ಹವ್ಯಾಸಿ ರಂಗಭೂಮಿ – ಇತ್ತೀಚಿನ ಬೆಳವಣಿಗೆಗಳು
-ಎಸ್.ಎನ್. ಸೇತುರಾಮ್
ಹವ್ಯಾಸಿ ರಂಗಭೂಮಿ…
ಈ ಪದವೇ ಚೆಂದ, ರಂಗಭೂಮಿಯನ್ನು ವೃತ್ತಿ ಅಂತ ಹೇಳಿಕೊಂಡ್ರೆ ಅಪ್ರಯೋಜಕ ಅನ್ನೊರು. ನಾಟಕ ಮಾಡಿಕೊಂಡು ಬದುಕ್ತಾನೆ ಅನ್ನೋರು. ಏನು ಮಾಡ್ತಿದ್ದಿ ಅನ್ನೋ ಪ್ರಶ್ನೇಗೆ ರಂಗಭೂಮೀಲಿ ಸಕ್ರೀಯವಾಗಿದ್ದೀನಿ ಅಂದ್ರೆ, ಅದು ಬಿಟ್ಟು ಹೊಟ್ಟೆಪಾಡಿಗೆ ಏನು ಮಾಡ್ಕೊಂಡಿದ್ದೀ ಅಂತ ಕೇಳೋರು. ನನ್ನ ಬದುಕಿನ ಕಾಲಘಟ್ಟದಲ್ಲಿ ಕಾರಣಗಳು ಏನೇ ಇರಲಿ, ರಂಗಭೂಮಿ ವೃತ್ತಿ ಅಂತಾದರೆ ಒಂದು ತರಹದ ಕೀಳರಿಮೆ. ಎಲ್ಲ ಕಾಲಘಟ್ಟಗಳಲ್ಲೂ ಎಲ್ಲ ಕಲಾಪ್ರಕಾರಗಳ ಹಾಗೇನೇ ರಂಗಭೂಮಿ ಕೂಡಾ. ಹೆಸರಾಗಿ ದೊಡ್ಡೋರಾದ ಮೇಲೆ ಹಾರ ತುರಾಯಿ, ಪೇಟ, ಬಿರುದುಬಾವಲಿ, ಬಿನ್ನವತ್ತಳೆ ಎಲ್ಲಾ. ಹೆಸರಾಗೋವರೆಗೂ ಇದೊಂದು ರಕ್ತಮಾಂಸವಷ್ಟೇ ಅಲ್ಲದ, ಮನಸ್ಸು ಹೃದಯ ಇರುವ ಜೀವ ಅನ್ನೋದೇ ಯಾರ ಗಮನಕ್ಕೂ ಬರುತ್ತಿರಲಿಲ್ಲ. ಗೆದ್ದಾಗ ಮಾನ, ಗೆಲ್ಲದಿದ್ದಾಗ ಬರಿ ಅವಮಾನವೇ. ನಾಟಕದವರು ಅಯೋಗ್ಯರು, ಅಪ್ರಯೋಜಕರು, ಅವರಿಗೆ ಹೆಣ್ಣು ಕೊಡೋ ಹಾಗಿಲ್ಲ. ಮನೆಗೆ ಕರೆಯೋ ಅವಶ್ಯಕತೆ ಇಲ್ಲ. ಗೌರವಕ್ಕೆ ಅವರೆಂದೂ ಪಾತ್ರರಲ್ಲ. ಇದು ಭಾವ.
ಮನುಷ್ಯ ಕಲಾಪ್ರಕಾರಗಳಲ್ಲಿ ತನ್ನನ್ನು ತಾನು ಯಾಕೆ ತೊಡಗಿಸಿಕೊಳ್ಳುತ್ತಾನೆ. ಇದು ಮೂಲಭೂತವಾದ ಪ್ರಶ್ನೆ. ಕಥೆ ಇರಬಹುದು, ಕಾದಂಬರಿ ಇರಬಹುದು, ಕವನ, ನಾಟಕ, ಪ್ರಬಂಧ, ನಾಟ್ಯ, ಹರಿಕಥೆ, ಸಂಗೀತ ಇತ್ಯಾದಿ ಇತ್ಯಾದಿ – ಇದರಲ್ಲಿ ಮನುಷ್ಯ ಯಾಕೆ ತೊಡಗಿಸಿಕೊಳ್ತಾನೆ. ಪ್ರೇಕ್ಷಕನಿಗೆ ಬಿಡಿ. ಅವನಿಗೆ ಮನರಂಜನೆ ಅಥವಾ ಹೊತ್ತುಕಳೆಯುವ ಸಾಧನೆ. ಮಾಡೋರ ಬಗ್ಗೆ ಹೇಳಿ.ಮನುಷ್ಯ ಭಾವಜೀವಿಯೂ ಹೌದು, ಬುದ್ಧಿಜೀವಿಯೂ ಹೌದು. ಹಾಗೆ ಎಲ್ಲ ಪ್ರಾಕೃತಿಕ ತುಮಲಗಳ ನಡುವೆಯೇ ಭಾವಬುದ್ಧಿಯ ತುಮುಲಗಳೂ ಇವೆ. ಹಸಿವಷ್ಟೇ ಅಲ್ಲ. ಅದರೊಟ್ಟಿಗೆ ರುಚಿ, ಸಂತೋಷ, ಸುಖದುಃಖ ಕೂಡ. ಹಸಿವು ರುಚಿಯ ತುರ್ತು ತುತ್ತಿನ ಚೀಲ ತುಂಬುವಷ್ಟಲ್ಲಿ ಮುಗಿಯುತ್ತೆ. ಮಿಕ್ಕಭಾವಗಳ ತುರ್ತು ಮೆಚ್ಚಿಸುವ ತುಡಿತ, ಪ್ರದರ್ಶಿಸುವ ತುಡಿತ, ಇಲ್ಲಿ ಕಲಾಪ್ರಕಾರಗಳ ಉಗಮ.ನಾಟಕದ ತುರ್ತು ಇದೆ, ತೆವಲು ಇದೆ. ಆದರೆ ರಂಗಭೂಮಿಯೊಟ್ಟಿಗೆ ನೆಂಟಸ್ಥಿಕೆ ಬೆಳೆಸಿದರೆ ಅದೊಂದು ಸಾಮಾಜಿಕ ಕೀಳರಿಮೆ ಅನ್ನೋದು ಇದೆ. ಇದಕ್ಕೆ ಉತ್ತರವಾಗಿ ಬಂದದ್ದು, ಹವ್ಯಾಸಿ ರಂಗಭೂಮಿ. ಹೊಟ್ಟೆಪಾಡಿಗೆ ಬೇರೆಲ್ಲೋ ಕೆಲಸ ಮಾಡ್ತಿದ್ದೀವಿ, ಅದರೊಟ್ಟಿಗೆ ಹವ್ಯಾಸವಾಗಿ ಇದನ್ನು ಮಾಡ್ತೀನಿ ಅನ್ನೋ ಭಾವದಲ್ಲಿ ಹವ್ಯಾಸಿ ರಂಗಭೂಮಿಯಾದದ್ದು. ರಂಗಭೂಮಿ ಕಾಲಾನುಕಾಲದಿಂದ್ಲೂ ಜನಮನ ಸಂಪ್ರದಾಯದಲ್ಲಿ ಇದ್ದದ್ದೇ. ಹವ್ಯಾಸಿ ಹುಟ್ಟಿದ ನಂತರ ಅದಾಗಲೇ ಇದ್ದ ರಂಗಭೂಮಿ ವೃತ್ತಿ ಅಂತ ಅನ್ನಿಸಿಕೊಂಡ್ತು. ಹವ್ಯಾಸಿ ರಂಗಭೂಮಿಯ ನಿನ್ನೆ, ಇಂದು ನಾಳೆಗಳ ಬಗ್ಗೆ ನನ್ನ ಅನಿಸಿಕೆ, ನಾನು ತೊಡಗಿಸಿಕೊಂಡ ವರ್ಷಗಳು ಮತ್ತು ವಾತಾವರಣ- ಬೆಂಗಳೂರು, ಮೈಸೂರು – ಅಲ್ಲಿ ಆಗುಹೋಗುಗಳು ಮತ್ತು ಪರಿಸ್ಥಿತಿಗೆ ಸೀಮಿತ. 1981 ರಲ್ಲಿ ಹವ್ಯಾಸಿ ರಂಗಭೂಮಿಯ ನಂಟು ನನಗಾದಾಗ ಅದಾಗಲೇ ವೃತ್ತಿ ರಂಗಭೂಮಿ ನೆಲಕಚ್ಚಿತ್ತು. ಕರ್ನಾಟಕದ ಇತರೇ ಭಾಗಗಳಲ್ಲಿ ಸಾಕಷ್ಟು ಗುಂಪುಗಳು ವೃತ್ತಿ ರಂಗಭೂಮಿಯಲ್ಲಿ ಸಕ್ರೀಯವಾಗಿದ್ದರೂ “ಆಹಾ” “ಓಹೋ” ಅನ್ನೋ ತರಹದ್ದೇನೂ ರಾಜಧಾನಿಯ ವರೆಗೆ ಕೇಳ್ತಿರಲಿಲ್ಲ.. ಹವ್ಯಾಸಿ ರಂಗಭೂಮಿ ಉಚ್ಛ್ರಾಯ ಸ್ಥಿತಿಯಲ್ಲಿತ್ತು. ಆದರೆ ಆರೋಹಣದ ವೇಗ ಕುಂಠಿತವಾಗಿ ನಿಂತ ನೀರಾಗುವ ಎಲ್ಲಾ ಸೂಚನೆಗಳೂ ಕಾಣುತ್ತಿದ್ದವು.
ವೃತ್ತಿ ರಂಗಭೂಮಿಯಲ್ಲಿ ಕಲಾವಿದರೇ ಒಡೆಯರು, ಹವ್ಯಾಸಿಯಲ್ಲಿ ಹಾಗಲ್ಲ. ಎಲ್ಲರೂ ಒಡೆಯರೇ. ಆದರೆ ನಿರ್ವಹಣೆಗೆ “ಮುನಿರಂಗಪ್ಪ” ಇದ್ರು. ಅಲ್ಲಿ, ವೃತ್ತಿ ರಂಗಭೂಮೀಲಿ ಪ್ರೇಕ್ಷಕನಿಂದ ಹಣ ಎತ್ತಿ ಬದುಕು ನಡೆಸುತ್ತಿದ್ದರು. ಇಲ್ಲಿಹವ್ಯಾಸಿ ರಂಗಭೂಮಿಯಲ್ಲಿ ಕಲಾವಿದರು, ಬರಹಗಾರ, ನಿರ್ದೇಶಕ ಸ್ವಂತ ಹಣ ಹಾಕಿ ಪ್ರೇಕ್ಷಕನಿಗೆ ಉಣಬಡಿಸುತ್ತಿದ್ದರು. ಟಿಕೇಟ್ ಇತ್ತು ಆದರೆ ಸಬ್ಸಿಡೈಸ್ಡ್. ಪ್ರೇಕ್ಷಕ ಪ್ರಭುವಿನ ಸಹಕಾರ ಹವ್ಯಾಸಿ ರಂಗಭೂಮಿಯಲ್ಲಿ ಅದ್ಭುತ ಕರತಾಡನಕ್ಕಷ್ಟೇ ಸೀಮಿತವಾಗಿತ್ತೇ ಹೊರತು ಆರ್ಥಿಕವಾಗಿ ಯಾವುದೇ ತರಹದ ಗಣನೀಯ ಅಂತ ಅನ್ನಿಸಿಕೊಳ್ಳುವಂತಹ ದೇಣಿಗೆಯಂತೂ ಬರ್ತಿರಲಿಲ್ಲ. ವೃತ್ತಿ ರಂಗಭೂಮಿಯಲ್ಲಿ ಪ್ರೇಕ್ಷಕ ಮುಖ್ಯವಾಗಿ ಅವನು ಕೊಡುವ ಟಿಕೇಟ್ ಹಣ ಬದುಕಿಗೆ ಆಧಾರವಾಗಿದ್ದರಿಂದ ಅಲ್ಲಿಯ ನಾಟಕಗಳ ಹೂರಣ, ಆಕಾರ ಮತ್ತು ಇರಸರಿಕೆ ಪ್ರೇಕ್ಷಕನ ರುಚಿಗೆ ತಕ್ಕಂತೆ ಬದಲಾಗ್ತಾ ಹೋಗಿತ್ತು. ರಾಜ ಮಹಾರಾಜರ ಕಾಲ ಕಳೆದಿತ್ತು. ರಾಜಾಶ್ರಯವಿರಲಿಲ್ಲ. ಪಂಡಿತರು ದೂರವಾದರು. ಹೂರಣದ ಸಾಂದ್ರತೆ ಮತ್ತು ವಸ್ತು ತೆಳ್ಳಗಾಯಿತು. ಪಾಮರ ಪ್ರೇಕ್ಷಕನ ರುಚಿ ಅಭಿರುಚಿ ಅನ್ನೋ ಹೆಸರಲ್ಲಿ ಮುಕ್ಕಾಲುಮೂರು ವಾಸಿ ನಾಟಕ ತಂಡಗಳು ರೋಚಕ ಕಥೆ, ದ್ವಂದ್ವ ಸಂಭಾಷಣೆಗಳಿಗೆ ಜೋತುಬಿದ್ದು ಎಲ್ಲೋ ಒಂದು ಕಡೆ ಸಭ್ಯರು ಮತ್ತು ರಂಗಭೂಮಿ ತದ್ವಿರುದ್ಧ ಅನ್ನೋ ಭಾವ ಗಾಢವಾಯಿತು. ಈ ಪರಿಸ್ಥಿತಿಯಲ್ಲಿ ಪ್ರಸ್ತುತವಾದದ್ದು ಹವ್ಯಾಸಿ ರಂಗಭೂಮಿ. ತೊಡಗಿರುವವರೆಲ್ಲ ಹವ್ಯಾಸಿಗಳೇ. ಬೇರೆ ಬೇರೆ ವೃತ್ತಿಗಳಲ್ಲಿದ್ದು, ಉಂಬಳಕ್ಕೆ ಪ್ರೇಕ್ಷಕನ ಝಣಝಣದ ಅವಶ್ಯಕತೆ ಇರಲಿಲ್ಲ. ಎಲ್ಲ ಪ್ರಾಕಾರದ ಜನಗಳೂ ಬಂದ್ರು, ಕೈಗಾರಿಕೆಯವರು, ಬ್ಯಾಂಕಿನವರು, ಸರ್ಕಾರಿ ವೃತ್ತಿಗಳಲ್ಲಿರುವವರು, ಮುಖ್ಯವಾಗಿ ವಿಶ್ವವಿದ್ಯಾಲಯಗಳ ಉಪನ್ಯಾಸಕರು-ಎಲ್ಲ ಲಗ್ಗೆ ಇಟ್ಟರು. ಎಲ್ಲೋ ಒಂದು ಕಡೆ ಬುದ್ಧಿಜೀವಿಗಳು ಚಿಂತಕರ ತಾಣ ಹವ್ಯಾಸಿ ರಂಗಭೂಮಿಯಂತನ್ನಿಸಿ ಪ್ರೇಕ್ಷಕರು ಒಂದು ಗೌರವದ ಗುರುತಾಗಿ ಅಪ್ಪಿಕೊಂಡರು.
ವೃತ್ತಿರಂಗಭೂಮಿಯ ನಾಟಕಗಳ ಹೂರಣ, ಪುರಾಣ ಮತ್ತು ಸಾಮಾಜಿಕಕ್ಕೆ ಸೀಮಿತವಾಗಿತ್ತು. ಹವ್ಯಾಸಿಯಲ್ಲಿ ಅದನ್ನು ಮೀರಿ ಹೊರದೇಶದ ನಾಟಕಗಳು, ವಿವಿಧ ಪ್ರಾಕಾರಗಳು ಮತ್ತೆ ಅಲ್ಲಿಯ ಬಣ್ಣ ಕರ್ಟನ್ ಬೆಳಕನ್ನು ಮೀರಿ ಇಲ್ಲಿಯ ಎಷ್ಟೋ ಅವಿಷ್ಕಾರಗಳು ಬಂದವು ಮತ್ತು ನೆಲೆಯಾದವು. ಅಲ್ಲಿ ಬರೀ ಮನರಂಜನೆಗೆ ಸೀಮಿತವಾದದ್ದು, ಇಲ್ಲಿ ಬುದ್ಧಿಶಕ್ತಿಯ ಕಸರತ್ತು ಮಿಡಿತವಾಗಿ ಹವ್ಯಾಸಿ ರಂಗಭೂಮಿ ರಾಯರ ಒಡ್ಡೋಲಗವಾಯಿತು. ಸಂಭ್ರಮವಿತ್ತು. ಸುಖವಿತ್ತು. ಹೆಮ್ಮೆ ಇತ್ತು. ರಾಜ್ಯವೂ ಇತ್ತು, ಕಿರೀಟವೂ ಇತ್ತು. ಅವತ್ತು ಬಿಡಿ! ಮೆರೆದದ್ದೇ. ನಂತರದ ದಿನಗಳಲ್ಲಿ ಸಣ್ಣಗೆ ಕಸ ಸೇರೋದಕ್ಕೆ ಶುರುವಾಯ್ತು. ಗುಂಪು ಅಂತಿದ್ದ ಹಾಗೆ ರಾಜಕೀಯ. ರಾಜಕೀಯ ಅಂತಿದ್ದ ಹಾಗೆ ಬಣಗಳು. ಸಣ್ಣಗೆ ಸರ್ಕಾರದ ತಿಜೋರಿಯಿಂದಲೂ ನಾಲೆಗಳಾದವು. ಅಲ್ಲಿ, ಇಲ್ಲಿ ಹಣದ ಝರಿ ಹರಿಯಿತು. ಸರ್ಕಾರದ ಹಣ ಅಂತಿದ್ದ ಹಾಗೇ ಅಲ್ಲಿಯ ಅಧಿಕಾರಿಗಳು, ನಂತರ ಪುಡಾರಿಗಳು. ಇಲ್ಲಿ ಎಣ್ಣೆ ಸವರಬೇಕು, ಅಲ್ಲಿ ಬೆಚ್ಚಗಾಗಬೇಕು, ಮೆತ್ತಗೆ ನೀವಬೇಕು! ಪ್ರಾಮಾಣಿಕತೆಯ ಮತ್ತು ವೃತ್ತಿಪರತೆಯ ತಳಹದಿಯ ಮೇಲೆ ನಿಂತಿದ್ದ ಹವ್ಯಾಸಿ ರಂಗಭೂಮಿ ಅಲ್ಲಲ್ಲಿ ಅಪ್ರಾಮಾಣಿಕತೆಯ ಸೋಂಕಿಗೆ ಈಡಾಯಿತು. ನಂತರದ್ದು ಏನು ಹೇಳೋದು,
ಮಂಕುತಿಮ್ಮನ ಕಗ್ಗ.
ಅನ್ನದಾತುರಕ್ಕಿಂತ ಚಿನ್ನದಾತುರ ತೀಕ್ಷ್ಣ.
ಚಿನ್ನದಾತುರಕ್ಕಿಂತ ಹೆಣ್ಣುಗಂಡೊಲವು
ಮನ್ನಣೆಯ ಆತುರ ಎಲ್ಲಕೂ ತೀಕ್ಷ್ಣತಮ
ತಿನ್ನುವುದು ಆತ್ಮವನ್ನೇ
ಇಲ್ಲಾದದ್ದು ಅದೇ. ಆತ್ಮ ಸತ್ತಿತು.
ಇದನ್ನು ಮೀರಿದ ಇನ್ನೊಂದು ಚಾಳಿ ಹವ್ಯಾಸಿ ರಂಗಭೂಮಿಯನ್ನ ನೆಲ ಕಚ್ಚಿಸಿತ್ತು. ಹೇಳೋದಕ್ಕೆ ಸಂಕೋಚವಿದೆ. ಹೇಳದಿದ್ದರೆ ಅಪರಾಧವಾಗುತ್ತೆ. ಹಾಗಾಗಿ ಹೇಳುತ್ತಿದ್ದೀನಿ. ಮುಕ್ಕಾಲುಮೂರು ವಾಸಿ ಜನ ಕುಡುಕರಾದರು. ಕಲಾಕ್ಷೇತ್ರದ ಮೆಟ್ಟಿಲಿಗಿಂತ ಕೆಫೆ-ಡಿ-ಪ್ಯಾರಡೈಸ್ ಅನ್ನೋ ತಾಣ ಅಪ್ಯಾಯಮಾನವಾಯಿತು. ಸುಮಾರು ಜನ ರಿಹರ್ಸಲ್ಗೆ ಬರುತ್ತಿದ್ದದ್ದು, ನಂತರದ ಪೇಯದ ಸುಖಕ್ಕೆ ಮತ್ತದರ ಪ್ರತೀಕ್ಷೆಯಲ್ಲಿ. ನಾಟಕಕ್ಕೆ ಕಳೆದದ್ದು ಕಮ್ಮಿ. ಕುಡಿತಕ್ಕೆ ಕಳೆದದ್ದು ಜಾಸ್ತಿ. ಮುನಿರಂಗಪ್ಪಗಳು ಸರ್ಕಾರದ ಹಣ ಮತ್ತದರ ವಿಲೇವಾರಿಗೆ ಬಿದ್ರು. ನಟರು ಕೈಲಾದಷ್ಟು ಖರ್ಚು ಮಾಡಿ ಕೈಮೀರಿದಾಗ ರಂಗಭೂಮಿಯಿಂದಾಚೆಗೆ ವಲಸೆ ಹೋದರು. ನಿರ್ದೇಶಕರು ಚಟಗಳಿಗೆ ಹಣ ಹೊಂದಿಸುವವರಿಗೆ ಪಾತ್ರಗಳನ್ನ ಹಂಚಿದರು. ನಾಟಕ ಸಾರ್ವಜನಿಕ ಗಣೇಶೋತ್ಸವದ ಕಡುಬಾಯಿತು. ಆಕಾರವಿತ್ತು. ಹೂರಣ ತೆಳ್ಳಗಾಯಿತು. ಹಲ್ಲಿಗೆ ಒರಟಾಯಿತು. ಇಲ್ಲಿ ಬುದ್ಧಿ ಉಳೀಲಿಲ್ಲ. ಚಿಂತನೆ ಉಳೀಲಿಲ್ಲ. ಎಲ್ಲ ಕಸರತ್ತಾಗಿ ಪ್ರೇಕ್ಷಕ ದೂರ ಸರಿದ. ಟಿ.ವಿ. ಲಗ್ಗೆ ಇಡ್ತು. ಹೊಸ ಅವಿಷ್ಕಾರ. ಮನೆಯಲ್ಲೇ ಕುಳಿತು ಕಾಲ ಕಳೆಯಬಹುದು. ಹೊಸದರಲ್ಲಿ ಮಹಾಭಾರತ ರಾಮಾಯಣ ಬೇರೆ. ವಾರಕ್ಕೆರಡು ಸಿನಿಮಾ. ಮನಸ್ಸಿಗೆ ಹಿತ ಇದೆಯೋ ಇಲ್ಲವೋ, ಮೈಗಂತೂ ಆಯಾಸವಿಲ್ಲ. ಖರ್ಚಿಲ್ಲ. ಅಲ್ಲದೇ ಈ ಹವ್ಯಾಸಿ ರಂಗಭೂಮಿಯಲ್ಲಿ ಆಹಾಹಾ ಅನ್ನೋದೇನೂ ಇರಲೂ ಇಲ್ಲ. ಕಲಾಕ್ಷೇತ್ರಕ್ಕೆ ಪ್ರೇಕ್ಷಕರು ಕಮ್ಮಿಯಾದರು. ಬೆಂಗಳೂರು ಬೆಳೆಯಿತು. ವಾಹನಗಳು ಹತ್ತುಪಟ್ಟು, ನೂರುಪಟ್ಟು, ಸಾವಿರಪಟ್ಟಾದವು. ಜನಸಂಖ್ಯೆ ಅಪಾರವಾಯಿತು. ಸಾಫ್ಟ್ವೇರ್ ಬಲಿಯಿತು. ಹೊರರಾಜ್ಯದ ಜನ ಹೆಚ್ಚು ಸೇರಿ ಕನ್ನಡ ಕಮ್ಮಿಯಾಯಿತು. ಹೊಸ ಹೊಸ ಬಡಾವಣೆಗಳಾದವು. ದೂರ ದೂರದಲ್ಲಿದ್ದವು. ವಾಹನ ಸೌಕರ್ಯ ಕಮ್ಮಿಯಾಗಿ ಜನದಟ್ಟಣೆ ಹೆಚ್ಚಾಗಿ ಸಂಚರಿಸುವುದು ನರಕವಾಯಿತು. ಕೆಲಸದ ಒತ್ತಡದಲ್ಲಿ ಸಮಯ ಕಮ್ಮಿ, ಕಲಾಕ್ಷೇತ್ರಕ್ಕೆ ಬರುವುದು ಆಯಾಸ, ಮಿಕ್ಕ ಸುಖದ ಮನರಂಜನೆಯ ದಾರಿ ನೂರಾರಾಗಿ ನಾಟಕಕ್ಕೆ ಜನ ಕಮ್ಮಿಯಾದರು.
ನಾಟಕದ ಹೂರಣದಲ್ಲಿ ಏಕತಾನತೆ ಬಂತು. ಪ್ರೋಗ್ರಸೀವ್ ಅಂದರೆ ಬ್ರಾಹ್ಮಣರನ್ನು ಬೈಯುವುದು ಅಂತಾಯ್ತು. ಬರೀ ಬ್ರಾಹ್ಮಣ ಸಮಾಜದಲ್ಲಿ ಮಾತ್ರ ಎಲ್ಲ ಹೊಲಸು ಇದೆ, ಮಿಕ್ಕ ಸಮಾಜಗಳಲ್ಲಿ ಹೊಲಸಿಲ್ಲ, ಇದ್ರೂ ಅದು ಅನಿವಾರ್ಯ ಮತ್ತು ಅವಶ್ಯಕ ಅನ್ನೋ ಭಾವವನ್ನ ಬಿಂಬಿಸೋದು ಚಿಂತಕರ ಹೊತ್ತುಹೋಗುವಿಕೆಯಾಯ್ತು. ಸ್ಪಂದಿಸುವ ನಾಟಕಗಳು ಕಮ್ಮಿಯಾಗಿ ನಿಂದಿಸುವ ನಾಟಕಗಳು ಹೆಚ್ಚಾಯಿತು. ಒಂದು ಲೆಕ್ಕಕ್ಕೆ ಈ ಭಾವವೂ ಪ್ರೇಕ್ಷಕನನ್ನ ಆಚೆಗೆ ತಳ್ಳಿತ್ತು. ನೇರ ನಾಟಕಗಳು ಕಮ್ಮಿಯಾದವು. ಅಸಂಗತ ಹೆಚ್ಚಾಯಿತು. ಅಸಂಗತವೇ ಬುದ್ಧಿಜೀವಿಯ ಕುರುಹು ಅಂತಾಯಿತು. ಹಾಗಾಗಿ ಪ್ರೇಕ್ಷಕ, ಬುದ್ಧಿ ಹೆಚ್ಚಾದರೂ ಸ್ವಲ್ಪ ಐಲು ಅಂತ ಅಂದುಕೊಂಡ. ಈ ಬುದ್ಧಿಜೀವಿಗಳ ಪರಿಸರದಿಂದ ದೂರವೇ ಉಳಿದ.
ಎನ್.ಎಸ್.ಡಿ. ಪದವೀಧರರು ಬಂದರು. ಹೆಗ್ಗೋಡು ಡಿಪ್ಲೋಮಾದವರು ಬಂದರು. ಅವರಲ್ಲಿ ಹೆಚ್ಚುಪಾಲು ಜನ ರಂಗಭೂಮಿಯನ್ನ ವೃತ್ತಿ ಆಗಿ ತಗೊಂಡರು. ಪ್ರೇಕ್ಷಕ ಸತ್ತಾಗಿತ್ತು. ಇವರಿಗೆ ವೃತ್ತಿ. ಒಂದು ತಂಡ ಕಟ್ಟುವ ಮತ್ತು ನಾಟಕವನ್ನು ತಯಾರು ಮಾಡಿ ಪ್ರದರ್ಶಿಸಿ ಪ್ರೇಕ್ಷಕನಿಂದ ಹಣ ಎತ್ತುವ ಚೈತನ್ಯ ಇದ್ದವರು ಕಮ್ಮಿ. ಹಾಗಾಗಿ ಅವರು ಹವ್ಯಾಸಿ ರಂಗ ತಂಡಗಳಿಗೆ ಕಸಿಯಾದರು. ಇದರಿಂದ ರಂಗಭೂಮಿಗೆ ಲಾಭವಾದದ್ದು ದಿಟ. ಹವ್ಯಾಸಿ ರಂಗಭೂಮೀಲಿ ನಾಟಕ ವಿಜ್ಞಾನವಾಗಿರಲಿಲ್ಲ. ಇವರ ಲಗ್ಗೆಯಿಂದ ಹವ್ಯಾಸಿ ರಂಗಭೂಮಿಗೂ ವಿಜ್ಞಾನದ ಪದಾರ್ಪಣೆಯಾಯಿತು. ಅವರು ಕಲಿತದ್ದು, ಇಲ್ಲಿ ಧಾರೆಯಾಗಿ ರಂಗದ ವಿವಿಧ ಮಜಲುಗಳನ್ನ ಇವರೂ ಕಲಿತರು. ಅದರೊಟ್ಟಿಗೆ ಅವರು ಸೆಟ್ಸ್ ಹಾಕ್ಸಿದರು. ಇವರಿಗೆ ಶೋ ಮುಗಿದ ಮೇಲೆ ಇಟ್ಟುಕೊಳ್ಳುವುದಕ್ಕೆ ಜಾಗವಿರ್ತಿರಲಿಲ್ಲ. ಅವರು ಹೇಳಿಕೊಟ್ಟು ಮುಂದೆ ಹೊರಟರು. ಅವರಿಗೆ ಜೀವನ ನಡೀಬೇಕಿತ್ತು. ಇವರಿಗೆ ಮತ್ತೆ ರಿಹರ್ಸಲ್ ಮತ್ತು ರಿಪೀಟ್ ಶೋ ಮಾಡೋದು ಕಷ್ಟವಾಯಿತು.
ಸರ್ಕಾರದ ಅನುದಾನ ಹೆಚ್ಚಾಗ್ತಾ ಹೋಯ್ತು. ವೃತ್ತಿ ರಂಗಭೂಮಿಯಾಗಲೀ ಅಥವಾ ಹವ್ಯಾಸಿ ರಂಗಭೂಮಿಯಾಗಲೀ ಅದು ಬದುಕಬೇಕಾದದ್ದು ಜೀವಂತವಾಗಿರಬೇಕಾದದ್ದು ಪ್ರೇಕ್ಷಕನಿಂದ, ಹಣ ಕೊಟ್ಟು ಟಿಕೇಟ್ ತಗೊಳ್ಳೋ ಪ್ರೇಕ್ಷಕನಿಂದ ಮತ್ತು ಆ ಯೋಗ್ಯತೆಯ ನಾಟಕ ಕೊಡುವಂತಹ ಚೈತನ್ಯದ ನಟ ನಾಟಕಕಾರ ನಿರ್ದೇಶಕರುಗಳಿಂದ. ಸರ್ಕಾರದ ಹಣ ಬರುತ್ತಿದ್ದ ಹಾಗೆ ಸರ್ಕಾರದ ಅನುದಾನಗಳಿಗೆ ಅಂಟಿಕೊಂಡಂತಹ ಕೆಲವು ಸೋಂಕುಗಳು, ರಂಗಭೂಮಿಗೂ ಸೋಂಕಿದವು. ಮುಕ್ಕಾಲುಮೂರುವಾಸಿ ಸ್ಥಳಗಳಲ್ಲಿ ಕಂಟ್ರಾಕ್ಟರ್ಗಳು ಮುಖ್ಯವಾದರು. ಅಲ್ಲಿ-ಇಲ್ಲಿ ರೆಪರ್ಟರಿಗಳು ಹುಟ್ಟಿದವು. ಪ್ರೇಕ್ಷಕ ಗೌಣವಾದ. ಹಾಗಾಗಿ ನಾಟಕಕಾರ, ನಿರ್ದೇಶಕ, ನಟ ಬೇಕೇ ಬೇಕು ಅನ್ನಿಸಲಿಲ್ಲ. ಹಣ ಹರೀತು. ಹಣ ಹಂಚಿದ್ದಾಯ್ತು. ನಾಟಕದ ನಾಟಕವಾಯ್ತು. ರಂಗಭೂಮಿ ಮಕಾಡೆ ಮಲಗಿತು.
ಈಗ ಇರುವ ರಂಗಭೂಮಿಯ ಪ್ರಾಕಾರಗಳು ಹಲವು. ಹವ್ಯಾಸಿ ಮತ್ತು ವೃತ್ತಿ ಅನ್ನುವ ಸ್ಪಷ್ಟವಾದ ಸರಹದ್ದಿಲ್ಲ. ಈಗ ಇರೋದಕ್ಕೆ ನೂರಾರು ಹೆಸರಾಗಬಹುದು. ಪ್ರವೃತ್ತಿ ರಂಗಭೂಮಿ, ನಿವೃತ್ತಿ ರಂಗಭೂಮಿ, ರಂಗಭೂಮಿಯೇ ವೃತ್ತಿಯಾಗಿರುವವರು ಅಥವಾ ಸರ್ಕಾರದ ಸ್ವಾಮ್ಯದ ರೆಪರ್ಟರಿಗಳು ಮತ್ತು ಸರ್ಕಾರದ ಅನುದಾನದ ರೆಪರ್ಟರಿಗಳು.ಕೆಲವು ಗುಂಪುಗಳು ಸಕ್ರೀಯವಾಗಿವೆ. ಹೊಸ ಹೊಸ ನಾಟಕಗಳನ್ನು ತರ್ತಿವೆ ಮತ್ತು ಪ್ರೇಕ್ಷಕರೂ ತುಂಬ್ತಾರೆ. ಈ ಗುಂಪುಗಳಲ್ಲಿ ಹವ್ಯಾಸಿಗಳೂ ಇದ್ದಾರೆ ಮತ್ತು ವೃತ್ತಿಪರರೂ ಇದ್ದಾರೆ. ಬೋತ್ ಟ್ರೈನ್ಡ್ ಅಂಡ್ ಅನ್ಟ್ರೈನ್ಡ್. ಆದರೆ ಪ್ರತಿದಿನ ನಾಟಕ ಆಗಲ್ಲ. ತಿಂಗಳಿಗೆ ಒಂದು ಅಥವಾ ಎರಡು. ವರ್ಷಕ್ಕೆ ಅಬ್ಬಬ್ಬಾ ಅಂದರೆ ಮೂವತ್ತು ಶೋ ಆಗಬಹುದು. ಸರಾಸರಿ 200 ಪ್ರೇಕ್ಷಕರು ಅಂದರೆ ಒಂದು ಶೋಗೆ 20,000 ದಿಂದ 30,000 ಸಾವಿರ ರೂಗಳ ವಹಿವಾಟಾಗುತ್ತದೆ. ಆರಕ್ಕೆ ಏರಲ್ಲ, ಮೂರಕ್ಕೆ ಇಳಿಯಲ್ಲ. ಆದಾಯ ಖರ್ಚು ಅಲ್ಲಲ್ಲಿಗೆ. ಕೈ ಕಚ್ಚಲ್ಲ. ಇದನ್ನು ಪ್ರವೃತ್ತಿ ರಂಗಭೂಮಿ ಅನ್ನಬಹುದೇನೋ. ಇಲ್ಲಿ ಅವರು ಗಳಿಸೋದು ಇಲ್ಲ, ಕಳೆಯೋದೂ ಇಲ್ಲ. ಆದರೆ ಸಕ್ರೀಯವಾಗಿದ್ದಾರೆ. ಇಲ್ಲಿ ನಾಟಕವೂ ಇದೆ. ನಟರೂ ಇದ್ದಾರೆ. ಪ್ರೇಕ್ಷಕರೂ ಮತ್ತು ನಿರ್ದೇಶಕರೂ ಇದ್ದಾರೆ. ಅಷ್ಟರ ಮಟ್ಟಿಗೆ ರಂಗಭೂಮಿ ಜೀವಂತ.
ಇದು ಬಿಟ್ಟರೆ ನಿವೃತ್ತಿ ರಂಗಭೂಮಿ ಈ ಪದಕ್ಕೆ ಹೊಂದೋ ಗುರುತಿಸೋ ಗುಂಪುಗಳು ಕಮ್ಮಿ.. ಇವು ಆಗಲೇ ಸಾಧನೆ ಮಾಡಿಯಾಗಿದೆ. ನಿವೃತ್ತರಾಗಿ ಎಲ್ಲ ನಾಟಕಗಳ ಪ್ರದರ್ಶನಗಳ ವಿಮರ್ಶೆಯಲ್ಲಿ ನಿರಂತರ ತೊಡಗಿರುತ್ತಾರೆ. ಇವರಿಂದ ಒಳ್ಳೆ ಮಾತು ಬಂದದ್ದು ಕಮ್ಮಿ, ಕೆಟ್ಟ ಮಾತೇ ಹೆಚ್ಚು. ಎಷ್ಟೋ ಸಾರ್ತಿ ನಾಟಕಗಳ ಪ್ರದರ್ಶನವನ್ನೇ ನೋಡದೆ ಪ್ರತಿಕ್ರಿಯಿಸುವ ಪರಿಣಿತಿ ಹೊಂದಿರುತ್ತಾರೆ. ಇಲ್ಲಿ ಕೆಲವರು ವರ್ಷಕ್ಕೆ ಒಮ್ಮೆ ಚುರುಕಾಗ್ತಾರೆ. ಯಾರದ್ದಾದರೂ ಎಂಬತ್ತು ವರ್ಷ ಅಥವಾ ತೊಂಬತ್ತು ವರ್ಷ ಯಾ ಪುಣ್ಯತಿಥಿ, ಈ ನೆಪದಲ್ಲಿ ಸರ್ಕಾರದ ಅನುದಾನದಲ್ಲಿ ನಾಟಕದ ಉತ್ಸವವನ್ನು ಮಾಡುತ್ತಾರೆ. ವರ್ಷಕ್ಕೊಂದು ಸಾರ್ತಿ ಬಿಟ್ಟುಬಂದ ಊರಿಗೆ ಹೋಗಿ ಮನೆದೇವರ ಉತ್ಸವ ಮಾಡಿದ ಹಾಗೆ. ಬರೀ ಅವರವರೇ. ವಂತಿಗೆ ಇರುತ್ತೆ. ಹೂವು ಹಣ್ಣು, ಓಲಗ ಇರುತ್ತೆ. ಇಲ್ಲಿ ಹೆಚ್ಚು ಕರೆಸುವುದು ಹೊರರಾಜ್ಯಗಳ ನಾಟಕ ಮಾತ್ರ. ಲೋಕಲ್ಗೆ ಜಾಗವಿಲ್ಲ. ವಿನಿಯೋಗ ಉತ್ಸವ ಎಲ್ಲಾ ನಡೆಯುತ್ತೆ. ಪ್ರೇಕ್ಷಕ ಗೌಣ. ಎಷ್ಟೋ ಉತ್ಸವಗಳಲ್ಲಿ ನಾಟಕದ ಪ್ರದರ್ಶನಕ್ಕೆ ನಾಲ್ಕು ಜನ ಪ್ರೇಕ್ಷಕರು ಸೇರಿದ್ದು ಹೆಚ್ಚು. ಕೆಲವರ ಬದುಕಿಗೆ ಸಬ್ಸಿಡಿ ಇರಬಹುದಾ? – ಗೊತ್ತಿಲ್ಲ.
ಇನ್ನು ರಂಗಭೂಮಿಯನ್ನೇ ವೃತ್ತಿಯಾಗಿ ತೆಗೆದುಕೊಂಡ ಕೆಲವರು, ಇವರು ವರ್ಕ್ಷಾಪ್ಸ್ ನಡೆಸ್ತಾರೆ. ಟ್ರೈನಿಂಗ್ ಸೆಂಟರ್ಸ್ ನಡೆಸ್ತಾರೆ. ರಂಗಭೂಮಿಗೆ ಟ್ರೈನ್ಡ್ ನಟರು ಮತ್ತು ಟೆಕ್ನಿಷಿಯನ್ಸ್ ಕೊಡುಗೆ ಇಲ್ಲಿಂದ. ಹಾಗಾಗಿ ರಂಗಭೂಮಿಯನ್ನ ಜೀವಂತವಾಗಿಡೋದರಲ್ಲಿ ಇವರ ಸಹಕಾರ ಖಂಡಿತವಾಗಿದೆ. ಆದರೆ ಇಲ್ಲಿ ಕೂಡಾ ಮುಕ್ಕಾಲು ಮೂರುವಾಸಿ ಪ್ರೋಡಕ್ಷನ್ಗಳು, ವರ್ಕ್ಷಾಪ್ ಪ್ರೊಡಕ್ಷನ್. ಕೆಲವು ನಾಟಕಗಳು ಪ್ರೇಕ್ಷಕರನ್ನು ಮುಟ್ಟಿವೆ. ಮತ್ತೆ ಕೆಲವು ಮರುಪ್ರದರ್ಶನಗಳಾಗಿವೆ. ಆದರೆ ಇಲ್ಲಿಯ ವೃತ್ತಿ ಸಂಬಂಧದ ಆದಾಯ ವಿದ್ಯಾರ್ಥಿಗಳಿಂದ ಮುಖ್ಯವಾಗಿ. ಪ್ರೇಕ್ಷಕರ ಕಲೆಕ್ಷನ್ ಬಂದರುಂಟು, ಇಲ್ಲದಿದ್ದರೆ ಇಲ್ಲ. ಹಾಗಾಗಿ ಯಾವುದೇ ಪ್ರದರ್ಶನ ಪ್ರೇಕ್ಷಕನ ದೃಷ್ಟಿಯಿಂದಂತೂ ಅಲ್ಲ. ಇನ್ನು ರೆಪರ್ಟರಿಗಳು. ಇದರಲ್ಲಿ ಎರಡು ವಿಧ. ಕೆಲವು ಸರ್ಕಾರಿ ಸ್ವಾಮ್ಯದ ರೆಪರ್ಟರಿಗಳು, ಇಲ್ಲಿ ನಾಟಕ ಸರ್ಕಾರಿ ವೃತ್ತಿ. ಎಲ್ಲ ಸರ್ಕಾರಿ ಇಲಾಖೆಗಳ ಗುಣಗಳು ಇಲ್ಲೂ ಇವೆ. ಸರ್ಕಾರ ಯಾವತ್ತೂ ಪ್ರಣಾಳಿಕೆಗಳಲ್ಲಿ ಜನಪರ. ಆದರೆ ಬಹಳಷ್ಟು ಸಾರ್ತಿ ವ್ಯವಹಾರದಲ್ಲಿ ಆಳುವ ವ್ಯಕ್ತಿಗಳ ಮತ್ತು ಅಧಿಕಾರದಲ್ಲಿರುವ ವ್ಯಕ್ತಿಗಳ ಪರ. ಯಾವ ಸರ್ಕಾರಿ ಇಲಾಖೆಯೂ ಇದಕ್ಕೆ ಹೊರತಲ್ಲ, ನನ್ನ ಅನುಭವದಲ್ಲಿ. ಈ ಇಲಾಖೆಯೂ ಅಷ್ಟೇ. ಇನ್ನು ಪ್ರೈವೇಟ್ ರೆಪರ್ಟರಿಗಳು. ಇವು ಸರ್ಕಾರಿ ಅನುದಾನಿತ ರೆಪರ್ಟರಿಗಳು. ಒಂದೆರಡು ಬಹಳ ಆಕ್ಟಿವ್ ಆಗಿ ನಾಟಕಗಳನ್ನು ನಡೆಸುತ್ತಿವೆ. ಮಿಕ್ಕವು ಎಷ್ಟೋ ಇವೆ. ಅಂತಹ ಬಹಳ ಜನ ಹೇಳ್ತಾರೆ. ಅವು ಎಷ್ಟು ಸಕ್ರೀಯವಾಗಿವೆ ಅಂದ್ರೆ, ಅವು ಇವೆ ಮತ್ತು ಸರ್ಕಾರದ ಅನುದಾನದ ಮೇಲೇನೇ ಇವೆ ಅನ್ನೋದು ಯಾರಿಗೂ ಗೊತ್ತಾಗದಷ್ಟು ಸಕ್ರೀಯವಾಗಿವೆ. ಬೆಂಗಳೂರಲ್ಲಿ ಸರ್ಕಾರಿ ಅನುದಾನಿತ ರೆಪರ್ಟರಿಗಳು ಎಷ್ಟಿವೆ ಅನ್ನೋದು ಚಿದಂಬರ ರಹಸ್ಯ. ಅವುಗಳ ಕಾರ್ಯಕ್ರಮಗಳು ಇಲಾಖೆಗಳ ಕಡತಗಳಲ್ಲಿ ಮಾತ್ರ ಅಂತಾರೆ. ನನಗೂ ಅದು ರಹಸ್ಯವೇ. ಹಾಗಿಲ್ಲದಿದ್ದರೆ ಚೆಂದ. ಅಕಸ್ಮಾತ್ ಹಾಗಿದ್ದರೆ ಅದು ದುರಂತ.
ಸಧ್ಯದ ಪರಿಸ್ಥಿತಿಯಲ್ಲಿ ಎಲ್ಲಕ್ಕೂ ಉತ್ತರವಾಗಿ ನಿಲ್ಲಬಹುದಾದಂತಹದು ನನ್ನ ದೃಷ್ಟಿಯಲ್ಲಿ ಹವ್ಯಾಸಿ ರಂಗಭೂಮಿ ಮಾತ್ರ. ಮಿಕ್ಕೆಲ್ಲಾ ಬ್ರಾಂಡ್ಗಳು. ಹೂರಣ ಚೆಂದವಿದ್ದರೆ, ಖಾಧ್ಯ ಚೆಂದ. ಮಾರಾಟಕ್ಕೆ ಬೇಕು ಬ್ರಾಂಡ್ ಮತ್ತು ಆಕಾರ. ಆದರೆ ಮಾರುಕಟ್ಟೆ ಬರೀ ಬ್ರಾಂಡ್ ಮತ್ತು ಆಕಾರವಲ್ಲ. ನನ್ನ ವೈಯುಕ್ತಿಕ ದೃಷ್ಟಿಕೋನದಲ್ಲಿ ರಂಗಭೂಮಿ ಯಾವತ್ತೂ ಹವ್ಯಾಸವೇ. ಹೊಟ್ಟೆಪಾಡಿಗೆ ಬೇರೆ ವೃತ್ತಿ ಅಥವಾ ಉತ್ಪತ್ತಿ ಇರಬೇಕು. ಆರೋಗ್ಯವಂತ ಮನಸ್ಸಿರಬೇಕು. ಆರೋಗ್ಯವಂತ ಹೃದಯವಿರಬೇಕು. ಕಲ್ಕೆಯಿರಬೇಕು. ಪುರಸತ್ತಲ್ಲಿ ತಾಲೀಮಾಗಬೇಕು. ರಂಗಭೂಮಿ ಅನ್ನೊದು ಒಂದು ಗರ್ವದ ಸಂಕೇತವಾಗಬೇಕು. ಆಗ ಮಾತ್ರ ಭ್ರಷ್ಟರನ್ನು ಬೆದರಿಸಬಹುದು. ನ್ಯಾಯ ಅನ್ಯಾಯಗಳ ತುಲನೆ ಘಂಟಾಘೋಷವಾಗಿ ಮಾಡಬಹುದು. ನೈತಿಕ, ಅನೈತಿಕತೆಯ ಸತ್ಯಾಸತ್ಯತೆಯ ಹೊರೆಗೆ ನಿಲ್ಲಬಹುದು. ಪ್ರೇಕ್ಷಕ ಭಾಗವಾಗಿ ಆನಂದಿಸ್ತಾನೆ ಮತ್ತು ಸಾಕ್ತಾನೆ. ಸರ್ಕಾರವೇನಿದ್ದರೂ ಮೂಲವಾಗಬಾರದು. ಬರೀ ಊರುಗೋಲಾಗಬೇಕು. ವಾತಾವರಣ ಸೃಷ್ಟಿಸಬೇಕು. ಸರ್ಕಾರವೇ ಮುಖ್ಯ ಅಂತಾದರೆ ಉಗ್ರಾಣದ ಧಾನ್ಯ ಹೆಚ್ಚು ಸನ್ನಿವೇಶಗಳಲ್ಲಿ ಹುಳಕ್ಕೆ ಮತ್ತು ಬಹುತೇಕ ಬಲಿಯೋದು ಹೆಗ್ಗಣಗಳೇ. ನಾಟಕದವರು ಭಿಕಾರಿಗಳಲ್ಲ. ಭಿಕ್ಷುಕರಲ್ಲ. ಜಗಲಿ ಮೇಲೆ ಮಲಗಿ ಬಯಲಲ್ಲಿ ಸಂಡಾಸು ಮಿಗಿಸಿ, ಕೆರೆಯಲ್ಲಿ ಮಿಂದು, ತಿಪ್ಪೆಯಲ್ಲಿ ತಿಂದು, ಸರ್ಕಾರದ ವಂತಿಗೆಯಲ್ಲಿ ವಿಧೂಷಕರಾಗಿ ಆಸ್ಥಾನ ಕಲಾವಿದರಾಗಿ ಬದುಕುವವರಲ್ಲ. ಇವರು ಎಲ್ಲ ಕಡೆಗೂ ಸಲ್ಲಬೇಕು. ಗರ್ವಧಲ್ಲಿ ಸಮಾಜದ ಓರೆಕೋರೆಗಳನ್ನು ಬಯಲು ಮಾಡ್ತಾ, ಸರಿತಪ್ಪುಗಳನ್ನು ಭೂತಗನ್ನಡಿಯಲ್ಲಿ ಬಿಂಬಿಸ್ತಾ ಒಂದು ಆರೋಗ್ಯವಂತ ಮನಸ್ಥಿತಿಗೆ ಮತ್ತು ಚಿಂತನೆಯ ಬೀಜ ಬಿತ್ತುವ ವಾತಾವರಣಕ್ಕೆ ಸಹಕರಿಸೋ ಚಕ್ರವರ್ತಿಗಳಾಗಬೇಕು. ಇದು ಹವ್ಯಾಸಿಗಳಿಂದ ಸಾಧ್ಯ.. ಹವ್ಯಾಸಿಗಳಿಂದ ಮಾತ್ರ ಸಾಧ್ಯ ಅನ್ನೋ ಅಹಂಕಾರಕ್ಕೆ ಖಂಡಿತ ಇಳಿಯಲಾರೆ. ಪ್ರಯತ್ನ ಪಡುವ ಎಲ್ಲರಿಂದಲೂ ಸಾಧ್ಯ. ಆದರೆ ಹವ್ಯಾಸಿಗಳಿಂದ ಖಂಡಿತ ಸಾಧ್ಯ. ಸಧ್ಯಕ್ಕೆ ಹವ್ಯಾಸಿ ರಂಗಭೂಮಿ ಐ.ಸಿ.ಯು. ನಲ್ಲಿದೆ. ಆದರೆ ಜೀವಂತವಾಗಿದೆ. ಮತ್ತೇಳುವ, ನಡೆದಾಡುವ, ಓಡುವ, ಕುಣಿಯುವ ಎಲ್ಲ ಸೂಚನೆಗಳೂ ಇವೆ.
ಮುಗಿಸುವ ಮೊದಲು ಎರಡು ಅನುಭವಗಳು.
1980-81ರ ಸಾಲಿನಲ್ಲಿ ಇನ್ಫರ್ಮೇಷನ್ ಪಬ್ಲಿಸಿಟಿ ಡಿಪಾರ್ಟ್ಮೆಂಟ್ವತಿಯಿಂದ ನಾಟಕಕ್ಕೆ ಹೋದದ್ದಿದೆ. ಅನ್ ರಿಸವ್ರ್ಡಡ್ ಕಂಪಾರ್ಟ್ಮೆಂಟ್, ಡಾರ್ಮೆಟರಿಯಲ್ಲಿ ಮಲಗೋ, ಅಲ್ಲಿಯ ಕನ್ನಡ ಸಂಘಗಳ ಭಿಕ್ಷಾನ್ನದ ಮೊರೆ, ರಿಲೀಸ್ ಆದ ಹಣದಲ್ಲಿ ಸಾಕಷ್ಟು ನಾಲೆಗಳಲ್ಲೇ ಇಂಗಿ ಗದ್ದೆಗೆ ಬರುತ್ತಿದ್ದದ್ದು ನೆಪಕ್ಕೆ ಮಾತ್ರ. ಬೆಳೆ ಬರ್ತಿರಲಿಲ್ಲ.2015 ರ ಹೊತ್ತಿಗೆ ಆರ್.ಟಿ.ಜಿ.ಎಸ್. ಬಂದಿತ್ತು. ನೇರ ಅಕೌಂಟ್ಗೆ ಹಣ ವರ್ಗಾಯಿಸ್ತಾರೆ. ಯಾರೋ ಫೆಸ್ಟಿವಲ್ ಮಾಡಿದರು. ನಾಟಕ ಮಾಡಬೇಕು ದುಂಬಾಲು ಬಿದ್ದರು. ನೇರ ಹಣ ಅಕೌಂಟ್ಗೆ ಬರುತ್ತೆ. ದಾಖಲೆಗಳ ಸಹಿ ಆಯಿತು. 25,000 ಅಕೌಂಟ್ಗೆ ಬಂತು. ಬರುವ ಹಿಂದಿನ ದಿನದಿಂದಲೇ ವ್ಯವಸ್ಥಾಪಕನ ಅಳಲು, ಅಲವತ್ತುವಿಕೆ ಶುರು. ಅತ್ತರು, ಕೋಪಿಸಿಕೊಂಡರು, ರಚ್ಚೆ ಹಿಡಿದರು, ಹೊರಳಾಡಿದರು. ಲೆಕ್ಕ ತೋರಿಸಿದರು. ಮನೆಗೆ ಹತ್ತು ಸಾರ್ತಿ ಆಫೀಸಿಗೆ ಇಪ್ಪತ್ತು ಸಾರ್ತಿ ಎಡತಾಕಿ ಅನುದಾನಿತ ನಾಟಕ ಅನ್ನೋದರ ಬಗ್ಗೆನೇ ಅಸಹ್ಯ ಹುಟ್ಟೋ ಹಾಗೆ ಮಾಡಿ 20,000 ಸಾವಿರ ಕಿತ್ತುಕೊಂಡು ಹೋದರು. ಈಗ ಗದ್ದೆಗೆ ನೇರ ನೀರು ಬರುತ್ತೆ. ಆದರೆ ಇಲ್ಲಿಂದ ಟ್ಯಾಂಕರ್ಗಳಿಗೆ ಪಂಪುಗಳಲ್ಲಿ ತುಂಬಿ ಮತ್ತೆ ನಾಲೆಗಳಲ್ಲಿ ಇಂಗಿಸ್ತಾರೆ. ಇವೆರಡೂ ಕೆಟ್ಟ ನಕ್ಷತ್ರದಲ್ಲಿ ಹುಟ್ಟಿ, ಹೊಲಸು ಜಾತಕ ಹೊಂದಿರುವ ನನ್ನೊಬ್ಬನ ವೈಯುಕ್ತಿಕ ಮತ್ತು ಎಕ್ಷಕ್ಲೂಸಿವ್ ಅನುಭವ ಹಾಗೂ ಪ್ರಪಂಚ ಖಂಡಿತ ಹಾಗಿಲ್ಲ ಅನ್ನುವ ಅಪಾರವಾದ ನಿಷ್ಠೆ ನಂಬಿಕೆಯೊಂದಿಗೆ ಈ ಲೇಖನ ಮುಗಿಸ್ತಿದ್ದೇನೆ.
ಚಿತ್ರಕೃಪೆ : ಉದಯವಾಣಿ.ಕಾಂ