ವಿಷಯದ ವಿವರಗಳಿಗೆ ದಾಟಿರಿ

ಸೆಪ್ಟೆಂಬರ್ 21, 2017

ಸದ್ಗುರು ಬ್ರಹ್ಮಾನಂದರ ೯೯ನೇ ವರ್ಷದ ಆರಾಧನಾ ಪುಣ್ಯಸ್ಮರಣೆ

‍ನಿಲುಮೆ ಮೂಲಕ

– ಚೈತನ್ಯ ಮಜಲುಕೋಡಿ

ಸದ್ಗುರು ಬ್ರಹ್ಮಾನಂದರ ೯೯ನೇ ವರ್ಷದ ಆರಾಧನಾ ಪುಣ್ಯಸ್ಮರಣೆಯ ಪ್ರಯುಕ್ತ. ಸದ್ಗುರುವಿನ ಉಪದೇಶ ಆಶೀರ್ವಾದಗಳು ಸದಾ ನಮ್ಮಲ್ಲಿ ಜಾಗೃತವಾಗಿರಲೆಂದು ಆಶಿಸುತ್ತಾ.

ಕೆಲಕಾಲದ ಹಿಂದೆ ಶ್ರೀ ಲೋಕಾಭಿರಾಮ ಮಾಸಪತ್ರಿಕೆಗೆ ಬರೆದ ಸಣ್ಣ ಲೇಖನ.

ಶ್ರೀ ಬ್ರಹ್ಮಾನಂದ ಮಹಾರಾಜರು ಹೇಳಿದ ಮೋಕ್ಷ ಪ್ರಾಪ್ತಿಯ ಗುಟ್ಟು ಲೇಖನದ ನಂತರ ಕೊಟ್ಟಿದೆ.

ಮೋಕ್ಷಪ್ರಾಪ್ತಿಯ ಗುಟ್ಟು ಒಂದು ಜಿಜ್ಞಾಸೆ:

ಮುಖ್ಯವಾಗಿ ಪರಮಾರ್ಥದ ದೃಷ್ಟಿಯಿಂದ ಜೀವನದ ಗುರಿ ಏನು? ನಮ್ಮ ಭಾರತೀಯ ತಿಳುವಳಿಕೆಯ ಪ್ರಕಾರ ಮೋಕ್ಷವೇ ಜೀವನದ ಧ್ಯೇಯ. ಇಡೀ ಭಾರತ ಸಂಸ್ಕೃತಿಯಷ್ಟೇ ಏಕೆ, ಪ್ರಪಂಚದ ಸಮಸ್ತ ಜೀವಕೋಟಿಯೂ ತನಗರಿವಿಲ್ಲದಂತೆಯೇ ಮೋಕ್ಷವೆಂಬ ಕಟ್ಟ ಕಡೆಯ ಗುರಿಯೆಡೆಗೆ ಪ್ರತೀ ಕಾರ್ಯದಲ್ಲೂ ಉತ್ತಮವಾಗಲು ಹವಣಿಸಿ ಸಾಗುತ್ತಿದೆ. ಹಾಗಾಗಿಯೇ ವಿವೇಚನಾಶಕ್ತಿಯುಳ್ಳ ಮನುಜನು ತನ್ನ ಮತ್ತು ಸಕಲ ಜೀವರಾಶಿಗಳ ಏಳಿಗೆಗಾಗಿ ಸಿದ್ಧಾಂತ, ದರ್ಶನ, ತತ್ವವಿಚಾರಾದಿಗಳನ್ನು ಕಂಡುಕೊಂಡ. ದೇವರೂ, ಅವತಾರಗಳೂ, ಲೋಕಾನುಗ್ರಹ-ನಿಗ್ರಹ ಮುಂತಾದ ದೈವಿಕವಾದ ಸಂಗತಿಗಳು ಋಷಿಪ್ರಜ್ಞೆಯ ದ್ರಷ್ಟತೆಯಿಂದ ಲೋಕಕ್ಕೆ ಕಾಣಿಸಿಕೊಂಡಿತು. ಮೋಕ್ಷವೇ ಪರಮಧ್ಯೇಯವಾಗುಳ್ಳ ಗುರೂಪದೇಶದಲ್ಲಿ ರಾಮನಾಮ ಸ್ಮರಣೆಯೇ ಏಕೈಕ ಉಪಾಯ. ನಿರಂತರವಾದ ನಿರ್ವ್ಯಾಜ್ಯ ಭಗವತ್ಪ್ರೇಮವೇ ಕೃತಾರ್ಥತೆಗೆ ದಾರಿ. ಈ ತತ್ವವು ಶಂಕರರ ಅದ್ವೈತದಲ್ಲಿ ಹೇಳಿದ್ದರೂ ಜೀವನ್ಮುಕ್ತತೆಗೆ ಕಾರಣವಾದ ಬ್ರಹ್ಮ ಸಾಕ್ಷಾತ್ಕಾರವು ಅಥವಾ ಬ್ರಹ್ಮದಲ್ಲಿಯೇ ಸೇರಿಹೋಗುವ, ತಾನೇ ಬ್ರಹ್ಮವೆಂದರಿಯುವ ವಾಕ್ಯಗಳಲ್ಲಿ ನಿರ್ವಿಶೇಷವಾದ ನಿರ್ಗುಣ ಬ್ರಹ್ಮವನ್ನು ಪ್ರತಿಪಾದಿಸಿದೆ.

ಬ್ರಹ್ಮದಲ್ಲಿ ಅಪರಬ್ರಹ್ಮ, ಪರಬ್ರಹ್ಮ ಎಂಬೆರಡು ವಿಧಗಳು. ಅಪರಬ್ರಹ್ಮವು ಸಗುಣವಾದರೆ ಪರಬ್ರಹ್ಮವು ನಿರ್ಗುಣ. ಸಗುಣೋಪಾಸನೆಯು ಅಪರಬ್ರಹ್ಮಕ್ಕೆ ಸೇರಿದ್ದರೂ ಉಪಾಸನೆಯ ಕಾರ್ಯಫಲವು ಪರಬ್ರಹ್ಮವನ್ನು ತೋರಿಸುವತ್ತ ಸಹಕಾರಿಯಾಗಿದೆ. ಉಪಾಸ್ಯ ಉಪಾಸಕ ಎಂಬ ದ್ವೈತ ಭಾವವಿಲ್ಲದೆ ಉಪಾಸನೆ ಆಗುವಂತಿಲ್ಲವಾದರೂ ಉಪಾಸನಾ ವಿಧಾನವು ಅರಿಯಬೇಕಾದ ಸಂಗತಿಯಾದ ಬ್ರಹ್ಮಕ್ಕೆ ತೀರ ಹತ್ತಿರದಲ್ಲಿರುವುದರಿಂದ ಅದನ್ನೂ ಜ್ಞಾನಕಾಂಡದಲ್ಲಿಯೇ ಹೇಳಿರುತ್ತದೆ. ಉಪಾಸನೆಯ ಕುರಿತಾದ ಶಾಂಕರ ವೇದಾಂತದ ನಿಲುವು ಹೀಗಿದೆ: “ಉಪಾಸನೆಗಳಲ್ಲಿ ಕರ್ಮಾಂಗವಾದ ಉಪಾಸನೆಗಳು, ಪ್ರತೀಕೋಪಾಸನೆಗಳು, ಪ್ರಾಣಾದ್ಯುಪಾಸನೆಗಳು, ಸಗುಣಬ್ರಹ್ಮೋಪಾಸನೆಗಳು- ಮುಂತಾಗಿ ಹಲವು ವಿಧಗಳುಂಟು. ಇವುಗಳೆಲ್ಲ ಶಾಸ್ತ್ರೋಕ್ತವಾದ ಯಾವುದಾದರೊಂದು ವಸ್ತುವನ್ನು ಶಾಸ್ತ್ರದಲ್ಲಿ ಹೇಳಿರುವ ರೀತಿಯಲ್ಲಿ ಒಂದೇ ಚಿತ್ತವೃತ್ತಿಯನ್ನು ಸತತವಾಗಿ ಭಾವಿಸುತ್ತಿರುವ ರೂಪದವೇ ಆಗಿರುತ್ತವೆ. ಅವು ಅದ್ವೈತಜ್ಞಾನದಂತೆ ಅಧ್ಯಾರೋಪಿತ ಕ್ರಿಯಾಕಾರಕಫಲಭೇದವನ್ನು ತೊಲಗಿಸುವುದಿಲ್ಲ. ಆದರೂ ಚಿತ್ತೈಕಾಗ್ರ್ಯದ ಮೂಲಕವಾಗಿ ಅದ್ವೈತಜ್ಞಾನಕ್ಕೆ ಉಪಕಾರಕವಾಗಿರುವುದರಿಂದ ಇವುಗಳನ್ನು ಜ್ಞಾನಪ್ರಕರಣದಲ್ಲಿಯೇ ಪ್ರಸ್ತಾಪಿಸಿರುತ್ತದೆ. ಅದರಲ್ಲಿಯೂ ಕರ್ಮಾಭ್ಯಾಸದಿಂದ ವಾಸಿತವಾಗಿರುವ ಚಿತ್ತಕ್ಕೆ ತಟ್ಟನೆ ಬರಿಯ ಉಪಾಸನೆಯಲ್ಲಿ ಪ್ರವೇಶವಾಗಲಾರದೆಂಬ ಕಾರಣದಿಂದ ಮೊದಲು ಕರ್ಮಾಂಗೋಪಾಸನೆಯನ್ನು ಹೇಳಿದೆ; ಬಳಿಕ ಸಾಲಂಬನವಾದ ಪ್ರತೀಕಾದ್ಯುಪಾಸನೆಗಳನ್ನು ಹೇಳಿದೆ; ಆಮೇಲೆ ಸಗುಣಬ್ರಹ್ಮೋಪಾಸನೆಗಳನ್ನು ತಿಳಿಸಿದೆ. ಆಮೇಲೆಯೇ ಜ್ಞಾನವನ್ನು ಹೇಳಿರುತ್ತದೆ.

“ಕರ್ಮಕಾಂಡ, ಜ್ಞಾನಕಾಂಡಗಳ ನಡುವಿನ ಉಪಾಸನಾ ಕಾಂಡವು ನಮ್ಮ ಗುರುಗಳ ಹಾದಿಯಾಗಿದೆ. ವಿವೇಕಾನಂದರ ವೇದಾಂತ ಉಪನ್ಯಾಸದ ಸಾಲುಗಳನ್ನು ನೋಡಿ: “ಈ ಮೂರು ದರ್ಶನಗಳು (ದ್ವೈತ-ವಿಶಿಷ್ಟಾದ್ವೈತ-ಅದ್ವೈತ) ಬಹು ಪುರಾತನ ಕಾಲದಿಂದಲೂ ಭರತಖಂಡದಲ್ಲಿವೆ. ಶಂಕರಾಚಾರ್ಯರು ಅದ್ವೈತ ವೇದಾಂತವನ್ನು ಹೊಸತಾಗಿ ಕಂಡುಹಿಡಿದರೆಂದು ತಿಳಿಯಬೇಡಿ. ಅವರು ಹುಟ್ಟುವುದಕ್ಕೆ ಬಹಳ ಮೊದಲೇ ಅದು ರೂಢಿಯಲ್ಲಿತ್ತು. ಶಂಕರಾಚಾರ್ಯರು ಅದರ ಕಟ್ಟಕಡೆಯ ಪ್ರತಿನಿಧಿ ಮಾತ್ರ. ಅದರಂತೆಯೇ ರಾಮಾನುಜರ ದರ್ಶನವೂ ಅವರು ಲೋಕಕ್ಕೆ ಬರುವ ಶತಮಾನಗಳ ಮೊದಲೇ ಇತ್ತು. ಈ ವಿ‍ಷಯವು ಅವರು ಬರೆದಿರುವ ವ್ಯಾಖ್ಯಾನಗಳಿಂದಲೇ ತಿಳಿದುಬರುತ್ತದೆ. ಹಾಗೆಯೇ ಇತರ ಎಲ್ಲ ದ್ವೈತ ಸಿದ್ದಾಂತಗಳು ಅವುಗಳು ದರ್ಶನಬದ್ಧವಾಗುವ ಮುನ್ನವೇ ರೂಢಿಯಲ್ಲಿದ್ದವು, ಮತ್ತು ಈ ಎಲ್ಲ ಸಿದ್ದಾಂತಗಳು ಒಂದಕ್ಕೊಂದು ವಿರೋಧಿಗಳಲ್ಲವೆಂದು ನನ್ನ ಅಲ್ಪಮತಿಗೆ ತಿಳಿದುಬಂದಿದೆ. ಹೇಗೆ ‍ಷಡ್ದರ್ಶನಗಳು ಒಂದೇ ಮಹಾತತ್ವದ ಕ್ರಮ ವಿಕಾಸಗಳಂತಿವೆಯೋ, ಮೃದುಸ್ವರದಲ್ಲಿ ಪ್ರಾರಂಭವಾದ ಸಂಗೀತವು ಅದ್ವೈತ ಮಹಾಗಾನದಲ್ಲಿ ಹೇಗೆ ಕೊನೆಗೊಂಡಿದೆಯೋ, ಹಾಗೆಯೇ ಮಾನವನ ಮನಸ್ಸು ದ್ವೈತ ವಿಶಿಷ್ಟಾದ್ವೈತಗಳೆಂಬ ಸೋಪಾನಗಳನ್ನೇರಿ, ಸರ್ವೋನ್ನತ ದರ್ಶನವಾದ ಅದ್ವೈತ ಶಿಖರವನ್ನು ಸೇರಿದೆ. ಆದ್ದರಿಂದ ಈ ಮೂರು ಸಿದ್ಧಾಂತಗಳೂ ಪರಸ್ಪರ ವಿರೋಧಿಗಳಲ್ಲ. ಅವುಗಳು ಪರಸ್ಪರ ವಿರೋಧಿಗಳೆಂದು ಅನೇಕರು ತಪ್ಪಾಗಿ ತಿಳಿದುಕೊಂಡಿದ್ದಾರೆ.” ಆದ್ದರಿಂದ ದ್ವೈತ-ವಿಶಿಷ್ಟಾದ್ವೈತ-ಅದ್ವೈತವೆಂಬ ವಿಚಾರಗಳು ಪರಸ್ಪರ ಪೂರಕವೆಂದೇ ಭಾವಿಸಬೇಕು.

ಶ್ರೀ ರಾಮಕೃಷ್ಣರ ಜೀವನ ಚರಿತ್ರೆಯಲ್ಲಿ ಕಂಡುಬರುವ ತೋತಾಪುರಿ ಎಂಬ ಸಾಧುವು ರಾಮಕೃಷ್ಣರ ಸಾಧನೆಗೆ ನೆರವಾಗಲು ಬರುವ ಬಂದಾಗ ಜರುಗುವ ಘಟನೆ ಬಹಳ ಕುತೂಹಲಕಾರಿಯಾಗಿದೆ. ಅವರು ಸಗುಣಬ್ರಹ್ಮೋಸನೆಯ ಉತ್ತುಂಗವನ್ನು ತಲುಪಿದ್ದ ಸಮಯದಲ್ಲಿ ತೋತಾಪುರಿಯ ಭೇಟಿಯಾಯಿತು. ಆಧ್ಯಾತ್ಮದ ಅತ್ಯಂತಿಕ ಅನುಭವವನ್ನು ಪಡೆಯಲು ಪರಮಹಂಸರು ತಮ್ಮ ಆರಾಧ್ಯದೈವವಾದ ಕಾಳಿಯನ್ನು ಬಿಟ್ಟು ಮುಂದೆ ಹೋಗಲೇ ಬೇಕಾಯಿತು. ನಂತರವೂ ಮಾತೆಯಲ್ಲಿ ಭಕ್ತಿಯನ್ನು ಹಾಗೇ ಉಳಿಸಿಕೊಂಡರು, ತೋತಾಪುರಿಗೂ ಕಾಳಿಯ ಸಾನ್ನಿಧ್ಯದ ರುಚಿ ಹತ್ತಿಸಿದರು…!! ಹಾಗಾಗಿ ನಮಗಿಲ್ಲಿ ಯಾವುದು ಹೆಚ್ಚು, ಇದನ್ನು ಯಾವ ವರ್ಗಕ್ಕೆ ಸೇರಿಸಬೇಕು ಎಂಬುದಕ್ಕಿಂತ ಅದರಿಂದ ಜೀವಕ್ಕೇನು ಪ್ರಶಾಂತಿಯಿದೆ, ಮಾನೋನ್ನತಿಗೆ ಆತ್ಮೋನ್ನತಿಗೆ ಏನು ಮಾರ್ಗವಿದೆ ಎಂದು ಅರಿಯುವುದೇ ಫಲಪ್ರದ ಹಾದಿ. ಶ್ರೀರಾಮಾ ಅಜ್ಞಾನಧ್ವಾಂತ ನಿವಾರಣಾ, ನೀನೇ ಗತಿ ಎಂಬಲ್ಲಿ ದ್ವೈತ ಭಾವವಿದ್ದರೆ, ರಾಮನೇ ಪರಬ್ರಹ್ಮ ಪರಮಾತ್ಮನೆಂಬಲ್ಲಿ ವಿಶಿಷ್ಟಾದ್ವೈತ ಭಾವವಿದೆ. ಪರಮಾತ್ಮನಲ್ಲಿ ವೃತ್ತಿಲಯವಾದರೆ ಜೀವನ್ಮುಕ್ತನಾಗುತ್ತಾನೆ ಎಂಬಲ್ಲಿ ಅದ್ವೈತದ ಸದ್ಯೋಮುಕ್ತಿಯ ವಿಚಾರವಿದೆ. ಸದ್ಗುರು ಬ್ರಹ್ಮಾನಂದರ ಮೋಕ್ಷಪ್ರಾಪ್ತಿಯ ಗುಟ್ಟು ನಿಜವಾಗಿಯೂ ಪರಮಾತ್ಮನೆಡೆಗೆ ಚಿತ್ತವೃತ್ತಿಯು ಏಕಾಗ್ರವಾಗುವಂತೆ ಮಾಡುವ ಸರಳ ಔಷಧವಾಗಿದೆ. ಭಕ್ತಿ-ವೇದಾಂತ ಸಮುದ್ರದ ನವನೀತವಾಗಿದೆ.

ಶ್ರೀ ಬ್ರಹ್ಮಾನಂದ ಮಹಾರಾಜರು ಹೇಳಿದ ಮೋಕ್ಷ ಪ್ರಾಪ್ತಿಯ ಗುಟ್ಟು.

ಪರಮಪ್ರಾಪ್ತಿ ಸದ್ಗತಿ ಆಗಬೇಕೆಂದು ಪೂರ್ಣ ಇಚ್ಛಾ – ಖರೆ ಇರಾದಾ ಇದ್ದವರು ಸದಾ ಸರ್ವದಾ ಅಖಂಡ ರಾಮನಾಮ ಸ್ಮರಣೆ ಮಾಡಬೇಕು. ಅಹೇತುಕ ಅವ್ಯಭಿಚಾರಿಣಿ ಶ್ರೀ ರಾಮಭಕ್ತಿ ಮಾಡಿ ಕೃತಾರ್ಥರಾಗಬೇಕು. ಈ ಘೋರ ಕಲಿಯುಗದಲ್ಲಿ ಪಾರಾಗಬೇಕಾದರೆ ಭಗವದ್ಭಕ್ತಿ, ರಾಮನಾಮ ಸ್ಮರಣದ ಹೊರತು ಎರಡನೇ ಉಪಾಯವಾವುದೂ ಇಲ್ಲ. ಆಯುಷ್ಯದ್ದು ಭರವಸೆ ಇಲ್ಲ. ಆದಷ್ಟು ತೀವ್ರವಾಗಿ ಕೃತಾರ್ಥವಾಗಲಿಕ್ಕೆ ಪ್ರಯತ್ನ ಮಾಡಬೇಕು. ಪರಮಾರ್ಥಕ್ಕೆ ಮೊದಲ ಸಾಧನಾ ಸತ್ಸಂಗತಿ. ಸಾಧು ಸಂಗತಿಯಿಂದ ಎಷ್ಟೋ ಜನರು ಪಾರಾಗಿ ಹೋದರು. ಸಾಧು ಸಂಗತಿಯಿಂದ ಕ್ಷಮಾ, ಭೂತದಯಾ, ಶಾಂತಿ, ವೈರಾಗ್ಯ, ಸಮಾಧಾನ, ವಿವೇಕ, ಪ್ರವೃತ್ತಿ ಮಾರ್ಗದ ಗಮನ ಇತ್ಯಾದಿ ಅನೇಕ ಸನ್ಮಾರ್ಗಗಳು ಪ್ರಯತ್ನ ಮಾಡದಲೇ ದೊರೆಯುತ್ತವೆ. ಕಾಮ ಕ್ರೋಧಾದಿ ಷಡ್ವೈರಿಗಳೂ, ಪಾರಮಾರ್ಥಕ್ಕೆ ವಿಘ್ನ ಮಾಡತಕ್ಕಂಥ ದಂಭ ಅಹಂಕಾರಾದಿಗಳೂ ತಮ್ಮಷ್ಟಕ್ಕೆ ತಾವೇ ಲಯಹೊಂದುತ್ತವೆ. ಸಾಧು ಸಂಗತಿ ಮಹಿಮಾ ಅಗಾಧವದೆ. ಸಾಧುಗಳಲ್ಲಿ ಸದೋದಿತ ಭಗವಚ್ಚರ್ಚಾ, ಭಗವದ್ಗುಣಾನುವರ್ಣನ, ರಾಮನಾಮಸ್ಮರಣ, ಸದೋಪದೇಶ, ಅಹೋರಾತ್ರಿ ನಡೆದಿರುತ್ತದೆ. ಅಲ್ಲಿ ವಾಸಮಾಡಿದವರಿಗೆ ಇದನ್ನೆಲ್ಲ ಕೇಳಿ ಕೇಳಿ ಪರಮಾತ್ಮನಲ್ಲಿ ತದಾಕಾರವೃತ್ತಿ ಆಗುತ್ತದೆ. ಪರಮಾತ್ಮನಲ್ಲಿ ವೃತ್ತಿ ಲಯವಾದರೆ ಜೀವನ್ಮುಕ್ತನಾಗುತ್ತಾನೆ. ವಿಷಯಾಕಾರವೃತ್ತಿಯಿಂದ ಬಂಧಾ, ಪರಮಾತ್ಮಕಾರವೃತ್ತಿಯಿಂದ ಮೋಕ್ಷಾ. ವೃತ್ತಿಗೆ ವಿಷಯದ ಸಂಬಂಧವಾಗದೆ ಇರಲಿಕ್ಕೆ ಸದೋದಿತ ಭಗವದನುಸಂಧಾನವೇ ಕಾರಣ. ಕೂತಾಗ, ನಿಂತಾಗ, ಮಲಗಿದಾಗ, ಹೋಗೋವಾಗ, ಬರೋವಾಗ ಸದಾ ಸರ್ವದಾ ರಾಮಧ್ಯಾನ ಮಾಡುತ್ತಿರಬೇಕು. ರಾಮನಾಮ ಬಿಟ್ಟು ವಿಷಯದಕಡೆ ಹೋಗಲಿಕ್ಕೆ ವೃತ್ತಿಗೆ ಸವಡ ಕೊಡಬಾರದು.

”ಹೇ ರಾಮಾ, ಹೇ ದಯಾನಿಧೇ! ನನ್ನ ಎಂದ ಉದ್ಧಾರ ಮಾಡುವಿ. ನಿನ್ನ ಸಗುಣಮೂರ್ತಿ ಎಂದ ಕಂಡೇನು; ರಾಮಾ ತೀವ್ರ ದರ್ಶನ ಕೊಡೋ! ನಿನ್ನ ದರ್ಶನ ಆಗದ ಹೊರತು ಚೈನ ಇಲ್ಲ. ರಾಮಾ ನಾನು ಅಗಾಧ ಪಾಪಿ ಇದ್ದೇನೆ. ನನ್ನಂಥ ಕೆಟ್ಟವರು ಜಗತ್ತಿನಲ್ಲಿ ಯಾರೂ ಇಲ್ಲ. ಹೇ ದಯಾಸಮುದ್ರ, ರಾಮಾ, ತೀವ್ರವಾಗಿ ಭವಸಮುದ್ರವನ್ನು ದಾಟಿಸು. ಸಂತತಿ ಸಂಪತ್ತಿ ಮೊದಲಾದ ಐಹಿಕ ಪಾರತ್ರಿಕ ಸುಖವು ಏನೂ ಬೇಡ. ನಿನ್ನ ಪಾದದಲ್ಲಿ ದೃಢ ಭಕ್ತಿ ಕೊಡು. ನನ್ನ ನಾಲಿಗೆಯಲ್ಲಿ ಸದಾ ರಾಮ (ನಿನ್ನ) ನಾಮವಿರಲಿ. ಕಿವಿಗಳು ರಾಮ (ನಿನ್ನ) ಕಥಾ ಕೇಳಲಿ. ಮಸ್ತಕವು ರಾಮ (ನಿನ್ನ) ಪಾದಕ್ಕೆ ಸಾಷ್ಟಾಂಗ ಹಾಕಲಿ. ಕೈಗಳಿಂದ ರಾಮ (ನಿನ್ನ) ಪೂಜಾ ಸ್ಸಮ್ಮಾರ್ಜನಾದಿ ಸೇವಾ ಘಡಾಯಿಸಲಿ. ರಾಮಾ, ನಾನು ಅಜ್ಞಾನಿ ಇದ್ದೇನಿ. ಏನೂ ತಿಳುವಳಿಕೆಯಿಲ್ಲ. ನೀನೇ ನನ್ನ ಹೃದಯದಲ್ಲಿ ನಿಂತು, ನಿನ್ನ ಪಾದದಲ್ಲಿ ಪ್ರೇಮ ಹುಟ್ಟುವಂತೆ ಮಾಡು. ಶ್ರೀ ರಾಮಾ, ನಿನ್ನ ಹೊರತು ನನಗಾರೂ ಆಧಾರ ಇಲ್ಲ. ನೀನೇ ತಂದೆ ತಾಯಿ ಬಂಧು ಬಳಗಾ. ಹೇ ಕೃಪಾಸಾಗರಾ, ಶ್ರೀರಾಮಾ, ಅಜ್ಞಾನಧ್ವಾಂತ ನಿವಾರಣಾ, ನೀನೇ ಗತಿ ಎಂದು ಅನನ್ಯಭಾವದಿಂದ ಶರಣ ಹೋಗಬೇಕು. ಸಹಸಾ ಪಾಪಮಾರ್ಗದ ಕಡಿ ಪ್ರವೃತ್ತಿ ಇರಬಾರದು. ಸುಳ್ಳು ಕೆಲಸಕ್ಕೆ ಹೋಗಬಾರದು. ಜನರು ನಿಂದಾ ಮಾಡಿದರೆ ವಿಷಾದಪಡಬಾರದು. ಸ್ತುತಿ ಮಾಡಿದರೆ ಹರ್ಷಪಡಬಾರದು. ಜನರ ನಿಂದಾ-ಸ್ತುತಿ ಮಾಡಬಾರದು. ಸರ್ವತ್ರದಲ್ಲಿ ಪರಮಾತ್ಮ ಇದ್ದಾನೆ. ಹೆಂಡರು ಮಕ್ಕಳು, ಮನಿ, ಹೊಲಾ, ಸಂಪತ್ತಿ ಮೊದಲಾದ ದೃಶ್ಯಪದಾರ್ಥ ಮಿಥ್ಯಾ ಎಂದು ತಿಳಿಯಬೇಕು. ದೇವರು ಒಬ್ಬನೇ ಶಾಶ್ವತ. ಅಹೋರಾತ್ರಿ ರಾಮಭಜನೆಯಲ್ಲೇ ಕಾಲಕ್ರಮಣ ಮಾಡಬೇಕು.

ಜಯ ಜಯ ರಘುವೀರ ಸಮರ್ಥ.

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments