ನಮ್ಮೂರ ಹಬ್ಬ ( ಮೈಸೂರು )
– ವಿಜಯ ನಂಜುಂಡಯ್ಯ
ಭಾರತೀಯರಿಗೆ ಹಬ್ಬ, ಹರಿದಿನಗಳು ಹೊಸದೇನೂ ಅಲ್ಲ. ಹಬ್ಬಗಳು ಹೆಸರೇ ಸೂಚಿಸುವಂತೆ, ಸಂತೋಷ, ಸಡಗರದ ಸಂಕೇತ ವಾಗಿದೆ. ಈ ಹಬ್ಬ, ಸಂತೋಷವನ್ನುಂಟು ಮಾಡುತ್ತದೆ ಎಂದರೆ ನೀವೇ ನೋಡಿ.
ಕೆಲವು ವಸ್ತುಗಳೂ, ವಿಷಯಗಳೂ ಮನಸ್ಸಿಗೆ ಹತ್ತಿರವಾಗಿ ಖುಷಿ ತಂದರೆ,,ಸೌಂದರ್ಯ, ಶೃಂಗಾರ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತದೆ.ಹಾಗೇ ಇಂಪಾದ, ತಂಪಾದ ಪ್ರೀತಿಯ ಮಾತುಗಳು, ಮಧುರವಾದ ಸ್ವರ, ಸಂಗೀತಗಳು ಕಿವಿಗೆ ಹಬ್ಬವನ್ನುಂಟು ಮಾಡುವುದರಲ್ಲಿ ಆಶ್ಚರ್ಯವಿಲ್ಲ. ರುಚಿ, ರುಚಿಯಾದ ತಿಂಡಿ ತೀರ್ಥಗಳು ಬಾಯಿಗೆ ಹಬ್ಬವನ್ನುಂಟು ಮಾಡುತ್ತದೆ..
ಹಾಂ-ಇದೆಲ್ಲಾ ಮನುಷ್ಯರ ಪಂಚೇಂದ್ರಿಯಗಳನ್ನು ತೃಪ್ತಿ ಪಡಿಸುವ ಹಬ್ಬಗಳಾದರೆ ಇನ್ನೂ ಕೆಲವು ಹಬ್ಬಗಳೂ ಧಾರ್ಮಿಕವಾಗಿ , ಸಾಮಾಜಿಕವಾಗಿ ಮನುಷ್ಯರಿಗೆ ಸಂತೋಷವನ್ನುಂಟು ಮಾಡುತ್ತದೆ. ರಾಷ್ಟ್ರೀಯ ಹಬ್ಬಗಳು ಭಾವೈಕ್ಯತೆಯನ್ನು ಹುಟ್ಟು ಹಾಕಿದರೆ, ಧಾರ್ಮಿಕವಾಗಿ ಆಚರಿಸುವ ಹಬ್ಬಗಳು ಭಾರತೀಯ ಸಂಪ್ರದಾಯ ಮತ್ತು ಸಂಸ್ಕೃತಿಗಳ ಪ್ರತೀಕವಾಗಿದೆ.
ಭೂಮಿಯ ಮೇಲೆ ಜನಿಸಿದ ಪ್ರತಿಯೊಬ್ಬ ಮನುಷ್ಯರು ತನ್ನದೇ ಆದ ಧರ್ಮ, ಪರಿಸರ, ಭಾಷೆಯ ನೆಲೆಗಟ್ಟನ್ನು ಹೊಂದಿರುವುದು ಸಹಜ. ವ್ಯಕ್ತಿ ಎಲ್ಲೇ ಇರಲಿ, ತಾನು ಜನಿಸಿದ ಭೂಮಿಗೆ ವಿಶೇಷ ಅಭಿಮಾನವನ್ನು ಹೊಂದಿರುತ್ತಾನೆ. ಹೆಮ್ಮೆಯಿಂದ ನನ್ನೂರು, ನಮ್ಮೂರು ಎಂದು ಹೇಳಿಕೊಳ್ಲುತ್ತಾನೆ.
ಹೀಗೆ ಹಮ್ಮೆಪಡಲು ಅವರಿಗೆ ನಮ್ಮೂರು ಎಂಬ ಅಭಿಮಾನ ಮೂಡಲು ಅಲ್ಲಿ ವಿಶೇಷವಾದ ನೆನಪುಗಳು ಇರಲೇ ಬೇಕು. ಆದಿಕ್ಕಿನಲ್ಲಿ ಅವನ ನೆನಪಿನಲ್ಲಿ ಯಾವಾಗಲೂ ಬಂದು ಹೋಗುವ ಹಬ್ಬ ಅಂದರೆ ನಮ್ಮೂರ ಹಬ್ಬ ಯಾಕಾಗಿರಬಾರದು. ನಮ್ಮ ಭಾರತ ದೇಶ ಧಾರ್ಮಿಕ ಭಾವನೆಗಳುಳ್ಳ ದೇಶ. ವಿವಿಧ ಜಾತಿ, ಮತಗಳನ್ನು ಹೊಂದಿರುವ ಹಾಗೇ ವಿವಿಧ ಸಂಪ್ರದಾಯಗಳ ಸಂಗಮ. ಅಂತಹ ಆಚರಣೆಗಳಲ್ಲಿ ಅನೇಕ ಹಬ್ಬಗಳು ಸೇರಿವೆ.
ಭಾರತ ಹಳ್ಳಿಗಳ ದೇಶ. ಭಾರತದ ಜನಜೀವನ ಗ್ರಾಮಗಳ ಜನಜೀವನದ ತಳಹದಿಯ ಮೇಲೆ ನಿಂತಿದೆ. ಭಾರತೀಯ ಪರಂಪರೆ, ಸಂಸ್ಕೃತಿಗಳು ಉಳಿಯ ಬೇಕಾದರೆ ಈ ಹಳ್ಳಿಗಳೇ ಕಾರಣ. ಸಾಮಾನ್ಯವಾಗಿ ಜಾತ್ರೆ, ತೇರು, ಉತ್ಸವಗಳು ಗ್ರಾಮೀಣ ಪ್ರದೇಶಗಳ ಹಬ್ಬದ ಆಚರಣೆಗಳಲ್ಲಿ ಮುಖ್ಯವಾಗಿದೆ. ವರ್ಷಕ್ಕೊಮ್ಮೆ ನಡೆಯುವ ಇಂತಹ ಹಬ್ಬಗಳಲ್ಲಿ ಊರಿನ ಎಲ್ಲಾ ಬಗೆಯ ಜನರು ಪಾಲ್ಗೊಳ್ಳುತ್ತಾರೆ. ಗ್ರಾಮದೇವತೆಯ ಆರಾಧನೆಯೇ ಇದಕ್ಕೆ ಕಾರಣವಾಗಿರುತ್ತದೆ. ಬದುಕನ್ನು ಅರಸಿ ದೂರದ ಪ್ರದೇಶಗಳಿಗೆ ಹೋಗಿರುವ ಊರಿನ ಜನರು ತಮ್ಮೂರ ಹಬ್ಬದ ದಿನದಂದು ಮರೆಯದೆ ತಮ್ಮ ಊರಿಗೆ ಹಿಂದಿರುಗುತ್ತಾರೆ. ತಮ್ಮೂರು, ತಮ್ಮ ಊರ ಹಬ್ಬವೆಂದರೆ ಅವರಿಗೆ ಅಷ್ಟು ಅಭಿಮಾನ.
ಹೊಸದಾಗಿ ಮದುವೆಯಾದ ಜೋಡಿಗಳು ಈ ಹಬ್ಬದ ಆಕರ್ಷಣೆಗಳಲ್ಲಿ ಒಂದು. ಆ ದಿನ ಇಡೀ ಊರನ್ನು ತಳಿರುತೋರಣಗಳಿಂದ ಅಲಂಕರಿಸುತ್ತಾರೆ. ಬೀದಿಗಳನ್ನು ಹೂವು, ರಂಗೋಲಿಗಳಿಂದ ಶೃಂಗರಿಸುತ್ತಾರೆ. ಹೊಸಬಟ್ಟೆಗಳನ್ನು ಧರಿಸಿ ಸಡಗರ ಪಡುತ್ತಾರೆ. ಊರಿನಲ್ಲಿ ನಡೆಯುವ ಇಂತಹ ಹಬ್ಬಕ್ಕೆ ಬೇರೆ ಊರುಗಳಿಂದ ನೆಂಟರು ಬರುವುದು ಉಂಟು. ಊರಿನ ದೇವತೆಯ ಉತ್ಸವಕ್ಕೆ ಇಡೀ ಊರೇ ಸಜ್ಜಾಗಿ, ತೇರನ್ನು ಎಳೆಯುತ್ತಾರೆ. ತೇರಿಗೆ ಹಣ್ಣು, ದವನ ಎಸೆಯುತ್ತಾರೆ. ದೇವರಿಗೆ ಪೂಜೆ ಸಲ್ಲಿಸಲು ಹಣ್ಣು, ಕಾಯಿ ತಟ್ಟೆ ಹಿಡಿದು ಮನೆಯ ಬಾಗಿಲಿನಲ್ಲಿ ಹೆಣ್ಣು ಮಕ್ಕಳು ಕಾದಿರುತ್ತಾರೆ. ಮೆರವಣಿಗೆಯಲ್ಲಿ ಬರುವ ಎತ್ತಿನ ಬಂಡಿಗಳೂ ಉತ್ಸವದ ಆಕರ್ಷಣೆಯಲ್ಲಿ ಒಂದಾಗಿರುತ್ತದೆ.
ಗ್ರಾಮೀಣ ಭಾರತದ ಭವ್ಯ ಪರಂಪರೆಯನ್ನು ಎತ್ತಿ ಹೇಳುವ ಊರಹಬ್ಬಗಳು, ಈ ಎಲೆಕ್ಟ್ರಾನಿಕ್ ಯುಗದಲ್ಲಿ ತನ್ನ ಛಾಪು ಕಳೆದುಕೊಳ್ಳುತ್ತಿದೆಯೇ ಅಂದರೆ ತಪ್ಪಾಗುತ್ತದೆ. ಮೊದಲಿನಷ್ಟು ಹೊಳಪಿಲ್ಲದಿದ್ದರೂ, ನಂಬಿಕೆ, ಸಂಸ್ಕೃತಿ, ಸಂಪ್ರದಾಯಗಳನ್ನು ಬಿಟ್ಟಿರದ ಜನರು, ಇಂದೂ ಸಹ ಊರ ಹಬ್ಬಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ.
ಊರ ಹಬ್ಬಗಳ ಬಗ್ಗೆ ಇಷ್ಟೆಲ್ಲಾ ಪೀಠಿಕೆಯಾದ ಮೇಲೆ ನಮ್ಮೂರ ಹಬ್ಬದ ಬಗ್ಗೆ ಹೇಳದಿದ್ದರೆ ಹೇಗೆ? ನಮ್ಮೂರು ಮೈಸೂರು. ಮೈಸೂರು ನಗರ ಎನಿಸಿಕೊಂಡಿದ್ದರೂ ಕೆಲವು ಪ್ರದೇಶಗಳು ಇನ್ನೂ ತನ್ನ ಗ್ರಾಮೀಣ ಸಂಸ್ಕೃತಿಯನ್ನು ಉಳಿಸಿಕೊಂಡು ಬರುತ್ತಿವೆ. ಅದು ಪಡುವಾರಹಳ್ಳಿ, ಬಂಡಿಕೇರಿ, ಮೇದರಕೇರಿ, ಕೊಪ್ಪಲುಗಳು ಉದಾಹರಣೆಯಾಗಿದೆ. ಗ್ರಾಮೀಣ ಹಿನ್ನೆಲೆ, ನಗರದ ಸೌಕರ್ಯಗಳನ್ನು ಒಳಗೊಂಡಿರುವ ಮೈಸೂರಿನಲ್ಲಿ ದಸರಾ ಮುಖ್ಯವಾದ ಊರಹಬ್ಬ. ಊರಿನ ಅಧಿದೇವತೆ ಚಾಮುಂಡೇಶ್ವರಿಯನ್ನು ಆರಾಧಿಸುತ್ತಾ, ವಿಶ್ವ, ವಿಖ್ಯಾತ ದಸರಾ ಉತ್ಸವವನ್ನು ಆಚರಿಸುವ ಪದ್ದತಿ ರಾಜರುಗಳ ಕಾಲದಿಂದಲೂ ನಡೆದುಕೊಂಡು ಬರುತ್ತಿದೆ. ದಸರಾ ಉತ್ಸವದ ಹಾಗೇ ಕೆಲವು ಧಾರ್ಮಿಕ ಆಚರಣೆಗಳು ಈ ಭಾಗದಲ್ಲಿದೆ. ಅದೇ ಊರ ಹಬ್ಬ.
ವರ್ಷಕ್ಕೊಮ್ಮೆ, ಮುಖ್ಯವಾಗಿ ಬೇಸಿಗೆ ಪ್ರಾರಂಭಕ್ಕೆ ಮುನ್ನ ಈ ಹಬ್ಬ ಆಚರಿಸಲ್ಪಡುತ್ತದೆ. ಈ ಹಬ್ಬಕ್ಕೆ ತಾಯಿ ಚಾಮುಂಡೇಶ್ವರಿಯೇ ಗ್ರಾಮದೇವತೆ. ಬೇಸಿಗೆಯಲ್ಲಿ ಬರುವ ಕಾಲರಾ, ಸಿಡುಬು, ದಡರಾ ಮುಂತಾದ ಸಾಂಕ್ರಾಮಿಕ ರೋಗಗಳಿಂದ ಪಾರಾಗಲು ತಾಯಿಗೆ ಪೂಜೆ ಸಲ್ಲಿಸಿ, ತಂಪು ಕಾಣಿಸಿ, ಆಕೆಯನ್ನು ತೃಪ್ತಿ ಪಡಿಸಲು, ಪ್ರಾಣಿಗಳ ಬಲಿ ಕೊಡುವುದು ಈ ಹಬ್ಬದ ವಿಶೇಷತೆ. ತಂಬಿಟ್ಟು ಆರತಿಯ ಪೂಜೆ. ಹಬ್ಬದ ಹಿಂದಿನ ದಿನ ಬೀದಿಗಳಲ್ಲಿ ಡಂಗುರದ ಮೂಲಕ ಜನರಿಗೆ ಹಬ್ಬದ ಬಗ್ಗೆ ಸೂಚನೆ ಕೊಡುತ್ತಾರೆ. ಆ ದಿನ ಬಡಾವಣೆಯನ್ನು ತಳಿರು, ತೋರಣಗಳಿಂದ ಅಲಂಕರಿಸುತ್ತಾರೆ. ಮನೆಗಳ ಮುಂದೆ ಸಾರಿಸಿ, ಬಣ್ಣದ ರಂಗೋಲಿಯಿಂದ ಮೆರಗು ತರುತ್ತಾರೆ. ಹೆಣ್ಣು ಮಕ್ಕಳ ಸಂಭ್ರಮವಂತೂ ಹೇಳತೀರದು. ಮುಂಜಾನೆ ಬೇಗ ಎದ್ದು, ಸ್ನಾನ ಮುಗಿಸಿ, ಹೊಸ ಬಟ್ಟೆ ಧರಿಸಿ, ತಂಬಿಟ್ಟು ಸಿದ್ಧಗೊಳಿಸುತ್ತಾರೆ. ಅಕ್ಕಿಯನ್ನು ಕುಟ್ಟಿ, ಬೆಲ್ಲ ಹಾಕಿ ಅದಕ್ಕೆ ಕಡಲೆಯಿಂದ ಅಲಂಕರಿಸುತ್ತಾರೆ. ನಂತರ ತಟ್ಟೆಗಳಲ್ಲಿ ಗೋಪುರದ ಹಾಗೆ ಜೋಡಿಸಿ, ಹೆಣ್ಣು ಮಕ್ಕಳು ಮೆರವಣಿಗೆಯಲ್ಲಿ ತಲೆಯ ಮೇಲೆ ಹೊತ್ತು ಸಾಗುತ್ತಾರೆ. ತಮಟೆ, ಓಲಗ, ಬ್ಯಾಂಡ್ ವಾದ್ಯಗಳ ಸಂಗೀತಕ್ಕೆ ಸರಿಯಾಗಿ ಮಕ್ಕಳು, ಯುವಕರು ಕುಣಿಯುತ್ತಾ ಹೋಗುತ್ತಾರೆ.
ಶಕ್ತಿ ದೇವತೆ ಮಾರಮ್ಮನೆಂದು ಕರೆಯುವ ಗ್ರಾಮದೇವತೆ ಚಾಮುಂಡಮ್ಮನಿಗೆ ಬಲಿ ಕೊಡಲು, ಕುರಿ, ಟಗರುಗಳ ಕೊರಳಿಗೆ ಹೂವಿನ ಹಾರ ಹಾಕಿ ಮೆರವಣಿಗೆಯಲ್ಲಿ ಕರೆದೊಯ್ಯತ್ತಾರೆ. ಕೇರಿಗಳ ಎಲ್ಲಾ ಜಾತಿಯ ಜನರು ಈ ಆಚರಣೆಯಲ್ಲಿ ಭಾಗವಹಿಸಿ ಊರಹಬ್ಬಕ್ಕೆ ಕಳೆ ಕಟ್ಟುತ್ತಾರೆ. ಚಾಮುಂಡೇಶ್ವರಿ ಬೆಟ್ಟದ ತಪ್ಪಲಿಗೆ ಸಾಗುವ ಮೆರವಣಿಗೆ, ಅಲ್ಲಿ ತಾಯಿಯ ಪಾದಕ್ಕೆ ಪೂಜೆ ಸಲ್ಲಿಸಿ, ತಂಬಿಟ್ಟು ಆರತಿಯ ನಂತರ, ಪ್ರಾಣಿಬಲಿ ಕೊಡುವುದು ಈ ಹಬ್ಬದ ವಿಶೇಷ.
ಬಂಡಿಕೇರಿಯಲ್ಲಿ ವಾಸವಾಗಿದ್ದ ದಿನಗಳಲ್ಲಿ ನಾವು ಸಹ, ಕೇರಿಯ ಜನರ ಜೊತೆ ಮೆರವಣಿಗೆಯಲ್ಲಿ ಹೋಗಿ, ತಂಬಿಟ್ಟು ಆರತಿ ಬೆಳಗಿ, ಪೂಜೆ ಸಲ್ಲಿಸಿದ್ದೆವು. ಈ ೨೧ನೇ ಶತಮಾನದಲ್ಲೂ ಈ ಊರಹಬ್ಬಗಳು ಭಾರತೀಯ ಸಂಸ್ಕೃತಿಯ ಸಂಕೇತವಾಗಿ ಉಳಿದುಕೊಂಡು ಬಂದಿರುವುದು ಹೆಮ್ಮೆಯ ಸಂಗತಿಯಾಗಿದೆ. ಗ್ರಾಮೀಣ ಜನಜೀವನದ ಸೊಗಡನ್ನು ನೆನಪಿಸುವ, ಭಾವೈಕ್ಯತೆ ಸಾರುವ ಇಂತಹ ಊರಹಬ್ಬಗಳು ಮರೆಯಾಗದಿರಲಿ.. ಗ್ರಾಮಗಳ ಜನಜೀವನದ ತಳಹದಿಯ ಮೇಲೆ ನಿಂತಿರುವ ಭಾರತ ದೇಶ, ತನ್ನ ಪರಂಪರೆಯನ್ನು, ಸಂಸ್ಕೃತಿಯನ್ನು ಎತ್ತಿ ಹಿಡಿಯಲಿ.