ನಮ್ಮೂರ ಹಬ್ಬ : ಪರಿಸರಸ್ನೇಹಿ ದೊಡ್ಡಹಬ್ಬ
– ಮಾಲತಿ ಹೆಗಡೆ
ನಮ್ಮೂರ ಹಬ್ಬ ಪ್ರಬಂಧ ಸ್ಪರ್ಧೆಯಲ್ಲಿ ಏಳನೇ ಸ್ಥಾನ ಪಡೆದ ಲೇಖನ
ಬಾಲ್ಯದಲ್ಲಿ ಕಂಡ ಮಲೆನಾಡಿನ ಪರಿಸರದ ಸ್ನೇಹಿಯಾದ ದೀಪಾವಳಿ ಮನದಲ್ಲಿ ನಂದಾದೀಪದಂತೆ ಬೆಳಗುತ್ತಲೇ ಇರುತ್ತದೆ. ಅಲ್ಲಿ ದೀಪಾವಳಿಗೆ ದೊಡ್ಡಹಬ್ಬ ಎಂದು ಕರೆಯುವ ವಾಡಿಕೆ. ಮಳೆಗಾಲದ ಆರಂಭದಲ್ಲಿ ಗೊಂಡೆರು ಹೂವಿನ (ಚೆಂಡು ಹೂವಿನ) ಬೀಜ ಹಾಕಿದರೆ ದೀಪಾವಳಿಯಲ್ಲಿ ಹೂವು ಸಿಗುತ್ತದೆ ಎಂಬ ಕರಾರುವಾಕ್ಕಾದ ಲೆಕ್ಕಾಚಾರದಲ್ಲಿ ಹಬ್ಬದ ತಯಾರಿ ಶುರುವಾಗುತ್ತಿತ್ತು. ಹಬ್ಬಕ್ಕೆ ವಾರದ ಮೊದಲು ಮನೆಯ ಹೊರ ಗೋಡೆಗೆ ಹಳದಿ ಮಣ್ಣು, ಅಡುಗೆ ಮನೆಗೆ ಕೆಮ್ಮಣ್ಣು, ಕಟ್ಟಿಗೆ ಒಲೆ ಇರುವೆಡೆಗೆ ಕಪ್ಪು ಮಸಿಯನ್ನೆ ಸಾರಣೆ ಮಾಡುತ್ತಿದ್ದೆವು. ಅಣಲೆಕಾಯಿ ಮಸಿ, ಕೆಮ್ಮಣ್ಣು, ಹಳದಿ ಮಣ್ಣು ಎಲ್ಲಾ ನೀರಿನಲ್ಲಿ ಕದಡಿ ಹತ್ತಿಯ ಬಟ್ಟೆ ಮುಳುಗಿಸಿ ಮಣ್ಣಿನ ಗೋಡೆಗೆ ಬರೆಸುತ್ತಾ ಹೋಗುವ ಸಂಭ್ರಮದಲ್ಲಿ ಹಿರಿಯರೊಂದಿಗೆ ನಾವೂ ಭಾಗಿಗಳು.
ಕೊಟ್ಟಿಗೆಯೆದುರಿಗೆ ಬಾವಿಕಟ್ಟೆಗೆ ಶೇಡಿಯಲ್ಲಿ (ಬಿಳಿಯ ಬಣ್ಣ) ಹಸೆ ಚಿತ್ರ ಬರೆಯುವ ಅಮ್ಮಂದಿರ ಕೌಶಲಕ್ಕೆ ಬೆರಗಾಗುತ್ತಿದ್ದೆವು. ಹಬ್ಬದ ಹಿಂದಿನ ದಿನದೊಳಗೆ ಸ್ವಚ್ಛತಾ ಅಭಿಯಾನಕ್ಕೆ ತೆರೆ ಬೀಳುತ್ತಿತ್ತು. “ಬಲಿವೇಂದ್ರನ ರಾಜ್ಯದಲಿ ಮಗೆಯ ಹಣ್ಣಿನ ತ್ವಾರಣವೇ . . .” ಎನ್ನುತ್ತಾ ಹಾಡು ಹೇಳಿ ಬಾವಿಯ ನೀರು ಸೇದಿ ಕಲಶ ತುಂಬಿ ಉದ್ದದ ಮುಳ್ಳುಸೌತೆಕಾಯಿಗೂ ಚಿತ್ತಾರ ಬರೆದು ಪೂಜೆಗಿಟ್ಟು ಮೇಲೊಂದು ಅಡಿಕೆ ಸಿಂಗಾರ ಮುಡಿಸುತ್ತಿದ್ದರು. ಮಕ್ಕಳಿಗೆ ತಲೆಗೆ ಎಣ್ಣೆ ಹಾಕಿ ಆರತಿ ಎತ್ತಿ ಸ್ನಾನ ಮಾಡಲು ಅಮ್ಮ ಕಳಿಸಿದಳೆಂದರೆ ಬರೋಬ್ಬರಿ ಒಂದು ಹಂಡೆ ನೀರು ಸ್ನಾನ ಮಾಡಿಬಿಡುತ್ತಿದ್ದೆವು. ಅಂದು ಕಡುಬಿನೂಟ. ಸಂಜೆಯೊಳಗೆ ಚೆಂಡು ಹೂವು, ಪಚ್ಚೆತೆನೆ, ಹಣ್ಣಡಿಕೆ, ವೀಳ್ಯದೆಲೆಗಳನ್ನು ಬುಟ್ಟಿಯಲ್ಲಿ ತಂದಿಡುತ್ತಿದ್ದರು. ಬಚ್ಚಲುಬಳ್ಳಿಗೆ ದಬ್ಬಣ ಸುರಿದು ಹೂವಿನ ಮಾಲೆಯನ್ನು, ಅಡಿಕೆ ಮಾಲೆಯನ್ನೂ ಬೇರೆಬೇರೆಯಾಗಿ ಕಟ್ಟುವ ತರಬೇತಿಯಂತಹ ಕಾರ್ಯಕ್ರಮ. ನಮ್ಮ ತಲೆಗೆ ಮುಡಿಯಲು ಕನಕಾಂಬರದ ಮಾಲೆಯೂ ಸಿದ್ಧವಾಗುತ್ತಿತ್ತು. ರಾತ್ರಿ ಬೂರ್ಗಳವಿನ ಹೆಸರಿನಲ್ಲಿ ಅಕ್ಕ ಪಕ್ಕದ ಮನೆಯ ಹಿತ್ತಿಲಿನಲ್ಲಿರುವ ಎಳೆ ಸವತೇ ಕಾಯಿ, ಪೇರಲೆಕಾಯಿ. . ಹೀಗೆ ತರಕಾರಿ, ಹೂವು ಹಣ್ಣುಗಳನ್ನು ಕದಿಯುತ್ತಿದ್ದೆವು. ಅವತ್ತು ಕದಿಯುವಾಗ ಸಿಕ್ಕಿಬಿದ್ದರೂ ಮಾಫ್ ಮಾಡುತ್ತಿದ್ದರು. ಹುಡುಗಿಯರಾಗಿದ್ದರಿಂದ ಬೈಯುವುದರಲ್ಲೂ ವಿಶೇಷ ರಿಯಾಯತಿ!
ಹಬ್ಬಕ್ಕೆ ಸಾಧ್ಯವಾದರೆ ಮಕ್ಕಳಿಗೆ ಹೊಸ ಬಟ್ಟೆ ಕೊಡಿಸುತ್ತಿದ್ದರು ಅದಿಲ್ಲವಾದರೆ ಇರುವುದರಲ್ಲೇ ಹೊಸದೆನಿಸುವ ಅಂಗಿ ಧರಿಸಿ ಮಾಲೆ ತಲೆಗೇರಿಸಿದರೆ ಅಲಂಕಾರ ಸಂಪೂರ್ಣ. ಆಗ ನಮ್ಮೂರಿನ ಅಮ್ಮಂದಿರಿಗೆ ಮದುವೆಯಲ್ಲಿ ಗಂಡನ ಮನೆಯವರು ಕೊಡಿಸುತ್ತಿದ್ದ ಒಂದೇ ರೇಷ್ಮೆಸೀರೆಯಲ್ಲಿ ಇಡೀ ಜೀವಮಾನ ಕಳೆಯುವ ರೂಢಿ ಇತ್ತು. ಪ್ರತಿ ವರ್ಷ ದೀಪಾವಳಿಯಲ್ಲಿ ಅದನ್ನೇ ಉಟ್ಟು ಸಂಭ್ರಮಿಸುತ್ತಿದ್ದರು. ಕೊಟ್ಟಿಗೆಯಲ್ಲಿರುವ ಗಂಗೆ, ಸೀತೆ, ಸಾವಿತ್ರಿ ಮುಂತಾದ ದನ ಕರುಗಳಿಗೆಲ್ಲ “ಆ.. ಕೋಡು ತೋರಿಸ್ತ್ಯ? ಒದ್ದರೆ ನೋಡು ಮತ್ತೆ, ಹೇ ತಥ್. . ಸರಿ ಅತ್ಲಾಗೆ ಬಾಲ ಬೀಸಿದೇ ಅಂದ್ರೆ.. ಎಂದು ಒಮ್ಮೊಮ್ಮೆ ಗದರಿಸುತ್ತಾ, ನೀ ಭಾರಿ ಸಂಭಾವಿತ” ಎಂದು ಒಮ್ಮೊಮ್ಮೆ ಅವುಗಳ ಬೆನ್ನು ಚಪ್ಪರಿಸುತ್ತಾ ಝಳಕದ ಪುಳಕ ಕರುಣಿಸುವ ಗಂಡಸರ ಕಷ್ಟ ಮಕ್ಕಳಾದ ನಮಗೆ ಮೋಜು ತರುತ್ತಿತ್ತು.
ಅಡುಗೆ ಮನೆಯಲ್ಲಿ ತಯಾರಾಗುತ್ತಿದ್ದ ಚರುವು (ಅರಿಶಿನ ಹಾಕಿದ ಅನ್ನ), ರಾಶಿಯಾಗಿ ಎರೆಯುವ ದೊಸೆ, ಘಮಘಮಿಸುವ ಹೋಳಿಗೆ… ನೈವೇದ್ಯವಾಗುವವರೆಗೆ ತಿನ್ನದೇ ಇರುವುದೇ ಕಷ್ಟವಾಗುತ್ತಿತ್ತು. ‘ಈ ಹಬ್ಬದಲ್ಲಿ ಮಾಡುವ ಅಡುಗೆ, ಮಕ್ಕಳೇ.. ನಿಮಗಾಗಿ ಮಾಡಿದ್ದಲ್ಲ ದನಕರುಗಳಿಗೆ’ ಎಂದು ಅಮ್ಮ ಹೇಳಿದರೆ ಮೂತಿ ಉಬ್ಬಿಸಿ ನಿಮ್ಮದೇ ಒಳ್ಳೆ ಯೋಗಾ ಇವತ್ತು! ಎಂದು ನಿಟ್ಟುಸಿರು ಬಿಡುತ್ತಾ ಕರುಗಳ ಮೈ ನೇವರಿಸುತ್ತಿದ್ದವು. ಕೊರಳಿಗೆ ಕಟ್ಟಿದ ಚೆಂಡುಹೂವಿನ ಮಾಲೆ ಅಡಿಕೆಮಾಲೆಯನ್ನು ತಿನ್ನಲೆತ್ನಿಸುತ್ತಿದ್ದ ಅವಕ್ಕೆ ನಮ್ಮ ಕಷ್ಟ ಎಷ್ಟು ಅರ್ಥವಾಗುತ್ತಿತ್ತೋ ಗೊತ್ತಿಲ್ಲ. ಬೆಟ್ಟದಲ್ಲಿರುವ ಹುಲಿದೇವರಿಗೆ ಊರಿನವರೆಲ್ಲ ಸೇರಿ ತೆಂಗಿನ ಕಾಯಿ ಒಡೆದು ಪೂಜೆ ಮಾಡಿ ಬರುತ್ತಿದ್ದರು. ನಂತರ ಕೊಟ್ಟಿಗೆಯಲ್ಲಿ ಗೋಪೂಜೆ. ಅಪ್ಪನ ಮಂತ್ರ, ಅಮ್ಮನ ಸಂಪ್ರದಾಯದ ಹಾಡು, ನಾವು ಬಾರಿಸುತ್ತಿದ್ದ ಜಾಗಟೆಯ ಸಪ್ಪಳಕ್ಕೆ ಕೆಲವು ದನ ಕರುಗಳು ಸಿಟ್ಟಿಗೆದ್ದು ಸರ್ಪದಂತೆ ಬುಸುಗುಡುತ್ತಿದ್ದವು. ಪೂಜೆಯ ಅಂತ್ಯದಲ್ಲಿ ಹೋಳಿಗೆ, ದೋಸೆ, ಚರುವುಗಳನ್ನು ಒಂದೊಂದು ಬುಟ್ಟಿಯಲ್ಲಿ ತುಂಬಿ ಪ್ರತಿ ಹಸುವಿನ ಮುಂದಿಟ್ಟಾಗ ಬುಸುಗುಡುವ ಹಸುಗಳೂ ಶಾಂತವಾಗುತ್ತಿದ್ದವು. ಕೆಲವೊಮ್ಮೆ ಪಕ್ಕದ ಹಸುವಿನ ಬುಟ್ಟಿಯಲ್ಲಿರುವುದನ್ನೂ ತಿನ್ನಲು ಸ್ಪರ್ಧೆಗಿಳಿಯುತ್ತಿದ್ದವು. ಗೋಪೂಜೆ ಮುಗಿದ ಮೇಲೆ ಸುತ್ತು ಪೂಜೆ. ಬಾವಿ, ಹೊಸ್ತಿಲು, ಕೃಷಿ ಪರಿಕರಗಳು, ಪಣತ, ತುಳಸಿಕಟ್ಟೆ, ವಾಹನಗಳು, ಒಲೆ ಹೀಗೆ ಎಲ್ಲ ಪೂಜೆಗಳನ್ನು ಮುಗಿಸಿ, ಗದ್ದೆಯಿಂದ ತಂದ ಭತ್ತದ ತೆನೆಗಳನ್ನು ಮನೆ ದೇವರ ಮಂದಿಟ್ಟು ಪೂಜೆ ಮಾಡಿ ಆರತಿ ಮಾಡುತ್ತಿದ್ದರು. ಭತ್ತದ ಕದಿರು, ಮಾವಿನೆಲೆಗಳನ್ನು ನಾರಿನಲ್ಲಿ ಕಟ್ಟಿ ಹೊಸ್ತಿಲಿಗೆ ತೋರಣ ಕಟ್ಟುತ್ತಿದ್ದರು. ನಂತರ ಹೋಳಿಗೆ ಊಟದ ಸಡಗರ.
ದೀಪಾವಳಿಯಲ್ಲಿ ಭರ್ಜರಿ ಊಟದ ನಂತರ ವಿಶ್ರಮಿಸುವ ಭಾಗ್ಯವಿರುತ್ತಿರಲಿಲ್ಲ. ಸಂಜೆ ಊರ ಹೊರಗಿರುವ ಗುಡಿಯಲ್ಲಿ ಸಾಮೂಹಿಕವಾಗಿ ಊರಿನವರೆಲ್ಲ ಪೂಜೆ ಸಲ್ಲಿಸುತ್ತಿದ್ದವು. ಎದುರಿನ ಬಯಲಿನಲ್ಲಿ ಊರಿನಲ್ಲಿರುವ ಎಲ್ಲರ ಮನೆಯ ಹೋರಿಗಳನ್ನು ಬಿಟ್ಟು ರೊಚ್ಚೆಗೆಬ್ಬಿಸುತ್ತಿದ್ದರು. ಸಡಿಲವಾಗಿ ಹಿಡಿದ ಹಗ್ಗವನ್ನು ಲೆಕ್ಕಿಸದೇ ಅವು ಚಂಗು ಚಂಗೆಂದು ಜಿಗಿದಾಡುತ್ತಿದ್ದರೆ. ಸಾಹಸಿ ಯುವಕರು ಅವುಗಳ ಕೊರಳಿನಲ್ಲಿರುವ ಹಣ್ಣಡಿಕೆ ಮಾಲೆಗಳನ್ನು ಹರಿಯುತ್ತಿದ್ದರು. ಹೆಚ್ಚು ಮಾಲೆಗಳನ್ನು ಹರಿದವ ಎಲ್ಲರ ಕಣ್ಣಿನಲ್ಲಿ ಪರಾಕ್ರಮಿ ಎನಿಸಿಕೊಳ್ಳುತ್ತಿದ್ದ. ರಾತ್ರಿ ಮನೆಯ ಮುಂದೆ ತುಳಸಿಕಟ್ಟೆಯೆದುರು, ದೇವರ ಮುಂದೆ ಹಣತೆಗಳನ್ನು ಬೆಳಗಿ, ಬಲಿವೇಂದ್ರನನ್ನು (ಪೂಜೆಗೆ ಬಳಸಿದ ಅಡಿಕೆ ಸಿಂಗಾರ) ಮುಂದಿನ ವರ್ಷ ಬಾರೋ ಎಂದು ಮನೆ ಮಾಡಿಗೆ ಒಗೆದರೆ ಹಬ್ಬಕ್ಕೆ ಮಂಗಳ ಹಾಡಿದಂತಾಗುತ್ತಿತ್ತು. ಇಡೀ ಹಳ್ಳಿಗರ ಮನಗಳೂ ಹಬ್ಬದ ನೆವದಲ್ಲಿ ಒಂದಾಗಿ ಸಂಭ್ರಮಿಸುತ್ತಿದ್ದವು.