ವಿಷಯದ ವಿವರಗಳಿಗೆ ದಾಟಿರಿ

ಜುಲೈ 31, 2017

1

ಹಣ್ಣಾದ ಬದುಕು; ಸಾಂಸ್ಕೃತಿಕ ರಾಜಕಾರಣದ ಬೆಳಕು

‍ನಿಲುಮೆ ಮೂಲಕ

– ಸಂತೋಷ್ ತಮ್ಮಯ್ಯ

ನಾಡಿನ ಖ್ಯಾತ ತತ್ವಶಾಸ್ತ್ರಜ್ಞರೊಬ್ಬರು ಕಲಾವಿಮರ್ಶಕ ಅನಂದ ಕೆಂಟಿಶ್ ಕುಮಾರಸ್ವಾಮಿಯವರನ್ನು ವಿವರಿಸುವುದು ಹೀಗೆ ; ಅಯೋಧ್ಯೆ ಕ್ಷೋಭೆಗೊಂಡಿತ್ತು. ಕೈಕೆಯಿಯ ಕೋಪ ಅರಮನೆಯ ಶಾಂತಿಯನ್ನು ತಿಂದು, ಪಟ್ಟಾಭಿಷೇಕದ ಹರ್ಷ ಕ್ಷಣಮಾತ್ರದಲ್ಲಿ ನೀರುಪಾಲಾಗಿ, ದಶರಥನಿಗೆ ಸಂದಿಗ್ದತೆ ಉಂಟಾಗಿ. ರಾಮನಿಗೆ ಕಾಡಿಗೆ ತೆರಳಲು ಸೂಚಿಸಿ ಆತ ಕುಸಿದು ಬಿದ್ದಿದ್ದ. ರಾಮ ಪಿತೃವಾಕ್ಯಪರಿಪಾಲನೆಗಾಗಿ ಕಾಡಿಗೆ ತೆರಳಿದ. ಇತ್ತ ಕುಸಿದಿದ್ದ ದಶರಥ ಅದೇ ಕೊರಗಿನಿಂದ ಕೊನೆಯುಸಿರೆಳದಿದ್ದ. ಅದೇ ಹೊತ್ತಿಗೆ ಕೈಕೆಯ ಮಗ ಭರತ ಸೋದರ ಶತ್ರುಘ್ನನೊಡನೆ ಕೇಕೆಯ ದೇಶಕ್ಕೆ ಹೋಗಿದ್ದನಲ್ಲ. ಅವರಿಗೆ ತುರ್ತು ಕರೆ ಹೋಯಿತು. ರಾಜಧಾನಿಗೆ ಕೂಡಲೇ ಮರಳಬೇಕೆಂಬ ಕರೆಗೆ ಸೋದರರಿಬ್ಬರೂ ಕುದುರೆಯೇರಿ ಅಯೋಧ್ಯೆಗೆ ದೌಢಾಯಿಸಿ ಬರುತ್ತಿದ್ದರು. ಇನ್ನೇನು ಕತ್ತಲಾಗುತ್ತಿದೆ ಎಂಬಷ್ಟರಲ್ಲಿ ಅವರು ಅಯೋಧ್ಯೆ ಹೊರವಲಯಕ್ಕೆ ಬಂದು ಮುಟ್ಟಿದ್ದರು. ಹೊರವಲಯದಲ್ಲೊಂದು ಭವನ. ಆ ಭವನಕ್ಕೊಬ್ಬ ಕಾವಲುಗಾರ. ಭವನದಲ್ಲಿ ಇದುವರೆಗೆ ಆಗಿಹೋದ ಇಕ್ಷ್ವಾಕು ವಂಶದ ಸಾಮ್ರಾಟರ ಪ್ರತಿಮೆಗಳ ಸಾಲುಗಳು. ಭರತನಿಗೆ ಏನನ್ನಿಸಿತೋ ಏನೊ ಶತ್ರುಘ್ನ ಬಂದದ್ದೇ ಇದೆ ಪೂರ್ವಿಕರಿಗೊಮ್ಮೆ ನಮಸ್ಕರಿಸಿ ಹೊರಡೋಣ ಎಂದ. ಕಾವಲುಗಾರ ದೊಂದಿ ತಂದ. ಸೋದರರು ಭವನ ಹೊಕ್ಕರು. ಉದ್ದಕ್ಕೆ ನಿಂತ ಇತಿಹಾಸಪುರುಷರು. ಅಣ್ಣತಮ್ಮರು ಕೊನೆಯಿಂದ ಅಜ್ಜಂದಿರನ್ನು ನೋಡುತ್ತಾ ಬಂದರು. ಪ್ರತಿಮೆಗಳನ್ನು ನೋಡುತ್ತಾ ಶತ್ರುಘ್ನ ಮೆಲುದನಿಯಲ್ಲಿ ಹೆಸರೆಣಿಸತೊಡಗಿದ, ಅಜ, ರಘು, ದಿಲೀಪ… ಅಷ್ಟರಲ್ಲಿ ಭರತ, ಅಲ್ಲಲ್ಲ ತಪ್ಪುಎಂದು ಮತ್ತೆ ಎಣಿಸಿ ನೋಡಿದ ಆತನೂ ತಪ್ಪಿದ. ದಶರಥನೂ ಕಾಲವಾಗಿ ಪ್ರತಿಮೆಯಾಗಿ ನಿಂತುಬಿಟ್ಟಿದ್ದಾನೆ ಎಂದು ಎಂದು ತಿಳಿಯದ ರಾಜಕುಮಾರರು ಮತ್ತೆ ಮತ್ತೆ ಲೆಕ್ಕ ತಪ್ಪಿದರು. ದೊಂದಿಯೂ ಇತ್ತು, ಬೆಳಕೂ ಇತ್ತು, ಆ ಭವನವನ್ನು ಅವರು ಎಷ್ಟೋ ಭಾರಿ ನೋಡಿದ್ದರು ಕೂಡಾ. ಆದರೂ ಲೆಕ್ಕ ತಪ್ಪಿದರು!

ಈ ಜಿಜ್ಞಾಸೆಯನ್ನು ಬಿಚ್ಚಿಟ್ಟವರು ಆನಂದ ಕೆಂಟಿಶ್ ಕುಮಾರಸ್ವಾಮಿಯವರು ಎಂದರು ಆ ಭಾಷಣಕಾರರು. ಅಂದರೆ ಸನಾತನ ಪರಂಪರೆಯಲ್ಲಿ ಮಾನವ ತದ್ರೂಪನ್ನು ಪ್ರತಿಮೆಯಾಗಿ ಕೆತ್ತುವ ಪರಂಪರೆ ಇರಲಿಲ್ಲ ಎಂಬುದನ್ನು ಆನಂದ ಕುಮಾರಸ್ವಾಮಿಯವರು ಶೋಧಿಸಿದ್ದರು.

ಪುರಾಣ ಕಥನ ವ್ಯಾಖ್ಯಾನಕ್ಕೆ, ವಿಮರ್ಷೆಗೆ ಆನಂದ ಕುಮಾರ ಸ್ವಾಮಿಯವರೇನೂ ಬೇಕಾಗಿಲ್ಲ. ಆದರೆ ಅದರ ಒಳಗನ್ನು ನೋಡಲು ಬೇಕಾಗುವವರು ಆನಂದ ಕುಮಾರ ಸ್ವಾಮಿಯಂಥವರೇ. ರಾಷ್ಟ್ರೀಯ ಪ್ರೇರಣೆಯೆಂಬುದೂ ಕೂಡಾ ಹಾಗೆಯೇ. ವ್ಯಕ್ತಿಗೆ, ಸಮಾಜಕ್ಕೆ ರಾಷ್ಟ್ರೀಯ ಪ್ರಜ್ಞೆ ಮೂಡಲು ನಾನಾ ಕಾರಣಗಳಿರಬಹುದು. ಒಬ್ಬೊಬ್ಬರಿಗೆ ಒಬ್ಬೊಬ್ಬರು ಪ್ರೇರಣೆಯಾಗಿರಬಹುದು. ಹಿಂದೂ ರಾಷ್ಟ್ರೀಯತೆಯೆಂಬುದು ಬಹುಹಿಂದೆಯೇ ಒಂದು ಚಳವಳಿಯಾಗಿ ರೂಪುಗೊಂಡಿರಲೂ ಬಹುದು. ಆದರೆ ಆ ಚಳವಳಿ, ಆ ಪ್ರೇರಣೆಯ ಒಳಗನ್ನು ನೋಡಲು, ಅದನ್ನು ಮತ್ತಷ್ಟು ಬಲಪಡಿಸಲು ದೀನದಯಾಳ್ ಉಪಾಧ್ಯಾಯರ ಚಿಂತನೆಗಳ ಮೊರೆ ಹೋಗದೆ ಬೇರೆ ದಾರಿ ಇಲ್ಲ. ನಾನೇಕೆ ರಾಷ್ಟ್ರವಾದಿ, ನಾವೇಕೆ ಹಿಂದೂ ಚಳವಳಿಯ ವಾಹಕರು, ರಾಷ್ಟ್ರವಾದದ ಕವಲುಗಳನ್ನು ತಿಳಿಯಲು ಆಧುನಿಕ ಭಾರತಕ್ಕೆ ದೀನ ದಯಾಳ ಉಪಾಧ್ಯಾಯರ ಚಿಂತನೆಗಳಷ್ಟು ಸಮಂಜಸವಾದ ಚಿಂತನೆ ಬೇರಿಲ್ಲ. ಕಲಾರಂಗಕ್ಕೆ ಆನಂದ ಕುಮಾರಸ್ವಾಮಿಯವರು ಹೇಗೋ ಭಾರತೀಯ ಸಾಮಾಜಿಕ ಮತ್ತು ರಾಜಕೀಯ ಚಿಂತನೆಗಳಿಗೆ ಪಂಡಿತ್ ದೀನದಯಾಳ ಉಪಾಧ್ಯಾಯರು ಹಾಗೆ.

ಪಂಡಿತ್ ದೀನ ದಯಾಳ್ ಉಪಾಧ್ಯಾಯರನ್ನು ಹಾಗೆ ರೂಪಿಸಿದ್ದು ಎರಡು ಸಂಗತಿಗಳು. ಒಂದು ಅವರ ಬಾಲ್ಯ ಮತ್ತೊಂದು ರಾಷ್ಟ್ರೀಯ ಸ್ವಯಂಸೇವಕ ಸಂಘ.

ಎರಡೂವರೆ ವರ್ಷಕ್ಕೆ ಪಿತೃವಿಯೋಗ, ಏಳನೇ ವರ್ಷಕ್ಕೆ ಮಾತೃವಿಯೋಗ, ಒಂಬತ್ತನೆ ವಯಸಿಗೆ ತಂದೆ-ತಾಯಿ ಎರಡೂ ಆಗಿದ್ದ ತಾತನ ಅಗಲಿಕೆ. ೧೫ನೇ ವಯಸ್ಸಿಗೆ ಮಾತೃಸ್ವರೂಪಿಯೂ ಪಾಲಕಿಯೂ ಆಗಿದ್ದ ಸೋದರತ್ತೆಯ ಮೃತ್ಯು. ಹದಿನೆಂಟನೇ ವರ್ಷಕ್ಕೆ ತನ್ನ ಸರ್ವಸ್ವವೂ ಅಗಿದ್ದ ತಮ್ಮನ ಅಕಾಲ ಮೃತ್ಯು. ಅದಾದ ಮರುವರ್ಷ ತನ್ನ ಏಕೈಕ ಆಸರೆಯಾಗಿದ್ದ ಅಜ್ಜಿಯ ಸಾವು. ೨೪ನೇ ವಯಸ್ಸಿಗೆ ಪ್ರೀತಿಯ ತಂಗಿಯ ಸಾವು. ಹೀಗೆ ಕಣ್ಣುಬಿಟ್ಟು ಲೋಕ ಅರಿವಾಗುವ ಹೊತ್ತಲ್ಲೇ ಕಾಣಬಾರದನ್ನು ದೀನದಯಾಳರು ಕಾಣಬೇಕಾಯಿತು. ಲೋಕದಲ್ಲಿ ಸಾವೊಂದೇ ಸತ್ಯ ಎಂಬಷ್ಟು ಹತ್ತಿರದಿಂದ ಸಾವನ್ನು ಕಂಡರು. ಮುಂದುವರಿಯುತ್ತಿದ್ದ ಸಾವಿನ ಸರಣಿಯಿಂದ ಬಾಲಕ ದೀನ ದಯಾಳ ಚಿಂತಿಸಿದ. ಅನ್ಯಮನಸ್ಕನಾದ. ಒಟ್ಟಿನಲ್ಲಿ ಬದುಕನ್ನು ವಿಧಿ ಇನ್ನಿಲ್ಲದಂತೆ ಆಡಿಸಿಬಿಟ್ಟಿತ್ತು. ಆದರೆ ದೀನ ದಯಾಳರು ಶವಗಳನ್ನು ನೋಡುತ್ತಾ ಗಟ್ಟಿಯಾದರು. ಬಾಲ್ಯಕಳೆದರು, ಯೌವನಕ್ಕೆ ಕಾಲಿಟ್ಟರು. ಹತ್ತನೇ ತರಗತಿ ಉತ್ತೀರ್ಣನಾದರು. ಪದವಿ ಮುಗಿಸಿ ಇಂಗ್ಲಿಷ್ ಸಾಹಿತ್ಯದಲ್ಲಿ ಎಂಎ ಮಾಡಿದರು.

ಸಾವುಗಳ ಸರಣಿ ಅವರನ್ನು ನಿರಂತರ ಅಲೆಮಾರಿಯನ್ನಾಗಿ ಮಾಡಿತ್ತು. ಹುಟ್ಟಿದ್ದು ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ನಗಲಾದಲ್ಲಿ. ಬೆಳೆದಿದ್ದು ರಾಜಾಸ್ಥಾನದ ಧನಕಿಯಾ ಎಂಬ ಗ್ರಾಮದಲ್ಲಿ. ಮುಂದೆ ಅವರ ಬದುಕು ಎಲ್ಲೂ ನಿಲ್ಲಲಿಲ್ಲ. ಧನಿಕಿಯಾದಿಂದ ಮಢೈ-ಗಂಗಾಪುರ-ಕೋಟಾ-ರಾಜಗಢ-ಸೀಕರ-ಪಿಲಾನಿ-ಆಗ್ರಾ-ಪ್ರಯಾಗಗಳಿಗೆ ನಡೆಸಿತು. ತಮ್ಮ ಶಿಕ್ಷಣ ಮುಗಿಯುವ ಹೊತ್ತಿಗೆ ವಿಧಿಯ ಲೀಲೆ ಅವರನ್ನು ಹನ್ನೊಂದಕ್ಕೂ ಹೆಚ್ಚಿನ ಊರುಗಳಿಗೆ ಓಡಿಸಿಬಿಟ್ಟಿತ್ತು. ಹತ್ತಿರದಿಂದ ಕಂಡ ಮರಣಗಳು, ಎಲ್ಲಿಯೂ ನಿಲ್ಲದಂತೆ ಮಾಡಿದ ಊರುಗಳು ಅವರನ್ನು ಹಣ್ಣು ಮಾಡಿತ್ತು. ಈ ಅನುಭವ ಮುಂದೆ ದೇಶ ಅವರನ್ನು ತತ್ತ್ವಶಾಸ್ತ್ರಜ್ಞ, ಮೌಲ್ಯಾಧಾರಿತ ರಾಜಕಾರಣಿ, ಆರ್ಥಿಕ-ಶಿಕ್ಷಣ ತಜ್ಞ, ರಾಷ್ಟ್ರವಾದಿ ಪತ್ರಕರ್ತ, ಸಂಘಟಕ, ಚಿಂತಕ, ದಾರ್ಶನಿಕ ಎಂದು ಕರೆಯುವಂತೆ ಮಾಡಿತು. ನೂರು ವರ್ಷಗಳ ನಂತರವೂ ಜನ ಅವರನ್ನು ಪ್ರಸ್ತುತ ಎಂದು ಮಾತಾಡಿಕೊಳ್ಳುವಂತೆ ಮಾಡಿತು.

ಆಗಷ್ಟೇ ಉನ್ನತ ಶಿಕ್ಷಣವನ್ನು ಮುಗಿಸಿದ್ದ ದೀನ ದಯಾಳರು ಯುವಕನಾಗಿದ್ದರು. ಬಯಸಿದ್ದರೆ ಸರಕಾರಿ ಕೆಲಸಕ್ಕೆ ಸೇರಿ ಜೀವನ ಸ್ಥಿರ ಮಾಡಿಕೊಳ್ಳಬಹುದಿತ್ತು. ತನ್ನನ್ನು ನಂಬಿಕೊಂಡ ಪರಿವಾರವಿತ್ತು. ಓದು ಮುಗಿಯುವುದನ್ನೇ ಕಾಯುತ್ತಿದ್ದ ಸೋದರ ಮಾವಂದಿರಿದ್ದರು. ಆದರೆ ಯುವಕ ದಯಾಳರ ದೃಷ್ಟಿ ಬೇರೊಂದೆಡೆ ಸ್ಥಿರವಾಗಿ ನಿಂತಿತ್ತು. ಹಿಂದೆ ಮುಂದೆ ನೋಡದೆ ಮಾವನಿಗೆ ಪತ್ರವೊಂದನ್ನು ಬರೆದರು. ಯಾವ ಸಮಾಜ ಹಾಗೂ ಧರ್ಮದ ರಕ್ಷಣೆಗಾಗಿ ರಾಮನು ವನವಾಸವನ್ನು ಸಹಿಸಿದನೋ, ಕೃಷ್ಣನು ಅನೇಕಾನೇಕ ಕಷ್ಟಗಳನ್ನು ಎದುರಿಸಿದ್ದನೋ ರಾಣಾ ಪ್ರತಾಪಾನು ಕಾಡುಮೇಡುಗಳನ್ನು ಅಲೆದಿದ್ದನೋ ಶಿವಾಜಿ ತನ್ನ ಸರ್ವಸ್ವವನ್ನೂ ಅರ್ಪಿಸಿದ್ದನೋ ಗುರು ಗೋವಿಂದ ಸಿಂಹರು ತಮ್ಮ ಚಿಕ್ಕ ಮಕ್ಕಳನ್ನು ಜೀವಂತವಾಗಿ ಕೋಟೆಯ ಕೋಡೆಗಳಲ್ಲಿ ಸಮಾಯಾಗುವುದನ್ನು ಸಹಿಸಿದ್ದನೋ ಆ ಸಮಾಜಕ್ಕಾಗಿ ಹಾಗೂ ಧರ್ಮಕ್ಕಾಗಿ ನಾವು ನಮ್ಮ ಜೀವನದ ಆಕಾಂಕ್ಷೆಗಳನ್ನು ತೊರೆಯಲಾಗುವುದಿಲ್ಲವೇ? ಎಂದರು. ಇಂಥ ವಾಕ್ಯಗಳನ್ನು ಬರೆಯಲು ಕೇವಲ ಪದಪುಂಜಗಳೊಂದಿದ್ದರೂ ಸಾಕು. ಆದರೆ ಆ ಯುವಕ ದೀನ ದಯಾಳರು ಕಷ್ಟ ಎದುರಿಸುವ ರಂಗಕ್ಕಿಳಿದೇ ಆ ಪತ್ರ ಬರೆದಿದ್ದರು. ಅದು ೧೯೪೨. ಅವರು ಉತ್ತರ ಪ್ರದೇಶದ ಲಖೀಂಪುರದಲ್ಲಿ ರಾಷ್ಟಿಯ ಸ್ವಯಂಸೇವಕ ಸಂಘದ ಜಿಲ್ಲಾ ಪ್ರಚಾರಕನಾಗಿ ಜವಾಬ್ದಾರಿಯನ್ನು ಹೊತ್ತರು. ದೀನ ದಯಾಳ ಉಪಾಧ್ಯಾಯ ಎಂಬ ಹೆಸರಿನ ಅವರನ್ನು ಲಖೀಂಪುರದ ಜನ ಪಂಡಿತ್‌ಜೀ ಎಂದು ಕರೆದರು. ಮುಂದೆ ಅದೇ ಉತ್ತರ ಪ್ರದೇಶವನ್ನು ವಿಶ್ವವೇ ನೋಡುವಂತೆ ಬದಲಿಸುವ ಕಾರ್ಯಕ್ಕಿಳಿದರು. ತನ್ನ ನೋವಿನ ಬಾಲ್ಯ ಮತ್ತು ಸಂಘದ ಚಿಂತನೆಗಳೆರಡೂ ಸೇರಿ ದೀನ ದಯಾಳರಲ್ಲಿ ಅಂತ್ಯೋದಯ ಎಂಬ ಅಪೂರ್ವ ಚಿಂತನೆಯೊಂದು ದೇಶಕ್ಕೆ ಪರಿಚಯವಾದದ್ದರಲ್ಲಿ ಅಶ್ಚರ್ಯವೇನೂ ಇಲ್ಲ.

ಅಷ್ಟೇ ಅಲ್ಲ, ಸ್ವಾತಂತ್ರ್ಯಾನಂತರದ ರಾಜಕೀಯ ಚಿಂತನೆಗಳು ಎಡವಿದ್ದೆಲ್ಲಿ ಎಂಬುದರ ಹಿಂದೆ ಸ್ವಾತಂತ್ರ್ಯಪೂರ್ವದ ಹಳಿ ತಪ್ಪಿದ ರಾಜಕೀಯ ಚಿಂತನೆಗಳಿದ್ದವು ಎಂಬುದನ್ನು ಮೊಟ್ಟಮೊದಲು ರಾಜಕೀಯ ಧ್ವನಿಯ ಮೂಲಕ ದೇಶಕ್ಕೆ ಹೇಳಿದವರು ದೀನದಯಾಳ ಉಪಾಧ್ಯಾಯರು. ಬ್ರಿಟಿಷ್-ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗಿನ ವಿಭಜನೆಯ ಕ್ರಮವನ್ನು ರಾಜಕೀಯ ನೆಲೆಗಟ್ಟಿನಿಂದ ನೋಡಿದ ಅಂದಿನ ಒಬ್ಬನೇ ಒಬ್ಬ ಮುಖಂಡ ದೀನ ದಯಾಳರು. ಇನ್ನೇನು ದೇಶ ವಿಭಜನೆ ಆಗಿಯೇ ತೀರುವುದು, ವಿಭಜನೆಗೆ ಒಪ್ಪದಿದ್ದರೆ ಸ್ವಾತಂತ್ರ್ಯವನ್ನೂ ಕಳೆದುಕೊಂಡೇವು ಎಂದು ಕೆಲವು ರಾಜಕೀಯ ನಾಯಕರು ಅಡ್ಡಗೋಡೆಯ ಮೇಲೆ ದೀಪವಿಟ್ಟಂಥಾ ಹೇಳಿಕೆಗಳನ್ನು ನೀಡುತ್ತಿದ್ದಾಗ ದೇಶವಿಭಜನೆಗೂ ಸ್ವಾತಂತ್ರ್ಯಕ್ಕೂ ಏನೇನೂ ಸಂಬಂಧವಿಲ್ಲ ಎಂದು ಮನವರಿಕೆ ಮಾಡಿಕೊಟ್ಟವರು ದೀನದಯಾಳರು. ಅಂದಿನ ಎಲ್ಲಾ ರಾಜಕೀಯ ಮುಖಂಡರಲ್ಲಿ ವಿಭಜನೆ ಮತ್ತು ಅದಕೊಪ್ಪದಿದ್ದರೆ ಭಾರತದಲ್ಲಿ ಉಂಟಾಗುತ್ತಿದ್ದ ಮುಸಲ್ಮಾನ ಆಕ್ರೋಶದ ಚಿಂತೆಯನ್ನು ತಲೆಮೇಲೆ ಹೊತ್ತು ಕುಳಿತಿದ್ದರೆ ದೀನದಯಾಳರು ಆ ವಾದವನ್ನು ಖಂಡಿಸಿ ಹೊಸ ರಾಜಕೀಯ ವ್ಯಾಖ್ಯಾನವನ್ನು ಮಂಡಿಸಿದ್ದರು. ಕಾಂಗ್ರೆಸ್ ನಾಯಕರು ದೃಢವಾಗಿ ಉಳಿದಿದ್ದಲ್ಲಿ ಹಾಗೂ ಭಾರತದ ಜನರಲ್ಲಿ ಜಾಗೃತಿಯನ್ನು ಮೂಡಿಸಲು ಸಹಕರಿಸಿದ್ದಲ್ಲಿ ಆಂಗ್ಲರು ಅಖಂಡ ಭಾರತವನ್ನು ತೊರೆದು ಹೋಗುತ್ತಿದ್ದರು ಎಂದಿದ್ದರು ದೀನ ದಯಾಳ ಉಪಾಧ್ಯಾಯರು. ಅವರ ಚಿಂತನೆ ಸಮಂಜಸವೆನ್ನುವುದು ಕೆಲವೇ ವರ್ಷಗಳಲ್ಲಿ ದೇಶದ ಅರಿವಿಗೆ ಬಂತು. ಏಕೆಂದರೆ ವಿಭಜನೆಯಿಂದ ಮುಸಲ್ಮಾನರ ಆಕ್ರೋಶವೇನೂ ತಣಿಯಲಿಲ್ಲ, ವಿಭಜನೆಗೆ ಬೆಂಬಲಿಸಿದವರೆಲ್ಲರೂ ಪಾಕಿಸ್ಥಾನಕ್ಕೆ ಹೊರಟುಹೋಗಲಿಲ್ಲ. ವಿಭಜನೆಯ ನೆಪದಿಂದ ಸಿಕ್ಕ ಸ್ವಾತಂತ್ರ್ಯವೂ ಮುಂದೆ ಯಶಸ್ವಿಯಾಗಲಿಲ್ಲ. ಅದನ್ನು ಯಶಸ್ವಿಯಾಗಿಸಲು ದೇಶದ ರಾಜಕೀಯ ಚಿಂತನೆಗಳು ಅನುವು ಮಾಡಿಕೊಡಲಿಲ್ಲ. ಏಕೆಂದರೆ ಸ್ವಾತಂತ್ರ್ಯಾನಂತರದ ರಾಜಕೀಯ ಚಿಂತನೆಗಳಿಗೆ ಸಾಂಸ್ಕೃತಿಕ ಬೇರುಗಳೇ ಇರಲಿಲ್ಲ. ೧೯೩೬ರ ಚುನಾವಣೆಗಳಲ್ಲಿ ಮುಸ್ಲಿಂ ಲೀಗ್ ವಿಫಲವಾದಾಗಲೇ ದೇಶದ ರಾಜಕೀಯಕ್ಕೆ ಎಲ್ಲವೂ ಅರ್ಥವಾಗಬೇಕಿತ್ತು. ಆದರೆ ಕಾಂಗ್ರೆಸ್ ಇದನ್ನು ಬೇರೊಂದು ರೀತಿಯಲ್ಲಿ ಬಳಸಿಕೊಳ್ಳಲು ನೋಡಿತು. ಕಾಂಗ್ರೆಸ್ ಕೈಹಿಡಿದ್ದಿದ್ದ ಮುಸಲ್ಮಾನರಿಂದ ಸಾಂಸ್ಕೃತಿಕ ಬಲವರ್ಧನೆಗೆ ಇದ್ದ ಅವಕಾಶವನ್ನೂ ಕಾಂಗ್ರೆಸ್ ಸಮರ್ಥವಾಗಿ ಬಳಸಿಕೊಳ್ಳಲಿಲ್ಲ. ಈ ಬಲದಿಂದ ಜಿನ್ನಾನ ಪ್ರಾಬಲ್ಯವನ್ನು ಇಳಿಸಬಹುದು ಎಂದೂ ಕಾಂಗ್ರೆಸಿಗೆ ಅನಿಸಲಿಲ್ಲ. ಕಾರಣ ಮತ್ತದೇ ಸಾಂಸ್ಕೃತಿಕ ಬಲವಿಲ್ಲದ ರಾಜಕೀಯ. ಇದರ ಪರಿಣಾಮ ಮುಂದೆ ಸ್ವತಂತ್ರ ಭಾರತದಲ್ಲೂ ಕಾಣತೊಡಗಿತು. ಅದೇ ಹೊತ್ತಲ್ಲಿ ದೀನ ದಯಾಳರು ಸಾಂಸ್ಕೃತಿಕ ರಾಜಕಾರಣದ ಮಹತ್ವವನ್ನು ಮನಗಂಡರು. ಸಾಂಸ್ಕೃತಿಕ ಏಕತೆ ಉಂಟಾಗದೆ ಯಾವುದೇ ವೈಚಾರಿಕ ಮತ್ತು ರಾಜಕೀಯ ಏಕತೆ ಅಥವಾ ರಾಜಕೀಯ ಏಕತೆಗಾಗಿ ಪ್ರಯತ್ನಿಸುವ ವೀರರು ಜನ್ಮತಾಳಲಾರರು. ರಾಜಕೀಯ ಏಕತೆಗೆ ಮೂಲಾಧಾರವೇ ಸಾಂಸ್ಕೃತಿಕ ಏಕತೆ ಎಂದರು. ಈ ಚಿಂತನೆಯನ್ನು ಇಂದಿನ ರಾಜಕೀಯ ಸನ್ನಿವೇಷದಲ್ಲಿ ಒಮ್ಮೆ ಚಿಂತಿಸಿದರೆ ದೀನ ದಯಾಳದ ದೂರದೃಷ್ಟಿತ್ವಕ್ಕೆ ನಮಸ್ಕರಿಸದೇ ಇರಲಾಗುವುದಿಲ್ಲ.

ಸಾಂಸ್ಕೃತಿಕ ಬಲವರ್ಧನೆಗೆ ಒತ್ತು ನೀಡುತ್ತಿದ್ದ ಕಾಂಗ್ರೆಸಿನ ಸರ್ದಾರ್ ಪಟೇಲರು ಮತ್ತು ಅಧ್ಯಕ್ಷ ಪುರುಷೋತ್ತಮ ದಾಸ್ ಟಂಡನ್ ಅವರ ಮಾತುಗಳು ಕಾಂಗ್ರೆಸಿನಲ್ಲಿ ನಡೆಯಲಿಲ್ಲ. ಕಾಂಗ್ರೆಸಿನಲ್ಲಿ ಸಾಂಸ್ಕೃತಿಕ ಶಕ್ತಿಗೆ ಮಹತ್ವವಿಲ್ಲ ಎಂಬುದನ್ನು ಮನಗಂಡ ಚಿಂತಕರಿಗೆ ಈಗ ಸಾಂಸ್ಕೃತಿಕ ಹಿನ್ನಲೆಯ ರಾಜಕೀಯ ಪಕ್ಷವೊಂದರ ಅನಿವಾರ್ಯತೆ ಕಂಡುಬಂತು. ಆಗ ಎಲ್ಲರ ಕಣ್ಣು ನೆಟ್ಟಿದ್ದೇ ಭಾರತದ ರಾಜಕೀಯದಲ್ಲಿ ಸಾಂಸ್ಕೃತಿಕ ಮಹತ್ತ್ವವನ್ನು ಪ್ರತಿಪಾದಿಸುತ್ತಿದ್ದ ಆರೆಸ್ಸೆಸ್ಸಿನ ಪ್ರಚಾರಕ ದೀನ ದಯಾಳ ಉಪಾಧ್ಯಾಯರತ್ತ. ೧೯೫೨ರ ಜನಸಂಘದ ಮೊದಲ ಅವೇಶನ ಕಾನ್ಪುರದಲ್ಲಿ ನಡೆದಾಗ ದೀನದಯಾಳಜಿ ಅದರ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾದರು.

ಜನಸಂಘವನ್ನು ವಿಭಿನ್ನವಾದ ಪಕ್ಷವಾಗಿ ರೂಪಿಸುವಲ್ಲಿ ಅವರಿಗೆ ಯಾವುದೇ ಗೊಂದಲವಿರಲಿಲ್ಲ. ಜನ್ಮತಃ ಬಂದಿದ್ದ ಪರಿಶ್ರಮದ ಗುಣವಿತ್ತು. ಗುರೂಜಿ ಗೋಳವಲಕರರಂಥಾ ಮಹಾ ದಾರ್ಶನಿಕರ ಮಾರ್ಗದರ್ಶನವಿತ್ತು. ಸಂಸ್ಕೃತಿಯನ್ನು ಆರಾಸುವ ಯುವಕರ ಪಡೆ ಸಮ್ಮೋಹನಕ್ಕೊಳಗಾದವರಂತೆ ಹಿಂದೆ ಬರುತ್ತಿತ್ತು. ರಾಜಕೀಯ ಕ್ಷೇತ್ರವಾದರೂ ಯಾವುದಕ್ಕೂ ಅಂಟಿಕೊಳ್ಳದ ಸಂಘದ ಪ್ರಚಾರಕತನವಿತ್ತು. ಜೊತೆಗೆ ಆಸೆಯೆಂಬುದನ್ನು ಎಡಗಾಲಲ್ಲಿ ಒದ್ದುಬಂದಿದ್ದ ಧೈರ್ಯವಿತ್ತು. ತನ್ನದೇನೂ ಇಲ್ಲವೆನ್ನುವ ಖಾಲಿತನವಿತ್ತು. ಹಾಗಾಗಿ ಅವರು ಪಕ್ಷದ ಬೈಠಕ್‌ಗಳನ್ನು ಅಕಾರಯುತವಾಗಿ ನಡೆಸುತ್ತಿದ್ದರು. ಅಧಿಕಾರಕ್ಕಾಗಿ ಹಾತೊರೆಯುವಂಥಾ ಯಾವೊಬ್ಬ ವ್ಯಕ್ತಿಯೂ ಜನಸಂಘದ ಕಾರ್ಯಕರ್ತನಾಗಲು ಸಾಧ್ಯವಿಲ್ಲ ಎಂದೇ ಬೈಠಕ್ ಆರಂಭಿಸುತ್ತಿದ್ದರು. ಸ್ವತಃ ತನಗೆ ಅಂಥ ಆಕಾಂಕ್ಷೆಗಳಿಲ್ಲದ ವ್ಯಕ್ತಿಯಷ್ಟೆ ಅದನ್ನು ಹೇಳಬಲ್ಲ. ರಾಜಕೀಯ ಎಂಬ ದಂಡುಕಟ್ಟಿ ಹೊರಡುವ ಶೋಕಿಯಂತೂ ದೀನದಯಾಳರಿಗಿರಲಿಲ್ಲ. ಹಾಗಾಗಿ ಅವರ ಬೈಠಕ್ ಗಳು ಕಾರ್ಯಕರ್ತರನ್ನು ಉತ್ಪಾದಿಸುವ ಅಕ್ಷಯಪಾತ್ರೆಗಳಂತಾಗುತ್ತಿದ್ದವು. ಅದರ ಫಲ ಪ್ರತೀ ಚುನಾವಣೆಯಲ್ಲೂ ಕಂಡುಬರುತ್ತಿತ್ತು. ಪ್ರತೀ ಚುನಾವಣೆಗಳಲ್ಲೂ ಮತಗಳ ಶೇಕಡಾವಾರು ಪ್ರಮಾಣ ಹೆಚ್ಚಾಗುತ್ತಲೇ ಇತ್ತು. ಇವಕ್ಕೆಲ್ಲಾ ದೀನದಯಾಳರು ಮಾಯಾಮಂತ್ರದಂಡವನ್ನೇನೂ ಬಳಸಲಿಲ್ಲ. ಅವರಲ್ಲಿದ್ದದು ಗುರಿಯೊಂದೇ. ಅದು ಸಾಂಸ್ಕೃತಿಕ ಪುನರುತ್ಥಾನ.

ಅವರು ಹುಟ್ಟಿ ನೂರು ವರ್ಷಗಳಾಗಿವೆ. ಅವರ ಸಾಂಸ್ಕೃತಿಕ ರಾಜಕೀಯದ ವೃತವನ್ನು ದೇಶ ಅರೆ ಶತಮಾನದಿಂದ ನೋಡುತ್ತಿದೆ. ಇಂದು ನಿಂತು ಅವರ ಕಾರ್ಯ ಮತ್ತು ಚಿಂತನೆಗಳನ್ನು ಅವಲೋಕಿಸಿದರೆ ಹಲವು ಅದ್ಭುತಗಳು, ಹಲವು ಹೊಸ ನೋಟಗಳು ಯಾರಿಗಾದರೂ ಗೋಚರವಾಗದೇ ಇರದು. ಒಂದು ವೇಳೆ ಅಂದು ದೀನ ದಯಾಳರು ರಾಜಕೀಯದಲ್ಲಿ ಸಾಂಸ್ಕೃತಿಕ ಮಹತ್ವವನ್ನು ಅನುಷ್ಠಾನಕ್ಕೆ ತರದೇ ಇದ್ದುಬಿಟ್ಟಿದ್ದರೆ? ಸಾಂಸ್ಕೃತಿಕ ಚಳವಳಿ ರಾಜಕೀಯಕ್ಕಿಂತ ಸಂಪೂರ್ಣ ಭಿನ್ನ ಎಂದುಕೊಂಡುಬಿಟ್ಟಿದ್ದರೆ? ಒಂದು ಸಮೂಹ ಅದರತ್ತ ಚಿಂತನೆಯನ್ನೇ ಮಾಡದಿರುತ್ತಿದ್ದರೆ ಏಳು ದಶಕಗಳ ನಂತರದ ಭಾರತ ಯಾವ ಸ್ಥಿತಿಯಲ್ಲಿರುತ್ತಿತ್ತು ಎಂಬುದರ ಕಲ್ಪನೆಯೇ ಭಯಾನಕವಾಗಿ ಕಾಣಿಸುತ್ತದೆ. ದೇಶದ ರಾಜಕೀಯದ ಇಂದಿನ ಪ್ರತೀ ನಡೆಯಲ್ಲೂ ದೀನದಯಾಳರ ಚಿಂತನೆ ಪ್ರಸ್ತುತ ಮತ್ತು ಅನುಷ್ಠಾನಯೋಗ್ಯವಾಗಿ ಕಾಣಿಸುತ್ತದೆ. ದೀನ ದಯಾಳರ ಚಿಂತನೆಗಳಿಗೆ ಎಂದಿಗೂ ಸಾವೆಂಬುದಿಲ್ಲ. ಏಕೆಂದರೆ ಅಲ್ಲಿ ಗೊಂದಲಗಳಿಲ್ಲ. ಕಾರಣ ದೇಶದ ಸಂಸ್ಕೃತಿಯಲ್ಲೂ ಗೊಂದಲಗಳಿಲ್ಲ. ಕಾಶ್ಮೀರ ಎಂದಾಗ, ಪ್ರಾದೇಶಿಕ ರಾಷ್ಟ್ರವಾದ ಎಂದಾಗ, ಭಾಷೆ ಎಂದಾಗ, ಶಿಕ್ಷಣ ಎಂದಾಗ, ಆರ್ಥಿಕತೆ ಎಂದಾಗ, ಗಡಿ ಎಂದಾಗ, ವಿದೇಶಾಂಗ ನೀತಿ ಎಂದಾಗ, ಮೌಲ್ಯಾಧಾರಿತ ರಾಜಕಾರಣ ಎಂದಾಗ ಡಿಕ್ಷನರಿಯಂತೆ ಕಾಣುವುದು ದೀನದಯಾಳ ಉಪಾಧ್ಯಾಯರ ಚಿಂತನೆಗಳು. ೨೦೧೭ರ ಹೊತ್ತಲ್ಲಿ ರಾಷ್ಟ್ರೀಯವಾದದ ಅಲೆ ಎಲ್ಲೆಲ್ಲೂ ತುಂಬಿದೆ. ಆದಳಿತದ ಜನಪ್ರೀಯತೆ, ಯುವಜನರ ತಲ್ಲಣ, ಅರಾಷ್ಟ್ರೀಯತೆಯ ಆತಂಕ ಎಲ್ಲವೂ ಸೇರಿ ಜನರಲ್ಲಿ ಹೊಸ ಭರವಸೆಯ ತುಡಿತ, ವ್ಯವಸ್ಥೆಯ ಆಕ್ರೋಶ ಕಾಣಿಸುತ್ತಿದೆ. ಆ ಆಕ್ರೋಶ ಇನ್ನಾವುದೋ ಒಂದರತ್ತ ಆಕಸ್ಮಿಕ ಪ್ರೀತಿಯನ್ನು ಹುಟ್ಟಿಸುತ್ತಿದೆ. ಈ ತಲ್ಲಣವನ್ನು ಅಂದು ಹುಟ್ಟಿಸಿದವರು ದೀನ ದಯಾಳಜಿ. ಅವರಿಲ್ಲದಿರುತ್ತಿದ್ದರೆ ಇಂದು ಯಾವುದೂ ಇರುತ್ತಿರಲಿಲ್ಲ. ಅವರಿಲ್ಲದಿರುತ್ತಿದ್ದರೆ ಇಂದಿನ ಯಾವುದಕ್ಕೂ ಅರ್ಥವಿರುತ್ತಿರಲಿಲ್ಲ. ಅವರಿಲ್ಲದಿರುತ್ತಿದ್ದರೆ ಇಂದಿನ ರಾಜಕೀಯವಷ್ಟೇ ಅಲ್ಲ ದೇಶವೂ ಹೀಗಿರುತ್ತಿರಲಿಲ್ಲ. ಅವರ ತಪಸ್ಸಿನ ಸಾಂಸ್ಕೃತಿಕ ರಾಜಕಾರಣ ದೇಶವನ್ನು ಬಹುಕಾಲ ಆಳದೇ ಇರಬಹುದು. ಅಂಥದ್ದೊಂದು ರಾಜಕೀಯ ಪಕ್ಷ ದ ಅಸ್ತ್ವಿತ್ವವೇ ದೇಶವನ್ನು ಕಾಪಾಡುತ್ತಾ ಬಂತು. ಅದಕ್ಕೂ ಹೆಚ್ಚಿಗೆ ಸದ್ಯದ ತಲ್ಲಣದ ಮನಕ್ಕೆ ಸ್ಪಷ್ಟ ರಾಜಕೀಯದ ಕಲ್ಪನೆಯನ್ನು ಮೂಡಿಸಲು ಸಾಧ್ಯವಾಗುವುದು ದೀನ ದಯಾಳರ ಚಿಂತನೆಗಳಿಗೆ ಮಾತ್ರ.

1 ಟಿಪ್ಪಣಿ Post a comment
  1. s.dinni
    ಆಗಸ್ಟ್ 1 2017

    J.Krishnamurti teachings and his visionary statements made 60/70 years back have come true.
    Jk teachings have immense value for today’s ideologically violent, ego parading world.

    ಉತ್ತರ

ನಿಮ್ಮದೊಂದು ಉತ್ತರ s.dinni ಗಾಗಿ ಪ್ರತ್ಯುತ್ತರವನ್ನು ರದ್ದುಮಾಡಿ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments