ನಮ್ಮೂರ ಹಬ್ಬ – ಹೊಸ ಹುರುಪಿನ ಹೊಸ್ತು
– ಸ್ವಾತಿ ಶೆಟ್ಟಿ
ಬೆಳಗಾಗಿ ನಾನೆದ್ದು ಯಾರ್ಯಾರ ನೆನೆಯಲಿ
ಎಳ್ಳು ಜೀರಿಗೆ ಬೆಳೆಯೋಳ ಭೂಮಿತಾಯಿ
ಎದ್ದೊಂದುಗಳಿಗೆ ನೆನೆದೇನು…
ಮೋಡ ಮಳೆಗೆ ಮೂಲ, ಮಕ್ಕಳಿಗೆ ತಾಯಿ ಮೂಲ, ಬೆಳಕಿಗೆ ಸೂರ್ಯ ಮೂಲ, ಭೂಮಿತಾಯಿ ಬೆಳೆಗೆ ಮೂಲ. ಹೌದು, ನಮ್ಮದು ಕೃಷಿ ಪ್ರದಾನವಾದ ವ್ಯವಸ್ಥೆ ರೈತರಿಗೆ ಅನ್ನ ನೀಡುವ ಭೂಮಿ ತಾಯಿ ಹಾಗೂ ಕೃಷಿಯೊಂದಿಗೆ ಅವಿನಾಭಾವ ಸಂಭಂದವಿದೆ. ಭೂಮಿಯನ್ನು ಹಾಗೂ ಕೃಷಿಯನ್ನು ಈ ಹಿನ್ನೆಲೆಯಲ್ಲಿ ಪೂಜ್ಯ ಭಾವನೆಯಿಂದ ಆರಾಧಿಸಿಕೊಂಡು ಬಂದಿದ್ದೇವೆ. ನಮ್ಮ ಕರಾವಳಿಯ ಹೆಚ್ಚಿನ ಎಲ್ಲಾ ಆಚರಣೆಗಳು ಕೃಷಿ ಸಂಬಂಧಿತವಾದ ಆಚರಣೆಗಳಾಗಿ ರೂಢಿಯಲ್ಲಿದೆ.
ಕನ್ಯಾ ಮಾಸ ಶುಭಾರಂಭವಾಗುತ್ತಿದ್ದಂತೆಯೇ ಕರಾವಳಿ ಹಾಗೂ ಮಲೆನಾಡಿನ ಮನೆ-ಮನಗಳು ಹೊಸ್ತು ಆಚರಣೆಗೆ ಸಂಭ್ರಮದಿಂದ ಸಿದ್ಧಗೊಳ್ಳುತ್ತವೆ. “ಕದಿರು ಕಟ್ಟುವುದು” ಹೊಸ ಅಕ್ಕಿ ಊಟ ಹಾಗೂ ಹೊಸ್ತು (ಹೊಸತು)ಎಂಬೆಲ್ಲಾ ಆಡುನುಡಿಯಲ್ಲಿ ಪ್ರಚಲಿತವಿರುವ ಈ ಕದಿರು(ತೆನೆ)ಪೂಜೆ ಬಡವ ಬಲ್ಲಿದರೆಂಬ ಭೇದ ಇಲ್ಲದೆ ಸಾರ್ವತ್ರಿಕವಾಗಿ ಆಚರಿಸಲ್ಪಡುವಂತಹ ಪಕ್ಕಾ ಹಳ್ಳಿ ಸೊಗಡಿನ ಆಧುನಿಕತೆಯ ಆಡಂಬರವಿಲ್ಲದ ಪಾರಂಪರಿಕ ಹಬ್ಬ ನಮ್ಮದು.
ಹಳ್ಳಿಗಳೇ ಹೆಚ್ಚಾಗಿರುವ ನಮ್ಮ ನಾಡಿನಲ್ಲಿ ಕೃಷಿಯೇ ಮುಖ್ಯ ಕಸುಬಾಗಿ ನೇರ್ಪುಗೊಂಡಿರುವ ಹಿನ್ನೆಲೆಯಲ್ಲಿ ಇಂತಹ ಕೃಷಿ ಕರ್ಮವೇ ನಮ್ಮಲ್ಲಿ ಆಚಾರ, ವಿಚಾರ, ಆಚರಣೆ, ಆರಾಧನೆಗಳಿಗೆ ಆಹಾರವಾದದು ಎಂದರೆ ತಪ್ಪಾಗುವುದಿಲ್ಲ. ಹಾಗಾಗಿ ಕೃಷಿಕ ತಾನು ಬೆಳೆದ ಹೊಸ ಫಸಲನ್ನು ಭೂರಮೆಯ ಮಡಿಲಿನಿಂದ ತಂದು ಪೂಜಿಸಿ, ಸಂತಸದಿಂದ ಮನೆಯೊಳಗೆ ಸ್ವಾಗತಿಸುವ ಪದ್ಧತಿಯ ವೈಶಿಷ್ಟ ಪೂರ್ಣ ಜಾನಪದಿಕ “ಹೊಸ್ತು” ಆಚರಣೆ ಗ್ರಾಮೀಣ ಸಂಸ್ಕೃತಿಯಲ್ಲಿ ರೂಢಿಗತವಾಗಿ ಬಂದಿದೆ. ಈ ಆಚರಣೆಯ ಮೊದಲ ಹಂತವೇ ಇಡೀ ಮನೆಯನ್ನು ಶುದ್ಧಗೊಳಿಸುವುದು. ಹೊಸ್ತು ಆಚರಣೆಯ ಮುನ್ನಾದಿನ ರಾತ್ರಿ ಕದಿರನ್ನು ಕಿತ್ತು ತಂದು ಅದಕ್ಕಾಗಿ ಮೊದಲೇ ಸಿದ್ಧಪಡಿಸಿದ ಗದ್ದೆಯ ಪೈರಿನ ನಡುವೆ ಇಡಲಾಗುತ್ತದೆ. ಕೆಲವರು ಮುಂಜಾನೆಯೇ ಕದಿರು ತಂದು ಪೂಜಿಸುವ ಕ್ರಮವು ಇದೆ. ಕದಿರು ಹೊರುವವರು ಮಿಂದು ಶುಚೀರ್ಭೂತರಾಗಿ ಮಡಿಯುಟ್ಟು ಕದಿರು ಪೂಜೆಯನ್ನು ಉಪಕ್ರಮಿಸುತ್ತಾರೆ. ಈ ಪೂಜೆಗೆ ಅಗತ್ಯವಾಗಿ ಬೇಕಾದ ಮುಳ್ಳು ಸೌತೆಯನ್ನು ಸೀಳಿ, ವೀಳ್ಯದೆಲೆ, ಅಡಕೆಯನ್ನಿಟ್ಟು ಪೂಜೆ ಮಾಡಿ ರೂಮಾಲು ಕಟ್ಟಿದ ತಲೆಯಲ್ಲಿ ತೆನೆ ತುಂಬಿದ ಹರಿವಾಣವನ್ನು ಹೊತ್ತು ಜಾಗಟೆ, ಶಂಖ ಮೇಳದೊಂದಿಗೆ ಮನೆಯೊಳಗೆ ನಡೆಯಲು ಸಿದ್ಧರಾಗುತ್ತಾರೆ. ಆಗ ಗೃಹಿಣಿ ಕದಿರು ಹೊತ್ತವನ ಪಾದಕ್ಕೆ ನೀರೆರೆದು ತಲೆ ಮೇಲಿರುವ ತೆನೆ ಮುಟ್ಟಿ ಮನೆಯೊಳಕ್ಕೆ ಸ್ವಾಗತಿಸುತ್ತಾಳೆ. ಮತ್ತೆ ಮನೆಯೊಳಗೆ ಪೂಜೆ ಕರ್ಮಾದಿಗಳು ಜರುಗಿ ಆಗಲೇ ಸಿದ್ಧಪಡಿಸಿಕೊಂಡ ಮಾವಿನೆಲೆ, ಹಲಸಿನ ಕಟ್ಟು ಮತ್ತು ಬಿದಿರು ಕುಡಿಯೊಂದಿಗೆ ಕದಿರನ್ನಿಟ್ಟು ತೆಂಗಿನ ಶಾಖೆಯಿಂದ ತಯಾರಿಸಿದ ದಾರದಿಂದ ಬಂಧಿಸಿ, ತೆಂಗು, ಕಂಗು ಮೊದಲಾದ ಫಲವೃಕ್ಷಗಳಿಗೆ ಅಲ್ಲದೆ ಮನೆಯ ಮುಖ್ಯದ್ವಾರ, ಬಾವಿದಂಡೆಗೆ, ದನದ ಕೊಟ್ಟಿಗೆಗೆ, ಪೀಠೋಪಕರಣಗಳಿಗೆ ಹಾಗೂ ವಾಹನಗಳಿಗೆ ಕಟ್ಟಲಾಗುತ್ತದೆ. ಆಗ ತಾನೇ ತಂದ ನವ ಫಸಲಿನ ತೆನೆಯಿಂದ ಒಂಭತ್ತು ಸುರಿದಕ್ಕಿಯನ್ನು ಅನ್ನದೊಂದಿಗೆ ಬೇಯಲು ಹಾಕುವ ಕ್ರಮವು ಇದೆ ಹಾಗೂ ಅಂದು ಹೊಸ ಅಕ್ಕಿ ಊಟಕ್ಕೆ ಕೆಸುವಿನ ಎಲೆಯ ಪತ್ರೊಡೆಗೆ ವಿಶಿಷ್ಟ ಸ್ಥಾನವಿದೆ.
ಈ ಸಂಪ್ರದಾಯವು ಪ್ರಾದೇಶಿಕ ಭಿನ್ನತೆಯನ್ನು ಕಂಡುಕೊಂಡಿದೆ. ನಮ್ಮ ತುಳುನಾಡಿನ ರೈತರು ಇಂತಹ ಪರಂಪರೆಗಳನ್ನು ಇತ್ತೀಚಿನ ವರ್ಷಗಳವರೆಗೂ ಮುಂದುವರೆಸಿಕೊಂಡು ಬರುತ್ತಿದ್ದೆವು.. ಆದರೆ ಇಂದು ಕಾಲ ಬದಲಾಗಿದೆ. ಕೃಷಿ ಭೂಮಿ ವಿರಳವಾಗಿದೆ, ಕೃಷಿಗೆ ಯಂತ್ರೋಪಕರಣಗಳ ಪ್ರವೇಶವಾಗಿದೆ.. ಅದರೊಂದಿಗೆ ನಮ್ಮ ರೈತರು ಕೂಡ ಯಂತ್ರ ಮಾನವರಾಗುತ್ತಿದ್ದಾರೆ.
ಕಂಪ್ಯೂಟರ್, ಇಂಟರ್‍ನೆಟ್, ಮೊಬೈಲ್‍ನಂತಹ ಇಂದಿನ ಯಾಂತ್ರಿಕ ಯುಗದಲ್ಲಿ ಈ ಪದ್ಧತಿ ಪೂಜೆಗಳಿಗೆಲ್ಲಿದೆ ಅವಕಾಶ…?
ಆದರೆ ನೆಂಟರಿಷ್ಟರು, ಬಂಧು ಬಾಂಧವರೊಂದಿಗೆ ಕೂಡಿ ಭೋಜನ ಮಾಡಿ ತಾಂಬೂಲ ಮೆದ್ದರೂ ಹೊಸ್ತು ಆಚರಣೆ ಹಳತಾಗದೆ ಹೊಸ ಹುರುಪನ್ನು ಜಾಗೃತವಾಗಿಡುತ್ತದೆ.
ಚಿತ್ರ ಕೃಪೆ :- http://kodagunews.com