ವಿಷಯದ ವಿವರಗಳಿಗೆ ದಾಟಿರಿ

ಆಗಷ್ಟ್ 18, 2017

1

ಭಾರತದ ಮುಂದಿರುವ ಡೊಕ್ಲಮ್ ಸವಾಲು…

‍ನಿಲುಮೆ ಮೂಲಕ

– ಶ್ರೇಯಾಂಕ ಎಸ್ ರಾನಡೆ

ಡೊಕ್ಲಮ್, ಭಾರತ-ಭೂತಾನ್-ಚೀನಾ ಮೂರು ದೇಶಗಳ ನಡುವಿನ ಬಹು ಆಯಕಟ್ಟಿನ 89 ಚದರ ಕಿಲೋಮೀಟರ್‍ಗಳ ವ್ಯಾಪ್ತಿಯಲ್ಲಿರುವ ಸಂಕೀರ್ಣ ಪ್ರದೇಶ. ಇದು ಭೂತಾನ್‍ನ ಪಶ್ಚಿಮ ಗಡಿ ಭಾಗದಲ್ಲಿದೆ. ಅಂದರೆ ಟಿಬೆಟ್‍ನ ಆಗ್ನೇಯ ದಿಕ್ಕಿನಲ್ಲಿದೆ. ಮುಖ್ಯವಾಗಿ ಇದು ಭಾರತಕ್ಕೆ ಮುಖ್ಯವಾಗಿರುವ ಚುಂಬಿ ಕಣಿವೆಯ ಸಂಯೋಗ ಸ್ಥಾನದಲ್ಲಿದೆ. ಅದು ಅಧಿಕೃತವಾಗಿ ಭೂತಾನ್‍ನ ಭೂಭಾಗ. ಅನೇಕ ಕಾರಣಗಳಿಂದ ಮೂರು ದೇಶಗಳಿಗೂ ಬಹುಮುಖ್ಯ ಭೂಪ್ರದೇಶ. ಈ ಪ್ರದೇಶದ ಮೇಲೆ ಹಿಡಿತ ಸಾಧಿಸುವುದೆಂದರೆ ಸಿಕ್ಕಿಂನ ಬಹು ಮೌಲ್ಯಯುತ ಚುಂಬಿ ಕಣಿವೆ, ಭೂತಾನ್ ಹಾಗೂ ಇನ್ನೂ ಮುಖ್ಯವಾಗಿ ಸಿಲಿಗುರಿ ಕಾರಿಡಾರ್ ಮುಖೇನ ಈಶಾನ್ಯ ಭಾರತದ ಎಲ್ಲಾ ಚಟುವಟಿಕೆಗಳ ಪ್ರತ್ಯಕ್ಷ ನಿಗಾ ಹಾಗೂ ಪರೋಕ್ಷವಾಗಿ ತಮ್ಮ ಹಿತಾಸಕ್ತಿಗಳಿಂದ ಪ್ರಾದೇಶಿಕ ಪ್ರಾಬಲ್ಯ ಪಡೆದಂತಾಗುತ್ತದೆ. ಹಾಗಾಗಿಯೇ ಇದು ಕೇವಲ ಮೇವು ಬೆಳೆಯುವ ಖಾಲಿ ಗುಡ್ಡದ ನಿಸ್ತೇಜ ಜಾಗವಲ್ಲ. ಮೂರು ದೇಶಗಳ ಮೇಲೆ ಪ್ರಾಬಲ್ಯ ಸಾಧಿಸಬಲ್ಲ ಶಕ್ತಿಯುಳ್ಳ ಆರ್ಥಿಕ, ರಾಜಕೀಯ, ರಾಜತಾಂತ್ರಿಕ ಮತ್ತು ಮಿಲಿಟರಿ ಕಾರಣಗಳಿಂದ ಶಕ್ತಿಸಂಪನ್ನವಾಗಿರುವ ಸುರಕ್ಷಿತ, ಅನುಕೂಲಕರ ತಾಣ. ಈ ಮೂಲಭೂತ ಉದ್ದೇಶದಿಂದ ಇದರ ಮೇಲೆ ಚೀನಾ ಹಾಗೂ ಭಾರತ ಅಪಾರ ಆಸಕ್ತಿ ವಹಿಸಿವೆ.

ಮೂರೂ ದೇಶಗಳ ಗಡಿಗಳ ಜಂಕ್ಷನ್ ಕೇಂದ್ರ ಎಲ್ಲಿ ಎಂಬ ಬಗೆಗೆ ಗೊಂದಲಗಳಿವೆ. ಭಾರತದ ಪ್ರಕಾರ ಅದು “ಬಾತಂಗ್ ಲಾ”ದಲ್ಲಿದೆ. ಚೀನಾ ಪ್ರಕಾರ ಬಾತಂಗ್ ಲಾಕ್ಕಿಂತಲೂ ದಕ್ಷಿಣಕ್ಕಿರುವ ಗಿಪ್ ಮೋಚಿ ಪರ್ವತ ಶ್ರೇಣಿ. ಭೂತಾನ್ ಕೂಡ ಭಾರತ ಹೇಳುವ ವಾಸ್ತವಿಕ ಗಡಿಯನ್ನೇ ಒಪ್ಪುತ್ತದೆ. ಅದರ ಪ್ರಕಾರ ಟಿಬೆಟಿನ ಸಾಕುಪ್ರಾಣಿಗಳಿಗೆ ಹಾಗೂ ಬುಡಕಟ್ಟು ಜನರಿಗೆ ಡೊಕ್ಲಮ್ ತಪ್ಪಲು ಮತ್ತು ದೊರ್ಸ ನಾಲಾ ಪ್ರದೇಶಗಳಿಗೆ ಪ್ರವೇಶವಿದ್ದರೂ ನಿಜವಾದ ತ್ರಿವಳಿ ದೇಶಗಳ ಜಂಕ್ಷನ್ ಕೇಂದ್ರ ಬಾತಂಗ್ ಲಾ ಪ್ರದೇಶವೇ ಆಗಿದೆ. ಇದರಲ್ಲಿ ಚೀನಾ ಮಾತ್ರ ಭಿನ್ನ ರಾಗ ಹಾಡುತ್ತಿದೆ. ಅದೇ ವಾದವನ್ನು ಮುಂದುವರೆಸಿ ಚೀನಾ ತನ್ನ ಗಡಿಯನ್ನು ದಾಟಿ ಮುಂದೆ ಬಂದಿದ್ದರೂ, ಭಾರತವೇ ತಮ್ಮ ಗಡಿ ದಾಟಿಬಂದು ತಮ್ಮ ರಸ್ತೆ ನಿರ್ಮಾಣ ಕಾರ್ಯಕ್ಕೆ ಅಡ್ಡಿಪಡಿಸುತ್ತಿದೆ ಎಂದು ಸಾರುತ್ತಿರುವುದು.

ಇದು ತಾನು ಮಾಡುವುದು ಮಾತ್ರವೇ ಸರಿ, ಉಳಿದವರು ಏನು ಮಾಡಿದರೂ ತಪ್ಪು ಎಂಬ ಅಹಂಕಾರದ ವಿಸ್ತರಣೆ. ಸಾಮಾನ್ಯವಾಗಿ ಚೀನಾ ಎಲ್ಲಾ ಪ್ರದೇಶಗಳೊಂದಿಗೆ ಹಾಗೂ ಭಾರತದ ಸಂದರ್ಭದಲ್ಲಿ ವಿಶೇಷವಾಗಿ ಹೀಗೆ ವರ್ತಿಸುವುದು ಅದರ ಚಾಳಿಯಾಗಿದೆ. ಭೌಗೋಳಿಕ ಹಾಗೂ ಭೂಪಟದ ತಿರುಚುವಿಕೆಯ ಅಹಂಕಾರ ಮತ್ತು ಭೂಪಟ ಬದಲಾವಣೆಯ ದಾಳಿ. ಈ ಎರಡು ಸಂಗತಿಗಳು ಚೀನಾದ ಸಾಮ್ರಾಜ್ಯಶಾಲಿ ಮನೋಧರ್ಮ ಮತ್ತು ಅದರ ಸಾರ್ವಭೌಮತ್ವ ಹೇರಿಕೆಯ ನ್ಯಾಯಸಮ್ಮತಿಯನ್ನು ತಿಳಿಸುತ್ತವೆ.

1890ರ ದಶಕದಿಂದಲೂ ಚೀನಾ ಈ ಪ್ರದೇಶದಲ್ಲಿ ತನ್ನ ಚಟುವಟಿಕೆಗಳನ್ನು ವಿಸ್ತರಿಸುತ್ತಿದೆ. ಒನ್ ರೋಡ್- ಒನ್ ಬೆಲ್ಟ್ ಯೋಜನೆ ಕಾರ್ಯರೂಪಕ್ಕೆ ಬರುತ್ತಿದ್ದಂತೆ ಈ ಭಾಗದತ್ತ ವಿಶೇಷ ಗಮನ ಕೇಂದ್ರೀಕೃತವಾಗಿದೆ. ಚೀನಾದ ಬೀಜಿಂಗ್‍ಗೆ ಸಂಪರ್ಕ ಕಲ್ಪಿಸಲು ಟಿಬೆಟ್ ಭಾಗದಲ್ಲಿ ರಸ್ತೆ, ರೈಲ್ವೆ ಸಂಪರ್ಕಗಳ ಬೆಳವಣಿಗೆ, ಮೂಲಸೌಕರ್ಯಗಳ ಅಭಿವೃದ್ಧಿಯಾಗತೊಡಗಿದೆ. ಟಿಬೆಟ್‍ನ ಲ್ಹಾಸದಿಂದ ಯುಡೊಂಗ್ ಪ್ರಾಂತ್ಯಕ್ಕೆ ನಿರ್ಮಿಸಲಾಗಿರುವ 500 ಕಿಮೀ ದೂರದ ರಸ್ತೆಯನ್ನು ಕೇವಲ 8 ಘಂಟೆಯಲ್ಲಿ ಕ್ರಮಿಸಲು ಸಾಧ್ಯವಿದೆ. ಲ್ಹಾಸ-ಶಿಗಟ್ಸೆ ರೈಲ್ವೆ ಸಂಪರ್ಕ ಅಭಿವೃದ್ಧಿಯಾದ ಮೇಲೆ ಅದರ ಮುಂದಿನ ಪ್ರದೇಶ ಡೊಕ್ಲಮ್‍ನತ್ತ ಚೀನಾ ಗುರಿ ನೆಟ್ಟಿದೆ.

ಪ್ರಾದೇಶಿಕ ಹಾಗೂ ಜಾಗತಿಕ ಅಧಿಕಾರ ರಾಜಕಾರಣ, ಸಾಮ್ರಾಜ್ಯ ವಿಸ್ತರಣೆಯ ಸೂಕ್ಷ್ಮತೆಗಳನ್ನು ಚೆನ್ನಾಗಿ ಅರಿತಿರುವ ಚೀನಾ ತನ್ನದಲ್ಲದ ಡೊಕ್ಲಮ್ ಹಿಂದೆ ಬಿದ್ದಿರುವುದು. ಚೀನಾಕ್ಕೆ ಡೊಕ್ಲಮ್ ಪ್ರದೇಶವನ್ನು ಹೇಗಾದರೂ ಪಡೆಯಲೇಬೇಕೆಂಬ ತವಕ ತೀವ್ರವಾಗಿದ್ದು 1984ರಿಂದ. ಆದ್ದರಿಂದಲೇ 1984ರಿಂದ ಇಂದಿನವರೆಗೂ ಚೀನಾ, ಭೂತಾನ್‍ದೊಂದಿಗೆ 24 ಸುತ್ತುಗಳ ಸಮಾಲೋಚನಾ ಮಾತುಕತೆಗಳನ್ನು ಮುಂದುವರೆಸಿಕೊಂಡು ಬಂದಿದೆ. ಆ ಮಾತುಕತೆಗಳ ಕೇಂದ್ರ ಡೊಕ್ಲಮ್ ಎಂಬುದೂ ವಿಶೇಷ. ಎಷ್ಟರ ಮಟ್ಟಿಗೆಂದರೆ 269 ಚದರ ಕಿಲೋಮೀಟರ್ ವಿಸ್ತೀರ್ಣದ ಅವಿಭಜಿತ ಡೋಕ್ಲಮ್ ಪ್ರಸ್ಥಭೂಮಿಯನ್ನು ಪಡೆಯುವುದಕ್ಕಾಗಿ ಭೂತಾನ್‍ನ ಉತ್ತರಕ್ಕಿರುವ ಚೀನಿ ಹಿಡಿತದಲ್ಲಿರುವ ಸುಮಾರು 495 ಚದರ ಕಿಲೋಮೀಟರ್ ವ್ಯಾಪ್ತಿಯ ಪಸಂಲಗ್ ಮತ್ತು ಜಾಕರ್ಲಂಗ್ ಕಣಿವೆ ಬಿಟ್ಟುಕೊಡುವ ಪ್ರಸ್ತಾಪವನ್ನಿಟ್ಟಿತ್ತು. ಚೀನಾ ಅದೇ ಅವಕಾಶವನ್ನು ಮುಂದಿನ ಎಲ್ಲಾ ಸುತ್ತುಗಳಲ್ಲಿಯೂ ಭೂತಾನ್‍ಗೆ ನೀಡಿದೆ. ಭಾರತದ ಮಧ್ಯಪ್ರವೇಶ ಹಾಗೂ ಭೂತಾನ್‍ಗೆ ತನ್ನ ನಿರ್ಣಯವನ್ನು ಬದಲಾಯಿಸುವಂತೆ ನೀಡಿದ ಮಾರ್ಗದರ್ಶನದ ಫಲವಾಗಿ ಚೀನಾದ ಮಹತ್ವಾಕಾಂಕ್ಷೆ ಸಾಕಾರಗೊಳ್ಳಲಿಲ್ಲ. ಈ ವಿಚಾರದಲ್ಲಿ ಭಾರತದ ಸಮಯಪ್ರಜ್ಞೆ, ದೂರದೃಷ್ಟಿ ಹಾಗೂ ಭೂತಾನ್ ಮೈತ್ರಿಗೆ ಧನ್ಯವಾದಗಳನ್ನು ಅರ್ಪಿಸಲೇಬೇಕು.

ಪ್ರಾರಂಭದಿಂದಲೂ ಭಾರತ ಹಾಗೂ ಭೂತಾನ್ ಪರಮ ಮಿತ್ರ ರಾಷ್ಟ್ರಗಳು. ಭೂತಾನ್ ಅಭಿವೃದ್ಧಿಗಾಗಿ ಭಾರತದ “ಗಡಿ ರಸ್ತೆ ನಿರ್ಮಾಣ ಸಂಸ್ಥೆ(ಬಾರ್ಡರ್ ರೋಡ್ ಆರ್ಗನೈಜೆಶನ್)” ‘ಆಪರೇಶನ್ ದಂತಕ್’ ಹೆಸರಿನಲ್ಲಿ 1,500ಕ್ಕೂ ಅಧಿಕ ಕಿಲೋಮೀಟರ್‍ಗಳ ರಸ್ತೆಯನ್ನು ನಿರ್ಮಿಸಿದೆ. ಆ ರಸ್ತೆಯ ಮಾರ್ಗಗಳು ಭಾರತದತ್ತ ಭೂತಾನವನ್ನು ಇನ್ನಷ್ಟು ಹತ್ತಿರಗೊಳಿಸಿದೆ. ಇಂಧನ, ವಿದ್ಯುತ್, ಶಿಕ್ಷಣ, ಆರೋಗ್ಯ ಇಂತಹ ಹತ್ತು ಹಲವು ಕ್ಷೇತ್ರಗಳಲ್ಲಿ ಭಾರತ ಭೂತಾನ್‍ಗೆ ಸಹಾಯಹಸ್ತ ಚಾಚಿಕೊಂಡು ಬಂದಿದೆ. ಹಾಗಾಗಿಯೇ ಈ ಎರಡೂ ದೇಶಗಳ ಸ್ನೇಹ ಅಗಾಧವಾಗಿ ಗಾಢವಾಗಿರುವುದು.

ಸಿಕ್ಕಿಂನ ದಿವಾನರಾಗಿದ್ದ ನಾರಿ ರುಸ್ತುಂಜಿ ತಮ್ಮ ಪುಸ್ತಕ “ಡ್ರ್ಯಾಗನ್ ಕಿಂಗ್ಡಮ್ ಇನ್ ಕ್ರೈಸಿಸ್”ನಲ್ಲಿ ಹೇಳಿರುವಂತೆ “ಚೀನಾ ಭೂತಾನಕ್ಕೆ ರಸ್ತೆ ಸಂಪರ್ಕ ಕಲ್ಪಿಸಿ ಆ ದೇಶವನ್ನು ತನ್ನ ತೆಕ್ಕೆಯೊಳಗೆ ತೆಗೆದುಕೊಳ್ಳಬೇಕೆಂಬ ಪ್ರಬಲ ಪ್ರಯತ್ನದಲ್ಲಿದೆ. ಆದರೆ ಚೀನಾದ ಅಂತಹ ಎಲ್ಲ ಪ್ರಯತ್ನಗಳನ್ನು ಭೂತಾನ್ ನಿರಾಕರಿಸಿದೆ. ಮೇಲಾಗಿ ಭೂತಾನದಿಂದ ಹೊರಡುವ ಎಲ್ಲಾ ರಸ್ತೆಗಳು ಭಾರತದತ್ತ ತೆರಳುತ್ತವೆ ಹೊರತು, ಟಿಬೆಟ್‍ನತ್ತ ಯಾವೊಂದು ರಸ್ತೆಯ ಕುರುಹೂ ಕಾಣಿಸುವುದಿಲ್ಲ”.

2007ರಲ್ಲಿ ಪುರ್ನರಚಿತಗೊಂಡ ಭಾರತ-ಭೂತಾನ್ ಸ್ನೇಹ ಒಪ್ಪಂದ ಎರಡೂ ದೇಶಗಳನ್ನು ಮತ್ತಷ್ಟು ಹತ್ತಿರಕ್ಕೆ ತಂದಿತು. ಹೊಸ ಒಪ್ಪಂದವು ಭೂತಾನ್‍ನ ವಿದೇಶಾಂಗ ನೀತಿಗಳನ್ನು ನಿರ್ಧರಿಸುವ ಅಧಿಕಾರವನ್ನು ಭಾರತಕ್ಕೆ ನೀಡಿತು. ಆದರೆ 2008ರ ತರುವಾಯ ಭೂತಾನ್ ಮೊತ್ತ ಮೊದಲ ಬಾರಿ ಜನರಿಂದ ಆಯ್ಕೆಯಾದ ಪ್ರಧಾನಿಯನ್ನು ಪಡೆದಿತ್ತು. ಜಿಗ್ಮೆ ತಿನ್ಲೆ ಅಧಿಕಾರಕ್ಕೆ ಬಂದ ಪ್ರಾರಂಭದಿಂದಲೇ ಭೂತಾನ್ ದೇಶವನ್ನು ಭಾರತದ ಛಾಯೆಯಡಿಯಿಂದ ಸ್ವತಂತ್ರವಾಗಬೇಕೆಂದು ಸ್ವತಂತ್ರ ವಿದೇಶಿ ನೀತಿಗಳನ್ನು ನಿರೂಪಿಸಲು ಆರಂಭಿಸಿದ್ದರು. ಈ ಕಾಲದಲ್ಲಿ ಭಾರತ-ಭೂತಾನ್ ದೂರವಾಗುತ್ತಿರುವಂತೆ ತೋರಿತ್ತು. ಭೂತಾನ್ ತನಗೆ ಬೇಕಾದ್ದನ್ನೇ ಆರಿಸಕೊಳ್ಳಲಿ ಎಂದು ಅದರಷ್ಟಕ್ಕೇ ಬಿಟ್ಟಿದ್ದ ಭಾರತವೂ ಈ ಸಮಯದಲ್ಲಿ ಈಶಾನ್ಯ ಏಷ್ಯಾ ಹಾಗೂ ಪಶ್ಚಿಮ ದೇಶಗಳತ್ತ ಹೆಚ್ಚಿನ ಗಮನವನ್ನು ಕೇಂದ್ರಿಕರಿಸಿತ್ತು.

ಮುಂದಿನ ಐದು ವರ್ಷಗಳ ಜಿಗ್ಮೆ ತಿನ್ಲೆ ಅಧಿಕಾರವಧಿಯಲ್ಲಿ ಭೂತಾನ್ ಚೀನಾದೊಂದಿಗೆ ರಾಜತಾಂತ್ರಿಕ ಸಂಬಂಧವನ್ನು ಪ್ರಾರಂಭಿಸಲು ಹೊರಟಿತ್ತು. ಅದೇ ರೀತಿ ಡೊಕ್ಲಮ್ ಪ್ರದೇಶವನ್ನು ಚೀನಾಕ್ಕೆ ಬಿಟ್ಟುಕೊಡುವ ವಿಫಲ ಯೋಚನೆಯನ್ನು ಮಾಡಲಾಗಿತ್ತು. ಅದೇ ಸಮಯಕ್ಕಾಗಿ ಕಾಯುತ್ತಿದ್ದ ಚೀನಾ, ಡೊಕ್ಲಮ್ ಪ್ರದೇಶದಲ್ಲಿ ಕಚ್ಚಾ ರಸ್ತೆಯನ್ನು ನಿರ್ಮಿಸಿತು. ಅನಧಿಕೃತ ರಸ್ತೆ ನಿರ್ಮಾಣದ ಕುರಿತು ಅಂದಿನ ರಾಯಲ್ ಭೂತಾನ್ ಸೇನೆಯಾಗಲಿ, ಜನರಿಂದ ಆಯ್ಕೆಯಾಗಿದ್ದ ಭೂತಾನ್ ಸರಕಾರವಾಗಲಿ ಯಾವುದೇ ಚಕಾರ ಎತ್ತಲಿಲ್ಲ. ಪರಿಣಾಮ ಡೊಕ್ಲಮ್ ಇಂದು ಭಾರತ-ಚೀನಾ ನಡುವೆ ದೊಡ್ಡ ಮಟ್ಟದ ಸಮಸ್ಯೆಯಾಗಿ ಉಲ್ಬಣಿಸಿದೆ ಹಾಗೂ ಈಗಿನ ಉಭಯ ದೇಶಗಳ ನಡುವಿನ ಪರಸ್ಪರ ಕಚ್ಚಾಟಕ್ಕೆ ಕೇಂದ್ರಬಿಂದು.

2013ರ ಹೊತ್ತಿಗೆ ಭಾರತಕ್ಕೆ ಭೂತಾನ್‍ನಲ್ಲಿ ಪರಿಸ್ಥಿತಿ ಕೈತಪ್ಪುತ್ತಿರುವುದರ ಮನವರಿಕೆಯಾಯಿತು. ಆದ್ದರಿಂದಲೇ ಭೂತಾನ್ ಸಾರ್ವಜನಿಕ ಚುನಾವಣೆಯ ಹೊತ್ತಿಗೆ ಸರಿಯಾಗಿ, ಮನಮೋಹನ್ ಸಿಂಗ್ ನೇತೃತ್ವದ ಭಾರತ ಸರಕಾರ ಭೂತನ್‍ಗೆ ನೀಡುತ್ತಿದ್ದ ಇಂಧನ ಸಹಾಯಧನ(ಸಬ್ಸಿಡಿ)ವನ್ನು ತಕ್ಷಣ ನಿಲ್ಲಿಸಿತು. ಪರಿಣಾಮ ಅಂದುಕೊಂಡಂತೆ ಜಗ್ಮೆ ತಿನ್ಲೆಗೆ ಚುನಾವಣೆಯಲ್ಲಿ ಸೋಲುಂಟಾಯಿತು. ಭೂತಾನ್‍ನಲ್ಲಿ ನೂತನವಾಗಿ ಆಯ್ಕೆಯಾದ ಶೆರಿಂಗ್ ತೊಬ್ಗೆ ಸರಕಾರದೊಂದಿಗೆ ಸಂಬಂಧ ಗಟ್ಟಿಗೊಳಿಸುವ ಯಾವ ಅವಕಾಶವನ್ನೂ ನವದೆಹಲಿ ಬಿಡಲಿಲ್ಲ. ಭೂತಾನ್ ಕೂಡ ಭಾರತದ ಅನಿವಾರ್ಯತೆಯನ್ನು ಅರ್ಥಮಾಡಿಕೊಂಡಿತು. ಭೂತಾನ್ ಮೇಲಿನ ಭಾರತದ ಪ್ರಭಾವಳಿಯನ್ನು ಅರ್ಥಮಾಡಿಕೊಂಡ ಚೀನಾ, ಭೂತಾನ್‍ನೊಂದಿಗಿನ ಸಮಾಲೋಚನೆಯಿಂದ ಡೊಕ್ಲಮ್ ವಿಷಯವನ್ನು ಹಿನ್ನೆಲೆಗೆ ಸರಿಸಿತು. 2014ರ ಸಾರ್ವಜನಿಕ ಚುನಾವಣೆಯಲ್ಲಿ ಅಭೂತಪೂರ್ವ ವಿಜಯವನ್ನು ಸಾಧಿಸಿದ ನರೇಂದ್ರ ಮೋದಿ ನೇತೃತ್ವದ ನೂತನ ಸರಕಾರ ಭಾರತದಲ್ಲಿ ರಚನೆಯಾಯಿತು. ಆಗಲೇ ಭಾರತ-ಭೂತಾನ್ ಸಾಂಪ್ರದಾಯಿಕ ಸಂಬಂಧವನ್ನು ಗಟ್ಟಿಗೊಳಿಸುವುದಕ್ಕೆ ಕಾಲ ಪಕ್ವವಾಗಿತ್ತು. ಇಂತಹ ಪರಿಸ್ಥಿತಿ ಬರಬಹುದೆಂಬ ಕಾಣ್ಕೆಯಿಂದ ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ಮೊದಲು ಭೇಟಿ ಕೊಟ್ಟ ದೇಶ ಭೂತಾನ್. ಅನೇಕ ಹೊಸ ಒಪ್ಪಂದಗಳ ಜೊತೆಗೆ ಎರಡೂ ದೇಶಗಳ ನಡುವಿನ ಸಂಬಂಧವನ್ನು ವಿವಿಧ ಮಜಲುಗಳಲ್ಲಿ ವಿಸ್ತರಿಸಲಾಯಿತು. ಅದಾಗಿ ಒಂದು ವರ್ಷದೊಳಗೆ ಚೀನಾ ದೇಶ ಮಾನಸ ಸರೋವರ ಯಾತ್ರೆಗೆ ಪೂರಕವಾದ ಸಿಕ್ಕಿಂ ಮೂಲಕ ಹಾದುಹೋಗುವ “ನಾಥುಲಾ” ಕಣಿವೆಯನ್ನು ಪ್ರವಾಸಿಗರಿಗೆ ಮುಕ್ತಗೊಳಿಸಿತು.(ಡೊಕ್ಲಮ್ ನೆಪದಲ್ಲಿ ಅದನ್ನು ಈಗ ಚೀನಾ ಮತ್ತೆ ಮುಚ್ಚಿದೆ.)

ಅದೇ ಕಾರಣದಿಂದ ಇಂದಿನ ಈ ಬಿಗಿ ಸಮಯದಲ್ಲೂ ಚೀನಾದ ಯಾವ ಒತ್ತಡಕ್ಕೂ ಮಣಿಯದೆ ಭೂತಾನ್ ತನ್ನ ಪರಂಪರಾಗತ ನಂಬಿಕೆಯಂತೆ ಭಾರತದ ಜೊತೆಗೆ ಭದ್ರವಾಗಿ ನಿಂತಿರುವುದು. ಅಸಲಿಗೆ ಡೊಕ್ಲಾಮ್ ಭೂತಾನ್‍ನ ಆಂತರಿಕ ಸಮಸ್ಯೆ. ಆದರೂ 2007ರ ಉಭಯ ರಾಷ್ಟ್ರಗಳ ನಡುವಿನ ಸ್ನೇಹ ವರ್ಧನೆಯ ಒಪ್ಪಂದದ ಫಲವಾಗಿ ಮತ್ತು ತನ್ನ ಹಿತಾಸಕ್ತಿಯನ್ನೂ ಎತ್ತಿ ಹಿಡಿಯುವ ಉದ್ದೇಶದೊಂದಿಗೆ ಭೂತಾನ್‍ನ ಸಮಸ್ಯೆಗೆ ಹೆಗಲು ಕೊಟ್ಟು ನಿಂತಿದೆ.

ಆದರೆ ಭಾರತದ ಈ ನಿರೀಕ್ಷಿತ ನಡೆಗೆ ಚೀನಾ ಮತ್ತೊಂದು ತಂತ್ರ ರೂಪಿಸಿದಂತಿದೆ. ತನ್ನದಲ್ಲದ ನೆಲದಲ್ಲಿ ಭಾರತೀಯ ಸೇನೆ ಬೀಡುಬಿಟ್ಟಿರುವುದನ್ನು ಚೀನಾ ಮಾಧ್ಯಮ ಬೇರೆಯದೇ ರೀತಿಯಲ್ಲಿ ಭೂತಾನ್ ಜನತೆಗೆ ತಲುಪಿಸುತ್ತಿವೆ. ಭೂತಾನ್ ಜನತೆಯಲ್ಲಿ ಭಾರತವೆಂದರೆ ತನ್ನ ನೆರೆಯ ರಾಷ್ಟ್ರಗಳ ವಿಚಾರದಲ್ಲಿ ಅನಗತ್ಯವಾಗಿ ಮೂಗುತೂರಿಸುವ ದೊಡ್ಡಣ್ಣ ಹಾಗೂ ಅದರ ಸ್ವಾರ್ಥಕ್ಕಾಗಿ ಭೂತಾನ್ ನೆಲವನ್ನು ಬಳಸಿಕೊಳ್ಳುತ್ತಿದೆ ಎಂಬ “ಭಾರತ ವಿರೋಧಿ” ಭಾವನೆಯನ್ನು ಭೂತಾನ್ ಜನತೆಯಲ್ಲಿ ಉದ್ದೇಶಪೂರ್ವಕವಾಗಿ ಮೂಡಿಸುವ ಪ್ರಯತ್ನ ಮಾಡುತ್ತಿದೆ. ಇದು ಇತ್ತೀಚೆಗೆ ನೇಪಾಳದ ಜನತೆಯಲ್ಲಿ ಭಾರತ ವಿರೋಧಿ ಭಾವನೆಯನ್ನು ಮೂಡಿಸುವ ಪ್ರಯತ್ನದ ಮುಂದುವರೆದ ಭಾಗ. ಆ ಮೂಲಕ ಭಾರತ-ಭೂತಾನ್ ಸಂಬಂಧವನ್ನು ಸಡಿಲಗೊಳಿಸುವುದು. ನಂತರ ಭಾರತದಿಂದ ದೂರಾದ ದುರ್ಬಲ ಭೂತಾನ್ ದೇಶವನ್ನು ತನ್ನ ಹಿಡಿತಕ್ಕೆ ತಂದುಕೊಂಡು ಡೊಕ್ಲಾಮ್ ಪ್ರದೇಶವನ್ನು ಸುಪರ್ದಿಗೆ ತೆಗೆದುಕೊಳ್ಳುವ ಮಹತ್ವಾಕಾಂಕ್ಷೆ ಚೀನಾದ್ದು. ಒಂದು ವೇಳೆ ನೇರ ಯುದ್ಧವಾಗದಿದ್ದರೂ ಈ (ಕು)ತಂತ್ರದಿಂದ ತನ್ನ ಗುರಿಯನ್ನು ಸಾಧಿಸುವ ಕುಟಿಲ ನೀತಿ ಇದರಲ್ಲಿ ಗೋಚರವಾಗುತ್ತಿದೆ. ಅದಕ್ಕೆ 55ದಿನಗಳ ಕಾಲ ಈ ಸಮಸ್ಯೆಯನ್ನು ವಿಸ್ತರಿಸಿದ್ದು. ಹಾಗೂ ಇನ್ನಷ್ಟು ದಿನಗಳ ಕಾಲ ಇದನ್ನು ಮುಂದುವರೆಸುವಂತೆ ತೋರುತ್ತಿದೆ.

ಈ ಹೊತ್ತಿನಲ್ಲಿ ಭಾರತದ ಮೇಲೆ ಹೆಚ್ಚಿನ ಜವಾಬ್ದಾರಿಯಿದೆ. ಭಾರತವನ್ನು, ಇಲ್ಲಿನ ನಾಯಕತ್ವವನ್ನು ವಿಜೃಂಭಿಸಿಕೊಳ್ಳುವ ಭರಾಟೆಯಲ್ಲಿ ಭೂತಾನದ ಅಸ್ಮಿತೆ, ಸ್ವಾಭಿಮಾನಕ್ಕೆ ಕುಂದುಂಟಾಗದಂತೆ ಎಚ್ಚರವಹಿಸಬೇಕು. ಕನಿಷ್ಟ ಸರಕಾರ, ಜನಪ್ರತಿನಿಧಿಗಳು ಯಾವುದೇ ಬೇಜವಾಬ್ದಾರಿಯುತ ಹೇಳಿಕೆಗಳನ್ನು ನೀಡಬಾರದು. ಇತ್ತೀಚೆಗೆ ವಿದೇಶಾಂಗ ಇಲಾಖೆಗೆ ಸಂಬಂಧಿಸಿದ ಪ್ರತಿನಿಧಿಯೊಬ್ಬರು ಮಾತಿನ ಭರಾಟೆಯಲ್ಲಿ “ಚೆಂಡು ಮೊದಲು ಬಂದದ್ದೋ ಅಥವಾ ಚೆಂಡು ಬರುವ ಮುನ್ನವೇ ದಾಂಡಿಗ ಹೊಡೆಯುವುದಕ್ಕೆ ತಯಾರಾಗಿ ನಿಂತಿದ್ದನೋ” ಎಂಬ ಮಾತುಗಳನ್ನಾಡಿದ್ದರು. ನೇರವಾಗಿ ಈ ಹೇಳಿಕೆಯಲ್ಲಿ ಯಾವುದೇ ಸಮಸ್ಯೆ ಗೋಚರಿಸುವುದಿಲ್ಲ. ಆದರೆ ಇದರಾಳದಲ್ಲಿ ಭೂತಾನ್‍ನ ಸಾರ್ವಭೌಮತೆಯನ್ನು ಲೆಕ್ಕಕ್ಕೆ ತೆಗೆದುಕೊಳ್ಳದ ಮನಸ್ಥಿತಿಯಿದೆ. ಇಂತಹ ಹೇಳಿಕೆಗಳು ಗಡಿಯ ಆ ಕಡೆಗಿರುವ ಭೂತಾನ್ ಜನರ ಮೇಲೆ ಭಾರತದ ಕುರಿತು ಬೇರೆಯದೆ ರೀತಿಯ ಪರಿಣಾಮವನ್ನು ಬೀರಬಹುದೆಂಬ ಸೂಕ್ಷ್ಮ ನಮಗಿರಬೇಕು.

ಚೀನಾದ ಸಾಮ್ರಾಜ್ಯಶಾಹಿ ಅಹಂಕಾರದ ಹೆಡೆಮುರಿ ಕಟ್ಟಿದ ಭಾರತ:

ಈಗ ಡೊಕ್ಲಮ್‍ನಲ್ಲಿ ಚೀನಾದ ರಸ್ತೆ ನಿರ್ಮಾಣ ನಿಂತಿದೆ. ಉತ್ತರಖಂಡದ ಕಾಲಾಪಾನಿಗೆ ಹೊಕ್ಕುತೇವೆಂದರೂ ಅಷ್ಟೇ, ಯುದ್ಧಕ್ಕೆ ಸನ್ನದ್ಧರಾಗಿ ಎಂದರೂ ಅಷ್ಟೇ.. ಭಾರತ ತಮ್ಮ ನ್ಯಾಯಯುತ ನೆಲೆಯಿಂದ ಹಿಂದೆ ಸರಿಯುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ. ಸಮಸ್ಯೆ ನಿವಾರಣೆಗೆ ಮಾತುಕತೆಯ ಪರಿಹಾರ ಸಿಗಬೇಕಾದರೆ ಭಾರತ ಅಲ್ಲಿಂದ ಜಾಗ ಖಾಲಿಮಾಡಬೇಕೆಂಬ ಚೀನಾದ ಬೇಡಿಕೆ ಸೋತಿದೆ. ಪ್ರತಿಯೊಂದು ಸಂದರ್ಭದಲ್ಲಿ ಟಿಪಾಯಿ ಮೇಲೆ ಏನಿರಬೇಕೆಂದು ನಿರ್ಧರಿಸುವ ಚೀನಾದ ಷರತ್ತು ಈ ಬಾರಿ ಚಲಾವಣೆಯಾಗಿಲ್ಲ. ಭರತ-ಚೀನಾ ಗಡಿಯ ಲಡಾಕ್ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ, “ಮ್ಯಾಕ್ ಮೋಹನ್” ಗಡಿ ಅಸ್ಪಷ್ಟ ಕಾಲ್ಪನಿಕ ರೇಖೆಯೆಂಬ ಕಾರಣ ನೀಡಿ ಆಗಾಗ ಸೇನೆಗಳ ನಡುವೆ ಸಣ್ಣ ಮಟ್ಟಿನ ಗಡಿದಾಟುವಿಕೆ ಸಹಜವೆಂಬಂತೆ ನಿರಂತರವಾಗಿ ನಡೆದಿತ್ತು. ಆದರೆ ಡೊಕ್ಲಮ್ ಬಿಕ್ಕಟ್ಟನ್ನು ಅವುಗಳಿಗೆ ಹೋಲಿಸಲಾಗುವುದಿಲ್ಲ. ಇದೊಂದು ವಿಶೇಷ ಸಂದರ್ಭ.

ಇಲ್ಲಿ ಬಹುಮುಖ್ಯ ಸಂಗತಿಯೊಂದಿದೆ, ಅದೆಂದರೆ ಸ್ವಾತಂತ್ರ್ಯ ಭಾರತದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಚೀನಾದ ಸೊಕ್ಕು ಮುರಿಯುವ ಪ್ರಯತ್ನವನ್ನು ಭಾರತ ಮಾಡುತ್ತಿದೆ. ಅದು ಅಮೆರಿಕದ ಸ್ನೇಹದಿಂದ ಹಿಡಿದು, ದಲೈ ಲಾಮಾ, ಅಮೆರಿಕದ ರಾಯಭಾರಿ ರಿಚರ್ಡ್ ವರ್ಮಾರ ತವಾಂಗ್ ಭೇಟಿ, ಒಬಿಒಆರ್ ಪಾಕ್ ಆಕ್ರಮಿತ ಕಾಶ್ಮೀರದಿಂದ ಹೋಗುತ್ತದೆ ಎಂದು ಪ್ರತಿಭಟಿಸಿ ಅದರಿಂದ ಹೊರಗುಳಿದ ರೀತಿ.. ಇಂತಹ ಅನೇಕ ಕಾರಣಗಳು ಚೀನಾ ಮಾತಿಗೆ ಮುಂಚೆ ಹಾಕುತ್ತಿದ್ದ ಷರತ್ತುಗಳನ್ನು ಹೆಡೆಮುರಿಕಟ್ಟಿದೆ. ಕಾಲಪಾನಿಗೆ ಹೊಕ್ಕರೂ, ಡೊಕ್ಲಮ್‍ನಲ್ಲಿ ಹೋದ ಮಾನ ಹಿಂತಿರುಗದು ಎಂಬ ಸತ್ಯ ಚೀನಾ ಇನ್ನಷ್ಟೇ ಅರಿಯಬೇಕಿದೆ.

ಯಾವುದೇ ರಾಜಕಾರಣಕ್ಕೆ ಲವಲೇಶವೂ ಇಲ್ಲದಂತೆ ಒಂದು ಗುರುತರ ವಾಸ್ತವ ಸತ್ಯವನ್ನು ಭಾರತೀಯರೆಲ್ಲರೂ ಗಮನಿಸಬೇಕು. ಸ್ವತಂತ್ರ ಭಾರತದ ಇತಿಹಾಸದಲ್ಲಿ ಇದೇ ಮೊದಲ ಬಾರಿ ಭಾರತ ದೇಶ, ಭಾರತ ಸೇನೆ, ಸಾಮ್ರಾಜ್ಯಶಾಹಿ ಚೀನಾದ ಸವಾಲಿಗೆ ಅಷ್ಟೇ ಧೈರ್ಯದಿಂದ ಪ್ರತ್ಯುತ್ತರ ಕೊಡುವುದಕ್ಕೆ ಎದೆಕೊಟ್ಟು ನಿಂತಿವೆ. ಇದು ಭಾರತದ ಶಕ್ತಿವರ್ಧನೆ, ಭರವಸೆ, ಹಾಗೂ ಸ್ವಸಾಮರ್ಥ್ಯ ಸ್ಥಾಪನೆಗೆ 21ನೇ ಶತಮಾನದಲ್ಲಿ ಹಾಕುತ್ತಿರುವ ಅಡಿಗಲ್ಲು ಎಂದೇ ಭಾವಿಸಬೇಕು. ನಾವು ಕೇವಲ ಪಾಕಿಸ್ತಾನದ ಮುಂದಷ್ಟೇ ಪರಾಕ್ರಮಿಗಳಲ್ಲ, ಅಗತ್ಯಬಿದ್ದರೆ ಚೀನಾವನ್ನು ಹಿಮ್ಮೆಟ್ಟಿಸಬಲ್ಲೆವು ಎಂಬುದನ್ನು ಈ 55ದಿನಗಳ ಅವಧಿಯಲ್ಲಿ ಚೀನಾ ಹಾಗೂ ವಿಶ್ವಕ್ಕೆ ಮನವರಿಕೆ ಮಾಡಿಕೊಟ್ಟಿದೆ.

ಮುಂದಿನ ಹಾದಿ:

ಜುಲೈ ತಿಂಗಳಿನಲ್ಲಿ ನಡೆದಿದ್ದ ಜಿ20 ಶೃಂಗ ಸಭೆಯಲ್ಲಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ನಡುವೆ ಯಾವುದೇ ದ್ವಿಪಕ್ಷೀಯ ಮಾತುಕತೆ ನಡೆದಿಲ್ಲ. ಮುಂಬರುವ ಬ್ರಿಕ್ಸ್ ಸಮಾವೇಶದಲ್ಲೂ ಇದು ನಡೆಯುವುದು ಅನುಮಾನ. ಇದರಿಂದ ಚೀನಾ ಕಡೆಯಿಂದ ಬರುತ್ತಿರುವ ಸಂದೇಶ ಸ್ಪಷ್ಟವಾಗಿದೆ. ಚೀನಾದ ಪೂರ್ವ ಷರತ್ತನ್ನು ಒಪ್ಪದ ಹೊರತು ಚೀನಾ ನಾಯಕ ಮಟ್ಟದ ಮಾತುಕತೆಗೆ ಸಿದ್ಧವಿಲ್ಲ. ಯಾವುದೇ ಪೂರ್ವ ಷರತ್ತುಗಳನ್ನು ವಿಧಿಸದಿದ್ದರೆ ಭಾರತ ಮಾತುಕತೆಗೆ ಸದಾ ಸಿದ್ಧ. ಈ ವ್ಯತ್ಯಾಸ ಎರಡೂ ದೇಶಗಳ ಪ್ರತಿಕ್ರಿಯೆಗಳಲ್ಲೂ ವ್ಯಕ್ತವಾಗಿದೆ. ತನ್ನ ಷರತ್ತನ್ನು ಇತರರು ಒಪ್ಪಬೇಕೆಂಬ ಚೀನಾದ ತೀವ್ರಗಾಮಿ ನಡೆ ಬಹಳ ಹಿಂದಿನದ್ದು. ಮೊದಲಿನಿಂದಲೂ ಸಮಯದ ಅನಿವಾರ್ಯತೆಗೆ ತಕ್ಕಂತೆ ತೂಕದ ಪ್ರತಿಕ್ರಿಯೆ; ಹಿತಮಿತವಾಗಿ ಉತ್ತರಿಸುವ ಭಾರತದ ಧೋರಣೆಯೂ ಇಲ್ಲಿ ಸ್ಪಷ್ಟ.

ರಾಜತಾಂತ್ರಿಕ ಮಾತುಕತೆಗಳಲ್ಲಿ ಬಗೆಹರಿಯದ ಸಮಸ್ಯೆಯೇ ಇಲ್ಲ. ಅದಕ್ಕೆ ಬೇಕಿರುವುದು ಕಕ್ಷಿದಾರರ ಇಚ್ಛಾಶಕ್ತಿ. ಸಧ್ಯದ ಪರಿಸ್ಥಿತಿಯಲ್ಲಿ ಡೊಕ್ಲಮ್ ಸಮಸ್ಯೆಯ ಪರಿಹಾರಕ್ಕೂ ಉಭಯ ದೇಶಗಳ “ವಿಶೇಷ ಪ್ರತಿನಿಧಿಗಳ ಸಭೆ”ಯ ಮೊರೆ ಹೋಗುವುದು ಒಂದು ಉತ್ತಮ ಆಯ್ಕೆಯಾಗಿ ತೋರುತ್ತದೆ. ಇದರಲ್ಲಿ ಚೀನಾ-ಭೂತಾನ-ಭಾರತ ಮೂರೂ ದೇಶಗಳಿಗೂ ಲಾಭವಾಗದಿದ್ದರೂ, ಮೂರೂ ದೇಶಗಳು ಈ ಆಯ್ಕೆಯ ಸಾಧ್ಯತೆಗಳನ್ನು ಬಳಸಿಕೊಳ್ಳುವುದರಿಂದ ಯಾವುದೇ ನಷ್ಟವಾಗುವುದಿಲ್ಲ. ಯಾವುದೇ ದೇಶದ ಅಭಿವೃದ್ಧಿಗೆ ಯುದ್ಧ ಮಾರ್ಗಕ್ಕಿಂತ ಪೂರ್ವ ಷರತ್ತುಗಳಿಲ್ಲದ ಮುಕ್ತ ಮಾತಿನ ಮಾರ್ಗವೇ ಉತ್ತಮವೆಂದು ತೋರುತ್ತದೆ.

ದ್ವಿಪಕ್ಷೀಯವಾಗಿ ಚೀನದಷ್ಟೇ ಆಕ್ರಮಣಕಾರಿ ಹಾಗೂ ಬಹುಪಕ್ಷೀಯ ಸಂಬಂಧದಲ್ಲಿ ಚೀನಾರಹಿತ ವ್ಯವಹಾರ:

ಪರಿಸ್ಥಿತಿಗಳು ಬದಲಾದ ಕಾಲದಲ್ಲಿ ಭಾರತ ಚೀನಾದೊಂದಿಗೆ ವ್ಯವಹರಿಸುವಾಗ ಮಹತ್ವದ ಅಗತ್ಯ ಬದಲಾವಣೆಗಳನ್ನು ಮಾಡಿಕೊಳ್ಳಬೇಕಿದೆ. ದ್ವಿಪಕ್ಷೀಯ ವ್ಯವಹಾರದ ನೆಲೆಯಲ್ಲಿ ಭಾರತ ಚೀನಾದ ಆಕ್ರಮಣಶೀಲತೆಗೆ ಸರಿಸಾಟಿಯಿಲ್ಲದಂತೆ ಆಕ್ರಮಣಶೀಲವಾಗಬೇಕಿದೆ. ಅಂದರೆ ಚೀನಾ ಪ್ರತೀ ನಡೆಗೂ ಭಾರತದ ಪ್ರತಿ ನಡೆಯನ್ನು ಇಡಬೇಕು. ಇದನ್ನು ಸರಳವಾಗಿ ಅಥೈಸಿಕೊಳ್ಳಲು ಪ್ರಾಯಶಃ ಚದುರಂಗ ಆಟದ ಸೂತ್ರಗಳು ನಮ್ಮ ಸಹಾಯಕ್ಕೆ ಬರಬಹುದು.

ಇನ್ನು ದಕ್ಷಿಣ ಏಷ್ಯಾದಲ್ಲಿ ಪ್ರಾದೇಶಿಕವಾಗಿ ಚೀನಾವನ್ನು ಎದುರಿಸುವಾಗ, ಚೀನಾವನ್ನು ಮೀರಿಸುವ ಯಾವುದೇ ಅವಕಾಶವನ್ನು ಭಾರತ ಬಿಡಬಾರದು. ಆದರೆ ಅದೇ ಹೊತ್ತಿಗೆ ದ್ವಿಪಕ್ಷೀಯ ಸಂಬಂಧದಲ್ಲಿ ತೋರಬೇಕಾದ ವರ್ತನೆ ಭಿನ್ನವಾಗಿ ಸರಳ ನಾಯತ್ವದ ತಂತ್ರವನ್ನು ಅಳವಡಿಸಿಕೊಳ್ಳಬೇಕು. 21ನೇ ಶತಮಾನದಲ್ಲಿ ಚೀನಾವನ್ನು ಆರ್ಥಿಕವಾಗಿ ಮಣಿಸಲು ಚೀನಾ ಸಾಮಾಗ್ರಿಗಳನ್ನು ಬಹಿಷ್ಕರಿಸುವ ಅನಿವಾರ್ಯವಿರುವಂತೆ, ಭಾರತದ(ಹಾಗೂ ದಕ್ಷಿಣ ಏಷ್ಯಾ ದೇಶಗಳ) ಆಂತರಿಕ ಭದ್ರತೆ, ಸಾರ್ವಭೌಮತೆ ಮತ್ತು ಆರ್ಥಿಕತೆಯ ರಕ್ಷಣೆಯಾಗಬೇಕಾದರೆ ದಕ್ಷಿಣ ಏಷ್ಯಾ ಪ್ರಾಂತ್ಯದಲ್ಲಿ ಚೀನಾದ ಮಹತ್ವವನ್ನು ಶೂನ್ಯಕ್ಕಿಳಿಸಬೇಕು. ಸಾರ್ಕ್, ಸಾಸೆಕ್, ಬಿಬಿಐಎನ್, ಸಾಗರ್ ಮೊದಲಾದ ಬಹುಪಕ್ಷೀಯ ಪ್ರಾದೇಶಿಕ ಸಂಘಟನೆಗಳನ್ನು ಗಟ್ಟಿಗೊಳಿಸಿ, ಅಲ್ಲಿ ಭಾರತ ತನ್ನ ನಾಯಕತ್ವವನ್ನೂ, ಮಾರ್ಗದರ್ಶಕ ಸ್ಥಾನವನ್ನೂ ಮತ್ತು ಪ್ರಾದೇಶಿಕವಾಗಿ ಚೀನಾರಹಿತವಾಗಿ ಉಳಿದವರೆಲ್ಲರ ಜೊತೆಯಾಗಿ, ಒಗ್ಗಟ್ಟಿನಲ್ಲಿ ಬೆಳೆಯಬೇಕಾದ ಮಾರ್ಗವನ್ನು ಪುನರ್ ಸಂಘಟಿಸಬೇಕಾದ ತುರ್ತು ಅನಿವಾರ್ಯತೆಯಿದೆ.

ಚೀನಾ ನೆಪದಲ್ಲಿ!

ಭಾಯಿಯೆಂದು ಅತ್ತ ಕೈಬೀಸಿದರೆ
ಬಾಯಿಬಿಡುವುದರೊಳಗೆ ಇತ್ತ ಬೀಳಿಸಿದರೆ!

ಹುತ್ತದೊಳಗಿನ ಹಾವಿನಂತೆ
ಉಸಿರಿನೊಳಗಿನ ಇಂಗಾಲದಂತೆ
ಎದುರಿನೊಳಗಿನ ಮಿಥ್ಯದಂತೆ
ಹಿಮಾಲಯದೊಳಗಿನ ನೆರೆಯ ದೇಶದಂತೆ
ಸರ್ವವೂ ಹುದುಗಿರುವ ಸತ್ಯ
ಬಳಸದಿರಿ ಚೀನಿ ದಿನನಿತ್ಯ.

ಮಾವುತ್ಸೆ ತುಂಗನಿಂದ ಬೀಜಿಂಗ್‍ನ ಕ್ಸಿಂಗ
ನೆಹರೂ ಕಾಲದಿಂದಲೂ ಮಾಗಿಲ್ಲ ಈ ಸಂಗ.

ಜೈ ಹಿಂದ್…

1 ಟಿಪ್ಪಣಿ Post a comment
  1. ಆಗಸ್ಟ್ 19 2017

    ಉತ್ತಮ ಮಾಹಿತಿ. ಇದೇ ರೀತಿಯ ಲೇಖನಗಳು ಬರಲೆಂದು ಆಶಿಸುತ್ತೇನೆ.

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments