ವಿಷಯದ ವಿವರಗಳಿಗೆ ದಾಟಿರಿ

ಸೆಪ್ಟೆಂಬರ್ 12, 2017

ಲಡಾಖ್ ಹಾಗು ಭಾರತೀಯ ಸೇನೆ

‍ನಿಲುಮೆ ಮೂಲಕ

– ಪಲ್ಲವಿ ಭಟ್
ಬೆಂಗಳೂರು

ಇದೀಗಷ್ಟೇ ಸ್ವಾತಂತ್ರ್ಯ ದಿನ ಕಳೆದು ಹೋಗಿದೆ. ಪ್ರತಿ ವರುಷದಂತೆ ಈ ಬಾರಿಯೂ ಅದೇ ಸಂಭ್ರಮ ಸಡಗರದಿಂದ ಎಲ್ಲೆಲ್ಲೂ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಈ ಸಂಭ್ರಮಗಳೆಲ್ಲಾ ಮುಗಿಯುತ್ತಿದ್ದಂತೆ ಅದೊಂದು ವಾರ್ತೆ ನಮ್ಮ ವಾರ್ತಾಪತ್ರಿಕೆಗಳ ಮುಖಪುಟ ಸೇರಿಕೊಂಡಿತ್ತು. ಇನ್ನೂ ಮಾಸದ ನನ್ನ ಕೆಲ ಹೊಸ ನೆನಪುಗಳನ್ನು ಅದು ಕೆದಕತೊಡಗಿತು. “ಲಡಾಖ್‌’ನಲ್ಲಿ ಭಾರತ, ಚೀನಾ ಯೋಧರ ಸಂಘರ್ಷ: ಭಾರತದೊಳಗೆ ನುಗ್ಗಲು ಚೀನಾ ಸೈನಿಕರ ಯತ್ನ” ಎಂಬುದಾಗಿತ್ತು ಶೀರ್ಷಿಕೆ. ಲಡಾಖ್ ಪ್ರವಾಸ ಮುಗಿಸಿ ಇನ್ನೂ ೧೦ ದಿನಗಳಾಗಿಲ್ಲ. ಅಷ್ಟರಲ್ಲೇ ಇಂತಹ ವಾರ್ತೆಯನ್ನು ಓದಬೇಕಾಗಿ ಬಂತು.

ಭಾರತ ಹಾಗು ಚೀನಾದ ಗಡಿಯಲ್ಲಿರುವ ಸುಂದರ ಭೂಪ್ರದೇಶವೇ ಲಡಾಖ್. ಒಂದೆಡೆ ಕುನ್ಲುನ್ ಪರ್ವತ ಶ್ರೇಣಿಯಾದರೆ ಇನ್ನೊಂದೆಡೆ ಹಿಮಾಲಯನ್ ಶ್ರೇಣಿ. ಬೃಹತ್ ಹಿಮಾಚ್ಛಾದಿತ ಶಿಖರಗಳ ನಡುವೆ ಇರುವ ವಿಶಾಲವಾದ ಬಯಲು ಪ್ರದೇಶವೇ ಲಡಾಖ್. ಈ ಪ್ರಸ್ಥಭೂಮಿಗೆ ನೀರುಣಿಸುತ್ತಿರುವ ನದಿಯೇ ಸಿಂಧೂ ನದಿ. ಮಂಗೋಲಿಯನ್ ಜನರು ಮೂಲನಿವಾಸಿಗಳಾಗಿರುವ ಇಲ್ಲಿನ ಸಂಸ್ಕೃತಿ ಟಿಬೆಟಿನ ಸಂಸ್ಕೃತಿಗೆ ಹತ್ತಿರವಾದದ್ದು. ಆದುದರಿಂದಲೇ ಎಲ್ಲೆಂದರಲ್ಲಿ ಸ್ತೂಪಗಳು, ಬೌದ್ಧ ದೇವಾಲಯಗಳು ಕಾಣಸಿಗುತ್ತವೆ. ತಮ್ಮದೇ ಆದ ಸಂಸ್ಕೃತಿ ಹಾಗು ಜೀವನಶೈಲಿ ಹೊಂದಿರುವ ಇಲ್ಲಿಯ ಜನ ಶಾಂತಿಪ್ರಿಯರು ಹಾಗು ಆತಿಥೇಯರು. ಇದೆಲ್ಲದುದರಿಂದಲೇ ಲಡಾಖ್ ಇಂದು ಪ್ರವಾಸಿಗರಿಗೆ ಅಚ್ಚುಮೆಚ್ಚಿನ ತಾಣ.

ಲಡಾಖಿನಲ್ಲಿ ಅದು ಚಂದ, ಇದು ಚಂದವೆಂದು ವಿವರಿಸುವುದು ಕಷ್ಟ. ಎಲ್ಲವೂ ಚೆಂದವೇ, ಎಲ್ಲವೂ ಅಚ್ಚರಿಯೇ. ಅದೆಷ್ಟು ಸುಂದರವೋ ಅಷ್ಟೇ ಭಯಾನಕವೂ ಹೌದು. ವರ್ಷದಲ್ಲಿ ಬಹುತೇಕ ಸಮಯ ಹಿಮದಿಂದ ಆವೃತಗೊಂಡಿರುವ ಈ ಪ್ರದೇಶಕ್ಕೆ ಪ್ರವಾಸಿಗರು ಬರಲು ಸಾಧ್ಯವಾಗುವುದು ಬರೀ ೩ ತಿಂಗಳುಗಳ ಕಾಲ ಮಾತ್ರ(ಜೂನ್-ಆಗಸ್ಟ್). ಲಡಾಖ್ ಪ್ರದೇಶವನ್ನು ಭಾರತದ ಇನ್ನುಳಿದ ಭಾಗಗಳಿಗೆ ಜೋಡಿಸುವುದು ಬರೀ ಎರಡು ಮುಖ್ಯ ರಸ್ತೆಗಳು. ಒಂದು ಶ್ರೀನಗರ-ಲೇಹ್ ಆದರೆ ಇನ್ನೊಂದು ಮನಾಲಿ-ಲೇಹ್. ಇವೆರಡು ದುರ್ಗಮವಾದವುಗಳು. ಹಿಮಪಾತದಿಂದಾಗಿ ಈ ಮಾರ್ಗಗಳು ಮುಚ್ಚಲ್ಪಡುವುದು ಸರ್ವೇಸಾಮಾನ್ಯ. ಇನ್ನುಳಿದುದು ಲೇಹ್ ವಿಮಾನ ನಿಲ್ದಾಣ. ಜಗತ್ತಿನ ಅತ್ಯಂತ ಎತ್ತರದ ವಿಮಾನ ನಿಲ್ದಾಣವಿದಾಗಿದೆ. ಹವಾಮಾನದ ಏರುಪೇರುಗಳಿಂದಾಗಿ ಇದು ಮುಚ್ಚಲ್ಪಡುವುದುಂಟು. ಇಲ್ಲಿ ಎಲ್ಲವೂ ಅನಿರೀಕ್ಷಿತ, ಎಲ್ಲವೂ ಅನಿಯಂತ್ರಿತ.

ಅನಿರೀಕ್ಷಿತ ಹವಾಮಾನ ಬದಲಾವಣೆಗಳಾಗಲಿ, ಅನಿಯಂತ್ರಿತ ಪ್ರಾಕೃತಿಕ ವಿಕೋಪಗಳಾಗಲಿ, ಅನಪೇಕ್ಷಿತ ಶತ್ರುಗಳಾಗಲಿ ಅಂಜದೆ, ಅಳುಕದೆ ಎದುರಿಸಿ ಲಡಾಖ್ ಅನ್ನು ಲಡಾಖಿಗಳಿಗೆ ಭದ್ರವಾಗಿ ಕೊಡುವವರೇ ನಮ್ಮ “ಇಂಡಿಯನ್ ಆರ್ಮಿ”. ಭಾರತೀಯ ಸೇನಾ ಪಡೆಯೇ ಇಲ್ಲಿಯ ಶಾಶ್ವತ ನಾಯಕ. ಲೇಹ್ ನಗರ ತಲುಪುತ್ತಲೇ ಈ ಸತ್ಯವು ಎಲ್ಲಾ ಪ್ರವಾಸಿಗರಿಗೂ ಮನದಟ್ಟಾಗುತ್ತದೆ. ಇಲ್ಲಿ ಎಲ್ಲವೂ ಸೇನಾಮಯ ಅಂದರೆ ತಪ್ಪಾಗದು. ಮಿಲಿಟರಿ ಕಂಟೋನ್ಮೆಂಟ್ಗಳು, ಮಿಲಿಟರಿ ಟ್ರಕ್ಕುಗಳು, ಬಂಕರುಗಳು, ಬಂದೂಕುಧಾರಿ ಸಿಪಾಯಿಗಳು ಇಲ್ಲಿ ಸರ್ವೇ ಸಾಮಾನ್ಯ. ನನಗಿದೆಲ್ಲಾ ಹೊಸತು. ಅಷ್ಟು ದೊಡ್ಡ ಮಟ್ಟಿನ ಸೇನಾವ್ಯವಸ್ಥೆಗಳನ್ನು ನಾನು ಎಂದೂ ನೋಡಿರಲಿಲ್ಲ. ಶಾಂತವಾಗಿರುವ ಈ ನಗರದಲ್ಲಿ ಇಷ್ಟೆಲ್ಲಾ ಸನ್ನಾಹಗಳು ಏನಕ್ಕೆ ಎಂದು ನನ್ನಲ್ಲೇ ನಾನು ಕೇಳಿಕೊಂಡಿದ್ದೆ. ನನ್ನ ಈ ಮಂಕು ಪ್ರಶ್ನೆಗೆ ಉತ್ತರ ಮುಂದಿನ ದಿನಗಳ ಪ್ರವಾಸಗಳಲ್ಲಿ ದೊರೆಯದೆ ಇರಲಿಲ್ಲ.

ಇಂದು ಪ್ರವಾಸಿಗರನ್ನು ಲಡಾಖಿಗೆ ಸೆಳೆಯುತ್ತಿರುವ ಎರಡು ಪ್ರಮುಖ ತಾಣಗಳು – ಖರದೊಂಗ್ಲಾ ಪಾಸ್ ಹಾಗು ಪಂಗೊಂಗ್ ಸರೋವರ. ಸಮುದ್ರಮಟ್ಟದಿಂದ ೧೮ ಸಾವಿರ ಅಡಿ ಎತ್ತರಕ್ಕಿರುವ ಖರದೊಂಗ್ಲಾ ವಿಶ್ವದ ಅತಿ ಎತ್ತರದ ಮೋಟಾರ್ -ಸೈಕಲ್ ಪಾಸುಗಳಲ್ಲಿ ಒಂದು ಎಂದು ಹೇಳಲಾಗುತ್ತದೆ. ಹಾಗಾಗಿಯೇ ಇದು ಬೈಕ್ ಸವಾರರಿಗೆ ಅಚ್ಚುಮೆಚ್ಚಿನ ತಾಣ. ಎತ್ತರೆತ್ತರದ ಪರ್ವತಗಳನ್ನು ಕಡಿದು ಇಲ್ಲಿಗೆ ಹಾದಿಯನ್ನು ಮಾಡಲಾಗಿದೆ. ದುರ್ಗಮವಾದ ರಸ್ತೆಗಳಲ್ಲಿ ಸಾಗಿ ಖರದೊಂಗ್ಲಾದ ತುದಿ ತಲುಪಿದ ಪ್ರವಾಸಿಗರಿಗೆ ಅದೇನೋ ಟ್ರೋಫಿ ಪಡೆದಂತೆ ಭಾಸವಾಗುತ್ತದೆ. ಆದರೆ ಈ ಟ್ರೋಫಿಯನ್ನು ಬಹುಕಾಲ ಯಾರು ಆಸ್ವಾದಿಸುವ ಹಾಗಿಲ್ಲ. ಕೇವಲ ೨೦-೨೫ ನಿಮಿಷಗಳಷ್ಟೇ ಇಲ್ಲಿ ಇರಲು ಸಾಧ್ಯ. ಸಮಯ ಮೀರಿದ ಹಾಗೆ ಉಸಿರಾಟದ ತೊಂದರೆ (ಏ.ಎಂ.ಸ್) ಶುರುವಾಗುವ ಸಾಧ್ಯತೆಯಿದೆ. ಆದರೆ ಈ ತೊಂದರೆಗಳ್ಯಾವುದನ್ನೂ ಲೆಕ್ಕಿಸದೆ ಆ ೧೮ ಸಾವಿರ ಅಡಿ ಎತ್ತರದಲ್ಲೂ ತ್ರಿವರ್ಣ ಧ್ವಜಕ್ಕೆ ಕಾವಲಾಗಿ  ನಿಂತಿರುವ ಒಂದು ಸೇನಾ ಪಡೆಯಿದೆ. ಅಲ್ಲಿ ಅವರೇ ಸೈನಿಕರು, ಅವರೇ ಡಾಕ್ಟರುಗಳು, ಅವರೇ ಸರ್ವಸ್ವವು.

ಇನ್ನೊಂದು ವಿಶ್ವಪ್ರಸಿದ್ಧ ತಾಣವೇ ‘ಪಂಗೊಂಗ್ ಸರೋವರ’. ಲಡಾಖ್ ನೋಡಲೆಂದು ಹೊರಟ ಪ್ರವಾಸಿಗರಾರೂ ಪಂಗೊಂಗ್ ನೋಡಲು ಮರೆಯಲ್ಲ. ಲೇಹ್ ನಗರದಿಂದ ೨೨೫ ಕೀ.ಮೀ ದೂರದಲ್ಲಿರುವ ಈ ಸರೋವರವು ಭಾರತ ಹಾಗು ಚೀನಾದ ನಡುವಿನ ಒಂದು ಗಡಿ. ಈ ಸರೋವರದ ೪೫ ಕಿ.ಮೀ ಭಾರತದ ಒಳಗಿದ್ದರೆ ಮತ್ತುಳಿದ ೯೦ ಕೀ.ಮೀ ಚೀನಾಕ್ಕೆ ಸೇರಿದ್ದು. ನಿಯಂತ್ರಣ ರೇಖೆಯ ಮೇಲಿರುವುದರಿಂದಾಗಿ ಇಲ್ಲಿಗೆ ತೆರಳುವ ಪ್ರಯಾಣಿಕರು ಒಳಾಂಗಣ ರೇಖಾ ಅನುಮತಿಯನ್ನು ಪಡೆಯುವುದು ಅಗತ್ಯ. ಅನುಮತಿಗಳನ್ನು ಪಡೆದು, ದುರ್ಗಮವಾದ ರಸ್ತೆಗಳಲ್ಲಿ ಸಾಗಿದರೆ ಮುಂದೆ ಸಿಗುವುದೇ ಸುಂದರ, ವಿಶಾಲವಾದ ಸಿಹಿ ನೀರ ಕೆರೆ. ಬೃಹತ್ ಬೆಟ್ಟಗಳ ನಡುವಿರುವ ಈ ಸರೋವರವು ನೋಡುಗರ ಕಂಗಳಿಗೆ ಸ್ತಬ್ದ ಚಿತ್ರವೆಂದೆನಿಸುತ್ತದೆ. ಸಂಜೆಯಾಗುತ್ತಲೇ ಇಲ್ಲಿ ನಿಶಬ್ದತೆಯು ಮನೆಮಾಡುತ್ತದೆ. ಮತ್ತಲ್ಲಿ ಕೇಳಸಿಗುವುದು ಬರೀ “ಓಂ ಜೈ ಜಗದೀಶ್ ” ಎಂದು ಸೇನಾ ಕ್ಯಾಂಪ್ ನಿಂದ ಬರುವ ಭಜನೆಯಷ್ಟೆ. ಇಲ್ಲೂ ಇದೆ ಒಂದು ದೊಡ್ಡ ಸೇನಾ ಗುಂಪು. ಅದು ಅನಿವಾರ್ಯವೂ ಹೌದು. ಇತ್ತೀಚಿಗೆ ನಡೆದ ಒಳನುಗ್ಗಲೇ ಅದಕ್ಕೆ ಸಾಕ್ಷಿ. ಕಿಂಚಿತ್ ಅಲಕ್ಷಕ್ಕೂ ಇಲ್ಲಿ ಅವಕಾಶವಿಲ್ಲ. ಆದುದರಿಂದಲೇ ಇಲ್ಲಿ ಬೋಟ್ ಪೆಟ್ರೋಲಿಂಗ್ (ಗಸ್ತು) ನಡೆಯುತ್ತಲೇ ಇರುತ್ತದೆ. ಇಲ್ಲಿಯ ಗಸ್ತುಗಾರಿಕೆಯನ್ನು ಇನ್ನೂ ಬಿಗಿಗೊಳಿಸುವುದಕ್ಕಾಗಿ ಭಾರತ ಸರಕಾರ ೧೭ ಹೊಸ ಸ್ಪೀಡ್ ಬೋಟುಗಳನ್ನು ಖರೀದಿಸುತ್ತಿರುವುದು ಸಂತಸದ ಸಂಗತಿ.

ಪಂಗೊಂಗ್ ಸರೋವರದಿಂದ ತ್ಸೋಮೋರೀರಿ ಸರೋವರಕ್ಕೆ ಹೊರಟು ನಿಂತ ನಮಗೆ ದಾರಿಯುದ್ದಕ್ಕೂ ಕಾಣಸಿಕ್ಕಿದ್ದು ಭಾರತದ ಚರಿತ್ರೆ. ಈ ಮಾರ್ಗದಲ್ಲಿ ವಿದೇಶಿಯರಿಗೆ ಪ್ರವೇಶವಿಲ್ಲ. ಕಾರಣ ಇದು ಹೆಚ್ಚು ಕಡಿಮೆ ಲೈನ್ ಆಫ್ ಕಂಟ್ರೋಲ್ ರೇಖೆಯ ಬದಿಯಲ್ಲೇ ಸಾಗುತ್ತದೆ. ಭಾರತೀಯರಾದರೂ ಸರಿ, ವಿಶೇಷ ಅನುಮತಿ ಪಡೆದಿರಬೇಕು. ಪಂಗೊಂಗ್ ನಿಂದ ದುರ್ಗಮವಾದ ರಸ್ತೆಯಲ್ಲಿ ಸುಮಾರು ೪ ಗಂಟೆಗಳ ಕಾಲ ಸಾಗಿದರೆ ಅಲ್ಲಿ ಸಿಗುವುದೇ “ಚುಶುಲ್”. ಇನ್ನೂ ಸ್ಪಷ್ಟವಾಗಿ ಹೇಳಿದರೆ “ಚುಶುಲ್ ಯುದ್ಧ ಭೂಮಿ”. ಎರಡು ಪರ್ವತಶ್ರೇಣಿಗಳೆಡೆಯಲ್ಲಿ ಇರುವ ಬಟ್ಟ ಬಯಲು ಪ್ರದೇಶ. ಅದೇ ಬಯಲಲ್ಲಿ ೧೯೬೨ರ ಚೀನಿ-ಭಾರತ ಯುದ್ಧವು ನಡೆದಿತ್ತು. ದೂರದಬೆಟ್ಟಗಳಲ್ಲೆಲ್ಲಾ ಬಂಕರುಗಳು ಕಾಣುತ್ತಿದ್ದವು. ಅರಿವಿಲ್ಲದೆ ಉಸಿರು ಬಿಗಿಯಾಗ ತೊಡಗಿತ್ತು. ಗುರಿಯಿಟ್ಟು ಕಲ್ಲು ಎಸೆದರೂ ಸಾಕು, ತಪ್ಪಿಸಲಾಗದು. ಅಡ್ಡಕ್ಕೆ ಒಂದೂ ಮರವಿಲ್ಲ. ಕಲ್ಲು ಬಂಡೆಗಳೂ ಇಲ್ಲ. ಅಲ್ಲಲ್ಲಿ ಸೇನೆಯಿಂದ ನಿರ್ಮಿಸಲ್ಪಟ್ಟ ಕಲ್ಲಿನ ಸಣ್ಣ ಸಣ್ಣ ಗೋಡೆಗಳಿವೆಯಷ್ಟೆ . ಯುದ್ಧವೇನಾದರೂ ಪ್ರಾರಂಭವಾದಲ್ಲಿ ಅವಷ್ಟೇ ಅಲ್ಲಿರುವ ಮರೆ. ಸುಮಾರು ೧ ಕೀ.ಮೀ ದೂರದಲ್ಲಿ ಒಂದು ಸಣ್ಣ ಕಟ್ಟಡ ಕಾಣಸಿಗುತ್ತದೆ. ಅದುವೇ ಇಂಡೋ-ಚೀನಾ ಬಾರ್ಡರ್ ಪರ್ಸನ್ನೇಲ್ ಮೀಟಿಂಗ್ ಪಾಯಿಂಟ್(ಬಿ.ಪಿ.ಎಂ). ಎರಡೂ ದೇಶದ ದ್ವಜಗಳು ಅಲ್ಲಿ ಎತ್ತರಕ್ಕೆ ಹಾರುತ್ತಿರುವುದನ್ನು ನಾವು ದೂರದಿಂದ ನೋಡಬಹುದು. ಇಲ್ಲಿಗೆ ಸಾಮಾನ್ಯ ನಾಗರಿಕರಿಗೆ ಪ್ರವೇಶವಿಲ್ಲ. ಹಾಗಾಗಿಯೇ ದೂರದಿಂದಲೇ ನೋಡಿ ತೃಪಿ ಪಡಬೇಕಾಯಿತು. “ಇಲ್ಲಿ ಜಾಸ್ತಿ ಹೊತ್ತು ನಿಲ್ಲುವುದು ಒಳ್ಳೆಯದಲ್ಲ, ಬನ್ನಿ ಶೈತಾನ್ ಸಿಂಗರನ್ನು ನೋಡೋಣ” ಎಂದು ಅಲ್ಲಿಂದ ಕರೆದೊಯ್ದ ನಮ್ಮ ಲಡಾಖಿ ಡ್ರೈವರ್.

“ಶೈತಾನ್ ಸಿಂಗ್” ಎಲ್ಲೋ ಕೇಳಿದ ಹೆಸರೆಂದೆನಿಸಿತು. ಹೌದು! ಚರಿತ್ರೆಯಲ್ಲಿ ಆಸಕ್ತಿ ಉಳ್ಳವರು ಈ ಹೆಸರನ್ನು ಕೇಳದಿರುವುದು ಅಸಾಧ್ಯ. ೧೯೬೨, ನವೆಂಬರ್ ತಿಂಗಳ ೧೮ನೇ ತಾರೀಕು. ಚುಶುಲ್ ಕಣಿವೆಯ ರೇಝನ್ಗ್ ಲಾ ಪ್ರದೇಶವನ್ನು ಕಾಯುತಿದ್ದಿದ್ದು ೧೩ತ್ ಕುಮಾವ್ನ್ ಬೆಟಾಲಿಯನ್. ೧೨೪ ಸೈನಿಕರನ್ನು ಒಳಗೊಂಡ ಬೆಟಾಲಿಯನ್ನ ನಾಯಕನೇ “ಮೇಜರ್ ಶೈತಾನ್ ಸಿಂಗ್”. ಮುಂಜಾನೆ ಸರಿ ಸುಮಾರು ೫ ಗಂಟೆಯ ಸಮಯ. ರೇಝನ್ಗ್ ಲಾದಲ್ಲಿ ಇನ್ನೂ ಚಳಿಗಾಲ. ಮುನ್ನುಗ್ಗಿ ಬರುತ್ತಿದ್ದ ೧೩೦೦ಕ್ಕೂ ಹೆಚ್ಚು ಚೀನೀ ಸೈನಿಕರನ್ನು ಬರೀ ೧೨೪ ಭಾರತೀಯ ಸೈನಿಕರು ಸೆದೆಬಡಿಯುವುದು ಕಷ್ಟಸಾದ್ಯವೆಂದು ತಿಳಿದಿದ್ದರೂ, ತನ್ನ ತಾಯ್ನಾಡಿನ ರಕ್ಷಣೆಯು ತನ್ನ ಕರ್ತವ್ಯ, ಅದಕ್ಕಾಗಿ ಕೊನೆಯ ಕ್ಷಣದವರೆಗೂ ಹೋರಾಡಬಲ್ಲೆ ಎಂಬ ದಿಟ್ಟ ನಿರ್ಣಯವನ್ನು ಸ್ವೀಕರಿಸಿದ ನಾಯಕನೇ ಮೇಜರ್ ಶೈತಾನ್ ಸಿಂಗ್. ತಮಗಿದ್ದ ಕೊರತೆಗಳನ್ನು ಬದಿಗಿಕ್ಕಿ, ತನ್ನೊಂದಿಗಿರುವರನ್ನು ಹುರಿದುಂಬಿಸಿ, ಸುಮಾರು ೧೦೦೦ಕ್ಕೂ ಹೆಚ್ಚು ಚೀನೀ ಸೈನಿಕರನ್ನು ಸೆದೆಬಡಿದ ಚರಿತ್ರೆ ಅವರದು. ಯುದ್ಧ ಮುಗಿಯುವಷ್ಟರಲ್ಲಿ ಶೈತಾನ್ ಸಿಂಗ್ ಹಾಗು ಇನ್ನೂ ೧೧೪ ಸೈನಿಕರು ಜೀವ ತ್ಯಾಗ ಮಾಡಿದ್ದರು. ಮುಂದೆ ಶೈತಾನ್ ಸಿಂಗ್ ಅವರಿಗೆ ಅತ್ಯುನ್ನತ ಯುದ್ಧ ಪ್ರಶಸ್ತಿಯಾದ ಪರಮ ವೀರ ಚಕ್ರವನ್ನಿತ್ತು ಗೌರವಿಸಲಾಯಿತು. ಅವರ ನೆನಪಿಗಾಗಿ ಸೇನೆಯು ಅಲ್ಲೊಂದು ವಾರ್ ಮೆಮೋರಿಯಲ್ ಅನ್ನು ಕಟ್ಟಿದೆ. ಬಟ್ಟಬಯಲು ಪ್ರದೇಶದಲ್ಲಿರುವ ಆ ಮೆಮೋರಿಯಲ್ ನೋಡುತ್ತಾ ನಿಂತರೆ ಮೈ ಜುಮ್ ಅಂದು ಬಿಡುತ್ತದೆ. ಇದಕ್ಕಿಂತಲೂ ಧೀರ ಮರಣವಿನ್ನೊಂದಿಲ್ಲ ಎಂದನಿಸತೊಡಗುತ್ತದೆ.

ಅಲ್ಲಿಂದ ಮುಂದೆ, ಲಡಾಖ್ ಉದ್ದಗಲಕ್ಕೂ ಸೇನೆಯ , ಅದರಲ್ಲೂ ಐ.ಟಿ.ಬಿ.ಪಿ ವಿಭಾಗದ ಹಲವಾರು ಕ್ಯಾಂಪ್ಗಳು ಕಾಣ ಸಿಕ್ಕವು. ಮರಳಿ ಲೇಹ್ ತಲುಪಿದ ಮೇಲೆ ಇನ್ನು ಬಹುಷಃ ಸೇನೆ ಹಾಗು ಯುದ್ಧದ ಬಗ್ಗೆ ತಿಳಿಯಲು ಅಥವಾ ನೋಡಲು ಜಾಸ್ತಿ ಅವಕಾಶಗಳು ದೊರೆಯದು ಎಂದಂದುಕೊಂಡೆ. ಅದನ್ನು ಸುಳ್ಳಾಗಿಸಿತು “ಹಾಲ್ ಆಫ್ ಫೇಮ್” ಮ್ಯೂಸಿಯಂ. ಲೇಹ್ ನಗರ ಕೇಂದ್ರದಿಂದ ಸುಮಾರು ೪ ಕೀ.ಮೀ ದೂರದಲ್ಲಿದೆ ಈ ವಸ್ತು ಸಂಗ್ರಹಾಲಯ. ವಸ್ತುಸಂಗ್ರಹಾಲಯ ಎಂಬ ಪದ ಪ್ರಯೋಗಿಸುವುದು ಸರಿಯೋ ಎಂಬುವುದು ಗೊತ್ತಿಲ್ಲ. ಇದು ಬರೀ ಪುರಾತನ ವಸ್ತುಗಳನ್ನು ತೆಗೆದಿಟ್ಟ ಜಾಗವಲ್ಲ. ಇದು ಭಾರತೀಯ ಸೇನೆಯ ಒಂದು ದಾಖಲೆ ಪುಸ್ತಕ ಅನ್ನಬಹುದು (ರೆಕಾರ್ಡ್ ಬುಕ್). ಸೇನಾ ಕ್ಯಾಂಪುಗಳ ನಡುವೆ ಸಾರ್ವಜನಿಕರಿಗಾಗಿ ತೆರೆದಿಟ್ಟ ಒಂದು ವಿಭಾಗವೇ “ಹಾಲ್ ಆಫ್ ಫೇಮ”. ಸ್ವತಂತ್ರ ಭಾರತದಲ್ಲಿ ನಡೆದ ಎಲ್ಲ ಯುದ್ಧಗಳ ಹಾಗು ಸೇನಾ ಚಟುವಟಿಕೆಗಳ ಸಂಪೂರ್ಣ ಮಾಹಿತಿ ಇಲ್ಲಿ ಲಭ್ಯ. ೧೯೪೭ರಿಂದ ಇಂದಿನವರೆಗೆ ನಡೆದ ಎಲ್ಲಾ ಯುದ್ಧಗಳ ವಿವರಗಳು, ಹೋರಾಡಿದ ಯೋಧರ ಕತೆಗಳು, ಉಪಯೋಗಿಸಿದ ವಸ್ತುಗಳು, ಶತ್ರುಗಳಿಂದ ಸೆರೆಹಿಡಿಯಲ್ಪಟ್ಟ ವಸ್ತುಗಳು, ಸಿಯಾಚಿನ್ ಪ್ರದೇಶಗಳಲ್ಲಿ ಬದುಕುವ ರೀತಿ-ನೀತಿ, ಭಾರತೀಯ ಸೇನಾಪಡೆಯ ಬಗ್ಗೆ ದೇಶ-ವಿದೇಶದ ನಾಯಕರುಗಳು ಹೇಳಿದ ಮಾತುಗಳು, ಎಲ್ಲವೂ ಇಲ್ಲಿ ಅಚ್ಚುಕಟ್ಟಾಗಿ ವಿವರಿಸಲಾಗಿದೆ. ೨ ಗಂಟೆಗಳ ಕಾಲ ಅಲ್ಲಿದ್ದರೂ ಎಲ್ಲಾ ವಿವರಗಳನ್ನು ಪೂರ್ಣವಾಗಿ ಓದಿಮುಗಿಸಲಾಗಲಿಲ್ಲ ಎಂದನಿಸಿತು ನನಗೆ. ಸಂಜೆ ೭ ಗಂಟೆಯಾಗುತ್ತಲೇ ಹೊರಾಂಗಣಕ್ಕೆ ನಮ್ಮೆಲ್ಲರನ್ನೂ ಕರೆದೊಯ್ಯಲಾಯಿತು. ಅಲ್ಲೊಂದು ವಾರ್ ಮೆಮೋರಿಯಲ್ ಇದೆ. ದೇಶಕ್ಕಾಗಿ ಮಡಿದ ಯೋಧರನ್ನು ಗೌರವಿಸುವ ಸಲುವಾಗಿ ದಿನಂಪ್ರತಿ ಪೆರೇಡ್ ಒಂದು ನಡೆಯುತ್ತದೆ. ಕೊನೆಯಲ್ಲಿ ರಾಷ್ಟ್ರ ಗೀತೆಯೊಂದಿಗೆ ದ್ವಜಾವರೋಹಣ. ಇದನಷ್ಟು ನೋಡುತಿದ್ದರೆ ಮನಸ್ಸು ದೇಶಭಕ್ತಿಯಿಂದ ತುಂಬಿ ಬಿಡುತ್ತದೆ. ಗೊತ್ತಿಲದೇ ಮನಸಿನಲ್ಲಿ ಹುತಾತ್ಮ ಯೋಧರನ್ನು ನಮಿಸಿ ಬಿಡುತ್ತೇವೆ. ಲಡಾಖ್ ಪ್ರವಾಸವು ಸಾರ್ಥಕವೆನಿಸಲು ಭಾರತೀಯರಾದ ನಮಗಿದಿಷ್ಟು ಸಾಕು.

ಲಡಾಖಿನ ಪ್ರಾಕೃತಿಕ ಸೌಂದರ್ಯಕಿಂತಲೂ ಹೆಚ್ಚಾಗಿ ಭಾರತೀಯ ಸೇನೆಯು ಅಲ್ಲಿ ಮಾಡುತ್ತಿರುವ ಕೆಲಸಗಳನ್ನು ಶ್ಲಾಘಿಸಲು ಸೇನಾ ಮ್ಯೂಸಿಯಂನಲ್ಲಿ ಓದಿದ್ದ ಈ ಕೆಳಗಿನ ಸಾಲುಗಳೇ ಕಾರಣ. “ವೆನ್ ಯು ಗೋ ಹೋಂ, ಟೆಲ್ ದೆಮ್ ಆಫ್ ಅಸ್ ಅಂಡ್ ಸೇ.. ಫಾರ್ ಯುವರ್ ಟುಮಾರೋ, ವಿ ಗೇವ್ ಅವರ್ ಟುಡೇ” ( ನೀವು ಮನೆಗೆ ತೆರಳಿದಾಗ, ನಮ್ಮ ಬಗ್ಗೆ ತಿಳಿಸಿ ಮತ್ತು ಹೇಳಿ .. ನಿಮ್ಮ ನಾಳೆಗಳಿಗಾಗಿ, ನಾವು ನಮ್ಮ ಇಂದನ್ನು ಸಮರ್ಪಿಸಿದ್ದೇವೆ). ನಮ್ಮೂರಿನ ಚಳಿಗೇ, ನಾವುಗಳು ಕನಿಷ್ಠ ಒಂದೆರಡು ಕಂಬಳಿಗಳನ್ನು ಹೊದ್ದುಕೊಳ್ಳುತ್ತೇವೆ. ಹಾಗಿರುವಾಗ ತಮಗಿರುವ ಸೀಮಿತ ಸೌಕರ್ಯವನ್ನಷ್ಟೇ ಉಪಯೋಗಿಸಿಕೊಂಡು, ಹಿಮಾಲಯದ ಥರಗುಟ್ಟುವ ಚಳಿಗೂ, ದೇಶ ಕಾಯಲು ನಿಂತಿರುವವರ ಮನಸ್ಥೈರ್ಯವೆಂತಹದ್ದೋ !! ನಮಿಸಲೇ ಬೇಕು. ನಿಮಗೆ ನಾವೆಂದೂ ಋಣಿ.

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments