ವಿಷಯದ ವಿವರಗಳಿಗೆ ದಾಟಿರಿ

ಸೆಪ್ಟೆಂಬರ್ 4, 2017

ಅಂಕಣರಂಗ – 3 : ಡಿ.ವಿ ಪ್ರಹ್ಲಾದ್ ಅವರ ‘ಅನುದಿನವಿದ್ದು…’ ಪುಸ್ತಕದ ಪರಿಚಯ

‍ನಿಲುಮೆ ಮೂಲಕ

– ಮು.ಅ ಶ್ರೀರಂಗ ಬೆಂಗಳೂರು

‘ಅನುದಿನವಿದ್ದು… ‘ ಕಿರು ಪುಸ್ತಕದಲ್ಲಿ ಒಂಭತ್ತು  ಜನ ಲೇಖಕರ ಸಾವಿಗೆ ಮಿಡಿದ ಬರಹಗಳು ಮತ್ತು ಇಬ್ಬರು ಲೇಖಕರು ಬದುಕಿದ್ದಾಗಲೇ  ಬರೆದ ಲೇಖನಗಳಿವೆ.   ಇದರಲ್ಲಿ ರಾಘವೇಂದ್ರ ಖಾಸನೀಸ, ರಾಮಚಂದ್ರ ಶರ್ಮ,ಎಂ. ವ್ಯಾಸ, ಚಿ.ಶ್ರೀನಿವಾಸರಾಜು,ಸು.ರಂ.ಎಕ್ಕುಂಡಿ, ಕುಸುಮಾಕರ ದೇವರಗೆಣ್ಣೂರು,ಬೆಳಗೆರೆ ಕೃಷ್ಣಶಾಸ್ತ್ರಿ,ದೇಶಕುಲಕರ್ಣಿ,ಸ್ವಾಮಿನಾಥ,ಕಿ.ರಂ. ನಾಗರಾಜ ಮತ್ತು ನೀಲತ್ತಹಳ್ಳಿ ಕಸ್ತೂರಿ ಅವರುಗಳನ್ನು ಕುರಿತ ಅಪರೂಪದ ಬರಹಗಳಿವೆ. ಇಲ್ಲಿನ ಬರಹಗಳು ‘ಸಂಚಯ’ ಮತ್ತು ರಾಜ್ಯವ್ಯಾಪಿ ಪ್ರಸಾರದ ಕನ್ನಡ ದಿನಪತ್ರಿಕೆಗಳಲ್ಲಿಈ ಹಿಂದೆ ಪ್ರಕಟವಾಗಿದ್ದಂತಹವು. ಆಯಾ ಲೇಖಕರನ್ನು ಕುರಿತಂತೆ ಡಿ ವಿ ಪ್ರಹ್ಲಾದರ ಅಪರೂಪದ ಒಳನೋಟ ಮತ್ತು  ಅವರುಗಳ ಬಗ್ಗೆ ಹಾಗೂ ಅವರ ಕೃತಿಗಳ  ಬಗ್ಗೆ ವಿವರಗಳನ್ನು ಒಳಗೊಂಡ ‘ಅನುಬಂಧ’ ಈ ಪುಸ್ತಕದ ಪ್ಲಸ್ ಪಾಯಿಂಟ್. ಏಕೆಂದರೆ ಎಷ್ಟೋ ಸಲ ನಾವುಗಳು ಕೆಲವು ಲೇಖಕರ ಹೆಸರು ಕೇಳಿರುತ್ತೇವೆ ಆದರೆ ಅವರ ಪುಸ್ತಕಗಳ ಬಗ್ಗೆ ತಿಳಿದಿರುವುದಿಲ್ಲ. ಹಾಗೆಯೇ ನಾವು ಓದಬೇಕಾದಂತಹ   ಲೇಖಕರು ಹಾಗೂ ಅವರ ಕೃತಿಗಳ ಬಗ್ಗೆ ಯಾವ ಮಾಹಿತಿಯೂ ನಮಗಿರುವುದಿಲ್ಲ. ಆ ಕೊರತೆಯನ್ನು ‘ಅನುದಿನವಿದ್ದು … ‘ ತುಂಬಿಕೊಟ್ಟಿದೆ. ಈ ಒಂದು ಪ್ರಸ್ತಾವನೆಯ ನಂತರ ಇಲ್ಲಿನ ಕೆಲವು ಲೇಖನಗಳ ಬಗ್ಗೆ ಪರಿಚಯ ಮಾಡಿಕೊಳ್ಳೋಣ.

ರಾಘವೇಂದ್ರ ಖಾಸನೀಸ –ಬದುಕೆನ್ನುವ ಖಾಲಿ ಆಕಾಶದ ಎದುರು : ಕನ್ನಡದಲ್ಲಿ ಕೆಲವೇ ಕಥೆಗಳನ್ನು ಬರೆದ ಅತ್ಯುತ್ತಮ ಕಥೆಗಾರರಲ್ಲಿ ಒಬ್ಬರಾದ ರಾಘವೇಂದ್ರ ಖಾಸನೀಸರು ಪಾರ್ಕಿನ್ ಸನ್ಸ್ ಖಾಯಿಲೆಯಿಂದ ಹಾಸಿಗೆ ಹಿಡಿದಿದ್ದ ಸಂದರ್ಭದಲ್ಲಿ ಅವರನ್ನು ಭೇಟಿಯಾದ ಸನ್ನಿವೇಶದಿಂದ ಲೇಖನ ಪ್ರಾರಂಭವಾಗುತ್ತದೆ. ‘ಅದೊಂದು ವಿಚಿತ್ರ ಭೇಟಿ. ತಮ್ಮ ಕಥೆಗಳ ಮೂಲಕವಷ್ಟೇ ಪರಿಚಿತರಾಗಿದ್ದ ಅಪರೂಪದ ಕಥೆಗಾರರನ್ನು ನೋಡಲು ಹೋಗಿದ್ದೆವು. …… ಆ ಮಧ್ಯಾನ್ಹದ ಮೌನದಲ್ಲಿ ಇಂತಿಂಥವರು ಬಂದಿದ್ದಾರೆ, ನಿಮ್ಮನ್ನು ಕಾಣಬೇಕಂತೆ ಎನ್ನುವ ಒಳಮನೆಯ ಮಾತುಗಳು ನಮ್ಮ ಕಿವಿಗಳಿಗೂ ತಲುಪುತ್ತಿದ್ದವು.  ನಿಧಾನವಾಗಿ ಬಾಗಿಲ ಹತ್ತಿರ ಬರುವ ಸದ್ದಾಗಿ ಉಳಿದಿಬ್ಬರು ಎದ್ದು ನಿಂತರು. ನಾನೂ ಎದ್ದವನು ಅವರನ್ನ ಕಂಡು ಅವಾಕ್ಕಾಗಿಬಿಟ್ಟೆ. ಅಕ್ಷರಶಃ ಕೋಲಿನ ಹಾಗಿದ್ದ ಅವರ ಮೈ ಒಂಚೂರೂ ಸ್ವಾಧೀನದಲ್ಲಿರಲಿಲ್ಲ…. ನಡುಗುತ್ತಿದ್ದ ಅವರ ದೇಹ, ದಟ್ಟನೆಯ ದಾಡಿ ಬೆಳೆದ ಅವರ ಮುಖ, ಹೊಳೆಯುತ್ತಿದ್ದದ್ದು ಕಣ್ಣುಗಳು ಮಾತ್ರ. ಔಷಧಿಗಳ ಪರಿಣಾಮ ಅವರ ಕಿವಿಯೂ ಕೇಳಿಸದಂತೆ ಆಗಿದೆ. ನಡುಗುತ್ತಾ ನಿಂತೇ ನಮ್ಮ ಪರಿಚಯ ಆದ ಮೇಲೆ ಪ್ರಯಾಸದಿಂದ ಕರೆತಂದು ಕುರ್ಚಿಯ ಮೇಲೆ ಕೂಡಿಸಲಾಯಿತು. ……… ನಡುಗುತ್ತಿದ್ದ ದೇಹವನ್ನು ಸ್ವಾಧೀನಕ್ಕೆ ತಂದುಕೊಳ್ಳಲು ಬಹಳ ಪ್ರಯತ್ನಪಟ್ಟರು. ……. ಸುಮ್ಮನೆ ನಡುಗುತ್ತಲೇ ಇದ್ದ ಅವರ ಕೈಗಳನ್ನು ಗಮನಿಸುತ್ತಿದ್ದೆ. ಜೀವದ ಹಾಗೆ ಅದು ಚಡಪಡಿಸುತ್ತಿತ್ತು. ….. ದುಗುಡ ಹೊತ್ತು ಅವರಿಂದ ಬೀಳ್ಕೊಂಡು ನಾವು ಹೊರಬಂದೆವು…. ಅವರನ್ನು ಕಂಡುಬಂದ ಒಂದಿಡೀ ದಿನ ಮನಸ್ಸು ಮುರಿದುಬಿದ್ದಿತ್ತು. ಯಾವುದನ್ನು ಮಾಡಲು ಹೊರಟರೂ ಅದೇ ಚಿತ್ರ ಕಣ್ಣಿಗೆ ಕಟ್ಟತೊಡಗಿತ್ತು. ಯಾವತ್ತೋ ಓದಿದ ಅವರ ಕಥೆಗಳನ್ನು ಮತ್ತೆ ಓದಬೇಕೆನಿಸಿ ಪುಸ್ತಕದ ಗೂಡಿನಲ್ಲಿ ತಡಕಾಡಿದೆ. ಆ ಪುಸ್ತಕ ಅವರ ಹಾಗೆ ಅಜ್ಞಾತವಾಗಿ ಇತ್ತು. ಭಾನುವಾರವಾದ್ದರಿಂದ ಆ ಇಡೀ ಪುಸ್ತಕ, ಏಳು ಕಥೆಗಳ ‘ಕಥಾ ಜಗತ್ತು  ತೆರೆದಿಟ್ಟುಕೊಂಡಿತು. …. ‘ ತಬ್ಬಲಿಗಳು ಕಥೆ ಖಾಸನೀಸರ ಮಾಸ್ಟರ್ ಪೀಸ್. ನವ್ಯೋತ್ತರ ಕಾಲದ ಮುಖ್ಯ ಕಥೆಗಳಲ್ಲಿ ಒಂದು. ಕೌಟುಂಬಿಕ ಹಿನ್ನಲೆಯ ಆತ್ಮಹತ್ಯೆಯೊಂದರ ಸುತ್ತಾ ಬಿಡಿಸಿಟ್ಟುಕೊಳ್ಳುವ ಕಥೆಯ ಶಿಲ್ಪ ….. ಮಂತ್ರಾಲಯದ ಪರಿಸರದಲ್ಲಿ ಕುಟುಂಬದ ಎಲ್ಲರೂ ತಮ್ಮ ತಮ್ಮ ನಿಜಗಳನ್ನು ಕಂಡುಕೊಳ್ಳುತ್ತಾ ಮಾನಸಿಕವಾಗಿ ಹಾಗೂ ಭೌತಿಕವಾಗಿ ಛಿದ್ರಗೊಳ್ಳುತ್ತಾರೆ ….. ಖಾಸನೀಸರ ಕಥಾಜಗತ್ತು ಕುಟುಂಬ,ಕೌಟುಂಬಿಕ ಕ್ರೌರ್ಯ, ಇವೆಲ್ಲದರ ಜೊತೆಗೆ ಮನುಷ್ಯರ ಅಸಹಾಯಕತೆ, ಅಸಹನೀಯತೆಗಳನ್ನು ತನ್ನ ವಿವರಗಳಲ್ಲಿ ಎತ್ತಿ ತೋರುತ್ತದೆ. ಇಂಥ ಪ್ರಬುದ್ಧ ಹಾಗೂ ಸೂಕ್ಷ್ಮ ಕಥೆಗಾರರಾದ ಅವರು ಬರೆದದ್ದು ಕಡಿಮೆ ಆದರೂ ನಮ್ಮಲ್ಲಿ ಅದನ್ನು ಕುರಿತು ಗಮನಹರಿಸಿದ್ದು ಇನ್ನೂ ಕಡಿಮೆ.

ಎಂ. ವ್ಯಾಸ—ಇಬ್ಬನಿ ಬಿಂದುವಿನ ಕೊನೆಯ ಸ್ವಗತಗಳು : ಮುನ್ನೂರಕ್ಕೂ ಹೆಚ್ಚು ಕಥೆಗಳನ್ನು ಬರೆದಿದ್ದ ವ್ಯಾಸರನ್ನು ನಮ್ಮ ಅಕೆಡೆಮಿಕ್ ವಲಯ ಬಹಳ ತಿರಸ್ಕಾರದಿಂದ ಕಂಡಿತು. ತಾವಾಗಿ ಹೊರಬಿದ್ದು ಮಿಂಚಲು ಬಯಸದ, ಸದಾ ತಮ್ಮ ಏಕಾಂತದಲ್ಲಿ ತಾವು ಉಳಿಯುತ್ತಿದ್ದ ವ್ಯಾಸರ ಕಥಾಜಗತ್ತು ವಿಮರ್ಶಕರ ಗಮನಕ್ಕೆ ಪಾತ್ರವಾಗದೇ ಉಳಿದು ಬಿಟ್ಟಿತು…ಸಂಚಯದ ಅನೇಕ ಕವಿತೆ, ಲೇಖನಗಳ ಬಗ್ಗೆ ಬರೆದು ತಿಳಿಸುತ್ತಿದ್ದರು. ಅವರ ಅನಿಸಿಕೆಗಳು, ಅವರ ಮಾತು ನೆರವಾಗಿರುತ್ತಿತ್ತು. ಬರಬರುತ್ತಾ ನಮ್ಮ ಮೈತ್ರಿ ಗಾಢವಾಯಿತು. ಮಾತೆಲ್ಲವೂ ಫೋನುಗಳಲ್ಲೇ ಖಾಲಿಯಾಗುವ ಈ ಕಾಲದಲ್ಲೂ ವ್ಯಾಸರು ಪುಟಗಟ್ಟಲೆ ಪತ್ರ ಬರೆಯುತ್ತಿದ್ದರು. ಅಷ್ಟೇ ಉತ್ಸಾಹದಿಂದ ವಯಸ್ಸಿನಲ್ಲಿ ತುಂಬಾ ಹಿರಿಯರಾದ ಅವರ ಜೊತೆ ಮನಬಿಚ್ಚಿ ಬರೆದು ತೋಡಿಕೊಳ್ಳುತ್ತಿದ್ದೆ…ಸಂಚಯದಲ್ಲಿ ವ್ಯಾಸರ ಕಥೆಗಳನ್ನು ಕುರಿತು ಸಂಕಿರಣ ರೂಪಿಸುವಾಗ ಅವರು ಮುಜುಗರಪಟ್ಟಿದ್ದರು. ಹಾಗೇ  ಅದರ ಬಗ್ಗೆ ಅವರಿಗೊಂದು  ಕುತೂಹಲವೂ ಇತ್ತು.
ಚಿ. ಶ್ರೀನಿವಾಸರಾಜು –ನನ್ನ ಪ್ರೀತಿಯ ಮೇಷ್ಟ್ರಿಗೆ…: ಚಿ.ಶ್ರೀನಿವಾಸರಾಜು ಅವರು ನಿಧನರಾದಾಗ ಡಿ ವಿ ಪ್ರಹ್ಲಾದರು ಬರೆದ ಈ ಲೇಖನ ಪತ್ರರೂಪದಲ್ಲಿದೆ. ನನ್ನ ಪ್ರೀತಿಯ ರಾಜು ಮೇಷ್ಟ್ರಿಗೆ ಎಂದು ಪ್ರಾರಂಭವಾಗುವ ಈ ಬರಹ ಇತಿ, ನಿಮ್ಮಕೊನೆಯ ಶಿಷ್ಯ ಎಂದು ಕೊನೆಗೊಳ್ಳುತ್ತದೆ. ತೆರೆಯ ಮರೆಯಲ್ಲೇ ಇದ್ದು ಕನ್ನಡ ಭಾಷೆ,ಸಂಸ್ಕೃತಿಗಳನ್ನು ಕಟ್ಟಿದ ಶ್ರೀನಿವಾಸರಾಜು ಅವರ ವ್ಯಕ್ತಿತ್ವ ಮತ್ತು ಕೆಲಸ  ಅನನ್ಯವಾದ್ದು. ಸಾಹಿತ್ಯದ ಪಂಥಗಳಲ್ಲಿ, ಚಳುವಳಿಗಳ ಸರಪಳಿಗಳಲ್ಲಿ ಬಂಧಿತರಾಗದೆ, ಸುತ್ತಲೂ ನಡೆಯುತ್ತಿದ್ದ ಯಾವುದೇ ದೊಂಬರಾಟಗಳಿಗೂ ಸೋತವರಲ್ಲ.ಅವರ ಕೆಲಸದ ಬಗೆಗಿನ ಒಂದು ರೀತಿಯನ್ನು ಪ್ರಹ್ಲಾದರು ಹೇಳುತ್ತಾರೆ ಈ ರೀತಿ ಹೇಳುತ್ತಾರೆ —  ‘ಮೂವತ್ತು ವರ್ಷಗಳಿಗಿಂತಲೂ ಹೆಚ್ಚಿನ ಕಾಲ ಪಾಠ ಮಾಡಿಯೂ ಮೊದಲ ತರಗತಿಗೆ ಪಾಠ ಮಾಡಲು ಹೊರಟ ಹೊಸ ಮೇಷ್ಟ್ರ ಆತಂಕ ಪ್ರತಿ ತರಗತಿಗೆ ಹೋದಾಗಲೂ ನಿಮಗಿರುತ್ತಿತ್ತು. ಮೊನ್ನೆಯ ದಿನ ಬೆಳಗಿನ ಜಾವ ಎರಡು ಗಂಟೆಗೆಲ್ಲಾ ಎದ್ದು ಬೆರಳಣಿಕೆಯಷ್ಟು ಎಂ. ಎ.  ಹುಡುಗರಿಗೆ  ಪಾಠ ಮಾಡಲು ತಯಾರಿ ನಡೆಸಿದ್ದೀರಿ…ಬೋರು ಹೊಡೆಸುವ ಖಾಲಿ ಬುರುಡೆ ಭಾಷಣಕಾರರಿಗಿಂತ ಚುಟುಕಾದ ಸತ್ವಯುತವಾದ ನಿಮ್ಮ ಮಾತಿನ ನಿಯಮ ಅಸಾಧಾರಣವಾದದ್ದು …’ಯಾರೊಬ್ಬರ ಬಗ್ಗೆಯೂ ಕೆಡುಕಿನ ಮಾತುಗಳನ್ನ ಆಡದ, ಅವರಿಗೆ ಉಪಟಳ ಕೊಟ್ಟವರಿಗೂ ಸಹನೆ ತೋರಿದವರು. ಬೆಂಗಳೂರಿನ ಕ್ರೈಸ್ಟ್ ಕಾಲೇಜು ಕನ್ನಡ ಸಂಘದ ಮೂಲಕ ಶ್ರೀನಿವಾಸರಾಜು ಅವರು ಹೊಸ ಹೊಸ ಬರಹಗಾರರನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಕೈ ಹಿಡಿದು ತಂದವರು. ನಂತರದ ದಿನಗಳಲ್ಲಿ ಅವರೇ ಬೆಳಸಿದ ಪುಟ್ಟ ಪಕ್ಷಿಗಳು ರೆಕ್ಕೆ ಬಲಿತು ದೊಡ್ಡವಾಗಿ ಗಗನವಾಳುವ ಶಕ್ತಿ ದೊರೆತು ಅವುಗಳು ತಂತಮ್ಮ ಕೇಡಿಗತನಗಳಲ್ಲಿ ತೊಡಗಿಕೊಂಡು ಇವರ ಬಗ್ಗೆ ಕ್ಯಾರೇ ಅನ್ನದಿದ್ದರೂ ಅವರಿಗೆ ವಾತ್ಸಲ್ಯ ತೋರಿದವರು.
ದೇಶ ಕುಲಕರ್ಣಿ –ಬೆಳಕಿನ ಜಾಡು ತಪ್ಪಿದ ಹಕ್ಕಿ :ಅವರ ಹೆಸರು ಉಪೇಂದ್ರನಾಥ್. ಆದರೆ, ಅವರು ಸಾಹಿತ್ಯ ಜಗತ್ತಿನಲ್ಲಿ ಸುಪ್ರಸ್ಸಿದ್ಧರಾಗಿದ್ದು ‘ದೇಶ ಕುಲಕರ್ಣಿ  ಅಂತ. ನವ್ಯದ ಸಾಹಿತ್ಯ ಶಾಲೆಯ ಹಳೆಯ ವಿದ್ಯಾರ್ಥಿ. ರಾಮಚಂದ್ರ ಶರ್ಮ ಅವರಿಗೆ ವಿದ್ಯಾಗುರುಗಳು. ತಮ್ಮ ಎಪ್ಪತ್ತೊಂದನೇ ವಯಸ್ಸಿನಲ್ಲಿ ಅವರು ನಿಧನರಾದಾಗ ಸಣ್ಣದಾಗಿ ಪ್ರಕಟಗೊಂಡ ಅವರ ಸಾವಿನ ಸುದ್ದಿ ಬಿಟ್ಟರೆ ಪತ್ರಿಕೆಗಳಲ್ಲಿ ಅವರ ಬಗ್ಗೆ ಬಂದದ್ದು ಬರೀ ಮೂರು ಲೇಖನಗಳು. ಅವರು ಬದುಕಿದ್ದಾಗಲೂ ಅಜ್ಞಾತವಾಗೇ ಬದುಕಿ, ಆಗಾಗ ಮುಖ ತೋರುವ ಚುಕ್ಕೆಯ ಹಾಗೆ, ಇದ್ದೂ ಇಲ್ಲದ ಮನೆಯ ಹಿರಿಯನ ಹಾಗಿದ್ದರು…ಏಳು ಕವಿತಾ ಸಂಕಲನಗಳು, ಒಂದು ಕಥಾ ಸಂಕಲನ, ಒಂದು ನಾಟಕ ಮತ್ತು ಮೂರು ವಿಮರ್ಶಾಸಂಕಲನಗಳನ್ನು ಬರೆದಿದ್ದ ದೇಶಕುಲಕರ್ಣಿ ಅವರು ಸರ್ಕಾರಿ ನೌಕರಿಯಲ್ಲಿದ್ದರು. ನಮ್ಮ ಅಕಾಡೆಮಿಕ್ ವಲಯದ ಪರಿಧಿಯ ಆಚೆಗೆ ಉಳಿದುಬಿಟ್ಟರು. ವಿಶ್ವವಿದ್ಯಾಲಯದ ಗುಂಪುಗಳಾಗಲಿ, ಚಳವಳಿಗಳ ಗುಂಪುಗಳಾಗಲಿ ಅವರಿಗೆ ಜಾಗ ಕೊಟ್ಟಿರಲಿಲ್ಲ… ‘ಕೂಡಿಕೊಂಡ ಸಾಲು ‘ (೧೯೯೯) ಕವನ ಸಂಕಲನಕ್ಕೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದದ್ದು ಬಿಟ್ಟರೆ ಅವರಿಗೆ ಮತ್ಯಾವ ಗೌರವವೂ ಸಲ್ಲಲಿಲ್ಲ……. ಈಗಿನ ಯುವ ಲೇಖಕರ ಬಯೋಡೇಟಾಗಳಲ್ಲಿ ರಾರಾಜಿಸುವ ಎಷ್ಟೊಂದು ಪ್ರಶಸ್ತಿಗಳು ಅದಕ್ಕೊಂದು contrast.
ಅನುದಿನವಿದ್ದು … ಪುಸ್ತಕದ ಕಿರು ಪರಿಚಯ ಇಲ್ಲಿಗೆ ಮುಗಿಯಿತು. ಈ ಬರಹವನ್ನು ಮುಗಿಸುವ ಮುನ್ನ ಒಂದು ಖೇದದ ಸಂಗತಿಯನ್ನು ಓದುಗರೊಂದಿಗೆ ಹಂಚಿಕೊಳ್ಳಬೇಕೆನಿಸುತ್ತದೆ. ಅಂಕಣರಂಗ ಎಂಬ ಹೆಸರಿನಲ್ಲಿ ನಾನು ಲೇಖನ ಮಾಲೆ ಪ್ರಾರಂಭಿಸಿದ ನಂತರ ಅದರ ಎರಡನೇ ಲೇಖನವಾಗಿ ಬರೆದದ್ದು ‘ಸಂಚಯ’ ಎಂಬ ಸಾಹಿತ್ಯ ಪತ್ರಿಕೆಯಲ್ಲಿ ಪ್ರಕಟವಾದ ಆಯ್ದ ಸಂಪಾದಕೀಯಗಳ ಪುಸ್ತಕ ‘ಹೊಳೆದದ್ದು ತಾರೆ … ‘ಯ ಪರಿಚಯಾತ್ಮಕ ಬರಹ –೧೯-೫-೨೦೧೭ರಲ್ಲಿ. ಆ ಲೇಖನದ ಕೊನೆಯಲ್ಲಿ ಮುಂದಿನ ಬರಹ  ‘ಅನುದಿನವಿದ್ದು … ‘ ಪುಸ್ತಕದ ಪರಿಚಯ ಎಂದು ಬರೆದಿದ್ದೆ.  ಆ ನಂತರ ನನ್ನ laptopನ ಕೆಲವು ತಾಂತ್ರಿಕ ಸಮಸ್ಯೆಯಿಂದ ಸರಿಸುಮಾರು ಮೂರು ತಿಂಗಳುಗಳ ಕಾಲ ನಾನು ಬರವಣಿಗೆಗಳಿಂದ ದೂರವಾಗಿರಬೇಕಾಯ್ತು. ಹಿಂದೆ ತಿಳಿಸಿದಂತೆ ‘ಅನುದಿನವಿದ್ದು … ಪುಸ್ತಕದ ಪರಿಚಯ ಮಾಡಿದ್ದು ಆಯ್ತು. ಆದರೆ ಈ ಲೇಖನವನ್ನು ‘ಸಂಚಯ’  ಸಾಹಿತ್ಯ ಪತ್ರಿಕೆಯು ನಿಂತು ಹೋದ ಇಂದಿನ ಸಂದರ್ಭದಲ್ಲಿ ಬರೆಯಬೇಕಾಗಿ ಬಂದಿದ್ದು ನನ್ನ ದುರ್ದೈವ. ೧೯೮೭ರಲ್ಲಿ ಪ್ರಹ್ಲಾದರ ಜತೆ ಕೆಲವು ಗೆಳೆಯರು ಸೇರಿಕೊಂಡು ಪ್ರಾರಂಭಿಸಿದ ಈ ಸಾಹಿತ್ಯ ಪತ್ರಿಕೆ ಕಾಲ ಸರಿದಂತೆ ಗೆಳೆಯರೆಲ್ಲ ಚದುರಿ ಉಳಿದವರು ಪ್ರಹ್ಲಾದರೊಬ್ಬರೇ. (ವಿವರಗಳಿಗೆ ಅಂಕಣರಂಗದ ನನ್ನ ಎರಡನೇ ಲೇಖನ ನೋಡಬಹುದು). ಈ ಸಾಹಿತ್ಯ ಪತ್ರಿಕೆ ೨೦೧೬ನೇ  ಡಿಸೆಂಬರ್ ಸಂಚಿಕೆಯೊಂದಿಗೆ ತನ್ನ ಪ್ರಕಟಣೆಯನ್ನು ನಿಲ್ಲಿಸಿದೆ. ಎಲ್ಲಾ ಒಳ್ಳೆಯ ಕೆಲಸಗಳಿಗೂ ಒಂದು ಕೊನೆ ಎಂಬುದು ಇದೆ ಎಂದು ನಾವು ಎಷ್ಟೇ ತತ್ವಜ್ಞಾನ ಹೇಳಿಕೊಂಡು ಸಮಾಧಾನ ಪಟ್ಟುಕೊಂಡರೂ ಒಂದು ಪತ್ರಿಕೆಯ ಜತೆಗಿನ ಸಂಬಂಧ ಕಳೆದು ಹೋದ ‘ನಿಜದ ಭಾವ ‘ ತುಂಬ ದಿನ ಕಾಡುತ್ತಲೇ ಇರುತ್ತದೆ. ೨೦೦೪ರಿಂದ ನಾನು ‘ಸಂಚಯ’ದ ಓದುಗನಾಗಿದ್ದೆ. ನನ್ನ  ಲೇಖನ ಸಾಹಿತ್ಯ ಪತ್ರಿಕೆಯೊಂದರಲ್ಲಿ ಪ್ರಕಟವಾಗಬಹುದು ಎಂದು ನಾನು ಕನಸು ಕಾಣುವುದೂ ಸಾಧ್ಯವಿಲ್ಲದಾಗ ೨೦೦೪ರ ಜನವರಿ ಸಂಚಿಕೆಯಲ್ಲಿ ‘ಎಂ. ವ್ಯಾಸರ ಕತೆಗಳ ಬಗ್ಗೆ ಒಂದು ಟಿಪ್ಪಣಿ’ ಎಂಬ ಹೆಸರಿನಲ್ಲಿ ನಾನು ಬರೆದ  ಮೂರು ಪುಟಗಳ  ಒಂದು ಬರಹ ಸಂಚಯದಲ್ಲಿ ಪ್ರಕಟವಾಗಿತ್ತು. ಆ ನಂತರ  ನಾನು ಬರೆದ ಒಂದೆರೆಡು ದೀರ್ಘ ಪ್ರತಿಕ್ರಿಯೆಗಳೂ ಆ ಸಾಹಿತ್ಯ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಮುಖತಃ ನಾನು ಡಿ ವಿ ಪ್ರಹ್ಲಾದರನ್ನು ಭೇಟಿಯಾಗಿಲ್ಲ. ಫೋನು, ಇಮೇಲ್ ಮತ್ತು ವಾಟ್ಸ್ ಆಪ್ ಮೂಲಕ ಪರಿಚಯವಷ್ಟೇ. ತುಂಬಾ ಸ್ನೇಹಶೀಲರಾದ ಅವರಿಗೆ ನನ್ನೀ ಅಂಕಣದ ಮೂಲಕ  ನಮಸ್ಕಾರ.
——————————————————————————————————————————————————————
ಅಂಕಣರಂಗದ ಮುಂದಿನ ಲೇಖನ –‘ಓದು ಬರಹಕ್ಕೆ ಶತ್ರು;ಬರಹ ಓದಿಗೆ ಶತ್ರು!’
——————————————————————————————————————————————————————

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments