ವಿಷಯದ ವಿವರಗಳಿಗೆ ದಾಟಿರಿ

ಜುಲೈ 13, 2017

ನಮ್ಮೂರ ಹಬ್ಬ – ಋಷ್ಯಶೃಂಗೇಶ್ವರನ ರಥೋತ್ಸವ

‍ನಿಲುಮೆ ಮೂಲಕ

– ಅಪರ್ಣ ಜಿ. ಸಿರಿಮನೆ

ಹಬ್ಬಗಳು ಸಾಮಾಜಿಕ ಜೀವನದಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಅದರಲ್ಲೂ ಪಾರಂಪರಿಕವಾಗಿ ನಡೆದುಕೊಂಡು ಬರುವ ಊರ ಹಬ್ಬಗಳು ಸಾಮಾಜಿಕ ಒಗ್ಗಟ್ಟನ್ನು ಪ್ರತಿನಿಧಿಸುವುದರಲ್ಲಿ ಎರಡು ಮಾತಿಲ್ಲ. ಮಲೆನಾಡಿನ ದಟ್ಟ ಹಸಿರಿನ ನಡುವೆ ರಮಣೀಯತೆಯನ್ನೇ ಹಾಸಿ ಹೊದ್ದಿರುವ ಒಂದು ಪುಟ್ಟ ಗ್ರಾಮ ‘ಕಿಗ್ಗಾ’ ನಮ್ಮೂರು. ಪ್ರಾಕೃತಿಕ ಸೌಂದರ್ಯದಿಂದಲೇ ಜನರನ್ನು ತನ್ನೆಡೆಗೆ ಸೆಳೆಯುವ ನಮ್ಮೂರು ಮಳೆದೇವರೆಂದೇ ಹೆಸರಾಗಿರುವ ಋಷ್ಯಶೃಂಗೇಶ್ವರ ನೆಲೆಸಿರುವ ಪುಣ್ಯಕ್ಷೇತ್ರ. ಪ್ರತಿವರ್ಷವೂ ನಡೆಯುವ ಋಷ್ಯಶೃಂಗೇಶ್ವರನ ರಥೋತ್ಸವ ನಮ್ಮೂರಿನ ಪ್ರಮುಖ ಹಬ್ಬ.

ಬಾಲ್ಯದ ದಿನಗಳಲ್ಲಿ ವಿಶೇಷವೆನಿಸುತ್ತಿದ್ದ ಈ ಜಾತ್ರೆಯು ಅನೇಕ ಅನುಭವಗಳನ್ನು ಕಟ್ಟಿಕೊಟ್ಟ ಒಂದು ಸುಂದರ ನೆನಪು. ಸುಮಾರು ನಾನೂರು ವರ್ಷಗಳಷ್ಟು ಪುರಾತನ ಹಿನ್ನೆಲೆಯಿರುವ ಈ ದೇವಸ್ಥಾನದ ವಿಶೇಷವೆಂದರೆ ಇಲ್ಲಿನ ಶಿವಲಿಂಗದ ಮೇಲಿರುವ ಕೊಂಬು. ಇದಕ್ಕೆ ಸಂಬಂಧಿಸಿದಂತೆ ಅನೇಕ ಕಥೆಗಳು ನಮ್ಮೂರಿನ ಜನರಲ್ಲಿ ಕೇಳಬಹುದು, ಅನೇಕ ಕಥೆಗಳಿಗೆ ಇಲ್ಲಿರುವ ಶಿಲಾಶಾಸನಗಳು ಭಿತ್ತಿಚಿತ್ರಗಳೇ ಸಾಕ್ಷಿಯಾಗಿವೆ. ಹಿಂದೆ ವಿಭಾಂಡಕ ಮಹರ್ಷಿಗಳ ಮಗನಾದ ಋಷ್ಯಶೃಂಗರು ಈ ಪ್ರದೇಶದಲ್ಲಿ ತಪೋನಿರತರಾಗಿದ್ದು ಅವರ ತಪಸ್ಸಿಗೆ ಮೆಚ್ಚಿದ ಶಿವನು ಋಷ್ಯಶೃಂಗರನ್ನು ತನ್ನಲ್ಲೇ ಐಕ್ಯವಾಗಿಸಿಕೊಂಡನೆಂದು ಕಥೆಗಳು ಹೇಳುತ್ತವೆ. ಋಷ್ಯಶೃಂಗರು ಹುಟ್ಟುವಾಗಲೇ ಜಿಂಕೆಯ ಕೊಂಬುಗಳನ್ನು ಹೊಂದಿದ್ದರಿಂದ ಇಲ್ಲಿನ ಶಿವಲಿಂಗದಲ್ಲೂ ಕೊಂಬುಗಳನ್ನು ಕಾಣಬಹುದು. ಹಿಂದೆ ಅಂಗದೇಶವನ್ನು ರೋಮಪಾದನೆಂಬ ರಾಜ ಆಳುತ್ತಿದ್ದನಂತೆ, ಧರ್ಮನೀತಿಗೆ ವ್ಯತಿರಿಕ್ತವಾಗಿ ಆತ ನಡೆದುಕೊಂಡುದರಿಂದ ಭೀಕರ ಕ್ಷಾಮವು ಅಂಗದೇಶವನ್ನು ಆವರಿಸಿತು. ಆಗ ಅಲ್ಲಿನ ಸ್ತ್ರೀಯರು ಋಷ್ಯಶೃಂಗರನ್ನು ತಮ್ಮ ರಾಜ್ಯಕ್ಕೆ ಬರುವಂತೆ ವಿನಂತಿಸಿಕೊಂಡು ಕರೆದೊಯ್ದರೆಂದೂ, ಋಷ್ಯಶೃಂಗರ ಪಾದಸ್ಪರ್ಶವಾದೊಡನೆ ಅಂಗದೇಶದಲ್ಲಿ ಸುಭಿಕ್ಷವಾಗಿ ಮಳೆಗರೆಯಿತೆಂದೂ ಪುರಾಣಗಳು ಹೇಳುತ್ತವೆ. ಸ್ತ್ರೀಯರು ಋಷ್ಯಶೃಂಗರನ್ನು ಕರೆದೊಯ್ಯುತ್ತಿರುವ ಚಿತ್ರ ಇಂದಿಗೂ ದೇವಸ್ಥಾನದಲ್ಲಿ ಕಾಣಬಹುದಾಗಿದೆ. ಅದರಂತೆ ಅತಿವೃಷ್ಟಿಯಾಗಲಿ, ಅನಾವೃಷ್ಟಿಯಾಗಲಿ ಇಂದಿಗೂ ನಮ್ಮೂರಿನ ಜನರು ಋಷ್ಯಶೃಂಗೇಶ್ವರನ ಮೊರೆ ಹೋಗುತ್ತಾರೆ. ಪ್ರತಿವರ್ಷವೂ ೩ ರಿಂದ ೬ ದಿನಗಳ ಕಾಲ ನಡೆಯುವ ರಥೋತ್ಸವದಲ್ಲಿ ಭಕ್ತಿಯಿಂದ ಪಾಲ್ಗೊಳ್ಳುತ್ತಾರೆ.

ಒಟ್ಟಾರೆಯಾಗಿ ಈ ಜಾತ್ರೆಯೆಂಬುದು ನಮ್ಮೂರಿಗೊಂದು ಕಳೆತುಂಬುವ ಹಬ್ಬ. ಪ್ರತಿಯೊಬ್ಬರೂ ಖುಷಿಯಿಂದ ಕಳೆಯುತ್ತಿದ್ದ ಅದ್ಭುತ ಕ್ಷಣಗಳು. ಶಾಲೆಗೆ ಚಕ್ಕರ್ ಹೊಡೆಯಲೆಂದೇ ಕಾಯುತ್ತಿರುತ್ತಿದ್ದ ನಮ್ಮಂತಹ ಮಕ್ಕಳು ಜಾತ್ರೆಯ ದಿನಗಳಿಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿರುತ್ತಿದ್ದೆವು. ಮನೆಯಂತೂ ಸಂಬಂಧಿಕರ ಕಲರವದಿಂದ ತುಂಬಿಹೋಗಿರುತ್ತಿತ್ತು. ಎಲ್ಲರೂ ಕೆಲಸಗಳಲ್ಲೇ ನಿರತರಾಗಿರುತ್ತಿದ್ದರಿಂದ ನಮ್ಮ ಕಡೆಗಿನ ಗಮನವೂ ಕಡಿಮೆಯಾಗಿರುತ್ತಿತ್ತು. ನಾವಂತೂ ಸ್ವತಂತ್ರ ಹಕ್ಕಿಗಳಂತಾಗಿರುತ್ತಿದ್ದೆವು. ಜಾತ್ರೆಯಲ್ಲಿ ಬಂದಿರುತ್ತಿದ್ದ ಬಗೆಬಗೆಯ ಅಂಗಡಿಗಳು, ಚುರುಮುರಿ, ಬೆಂಡು-ಬತ್ತಾಸ್ ಮುಂತಾದ ಸಿಹಿತಿಂಡಿಗಳೇ ಮನಸ್ಸನ್ನು ತುಂಬಿಹೋಗಿರುತ್ತಿತ್ತು. ಎಲ್ಲದಕ್ಕಿಂತಲೂ ಖುಷಿಯ ಸಂಗತಿಯೆಂದರೆ ಮನೆಯ ಹಿರಿಯರು ಜಾತ್ರೆ ಖರ್ಚಿಗೆಂದು ಕೊಡುತ್ತಿದ್ದ ದುಡ್ಡು. ಕೊಡುತ್ತಿದ್ದದ್ದು ಹತ್ತು-ಇಪ್ಪತ್ತು ರೂಪಾಯಿಗಳಾದರೂ, ಅಂದು ನಮಗದು ದೊಡ್ಡ ಮೊತ್ತವಾಗಿರುತ್ತಿತ್ತು. ಸಂಜೆ ಇರುತ್ತಿದ್ದ ಸಂಗೀತ, ಭರತನಾಟ್ಯ, ಯಕ್ಷಗಾನ ಕಾರ್ಯಕ್ರಮಗಳಿಗೆಂದು ಕುಟುಂಬ ಸಮೇತರಾಗಿ ಹೋಗುತ್ತಿದ್ದೆವು. ಮನೆಯವರು ಕಾರ್ಯಕ್ರಮ ನೋಡಲು ಉತ್ಸುಕರಾಗಿದ್ದರೆ ನಮ್ಮ ಮನಸ್ಸು ಕೈನಲ್ಲಿರುತ್ತಿದ್ದ ಪುಡಿಗಾಸಿನಲ್ಲಿ ಏನೇನು ಕೊಳ್ಳಬಹುದೆಂದು ಯೋಚಿಸುವುದರಲ್ಲೇ ಮಗ್ನವಾಗಿರುತ್ತಿತ್ತು. ಒಂದು ಸಲ ಎಲ್ಲಾ ಅಂಗಡಿಗಳನ್ನೂ ಸುತ್ತಿ ಬರುವವರೆಗೆ ಯಾರಿಗೂ ಸುಮ್ಮನೆ ಕೂರಲು ಬಿಡುತ್ತಿರಲಿಲ್ಲ. ರಾತ್ರಿ ಕಣ್ಣುಗಳನ್ನು ನಿದ್ರೆ ಆವರಿಸುತ್ತಿದ್ದರೂ, ೧೦ ಗಂಟೆಯ ನಂತರ ರಥವನ್ನು ಮತ್ತೊಮ್ಮೆ ಎಳೆಯುವುದನ್ನು ನೋಡಲು ಕಣ್ಣಗಲಿಸಿ ಕಾಯುತ್ತಿದ್ದೆವು.

ನಮ್ಮ ಸಂಭ್ರಮ ಒಂದು ರೀತಿಯದ್ದಾದರೆ ದೊಡ್ಡವರ ಪಾಲಿಗೂ ಇದೊಂದು ಸಡಗರದ ಹಬ್ಬವೇ. ಎಲ್ಲೋ ದೂರದಲ್ಲಿರುವ ಸಂಬಂಧಿಕರೆಲ್ಲರೂ ಊರಹಬ್ಬದ ನೆಪದಲ್ಲಿ ಒಂದುಗೂಡುತ್ತಿದ್ದರು. ಕೆಲವು ಜನಾಂಗದ ಜನಗಳಲ್ಲಂತೂ ಹುಳಿ ಬರಿಸಿದ ಅಕ್ಕಿ(ಭತ್ತ) ಇಂದ ಹೆಂಡ ತಯಾರಿಸಿ ಬಂದ ಅತಿಥಿಗಳನ್ನು ಸತ್ಕರಿಸುವುದೇ ವಿಶೇಷ ಉಪಚಾರವಾಗಿರುತ್ತಿತ್ತು. ಜಾತ್ರೆಯು ಪ್ರಮುಖವಾಗಿ ಮೂರು ದಿನ ನಡೆಯುವುದಾದರೂ ಆರು ದಿನಗಳ ಕಾಲ ವಿಶೇಷ ಪೂಜೆಗಳು ನಡೆಯುತ್ತದೆ. ಅಂಕುರಾರ್ಪಣೆ ಎಂಬ ಒಂದು ವಿಶಿಷ್ಟ ಪದ್ದತಿಯಿದೆ. ಅದರಂತೆ ಜಾತ್ರೆ ಆರಂಭವಾಗುವ ಮುನ್ನ ಒಂದು ದೊಡ್ಡ ಪಾತ್ರೆಯಲ್ಲಿ ಧಾನ್ಯಗಳನ್ನು ಬಿತ್ತಿರುತ್ತಾರೆ. ಜಾತ್ರೆಯ ಕೊನೆಗೆ ಅದನ್ನು ಪ್ರಸಾದ ರೂಪವಾಗಿ ಕೊಡುತ್ತಾರೆ. ಆ ಅವಧಿಯಲ್ಲಿ ಧಾನ್ಯವು ಎಷ್ಟು ಚೆನ್ನಾಗಿ ಮೊಳೆತು ಬೆಳೆದಿರುತ್ತದೋ ಅದರಂತೆ ಆ ವರ್ಷದ ಬೆಳೆಯಿರುತ್ತದೆ ಎಂಬುದು ಜನರ ನಂಬಿಕೆ. ಹೀಗೆ ಅನೇಕ ವಿಶೇಷತೆಗಳನ್ನೊಳಗೊಂಡಿರುವ ಋಷ್ಯಶೃಂಗೇಶ್ವರನ ರಥೋತ್ಸವವು ನಮ್ಮ ಹಸಿರುನಾಡಿನ ಪ್ರಮುಖ ಹಬ್ಬವಾಗಿದೆ.

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments