ವಿಷಯದ ವಿವರಗಳಿಗೆ ದಾಟಿರಿ

ಆಗಷ್ಟ್ 29, 2017

1

ವಿಜಯನಗರ ಸಾಮ್ರಾಜ್ಯದ ಧ್ವಜವೇ ಕರ್ನಾಟಕದ ಧ್ವಜವಾಗಲಿ

‍ನಿಲುಮೆ ಮೂಲಕ

– ರಾಕೇಶ್ ಶೆಟ್ಟಿ

“ನಿಮ್ಮಲ್ಲಿ ಕತ್ತರಿಸುವ ಕತ್ತರಿಯಿದೆ. ನಮ್ಮಲ್ಲಿ ಹೊಲಿಯುವ ಸೂಜಿಯಿದೆ.ಅಂತಿಮ ಗೆಲುವು ಸೂಜಿಯದ್ದು.ಕತ್ತರಿಯದ್ದಲ್ಲ. #ಬೆಂಕಿ ಆರಿಸಿ ಬೆಳಕು ಹಚ್ಚುವ”  ಹೀಗೊಂದು ಟ್ವೀಟನ್ನು ಬಿಜೆಪಿಯವರನ್ನು ಉದ್ದೇಶಿಸಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಟ್ವಿಟರ್ ಖಾತೆಯಿಂದ ಹತ್ತು ದಿನಗಳ ಹಿಂದೆ ಮಾಡಿದ್ದರು.ಅದಾದ ನಂತರ ಸಾಹೇಬರ ಪಕ್ಷ ಮತ್ತು ಸರ್ಕಾರ ರಾಜ್ಯದಲ್ಲಿ ನಡೆಸುತ್ತಿರುವ ಚುನಾವಣಾ ರಾಜಕೀಯದ ಪರಿ ನೋಡಿದರೆ,ಸಿಎಂ ಸಿದ್ಧರಾಮಯ್ಯನವರ ಬಳಿಯಿರುವುದು ಸೂಜಿಯಲ್ಲ, ವಿಭಜನಕಾರಿ “ಕೊಡಲಿ” ಎನ್ನುವುದು ಮನವರಿಕೆಯಾಗುತ್ತಿದೆ.ಭಾಷೆ,ಧರ್ಮ,ಜಾತಿ ಹೀಗೆ ವಿಭಜನೆಯ ಎಲ್ಲಾ ದಾಳಗಳನ್ನು ಬಳಸಿಕೊಂಡು ರಾಜ್ಯ ಹಾಳಾದರೂ ಸರಿಯೇ ಮತ್ತೊಮ್ಮೆ ಅಧಿಕಾರದ ಪೀಠವೇರಬೇಕು ಎಂದು ಹೊರಟು ನಿಂತಿದ್ದಾರೆ. ಪಾಪ! ಸಾಹೇಬರಿಗೆ ಅರ್ಥವಾಗದಿರುವುದೇನೆಂದರೆ ತಾವು ಕುಳಿತಿರುವ ಕೊಂಬೆಯನ್ನೇ ಅವರು ಕಡಿಯುತ್ತಿರುವುದು. ಕೊಂಬೆ ಮುರಿದಾಗ ಅವರು ಸೇರಬಹುದಾದ ಪ್ರಪಾತದ ಅರಿವು ಸಾಹೇಬರಿಗೆ ಇಲ್ಲವೋ ಅಥವಾ ತಮ್ಮ ರಾಜಕೀಯ ಜೀವನದ ಕೊನೆ ಇನ್ನಿಂಗ್ಸನ್ನು ಗೆಲ್ಲಲ್ಲು ಸಮಾಜದ ಏಕತೆಗೆ ಭಂಗವಾದರೂ ಸರಿಯೇ ಎನ್ನುವ ಧೋರಣೆಯಲ್ಲಿದ್ದಾರೆ.

ಪ್ರತ್ಯೇಕ ಲಿಂಗಾಯಿತ ಧರ್ಮ ಬೇಕೆನ್ನುವ ಕೂಗು ಏಳಲು ಕಾರಣವಾಗಿದ್ದೆ ಸಿಎಂ ಅಭಿನಂದನಾ ಸಮಾರಂಭದಲ್ಲಿ ನೀಡಿದ ಹೇಳಿಕೆಯಿಂದಾಗಿ. ಧರ್ಮ,ಮತ, ರಿಲಿಜನ್, ಸಂಪ್ರದಾಯಗಳ ನಡುವಿನ ವ್ಯತ್ಯಾಸ ತಿಳಿಯದವರೆಲ್ಲಾ (ಕೆಲವು ಕಾವಿಧಾರಿಗಳನ್ನೂ ಸೇರಿಸಿ) ಈ ವಿಷಯದ ತರೇವಾರಿ ಮಾತನಾಡುವದು ಕೇಳಿದಾಗ ಸಮಾಜದಲ್ಲಿ ಮೂರ್ಖರ ಸಂಖ್ಯೆಯೇನು ಕಡಿಮೆಯಿಲ್ಲ ಎನ್ನುವುದು ಖಾತ್ರಿಯಾಗುತ್ತದೆ. ಆ ವಿಷಯ ಪಕ್ಕಕ್ಕಿಟ್ಟು ನೋಡಿದರೆ, ನಮ್ಮ ಸಿಎಂ ಸಾಹೇಬರು ಕೊಡಲಿ ಹಿಡಿದು ಹೊರಟಿರುವ ಮತ್ತೊಂದು ವಿಷಯ ರಾಜ್ಯಕ್ಕೊಂದು ಪ್ರತ್ಯೇಕ ಧ್ವಜ ಬೇಕು ಎಂದು ಎಬ್ಬಿಸಿರುವ ಕೂಗಿನಿಂದ. ಈ ರಾಜ್ಯದಲ್ಲಿ (ಅಧಿಕೃತ)ವಲ್ಲದಿದ್ದರೂ 1960ರಲ್ಲಿ ಮ.ರಾಮಮೂರ್ತಿಯವರೂ ಕನ್ನಡಕ್ಕೊಂದು ಧ್ವಜವನ್ನು ರೂಪಿಸಿದ್ದರು. ಇಂದಿಗೂ ಜನಮಾನಸದಲ್ಲಿ ಅದೇ ಧ್ವಜ ಚಿರಸ್ಥಾಯಿಯಾಗಿದೆ. ಗೋಕಾಕ್ ಚಳವಳಿಯಿಂದ ಹಿಡಿದು ಇತ್ತೀಚಿನ ಕಂಬಳ ಹೋರಾಟದಲ್ಲೂ ಸ್ಫೂರ್ತಿ ನೀಡಿದ್ದು ಅದೇ ಅರಿಶಿಣ-ಕುಂಕುಮದ ಧ್ವಜವೇ.

1998ರಲ್ಲೇ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಈಗಿರುವ ಧ್ವಜವನ್ನೇ ಅಧಿಕೃತಗೊಳಿಸಬೇಕೆಂಬ ಶಿಫಾರಸ್ಸನ್ನು ಆಗಿನ ಜನತಾದಳ ಸರ್ಕಾರ ತಾಂತ್ರಿಕ ಕಾರಣ ನೀಡಿ ತಳ್ಳಿ ಹಾಕಿತ್ತು. ಆ ನಂತರ ಬಂದ ಕಾಂಗ್ರೆಸ್ ಸರ್ಕಾರ ಈ ಬಗ್ಗೆ ಮಾತನಾಡಲೇ ಇಲ್ಲ .ಮತ್ತದು ಸುದ್ದಿಯಾಗಿದ್ದು ಬಿಜೆಪಿಯ ಸದಾನಂದ ಗೌಡರು ಮುಖ್ಯಮಂತ್ರಿಗಳಾಗಿದ್ದಾಗ ಕರ್ನಾಟಕ ರಾಜ್ಯೋತ್ಸವದಂದು ಎಲ್ಲ ಸರಕಾರಿ ಕಟ್ಟಡಗಳ ಮೇಲೆ ಕಡ್ಡಾಯವಾಗಿ ಕನ್ನಡ ಧ್ವಜವನ್ನು ಹಾರಿಸಬೇಕೆಂದು ಸುತ್ತೋಲೆ ಹೊರಡಿಸಿದಾಗ.ಇದೇ ಸಮಯಕ್ಕೆ ಹೈಕೋರ್ಟಿನಲ್ಲಿ ಒಂದು ಪಿಐಎಲ್ ದಾಖಲಾಯಿತು. ಅಷ್ಟಕ್ಕೂ ಆ ಪಿಐಎಲ್ ಏನೂ ಧ್ವಜ ಬಳಕೆಯ ವಿರುದ್ಧ ದಾಖಲಾಗಿರಲಿಲ್ಲ.’ಕನ್ನಡ ಧ್ವಜಕ್ಕೆ ಅಧಿಕೃತ ಮಾನ್ಯತೆಯಿಲ್ಲದಿದ್ದರೂ ಅದು ನಾಡಿನ ಸಂಸ್ಕೃತಿಯ ಭಾಗವಾಗಿದೆ. ಮುಖ್ಯಮಂತ್ರಿಗಳು ಕರ್ನಾಟಕ ರಾಜ್ಯೋತ್ಸವದಂದು ಧ್ವಜಾರೋಹಣವನ್ನು ಕಡ್ಡಾಯವಾಗಿ ಎಲ್ಲಾ ಸರ್ಕಾರಿ ಕಚೇರಿಗಳಲ್ಲೂ ನಡೆಸುವಂತೆ ಆದೇಶ ಕೊಟ್ಟಿದ್ದಾರೆ.ಇಂತಹ ಧ್ವಜವನ್ನು ಕನ್ನಡ ಸಂಘಟನೆಗಳು ಹೇಗೆಂದರೆ ಹಾಗೆ ಬಳಸಿಕೊಳ್ಳುತ್ತಿವೆ.ಅದನ್ನು ತಡೆಯಿರಿ’ ಎನ್ನುವುದು ಅರ್ಜಿದಾರರ ವಾದವಾಗಿತ್ತು.

ಅದೂ ನಿಜವೇ ಧ್ವಜ ಇವತ್ತು ಹೆಗಲ ಮೇಲಿನ ಶಾಲು, ಕುರ್ಚಿಯ ಹಿಂದೆ ತಲೆಗೆ ಒರಗಿಕೊಳ್ಳುವ ದಿಂಬಿನಂತೆಲ್ಲ ಬಳಕೆಯಾಗುತ್ತಿದೆ. ಅಮೆರಿಕಾದಂತಹ ದೇಶಗಳಲ್ಲಿ ಧ್ವಜವನ್ನು ನಿರ್ಬಂಧಗಳಿಲ್ಲದೆ ಬಳಸಬಹುದು.ಆದರೆ ಭಾರತದಲ್ಲಿ ಹಾಗಿಲ್ಲವಲ್ಲ! ತೀರಾ 90ರ ದಶಕದ ಮಧ್ಯದವರೆಗೂ ಭಾರತದ ಧ್ವಜವನ್ನು ಖಾಸಗಿಯಾಗಿ ಹಾರಿಸುವಂತೆಯೇ ಇರಲಿಲ್ಲ. ನವೀನ್ ಜಿಂದಾಲ್ Vs ಭಾರತ ಸರ್ಕಾರದ ಕೇಸಿನಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಕೊಟ್ಟ ನಂತರವೇ ಭಾರತದ ಧ್ವಜ ಜನ ಸಾಮಾನ್ಯರ ಕೈಗೂ ದಕ್ಕಿದ್ದು.ಹಾಗಿದ್ದಾಗ್ಯೂ ರಾಷ್ಟ್ರ ಧ್ವಜದ ಬಳಕೆಗೆ ನಿಯಮಗಳಿವೆ.ಇಂತಹದ್ದೇ ನಿಯಮಗಳು ನಾಡ ಧ್ವಜಕ್ಕೂ ಅನ್ವಯವಾಗುವುದೇ ಎನ್ನುವ ಪ್ರಶ್ನೆ ಸಹಜವೇ. ಹೈ ಕೋರ್ಟು ನಾಡ ಧ್ವಜದ ಅಧಿಕೃತತೆಯ ಕುರಿತು ರಾಜ್ಯ,ಕೇಂದ್ರ  ಸರ್ಕಾರಗಳನ್ನು ಪ್ರಶ್ನಿಸಿತು .ಆಗಲೂ ಕೇಂದ್ರದಲ್ಲಿದ್ದಿದ್ದು ಇದೇ ಕಾಂಗ್ರೆಸ್ ಸರ್ಕಾರ.ಈಗ ಉಕ್ಕಿ ಹರಿಯುತ್ತಿರುವ ಇವರ ಕನ್ನಡ ಪ್ರೇಮಕ್ಕೆ ಆಗ ಬತ್ತಿಹೋಗಿತ್ತೇನೋ!

ಕೇಂದ್ರದಿಂದ ಯಾವುದೇ ಪೂರಕ ಪ್ರತಿಕ್ರಿಯೆ ಬಾರದೇ ಇದ್ದಿದ್ದರಿಂದಾಗಿ, ರಾಜ್ಯ ಸರ್ಕಾರ ರಾಷ್ಟ್ರಧ್ವಜದ ಜೊತೆಗೆ ಬೇರೆ ಧ್ವಜವನ್ನು ಅಧಿಕೃತವಾಗಿಸುವುದು ದೇಶದ ಏಕತೆಯ ದೃಷ್ಟಿಯಿಂದ ಸಾಧ್ಯವಿಲ್ಲ ಮತ್ತು  ಈಗಿರುವ ಧ್ವಜವನ್ನು ಸರ್ಕಾರ ನವೆಂಬರ್  1ನೇ ತಾರೀಖು ಮಾತ್ರ ಬಳಸುತ್ತಿತ್ತು. ಈಗಾಗಲೇ ಹೊರಡಿಸಿರುವ ಸುತ್ತೋಲೆಯನ್ನು ಹಿಂಪಡೆಯುತ್ತೇವೆ” ಎನ್ನುವಲ್ಲಿಗೆ ಈ ಕೇಸ್ ನಿಂತಿತ್ತು. ಬರೋಬ್ಬರಿ ನಾಲ್ಕು ವರ್ಷ ನಿದ್ದೆ ಮಾಡುತಿದ್ದ ಸಿದ್ದರಾಮಯ್ಯನವರ ಸರ್ಕಾರಕ್ಕೆ ಚುನಾವಣೆ ಸಮಯದಲ್ಲಿ ಇದ್ದಕ್ಕಿದ್ದಂತೆ ರಾಜ್ಯಕ್ಕೊಂದು ಪ್ರತ್ಯೇಕ ಧ್ವಜದ ಅವಶ್ಯಕತೆ ಎದ್ದು ಕಂಡಿದೆ. ಹಿಂದಿ ಹೇರಿಕೆಯ ವಿಷಯದಲ್ಲಿ ಬಿಜೆಪಿ ನಾಯಕರು ಗೊಂದಲಗೊಂಡಿರುವುದನ್ನು ಸರಿಯಾಗಿಯೇ ಬಳಸಿಕೊಂಡು ಕಾಂಗ್ರೆಸ್ ಧ್ವಜದ ದಾಳ ಉರುಳಿಸಿದೆ. ಕಾಂಗ್ರೆಸ್ ಈ ನಾಲ್ಕು ವರ್ಷಗಳಲ್ಲಿ ಬಿಜೆಪಿಯ ಕೈಗೆ ಹಲವು ಬಾರಿ ಕೋಲು ಕೊಟ್ಟಿದೆ. ಪ್ರತಿ ಬಾರಿಯೂ ಬಿಜೆಪಿಯ ನಾಯಕರು ಆ ಕೋಲನ್ನು ತಮ್ಮ ತಮ್ಮೊಳಗೆ ಬಡಿದಾಡಲು ಬಳಸಿಕೊಂಡಿದ್ದಾರಷ್ಟೇ. ಈ ಬಾರಿಯೂ ಅವರಿಗೆ ರಾಜ್ಯ ಧ್ವಜದ ವಿಷಯದಲ್ಲಿ ಕಾಂಗ್ರೆಸ್ ಈ ಹಿಂದೆ ಮಾಡಿದ್ದೇನು ಎನ್ನುವುದನ್ನು ಹೇಳಲಿಕ್ಕೆ ಆಗಲಿಲ್ಲ.

ಹ್ಮ್. ಬಿಜೆಪಿಯವರ ಕಥೆ ಪಕ್ಕಕ್ಕಿರಲಿ.ನಿಜವಾಗಿಯೂ ನಮಗೊಂದು ಹೊಸ ಧ್ವಜದ ಅವಶ್ಯಕತೆಯಿದೆಯೇ? ಈಗಾಗಲೇ ಇರುವ ಧ್ವಜದ ಬಳಕೆಗೆ ಯಾವುದೇ ವಿರೋಧವಿಲ್ಲದೆ ಇದ್ದಾಗ, ಸುಮ್ಮನೊಂದು ವಿವಾದವನ್ನು ಸೃಷ್ಟಿಸಿ ಕನ್ನಡಿಗರ ಮಧ್ಯೆಯೇ ಬಿರುಕು ತಂದಿದ್ದೇಕೆ? ಈಗ ಹೊಸ ಧ್ವಜಕ್ಕಾಗಿ ಒಂದು ಸಮಿತಿಯನ್ನು ಬೇರೆ ಮಾಡಲಾಗಿದೆಯಂತೆ . ವಾಟಾಳ್ ನಾಗರಾಜ್ ಅವರು ಸಹ ಹೇಳುತ್ತಿರುವುದು ಪ್ರಸಕ್ತ ಧ್ವಜವನ್ನೇ ಬಳಸಿಕೊಳ್ಳುವುದು ಬಿಟ್ಟು ಅದ್ಕಕ್ಕೊಂದು ಸಮಿತಿಯ ಅವಶ್ಯಕತೆಯೇನಿತ್ತು ಎನ್ನುವುದು. ಒಂದು ವೇಳೆ ಈಗಿರುವ ಧ್ವಜವನ್ನು ಬಿಟ್ಟು ರಾಜ್ಯಕ್ಕೆ ಹೊಸತೊಂದು ಧ್ವಜ ಬೇಕು ಅಂತಲೇ ಆದರೆ, ಕರ್ನಾಟಕ ಸಾಮ್ರಾಜ್ಯವೆಂದೇ ಕರೆಯಲ್ಪಟ್ಟಿರುವ, ನಮ್ಮ ಹೆಮ್ಮೆಯ ವಿಜಯನಗರ ಸಾಮ್ರಾಜ್ಯದ ಧ್ವಜಕ್ಕೇ ಆ  ಸ್ಥಾನಮಾನ ಸಿಗಬೇಕು.ಇವತ್ತು ಮಾತು ಮಾತಿಗೆ ಕನ್ನಡ,ಕರ್ನಾಟಕದ ಅಸ್ಮಿತೆಯನ್ನು ಕಾಪಾಡಿಕೊಳ್ಳಲು ಪ್ರತ್ಯೇಕ ಧ್ವಜ ಬೇಕು ಎನ್ನುತ್ತಿದ್ದಾರೆ  ಹೋರಾಟಗಾರರು. ಖುದ್ಧು ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೆ ಪ್ರೇರಣೆಯಾಗಿದ್ದೇ ನಮ್ಮ ಸಂಸ್ಕೃತಿಯ ಉಳಿವು.ಕೃಷ್ಣದೇವರಾಯರ ಪಟ್ಟಾಭಿಷೇಕವಾದ ತಿಂಗಳು ಸಹ   ಜುಲೈ.ಕರ್ನಾಟಕದಲ್ಲಿ ಸ್ಥಾಪನೆಯಾಗಿ ದಕ್ಷಿಣ ಭಾರತವನ್ನು ದಾಟಿ ಹರಡಿಕೊಂಡಿದ್ದ ವಿಜಯನಗರ ಸಾಮ್ರಾಜ್ಯವನ್ನು ನೆನಪಿನಲ್ಲಿಟ್ಟುಕೊಂಡು ಅದರಿಂದ ಸ್ಫೂರ್ತಿ ಪಡೆಯಲು,ವಿಜಯನಗರದ ಧ್ವಜವನ್ನೇ ನಾಡ ಧ್ವಜವನ್ನಾಗಿಸಿ ಪ್ರತಿನಿತ್ಯ ಬಳಸುವುದಕ್ಕಿಂತ ಮತ್ತೊಂದು ಸುವರ್ಣಾವಕಾಶ ಬೇಕೆ?

12ನೇ ಶತಮಾನದ ಕಡೆಯಲ್ಲಿ ಸಿಂಗೇಯ ನಾಯಕರಿಂದ ಸ್ಥಾಪನೆಯಾದ ಕಂಪಿಲಿ ರಾಜ್ಯ,ಗಂಡುಗಲಿ ಕುಮಾರ ರಾಮರಂತಹ ಅಪ್ರತಿಮ ಪರಾಕ್ರಮಿಯ ಕಾಲದಲ್ಲಿ ದೆಹಲಿ ಸುಲ್ತಾನನ ನಿದ್ದೆಗೆಡಿಸಿತ್ತು.ಕುಮಾರ ರಾಮನ ಅಂತ್ಯದೊಂದಿಗೆ ಪತನವಾಗಿದ್ದ ಕಂಪಿಲಿ ರಾಜ್ಯದ ಧೂಳಿನಿಂದ ವಿಜಯನಗರ ಸಾಮ್ರಾಜ್ಯ ನಿರ್ಮಾಣಕ್ಕೆ ಪ್ರೇರಣೆ ನೀಡಿದವರು ಗುರು ವಿದ್ಯಾರಣ್ಯರು. ಉತ್ತರದಿಂದ ಪದೇ ಪದೇ ನಡೆಯುತ್ತಿದ್ದ ಇಸ್ಲಾಮ್ ದಾಳಿಯನ್ನು ತಡೆದು,ನಮ್ಮ ಸಂಸ್ಕೃತಿಯ ರಕ್ಷಣೆಗೆ ಅಂತಹದ್ದೊಂದು ಸಾಮ್ರಾಜ್ಯದ ಅವಶ್ಯಕೆತೆಯಿದ್ದೇ ಇತ್ತು. ಅಂದು ವಿಜಯನಗರ ಸಾಮ್ರಾಜ್ಯದ ಉದಯವಾಗದೇ ಇದ್ದಿದ್ದರೇ ಇಂದು ಅದೆಷ್ಟು ಕನ್ನಡಿಗರ ಮನೆ ಭಾಷೆ ಉರ್ದುವಾಗಿ ಬದಲಾಗಿರುತ್ತಿತ್ತೋ!?

ಕರ್ನಾಟಕದ ಸುವರ್ಣ ಯುಗಕ್ಕೆ ಕಾರಣವಾಗಿದ್ದ ವಿಜಯನಗರ ಸಾಮ್ರಾಜ್ಯವಲ್ಲದೆ ಮತ್ತಿನ್ಯಾವುದು ಕರ್ನಾಟಕದ ಸಂಸ್ಕೃತಿಯನ್ನು ಪೂರ್ಣವಾಗಿ ಬಿಂಬಿಸಬಲ್ಲದು ಹೇಳಿ? ಹೀಗಿರುವಾಗ ರಾಜ್ಯಕ್ಕೆ ಹೊಸತೊಂದು ಧ್ವಜವನ್ನು ತರುವುದೇ ಆಗಿದ್ದರೆ ಅದು ವಿಜಯನಗರದ ಧ್ವಜವೇ ಆಗಲಿ.ಅದನ್ನೇ ನಮ್ಮ ಅಧಿಕೃತ ಧ್ವಜವನ್ನಾಗಿಸಿಕೊಳ್ಳೋಣ. ಒಂದು ವೇಳೆ ಸೆಕ್ಯುಲರಿಸಂನ ನೆಪವಿಟ್ಟುಕೊಂಡು ವಿಜಯನಗರದ ಧ್ವಜ ಬೇಡವೆಂದರೆ, ಅಥವಾ ಆ ಭಾಗ,ಈ ಭಾಗ ಅಂತೆಲ್ಲ ಒಡಕಿನ ದನಿ ತೆಗೆದರೆ ನಾಳೆ ಪ್ರತ್ಯೇಕ ತುಳು,ಕೊಡವ ಧ್ವಜ ಮತ್ತು ಅಂತಿಮವಾಗಿ ಪ್ರತ್ಯೇಕ ರಾಜ್ಯ ಕೇಳುವ ದಿನಗಳೇನು ದೂರವಿಲ್ಲ.

ಯಡ್ಯೂರಪ್ಪನವರು ಮುಖ್ಯಮಂತ್ರಿಯಾಗಿದ್ದ ಪ್ರಾರಂಭವಾಗಿದ್ದ ವಿಶ್ವ ಕನ್ನಡ ಸಮ್ಮೇಳನದಲ್ಲಿ ಕನ್ನಡ ತಾಯಿ ಭುವನೇಶ್ವರಿಯ ಪ್ರತಿಮೆಯೊಂದನ್ನು ಬೆಂಗಳೂರಿನಲ್ಲಿ ಸ್ಥಾಪಿಸುವ ಮಾತನ್ನಾಡಿದ್ದರು. ಅಲ್ಲಿಂದ ನೆನೆಗುದಿಗೆ ಬಿದ್ದಿದ್ದ ಆ ವಿಷಯ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಉತ್ತರದಿಂದ ಸತತವಾಗಿ ನಡೆಯುತ್ತಿದ್ದ ಇಸ್ಲಾಮ್ ದಾಳಿಕೋರರನ್ನು ಹಿಮ್ಮೆಟ್ಟಿಸಲು,ವಿಜಯನಗರ ಸಾಮ್ರಾಜ್ಯ ಸ್ಥಾಪಿಸಲು ಗುರು ಶ್ರೀ.ವಿದ್ಯಾರಣ್ಯರಿಗೆ ಪ್ರೇರಣೆಯಿತ್ತಿದ್ದು ತಾಯಿ ಭುವನೇಶ್ವರಿಯೇ ಎಂಬ ಐತಿಹ್ಯವಿದೆ. ಜೈ ಭುವನೇಶ್ವರಿ,ಜೈ ಕನ್ನಡಾಂಬೆ ಎಂಬ ಘೋಷಣೆಯ ಮೂಲವಿರುವ ಆಕೆ ನೆಲೆಸಿರುವ ಸ್ಥಾನವೂ ವಿಜಯನಗರ ಸಾಮ್ರಾಜ್ಯದ ಗತವೈಭವ ಸಾರುವ ಹಂಪಿಯಲ್ಲಿಯೇ. ಮತ್ತೆ ನಮಗೊಂದು ವಿಜಯನಗರ ಸಾಮ್ರಾಜ್ಯದಂತಹ ಸುವರ್ಣ ಯುಗವನ್ನು ನಿರ್ಮಿಸಲು ಆಗುತ್ತದೆಯೋ ಇಲ್ಲವೋ, ಕನಿಷ್ಠ ವಿಜಯನಗರ ಸಾಮ್ರಾಜ್ಯದ ಧ್ವಜ ಮತ್ತು ತಾಯಿ ಭುವನೇಶ್ವರಿಯ ಭವ್ಯ ಪ್ರತಿಮೆಯಿಂದ ಮತ್ತೊಂದು ಸುವರ್ಣ ಯುಗದ ನಿರ್ಮಾಣಕ್ಕೆ ಸ್ಫೂರ್ತಿಯನ್ನಂತೂ ಪಡೆಯಬಹುದು.

1 ಟಿಪ್ಪಣಿ Post a comment
  1. vasu
    ಆಗಸ್ಟ್ 29 2017

    ಈ ದ್ವಜದಲ್ಲಿ ವರಾಹ ಮೂರ್ತಿಯಿದೆ. ಸೆಕ್ಯುಲರ್ ಶಕ್ತಿಗಳಿಗೆ ಇದನ್ನು ಒಪ್ಪುವ ಧೈರ್ಯವಿದೆಯೇ? ಇದರ ವಿರುದ್ಧ ಕೇವಲ ಒಬ್ಬನೇ ಒಬ್ಬ ಮುಸ್ಲಿಂ ಪ್ರತಿಭಟಿಸಿದರೂ ಅದನ್ನು ಮೂಲೆಗೆ ತಳ್ಳಲು ನಮ್ಮ ಸೆಕುಲರ್ ಬ್ರಿಗೇಡ್ ಸಿದ್ಧವಾಗಿರುತ್ತದೆ.
    ಇದು ಸಾಧ್ಯವಾಗದಿದ್ದಲ್ಲಿ ನಮ್ಮ ಮೈಸೂರು ಸಂಸ್ಥಾನದ ಒಡೆಯರು ತಮ್ಮ ರಾಜ್ಯ ದ್ವಜವನ್ನಾಗಿ ಆರಿಸಿಕೊಂಡ ಧ್ವಜ ಈಗಲೂ ದಸರಾ ಸಂದರ್ಭದಲ್ಲಿ ಮೈಸೂರು ಅರಮನೆಯ ಮೇಲೆ ನೋಡಬಹುದು. ಹೇಗಿದ್ದರೂ ನಮ್ಮ ಸರಕಾರ ಗಂಡಭೇರುಂಡ ಲಾಂಛನವನ್ನು ತನ್ನ ಆಧಿಕೃತ ಮುದ್ರೆಯನ್ನಾಗಿ ಸ್ವೀಕರಿಸುವಾಗ ಮೈಸೂರು ಅರಸರು ರೂಪಿಸಿ ಕಾಪಾಡಿಗೊಂಡ ಬಂದ ಧ್ವಜವನ್ನು ರಾಜ್ಯದ ಧ್ವಜವನ್ನಾಗಿ ಏಕೆ ಸ್ವೀಕಾರ ಮಾಡಬಾರದು?

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments