾಟವನ್ನು ನೋಡಲಾರದೆ ವಿಶ್ವಸಂಸ್ಥೆ ಅಂದು ಯಹೂದಿಗಳಿಗೊಂದಷ್ಟು ಹಾಗು ಅರಬ್ಬರಿಗೊಂದಿಷ್ಟು ನೆಲವನ್ನು ಪಾಲುಮಾಡಿ ಕೊಟ್ಟಿತ್ತು. ಇಬ್ಬರ ಕಿತ್ತಾಟದ ನಡುವೆ ಮೂರನೆಯವರ ಉಸಾಬರಿಯನ್ನು ಒಪ್ಪದ ಅರಬ್ ಪಡೆ (ಈಜಿಪ್ಟ್, ಸಿರಿಯಾ, ಜೋರ್ಡನ್, ಲೆಬನಾನ್) ತಮ್ಮ ಪಾಲು ಸಣ್ಣದೆಂದು ಕೊರಗಿ ವಿಶ್ವಸಂಸ್ಥೆ ಗೊತ್ತುಮಾಡಿದ್ದ ಯಹೂದಿಯರ ಅಷ್ಟೂ ನೆಲವನ್ನು ನುಂಗಿ ಹಾಕಲು ರಣತಂತ್ರವೊಂದನ್ನು ರೂಪಿಸಿದವು. ಜಾಗತಿಕ ಮಟ್ಟದಲ್ಲಿ ತನ್ನ ಪಿಳಿ ಪಿಳಿ ಕಣ್ಣುಗಳನ್ನು ಬಿಡುತ್ತಿರುವಷ್ಟರಲ್ಲೇ ವೈರಿ ಸೇನೆ ಯಹೂದಿಯರ ಪ್ರದೇಶವನ್ನು ಮೂರು ದಿಕ್ಕಿನಿಂದಲೂ ಆವರಿಸಿತು. ಮಾಡು ಇಲ್ಲವೇ ಮಡಿ ಸ್ಥಿತಿಯಲ್ಲಿ ತನ್ನೆಲ್ಲಾ ಶಕ್ತಿಯನ್ನು ಬಸಿದು ಹೋರಾಡಿದ ಪಡೆ, ವೈರಿಸೇನೆ ಕನಸ್ಸಿನಲ್ಲಿಯೂ ಊಹಿಸಲಾಗದ ಮಟ್ಟಿಗೆ ಸದೆಬಡಿಯಿತು. ಯುದ್ಧದಲ್ಲಿ ಸೋತು ಓಡತೊಡಗಿದ್ದ ವೈರಿಪಡೆಯ ಒಂದೊಂದೇ ಪ್ರದೇಶಗಳನ್ನು ‘ಗೆದ್ದ’ ಯಹೂದಿಯರು 1948 ರಲ್ಲಿ ಹೊಸ ದೇಶವೊಂದನ್ನು ಹುಟ್ಟುಹಾಕಿ ಪ್ರಪಂಚಕ್ಕೆ ಪರಿಚಯ ಮಾಡಿಕೊಟ್ಟರು. ಇಂದು ಯುದ್ಧ ಸಾಮಗ್ರಿಗಳ ತಯಾರಿ ಹಾಗು ಅವುಗಳ ರಪ್ತಿನಲ್ಲಿ ವಿಶ್ವದಲ್ಲೇ ಮುಂಚೂಣಿಯಲ್ಲಿರುವ, ಹಾಗು ಅಭಿವೃದ್ದಿ ಹೊಂದಿರುವ ದೇಶಗಳ ಪಟ್ಟಿಯಲ್ಲಿ ಝಳಪಿಸುವ ಆ ದೇಶದ ಹೆಸರೇ ಇಸ್ರೇಲ್.

ಇಸ್ರೇಲ್ ಅಂದು ಯುದ್ಧವನ್ನೇನೋ ಗೆದ್ದಿತು. ಅದರೆ ಅದು ತಾನು ಗೆದ್ದು ಆಕ್ರಮಿಸಕೊಂಡ ಗಲ್ಲಿ ಮೂಲೆಗಳನ್ನು ಅಕ್ಕಪಕ್ಕದ ದೇಶಗಳು ಪುನಃ ತಮಗೆ ಹಿಂದಿರುಗಿಸಬೇಕೆಂದು ಕುಯಿಂಗುಟ್ಟವು. ಈ ವಾದಸರಣಿ ಸುಮಾರು ಎರಡು ದಶಕಗಳ ಕಾಲ ಹಾಗೆಯೆ ಮುಂದುವರೆಯಿತು. ಕೊನೆಗೆ 1967 ರಲ್ಲಿ ಸೋತು ಸುಮ್ಮನಿರಲಾಗದ ಈಜಿಪ್ಟ್ ಮತ್ತೊಮ್ಮೆ ಇಸ್ರೇಲ್ನ ವಿರುದ್ಧ ಯುದ್ಧ ಸಾರಿತು. ಇಪ್ಪತ್ತು ವರ್ಷಗಳ ಹಿಂದೆಯೇ ನಾಲ್ಕಾರು ದೇಶಗಳನ್ನು ಹೆಡೆಮುರಿ ಕಟ್ಟಿ ಪಕ್ಕಕ್ಕೆ ಬಿಸಾಡಿದ್ದ ಇಸ್ರೇಲ್ ಅಂದು ಕೇವಲ ಆರು ದಿನಗಳಲ್ಲಿಯೇ ಈಜಿಪ್ಟ್ ಹಾಗು ಅದರ ಮಿತ್ರಪಡೆಗಳ ಹುಂಬುತನವನ್ನು ಹತ್ತಿಕ್ಕಿ ಯುದ್ಧವನ್ನು ಗೆದ್ದಿತು. ಈ ಯುದ್ಧದಲ್ಲಿ ಪಾಕಿಸ್ತಾನವೂ ಈಜಿಪ್ಟ್ ನ ಪರವಾಗಿ ಹೆಣಗಾಡಿ ಸೋತು ಸುಣ್ಣವಾಗಿ ವಾಪಸ್ಸು ಬಂದದ್ದುಂಟು.

1967 ರ ಆರು ದಿನಗಳ ಪ್ರಸಿದ್ಧ ಯುದ್ಧದ ನಂತರ ಪಕ್ಕದ ಜೋರ್ಡನ್ ದೇಶದ ಬಳಿಯಲ್ಲಿದ್ದ ಪೂರ್ವ ಜೆರುಸಲೇಮ್ನ ಅಷ್ಟೂ  ನೆಲವನ್ನು ಇಸ್ರೇಲ್ ಕಬಳಿಸಿಕೊಂಡಿತ್ತಲ್ಲದೆ ಜೆರುಸಲೇಮ್ ನನ್ನು ತನ್ನ ರಾಜಧಾನಿಯೆಂದೂ ಘೋಷಿಸಿಕೊಂಡಿತು. ಇತ್ತ ಕಡೆ ಬಾಲ ಸುಟ್ಟ ಬೆಕ್ಕಿನಂತಾದ ಜೋರ್ಡನ್ನ ಪಡೆ ಕಳೆದುಕೊಂಡ ಜಾಗವನ್ನು ವಾಪಸ್ ಪಡೆಯಲು ಇನ್ನಿಲ್ಲದ ಕಸರತ್ತುಗಳನ್ನು ಮಾಡತೊಡಗಿತು. ಈ ಕಸರತ್ತಿನ ಹಿಂದಿದ್ದ ಕಾರಣವೂ ಅತಿ ಬಲವಾದದ್ದು. ಜೆರುಸಲೇಮ್ ಕೇವಲ ಒಂದು ಪ್ರದೇಶವಾಗಿರದೇ ಯಹೂದಿಗಳು, ಮುಸ್ಲಿಂ ಹಾಗು ಕ್ರಿಶ್ಚಿಯನ್ನರಿಗೂ ಬೇಕಾದ ಅತೀ ಪವಿತ್ರವಾದ ಸ್ಥಳ. ಇದು ಯಹೂದಿಗಳ ಪವಿತ್ರ ದೇವಾಲಯವನ್ನು ಹೊಂದಿರುವ ಪ್ರದೇಶವಾಗಿಯೂ, ಪ್ರವಾದಿ ಮೊಹಮ್ಮದ್ ಅವರು ಭೇಟಿಕೊಟ್ಟ ಮಹತ್ವದ ಜಾಗವಾಗಿಯೂ ಅಲ್ಲದೆ ಏಸು ಕ್ರಿಸ್ತರನ್ನು ಶಿಲುಬೆಗೇರಿಸಿದ ಸ್ಥಳವಾಗಿಯೂ ಪ್ರಸಿದ್ದಿ ಹೊಂದಿದೆ. ಹಾಗಾಗಿ ಮೂರು ಧರ್ಮದ ನಾಯಕರು ಈ ನೆಲದ ಮೇಲೆ ತಂತಮ್ಮ ಅಧಿಕಾರವನ್ನು ಚಲಾಯಿಸಲು ಬಯಸಿದ್ದಾರೆ, ಬಯಸುಸುತ್ತಿದ್ದಾರೆ. ಆದರೆ ಅಂದು ಯುದ್ಧದಲ್ಲಿ ಗೆದ್ದು ತನ್ನ ತೆಕ್ಕೆಗೆ ಹಾಕಿಕೊಂಡ ಜಾಗಗಳನ್ನು ಜಪ್ಪಯ್ಯ ಎಂದರೂ ಜೋರ್ಡನ್ ಅಥವಾ ಇತರ ದೇಶಗಳಿಗೆ ಇಸ್ರೇಲ್ ಬಿಟ್ಟುಕೊಡಲಿಲ್ಲ. ಯಾರೇ ಮುನಿಸಿಕೊಂಡರೂ ಕ್ಯಾರೇ ಎನ್ನದ ಸ್ವಾವಲಂಬಿ ದೇಶಕ್ಕೆ ಅಂದು ವಿಶ್ವಸಂಸ್ಥೆಯೇ ಖುದ್ದಾಗಿ ‘ಜೆನೆವ ಕನ್ವೆನ್ಷನ್’ (ಯುದ್ಧದಲ್ಲಿ ಅಕ್ರಮವಾಗಿ ಆಕ್ರಮಿಸಕೊಂಡ ನೆಲದಲ್ಲಿ ತನ್ನ ವಸಾಹತನ್ನು ಸ್ಥಾಪಿಸಬಾರದೆಂಬ ನೀತಿ) ವಾದವನ್ನು ಮುಂದಿಟ್ಟು ಪೂರ್ವ ಜೆರುಸಲೇಮ್ ಅನ್ನು ಹಿಂದುರುಗಿಸಬೇಕಂದು ವಾದಿಸಿತು. ಆದರೆ ಯಾವುದೇ ಅರಚುವಿಕೆಗೂ ಕಿವಿಕೊಡದ ಇಸ್ರೇಲ್ ತಾನು ಗೆದ್ದು ಪಡೆದ ಜಾಗದಲ್ಲಿ ಒಂದರಿಂದೊಂದು ಕಟ್ಟಡ ಕಾಮಗಾರಿಗಳನ್ನು ಬಿರುಸಾಗಿ ಮುಂದುವರೆಸಿತು. ಈ ನಡೆಯೇ ಮುಂದೆ ಇಸ್ರೇಲ್ ವಿಶ್ವಕ್ಕೆ ಒಂತರ ಭಯೋತ್ಪಾದಕ ದೇಶದಂತೆ ಕಾಣಿಸತೊಡಗಿತು. ಆದರೆ ಅಮಾಯಕ ಟಿಬೆಟ್ ಹಾಗು ಇನ್ನಿತರೇ ಪ್ರದೇಶಗಳನ್ನು ಸಾರಾಸಗಟಾಗಿ ನುಂಗಿ ಈಗ ಭಾರತದ ಆಯಕಟ್ಟಿನ ಜಾಗಗಳ ಮೇಲೆ ಕಣ್ಣಿಟ್ಟಿರುವ ಚೀನಾದಂತ ಬಕರಾಕ್ಷಸ ದೇಶವನ್ನು ಒಂದು ಪ್ರೆಶ್ನೆಯನ್ನೂ ಕೇಳದ, ತೆಪ್ಪಗೆ ಇರುವುದನ್ನು ಬಿಟ್ಟು ತಲೆ ಗಟ್ಟಿಯಿದೆಯೆಂದು ಇಸ್ರೇಲ್ ಎಂಬ ಬೆಂಕಿಯಂತ ಬಂಡೆಯನ್ನು ಕೆದಕಿ ಓಟ ಕಿತ್ತ ದೇಶಗಳ ಜಾಗವನ್ನು ಹಿಂದುರಿಗಿಸಬೇಕೆಂಬ ವಿಶ್ವಸಂಸ್ಥೆಯ ವಾದ ಅದೆಷ್ಟು ಸಮರ್ಥನೀಯ?

ತನ್ನ ಕೆಣಕಿದವರ ಸೊಕ್ಕು ಅಡಗಿಸಿ ಗೆದ್ದ ಜಾಗಗಳನ್ನು ಪುನಃ ಹಿಂದಿರುಗಿಸಬೇಕೆಂಬ ಒತ್ತಡ ಮಾತ್ರ ಇಸ್ರೇಲ್ ನ ಮೇಲೆ ಹಾಗೆಯೇ ಉಳಿಯಿತು. ಕೊನೆಗೂ ಇದಕ್ಕೆ ಒಪ್ಪಿದ ಇಸ್ರೇಲ್ ತಾನು ಗೆದ್ದು ಆಕ್ರಮಿಸಿಕೊಂಡಿದ್ದ ಒಂದೆರೆಡು ಪ್ರದೇಶಗಳನ್ನು ಬಿಟ್ಟುಕೊಟ್ಟಿತು. ಆದರೆ ಈ ಪ್ರದೇಶಗಳು ಪುನಃ ಸ್ವದೇಶಗಳಿಗೆ ಸೇರಿಕೊಳ್ಳದೆ ತಮ್ಮದೇ ಆದ ಒಂದು ದೇಶವನ್ನು ಕಟ್ಟಲು ಬಯಸಿದವು. ಅವೇ ಇಂದಿನ ಇಡೀ ವಿಶ್ವವೇ ಚರ್ಚಿಸುವ ಪ್ಯಾಲೆಸ್ಟೈನ್ ಹಾಗು ಗಾಝ/ಗಾಝಪಟ್ಟಿ.

ಅಂದು ಕೇವಲ ಇಪ್ಪತ್ತು ಲಕ್ಷ ಜನರನ್ನು ಒಳಗೊಂಡು ಸಾಧನೆಯ ಹಾದಿಯನ್ನಿಡಿದಿದ ಇಸ್ರೇಲ್ ಇಂದು ತನ್ನ ಬಲಿಷ್ಠ ಪ್ರಭಾವವನ್ನು ಜಾಗತಿಕ ಮಟ್ಟದಲ್ಲಿ ಬೀರುವ ಮಟ್ಟಿಗೆ ಬೆಳೆದಿರುವುದು ಅದೆಷ್ಟೋ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಮಾರ್ಗಸೂಚಿ. ಭಾಗಶಃ ಮರಳುಗಾಡು ಹಾಗು ಕುಡಿಯಲೂ ಯೋಗ್ಯವಾದ ನೀರಿರದ ನೆಲವನ್ನು ಪಡೆದು ಅಂದು ಅದೇ ನೆಲದಲ್ಲಿ ಹಸಿರನ್ನು ಹೊತ್ತಿಸಿ ಮೆರೆದ ಸಾಧನೆಯನ್ನು ನೋಡಲು ರೋಮಾಂಚನವೆನಿಸದಿರದು. ಇಂದು ತಂತ್ರಜ್ಞಾನ, ಭದ್ರತೆ, ಕೃಷಿ ಹಾಗು ಜಲನಿರ್ವಹಣೆಯಲ್ಲಿ ವಿಶ್ವದ ದೈತ್ಯ ರಾಷ್ಟ್ರಗಳಿಗೇ ಸಲಹೆ ಸೂಚನೆಗಳನ್ನು ಕೊಡುವ ಕ್ಷಮತೆಯನ್ನು ಇಸ್ರೇಲ್ ಹೊಂದಿದೆ. ವಿಜ್ಞಾನಿಗಳ ಕೊಡುಗೆಯನ್ನೂ ಇಲ್ಲಿ ಅಲ್ಲಗೆಳೆಯಲಾಗದು. ಇಲ್ಲಿಯವರೆಗೂ ಬಂದಿರುವ ಸುಮಾರು 12 ನೊಬೆಲ್ ಪ್ರಶಸ್ತಿಗಳಲ್ಲಿ ಅರ್ಧದಷ್ಟು ಪ್ರಶಸ್ತಿಗಳು ರಸಾಯನಶಾಸ್ತ್ರ ವಿಜ್ಞಾನಿಗಳಿಗೇ ಬಂದಿರುವುದು ದೇಶದ ಉನ್ನತಿಯಲ್ಲಿ ಅವರ ಪಾತ್ರವನ್ನು ಎತ್ತಿತೋರಿಸುತ್ತದೆ.

ತನ್ನ ತಂಟೆಗೆ ಬಂದವರ ಕಂಠವನ್ನೇ ಸೀಳುವ ಎಂಟೆದೆಯ ಬಂಟನಂತ ಇಸ್ರೇಲ್ ನ ತಾಕತ್ತು ಇಂದು ಜಗತ್ತಿಗೆ ಗೊತ್ತು. ಅದ ಕಾರಣಕ್ಕೆ ಅಕ್ಕ ಪಕ್ಕದ ದೇಶಗಳಿಂದು ಕ್ಯಾತೆ ಎತ್ತುವುದ ಬಿಟ್ಟು ಬಾಲ ಮುದುಡಿ ಶಾಂತಿ ಮಾತುಕತೆಯ ಪ್ರಸ್ತಾಪವನ್ನು ಮಾಡುತ್ತಿವೆ. ಅಂದು ಇಸ್ರೇಲ್ ತನ್ನ ಪಕ್ಕದ ದೇಶಗಳ ಪ್ರತಿಯೊಂದು ಉಪಟಳಗಳಿಗೂ ವಿಶ್ವಸಂಸ್ಥೆಯ ಬಾಗಿಲನ್ನು ತಟ್ಟುತ್ತಾ ಕೂತಿದ್ದರೆ ಇಂದು ಸುತ್ತಲಿನ ರಾಷ್ಟ್ರಗಳು ಅಲ್ಲೊಂದು ದೇಶವಿತ್ತೆಂಬ ಕುರುಹನ್ನೇ ಅಳಿಸಿ ಹಾಕಿಬಿಡುತ್ತಿದವು. ವಿಶ್ವದ ಏಕೈಕ ಯಹೂದಿಗಳ ದೇಶವೆನಿಸಿಕೊಂಡಿರುವ ಇಸ್ರೇಲ್ಗೆ ಇಂದು ಹಲವು ದೇಶಗಳು ಖಳನಾಯಕನ ಹಣೆಪಟ್ಟಿಯನ್ನು ಕಟ್ಟಿವೆ. ಆನೆ ನಡೆದಾಗ ಹುಲ್ಲಿಗಾದ ಅನ್ಯಾಯವನ್ನೇ ಎತ್ತಿ ಹಿಡಿದು ಇಸ್ರೇಲ್ ನನ್ನು ಜಾಗತಿಕ ಉಗ್ರ ದೇಶದಂತೆ ಬಿಂಬಿಸುತ್ತಿರುವ ಈ ದೇಶಗಳು ಕೇವಲ ಅವಕಾಶವಾದಿ ಪಡೆಗಳೇ ಹೊರತು ಕೂಡಿ ಬಾಳುವ ಜಾಯಮಾನದ ಗುಣವನ್ನೊಂದಿರುವವಲ್ಲ. ಪ್ರತ್ಯೇಕತೆಯ ಕೂಗನ್ನೇ ನರ ನಾಡಿಗಳಲ್ಲಿ ಹರಿಯಬಿಟ್ಟು ಕೊನೆಗೆ ಗಾಝಪಟ್ಟಿಯ ಜನ ಆರಿಸಿಕೊಂಡ ಸರ್ಕಾರವಾದರೂ ಎಂತಹದ್ದು? ವಿಶ್ವದಲ್ಲೆಡೆ ಭಯೋತ್ಪಾದಕ ಗುಂಪೆಂದು ಕರೆಯಲ್ಪಡುವ ಸಂಸ್ಥೆಯೊಂದು 2006 ರಲ್ಲಿ  ಅಧಿಕಾರಕ್ಕೇರಿದ ಮೇಲೆ ಅಲ್ಲೂ ಹೋಗದ ಇಲ್ಲೂ ಇರಲಾಗದ ಅತಂತ್ರ ಸ್ಥಿತಿಯಲ್ಲಿ ಇಂದು ಆ ಜನರು ಬದುಕುತ್ತಿದ್ದಾರೆ. ದೂರದ ಬೆಟ್ಟ ನುಣ್ಣಗೆ ಎನ್ನುವ ಮಾತು ಇಂತಹ ಅದೆಷ್ಟೋ ಪ್ರತ್ಯೇಕತಾವಾದಿಗಳಿಗೆ ಬಹು ಬೇಗನೆ ತಿಳಿಯಬೇಕು.

ಭದ್ರತೆಯ ದೃಷ್ಟಿಕೋನದದಲ್ಲಿ ಭಾರತ ಹಾಗು ಇಸ್ರೇಲ್ ನ ಸ್ಥಿತಿಗತಿಗಳು ಭಾಗಶಃ ಒಂದೇ ತರಹದಾಗಿವೆ. ದೇಶದ ಮೂರೂ ದಿಕ್ಕಿನಲ್ಲೂ ಸುತ್ತುವರೆದ ವೈರಿಪಡೆ, ಗಡಿ ಸಮಸ್ಯೆ ಹಾಗು ಗಡಿ ನುಸುಳುವಿಕೆ, ದೇಶದ ಅನ್ನವನ್ನೇ ತಿಂದು ಪ್ರತ್ಯೇಕತೆಯ ಕೂಗನ್ನು ಹಾಕುವ ಸೋಗಲಾಡಿ ಗುಂಪುಗಳು ಹಾಗು ಅವುಗಳಿಗೆ ಗಡಿಯಿಂದಾಚೆಗಿನ ಮೂಲಗಳಿಂದ ಸಿಗುವ ಬೆಂಬಲ, ಕಬಳಿಕೆಯ ಅಮಲಿನಲ್ಲಿ ಎಲ್ಲರನ್ನೂ ತುಳಿದು ನಿಲ್ಲಬೇಕೆಂಬ ಪಕ್ಕದ ಒಂದು ದೇಶ ಹೀಗೆ ಇನ್ನು ಹಲವು ವಿದ್ಯಮಾನಗಳು ಭಾರತವನ್ನು ಅಕ್ಷರ ಸಹ ಅಂದಿನ ಇಸ್ರೇಲ್ ನ ಸ್ಥಿತಿಗೇ ತಂದು ನಿಲ್ಲಿಸಿವೆ. ಜಾಗತಿಕ ಮಟ್ಟದಲ್ಲಿ ಭಾರತದ ಪ್ರಸ್ತುತ ಬೆಳವಣಿಗೆಯನ್ನು ಸಹಿಸಲಾಗದ ನೆರೆಯ ದೇಶಗಳು ಶಾಲೆಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಯ ಕಂಡು ಉರಿಬೀಳುವಂತಹ ಬಾಲಿಶ ಮನಸ್ಥಿತಿಯ ದೇಶಗಳಾಗಿವೆ. ಆಂತರಿಕ ಭಯೋತ್ಪಾದನೆ, ಪ್ರತೇಕವಾದಿಗಳಿಗೆ ಕುಮ್ಮಕ್ಕು, ಇಸ್ರೇಲ್ ದೇಶವೂ ಎದುರಿಸುತ್ತಿರುವ ಗಂಭೀರ ಸಮಸ್ಯೆಗಳಾದರೂ ಆ ದೇಶದ ಬೆಳವಣಿಗೆಗೆ  ಇವುಗಳ್ಯಾವುವೂ ಅಡಚಣೆಯಂತನಿಸಲಿಲ್ಲ. ಕಾರಣ, ತಂತ್ರಜ್ಞಾನವೆಂಬುದು ಅಲ್ಲಿಯ ಪ್ರತಿಯೊಂದು ವಲಯಗಳಿಗೂ ಒಳನುಸಿಳಿರುವುದು. ಬ್ರಿಟನ್ ಹಾಗು ಫ್ರಾನ್ಸ್ ನಂತಹ ದೇಶಗಳೇ ಇಂದು ಭಯೋತ್ಪಾದನಾ ಸಮಸ್ಯೆಗಳಿಗೆ ಇಸ್ರೇಲ್ ನಂತಹ ಪುಟ್ಟ ದೇಶದ ತಂತ್ರಜ್ಞಾನದ ಸಲಹೆಯನ್ನು ಅಪೇಕ್ಷಿಸುತ್ತಿರುವುದು ಇದಕ್ಕೊಂದು ತಕ್ಕ ಉದಾಹರಣೆ.

ಪ್ರಸ್ತುತ ಪ್ರಧಾನಿಯವರ ಇಸ್ರೇಲ್ ಭೇಟಿಯೂ ಸಹ ನಮ್ಮ ಅಕ್ಕ ಪಕ್ಕದ ದೇಶಗಳಿಗೆ ಅಸೂಯೆಯನ್ನು ನೆತ್ತಿಗೆರಿಸಿರುವುದಲ್ಲದೆ ಭಯದ ನಡುಕವನ್ನೂ ಒಳಗೊಳಗೇ ಹೊತ್ತಿಸಿದೆ. ಭಾರತವನ್ನು ದೇಶದ ಆತ್ಮೀಯ ಗೆಳೆಯನೆಂದು ಸಂಭೋದಿಸುತ್ತ ಬಂದಿರುವ ಇಸ್ರೇಲ್ 70 ವರ್ಷಗಳಲ್ಲಿ ಮೊದಲ ಬಾರಿಗೆ ದೇಶದ ಪ್ರಧಾನಿಯೊಬ್ಬರನ್ನು ಈ ಪರಿ ಸ್ವಾಗತಿಸಿರುವದು ಮುಂಬರುವ ನಮ್ಮ ಉತ್ತಮ ದಿನಗಳ ಕನಸನ್ನು ಹೊತ್ತಿಸತೊಡಗಿವೆ.

ಆದರೆ,

ಕಾಕತಾಳೀಯವೆಂಬಂತೆ ಇಸ್ರೇಲ್ ಹಾಗು ಭಾರತ ಎರಡೂ ದೇಶಗಳ ಆಯಸ್ಸು ಕೇವಲ 70 ವರ್ಷಗಳು. ಒಂದೇ ವಿಧವಾದ ಸಮಸ್ಯೆ ಹಾಗು ಸವಾಲುಗಳನ್ನು ಎದುರಿಸಿದ ಎರಡು ದೇಶಗಳ ಬೆಳವಣಿಗೆಯಲ್ಲಿ ಅಜಗಜಾಂತರ ವ್ಯತ್ಯಾಸವಿರುವುದಂತೂ ಸುಳ್ಳಲ್ಲ. ಕೇವಲ ಇಪ್ಪತ್ತು ಲಕ್ಷ ಜನರನ್ನು ಮರಳುಗಾಡಿನಲ್ಲಿ ನಡೆಸಿ ಇಂದು ಅಭಿವೃದ್ಧಿ ಹೊಂದಿದ ದೇಶಗಳ ಸಾಲಿನಲ್ಲಿ ನಿಲ್ಲುವ ಆ ದೇಶವೆಲ್ಲಿ, ಮೂವತ್ತು ಕೋಟಿ ಜನರರೊಟ್ಟಿಗೆ ಜನಿಸಿ ಇಂದಿಗೂ ಅಭಿವೃದ್ಧಿಶೀಲ ರಾಷ್ಟ್ರವೆಂಬ ಹಣೆಪಟ್ಟಿಯನ್ನು ಹೊತ್ತು ನಿಂತಿರುವ ನಮ್ಮ ದೇಶವೆಲ್ಲಿ? ಆದರೂ ಕಳೆದ ಕೆಲ ದಶಕಗಳಲ್ಲಿ ಎದುರಾದ ಅಡಚಣೆಗಳೆಲ್ಲವನ್ನೂ ದಾಟಿ ನಾವು ಬೆಳೆದು ಬಂದ ವೇಗವೇನೂ ಸಾಮಾನ್ಯವಾದದಲ್ಲ. ಆದರೆ ಪ್ರತಿ ಬಾರಿ ನಮ್ಮ ಪ್ರಧಾನಿಗಳ ವಿದೇಶ ಯಾತ್ರೆಯ ಸಮಯದಲ್ಲಿ ಅವರುಗಳು ಭೇಟಿ ನೀಡುವ ದೇಶದ ಉದ್ದಗಲಗಳನ್ನು ಹಾಡಿ ಹೊಗಳಿ ಕೊನೆಗೆ ಆ ದೇಶದ ಒಂದಿಷ್ಟು ತಂತ್ರಜ್ಞಾನಗಳನ್ನು ಖರೀದಿಸಿ ಬರುವುದರೊಟ್ಟಿಗೆ, ನಾವೂ ಸಹ ಅಂತೊಂದು ಸ್ವಾವಲಂಬಿ ದೇಶದ ಕನಸನ್ನು ಕಟ್ಟಬೇಕು. ವಿಶ್ವದ ಅತಿ ದೊಡ್ಡ ಆರ್ಥಿಕತೆಯ ದೇಶವಾದರೂ ಅತ್ಯುನ್ನತ ಯುದ್ಧ ಸಾಮಗ್ರಿಗಳಿಗೆ ಇಂದಿಗೂ ಅಮೇರಿಕ, ರಷ್ಯಾ, ಇಸ್ರೇಲ್ ಎಂಬ ದೇಶಗಳನ್ನೇ ನೆಚ್ಚಿ ಕೂರುವುದು ಸಹಿಸಿಕೊಳ್ಳಲಾಗದ ವಿಷಯ. ಆದರೂ ಪ್ರಸ್ತುತ ಕೆಲವು ಬೆಳವಣಿಗೆಗಳು ಅಂತಹ ಒಂದು ಸ್ವಾವಲಂಬಿ ದಿಶೆಯಲ್ಲಿ ನಮ್ಮೆಲ್ಲರನ್ನೂ ಕೊಂಡೊಯ್ಯಬಲ್ಲವು ಎಂಬೊಂದು ಆಶಾವಾದ ನಮ್ಮಲ್ಲಿರಲಿ. ಏಳು ದಶಕಗಳಲ್ಲಿ ಇಸ್ರೇಲ್ ಬೆಳೆದುನಿಂತ ಜಾಗದಲ್ಲಿ ನಿಲ್ಲುವ ಗುರಿಯನ್ನು ಭಾರತ ಇನ್ನು ಏಳೇ ವರ್ಷಗಳಲ್ಲಿ ತಲುಪಲಿ.

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments