ಕಾಂಗ್ರೆಸ್ಸಿನ ವೈಚಾರಿಕತೆಯು ಇಸ್ಲಾಮಿಕ್ ಐಡಿಯಾಲಜಿಯ ಸೆಕ್ಯುಲರ್ ರೂಪವೇ?
– ವಿನಾಯಕ ಹಂಪಿಹೊಳಿ
ಕಾಂಗ್ರೆಸ್ ಹಾಗೂ ಕಮ್ಯುನಿಸ್ಟ್ ಪಕ್ಷಗಳ ಪರ ವಹಿಸುವ ಬುದ್ಧಿಜೀವಿಗಳು ಮತ್ತು ಜಾಕೀರ್ ನಾಯ್ಕ್ ಮುಂತಾದ ಇಸ್ಲಾಮಿಕ್ ಐಡಿಯಾಲಜಿಯ ಪ್ರಚಾರಕರು ವಾದಿಸುವ, ಪ್ರತಿಕ್ರಿಯಿಸುವ, ಸಮರ್ಥಿಸಿಕೊಳ್ಳುವ, ವಿರೋಧಿಸುವ ರೀತಿಗಳಲ್ಲಿ ಬಹಳ ಸಾಮ್ಯತೆಗಳಿವೆ ಎಂದು ನನಗೆ ಹಲವು ಸಲ ಅನಿಸಿದ್ದಿದೆ. ಈ ಎರಡೂ ಪಂಗಡಗಳು ಬೇರೆ ಬೇರೆ ಐಡಿಯಾಲಜಿಗಳನ್ನೇ ಹೊಂದಿದ್ದರೂ ಕೂಡ ಇವು ಮಂಡಿಸುವ ವಾದಗಳ ರೂಪರೇಷೆಗಳು ಒಂದೇ ತೆರನಾಗಿವೆ. ಇದನ್ನು ಅರಿಯಲು ಈ ಎರಡೂ ಗುಂಪುಗಳ ವಾದಸರಣಿಗಳನ್ನು ಹಾಗೂ ಪ್ರತಿಕ್ರಿಯೆಗಳನ್ನು ನೋಡೋಣ.
ಇಸ್ಲಾಮಿಕ್ ಸಂಘಟನೆಗಳಿಗೆ ಇಸ್ಲಾಮಿಕ್ ಐಡಿಯಾಲಜಿಯೇ ಸರ್ವಶ್ರೇಷ್ಠವಾಗಿದೆ. ಉಳಿದ ರಿಲಿಜನ್ನುಗಳು ಸುಳ್ಳು ರಿಲಿಜನ್ನುಗಳಾಗಿವೆ. ಸಂವಿಧಾನಕ್ಕಿಂತ ಕುರಾನೇ ಶ್ರೇಷ್ಠವಾಗಿದೆ. ಆದರೆ ಕಾಂಗ್ರೆಸ್ ಹಾಗೂ ಕಮ್ಯುನಿಸ್ಟ್ ಬುದ್ಧಿಜೀವಿಗಳು ತಾವು ಸೆಕ್ಯುಲರ್ ಆಗಿದ್ದು, ಮೂಲಭೂತವಾದಿಗಳಲ್ಲ ಎಂಬುದನ್ನು ಪದೇ ಪದೇ ಹೇಳುತ್ತಿರುತ್ತಾರೆ. ಭಾರತದಲ್ಲಿ ಸಂವಿಧಾನವೇ ಶ್ರೇಷ್ಠವಾಗಿದ್ದು, ರಿಲಿಜನ್ನುಗಳು ವೈಯಕ್ತಿಕವೆಂದು ಅವರು ಒಪ್ಪುತ್ತಾರೆ. ಇಸ್ಲಾಮಿಕ್ ಐಡಿಯಾಲಜಿಯ ಪ್ರಚಾರಕರಂತೆ ಕುರಾನೇ ಶ್ರೇಷ್ಠವೆಂಬ ಭಾವನೆ ಬುದ್ಧಿಜೀವಿಗಳಲ್ಲಿಲ್ಲ. ಅವರು ಕುರಾನ್ ಹಾಗೂ ಬೈಬಲ್ಲನ್ನು ಏಕರೀತಿಯಲ್ಲಿ ಗೌರವಿಸಬಲ್ಲರು ಹಾಗೂ ಎರಡರಿಂದಲೂ ಸಮಾನ ಅಂತರವನ್ನು ಕಾಯ್ದುಕೊಳ್ಳಬಲ್ಲರು. ಆದರೆ ಹಿಂದೂಗಳ ಕುರಿತು, ಹಿಂದೂ ಧರ್ಮಗ್ರಂಥಗಳೆಂದು ಕರೆಯಲ್ಪಡುವ ಕೃತಿಗಳ ಕುರಿತು ಬುದ್ಧಿಜೀವಿಗಳ ಅಭಿಪ್ರಾಯವು ಇಸ್ಲಾಂ ಮುಂತಾದ ಐಡಿಯಾಲಜಿಯನ್ನು ಪ್ರತಿಪಾದಿಸುವವರ ಅಭಿಪ್ರಾಯಕ್ಕಿಂತ ಎಷ್ಟು ಭಿನ್ನವಾಗಿದೆ ಎನ್ನುವದು ಈಗಿನ ಪ್ರಶ್ನೆ.
ಮೊದಲು ಜಾಕೀರ್ ನಾಯ್ಕ್ ಮುಂತಾದ ಇಸ್ಲಾಮಿಕ ಪ್ರಚಾರಕರು ಕೆಲವು ಪ್ರಶ್ನೆಗಳನ್ನು ಹೇಗೆ ಉತ್ತರಿಸುತ್ತಾರೆ ಎಂಬುದನ್ನು ಗಮನಿಸಿ. ಉದಾಹರಣೆಗೆ, ಅಸ್ಪೃಶ್ಯತೆಗೂ ಹಾಗೂ ಮನುಸ್ಮೃತಿಗೂ ಸಂಬಂಧವಿದೆಯೇ ಎಂದು ಜಾಕೀರ್ ಮುಂತಾದವರಿಗೆ ಕೇಳಿದರೆ ಅವರು ನಿರ್ಭಿಡೆಯಿಂದ ಹೌದು ಎನ್ನುತ್ತಾರೆ. ಮನುಸ್ಮೃತಿಯಲ್ಲಿ ಶೂದ್ರರ ಮೇಲಿರುವ ನಿಬಂಧನೆಗಳನ್ನು ತಿಳಿಸುವ ಶ್ಲೋಕಗಳನ್ನೆಲ್ಲ ಉದಾಹರಿಸಿ ಅದನ್ನು ಸಾಧಿಸುತ್ತಾರೆ. ಆಗ ಅದೇ ಸ್ಮೃತಿಯಲ್ಲಿ ಬರುವ ಬ್ರಾಹ್ಮಣರ ಮೇಲಿರುವ ನಿಬಂಧನೆಗಳನ್ನು ಹಾಗೂ ಶೂದ್ರರಿಗಿರುವ ವಿನಾಯಿತಿಗಳನ್ನು ಬೇಕೆಂದೇ ಮರೆಮಾಚುತ್ತಾರೆ.
ಹಾಗೆಯೇ ಕುರಾನಿಗೂ ಹಾಗೂ ಜಿಹಾದಿನ ಹೆಸರಲ್ಲಿ ನಡೆದ ಭಯೋತ್ಪಾದಕ ಕೃತ್ಯಗಳಿಗೂ ಸಂಬಂಧವಿದೆಯೇ ಎಂದು ಕೇಳಿದರೆ ಸ್ಪಷ್ಟವಾಗಿ ಇಲ್ಲವೆನ್ನುತ್ತಾರೆ. ಪರಧರ್ಮದವರೊಂದಿಗೆ ಹೇಗೆ ಸೌಹಾರ್ದಯುತವಾಗಿ ವರ್ತಿಸಬೇಕೆಂಬ ಉಪದೇಶಗಳಿರುವ ಕುರಾನಿನ ವಾಕ್ಯಗಳನ್ನೆಲ್ಲ ಉದ್ಧರಿಸುತ್ತಾರೆ. ಭಯೋತ್ಪಾದನೆಗೂ ರಿಲಿಜನ್ನಿಗೂ ಸಂಬಂಧವಿಲ್ಲವೆಂದೂ ಹಾಗೂ ಇಸ್ಲಾಮಿಕ್ ಭಯೋತ್ಪಾದನೆಯು ಮಾಧ್ಯಮಗಳ ಸೃಷ್ಟಿಯೆಂದೂ ಖಡಾಖಂಡಿತವಾಗಿ ಹೇಳುತ್ತಾರೆ. ಕುರಾನಿನಲ್ಲಿ ಹಿಂಸೆಯನ್ನು ಪ್ರಚೋದಿಸುವಂತೆ ಕಾಣುವ ವಾಕ್ಯಗಳ ತಪ್ಪು ಅರ್ಥೈಸುವಿಕೆಯನ್ನೇ ಭಯೋತ್ಪಾದನೆಯಲ್ಲಿ ಬಳಸಿಕೊಳ್ಳುತ್ತಾರೆ ಎಂದು ಈ ಪ್ರಚಾರಕರು ಹೇಳುತ್ತಾರೆ. ಆದರೆ ಮಾಲೇಗಾಂವ್ ಸ್ಫೋಟದ ಪ್ರಕರಣವನ್ನು ಹಿಂದೂ ಭಯೋತ್ಪಾದನೆ ಎಂದು ಹೇಳುವಲ್ಲಿ ಕೊಂಚವೂ ಹಿಂಜರಿಯುವದಿಲ್ಲ. ಇದನ್ನು ಅರ್ಥೈಸಿಕೊಳ್ಳುವದು ಕಷ್ಟವಲ್ಲ. ಇಸ್ಲಾಂ ಸತ್ಯವಾದ ರಿಲಿಜನ್ನಾಗಿದ್ದು ಉಳಿದ ರಿಲಿಜನ್ನುಗಳು ಸುಳ್ಳು ರಿಲಿಜನ್ನುಗಳಾಗಿವೆ ಎಂದು ಭಾವಿಸುವದರಿಂದಲೇ ಅವರು ಹೀಗೆ ವಾದಿಸುತ್ತಾರೆ.
ಇನ್ನು ಬುದ್ಧಿಜೀವಿಗಳ ವಿಷಯಕ್ಕೆ ಬರೋಣ. ಕುರಾನಿಗೂ ಭಯೋತ್ಪಾದನೆಗೂ ಸಂಬಂಧವಿದೆಯೇ ಎಂದು ಕೇಳಿದರೆ ಬುದ್ಧಿಜೀವಿಗಳು ಸಹಜವಾಗಿ ಇಲ್ಲವೆನ್ನುತ್ತಾರೆ. ಕುರಾನಿನ ಕೆಲವು ವಾಕ್ಯಗಳನ್ನು ಭಯೋತ್ಪಾದಕರು ಮನಬಂದಂತೆ ತಿರುಚಿದ್ದಾರೆ ಎಂದು ನೇರವಾಗಿ ಹೇಳುತ್ತಾರೆ. ಎಲ್ಲಿಯೂ ಸಾರ್ವಜನಿಕವಾಗಿ ಭಯೋತ್ಪಾದನೆಗೆ ಕುರಾನೇ ಕಾರಣ ಎಂದು ಉಲ್ಲೇಖಿಸಿ, ಕುರಾನನ್ನು ಸುಡುವ ಬುದ್ಧಿಜೀವಿಗಳನ್ನು ನೋಡಿದ ನೆನಪಿಲ್ಲ. ಇಸ್ಲಾಮಿಕ್ ಐಡಿಯಾಲಜಿಯನ್ನು ಬುದ್ಧಿಜೀವಿಗಳು ಒಪ್ಪುವದಿಲ್ಲವಾದರೂ ಅದರ ಪ್ರಚಾರಕರನ್ನೇನೂ ಪೈಗಂಬರವಾದಿಗಳು ಎಂದು ಎಲ್ಲೂ ತೆಗಳುವದಿಲ್ಲ. ಆದರೆ ಮನುಸ್ಮೃತಿಗೂ, ಸಾಮಾಜಿಕ ಶೋಷಣೆಗೂ ಸಂಬಂಧವಿದೆಯೇ ಎಂದು ಕೇಳಿದರೆ? “ಮನುಸ್ಮೃತಿಯಲ್ಲಿ ಮೂಲತಃ ಇರುವದು ಆಧ್ಯಾತ್ಮ ಹಾಗೂ ಅದನ್ನು ಸುಡುವದು ಹಿಂದೂಗಳ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದಂತೆ ಮತ್ತು ಕೆಲವರು ತಮ್ಮ ದುರಾಸೆಗೆ ಕೆಲವು ಸ್ಮೃತಿವಾಕ್ಯಗಳನ್ನು ತಪ್ಪಾಗಿ ತಿರುಚಿದ್ದಾರೆಯೇ ಹೊರತು ಮನುಸ್ಮೃತಿಗೂ, ಸಾಮಾಜಿಕ ಶೋಷಣೆಗೂ ಯಾವುದೇ ಸಂಬಂಧವಿಲ್ಲ.” ಎನ್ನುವ ಬುದ್ಧಿಜೀವಿಗಳು ಇರಬಹುದೇ ಎಂದು ನಾನು ಕೆಲವು ವರ್ಷಗಳಿಂದ ಹುಡುಕುತ್ತಿದ್ದೇನೆ.
ಇಸ್ಲಾಮಿಕ್ ಸಂಘಟನೆಗಳಿಗೆ ಮನುಸ್ಮೃತಿಯು ಸುಳ್ಳು ರಿಲಿಜನ್ನಿನ ಪುಸ್ತಕ. ಅದರಲ್ಲಿ ಕುರಾನಿಗೆ ಅನುಗುಣವಾಗಿರುವ ಅಂಶಗಳಷ್ಟೇ ಸ್ವೀಕೃತ. ಹೀಗಾಗಿ ಅವುಗಳಿಗೆ ಮನುಸ್ಮೃತಿಯನ್ನು ಅಮೂಲಾಗ್ರವಾಗಿ ಟೀಕಿಸುವದು, ಹಾಗೂ ಕುರಾನನ್ನು ಎಲ್ಲ ರೀತಿಯಿಂದಲೂ ಸಮರ್ಥಿಸಿಕೊಳ್ಳುವದು ಅವರಿಗೆ ಅಗತ್ಯ. ಬುದ್ಧಿಜೀವಿಗಳಿಗೆ ಇಸ್ಲಾಮಿಕ್ ಐಡಿಯಾಲಜಿಯು ಒಪ್ಪಿತವಿಲ್ಲ. ಆದರೆ ಅದರ ಅಸ್ತಿತ್ವವನ್ನು ಸಹಿಸಿಕೊಳ್ಳಬಲ್ಲರು. ಆದರೆ ಮನುವಾದದ ಅಸ್ತಿತ್ವವು ಸಮಾಜದಲ್ಲಿರಲು ಅವರು ಎಂದಿಗೂ ಬಿಡಲಾರರು. ಮನುವಾದವು ಕಡ್ಡಾಯವಾಗಿ ಸಮಾಜದಿಂದ ನಾಶ ಮಾಡಲೇಬೇಕಾದ ಅಂಶವಾಗಿದೆ ಹಾಗೂ ಮನುಸ್ಮೃತಿಯು ಸುಡಲೇಬೇಕಾದ ಗ್ರಂಥವಾಗಿದೆ. ಇವರಿಗೆ ಮನುಸ್ಮೃತಿಯಲ್ಲಿರುವ ಉತ್ತಮ ಅಂಶಗಳನ್ನು ಅವಗಣಿಸಲೇಬೇಕಾಗಿದೆ. ಇಸ್ಲಾಮಿಕ್ ಪ್ರಚಾರಕರು ಕುರಾನ್ ಹಾಗೂ ಮನುಸ್ಮೃತಿಯಲ್ಲಿ ಕಾಣುವ ಭೇದವನ್ನೇ ಬುದ್ಧಿಜೀವಿಗಳೂ ಕಾಣುತ್ತಾರೆ. ಏಕೆ?
ಕಾಂಗ್ರೆಸ್ ಪಕ್ಷಕ್ಕೆ ಹಿಂದೂ ಟೆರರಿಸಂ ಅಥವಾ ಕೇಸರೀ ಭಯೋತ್ಪಾದನೆ ಎಂಬ ಶಬ್ದಗಳನ್ನು ಉಪಯೋಗಿಸುವಲ್ಲಿ ಯಾವುದೇ ಹಿಂಜರಿಕೆ ಬಾರದು. ಮಾಲೇಗಾಂವ್ ಸ್ಫೋಟದ ಸತ್ಯಾಸತ್ಯತೆ ಏನೇ ಇರಲಿ, ಆ ಕೃತ್ಯವನ್ನು ಹಿಂದೂಗಳೇ ಮಾಡಿದ್ದಾರೆ ಎಂದು ಕೇವಲ ತರ್ಕಕ್ಕಾಗಿ ಊಹಿಸಿದರೂ ಸಹ ಅದೊಂದೇ ಕಾರಣಕ್ಕೆ ಭಯೋತ್ಪಾದನೆಗೂ ಹಿಂದೂ ಧರ್ಮಕ್ಕೂ ನಂಟು ಹಾಕಬಹುದೇ? ಹಿಂದೂ ಧರ್ಮದ ಹೆಸರಿನಲ್ಲಿ ಗಲಭೆ ಎಬ್ಬಿಸುವವರನ್ನು ಅರೆಸ್ಟ ಮಾಡುವಾಗ “ಕಾನೂನನ್ನು ಉಲ್ಲಂಘಿಸುವ ಹಿಂದೂಗಳನ್ನು ಅರೆಸ್ಟ್ ಮಾಡುತ್ತೇವೆ” ಎಂದು ಹೇಳುವಾಗ ನಾಲಿಗೆ ತೊದಲುವದಿಲ್ಲ. ಆದರೆ ಇಸ್ಲಾಮಿನ ಹೆಸರಲ್ಲಿ ದೊಂಬಿಗಳನ್ನೆಬ್ಬಿಸುವವರನ್ನು ಅರೆಸ್ಟ ಮಾಡುತ್ತೀರಾ ಎಂದು ಕೇಳಿದಾಗ, ಸಿದ್ದರಾಮಯ್ಯನವರು ತಮ್ಮ ಹೇಳಿಕೆಗಳನ್ನು ಜನರಲೈಸ್ ಮಾಡಿ ಜಾರಿಕೊಂಡರು. “ಕಾನೂನನ್ನು ಉಲ್ಲಂಘಿಸುವವರು ಯಾರೇ ಆಗಲಿ ಹಿಂದೂಗಳಾಗಿರಲಿ, ಅಮ್ಮ್ಮ್ಮ.. ಆಮ್ಮ್ಮ್ಮ… ಊಮ್ಮ್ಮ್ಮ… ಯಾವುದೇ ಧರ್ಮದವರಾಗಿರಲಿ, ಅವರನ್ನು ಬಂಧಿಸುತ್ತೇವೆ” ಎಂದರು. ಕಾರಣ ಇಷ್ಟೇ. ಕಸಬ್ ಮಾಡಿದ ಕ್ರೌರ್ಯಕ್ಕೆ ಇಸ್ಲಾಂ ಕಾರಣವಲ್ಲ ಹಾಗೂ ಆತ ನಿಜವಾದ ಮುಸ್ಲಿಮನಲ್ಲ ಎಂದು ಜಾಕೀರ್ ನಾಯ್ಕ್ ಭಾವಿಸುವಂತೆಯೇ ಕಾಂಗ್ರೆಸ್ ಬುದ್ಧಿಜೀವಿಗಳು ಮುಸ್ಲಿಮರು ಮಾಡುವ ಕಾನೂನಿನ ಉಲ್ಲಂಘನೆಗೂ ಹಾಗೂ ಇಸ್ಲಾಮಿಗೂ ಸಂಬಂಧವಿಲ್ಲ ಹಾಗೂ ಅಂಥವರು ನಿಜವಾದ ಮುಸ್ಲಿಮರಲ್ಲ ಎಂದು ಭಾವಿಸುತ್ತಾರೆ. ಕಾನೂನನ್ನು ಉಲ್ಲಂಘಿಸುವವರು ನಿಜವಾದ ಮುಸ್ಲಿಮರೇ ಅಲ್ಲ ಎಂದು ಅದು ಬಲವಾಗಿ ಭಾವಿಸಿದೆ. ಆದ್ದರಿಂದ “ಕಾನೂನನ್ನು ಉಲ್ಲಂಘಿಸುವ ಮುಸ್ಲಿಮರು” ಎಂದು ಹೇಳಲು ಕಾಂಗ್ರೆಸ್ಸಿಗೆ ಕಷ್ಟವಾಗುತ್ತದೆ. ಆದರೆ ಕಾನೂನು ಉಲ್ಲಂಘಿಸುವ ಹಿಂದೂಗಳು ನಿಜವಾದ ಹಿಂದೂಗಳಲ್ಲ ಹಾಗೂ ಕಾನೂನು ಉಲ್ಲಂಘನೆಗೂ ಹಿಂದೂ ಧರ್ಮಕ್ಕೂ ಸಂಬಂಧವಿಲ್ಲ ಎಂದು ಕಾಂಗ್ರೆಸ್ ಯೋಚಿಸುವದಿಲ್ಲ. ಹಿಂದೂಗಳ ಕೆಲವು ನಂಬಿಕೆಗಳು ನೇರವಾಗಿ ಕಾನೂನನ್ನು ಉಲ್ಲಂಘಿಸುತ್ತವೆ ಎನ್ನುವದೇ ಅವರ ಪ್ರಬಲ ಭಾವನೆ. ಹೀಗಾಗಿ “ಕಾನೂನು ಉಲ್ಲಂಘಿಸುವ ಹಿಂದೂಗಳು” ಎನ್ನುವಲ್ಲಿ ಕಾಂಗ್ರೆಸ್ಸಿಗೆ ಯಾವುದೇ ಮುಜುಗರವಿಲ್ಲ. ಹೀಗಾಗಿ ಈ ಎರಡು ಪಂಗಡಗಳ ವಾದಸರಣಿಗಳ ತರ್ಕ ಬೇರೆಯಾದರೂ ಅವುಗಳ ರೂಪರೇಷೆ ಒಂದೇ.
ಬುದ್ಧಿಜೀವಿಗಳು ಭಾವಿಸಿದಂತೆ, ಮನುಸ್ಮೃತಿಯು ಹಿಂದೂ ಸಮಾಜದ ಧರ್ಮಗ್ರಂಥವಾಗಲೀ, ಕಾನೂನು ಗ್ರಂಥವಾಗಲೀ ಅಲ್ಲ. ಹೀಗಾಗಿ, ಮನುಸ್ಮೃತಿಯ ವಿರೋಧವನ್ನು ಹಿಂದೂಗಳು ಅಷ್ಟು ಗಂಭೀರವಾಗಿ ಪರಿಗಣಿಸುವದಿಲ್ಲ. ಅಲ್ಲಾನ ಅಸ್ತಿತ್ವವನ್ನು ಅಲ್ಲಗಳೆದ ಮುಸ್ಲಿಮ್ ಹೆಸರಿನ ಬುದ್ಧಿಜೀವಿಯೊಬ್ಬ ಕುರಾನನ್ನು ಸುಟ್ಟಾಗ ಆತನ ಮೇಲೆ ನಡೆದ ರೀತಿಯ ಹಲ್ಲೆಗಳು, ಮನುಸ್ಮೃತಿಯನ್ನು ಸುಡುವ ಬುದ್ಧಿಜೀವಿಗಳ ಮೇಲೆ ಆ ಕಾರಣವನ್ನಿಟ್ಟುಕೊಂಡು ಹಲ್ಲೆ ನಡೆದಿಲ್ಲ. ಧಾಬೋಲ್ಕರ್, ಕಲ್ಬುರ್ಗಿಯಂಥವರ ಕೊಲೆಗಳ ಹಿಂದೆ ಈ ರೀತಿಯ ಕಾರಣಗಳಿವೆ ಎನ್ನುವದು ಇಷ್ಟು ವರ್ಷಗಳಾದರೂ ಸಾಬೀತಾಗಿಲ್ಲ. ಆದರೆ ಸೆಕ್ಯುಲರ್ ಎಂದು ಕರೆದುಕೊಳ್ಳುವವರು ಮನುಸ್ಮೃತಿಯನ್ನು ಧರ್ಮಗ್ರಂಥವೆಂದು ಭಾವಿಸುತ್ತಾರೆ. ಹೀಗಾಗಿ ಅವರು ಎಲ್ಲ ರಿಲಿಜನ್ನುಗಳ ಗ್ರಂಥಗಳನ್ನು ಸಮಾನವಾಗಿ ನೋಡಬೇಕಾಗುತ್ತದೆ. ಆದರೆ ಬುದ್ಧಿಜೀವಿಗಳು ಕುರಾನ್ ಹಾಗೂ ಮನುಸ್ಮೃತಿಯನ್ನು ಏಕರೂಪವಾಗಿ ನೋಡುವದಿಲ್ಲ. ಹೀಗಾಗಿ ಬುದ್ಧಿಜೀವಿಗಳ ವೈಚಾರಿಕತೆಯು ಇಸ್ಲಾಮಿಕ್ ಐಡಿಯಾಲಜಿ ವಾದಗಳ ಸೆಕ್ಯುಲರ್ ರೂಪವೇ ಆಗಿದೆ.
ಯಜುರ್ವೇದದ “ನ ತಸ್ಯ ಪ್ರತಿಮಾ ಅಸ್ತಿ” ಎಂಬ ವಾಕ್ಯವನ್ನೇ ಹಿಡಿದುಕೊಂಡು ಮೂರ್ತಿಪೂಜೆಯನ್ನು ವಿರೋಧಿಸುವ ಜಾಕೀರ್ ನಾಯ್ಕ್ ಮುಂತಾದವರ ವಾದಕ್ಕೂ, “ಋಗ್ವೇದದಲ್ಲೇ ಗೋಮಾಂಸ ಭಕ್ಷಣೆ ಇದೆ ಆದ್ದರಿಂದ ಗೋಮಾಂಸ ತಿನ್ನುತ್ತಿದ್ದೇನೆ” ಎಂಬ ಭಗವಾನ್ ವಾದಕ್ಕೂ ಯಾವುದೇ ವ್ಯತ್ಯಾಸವಿಲ್ಲ. ಭಗವಾನ್ ಆಗಲೀ, ಜಾಕೀರ್ ನಾಯ್ಕ್ ಆಗಲೀ ವೇದಗಳಲ್ಲಿ ಹೇಳಿರುವದನ್ನೆಲ್ಲ ಮಾಡುವವರಲ್ಲ. ಅವರೇನೂ ಮೂರು ಹೊತ್ತು ಮೂಗು ಹಿಡಿದು ಸಂಧ್ಯಾವಂದನೆ ಮಾಡುವರರಲ್ಲ. ಬೆಳಿಗ್ಗೆ ನಾಲ್ಕಕ್ಕೆದ್ದು ವೇದ ಪಠಣ ಮಾಡುವವರಂತೂ ಅಲ್ಲವೇ ಅಲ್ಲ. ಹಾಗಿದ್ದರೆ ವೇದಗಳಲ್ಲಿರುವದನ್ನೆಲ್ಲ ಚಾಚೂ ತಪ್ಪದೇ ಪಾಲಿಸುವವರಂತೆ ಹೇಳಿಕೆ ಕೊಡುವದೇಕೆ ಎನ್ನುವದು ಜನಸಾಮಾನ್ಯರಿಗೆ ಕೊಂಚವೂ ಅರ್ಥವಾಗುವದಿಲ್ಲ. ಭಾರತದ ಎಷ್ಟೋ ಪರಂಪರೆಗಳಲ್ಲಿ ಗೋಮಾಂಸ ಭಕ್ಷಣೆ ಇದೆ. ಆದರೆ ಅವರೇನೂ ಋಗ್ವೇದದ ಸೂಕ್ತ ಮುಂದಿಟ್ಟುಕೊಂಡು ತಿನ್ನುವದಿಲ್ಲ. ಆದರೆ ಇವರೇಕೆ ಹೀಗೆ ಮಾಡುತ್ತಿದ್ದಾರೆ?
ಹಿಂದೂವೊಬ್ಬ ಮುಸ್ಲಿಮನಾಗಿ ಮತಾಂತರವಾದಾಗ ಆತನಿಗೆ ಗೋಮಾಂಸ ತಿನ್ನಲು ಹೇಳುತ್ತಾರೆ. ಇದು ಹೊಸದಾಗಿ ಮುಸ್ಲಿಮನಾದವನು ಇಸ್ಲಾಮಿಗೆ ವಿರುದ್ಧವಾಗಿರುವ ನಂಬಿಕೆಗಳನ್ನು ಹೊಂದಿಲ್ಲ ಎನ್ನುವದನ್ನು ದೃಢಪಡಿಸಿಕೊಳ್ಳುವ ಪ್ರಕ್ರಿಯೆ. ಆದರೆ ಈ ಕಾರ್ಯವನ್ನು ಬುದ್ಧಿಜೀವಿಗಳೂ ಮಾಡುತ್ತಾರೆ. ಸಾರ್ವಜನಿಕವಾಗಿ ಗೋಮಾಂಸ ತಿಂದು ತಾವು ಪ್ರಗತಿಪರ ಹಾಗೂ ಆಹಾರದ ಹಕ್ಕಿನ ಪರ ಎಂದು ಕಾಂಗ್ರೆಸ್ ಬುದ್ಧಿಜೀವಿಗಳು ಬಿಂಬಿಸುತ್ತಾರೆ. ಆದರೆ ಅದೇ ಕಾರ್ಯಕ್ರಮದಲ್ಲಿ “ಎಲ್ಲ ಮೂಲಭೂತವಾದಗಳನ್ನೂ ತಿರಸ್ಕರಿಸೋಣ ಹಾಗೂ ಗೋವಿನ ಜೊತೆ ಹಂದಿಯನ್ನೂ ತಿಂದು ಪ್ರತಿಭಟಿಸೋಣ” ಎಂದು ಕರೆ ನೀಡಿದ ಉದಾಹರಣೆ ನಾನಂತೂ ನೋಡಿಲ್ಲ. ಮಾಡಿದರೂ ಅಂಥ ಕಾರ್ಯಕ್ರಮದಲ್ಲಿ ಮುಸ್ಲಿಮನೊಬ್ಬ ಹಂದಿಯನ್ನು ತಿನ್ನಲು ನಿರಾಕರಿಸಿದರೆ ಆತನು ಪ್ರಗತಿಪರನಲ್ಲ ಎಂದು ಭಾವಿಸಲಾಗುವದಿಲ್ಲ. ಆದರೆ ಹಿಂದೂವೊಬ್ಬ ಆಕಳನ್ನು ತಿನ್ನಲು ನಿರಾಕರಿಸಿದರೆ ಅದು ಆತನ ವೈಯಕ್ತಿಕ ನಿರ್ಧಾರ ಎಂದು ಭಾವಿಸುವದಿಲ್ಲ. ಬದಲಿಗೆ ಆತನಲ್ಲಿ ಮೂಲಭೂತವಾದವು ಇನ್ನೂ ಇದೆ ಎಂದು ಭಾವಿಸಲಾಗುತ್ತದೆ. ಕಾಲೇಜಿನ ಹಾಸ್ಟೇಲಲ್ಲಿ ಗೋಮಾಂಸ ಬೇಡವೆಂದು ಹಿಂದೂ ವಿದ್ಯಾರ್ಥಿಗಳು ಹೇಳಿದರೆ ಅದು ಮೂಲಭೂತವಾಗುತ್ತದೆ. ಹಂದಿ ಮಾಂಸ ಬೇಡವೆಂದು ಹೇಳಿದರೆ, ಅಲ್ಪಸಂಖ್ಯಾತರ ಭಾವನೆಗಳಿಗೆ ಕೊಡುವ ಗೌರವವಾಗುತ್ತದೆ. ಏಕೆ ಹೀಗೆ ಎಂಬದಕ್ಕೆ ಯಾವುದೇ ಉತ್ತರವಿಲ್ಲ. ಹೊಸದಾಗಿ ಮುಸ್ಲಿಮನಾದವನು ಆಕಳನ್ನು ತಿನ್ನುವದರಲ್ಲಿ ಸ್ವಲ್ಪವಾದರೂ ಅರ್ಥವಿದೆ. ಹೊಸದಾಗಿ ಪ್ರಗತಿಪರನಾದವನು ತನ್ನ ಪ್ರಗತಿಪರತೆಯನ್ನು ತೋರಿಸಲು ಆಕಳನ್ನು ತಿನ್ನುವಂಥಾದ್ದೇನಿದೆ?
ಅಮೇರಿಕದ ಮೇಲೆ ಓಸಾಮಾ ಭಯೋತ್ಪಾದಕ ದಾಳಿಯನ್ನು ಮಾಡಿದ್ದು ಸರಿಯೇ ಎಂದು ಇಸ್ಲಾಮಿಕ್ ಸಂಘಟನೆಗಳಿಗೆ ಕೇಳಿದರೆ, ಅಮಾಯಕರ ಮೇಲೆ ನಡೆಯುವ ಎಲ್ಲ ದಾಳಿಗಳೂ ಖಂಡನಾರ್ಹವಾಗಿವೆ ಎಂದು ಕುರಾನಿನ ವಾಕ್ಯವನ್ನೇ ಮುಂದಿಟ್ಟುಕೊಂಡು ಹೇಳಿ, ನಂತರ ಮುಂದುವರೆದು, ಮಧ್ಯ ಏಷ್ಯಾದ ಮುಸ್ಲಿಮರ ಮೇಲೆ ಅಮೇರಿಕಾ ನಡೆಸಿದ ಅನ್ಯಾಯಗಳನ್ನು ಪ್ರಸ್ತಾಪಿಸಿ ಪರೋಕ್ಷವಾಗಿ ಆ ಭಯೋತ್ಪಾದಕ ದಾಳಿಯನ್ನು ಸಮರ್ಥಿಸಿಕೊಳ್ಳುತ್ತಾರೆ. ಮಧ್ಯ ಏಷ್ಯಾದಲ್ಲಿರುವ ಅಪಾರ ತೈಲ ನಿಕ್ಷೇಪಗಳನ್ನು ಹೊಂದಬೇಕೆಂಬ ಹುನ್ನಾರದಿಂದ ಪಶ್ಚಿಮದ ದೇಶಗಳು ಕುರಾನಿನಲ್ಲಿ ಹಿಂಸಾ ಪ್ರಚೋದಕದಂತೆ ಕಾಣುವ ಕೆಲವು ವಾಕ್ಯಗಳನ್ನು ಬೇಕೆಂದೇ ತಪ್ಪಾಗಿ ವ್ಯಾಖ್ಯಾನಿಸಿ, ಭಯೋತ್ಪಾದಕ ಸಂಘಟನೆಗಳನ್ನು ಸೃಷ್ಟಿಸಿ, ಯುದ್ಧ ಸಾಮಗ್ರಿಗಳನ್ನು ಪೂರೈಸುತ್ತಿವೆ ಎನ್ನುವದು ಇಸ್ಲಾಮಿಕ್ ಸಂಘಟನೆಗಳ ಆರೋಪ.
ನಮ್ಮ ಬುದ್ಧಿಜೀವಿಗಳು ಮಧ್ಯ ಏಷ್ಯಾದಲ್ಲಿನ ಹಿಂಸೆಯ ಕುರಿತು ಬರೆಯ ಹೊರಟರೆ ಅದು ಇದಕ್ಕಿಂತ ಭಿನ್ನವಾಗೇನೂ ಇರುವದಿಲ್ಲ. ಇತ್ತೀಚೆಗಷ್ಟೇ ನಾಗರಾಜರು ತಮ್ಮ ಲೇಖನವೊಂದರಲ್ಲಿ, ಭಾರತದಲ್ಲಿ ಹಿಂದೂ ಮೂಲಭೂತವಾದದ ಬೆಳವಣಿಗೆಗೆ ಆರ್.ಎಸ್.ಎಸ್. ಕಾರಣವೆಂದು ಬರೆದು ನಂತರ, ಮಧ್ಯ ಏಷ್ಯಾದಲ್ಲಿ ಬೆಳೆಯುತ್ತಿರುವ ಮುಸ್ಲಿಂ ಮೂಲಭೂತವಾದಕ್ಕೆ ಅಲ್ಲಿರುವ ಪೆಟ್ರೋಲ್ ನಿಕ್ಷೇಪದ ಮೇಲೆ ಕಣ್ಣಿಟ್ಟಿರುವ ಪಾಶ್ಚಿಮಾತ್ಯ ದೇಶಗಳಂಥ ಹೊರಗಿನ ಶಕ್ತಿಯೇ ಕಾರಣ ಎಂದು ಜಾಕೀರನಂತೆಯೇ ಬರೆದರು. ಆದರೆ 1950ರ ನಂತರ ಮಧ್ಯ ಏಷ್ಯಾದಲ್ಲಿ ಕ್ರಿಶ್ಚಿಯನ್ನರು ಬಹುಸಂಖ್ಯಾತರಾಗಿದ್ದಾಗ ಪ್ರಜಾಪ್ರಭುತ್ವವು ಚೆನ್ನಾಗಿ ಕೆಲಸ ಮಾಡುತ್ತಿತ್ತು. ಆದರೆ ಇಸ್ಲಾಂ ಮೂಲಭೂತವಾದಿಗಳು ಹೆಚ್ಚಾದಂತೆ ಆ ದೇಶಗಳು ನರಕವಾಗಿ ಮಾರ್ಪಟ್ಟವು. ಪಾಶ್ಚಿಮಾತ್ಯ ದೇಶಗಳೇ ಹುನ್ನಾರ ಹೂಡಿದವು ಎಂದೇ ಒಂದು ಕ್ಷಣ ಭಾವಿಸಿದರೂ, ಆ ದೇಶದ ಜನರೇಕೆ ಮೂಲಭೂತವಾದವನ್ನು ಬೆಳೆಸಿಕೊಂಡರು ಎಂಬುದನ್ನು ಅವರು ಉತ್ತರಿಸುವದಿಲ್ಲ.
ಕೆಲವು ಮುಸ್ಲಿಮರನ್ನು ಶಂಕಿತ ಭಯೋತ್ಪಾದಕರೆಂದು ಸೆರೆ ಹಿಡಿದಾಗ ಇಲ್ಲವೇ ಎನ್ಕೌಂಟರ್ ಮಾಡಿದಾಗ ಈ ಮುಸ್ಲಿಂ ಸಂಘಟನೆಗಳು ಸರಕಾರಗಳ ಹುನ್ನಾರವೆಂದು ಭಾವಿಸುತ್ತವೆ. ಹಲವಾರು ವರ್ಷಗಳಿಂದ ಸೆರೆಮನೆಯಲ್ಲಿದ್ದು ಸಾಕ್ಷ್ಯಾಧಾರಗಳಿಲ್ಲದೇ ನಿರಪರಾಧಿಯಾಗಿ ಬಿಡುಗಡೆಗೊಂಡ ಮುಸ್ಲಿಮರ ಬಗ್ಗೆ ಈ ಪ್ರಚಾರಕರು ಬಹಳ ಅನುಕಂಪವನ್ನು ತೋರಿಸುತ್ತಾರೆ. ಕೋಮು ಗಲಭೆಗಳ ಸಂದರ್ಭದಲ್ಲಿ ಹಿಂದೂ ಸಂಘಟನೆಗಳ ಯುವಕರನ್ನು ಬಂಧಿಸಿ ನಂತರ ಸಾಕ್ಷ್ಯಾಧಾರಗಳಿಲ್ಲದೇ ಬಿಡುಗಡೆಯಾದಾಗ, ನ್ಯಾಯಾಲಯವು ಒತ್ತಡದಲ್ಲಿ ಕೆಲಸ ಮಾಡುತ್ತಿದೆ ಎಂದು ಭಾವಿಸುತ್ತಾರೆ. ಶಿಕ್ಷೆಗೆ ಗುರಿಯಾದ ಮುಸ್ಲಿಮರನ್ನು ಬಿಡಿಸಿಕೊಳ್ಳಲು ಪ್ರಯತ್ನಿಸುತ್ತದೆ. ಅವರ ಮೇಲೆ ಷಡ್ಯಂತ್ರ ನಡೆದಿದೆ ಅಥವಾ ಅವರಿಗೆ ತಪ್ಪು ತಿಳುವಳಿಕೆ ನೀಡಿ ದಾರಿ ತಪ್ಪಿಸಲಾಗಿದೆ ಎನ್ನುತ್ತವೆ. ಈಗಿನ ನ್ಯಾಯಾಲಯ ವ್ಯವಸ್ಥೆಯನ್ನು ಇಸ್ಲಾಮಿಕ್ ಸಂಘಟನೆಗಳು ಶ್ರೇಷ್ಠವೆಂದು ಒಪ್ಪದಿರುವದೇ ಈ ವಾದಗಳಿಗೆ ಕಾರಣವಾಗಿವೆ.
ಭಯೋತ್ಪಾದನೆಯ ಪ್ರಕರಣವೊಂದರಲ್ಲಿ ಅರೆಸ್ಟ್ ಆಗಿದ್ದ ಕೆಲವು ಮುಸ್ಲಿಮರು, ಹಲವಾರು ವರ್ಷಗಳ ಕಾಲ ಸೆರೆಮನೆಯಲ್ಲಿದ್ದು ಕೊನೆಗೆ ಯಾವುದೇ ಸಾಕ್ಷ್ಯಾಧಾರಗಳಿಲ್ಲದೇ ಇದ್ದುದರಿಂದ ಹೊರಬಂದರು. ಆಗ ಅವರ ಬಗ್ಗೆ ಬುದ್ಧಿಜೀವಿಗಳು ಮುಸ್ಲಿಂ ಸಂಘಟನೆಗಳಂತೆಯೇ ಅಪಾರ ಕನಿಕರ ತೋರಿದರು. ಆದರೆ ಪ್ರಜ್ಞಾ ಸಿಂಗ್ ಯಾವುದೇ ಆರೋಪವಿಲ್ಲದೇ ಹೊರಬಂದಾಗ, ನ್ಯಾಯಾಂಗವನ್ನು ಗೌರವಿಸುವ, ಅದರ ಸ್ವಾತಂತ್ರ್ಯವನ್ನು ನಂಬುವ ಬುದ್ಧಿಜೀವಿಗಳು ಅವರಿಗೂ ಕನಿಕರ ತೋರಬೇಕಿತ್ತು. ಆದರೆ ಅವರು ಮುಸ್ಲಿಂ ಸಂಘಟನೆಗಳಂತೆಯೇ ಹುನ್ನಾರವೆಂದು ಭಾವಿಸಿದರು. ಮುಸ್ಲಿಂ ಸಂಘಟನೆಗಳೇನೋ ಶರಿಯಾವನ್ನೇ ಶ್ರೇಷ್ಠವೆಂದು ನಂಬುವದರಿಂದ, ಇಲ್ಲಿನ ನ್ಯಾಯಾಲಯಗಳನ್ನು ಒಪ್ಪುವದಿಲ್ಲ. ಆದರೆ ಬುದ್ಧಿಜೀವಿಗಳೇಕೆ ನ್ಯಾಯಾಲಯಗಳು ಒತ್ತಡದಲ್ಲಿ ಕೆಲಸ ಮಾಡಿದೆಯೆಂದು ಭಾವಿಸಬೇಕು? ಮುಸ್ಲಿಂ ಭಯೋತ್ಪಾದಕನೊಬ್ಬನಿಗೆ ಮರಣದಂಡನೆಯಾದರೆ ಮುಸ್ಲಿಂ ಸಂಘಟನೆಗಳು ಮರ್ಸಿ ಪಿಟಿಷನ್ ಹಾಕುತ್ತವೆ. ಆತ ತಪ್ಪು ಉಪದೇಶಗಳಿಗೆ ಬಲಿಯಾಗಿ ಭಯೋತ್ಪಾದಕನಾದ ಎನ್ನುತ್ತವೆ. ಬುದ್ಧಿಜೀವಿಗಳೇಕೆ ಅಪರಾತ್ರಿ ನ್ಯಾಯಾಧೀಶರ ಮನೆಯ ಬಾಗಿಲು ಬಡಿದು ಪ್ರಾಣಭಿಕ್ಷೆ ಬೇಡುತ್ತಾರೆ? ಇದು ಅರ್ಥವಾಗುವದಿಲ್ಲ.
ಇನ್ನು ಹಬ್ಬಗಳ ವಿಷಯಕ್ಕೆ ಬರೋಣ. ಇಸ್ಲಾಮಿಕ್ ಸಂಘಟನೆಗಳು, ಮುಸ್ಲಿಮರು ಉರುಸ್, ಗೋರಿಯ ಪೂಜೆ ಮಾಡುವದನ್ನು, ಸಾರ್ವಜನಿಕ ಗಣೇಶೋತ್ಸವ, ದುರ್ಗಾ ಪೂಜೆಯಲ್ಲಿ ಭಾಗವಹಿಸುವದನ್ನು ಸಮರ್ಥಿಸುವದಿಲ್ಲ. ಏಕೆಂದರೆ ಈ ಆಚರಣೆಗಳನ್ನು ಸುಳ್ಳು ರಿಲಿಜನ್ನಿನ ಆಚರಣೆಗಳ ಅನುಕರಣೆಯೆಂದು ಆ ಸಂಘಟನೆಗಳು ಭಾವಿಸುತ್ತವೆ. ಈ ಆಚರಣೆಗಳು ಕುರಾನಿಗೆ ವಿರುದ್ಧವೆಂದು ವ್ಯಾಖ್ಯಾನಿಸುತ್ತವೆ. ಹಾಗೆಯೇ ರಂಜಾನಿನ ಉಪವಾಸ, ಇಫ್ತಿಯಾರ್ ಕೂಟಗಳನ್ನು ಪ್ರೋತ್ಸಾಹಿಸುತ್ತವೆ. ಇಸ್ಲಾಮಿಕ್ ಸಂಘಟನೆಗಳ ಈ ಸ್ವಭಾವವನ್ನು ಅರ್ಥೈಸಿಕೊಳ್ಳುವದು ಕಷ್ಟವಲ್ಲ. ಆದರೆ ಹಿಂದೂ ಹಬ್ಬ ಹಾಗೂ ಮುಸ್ಲಿಂ ಹಬ್ಬಗಳನ್ನು ಬುದ್ಧಿಜೀವಿಗಳು ಹೇಗೆ ನೋಡುತ್ತಾರೆ? ಇತ್ತೀಚೆಗೆ ರಂಜಾನ್ ಉಪವಾಸಕ್ಕೆ ಶುಭಾಶಯಗಳನ್ನು ಟ್ವೀಟಿಸಿದ ಬರ್ಖಾ ದತ್, ಕರವಾ ಚೌತ್ ಹಬ್ಬವನ್ನು ಪೆಟ್ರಿಯಾರ್ಕಿ ಎಂದು ಜರೆದರು. ಗಣಪತಿ ಹಬ್ಬಕ್ಕೆ ಚಂದಾ ಎತ್ತಲು ಬಂದ ಹುಡುಗರನ್ನು ಗೌರಿ ಲಂಕೇಶ ಹಿಗ್ಗಾಮುಗ್ಗಾ ಪ್ರಶ್ನಿಸಿ ಅವರ ಆಚರಣೆಯನ್ನು ಟೀಕಿಸಿದ್ದರು. ಬಕ್ರೀದ್ ಹಬ್ಬದಲ್ಲಿ ನಡೆಯುವ ಪ್ರಾಣಿಬಲಿಯು ಎಂದಿಗೂ ಬುದ್ಧಿಜೀವಿಗಳಿಗೆ ತಪ್ಪಾಗಿ ಕಂಡಿಲ್ಲ. ಆದರೆ ಮತ್ತೂರಿನ ಸೋಮಯಾಗದಲ್ಲಿ ಕುರಿಯೊಂದು ಬಲಿಯಾಗಿದೆ ಎಂಬ ಸುದ್ದಿ ಬಂದಾಗ ಈ ಬುದ್ಧಿಜೀವಿಗಳು ತೀವ್ರವಾಗಿ ಪ್ರತಿಭಟಿಸಿದ್ದರು. ಮುಸ್ಲಿಮರೊಂದಿಗೆ ಇಫ್ತಿಯಾರ್ ಕೂಟ ಏರ್ಪಡಿಸುವದು ಹಾಗೂ ಕೋಮು ಸೌಹಾರ್ದ ವೇದಿಕೆಗಳಲ್ಲಿ ಮುಸ್ಲಿಂ ಮೌಲ್ವಿಗಳ ಮುಂದೆ ಈ ದೇಶದಲ್ಲಿ ಸೆಕ್ಯುಲರಿಸಂ ಅಪಾಯದಲ್ಲಿದೆ ಎಂದು ಅಲವತ್ತುಕೊಳ್ಳುವದು ಈ ಬುದ್ಧಿಜೀವಿಗಳಿಗೆ ಹೊಸತೇನಲ್ಲ. ಆದರೆ ಎಲ್ಲಿಯಾದರೂ ಬುದ್ಧಿಜೀವಿಗಳು ಹಿಂದೂಗಳೊಂದಿಗೆ ವೈಕುಂಠ ಏಕಾದಶಿಯನ್ನೋ, ಗಣೇಶೋತ್ಸವವನ್ನೋ ಆಚರಿಸಿದ ಉದಾಹರಣೆಗಳಿವೆಯೇ? ಅಥವಾ ಮಠಾಧೀಶರ ಮುಂದೆ ಈ ದೇಶದಲ್ಲಿ ಸೆಕ್ಯುಲರಿಸಂ ಅಪಾಯದಲ್ಲಿದೆ ಎಂದು ಹೇಳಿದ ಉದಾಹರಣೆಯಿದೆಯೇ? ಏಕೆ ಈ ವ್ಯತ್ಯಾಸ? ಮುಸ್ಲಿಂ ಹಬ್ಬಗಳು ಮುಸ್ಲಿಮರ ನಂಬಿಕೆಯೆಂದು ಭಾವಿಸುವ ಬುದ್ಧಿಜೀವಿಗಳು, ಹಿಂದೂ ಹಬ್ಬಗಳು ಮೂಲತಃ ಬ್ರಾಹ್ಮಣರು ನಡೆಸಿದರೆನ್ನಲಾಗುವ ಶೋಷಣೆಯನ್ನೇ ಉದ್ದೇಶವಾಗಿಟ್ಟುಕೊಂಡಿವೆ ಎಂದೇಕೆ ತಿಳಿಯುತ್ತಿದ್ದಾರೆ? ಎರಡೂ ಪಂಗಡಗಳ ಐಡಿಯಾಲಜಿಗಳು ಬೇರೆ ಬೇರೆಯಾಗಿದ್ದರೂ, ಕಾಕತಾಳಿಯವೋ ಎಂಬಂತೆ ಒಂದೇ ರೀತಿಯ ಫಲಶ್ರುತಿಗಳನ್ನು ನೀಡುತ್ತಿವೆ. ಹೀಗಾಗಿ ಕಾಂಗ್ರೆಸ್ಸಿನ ವೈಚಾರಿಕತೆ ಎನ್ನುವದು ರಿಲಿಜನ್ನಿನ ಸ್ವರೂಪವನ್ನೇ ಹೊಂದಿದೆ. ಅಲ್ಪಸಂಖ್ಯಾತರಲ್ಲೇ ಹೆಚ್ಚಿರುವ ಮುಸ್ಲಿಮರನ್ನು ದೃಷ್ಟಿಯಲ್ಲಿಟ್ಟುಕೊಂಡು ತನ್ನ ವೈಚಾರಿಕತೆಯನ್ನು ರೂಪಿಸಿಕೊಂಡಿರುವದರಿಂದ ಅದರ ವೈಚಾರಿಕತೆಯು ಇಸ್ಲಾಮಿನ ಸೆಕ್ಯುಲರ್ ರೂಪವಾಗಿದೆ ಎನ್ನಬಹುದು.
ಈ ಕಾರಣದಿಂದಾಗಿ ಸೋನಿಯಾ ಗಾಂಧಿಗೆ ಮುಸ್ಲಿಂ ಮೌಲ್ವಿಗಳ ಮುಂದೆ ಸೆಕ್ಯುಲರ್ ಓಟುಗಳು ವಿಭಜನೆಯಾಗದಂತೆ ನೋಡಿಕೊಳ್ಳಿ ಎಂದು ಬೇಡಿಕೊಳ್ಳುವದು ತಪ್ಪೆಂದು ಕಾಣುವದಿಲ್ಲ. ವರದಕ್ಷಿಣೆ ಹಾಗೂ ಮಡೆಸ್ನಾನವನ್ನು ನಿಷೇಧಿಸುವಲ್ಲಿ ಕಾಂಗ್ರೆಸ್ ತೋರಿದ ಕಾಳಜಿ ಹಲಾಲಾ ಹಾಗೂ ಖತ್ನಾದ ವಿಷಯದಲ್ಲಿ ಇರಲೇ ಇಲ್ಲ. ಬಿಜೆಪಿಯ ತ್ರಿವಳಿ ತಲಾಖ್ ನಿಷೇಧ ಹಾಗೂ ಏಕರೂಪ ನಾಗರಿಕ ಸಂಹಿತೆಯ ಅನುಷ್ಠಾನವನ್ನು ಇಸ್ಲಾಮಿಕ್ ಸಂಘಟನೆಗಳ ಜೊತೆ ಸೇರಿಕೊಂಡು ಸಂಪೂರ್ಣವಾಗಿ ವಿರೋಧಿಸುತ್ತಾರೆ. ಫತ್ವಾಗಳ ವಿರುದ್ಧ ಬುದ್ಧಿಜೀವಿಗಳು ಸೊಲ್ಲೆತ್ತದಿರುವದು ಬಹುಶಃ ಇದೇ ಕಾರಣಕ್ಕಿರಬಹುದು. ಮುಸ್ಲಿಮರಲ್ಲಿರುವ ಜಾತಿಗಳಿಗೆ, ಹಾಗೂ ಕುರಾನುಬಾಹಿರ ಆಚರಣೆಗಳಿಗೆ ಪುರೋಹಿತಶಾಹಿಯೇ ಕಾರಣವೆಂದು ಹೇಳಲು ಕಾಂಗ್ರೆಸ್ಸಿಗೆ ಯಾವುದೇ ತೊಂದರೆಯಾಗಲಿಲ್ಲ. ಹೆಚ್ಚು ಮುಸ್ಲಿಮರಿರುವ ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಕಾಶ್ಮೀರದಂಥ ಪ್ರದೇಶಗಳು ಇಸ್ಲಾಮಿಕ ರಾಜ್ಯ/ರಾಷ್ಟ್ರವಾಗುವದನ್ನು ವಿರೋಧಿಸದ ಕಾಂಗ್ರೆಸ್, ಹಿಂದೂಗಳು ಹೆಚ್ಚಿರುವ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿಸಬೇಕೆಂಬ ಹಿಂದೂ ಸಂಘಟನೆಗಳ ಅಭಿಪ್ರಾಯವನ್ನು ಸ್ಪಷ್ಟವಾಗಿ ನಿರಾಕರಿಸುತ್ತದೆ. ಯುನಿಫಾರ್ಮ್ ಧರಿಸಿ ಬರಲು ಒಪ್ಪದ ಮುಸ್ಲಿಂ ವಿದ್ಯಾರ್ಥಿನಿಯರನ್ನು ಸಹಿಸಿಕೊಳ್ಳುವ ಬುದ್ಧಿಜೀವಿಗಳು, ಕೇಸರಿ ಶಾಲು ಹೊದ್ದು ಬರುವ ಹಿಂದೂ ಹುಡುಗಿಯರ ನಡತೆಯನ್ನು ಸಹಿಸಿಕೊಳ್ಳಲಿಲ್ಲ.
ಇದೇ ಕಾರಣದಿಂದಾಗಿ ಅರ್ನಬ್ ಗೋಸ್ವಾಮಿ ಹಾಗೂ ಇತ್ತೀಚಿನ ರಾಜಕೀಯ ವಿಶ್ಲೇಷಕರು ಕಾಂಗ್ರೆಸ್ಸಿನ ಸೆಕ್ಯುಲರಿಸಮ್ಮನ್ನು ಸ್ಯೂಡೋ ಸೆಕ್ಯುಲರಿಸಂ ಎಂದು ವ್ಯಾಖ್ಯಾನಿಸುತ್ತಾರೆ. ಜನಸಾಮಾನ್ಯರಿಗೆ ಇದು ಅಲ್ಪಸಂಖ್ಯಾತರ ಅತಿಯಾದ ಓಲೈಕೆಯಾಗಿ ಕಂಡುಬರುತ್ತದೆ. ಕಾಂಗ್ರೆಸ್ಸಿನ ಈ ವೈಚಾರಿಕತೆಯಿಂದಾಗಿ ಸೆಕ್ಯುಲರಿಸಂ ಎಂಬ ಶಬ್ದವು ಅತಿ ಹೆಚ್ಚು ಅಪಹಾಸ್ಯಕ್ಕೆ ಒಳಗಾಗಿದೆ. ಮುಂದೆ ನಡೆಯಲಿರುವ ಚುನಾವಣೆಗಳನ್ನು ಗಂಭೀರವಾಗಿ ಪರಿಗಣಿಸಬೇಕಿರುವ ರಾಜ್ಯ ಹಾಗೂ ಕೇಂದ್ರ ಬಿಜೆಪಿ ನಾಯಕರು ಕಾಂಗ್ರೆಸ್ಸಿನ ಸೆಕ್ಯುಲರಿಸಂನ ನಿಜ ಸ್ವರೂಪವನ್ನು ಜನರೆದುರಿಗೆ ತೆರೆದಿಡುವ ಕೆಲಸ ಮಾಡಿದರೆ, ಖಂಡಿತವಾಗಿಯೂ ಕಾಂಗ್ರೆಸ್ ಮುಕ್ತ ಭಾರತ ಶೀಘ್ರದಲ್ಲೇ ಈಡೇರಲಿದೆ. ಕಾಂಗ್ರೆಸ್ಸಿಗೆ ಯಾವ ಸರ್ಜರಿ ಮಾಡಿದರೆ ಪುನಃ ಚೇತರಿಸಿಕೊಳ್ಳಬಹುದು ಎಂದು ಗಂಭೀರವಾಗಿ ಆಲೋಚಿಸುತ್ತಿರುವ ಕಾಂಗ್ರೆಸ್ ನಾಯಕರು ತಮ್ಮ ಸೆಕ್ಯುಲರಿಂನ ಸ್ವರೂಪವನ್ನು ಬದಲಾಯಿಸಿಕೊಳ್ಳುವ ಅಗತ್ಯತೆಯಿದೆ. ಹಿಂದೂಗಳ ಸಮಾಜವನ್ನು ಯಾವುದೇ ಪೂರ್ವಾಗ್ರಹವಿಲ್ಲದೇ, ಅಧ್ಯಯನ ಮಾಡುವ ಅವಶ್ಯಕತೆ ಕಾಂಗ್ರೆಸ್ಸಿಗೆ ಹಿಂದೆಂದಿಗಿಂತಲೂ ಇದೆ.