ರೊಹಿಂಗ್ಯಾಗಳಿಗಾಗಿ ‘ಭಾರತ’ ತನ್ನತನವನ್ನು ಕಳೆದುಕೊಳ್ಳಬೇಕೇ ?
– ಡ್ಯಾನಿ ಪಿರೇರಾ
ಹಳ್ಳಿಮೈಸೂರು
ಭಾರತ ಎಲ್ಲಾ ಜಾತಿ ಜನಾಂಗಗಳನ್ನು ತನ್ನೊಡಲಲ್ಲಿ ಆಶ್ರಯ ನೀಡಿ ಆದರಿಸಿದ ದೇಶ. ಕೆಲವರು ಆಶ್ರಯ ಬೇಡಿ ಬಂದರೆ ಮತ್ತೆ ಕೆಲವರು ದುರಾಸೆಯಿಂದ ದಾಳಿ ಇಟ್ಟವರು. ಬಂದವರಲ್ಲಿ ಅನೇಕರು ಇಲ್ಲಿ ಬೆರೆತರು, ಕಲಿತರು ಕಲಿಸಿದರು. ಮತ್ತೆ ಕೆಲವರು ಬೆರೆತಂತೆ ಕಂಡರೂ ಬೇರೆಯಾಗಿಯೇ ಉಳಿದಿದ್ದಾರೆ. ಅವರು ಶರೀರ ಮಾತ್ರ ಇಲ್ಲಿದ್ದರೆ ಮನಸ್ಸು ಜಾತಿ-ಮತ-ಪಂಥಗಳಾಚೆ ಯೋಚಿಸಲು ಸ್ವಾತಂತ್ರ್ಯ ಬಂದು ಎಪ್ಪತ್ತು ವರ್ಷಗಳೇ ಕಳೆದಿದ್ದರೂ ಸಾಧ್ಯವಾಗಿಲ್ಲ. ಅವರೊಳಗಿನ ಮತಾಂಧತೆಯ ಭಾವ ಇಲ್ಲಿ ಎಲ್ಲವನ್ನೂ ಪಡೆದ ಮೇಲೂ ಹಾಗೆಯೇ ಇದೆ ಎಂದರೆ ಅದು ಸರಿಯಾಗದ ಮನಸ್ಥಿತಿ ಎನ್ನುವ ನಿಷ್ಕರ್ಶೆಗೆ ಬರಬೇಕಾಗುತ್ತದೆ. ಇಲ್ಲಿ ಸಮರಸತೆಯಿಂದ ಬೆರೆತ ಜನಾಂಗವೊಂದು ಈ ನೆಲದ ಸಂಸ್ಕೃತಿಯೊಂದಿಗೆ ಸಮ್ಮಿಳಿತಗೊಂಡು ಸ್ವಾತಂತ್ರ್ಯ ಹೋರಾಟದಲ್ಲಿ ಮೊದಲ್ಗೊಂಡು ಈ ದೇಶದ ಬದುಕಿನೊಂದಿಗೆ ಸಮರಸಗೊಂಡು ಹೊರಗಿನಿಂದ ಬಂದವರಿಗೆ ಮಾತ್ರವಲ್ಲ, ತಾವು ಇಲ್ಲಿನ ಮೂಲದವರು ಎನ್ನುವವರಿಗೂ ಆದರ್ಶಪ್ರಾಯರಾಗಿದ್ದಾರೆ. ಈ ಜನಾಂಗ ಈ ದೇಶದ ಮೂಲಭೂತವಾದಿ ಮನಸ್ಥಿತಿಗೆ ನೀತಿ ಮಾರ್ಗವಾಗಬೇಕಿತ್ತು! ದುರ್ದೈವ ಹಾಗಾಗಲಿಲ್ಲ.
ಸುಮಾರು 1200 ಕ್ಕೂ ಹೆಚ್ಚು ವರ್ಷಗಳ ಹಿಂದಿನ ಮಾತು. ಶಾಂತಿಪ್ರಿಯ ಪಾರ್ಸಿಗಳು ಇಸ್ಲಾಂನ ಆಕ್ರಮಣಕ್ಕೆ ತುತ್ತಾಗಿ ತಮ್ಮ ಏಕೈಕ ದೇಶವಾಗಿದ್ದ ಪರ್ಷಿಯ ಬಿಟ್ಟು ಆಶ್ರಯಕ್ಕಾಗಿ ಬೇರೆ ಬೇರೆ ದೇಶಗಳಿಗೆ ವಲಸೆ ಬರಬೇಕಾಯಿತು. ಆಗ ಅವರಿಗೆ ಕಂಡದ್ದು ಭಾರತ. ಬೇಡಿ ಬಂದವರಿಗೆ ಆಶ್ರಯ ನೀಡಿದ್ದು ಇಲ್ಲಿನ ಸನಾತನ ಪರಂಪರೆ. ಆಗ ಅವರು ಮೊದಲು ಕಾಲಿಟ್ಟದ್ದು ಗುಜರಾತಿಗೆ. ಆಗ ಅಲ್ಲಿನ ರಾಜನಾಗಿದ್ದವನು ಜಾದಿ ರಾಣಾನೆಂಬ ಹಿಂದೂ ಅರಸ. ಆಶ್ರಯ ಬಯಸಿ ಬಂದವರಿಗೆ ಸಂದೇಶವೊಂದನ್ನು ಆ ಅರಸ ನೀಡಿದ್ದ. ತನ್ನ ರಾಯಭಾರಿಯೊಂದಿಗೆ ಕಂಠಪೂರ್ತಿ ಹಾಲು ತುಂಬಿದ್ದ ಹಂಡೆಯೊಂದನ್ನು ಪಾರ್ಸಿಗಳ ಬಳಿ ಕೊಟ್ಟು ಕಳಿಸಿದ್ದ. ಹಂಡೆಯಲ್ಲಿ ಹಾಲು ತುಂಬಿರುವಂತೆ ನಾವೇ ಇಲ್ಲಿ ಸಾಕಷ್ಟಿದ್ದೇವೆ. ನಿಮಗಿಲ್ಲಿ ಸ್ಥಳವಿಲ್ಲ ಎಂಬ ಸಂದೇಶವಾಗಿತ್ತದು! ಆದರೆ ಅಲ್ಲಿ ಆಗಿದ್ದೇ ಬೇರೆ. ಬುದ್ಧಿವಂತ ಜನಾಂಗವಾಗಿದ್ದ ಪಾರ್ಸಿಗಳು ರಾಯಭಾರಿ ತಂದಿತ್ತ ಹಾಲಿಗೆ ತಮ್ಮಲ್ಲಿದ್ದ ಸಕ್ಕರೆಯನ್ನು ಬೆರೆಸಿ, ಹಾಲು ಸಕ್ಕರೆಯ ಮಿಳಿತದೊಂದಿಗೆ ಆ ಸವಿರುಚಿ ಇನ್ನಷ್ಟು ಹೆಚ್ಚುವ ಸಂದೇಶವನ್ನು ಇಲ್ಲಿನವರಿಗೆ ಆ ಮೂಲಕ ತಿಳಿಸಿದ್ದರು. ನಾವು ನಿಮ್ಮೊಂದಿಗೆ ಸಮರಸರಾಗುತ್ತೇವೆ. ನಿಮ್ಮ ನಾಡಿಗೆ ನಾವೆಂದು ಪರಕೀಯರಾಗದೇ ಇಲ್ಲಿನ ಸಾಮರಸ್ಯಕ್ಕೆ ಮತ್ತಷ್ಟು ಬಲ ನೀಡುತ್ತೇವೆ. ನಾವೆಂದಿಗೂ ನಿಮ್ಮ ಆಚರಣೆಗಳ ವಿರುದ್ಧದ ಅಭಿಪ್ರಾಯವನ್ನು ಮಾನ್ಯ ಮಾಡುವುದಿಲ್ಲ, ಎನ್ನುವ ಅಭಯವನ್ನಿತ ಮೇಲೆ ಅವರನ್ನು ಅತ್ಯಂತ ಗೌರವಾದರದಿಂದ ಸ್ವಾಗತಿಸಿ, ಅವರಿಗೆ ಕೆಲವು ಷರತ್ತುಗಳನ್ನು ವಿಧಿಸಲಾಯಿತು.
ಅದೆಂದರೆ ಇಲ್ಲಿನ ಶೈಲಿಯ ಉಡುಗೆ-ತೊಡುಗೆಗಳನ್ನು ಧರಿಸಬೇಕು. ಪಾರ್ಸಿಗಳದ್ದು ವ್ಯಾಪಾರಿ ವೃತ್ತಿಯಾಗಿರುವುದರಿಂದ ಸ್ಥಳೀಯ ಗುಜರಾತಿ ಭಾಷೆಯನ್ನು ಕಲಿತು ಈ ಭಾಷೆಯಲ್ಲೇ ವ್ಯವಹರಿಸಬೇಕು. ಇಲ್ಲಿನ ಆಹಾರ ಪದ್ಧತಿಗಳನ್ನು ರೂಢಿಸಿಕೊಳ್ಳಬೇಕು. ಗೋ ಮಾಂಸವನ್ನು ವರ್ಜಿಸಬೇಕು ಎಂಬುದು. ಈ ಎಲ್ಲಾ ಷರತ್ತುಗಳನ್ನು ಸಹೃದಯಿ ಪಾರ್ಸಿಗಳು ಸಹರ್ಷದಿಂದ ಒಪ್ಪಿಕೊಂಡರಲ್ಲದೇ ಇಂದಿಗೂ ಈ ನೆಲದ ನಂಬಿಕೆಗಳೊಂದಿಗೆ ಕೂಡಿ ಬಾಳುವ ಅವರ ಪೂರ್ವಜರ ಅಭಿಪ್ರಾಯಕ್ಕೆ ಮನ್ನಣೆ ನೀಡುವುದನ್ನು ಆಬಾಧಿತವಾಗಿ ಮುಂದುವರೆಸಿಕೊಂಡು ಬಂದಿದ್ದಾರೆ. ಈ ಘಟನೆ ಇಲ್ಲಿ ಉದಾಹರಿಸಲು ಕಾರಣವಿದೆ. ಇತ್ತೀಚಿನ ದಿನಗಳಲ್ಲಿ ರೋಹಿಂಗ್ಯಾ ಮುಸಲ್ಮಾನರ ಅಕ್ರಮ ವಲಸೆ ಈ ದೇಶಕ್ಕೆ ತೊಡಕಾಗಿ ಪರಿಣಮಿಸುತ್ತಿದೆ. ಮಯನ್ಮಾರಿಗಳಿಗೆ ಸಮಸ್ಯೆಯಾಗಿರುವ ಈ ಜನರನ್ನು ತಮ್ಮ ಸಮಸ್ಯೆಯಲ್ಲದ ಮತ್ತೊಂದು ದೇಶ ಆ ಸಮಸ್ಯೆಯನ್ನು ಸ್ವೀಕರಿಸಿ, ಅವರು ಕೇವಲ ತಮ್ಮ ಮತಾನುಯಾಯಿಗಳು ಎನ್ನುವ ಕಾರಣಕ್ಕಾಗಿ ಆ ಜನರನ್ನು ಆಶ್ರಯ ನೀಡಬೇಕೆಂಬ ಈ ದೇಶದ ಅಲ್ಪಸಂಖ್ಯಾತರೆನ್ನಲಾಗುವ ಮುಸಲ್ಮಾನರಿಂದ ಕೇಳಿ ಬರುತ್ತಿರುವುದು ನಿಜಕ್ಕೂ ದುರ್ದೈವ! ಇವರೊಂದಿಗೆ ಈ ದೇಶದ ಬುದ್ಧಿಜೀವಿಗಳು ಎಂದು ಕರೆಸಿಕೊಳ್ಳುವ ವರ್ಗ ಕೈ ಜೋಡಿಸುತ್ತಿದೆ ಎಂದರೆ ಈ ದೇಶವನ್ನು ಎತ್ತ ಕೊಂಡೊಯ್ಯುತ್ತಿದ್ದಾರೆ ಎಂದು ಯೋಚಿಸಿದರೆ ರಾಷ್ಟ್ರ ಈ ದೇಶದವರಿಂದಲೇ ಅಪಾಯ ಎದುರಿಸುತ್ತಿದೆ ಎನ್ನುವ ಆತಂಕ ಮೂಡುವುದು ಸಹಜ. ಇಲ್ಲಿ ಸ್ವಾತಂತ್ರ್ಯ ಪೂರ್ವದಿಂದ ನೆಲೆನಿಂತ ಅಲ್ಪಸಂಖ್ಯಾತ ಮತೀಯವಾದಿಗಳೇ ಈ ದೇಶದ ಆಪತ್ಕಾಲದಲ್ಲಿ ರಾಷ್ಟ್ರದೊಂದಿಗಿಲ್ಲ ಎಂದ ಮೇಲೆ ವಲಸೆ ಬಂದವರು ಈ ದೇಶಕ್ಕೆ ನಿಷ್ಠೆ ತೋರುತ್ತಾರೆಂಬ ಭವಿಷ್ಯದ ಸುಂದರ ಕನಸುಗಳನ್ನೊತ್ತ ದೇಶವೊಂದು ಒಪ್ಪಲು ಸಾಧ್ಯವೇ ಇಲ್ಲ. ಇದನ್ನು ಇತಿಹಾಸ ಸಾಕ್ಷೀಕರಿಸುತ್ತದೆ.
ಸ್ವಾತಂತ್ರ್ಯಪೂರ್ವದ ಖಿಲಾಫತ್ ಆಂದೋಳನದಿಂದ ಹಿಡಿದು 1947ರ ರಾಷ್ಟ್ರದ ವಿಭಜನೆಯವರೆಗೆ ಪ್ರತ್ಯೇಕತೆಯನ್ನು ಧ್ಯೇಯವನ್ನಾಗಿರಿಸಿಕೊಂಡ ಇಸ್ಲಾಂ ಮತಾಂಧ ಶಕ್ತಿಗಳು ಆ ನಂತರವೂ ಈ ದೇಶದ ವಿರುದ್ಧದ ಕಾರ್ಯಾಚರಣೆಯಲ್ಲೇ ತೊಡಗಿರುವುದು ವೇದ್ಯ. ದೇಶದ ಉದ್ದಗಲಕ್ಕೂ ಇಂದು ನಡೆಯುತ್ತಿರುವ ಮತೀಯ ಗಲಭೆಗಳಿಗೆ ಇದೇ ಶಕ್ತಿಗಳು ಬೆನ್ನೆಲುಬಾಗಿ ಧರ್ಮಾಧಾರಿತ ಬೆಂಬಲವನ್ನು ಕೊಡುತ್ತಿರುವುದು ಸುಳ್ಳಲ್ಲ. ಬಾಂಗ್ಲಾ-ಪಾಕಿಸ್ತಾನದ ಯುದ್ಧ ಸಮಯದಲ್ಲಿ ಭಾರತ ಬಾಂಗ್ಲಾ ಪರವಾಗಿ ನಿಂತು ಅವರಿಗೆ ಸ್ವತಂತ್ರ ದೇಶವಾಗಿ ಉಳಿಯಲು ಕಾರಣೀಭೂತರಾಗಿದ್ದರೂ ಅಲ್ಲಿನ ಜನರ ನಿಷ್ಟೇ ಆ ಕೃತಜ್ಞತೆ ಧರ್ಮದ ಹಿನ್ನೆಲೆಯಲ್ಲಿ ಈ ದೇಶಕ್ಕಿಲ್ಲ. ಭಯೋತ್ಪಾದಕರು ಅಲ್ಲಿ ಆಶ್ರಯ ಪಡೆದು ಈ ದೇಶಕ್ಕೆ ತೊಡಕಾಗಿರುವುದು ಅವರ ನಿಷ್ಠೆಯೇ ಪ್ರಶ್ನಾರ್ಹ. ಇನ್ನು ಪಾಕಿಸ್ತಾನ ವಿಷಯ ಕೇಳುವಂತಿಲ್ಲ! ಹಾಗೇ ಅಲ್ಪಸಂಖ್ಯಾತರೆಂದು ಹೇಳಿಕೊಳ್ಳುವ ಜನಾಂಗ ಯಾವ ರಾಜ್ಯದಲ್ಲಿ ಬಹು ಸಂಖ್ಯಾತರೋ ಅಲ್ಲೆಲ್ಲಾ ದೇಶ ಮತೀಯ ಕಾರಣಕ್ಕಾಗಿ ಭಾರತ ಅಭದ್ರತೆಯನ್ನು ಎದುರಿಸಬೇಕಾಗಿ ಬಂದಿದೆ. ಕಾಶ್ಮೀರದ ಅಲ್ಲಿನ ಪಂಡಿತರು ಪಾಕ್ ಪ್ರಾಯೋಜಕತ್ವದ ಭಯೋತ್ಪಾದನೆಗೆ ಬೆದರಿ ತಮ್ಮ ನೆಲೆಯನ್ನು ಕಳೆದುಕೊಂಡು ದಶಕಗಳೇ ಕಳೆದಿವೆ. ಆ ಪಂಡಿತರ ದುಸ್ಥಿತಿಗೆ ಮರುಗುವ ಓವೈಸಿ ಅಥವಾ ಬುದ್ಧಿಜೀವಿಗಳೆಂದು ಕರೆಸಿಕೊಳ್ಳುವ ಯಾವುದೇ ಪ್ರಗತಿಪರರು ಅವರ ಹಕ್ಕಿಗಾಗಿ ಕಣ್ಣೀರು ಸುರಿಸಿರುವುದು ಇತಿಹಾಸದಲ್ಲೆಲ್ಲೂ ಕಾಣ ಸಿಗುವುದಿಲ್ಲ!.
ಅದೇ ಮಯನ್ಮಾರ್ ನಂತ ದೇಶಕ್ಕೆ ಕಂಟಕರಾಗಿ ಹೊರ ದಬ್ಬಿಸಿಕೊಂಡ ರೊಹಿಂಗ್ಯಾ ಮುಸಲ್ಮಾನರ ಪರವಾಗಿ ನಿಂತವರ ಸಂಖ್ಯೆ ದಿನ ದಿನಕ್ಕೂ ಹೆಚ್ಚಾಗುತ್ತಿದೆ. ಒಂದೊಮ್ಮೆ ಈ ಜನರಿಗೆ ಮಾನವೀಯ ನೆಲೆಯಲ್ಲಿ ಆಶ್ರಯ ನೀಡಿದ್ದಲ್ಲಿ ಇಂದು ಅಭಿವ್ಯಕ್ತಿ ಸ್ವಾತಂತ್ರ್ಯದ ಹಿನ್ನೆಲೆಯಲ್ಲಿ ರಾಷ್ಟ್ರವಿರೋಧಿಗಳೊಂದಿಗೆ ಯಾರು ಕೈ ಜೋಡಿಸುತ್ತಾ ಬಂದಿದ್ದಾರೋ ಅವರಿಗೆ ಒಂದು ದೊಡ್ಡ ಶಕ್ತಿ ಸಿಕ್ಕಂತಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಈಗಾಗಲೇ ಬಾಂಗ್ಲಾ-ಪಾಕಿನ ನುಸುಳುಕೋರರು ಇಲ್ಲಿ ಆಶ್ರಯ ಪಡೆದು ರಾಷ್ಟ್ರವಿರೋಧಿ ಚಟುವಟಿಕೆಗಲ್ಲಿ ತೊಡಗಿರುವುದು ಗಮನಕ್ಕೆ ಬರುತ್ತಿರುವಾಗ ಅ ಶಕ್ತಿಗಳ ವಿರುದ್ಧ ಕೇಂದ್ರ ಸರ್ಕಾರ ಕಾನೂನಿನ ಮೂಲಕ ಮಟ್ಟ ಹಾಕಲು ಹರಸಹಾಸ ಪಡುತ್ತಿದೆ. ಈಗ ಮತ್ತೊಂದು ಸಮಸ್ಯೆ! ಹಾಗಾಗಿ ಅದು ಸುಪ್ರಿಂ ಕೋರ್ಟಿನಲ್ಲಿ ರೊಹಿಂಗ್ಯಾ ಮುಸಲ್ಮಾನರನ್ನು ಗಡಿಪಾರು ಮಾಡುವ ಬಗ್ಗೆ ಅಫಿಡವಿಟ್ ಸಲ್ಲಿಸಿದೆ. ಆ ಕಾರಣಕ್ಕಾಗಿ ರಾಷ್ಟ್ರದ ನಂಬಿಕೆಗಳನ್ನು ಎಂದೂ ಮಾನ್ಯ ಮಾಡದ ಈ ದೇಶದ ಮಾನಬಿಂದುಗಳನ್ನು ಅಪಮಾನ ಮಾಡುವುದರಲ್ಲೇ ಅಭಿವ್ಯಕ್ತಿ ಸ್ವಾತಂತ್ರ್ಯ ಕಾಣುವ ಓವೈಸಿಯಂತ ಮತಾಂಧ ತನ್ನ ಕುಲಬಾಂಧವರ ಬಗ್ಗೆ ಇನ್ನಿಲ್ಲದ ಅನುಕಂಪ ತೋರುತ್ತಾ, ಭಾರತದ ಸಹೋದರತ್ವ ಸಂದೇಶದ ಬಿಟ್ಟಿ ಉಪದೇಶವನ್ನು ಕೊಡುತ್ತಾ ರೋಹಿಂಗ್ಯ ಮುಸಲ್ಮಾನರಿಗೆ ಮೋದಿ ಆಶ್ರಯ ನೀಡಬೇಕೆಂದು ಕನವರಿಸುತ್ತಿದ್ದಾರೆ.
ಈ ದೇಶದ ಮುಸ್ಲಿಂ ಮತಾಂಧರ ಹಾಗೂ ಇಲ್ಲಿನ ತಥಾಕಥಿತ ಬುದ್ಧಿಜೀವಿಗಳ ಮುಖವಾಡ ಆಗಾಗ ಬಯಲಾಗುತ್ತಿರುವುದು ಸಾಮಾನ್ಯ. ಈಗ ರೊಹಿಂಗ್ಯಾ ಮುಸಲ್ಮಾನರ ಗಡಿಪಾರು ವಿರೋಧ ನೋಡಿದಾಗ ಇವರ ವೈಚಾರಿಕ ನಿಲುವು ಮತ್ತೊಮ್ಮೆ ಬೆತ್ತಲಾಗುತ್ತಿದೆ. ಇಡೀ ಜಗತ್ತಿನಲ್ಲಿ ಅತಿ ಹೆಚ್ಚು ಮುಸಲ್ಮಾನ ದೇಶಗಳಿವೆ. ಅವರೇಕೆ ಅವರದ್ದೇ ಕುಲಭಾಂಧವರಿಗೆ ಆಶ್ರಯ ನೀಡುತ್ತಿಲ್ಲ? ಬುದ್ಧಿಜೀವಿಗಳು ಹಾಗೂ ಇಸ್ಲಾಂ ಮತಾಂಧರೇಕೆ ರೋಹಿಂಗ್ಯಾಗಳನ್ನು ಅಲ್ಲಿ ಆಶ್ರಯ ನೀಡಿರೆಂದು ಒತ್ತಾಯಿಸುತ್ತಿಲ್ಲ? ಪಾಕಿಸ್ತಾನ ಪೂರ್ಣ ಪ್ರಮಾಣದ ಇಸ್ಲಾಂ ರಾಷ್ಟ್ರವೇ ಆಗಿರುವಾಗ ರೋಹಿಂಗ್ಯಾಗಳಿಗೆ ಸಂಬಂಧ ಪಡದ ಭಾರತವೇಕೆ ಆಶ್ರಯ ನೀಡಬೇಕು? ಮೋದಿ ಅಧಿಕಾರ ಹಿಡಿದ ಮೇಲೆ ದೇಶದ ತುಂಬೆಲ್ಲ ಅಸಹಿಷ್ಣುತೆ ಇದೆ, ಅಲ್ಪಸಂಖ್ಯಾತರಿಗೆ ಸುರಕ್ಷತೆ ಇಲ್ಲ ಎಂಬ ಕೂಗು ಮಾರಿ ಎಬ್ಬಿಸಿದ ವಿಚಾರವಾದಿಗಳು ಭಾರತ ರೊಹಿಂಗ್ಯಾ ಮುಸಲ್ಮಾನರಿಗೇಗೆ ಸುರಕ್ಷಿತವಾಗಬಲ್ಲದು? ಇಲ್ಲಿನ ಅಲ್ಪಸಂಖ್ಯಾರಿಗೆ ಹಾಗೂ ಬುದ್ಧಿಜೀವಿಗಳಿಗೆ ಅಭದ್ರತೆ ಕಾಡುವ ಈ ದೇಶದಲ್ಲಿ ರೊಹಿಂಗ್ಯಾ ಮುಸಲ್ಮಾನರಿಗೆ ಪಾಕಿಸ್ತಾನ, ಬಾಂಗ್ಲಾ, ಅರಬ್ ದೇಶಗಳಿಗಿಂತ ಸುರಕ್ಷಿತ ದೇಶ ಮತ್ತ್ಯಾವುದಿರಲು ಸಾಧ್ಯ? ಮೋದಿಯವರನ್ನು ಹಣಿಯಲು ದೇಶದ ತುಂಬ ಅಸಹಿಷ್ಣುತೆ ಇದೆ ಎಂದು ಗುಲ್ಲೆಬ್ಬಿಸಿ ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶದ ಮರ್ಯಾದೆಯನ್ನು ಹರಾಜು ಮಾಡಲು ಅಹಿರ್ನಿಷಿ ದುಡಿಯುತ್ತಿರುವ ರಾಷ್ಟ್ರವಿರೋಧಿ ಈ ಮನಸ್ಥಿತಿಗಳಿಗೆ ಅದೇಗೆ ರೊಹಿಂಗ್ಯಾ ಮುಸಲ್ಮಾನರಿಗೆ ಸುರಕ್ಷಿತ ತಾಣವಾಗಬಲ್ಲದು?
ಈ ರೊಹಿಂಗ್ಯಗಳು ಮಯನ್ಮಾರಿನ ಹಿಂದುಗಳಿಗೂ ಕಂಟವಾಗಿದ್ದವರು. ಭಾರತದ ಬಹುಸಂಖ್ಯಾತ ಹಿಂದುಗಳಿರುವ ದೇಶದಲ್ಲಿ ಅದೇಗೆ ರಕ್ಷಣೆ ಸಾಧ್ಯ? ಇಂದು ಮೋದಿಯವರ ಸಹೋದರ ಭಾವದ ಬಗ್ಗೆ ಮಾತಾಡುವ ಅಸಾದುದ್ದಿನ್ ಓವೈಸಿ – ‘ಕತ್ತಿನ ಮೇಲೆ ಕತ್ತಿ ಇಟ್ಟರೂ ‘ವಂದೇ ಮಾತರಂ’ ಹೇಳುವುದಿಲ್ಲ,’ ‘ನರೇಂದ್ರ ಮೋದಿಯವರನ್ನು ನಮ್ಮ ಪ್ರಧಾನಿ ಎಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ.’ ಎಂದು ಮನಸ್ಸಿಗೆ ತೋಚಿದಂತೆ ಮಾತಾಡುವ ಮತ್ತು ಈತನಂತೆ ಯೋಚಿಸುವ ಇಲ್ಲಿನ ಮತಾಂಧ ಮನಸ್ಸುಗಳ ಮಾನವೀಯತೆ ಕೇವಲ ಸ್ವಧರ್ಮದವರಿಗೆ ಮಾತ್ರ ಮಿಡಿಯುತ್ತದೆ ಎಂದರೆ ಇಲ್ಲಿ ಈ ದೇಶವನ್ನು ತುಂಡರಿಸಲು ಕಾರಣರಾದ ಮುಸ್ಲಿಂ ಲೀಗಿನ ಪಳಿಯುಳಿಕೆಗಳು ಬಲಾಢ್ಯವಾಗಿವೆ ಎನ್ನಲು ಮತ್ತಾವ ಕಾರಣ ಬೇಕು? ಕಾಶ್ಮೀರಿ ಪಂಡಿತರ ಹತ್ಯೆ ಅತ್ಯಾಚಾರಗಳು ನಡೆದಾಗ ಮೌನವಾಗಿರುವ ಮಾನವ ಹಕ್ಕಿನ ಮುಖವಾಡಗಳು ದೇಶದ ತುಂಬೆಲ್ಲಾ ಇವೆ ಎನ್ನಲು ಇದಕ್ಕಿಂತ ಉದಾಹರಣೆ ಬೇಕೆ?
ಈ ಹಿನ್ನೆಲೆಯಲ್ಲಿ ಇಂದು ಭಾರತದಂಥ ಸರ್ವಜನಾಂಗಗಳಿಗೆ ಆಶ್ರಯ ನೀಡಿ ಸಲಹುತ್ತಿರುವ ದೇಶಕ್ಕೆ ಬೇಕಾಗಿರುವುದು ಎಲ್ಲವನ್ನು ಪಡೆದು ಕೊನೆಗೆ ಇಲ್ಲಿನ ಪರಂಪರೆಯನ್ನು ನಂಬಿಕೆಗಳನ್ನು ಅವಹೇಳನ ಮಾಡುತ್ತಾ ಅಂಡಲೆಯುವ ಅಲ್ಪಸಂಖ್ಯಾತ, ಪ್ರಗತಿಪರ-ವಿಚಾರವಾದಿ, ಬುದ್ಧಿಜೀವಿಗಳಲ್ಲ. ಹೊರಗಿನಿಂದ ಬಂದರೂ ಹೊರಗಿನವರಂತೆ ಬದುಕದೇ ಇದು ನನ್ನನ್ನು ಆಶ್ರಯ ನೀಡಿ ಈ ಎತ್ತರಕ್ಕೆ ಬೆಳೆಸಿದ ನನ್ನ ಮಾತೃಭೂಮಿ ಎಂದು ಭಾವಿಸ ಬಲ್ಲ ಪಾರ್ಸಿಗಳಂಥ ದೇಶಭಕ್ತ ಮನಸ್ಥಿತಿ. ಈ ಮನೋ ಧರ್ಮ ರೂಢಿಸಿಕೊಳ್ಳದವರು ಅವರು ಯಾವುದೇ ಜಾತಿ-ಧರ್ಮಕ್ಕೆ ಸೇರಿದ್ದರೂ ಅವರು ಭಾರತದಂಥ ದೇಶಕ್ಕೆ ಹೊರೆಯಲ್ಲದೇ, ಮತ್ತೇನು?!