ಪ್ರಜಾಪ್ರಭುತ್ವ ಎಂಬುದು ರಾಮನಂತೆ ; ರಾಜಕಾರಣಕ್ಕೆ ಬೇಕಿದೆ ನೀತಿ ಸಂಹಿತೆ
– ಸಂತೋಷ್ ತಮ್ಮಯ್ಯ
ಭಾಷೆ ಇದ್ದಮೇಲೆ ವ್ಯಾಕರಣವಿರುವಂತೆ, ಕಾವ್ಯ ಇದ್ದಮೇಲೆ ಕವಿಯೊಬ್ಬನೂ ಇರುವಂತೆ ರಾಜಕೀಯ ಪಕ್ಷ ಇದ್ದಮೇಲೆ ಅದರ ಹಿಂದೊಂದು ಸಿದ್ಧಾಂತವಿರಲೇಬೇಕು. ಪಕ್ಷದ ಹುಟ್ಟು ಕೂಡಾ ಒಂದು ಸಿದ್ಧಾಂತ, ಚಳವಳಿಗಳ ಬುನಾದಿಗಳ ಮೇಲೆ ಆಗಿರುತ್ತದೆ. ಈ ಸಿದ್ಧಾಂತಗಳು ಒಂಥರಾ ಚಪ್ಪರವಿದ್ದಂತೆ. ಆ ಚಪ್ಪರದ ಕೆಳಗೆ ಪ್ರತಿಷ್ಠಾಪಿತವಾದವುಗಳೇ ಪಕ್ಷಗಳು. ವಿಶ್ವಾದ್ಯಂತದ ರಾಜಕೀಯ ಪಕ್ಷಗಳ ಜಾತಕಗಳೆಲ್ಲವೂ ಸಾಧಾರಣವಾಗಿ ಹೀಗೆಯೇ. ಒಂದು ಉದ್ದೇಶ, ಒಂದು ಧ್ಯೇಯ, ಸಮಾಜದ ಅಶೋತ್ತರ, ರಾಷ್ಟ್ರೀಯತೆ, ಪ್ರಾಂತೀಯತೆ, ಪರಂಪರೆ ಮೊದಲಾದವುಗಳು ಆ ಚಪ್ಪರದ ಕಂಬಗಳು. ಸಿದ್ಧಾಂತಗಳನ್ನು ನೋಡಿದರೂ ಆಯಾ ಪಕ್ಷಗಳ ನಡೆ, ವರ್ತನೆಗಳನ್ನು ಸುಲಭವಾಗಿ ಕಂಡುಹಿಡಿದುಬಿಡಬಹುದು. ರಾಜಕೀಯ ಪಕ್ಷಗಳು ಸಿದ್ಧಾಂತಗಳಿಲ್ಲದಿರುವ ಸಾಧ್ಯತೆಗಳೇ ಇಲ್ಲ. ಕನಿಷ್ಠ ಅವು ವ್ಯಕ್ತಿಕೇಂದ್ರಿತವಾದ ಚೆಹರೆಯನ್ನಾದರೂ ಹೊಂದಿರುತ್ತವೆ. ಅಂಥ ಪಕ್ಷ ಆ ವ್ಯಕ್ತಿಯ ವರ್ತನೆ, ಪ್ರಭಾವವನ್ನೇ ಸಿದ್ಧಾಂತವೆಂಬಂತೆ ಬಣ್ಣಿಸಿಕೊಳ್ಳುತ್ತದೆ. ಇನ್ನು ಕೆಲವೊಮ್ಮೆ ಯಾವುದೋ ದೇಶದಲ್ಲಿ ಯಾವುದೋ ಒಂದು ಹೊತ್ತಿನಲ್ಲಿ ನಡೆದ ಒಂದು ಹತ್ಯಾಕಾಂಡವನ್ನೇ ಸಿದ್ಧಾಂತ ಎಂದು ಬಿಂಬಿಸುವ ರಾಜಕೀಯ ಪಕ್ಷಗಳೂ ಇವೆ. ತತ್‌ಕ್ಷಣದ ಒಂದು ಸ್ಪಂದನೆಯನ್ನೇ ರಾಜಕೀಯ ಸಿದ್ಧಾಂತ ಎಂದುಕೊಳ್ಳುವವರೂ ಇದ್ದಾರೆ. ರಾಷ್ಟ್ರೀಯತೆಯ ಹಂಗಿಲ್ಲದಿರುವ ಸಿದ್ಧಾಂತಗಳನ್ನೂ ಕೂಡಾ ಜಗತ್ತು ನೋಡಿದೆ, ಅನುಭವಿಸಿದೆ. ಅಧುನಿಕ ಪ್ರಜಾಪ್ರಭುತ್ವಕ್ಕೂ ಪೂರ್ವದಲ್ಲೇ ಇದ್ದ ಕೆಲವು ಗುಂಪುಗಳು, ಆ ಗುಂಪುಗಳಿಗೂ ಇದ್ದ ಸಿದ್ಧಾಂತಗಳನ್ನೂ ಜಗತ್ತು ನೋಡಿದೆ. ದೀರ್ಘ ಕಾಲ ಬಾಳಿದ ಗಟ್ಟಿತನದ ಸಿದ್ಧಾಂತಗಳನ್ನು, ಪಕ್ಷಗಳನ್ನೂ ನೋಡಿದೆ. ಆತುರದಿಂದ ಸಷ್ಟಿಯಾದವು ಅಷ್ಟೇ ಬೇಗ ಕಾಲವಾದುದನ್ನೂ ನೋಡಿದೆ. ನೆಪಮಾತ್ರಕ್ಕೆ ದೊಡ್ಡದಾಗಿ ಕಾಣುವ ಆದರೆ ಒಳಗೊಳಗೇ ಸತ್ತಂತಿರುವ ಪಕ್ಷ ಮತ್ತು ಸಿದ್ಧಾಂತವನ್ನೂ ನೋಡಿದೆ. ಮತ್ತು ಹಲವು ಅನಿವಾರ್ಯತೆಗಳಿಂದ ಸಿದ್ಧಾಂತದಿಂದ ಹೊರಳಿಕೊಂಡವುಗಳನ್ನು ಕೂಡಾ ಜಗತ್ತು ಹಲವು ಸಂದರ್ಭಗಳಲ್ಲಿ ನೋಡಿದೆ. ಭಾರತವಂತೂ ಅದನ್ನು ತೀರಾ ಹತ್ತಿರದಿಂದ ನೋಡಿದೆ.
ಪಕ್ಷಗಳು ಮತ್ತು ಅವುಗಳ ಸಿದ್ಧಾಂತಗಳು ಹೀಗೇಕೆ ವರ್ತಿಸುತ್ತವೆ ಎಂದು ಅವಲೋಕಿಸಿದರೆ ಸಿಗುವ ಉತ್ತರ ಒಂದೇ. ಪಕ್ಷವೊಂದು ಹೆಚ್ಚು ಶ್ರಮವಿಲ್ಲದೆ ಹುಟ್ಟುತ್ತದೆ ಮತ್ತು ಅದನ್ನು ರೂಪಿಸುವ ಸಿದ್ಧಾಂತಗಳು ಮಾತ್ರ ಮಥನದಿಂದ ಹುಟ್ಟಬೇಕು ಎಂಬುದು. ಹಾಗಾಗಿ ಮಥನದಿಂದ ಹುಟ್ಟದ ಕಮ್ಯುನಿಸಂ ಇದ್ದೂ ಸತ್ತಂತಿದೆ. ಉಸಿರಾಡಲು ವಾಮಮಾರ್ಗಕ್ಕಿಳಿದಿದೆ. ವ್ಯಕ್ತಿಕೇಂದ್ರಿತ ಪಕ್ಷಗಳಲ್ಲಿ ವ್ಯಕ್ತಿಯ ಅವಸಾನದ ನಂತರ ಪಕ್ಷವೂ ಅವಸಾನದ ದಿಕ್ಕಿನತ್ತ ಸಾಗಿದೆ. ಸಿದ್ಧಾಂತದಿಂದ ಹೊರಳಿಕೊಂಡ ರಾಜಕೀಯ ಪಕ್ಷಗಳು ಅಲ್ಪಾವಧಿಯವರೆಗೆ ಜನರನ್ನೇನೋ ಮೂರ್ಖವಾಗಿಸಬಲ್ಲದು. ಅದರಿಂದ ಸಮಾಜ ದಿಕ್ಕುತಪ್ಪಿದ ಉದಾಹರಣೆಗಳಿವೆ. ಅಂಥ ಪಕ್ಷ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಇನ್ನಿಲ್ಲದ ಕಸರತ್ತನ್ನು ನಡೆಸುತ್ತವೆ. ಆದರೆ ವಿಶಾಲ ದೃಷ್ಟಿಯ, ವ್ಯಕ್ತಿಗಿಂತಲೂ ಪರಂಪರೆ ಕೇಂದ್ರಿತವಾದ, ತನ್ನದಲ್ಲದ ಬಗ್ಗೆ ದ್ವೇಷವಿಟ್ಟುಕೊಳ್ಳದ ಸೈದ್ಧಾಂತಿಕ ಪಕ್ಷ ಧೀರ್ಘಾವಧಿಯವರೆಗೆ ಉಳಿದುಕೊಳ್ಳುತ್ತದೆ. ಮಾತ್ರವಲ್ಲ ಸಮಾಜವನ್ನು ರೂಪಿಸುವ ಶಕ್ತಿಯನ್ನು ಅದು ಪಡೆದಿರುತ್ತದೆ. ಅದು ಅಧಿಕಾರದಲ್ಲಿರಲಿ, ಇಲ್ಲದಿರಲಿ ಅದರ ಸೈದ್ಧಾಂತಿಕ ಶಕ್ತಿ ಸಮಾಜಕ್ಕೆ ಹರಿಯುತ್ತಲೇ ಇರುತ್ತದೆ.
ಈ ವಾದಗಳ ಮೂಲಕ ದೇಶದ ರಾಜಕೀಯವನ್ನು, ಪ್ರಜಾಪ್ರಭುತ್ವವನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು. ಪಂಡಿತ್ ದೀನದಯಾಳ್ ಉಪಾಧ್ಯಾಯರು ದೇಶದ ರಾಜಕೀಯವನ್ನು ಕಾರ್ಯಕರ್ತರಿಗೆ ಅರ್ಥಮಾಡಿಸಿಕೊಟ್ಟಿದ್ದು ಈ ಮಾಧರಿಯಲ್ಲಿ. ಮೌಲ್ಯಾಧಾರಿತ ರಾಜಕಾರಣ, ಗಾಂಧಿ ಪ್ರಣೀತ ಆರ್ಥನೀತಿ, ಸಾಂಸ್ಕೃತಿಕ ಬೇರುಗಳು, ಪ್ರತಿಪಕ್ಷದ ಕರ್ತವ್ಯಗಳು, ಆಡಳಿತ ಪಕ್ಷದ ನಡೆಗಳ ಬಗ್ಗೆ ಅವರಿಗೆ ಸ್ಪಷ್ಟ ಅರಿವಿತ್ತು. ಆದರೆ ಪಂಡಿತ್‌ಜೀಯವರು ರಾಜಕೀಯದಲ್ಲಿ ಸಕ್ರೀಯರಾಗಿದ್ದ ಕಾಲದ ಭಾರತವೇನೂ ಕೋಶಲದಂತಿರಲಿಲ್ಲ. ಹಲವು ರಾಜಕೀಯ ಗೊಂದಲಗಳು, ಸ್ವಾರ್ಥಗಳು, ರಾಷ್ಟ್ರಿಯತೆಯನ್ನು ವಿರೋಸುಧಿವವರು, ಸಾಂಸ್ಕೃತಿಕ ಗಡಿಗಳನ್ನು ಅಲ್ಲಗಳೆವವರು, ಮತಾಂಧ ಶಕ್ತಿಗಳು, ಸೋಮಾರಿಗಳು, ವಿದೇಶಿ ಸಿದ್ಧಾಂತಗಳನ್ನು ಎರವಲು ತಂದವರಿಂದ ದೇಶ ಬಳಲುತ್ತಿತ್ತು. ಪ್ರಜಾಪ್ರಭುತ್ವವೇನೋ ರಾಮನ ಸ್ಥಾನದಲ್ಲಿತ್ತು. ಆದರೆ ರಾಮರಾಜ್ಯಕ್ಕೆ ಅಡ್ಡಿಮಾಡುವವರೇ ಎಲ್ಲೆಲ್ಲೂ ತುಂಬಿದ್ದರು. ಅಂಥ ಸಂದರ್ಭದಲ್ಲಿ ಅವರಿಗೆ ರಾಜಕೀಯ ಪಕ್ಷಗಳಿಗೆ ನೀತಿಸಂಹಿತೆಯ ಆವಶ್ಯಕತೆಯಿದೆ ಎನಿಸಿತು. ೧೯೬೧ರಲ್ಲಿ ಅವರು ಬೋಧಿಸಿದ ರಾಜಕೀಯದ ನೀತಿಸಂಹಿತೆ ಇಂದಿಗೂ ಅದೆಷ್ಟು ಪ್ರಸ್ತುತವೆಂದರೆ ಅದನ್ನೋದುತ್ತಿದ್ದರೆ ದೀನದಯಾಳರು ನಿನ್ನ್ನೆಗೋ, ಮೊನ್ನೆಗೋ ಅಥವಾ ಇಂಥವರನ್ನೇ ಬೊಟ್ಟು ಮಾಡುತ್ತಿದ್ದಾರೇನೋ ಅನಿಸುವಷ್ಟು. ಆದರೆ ಅವರು ನೀತಿಸಂಹಿತೆಯ ಆವಶ್ಯಕತೆಯನ್ನು ಹೇಳಿದ ಪ್ರಸಂಗ ಮಾತ್ರ ಭಿನ್ನ ಸಂದರ್ಭದ್ದು.
ಅದು ೧೯೫೧ರ ಆರಂಭದ ಕಾಲ. ಅದಕ್ಕೂ ಮೂರ್ನಾಲ್ಕು ವರ್ಷಗಳ ಮೊದಲಿನಿಂದಲೂ ಜಮ್ಮುಮತ್ತು ಕಾಶ್ಮೀರದ ಪ್ರಶ್ನೆ ದೇಶದ ಚಿಂತಕ ವಲಯದಲ್ಲಿ ಆತಂಕ ಮೂಡಿಸಿತ್ತು. ಪಂಡಿತರ ವಲಸೆ, ಕ್ರೌರ್ಯಗಳ ಜೊತೆಗೆ ಇದು ಹೀಗೇ ಮುಂದುವರಿದರೆ ಮುಟ್ಟುವುದೆಲ್ಲಿಗೆ ಎಂಬ ಆತಂಕ ಶುರುವಾಗಿತ್ತು. ಎಲ್ಲರೂ ಅತಂಕದಲ್ಲಿ ಕೊರಗಿ ಕುಳಿತಿದ್ದಾಗ ಎದ್ದು ಹೊರಟವರು ಒಬ್ಬರು. ಅವರು ದೇಶಕಂಡ ಮಹಾರಾಜಕಾರಣಿ, ಶಿಕ್ಷಣತಜ್ಞ, ಘನಪಂಡಿತ ಡಾ.ಶ್ಯಾಂ ಪ್ರಸಾದ್ ಮುಖರ್ಜಿ. ಜಮ್ಮು-ಕಾಶ್ಮೀರದಲ್ಲಿ ಜಾರಿಯಲ್ಲಿರುವ ೩೭೦ನೇ ವಿಧಿಯನ್ನು ಮೊಟ್ಟಮೊದಲ ಬಾರಿಗೆ ವಿರೋಧಿಸಿದವರು ಶ್ಯಾಂ ಪ್ರಸಾದ್ ಮುಖರ್ಜಿಯವರು. ದೇಶದೊಳಗೊಂದು ದೇಶದ ನಿರ್ಮಾಣ ಯತ್ನದ ಅಪಾಯವನ್ನು ೫೦ರ ದಶಕದಲ್ಲೆ ಮನಗಂಡಿದ್ದ ಅವರು ಸಂವಿಧಾನರಿತ್ಯಾ ಅದನ್ನು ವಿರೋಧಿಸಲು ಚಳವಳಿ ಹೂಡಿದರು. ಸರ್ಕಾರಕ್ಕೆ ಮತ್ತು ಜನರಿಗೆ ಅದನ್ನು ಮನವರಿಕೆ ಮಾಡಿಕೊಡುವ ಪ್ರಯತ್ನದಲ್ಲಿ ಮುಖರ್ಜಿ ಸಕ್ರೀಯರಾಗಿದ್ದರು. ಪ್ರಧಾನಮಂತ್ರಿ ನೆಹರೂರವರನ್ನು ೩೭೦ನೇ ವಿಧಿಯ ನಿಷೇಧಕ್ಕೆ ಸತತ ಒತ್ತಾಯಿಸಿದರು. ಆದರೆ ನೆಹರೂ ಅಧಿಕಾರದಲ್ಲಿರುವಷ್ಟು ದಿನವೂ ಜಮ್ಮು-ಕಾಶ್ಮೀರದ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಕೊನೆಗೆ ಮುಖರ್ಜಿಯವರು ತಾವೇ ಪ್ರಧಾನಮಂತ್ರಿಗಳ ಭೇಟಿಗೆ ಅವಕಾಶವನ್ನು ಕೋರಿದಾಗಲೂ ನೆಹರೂ ಭೇಟಿಗೆ ಅವಕಾಶವನ್ನು ನೀಡದೆ ಉದ್ದಟತನ ಮೆರೆದರು. ಡಾ. ಶ್ಯಾಂ ಪ್ರಸಾದ್ ಮುಖರ್ಜಿಯವರಂಥಾ ಪ್ರಕಾಂಡ ಪಂಡಿತ ಮತ್ತು ಪ್ರಭಾವಿ ನಾಯಕ ಸಮಸ್ಯೆಯೊಂದನ್ನು ಚರ್ಚಿಸಲು ಪ್ರಧಾನಿಯವರ ಭೇಟಿಗೆ ಅವಕಾಶ ಬೇಡುವ ಸ್ಥಿತಿ ಮತ್ತು ನೆಹರೂ ಅದನ್ನು ನಿರಾಕರಿಸಿದ್ದನ್ನು ಕಂಡು ದೀನದಯಾಳಜಿಯವರಂಥ ಚಿಂತಕರಿಗೆ ಧಿಗ್ಭ್ರಮೆಯಾಗಿದ್ದರಲ್ಲೇನೂ ಆಶ್ಚರ್ಯವಿರಲಿಲ್ಲ. ಆದರೆ ದೀನದಯಾಳರಿಗೆ ಅದು ಕೇವಲ ನೆಹರೂ ಮಾನಸಿಕತೆಯಾಗಿ ಮಾತ್ರ ಕಾಣಲಿಲ್ಲ. ದೇಶದ ರಾಜಕಾರಣದ ಭವಿಷ್ಯ ಮಂಕಾಗಿರುವಂತೆ ಕಂಡಿತು.
ಅತ್ಯಂತ ಹಳೆಯದಾದ ಮತ್ತು ಅನುಭವವೂ ಸಾಕಷ್ಟಿದ್ದ ಕಾಂಗ್ರೆಸ್ ಹೀಗೆ ಹೊಣೆಗೇಡಿಯಂತೆ ವರ್ತಿಸುತ್ತಿರುವುದು ಈಗಾಗಲೇ ಹುಟ್ಟಿರುವ ಮತ್ತು ಹುಟ್ಟಲಿರುವ ರಾಜಕೀಯ ಪಕ್ಷಗಳಿಗೆ ಖಂಡಿತಾ ಮೇಲ್ಪಂಕ್ತಿಯಾಗಲಾರದು ಎಂದು ಅವರು ಅತಂಕಿತರಾದರು. ಕಮ್ಯುನಿಸ್ಟ್ ಮಾನಸಿಕತೆಯ ಕುಹಕಿಗಳು ಆ ಹೊತ್ತಲ್ಲೂ ಕೂಡಾ ಕಾಂಗ್ರೇಸ್ ಹಳೆಯ ಪಕ್ಷವಾಗಿರಬಹುದು, ಆದರೆ ಉಳಿದ ಎಲ್ಲಾ ಪಕ್ಷಗಳಿಗೂ ದೀನದಯಾಳರು ಅದು ಮೇಲ್ಪಂಕ್ತಿಯಾಗಬೇಕೆಂದು ಬಯಸಿದಂತಿದೆ. ಭಾರತಕ್ಕೆ ಈಗ ಬೇಕಿರುವುದು ದುಡಿಯುವ ವರ್ಗದ ಏಳಿಗೆಯನ್ನು ಬಯಸುವ ಮತ್ತು ವರ್ಗಭೇದದ ವಿರುದ್ಧ ಆಕ್ರೋಶ ಹುಟ್ಟುಹಾಕುವ ಚಿಂತನೆಗಳು ಎಂದು ಟೀಕಿಸಿದರು. ಅಂದರೆ ಕಾಲ ಉರುಳಿದರೂ ಕಮ್ಯುನಿಸ್ಟರ ತಲೆ ಯಾವತ್ತಿದ್ದರೂ ಝ್ಹಾರ್ ದೊರೆಗಳ ಕಾಲದಲ್ಲೇ ನಿಂತುಬಿಟ್ಟಿರುತ್ತವೆ ಎಂದಾಯಿತು. ಉಳಿದ ರಾಜಕೀಯ ಪಕ್ಷಗಳಿಗೆ ಕಾಂಗ್ರೆಸ್ ಮೇಲ್ಪಂಕ್ತಿಯಾಗುವ ಸಂದರ್ಭ ಅವೈಜ್ಞಾನಿಕವೇ? ಸ್ವಾತಂತ್ರ್ಯದ ಹೊತ್ತಲ್ಲಿ ಇದ್ದಿದ್ದೇ ಕಾಂಗ್ರೆಸ್, ಹೋರಾಟದ ಮುಂಚೂಣಿಯಲ್ಲಿದ್ದಿದ್ದು ಕಾಂಗ್ರೆಸ್,ಸ್ವಾತಂತ್ರ್ಯಾನಂತರ ಅಧಿಕಾರ ವಹಿಸಿಕೊಂಡಿದ್ದೂ ಕಾಂಗ್ರೆಸ್. ಸ್ವಾತಂತ್ರ್ಯಾನಂತರ ಯಾವುದೇ ರಾಜಕೀಯ ಪಕ್ಷಗಳು ಹುಟ್ಟಿದರೂ ಅವು ಕಾಂಗ್ರೆಸ್ ಎಂಬ ಗುಂಗಿನಿಂದ ಹೊರಬಂದು ಹೊಸ ಪಕ್ಷವನ್ನು ಹುಟ್ಟುಹಾಕುವ ಸಂದರ್ಭವಂತೂ ಅಂದಿರಲಿಲ್ಲ. ಡಿವಿಜಿಯವರು ತಮ್ಮ ವೃತ್ತಪತ್ರಿಕೆಗಳು ಕೃತಿಯಲ್ಲಿ ಹೇಳಿದಂತೆ ದಿನಪತ್ರಿಕೆಗಳ ಗುಣಮಟ್ಟ ಹೆಚ್ಚಾದರೆ, ವಾರಪತ್ರಿಕೆಗಳು, ಪಾಕ್ಷಿಕಗಳು ಮತ್ತು ಮಾಸ ಪತ್ರಿಕೆಗಳ ಗುಣಮಟ್ಟವೂ ತನ್ನಿಂದ ತಾನೇ ಹೆಚ್ಚುವುದು ಎಂದು ಹೇಳಿರಲಿಲ್ಲವೇ? ಹಾಗೆಯೇ ಹಳೆಯ ಪಕ್ಷವೊಂದು ಸರಿದಾರಿಯಲ್ಲಿ ನಡೆದರೆ ಅದರಂತೆ ನಡೆಯಲು ಅಥವಾ ಅದರ ಪ್ರಭಾವವನ್ನು ಮುರಿಯಲು ತಾನೂ ಅದರಂತೆ ಆಗಬೇಕೆಂದು ಬಯಸುವುದು ನಿಜವಲ್ಲವೇ? ಅಸ್ತ್ರಕ್ಕೆ ಪ್ರತ್ಯಾಸ್ತ್ರವನ್ನು ಹೂಡುವುದು ಹೀಗೇ ಅಲ್ಲವೇ? ದೀನದಯಾಳರು ಅಂಥ ಟೀಕೆಗಳಿಗೆ ಪ್ರತಿಕ್ರಿಯೆಗಳನ್ನು ಕೊಡಲಿಲ್ಲ, ಬದಲಿಗೆ ತಮ್ಮ ವಿಚಾರವನ್ನು ಇನ್ನಷ್ಟು ಸ್ಪಷ್ಟಪಡಿಸಿದರು. ಅತ್ಯಂತ ಹಳೆಯದೂ ವಿಶಾಲವಾದುದೂ ಆಗಿರುವ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷದ ಮೇಲೆ ಈಗ ಜನರ ಮತ್ತು ಉಳಿದ ರಾಜಕೀಯ ಪಕ್ಷಗಳ ಮುಂದೆ ಉದಾಹರಣೆಯನ್ನು ಸ್ಥಾಪಿಸುವ ಜವಾಬ್ದಾರಿಯು ನಿಂತಿದೆ. ದುರದೃಷ್ಟವಶಾತ್ ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸಿಗರ ರಾಜಕೀಯ ನೀತಿ-ನಡವಳಿಕೆಯು ಅನುಕರಣಾಯೋಗ್ಯವಾಗಿಲ್ಲ.
ಕಾಂಗ್ರೆಸ್ ಪಕ್ಷದಿಂದ ಪಕ್ಷಾಂತರ ಮಾಡಿಕೊಂಡು ಬಂದು ರೂಪುಗೊಂಡ ಪಕ್ಷಗಳು ಸಹ ಅಂಥದ್ದೇ ವ್ಯಾಯಿಂದ ಬಳಲುತ್ತವೆ. ಏಕೆಂದರೆ ವಿಶೇಷವಾಗಿ ಕಾಂಗ್ರೆಸನ್ನು ಬಿಟ್ಟು ಬಂದವರು ಎಂದೂ ವೈಚಾರಿಕತೆಯ ನೆಲೆಗಟ್ಟಿನಲ್ಲಿ ಬಿಟ್ಟುಬಂದಿರುವುದಿಲ್ಲ. ಆದ್ದರಿಂದ ದೇಶದಲ್ಲಿ ಸ್ವಾಸ್ಥ್ಯಪೂರ್ಣವಾದ ಮತ್ತು ರಾಜಕೀಯ ಪ್ರಜಾಸತ್ತೆಯ ಉತ್ತಮ ಸಂಘಟನೆಗೆ ಮಾರ್ಗದರ್ಶನ ಮಾಡುವಂತಹ ನೀತಿಸಂಹಿತೆಯನ್ನು ನಿರ್ಮಿಸಲು ಕಾಂಗ್ರೆಸ್ ಅಲ್ಲದ ಪಕ್ಷಗಳು ಪ್ರಜ್ಞಾಪೂರ್ವಕವಾಗಿ ಪ್ರಯತ್ನಿಸುವುದು ಅವಶ್ಯಕವಾಗಿದೆ. ಇದುವರೆಗೂ ಕಾಂಗ್ರೆಸ್ ಮತ್ತು ಕಾಂಗ್ರೆಸಿಗರು ಮಾಡಿರುವ ಬಹಳಷ್ಟನ್ನು ಅವರು ನಿಷ್ಪಲಗೊಳಿಸಬೇಕಾಗುತ್ತದೆ ಎಂದರು. ದೀನದಯಾಳರು ಹಾಗಂದ ಹೊತ್ತಿಗೆ ದೇಶ ಕಾಂಗ್ರೆಸಿನ ಉಪದ್ವ್ಯಾಪಗಳನ್ನು ಸಾಕಷ್ಟು ನೋಡಿತ್ತು. ಹಾಗೆ ನೋಡಿದರೆ ಅದಕ್ಕೂ ಮೊದಲೇ ಕಾಂಗ್ರೆಸಿನ ನಡೆಗಳೇನೂ ಅನುಕರಣಾಯೋಗ್ಯವಾಗಿರಲಿಲ್ಲ. ಆದರೆ ಕಾಂಗ್ರೆಸಿಗೆ ದೇಶದೊಂದಿಗೆ ದೇಶದ ರಾಜಕಾರಣವನ್ನೂ ಸ್ವಚ್ಛವಾಗಿಸುವ ಎಲ್ಲಾ ಅವಕಾಶಗಳೂ ಇದ್ದವು. ಆದರೆ ಅದೆಷ್ಟು ಕೊಳಕು ರಾಜಕಾರಣಕ್ಕಿಳಿಯಿತೆಂದರೆ ತಾನಿರುವುದೇ ಹೀಗೆ ಎಂಬ ಉದ್ದಟತನದಲ್ಲೇ ದೇಶವಾಳಿತು. ಆ ಉದ್ದಟತನ ಬೆಳೆಯುತ್ತಾ ಹೋದರೆ ಮುಂದೆ ಎಲ್ಲಿಗೆ ಮುಟ್ಟಬಹುದು ಎಂಬ ಆತಂಕ ಅಂದೇ ಪಂಡಿತ್‌ಜಿಗಿತ್ತು. ಅದೆಲ್ಲಿಗೆ ತಲುಪಿದೆ ಎಂಬುದು ಇಂದಿನ ಪೀಳಿಗೆಗೆ ಚೆನ್ನಾಗಿ ಅರ್ಥವಾಗಿದೆ. ದೀನದಯಾಳರು ನೂರರ ಹೊತ್ತಲ್ಲೂ ಮಹಾತ್ಮನೆನಿಸುವುದು ಅದಕ್ಕೆ.
ದೀನ ದಯಾಳರು ನೀತಿಸಂಹಿತೆಯ ಆವಶ್ಯಕತೆಯನ್ನಷ್ಟೇ ಹೇಳಿ ಕೈತೊಳೆದುಕೊಳ್ಳಲಿಲ್ಲ. ನೀತಿಸಂಹಿತೆಗಳನ್ನೂ ಹೇಳಿದ್ದರು. ಒಂದು ಪಕ್ಷದಿಂದ ಟಿಕೆಟ್ ನಿರಾಕರಿಸಲ್ಪಟ್ಟವನಿಗೆ ಬೇರೆ ಪಕ್ಷದಿಂದ ಟಿಕೆಟು ಕೊಡದಿರುವುದು ಅಥವಾ ವೈಯಕ್ತಿಕ ಮತ್ತು ಖಾಸಗಿ ದೋಷಗಳು, ತಪ್ಪುಗಳನ್ನು ಉಲ್ಲೇಖಿಸುವುದನ್ನು ಬಿಟ್ಟು ಟೀಕೆಗಳ ಆಕ್ರಮಣವನ್ನು ಕೇವಲ ಪಕ್ಷದ ನೀತಿಯ ಬಗೆಗೆ ಮಾತ್ರ ಸೀಮಿತಗೊಳಿಸಿಕೊಳ್ಳುವುದು. ಆದಾಗ್ಯೂ ಈ ವಿಷಯಗಳಲ್ಲಿ ಕಾಂಗ್ರೆಸನ್ನು ಒತ್ತಾಯಿಸುವುದು ಕೂಡ ಯೋಗ್ಯವಾಗಿರುತ್ತದೆ. ಅದರ ಫಲಿತಾಂಶವು ರಾಷ್ಟ್ರದ ಸಾಮಾನ್ಯ ರಾಜಕೀಯ ಸ್ವಾಸ್ಥ್ಯದ ಮೇಲೆ ಕೂಡಾ ಹಿತಕರವಾದ ಆರೋಗ್ಯಕರವಾದ ಪರಿಣಾಮವನ್ನು ಉಂಟುಮಾಡುತ್ತದೆ ಎಂದಿದ್ದರು ದೀನದಯಾಳರು. ವಿಶೇಷವೆಂದರೆ ಆ ಹೊತ್ತಲ್ಲೇನೂ ಪಕ್ಷಾಂತರಗಳ ಭರಾಟೆ ಇಂದಿನಂತಿರಲಿಲ್ಲ. ರಾತ್ರೋರಾತ್ರಿ ಪಕ್ಷ ಬದಲಿಸುವ ಚಾಳಿ ಹೆಚ್ಚಿರಲಿಲ್ಲ. ಆದರೂ ಅದನ್ನೊಂದು ಗಂಭೀರ ವಿಷಯವಾಗಿ ಅವರು ಪ್ರತಿಪಾದಿಸಿದ್ದರು. ಇವೆಲ್ಲವನ್ನೂ ಮಾಡುವ ಪಕ್ಷ ಕಾಂಗ್ರೆಸ್ ಎನ್ನುವುದು ಮತ್ತು ಕಾಂಗ್ರೆಸಿನಿಂದ ಉಳಿದ ಪಕ್ಷಗಳಿಗೂ ಈ ಚಾಳಿ ಅಂಟುವುದು ಎಂಬುದನ್ನು ಅವರು ಮನಗಂಡಿದ್ದರು. ಮುಂದೆ ಅದು ನಿಜವೂ ಅಯಿತು.
ಒಂದು ದಿನಕ್ಕೆ ರಾಜಕಾರಣಿಯೊಬ್ಬನ ನಿಷ್ಠೆ ಬದಲಾಗಬಹುದು. ಆದರೆ ಆತನ ಸೈದ್ಧಾಂತಿಕ ನಿಲುವು ಬದಲಾಗಿಬಿಡುವುದು ಹೇಗೆ ಎಂಬುದು ಇಂದಿಗೂ ಒಂದು ನಿಗೂಢವೇ! ಇಂಥವರ ವಲಸೆಯಿಂದ ಯಾವುದೇ ಪಕ್ಷದಲ್ಲಿ ಸಿದ್ಧಾಂತ ಎಲ್ಲಿದೆ ಎಂದು ಹುಡುಕುವ ಪರಿಸ್ಥಿತಿ ಬಹುಬೇಗ ಬರುತ್ತದೆ. ಅಲ್ಲಿಗೆ ರಾಜಕಾರಣವೆಂಬುದರ ಸೂತ್ರವೇ ಕಳಚಿ ಅದರ ನೇರ ಪರಿಣಾಮ ಪ್ರಜಾಪ್ರಭುತ್ವದ ಮೇಲಾಗುತ್ತದೆ. ನಮ್ಮ ಇಂದಿನ ರಾಜಕೀಯ ಜೀವನವು ಸ್ವಾತಂತ್ರ್ಯ ಸಂಗ್ರಾಮದ ವಿಸ್ತರಣೆ ಎನ್ನುವ ದೀನದಯಾಳರ ಚಿಂತನೆ ಅತ್ಯಂತ ಮೇಲ್ಮಟ್ಟದ್ದು. ಹಾಗಾಗಿ ಅವರು ಸರ್ಕಾರದ ತೀರ್ಮಾನಗಳನ್ನು ಪ್ರಭಾವಿಸುವುದರಲ್ಲಿ ರಾಜಕೀಯ ಪಕ್ಷಗಳು ಅನುಸರಿಸುವ ಮಾರ್ಗದ ಬಗೆಗೆ ಕೂಡಾ ನೀತಿಸಂಹಿತೆಯನ್ನು ರೂಪಿಸಬೇಕಾಗಿದೆ ಎಂದಿದ್ದರು. ಆದರೆ ಕಾಂಗ್ರೆಸ್ ನಮ್ಮ ರಾಜಕೀಯ ಜೀವನ ಸ್ವಾತಂತ್ರ್ಯ ಹೋರಾಟದ ವಿಸ್ತರಣೆ ಎನ್ನುವುದನ್ನು ವ್ಯತಿರಿಕ್ತವಾಗಿ ಅರ್ಥಮಾಡಿಕೊಂಡಿತು. ಅದಕ್ಕೆ ತಮಗಿಂತ ಮೊದಲು ಈ ಸ್ಥಾನದಲ್ಲಿ ಬ್ರಿಟಿಷರಿದ್ದರು ಎಂಬ ಗುಂಗಿನಿಂದ ಸುಲಭಕ್ಕೆ ಹೊರಬರಲಾಗಲೇ ಇಲ್ಲ. ಹಾಗಾಗಿ ಕೆಲವು ಪರಿಸ್ಥಿತಿಗಳಲ್ಲಿ ಬ್ರಿಟಿಷ್ ಆಡಳಿತದಲ್ಲಿದ್ದಂಥದ್ದೇ ಸಂಗತಿಗಳು ದೇಶದಲ್ಲಿ ನಡೆದವು. ಎಷ್ಟೆಂದರೆ ಜಮ್ಮು-ಕಾಶ್ಮೀರಕ್ಕೆ ತೆರಳಿದ ಶ್ಯಾಂ ಪ್ರಸಾದ್ ಮುಖರ್ಜಿಯವರನ್ನು ಕಾಂಗ್ರೆಸ್ ಬಂಧಿಸಿತು. ಬ್ರಿಟಿಷ್ ಕಾಲದಲ್ಲಿ ನಡೆದಂತೆ ಅವರ ಮರಣವೂ ನಿಗೂಢವೆನಿಸುವಂತಿತ್ತು! ಕೆಲವು ನಿರ್ದಿಷ್ಟ ಸಂಗತಿಗಳ ಬಗೆಗೆ ಜನರ ಅಭಿಪ್ರಾಯವನ್ನು ಅಭಿವ್ಯಕ್ತಿಸುವ ಸಂಬಂಧದಲ್ಲಿ ಸರ್ಕಾರ ಹಾಗೂ ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿರುವ ಎಲ್ಲಾ ರಾಜಕೀಯ ಪಕ್ಷಗಳು ಸರ್ವಸಮ್ಮತವಾದ ನೀತಿಸಂಹಿತೆಯನ್ನು ಅಳವಡಿಸಿಕೊಳ್ಳಬೇಕೆಂದಿದ್ದರು ಪಂಡಿತ್‌ಜಿ. ಅಂದರೆ ಪ್ರಜಾಪ್ರಭುತ್ವದ ಆಶಯವನ್ನು ಯಾವ ಪೂರ್ವಗ್ರಹಗಳಿಲ್ಲದೇ ಒಪ್ಪಬೇಕೆಂದು ಎಲ್ಲರಿಗೂ ಒತ್ತಾಯಿಸಿದರು. ಅದನ್ನು ಇಂದಿನವರೆಗೂ ಯಾವ ಸರ್ಕಾರಗಳೂ ಪಾಲಿಸಿಲ್ಲ. ನೆಹರೂ ಕಾಲದಲ್ಲೇ ಅದೆಷ್ಟೋ ಅಭಿವ್ಯಕ್ತಿಗಳನ್ನು ಹತ್ತಿಕ್ಕಲಾಯಿತು? ಮುಂದೆ ಕೂಡಾ ಅಂಥದ್ದನ್ನು ನಾವು ಕಾಣಲಾರೆವು. ಗೋಹತ್ಯೆ ವಿರೋಧಿಸಿ ಸಂಗ್ರಹಿಸಿದ್ದ ಎರಡು ಕೋಟಿ ಜನರ ಸಹಿಯನ್ನೇ ಕಸದ ಬುಟ್ಟಿಗೆ ಹಾಕಿದ ಕಾಂಗ್ರೆಸ್, ಶಾಬಾನೋ ಪ್ರಕರಣದಲ್ಲಿ ಸಂವಿಧಾನವನ್ನೇ ಮೋಸಗೊಳಿಸಿದ ಕಾಂಗ್ರೆಸ್, ತುರ್ತುಪರಿಸ್ಥಿತಿಯನ್ನು ಹೇರಿದ ಕಾಂಗ್ರೆಸ್ ಮಾನಸಿಕತೆ ನಿರಂತರ ಮುಂದುವರಿಯಿತು. ಕಾಂಗ್ರೆಸ್ ತನ್ನನ್ನು ರೂಪಿಸಿಕೊಂಡಿದ್ದೇ ನೀತಿಸಂಹಿತೆಯ ಹಂಗಿಲ್ಲದೆ ಮತ್ತು ಪ್ರಜಾಪ್ರಭುತ್ವದ ಭಯವಿಲ್ಲದೆ. ಕನಿಷ್ಠ ಅದಕ್ಕೆ ಪ್ರಜಾಪ್ರಭುತ್ವದ ಮೇಲೆ ಭಕ್ತಿಯಾದರೂ ಇದ್ದಿದ್ದರೆ ಕಾಂಗ್ರೆಸ್ ಹೀಗಿರುತ್ತಿರಲಿಲ್ಲ. ದೇಶವೂ ಹೀಗಿರುತ್ತಿರಲಿಲ್ಲ.
ದೀನದಯಾಳರು ಪ್ರತಿಪಕ್ಷಗಳ ಬಗ್ಗೆ ಕೂಡಾ ಮೊನಚಾದ ಮಾತುಗಳನ್ನಾಡಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಸರ್ಕಾರವು ಪ್ರತಿಪಕ್ಷಗಳನ್ನು ಕೇವಲ ಸಹಿಸುವುದು ಮಾತ್ರವಲ್ಲ, ಅದನ್ನು ನಂಬಬೇಕು ಕೂಡಾ ಎಂದಿದ್ದರು. ಅದರೆ ಭಾರತದಲ್ಲಿ ಆಡಳಿತ ಪಕ್ಷ ಪ್ರತಿಪಕ್ಷವನ್ನು ಅದು ಎಲ್ಲಿಯವರೆಗೆ ಅಪಾಯವಿಲ್ಲವೋ ಅಲ್ಲಿಯವರೆಗೆ ಮಾತ್ರ ಸಹಿಸುತ್ತದೆ. ಆದರೆ ಯಾವ ಕಾರಣಕ್ಕೂ ನಂಬುವುದಿಲ್ಲ. ಕಾಂಗ್ರೆಸ್ ಆರಂಭದಿಂದಲೂ ಹಾಗೇ ವರ್ತಿಸುತ್ತಾ ಬಂತು. ಈಗಲೂ ಅದರದ್ದು ಅದೇ ಬುದ್ಧಿ. ಹೇಗೆಂದರೆ ಪಾಕಿಸ್ಥಾನದ ಮಿಲಿಟರಿ ಮುಖ್ಯಸ್ಥರಾದವರು ತನ್ನ ದೇಶದಲ್ಲಿ ರಾಜಕೀಯ ಪಕ್ಷಗಳನ್ನು ಹೇಗೆ ಕಾಣುತ್ತಾರೋ ಹಾಗೆ. ಒಂದೆಡೆ ದೀನದಯಾಳರು ನೇರವಾಗಿ, ತಮ್ಮ ಪರವಾಗಿರುವುದಾದರೆ ಕಾಂಗ್ರೆಸ್ ಮುಖಂಡರು ಜನರ ತೀರ್ಮಾನದೆದುರು ತಲೆಬಾಗುತ್ತಾರೆ. ಆದರೆ ಜನರು ತಮ್ಮ ತೀರ್ಮಾನವನ್ನು ಬದಲಾಯಿಸಿದ ತಕ್ಷಣ ಸೇಡು ತೀರಿಸಿಕೊಳ್ಳಲು ಮುಂದಾಗುತ್ತದೆ. ತನ್ನತ್ತ ತಲೆಬಾಗಿಸಲು ಏನೇನು ಕ್ರಮಗಳಿವೆಯೋ ಅವೆಲ್ಲವನ್ನೂ ಸತ್ವಯುತವೆಂದು ಅದು ಪರಿಗಣಿಸಿಬಿಡುತ್ತದೆ ಎಂದಿದ್ದರು. ಕಾಂಗ್ರೆಸಿನ ಮನೋಭಾವ ಪ್ರಜಾಪ್ರಭುತ್ವಕ್ಕೆ ದೊಡ್ಡ ಅಪಾಯವನ್ನು ಒಡ್ಡುತ್ತಿದೆ, ಅದರ ಆಲೋಚನೆಗಳು ವಿರೋಧಿಯಾಗಿದೆ. ಪ್ರಜಾಪ್ರಭುತ್ವವನ್ನು ಪ್ರೀತಿಸುವ ಪ್ರತಿಯೊಬ್ಬನೂ ಇದನ್ನು ಗಂಭೀರವಾಗಿ ಚಿಂತಿಸಬೇಕು. ಇಲ್ಲದಿದ್ದರೆ ಪ್ರಜಾಪ್ರಭುತ್ವ ವಿರೋಧಿಯಾದ ಶಕ್ತಿಗಳು ಭಾರತದಲ್ಲಿ ಹೊರಹೊಮ್ಮುತ್ತದೆ ಎಂದು ಆರೋಪಿಸಿದ್ದರು.
ದೀನದಯಾಳರ ಚಿಂತನೆಗಳು ಎಷ್ಟೊಂದು ಪ್ರಸ್ತುತ ಎಂಬುದಕ್ಕೆ ಅವರ ಸ್ವಚ್ಛ ರಾಜಕಾರಣದ ಇಂಥ ಚಿಂತನೆಗಳಷ್ಟು ಸರಳವಾದದ್ದು ಬೇರೆ ಇಲ್ಲ. ನೀತಿಸಂಹಿತೆ, ಪ್ರಜಾಪ್ರಭುತ್ವದ ಕಾಳಜಿ ಮತ್ತು ಪ್ರತಿಪಕ್ಷಗಳ ನಿಲುವುಗಳನ್ನು ಇಂದಿನ ರಾಜಕಾರಣಕ್ಕೊಮ್ಮೆ ಹೋಲಿಸಿ ನೋಡಿದರೂ ದೀನದಯಾಳರು ಅರ್ಥವಾಗುತ್ತಾರೆ.