ನ್ಯಾಸ ಕಾದಂಬರಿಯ ವಿಮರ್ಶೆ
– ಚೈತನ್ಯ ಮಜಲುಕೋಡಿ

ಸನ್ಯಾಸಿಯಾದವನು ಸಮಾಜಕ್ಕೆ ತೆತ್ತುಕೊಂಡು ಲೋಕೋದ್ಧಾರಕ್ಕೆ ಸಮರ್ಪಿಸಿಕೊಳ್ಳಬೇಕು, ಸ್ವಂತಕ್ಕೆ ಸಾಧನೆಯನ್ನೂ ಮಾಡಬೇಕು ಎಂಬ ಘನ ಉದ್ದೇಶ ಹೊತ್ತು ಹೊರಡುವ ಸಂಸಾರ ವಿಮುಖವಾದ ಧೋರಣೆಯು ಹೇಗೆ ಮತ್ತೆ ಅದೇ ಪ್ರಪಂಚದ ಪಾಶ ಮೋಹಗಳಲ್ಲಿ ಸಿಲುಕಿ ಮಂಕಾಗಿ ಜನಪ್ರಿಯತೆಗೆ ಎರವಾಗುತ್ತ, ಜನಮನ್ನಣೆಗೆ ಹಿಗ್ಗುತ್ತ ಸಾಗಿ, ಕಡೆಯಲ್ಲಿ ಮೂಲೋದ್ದಿಶ್ಯವೇ ಮೂಲೋತ್ಪಾಟನೆಯಾದ ದಿಗ್ಭ್ರಮೆ ಬಹಳ ಕಡೆ ಓದುಗನನ್ನು ಚಿಂತನೆಗೆ ಹಚ್ಚುತ್ತದೆ. ತಂದೆ ತಾಯಿಗಳನ್ನು ನೋಡಿಕೊಳ್ಳುವುದು ಮಕ್ಕಳ ಕರ್ತವ್ಯವೇ ಎಂಬಲ್ಲಿಂದ ಸಂನ್ಯಾಸದ ಅರ್ಥವೇನು ಎನ್ನುವವರೆಗೆ ನೂರಾರು ಮೂಲಭೂತ ಪ್ರಶ್ನೆಗಳನ್ನೆತ್ತುತ್ತ, ಅದಕ್ಕೆ ಪ್ರಾಮಾಣಿಕ ಉತ್ತರಗಳನ್ನೂ ತಡವುತ್ತ, ಹೆಚ್ಚು ಹೆಚ್ಚು ಆಲೋಚನೆಗೆ, ಜವಾಬ್ದಾರಿಯುತ ನಿರ್ಣಯ ನಡುವಳಿಕೆಗಳಿಗೆ ನಾವು ತೊಡಗಬೇಕೆಂಬ ಮಾನೋನ್ನತಿಗೂ ಕೃತಿಯು ಪ್ರೇರಣೆ ನೀಡುತ್ತದೆ.
ಸತ್ಯಪ್ರಕಾಶ ಎಂಬ ತುಮಕೂರಿನ ಚುರುಕು ಹುಡುಗ ಆಶ್ರಮದ ಸಂಪರ್ಕಕ್ಕೆ ಬಂದು ಪ್ರಭಾವಿತನಾಗಿ, ಸನ್ಯಾಸದಿಂದ ಮಹತ್ತನ್ನು ಸಾಧಿಸಬೇಕು, ಅರಿಯಬೇಕು ಅಂತ ಹೊರಟವನು. ಅಗ್ನಿಯಂತಹ ಅವನ ನಿಷ್ಠುರವಾದ ಸ್ವಭಾವದ ಕಾರಣದಿಂದ, ಅದರ ಕಟು ಸತ್ಯ ಅರಗಿಸಿಕೊಳ್ಳಲಾರದವರು ದೂರ ಸರಿಸುವಂತೆ ಅವನ ಸಂಪರ್ಕಕ್ಕೆ ಬಂದವರು ತಮ್ಮ ಅಹಮಿಕೆಯ ಸ್ವಭಾವದಿಂದ ಇವನನ್ನು ದೂರ ಸರಿಸುತ್ತಾರೆ. ಬಹಳ ಕಡೆ ಈ ಅಗ್ನಿಯನ್ನು ಆರಾಧಿಸುವವರೂ ಇದ್ದಾರೆ. ಎಲ್ಲ ಕಡೆ ತನ್ನ ತೀಕ್ಷ್ಣ ಚಿಂತನೆಗಳಿಂದ ಪ್ರಭಾವಿಸಿದ ಸತ್ಯನ ಸಂಪರ್ಕಕ್ಕೆ ಬಂದವರು ತಮ್ಮ ಒಳಗನ್ನೊಮ್ಮೆ ತಡವಿಕೊಂಡವರೇ. ಅವನ ಮಮಕಾರ, ನೆನಪುಗಳ ನೋವು ಆಲೋಚನೆಯಿಂದ ಬಿಡಿಸಿಕೊಂಡವರು ತಂದೆ ರುದ್ರಯ್ಯ. ಅಪಾರ ಜೀವನಾನುಭವದಿಂದ, ಕಷ್ಟ ಪರಂಪರೆಗಳಿಂದ ಬೆಳೆದು ಮಾಗಿದ ಮನಸ್ಸು. ತಂದೆ ತಾಯಿಯರು ಮಗುವಿನ ಜನ್ಮಕ್ಕೆ ನಿಮಿತ್ತ ಮಾತ್ರ ಎಂದು ಮನ ಮಥನದಿಂದ ಅರಿತವರು. ಮನುಷ್ಯ ಸಹಜವಾದ ಮಮಕಾರ ಅವರಿಗೆ ಮಕ್ಕಳ ಮೇಲಿತ್ತು. ಅದನ್ನೂ ಗಾಢ ಚಿಂತನೆಯಿಂದ ಬಿಡಿಸಿಕೊಳ್ಳುವ ಪ್ರಜ್ಞೆಯ ಹರಹಿನಿಂದಲೇ ಕಾದಂಬರಿಯ ಆರಂಭ. ಮೊದಲ ಐವತ್ತು ಪುಟಗಳಲ್ಲಿ ರುದ್ರಪ್ಪನವರು ಬದುಕಿನ ಅರ್ಥವನ್ನುಅವಲೋಕಿಸುವ ಶೈಲಿಯಿಂದ ನಮ್ಮ ಮನಸ್ಸನ್ನು ಸೆಳೆಯುವ ಈ ಕಾದಂಬರಿಯು, ಮಾತೃತ್ವ ಪ್ರಜ್ಞೆಯ ಆವರಣದಲ್ಲಿ ಬರಿಯ ಚಾಕರಿ ನೌಕರನಂತೆ ಮಾತ್ರ ತೊಡಗಿಸಿಕೊಂಡು ಅನಾಥವಾಗಿ ಉಳಿದುಹೋಗುವ ಮಗನ ದುಃಖವನ್ನು ಕೂಡ ನಿರೂಪಿಸುತ್ತದೆ. ಶಂಕರಾಚಾರ್ಯರ ಕುಮಾತಾ ನಃ ಭವತಿ ಎಂಬ ವಾಕ್ಯವನ್ನು ಅಲ್ಲಗೆಳೆಯುತ್ತ, ವಾಸ್ತವದಲ್ಲಿ ಇರುವ ಕೆಲ ತಾಯಂದಿರ ಕೆಟ್ಟ ನಡವಳಿಕೆಯನ್ನು ಕೂಡ ಚೆನ್ನಾಗಿ ಚಿತ್ರಿಸುತ್ತದೆ. ಹೋದ ಹೋದಲ್ಲೆಲ್ಲ ಬೆಳೆಯುತ್ತ ತೊಳಗುತ್ತ ಬೆಳಗುತ್ತ ಹೋಗುವ ಸತ್ಯನಿಗೆ ಅಷ್ಟು ಸಾಧನೆ ಮಾಡಿದರೂ ಕಡೆಯಲ್ಲಿ ಜಿತೇಂದ್ರಿಯತ್ವ ಲಭಿಸದೆಆತ ಪತನ ಹೊಂದುವುದೊಂದು ಅಚ್ಚರಿ. ಅಥವಾ ಅದು ಪರೋಕ್ಷವಾಗಿ ಕ್ರಮ ಸನ್ಯಾಸವನ್ನ ಪ್ರತಿಪಾದಿಸುವ ಅಂಶ ಇರಬಹುದು. ಕಾದಂಬರಿಯಲ್ಲಿ ಎಲ್ಲೂ ಕ್ರಮ ಸನ್ಯಾಸದ ವಿಚಾರ ಬಂದಿರದಿರುವುದೊಂದು ಕೊರತೆಯೇ ಅನ್ನಬೇಕು. ಅಂತೆಯೇ ಜಾತಿಯ ಮಠಗಳ ಜಾತಿ ರಾಜಕೀಯ, ಮುಂದಿನ ಸ್ವಾಮಿಗಳನ್ನು ಆರಿಸುವ ಪ್ರಭಾವ ಇವೆಲ್ಲ ಇರದಿರುವ ಪರಿಮಿತಿಯೂ ಇದೆ. ಆದರೆ ಅದು ಬದುಕಿನ ಅರ್ಥ ಶೋಧಿಸುವ ಅಂತರಂಗದ ಅನ್ವೇಷಣೆಗೆ ಅಡ್ಡಿಯೇನೂ ಮಾಡಿಲ್ಲ.
ತುಮಕೂರು ಹುಬ್ಬಳ್ಳಿ ಬೀದರ್ ಗಳನ್ನು ದಾಟಿ ಉತ್ತರ ಭಾರತವನ್ನು ಪ್ರವೇಶಿಸುವ ಕತೆಯಲ್ಲಿ ವಸಿಷ್ಠಗುಹೆಯಲ್ಲಿ ಸತ್ಯನಿಗೆ ಸೇವಾನಂದರ ಪರಿಚಯ ಆಗುತ್ತೆ. ಸೇವಾನಂದರು ಸ್ವಾಮಿ ವಿವೇಕಾನಂದರ ವಿಚಾರಗಳಿಂದ ಸ್ಫೂರ್ತಿ ಪಡೆದವರು. ಹಳ್ಳಿಯಲ್ಲಿ ಸುಧಾರಣೆ ಮಾಡಬೇಕೆಂದು ಹೊರಟು ಸಾಕಷ್ಟು ಮಾಡಿದವರು ಕೂಡಾ. ಆದರೆ, ಊರ ಪಟೇಲರ ಮಗ ಭೈರಣ್ಣನ ಕುತಂತ್ರದಿಂದ, ನಂತರದಲ್ಲಿ ಅವರಿಂದ ಮೇಲೆ ಬಂದವರೇ ಅವರನ್ನ ವಿರೋಧಿಸಿದರು. ಸನ್ಯಾಸ ತೆಗೆದುಕೊಂಡರೆ ಮಹತ್ತಾದ್ದನ್ನು ಸಾಧಿಸಬಹುದು, ಆತ್ಮನೋ ಮೋಕ್ಷಾರ್ಥಂ ಜಗದ್ ಹಿತಾಯ ಚ ಎಂಬ ಧ್ಯೇಯ ಹೊಂದಿದವರು. ಆದರೆ ಕುತಂತ್ರದಿಂದ ತಾವು ಮಾಡಿದ ಉತ್ತಮ ಕಾರ್ಯಗಳನ್ನು ಹಿತಾಸಕ್ತಿಗಳು ಸೇರಿ ನಾಶ ಮಾಡಿದಾಗ ಕುಪಿತರಾದವರು. ಅದು ಸಹಜವೇ. ಆದರೆ ಸತ್ಯನು ತನ್ನ ನಿಷ್ಠುರ ಧೋರಣೆಯಿಂದ, ಅವರು ತಾವು ಮಾಡಿದ್ದನ್ನು ಉಳಿಸಿಕೊಳ್ಳಲು ಮಾಡಿದ್ದು ಅಹಂಕಾರ ಮಮಕಾರಗಳ ಮೋಹದಿಂದ ಅಂತ ಹೇಳ್ತಾನೆ. ಅದು ಹೇಗೆ ಅಂತ ಅರ್ಥವಾಗೋಲ್ಲ. ಬೆಳೆಸಿದ ಸಂಸ್ಥೆ ಅಪಾತ್ರರ ಸ್ವತ್ತಾದಾಗ, ಒಂದು ಉತ್ತಮ ಕಾರ್ಯ ಕುಮ್ಮಕ್ಕಿನಿಂದ ಹಾಳಾಗುವಾಗ ಅದನ್ನು ತಡೆಯುವುದು ಮನುಷ್ಯ ಸಹಜ ಸ್ವಭಾವ. ಭೈರಣ್ಣ ಯಾರನ್ನೂ ಎತ್ತಿ ಕಟ್ಟದೆ ಕೂಡಿ ಬಾಳಿದರೆ ಸ್ವರ್ಗಸುಖ ಎಂಬಂತಿದ್ದರೆ ತೊಡಕೇ ಇರುತ್ತಿರಲಿಲ್ಲ. ಸಮಾಜೋದ್ಧಾರದ ಸಾಧನಕ್ಕಾಗಿ ಸೇವಾನಂದರು ಸನ್ಯಾಸ ಸ್ವೀಕರಿಸಿದ್ದು ಹೌದು. ಆದರೆ ಸನ್ಯಾಸ ಸ್ವೀಕರಿಸಿದಾಕ್ಷಣ ಹೀಗೆ ಬದಲಾಗಿಬಿಡಬೇಕು ಎಂಬ ನಿಯಮಗಳೇನಿಲ್ಲವಲ್ಲ. ಸಮಾಜಕ್ಕೆ ಹಾನಿಯಾಗದೇ ಒಳ್ಳೆಯದೇ ಆದರೆ ಅದು ಯಾರಾದರೇನು? ಸನ್ಯಾಸಿಗೆ ಮಮಕಾರ ಇರಬಾರದು ನಿಜ, ಆದರೆ ಅನ್ಯರ ಕುತಂತ್ರ ಕಂಡು ನೋಡುತ್ತ ಅನುಭವಿಸುತ್ತಿದ್ದರೂ, ಅನ್ಯಾಯ ಕಂಡರೂ ನಿರ್ವಿಕಾರವಾಗಿ ನಾವು ಅದರಿಂದ ಬೇರೆಯಾಗಬೇಕು ಅನ್ನುವುದು ಆತ್ಮಸಾಕ್ಷಿಗೇ ವಿರುದ್ಧವಾದುದು. ಸೇವಾನಂದರು ಸಮಾಜೋನ್ನತಿಯ ಸಾಧನಕ್ಕಾಗಿ ಸನ್ಯಾಸ ಎಂಬ ಶೈಲಿಯನ್ನು ಹಿಡಿದರು. ಸನ್ಯಾಸ ಎಂದರೆ ವೈಯಕ್ತಿಕವಾದ ಸಾಧನೆಗೆ ಆತ್ಮಸಾಕ್ಷಾತ್ಕಾರಕ್ಕೆ ಮಾತ್ರ ಹೊಂದಬೇಕಾದ ಪದವಿ ಎಂದುಕೊಂಡವರಲ್ಲ. ತನ್ನನ್ನು ತಾನು ಸಮಾಜಕ್ಕೆ ತೆತ್ತುಕೊಳ್ಳುವ ಚಿಂತನೆ ಅವರಲ್ಲಿತ್ತು ಅಷ್ಟೇ. ಈ ವಿಷಯದಲ್ಲಿ ಮಾತ್ರ ಪಾತ್ರ ನಿರೂಪಣೆ ಮತ್ತು ವೈಚಾರಿಕ ಧೋರಣೆಯಲ್ಲಿ ಸ್ವಲ್ಪ ಭಿನ್ನವೂ ಅಸ್ಪಷ್ಟವೂ ಆದ ಚಿಂತನೆ ಬಂದಿದೆ ಅನ್ನಿಸಿತು.
ಸಮಾಜದ ಉದ್ಧಾರಕ್ಕಾಗಿ ಮಠ ಕಟ್ಟಿಕೊಳ್ಳುವ ಸನ್ಯಾಸಿಗಳು, ಸಮಾಜದಲ್ಲಿ ಒಂದಾಗಿದ್ದು ಕೊನೆಗೆ ಸಂಸಾರಿಗಳಿಗಿಂತ ಹೆಚ್ಚಾಗಿ ಬಂಧನದಲ್ಲಿ ಒಳಗಾಗುವುದು ನಿಜಕ್ಕೂ ದುರಂತವೇ ಸರಿ. ಕಾದಂಬರಿಯಲ್ಲಿ ಬರುವ ಅವಿಮುಕ್ತಾನಂದರ ಹೊರತಾಗಿ ಉಳಿದವರೆಲ್ಲರೂ ಬಂಧನಕ್ಕೆ ಒಳಗಾಗುವುದನ್ನು ಕಾದಂಬರಿಯು ಚೆನ್ನಾಗಿ ತೋರಿಸುತ್ತದೆ. ಸಾಧನೆ ಸನ್ಯಾಸ ಮುಕ್ತಿ ಮುಂತಾದ ದೊಡ್ಡ ದೊಡ್ಡ ಪದಗಳೆಲ್ಲ ಜನರನ್ನು ಆಕರ್ಷಿಸಿದರೂ ಅದು ಕೆಲವರನ್ನು ಮಾತ್ರ ತನ್ನಲ್ಲಿ ಉಳಿಸಿಕೊಳ್ಳುತ್ತದೆ. ಸಿದ್ಧತೆ ಮತ್ತು ಧಾರಣ ಶಕ್ತಿಯ ಹೊರತಾಗಿ ಅಲ್ಲಿ ಯಾರಿಗೂ ಉಳಿಯಲು ಸಾಧ್ಯವಿಲ್ಲ. ಅಧ್ಯಾತ್ಮದ ಸೆಳೆತ ಇದ್ದರೂ ಆ ಸಾಧನೆಗೆ ಬೇಕಾದ ಅರ್ಹತೆ ಮತ್ತು ಧಾರಣ ಶಕ್ತಿ ಇಲ್ಲದಿದ್ದರೆ ಅಧಃಪತನವೇ ಗತಿ. ಸತ್ಯಪ್ರಕಾಶನು ಒಂದೊಂದೇ ಹಂತಗಳನ್ನು ದಾಟಿದರೂ ಅದರ ಮೂಲಾಧಾರವನ್ನೇ ಸಾಕ್ಷಾತ್ಕರಿಸಿಕೊಳ್ಳಲು ಆಗದೇ ಕೊನೆಗೆ ಕೆಳಗೆ ಬೀಳುತ್ತಾನೆ. ಆದರೆ ಅವನ ಓರಗೆಯವನಾದ ಶಮಂತನು ತನ್ನ ದೌರ್ಬಲ್ಯವೇನೆಂಬುದನ್ನು ಕಂಡುಕೊಂಡು ತನ್ನ ಹಾದಿಯನ್ನು ಸರಿಪಡಿಸಿಕೊಳ್ಳುತ್ತಾನೆ. ಈ ಕಾದಂಬರಿಯಲ್ಲಿ ತಂದಿರುವ ಒಂದು ಮುಖ್ಯವಾದ ದ್ವಂದ್ವವನ್ನು ಗಮನಿಸಬೇಕು. ಸನ್ಯಾಸಿ ಅನ್ನಿಸಿಕೊಂಡವನು, ಪರಿವ್ರಾಜಕನಾಗಿ ಅಲೆಯುತ್ತ ಸಮಾಜವನ್ನು ತ್ಯಜಿಸಿ ತನ್ನ ಮೋಕ್ಷ ಧರ್ಮವನ್ನು ಆಚರಿಸಬೇಕು, ಸಾಕ್ಷಾತ್ಕರಿಸಿಕೊಳ್ಳಬೇಕು ಅನ್ನೋದು ಪರಂಪರೆಯಿಂದ ಬಂದದ್ದು. ಆದರೆ ಆದೇ ಈ ಸಮಾಜದ ಉದ್ಧಾರಕ್ಕಾಗಿ ನಿಸ್ಸಂಗಿಯಾಗಿ ಸನ್ಯಾಸ ಸ್ವೀಕಾರ ಮಾಡಿದ ಸ್ವಾಮಿಗಳಿಗೆ ತಮ್ಮ ಜೀವನವನ್ನೇ ಸಮಾಜಕ್ಕೆ ತೆತ್ತುಕೊಳ್ಳಬೇಕಾದ ಅಪರಿಹಾರ್ಯ ಅನಿವಾರ್ಯತೆ. ಅದು ತಾವೇ ಹೇರಿಕೊಂಡದ್ದೂ ಕೂಡಾ. ಮೋಕ್ಷವೆಂಬ ಸ್ಥಿತಿ ತಲುಪುವ, ಆ ಪ್ರಜ್ಞೆಯಲ್ಲೇ ಬದುಕುವ ಮತ್ತು ಅಂತಹ ಹಂತಕ್ಕೆ ಮುಟ್ಟಬೇಕೆಂದು ಪಡಿಪಾಟಲು ಪಡುವ ಸಾಧಕರಿಗೆ ಭಾರತದೆಲ್ಲೆಡೆ ಹಿಂದೆ ಬೆಂಬಲವಿತ್ತು. ಈಗಲೂ ಅಲ್ಲಲ್ಲಿ ಇದೆ.ಆದರೂ, ಈಗ ಸನ್ಯಾಸಿಯು ಬೇಡುವ ಭಿಕ್ಷೆಯು ಕೈಲಾಗದ ಸೋಮಾರಿಯ ಕೆಲಸ ಎಂಬ ಅಭಿಪ್ರಾಯಕ್ಕೆ ಬಂದು ನಿಂತಿದೆ. ಸಂಸಾರವನ್ನು ತ್ಯಜಿಸಿ ಪರಿವ್ರಾಜಕ ಧರ್ಮದಿಂದ ಹೊರಟ ಸನ್ಯಾಸಿ ಮತ್ತು ಆಧ್ಯಾತ್ಮದ ಸೆಳೆತ ಹೊಂದಿ ಸಮಾಜೋದ್ಧಾರದ ಧ್ಯೇಯವುಳ್ಳ ಸನ್ಯಾಸಿ ಇವೆರಡು ಸ್ಥಿತಿಗಳಲ್ಲಿ ಆಗುವ ಅಡ್ಡಿ ಅಡಚಣೆ, ಎರಡರ ವೈರುಧ್ಯದಲ್ಲಿ ಯಾವುದು ಸರಿ, ಯಾವುದು ತಪ್ಪೆಂದು ನಿಕಷಕ್ಕೊಡ್ಡಲಾಗದೇ ಪರಿತಪಿಸುತ್ತ ವಿವೇಕವನ್ನಾಶ್ರಯಿಸಿ ಮುನ್ನಡೆಯುವ ಹಾದಿಯಲ್ಲಿ ಕಾಣುವ ಕಟು ಸತ್ಯಗಳು ಎಲ್ಲವನ್ನೂ ಬಹಳ ಸಾವಧಾನವಾಗಿ ಎಲ್ಲ ಮಜಲುಗಳಿಂದ ಅಳೆಯುತ್ತ ಸಾಗುವ ಪಾತ್ರಗಳು ಓದುಗನನ್ನು ಗಹನ ಆಲೋಚನೆಗೆ ತಳ್ಳುತ್ತದೆ. ನ್ಯಾಸ ಎಂಬರ್ಥದಲ್ಲಿ ತ್ಯಜಿಸುವ ಅರ್ಥವೂ ಇದೆ, ಹಾಗೆಯೇ ಟ್ರಸ್ಟ್ ಎಂಬ ಅಂದರೆ ಸನ್ಯಾಸಾಶ್ರಮವೆಂಬ ಟ್ರಸ್ಟಿನ ಅರ್ಥವೂ ಇದೆ. ಅದರ ಸುತ್ತ ಸಿಕ್ಕಿಕೊಳ್ಳುವ ಅನೇಕ ತೊಡಕುಗಳನ್ನು ಕಾದಂಬರಿಯು ದೂರದಲ್ಲಿ ಸಾಕ್ಷಿಯಾಗಿ ನಿಂತು ವಿವರಿಸುತ್ತದೆ.
ಉಳಿದಂತೆ ಎರಡು ಮೂರು ಬಾರಿ ಓದಿ ಅರಗಿಸಿಕೊಳ್ಳಬೇಕಾದ ಹಲವು ಘನ ವಿಚಾರ ಕಾದಂಬರಿಯ ತುಂಬ ತಂತಾವೇ ಪಾತ್ರೋಚಿತವಾಗಿ ಹರಡಿದೆ. ತಮ್ಮ ಜೀವನದ ಅನುಭವ ಸಾರವನ್ನೆಲ್ಲ ಬಸಿದು ಅತ್ಯುತ್ತಮ ಕೃತಿ ರಚಿಸುತ್ತಿದ್ದ ಹಿಂದಣ ಸಾಹಿತಿಗಳಂತೆ ತಮ್ಮ ಅನುಭವದ ಸಾರ ಸರ್ವಸ್ವವನ್ನೆಲ್ಲ ಸಾಂದ್ರಗೊಳಿಸಿ ಕಡೆದ ಶಿಲ್ಪದ ಹಾಗೆ ನ್ಯಾಸವು ವಿನ್ಯಾಸಗೊಂಡಿದೆ. ಅಷ್ಟು ದೊಡ್ಡ ಕ್ಯಾನ್ವಾಸನ್ನು ಲೀಲಾಜಾಲವಾಗಿ ನಿರ್ವಹಿಸಿದ ಹರೀಶ ಹಾಗಲವಾಡಿಯವರ ಪ್ರತಿಭೆಗೆ ನನ್ನ ನಮಸ್ಕಾರಗಳು. ಸಂಸಾರಿದಲ್ಲಿರುವವರಿಗೆ ಮತ್ತು ಸನ್ಯಾಸಿಗಳಿಗೆ ಏಕಕಾಲಕ್ಕೆ ವಿಚಲಿತಗೊಳಿಸಿ ಚಿಂತನೆಗೆ ಹಚ್ಚಬಲ್ಲ ಮಹಾನ್ ಕೃತಿಯಾಗಿ ಇದು ಮೂಡಿಬಂದಿದೆ. ಎಲ್ಲರೂ ಒಮ್ಮೆ ಓದಿ ಜೀವನದ ಬಗ್ಗೆ ತಮ್ಮ ಧೋರಣೆಗಳನ್ನು ಪುನರ್ವಿಮರ್ಶೆ ಮಾಡಿಕೊಳ್ಳುವಂತೆ ಪ್ರಭಾವಿಸಬಲ್ಲಷ್ಟು ಶಕ್ತವಾದ ಕಾದಂಬರಿ.
Sir ,Better if u post website link where one can buy book also .
It might sounds like marketing or promoting .
Nevertheless itz oksy