ವಿಷಯದ ವಿವರಗಳಿಗೆ ದಾಟಿರಿ

ಸೆಪ್ಟೆಂಬರ್ 15, 2017

ನಾನು ಗೌರಿಯಾದರೆ ನೀನು ಯಾರು ಎಂದು ಅವರ ಕೇಳಬೇಕಿತ್ತು!

‍ನಿಲುಮೆ ಮೂಲಕ

– ನರೇಂದ್ರ ಎಸ್ ಗಂಗೊಳ್ಳಿ

ಪತ್ರಕರ್ತೆಯಾಗಿ ಅದಕ್ಕಿಂತ ಹೆಚ್ಚಾಗಿ ತನ್ನ ಎಡಪಂಥೀಯ ಧೋರಣೆಗಳಿಂದ  ಗುರುತಿಸಿಕೊಂಡಿದ್ದ ಗೌರಿ ಲಂಕೇಶ್ ಹತ್ಯೆ ನಿಜಕ್ಕೂ ವಿಷಾದಕರ. ವಾದ ವಿವಾದಗಳಿಗೆ ಹತ್ಯೆಯೇ ಉತ್ತರವಾಗಬಾರದು. ಹಾಗಾಗಿ ಹಂತಕರು ಅದ್ಯಾರೇ ಆಗಿದ್ದರೂ ಅವರ ಬಂಧನವಾಗಲಿ ಶಿಕ್ಷೆಯಾಗಲಿ  ಎನ್ನುವುದನ್ನು ಮಾನವೀಯತೆಯ ನೆಲೆಯಲ್ಲಿ ಎಲ್ಲರೂ ಒಪ್ಪುವಂತಾದ್ದು. ಆದರೆ ಒಂದು ಹತ್ಯೆಯ ಬಳಿಕ ಈ ಬುದ್ಧಿಜೀವಿಗಳೆನ್ನಿಸಿಕೊಂಡವರು  ವರ್ತಿಸುತ್ತಿರುವ ರೀತಿ ಇದೆಯಲ್ಲಾ ಅದನ್ನು ಮಾತ್ರ ಯಾವ ಕಾರಣಕ್ಕೂ ಒಪ್ಪಿಕೊಳ್ಳಲಾಗದ್ದು.

ಮೊತ್ತ ಮೊದಲಿಗೆ ನಮ್ಮ ಮಾಧ್ಯಮಗಳು ಗೌರಿಯವರ ಹತ್ಯೆ ಬಳಿಕ ಅವರಿಗೆ ವಿಶೇಷ ಬಿರುದು ಬಾವಲಿಗಳನ್ನೇ ನೀಡುತ್ತಾ ಸುದ್ದಿಗಳನ್ನು ಬಿತ್ತರಿಸಲಾರಂಬಿಸಿದವು. ಹೋರಾಟಗಾರ್ತಿ, ಅಪೂರ್ವ ಚಿಂತಕಿ ಎಂದೆಲ್ಲಾ ಇವರು ಹೇಳುತ್ತಾರಲ್ಲಾ ಅದ್ಯಾವ ನೆಲೆಯಲ್ಲಿ ಅವರನ್ನು ಉತ್ತಮ ಚಿಂತಕಿ ಎನ್ನಲಾಗುತ್ತದೆ ಎನ್ನುವುದನ್ನು ಬಲ್ಲಿದರು ಹೇಳಬೇಕಿದೆ. ಆರಂಭದ ಹಂತದಲ್ಲಿ ನಕ್ಸಲರನ್ನು ಶರಣಾಗಿಸಿ ಸಮಾಜದ ಮುಖ್ಯವಾಹಿನಿಯಲ್ಲಿ ಅವರಿಗೊಂದು ಬದುಕು ಕಟ್ಟಿಕೊಡುವ ಒಂದಷ್ಟು ಪ್ರಯತ್ನಗಳನ್ನು ಅವರು ಮಾಡಿದ್ದು ನಿಜವಾದರೂ ಈ ಹೊತ್ತಿಗೂ  ನಕ್ಸಲರಿಗೆ ಪರಿಹಾರ ಕೊಡಿಸುವ ಮತ್ತು ಅವರ ಮರುವಸತಿ ಯೋಜನೆಯಲ್ಲಿ ನಡೆದ ಅವ್ಯವಹಾರಗಳ ವಾಸನೆ ಆ ವಿಚಾರದ ಸುತ್ತಲೂ ಮೇಳೈಸಿಕೊಳ್ಳುತ್ತಿರುವುದನ್ನು ಅಲ್ಲಗಳೆಯಲಾದೀತಾ?

ಅವರ ಪತ್ರಿಕೆಯ ತಲೆಬರಹಗಳಾದಿಯಾಗಿ ಅವರ ಬರಹಗಳಲ್ಲಿನ ಬಾಷಾ ಪ್ರಯೋಗಗಳನ್ನು ಗಮನಿಸಿದಾಗ ಅವರೊಬ್ಬ ಅಪೂರ್ವ ಆದರ್ಶ ಚಿಂತನೆಗಳುಳ್ಳ ಉತ್ತಮ ಬರಹಗಾರರಾಗಿದ್ದರು ಎನ್ನುವುದನ್ನು ಸಜ್ಜನ ಮನಸ್ಸುಗಳಿಗೆ ಒಪ್ಪಿಕೊಳ್ಳಲು ಕಷ್ಟವಾಗುತ್ತದೆ.ಸತ್ತ ಮೇಲೆ ಪ್ರತಿಯೊಬ್ಬರನ್ನೂ ಗೌರವಿಸುವುದು ನಮ್ಮ ಸಂಸ್ಕೃತಿ ನಮಗೆ ಕಲಿಸಿದ ಉತ್ತಮ ವಿಚಾರಗಳಲ್ಲಿ ಒಂದು. ಹಾಗೆಂದು ಗೌರವ ಸಲ್ಲಿಸುವ ನೆಪದಲ್ಲಿ ತೀರಾ ಅತಿರಂಜಿತವಾಗಿ ಒಬ್ಬರನ್ನು ಹೊಗಳುವುದನ್ನು ಯಾವ ನೆಲೆಯಲ್ಲೂ ಒಪ್ಪಲಾಗದ್ದು.

ಕೋಮು ಸೌಹಾರ್ದ ವೇದಿಕೆಯ  ಹೆಸರಿನಲ್ಲಿ ಎಡಪಂಥೀಯ ವಿಚಾರವಾದಿಗಳು ನಡೆಸುವ ಕಾರ್ಯಕ್ರಮಗಳಲ್ಲಿ ಅವರ ಮಾತುಗಳನ್ನು ಕೇಳುತ್ತಿದ್ದರೆ ಅಪ್ಪಟ ದೇಶಪ್ರೇಮಿಯೊಬ್ಬನಿಗೆ ಮೈ ಉರಿಯದಿರಲು ಸಾಧ್ಯವಿಲ್ಲ. ದೇಶದ್ರೋಹಿ ಮನಸ್ಥಿತಿಯುಳ್ಳ ಕನ್ನಯ್ಯನಂತವರನ್ನು ತನ್ನ ದತ್ತುಮಕ್ಕಳೆನ್ನುವ ಮನಸ್ಥಿತಿಯುಳ್ಳವರ ದೇಶಪ್ರೇಮವನ್ನು ಪ್ರಶ್ನಿಸದೆ ಇರಲಾದೀತೆ? ಅನ್ಯ ಧರ್ಮ ದವರನ್ನು ಒಲೈಸುವ ಏಕೈಕ ಉದ್ದೇಶದಿಂದ, ಇಡೀ ಭಾರತದ ಅದ್ಭುತವಾದ ದಿವ್ಯ ಪರಂಪರೆಗೆ ಸಂಸ್ಕೃತಿಗೆ ಕಾರಣೀಭೂತವಾಗಿರುವ ಹಿಂದೂ ಧರ್ಮದ ಬಗೆಗೆ ಅದೂ ಒಂದು ಧರ್ಮ ಏನ್ರೀ? ಅದಕ್ಕೆ ಅಪ್ಪನೂ ಅಮ್ಮನೂ ಇಲ್ಲ  ಎಂದು ಬಾಯಿಗೆ ಬಂದಂತೆ ಸಾರ್ವಜನಿಕ ವೇದಿಕೆಯಲ್ಲಿ ಮಾತನಾಡುವ ವ್ಯಕ್ತಿ ಬಯಸುತ್ತಿದ್ದುದು ಕೋಮು ಸೌಹಾರ್ದವನ್ನು ಅಂತ ಅದು ಹೇಗೆ ಹೇಳುತ್ತೀರಿ? ಇಲ್ಲಿನ ಬಹುಸಂಖ್ಯಾತ ಮನಸ್ಸುಗಳನ್ನು ಧರ್ಮದ ಹೆಸರಿನಲ್ಲಿ ಅನವಶ್ಯಕವಾಗಿ ನಿಂದಿಸಬಾರದು ಎನ್ನುವ ಕನಿಷ್ಠ ಪ್ರಜ್ಞೆ ಇಲ್ಲದವರನ್ನು ಚಿಂತಕಿ ಎಂದು ಬಿಟ್ಟಿರಲ್ಲಾ ನಿಮ್ಮ ಬೌದ್ಧಿಕ ದಿವಾಳಿತನಕ್ಕೆ ಇದಕ್ಕಿಂತ ಇನ್ನೇನು ಸಾಕ್ಷಿ ಬೇಕು?

ಗೌರಿ ಹತ್ಯೆ ಆಗಿ ಗಂಟೆ ಕಳೆಯುವ ಮೊದಲೇ ಪ್ರಧಾನಿಯಾಗುವ ಕನಿಷ್ಠ ಯೋಗ್ಯತೆ ಇಲ್ಲದಿದ್ದರೂ  ಕನಸು ಕಾಣುತ್ತಿರುವ ಒಬ್ಬರು ಇದಕ್ಕೆಲ್ಲಾ ಪ್ರಧಾನಿ ನರೇಂದ್ರ ಮೋದಿಯೇ ಕಾರಣ ಎಂದುಬಿಟ್ಟರು. ಆ ಬಾಯಿಂದ ಈವರೆಗೆ  ಒಮ್ಮೆಯಾದರೂ ಸರಿಯಾದ ಮಾತು ಬಂದಿದ್ದು ಇಡೀ ಜಗತ್ತಿನಲ್ಲಿ ಯಾರಿಗೂ ನೆನಪಿರಲಿಕ್ಕಿಲ್ಲ ಬಿಡಿ. ಯಥಾ ರಾಜ ತಥಾ ಪ್ರಜಾ ಅನ್ನೋ ಹಾಗೆ ಅವರ ಬಾಲಂಗೋಚಿಗಳು ಸೇರಿಕೊಂಡು ಹತ್ಯೆಯನ್ನು ಪ್ರತಿಭಟಿಸುವ ನೆಪದಲ್ಲಿ ಮೋದಿಗೆ ಧಿಕ್ಕಾರ ಎಂದು ಗಟ್ಟಲು ಕಿತ್ತು ಹೋಗುವ ಹಾಗೆ ಅರಚಲಾರಂಬಿಸಿದ್ದರು. ಅಲ್ಲಾ ರೀ ಎಲ್ಲಿಯ ಗೌರಿ!ಎಲ್ಲಿಯ ಪ್ರಧಾನಿ!ನಾಳೆ ದಿನ ಇವರ ಮನೆಯಲ್ಲಿ ಕೋಳಿಯನ್ನು  ನಾಯಿ ಕಚ್ಚಿಕೊಂಡು ಹೋದರೂ ಅದಕ್ಕೂ ಮೋದಿಯೇ ಕಾರಣ ಎನ್ನುವಂತಹ ವಿಕ್ಷಿಪ್ತ ಮನಸ್ಥಿತಿ ಇವರದ್ದು. ಎಡಪಂಥೀಯರ ನೆಲೆ ಕೇರಳದಲ್ಲಿ ಪದೇ ಪದೇ ಎನ್ನುವಂತೆ ಬಲಪಂಥೀಯರ ಹತ್ಯೆ ನಡೆಯುತ್ತಿದೆಯಲ್ಲಾ ಅದಕ್ಕೂ ನರೇಂದ್ರ ಮೋದಿಯೇ ಕಾರಣ ಎನ್ನುತ್ತಾರಾ ಇವರು? ಧಿಕ್ಕಾರವಿರಲಿ ಇಂತಹ ಮರ್ಯಾದೆ ಇಲ್ಲದ ಮನಸ್ಸುಗಳಿಗೆ.

ಕಲಬುರ್ಗಿ ಹಂತಕರನ್ನು ಇನ್ನೂ ಹಿಡಿಯದೆ ರಾಜ್ಯ ಸರ್ಕಾರ ನಾಟಕವಾಡುತ್ತಿದೆಯಲ್ಲಾ ಅದನ್ನೇಕೆ ಈ ಬಳಗ ಪ್ರಶ್ನಿಸುತ್ತಿಲ್ಲ? ಅಂದೊಮ್ಮೆ ತನಿಖೆಯ ಸಮಯದಲ್ಲಿ ಕಲಬುರ್ಗಿಯವರ ಹತ್ಯೆಯಲ್ಲಿ ಅವರ ಅಸ್ತಿ ವಿವಾದವೂ ಕಾರಣವಾಗಿರಬಹುದೆನ್ನುವ ಅಂಶ ಮುನ್ನಲೆಗೆ ಬಂದ ಮೇಲೆ ತನಿಖೆ ಎತ್ತ ಸಾಗಿದೆ ಎನ್ನುವುದನ್ನೇ  ಸರ್ಕಾರ ಮರೆತಿರುವುದು ಸತ್ಯ. ಗೌರಿ ಪ್ರಕರಣದಲ್ಲಿ ಮನೆಯವರು ಒಪ್ಪಿದರೆ ನಾನು ಸಿಬಿಐಗೆ ಕೊಡಲು ಸಿದ್ಧ ಎಂದ ಮುಖ್ಯ ಮಂತ್ರಿ ಸಿದ್ಧರಾಮಯ್ಯನವರಿಗೆ  ಅವತ್ತು  ಡಿವೈಎಸ್‍ಪಿ ಗಣಪತಿಯವರ ಕುಟುಂಬ ಪರಿಪರಿಯಾಗಿ ಸಿಬಿಐಗೆ ನೀಡುವಂತೆ ವಿನಂತಿಸಿದರೂ ಒಲ್ಲೆ ಅಂದಿದ್ದೇಕೆ? ಕಾರಣ ಸ್ಪಷ್ಟ. ಅವತ್ತು ಸಿಬಿಐಗೆ ನೀಡಿದ್ದರೆ ಇವತ್ತು ಸಿದ್ಧು ಸಂಪುಟದ ಹಲವರು ಜೈಲಿನಲ್ಲಿರಬೇಕಾಗಿತ್ತೇನೋ! ಅಲ್ಲ ಎನ್ನುತ್ತೀರಾ?

ನಾನು ಹೀಗೆಲ್ಲಾ ಬರೆದಾಕ್ಷಣ ನನಗೊಂದು ಇವನೊಬ್ಬ ಬಲಪಂಥೀಯ ಅಂತ ಸ್ಟಿಕ್ಕರ್ ಹಚ್ಚಲು  ಆ ಪಡೆ ರೆಡಿಯಾಗಿ ಕೂತುಬಿಟ್ಟಿರುತ್ತದೆ. ಕಾರಣ ಇಷ್ಟೆ. ಅವರ ತಲೆಯೊಳಗೆ ನಿರ್ದಿಷ್ಠ ವಿಚಾರಗಳನ್ನು ಬಿಟ್ಟರೆ ಬೇರೆ ವಿಚಾರಗಳನ್ನು ಆಲೋಚಿಸುವ ಅಥವಾ ವಿಶ್ಲೇಷಿಸುವ ಯಾವ ತರ್ಕಗಳಿಗೂ ಅವಕಾಶ ಇರುವುದಿಲ್ಲ. ಮುಚ್ಚಿದ ಮನಸ್ಥಿತಿಗಳು ಯಾವತ್ತೂ ಕೊಳೆತು ನಾರುತ್ತಾ ಮತ್ತಷ್ಟು ವಿಕಾರಗೊಳ್ಳಬಲ್ಲವೇ ಹೊರತು ಅವೆಂದಿಗೂ ಬೆಳೆದು ಸಮಾಜಕ್ಕೆ ತಂಪೆರೆಯಲು ಸಾಧ್ಯವಿಲ್ಲ. ಒಂದು ವಿಚಾರ ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕಿದೆ. ಅಭಿಪ್ರಾಯ ಸ್ವಾತಂತ್ರ್ಯ ಎನ್ನುವುದು ಎಡಬಿಡಂಗಿಗಳ ಸ್ವತ್ತಲ್ಲ. ಅಷ್ಟಕ್ಕೂ ಇಂತಹ ಬುದ್ಧಿಜೀವಿಗಳ ಬಳಗದ ಅಪ್ರಬುದ್ಧ ಅಸಂಬದ್ಧ ದೇಶದ್ರೋಹಿ ನಡವಳಿಕೆಗಳನ್ನು ಖಂಡಿಸದೆ ಕುಳಿತು ಬಿಟ್ಟರೆ ತೀರಾ ಸಮಾನ್ಯ ಜನರಿಗೆ  ಕೆಟ್ಟ ಸಂದೇಶಗಳು ರವಾನೆಯಾಗಬಹುದು. ಹಾಗಾಗಿ ಸತ್ಯವನ್ನು ತಿಳಿಸುವ ಇವರ ಎಡಬಿಡಂಗಿತನದ ವರ್ತನೆಗಳನ್ನು ತೀವ್ರವಾಗಿ ಖಂಡಿಸುವ ಕೆಲಸವನ್ನು ಪ್ರತಿಯೊಬ್ಬ ಜವಾಬ್ದಾರಿಯುತ ನಾಗರಿಕನೂ ಮಾಡಬೇಕಿದೆ.

ಮೊನ್ನೆ ಮೊನ್ನೆ ನಾನು ಗೌರಿ ಅಂತ ಹೇಳಿಕೊಂಡು ಒಂದಷ್ಟು ಜನ ಪ್ರತಿಭಟನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರಲ್ಲಾ ಅವರಲ್ಲಿ ಎಷ್ಟು ಜನ ಗೌರಿಯನ್ನು ಓದಿಕೊಂಡಿದ್ದರು? ಅರ್ಥೈಸಿಕೊಂಡಿದ್ದರು?ಹತ್ತಿರದಿಂದ ಅವರ ಬದುಕನ್ನು ನೋಡಿದ್ದರು? ಹೋಗಲಿ ಮಾನವತಾವಾದಿಗಳ ಮುಖವಾಡ ತೊಟ್ಟು ಸಮಾಜದ ಅಸಮಾನತೆ ಶೋಷಣೆ ಇತ್ಯಾದಿಗಳ ವಿರುದ್ಧ  ಸ್ಪಂದಿಸುವ ನೆಲೆಯಲ್ಲಿ ಮಾತನಾಡುತ್ತಿರುವವರು ಅದೆಷ್ಟು ಬಾರಿ ಸಮಾಜದ ಶೋಷಿತ ಸಮುದಾಯದೊಂದಿಗೆ ನೇರವಾಗಿ ಬೆರೆತು ಅವರ ದುಖ ದುಮ್ಮಾನಗಳನ್ನು ಆಲಿಸಿದ್ದರು? ಅವರ ಅಭಿವೃದ್ಧಿಗಾಗಿ ಈ ಬಳಗದವರು ನೀಡಿದ ಕೊಡುಗೆಗಳೇನು ಎನ್ನುವುದನ್ನು ಯಾರಾದರೂ ಹೇಳಿಬಿಡಿ. ತಮ್ಮವರದ್ದೇ ಹೆಣಕ್ಕಾಗಿಯೇ ಬಕಪಕ್ಷಿಗಳಂತೆ ಕಾದು ಕುಳಿತು  ಪ್ರತಿಭಟನೆ ಮಾಡಲಿಕ್ಕಷ್ಟೇ ಇವರ ಸಮಾಜಿಕ ಕಾಳಜಿ ಸೀಮಿತವೇ? ಮೊನ್ನೆ ಒಂದಷ್ಟು ಜನ ಹೆಣ್ಣು ಮಕ್ಕಳು ಮುಖ ತುಂಬಾ ಬಟ್ಟೆ ಸುತ್ತಿಕೊಂಡು ನಾನು ಗೌರಿ ಅಂದರಲ್ಲಾ ಅವರಿಗೆ ಗೌರಿಯ ಹಾಗೆ ಇಲ್ಲಿ ಬದುಕಲು ಅವರ ಸಂಪ್ರದಾಯ ಅವಕಾಶ ಮಾಡಿಕೊಡುತ್ತದೆಯೇ?

ಒಬ್ಬರಾದರೂ ನಾನು ವಿವೇಕಾನಂದ, ನಾನು ಕಲಾಂ , ನಾನು ವಿಶ್ವೇಶ್ವರಯ್ಯ ಅಂತ ಅಂದಿದ್ದರೆ ಪ್ರಾಯಶ ಅದಕ್ಕಾದರೂ ಒಂದು ಅರ್ಥವಿರುತಿತ್ತು.ಆ ಬಗೆಗೆ ಯಾವತ್ತೂ ಅವರ ಮನಸ್ಸುಗಳು ಹರಿಯುವುದಿಲ್ಲ ಬಿಡಿ. ಹಿಂದೂ ಧರ್ಮವನ್ನು ಗೌರವಿಸುವ ಎಲ್ಲರೂ ಅವರಿಗೆ ಅಪಥ್ಯ.  ಅವರು ಗೌರಿ ಎನ್ನುವುದಾದರೆ  ಅವರಲ್ಲಿ ಒಬ್ಬರಿಗಾದರೂ ಸ್ವಂತಿಕೆ ಎನ್ನುವುದು ಬೇಡವೆ? ಯಾವ ಅರ್ಥದಲ್ಲಿ ಇವರು ಗೌರಿ ಎನ್ನುವುದು ಜನರಿಗೆ ತಿಳಿಸಬೇಕಿತ್ತು. ಅವರೊಂದು ಶಕ್ತಿ, ಚಿಂತನೆ, ತತ್ವ  ಅಂತೆಲ್ಲಾ ಹೇಳಿದರಲ್ಲಾ ಅದೇನು ತತ್ವಾದರ್ಶ ಎಂದು ಒಬ್ಬರೂ ವಿವರಿಸಲಿಲ್ಲ. ವಿವರಿಸುವ ತಾಕತ್ತುಳ್ಳವರು ಅಲ್ಯಾರೂ ಕಾಣಿಸಲಿಲ್ಲ? ಅಷ್ಟಕ್ಕೂ ಏನೆಂದು ವಿವರಿಸಿಯಾರು ಎನ್ನುವುದು ಸೋಜಿಗ.

ಕೊನೆ ಮಾತು : ನಾನು ಗೌರಿ ಎನ್ನುವವರು ನನ್ನ ಸಂದೇಹಗಳಿಗೆ ತೆರೆದ ಮನಸ್ಸಿನ ವಿವರಣೆ ನೀಡಬಹುದು.ವಿತಂಡವಾದಿಗಳ ಭಂಡತನಕ್ಕೆ ಉತ್ತರಿಸುವ ಮೂರ್ಖತನ ನನ್ನದಲ್ಲ.

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments