2004ರಲ್ಲಿ ಆಗಿದ್ದು, 2019ರಲ್ಲಿ ಆಗದಿದ್ದರೆ… ಭಾರತ ತಲೆ ಎತ್ತಿ ನಿಲ್ಲಬಹುದು..!
– ಕೆ ಎಸ್ ರಾಘವೇಂದ್ರ ನಾವಡ,ಹೊರನಾಡು
2004 ನೇ ಇಸವಿ ಕಣ್ಮುಂದೆ ಬರುತ್ತೆ! ಲೋಕಸಭೆಗೆ ಅವಧಿಪೂರ್ವ ಚುನಾವಣೆ ಘೋಷಿಸಿದ ಭಾಜಪಾ ಸರ್ಕಾರ. “ಪ್ರಕಾಶಿಸುತ್ತಿದೆ ಭಾರತ”ಎಂಬ ಭಾಜಪದವರ ಸ್ಲೋಗನ್…
ಪ್ರಧಾನ ಮಂತ್ರಿ ಅಭ್ಯರ್ಥಿಯಾಗಿ ಲಾಲ ಕೃಷ್ಣ ಅಡ್ವಾಣಿ ಹೆಸರು ಘೋಷಣೆ.. ಮತಕೇಳಲು ಬೆನ್ನ ಹಿಂದಿದ್ದ ಸಾಲು ಸಾಲು ಅಭಿವೃದ್ಧಿ ಯೋಜನೆಗಳ ಸಮರ್ಪಕ ಅನುಷ್ಠಾನ.. ಶತ್ರುಗಳೂ ಒಪ್ಪುವ ಅಟಲ್ ಬಿಹಾರೀ ವಾಜಪೇಯಿಯವರ ಸ್ನೇಹ ಬಂಧನ.ಎಲ್ಲಾ ಮೈತ್ರಿ ಪಕ್ಷಗಳೂ ಮತ್ತೊಮ್ಮೆ ಒಟ್ಟಿಗೇ ಚುನಾವಣೆಯಲ್ಲಿ ಸ್ಪರ್ಧಿಸುವ ನಿರ್ಧಾರ ತೆಗೆದುಕೊಂಡಿದ್ದು.ಎಲ್ಲವೂ ಸರಿಯೇ..!! ವಾಜಪೇಯಿಯವರು ಮತ್ತೊಮ್ಮೆ ಆರಿಸಿಬರಲು ಸಾಕಷ್ಟು ಅಂಶಗಳು ನೆರವಿಗಿದ್ದವು! ಆದರೆ ಬೇಕಾದುದೇ ಇರಲಿಲ್ಲ! ಸ್ವತಃ ವಾಜಪೇಯಿಯವರೇ ಲೋಕಸಭೆಯ ಅವಧಿ ಪೂರ್ವ ವಿಸರ್ಜನೆಗೆ ವಿರೋಧ ವ್ಯಕ್ತಪಡಿಸಿದ್ದರು.ಆಡಳಿತಾರಂಭದ ದಿನಗಳಲ್ಲಿ ಭಾರತಾದ್ಯಂತ ಇದ್ದ ಕೇಂದ್ರ ಸರ್ಕಾರದ ಪರವಾದ ಅಲೆ ಅಥವಾ “ಆಡಳಿತದ ಪರ ಅಲೆ”ಎಂಬ ಭದ್ರವಾದ ಗೋಡೆಯಲ್ಲಿ ಸಣ್ಣ ಸಣ್ಣ ಬಿರುಕುಗಳು ಕಾಣತೊಡಗಿದ್ದವು. ಜನ ಬದಲಾವಣೆಯನ್ನು ಬಯಸುತ್ತಿದ್ದುದು ಸ್ಪಷ್ಟವಾಗಿ ಗೋಚರಿಸುತ್ತಿತ್ತು! “ಯಾಕೋ ಎಲ್ಲಿಯೋ ಏನೋ ಎಡವಟ್ಟಿದೆ” ಎಂಬುದು ಭಾಜಪಾದ “ಚಿಂತಕರ ಚಾವಡಿ”ಗೆ ಗೊತ್ತಾಗದಿದ್ದರೂ ವಾಜಪೇಯಿಯವರ ಸೂಕ್ಷ್ಮ ಮನಸ್ಸಿಗೆ ಹೊಳೆದು ಬಿಟ್ಟಿತ್ತು.
ಆದರೆ “ಇಷ್ಟು ಬೇಗ ಲೋಕಸಭಾ ವಿಸರ್ಜನೆ ಹಾಗೂ ಚುನಾವಣಾ ದಿನಾಂಕದ ಘೋಷಣೆ ಬೇಡ.ಇನ್ನಾರು ತಿಂಗಳುಗಳ ಕಾಲದಲ್ಲಿ ಮತ್ತಷ್ಟು ಕೆಲಸಗಳಿಂದ ಜನ ಮಾನಸದಲ್ಲಿ ಬದಲಾವಣೆಗೆ ಕಾರಣರಾಗಿ ಪುನಃ ಅಧಿಕಾರ ಹಿಡಿಯೋಣ”ಎಂಬ ವಾಜಪೇಯಿಯವರ ಎಚ್ಚರಿಕೆ ಪೂರಿತ ಜತನದ ಮಾತುಗಳು ಭಾಜಪಾದ “ಚಿಂತಕರ ಚಾವಡಿ”(ಅವಧಿಪೂರ್ವ ಚುನಾವಣೆ ಘೋಷಣೆಯ ಹಿಂದಿದ್ದ ಮಹಾಮಸ್ತಿಷ್ಕಗಳು ಲಾಲ್ ಕೃಷ್ಣ ಅಡ್ವಾಣಿ ಹಾಗೂ ಕರ್ನಾಟಕದಿಂದ ಆರಿಸಿ ಹೋಗಿದ್ದ ಲೋಕಸಭಾ ಸದಸ್ಯ ಅನಂತ ಕುಮಾರದಾಗಿತ್ತು ಎಂಬ ಊಹಾತ್ಮಕ ಹೇಳಿಕೆಗಳೂ ಇವೆ!)ಗ ಅರಿವಾಗದೇ,ಜಾಣ ಕಿವಿಡುತನ ಮುಂದುವರೆದು, ಚುನಾವಣೆ ನಡೆದು.. ಭಾಜಪಾ ಮಕಾಡೆ ಮಲಗಿದ್ದೂ ಆಯ್ತು..!! ಪ್ರಧಾನಿ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಅಡ್ವಾಣಿಯನ್ನು ಮುಂದೆ ತೋರಿಸಿದ್ದೆಂಬ ತಪ್ಪಿನೊಂದಿಗೆ ..
(ವಾಜಪೇಯಿಯವರೂ ಮನಗಂಡಿದ್ದ ) ಆಡಳಿತ ವಿರೋಧಿ ಅಲೆಯೂ ಸೇರಿಕೊಂಡು.. ಭಾರತದಲ್ಲಿ “ಮಹಾ ದುರಂತ”ವೊಂದು ಸಂಭವಿಸಿತು! ಯು.ಪಿ.ಎ. ರಂಗ ಅಧಿಕಾರಕ್ಕೆ ಬಂದು ಮನಮೋಹನಸಿಂಗ್ ಪ್ರಧಾನಿಯಾದರು. ಸ್ವತಃ “ಮಹಾ ಪ್ರಾಮಾಣಿಕನಾದ ಮನುಷ್ಯನೂ ಸಹ ಕಳ್ಳರನ್ನು ಪೋಷಿಸಬಲ್ಲ”ಎಂಬ ಶತಮಾನದ ಅರಿವಿಗೆ ಮನಮೋಹನಸಿಂಗ ಕಾರಣರಾದದ್ದು ಭಾರತದ ದುರ್ದೈವ! “ವಿಶ್ವ ಶ್ರೇಷ್ಠ ಅರ್ಥಶಾಸ್ತ್ರಜ್ಞ”ನ ಸರ್ಕಾರವೊಂದು “ವಿಶ್ವ ಶ್ರೇಷ್ಠ ಪ್ರಜಾಸತ್ತೆ“ ಯಲ್ಲಿ ಕೋಟಿಗಟ್ಟಲೆ ಹಣದ 2G,3G ತರಂಗಾಂತರ, ಕಲ್ಲಿದ್ದಲು, ಯೂರಿಯಾ ಮುಂತಾದ ಹಗರಣಗಳಿಗೆ ಕಾರಣವಾಗುವುದೆಂದರೆ? ಆ ಹತ್ತೂ ವರ್ಷಗಳೂ ಮನಮೋಹನಸಿಂಗರು ಭಾರತವನ್ನು ಪ್ರತಿನಿಧಿಸಲೇ ಇಲ್ಲ..!! ಅವರು ಪ್ರತಿನಿಧಿಸಿದ್ದು ಕಾಂಗ್ರೆಸ್ ಎಂಬ ಮಹಾ ಪಕ್ಷವನ್ನು. ಭಾರತಕ್ಕೆಸ್ವಾತಂತ್ರ್ರ್ಯ ತಂದುಕೊಟ್ಟ ಪಕ್ಷವೇ ಭಾರತದಲ್ಲಿ 10 ವರ್ಷಗಳ ಕಾಲ ಪರಿಪೂರ್ಣ ಭ್ರಷ್ಠ ಸರಕಾರವನ್ನು ನೀಡುತ್ತದೆ ಎಂದರೆ ವಿಪರ್ಯಾಸವಲ್ಲದೇ ಇನ್ನೇನು?
ಭಾರತಕ್ಕೊಂದು ಧೀಮಂತ ನೇತೃತ್ವನ್ನು ಕೊಟ್ಟಿದ್ದ, ಅಂತರಾಷ್ಟ್ರೀಯವಾಗಿ ಭಾರತಕ್ಕೊಂದು ಸೂಕ್ತ ನೆಲೆಯನ್ನು ದೊರಕಿಸಿಕೊಟ್ಟು, ಭಾರತೀಯರ ಆತ್ಮಸಾಕ್ಷಿ ಅಸ್ಮಿತೆಗಳು ಎದ್ದುಕುಣಿದಾಡುವಂತೆ ಮಾಡಿದ್ದ ವಾಜಪೇಯೀ ಸರ್ಕಾರಕ್ಕೆ ಆ ಪರಿಯಾದ ಶೋಚನೀಯ ಸೋಲು ಒದಗಿದ್ಯಾಕೆ? ಆ ದಿನಗಳಲ್ಲಿ ಭಾರತದಲ್ಲಿನ ಈ ಚುನಾವಣಾ ಫಲಿತಾಂಶಕ್ಕೆ ಜಗತ್ತೇ ನಿಬ್ಬೆರಗಾಗಿ..“ಪ್ರಜಾಸತ್ತೆಯ ಬಹುಮುಖ್ಯ ಪರಿಣಾಮ”.. “ಪ್ರಜೆಗಳೇ ಪ್ರಭುಗಳಾದ ಚುನಾವಣೆ” ಎಂದೆಲ್ಲಾ ವಿರೋಧ ಪಕ್ಷಗಳಿಂದ ಹೊಗಳಿಸಿಕೊಂಡ ಚುನಾವಣೆ ಕಲಿಸಿಕೊಟ್ಟ ಪಾಠವೇನೆಂಬುದು ಗೊತ್ತೆ? ಯಾರಿಗೂ ಅತಿಯಾದ ಆತ್ಮವಿಶ್ವಾಸ ಸಲ್ಲದು.. ಎಂಬ ಮಹಾಪಾಠ.ಆ ನಂತರವೇ “ಜಿನ್ನಾ ಒಬ್ಬ ಮಹಾ ವ್ಯಕ್ತಿ ಆಗಿದ್ದರು”ಎಂದು ಪೂರ್ವ ಅಖಂಡ ಭಾರತದಲ್ಲಿದ್ದ ಈಗಿನ ಪಾಕಿಸ್ತಾನದಲ್ಲಿರುವ ತನ್ನ ಪೂರ್ವಜರ ನೆಲೆಯನ್ನು ಭೇಟಿಯಾಗಿ ಅಡ್ವಾಣಿ ಹೇಳಿದ್ದು.ರಾಜಕೀಯವಾಗಿ ಪ್ರಸ್ತುತ ಸನ್ನಿವೇಶದಲ್ಲಿ ಹಾನಿಕಾರಕವಾಗಿದ್ದ ತನ್ನ ವ್ಯಕ್ತಿತ್ವವನ್ನು ಬದಲಿಸಿಕೊಳ್ಳಲು ಅಡ್ವಾಣಿ ಹೊರಟು ಕೊನೆಗೆ ಅಲ್ಲಿಯೂ ಸಲ್ಲದೇ ಇಲ್ಲಿಯೂ ಸಲ್ಲದೇ.. (ರಾಷ್ಟ್ರಪತಿ ಅಭ್ಯರ್ಥಿಯೆಂದು… ಸ್ವಲ್ಪ ದಿನ ಭಾಜಪಾದ ರಾಷ್ಟ್ರಪತಿ ಅಭ್ಯರ್ಥಿಗಳ ಪಟ್ಟಿಯಲ್ಲಿದ್ದದ್ದೇ ಸದ್ಯದ ಅವರ ಸಾಧನೆ!) ರಾಮ ಜನ್ಮಭೂಮಿಯ ತಗಾದೆಯಿಂದಾಗಿ ಅದೂ ಸಾಧ್ಯವಾಗದೆ.. ಈಗ ತಾವೇ ಅಪ್ರಸ್ತುತ ರಾಗಿದ್ದು..!! ಭಾಜಪಾದ ಸ್ಥಾಪಕಾಗ್ರಸೇನಾನಿಗಳಿಬ್ಬರೂ ಒಟ್ಟಿಗೇ ನೇಪಥ್ಯಕ್ಕೆ ಸರಿಯುವಂತಾಗಿದ್ದು2004 ಚುನಾವಣೆಯ ಮಹಾ ಪಾಠ..!!
ಪುನಃ 2004 ಬಾರದಿರಲಿ… ಬಹುಜನ ಹಿತಾಯ ಸುಖಾಯ… ಭಾರತೀಯರ ಈಗಿನ ನೆಮ್ಮದಿಯ ಸ್ವರ ಇಂಪು ಕಳೆದುಕೊಳ್ಳದಿರಲಿ ! ಮೋದಿ.. ತನ್ಮೂಲಕದ ಭಾರತ ಗಾನಕ್ಕೆ ವಿಶ್ವವೇ ನಲಿದಾಡಲಿ ಎಂಬುದು ಕಾಲದ ಕನ್ನಡಿಯ ಆಶಯ..!!
ಏಕೆಂದರೆ ಇತ್ತೀಚೆಗಷ್ಟೇ ಭಾರತೀಯರ ಆತ್ಮಸಾಕ್ಷಿ ಹಾಗೂ ಅಸ್ಮಿತೆಗಳು ಬೆಳಗತೊಡಗಿವೆ.. ಭಾರತ ಒಂದು “ ಕಡೆಗಣಿಸಲಾಗದ ರಾಷ್ಟ್ರ”ವೆಂಬುದು ವಿಶ್ವ ನಾಯಕರಿಗೆ ಮನವರಿಕೆಯಾಗತೊಡಗಿವೆ. ಮೋದಿ “ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ” ವಾಗಿ ಬಹು ಪ್ರಭಾವೀ ನಾಯಕರಾಗಿ ಬೆಳೆಯತೊಡಗಿದ್ದಾರೆ!
ನೆಹರೂರವರಿಗೂ ಅಂತರಾಷ್ಟ್ರೀಯವಾಗಿ ತನ್ನ ಚರಿಷ್ಮಾವನ್ನು ರಕ್ಷಿಸಿಕೊಳ್ಳಬೇಕಾದ ಹಪಹಪಿ ಇದ್ದುದಕ್ಕೇ ಕಾಶ್ಮೀರ ಸಮಸ್ಯೆಯನ್ನು ವಿಶ್ವಸಂಸ್ಥೆಯ ಮುಂದಿರಿಸಿದ್ದು.. ಭಾರತದ ಆತ್ಮಸಾಕ್ಷಿಯನ್ನೇ ಬೇರೆಯವರಿಗೆ ಒತ್ತೆ ಇಟ್ಟದ್ದು..! ಆದರೆ ಅದ್ಯಾವುದೇ ಹಪಾಹಪಿ ಮೋದಿಯವರಿಗೆ ಇದ್ದಂತೆ ಕಾಣುತ್ತಿಲ್ಲ.. “ ವಸುದೈವ ಕುಟುಂಬಕಂ” ಎಂದಿದ್ದು ಸನಾತನ ಧರ್ಮ….. “ಎಲ್ಲರೂ ಒಟ್ಟಾಗಿಯೇ ವಿಶ್ವದ ಸಮಸ್ಯೆಗಳನ್ನೆದುರಿಸೋಣ “ ಎಂದಿದ್ದು ಮೋದಿ..! ಹೇಗಿದ್ದರೂ “ಇಸ್ಲಾಂ ಭಯೋದ್ಪಾಕತೆ ” ಎಂಬುದು ಐರೋಪ್ಯ ಹಾಗೂ ಪಾಶ್ಚಿಮಾತ್ಯ ದೇಶಗಳೆಡನ್ನೂ ಕಾಡುತ್ತಿರುವ ಪ್ರಶ್ನೆ..! ಅದಕ್ಕೆ ತಕ್ಕದಾಗಿ ಉತ್ತರಿಸಲು ಎಲ್ಲಾ ದೇಶಗಳನ್ನೂ ಭಾರತದೊಂದಿಗೆ ಸಮೀಕರಿಸಲು ವಿಶ್ವ ಪ್ರಯತ್ನ ಮಾಡುತ್ತಿರುವ ಮೋದಿ ಜಿ..!! ಮುಂದಿನ ವರುಷಗಳಲ್ಲಿ “ ಭಾರತ ವಿಶ್ವದ ನಾಯಕ “ ಆಗುತ್ತದೆ ಎಂಬ ಪ್ರಪಂಚದ ಮಾತು ಸತ್ಯವಾಗಲಿ ಎಂಬುದು ಕಾಲದ ಕನ್ನಡಿಯ ಆಶಯವಷ್ಟೇ ಅಲ್ಲ… ಸಮಸ್ತ ಭಾರತೀಯರದ್ದೂ ಸಹ.!! ಆದರೆ ಅದಾಗಲೂ ಇನ್ನೂ ಬಹಳ ಕಠಿಣ ಪ್ರಯತ್ನಗಳು ಆಗಬೇಕು..!
ದೇಶ ಹಸಿವಾಗಿದ್ದುಕೊಂಡು, ಪ್ರಪಂಚಕ್ಕೆ ನಾಯಕನಾದರೆ ಏನು ಪ್ರಯೋಜನ? ಎಂಬುದು ಮತ್ತೊಂದು ಪ್ರಶ್ನೆ..! ನಿಜ.. ಜಪಾನ್ ಎಡವಿಬಿದ್ದಂತೆ (2 ನೇ ಮಹಾಯುದ್ದದಸಂದರ್ಭದಲ್ಲಿ) ಚೀನಾ ತನ್ನನ್ನೇ ತಾನು ಕೊಂದುಕೊಂಡಂತೆ (ಮಾವೋತ್ಸೇತುಂಗನ ಕಾಲದಲ್ಲಾದ ಸಾಂಸ್ಕೃತಿಕ ಕ್ರಾಂತಿಯಿಂದ) ಭಾರತವೇನೂ ಆ ಪರಿಯಾಗಿ ತಪ್ಪು ಹೆಜ್ಜೆಗಳನ್ನಿಟ್ಟಿಲ್ಲ! ಆದರೂ ದೇಶದಲ್ಲಿ ಪ್ರತಿಯೊಬ್ಬ ಶ್ರೀ ಸಾಮಾನ್ಯನೂ ನೆಮ್ಮದಿಯಿಂದ ನಿದ್ರಿಸುವಂತೆ ಆಹಾರ-ವಸ್ತ್ರ ಹಾಗೂ ವಸತಿಗಳ ಸಮರ್ಪಕ ಅನುಷ್ಠಾನವಾಗಿಲ್ಲ.. ದೇಶದ ಸಮಸ್ಯೆಗಳು ಹಲವಾರಿವೆ.! ಯಾವುದೂ ಮುಗಿಯುವುದಿಲ್ಲ.. ಎಲ್ಲಾ ಸರಿಯೇ.. ವಿಶ್ವನಾಯಕನಾಗುವುದಕ್ಕಿಂತಲೂ ಮೊದಲು ಭಾರೆತದ ಆಂತರಿಕ ಸಮಸ್ಯೆಗಳು ನಿವಾರಣೆಗೊಳ್ಳಬೇಕು..
ಕೇಂದ್ರ ಸರ್ಕಾರದ ಯಾವ ಯೋಜನೆಗಳದ್ದೂ ಸಮರ್ಪಕವಾಗಿ ಅನುಷ್ಠಾನಗೊಂಡರೂ ಜನರನ್ನು ತಲುಪದಿರುವುದೂ ದುರಂತವೇ.. ನೋಟು ಅಮಾನ್ಯ, ಜನ ಧನ ಯೋಜನೆ, ಜಿ.ಎಸ್.ಟಿ. ಸ್ವಚ್ಚ ಭಾರತ್, ನಮಾಮಿ ಗಂಗಾ, ವಸತಿ-ಶೌಚಾಲಯ ಯೋಜನೆ, ಪಿಂಚಣಿ ಯೋಚನೆಗಳೇ ಮುಂತಾದ ಹತ್ತು ಹಲವು ಯೋಜನೆಗಳಿದ್ದರೂ.. ಜನ ಸಾಮಾನ್ಯರು ಅದರ ಫಲಾನುಭವಿಗಳಾಗಲೇಬೇಕು.. ಇಲ್ಲದಿದ್ದಲ್ಲಿ 2004 ಮತ್ತೊಮ್ಮೆ ಪುನರಾವರ್ತಿಸುತ್ತದೆ! ಆಗಲೂ ಆಗಿದ್ದು ಇದೇ.. ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಂಡಿದ್ರೂ ನಾಯಕರು ಅವುಗಳ ಅನುಕೂಲತೆಗಳ ಬಗ್ಗೆ ಜನರಲ್ಲಿ ಸ್ಪಷ್ಟಭಾವನೆಗಳನ್ನು ಉದಿಸಲು ಪ್ರಯತ್ನಿಸದಿದ್ದರೆ ಆ ಯೋಜನೆಯ ಪರಿಣಾಮವೇನು? ಎಂಬುದು ತಿಳಿಯಲಾರದಷ್ಟು ಮೂರ್ಖರೇ ರಾಜಕೀಯನಾಯಕರು !!
ಒಬ್ಬ ಯೋಗಿ. ಒಬ್ಬ ಮೋದಿ.. ಒಬ್ಬ ರಾಜನಾಥ.. ಮತ್ತೊಬ್ಬ ಅರುಣ ಜೈಟ್ಲಿಯೋ ಅಥವಾ ಇನ್ನಾರೇ ಆಗಲಿ.. ಅವರೊಂದಿಗೇ ಸಮಸ್ತ ಸಂಪುಟವೂ ಒಂದೇ ಲಕ್ಷ್ಯದತ್ತ –ಒಂದೇವೇಗದಲ್ಲಿ ನಡೆದರೆ ಮಾತ್ರ ಭಾರತ ವಿಕಾಸ ಸಾಧ್ಯ..!! ಹೌದು.. 2014 ರ ಹಿಂದಿದ್ದ ಭಾರತ ಹೀಗಿಲ್ಲದಿದ್ದರೂ… ಹತ್ತು ಹಲವು ಸಮಸ್ಯೆಗಳು ತಲೆ ತಿನ್ನುತ್ತಲೇ ಇವೆ. ಜನಸಂಖ್ಯಾಸ್ಫೋಟದಿಂದಾಗಿ ಎಲ್ಲಾ ಯೋಜನೆಗಳೂ ಕುಂಟುತ್ತಿದ್ದರೂ.. ಏರುತ್ತಿರುವ ಜನಸಂಖ್ಯೆಯನ್ನೇ ಅಭಿವೃದ್ಧಿಯ ಮೆಟ್ಟಿಲುಗಳನ್ನಾಗಿ ಚೀನಾ ಮಾರ್ಪಡಿಡಸಿಕೊಂಡಿಲ್ಲವೇ ಎಂಬುದೂ ಗಮನಕ್ಕೆ ಬರಬೇಕು..! ಯೋಜನೆಗಳು ಅನುಷ್ಠಾನಗೊಳ್ಳುವ ಮೊದಲೇ ಕಾರ್ಯಕರ್ತರು ಜನಸಾಮಾನ್ಯರಲ್ಲಿ ಏಕಾಭಿಪ್ರಾಯದ ಬಗ್ಗೆ ಒಟ್ಟಾಗಿ ಕೆಲಸ ಮಾಡಬೇಕು.. ಜನಸಾಮಾನ್ಯರಿಗೆ ಯೋಜನೆಗಳನ್ನು ತಲುಪಿಸುವಲ್ಲಿ ರಾಷ್ತ್ರೀಯಕಾರ್ಯಕರ್ತರು ಸರ್ಕಾರ ಹಾಗೀ ಜನಸಾಮಾನ್ಯರ ನಡುವಿನ ಕೊಂಡಿಯಾಗಬೇಕು.. ಹಾಗಿದ್ದಲ್ಲೀಯೇ ಯೋಜನೆಗಳು ಸಮಾಜದ ಕಟ್ಟಕಡೆಯ ದರಿದ್ರರನ್ನೂ.. ದುರ್ಬಲರನ್ನೂ ಎಡತಾಕುವುದು!!
ಯಾರು ಏನೇ ಹೇಳಲಿ.. ಭಾರತ ಬದಲಾಗುತ್ತಿದೆ ! ಭಾರತೀಯರ ಮನಸ್ಥಿತಿ ಬದಲಾಗುತ್ತಿದೆ ! ಭಾರತೀಯರತ್ತ ವಿಶ್ವದ ದೃಷ್ಟಿಕೋನ ಬದಲಾಗುತ್ತಿದೆ! ಭಾರತದತ್ತ ವಿಶ್ವವೇ ಬದಲಾಗುತ್ತಿದೆ!! ಪ್ರಪಂಚದ ಸರ್ವಶ್ರೇಷ್ಟ ಪ್ರಜಾಪ್ರಭುತ್ವದ ಅಸ್ತಿತ್ವದ ಅರಿವು ವಿಶ್ವದ ಇತರೆ ನಾಯಕರುಗಳಿಗಾಗುತ್ತಿದೆ..! ಅಷ್ಟು ಸಾಕು..!! ಭಾರತೀಯರ ಸನಾತನ ಧರ್ಮ – ಯೋಗ ಹಾಗೂ ಅಸ್ಮಿತೆಗಳಿಗೀಗ ವಿಶ್ವ ಮನ್ನಣೆಯ ಕಾಲ.. ಶುಭ ಸಂದರ್ಭದಲ್ಲಿಯೇ ಕಾಲವೂ ಸ್ಪಲ್ಪ ಆನಂದವನ್ನು ಅನುಭವಿಸಲು ಸ್ವಲ್ಪ ನಿಲ್ಲಬಾರದೇಕೆ..!!
ಭಾರತದಂತ ಅಭಿವೃದ್ಧಿ ಶೀಲ ರಾಷ್ತ್ರವೊಂದನ್ನು ಇಡೀ ವಿಶ್ವವೇ ಮಾನ್ಯ ಮಾಡುತ್ತದೆಯೆಂದರೆ ಆ ರಾಷ್ಟ್ರವು ತನ್ನ ಅಸ್ತಿತ್ವಹಾಗೂ ಬೆಳವಣಿಗೆಗಳಿಂದ, ಚಿಂತನೆಗಳಿಂದ ಸಂಪೂರ್ಣ ವಿಶ್ವವನ್ನು ಪ್ರಭಾವಿಸುತ್ತಿದೆ ಎಂದೇ ಅರ್ಥ ! ನೆರೆಯ ಪಾಕಿಸ್ಥಾನ ಹಾಗೂ ಚೀನಾಗಳೆರಡೂ ಭಾರತದ ಮೇಲೆ ಕಾಲು ಕೆರೆದು ಕೊಂಡು ಜಗಳವಾಡಲು ಸೂಕ್ತ ಸನ್ನಿವೇಶಗಳನ್ನು ಸೃಷ್ಟಿಸಸುತ್ತಿರುವ ಸಂದರ್ಭದಲ್ಲಿ ವಿಶ್ವ ನಾಯಕರ ಸೂಕ್ತ ಮನ್ನಣೆ ಹಾಗೂ ಮೈತ್ರಿಗಳು ಭಾರತಕ್ಕೆ ಬೇಕು. ಅಮೇರಿಕಾ ಮತ್ತು ರಷ್ಯಾಗಳಂಥಹ ದೊಡ್ಡ ರಾಷ್ಷ್ರಗಳೊಂದಿಗೆ ಭೂತಾನ, ಇಸ್ರೇಲ್, ನೇಪಾಳ, ಶ್ರೀಲಂಕಾಗಳೂ ನಮಗೆ ಬೇಕಾಗುತ್ತವೆ ! ವಾಜಪೇಯಿಯವರ ನಂತರ ಭಾರತಕ್ಕೊಂದು ಅಂತರಾಷ್ಟ್ರೀಯ ಅಸ್ಮಿತೆಯನ್ನು ತಂದುಕೊಟ್ಟವರೆಂದರೆ ಮೋದಿ ಮಾತ್ರ! ಈಗೀಗ ಭಾರತದ ವಿದೇಶಾಂಗ ನೀತಿಗೆ ಚಾಣಕ್ಯ ತಂತ್ರಗಳು ಊರುಗೋಲಾಗುತ್ತಿರುವುದು ಸನಾತನ ಧರ್ಮಕ್ಕೊಂದು ಸಂತಸದ ವಿಚಾರವಲ್ಲವೇ?
ಅಖಂಡ ಭಾರತದ ಕಲ್ಪನೆ ಈಗಿಲ್ಲವಾದರೂ ನಾವು ಜಗತ್ತಿಗೇ ಕೊಟ್ಟ “ ವಸುದೈವ ಕುಟುಂಬಕಂ “ ನೀತಿಗೆ ಇನ್ನೂ ಆಯುಷ್ಯವಿದೆ ಅಲ್ಲವೇ? ನೋಡೋಣ.. ಮೋದಿ ಕಾರ್ಯಗಳು ಭಾರತವನ್ನು ಎಲ್ಲಿಗೆ ತಂದು ನಿಲ್ಲಿಸುತ್ತವೆ ಎಂಬುದನ್ನು! ಒಂದು ಸಶಕ್ತ ಹಾಗೂ ಉತ್ಸಾಹೀದೇಶವಾಗಿ ಭಾರತದ ವಿಶ್ವನಾಯಕನ ಪಟ್ಟಕ್ಕೆ ಲಗ್ಗೆಹಾಕುವುದು ಸಂತಸವಲ್ಲದೇ ಇನ್ನೇನು..!!
ಕೊನೇಮಾತು: ದಲಿತರ ಮನೆಯಲ್ಲಿ ವಾಸ್ತವ್ಯ ಮಾಡಿ, ಬೆಳಿಗ್ಗೆ ಹೋಟೇಲಿನಿಂದ ತಿಂಡಿ ತಂದು ತಿಂದರೆಂಬ ಆರೋಪಕ್ಕೆ ಕಮಕ್ ಕಿಮಕ್ ಎನ್ನದ ಯಡಿಯೂರಪ್ಪಾದಿಗಳು.. ಸಿದ್ಧರಾಮಣ್ಣನ ಸರ್ಕಾರ ತಾವಾಗಿಯೇ ಕೋಲುಗಳನ್ನು ಕೊಟ್ಟು ಬೆನ್ನಿಗೆ ಹೊಡೆಯಲು ಹೇಳಿದರೂ..ಕೋಲುಗಳನ್ನೇ ಬಿಸಾಕಿ ತಮ್ಮ ಪಾಡಿಗೆ ತಾವು ಇರುತ್ತಿರುವುದು ಕಾಲದಕನ್ನಡಿಗೆ ಅರ್ಥವಾಗದ ವಿಚಾರ! “ನೀ ನನಗಾದರೆ ನಾ ನಿನಗೆ “ ಎಂಬಒಳ ಒಪ್ಪಂದವನ್ನೇನಾದರೂ ಭಾಜಪಾ ನಾಯಕರು ಸಿದ್ದಣ್ಣನೊಂದಿಗೆ ಮಾಡಿಕೊಂಡಿದ್ದದಾರೆಯೇ?
ರಾಜ್ಯದಲ್ಲಿವಿರೋಧಪಕ್ಷವಿರುವುದೇ ಅರಿವಾಗುತ್ತಿಲ್ಲವಲ್ಲ ಎಂಬ ಕಾಲದ ಕನ್ನಡಿಯ ಪ್ರಶ್ನೆಗೆ ಯಡಿಯೂರಪ್ಪಾದಿಗಳು … ಇಲ್ಲ ಕನ್ನಡಿ…ಸಿದ್ದಣ್ಣ ಭಾಜಫಾ ಕೋಟೆಯಲ್ಲಿ ಉಂಟು ಮಾಡಿರುವ ಬಿರುಕುಗಳನ್ನು ಸರಿಪಡಿಸಲೇ ಪುರುಸೊತ್ತಿಲ್ಲ.. ಇನ್ನು ಅವರನ್ನೆಲ್ಲಿಂದ ಕಾಯುವುದು ? ಎಂಬಪ್ರಶ್ನೆ ಸರಿಯಾದುದಾದರೂ … ಬಿರುಕುಗಳಿಗೆ ತೇಪೇ ಹಚ್ಚುವ ಕಾರ್ಯದಲ್ಲಿ.. ಗೋಡೆಯನ್ನೇ ಬೀಳಿಸದಿದ್ದರೆ ಸಾಕು..!! ಎಂದುಕೊಂಡು ಸುಮ್ಮನಾಗಬೇಕಾಯಿತು !!