ವಿಷಯದ ವಿವರಗಳಿಗೆ ದಾಟಿರಿ

ಜುಲೈ 10, 2017

ನಿಲುಮೆ ವೈಶಾಖ ಸಂಭ್ರಮ (ಬೇಸಿಗೆ ಶಿಬಿರ)

‍ನಿಲುಮೆ ಮೂಲಕ

ಯಾವುದೇ ಐಡಿಯಾಲಜಿಗಳು,ದೊಡ್ಡವರು,ಚಿಕ್ಕವರು,ಹೊಸಬರು ಅಂತೆಲ್ಲಾ ಬೇಧ-ಭಾವವಿಲ್ಲದೇ ಎಲ್ಲಾ ರೀತಿಯ ಬರಹ ಮತ್ತು ಬರಹಗಳಿಗೊಂದು ವೇದಿಕೆಯಾಗುವ ಉದ್ದೇಶದಿಂದ ನಿಲುಮೆ ಆರಂಭಗೊಂಡು ಸರಿ ಸುಮಾರು ಏಳು ವರ್ಷ ಕಳೆದಿವೆ.ಇಂದು ನಿಲುಮೆ ಕೇವಲ ಒಂದು ಸಾಮಾಜಿಕ ಜಾಲತಾಣದ ವೇದಿಕೆಗೆ ಸೀಮಿತವಾಗಿಲ್ಲ.ಈ ನೆಲದ ಸಂಸ್ಕೃತಿಯ ಉಳಿವಿಗಾಗಿ ನಾವು ಬೀದಿಗೂ ಇಳಿದಿದ್ದೇವೆ.ನಮ್ಮ ಶಕ್ತ್ಯಾನುಸಾರ ಬೇರೆ ಬೇರೆ ಕೆಲಸಗಳನ್ನು ಮಾಡಿಕೊಂಡು ಬಂದಿದ್ದೇವೆ.ಈ ರಾಜ್ಯದ ಬುದ್ಧಿಜೀವಿಗಳ ಗುಂಪು ವೈಚಾರಿಕ ದ್ವೇಷದಿಂದ ನಿಲುಮೆಯನ್ನು ಮುಚ್ಛಿಸಲು ಹೊರಟಾಗ ಅವರಿಗೆ ಸೆಡ್ಡು ಹೊಡೆದು, ಈ ನೆಲದ ಸಂಸ್ಕೃತಿಯನ್ನು ನಮ್ಮದೇ ದೃಷ್ಟಿಯಲ್ಲಿ ಅರ್ಥೈಸಿಕೊಳ್ಳುವ ಸಲುವಾಗಿ ಮೂರು ಪುಸ್ತಕಗಳನ್ನು ಹೊರ ತಂದು ಯಶಸ್ವಿಯೂ ಆದೆವು.ಕಾಶ್ಮೀರದ ವಿಷಯದಲ್ಲಿ ದೇಶವನ್ನು ವಿಭಜಿಸಲು ಹೊರಟ ದುಷ್ಟಕೂಟಗಳು ಕರ್ನಾಟಕಕ್ಕೂ ಕಾಲಿಟ್ಟಾಗ ಅವರ ಷಡ್ಯಂತ್ರಕ್ಕೆ ವಿರುದ್ಧವಾಗಿ ರಾಜ್ಯಾದ್ಯಂತ ಪ್ರೊ.ಪ್ರೇಮಶೇಖರ್ ರವರ ನೇತೃತ್ವದಲ್ಲಿ “ಜಮ್ಮು ಕಾಶ್ಮೀರ ಐತಿಹಾಸಿಕ ಸತ್ಯಗಳು ಮತ್ತು ವರ್ತಮಾನದ ತಲ್ಲಣಗಳು” ಎಂಬ ವಿಚಾರ ಸಂಕಿರಣ ನಡೆಸಿದೆವು. ಈ ಕಾರ್ಯಕ್ರಮವೂ ನಮ್ಮೆಲ್ಲರ ನಿರೀಕ್ಷೆಯನ್ನೂ ಮೀರಿ ಯಶಸ್ವಿಯಾಯಿತು. ಇದರ ಕುರಿತು ರಸಪ್ರಶ್ನೆ ಕಾರ್ಯಕ್ರಮ ಕೂಡ ಮಾಡಲಾಯಿತು. ಮುಂದಿನ ಭಾಗವಾಗಿ ನಮ್ಮ ಸಂಪ್ರದಾಯಗಳ ಕುರಿತು ಅರಿಯಲು “ನಮ್ಮೂರ ಹಬ್ಬ” ವಿಷಯದ ಮೇಲೆ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಿದೆವು. ಇದಕ್ಕೂ ಕೂಡ ಉತ್ತಮ ಬೆಂಬಲ ವ್ಯಕ್ತವಾಯಿತು.ಈ ಎಲ್ಲಾ ಯಶಸ್ಸಲ್ಲೂ ನಿಲುಮೆಯನ್ನು ಅಪಾರವಾಗಿ ಪ್ರೀತಿಸುವ ನಿಲುಮಿಗರ ಪಾಲು ಬಹಳ ದೊಡ್ಡದು. ಮುಂದೇನು ಮಾಡಬಹುದು ಎಂಬ ಪ್ರಶ್ನೆಗೆ ಉತ್ತರವಾಗಿ ಈ ಸಲ ಮಕ್ಕಳಿಗಾಗಿ ಏನಾದರೂ ಮಾಡಬೇಕು ಎಂಬ ಆಶಯ ಬಲವಾಯಿತು. ಹಾಗಾಗಿ ಮೇ ೫,೬,೭ ರಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕಿರಿಯ ಪ್ರಾಥಮಿಕ ಶಾಲೆ, ಕುಂಜತ್ತೋಡಿ, ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡದಲ್ಲಿ ನಿಲುಮೆಯ ಹೊಸ ಪ್ರಯತ್ನ “ನಿಲುಮೆ – ವೈಶಾಖ ಸಂಭ್ರಮ” ಕಾರ್ಯಕ್ರಮ ನಡೆಯಿತು. ಅದರ ಕುರಿತ ಚಿತ್ರ ಸಹಿತ ಸಂಕ್ಷಿಪ್ತ ವರದಿ ಸ್ವಲ್ಪ ತಡವಾಗಿ ನಿಮ್ಮ ಮುಂದಿದೆ… – ನಿಲುಮೆ ನಿರ್ವಾಹಕರು

ನಿಲುಮೆಯ ಹೊಸ ಪ್ರಯತ್ನ
ನಿಲುಮೆ – ವೈಶಾಖ ಸಂಭ್ರಮ (ಬೇಸಿಗೆ ಶಿಬಿರ) : ಹೊಸತನದ ಹುಡುಕಾಟ
ಆಟಕ – ನೋಟಕ – ನಾಟಕ
ನಲ್ಮೆಯ ಮಕ್ಕಳಿಗಾಗಿ ವೈಶಾಖದಲ್ಲಿ ತಣ್ಣನೆಯ ಸಂಭ್ರಮಾಚರಣೆ
ವಿಭಿನ್ನ ಆಟಗಳು ಮತ್ತು ಪ್ರಾಚೀನ ಆಟಗಳ ಖುಷಿ ಮತ್ತು ವಿವರಗಳು.
ಇಷ್ಟೇ ಅಲ್ಲ ಇನ್ನೂ ಇದೆ……
ಹಾಡು, ಕತೆ, ಅಭಿನಯ, ನಾಟಕ, ಚಿತ್ರ ಎಲ್ಲವೂ.

ನಾವು ನೆಪಮಾತ್ರ, ಆಡುವವರು ನೋಡುವವರು ಹಾಡುವವರು ಕೇಳುವವರು ಎಲ್ಲವೂ ನೀವೆ ಮತ್ತು ನೀವೇ..
ಇದು ಶಾಲೆಯಲ್ಲ, ಇಲ್ಲಿ ಕಲಿಕೆಯಿಲ್ಲ, ಬೆತ್ತ ಹಿಡಿದು ಓಡಾಡುವ ಮೇಷ್ಟರಿಲ್ಲ, ಹೀಗೇ ಮಾಡು ಎನ್ನುವ ಮೇಡಂ ಇಲ್ಲ
ನೀವೇ… ಆಡುವ, ಮಾಡುವ, ನೋಡುವ, ಕಲಿಸುವ, ಕಲಿಸುತ್ತಾ ಕಲಿಯುವ ನಿಮ್ಮ ನಲಿವಿನ ಕಾಲ ವೈಶಾಖ ಸಂಭ್ರಮ
—————————
– ಹರೀಶ್ ಆತ್ರೇಯ

ಬೇಸಿಗೆ ಶಿಬಿರ ನಡೆದು ಎರಡು ತಿಂಗಳಾಗಿದೆ, ಈಗ ಅದರ ವಿಷಯವಾಗಿ ಸ್ವಲ್ಪವಾದರೂ ಬರೆಯೋಣ ಎನಿಸಿ ಬರೆಯುತ್ತಿದ್ದೇನೆ.
ಮಕ್ಕಳೊಂದಿಗಿನ ಒಡನಾಟ ಎಂದಿಗೂ ಚೆಂದ, ಶಕ್ತಿಯನ್ನು ತುಂಬುವ, ಹೊಸತನ್ನು ಕಲಿಸಿಕೊಡುವ, ಹೊಸ ಆಲೋಚನಾ ಪಥವನ್ನು ತೋರಿಸುವ ಮಕ್ಕಳೇ ನಮ್ಮ ಗುರುಗಳು. ಮಕ್ಕಳಿಗೆ ಹೇಳಿಕೊಡುವುದು ಎಂಬ ಮಾತಿಗಿಂತ ಅವರಿಂದ ಕಲಿಸಿಕೊಳ್ಳುವುದು ಎನ್ನುವುದು ಸರಿಯಾದ ಮಾತು. ಈ ದಿಸೆಯಲ್ಲಿ ನಿಲುಮೆ ಬೇಸಿಗೆ ಶಿಬಿರವನ್ನು ಆಯೋಜಿಸಿತು. ಬೇಸಿಗೆ ಶಿಬಿರ ಅಂದ್ರೆ ಎಲ್ರಿಗೂ ಗೊತ್ತಿರೋ ಹಾಗೆ ಚಿತ್ರ ಕಲೆ, ನೃತ್ಯ , ಹಾಡು, ನಾಟಕ ಎಲ್ಲವನ್ನು ಹೇಳಿಕೊಡುವುದು. ಮೊದಲೆಲ್ಲಾ ಅಜ್ಜಿ ಮನೆಗೆ ಹೋಗ್ಬಿಡೋದು ಇರ್ತಿತ್ತು.. ಈಗ ಆ ಬೇಸಿಗೆಯನ್ನೂ ಸದುಪಯೋಗ(?) ಪಡಿಸಿಕೊಳ್ಬೇಕು ಅನ್ನೊ ಪೋಷಕರ ಮನಸ್ಥಿತಿಗೆ ಮೆಚ್ಚಬೇಕು. ಹಾಗಾಗಿ ಬೇಸಿಗೆ ಶಿಬಿರ ಅಂದ್ರೆ ಇನ್ನೊಂದು ಸ್ಕೂಲ್ ಇದ್ದಂಗೆ ಇರುತ್ತೆ. ಒಂದಷ್ಟು ಜನ ರೆಸೋರ್ಸ್ ಪರ್ಸನ್ ಗಳು ಪಾಠ ಶುರು ಹಚ್ಕೊತಾರೆ, ‘ಹೇ ಹೀಗೆ ಆಕ್ಟಿಂಗ್ ಮಾಡು, ಹೀಗೆ ಬರಿ, ಚಿತ್ರಕ್ಕೆ ಈ ಬಣ್ಣ ಹಾಕು, ಸ್ಟೆಪ್ ಹೀಗೆ ಹಾಕು’ ಇಲ್ಲೂ ಮಾಡು, ಹಾಕು, ಬರಿ ಅನ್ನೋ ನಿರಂತರ ಸೂಚನೆಗಳಲ್ಲಿ ಶಿಬಿರ ಮತ್ತೊಂದು ಶಾಲೆಯಂತಾಗಿಬಿಡುತ್ತೆ. ಇವೆಲ್ಲಕ್ಕೂ ಹೊರತಾಗಿ ಹೊಸತಾಗಿ ಮಾಡಬೇಕು ಅನ್ನೋದು ನಿಲುಮೆಯ ಉದ್ದೇಶವಾಗಿತ್ತು. ಏನನ್ನೂ ಹೇಳಿಕೊಡದೆ ಮಕ್ಕಳು ತಮ್ಮಷ್ಟಕ್ಕೆ ತಾವೇ ಕಲಿಯುವಂಥ ಮತ್ತು ಪೀರ್ ಕೌನ್ಸಲಿಂಗ್ ಗೆ ಒಳಗಾಗುವಂಥ ವಾತಾವರಣ ನಿರ್ಮಾಣ ಮಾಡಿ ಬಿಡುವುದು ಅಷ್ಟೆ. ಹೊಸ ಆಟಗಳ ಪರಿಚಯ, ಮತ್ತು ಆಟಗಳ ಉದ್ದೇಶವನ್ನೂ ಹೇಳುವುದು ನಮ್ಮ ನಿಲುವಾಗಿತ್ತು.

ನಂಬಿಕೆ, ಮೋಜು, ಗಮನ, ಏಕಾಗ್ರತೆ, ಶಬ್ದಗ್ರಹಣ ಹೀಗೆ ಹಲವಾರು ವಿಷಯಗಳನ್ನು ಆಟಗಳಾಗಿ ಪರಿವರ್ತಿಸಿ ಮಕ್ಕಳಿಗೆ ಅವುಗಳನ್ನು ಪರಿಚಯಿಸಲಾಯ್ತು, (ನೆನಪಿಡಿ ಪರಿಚಯವಷ್ಟೆ, ಆಡಲೇಬೇಕೆಂಬ ನಿಯಮವಿಲ್ಲ) ಬೋರ್ಡಿನ ಮೇಲೆ ಚಿತ್ರ ಬರೆಸಿ ಕಾಪಿ ಪೇಸ್ಟ್ ಮಾಡಿಸುವ ಕೆಲಸವಿಲ್ಲದೆ ಅವುಗಳ ಭಾವಕೋಶವನ್ನು ವಿಸ್ತರಿಸುವ, ಕಲ್ಪನಾಶಕ್ತಿಯನ್ನು ಉತ್ತೇಜಿಸುವ ಆಟಗಳನ್ನು ಆಡಿಸಲಾಯ್ತು. ಆಸಕ್ತಿ ಇರುವ ಮಕ್ಕಳು ಅವುಗಳ ಇಷ್ಟದಂತೆ ಚಿತ್ರ ಬರೆಯಬಹುದು (ಹೀಗೇ ಬರೆಯಬೇಕೆಂಬ ನಿಯಮವಿಲ್ಲ) ಆ ಚಿತ್ರಗಳಿಗೆ ಕತೆಗಳನ್ನು ಕಟ್ಟಬಹುದು, ಕೆಲವೊಮ್ಮೆ ಒಬ್ಬರ ಚಿತ್ರಗಳಿಗೆ ಇನ್ನೊಬ್ಬರು ತಮ್ಮದೇ ಕತೆಯನ್ನು ಕಟ್ಟಬಹುದು, ಹೀಗೆ ಚಿತ್ರಗಳನ್ನು ತಮ್ಮದೇ ಧಾಟಿಯಲ್ಲಿ ಅರ್ಥೈಸಿಕೊಂಡು ಕತೆಗಳನ್ನು ಕಟ್ಟಿ ಅಭಿನಯವನ್ನೂ ಅವರೇ ಮಾಡಿದುದು ಖುಷಿ ಕೊಡುವ ಸಂಗತಿ. ಇಲ್ಲಿ ನಾವ್ಯಾರೂ ಅವರ ಸೃಜನಶೀಲತೆಗೆ ನಮ್ಮ ಉಪ್ಪು ಸೊಪ್ಪನ್ನು ಸೇರಿಸುವ ಕೆಲಸ ಮಾಡಿಲ್ಲ. ಚಿತ್ರವೂ ಅವರದೇ, ಕತೆಯೂ ಅವರದೇ, ಸಂಭಾಷಣೆ ಕೂಡ ಅವರದೇ ಜೊತೆಗೆ ಅಭಿನಯವೂ ಅವರದೇ… ನಾವು ಕೈಕಟ್ಟಿ ಕೂರುವುದಷ್ಟೆ ಕೆಲಸ, ಈ ಶಿಬಿರದಲ್ಲಿ ಮಕ್ಕಳು ತಮ್ಮನ್ನು ತಾವು ತೆರೆದುಕೊಂಡು ಕುಣಿದು ಕುಪ್ಪಳಿಸಿದ್ದಷ್ಟೆ ನಮಗೆ ಚೈತನ್ಯವನ್ನಿತ್ತ ವಿಷಯ. ಹಲವು ಮಕ್ಕಳ ತಮ್ಮ ಭಾವವನ್ನು ನೋವನ್ನು ತೋಡಿಕೊಂಡದ್ದು ಸಂಕಟದ ವಿಷಯವೆನಿಸಿದರೂ ಅವರು ಹೇಳಿಕೊಳ್ಳುವುದಕ್ಕೆ ನಾವು ವೇದಿಕೆ ಕೊಟ್ಟೆವು ಮತ್ತು ಅವರು ಹಗುರಾದರು ಎನ್ನುವುದು ನೆಮ್ಮದಿಯ ವಿಷಯ.

ಈ ಶಿಬಿರ ನಡೆಸಲು ಮೂಲ ಕಾರಣ ನಿಲುಮೆ ಮತ್ತು ನಮ್ಮ ಮಕ್ಕಳ ಮನೋವಿಕಾಸ ತಂಡ. ಸಂದೀಪ್ ಶೆಟ್ಟಿ, ರಾಕೇಶ್ ಶೆಟ್ಟಿ, ವಿನಾಯಕ್ ಹಂಪಿಹೊಳಿ, ರೂಪಕ್ಕ, ಮಿಥಿಲಾ, ಸಿಂಧು ಮತ್ತು ಹರೀಶ್ ಎಲ್ಲರಿಗೂ ವಂದನೆಗಳು. ಮುಖ್ಯವಾಗಿ ನೆನಸಿಕೊಳ್ಳಬೇಕಾದದ್ದು ಸಂದೀಪ್ ಶೆಟ್ಟಿಯವರ ತಾಯಿ, ವಾಹ್..! ಅದ್ಭುತವಾದ ಅಡುಗೆ.. ಅತ್ಯುತ್ತಮ ಆತಿಥ್ಯ.. (ಆತಿಥ್ಯ ಎನ್ನುವುದು ತಪ್ಪಾದೀತೇನೋ ನಾವು ಅವರ ಮನೆಯವರೇ ಆಗಿಬಿಟ್ಟಿದ್ದು, ಕುಡಿದ ನೀರಲುಗದಂತೆ ಇದ್ವು) ನಮ್ಮ ಮನೆಯಲ್ಲಿರುವಷ್ಟು ಸಲೀಸಾಗಿ ಅಲ್ಲಿದ್ದೆವು, ಆ ತಾಯಿಗೆ ಶಿರಸಾಷ್ಟಾಂಗ ಪ್ರಣಾಮಗಳು.. ನಮ್ಮೀ ಹೊಸ ಕಾರ್ಯಕ್ಕೆ ಅದ್ಭುತ ಯಶಸ್ಸನ್ನು ದೊರೆಯುವಲ್ಲಿ ಮಹತ್ತರ ಪಾತ್ರವಹಿಸಿದ ಅಂಗನವಾಡಿ ಅನ್ನಪೂರ್ಣೆಯರಿಗೂ ಮತ್ತು ಆ ಶಾಲೆಯ ಸಿಬ್ಬಂದಿ ಹಾಗೂ ಆಡಳಿತ ವರ್ಗಕ್ಕೂ ಅನಂತ ವಂದನೆಗಳು..

ಶಿಬಿರದ ಕೆಲವು ಚಿತ್ರಗಳು ನಿಮಗಾಗಿ….

 

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments