ಡೋಕ್ಲಾ ಕಾರ್ಮೋಡ ಕರಗಿದ ನಂತರ ಮೋದಿ ಸಮರ್ಥಕರು, ವಿರೋಧಿಗಳು ಮತ್ತದೇ ಗುದ್ದಾಟಕ್ಕಿಳಿದಿದ್ದಾರೆ.
– ಪ್ರಸನ್ನ ಕೆ
ಮೋದಿ ಅಂತದ್ದೇನು ಮಾಡಿದ್ದು ಎಂದು ವಿಶ್ಲೇಷಿಸಲು ಕುಳಿತರೆ ನಮಗೆ ಅಂತ ವಿಶೇಷಗಳು ಸಿಗುವುದಿಲ್ಲ. ಆದರೆ ವಿಷಯ ಇಷ್ಟೇನಾ? ಮೋದಿ ಏನೂ ಮಾಡಲೇ ಇಲ್ವಾ? ಎಂಬ ಪ್ರಶ್ನೆ ಏಳಬಹುದು. ಏನೂ ಮಾಡದೇ ಇಂತಹ ಗೆಲುವುಗಳು, ಯಶಸ್ಸು ಕೇವಲ ಭಕ್ತರ ಹೊಗಳಿಕೆ ವಿರೋಧಿಗಳ ಕೆಸರೆರಚಾಟದಿಂದ ಸಿಗಲು ಸಾಧ್ಯವೆ?
ಮೋದಿಯನ್ನು ಅತಿಯಾಗಿ ಹೊಗಳುವರಾಗಲಿ ಹಿಂದೆ ಮುಂದೆ ತಿಳಿಯದೆ ಕೇವಲ ಸೈದ್ದಾಂತಿಕ ಕಾರಣಕ್ಕಾಗಿ ವಿರೋಧಿಸುವವರು ಅವರ ಕಾರ್ಯಶೈಲಿಯನ್ನು ವಿಮರ್ಷಿಸಲಿಲ್ಲ ಅಥವಾ ಅರ್ಥ ಮಾಡಿಕೊಳ್ಳುವ ಗೋಜಿಗೆ ಹೋಗಲಿಲ್ಲ. ಆದರೆ ಮೋದಿ ಹಾಗೆ ಮಾಡಲಿಲ್ಲ, ತನ್ನ ಕೆಲಸವೇನು, ತನ್ನ ಗುರಿ ಏನು ಎಂಬುದು ಅವರಿಗೆ ಸ್ಪಷ್ಟವಾಗಿ ತಿಳಿದಿದೆ, ಆದನ್ನು ಅವರು ಮುಂದುವರೆಸಿದ್ದಾರಷ್ಟೆ. ಅವರು ಗುರಿ ಒಂದೇ ‘ಉತ್ತಮ ಆಡಳಿತ, ದೇಶದ ಒಳಿತು’. ತನ್ನ ವೈಯಕ್ತಿಕ ವರ್ಚಸ್ಸಿಗಿಂತ ದೇಶದ ಒಳಿತು ಮುಖ್ಯ ಎನ್ನುವುದು ಬಂದಾಗ ಬೇರೆಲ್ಲಾ ದಾರಿಗೆ ಬರುತ್ತವೆ.
ಮೋದಿಗೆ ತಾನು ಮುಂದಿನ ಚುನಾವಣೆಗಾಗಿ ಕೆಲಸ ಮಾಡಬೇಕು, ಇನ್ನೆರಡು ಬಾರಿ ಪ್ರಧಾನಿಯಾಗಿರಬೇಕು ಎಂಬ ಗುರಿಯಿಲ್ಲ. ಇದೇ ಮೋದಿಗೂ ಬೇರೆ ರಾಜಕಾರಣಿಗಳಿಗೂ ಇರುವ ವ್ಯತ್ಯಾಸ. ಹಾಗಾದರೆ ಮೋದಿ ವಿಭಿನ್ನವಾಗಿ ಮಾಡಿದ್ದೇನು? ಇದನ್ನು ಅರ್ಥ ಮಾಡಿಕೊಳ್ಳಬೇಕಾದರೆ ಕೆಲವು ಉದಾಹರಣೆಗಳನ್ನು ನಾವು ನೋಡಬೇಕು. ನಮ್ಮೆಲ್ಲರಿಗೂ ತಿಳಿದಿರುವಂತೆ ಕನ್ನಡ ಚಲನಚಿತ್ರ ಮುಂಗಾರುಮಳೆ ಅತ್ಯಂತ ವೈಭವಯುತ ಯಶಸ್ಸನ್ನು ಗಳಿಸಿತು. ಆದರೆ ಆ ಚಿತ್ರವನ್ನು ಸಮಾಧಾನ ಚಿತ್ತದಿಂದ ಕುಳಿತು ವಿಮರ್ಷಿಸಿ ನೋಡಿ ಆ ಚಿತ್ರದಲ್ಲಿ ಹೊಸಬರು ಮತ್ತು ಲವಲವಿಕೆ ಎಂಬ ಎರಡು ಅಂಶಗಳನ್ನು ಬಿಟ್ಟರೆ ಬೇರೆನೂ ಇಲ್ಲ. ಆದರೂ ಆ ಪರಿಯ ಯಶಸ್ಸು ಗಳಿಸಿದ್ದು ಹೇಗೆ? ಅಲ್ವಾ, ಕಾರಣ ಸ್ವಲ್ಪ ಹಿಂದಕ್ಕೆ ಹೋಗಿ ನೋಡಬೇಕು. ಮುಂಗಾರು ಮಳೆ ಚಿತ್ರ ಬರುವ ಮುನ್ನ ಮೂರ್ನಾಲ್ಕು ವರ್ಷದ ಹಿಂದಿನ ಕನ್ನಡ ಚಿತ್ರಗಳನ್ನು ನೆನಪಿಸಿಕೊಳ್ಳಿ. ಮಚ್ಚು ಹಿಡಿದ ರೌಡಿಯೊಬ್ಬ ಕೊಚ್ಚಿ ಕೆಡವಿ ಹುಡುಗಿಯ ಹಿಂದೆ ಮಾತ್ರ ಕತ್ತಿಗೆ ಪಟ್ಟಿ ಕಟ್ಟಿಸಿಕೊಂಡ ನಾಯಿಯಂತೆ ತಿರುಗುವ ಅಥವ ವಿಚಿತ್ರವಾಗಿ ಆಡಿ ತನ್ನ ಬುದ್ದಿವಂತಿಕೆಯಿಂದ ಜನರನ್ನು ಮೂರ್ಖರೆಂದು ಸಾಬೀತು ಪಡಿಸುವ ಉಪ್ಪಿ ಚಿತ್ರಗಳ ಸಾಲುಸಾಲು ಪ್ರೇಕ್ಷಕನ ತಲೆ ಚಿಟ್ಟು ಹಿಡಿಸಿತ್ತು. ಇದೊಂತರ ಆರೇಳು ವರ್ಷದ ಬರಗಾಲದ ನಂತರ ಬರುವ ವರ್ಷಧಾರೆಯಂತೆ. ಹಾಗೆ ಬಂದ ಮಳೆಗೆ ಬಿರುಕು ಬಿಟ್ಟ ಕೆರೆಯ ಭೂಮಿ ನೀರು ಕುಡಿಯುವ ಪರಿಯಂತೆ, ಬಾಯಾರಿ ಬಳಲಿದವನಿಗೆ ಹನಿ ನೀರು ಸಿಕ್ಕಂತೆ. ಸುಷುಪ್ತಾವಸ್ತೆಯಲ್ಲಿದ್ದ ಕಪ್ಪೆಗಳು ವಟರುಗುಟ್ಟುವ ಸಂಭ್ರಮದಂತೆ. ಇದೊಂತರಾ ಕಾದ ಕಾವಲಿಯ ಮೇಲೆ ಬಿದ್ದ ನೀರ ಹನಿಯಂತೆ. ಹಾಗಾದ್ರೆ ಆ ಚಿತ್ರ ತಂಡದ ಶ್ರಮವಿಲ್ವಾ? ಖಂಡಿತ ಇದೆ.. ಅದು ಇಂತಹ ಸಾಧಾರಣ ಏಕತಾನತೆಯ ರೂಟಿನ್ ಇಂದ ಬೇರೆಯಾಗಿ ಹೊಸತನ ಕೊಟ್ಟಿದ್ದು. ಅದೇ ಆ ಚಿತ್ರದ ಯಶ್ಶಸಿನ ಸೂತ್ರ ಅದನ್ನು ಸ್ವತಃ ಭಟ್ಟರೆ ವಿಜಯಕರ್ನಾಟಕದಲ್ಲಿ ಬರೆದಿದ್ದರು.
ಮೋದಿಯ ವಿಭಿನ್ನತೆಯೂ ಅಂತದ್ದೇ, ಕಳೆದ ೭೦ ವರ್ಷಗಳಲ್ಲಿ ಕೇವಲ ಅದನ್ನೊಂದು ಸರಕಾರಿ ಹುದ್ದೆಯಂತೆ ನಿರ್ವಹಿಸಿಕೊಂಡು ಬಂದಿದ್ದು ಬಿಟ್ಟರೆ ಪ್ರಧಾನಿಗಳು ಈ ದೇಶಕ್ಕೆ ಹೊಸತನ್ನು ಕೊಡಲಿಲ್ಲ. ದೇಶದ ಜನಗಳಿಗೆ ಜಡ್ಡುಗಟ್ಟಿದ ಸರಕಾರಿ ಯಂತ್ರಕ್ಕೆ ಬಿಸಿ ಮುಟ್ಟಿಸಿ ಆಡಳಿತವನ್ನು ಜನಪರವಾಗಿಸಲಿಲ್ಲ. ಅದರಲ್ಲೂ ೨೦೦೪ ರಿಂದ ೧೪ ರವರೆಗೆ ನಡೆದ ಹತ್ತು ವರ್ಷಗಳ ಆಡಳಿತದ ದುರ್ಗತಿ, ಲೂಟಿಗೆ ಹೋಲಿಸಿದರೆ ಮೋದಿ ಮಹಾನ್ ನಾಯಕನಂತೆ ಕಾಣಿಸುತ್ತಾರೆ.
ಅವರ ಸಾಧನೆಯನ್ನು ಅರ್ಥ ಮಾಡಿಕೊಳ್ಳಲು ನಮ್ಮ ರಾಜ್ಯದ ಆಡಳಿತವನ್ನು ನೋಡಬೇಕು. ನಮ್ಮ ಮಾನ್ಯ ಮುಖ್ಯಮಂತ್ರಿಗಳನ್ನು ಗಮನಿಸಿ.. ಅವರಿಗಿರುವ ಏಕೈಕ ಗುರಿ ಮುಂದಿನ ಚುನಾವಣೆಯ ಗೆಲುವು. ಅದಕ್ಕೇನು ಬೇಕೋ ಅದನ್ನು ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ದಿನವೇ ಘೋಷಿಸಿದ ಅನ್ನಭಾಗ್ಯ ಯೋಜನೆಯ ಮೂಲಕ ಮಾಡಿದರು. ಅಂದಿನಿಂದ ಇಂದಿನವರೆಗು ಅವರು ರಾಜ್ಯದ ಸಮಗ್ರ ಹಿತದೃಷ್ಟಿಯಿಂದ ಒಂದೇ ಒಂದು ಕಾರ್ಯಕ್ರಮ ಘೋಷಿಸಲಿಲ್ಲ. ಆಡಳಿತವನ್ನು ಸರಿದಾರಿಗೆ ತರುವುದಿರಲಿ ಹಳ್ಳ ಹಿಡಿಸುವುದರಲ್ಲಿ ಸಿದ್ದ ಹಸ್ತರಾಗಿ ಬಿಟ್ಟರು, ಭ್ರಷ್ಟರನ್ನು ಬೆಳೆಯಲು ಬೆಳೆಸಲು, ಭ್ರಷ್ಟರಿಗೆ ಸ್ವಲ್ಪವಾದರೂ ಬಿಸಿ ಮುಟ್ಟಿಸುತ್ತಿದ್ದ ಹೆದರಿಕೆ ಹುಟ್ಟಿಸುತ್ತಿದ್ದ ಲೋಕಾಯುಕ್ತದಂತಹ ಸಂಸ್ಥೆಯನ್ನು ಮಣ್ಣುಗೂಡಿಸಿ ಎಸಿಬಿಯಂತಹ ತಮ್ಮ ಆಡಿಯಾಳಾಗಿರುವ ಸಂಸ್ಥೆಯನ್ನು ಸ್ಥಾಪಿಸಿ ತಮ್ಮ ಸ್ವಾರ್ಥಕ್ಕೆ ಅನುಕೂಲಕ್ಕೆ ತಮಗಾಗದವರನ್ನು ಹಣಿಯಲು ಬಳಸಿಕೊಂಡು ಬಿಟ್ಟರು. ಆಡಳಿತವನ್ನು ಜನಸ್ನೇಹಿಯಾಗಿಸುವ ಯಾವ ಪ್ರಯತ್ನವನ್ನೂ ಅವರು ಮಾಡಲಿಲ್ಲ. ಅವರ ತಲೆಯೊಳಗೆ ಯಾವಾಗಲೂ ರಾಜಕೀಯ ರಿಂಗಣವೇ. ಪ್ರತಿಕ್ಷಣ ಪ್ರತಿನಿಮಿಷ ರಾಜಕೀಯ ಮಾಡಿದರು, ರಾಜಕೀಯವಾಗಿ ಯೋಚಿಸಿದರು, ರಾಜಕೀಯವಾಗಿ ಯೋಜನೆ ತಂದರೆ ಹೊರತು ರಾಜ್ಯದ ಜನ ಹಿತ ದೃಷ್ಟಿಯಿಂದ ಯೋಜನೆ ತಯಾರಿಸಲು ಅವರಿಗೆ ಸಾಧ್ಯವಾಗಲೇ ಇಲ್ಲ. ಏಕೆಂದರೆ ಅವರು ಆ ನಿಟ್ಟಿನಲ್ಲಿ ಯೋಚಿಸಿಯೇ ಇಲ್ಲ.. ಅವರಿಗೆ ಅಂತಹ ಪರಂಪರೆಯೆ ಇಲ್ಲ. ಅವರು ದೇವರಾಜ್ ಅರಸ್ ಅವರನ್ನು ಮೀರಿದ ಬಡವರ ಬಂಧು ಎನಿಸಿಕೊಳ್ಳುವ ತೆವಲಿಗೆ ಬಿದ್ದರಷ್ಟೆ ಹೊರತು ಅದಕ್ಕಿಂತ ಮೇಲಿನ ಸ್ತರದಲ್ಲಿ ಯೋಚಿಸಲು ಅವರಿಗೆ ಸಾಧ್ಯವಾಗಲೇ ಇಲ್ಲ. ಸಕಾಲದಂತಹ ಆಡಳಿತ ವರ್ಗದವರ ಕತ್ತಿನಪಟ್ಟಿ ಹಿಡಿದು ಪ್ರಶ್ನಿಸುವಂತ ಜನಪರ ಜನಸ್ನೇಹಿ ಯೋಜನೆಯನ್ನು ಹಳ್ಳ ಹಿಡಿಸಿಬಿಟ್ಟರು.
ಇತ್ತೀಚಿನ ವರದಿಗಳ ಪ್ರಕಾರ ಸಕಾಲ ಶಾಶ್ವತವಾಗಿ ನಿಂತುಹೋಗಿದೆ. ಇವರ ಕನ್ನಡ ಪ್ರೇಮ ಕೂಡ ರಾಜಕೀಯಕ್ಕೆ ಬಳಕೆಯಾಗಿದ್ದು ಬಿಟ್ಟರೆ ಅದರಿಂದ ಭಾಷೆಗಾಗಲಿ ಭಾಷಿಕರಿಗಾಗಲಿ ಯಾವುದೆ ಪ್ರಯೋಜನವಾಗಲಿಲ್ಲ. ಕನ್ನಡವನ್ನು ಆಡಳಿತ ಭಾಷೆಯಾಗಿ ಮಾಡಲು ಕೇಳಿ ನೋಡಿ ಅವರಿಗೆ ಅದು ಬೇಕಿಲ್ಲ. ಭಾಷಾ ಪ್ರೇಮದಿಂದ ಹಿಡಿದು ಬೇರೆ ಎಲ್ಲವೂ ಚುನಾವಣೆಗಾಗಿಯೇ. ಈ ನಿಟ್ಟಿನಲ್ಲಿ ಮೋದಿಯನ್ನು ನಿಲ್ಲಿಸಿ ನೋಡಿ ಅವರು ಏಕೆ ವಿಶೇಷ ಎಂದು ಅರ್ಥವಾಗುತ್ತದೆ. ಜನರ ಬಳಿಗೆ ಆಡಳಿತ ಜನಹಿತಕ್ಕಾಗಿ ದೇಶದ ಒಳಿತಿಗಾಗಿ ಆಡಳಿತ ಎಂಬ ಗುರಿಯಷ್ಟೆ ಅವರದ್ದು. ಮುಂದಿನ ಚುನಾವಣೆಯನ್ನು ಗೆಲ್ಲಲಿಕ್ಕಲ್ಲ. ರೈಲಿನಲ್ಲಿ ನೀರು ಕಳಿಸುವುದು ಮೂರ್ಖತನ ಎಂದು ಕೆಲವರು ಅಣಕಿಸಿದ್ದಿದೆ, ಆದರೆ ಕುಡಿಯಲು ನೀರಿಗೂ ತತ್ವಾರವಿದ್ದಾಗ ಹಾಹಾಕಾರವಿದ್ದಾಗ ಸಮಸ್ಯೆಗೆ ಮಾಮೂಲಿನ ದಾರಿಗಳು ತಕ್ಷಣದ ಪರಿಹಾರ ದೊರಕಿಸದಾದಾಗ ವಿಭಿನ್ನವಾಗಿ ಯೋಚಿಸುವುದು ಆ ಸಮಯಕ್ಕೆ ಅಗತ್ಯವಾಗಿರುತ್ತದೆ. ಅಲ್ಲಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಿಕೆಯಷ್ಟೆ ಮುಖ್ಯವಾಗಿರುತ್ತದೆ. ಆದರೆ ವಿಭಿನ್ನತೆಯೆ ಮಾಮೂಲಿಯಾಗಿ ಬಿಡಬಾರದು.
ಈಗ ಯೋಚಿಸಿ ಮುಂದೆ ಬರುವ ನಮ್ಮ ಮುಖ್ಯಮಂತ್ರಿ ವಿಭಿನ್ನ ಆದರೆ ಹೇಗಿದ್ದರೆ ಒಳಿತು ಎಂಬುದು ಹೊಳೆಯುತ್ತದೆ.
ಕಳೆದ ಅವಧಿಯ ಬಿಜೆಪಿ ಸರಕಾರಕ್ಕೆ ಒಂದು ಉತ್ತಮ ಆಡಳಿತ ಕೊಟ್ಟು ಗುಜರಾತ್ ಮಧ್ಯಪ್ರದೇಶದಂತೆ ಹಲವು ವರ್ಷಗಳವರೆಗೆ ಗೆಲ್ಲುವ ಬುನಾದಿ ಹಾಕಬಹುದಾದ ಎಲ್ಲಾ ಅವಕಾಶವಿತ್ತು. ಈ ಬಾರಿಯಂತೂ ಜನಾಕ್ರೋಶ ಸ್ಪಷ್ಟವಾಗಿಯೇ ಇದೆ. ಕಳೆದೆಲ್ಲಾ ಅವಧಿಗಳಿಗಿಂತ ಉತ್ತಮ ಹೇರಳ ಅವಕಾಶವಿದೆ, ಅಷ್ಟರ ಮಟ್ಟಿಗೆ ವ್ಯವಸ್ಥೆ ಹದಗೆಟ್ಟು ಎಕ್ಕುಟ್ಟಿ ಹೋಗಿದೆ. ಆದರೆ ಅದನ್ನು ಸರಿ ಪಡಿಸುವ ಅಂತಹ ದೂರದೃಷ್ಟಿ ಮತ್ತು ಧೀಶಕ್ತಿ ಇರುವ ನಾಯಕ ನಮಗೆ ಸಿಗಲೇ ಇಲ್ಲ. ಈಗಲೂ ಕಾಣಿಸುತ್ತಿಲ್ಲ ಎನ್ನುವುದು ವಿಷಾದನೀಯ. ಕಳೆದ ಅವಧಿಯ ೧೦ ವರ್ಷಗಳು ಮತ್ತು ಅದರ ಹಿಂದಿನ ಖಾನ್ಗ್ರೆಸ್ ದುರಾಡಳಿತಗಳು ಮೋದಿಯನ್ನು ವಿಭಿನ್ನ ಸ್ಥಾನ ಮತ್ತು ಎತ್ತರದಲ್ಲಿ ನಿಲ್ಲಿಸಿದೆಯೇ ವಿನಃ ಸ್ವತಃ ಅವರು ತಮ್ಮ ಸಾಮರ್ಥ್ಯವನ್ನು ಇನ್ನೂ ತೋರಿಸಿಯೇ ಇಲ್ಲ ಎಂಬುದು ನನ್ನ ಅನಿಸಿಕೆ.