ವಿಷಯದ ವಿವರಗಳಿಗೆ ದಾಟಿರಿ

ಆಗಷ್ಟ್ 30, 2017

ಹಿಂದೂ ಮುಸ್ಲಿಂ ಸಮ್ಮಿಲನಕ್ಕೆ ಸೆಕ್ಯಲರಿಸಮ್ಮೇ ಬೇಕೆ? ಅಲಾದಿ ಹಬ್ಬ ಸಾಕೆ?

‍ನಿಲುಮೆ ಮೂಲಕ

-ವೀಣಾ. ಈ
(ರಾಜ್ಯಶಾಸ್ತ್ರ ವಿಭಾಗ, ಕುವೆಂಪು ವಿಶ್ವವಿದ್ಯಾನಿಲಯ, ಶಂಕರಘಟ್ಟ.)

ನಮ್ಮೂರ ಹಬ್ಬ ಪ್ರಬಂಧ ಸ್ಪರ್ಧೆಯಲ್ಲಿ ಎರಡನೆಯ ಸ್ಥಾನ ಪಡೆದ ಲೇಖನ..

ಪ್ರಸ್ತುತ ಐಡಿಯಾಲಜಿಗಳ ಯುಗದಲ್ಲಿ ಹಿಂದೂ ಮುಸಲ್ಮಾನ ಎನ್ನುವುದು ಎರಡು ವೈರಿ ಗುಂಪುಗಳೆಂದು ಪರಿಗಣಿಸಲ್ಪಡುತ್ತಿವೆ. ಕೆಲವು ಚಿಂತಕರು ಮತ್ತು ಹಾಗೆನ್ನಿಸಿಕೊಳ್ಳಲು ಹಾತೊರೆಯುವವರು ಎಲ್ಲಾ ಘಟನೆಗಳಲ್ಲೂ ಈ ವೈರತ್ವವನ್ನೇ ಕಾಣುತ್ತಿರುತ್ತಾರೆ. ಹೀಗಿರುವಾಗ ಹಬ್ಬಗಳು, ಆಚರಣೆಗಳು ಅವರಿಗೆ ಒದಗಿದ ಸದಾವಕಾಶಗಳಂತೆ ಭಾವಿಸುತ್ತಾರೆ. ಗಣೇಶ ಹಬ್ಬ ಎಂದರೆ ಗಣೇಶನ ಆಗಮನದಿಂದ ವಿಸರ್ಜನೆಯವರೆಗೆ ಆರಕ್ಷಕರ ಕಾವಲಿನೊಂದಿಗೇ ನಡೆಯುವ ಸ್ಥಿತಿ ಬಂದೊದಗಿದೆ. ಉದ್ದೇಶಪೂರ್ವಕವಾಗಿಯೇ ಮುಸ್ಲಿಂ ಕೇರಿಗಳಲ್ಲಿ ಗಣೇಶನ ಮೆರವಣಿಗೆ ಮಾಡುವುದು, ಮಸೀದಿಗಳ ಮುಂದೆ ಪಟಾಕಿ ಸಿಡಿಸುವುದು ಮಾಡಿದರೆ, ಮುಸ್ಲೀಮರು ಇದಕ್ಕೆ ಹೊರತಾಗಿಲ್ಲದಂತೆ ಇದ್‍ಮೀಲಾದ್‍ನಂತಹ ಹಬ್ಬದ ಮೆರವಣಿಗೆಯಲ್ಲಿ ಇವೇ ಪ್ರವೃತ್ತಿಗಳು ಪುನಾರವರ್ತನೆಯಾಗುತ್ತವೆ. ಇದರಿಂದ ಹಬ್ಬಗಳೆಂದರೆ ಭಯದ ವಾತಾವರಣ ಸೃಷ್ಟಿಯಾಗುವ ಕಾಲ ಅಲ್ಲಲ್ಲಿ ಕಂಡುಬರುತ್ತಿದೆ. ಇದು ಹೀಗೆ ಮುಂದುವರೆದರೆ ಹಬ್ಬಗಳೆಂದರೆ ಗಲಾಟೆಯುಂಟು ಮಾಡುವ ಸಂಗತಿಗಳೆಂದು ಕಾನೂನು ಮೂಲಕವೇ ಅವುಗಳನ್ನು ನಿಷೇಧ ಮಾಡುವ ಸಂದರ್ಭ ಬಂದರೂ ಬರಬಹುದು. ಆದರೆ ಹಬ್ಬಗಳು ಈ ಕೆಲಸವನ್ನು ಮಾಡುತ್ತವೆಯೇ? ಅವುಗಳ ಸ್ವರೂಪವೇನು?

ಸಾಮಾನ್ಯವಾಗಿ ಹಬ್ಬಗಳು ಸಂಭ್ರಮದ ವಾತವರಣವನ್ನು ಸೃಷ್ಟಿಮಾಡುವ, ಎಲ್ಲರನ್ನು ಒಟ್ಟುಗೂಡಿಸುವ ಜೊತೆಗೆ ಮನೋರಂಜನೆಯನ್ನೂ ಒಳಗೊಂಡಿರುತ್ತವೆ. ಗ್ರಾಮೀಣ ಪ್ರದೇಶಗಳಲ್ಲಿ ಹಬ್ಬಗಳನ್ನು ನಗರ ಪ್ರದೇಶಗಳಿಗಿಂತ ಹೆಚ್ಚು ಆಸಕ್ತಿ, ಕಟ್ಟುನಿಟ್ಟಿನಿಂದ, ಸಂಭ್ರಮದಿಂದ ಆಚರಿಸಲಾಗುತ್ತದೆ. ಅಲ್ಲದೇ ಹಬ್ಬವೆಂದರೆ ಸಾಕು ವಾರಗಟ್ಟಲೇ ತಯಾರಿಯೂ ಜೋರಾಗಿಯೇ ಇರುತ್ತದೆ. ಮನೆ ಮಠಗಳ ಸುಣ್ಣ ಬಣ್ಣ ಪೇರಿಸಿಕೊಂಡು ಒಪ್ಪ ಓರಣದ ಮಿಂಚುತ್ತವೆ, ಹೊಗೆ ಹಿಡಿದ ಹಾಸಿಗೆ ದಿಂಬುಗಳು ನೀರು ಕಾಣುತ್ತವೆ, ಹಪ್ಪಳ ಸಂಡಿಗೆ ಬಿಸಿಲಿಗೆ ಸಟಿಯುತ್ತಿರುತ್ತವೆ. ದನಕರುಗಳಿಗೂ ಈ ಖುಷಿಯಲ್ಲಿ ಪಾಲು ಇರುತ್ತದೆ. ಅವುಗಳನ್ನು ಕೆರೆಗೆ ಕರೆದೊಯ್ದು ನೀರಿನಲ್ಲಿ ನೆನೆಹಾಕಿ, ಮೈಯಿಗೆ ಮೆತ್ತಿ ರೊಟ್ಟಾಗಿದ್ದ ಸಗಣಿಯನ್ನು ಬಿಡಿಸಿ, ಹೊರತಂದಾಗ ಅವುಗಳಿಗೆ ಮದುಮಕ್ಕಳ ಕಳೆ! ಮಕ್ಕಳಿಗಂತೂ ಅವುಗಳಿಗೆ ಸ್ನಾನ ಮಾಡಿಸುವುದೇ ದೊಡ್ಡ ಖುಷಿ. ಗಂಡಸರು ವಾರ ಮೊದಲೇ ನೆಂಟರಿಷ್ಟನ್ನು ಕರೆಮಾಡುವ ಕೆಲಸ ನೋಡಿಕೊಂಡರೆ, ಹೆಂಗಸರು ಆ ನೆಂಟರಿಸ್ಟರ ನಿರೀಕ್ಷೆಯಲ್ಲಿ ಮನೆಯ ಸಿದ್ದತೆ ನಡೆಸುತ್ತಿರುತ್ತಾರೆ. ಹೆಂಗಸರು ಗಂಡಸರೆನ್ನದೇ ಇವೆಲ್ಲ ಕೆಲಸಗಳನ್ನು ಬಹು ಸಡಗರದಿಂದಲೇ ‘ಈ ಹಬ್ಬದ್ ಕೆಲ್ಸ ಸಾಕ್ ಸಾಕಾಗ್ ಹೋಕತಿ’ ಎಂದು ಕುಯ್‍ಗುಡುತ್ತಲೇ ಮಾಡುತ್ತಿರುತ್ತಾರೆ. ಒಟ್ಟಿನಲ್ಲಿ ಹಬ್ಬ ಹತ್ತಿರ ಬಂದಂತೆ ಜನರು ಫುಲ್ ಬ್ಯುಸಿ!

ಈ ರೀತಿಯ ಕೆಲಸ, ಸಡಗರ ಸಂಭ್ರಮ ಸಾಕ್ಷಿಯಾಗುವ ಒಂದು ಹಬ್ಬ ನಮ್ಮಜ್ಜಿ ಊರಲ್ಲಿ ಮಾಡುವ ಅಲಾದಿ (ಬೆಂಕಿ ಕೊಂಡ) ಅಥವಾ ಮೊಹರಂ ಹಬ್ಬದ ಕೊನೆಯ ದಿನವೂ ಒಂದು. ಮೇಲ್ನೋಟಕ್ಕೆ ಇದು ಮುಸ್ಲೀಮರ ಹಬ್ಬದಂತೆ ಕಾಣುತ್ತದೆ. ಈ ಹಬ್ಬದ ಕುರಿತು ಮುಸ್ಲೀಮರದು ಒಂದು ಕಥೆಯೂ ಇದೆ. ನಾವು ಸಣ್ಣವರಿರುವಾಗ ನಮ್ಮ ಅಜ್ಜನ ಸ್ನೇಹಿತರಾದ ಒಂದು ಸಾಬರ ಅಜ್ಜ ಈ ಕಥೆ ಹೇಳಿದ ನೆನಪು. ಮುಸ್ಲೀಂ ರಾಜ ಹಜರತ್ ಅಲಿ ಮತ್ತು ಬಿಬಿ ಫಾತಿಮಾರ ಮಕ್ಕಳು ಹಾಗೂ ಶ್ರೇಷ್ಠ ಭಕ್ತರೂ ಆಗಿದ್ದ ಇಮಾಮ್ ಅಸಾನ್ ಮತ್ತು ಇಮಾಮ್ ಹುಸೇನ್ ಎಂಬುವವರು ಆಡಳಿತಕ್ಕೆ ಸಂಬಂಧಿಸಿದಂತೆ ಸ್ಥಳೀಯ ಅರಸರೊಂದಿಗೆ ಯುದ್ಧಮಾಡಿ ವೀರಮರಣವನ್ನೊಪ್ಪಿದ ದಿನವೆಂದು, ಆ ದಿನವನ್ನು ಕತ್ತಲೆಯ ದಿನವನ್ನಾಗಿ ಆಚರಿಸಲಾಗುತ್ತದೆ. ಅಂದರೆ, ಮಹಾನ್ ಭಕ್ತರಾಗಿದ್ದ ಇವರು ಯುದ್ಧಮಾಡುವಾಗಲೂ ನಮಾಜು ಮಾಡುವುದನ್ನು ಮರೆಯದೇ, ಆ ಸಂದರ್ಭದಲ್ಲಿಯೂ ದೇವರ ಪ್ರಾರ್ಥನೆ ಮಾಡುತ್ತಾರೆ. ಆಗ ಶತ್ರುಗಳ ಆಕ್ರಮಣಕ್ಕೆ ತುತ್ತಾಗಿ ಮರಣಹೊಂದುತ್ತಾರೆ. ಅದೇ ಮೊಹರಂ ಕೊನೆಯದಿನ. ಈ ಕಾರಣಕ್ಕಾಗಿ ಕೆಲವೆಡೆ ಮುಸ್ಲೀಮರು ಈ ಹಬ್ಬವನ್ನು ಆಚರಿಸುವುದೇ ತಪ್ಪು, ಆ ದಿನ ತಮಗೆ ಸೂತಕದ ದಿನ ಎಂದು ಭಾವಿಸುವುದೂ ಉಂಟು.

ಆದರೆ ಹಾಯ (ಇದರ ಅಕ್ಕಪಕ್ಕದ ಹಳ್ಳಿಗಳಲ್ಲಿಯೂ) ಎಂಬ ಹಳ್ಳಿಯಲ್ಲಿ ಇದಕ್ಕೆ ತದ್ವಿರುದ್ಧ ಸ್ಥಿತಿಯಿದೆ. ಈ ಕಥೆ ಹೇಳಿ ನಮ್ಮ ಅಜ್ಜನಿಗೆ ಒಂದು ಪ್ರಶ್ನೆ ನಮ್ಮ ಜಾತಿಯವರ ಹಬ್ಬ ಅಲ್ವಾ ಇದು? ಅಂಥ. ಅದಕ್ಕೆ ಅಜ್ಜನ ಉತ್ತರ: ‘ಏ ಮಂಗ ಆ ಕಥೆ ಗಿತೆ ಎಂತಾದೂ ಗೊತ್ತಿಲ್ಲ. ಹಂಗೇನ್ ಇರ್ಲಾದ್ರು. ಏನಾ ನಮ್ಮ ಹಿರಿಯರು ಮಾಡ್ಕೊಂಡ ಬಂದಾರು. ಈಗ ಊರಾಗ ಎಲ್ಲಾ ದೇವ್ರೂ ಅದಾವು, ಆ ದೇವ್ರ ಪೂಜೆ, ಹಬ್ಬ ಮಾಡೋ ಹಂಗೆ ಇದ್ನೂ ಮಾಡ್ತೀವಿ. ಈ ದೇವ್ರು ಅವುಕ್ಕಿಂಥ ಚೂರು ಕಟ್ಟೂಗ್ರ ದೇವ್ರು. ಭಯ ಭಕ್ತಿಯಿಂದ ನಡ್ಕೊಂಡ್ರೆ ನಮ್ಮ ಕಷ್ಟ ತೀರ್ತಾವೆ.. ಅದಕ್ಕೆ ವರ್ಸಾ ಈ ದಿನದಾಗ್ ಈ ಹಬ್ಬ ಮಾಡ್ತೀವಿ’ ಅಂತಿದ್ದ. ನಮ್ಮ ಅಜ್ಜನಂತಯೇ ಅಲ್ಲಿನ ಮುಸ್ಲಿಮೇತರರಿಗೂ ಈ ಕಥೆಯು ಅಪ್ರಸ್ತುತ. ಅಲ್ಲದೇ, ಇದು ಕೇವಲ ಮುಸ್ಲೀಂರ ಹಬ್ಬವಾಗಷ್ಟೇ ಉಳಿಯದೇ ಗ್ರಾಮದೇವರ ಸಂಭ್ರಮದ ಹಬ್ಬವೆಂಬಂತೆ ಊರಿಗೂರೇ ಈ ಅಲಾದಿ ಹಬ್ಬದಲ್ಲಿ ಸಡಗರದಿಂದ ಪಾಲ್ಗೊಳ್ಳುತ್ತದೆ. ಮುಸ್ಲೀಮರ ಜೊತೆಗೆ ಇತರರೇ ಅವರಿಗಿಂತಲೂ ಅಲ್ಲಿ ಹೆಚ್ಚು ಪಾಲ್ಗೊಳ್ಳುತ್ತಾರೆ. ಅವರೇ ಹಬ್ಬದ ಎಲ್ಲಾ ಕೆಲಸಗಳನ್ನೂ ಮಾಡುತ್ತಾರೆ.

ಮೊಹರಂ ಕೊನೆಯ ದಿನ ಕತ್ತಲರಾತ್ರಿ ಹಾಗೂ ಅಲಾದಿ (ಬೆಂಕಿ ಕೊಂಡದ) ಹಬ್ಬದ ಆಚರಣೆ ನಡೆಯುತ್ತದೆ. ಇದು ಬಹು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಈ ಹಬ್ಬದ ಕುರಿತು ಹಿರಿಯರು ‘ಇದರಿಂದ ಇಡೀ ಊರಿಗೆ ಒಳ್ಳೆದಾಕತಿ, ಈ ಹಬ್ಬದಾಗ ಪೂಜೆ ಮಾಡೋ ದೇವ್ರುಗುಳು ಇಲ್ಲಿ ಊರೊಳಗ್ ಏನೇ ಭೂತ ಪಿಸಾಚಿ ಸೇರ್ಕೆಂಡಿದ್ರು ಅವುನ್ನ ಒದ್ದು ಓಡುಸ್ತವೆ’, ಎಷ್ಟೋ ಜನರ ಕಷ್ಟಾನ ಇಲ್ದಂಗ್ ಮಾಡ್ಯಾವೆ’ ಎಂಬಂತಹ ಸಮರ್ಥನೆಗಳನ್ನು ನೀಡುತ್ತಾರೆ. ಇವರಿಗೆ ಮೊಹರಂ ಹಬ್ಬವು ಮುಸ್ಲೀಮರಿಗೆ ಮಾತ್ರ ಸಂಬಂಧಿಸಿದ ಹಬ್ಬವಾಗಿ ಕಾಣುವುದಿಲ್ಲ. ಅದು ತಮ್ಮ ನಾಗರ ಪಂಚಮಿ, ದೊಡ್ಡಹಬ್ಬದಂತೆಯೇ (ದೀಪಾವಳಿ) ಒಂದು ಹಬ್ಬ. ಅದಕ್ಕಿಂತ ಹೆಚ್ಚಾಗಿ ತಮ್ಮ ಊರಿನ ಹಬ್ಬವೂ ಹೌದು. ಈ ಹಬ್ಬದಲ್ಲಿ ಅನೇಕ ಆಯುಧಗಳು ವಿವಿಧ ದೇವರುಗಳ ಹೆಸರಿನಲ್ಲಿ ಪೂಜಿಸಲ್ಪಡುತ್ತವೆ. ಕತ್ತಿ, ತ್ರಿಶೂಲ, ಹಸ್ತ, ದೊಡ್ಡ ದೇವರು ಇತ್ಯಾದಿ ಹೆಸರುಗಳಿರುತ್ತವೆ. ಅಲ್ಲದೇ, ಮುಸ್ಲೀಮೇತರರಿಂದ ಹರಕೆಯ ರೂಪದಲ್ಲಿ ನೀಡಲ್ಪಟ್ಟ ಈ ಆಯುಧಗಳು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇರುತ್ತವೆ. ಹರಕೆ ಮಾಡಿಕೊಂಡ ಭಕ್ತರು ತಮ್ಮ ಕಷ್ಟ ಪರಿಹಾರವಾದ ನಂತರ ಇವುಗಳನ್ನು ತಂದು ಒಪ್ಪಿಸುತ್ತಾರೆ. ಅಲಾದಿ ಹಬ್ಬದ ಎರಡು ದಿನ ಮೊದಲು ಇವುಗಳನ್ನು ಸ್ವಚ್ಛಮಾಡಿ ಹಬ್ಬ ನಡೆಯುವ ಸ್ಥಳದಲ್ಲಿಟ್ಟು ಪೂಜೆ ಮಾಡಲಾಗುತ್ತದೆ. ನಾವು ಮಾತನಾಡುವಂತೆ ಮುಸ್ಲೀಮರು ಈ ದೇವರ ಪೂಜಾರಿಗಳು. ಅವರು ಹಬ್ಬ ಪ್ರಾರಂಭವಾಗುವ ಮೊದಲು ನಮಾಜು ಮತ್ತು ಉಪವಾಸದ ಮೂಲಕ ಮಡಿಯಲ್ಲಿರುತ್ತಾರೆ.

ಇನ್ನೊಂದೆಡೆ, ಈ ದೇವರಿಗೆ ಮುಸ್ಲೀಮೇತರ ಜನರು ಹಲವು ಹರಕೆಗಳನ್ನು ಮಾಡಿಕೊಂಡಿರುತ್ತಾರೆ. ವೇಶಧಾರಿಗಳಾಗಿ ಭಿಕ್ಷೆ ಬೇಡುವಂತೆ, ಪುಟಾಣಿ (ಹುರಿಗಡಲೆ), ಸಕ್ಕರೆ ಓದಿಸುವಂತೆ, ಕೊಂಡಕ್ಕೆ ಉಪ್ಪು ಹಾಕುವುದಾಗಿ, ದೇವರನ್ನು ಮಾಡಿಸಿಕೊಡುವುದಾಗಿ ಮುಂತಾದ ಹರಕೆಗಳಿರುತ್ತವೆ. ಈ ಹಬ್ಬ ಪ್ರಾರಂಭವಾಗವ ಕೆಲವು ದಿನ ಮೊದಲು ಹರಕೆ ಮಾಡಿಕೊಂಡವರು ‘ಜಲಾಜಿ’ಯ (ಮುಖವಾಡ ಧರಿಸಿ, ಬಣ್ಣ ಹಚ್ಚಿಕೊಂಡು, ನವಿಲು ಕುಚ್ಚು ಹಿಡಿದು ಮನೆ ಮನೆಗೂ ಬಂದು ಭಿಕ್ಷೆ ಬೇಡುತ್ತಾ, ಮಕ್ಕಳನ್ನು ಹೆದರಿಸುವವರನ್ನು ಜಲಾಜಿ ಎನ್ನುತ್ತಾರೆ.) ವೇಶ ಧರಿಸಿ ಬೇರೆ ಬೇರೆ ಊರುಗಳಿಗೆ ಹೋಗಿ ದಾನ ಪಡೆಯುತ್ತಾರೆ. ಜಲಾಜಿಗಳು ಬರಲಾರಂಭಿಸಿದಾಗ ‘ಓ… ಅಲಾದಿ ಹಬ್ಬ ಹತ್ರ ಬರ್ತಾ ಇದೆ, ಜಲಾಜಿ ಬರ್ತಿದಾವೆ’ ಎಂದು ಮಾತನಾಡುತ್ತಾರೆ. ಮಕ್ಕಳು ಆ ವೇಷಧಾರಿ ಜಲಾಜಿಗಳನ್ನು ‘ಜಲಾಜಿ ಜಕ್ಕ ಹುಣುಸೇ ಪಿಕ್ಕ’ ಎಂದು ಕೆಣಕುವುದು, ಇವರನ್ನು ಜಲಾಜಿಯು ಓಡಿಸಿಕೊಂಡು ಹೋಗುವುದು ಸಾಮಾನ್ಯವಾಗಿರುತ್ತದೆ. ಮಕ್ಕಳು, ರೋಗಿಗಳು ಜಲಾಜಿ ಕೈಯಿಂದ ಹೊಡೆಸಿಕೊಂಡರೆ ಮಕ್ಕಳು ಬೆಚ್ಚಿ ಬೀಳುವುದು, ಭಯಪಡುವುದು, ನಿದ್ದೆಯಲ್ಲಿ ಮೂತ್ರ ಮಾಡುವುದು ಕಡಿಮೆಯಾಗುತ್ತದೆ, ಹಾಗೆಯೇ ರೋಗರುಜಿನಗಳು ವಾಸಿಯಾಗುತ್ತವೆ ಎಂದು ಹಿರಿಯರು ಕಿರಿಯರೆನ್ನದೇ ಹೊಡೆಸಿಕೊಳ್ಳುವ (ಮೆತ್ತಗೆ) ಪರಿಪಾಠವಿದೆ. ಮಕ್ಕಳಿಗಿದು ರಂಜನೆಯ ಸಂಗತಿಯೂ ಆಗಿದ್ದು ಸಾಲುಗಟ್ಟಿ ಓಡುತ್ತಿರುತ್ತಾರೆ. ಕೆಲವರು (ಮುಸ್ಲಿಂ ಅಥವಾ ಇತರರು) ತಮ್ಮ ಕಷ್ಟಗಳ ಪರಿಹಾರಕ್ಕಾಗಿ ಹರಕೆ ಮಾಡಿಕೊಂಡು, ಮೊಹರಂ ಹಬ್ಬದ ತಿಂಗಳಿನಲ್ಲಿ ‘ಜಲಾಜಿ’ ವೇಶಧರಿಸಿ ಭಿಕ್ಷೆ ಬೇಡಿ ಅದರಿಂದ ಬಂದ ದವಸ ಧಾನ್ಯಗಳನ್ನು ಕತ್ತಲ ರಾತ್ರಿಯಂದು ಅನ್ನ ಸಂತರ್ಪಣೆ ಮಾಡುತ್ತಾರೆ. ಇನ್ನೂ ಕೆಲವರು, ಮೊಹರಂ ಕತ್ತಲರಾತ್ರಿ ಶುರುವಾಗುವ ಕೆಲವು ದಿನಗಳಿಂದ ಹಬ್ಬದವರೆಗೂ ಭಿಕ್ಷೆ ಬೇಡಿದ್ದನ್ನೆ ಅಡುಗೆ ಮಾಡಿ ಊಟಮಾಡುತ್ತಾರೆ. ಇವರು ಮುಸ್ಲಿಮರಾಗಿರುವುದಿಲ್ಲ, ಅದನ್ನೊಂದು ಮುಸ್ಲಿಮ್ ದೇವರ ಹಬ್ಬ ಎನ್ನುವ ಭಾವನೆಯೇ ಅಲ್ಲಿ ಅಮುಖ್ಯ.
ಮೊಹರಂ ಕೊನೆಯ ದಿನಕ್ಕಿಂತ ಎರಡು ದಿನ ಹಿಂದೆಯೇ ಹಬ್ಬದ ವಾತವಾರಣ ಊರಲ್ಲಿರುತ್ತದೆ. ಈ ಕುರಿತು ಊರಿನ ಹಿರಿಯರು ಚರ್ಚೆಮಾಡಿ, ಗ್ರಾಮದ ವತಿಯಿಂದ ಮನೆಗೊಬ್ಬ ವ್ಯಕ್ತಿ ಹಬ್ಬದ ತಯಾರಿ ಕೆಲಸಕ್ಕೆ ಹಾಜರಾಗುವಂತೆ ಅಪ್ಪಣೆ ಮಾಡುತ್ತಾರೆ. ಅದನ್ನು ತಳವಾರನ ಮೂಲಕ ಸಾರಿಕೆ ಮಾಡಿಸುತ್ತಾರೆ. ಅದರಂತೆ ಮನೆಗೊಬ್ಬರು ತಮ್ಮ ಮನೆಯಿಂದಲೇ ಕುಡುಗೋಲು, ಗುದ್ದಲಿ, ಪಿಕಾಸಿ ಇನ್ನಿತರೇ ಆಯುಧಗಳನ್ನು ತೆಗೆದುಕೊಂಡು ಹೋಗುತ್ತಾರೆ. ಒಬ್ಬೊಬ್ಬರು ಒಂದೊಂದು ಜವಬ್ದಾರಿಯನ್ನು ತೆಗೆದುಕೊಳ್ಳುತ್ತಾರೆ, ಅವರ ಹಿಂದೆ ಸ್ವಲ್ಪ ಜನ ಕೈಜೋಡಿಸುತ್ತಾರೆ. ಅಲಾದಿ ನಡೆಯುವ ಸ್ಥಳವನ್ನು ಸ್ವಚ್ಛಗೊಳಿಸುವುದು, ಚಪ್ಪರ ಹಾಕುವುದು, ಸಗಣಿ ಸಾರಿಸುವುದು, ಕೊಂಡ ಹಾಕಲು ಇರುವ ಗುಂಡಿಯನ್ನು ಶುದ್ಧ ಮಾಡಿ, ಎಷ್ಟು ಆಳ ಅಗಲ ಇರಬೇಕೆಂದು ಅಳತೆ ಮಾಡಿ ಗುಂಡಿ ತಯಾರಿಸುವುದು. ಕೊಂಡ ಮಾಡಲು ಕಟ್ಟಿಗೆಯನ್ನು ಒಟ್ಟುಮಾಡಿ ತಂದಿಡುವುದು ಇತ್ಯಾದಿ ಕೆಲಸ ಮಾಡುತ್ತಾರೆ.

ಈ ತಯಾರಿಯ ನಂತರ ಹಬ್ಬದ ಹಿಂದಿನ ದಿನ ಚಪ್ಪರದ ಒಳಭಾಗದಲ್ಲಿ ಮಂಟಪಮಾಡಿ ಅಂದರೆ ವಿವಿದ ಆಯುಧ ರೂಪದಲ್ಲಿನ ದೇವರನ್ನು ಶುದ್ಧಮಾಡಿ ತಂದಿಡಲಾಗುತ್ತದೆ. ನಂತರ ಅವುಗಳಿಗೆ ಮುಸ್ಲೀಮರು ಹೂವಿನ ಹಾರ ಹಾಕಿ, ನಮಾಜು ಮಾಡುತ್ತಾರೆ. ಉಳಿದವರು ಭಕ್ತಿಯಿಂದ ಕೈಮುಗಿದು ಆಶೀರ್ವಾದ ಬೇಡುತ್ತಾರೆ. ನಂತರ ಅಲ್ಲಿ ಜನರ ಓಡಾಟ, ಹರಟೆ ಹೆಚ್ಚಾಗುತ್ತದೆ ಇಡೀ ರಾತ್ರ್ರಿ ಅಲ್ಲಿ ಕಾವಲಿರುತ್ತಾರೆ. ಹಾಗೂ ದೂಪ ಹಾಕುವುದು, ನಮಾಜು ಪೂಜಾ ವಿಧಿವಿಧಾನಗಳು ನಡೆಯುತ್ತಿರುತ್ತವೆ. ಮೊಹರಂ ಕತ್ತಲೆ ರಾತ್ರಿಯ ದಿನ ಸಂಜೆ ದೇವರನ್ನು (ಎಲ್ಲಾ ಆಯುಧಗಳನ್ನು) ವಿವಿಧ ಬಣ್ಣದ ಬಟ್ಟೆ ಹಾಗೂ ಹೂವುಗಳಿಂದ ಶೃಂಗರಿಸಿ ಪೂಜೆ ಮಾಡುತ್ತಾರೆ. ಪೂಜೆಯ ನಂತರ ಹಿರಿಯರು ಅಲಾದಿ ದೇವರ ಮಂಟಪದ ಎದುರು ಭಾಗದಲ್ಲಿ ನಿರ್ಮಿಸಿದ ಗುಂಡಿಗೆ ಪೂಜೆ ಮಾಡಿ ಕಟ್ಟಿಗೆಗಳನ್ನು ಹಾಕಿ ಬೆಂಕಿ ಹಾಕಲಾಗುತ್ತದೆ. ಇದಕ್ಕೆ ರಂಗು ತರುವಂತೆ ಅಲ್ಲಿ ಚರ್ಮವಾದ್ಯವಾದ ಹಲಗೆಯ ಶಬ್ದ ಮೊಳಗುತ್ತಿರುತ್ತದೆ. ಮಕ್ಕಳು ಅದರ ತಾಳಕ್ಕೆ ಹೆಜ್ಜೆ ಹಾಕುತ್ತಿರುತ್ತಾರೆ.

ಆ ದಿನ ಸಂಜೆ ಉರಿನ ಜನರು ಪುನಃ ಮನೆಯನ್ನು ಶುದ್ಧ ಮಾಡಿ, ತಾವು ಸ್ನಾನ ಪಾನದೊಂದಿಗೆ ಮಡಿಯಾಗಿ ಒಂದು ತಟ್ಟೆಯಲ್ಲಿ ಸಕ್ಕರೆ ಮತ್ತು ಪುಟಾಣಿ ಹಾಗೂ ಊದಬತ್ತಿಯನ್ನು ಹಾಕಿಕೊಂಡು ಪೂಜೆಯ ನೈವೇದ್ಯಕ್ಕೆ ತರುತ್ತಾರೆ. ರಾತ್ರಿ ವೇಳೆಗೆ ದೇವರ ಪೂಜೆಗಾಗಿ ಮಂಟಪವಿರುವ ಚಪ್ಪರದಡಿಯಲ್ಲಿ ಊರಿನವೆರೆಲ್ಲ ಬಂದು ಸೇರುತ್ತಾರೆ. ತಾವು ತಂದ ಸಕ್ಕರೆ ಪುಟಾಣಿಯನ್ನು ದೇವರಿಗೆ ನೈವೆದ್ಯ ಮಾಡಿಸುತ್ತಾರೆ. ಇದಕ್ಕೆ ಸಕ್ಕರೆ ಓದಿಸುವುದು ಎನ್ನುತ್ತಾರೆ. ಅಲ್ಲಿ ದೇವರನ್ನು ಪೂಜೆ ಮಾಡಲು, ಸಕ್ಕರೆ ಓದಲು, ಪ್ರಸಾದ ನೀಡಲು ಹಲವು ಮುಸ್ಲಿಮರು ಮಂಟಪದೊಳಗೆ ಇರುತ್ತಾರೆ. ಅವರು ಬಂದವರಿಂದ ಸಕ್ಕರೆ ಪುಟಾಣಿ ಪಡೆದು, ಅವರು ತಂದ ಊದಬತ್ತಿಯನ್ನು ದೂಪಹಾಕಿ ಅದರ ಬೂದಿಯನ್ನು ಹಣೆಗೆ ಹಚ್ಚುತ್ತಾರೆ. ಮತ್ತೊಬ್ಬರು ನವಿಲುಗರಿಯಿಂದ ಮಾಡಿದ ಕಟ್ಟಿನಿಂದ ಅಲಾಂಬೋ ದಿನ್ ಎಂದು ಹೇಳಿ ಮೆತ್ತಗೆ ತಲೆಗೆ ಹೊಡೆದು ಆರ್ಶಿವಾದಿಸುತ್ತಿರುತ್ತಾರೆ. ಪೂಜೆ ಮಾಡಿಸಿಕೊಂಡವರೆಲ್ಲರೂ ಆ ಚಪ್ಪರದ ಮುಂದೆ ಬಂದು ಕೂರಿತ್ತಾರೆ. ತಾವು ಓದಿಸಿದ ಪ್ರಸಾದವನ್ನು ಎಲ್ಲರಿಗೂ ಹಂಚಿ ಸಂಭ್ರಮ ಪಡುತ್ತಾರೆ. ಅದರ ಖುಷಿಯಲ್ಲಿ ಪಾಲುದಾರರಾಗಿ ನಾವು ಎಲ್ಲರಿಂದ ಪ್ರಸಾದ ಪಡೆದು ನಮ್ಮ ತಟ್ಟೆಯನ್ನು ತುಂಬಿಸಿಟ್ಟಿರುತ್ತೆದ್ದೆವು.

ಇನ್ನೊಂದೆಡೆ, ಮನೋರಂಜನೆಗಾಗಿ ವಿವಿಧ ರೀತಿಯ ಆಟಗಳು ನಡೆಯುತ್ತಿರುತ್ತವೆ. ಅದರಲ್ಲಿ ಹಲಗೆ ಬಾರಿಸುವ ಮೂಲಕ ದುಡ್ಡು ಹುಡುಕುವ ಆಟ ತುಂಬಾ ಮಜ! ಒಬ್ಬರ ಕಣ್ಣು ಕಟ್ಟಿ ದುಡ್ಡನ್ನು ಮಣ್ಣಿನಲ್ಲಿ ಮುಚ್ಚಿಡಲಾಗುತ್ತದೆ. ನಂತರ ಅವನ ಕಣ್ಣಿನ ಬಟ್ಟೆಯನ್ನು ಬಿಚ್ಚಿ ದುಡ್ಡು ಹುಡುಕಲು ಹೇಳುತ್ತಾರೆ. ಇದಕ್ಕೆ ಹಲಗೆಯ ಸದ್ದು ಸಹಾಯ ಮಾಡುತ್ತದೆ. ಅವನು ಕೈ ಮುಂದೆ ಮಾಡಿ ಒಂದು ಸುತ್ತು ಹಾಕುತ್ತಿದ್ದಂತೆ, ದುಡ್ಡು ಯಾವ ದಿಕ್ಕಿನಲ್ಲಿರುತ್ತದೆಯೋ ಆ ದಿಕ್ಕಿನತ್ತ ಕೈ ಬೆರಳು ಹೋಗುತ್ತಿದ್ದಂತೆ ಶಬ್ಧ ಜೋರಾಗುತ್ತದೆ. ಆ ದಿಕ್ಕಿನತ್ತ ಹುಡುಕುವುದು, ಅದು ಇರುವ ಜಾಗದ ಹತ್ತಿರ ಹೋದರೆ ಹಲಗೆಗೆ ಎರಡು ಪೆಟ್ಟು ಜೋರು ಬೀಳುವುದು, ಅಲ್ಲಿಲ್ಲದಿದ್ದರೆ ಹಲಗೆ ಮೌನ ವಹಿಸುವುದು. ಹಲಗೆಯ ಶಬ್ದವನ್ನಾಲಿಸಿ ದುಡ್ಡು ಹುಡುಕಿಸುವುದು. ಹುಡುಕಿದ ನಂತರ ಹಲಗೆ ಬಾರಿಸುವವರ ಸುತ್ತ ಎಲ್ಲರೂ ಸೇರಿ ಕುಣಿಯುವುದು. ನಾವು ಚಿಕ್ಕವರಿದ್ದಾಗ ಮಾದ್ಯಮದ ಹಾವಳಿ ಇಷ್ಟೊಂದು ಇರಲಿಲ್ಲ. ಹಾಗಾಗಿ ಪೇಟೆಯಿಂದ ಬಾಡಿಗೆಗೆ ಟಿ.ವಿ. ತಂದು ಇಡೀ ರಾತ್ರಿ ಹಲವು ಭಕ್ತಿಪ್ರಧಾನ ಚಲನಚಿತ್ರಗಳ ಪ್ರಸಾರ ಕಾರ್ಯಕ್ರಮಗಳು ನಡೆಯುತ್ತಿದ್ದವು. ಅದಕ್ಕಾಗಿ ಮಕ್ಕಳು ಸಂಜೆಯೇ ಚಾಪೆ, ಕಂಬಳಿಗಳನ್ನು ಹಾಸಿ ಜಾಗ ಭದ್ರ ಮಾಡಿಕೊಳ್ಳುತ್ತಿದ್ದೆವು. ನಮ್ಮ ಮನೆಯವರು ಅಲ್ಲಿಗೆ ಬಂದು ಸಿನಿಮಾ ನೋಡಿದರೆ, ನಾವು ಅಲ್ಲೇ ಒಂದು ಸುತ್ತು ನಿದ್ದೆ ಮಾಡುತ್ತಿದ್ದೆವು. ಇಡೀ ಒಂದೆಡೆ ರಾತ್ರಿ ಪೂಜೆ, ಓದಿಕೆ ನಡೆಯುತ್ತಿದ್ದರೆ, ಇನ್ನೊಂದೆಡೆ ಚಲನಚಿತ್ರ ವೀಕ್ಷಣೆ ಹಾಗೂ ಕೊಂಡದ ತಯಾರಿ ನಡೆಯುತ್ತಿತ್ತು. ಬೆಂಕಿ ಮಾಡುವುದು ಎಲ್ಲಾ ಕಟ್ಟಿಗೆಗಳು ಉರಿದು ಕೆಂಡವಾಗುವಂತೆ ನೋಡಿಕೊಳ್ಳುವುದು, ಅದರ ಸುತ್ತಾ ನಿಂತು ಚಳಿಕಾಯಿಸಿಕೊಳ್ಳುವುದು ಇವೆಲ್ಲಾ ನಡೆಯುತ್ತಿದ್ದವು. ಅಂದು ಶಿವರಾತ್ರಿಯ ಜಾಗರಣೆಯ ಸ್ವರೂಪದಲ್ಲಿಯೇ ಇರುತ್ತದೆ.
ಬೆಳಗಿನ ಜಾವ ನಾಲ್ಕು ಗಂಟೆಯ ಸಮಯಕ್ಕೆ ಸಿನಿಮಾ ಮುಗಿಯುತ್ತಿದ್ದಂತೆ ಹೆಂಗಸರು ತಮ್ಮತಮ್ಮ ಮಕ್ಕಳ್ಳನ್ನು ಹೊಡೆದು ಎಬ್ಬಿಸಿಕೊಂಡು ಮನೆಗೆ ತೆರಳುತ್ತಿದ್ದರು. ಮನೆಗೆ ಬಂದು ಸ್ನಾನ ಮಾಡಿ ಮನೆ ಮನೆಯಿಂದ ಒಂದೊಂದು ಪಾತ್ರೆ ಅಥವಾ ಪ್ಯಾಕು ಉಪ್ಪನ್ನು ತೆಗೆದುಕೊಂಡು ಹೋಗಿ ಕೊಂಡ ಹಾಯಲು ತಯಾರದ ಬೆಂಕಿಯ ಗುಡ್ಡೆಯ ಸುತ್ತ ನಿಲ್ಲುತ್ತಾರೆ. ಇದರಲ್ಲಂತೂ ನಾ ಮುಂದು ತಾ ಮುಂದು ಎನ್ನುವ ಸ್ಪರ್ಧೆ. ಕೊಂಡ ಹಾಯುವುದನ್ನು ಹತ್ತಿರದಿಂದ ನೋಡಬೇಕು, ಉಪ್ಪನ್ನು ನೇರವಾಗಿ ಆ ಕೊಂಡದೊಳಗೇ ಬೀಳುವಂತೆ ಹಾಕಬೇಕು ಇನ್ನು ಏನೇನೊ.. ಹಾಗಾಗಿ ಕತ್ತಲೆಯಿರುವಾಗಲೇ ಬಂದು ತಮ್ಮ ಜಾಗವನ್ನು ಭದ್ರಪಡಿಸಿಕೊಳ್ಳುತ್ತಿರುತ್ತಾರೆ. ಮಕ್ಕಳಂತೂ ನಿದ್ದೆಯ ಗುಂಗು ಇಲ್ಲದೇ ಮೊದಲೇ ತಮಗೂ, ತಮ್ಮ ಮನೆಯವರಿಗೂ ಸೇರಿ ಒಳ್ಳೆಯ ಜಾಗ ಹುಡುಕಿ ಬುಕ್ ಮಾಡಿರುತ್ತಾರೆ. ಇವತ್ತಿನ ಆನ್‍ಲೈನ್ ಬುಕ್‍ಗಿಂತಲೂ ವೇಗ, ಅಷ್ಟೇ ಪಕ್ಕಾ. ಯಾರೇ ಬಂದರೂ, ಎಳೆದರೂ ಅವರು ಜಾಗ ಬಿಡುವುದಿಲ್ಲ.

ಬೆಳಗಿನ ಜಾವಕ್ಕೆ, ಸೂರ್ಯೋದಯಕ್ಕೂ ಮೊದಲೇ ದೇವರ ಪೂಜೆಯೂ ಮುಗಿಯುತ್ತದೆ. ದೇವರ ಓದಿಕೆ ಮುಗಿದ ನಂತರ ಮುಸ್ಲಿಮರಲ್ಲಿ ಒಬ್ಬರೋ ಇಬ್ಬರೋ ಅಲ್ಲಿದ್ದ ದೂಪ ಮತ್ತು ಪೂಜೆಯ ಪರಿಕರಗಳನ್ನು ಹಿಡಿದು ಮುಂದೆ ಸಾಗುತ್ತಾರೆ. ಅಲ್ಲಿದ್ದ ದೇವರನ್ನು ಭಕ್ತಿಯಿಂದ ಬಂದು, ದೇವರನ್ನು ಹಿಡಿಯಲು ಆಸಕ್ತರಾದವರಿಗೆ, ಹರಕೆ ಮಾಡಿಕೊಂಡವರಿಗೆ (ಮಕ್ಕಳಗಾದಿದ್ದವರು, ಕಾಯಿಲೆಯಿರುವವರು, ದುಡಿದ ಫಲ ಕೈ ಸೇರದಿದ್ದವರು ಹರಕೆ ಮಾಡಿಕೊಂಡಿರುತ್ತಾರೆ) ಒಂದೊಂದೇ ದೇವರನ್ನು ಇತ್ತಿ ಕೊಡಲಾಗುತ್ತದೆ. ಅವರೂ ಅಷ್ಟೇ ಭಯ ಭಕ್ತಿಯಿಂದ ದೇವರನ್ನು ಹಿಡಿದು ಮಂಟಪದಿಂದ ಹೊರಬರುತ್ತಾರೆ. ಅದರಲ್ಲಿ ಹಸಲರ ಜಾತಿಯ ಮುಖ್ಯಸ್ಥರು ಕತ್ತಿಯ ದೇವರನ್ನು ಹಿಡಿಯುತ್ತಾರೆ. ಅವರಿಗೆ ಪ್ರತಿ ವರ್ಷವೂ ಆ ದೇವರು ಮೈಮೇಲೆ ಬರುತ್ತೆ ಎಂಬ ವಾಡಿಕೆ ಇದೆ. ಬೇರೆ ಯಾವುದೋ ಊರಿಗೆ ಹೋಗಿ ನೆಲೆಸಿದ್ದರೂ ಪ್ರತಿ ವರ್ಷ ಈ ಹಬ್ಬಕ್ಕೆ ಅವರು ಬರುತ್ತಾರೆ. ದೇವರು ಕರೆಸಿಕೊಳ್ಳುತ್ತಾನೆ. ಅಷ್ಟು ಸತ್ಯ ಇದೆ ಎಂದು ಜನರು ಮಾತನಾಡುತ್ತಿದ್ದರು. ಆ ಹಿರಿಯ ದೇವರನ್ನು ಹಿಡಿದು ಮುಂದೆ ಬರುತ್ತಾನೆ, ಉಳಿದ ದೇವರುಗಳನ್ನು ಇನ್ನುಳಿದ ಬೇರೆ ಬೇರೆ ಜಾತಿಯವರು ಹಿಡಿದುಕೊಂಡಿರುತ್ತಾರೆ. ಮಂಟಪದಿಂದ ಹೊರಬರುತ್ತಿದ್ದಂತೆ ದೇವರು ಅದನ್ನು ಹಿಡಿದವರ ಮೈದುಂಬುತ್ತದೆ. ಮಂಟಪ ಮತ್ತು ಅದರ ಪಕ್ಕದ ಬೇವಿನ ಮಂಟಪಕ್ಕೆ ಏಳು ಸುತ್ತು ಹಾಕಿ ಅಲ್ಲಿಂದ ನೇರವಾಗಿ ಕೊಂಡಹಾಯುವ ಸ್ಥಳಕ್ಕೆ ಆ ದೇವರು ಬರುತ್ತವೆ.
ಆ ದೇವರನ್ನು ಹಿಡಿದವರು ಕಣ್ಣು ಮುಚ್ಚಿರುತ್ತಾರೆ. ದೇವರೇ ಅವರನ್ನು ಕೊಂಡದ ಹತ್ತಿರ ಕರೆದುಕೊಂಡು ಬರುತ್ತದೆ. ಅವರನ್ನು ನೋಡುವವರು ಚಪ್ಪಲಿ ಹಾಕಿಕೊಂಡು ನಿಂತಿರಬಾರದು, ಹಾಗೇ ನಿಂತಿದ್ದರೆ ಅವರನ್ನೆ ಹುಡುಕಿಕೊಂಡು ಬಂದು ಚಪ್ಪಲಿ ಬಿಡುವವರೆಗೂ ಸುತ್ತು ಹಾಕುತ್ತವೆ. ಹಾಗಾಗಿ ತುಂಬಾ ಶುದ್ಧವಾಗಿರಬೇಕೆಂದು ಅಜ್ಜಿ ಎಚ್ಚರಿಸುತ್ತಿದ್ದರು. ಯಾರಾದರೂ ಚಪ್ಪಲಿ ಹಾಕಿದ್ದು, ಅವರನ್ನು ದೇವರು ಸುತ್ತು ಹಾಕಿದರೆ, ನೋಡು ಹೇಳಿದ್ನಲ್ಲಾ.. ಅಂಥ ಅದನ್ನು ತೋರಿಸಿ ಕೈ ಮುಗಿಸುತ್ತಿದ್ದರು. ದೊಡ್ಡವರು ಮುಂದೆ ನಿಂತು ಜನರನ್ನು ಬದಿಗೆ ಸರಿಸುತ್ತಾ, ಮದ್ಯೆ ಉಪ್ಪು ಹಾಕದಂತೆ, ಚಪ್ಪಲಿಗಳನ್ನು ದೂರ ಬಿಡುವಂತೆ ಎಚ್ಚರಿಸುತ್ತಾರೆ. ನೆರೆದಿದ್ದ ಎಲ್ಲಾ ಜನರೂ ದೇವರ ಆಗಮವನ್ನೇ ನೋಡಿ, ಕೊಂಡ ಹಾಯುವಲ್ಲಿಗೆ ಬಂದ ತಕ್ಷಣ ಎಲ್ಲಾರೂ ಕೈಮುಗಿದು ನಮಸ್ಕರಿಸುತ್ತಾರೆ. ದೇವರು ಆ ಕೊಂಡದ ಸುತ್ತ ಮೂರು ಸುತ್ತು ‘ಅಲಾಂಬೋ ದೀನ್’ ಎನ್ನುತ್ತಾ ಸುತ್ತು ಹಾಕುತ್ತವೆ. ನಂತರ ದೂಪವನ್ನು ಹಿಡಿದುಕೊಂಡವರು ಅಲಾದಿ ಗುಂಡಿಗೆ ಪೂಜೆ ಮಾಡಿ ನಮಸ್ಕರಿಸಿ ಕೊಂಡದಲ್ಲಿ ಪ್ರವೇಶ ಮಾಡುತ್ತಾರೆ. ಅವರನ್ನು ಹಿಂಬಾಲಿಸುವ ದೇವರುಗಳನ್ನು ಹಿಡಿದವರೂ ಕೊಂಡದಲ್ಲಿ ನಡೆದಾಡುತ್ತಾರೆ. ಇದು ಸುಮಾರು ಐದು ಹತ್ತು ನಿಮಿಷ ನಡೆಯುತ್ತದೆ. ಅದರಲ್ಲಿ ದೊಡ್ಡವರು ಮತ್ತು ಮಕ್ಕಳು ಇರುತ್ತಾರೆ. ಕತ್ತಿ ದೇವರು ಕೆಲವೊಮ್ಮೆ ಅದರೊಳಗೇ ನಿಲ್ಲುತ್ತದೆ. ಹಾಗೆ ನಡೆದರೂ, ನಿಂತರೂ ಅವರ ಕಾಲು ಸುಡುವುದಿಲ್ಲ. ಅವರು ಮುಖ ಕಿವಿಚುವುದಿಲ್ಲ, ಕಣ್ಣೂ ಬಿಡುವುದಿಲ್ಲ. ಇದನ್ನು ಜನ ಆಶ್ಚರ್ಯದಿಂದ ಅದನ್ನೇ ಕಣ್ಣುಬಾಯಿ ಬಿಟ್ಟು ನೋಡುತ್ತಿರುತ್ತಾರೆ.

ಅವರು ಕೊಂಡ ಹಾದು ಮುಗಿದ ನಂತರ ಗ್ರಾಮದ ಎಲ್ಲಾ ದೇವಾಲಯಗಳನ್ನು, ಮಸೀದಿಯನ್ನೊಳಗೊಂಡು ಒಂದು ಸುತ್ತು ಸುತ್ತಿ ಬರುತ್ತವೆ. ಆ ಸಂದರ್ಭದಲ್ಲಿ ಹರಕೆ ಮಾಡಿಕೊಂಡ ಇತರ ಜನರೂ ಸಹ ಆ ಕೊಂಡದಲ್ಲಿ ನಡೆದು ಬರುತ್ತಾರೆ. ದೇವರ ಸತ್ಯ ಇರುವುದರಿಂದ ಕೊಂಡದಲ್ಲಿ ನಡೆದರೆ ಕಾಲು ಸುಡುವುದಿಲ್ಲ, ಸುಳ್ಳು ಮೋಸ ಮಾಡಿ ಅದರಲ್ಲಿ ನಡೆದರೆ ಸುಡುತ್ತದೆ ಎಂದು ನಂಬಿಕೆ ಇದೆ. ದೇವರು ಪುನಃ ಕೊಂಡದ ಕಡೆ ಬರುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿಕೊಂಡು, ಅಲ್ಲಿದ್ದ ಹಿರಿಯರು ಉಪ್ಪು ಹಾಕಲು ಸಮ್ಮತಿಸುತ್ತಾರೆ. ತಮ್ಮ ಕಷ್ಟಗಳನ್ನು ಉಪ್ಪಿನ ರೂಪದಲ್ಲಿ ಆ ಕೆಂಡದ ಗುಂಡಿಗೆ ಹಾಕಿ ಸುಡಲಾಗುತ್ತದೆ. ಉಳಿದಿದ್ದನ್ನು ದೇವರು ನೋಡಿಕೊಳ್ಳುತ್ತಾನೆ ಎಂದು ಹೇಳಿ ಉಪ್ಪು ಹಾಕಲಾಗುತ್ತದೆ. ಉಪ್ಪು ಹಾಕುವುದೇ ಒಂದು ಸಡಗರ, ನಾನು ಹೆಚ್ಚು ಉಪ್ಪು ಹಾಕಿದೆ, ನಾನು ಹಾಕಿದ ಉಪ್ಪು ಅಲ್ಲಿ ಬಿತ್ತು, ಇಲ್ಲಿ ಬಿತ್ತು ಎಂದು ಮಕ್ಕಳ ವಾದ. ಜಾಸ್ತಿ ಉಪ್ಪು ಬೇಕು ಎಂದು ಹಠ. ಅವನ್ನು ಸಮಧಾನ ಪಡಿಸಿ, ‘ಪಸಂದಾಗಿಟ್ರೆ ಮುಂದಿನ ವರ್ಷ 2 ಪ್ಯಾಕ್ ಉಪ್ಪು ಹಾಕ್ತೀನಿ ಅಂಥ ದೇವ್ರಿಗೆ ಹರಕಿ ಕಟ್ಗ ಎಂದು ಅಲ್ಲಿಂದ ದೂರ ಕರೆದುಕೊಂಡು ಹೋಗುವ ಪಾಲಕರು. ಅದೇನೋ ಒಂದು ಖುಷಿ, ದೇವರಿದ್ದಾನೆ ಎನ್ನುವ ನೆಮ್ಮದಿ. ಹಾಗೆ ಉಪ್ಪು ಹಾಕುವುದರಿಂದ ನಮ್ಮ ಕಷ್ಟಗಳನ್ನು ಅಲ್ಲಿ ಹಾಕಿ ಸುಟ್ಟುಬಂದಂತಾಗುತ್ತದೆ. ಹಾಗಾಗಿ ಎಲ್ಲರ ಕೈಯಿಂದಲೂ ಉಪ್ಪು ಹಾಕಿಸಲಾಗುತ್ತದೆ. ಇಲ್ಲಿಗೆ ಒಂದು ಘಟ್ಟ ಮುಗಿಯುತ್ತದೆ.

ಆಯುಧಗಳನ್ನು ಹಿಡಿದವರ ಮೈದುಂಬಿದ ದೇವರು ಪ್ರತಿ ಮನೆ ಮನೆಗೂ ಬೇಟಿಕೊಡುತ್ತವೆ. ಆಗ ಮನೆಯವರು ಅವರ ಕಾಲು ತೊಳೆದು, ಊದಬತ್ತಿ ನೀಡಿ ಅವರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆಯುತ್ತಾರೆ. ಅವು ಹೋದ ಮನೆಯಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದಾದರೆ ಮುಂದಿನ ಮನೆಗೆ ಬೇಟಿ. ಸಮಸ್ಯೆಯಿದ್ದರೆ, ಮಾಟ ಮಂತ್ರ ಮಾಡಿಸಿದ್ದರೆ, ದುಷ್ಟ ಶಕ್ತಿಗಳು ಅಲ್ಲಿ ವಾಸವಿದ್ದರೆ ಅವುಗಳನ್ನು ಓಡಿಸಿಯೇ ಮುಂದಿನ ಮನೆಗೆ ಹೋಗುತ್ತವೆ ಎನ್ನಲಾಗುತ್ತದೆ. ಇದಕ್ಕೆ ತಕ್ಕಂತೆ ದೇವರು ಮನೆಯೊಳಗೆ ಬರುವುದು, ಮನೆಯನ್ನು ಸುತ್ತು ಹಾಕುವುದು, ಓಡುವುದು, ಹೊಡೆಯುವುದು ನಡೆಯುತ್ತದೆ. ನಂತರ ದೂಪಹಾಕಿದರಿಂದ ಬಂದ ಬೂದಿಯನ್ನು ಅವರಿಗೆ ನೀಡಿ ಮುಂದಿನ ಮನೆಗೆ ಹೋಗುತ್ತವೆ. ಮಾಂಸಹಾರ, ಮಡಿಯಿಲ್ಲದ ಮನೆಗೆ ಆ ದೇವರು ಪ್ರವೇಶ ಮಾಡುವುದಿಲ್ಲವಂತೆ. ಹಾಗಾಗಿ ಹಬ್ಬ ಮುಗಿಯುವವರೆಗೂ ಮಡಿಯಿಂದ ಇರುತ್ತಾರೆ. ಇದನ್ನು ನೋಡಲು ಜನರು ಆ ದೇವರನ್ನು ಹಿಂಬಾಲಿಸಿಕೊಂಡು ಹೋಗುವುದು, ದೇವರು ಓಡಿದಂತೆ ಇವರಿಗೆ ಓಡಲು ಆಗದಿದ್ದಾಗ ದೇವರಿಗೇ ಬೈದು, ತಪ್ಪಾಯ್ತು ಎಂದು ಬೇಡುವುದೆಲ್ಲಾ ನಡೆಯುತ್ತಿರುತ್ತದೆ. ಅದರ ಕುರಿತು ಚರ್ಚೆಗಳೂ ವಾರಗಟ್ಟಲೇ ನಡೆಯುತ್ತವೆ. ‘ಅವ್ರ ಮನೆ ಒಳಗೆ ದೇವ್ರು ಹೋಗಿತ್ತು, ಅಲ್ಲಿ ಓಡ್ತಿತ್ತು, ಚೌಡಮ್ಮನ ಹತ್ರ ಹೋಗಿ ಸುತ್ತು ಹಾಕ್ತಿತ್ತು. ಆ ಮನೆಯಲ್ಲಿನ ಮಾಟ ಮಂತ್ರ ಎಲ್ಲಾ ತಗೀತು, ಇವ್ರಿಗೆ ಬೈತು, ಅವ್ರಿಗೆ ಹೊಡಿತು…’ ಹೀಗೆ ಹಬ್ಬವಾದ ಒಂದು ವಾರದವರೆಗೂ ಮಾತಿನ ಸುದ್ದಿಗೇನು ಕೊರತೆ ಇಲ್ಲ.

ಎಲ್ಲಾ ಮನೆಗೂ ಬೇಟಿ ನೀಡಿದ ನಂತರ ಪುನಃ ಮಂಟಪದ ಬಳಿ ಬಂದು ದೇವರು ನೆಲೆ ನಿಲ್ಲುತ್ತವೆ. ಇನ್ನೂ ಕೆಲವೊಮ್ಮೆ ಇಡೀ ದಿನ ಸುತ್ತುತ್ತಲೇ ಇರುತ್ತವೆ. ಅವುಗಳನ್ನು ಹಿಡಿದು ಮಂಟಪದೆದುರು ತಂದು ನಿಲ್ಲಿಸಲಾಗುತ್ತದೆ. ನಂತರ ಸಂಜೆಯ ಸಮಯಕ್ಕೆ ಅವುಗಳನ್ನು ಮೈತೊಳೆಸಲು ಕೆರೆಗೆ ಕರೆದೊಯ್ಯಲಾಗುತ್ತದೆ. ಆ ಸಂದರ್ಭದಲ್ಲಿಯೂ ದೇವರು ಮೈದುಂಬಿ ಓಡುವುದು, ಬೇವಿನ ಕಟ್ಟೆ ಸುತ್ತುವುದು, ಅಳುವುದು ನಡೆಯುತ್ತದೆ. ನಂತರ ಕೆರೆಗೆ ಕರೆದುಕೊಂಡು ಹೋಗಿ ಅವುಗಳನ್ನು ತೊಳೆದು, ತಿಥಿ ಕಾರ್ಯಮಾಡಿ ಹಸಿರು ಬಟ್ಟೆಯಲ್ಲಿ ಕಟ್ಟಿ ತರಲಾಗುತ್ತದೆ. ಅದೇ ಸಂದರ್ಭಕ್ಕೆ ಕೊಂಡದ ಗುಂಡಿಯನ್ನು ಮುಚ್ಚಿ, ಅದರ ಮದ್ಯದಲ್ಲಿ ಒಂದು ಸಗಣಿಯ ಉಂಡೆ ಮಾಡಿ ಅದಕ್ಕೆ ಪೂಜೆ ಮಾಡಿ, ಅದರ ಮುಂದೆ ತುಳಸಿ ನೆಡಲಾಗುತ್ತದೆ. ಅಲ್ಲಿ ಜನರು ಓಡಾಡದಂತೆ ಸುತ್ತ ಕಟ್ಟಿಗೆ, ಮುಳ್ಳು ಇಡಲಾಗುತ್ತದೆ. ಶುದ್ಧಿಮಾಡಿ, ಬಟ್ಟೆಯಲ್ಲಿ ಸುತ್ತಿದ ದೇವರನ್ನು ತಂದು ಕಟ್ಟಿಡಲಾಗುತ್ತದೆ. ಮುಂದಿನ ಅಲಾದಿ ಹಬ್ಬದವರೆಗೂ ಅದನ್ನು ಬಿಚ್ಚುವುದಿಲ್ಲ. ಹಬ್ಬ ಪ್ರಾರಂಭವಾದಾಗ ಎಲ್ಲರಲ್ಲೂ ಸಂಭ್ರಮದ ವಾತವರಣವಿದ್ದರೆ, ಹಬ್ಬ ಮುಗಿದ ದಿನ ಇಡೀ ಗ್ರಾಮದಲ್ಲಿ ಶೋಕದ ವಾತಾವರಣ ಇರುತ್ತದೆ. ಏಕೆ ಎಂದು ಕೇಳಿದರೆ ಅದು ದೇವರ ಮಹತ್ಮೆ, ಹಿಂದಿನಿಂದ ಹಾಗೇ ಆಗ್ತ ಇದೆ ಎಂದು ಹಿರಿಯರು ಹೇಳುತ್ತಾರೆ. ಅದೇನೇ ಇರಲಿ, ಎಲ್ಲಾರೂ ಸೇರಿ ಮೊಹರಾಂನ ಕತ್ತಲ ರಾತ್ರಿಯನ್ನು ಗ್ರಾಮದೇವರ ಹಬ್ಬದಂತೆ ಆಚರಿಸಿ ಸಂತೋಷ ಪಡುತ್ತಾರೆ. ಇಲ್ಲಿ ಮುಸಲ್ಮಾನ, ಹಿಂದೂ ಮತ್ಯಾವುದೋ ಜಾತಿ ಕುಲದ್ದು, ಅವರದ್ದು ಇವರದ್ದು ಅನ್ನುವ ಭಾವನೆ ಅಲ್ಲಿ ಇವತ್ತಿಗೂ ನೋಡಿಲ್ಲ. ಪ್ರತಿ ಮೋಹಾರಂ ಹಬ್ಬದಲ್ಲಿಯೂ ಇದೇ ವಾತವರಣ ಇರುತ್ತದೆ. ಕಾಲ ಬದಲಾದ ಹಾಗೇ ಆಟಗಳು, ಮನೋರಂಜನೆಗಳ ವಿಧಾನಗಳು ಬದಲಾಗಿವೆಯೇ ವಿನಃ, ಈ ಹಬ್ಬದ ಕುರಿತ ಜನರ ಧೋರಣೆಗಳಲ್ಲ. ಹಬ್ಬದ ಕೆಲಸಗಳಲ್ಲ. ಒಂದು ದಿನ ಮಾಡುವ ಹಬ್ಬವು ಒಂದು ವಾರದಿಂದ ಎಲ್ಲರನ್ನು ಒಟ್ಟುಹಾಕಿ, ಸಂತೋಷದ ವಾತಾವರಣ ನಿರ್ಮಿಸಿ ಲವಲವಿಕೆ ಮೂಡಿಸುತ್ತದೆ. ಇದಕ್ಕೆ ನಮ್ಮ ಹಿರಿಯರು ಹೇಳುವುದು ಏನಿಸುತ್ತದೆ ಹಬ್ಬದ ವಾತಾವರಣ ಎಂದು!

ಆದರೆ, ಸೆಕ್ಯಲರ್, ಮೂಲಭೂತವಾದಿಗಳ ಪ್ರಭಾವ ಹೀಗೆ ಮುಂದುವರೆದರೆ ಈ ರೀತಿಯ ಹಬ್ಬಗಳನ್ನು ಹೀಗೆ ಮುಂದುವರೆಸಿಕೊಂಡು ಹೋಗುವುದಿರಲಿ, ಈ ರೀತಿ ಆಚರಿಸುತ್ತಿದ್ದರು ಎನ್ನುವುದನ್ನು ಊಹಿಸುವುದೂ ಕಷ್ಟವಾಗುವ ಸ್ಥಿತಿ ನಿರ್ಮಾಣವಾಗುವುದರಲ್ಲಿ ಸಂಶಯವಿಲ್ಲ. ಏಕೆಂದರೆ, ಇವರ ಸೆಕ್ಯಲರ್ ನೀತಿ ಕೆಲಸ ಮಾಡಬೇಕಾದರೆ ಹಿಂದೂ ಮುಸ್ಲೀಮರು ವೈರಿಗಳಾಗಬೇಕು. ಮೊದಲು ಆ ವೈರತ್ವ ಹುಟ್ಟುಹಾಕಿ, ಆ ನಂತರ ಅದನ್ನು ನಿಲ್ಲಿಸುವ ತಂತ್ರವಾಗಿ ಇದು ಅಸ್ತಿತ್ವಕ್ಕೆ ಬರುತ್ತದೆ. ಒಂದೊಮ್ಮೆ ಕೋಮು ಸಂಘರ್ಷ ಭಾರತದಲ್ಲಿದ್ದು(?), ಅದನ್ನು ನಿಲ್ಲಿಸಬೇಕೆನ್ನುವವರು ಈ ಮೊಹರಾಂ ಹಬ್ಬದಲ್ಲಿ ಪಾಲ್ಗೊಳ್ಳುವುದು ಉತ್ತಮ. ಏಕೆಂದರೆ, ಮೊಹರಾಂ ಹಬ್ಬವು ಇಲ್ಲಿನ ಹಿಂದೂ ಮುಸ್ಲೀಮರ ಸಂಬಂಧ ಮತ್ತು ಸಂಪ್ರದಾಯಗಳನ್ನು ಚಿಂತಕರಿಗಿಂತ ಪರ್ಯಾಯವಾಗಿ, ಹೆಚ್ಚು ಸೊಗಸಾಗಿ ತಿಳಿಸುತ್ತದೆ. ಇದೊಂದೆ ಅಲ್ಲ ದರ್ಗಾ ಪೂಜೆ, ಜಾತ್ರೆ, ದೀಪಾವಳಿ, ಇನ್ನಿತರೆ ಗ್ರಾಮದ ಹಬ್ಬಗಳು ಎಲ್ಲರನ್ನು ಒಟ್ಟುಗೂಡಿಸಿಕೊಂಡು ಸಂಭ್ರಮವನ್ನು ಹುಟ್ಟುಹಾಕುತ್ತಿದ್ದು ನಮ್ಮ ಅನುಭವ. ಆದರೆ, ಅವುಗಳೇ ಇಂದು ಗಲಾಟೆಗಳಿಗೂ ನಿದರ್ಶನವಾಗಿ, ಹಬ್ಬಗಳ ಕುರಿತು ಜಿಗುಪ್ಸೆ ಬರುವ ಕಾಲ ಹತ್ತಿರ ಬರುತ್ತಿದೆ. ಈ ಸ್ಥಿತಿಯಲ್ಲಿ ಎಲ್ಲಾ ಸಮುದಾಯದವರೂ ಸೇರಿ ಮಾಡುವ ಮೊಹರಾಂನಂತಹ ಹಬ್ಬಗಳು ಇನ್ನು ಹೆಚ್ಚು ವರ್ಷ ಉಳಿದುಕೊಂಡು ಬರಲು ಸಾಧ್ಯವೇ?!

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments