ನಮ್ಮೂರ ಹಬ್ಬ : ತಿಂಗಳು ಮಾಮನ ಹಬ್ಬ
– ಶಾಂತಮ್ಮ ಕೋಡಯ್ಯ
ನಮ್ಮೂರ ಹಬ್ಬ ಪ್ರಬಂಧ ಸ್ಪರ್ಧೆಯಲ್ಲಿ ನಾಲ್ಕನೇ ಸ್ಥಾನ ಪಡೆದ ಲೇಖನ
ಪೀಠಿಕೆ: ಹಬ್ಬಗಳು ಗ್ರಾಮದ ಅವಿಭಾಜ್ಯ ಅಂಗಗಳು ಹಳ್ಳಿಗರಿಗೆ ಹಬ್ಬಗಳೇ ಜೀವಾಳ. ಹಬ್ಬಗಳೇ ಮಾದ್ಯಮಗಳು, ಮನೋರಂಜನೆಗಳು.. ನಮ್ಮ ಪೂರ್ವಜರಿಂದ ಮುಂದಿನ ಪೀಳಿಗೆಗೆ ಕೊಡುಗೆಯಾಗಿ ಪರಿಚಯಿಸುವ ನಮ್ಮ ಜೀವನದಲ್ಲಿ ಸುಂದರ ಅನುಭವಗಳು ಮತ್ತು ಬಾಲ್ಯ, ಯೌವನ, ಮುಪ್ಪು, ಪ್ರೇಮ ಮುಂತಾದವುಗಳ ಸಂಗಮ. ಹಬ್ಬಗಳು ಹಳ್ಳಿಗರ ಪ್ರತಿಷ್ಠೆ ಕೂಡ ಹೌದು. ಎಲ್ಲ ಜಾತಿಯವರು ಬೆರೆತು, ಭೇದ ಮರೆತು ಒಂದಾಗುವ ಪರಿ ಅದ್ಭುತ. ನಮ್ಮ ಹಿರಿಯರ ಹಾಡು, ಹಸೆ, ಬೈಗುಳ, ಬೆಡಗು, ಬಿನ್ನಾಣ, ಕಾರ್ಯ ವೈಖರಿ ಎಲ್ಲ ಸಂಸ್ಕೃತಿಯನ್ನ ಹೊಂದಿ ಬೆಳೆಯಲು ಸಹಾಕಾರಿ ಈ ತಿಂಗಳಮಾಮನ ಹಬ್ಬ.
ವಿಷಯ ನಿರೂಪಣೆ:
ನನ್ನೂರು ಅತ್ನಿಗ್ರಾಮ ಅರಕಲಗೂಡು ತಾಲ್ಲೂಕು ಹಾಸನಜಿಲ್ಲೆ. ಗೊರೂರು ಹೇಮೆಯ ಬಲಭಾಗದ ಹೊಳೆಯ ದಂಡೆಯ ಮೇಲೆ ನನ್ನೂರು ಮಲ್ಲಿಗೆಯ ಬಳ್ಳಿಯಂತೆ ಹಬ್ಬಿ ಸುತ್ತ ಮುತ್ತಲಿನ ಗ್ರಾಮಗಳಿಗೆ ಅದರ ಕಂಪನ್ನು ಸೂಸಿದೆ. ಇಲ್ಲಿ ಎಲ್ಲ ಜಾತಿಯ ಜನರೂ ಇದ್ದಾರೆ. ಇವರ ಮೂಲ ಕಸುಬು ವ್ಯವಸಾಯ ರಾಗಿ, ಬತ್ತ, ನವಣೆ, ಸಜ್ಜೆ, ಜೋಳ, ದ್ವಿದಳ ಬೀಜಗಳು ಮತ್ತು ಆಲೂಗೆಡ್ಡೆ, ಕಬ್ಬು, ಶುಂಠಿ, ನೆಲಗಡಲೆ ಜೊತೆಗೆ ಎಣ್ಣೆ ಕಾಳುಗಳಾದ ಹುಚ್ಚೇಳ್ಳು, ಪುಟ್ಟೇಳ್ಳು, ಸೂರ್ಯಕಾಂತಿ ಹರಳುಬೀಜ ಮುಂತಾದ ಬೆಳೆಗಳಿಂದ ಸಮೃದ್ಧವಾದ ಹಳ್ಳಿ. ಎತ್ತ ನೋಡಿದರತ್ತ ನೀರು, ಹಾವು ಹರಿದಂತೆ ರಸ್ತೆ, ಇಕ್ಕೆಲಗಳಲ್ಲಿ ತೆಂಗಿನ ತೋಟ, ಬಾಳೆ ಗಿಡ, ಚಕ್ಕೋತ, ಕಿತ್ತಳೆ, ಮೂಸುಂಬೆ, ಸೀಬೆ, ಪೇರಲಹಣ್ಣು, ಮಾವು, ನೇರಳೆ, ಪಪ್ಪಾಯ, ಕಾರೆ ಬೋರೆ ಹಣ್ಣುಗಳಿಂದ ಕೂಡಿದ ಮರಸಂಪತ್ತು. ಹಾಗೆ ವಿವಿಧ ರೀತಿಯ ಹೂವುಗಳಿಂದ ಕಂಗೊಳಿಸುವ ನನ್ನ ಊರು ಭೂಮಿಯ ಮೇಲಿನ ಸ್ವರ್ಗ. ಊರಂಚಿನ ಚಿಕ್ಕೇರೆಯಲ್ಲಿ ಹಕ್ಕಿಗಳ ಕಲರವ. ಮೀನುಗಳ ಮಿಂಚಾಟ, ಬೆಳ್ಳಕ್ಕಿಗಳ ಹಿಂಡು.. ಅದಕ್ಕೊಂದು ಮೇಲ್ಚವು ಮಲ್ಲಿಗೆಯ ಕಂಪು.. ಹೊಳೆದಂಡೆಯ ತೆಂಗಿನ ಮರಗಳು ಪಡುವಣದ ಗಾಳಿಗೆ ಬೀಸಿ ಭಾಗಿ ಬಳುಕುವ ವಯ್ಯಾರ ಯಾವ ನೃತ್ಯಗಾತಿಗೂ ಬರದೇನೋ.. ನೋಡುಗರ ಕಣ್ಮನ ಸೆಳೆಯುವ ನಮ್ಮೂರಲ್ಲಿ ಹಬ್ಬಗಳೆಂದರೆ ಸುಗ್ಗಿ. ವರ್ಷವೆಲ್ಲ ದುಡಿದು ದವಸ-ಧಾನ್ಯಗಳು ಮನೆಯ ಕಣಜ ಸೇರುತ್ತವೆ.. ದನ-ಕರು ಪ್ರಾಣಿ ಪಕ್ಷಿಗಳಿಗೆ ಮೇವು ಶೇಖರಣೆ ಆಗುತ್ತದೆ.. ಹೊಲ ಗದ್ದೆ ಕೆಲಸಗಳಿಗೆ ತಾತ್ಕಾಲಿಕ ಬಿಡುವು ದೊರೆತು ವರ್ಷವಿಡೀ ದುಡಿದ ಜೀವಕ್ಕೆ ಮೈದಣಿವಾರಿಸಿಕೊಳ್ಳಲು, ಮನೋರಂಜನೆ ಪಡೆಯಲು ಸೂಕ್ತ ಸಮಯ ಈ ಬೇಸಿಗೆ. ನಮ್ಮ ಹಳ್ಳಿಯಲ್ಲಿ ಎಲ್ಲ ಹಬ್ಬಗಳಿಗಿಂತ ವಿಶೇಷ ಮತ್ತು ವಿಶಿಷ್ಟ ಸಂಸ್ಕೃತಿಯ ಮೆರಗು ಸೂಸುವ ಹಬ್ಬವೆಂದರೆ ತಿಂಗಳಮಾವನ ಹಬ್ಬ.
ಬೇಸಿಗೆಯ ಮಾರ್ಚ್ ಎಪ್ರಿಲ್ ಮಾಹೆಯಲ್ಲಿ ಹೊಳೆನರಸೀಪುರದ ನರಸಿಂಹದೇವರ ಜಾತ್ರಮಹೋತ್ಸವದ ಹುಣ್ಣಿಮೆ ದಿನವೇ ನಮ್ಮೂರಲ್ಲಿ ತಿಂಗಳ ಮಾವನ ಹಬ್ಬ ಆಚರಿಸುತ್ತೇವೆ. ಇದರ ವಿಶೇಷವೆಂದರೆ ಬೆಳ್ಳಂಬೆಳಗು ಹಾಲುಚೆಲ್ಲಿದ ಚಂದಿರನ ಬೆಳಕು ಇಡೀ ಊರಿಗೆ ಊರನ್ನೇ ಜಗಮಗಿಸುವ, ಕಣ್ಣು ಕೊರೈಸುವ ವಿದ್ಯುತ್ ದೀಪಗಳನ್ನು ನಾಚಿಸುತ್ತದೆ. ಅಷ್ಟು ಪ್ರಖರವಾದ ಬೆಳಕಲ್ಲಿ ಈ ಹಬ್ಬ 15 ದಿನಗಳ ಕಾಲ ನಡೆಯುವುದೇ ವಿಶೇಷ. ಆ ಹಬ್ಬದಲ್ಲಿ ಒಂದು ವೈಶಿಷ್ಟ್ಯತೆ ಏನೆಂದರೆ ಗ್ರಾಮೀಣರ ಪ್ರಕಾರ “ತಿಂಗಳಮಾವನಿಗೆ ಮದುವೆ ಮಾಡಿಸುವುದು”. ಕಾರಣ ಕುಂತಿ ಎಂಬ ತಾಯಿಗೆ ಸೂರ್ಯ, ಚಂದ್ರ, ನಕ್ಷತ್ರಗಳು ಆಕೆಯ ಮಕ್ಕಳಂತೆ.. ಏಕೋ ಏನೋ ಚಂದ್ರನಿಗೆ ಮದುವೆ ಆಗಿರುವುದಿಲ್ಲವಂತೆ, ಹೇಗಾದರು ಮಾಡಿ ಚಂದ್ರನಿಗೆ ಮದುವೆ ಮಾಡಿ ದೇವರಗುಂಪಿಗೆ ಸೇರಿಸಬೇಕು.. ಇಲ್ಲದಿದ್ದರೆ ಅವನು ಆಸೆಗಳಿಂದ ವಂಚಿತನಾಗಿ ಭೂಲೋಕದಲ್ಲಿರುವ ನಮಗೆ ಕಷ್ಟ ಕೊಡುತ್ತಾನೆ, ಗ್ರಹಣಹಿಡಿಸುತ್ತಾನೆ.. ಮಕ್ಕಳು ಮರಿಗಳನ್ನು ಕಾಪಾಡಿಕೊಳ್ಳಬೇಕು, ತಿಂಗಳನನ್ನು ಸಂಪ್ರೀತಗೊಳಿಸಬೇಕು ಎಂಬುದೇ ಈ ಹಬ್ಬದ ವಿಶೇಷ. 15 ದಿನಗಳಿಂದ ನಡೆವ ಹಬ್ಬದಲ್ಲಿ ಎಲ್ಲ ಜಾತಿಯವರು ಅವರ ಸಾಮರ್ಥ್ಯನುಸಾರ ಅಕ್ಕಿ, ರಾಗಿ, ಜೋಳ, ನವಣೆ, ಸಜ್ಜೆ, ಗೋಧಿಯಿಂದ ತಯಾರಿಸಿದ ವಿವಿಧ ಬಗೆಯ ರೊಟ್ಟಿಗಳನ್ನು ತಂದು ಒಂದೆಡೆ ಹಾಕುತ್ತಾರೆ. ಇದನ್ನು ಇನ್ನೊಂದು ಹೆಸರಿನಲ್ಲಿ ರೊಟ್ಟಿಯ ಹಬ್ಬ ಎಂದು ಕರೆಯುತ್ತಾರೆ. ಚಂದ್ರನಿಗೆ ಹಾಡು ಹೇಳಿ ನೃತ್ಯ ಮಾಡಿ, ಪೂಜೆ ಮಾಡಿ ನೆರೆದಿದ್ದ ಎಲ್ಲ ಜನರಿಗೂ ಪ್ರಸಾದದಂತೆ ರೊಟ್ಟಿ ಹಂಚಿ ತಿನ್ನುತ್ತಾರೆ. ಇದು ಮಕ್ಕಳಿಗೆ ತುಂಬಾ ಖುಷಿ ಕೊಡುವ ಹಬ್ಬ..
ತಿಂಗಳ ಬೆಳಕಲ್ಲಿ ಕುಣಿದು ಕುಪ್ಪಳಿಸುವುದನ್ನೇ ನೋಡಿ ಆನಂದಿಸುವುದೇ ಒಂದು ದೊಡ್ಡ ಮನೋರಂಜನೆ. ಇನ್ನೂ ಬೇಸಿಗೆಯಾದ್ದರಿಂದ ವಿಪರೀತ ಸೆಕೆನೂ ಇರುವುದರಿಂದ ಎಲ್ಲರೂ ಮನೆಯ ಹೊರಗೆ ನಡೆಯುವ ಹಬ್ಬಕ್ಕೆ ಬಂದು ಸೇರುವುದರಿಂದ ಜನವೋ ಜನ. ಈ ಸಮಯದಲ್ಲಿ ಎಲ್ಲರ ಪ್ರತಿಭೆಯೂ ಹೊರ ಇಣುಕುತ್ತದೆ. ಅಷ್ಟೇ ಅಲ್ಲ ಕದ್ದು ಮುಚ್ಚಿ ಪ್ರೇಮಿಸುವ ಪ್ರೇಮಿಗಳಿಗೆ ಒಳಗೊಳಗೆ ಖುಷಿಯೋ ಖುಷಿ. ಅವರನ್ನು ಇವರು ನೋಡುತ್ತಾ ಇವರನ್ನು ಅವರು ನೋಡುತ್ತಾ ನಕ್ಕು ನಲಿಯುತ್ತ ಕಣ್ಸನ್ನೆಯಲ್ಲೇ ಎಲ್ಲವನ್ನು ಮಾತನಾಡುತ್ತ ಯಾವೂದೋ ನೆಪಮಾಡಿ ಹತ್ತಿರ ಬಂದು ಬಿಸಿಯುಸಿರಿನ ಪಿಸು ಮಾತೊಂದು ಕೇಳುವುದೇ ಕರ್ಣನಂದ, ಕಣ್ಣಿಗೆ ಹಬ್ಬ.. ಮಾತಿನ ಇಂಪು, ಕೆನ್ನೆಯರಂಗು, ಗಾಳಿಯತಂಪು, ಯೌವನದ ಕಾವು ಅವರನ್ನು ಕವಿಯಾಗಿಸುತ್ತದೆ. ಈ ಹಬ್ಬ ಮತ್ತೆ ಮತ್ತೆ ಬರಬಾರದೆ ಅನ್ನಿಸುತ್ತದೆ. ಕಣ್ಣು ಕಿತ್ತು ಮನೆಯೊಳಗೆ ಹೋಗಲು ಮನಸ್ಸೇ ಬರುವುದಿಲ್ಲ.. ನೆರೆ ಹೊರೆಯವರಿಗಂಜಿ ಆಸೆಗಳನ್ನು ಅದುಮಿಟ್ಟು ಭಾರವಾದ ಹೃದಯದಿಂದ ಮನೆಗೆ ಹೊಗಬೇಕಾದ ಅನಿವಾರ್ಯತೆ ಪ್ರೇಮಿಗಳಿಗಾದರೆ, ವಯೋವೃದ್ದರಿಗೆ ಬಯಲೇ ಆಲಯ.. ಸೆಕೆಯನ್ನು ತಡೆಯಲಾಗದೆ ಅಲ್ಲೇ ಮಲಗುತ್ತಾರೆ. 14ದಿನಗಳು ಕಳೆದ ಮೇಲೆ ಒಂದು ಸುಂದರ ಹುಣ್ಣಿಮೆಯ ದಿನ ತಿಂಗಳ ಮಾವನ ಮದುವೆ!ಅಂದು ಊರಲ್ಲೆಲ್ಲಾ ಡಂಗುರ ಹೊಡೆಸಿ ಸರಿಯಾಗಿ ರಾತ್ರಿ 8ಗಂಟೆಗೆ ಅತ್ನಿಯಮ್ಮನ ಗುಡಿಮುಂದೆ ಸೇರಲು ಸೂಚಿಸಲಾಗುತ್ತದೆ. ಒಂದು ಹುಡುಗಿಯನ್ನು ಮದುವಣಗಿತ್ತಿಯಂತೆ ಶೃಂಗಾರ ಮಾಡಲಾಗುತ್ತದೆ.. ಅದೇ ರೀತಿ ಒಂದು ಹುಡುಗನನ್ನು ಮದುವಣ್ಣನಂತೆ ಶೃಂಗಾರಿಸಿ ಬೇರೆ ಬೇರೆ ಬೀದಿಯಿಂದ ಗಂಡು ಹೆಣ್ಣಿನ್ನು ನೇರೆ ಹೊರಡಿಸಿ ಅತ್ನಿಯಮ್ಮನ ಗುಡಿ ಮುಂದೆ ಬಂದು ಸೇರುತ್ತಾರೆ. ನಿಜ..! ಮದುವೆಯಂತೆಯೆ ವಾದ್ಯ, ಹಾಡು, ಹಸೆ ಸೋಬಾನೆಪದ, ಕೋಲಾಟಗಳು ನಡೆಯುತ್ತೆ. ಒಂದು ವೇಳೆ ಹುಡುಗಿಯನ್ನು ಮದುವೆಗೆ ಕೂರಿಸಲು ಪೋಷಕರು ಒಪ್ಪಿಗೆ ನೀಡದಿದ್ದರೆ ಹುಡುಗನಿಗೆ ಮದುವಣಗಿತ್ತಿಯಂತೆ ಆಲಂಕಾರ ಮಾಡಲಾಗುತ್ತದೆ.
ಆ ಸಂದರ್ಭದಲ್ಲಿ ಹೀಗಿದೆ ಸೋಬಾನೆ ಪದ
ಹೆಣ್ಣಿನ ಕಡೆಯವರು : “ಒಂದೆಲೆ ಹೂವಾದೂ ಒಂದೆಲೆ ಕಾಯಾದೊ ನಮ್ಮ ಮಗಳಿಗೆ ಒಡವೆ ಎನು ತಂದಿರಿ”
ಗಂಡಿನ ಕಡೆಯವರು : ವಾಲೆ ಮೇಲೊಂದು ವಾಲೆ, ಜರತಾರಿ ಸೀರೆಯು ನಿಮ್ಮ ಮಗಳಿಗೆ ಸೂಳೆರ ಮೇಲೆ ಸುಪ್ಫತ್ತಿಗೆ, ಸೂಳೆರ ಮೇಲೆ ಸುಪ್ಫತ್ತಿಗೆ ನಿಮ್ಮ ಮಗಳಿಗೆ ಅಂಬಾಲ ಮೇಲೆ ಕಂಬಾಲ ಬಿದ್ದು ಏಳು ಸುತ್ತಿನ ಕಾಲುಂಗುರ ಧರಿಸಿ ಚದುರಂಗ ನೋಡೆ ಅತ್ತಿಗೆ”
ಮತ್ತೊಂದು ಸೋಬಾನೆ ಪದದಲ್ಲಿ “ಚಂದ್ರನಾ ನೋಡಬನ್ನಿ ಸೆರಗಿನ ಮುತೈದೆರ ಮದುವೆಗೆ ಸಿದ್ಧಗೊಂಡವನೆ ‘ಮದುವೆಗೆ ಸಿದ್ಧ ಗೊಂಡವನೆ ನಮ್ಮಚಂದ್ರ ರೊಟ್ಟಿಯ ತಂದು ಹಂಚಿರೊ”
ಹೀಗೆ ನೂರಾರು ಸೋಬಾನೆ ಪದಗಳಿಂದ ಹಾಡು ಕುಣಿತದಿಂದ ಕೋಲಾಟಗಳಿಂದ ನಮ್ಮ ಊರಿನ ಸಂಸ್ಕೃತಿಯನ್ನು ಹಿರಿಯರು ಮುಂದಿನವರಿಗೆ ಧಾರೆ ಎರೆಯುತ್ತಾರೆ. ಇದರ ಜೊತೆ ಮತ್ತೊಂದು ಗೀತೆ ಗಮನ ಸೆಳೆಯುತ್ತದೆ “ಹೆಣ್ಣು ಕೊಡಿರಮ್ಮ ನಮ್ಮ ತಿಂಗಳ ಮಾವನಿಗೊಂದು ಹೆಣ್ಣು ಕೊಡಿ” ಹೀಗೆ ನಮ್ಮ ಜನಪದರು ತಿಂಗಳನನ್ನು ಹಾಡಿ ಹೊಗಳಿ ಕುಣಿದು ಕುಪ್ಪಳಿಸಿ ರಮಿಸಿ ಮುದ್ದಿಸಿ ಅಂತು ಅವನಿಗೊಂದು ಮದುವೆ ಮಾಡಿ ಊರವರೆಲ್ಲ ಸೇರಿ ಚಪ್ಪರ ಹಾಕಿ, ಬೀದಿ ಬೀದಿಗಳಲ್ಲಿ ಸಗಣಿಯಿಂದ ಸಾರಿಸಿ ಪ್ರತಿ ಮನೆಯ ಮುಂದೆ ರಂಗೋಲಿ ಹಾಕುತ್ತಾರೆ. ಚಂದ್ರನ ಚಿತ್ರ ಬರೆದು ನರಸಿಂಹಮೂರ್ತಿಯ ತೇರನ್ನು ಹೂವುಗಳಿಂದ ಆಲಂಕರಿಸಿ ಮೆರವಣಿಗೆ ಮಾಡುತ್ತಾರೆ. ಅಂತೂ ತಿಂಗಳು ಮಾಮನ ಮದುವೆಯ ಹಬ್ಬವನ್ನು ತಮ್ಮ ಮನೆಯ ಮದುವೆಯಂತೆ ಸಡಗರ ಸಂಭ್ರಮದಿಂದ ಆಚರಿಸಿ ವಧು ವರರಿಗೆ ದಕ್ಷಿಣೆಯನ್ನು ನೀಡಿ ಎಲ್ಲ ರೀತಿಯ ರೊಟ್ಟಿಗಳನ್ನು ಹಂಚಿ ತಿನ್ನುವ ಈ ಹಬ್ಬ ಎಲ್ಲಿಲ್ಲದ ಸಂತೋಷ ಸಡಗರವನ್ನು ಹಳ್ಳಿಗರಿಗೆ ಉಣಬಡಿಸುತ್ತದೆ.
ನನಗೆ ಬುದ್ಧಿ ಬಂದಾಗಿನಿಂದ ಈ ಹಬ್ಬ ಆಚರಣೆಯಲ್ಲಿ ಭಾಗಿಯಾಗಿದ್ದೇನೆ ಮತ್ತು ಪೂಜೆಗೂ ಮೊದಲು ರೊಟ್ಟಿ ಕದ್ದು ಮುಚ್ಚಿ ತಿಂದು ಅವ್ವನಿಂದ ತಿಂದ ಏಟು ಇನ್ನೂ ಚುರುಗುಟ್ಟುತ್ತಿದೆ. ನಾನು ಪಿಯುಸಿ ಮುಗಿಯುವವರೆಗೂ ಈ ಹಬ್ಬದಲ್ಲಿ ಭಾಗವಹಿಸಿದ್ದೇನೆ.. ಸಂತೋಷ ಪಟ್ಟಿದ್ದೇನೆ. ಕಾರಣ ಎಲ್ಲಾ ಹಬ್ಬಗಳು ಹಗಲಿನಲ್ಲಿ ನಡೆದರೆ ತಿಂಗಳು ಮಾಮನ ಹಬ್ಬ ಮಾತ್ರ ರಾತ್ರಿಯ ವೇಳೆ ಹಾಲು ತುಂಬಿದ ಚಂದ್ರನ ಬೆಳಕಿನಲ್ಲಿ ನಡೆಯುವುದು. ಹೊಲ ಗದ್ದೆಯಲ್ಲಿ ಕೆಲಸ ಮಾಡಿ ಬಟ್ಟೆಗಳು ಕೊಳಕಾಗಿದ್ದರು ಕೂಡ ತಿಂಗಳ ಬೆಳಕಲ್ಲಿ ಹೊಸ ಬಟ್ಟೆಯಂತೆ ವಿಶೇಷ ಹೊಳಪಿನಿಂದ ಹೊಳೆಯುತ್ತಿದ್ದವು. ಇದು ನನಗೆ ಇನ್ನೂ ಕೂಡ ಆಶ್ಚರ್ಯವಾಗೆ ಕಂಡಿದೆ.. ಆವಾಗಲೆಲ್ಲಾ ನಾನು ನನ್ನ ಬಟ್ಟೆಗಳನ್ನು ನೋಡಿಕೊಂಡು ಖುಷಿ ಪಟ್ಟಿದ್ದು ಇದೆ. ಮೊನ್ನೆ ಕೂಡ ಅವ್ವನಿಗೆ ಅಣ್ಣಾನಿಗೆ ಫೋನ್ ಮಾಡಿ ತಿಂಗಳ ಮಾವನ ಹಬ್ಬ ಯಾವಾಗ ಅಂತ ಕೇಳಿದ್ದಕ್ಕೆ ಜೋರಾಗಿ ನಕ್ಕು ‘ಇನ್ನೂ ಮರೆತಿಲ್ಲವ ಅ ಹಬ್ಬವನ್ನು’ ಎಂದು ಈ ತಿಂಗಳ ಎರಡನೇ ವಾರದಲ್ಲಿ ನಡೆಯುತ್ತದೆ ಬಾ ಎಂದರು. ಹೇಗೂ ರಾತ್ರಿಹೊತ್ತು ನಡೆಯುವ ಹಬ್ಬವಾದ್ದರಿಂದ ರಜೆಯ ಹಾಕುವ ಗೋಜಿಲ್ಲವೆಂದು ಹೋಗಬೇಕೆಂದುಕೊಂಡಿದ್ದೇನೆ. ಜೊತೆಗೆ ನನ್ನ ಮಕ್ಕಳನ್ನು ಸಾಧ್ಯವಾದರೆ ನನ್ನ ಎರಡು ಮೂರು ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಿ ಅ ವಿಶೇಷ ಹಬ್ಬಕ್ಕೆ ಸಾಕ್ಷಿಯಾಗಿಸಿ ಅ ಹಬ್ಬದ ಸಂಸ್ಕೃತಿ ಸಂಪ್ರದಾಯ ಸಂಭ್ರಮವನ್ನು ಪರಿಚಯಿಸಬೇಕೆಂದಿದ್ದೇನೆ.
ಆಶಯ: ಇದೇ ರೀತಿ ಎಲ್ಲಾ ಹಳ್ಳಿಗಳಲ್ಲಿಯೂ ಈ ರೀತಿ ಇರುವಂತಹ ಹಬ್ಬಗಳನ್ನು ಆಚರಿಸಿದರೆ ಜಾತಿ ತಾರತಮ್ಯ ತೊಲಗಿ ನಮ್ಮ ಪೂರ್ವಜರ ಆಚರಣೆಗಳು ನಮ್ಮ ಮುಂದಿನ ಪೀಳಿಗೆಗೆ ಪರಿಚಯಿಸುವ ಕೊಡುಗೆಯಾಗಿ ನಮ್ಮ ಸಂಸ್ಕೃತಿ ಸದಾಚಾರವನ್ನು, ಪ್ರಕೃತಿಯೇ ನಮ್ಮ ದೇವರೆಂದು ಸಾರಿ ಪ್ರಕೃತಿ ಮತ್ತು ಸಂಸ್ಕೃತಿಗಳ ಉಳಿವಿಗೆ ಕಾರಣವಾಗುತ್ತವೆ .
ಸಂದೇಶ: ನಮ್ಮೂರಹಬ್ಬಗಳು ಯಾವ ಮಾದ್ಯಮವು ನೀಡದಷ್ಟು ಮನೋರಂಜನೆಯನ್ನು ನೀಡುತ್ತವೆ. ನಮ್ಮ ಪೂರ್ವಜರಿಂದ ಮುಂದಿನ ಪೀಳಿಗೆಗೆ ಕೊಡುಗೆಯಾಗಿ ಪರಿಚಯಿಸುವ ಉದ್ದೇಶದಿಂದ ಈ ಹಬ್ಬಗಳು ಮುಂದುವರೆದು ಕೊಂಡು ಹೋಗಬೇಕು.
ಕೊನೆಯ ಮಾತು: ಇಂತಹ ಗ್ರಾಮೀಣ ಹಬ್ಬಗಳು ನೇಪತ್ಯಕ್ಕೆ ಸರಿಯದಂತೆ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಶಿಫಾರಸ್ಸು ಮಾಡಿ ಇಂತಹ ಹಬ್ಬಗಳನ್ನು ದಾಖಲೆ ರೂಪದಲ್ಲಿಡಲು ಅನುದಾನ ನೀಡಿ ಪ್ರೋತ್ಸಾಹಿಸಬೇಕು. ಹಳ್ಳಿಗರು ಅಬ್ಬರದ ಮಾದ್ಯಮಗಳನ್ನು ಬದಿಗೊತ್ತಿ ಇಂತಹ ಹಬ್ಬಗಳನ್ನು ತಪ್ಪದೆ ಆಚರಿಸಬೇಕು. ನಮ್ಮ ಪೂರ್ವಜರ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಉಳಿಸುವ ಬೇಳೆಸುವ ಜವಾಬ್ದಾರಿ ಹೊರಬೇಕು. ಇಂದಿನ ಜನಾಂಗ ಕೂಡ ಹಿರಿಯರ ಆಚರಣೆಗಳನ್ನು ಉದಾಸೀನ ಮಾಡದೆ ನಮ್ಮ ಆಸ್ತಿಯಂತೆ ಮುಂದವಹಿಸಿಕೊಂಡು ಹೋಗಲು ಮುಂದಾಗಬೇಕು. ದೀಪಾವಳಿ, ಯುಗಾದಿ, ಸಂಕ್ರಾಂತಿ, ಶಿವರಾತ್ರಿ, ಹೊಸವರ್ಷ, ದಸರ, ಗೌರಿಗಣೇಶ ಮುಂತಾದ ಹಬ್ಬಗಳಂತೆಯೇ ಈ ಹಬ್ಬವನ್ನು ಆಚರಣೆ ಮಾಡಿಕೊಂಡು ಬರಬೇಕು. ಇದನ್ನು ನಾಡಿನ ಹಬ್ಬವಾಗಿಯು ಆಚರಿಸಬಹುದು. ಇಂತಹ ಹಬ್ಬಗಳಿಂದ ನಮ್ಮ ಸಂಸ್ಕೃತಿ, ಸಂಸ್ಕಾರ, ಸಂಪ್ರದಾಯ, ಆಚರಣೆಗಳಿಂದ ನಮ್ಮ ಭಾರತೀಯ ಮೌಲ್ಯವನ್ನು ಎತ್ತಿ ಹಿಡಿಯಬಹುದು. ನಮ್ಮ ಸಂಸ್ಕೃತಿಯು ಪ್ರಾಚೀನ ಮತ್ತು ಪ್ರಖ್ಯಾತವಾದುದು.. ಇದನ್ನು ಉಳಿಸಿ ಬೆಳೆಸುವ ಜಾವಬ್ದಾರಿ ನಮ್ಮ ಮೇಲಿದೆ.