ನಮ್ಮೂರ ಹಬ್ಬ- ನುಡಿ ಮತ್ತು ಭೇಟಿ
– ಪ್ರಮೋದ್ ಜತ್ಕರ
ನನ್ನದು ಗುಮ್ಮಟ ನಗರಿ ವಿಜಯಪುರ. ತನ್ನದೇ ಆದ ಕಲಾ ಸ್ವಂತಿಕೆ ಹೊಂದಿರುವಂತಹದ್ದು. ಇಲ್ಲಿ ತಾಲುಕಿಗೊಂದು ಭಾಷೆ, ವಲಯಕ್ಕೊಂದು ಆಚರಣೆ, ಊರಿಗೊಂದು ದೈವ.. ಹೀಗೆ ವೈಶಿಷ್ಟ್ಯವಾದದ್ದು. ಇದು ಕೇವಲ ನಮ್ಮ ಜಿಲ್ಲೆಯ ವೈಶಿಷ್ಟ್ಯವಲ್ಲ ಇಡೀ ಭಾರತದ ವೈಶಿಷ್ಟ್ಯ, ಅದಕ್ಕೆಂದೇ ನಾವು ವಿವಿಧತೆಯನ್ನು ಪ್ರದರ್ಶಿಸುವವರು… (ಏಕತೆ ಎಂದು ಹೇಳಲಾರೆ!).
ನನ್ನೂರು ವಿಜಯಪುರದ ಇಂಡಿ ತಾಲ್ಲೂಕಿನ ಚಡಚಣ ವಲಯದಲ್ಲಿ ಬರುತ್ತದೆ. ನನ್ನೂರು ಒಂದು ಚಿಕ್ಕ ಹಳ್ಳಿ, ನಿವರಗಿ ಅಂತ ಅದರ ಹೆಸರು, ಭೀಮೆಯ ತಂಪಿನಲ್ಲಿ ಬೆಳೆದ ಊರು. ಅವಳೇ ನಮಗೆ ದೈವಗಳ ದೈವ.. ಭೀಮೆ ದಾಟಿದರೆ ಮಹಾರಾಷ್ಟ್ರ. ನಮ್ಮ ಸಂಪ್ರದಾಯಗಳು ಸಾಮಾನ್ಯವಾಗಿ ಮಹಾರಾಷ್ಟ್ರದ ಸಂಪ್ರದಾಯಗಳಿಗೆ ಹೋಲುತ್ತವೆ.
ನಮ್ಮಲ್ಲಿನ ಪ್ರಮುಖ ಸಂಪ್ರದಾಯಗಳಲ್ಲಿ “ನುಡಿ” ಮತ್ತು “ಭೇಟಿ” ಎಂಬ ಎರಡು ಸಂಪ್ರದಾಯಗಳು ಬಹು ಮುಖ್ಯವಾದವು.
ನುಡಿ :-
ಭಾರತ ಹುಣ್ಣಿಮೆಯ ಸಂದರ್ಭದಲ್ಲಿ ಸಾಮಾನ್ಯವಾಗಿ ಬೆಳೆಗಳು ಚೆನ್ನಾಗಿ ಬೆಳೆದು ಕಾಳು ಹಿಡಿದಿರುತ್ತವೆ, ರೈತನಿಗೆ ಅದು ಖುಷಿಯ ಕಾಲ. ಹಾಗೆಯೇ ಮುಂದಿನ ಕೆಲವು ವಿಷಯಗಳ ಬಗೆಗೆ ಕುತೂಹಲ!!. ಅವನದು ಪುಟ್ಟ ಸಾಮ್ರಾಜ್ಯವಾದರೂ ಅಷ್ಟರಲ್ಲೇ ಅವನಿಗೆ ಕೆಲವು ಬೆಟ್ಟದಂತ ಆಸೆ. ಮುಂದಿನ ಮತ್ತು ಆ ವರ್ಷದ ಮಳೆ, ಬೆಳೆಯಿಂದ ಹಿಡಿದು ರಾಜಕೀಯದ ವಿಷಯವನ್ನು ಕೂಡ ಭವಿಷ್ಯ ನುಡಿಯುವ ಆಚರಣೆ. ಹತ್ತಾರು ಸಾವಿರ ಜನ ಶಾಂತ ರೀತಿಯಿಂದ ಒಂದು ಚೂರು ಸಪ್ಪಳ ಮಾಡದೆ ಕೂತುಕೊಂಡು ಕೇಳುತ್ತಾರೆ. ಯಾವ ಮಾಧ್ಯಮದ ಸಹಾಯವೂ ಇಲ್ಲದೇ ಅಷ್ಟೂ ಜನರಿಗೆ “ನುಡಿ” ಕೇಳುತ್ತದೆ.
ಹಿಂದೊಮ್ಮೆ ಇಂದಿರಾಗಾಂಧಿ ಪ್ರಧಾನಿಯಾಗುವ ಹಿಂದಿನ ವರ್ಷ “ನುಡಿ ಹೇಳುವವನು” ಎಲ್ಲ ಗಂಡಸರ ಟೊಪ್ಪಿಗೆಯನ್ನು ತಾನೆ ಹಾಕಿಕೊಂಡು ಕೂತುಬಿಟ್ಟ ಎಂದು ನಮ್ಮ ಅಜ್ಜ ಹೇಳುತ್ತಿದ್ದರು. ಇದೇ ವರ್ಷ “ರೊಕ್ಕ ರೊಕ್ಕ” ಎಂದು ಅರಚಾಡಿದ್ದನ್ನು ನನ್ನ ಕಣ್ಣಾರೆ ಕಂಡಿದ್ದೆನೆ.
ಅಲ್ಲಿ ನುಡಿ ಹೇಳುವವನನ್ನು “ಘೂಳಿ” ಎಂದು ಕರೆಯುತ್ತಾರೆ. ಸಾಮನ್ಯವಾಗಿ ೩ ಜನ ಘೂಳಿಗಳು ಇರುತ್ತಾರೆ. ಒಬ್ಬ ಮಳೆಯನ್ನು ಮತ್ತೊಬ್ಬ ಬೆಳೆಯನ್ನು, ಮೊಗದೊಬ್ಬ ಜಾನುವಾರುಗಳ ಬಗ್ಗೆ ಹೇಳುತ್ತಾನೆ.
ಘೂಳಿಯ ಮೈಯಲ್ಲಿ ದೇವರು ಬಂದು ಎಲ್ಲವನ್ನು ನುಡಿಸುತ್ತಾನೆ ಎನ್ನುವುದು ಪ್ರತೀತಿ. ನುಡಿ ಹೇಳುವವನ ಹಾವ ಭಾವ ನೊಡಲು ನನಗೆ ಇವತ್ತಿಗೂ ಕಾತರತೆ. “ತಮ್ಯಾ ತಮ್ಯಾ ಸುರ್ಯಾಪಾನ್ ಬೆಳದವ ಸತ್ತೊ ಸತ್ತೊ”, “ಖಬ್ಬ ಬಂಗಾರ ಬಂಗಾರ” ಎಂದು ಹೇಳುವ ಶೈಲಿ, ಅವನ ಆ ಗಹಗಹಿಸುವ ನಗು ಮತ್ತು ಆ ಡೊಳ್ಳಿನ ಶಬ್ದ “ಡುಮ್ ತಾಕ್ ತಾಕ್ ಡುಮ್” (ಅಂದರೆ ” ಬ್ರಹ್ಮ ದೊಡ್ಡವ ದೊಡ್ಡವ” ಎಂಬ ಶಬ್ದ ಡೊಳ್ಳಿನಿಂದ ಹೊಮ್ಮುತ್ತದೆ), ಆ ದೀಪಾಲಂಕಾರ ನೋಡಲೆರಡು ಕಣ್ಣು ಸಾಲದು.
ಘೂಳಿ “ರುದ್ರ ಕಟ್ಟೆಯ” ಮೇಲೆ ನಿಂತು ಬಿಸಿ ಬಿಸಿ ಅನ್ನದಲ್ಲಿ ಕೈ ಹಾಕಿ ಯಾವುದಾದರೊಂದು ದಿಕ್ಕಿಗೆ ಎಸೆಯುತ್ತಾನೆ, ಮಡಕೆಯ ನೀರನ್ನು ತನ್ನ ಮೈ ಮೇಲೆ ಹಾಕಿಕೊಳ್ಳುತ್ತಾನೆ.. ಇದೆಲ್ಲ ಮಳೆಯ ಭವಿಷ್ಯ. ಹೀಗೆ ಅನೇಕ ತರಹದಲ್ಲಿ ನುಡಿ ಹೇಳುತ್ತಾರೆ. ಅವನ ಮಾತೇ ರೈತರಿಗೆ ಭವಿಷ್ಯ.
ಭೇಟಿ:-
ನಮ್ಮೂರಲ್ಲಿ ಮಹಾಲಕ್ಷ್ಮಿ ಮತ್ತು ಸಂಗಮೇಶ್ವರ ಗ್ರಾಮ ದೇವತೆ ಮತ್ತು ದೇವರು. ಭೇಟಿ ದೀಪಾವಳಿಯಂದು ನಡೆಯುವ ಆಚರಣೆ. ಭೀಮಾ ನದಿಯ ದಡದಲ್ಲಿರುವ ದೇವಸ್ಥಾನಕ್ಕೆ ಸಂಗಮೇಶ್ವರ ದೇವರು ಚತುರ್ದಶಿ ದಿನ ಪಲ್ಲಕ್ಕಿಯಲ್ಲಿ ಹೋಗುತ್ತಾನೆ, ಮಹಾಲಕ್ಷ್ಮಿ ಊರ ಹೊರಗಿನ ದೇವಸ್ಥಾನಕ್ಕೆ ಹೋಗುತ್ತಾಳೆ, ಅಮವಾಸ್ಯೆಯಂದು ನದಿಯಲ್ಲಿ ಮತ್ತು ಊರ ಹೊರಗಿನ ದೇವಸ್ಥಾನದಲ್ಲಿ ದೇವರ ಮೇಲೆ ದೇವರನ್ನು ಕೂಡಿಸುತ್ತಾರೆ. ಅವತ್ತು ಎಲ್ಲರು ನದಿಗೆ ಹೋಗಿ ದರ್ಶನ ಪಡೆಯುತ್ತಾರೆ.. ಅದರ ಮರು ದಿವಸವೇ ದೀಪಾವಳಿ ಪ್ರತಿಪದ.
ಅವತ್ತು ಸಂಜೆ ಊರ ಜನರೆಲ್ಲ ಹಳ್ಳದಲ್ಲಿ (ಊರ ಪಕ್ಕದಲ್ಲಿರುವ ಹಳ್ಳ, ಈಗಿನ ಮರುಳು ಧಂದೆ ಮತ್ತು ಸರ್ಕಾರದ ಬ್ರಿಡ್ಜ್ ನಿಂದ ತನ್ನ ಸ್ವರೂಪ ಕಳೆದುಕೊಂಡ ಪಾಪಿ!!) ಸೇರುತ್ತಾರೆ. ಅಲ್ಲೇ ಪಟಾಕಿ ಸಿಡಿಸಿ ಸಂಭ್ರಮಿಸುತ್ತೇವೆ, ಸ್ವಲ್ಪ ಹೊತ್ತಿನಲ್ಲೇ ಸಂಗಮೇಶ್ವರ ಮತ್ತು ಮಹಾಲಕ್ಷ್ಮಿ ಪಲ್ಲಕ್ಕಿಗಳು ಭೇಟಿಯಾಗುತ್ತವೆ .
ಇದರ ಅರ್ಥ ನಮ್ಮೂರಲ್ಲಿ ಹೆಚ್ಚಿನ ಜನ ಕುರುಬರು ಮತ್ತು ಗಾಣಿಗರು, ಕುರುಬರ ದೇವರು ಮಹಾಲಕ್ಷ್ಮಿ ಮತ್ತು ಗಾಣಿಗರ ದೇವರು ಸಂಗಮೇಶ್ವರ, ಇವರ ಸಾಮರಸ್ಯದ ಪ್ರತೀಕ ಮತ್ತು ಊರಿನ ಎಲ್ಲಾ ಜನರು ಅಲ್ಲಿ ಬಂದು ಭೇಟಿಯಾಗುವುದರಿಂದ ಅದನ್ನು ಭೇಟಿ ಎಂದು ಕರೆದಿರಬಹುದು. ಆ ಸಂದರ್ಭದಲ್ಲಿ ಮತ್ತೊಮ್ಮೆ “ನುಡಿ” ಆಗುತ್ತದೆ. ಮತ್ತೆ ಮಳೆ, ಬೆಳೆಯ ಬಗ್ಗೆ ದೈವ ನುಡಿಯುತ್ತದೆ.
ಇದು ನಮ್ಮ ದೀಪಾವಳಿ…
ಇವೆರಡಲ್ಲದೆ ಅನೇಕ ಆಚರಣೆಗಳು ನಮ್ಮಲ್ಲಿವೆ, ಪ್ರಮುಖವಾದವುಗಳನ್ನು ಇಲ್ಲಿ ಚಿತ್ರಿಸಿದ್ದೆನೆ
ಯಾವ ವೈಚಾರಿಕ ಏನೆಂದರೆನು ಅವರ ಅನುಭಾವವ ಅವರು ಬಿಡೆರು. ಅದುವೇ ಅವರಿಗೆ ಬದುಕು… ಅದುವೇ ಸತ್ಯ…
ಚಿತ್ರಕೃಪೆ :- kannadigaworld.com