ವಿಷಯದ ವಿವರಗಳಿಗೆ ದಾಟಿರಿ

ಆಗಷ್ಟ್ 25, 2017

1

ನಮ್ಮೂರ ಹಬ್ಬ : ಗಣೇಶ ಹಬ್ಬ

‍ನಿಲುಮೆ ಮೂಲಕ

ಗೀತಾ ಜಿ.ಹೆಗಡೆ, ಕಲ್ಮನೆ.

ಓಂ ನಮೋ ನಮಃಸ್ತುಭ್ಯಂ
ಗಣರಾಜ ಮಹೇಶ್ವರಃ
ಸರ್ವ ವಿಘ್ನ ಹರೋದೇವಾ
ಪ್ರಥಮಂ ತವ ವಂದನಾ||

ಈ ಶ್ಲೋಕ ನನ್ನ ಆಯಿ(ಅಮ್ಮ) ದಿನವೂ ದೇವರಿಗೆ ನಮಸ್ಕಾರ ಮಾಡುವಾಗ ಮೂರೊತ್ತೂ ಹೇಳುತ್ತಿದ್ದರು. ದಿನವೂ ಕೇಳುವ ಕಿವಿಗಳು ನನ್ನ ಬಾಯಲ್ಲಿ ಉದುರಲು ಪ್ರಾರಂಭವಾಗಿರೋದು ತೊದಲು ನುಡಿಗಳ ವಯಸ್ಸಿನಲ್ಲಿ. ಅದೂ ಆಯಿಯೊಂದಿಗೆ ಕ್ರಮೇಣ ದಿನವೂ ಲೊಚ ಲೊಚ ಭಾಷೆಯಲ್ಲಿ ಹೇಳುವಾಗ ಆಯಿಯ ಮುಖದಲ್ಲಿ ಗಿಕಿ ಗಿಕಿ ನಗು, ತನ್ನ ಮಗಳು ಮಹಾ ಬುದ್ಧಿವಂತೆ ಎಂದು ಎಲ್ಲರೆದುರು ಕೊಚ್ಚಿಕೊಂಡಿದ್ದೇ ಕೊಚ್ಚಿಕೊಂಡಿದ್ದು.

ನನಗೇನು ಗೊತ್ತು ಈ ಶ್ಲೋಕ ಯಾಕೆ ಹೇಳುತ್ತಾರೆ? ಗೂಡಲ್ಲಿ ಅದೇನೇನೊ ಮೂರ್ತಿಗಳು, ಫೋಟೊಗಳು, ದಿನಾ ಗಂಟೆ ಭಾರಿಸುತ್ತಾರೆ, ತೊಳಿತಾರೆ, ಬೆಂಕಿ ಹಚ್ಚುತ್ತಾರೆ(ದೀಪ) ಮೇಲಿಂದ ಕೆಳಕ್ಕೆ ಕೈ ಆಡಿಸುತ್ತಾರೆ, ಹಾಲು ಮೊಸರು ಮುಂದೆ ಇಡ್ತಾರೆ ಹೀಗೆ ಹಲವಾರು ಅರ್ಥವಾಗದ ವಿಷಯಗಳು ತಲೆಯಲ್ಲಿ. ಅದಕ್ಕೇ ಏನೇನೊ ಪ್ರಶ್ನೆ ಕೇಳಿ ಹೊಗಳಿಸಿಕೊಂಡು ಅಟ್ಟಕ್ಕೆ ಏರಿದ್ದೇನೆ.. ಬೇಡಾದ ಪ್ರಶ್ನೆ ಕೇಳಬಾರದು ಅಂದರೂ ಕೇಳಿ ಸಖತ್ ಬೈಯ್ಯಿಸಿಕೊಂಡಿದ್ದೇನೆ. ಆಗೆಲ್ಲ “ಹೋಗು ದೇವರ ಹತ್ತಿರ ಕ್ಷಮೆ ಕೇಳು ” ಅಂತಿದ್ರು. ಮತ್ತೂ ಬಿಡದೆ “ಅಲ್ಲಿ ಯಾರ ಹತ್ತಿರ ಕೇಳಲಿ ತುಂಬಾ ದೇವರಿದೆ?” ಅಂದರೆ “ಅಯ್ಯೋ! ನನ್ನ ತಲೆ ಬಡಕ ಬೇಕು ಹೋಗು ಆ ಗಣೇಶನ ಹತ್ತಿರ ಹೋಗಿ ಹೇಳು” ಎನ್ನುತಿದ್ದರು.. ನಾನೂ ತಲೆ ಕೆಡಿಸಿಕೊಂಡು “ಆಯಿ ಗಣೇಶ ಅಂದರೆ ಯಾವುದು?” ಅಂದರೆ “ಅದೇ ಸೊಂಡಿಲು ಇರೋದು ನೋಡೆ ಸಾಕು.”(ಇವೆಲ್ಲ ನನಗೆ ತಿಳುವಳಿಕೆ ಬಂದಾಗ ಆಯಿ ಆಗಾಗ ಹೇಳಿ ನಗುತ್ತಿದ್ದರು.)

ಮೊಂಡು ಬುದ್ಧಿಯ ನನ್ನ ತಲೆಯಲ್ಲಿ ತಪ್ಪು ಮಾಡಿದರೆ ಗಣೇಶನಲ್ಲಿ ಹೇಳಬೇಕು, ದೇವರು ಅಂದರೆ ಅವನೇ ಇತ್ಯಾದಿ ಅಂತೆಲ್ಲಾ ತಲೆ ಹೊಕ್ಕಿಸಿದ್ದು ನನ್ನ ಹೆತ್ತಮ್ಮ. ಇಂದಿಗೂ ನನ್ನ ಆರಾಧ್ಯ ದೈವ ಆ ಶ್ರೀ ಗಣೇಶ. ಆ ಅಮ್ಮನೆಂಬ ಗುರುವಿನ ಮುಂದೆ ಇನ್ನಾರ ಕಾಣಲಿ!

ಅದಕ್ಕೆ ನಮ್ಮೂರಿನ ಹವ್ಯಕರ ಮನೆಗಳಲ್ಲಿ ನಡೆಯುವ ವಿಜೃಂಭಣೆಯ “ಗಣೇಶ ಹಬ್ಬದ” ಕುರಿತು ಬರೆಯಲೇ ಬೇಕು ಅನಿಸಿತು.

ನನಗಂತೂ ಗಣೇಶ ಹಬ್ಬ ಅಂದರೆ ನಮ್ಮೂರಿಂದಪ್ಪಾ. ಅಲ್ಲಿದು ಬಿಟ್ಟರೆ ಬೇರೆಲ್ಲಿ ನೋಡಿದರೂ ಟುಸ್. ನನಗೆ ಬುದ್ಧಿ ಬಂದಾಗಿನ ನೆನಪಿನೊಂದಿಗೆ ಈ ಹಬ್ಬದ ಸಡಗರ ಹೇಳ್ತೀನಿ ಕೇಳಿ.

ಸೃಷ್ಟಿ ಸೌಂದರ್ಯದ ತವರೂರಾದ ಮಲೆನಾಡಿನ ಪುಟ್ಟ ಹಳ್ಳಿಯ ಮಡಿಲಲ್ಲಿ ಇದೆ ನಮ್ಮೂರು.. ಹೆಸರು ಕಲ್ಮನೆ, ಕಾರವಾರ ಜಿಲ್ಲೆ. ನಮ್ಮದು ಬ್ರಾಹ್ಮಣರಲ್ಲಿ ಹವ್ಯಕ ಕುಟುಂಬ. ಈ ಜಿಲ್ಲೆಯಾದ್ಯಂತ ನೂರಾರು ಹವ್ಯಕ ಕುಟುಂಬಗಳು ಅಲ್ಲಲ್ಲಿ ನಾಲ್ಕು ಐದು ಮನೆಗಳಿಂದ ಸಣ್ಣ ಸಣ್ಣ ಹಳ್ಳಿಗಳಾಗಿ ಪುರಾತನ ಕಾಲದಿಂದಲೂ ನೆಲೆ ನಿಂತಿವೆ. ಒಂದೊಂದು ಹಳ್ಳಿಗೂ ಒಂದೊಂದು ಹೆಸರು.

ಸುಮಾರು 1970-71ನೇ ಇಸವಿ ಇರಬಹುದು. ಇನ್ನೂ ಫ್ರಾಕ್ ಹಾಕಿಕೊಂಡು ಥೈ ಥೈ ಜಿಗಿಯೋ ವಯಸ್ಸು. ಮುಕ್ತ ಮನಸ್ಸಿನಿಂದ ಹಬ್ಬಗಳಲ್ಲಿ ಸಂಭ್ರಮ ಪಟ್ಟಿದ್ದು ಆಗಲೇ. ಅದರಲ್ಲೂ ಈ ಚೌತಿ ಹಬ್ಬಕ್ಕೆ (ಗಣೇಶನ ಹಬ್ಬ ಹೀಗೆ ಹೇಳೋದು) ಒಂದು ವಾರಕ್ಕೆ ಮೊದಲೇ ನಮ್ಮ ಮಕ್ಕಳ ಗುಂಪು ನಮ್ಮೂರ ಓಣಿ ಬಾಗಿಲ (ಊರ ಎಂಟ್ರೆನ್ಸ) ರಸ್ತೆ ಪಕ್ಕದಲಿರೋ ಊರ ಪಟೇಲನ ಭತ್ತದ ಗೊಣಬೆ ಹಾಕೊ ಕಣದಲ್ಲಿ ಮೀಟಿಂಗು ಸೇರುತ್ತಿತ್ತು.

ಚೌತಿ ಹಬ್ಬಕ್ಕೆ ಎಷ್ಟು ದೊಡ್ಡ ಗಣೇಶ ತರ್ತಾರೆ? ಕೆಂಪದ ಅಥವಾ ಗುಲಾಬಿ ಕಲರಿಂದ? ಬಲಮುರಿನ ಎಡಮುರಿನ? ಯಾವ ರೀತಿ ಶೃಂಗಾರ ಮಾಡಬೇಕು? ಗಣೇಶನನ್ನು ಯಾವ ಹೊಳೆಯಲ್ಲಿ ಬಿಡೋದು? ಹೊಸಾ ಬಟ್ಟೆಗೆ ಸ್ಕೆಚ್, ತಿಂಡಿಗಳ ನೆನಪಲ್ಲಿ ಬಾಯಿ ಚಪ್ಪರಿಸೋದು, ಪಟಾಕಿ ಇತ್ಯಾದಿ ಎಲ್ಲ ಚರ್ಚೆಯೊಂದಿಗೆ ತೀರ್ಮಾನ ನಮ್ಮ ನಮ್ಮಲ್ಲಿ ನಡೆಯುತ್ತಿತ್ತು. ಎಲ್ಲ ಜವಾಬ್ದಾರಿ ಹಿರಿಯರದೇ ಆದರೂ ಮನೆಯಲ್ಲಿ ನಮಗೆ ಬೇಕಂತೆ ಹಠ ಮಾಡಲು ಇದು ಪೂರ್ವ ತಯಾರಿಯ ವೇದಿಕೆ ಅಷ್ಟೆ.

ಆದರೆ ಈ ಗಣೇಶ ಹಬ್ಬಕ್ಕೆ ತಲೆ ತಲಾಂತರದಿಂದ ಮನೆತನದಲ್ಲಿ ನಡೆದುಕೊಂಡು ಬಂದಂತೆ ಹಲವು ಪದ್ಧತಿಗಳನ್ನು ನಡೆಸಿಕೊಂಡು ಬರಬೇಕಾಗಿತ್ತು. ಅದು ಈಗಲೂ ಮುಂದುವರೆದಿದೆ. ಆದರೆ ಚಿಕ್ಕವರಾದ ನಮಗೆ ಇದೆಲ್ಲ ಗೊತ್ತಾಗುತ್ತಿರಲಿಲ್ಲ. ಮನಸಿಗೆ ಅನಿಸಿದ್ದು ಬೇಕು, ಮಾಡಬೇಕು ಅಷ್ಟೆ. ಹಠದಲ್ಲಿ ಗೆಲ್ಲಲಾಗದಿದ್ದರೆ ಅಳೋದು ಇದ್ದಿದ್ದೆ. ಆದರೆ ಇದು ಅರೆ ಕ್ಷಣ. ಮಕ್ಕಳ ಮನಸ್ಸು ಹಾಗೆ ಅಲ್ಲವೆ?

ಹಬ್ಬಕ್ಕೆ ಹದಿನೈದು ದಿನಗಳಿರುವಾಗಲೆ ಹಬ್ಬದ ತಯಾರಿ ಶುರುವಾಗುತ್ತದೆ. ಭಾದ್ರಪದ ಶುಕ್ಲ ತೃತೀಯ ದಿನ ಸ್ವರ್ಣ ಗೌರಿ ವೃತವಾದರೆ ಮಾರನೆ ದಿನ ಚತುರ್ಥಿ ಚೌತಿಯ ದಿನ ಈ ಹಬ್ಬ ಆಚರಿಸುವ ಪದ್ಧತಿ. ಮಳೆಗಾಲ ಅಲ್ಪ ಸ್ವಲ್ಪ ಇರುತ್ತದೆ. ಅಡಿಕೆ ತೋಟದ ಕೆಲಸ ಹಬ್ಬದ ತಯಾರಿಗೆ ಅಡ್ಡಿ ಆಗದಂತೆ ಪೂರೈಸಿಕೊಳ್ಳುವ ಜವಾಬ್ದಾರಿ ಬೇರೆ.

ನಮಗೋ ಹಬ್ಬಕ್ಕೆ ತಂದ ಪಟಾಕಿ ಎಲ್ಲಿ ಬಿಸಿಲಿದೆ ನೋಡಿ ಅಲ್ಲಿ ಒಣಗಿಸೋದು, ಮಳೆ ಮೋಡವಾದರೆ ಮುಗೀತು ; ಕಂಬಳಿ ಒಣ ಹಾಕಲು ಮಾಡಿರುವ ಬೆಂಕಿಯ ಹೊಡತಲದ ಪಕ್ಕದಲ್ಲಿ ಬಿಸಿ ಭೂದಿಯ ಶಾಖದಲ್ಲಿ ಒಣಗಿಸೋ ಪ್ರಯತ್ನ. ಸುರ್ ಸುರ್ ಬತ್ತಿ, ಆನೆ ಪಟಾಕಿ, ಕುಡಿಕೆ, ನೆಲಚಕ್ರ, ಸರ ಪಟಾಕಿ, ಕೇಪು ಹೀಗೆ ಹಲವಾರು ಪಟಾಕಿ ಹೊಡೆಯುವ ಸಡಗರ ಹಬ್ಬದ ನಾಲ್ಕು ದಿನದಿಂದಲೆ. “ಕೊಟ್ಟಿಗೆಯಲ್ಲಿ ಹಸುಗಳೆಲ್ಲ ಹೆದರತ, ಈಗಲೇ ಹೊಡೆಯಡದ್ರೆ, ಎಮ್ಮೆ ಹಾಲು ಕೊಡ್ತಿಲ್ಲೆ” ಅಜ್ಜಿ ಒಂದೇ ಸಮ ಗಲಾಟೆ ಮಾಡುತ್ತಿದ್ದರೂ ನಮಗೆ ಕಿವಿಗೆ ಬೀಳುತ್ತಿರಲಿಲ್ಲ.

ಈ ಹಬ್ಬಕ್ಕೆ ಚಕ್ಕುಲಿ ವಿಶೇಷ ತಿಂಡಿ. ಹಳೆ ಅಕ್ಕಿಯನ್ನು ನೀರಿನಲ್ಲಿ ತೊಳೆದು ನೆರಳಲ್ಲಿ ಒಣಗಿಸಿ ಹುರಿದು ಅಳತೆಗೆ ತಕ್ಕಂತೆ ಉದ್ದಿನ ಬೇಳೆ ಅದೂ ಕೂಡಾ ಹುರಿದು ಓಂ ಕಾಳು ಹಾಕಿ ಮನೆಯಲ್ಲೆ ಬೀಸುವ ಕಲ್ಲಿನಲ್ಲಿ ನುಣ್ಣಗೆ ಹಿಟ್ಟು ಮಾಡಿ ಜರಡಿ ಹಿಡಿದು ಎಳ್ಳು, ಉಪ್ಪು ಬೆರೆಸಿ ಹದವಾದ ಹಿಟ್ಟು ರೆಡಿ ಮಾಡುವುದು ಹೆಂಗಸರ ಕೆಲಸ ; ಕಲೆಸುವಾಗ ಗಂಡಸರ ಕೈ ಜೋಡಣೆಯೊಂದಿಗೆ. ಮನಸಲ್ಲಿ “ನಿಮ್ಮನೆ ಚಕ್ಲಿ ಭರ್ತಿ ಚೋಲೊ ಆಜೆ” ಎಂದು ಎಲ್ಲರ ಬಾಯಲ್ಲಿ ಹೊಗಳಿಕೆಯ ನಿರೀಕ್ಷೆಯಲ್ಲಿ.

ಈ ಹಿಟ್ಟಿನಲ್ಲಿ ಮಾಡುವ ಕೈ ಸುತ್ತಿನ ಚಕ್ಕುಲಿ ವಿಶೇಷ. ಊರಲ್ಲಿ ಇರುವ ಐದಾರು ಮನೆಗಳಲ್ಲಿ ಒಬ್ಬೊಬ್ಬರ ಮನೆಯಲ್ಲಿ ನಡೆಯುವ ಚಕ್ಕುಲಿ ಸಂಭ್ರಮಕ್ಕೆ “ಚಕ್ಕಲಿ ಕಂಬಳಾ” ಎಂದು ಹೆಸರು. ಹತ್ತಿರದ ನೆಂಟರು, ಅಕ್ಕಪಕ್ಕದ ಮನೆಯವರು ಒಬ್ಬರಿಗೊಬ್ಬರು ನೇರವಾಗಿ, ಸಾಲಾಗಿ ಕುಳಿತು ಚಕ್ಕುಲಿ ಸುತ್ತುತ್ತಿದ್ದರು. ಈ ಕೆಲಸ ಗಂಡಸರು ಮಾತ್ರ ಮಾಡುತ್ತಿದ್ದರು. ದೊಡ್ಡ ಬಾಣಲೆಯಲ್ಲಿ ಕೊಬ್ಬರಿ ಎಣ್ಣೆ ಹಾಕಿ ಕಟ್ಟಿಗೆ ಒಲೆ ಉರಿಯಲ್ಲಿ ರಾತ್ರಿ ಹನ್ನೆರಡು ಒಂದು ಗಂಟೆಯವರೆಗೂ ಸುತ್ತಿದ ಚಕ್ಕುಲಿ ಬೇಯಿಸುತ್ತಿದ್ದರು. ಇನ್ನು ಚಕ್ಕುಲಿ ಸುತ್ತುವ ಕೈಗಳು ಎಷ್ಟು ಪಳಗಿರುತ್ತಿದ್ದವೆಂದರೆ ಒಮ್ಮೆ ಎಣ್ಣೆ ಹಚ್ಚಿದ ಹಿಟ್ಟು ನಾದಿ ಅಂಗೈಯಲ್ಲಿ ಹಿಡಿದು ಹೆಬ್ಬೆರಳು ಹಾಗೂ ತೋರು ಬೆರಳಲ್ಲಿ ರಿಂಗ್ ರಿಂಗ್ ಡಿಸೈನ್ ನಲ್ಲಿ ಮರದ ಮಣೆಯ ಮೇಲೆ ಸುತ್ತಲು ಪ್ರಾರಂಭಿಸಿದರೆಂದರೆ ಕಣ್ಣು ಮಿಟುಕಿಸದೆ ನೋಡುವಂತಿತ್ತು.

ಆದರೆ ಹೆಣ್ಣು ಮಕ್ಕಳಿಗೆ ಚಕ್ಕುಲಿ ಹಿಟ್ಟಿನ ಉಂಡೆ ಕಟ್ಟಿ ಕೊಡಲು ಮಾತ್ರ ಹೇಳುತ್ತಿದ್ದರು. ” ಚಕ್ಕುಲಿ ಸುತ್ತಲು ನಿಂಗಕ್ಕೆಲ್ಲ ಬರ್ತಿಲ್ಲೆ ಸುಮ್ನೆ ಹಿಟ್ಟು ಹಾಳಾಗ್ತು ಉಂಡೆ ಕಟ್ಟಿ ಸಾಕು” ಎಂದು ಹಿರಿಯರು ನುಡಿದಾಗ ಗತಿ ಇಲ್ಲದೆ ಮಾಡುತ್ತಿದ್ದೆವು. ಕೊನೆ ಕೊನೆಗೆ ಬೇಜಾರಾಗಿ ಎಷ್ಟು ಕಟ್ಟಿದರೂ ಮುಗಿಯದ ಚಕ್ಕುಲಿ ಹಿಟ್ಟು ಹಿರಿಯರ ಕಣ್ಣು ತಪ್ಪಿಸಿ ಬಾವಿಗೆ ಎಸೆದು ಮಾರನೆ ದಿನ ನೀರು ಸೇದುವಾಗ ಭಾವಿ ನೀರ್ಯಾಕೊ ಬೆಳ್ಳಗೆ ಬರುತ್ತಿದೆ ಯಾಕೆ ಎಂದು ಹಿರಿಯರು ಪರಿಶೀಲಿಸಿದಾಗ ಗೊತ್ತಾಗಿ ಚೆನ್ನಾಗಿ ಬಯ್ಯಿಸಿಕೊಂಡಿದ್ದೂ ಇದೆ.

ಇನ್ನು ಚಕ್ಕುಲಿ ತುಂಬಿಡಲು ದೊಡ್ಡ ದೊಡ್ಡ ಎಣ್ಣೆಯ ಟಿನ್ ಡಬ್ಬ ಮೇಲ್ಭಾಗ ಕೊರೆಸಿ ಮುಚ್ಚಳವಿರುವ ಡಬ್ಬವಾಗಿ ಪರಿವರ್ತಿಸಿಕೊಳ್ಳಲಾಗುತ್ತಿತ್ತು. ಏಕೆಂದರೆ ಇದರಲ್ಲಿ ಇಟ್ಟರೆ ಆರು ತಿಂಗಳಾದರೂ ಗರಿಮುರಿಯಾಗಿ ಇರುತ್ತದೆ.

ಚಕ್ಕುಲಿ ಕಂಬಳ ಮುಗಿದ ಮೇಲೆ ಕೊನೆಯ ದಿನ ಆಗಿನ ಗಂಡಸರ ಪೊಗದಸ್ತ ಆಟ ಅಂದರೆ ಇಸ್ಪೀಟ್ ಆಟ. ಸುಮಾರು ಎಂಟು ಹತ್ತು ಜನ ಕಂಬಳಿಯ ನೆಲ ಹಾಸಿನ ಮೇಲೆ ರೌಂಡಾಗಿ ಕೂತು ಮಂತ್ರ ಮುಗ್ದರಾಗಿ ಬೀಡಿ, ಸಿಗರೇಟು, ಕವಳ, ಚಾ ಸೇವನೆಯೊಂದಿಗೆ ಅಹೋ ರಾತ್ರಿ ಇಸ್ಪೀಟ್ ಆಟ. ಮಾತು, ಹಾಸ್ಯ ಚಟಾಕಿ ಗೆದ್ದವರ ಅಟ್ಟಹಾಸದ ನಗೆಯ ವೈಖರಿಯೊಂದಿಗೆ ನಡೆಯುತ್ತಿತ್ತು. ಮನೆಯ ಹೆಂಗಸರು ಮಾತಾಡುವಂತಿಲ್ಲ. ಊಟ ತಿಂಡಿ ವ್ಯವಸ್ಥೆ ಮಾಡುವುದಷ್ಟೆ ಅವರ ಕೆಲಸ. ಇದು ಮಾತ್ರ ನೆನಪಿಸಿಕೊಂಡರೆ ಈಗಲೂ ಮೈಯ್ಯೆಲ್ಲ ಉರಿಯುತ್ತದೆ.

ಕಾರಣ ಇಷ್ಟೆ ; ಆಗೆಲ್ಲ ಹೆಂಗಸರು ಪ್ರತಿಯೊಂದು ಕೆಲಸ ಶ್ರಮವಹಿಸಿ ಮಾಡಬೇಕಾಗಿತ್ತು. ಈಗಿನಂತೆ ಮಿಕ್ಸಿ, ಗ್ಯಾಸ್, ವಾಷಿಂಗ್ ಮಿಷನ್, ನಲ್ಲಿ ನೀರು, ಕರೆಂಟ್ ಲೈಟು ಇತ್ಯಾದಿ ಯಾವುದೂ ಇರಲಿಲ್ಲ. ಕೊಟ್ಟಿಗೆ ಕೆಲಸವನ್ನೂ ಮಾಡಿಕೊಳ್ಳಬೇಕಿತ್ತು. ಪ್ರತಿ ನಿತ್ಯ ನೆಲಕ್ಕೆ ಸಗಣಿ ಹಾಕಿ ಸಾರಿಸಿಕೊಳ್ಳಬೇಕು. ಇನ್ನು ಹಬ್ಬ ಬಂತೆಂದರೆ ತಲೆಗೊಂದು ಬಟ್ಟೆ ಸುತ್ತಿಕೊಂಡು ದೊಡ್ಡ ಮನೆಯ ಬಲೆ ಧೂಳು ತೆಂಗಿನ ಪೊರಕೆಯಲ್ಲಿ ಜಾಡಿಸಿ ಅಲ್ಲಲ್ಲಿ ಹರಡಿದ ತೋಟದ ಪರಿಕರ ಅದೂ ಇದೂ ಎಲ್ಲ ಜೋಡಿಸಿ ಗುಡಿಸಿ ಮೊದಲಿನ ದಿನ ತಯಾರಿಸಿಟ್ಟುಕೊಂಡ ಅಣಲೆ ಕಾಯಿ ಕಪ್ಪು ನೀರು ಸಗಣಿಯಲ್ಲಿ ಬೆರೆಸಿ ಅಡಿಕೆಯ ಹಾಳೆಯಲ್ಲಿ ತಯಾರಿಸಿದ್ದ ವಿಶಿಷ್ಟ ಪರಿಕರದಲ್ಲಿ ಸಾರಿಸಬೇಕಿತ್ತು. ಮನೆ ಮುಂದಿನ ಅಂಗಳಕ್ಕೂ ಸಗಣಿ ನೀರು ಹಾಕಿ ತೆಂಗಿನ ಪೊರಕೆಯಲ್ಲಿ ತೊಡೆಯಬೇಕಿತ್ತು. ಎಷ್ಟೋ ಮನೆಗಳು ಅಡಿಕೆಯ ಸೋಗೆ (ಅಡಿಕೆ ಗರಿ)ಯಿಂದ ಮೇಲ್ಚಾವಣಿ ಮುಚ್ಚಿದ ಮನೆಗಳಾಗಿದ್ದವು. ಸೋಗೆಯನ್ನು ಪ್ರತೀ ವರ್ಷ ಬದಲಾಯಿಸಲಾಗುತ್ತಿತ್ತು. ಇಂಥಾ ಮನೆಯಲ್ಲಿ ಸ್ವಚ್ಛತೆ ಇನ್ನೂ ಕಷ್ಟ.

ಎರಡು ಮೂರು ದಿನ ನಡೆದ ಚಕ್ಕುಲಿ ಕಂಬಳದ ಕೆಲಸದಲ್ಲಿ ಹೈರಾಣಾದ ಹೆಂಗಸರಿಗೆ ರಾತ್ರಿ ಹಾಸಿಗೆ ಕಂಡರೆ ಸಾಕಾಗುತ್ತಿತ್ತು. ಇದರ ಮಧ್ಯ ಈ ಆಟ ಬೇರೆ. ನನಗೆ ಸ್ವಲ್ಪ ತಿಳುವಳಿಕೆ ಬಂದ ಮೇಲೆ ಎಷ್ಟೋ ಸಾರಿ ನನ್ನಪ್ಪನಿಗೆ ಬೈದಿದ್ದಿದೆ. “ಅಪ್ಪಾ ನೀವೆಲ್ಲ ಮಾಡ್ತಿರೋದು ಸರಿಗಿಲ್ಲ ” ಅಂತೆಲ್ಲ. ಆಗೆಲ್ಲ ಅಪ್ಪ ದೊಡ್ಡ ಕಣ್ಣು ಬಿಟ್ಟಾಗ ಮುದುರಿಕೊಳ್ಳುತ್ತಿದ್ದೆ.

ಹಳ್ಳಿ ಕಡೆ ಹಬ್ಬಕ್ಕೆ ಒಬ್ಬರನ್ನೊಬ್ಬರು ಕರೆಯುವ ರೂಢಿ ” ಹ್ವಾ ಯಮ್ಮನಿಗೆ ಹಬ್ಬಕ್ಕೆ ಬರವು”. ಇನ್ನು ಮನೆ ಮಕ್ಕಳು ಕೆಲಸದ ನಿಮಿತ್ತ ಊರಿಂದ ಹೊರಗೆ ಎಲ್ಲೇ ಇರಲಿ ಸಂಸಾರ ಸಮೇತ ಹುಟ್ಟಿದೂರಿಗೆ ಬಂದು ಹಿರಿಯರೊಂದಿಗೆ ಹಬ್ಬ ಆಚರಿಸಬೇಕು. ಇದು ಎಲ್ಲರಲ್ಲೂ ಸ್ನೇಹ ಸೌಹಾರ್ದ ಬೆಳೆಸಿ ಹಬ್ಬಕ್ಕೆ ಮೆರುಗು ತರುತ್ತಿತ್ತು.

ಮದುವೆಯಾದ ಮನೆಯ ಹೆಣ್ಣು ಮಕ್ಕಳನ್ನು ನೆಂಟರಿಷ್ಟರನ್ನು ಖುದ್ದಾಗಿ ಹೋಗಿ ಕರೆಯಬೇಕಿತ್ತು. ಈಗಿನಂತೆ ಫೋನು, ಮೊಬೈಲು ಇರಲಿಲ್ಲ. ಕರೆಯದಿದ್ದರೆ ಆಡಿಕೊಳ್ಳುತ್ತಿದ್ದರು. ಹಳ್ಳಿಯ ಜನರಲ್ಲಿ ಮರ್ಯಾದೆಗೆ ಹೆಚ್ಚು ಪ್ರಾಶಸ್ತ್ಯ. ಯಾವುದೇ ಹಬ್ಬ ವಿಶೇಷ ದಿನಗಳಿಗೆ ಖುದ್ದಾಗಿ ಕರೆಯಲೇ ಬೇಕು. ಹಬ್ಬದ ಮಾರನೆ ದಿನ ಬಂದು ಹೋಗುವ ವಾಡಿಕೆ.

ಭಾದ್ರಪದ ಮಾಸದ ಪಾಡ್ಯದಿಂದಲೇ ಹಬ್ಬ ಬಂತೆಂದು ಲೆಕ್ಕ. ಆಗೆಲ್ಲ ಹಳೆಯ ಕಾಲದ ದೊಡ್ಡ ದೊಡ್ಡ ಹೆಂಚಿನ ಮನೆ ಅಡಿಕೆಯ ಗರಿಯ ಸೋಗೆ ಮನೆಗಳೇ ಹೆಚ್ಚು. ಮರದ ರೀಪು, ಪಕಾಸು, ಕೆತ್ತನೆಯ ಉದ್ದ ಕಂಬ, ಮರದ ಸೀಲಿಂಗ್ ಹೆಂಚಿನ ಕೆಳಗೆ, ನಾಗವಂದಿಗೆ, ಮೇಲೇರುವ ಏಣಿ ಮಾಳಿಗೆಗೆ ಇತ್ಯಾದಿ ಹೀಗೆ ಪ್ರತಿಯೊಂದೂ ಮರದ ಕೆತ್ತನೆಯಿಂದಲೇ ಕೂಡಿರುತ್ತಿತ್ತು. ಇದನ್ನು ಈಗಲೂ ಹಳ್ಳಿಗಳಲ್ಲಿ ಕಾಣಬಹುದು. ಗೋಡೆಗಳನ್ನು ಮಣ್ಣಿನಿಂದ ನಿರ್ಮಿಸಲಾಗುತ್ತಿತ್ತು. ಮನೆಗೆ ಎಲ್ಲ ಬಾಗಿಲಿಗೂ ಹೊಸಿಲು ಇದ್ದು ಜಗುಲಿಯಿಂದ ಒಳ ಹೋಗುವ ಬಾಗಿಲು ಪ್ರಧಾನ ಬಾಗಿಲೆಂದು ಕರೆಸಿಕೊಳ್ಳುತ್ತದೆ. ಬಾಗಿಲ ಹೊಸಿಲಿಗೆ ಕೆಮ್ಮಣ್ಣು ನೀರಲ್ಲಿ ನೆನೆಸಿ ಬಟ್ಟೆಯ ಜುಂಜಿನಿಂದ ಕೆಂಪನೆಯ ಬಣ್ಣ ಹಚ್ಚಿದ ಮೇಲೆ ಒಣಗಲು ಕಾಯುತಿದ್ದೆವು.. ಆಮೇಲೆ ಬಿಳಿ ಮಣ್ಣು ಶೇಡಿ ಎಂದು ಕರೆಯುವ ಇದನ್ನು ಕೂಡಾ ಸ್ವಲ್ಪ ನೀರಲ್ಲಿ ಪೇಸ್ಟ್ ಮಾಡಿಕೊಂಡು ಹತ್ತಿಯ ಬತ್ತಿಯಲ್ಲಿ ಸೂಕ್ಷ್ಮ ಎಳೆಗಳಲ್ಲಿ ದೇವರ ಹಾಡೇಳಿಕೊಂಡು ಚಿತ್ತಾರ ಬಿಡಿಸುತಿದ್ದೆವು. ಬಹುಶಃ ಕೆಲವರ ಬಾಯಲ್ಲಿ ಹಳೆಯ ಹಾಡುಗಳ ಪಟ್ಟಿಯೇ ತುಂಬಿರುತ್ತಿತ್ತು. ಇದೇ ರೀತಿ ನಿತ್ಯ ಪೂಜೆಯ ದೇವತೆ ತುಳಸಿ ಕಟ್ಟೆಗೂ ಬಿಡಿಸುತ್ತಿದ್ದರು. ಇದನ್ನು ಮಧ್ಯಾಹ್ನ ಊಟವಾದ ನಂತರದ ಬಿಡುವಿನ ವೇಳೆಯಲ್ಲಿ ಕತ್ತಲಾಗುವುದರೊಳಗೆ ಮುಗಿಸುತ್ತಿದ್ದರು.

ಇದು ಹೆಂಗಸರ ಸಡಗರವಾದರೆ ಇನ್ನು ಗಂಡಸರು ಬಾಳೆ ಎಲೆ, ಅಡಿಕೆ ಶೃಂಗಾರ(ಹೂ) ಬಿಲ್ವ ಪತ್ರೆ, ಶಮಿ ಪತ್ರೆ, ಕರವೀರ ಪತ್ರೆ, ಗರಿಕೆ, ಇತ್ಯಾದಿ ಪತ್ರೆಗಳು ವಿಧ ವಿಧವಾದ ಹೂವುಗಳು ಎಲ್ಲೆಲ್ಲಿ ಸಿಗುತ್ತದೆಂದು ಮೊದಲೇ ಗುರುತಿಸಿಕೊಂಡು ಗೌರಿ ಹಬ್ಬದ ಮೊದಲ ದಿನದಂದೇ ಸಂಗ್ರಹಿಸಿಟ್ಟುಕೊಳ್ಳಬೇಕಿತ್ತು.

ಮುಂದಿನ ತಯಾರಿ ಗಣೇಶ ಮತ್ತು ಗೌರಿ ಕೂಡಿಸಲು ಮಂಟಪ ಕಟ್ಟೋದು. ಅದೂ ಬಾಳೆ ಕಂಬ, ಮಾವಿನ ಎಲೆಯ ಮಾಲೆ, ಅಡಿಕೆ ಹೂವಿನ ಶೃಂಗಾರ, ಬಣ್ಣದ ಪೇಪರನಲ್ಲಿ ಡಿಸೈನ್ ಕಟಿಂಗ್ ಕೂಡಾ ಮಾಡುವ ಕಲೆ ಅರಿತಿದ್ದರು ಅನೇಕರು.

ಬಗೆ ಬಗೆಯ ತರಕಾರಿ, ಹಣ್ಣುಗಳನ್ನು ಬಳ್ಳಿಯಲ್ಲಿ ಬೇರೆ ಬೇರೆಯಾಗಿ ಕಟ್ಟಿ ಮನೆ ಕಟ್ಟುವಾಗಲೇ ದೇವರ ಮನೆಯಲ್ಲಿ ನಿರ್ಮಿತಗೊಂಡ ಮೇಲ್ಭಾಗದ ಅಟ್ಟಣೆಗಳಿಗೆ ಸಾಲಾಗಿ ಕಟ್ಟಲಾಗುತ್ತಿತ್ತು. ಗೌರಿ ಹೂವು ಇರಲೇ ಬೇಕು ಈ ಹಬ್ಬಕ್ಕೆ. ಇದನ್ನು ಇವುಗಳ ಮಧ್ಯೆ ಮಧ್ಯೆ ಚಂದವಾಗಿ ನೇತಾಡುವಂತೆ ಕಟ್ಟುತ್ತಿದ್ದರು. ಇದಕ್ಕೆ “ಪಲವಳಿಗೆ ಕಟ್ಟೋದು” ಎಂದು ಹೇಳುತ್ತಾರೆ.

ಗೋಧೂಳಿ ಮುಹೂರ್ತದಲ್ಲಿ ಗಣೇಶನನ್ನು ತರುವ ಸಂಭ್ರಮ. ಆ ದಿನ ಕೇಳಬೇಕೆ ನಮಗೋ ಸಂಭ್ರಮವೆ ಸಂಭ್ರಮ. ಅದಕ್ಕೆ ಗಣೇಶನನ್ನು ತರಲು ಎರಡು ಮೈಲಿ ದೂರ ಹೋಗುವಾಗಲೇ ಅಪ್ಪನ ಹಿಂದೆ ನಾ ಬಾಲ. ಜಾಗಟೆ ಬಾರಿಸಿ ಹಾನ ಸುಳಿದು ಮನೆ ಪ್ರವೇಶಿಸಿದ ಮುಖ ಮುಚ್ಚಿಕೊಂಡ ಗಣಪ ಜಗುಲಿಯ ನಾಗಂದಿಗೆಯ ಮೇಲೆ ವಿರಾಜಮಾನನಾಗಿರುತ್ತಿದ್ದ. ಆ ಕಡೆ ಈ ಕಡೆ ಬಗ್ಗಿ ಬಗ್ಗಿ ನೋಡಿದರೂ ಊಹೂಂ ಕಾಣದು ಮುಖ.

ಇಲ್ಲಿಂದಲೇ ಶುರು.. ಊರವರು ತಮ್ಮ ಮನೆಯದೇ ಹಬ್ಬ ಎನ್ನುವಂತೆ ಒಂದಾಗಿ ಹಬ್ಬ ಮಾಡುವ ರೀತಿ. ಹಬ್ಬದ ಸಡಗರಕೆ ಏನೇನೆಲ್ಲಾ ಬೇಕೋ ಎಲ್ಲವನ್ನು ಒಬ್ಬರಿಗೊಬ್ಬರು ಸಹಾಯದೊಂದಿಗೆ ಹಂಚಿಕೊಂಡು ಮಾಡುತ್ತಾರೆ.

ಹೆಂಗಳೆಯರು ಹಾಡು ಹಸೆ(ರಂಗೋಲಿ) ಹೊಸದಾಗಿ ಕಲಿತು ಪೂರ್ವ ತಯಾರಿ ಮಾಡಿಕೊಂಡಿದ್ದರೆ, ವಿಜೃಂಭಣೆಯ ಮಂಗಳಾರತಿಗೆ ಆರತಿ ತಟ್ಟೆ ರೆಡಿ ಮಾಡಲು ಊರ ಹೆಣ್ಣು ಮಕ್ಕಳು ಒಂದೆಡೆ ಸೇರಿ, ಹೂವಿನ ಆರತಿ, ಕುಂಕುಮದ ಆರತಿ, ಅರಿಶಿನದ ಆರತಿ, ರಂಗೋಲಿ ಆರತಿ, ಧಾನ್ಯದ ಆರತಿ ಹೀಗೆ.. ಒಂದು ತಿಳುವಾದ ಸಣ್ಣ ಕಡ್ಡಿಗೆ ಹತ್ತಿ ಗಟ್ಟಿಯಾಗಿ ಸುತ್ತಿಕೊಂಡು ತಿಳು ಬೆಲ್ಲದಲ್ಲಿ ತಾಮ್ರ ಅಥವಾ ಹಿತ್ತಾಳೆಯ ತಟ್ಟೆಯ ಮೇಲೆ ಹುಂಡಿಟ್ಟು ಬಿಡಿಸುತ್ತಿದ್ದರು. ಅದರ ಮೇಲೆ ಬೇಕಾದ ಪುಡಿ ಉದುರಿಸಿದರೆ ಎಲ್ಲ ಅಂಟಿಕೊಳ್ಳುತ್ತಿತ್ತು. ತಟ್ಟೆ ಡಬ್ಬಾಕಿ ಎತ್ತಿದರೆ ಚಿತ್ರ ಎದ್ದು ಕಾಣುತ್ತಿತ್ತು. ಹಿತ್ತಾಳೆ ದೀಪಗಳ ಆರತಿನೂ ಜೊತೆಗಿಟ್ಟು ಎಣ್ಣೆ ಬತ್ತಿ ಹಾಕಿ ಆರತಿಗೆ ಅಣಿ ಮಾಡುತ್ತಿದ್ದರು. ಹೆಣ್ಣು ಮಕ್ಕಳ ಕೌಶಲ್ಯ ಊರವರೆಲ್ಲರ ಬಾಯಲ್ಲಿ ಹೊಗಳಿಕೆ. ಹೊಸ ಬಟ್ಟೆ, ಕೈ ಕಾಲುಗಳಿಗೆ ಹಚ್ಚಿಕೊಂಡ ಮದರಂಗಿ ರಂಗು, ಉದ್ದದ ಜಡೆಗೆ ಹೂವಿನ ದಂಡೆ, ಆಭರಣ ತೊಟ್ಟು ಅತ್ತಿಂದಿತ್ತ ಇತ್ತಿಂದತ್ತ ಓಡಾಡುತ್ತ ಮನೆಗೆ ಹಬ್ಬದ ಕಳೆ ಕಟ್ಟುವುದು ಹೆಣ್ಣು ಮಕ್ಕಳಿಂದ. ಹೆಣ್ಣಿದ್ದರೇನೆ ಹಬ್ಬ ಚಂದ ಅಂತ ಹಿರಿಯರ ಮಾತು.

ತದಿಗೆ ದಿನ ಗೌರಿ ಹಬ್ಬ. ಗೌರಿ ಬಾಗಿನದಲ್ಲಿ ಎರಡು ಕುಡಿ ಬಾಳೆ, ಅದರಲ್ಲಿ ಅಕ್ಕಿ, ತೆಂಗಿನ ಕಾಯಿ, ಕೆಂಪು ಕೊಳ್ ನೂಲು, ಹಣಿಗೆ, ಕನ್ನಡಿ ಬ್ಲೌಸ್ ಪೀಸ್, ವೀಳ್ಳೆದೆಲೆ ಅಡಿಕೆ, ಹಣ, ಹಸಿರು ಬಳೆ, ಕರಿಮಣಿ, ಬಾಳೆ ಹಣ್ಣು ಮತ್ತು ಹೂವು ಪಕ್ಕದಲ್ಲಿ ಗೌರಿ ತಂಬಿಗೆಯಲ್ಲಿ ನೀರು ತುಂಬಿ ಮೇಲೆ ಐದು ಎಲೆ ಇರುವ ಮಾವಿನ ಎಲೆ ಬೊಂಚು.. ತೆಂಗಿನಕಾಯಿ ಹೂವು, ಗೆಜ್ಜೆ ವಸ್ತ್ರ ಇಟ್ಟು ಪೂಜೆಗೆ ಅಣಿಗೊಳಿಸುವುದು ಹೆಂಗಸರ ಕೆಲಸ. ಬುಟ್ಟಿ ತುಂಬ ಹೂವು ಹಣ್ಣು ಕಾಯಿ ಇತ್ಯಾದಿ ಬಣ್ಣದ ರಂಗೋಲಿ, ವಿಧ ವಿಧ ಎಣ್ಣೆಯ ದೀಪ ನೋಡುವ ಕಣ್ಣು, ಮನಸು ಮಂತ್ರ ಮುಗ್ದ.

ಮನೆಯ ಯಜಮಾನನಿಂದ ದೇವಿಯ ಆಹ್ವಾನದ ಮಂತ್ರದೊಂದಿಗೆ ಹೆಂಗಸರ ಹಾಡಿನೊಂದಿಗೆ ಜಾಗಟೆಯ ನಾದದಲ್ಲಿ ಮಂಗಳಾರತಿ ನೆರವೇರುತ್ತಿತ್ತು. ಈ ದಿನ ನೈವೇದ್ಯಕ್ಕೆ ಲಡ್ಡಿಗೆ (ಕಡಲೆ ಹಿಟ್ಟು ಎಣ್ಣೆಯಲ್ಲಿ ಜರಡಿ ಮಾಡಿ ಬೇಯಿಸಿ ಬೆಲ್ಲದ ಪಾಕದಲ್ಲಿ ಹಾಕಿ ಮಾಡಿದ ಖಾಧ್ಯ) ಕೂಸುಂಬರಿ, ಪಾಯಸ, ಹಾಲು, ಮೊಸರು ಇಡುತ್ತಿದ್ದರು.

ಮನೆಯಲ್ಲಿಯ ಹೆಂಗಸರು ಅರಿಶಿನ ಕುಂಕುಮ ಹೂ ಅಕ್ಷತ ದೂರದಿಂದ ಹಾಕಿ ನಮಸ್ಕಾರ ಮಾಡುತ್ತಾರೆ. ಹವ್ಯಕರ ಮನೆಗಳಲ್ಲಿ ಅನಾದಿಕಾಲದಿಂದಲೂ ದೇವರ ಪೀಠದಲ್ಲಿ “ಸಾಲಿಗ್ರಾಮ” ಇಟ್ಟು ಪೂಜಿಸುತ್ತಿದ್ದಾರೆ. ಇದು ಮನೆಯಲ್ಲಿ ಇದ್ದರೆ ತುಂಬಾ ಮಡಿಯಿಂದ ದೇವರ ಪೂಜೆ ಮಾಡಬೇಕಾಗುತ್ತದೆ. ಬಹಿಷ್ಟೆಯಾಗುವ ಹೆಂಗಸರು, ಹೆಣ್ಣು ಮಕ್ಕಳು ಪೂಜೆ ಮಾಡುವಂತಿಲ್ಲ. ಪ್ರತಿನಿತ್ಯ ಅಭಿಷೇಕ, ನೈವೇದ್ಯ ಗಂಡಸರು ಮಾಡಬೇಕಾಗುತ್ತದೆ. ಆದುದರಿಂದ ಇಲ್ಲಿಯ ಮನೆಗಳಲ್ಲಿ ಹೆಂಗಸರು ದೇವರ ಪೂಜೆ ಮಾಡುವುದಿಲ್ಲ. ಮಂತ್ರ ಹೇಳುವುದಿಲ್ಲ. ದೇವರ ಶ್ಲೋಕಗಳನ್ನು ಹೇಳಿ ನಮಸ್ಕಾರ ಮಾಡುತ್ತಾರೆ. ಬಹಿಷ್ಟೆಯಾದಾಗ ಮನೆಯ ಹೊರಗೆ ಇರುತ್ತಾರೆ.

ಗೌರಿ ಗಣೇಶ ಹಬ್ಬ ಮುಗಿದ ಮೇಲೆ ಪೂಜೆಗೆ ಇಟ್ಟ ಬಾಗಿನವನ್ನು ತಾಯಿಗೆ ಗೌರಿ ಬಾಗಿನ ಅಂತ ಮನೆಯ ಹೆಂಗಸು ಎತ್ತಿಡಬೇಕು. ತವರಿಗೆ ಹೋದಾಗ ತಾಯಿಗೆ ಕೊಡಬೇಕು. ಒಟ್ಟು ಕುಟುಂಬದಲ್ಲಿ ಹೆಚ್ಚಿನ ಹೆಂಗಸರಿದ್ದರೆ ಅಷ್ಟೂ ಹೆಂಗಸರು ತಮ್ಮ ತಮ್ಮ ತವರಿಗೆ ತಾಯಿ ಬಾಗಿನವೆಂದು ಪೂಜೆಯ ಮೊದಲೇ ಅಣಿಗೊಳಿಸಿಕೊಂಡಿರುತ್ತಾರೆ. ಊರ ಹೆಂಗಸರನ್ನು ಕರೆದು ಗೌರಿ ಬಾಗಿನ ಕೊಡುವ ಪದ್ದತಿ ಇತ್ತು. ಹೆಣ್ಣು ಮಕ್ಕಳಿಗೆ ಕುಂಕುಮ ಹಚ್ಚಿ ದುಡ್ಡು ಕೊಡುತ್ತಿದ್ದರು.

ಮಾರನೇ ದಿನ ಚೌತಿ ಹಬ್ಬ. ಈ ದಿನ ಬೆಳಗಿನ ಜಾವವೆ ಮನೆ ಮಂದಿಯೆಲ್ಲ ಎದ್ದು ನಿತ್ಯ ಕರ್ಮ ಮುಗಿಸಿ ಮನೆಯ ಹಿತ್ತಲಿನಲ್ಲಿ ಪ್ರತಿಯೊಬ್ಬರೂ ಗರಿಕೆ ಹುಡುಕಿ ಕನಿಷ್ಟ ಇಪ್ಪತ್ತೊಂದಾದರೂ ಕೊಯ್ದು ದೇವರ ಮುಂದಿಟ್ಟು ನಮಸ್ಕರಿಸಬೇಕು. ನಂತರ ಚಹಾ, ಉಪ್ಪಿಟ್ಟು ಅಥವಾ ಅವಲಕ್ಕಿ ಉಪಹಾರ.

ಗಣೇಶನಿಗೆ ತಿಂಡಿ ನೈವೇದ್ಯಕ್ಕೆ ಕನಿಷ್ಠ ಅಂದರೂ ಇಪ್ಪತ್ತೊಂದು ಬಗೆಯದು ಆಗಲೇ ಬೇಕು. ನಿಖರವಾಗಿ ಮಾಡುತ್ತಿದ್ದ ತಿಂಡಿ ಅಂದರೆ ಪಂಚಕಜ್ಜಾಯ, ಚಕ್ಕುಲಿ, ಕೋಡುಬಳೆ, ಎಳ್ಳುಂಡೆ, ಮೋದಕ, ಕರ್ಜಿಕಾಯಿ, ಉದ್ದಿನ ಕಡುಬು, ಸೂಳ್ಗಡುಬು, ಲಡ್ಡಿಗೆ, ವಿಧ ವಿಧವಾದ ಲಾಡುಗಳು, ಪಾಯಸ, ಶಂಕರ್ಪೊಳೆ, ಪೂರಿ, ಅತ್ತಿರಸ,ಕಾಯಿ ಹಲವ, ಹೋಳಿಗೆ, ಕಡಲೆ ಬೇಳೆ ಅಂಬೋಡೆ ಇತ್ಯಾದಿ. ಹೀಗೆ ಎಲ್ಲ ತಿಂಡಿಗಳೂ ಅದೇ ದಿನ ಮಾಡಬೇಕು ಮಡಿಯಲ್ಲಿ.

ವಿಶೇಷ ಅಂದರೆ ಈ ಪಂಚ ಕಜ್ಜಾಯ ಮಾಡುವ ರೀತಿ ಅಮೋಘ. ಹಬ್ಬದ ದಿನ ಮಾಡಬೇಕಾದ ಪಂಚಕಜ್ಜಾಯಕ್ಕೆ ಬೇಕಾದ ಇಡಿ ಕಡಲೆ ಮೊದಲ ದಿನವೇ ತಲೆ ತಲಾಂತರದಿಂದ ಇಂತಿಷ್ಟೆ ಪಾವು ಮಾಡಬೇಕೆಂದಿರುವುದನ್ನು ನೆನಪಿಸಿಕೊಂಡು ಅಳೆದು ಒಂದು ದೊಡ್ಡ ಪಾತ್ರೆಗೆ ಹಾಕಿ ಸ್ನಾನ ಮಾಡಿ ಮಡಿ ಬಟ್ಟೆ ಉಟ್ಟು ಕಡಲೆ ತೊಳೆದು ಬೆತ್ತದ ಬುಟ್ಟಿಗೆ ಸುರಿದಿಡುತ್ತಿದ್ದರು. ಆರಿದ ನಂತರ ದೊಡ್ಡ ಬಾಣಲೆಯಲ್ಲಿ ಹುರಿದು ಬೀಸುವ ಕಲ್ಲಿನಲ್ಲಿ ನುಣ್ಣಗೆ ಪುಡಿ ಮಾಡುತ್ತಿದ್ದರು. ಎಲ್ಲವೂ ಮಡಿ.. ಬೇರೆ ಯಾರೂ ಮುಟ್ಟುವಂತಿಲ್ಲ. ಪ್ರತಿ ಮನೆಯಲ್ಲಿ ಆಗಿನ ಕಾಲದ ಸೇರು, ಪಾವು ಅಳತೆಯ ಸಾಮಾನು, ತೂಕ ಇಲ್ಲ.

ಇದಕ್ಕೆ ಹೊಸ ಬೆಲ್ಲ ಬಿಳಿ ನೀರು ಬೆಲ್ಲವೆ ಆಗಬೇಕು. ಈ ಬೆಲ್ಲವನ್ನು ಅಳತೆಗೆ ತಕ್ಕಂತೆ ದೊಡ್ಡ ತಾಮ್ರದ ಪಾತ್ರೆಯಲ್ಲಿ ಕುದಿಯಲು ಇಟ್ಟು, ಚಿಕ್ಕ ತಟ್ಟೆಯ ನೀರಲ್ಲಿ ಸ್ವಲ್ಪ ಕುದಿಯುವ ಬೆಲ್ಲ ಹಾಕಿ ಟಣ್ ಎಂದು ಶಬ್ದ ಬರುವ ಹದ ನೋಡುತ್ತಿದ್ದರು. ಒಂದು ಹದಕ್ಕೆ ಬಂದ ನಂತರ ಕುದಿಯುವ ಬೆಲ್ಲ ಪಂಚಕಜ್ಜಾಯ ಮಾಡಲೆಂದೇ ಮರದಲ್ಲಿ ಮಾಡಿದ ದೋಣಿಯಾಕಾರದ ಮರಿಗೆಗೆ ಹಾಕಿಟ್ಟ ಕಡಲೆ ಪುಡಿಗೆ ನಿಧಾನವಾಗಿ ಒಬ್ಬರು ಹಾಕಿದಂತೆ ಇನ್ನೊಬ್ಬರು ಮರದ ಸೌಟಲ್ಲಿ ಸೇರಿಸುತ್ತ ಬರುತ್ತಾರೆ‌ ಇದಕ್ಕೆ ಯಳ್ಳು ಏಲಕ್ಕಿ, ಕೊಬ್ಬರಿ ತುರಿಯನ್ನೂ ಮೊದಲೇ ಕಲೆಸಲಾಗಿದ್ದು ತಕ್ಷಣ ಬಿಸಿ ಇರುವಾಗಲೇ ದೊಡ್ಡ ಸುಲಿದ ತೆಂಗಿನ ಕಾಯಿಯಲ್ಲಿ ಒಂದು ಕಡೆಯಿಂದ ಗಂಟಾಗದಂತೆ ಆಡಿಸುತ್ತಾರೆ. ಪಂಚಕಜ್ಜಾಯ ಹುಡಿ ಆಯಿತೆಂದರೆ ಗಣೇಶ ಪ್ರಸನ್ನನಾಗಿದ್ದಾನೆ ಅನ್ನುವ ನಂಬಿಕೆ. ಎಲ್ಲರ ಮೊಗದಲ್ಲಿ ಖುಷಿ. ಉಂಡೆ ಉಂಡೆ ಪಂಚಕಜ್ಜಾಯವಾದರೆ ಗಣಪನಿಗೆ ನಾವು ಮಾಡಿದ ಹಬ್ಬ ಯಾಕೊ ಸರಿ ಬರಲಿಲ್ಲ ಈ ಸಾರಿ. ಹೀಗೆ ಬಲವಾದ ನಂಬಿಕೆ ಹಳ್ಳಿಯ ಪ್ರತಿಯೊಬ್ಬರ ಮನೆಯಲ್ಲಿ. ಇದಕ್ಕಾಗಿ ಗಣೇಶನಿಗೆ ಕಪ್ಪ ಕಾಣಿಕೆಯಾಗಿ ಮೊದಲೇ ದೇವರ ಮುಂದೆ “ಮಹಾ ಗಣಪತಿ ಪಂಚಕಜ್ಜಾಯ ಹುಡಿಯಾಗುವಂತೆ ಮಾಡು” ಎಂದು ಬೇಡಿಕೊಂಡು ತೆಂಗಿನ ಕಾಯಿ ತೆಗೆದಿಡುತ್ತಿದ್ದರು.

ಇತ್ತ ಮನೆಯ ಯಜಮಾನ ಸ್ನಾನ ಸಂಧ್ಯಾವಂದನೆಗಳನ್ನು ಮಾಡಿ ತಂದ ಗಣಪತಿಯನ್ನು ಮನೆಯ ಪ್ರಧಾನ ಬಾಗಿಲಲ್ಲಿಟ್ಟು ತುಳಸಿ ಪ್ರೋಕ್ಷಣೆ ಮಂತ್ರಗಳೊಂದಿಗೆ ಶುದ್ದಿ ಮಾಡಿ ಗಣೇಶನನ್ನು ದೇವರ ಮನೆಗೆ ತಂದು ಮೊದಲೇ ಅಣಿಗೊಳಿಸಿದ ಪೀಠದಲ್ಲಿ ಕೂಡಿಸಿ ಗಂಟೆ ಜಾಗಟೆಯ ನಾದದೊಂದಿಗೆ ಅಕ್ಷತವನ್ನು ಹಾಕಿ ಗಣೇಶನ ಆಹ್ವಾನದ ಪೂಜೆ ಮಾಡಲಾಗುತ್ತಿತ್ತು. ನಂತರ ಜನಿವಾರ, ಬೆರಳಿಗೆ ಉಂಗುರ, ಗೆಜ್ಜೆ ವಸ್ತ್ರ, ಹಾರಗಳಿಂದ ಶೃಂಗರಿಸಿ ಅರ್ಚನೆ ಅಷ್ಟೋತ್ತರ ಸಹಸ್ರನಾಮದೊಂದಿಗೆ ಪತ್ರೆಗಳು ಹೂವಿನಿಂದ ಪೂಜೆ ನಡೆಸುತ್ತಿದ್ದರೆ ನೈವೇಧ್ಯಕ್ಕೆ ಎಲ್ಲ ತಿಂಡಿಗಳು ಅಣಿಯಾಗುವಾಗ ಮಧ್ಯಾಹ್ನ ಮೂರು ಗಂಟೆ ದಾಟುತ್ತಿತ್ತು. ನಂತರ ನೈವೇದ್ಯ ಮಹಾ ಮಂಗಳಾರತಿ ಪೂಜೆಯ ಹಂತ ಹಂತದಲ್ಲೂ ಒಂದೊಂದಕ್ಕೆ ಒಂದೊಂದು ಹಳೆಯ ಕಾಲದ ಹಾಡುಗಳು. ಊರವರೆಲ್ಲ ಒಬ್ಬರ ಮನೆಗೊಬ್ಬರು ಹೋಗಿ ಪೂಜೆ ಮುಗಿಸಿ ಹೂವು, ತೀರ್ಥ, ದಕ್ಷಿಣೆ, ಪಂಚಕಜ್ಜಾಯ ಪ್ರಸಾದ ಪಡೆದು ಪಟಾಕಿ ಹೊಡೆಯುವ ಸಂಭ್ರಮದಲ್ಲಿ ಪಾಲ್ಗೊಂಡು ತಮ್ಮ ತಮ್ಮ ಮನೆಗಳಲ್ಲಿ ಊಟ ಅಂದರೆ ಪಳಹಾರ ಮಾಡುವುದು ಐದು ಗಂಟೆಯಾಗುತ್ತಿತ್ತು. ಈ ನಿಯಮ ಇವತ್ತಿಗೂ ಹವ್ಯಕರ ಹಳ್ಳಿಗಳಲ್ಲಿ ಕಾಣಬಹುದು.

ಕೆಲವರ ಮನೆಯಲ್ಲಿ ಗಣಹೋಮ, ಸತ್ಯ ಗಣಪತಿ ಕಥೆ ಮಾಡುವುದಿದ್ದರೆ ಪುರೋಹಿತರನ್ನು ಕರೆದು ಪೂಜೆ ಮಾಡಿಸುತ್ತಿದ್ದರು. ಸಾಯಂಕಾಲ ದೀಪ ಹಚ್ಚಿ ಮನೆ ಮಂದಿಯೆಲ್ಲ ಕೂತು ಪೀಯಾನೊ, ತಾಳ ಭಾರಿಸುತ್ತ ಗಣೇಶನ ಭಜನೆಗಳನ್ನು ಮಾಡುತ್ತಿದ್ದೆವು‌. ಆ ದಿನ ಚಂದ್ರನನ್ನು ನೋಡಬಾರದು ಅಪವಾದ ಬರುತ್ತದೆ ಎಂದು ಮಕ್ಕಳಿಗೆ ಹೊರಗೆ ಹೋಗಲು ಬಿಡುತ್ತಿರಲಿಲ್ಲ. ರಾತ್ರಿ ಮತ್ತೆ ತುಪ್ಪದ ದೀಪ, ಮಂಗಳಾರತಿಯೊಂದಿಗೆ ಇಪ್ಪತ್ತೊಂದು ನಮಸ್ಕಾರ ಶಕ್ತಿಯಿರುವ ನಾವೆಲ್ಲ ಮಾಡುತ್ತಿದ್ದೆವು‌. ಇದು ಮೊದಲಿಂದ ಬಂದ ನಿಯಮ.

ಇನ್ನು ಮಾರನೆಯ ದಿನ ಇಲಿ ಪಂಚಮಿ. ಆ ದಿನ ಕೂಡ ಗಣೇಶನ ನೈವೇಧ್ಯಕ್ಕೆ ಪಂಚ ಭಕ್ಷ ಆಗಬೇಕು. ಇದಲ್ಲದೆ ಅನ್ನ, ಚಿತ್ರಾನ್ನ, ಹಾಲು ಮೊಸರು ಹೀಗೆ ಮಾಡಿದ ಭಕ್ಷಗಳ ನೈವೇದ್ಯಕ್ಕೆ ಅಣಿಗೊಳಿಸಬೇಕಿತ್ತು. ನಂತರ ಪೂಜೆ ಮಂಗಳಾರತಿ ಮುಗಿದ ಮೇಲೆ ಆ ದಿನ ಅಡುಗೆಯ ಊಟ ಮಾಡುತ್ತಿದ್ದರು.

ಅಂದರೆ ಹವ್ಯಕರಲ್ಲಿ ಅನ್ನ ಮುಸುರೆ ಅನ್ನುವ ಸಂಪ್ರದಾಯವಿದೆ. ಯಾವುದೇ ಉಪವಾಸದ ದಿನ ಅಥವಾ ದಿನ ನಿತ್ಯ ಪೂಜೆಗಿಂತ ಮೊದಲು ಅನ್ನವನ್ನು ತಿನ್ನುವುದಿಲ್ಲ. ಚೌತಿ ಹಬ್ಬದ ದಿನ ಅನ್ನವನ್ನು ನೈವೇದ್ಯಕ್ಕೆಂದು ಮಾಡುತ್ತಾರೆ. ಆದರೆ ಹಿರಿಯರು ಆ ದಿನ ಅನ್ನವನ್ನು ಊಟ ಮಾಡುವುದಿಲ್ಲ. ಅನ್ನವನ್ನು ಮುಟ್ಟಿದರೆ ಕೈ ತೊಳೆದುಕೊಳ್ಳಬೇಕು. ಇನ್ನು ದೇವರಿಗೆ ಅನ್ನವನ್ನು ನೈವೇದ್ಯಕ್ಕೆ ಇಡುವ ಜಾಗಕ್ಕೆ ನೀರು ಪ್ರೋಕ್ಷಿಸಿ ಬೆರಳಲ್ಲಿ ಸ್ವಸ್ತಿಕ್ ಚಿನ್ನೆ ಬರೆದು ಅಲ್ಲಿ ಅನ್ನದ ಪಾತ್ರೆಯನ್ನು ಬಾಳೆ ಎಲೆಯನ್ನು ಮುಚ್ಚಿ ಇಡಬೇಕು. ನೈವೇದ್ಯಕ್ಕೆ ಇಟ್ಟ ಪ್ರತಿಯೊಂದು ಭಕ್ಷಗಳಿಗೂ ತುಪ್ಪವನ್ನು ಅಬ್ಬಿಗೆರೆ (ಸ್ವಲ್ಪ ಸ್ವಲ್ಪ ಹಾಕುವುದಕ್ಕೆ ಹೀಗೆ ಹೇಳುತ್ತಾರೆ) ಮಾಡಬೇಕು. ಪ್ರತಿಯೊಂದು ನೈವೇದ್ಯ ಭಕ್ಷಗಳಿಗೆ ತುಳಸಿ ನೀರು ಪ್ರೋಕ್ಷಣೆ ಮಾಡಿ ಶುದ್ದ ಮಾಡಿ ಮಂತ್ರ ಹೇಳಿ ನೈವೇದ್ಯ ಮಾಡುತ್ತಾರೆ. ಆ ನಂತರ ದೇವರ ಪ್ರಸಾದವೆಂದು ಪರಿಗಣಿಸಲಾಗುತ್ತದೆ. ಅನ್ನ ಇಟ್ಟ ಜಾಗ ನಂತರ ನೀರಿನಿಂದ ಒರೆಸಬೇಕು. ಅಂದರೆ ಇಲ್ಲಿ ಅನ್ನ ಅತ್ಯಂತ ಪವಿತ್ರ. ಅನ್ನಪೂರ್ಣೆ, ಆದಿ ಶಕ್ತಿ, ನಮ್ಮ ಬದುಕಿನ ಒಂದು ಅಂಗ. ಊಟಕ್ಕೆ ಅನ್ನ ಬಡಿಸಿದಾಗ ತಿನ್ನುವ ಮೊದಲು “ಅನ್ನ ಪೂರ್ಣೆ ಸದಾ ಪೂರ್ಣೆ ಪ್ರಾಣವಲ್ಲಭೆ………..” ಈ ಶ್ಲೋಕ ಹೇಳಿ ಮನದಲ್ಲೆ ನಮಸ್ಕರಿಸಿ ಊಟ ಮುಂದುವರಿಸುತ್ತಾರೆ.

ಇನ್ನು ಉಪನಯನವಾದ ಗಂಡಸರು, ಗಂಡು ಮಕ್ಕಳು ಪ್ರತಿನಿತ್ಯ ಊಟದೆಲೆಯ ಸುತ್ತ ನೀರನ್ನು ಸ್ವಲ್ಪ ಬೆರಳಿನಿಂದ ಹಾಕಿ ಮಂತ್ರ ಹೇಳಿ ಧರಿಸುವ ಕ್ರಮ ಮಾಡಬೇಕು‌. ಎಡಗೈಯ್ಯ ಪವಿತ್ರ ಬೆರಳು ಎಲೆಯ ಮೇಲೆ ನೇರವಾಗಿ ಇಟ್ಟು ಬಲಗೈಯ್ಯಿಂದ ಒಂದೊಂದೇ ಅನ್ನದ ಅಗುಳನ್ನು ಎಲೆಯ ಬಲಗಡೆ ಪಕ್ಕದ ನೆಲದ ಮೇಲೆ ಸಾಲಾಗಿ ಮೇಲಿಂದ ಕೆಳಗೆ ನಾಲ್ಕು ಅಗುಳು ಇಡುತ್ತಾರೆ. “ಯಮಾಯಸ್ವಾಹಾ, ಯಮಧರ್ಮಾಯಸ್ವಾಹಾ……” ಹೀಗೆ ಮಂತ್ರ ಹೇಳುತ್ತ ಅಗುಳನ್ನು ನಾಲ್ಕು ಬಾರಿ ಬಾಯಿಗೆ ಹಾಕುತ್ತಾರೆ. ಇದಕ್ಕೆ ಧರಿಸುವುದು ಎಂದು ಹೇಳುವುದು.

ಇದನ್ನು ನೋಡಿದ ನಾನು ನಾವ್ಯಾಕೆ ಮಾಡಬಾರದು ಹೀಗೆ ಎಂದು ಅವರು ಮಾಡುವ ಕ್ರಮ ಮಾಡಲು ಹೋಗಿ ಎಲ್ಲರ ನಗೆಪಾಟಲಿಗೆ ಕಾರಣವಾಗಿದ್ದೆ.

ಹಬ್ಬದಲ್ಲಿ ಎರಡೂ ದಿನ ಗೋವಿಗೆ ಗೋಗ್ರಾಸ ಅಂದರೆ ದೇವರಿಗೆ ನೈವೇದ್ಯ ಆಗುವ ಮೊದಲೇ ಮಾಡಿದ ಅಡುಗೆ ತಿಂಡಿ ಏನೇ ಇರಲಿ ಮೊದಲೇ ಜೋಡಿಸಿದ ಎರಡು ಕುಡಿಬಾಳೆ ಎಲೆಯನ್ನು ಒಂದು ತಟ್ಟೆಯಲ್ಲಿಟ್ಟುಕೊಂಡು ಅದರಲ್ಲಿ ಎಲ್ಲವನ್ನೂ ಸ್ವಲ್ಪ ಸ್ವಲ್ಪ ಹಾಕಿ ತೆಗೆದಿಡಬೇಕು. ತೀರ್ಥ ಪ್ರೋಕ್ಷಣೆ ಆದ ಇದನ್ನು ಸಂಜೆ ಗೋವುಗಳಿಗೆ ತಿನ್ನಲು ಕೊಡಬೇಕು. ಗೋವುಗಳಿಗೆ ಕುಂಕುಮ ಹೂ ಅಕ್ಷತೆ ಹಾಕಿ ಪಾದಕ್ಕೆ ನೀರು ಹಾಕಿ ನಮಸ್ಕಾರ ಮಾಡುತ್ತಾರೆ.

ಇನ್ನು ಪ್ರತಿ ಅಮವಾಸ್ಯೆ, ಹುಣ್ಣಿಮೆ, ಹಸು ಕರು ಹಾಕಿದಾಗ, ಮೇಯಲು ಕಳಿಸಿದ ಹಸು ಕಳೆದುಹೋದಾಗ, ಎಲ್ಲ ಹಬ್ಬಗಳಲ್ಲಿ, ಮುದುವೆ ಹೀಗೆ ಪ್ರತಿಯೊಂದು ಸಂದರ್ಭದಲ್ಲಿ ಊರವರೆಲ್ಲ ನಂಬಿರುವ ಚೌಡಿಗೆ ಪೂಜೆ ಸಲ್ಲಿಸುವ ಪದ್ದತಿ ಇಂದಿಗೂ ರೂಢಿಯಲ್ಲಿದೆ. ಪ್ರತಿ ಹಳ್ಳಿಯಲ್ಲಿ ಚೌಡಿ ಕಟ್ಟೆಯೆಂದು ಇರುತ್ತದೆ. ಊರ ಕಾಯುವ ದೇವತೆ ಅವಳು ಎಂಬ ನಂಬಿಕೆ. ಆದುದರಿಂದ ಈ ಹಬ್ಬದಲ್ಲೂ ಪೂಜೆ ನೈವೇದ್ಯ ಮಾಡುತ್ತಾರೆ.

ಗಣೇಶನನ್ನು ಕೆಲವರ ಮನೆಯಲ್ಲಿ ಎರಡು ದಿನ, ಇನ್ನು ಕೆಲವರು ನಾಲ್ಕು ದಿನ ಮತ್ತೆ ಕೆಲವರು ಅನಂತ ಚತುರ್ಧಶಿಯವರೆಗೂ ಗಣೇಶನನ್ನು ಇಟ್ಟು ಪೂಜಿಸುತ್ತಿದ್ದರು. ಅಲ್ಲೊಂದು ಇಲ್ಲೊಂದು ಮನೆಗಳಲ್ಲಿ ಈ ವರ್ಷ ತಂದ ಗಣಪನನ್ನು ಹಾಗೆ ಇಟ್ಟು ಹಿಂದಿನ ವರ್ಷ ತಂದ ಗಣಪನನ್ನು ನೀರಲ್ಲಿ ಬಿಡುವ ಪದ್ಧತಿ ಕೂಡಾ ಈಗಲೂ ಇದೆ.

ನಮ್ಮ ಮನೆಯೂ ಕೂಡಾ ಮೊದಲು ಒಟ್ಟು ಕುಟುಂಬ ವಾಗಿತ್ತು. ದಾಯವಾದಿ ದೊಡ್ಡಪ್ಪನಿಂದ ಆಸ್ತಿಯಲ್ಲಿ ಪಾಲಾದಾಗ ಹಿರಿಯವರಾದ ಅವರು ಮಾತ್ರ ಗಣೇಶನನ್ನು ತಂದು ಪೂಜೆ ಮಾಡಿದರೆ ಸಾಕಾಗಿತ್ತು. ಆದರೆ ನಮ್ಮಪ್ಪನಿಗೆ ಇನ್ನೂ ಇಪ್ಪತ್ತ್ಮೂರು ವರ್ಷವಾಗಿತ್ತಂತೆ. ತಾನೂ ಗಣೇಶನನ್ನು ತರುವ ಉಮೇದಿ. ಸರಿ ನನ್ನ ಅಜ್ಜಿ ಮಗನ ಹಠ ನೋಡಿ ತಂದು ಪೂಜಿಸು ಅಂದರಂತೆ. ಅಂದಿನಿಂದ ನಮ್ಮನೆಯಲ್ಲೂ ಚೌತಿ ಹಬ್ಬದ ದಿನ ಗಣೇಶನನ್ನು ತಂದು ಪೂಜಿಸುವ ಪದ್ಧತಿ ಮುಂದುವರೆಯಿತೆಂದು ಅಜ್ಜಿ ಹೇಳುತ್ತಿದ್ದರು. ಇದು ಮೂರನೆಯ ತಲೆ ಮಾರಿಗೂ ಮುಂದುವರೆದಿದೆ.

ನಮ್ಮ ಹಳ್ಳಿಯಲ್ಲಿ ಎಲ್ಲರ ಮನೆಯಲ್ಲೂ ಇಲಿ ಪಂಚಮಿಯ ದಿನ ಸಾಯಂಕಾಲವೆ ಗಣೇಶನನ್ನು ನೀರಿಗೆ ಬಿಡುತ್ತಿದ್ದರು. ಕಾರಣ ನಮಗೆ ಮನಸಿಗೆ ಬಂದ ವರ್ಷ ಗಣೇಶನನ್ನು ಇಟ್ಟು ಪೂಜಿಸುವಂತಿಲ್ಲ. ಅಥವಾ ಒಂದು ವರ್ಷ ತಂದು ಪೂಜೆ ಮಾಡಿದರೆ ಮತ್ತೆ ಮುಂದಿನ ವರ್ಷ ಗಣೇಶನನ್ನು ತಂದು ಪೂಜೆ ಮಾಡುವುದು ಬಿಡುವಂತಿಲ್ಲ. ಯಾರ ಮನೆಯಲ್ಲಿ ಅನಾದಿ ಕಾಲದಿಂದ ಗಣೇಶನನ್ನು ತಂದು ಪೂಜಿಸುತ್ತಿದ್ದರೊ ಅವರ ಮನೆಗಳಲ್ಲಿ ಮಾತ್ರ ಗಣೇಶನನ್ನಿಟ್ಟು ಪೂಜಿಸುತ್ತಿದ್ದರು. ಹಾಗೆ ಗಣೇಶನನ್ನು ನೀರಿಗೆ ಬಿಡುವ ಪದ್ದತಿ ಕೂಡಾ ಹಿಂದಿನಿಂದ ನಡೆದುಕೊಂಡು ಬಂದಂತೆ ಅನುಸರಿಸಬೇಕು. ವಿಘ್ನ ನಿವಾರಕ, ಶಿಷ್ಟರ ರಕ್ಷಕ, ಸಕಲಕೂ ಅವನೆ ಕಾರಣ, ಸರ್ವ ಕಾರ್ಯಕೂ ಅವನಿಗೆ ಮೊದಲ ಪೂಜೆ ಇದು ಹವ್ಯಕ ಸಮುದಾಯದಲ್ಲಿ ಪ್ರತಿಯೊಬ್ಬರೂ ನಂಬಿಕೊಂಡಿರುವ ದೈವ ಶಕ್ತಿ. ಇಂದಿಗೂ ದೇವರ ಪೀಠದಲ್ಲಿ ಗಣೇಶನ ಮೂರ್ತಿ ಇಲ್ಲದ ಮನೆಗಳಿಲ್ಲ. ನಂದಾ ದೀಪ, ನಿತ್ಯ ಪೂಜೆ, ನೈವೇದ್ಯ ಆಗಲೇ ಬೇಕು. ಪೂಜೆ ಮಾಡದೆ ಯಾರೂ ಮಧ್ಯಾಹ್ನ ಊಟ ಮಾಡುವುದಿಲ್ಲ.

ಪುನಃ ಸಾಯಂಕಾಲ ಐದು ಗಂಟೆಯ ನಂತರ ಮನೆಯ ಯಜಮಾನ ಸ್ನಾನ ಮಾಡಿ ಮಡಿಯುಟ್ಟು ದೀಪ ಹಚ್ಚಿ ಮಂತ್ರ ಹೇಳುತ್ತ ಗೌರಿ ಕಲಶದ ನೀರಿನಿಂದ ದೇವರಿಗೆ ಅಭಿಶೇಕ ಮಾಡಿ ಪೂಜೆ ಮಾಡುತ್ತಿದ್ದರು. ಆಗಷ್ಟೆ ಕರೆದ ಹಾಲು ನೈವೇದ್ಯ ಮಾಡಿ ಮಂಗಳಾರತಿ ಬೆಳಗಿ ಗಣೇಶನನ್ನು ವಿಸರ್ಜಿಸಲಾಗುತ್ತಿತ್ತು ಮತ್ತು ಅದೇ ಪವಿತ್ರ ನೀರನ್ನು ಇಡೀ ಮನೆಗೆ, ಮನೆಯ ಜನರಿಗೂ ಪ್ರೋಕ್ಷಿಸುತ್ತಿದ್ದರು. ಇರುವ ಪಟಾಕಿಯೆಲ್ಲ ಹೊಡೆದು ಕುಣಿದು ಕುಪ್ಪಳಿಸುವ ಗಲಾಟೆ ನಮ್ಮದು.

ಈಗ ಗಣೇಶ ಮತ್ತು ಗೌರಿಯನ್ನು ಕಳಿಸುವ ತಯಾರಿ ನಡೆಯುತ್ತಿತ್ತು. ಒಂದು ಬುಟ್ಟಿಯಲ್ಲಿ ಕಟ್ಟಿದ ಪಲವಳಿಗೆಯಲ್ಲಿನ ಒಂದೆರಡು ಗೌರಿ ಹೂವು, ತರಕಾರಿ, ಹಣ್ಣು, ಮಾವಿನ ಎಲೆ ಇವುಗಳನ್ನು ಇಟ್ಟುಕೊಂಡು ಮೊದಲು ಈ ಬುಟ್ಟಿ ಹೊತ್ತ ಹಿರಿಯ ಮುತ್ತೈದೆ ಹೆಂಗಸು ಮುಂದೆ ನಡೆದರೆ ಅವಳ ಹಿಂದೆ ಗಣೇಶನನ್ನು ಹೊತ್ತ ಯಜಮಾನ ಅವರ ಹಿಂದೆ ಮನೆ ಮಂದಿ ಹೀಗೆ ಜಾಗಟೆ ಬಾರಿಸುತ್ತ ಹಾಡು ಹೇಳುತ್ತ ಊರಿನ ಎಲ್ಲರ ಮನೆಯವರೂ ಒಟ್ಟಿಗೆ ಗಣೇಶನನ್ನು ನೀರಿಗೆ ಬಿಡಲು ಊರ ಮುಂದಿನ ಕೆರೆಗೆ ಸಾಗುತ್ತಿದ್ದೆವು.

ಅಲ್ಲಿ ಮೊದಲೇ ಕೆರೆಯನ್ನು ಸ್ವಚ್ಛ ಗೊಳಿಸಿಡಲಾಗುತ್ತಿತ್ತು. ಎಲ್ಲರ ಮನೆಯ ಮೂರ್ತಿಗಳನ್ನು ಸಾಲಾಗಿ ಇಟ್ಟು ಮತ್ತೊಮ್ಮೆ ಹೂ ಅಕ್ಷತೆ ಎಲ್ಲರೂ ಹಾಕಿ ನಮಸ್ಕರಿಸಿ ಒಂದೊಂದಾಗಿ ಗಣೇಶನನ್ನು ನೀರಿಗೆ ಬಿಡುತ್ತಿದ್ದರು. ಗಣೇಶನ ಮೂರ್ತಿ ಬಿಡುವಾಗ ಎಲ್ಲಾ ” ಮೋರೆಯಾ ಮೋರೆಯಾ ಮಂಗಳ ಮೂರ್ತಿ ಮೋರೆಯಾ, ಗಣಪತಿ ಬಪ್ಪ ಮೋರೆಯಾ ” ಎಂದು ನಾವೆಲ್ಲ ಏರು ಧ್ವನಿಯಲ್ಲಿ ಹೇಳಿದರೆ ಹೆಂಗಸರ ಬಾಯಲ್ಲಂತೂ ಹಾಡು ಕೊನೆಗೊಳ್ಳುತ್ತಿರಲಿಲ್ಲ. ಎಲ್ಲರ ಮನದಲ್ಲಿ ದುಃಖದ ಛಾಯೆ. ಮುದ್ದಾದ ಗೌರಿ ಮನೆ ಮಗಳು. ಚಂದದ ಗಣೇಶ ನಮಗೆಲ್ಲ ಅಚ್ಚು ಮೆಚ್ಚು. ಹಬ್ಬದ ಉತ್ಸಾಹ ಇಳಿದು ಮನಸು ಭಣ ಭಣ. ಇದಕ್ಕೆ ಸರಿಯಾಗಿ ಹೆಂಗಸರ ಹಾಡು ” ಗೌರಿ ನಡೆದಳಲ್ಲಾ ಮುದ್ದು ಬಾಲನೊಳಗೊಂಡು……….”

ಮನೆಯೊಳಗೆ ಕಾಲಿಟ್ಟಾಗ ಏನೊ ಕಳೆದುಕೊಂಡ ಭಾವ. ಸುಸ್ತಾದ ದೇಹ ಆ ದಿನ ರಾತ್ರಿ ಬೇಗ ಊಟ ಮುಗಿಸಿ ಮಲಗುತ್ತಿದ್ದೆವು.

ಸುತ್ತಮುತ್ತಲ ಹಳ್ಳಿಗಳಿಗೆ ಹೋಗಿ ಗಣೇಶನಿಗೆ ಅಕ್ಷತ ಹಾಕಿ 101 ಗಣೇಶನ ದರ್ಶನ ಮಾಡುವ ಪದ್ದತಿ ಅನಾದಿ ಕಾಲದಿಂದ ನಡೆದುಕೊಂಡು ಬಂದಿದೆ. ಇದು ಪುಣ್ಯದ ಕೆಲಸವೆಂದು ಹಿರಿಯರು ಹೇಳುತ್ತಿದ್ದರು. ಹಬ್ಬದ ಮಾರನೆ ದಿನದಿಂದ ಯಾರೆ ಮನೆಗೆ ಬರಲಿ ಚಕ್ಕುಲಿ, ಪಂಚಕಜ್ಜಾಯಕ್ಕೆ ಸ್ವಲ್ಪ ತುಪ್ಪ ಹಾಕಿ ತಿನ್ನಲು ಕೊಡುತ್ತಿದ್ದರು. ಇನ್ನು ಪರಿಚಯದವರ ಮನೆಗೆ, ನೆಂಟರಮನೆಗೆ ಹೋಗುವಾಗ ಈ ಎರಡೂ ಭಕ್ಷಗಳನ್ನು ಜೊತೆಗೆ ಒಯ್ಯಬೇಕು.

ಮಾರನೆ ದಿನ ಕೂಡಾ ಶಾಲೆಗೆ ರಜೆ ಇರುತ್ತಿತ್ತು. ಹಳ್ಳಿಯ ಶಾಲೆಗಳಲ್ಲೆ ಹಾಗೆ. ಆ ಊರಿಗೆ ತಕ್ಕಂತೆ ಹಬ್ಬಗಳಲ್ಲಿ ರಜೆ ಕೊಡುತ್ತಿದ್ದರು. ಅವರಿಗೆಲ್ಲಾ ಗೊತ್ತು.. ಶಾಲೆ ಇದ್ದರೂ ಮಾಸ್ತರೊಬ್ಬರೇ ಶಾಲೆಯಲ್ಲಿ ಇರಬೇಕಾಗಿತ್ತದೆಂದು! ನಮ್ಮೂರ ಹುಡುಗ ಹುಡುಗಿಯರ ಗುಂಪೆಲ್ಲ ಸೇರಿ ಸುತ್ತ ಮುತ್ತಲ ಹತ್ತಿರದ ಹಳ್ಳಿಗಳ ಮನೆಗಳಲ್ಲಿ ಹೆಚ್ಚಿನ ದಿನ ಇಡುವ ಗಣೇಶನನ್ನು ನೋಡಲು ಹೋಗುತ್ತಿದ್ದೆವು. ಆಗೆಲ್ಲ ಯಾರ ಮನೆಯಲ್ಲಿ ಜಾಸ್ತಿ ದಿನ ಗಣೇಶನನ್ನು ಇಡುತ್ತಾರೋ ಅವರ ಮನೆಗಳಲ್ಲಿ ಅತ್ಯಂತ ವಿಜೃಂಭಣೆಯ ಮಂಟಪ ಕಟ್ಟುತ್ತಿದ್ದರು. ಚಕ್ರ, ಕಾರಂಜಿ, ಬೊಂಬೆಗಳು ಇತ್ಯಾದಿ ಹೀಗೆ ಎಲ್ಲ ಬ್ಯಾಟರಿ ಶೆಲ್ಲಿನಿಂದ ಅವುಗಳು ಚಲಿಸುವಂತೆ ಮಾಡುತ್ತಿದ್ದರು. ರಾತ್ರಿ ಭಜನೆ, ಭಾಗವತರಿಂದ ಅಹೋರಾತ್ರಿ ಹರಿಕಥೆ, ನೃತ್ಯ ಕಾರ್ಯಕ್ರಮ ನಡೆಯುತ್ತಿತ್ತು. ಕತ್ತಲೆಯಾದರೆ ಅಲ್ಲೇ ಯಾರ ಮನೆಯಲ್ಲಾದರೂ ಉಳಿದು ಮತ್ತೆ ಒಂದಷ್ಟು ಗಣೇಶನನ್ನು ನೋಡಿ ಬರುತ್ತಿದ್ದೆವು. ಹೋದಲ್ಲೆಲ್ಲ ಗಣೇಶನಿಗೆ ಅಕ್ಷತ ಹಾಕಿ ‘ಪರೀಕ್ಷೆಯಲ್ಲಿ ಪಾಸು’ ಮಾಡು ದೇವರೆ ಅಂತ ನಮಸ್ಕಾರ ಮಾಡುತ್ತಿದ್ದೆವು !!

ಹಬ್ಬ ಕಳೆದು ಮತ್ತೆ ಹೆಗಲಿಗೇರಿದ ಪಾಟೀಚೀಲದೊಂದಿಗೆ ಹೊಸ ಉತ್ಸಾಹದಲ್ಲಿ ಶಾಲೆ ಕಡೆಗೆ ನಮ್ಮ ಓಟ, ಆಟ ಪಾಠದಲ್ಲಿ ತಲ್ಲೀನ, ಮನಸೋ ಇಚ್ಛೆ ಗೆಳೆಯರೊಂದಿಗೆ ಹಬ್ಬದ ಕ್ಷಣಗಳ ಮೆಲುಕು ಹಾಕುತ್ತ ಡಬ್ಬದಲ್ಲಿಯ ಹಬ್ಬದ ತಿಂಡಿ ತಿನ್ನೋದಂತೂ ಸಖತ್ ಗಮ್ಮತ್ತೆ ಗಮ್ಮತ್ತು.

ಈಗ ಕಾಲ ಸರಿದಂತೆ ಕೆಲವು ಶಾಸ್ತ್ರಗಳು ಬದಲಾಗುತ್ತಿದ್ದರೂ ಪೂಜೆ ಮಾಡುವ ಆಚರಣೆ ಇಂದಿಗೂ ಬಿಟ್ಟಿಲ್ಲ. ಇನ್ನು ಕೆಲವರ ಮನೆಗಳಲ್ಲಿ ಹಿಂದಿನಂತೆ ಗಣಪತಿ ತಂದು ವಿಜೃಂಭಣೆಯ ಪೂಜೆ ಮಾಡಲಾಗದಿದ್ದವರು ಉಧ್ಯಾಪನೆಯ ಪೂಜೆ ಮಾಡಿ ದಾನ ಕೊಟ್ಟು ಗಣೇಶನನ್ನು ತರುವ ರೂಢಿಯನ್ನು ನಿಲ್ಲಿಸುತ್ತಿದ್ದಾರೆ. ಆದರೆ ಹಬ್ಬದ ದಿನ ಮಣ್ಣಿನಲ್ಲಿ ಮೃತ್ಯುಕೆ ಮಾಡಿ ಪೂಜೆ ಆದ ನಂತರ ಅದೇ ದಿನ ನೀರಿನಲ್ಲಿ ಬಿಡುತ್ತಾರೆ. ಆದರೆ ಆಗಿನ ಹಬ್ಬದ ಸಡಗರ ಈಗ ಇಲ್ಲವೇ ಇಲ್ಲ. ಒಟ್ಟು ಕುಟುಂಬಗಳು ಬೇರೆ ಬೇರೆಯಾಗಿವೆ. ದೇಶ ವಿದೇಶಗಳಲ್ಲಿ ಕೆಲಸಕ್ಕೆ ಹೋದವರು ಹಳ್ಳಿಯಲ್ಲಿ ಬಂದು ವಾಸಿಸುವ ಮನಸ್ಸು ಮಾಡುತ್ತಿಲ್ಲ. ಹಳ್ಳಿಯಲ್ಲಿ ಇರುವ ಹುಡುಗರಿಗೆ ಮದುವೆಗೆ ಹೆಣ್ಣು ಸಿಗುತ್ತಿಲ್ಲ. ವ್ಯವಸಾಯ ಮಾಡಲು ಕೆಲಸದವರ ಕೊರತೆ ತುಂಬಾ ಇದೆ. ವಯಸ್ಸಾದ ಹವ್ಯಕರ ಹಿರಿಯರಿಗೆ ಇಂತಹ ಸಮಸ್ಯೆಗಳು ಸಮಸ್ಯೆ ಆಗಿಯೆ ಉಳಿದಿದೆ.

ಗತ ಕಾಲದ ವೈಭವ ನಶಿಸುತ್ತಿದೆ. ನೆನಪಿಗಷ್ಟೇ ಇರುವ ಆಯಿ, ನೆನಪಾದ ಆ ಕಾಲ ಇನ್ನೆಲ್ಲಿ!!

ಗಣೇಶನ ಚಿತ್ರ ಕೃಪೆ : https://www.pinterest.com

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments