ಸಾವಿನಲ್ಲೂ ಸಂದೇಶ ಬಿಟ್ಟುಹೋದ ರಾಷ್ಟ್ರವಾದದ ದಧೀಚಿ
– ಸಂತೋಷ್ ತಮ್ಮಯ್ಯ
ಆ ಘಟನೆಯನ್ನು ನೆನಪಿಸಿಕೊಳ್ಳುತ್ತಾ ಕೆಲವರು “ಕೊನೆ ಕ್ಷಣಕ್ಕೆ ಅದೊಂದು ಬದಲಾವಣೆ ಆಗದೇ ಹೋಗಿದಿದ್ದರೆ ಜನಸಂಘದ ಕಥೆಯೇ ಬೇರೆ ಇರುತ್ತಿತ್ತು” ಎಂದು ಹೇಳುತ್ತಾರೆ. ಬೇರೆ ಎಂದರೆ ಹೇಗೆ ಎಂದರೆ ಅದಕ್ಕೆ ಉತ್ತರವಿಲ್ಲ. ಹಾಗೆನ್ನುವ ಎಲ್ಲರಲ್ಲೂ ಒಂದು ನಂಬಿಕೆ ಸ್ಪಷ್ಟವಾಗಿದೆ. ಜನಸಂಘ ವ್ಯಕ್ತಿ ಕೇಂದ್ರಿತ ಪಕ್ಷವಲ್ಲ ಎಂದು ಎಲ್ಲರಿಗೂ ತಿಳಿದಿದೆ. ಆದರೂ ಕೂಡಾ ಎಲ್ಲರೂ ಕಥೆ ಬೇರೆಯಾಗಿರುತ್ತಿತ್ತು ಎಂದೇ ಹೇಳುವರು. ಒಂದೇ ಒಂದು ಕ್ಷಣಕ್ಕೆ ಒಂದು ಪಕ್ಷದ ಆಗುಹೋಗುಗಳು ನಿರ್ಧರಿತವಾಗುವುದಿಲ್ಲ ಎಂದು ಅವರೆಲ್ಲರೂ ನಂಬಿದ್ದರೂ ‘ಕಥೆ ಬೇರೆಯಾಗಿರುತ್ತಿತು’ ಎಂಬ ಮಾತನ್ನು ನಿಟ್ಟುಸಿರಿನಿಂದ ಆವರೆಲ್ಲರೂ ಹೇಳದೇ ಇರುವುದಿಲ್ಲ. ದೀನದಯಾಳರ ನಂತರವೂ ಪಕ್ಷ ಅದೇ ತತ್ತ್ವ ಸಿದ್ಧಾಂತಗಳಿಂದ ಮುನ್ನಡೆಯುವುದು ಎಂದು ಅಂದುಕೊಂಡಿದ್ದರೂ ಅವರ ನಂತರ ಜನಸಂಘದಲ್ಲಿ ಏನೋ ಖಾಲಿತನ. ಸಿದ್ಧಾಂತವನ್ನು ಮುನ್ನಡೆಸಲು ದೀನದಯಾಳರಂಥ ವಾಹಕರು ಬೇಕು ಎನ್ನುವ ಚಡಪಡಿಕೆ. ಬೇಸರ, ಗೊಂದಲ, ಅಸಹನೆ. ಹಾಗಾದರೆ ದೀನದಯಾಳರು ಪಕ್ಷಕ್ಕಿಂತ, ಸಿದ್ಧಾಂತಕ್ಕಿಂತ ಮೇಲಾಗಿ ಬೆಳೆದುಬಿಟ್ಟಿದ್ದರೇ ಎಂದರೆ ಅದೂ ಇಲ್ಲ. ರಾಜಕೀಯ ಅವರಿಗೆಂದೂ ಗುರಿಯಾಗಿರಲೇ ಇಲ್ಲ. ಬದಲಿಗೆ ಮಾರ್ಗವಾಗಿತ್ತು. ಕೇವಲ ಒಂದು ಸಾಧನ ಮಾತ್ರವಾಗಿತ್ತು. ಅದುವರೆಗೆ ಭಾರತದಲ್ಲಿ ಏನಿತ್ತೋ ಅದನ್ನೇ ಅವರು ರಾಜಕೀಯ ಪರಿಭಾಷೆಯಲ್ಲಿ ಹೇಳಿದ್ದರು. ಅನುಷ್ಠಾನಕ್ಕೆ ಪ್ರಯತ್ನಿಸಿದ್ದರು. ಹಾಗಾದರೆ ಜನರಿಗೆ ಚಡಪಡಿಕೆ, ಖಾಲಿತನ, ಗೊಂದಲ, ಗೊಣಗುವಿಕೆಗಳು ಊಂಟಾಗಲು ಕಾರಣವೇನು? ಗಟ್ಟಿ ಸಿದ್ಧಾಂತದ ಪಕ್ಷದಲ್ಲೂ ಹೀಗಾಗುತ್ತವೆಯೇ?
ಸಾವು ಸಹಜವಾಗಿರದಿದ್ದರೆ ಎಲ್ಲೆಲ್ಲೂ ಹೀಗಾಗುತ್ತದೆ. ಅವರದ್ದು ಎಂಥವರೂ ಅಲ್ಲಾಡಿಹೋಗುವಂಥಾ ಸಾವು. ಸಾಧಾರಣವಾಗಿ ಸಂಘದವರು ಎಂಥಾ ಸಾವಿಗೂ ಕಣ್ಣೀರು ಹಾಕಲಾರರು. ಆದರೆ ಅಂಥ ಸಂಘದವರೂ ಕಣ್ಣೀರು ಹಾಕಿ ಬಿಕ್ಕಳಿಸಿದ ಸಾವು ದೀನದಯಾಳದ್ದು. ಗುರೂಜಿಯಂಥಾ ಆಧ್ಯಾತ್ಮ ಸಾಧಕರೇ ವಿಚಲಿತರಾಗಿಹೋದ ಸಾವು ದೀನದಯಾಳರದ್ದು. ದೇಶಕ್ಕೆ ದೇಶವೇ ಮಾತಾಡಿಕೊಂಡ ಸಾವು ದೀನದಯಾಳರದ್ದು. ಇಂದಿಗೂ ಉತ್ತರ ಸಿಗದ ಸಾವು ದೀನದಯಾಳರದ್ದು. ಸಾಧಕನ ಬದುಕನ್ನು ಆತನ ಸಾವಿನಲ್ಲಿ ನೋಡಬೇಕೆಂಬ ಮಾತಿದೆ. ಅದನ್ನು ೧೯೬೮ರ ಫೆಬ್ರವರಿ ೧೨ರಂದು ದೇಶ ನೋಡಿತು.
ಇಂದು ದೀನದಯಾಳರ ಜನ್ಮಶತಮಾನೋತ್ಸವ. ಅವರ ಹುಟ್ಟಿದ ದಿನದಂದೇ ಸಾವಿನ ಮಾತನ್ನಾಡಬೇಕು. ಏಕೆಂದರೆ ದೀನದಯಾಳರ ಅಂತಿಮ ಸಂಸ್ಕಾರ ನಡೆದ ನಂತರ ಅಟಲಬಿಹಾರಿ ವಾಜಪೇಯಿಯವರು ಅಂದೇ ಕರೆಕೊಟ್ಟಿದ್ದರು, “ಬನ್ನಿ, ಪಂಡಿತ್‌ಜಿ ಅವರ ರಕ್ತದ ಒಂದೊಂದು ಹನಿಯನ್ನೂ ಹಣೆಯ ಗಂಧವನ್ನಾಗಿಸಿಕೊಂಡು ನಮ್ಮ ಗುರಿಯತ್ತ ಸಾಗೋಣ. ಅವರ ಚಿತೆಯಿಂದ ಹೊರಬರುತ್ತಿರುವ ಒಂದೊಂದು ಕಿಡಿಯನ್ನು, ಹೃದಯದಲ್ಲಿರಿಸಿಕೊಂಡು ಪರಿಶ್ರಮದ ಪರಾಕಾಷ್ಠೆಯನ್ನು ಹಾಗೂ ಪ್ರಯತ್ನಗಳ ಎಲ್ಲೆಯನ್ನು ತಲುಪೋಣ. ಈ ದಧೀಚಿಯ ಅಸ್ಥಿಗಳ ವಜ್ರಾಯುಧವನ್ನು ತಾಯಾರಿಸಿ ಅಸುರರ ಮೇಲೆ ಆಕ್ರಮಣ ಮಾಡೋಣ ಹಾಗೂ ಪವಿತ್ರ ಭೂಮಿಯನ್ನು ನಿಷ್ಕಂಟಕವನ್ನಾಗಿಸೋಣ”. ಹಾಗಾಗಿ ದೀನದಯಾಳರ ಸಾವು ಸಿದ್ಧಾಂತಿಗಳು ಮರೆಯಬಾರದ ಸಾವು. ಆ ಚಿತೆಯ ಬೆಂಕಿ ಸದಾ ಎದೆಯಲ್ಲಿ ಸುಡುತ್ತಿರಬೇಕಾದ ಉರಿ.
ನಿಜ, ಆ ಕೊನೆಯ ಕ್ಷಣದ ಬದಲಾವಣೆಯಿಂದ ಇಷ್ಟೆಲ್ಲಾ ನಡೆದುಹೋಗಿತ್ತು. ನಿಂತಲ್ಲಿ ನಿಲ್ಲದ ಬಾಲ್ಯ, ಆಪ್ತರ ಮರಣ, ಸಂಘದ ಸಂಪರ್ಕ, ಪ್ರಚಾರಕ ಜೀವನ, ಸಾಹಿತ್ಯ ಸೃಷ್ಟಿ, ನಾಯಕತ್ವ, ರಾಜಕಾರಣ, ಅದರಲ್ಲಿ ಯಶಸ್ಸುಗಳನ್ನು ಕಂಡ ದೀನದಯಾಳ ಉಪಾಧ್ಯಾಯರನ್ನು ೧೯೬೭ರಡಿಸೆಂಬರ್ ೨೯ರಂದು ಜನಸಂಘದ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಘೋಷಿಸಲಾಗಿತ್ತು. ಅಧ್ಯಕ್ಷರಾದ ಕೆಲವೇ ದಿನಗಳಲ್ಲಿ ಸಂಸತ್ತಿನ ಬಜೆಟ್ ಅಧಿವೇಶನ ನಡೆಯುವುದರಲ್ಲಿತ್ತು. ಅಧಿವೇಶನದಲ್ಲಿ ಜನಸಂಘದ ನಿಲುವುಗಳೇನಿರಬೇಕು ಎಂಬುದನ್ನು ಚರ್ಚಿಸಲು ೧೯೬೮ರ ಫೆಬ್ರವರಿ ೧೧ರಂದು ದೆಹಲಿಯಲ್ಲಿ ಬೈಠಕನ್ನು ಕರೆಯಲಾಗಿತ್ತು. ಹೊಸ ಅಧ್ಯಕ್ಷರೇ ಅದನ್ನು ತೆಗೆದುಕೊಳ್ಳುವುದು ಎಂದು ಪೂರ್ವನಿಶ್ಚಯವಾಗಿತ್ತು. ಹಿಂದಿನ ದಿನ ಅಂದರೆ ಫೆಬ್ರವರಿ ೧೦ರಂದು ಅಧ್ಯಕ್ಷರು ಲಖ್ನೌನಿಂದ ದೆಹಲಿಗೆ ಹೊರಡುವುದು ಕೂಡಾ ನಿಶ್ಚಯವಾಗಿತ್ತು. ರಾತ್ರಿ ಅವರು ತೆರಳಬೇಕು, ಆದರೆ ಬೆಳಗ್ಗೆ ಬಿಹಾರದ ಜನಸಂಘದ ರಾಜ್ಯಾಧ್ಯಕ್ಷರಿಂದ ದೀನದಯಾಳರಿಗೆ ಕರೆ ಬಂತು. ಸಂಸತ್ತಿನ ಅಧಿವೇಶನ ತುಂಬಾ ದಿನ ನಡೆಯುವುದೆಂದೂ ಹಾಗಾಗಿ ಪಾಟ್ನಾ ಕಾರ್ಯಕಾರಿಣಿಯಲ್ಲಿ ಭಾಗವಹಿಸಿದ ನಂತರ ದೆಹಲಿಯಲ್ಲಿ ಬೈಠಕ್ ಇಟ್ಟುಕೊಳ್ಳಲಾಗುವುದೇ ಎಂದು ದೀನದಯಾಳರನ್ನು ವಿನಂತಿಸಿದ್ದರು. ಡೈರಿ ತೆರೆದ ದೀನದಯಾಳರಿಗೆ ಎಲ್ಲವೂ ಗೋಜಲುಗೋಜಲಾಗಿ ಕಂಡಿತು. ದೆಹಲಿ ಬೈಠಕ್ ಮುಗಿಸಿ ಕಾನ್ಪುರ ಪ್ರವಾಸವಿತ್ತು. ಈಗ ನೋಡಿದರೆ ಪಾಟ್ನಾದಿಂದ ಕರೆ. ದೆಹಲಿ ಮತ್ತು ಕಾನ್ಪುರಗಳೆರಡರ ದಿನಾಂಕಗಳೂ ಬದಲಾಗುವುದಲ್ಲಾ ಎಂದು ಯೋಚಿಸಿದವರೇ ಕಾರ್ಯಕಾರಿಣಿಯೇ ಮುಖ್ಯ ಎಂದು ನಿಶ್ಚಯಿಸಿ ‘ಜರೂರ್’ ಎಂದು ಮಾತುಕೊಟ್ಟರು. ಜನಸಂಘ ಮತ್ತು ಅದರ ರೂಪಾಂತರವಾದ ಪಕ್ಷಕ್ಕೆ ಇಂದಿಗೂ ಕಾರ್ಯಕಾರಿಣಿಯೇ ಎಲ್ಲಕ್ಕಿಂತಲೂ ಹೆಚ್ಚು. ಅದಕ್ಕೆ ಬುನಾಧಿಯನ್ನು ದೀನದಯಾಳರು ಹಾಕಿಕೊಟ್ಟಿದ್ದು ಹೀಗೆ. ಬಿಹಾರಕ್ಕೆ ಮಾತು ಕೊಟ್ಟಹಾಗೆ ದಿನಾಂಕ ೧೦ರಂದು ದೆಹಲಿ ಕಾರ್ಯಕ್ರಮವನ್ನು ರದ್ಧುಗೊಳಿಸಿ ಪಾಟ್ನಾಕ್ಕೆ ಹೊರಟರು ದೀನದಯಾಳಜಿ.
ತುರಾತುರಿಯಲ್ಲಿ ಪಾಟ್ನಾ ಗಾಡಿಯಲ್ಲಿ ಟಿಕೇಟುಕೊಳ್ಳಲಾಯಿತು. ಯಾವತ್ತಿಗೂ ಪ್ಯಾಸೆಂಜರ್ ಗಾಡಿಯಲ್ಲಿ ಪ್ರಯಾಣ ಮಾಡುತ್ತಿದ್ದವರನ್ನು ಕಾರ್ಯಕರ್ತರು ಒಪ್ಪಿಸಿ ಪಠಾನ್‌ಕೋಟ್-ಸ್ಯಾಲ್‌ದಹ ಎಕ್ಸ್ ಪ್ರೆಸ್ ರೈಲಿನ ಪ್ರಥಮ ದರ್ಜೆ ಟಿಕೇಟನ್ನು ಕೊಡಿಸಿದ್ದರು. ಮೊದಲಿನಿಂದಲೂ ಅವರಿಗೆ ಎಕ್ಸ್ ಪ್ರೆಸ್ ರೈಲುಗಳೆಂದರೆ ಇಷ್ಟವಿರಲಿಲ್ಲ. ಪ್ಯಾಸೆಂಜರ್ ಗಾಡಿಗಳಾದರೆ ರೈಲುನಿಲ್ದಾಣದಲ್ಲೇ ಒಂದು ಸುತ್ತಿನ ಬೈಠಕ್ಕುಗಳನ್ನು ತೆಗೆದುಕೊಳ್ಳಬಹುದೆಂದು ದೀನದಯಾಳರು ಭಾವಿಸಿದ್ದರು. ಆದರೂ ಕಾರ್ಯಕರ್ತರ ಒತ್ತಾಯಕ್ಕೆ ಮಣಿದ ಅವರು ಎಕ್ಸ್ ಪ್ರೆಸ್ ರೈಲಿನಲ್ಲೇ ಪಾಟ್ನಾಕ್ಕೆ ಪಯಣ ಬೆಳೆಸಿದರು. ಅಧ್ಯಕ್ಷರಾದ ನಂತರ ಅವರ ಮೊದಲ ಪಾಟ್ನಾ ಪ್ರವಾಸವಾದುದರಿಂದ ಆ ಪ್ರವಾಸ ಮಹತ್ತ್ವದಿಂದ ಕೂಡಿತ್ತು. ಪಕ್ಷದ ಮುಂದಿನ ನಡೆಗಳ ಬಗ್ಗೆ ಕಾರ್ಯಕಾರಿಣಿಯಲ್ಲಿ ಮಹತ್ವದ ನಿಲುವುಗಳು ಚರ್ಚೆಯಾಗುವುದರಲ್ಲಿತ್ತು.
ರೈಲು ಸಂಜೆ ೭ಗಂಟೆಗೆ ಲಖ್ನೌ ನಿಲ್ದಾಣ ಬಿಟ್ಟಿತು. ಉತ್ತರ ಪ್ರದೇಶದ ನಾಯಕರು ಅವರನ್ನು ಬೀಳ್ಕೊಡಲು ನಿಲ್ದಾಣಕ್ಕೆ ತೆರಳಿದ್ದರು. ಹಾಸುವ ಮತ್ತು ಹೊದೆಯುವ ಎರಡು ವಸ್ತ್ರಗಳು, ಒಂದು ಜೋಳಿಗೆಯಲ್ಲಿ ಎರಡು ಜೊತೆ ಬಟ್ಟೆ ಮತ್ತು ಹತ್ತಾರು ಪುಸ್ತಕಗಳು, ಒಂದು ಡೈರಿಯನ್ನು ಹೊತ್ತು ದೀನದಯಾಳರು ಡಬ್ಬಿ ಏರಿದರು. ರೈಲು ಹೊರಟ ನಂತರ ಡೈರಿಯಲ್ಲಿ ಏನೇನೋ ಗೀಚುತ್ತಾ, ಟಿಪ್ಪಣಿ ಮಾಡಿಕೊಳ್ಳುತ್ತಾ ಇದ್ದಂತೆ ಔನ್‌ಪುರ ನಿಲ್ದಾಣವೂ ಬಂದುಬಿಟ್ಟಿತ್ತು. ಔನ್‌ಪುರ ದೀನದಯಾಳರ ಕರ್ಮಭೂಮಿ. ಅಲ್ಲಿನ ಮನೆಮನೆಯೂ ಅವರ ಮನೆಯೇ. ಪ್ರಚಾರಕರಾಗಿ ಅವರು ಕಣ್ಣು ತೆರೆದಿದ್ದೇ ಔನ್‌ಪುರದಲ್ಲಿ. ಆ ರಾತ್ರಿಯಲ್ಲೂ ದೀನದಯಾಳರನ್ನು ನೋಡಲು ಜನ ಸೇರಿದ್ದರು. ಅವರಲ್ಲೊಬ್ಬ ಹುಡುಗ ‘ಪಂಡಿತ್‌ಜಿ’ ಎಂದು ಜಂಗುಳಿಯ ಹಿಂದಿನಿಂದ ದೀನದಯಾಳರನ್ನು ಕೂಗಿದ. ೨೦ ವರ್ಷದ ಹಿಂದೆ ಆ ತುಂಟ ಹುಡುಗನನ್ನು ದೀನದಯಾಳರು ಶಾಖೆಗೆ ಕರೆತಂದಿದ್ದರು. ನೆರೆದಿದ್ದ ಜನಸಂಘದ ಅಧಿಕಾರಿಗಳನ್ನು ಲೆಕ್ಕಿಸದೆ ದೀನದಯಾಳರು ‘ಅರೆ ರಾಜು’ ಎಂದರು. ಓಡೋಡಿ ಬಂದ ಯುವಕ ರಾಜುವನ್ನು ಅಪ್ಪಿಕೊಂಡ ದೀನದಯಾಳ್ ಕೇಳಿದ ಮೊದಲ ಪ್ರಶ್ನೆಯೇ ‘ಈಗ ಶಾಖೆಯ ಜವಾಬ್ದಾರಿ ಏನಿದೆ?’ ರಾಜು ಈಗ ಕಾರ್ಯವಾಹನಾಗಿದ್ದ. ಹಿಂದೆ ದೀನದಯಾಳರು ಔನ್‌ಪುರ ಬಿಟ್ಟುಹೋಗುವಾಗ ಆತ ಅವರನ್ನು ತಬ್ಬಿ ಅತ್ತಿದ್ದ. ಪುನಃ ಅಂಥದ್ದೇ ಆಲಿಂಗನ. ಪಂಡಿತ್‌ಜಿ ನಮ್ಮನ್ನು ಬಿಟ್ಟು ಎಲ್ಲಿಗೋ ಹೋಗುತ್ತಾರೇನೋ ಎಂಬಂತೆ! ರೈಲು ಕೆಲವೇ ನಿಮಿಷಗಳು ಅಲ್ಲಿ ನಿಲ್ಲುತ್ತಿತ್ತು. ಕಾರ್ಯಕರ್ತರು ಕೊಟ್ಟ ಒಂದೆರಡು ಹಣ್ಣನ್ನು ಜೋಳಿಗೆಯಲ್ಲಿ ತುಂಬಿಸಿ, ಶಾಲನ್ನು ಹೊದ್ದು ಪಂಡಿತ್‌ಜೀ ಕುಳಿತರು. ರೈಲು ಕೂಗುಹಾಕಿತು.
ಮುಂದಿನ ನಿಲ್ದಾಣ ಮೊಗಲ್‌ಸರಾಯ್.
ಮೊಗಲ್‌ಸರಾಯ್ ನಿಲ್ದಾಣವೇನೂ ಆಗ ಇತಿಹಾಸ ಪ್ರಸಿದ್ಧವಾಗಿರಲಿಲ್ಲ. ಮಹಾತ್ಮರು ನಡೆದ, ಮಲಗಿದ, ಕುಳಿತ, ನಿಂತ ಜಾಗಗಳೆಲ್ಲವೂ ಪುಣ್ಯಕ್ಷೇತ್ರಗಳಾಗುವಂತೆ ಮುಂದೆ ಮೊಗಲ್ ಸರಾಯ್ ಕೂಡಾ ಆ ಗಳಿಗೆಗೆ ಕಾಯುತ್ತಿತ್ತು. ರಾತ್ರಿ ೧೨ ಗಂಟೆ, ೧೨ ನಿಮಿಷಕ್ಕೆ ಔನ್‌ಪುರದಿಂದ ಹೊರಟ ರೈಲು ಮೊಗಲ್‌ಸರಾಯ್ ಮುಟ್ಟುವಾಗ ಗಂಟೆ ೨.೧೫. ಫ್ಲಾಟ್ ಫಾರ್ಮ್ ನಂಬರ್ ೧ರಲ್ಲಿ ನಿಂತ ಆ ಪಠಾನ್‌ಕೋಟ್-ಸ್ಯಾಲ್‌ದಹ ಎಕ್ಸ್‌ಪ್ರೆಸ್‌ನ ಕೆಲವು ಬೋಗಿಗಳನ್ನು ಕಳಚಿ ಇನ್ನೇನು ಕೆಲವೇ ಕ್ಷಣದಲ್ಲಿ ಬರಲಿರುವ ದೆಹಲಿ-ಹಾವ್ಡಾ ಎಕ್ಸ್‌ಪ್ರೆಸಿಗೆ ಜೋಡಿಸಲಾಗುತ್ತಿತ್ತು. ಅವೆಲ್ಲಾ ಪ್ರಕ್ರಿಯೆಗಳು ಮುಗಿದು ರೈಲು ಹೊರಟಾಗ ಗಂಟೆ ೨.೫೦. ಪಠಾನ್‌ಕೋಟ್-ಸ್ಯಾಲ್‌ದಹ ಎಕ್ಸ್‌ಪ್ರೆಸ್ ಮತ್ತೊಮ್ಮೆ ಕೂಗುತ್ತಾ, ಹೊಗೆಯುಗುಳುತ್ತಾ ಹೊರಟಿತು. ಫೆಬ್ರವರಿಯ ಮಂಜು ದಟ್ಟವಾಗಿ ಕವಿದಿತ್ತು. ಅದರ ಗಮ್ಯ ಪಾಟ್ನಾ.
ಮೊಗಲ್‌ಸರಾಯ್ ನಿಲ್ದಾಣ. ಸಮಯ ೩.೪೫. ಜನ ಚಳಿ ಕಾಯಿಸಿಕೊಳ್ಳುತ್ತಿದ್ದರು. ಕೆಲವರು ಚುಟ್ಟಾ ಸೇದುತ್ತಿದ್ದರು. ಸ್ಟೇಷನ್ನಿನ ಲಿವರ್ ಮ್ಯಾನ್ ಸ್ಟೇಷನ್‌ಮಾಷ್ಟರ ಬಳಿ ಏದುಸಿರುಬಿಡುತ್ತಾ ಬಂದು ವಿದ್ಯುತ್ ಕಂಬ ನಂಬರ್ ೧೨೭೬ರ ಬಳಿ ಜಲ್ಲಿ ಕಲ್ಲುಗಳ ಮೇಲೆ ಶವವೊಂದನ್ನು ಬಿದ್ದಿರುವುದಾಗಿಯೂ, ದೇಹದ ತುಂಬಾ ಅಮಾನುಷವಾಗಿ ಇರಿಯಲಾಗಿದೆಯೆಂದೂ, ಕೆಲವು ಹೊತ್ತಿನ ಮುಂಚೆಯಷ್ಟೆ ಕೊಲೆ ನಡೆದಿರಬಹುದೆಂದೂ ತಿಳಿಸಿದ. ಸ್ಟೇಷನ್ ಮಾಸ್ಟರ್ ನಿರ್ಭಾವುಕತೆಯಿಂದ ಪೊಲೀಸರಿಗೆ ತಿಳಿಸಿದ. ಪೊಲೀಸರು ರಕ್ತ ಸೋರುತ್ತಿದ್ದ ದೇಹವನ್ನು ಪ್ಲಾಟ್‌ಫಾರ್ಮ್ ಮೇಲೆ ಮಲಗಿಸಿದರು. ಕುತೂಹಲದಿಂದ ಜನ ಸುತ್ತ ನೆರೆದರು. ದಿಕ್ಕಿಲ್ಲದೆ ಬಿದ್ದಿದ್ದ ಶವವನ್ನು ಪೊಲೀಸರೂ ಹೆಚ್ಚು ತಲೆಕೆಡಿಸಿಕೊಳ್ಳಲು ಹೋಗಲಿಲ್ಲ. ಏನೇನೋ ಬರೆದುಕೊಳ್ಳುತ್ತಿದ್ದಂತೆ ಗುಂಪಿನಲ್ಲಿದ್ದಾಗ ಜನರ ಗುಂಪಿನಲ್ಲಿದ್ದವರೊಬ್ಬರು ‘ಪಂಡಿತ್ ಜೀ’ ಎಂದು ಚೀರಿದ. ಸ್ಟೇಷನ್ ಮಾಸ್ಟರ್, ಪೊಲೀಸರೆಲ್ಲರೂ ಧಿಗಿಲುಗೊಂಡಿದ್ದ ಆತನನ್ನು ಕುಳ್ಳಿರಿಸಿ ಕೇಳಿದರು. ‘ನಿಮಗಿವರು ಗೊತ್ತೇ?’, ಆತ ‘ನನಗೇನು ಇಡೀ ದೇಶಕ್ಕೇ ಇವರು ಗೊತ್ತು. ಇವರು ಜನಸಂಘದ ದೀನದಯಾಳ ಉಪಾಧ್ಯಾಯರು’ ಎಂದ. ನೆರೆದಿದ್ದವರೆಲ್ಲಾ ಬೆಚ್ಚಿಬಿದ್ದರು.ಇಂಥವರೂ ಕೊಲೆಯಾಗುತ್ತಾರಾ ಎಂಬುದನ್ನು ಅಲ್ಲಿದ್ದವರಾರಿಗೂ ಅರಗಿಸಿಕೊಳ್ಳಲಾಗಲಿಲ್ಲ. ಆದರೂ ಕಠೋರ ವಾಸ್ತವವನ್ನು ಒಪ್ಪಿಕೊಳ್ಳಲೇಬೇಕಿತ್ತು. ಹತ್ತನೆ ತರಗತಿಯಲ್ಲಿ ಫೈಲಾದ ಮಕ್ಕಳಿಗೆ ಜೀರೋ ಅಸೋಷಿಯೇಶನ್ ಕಟ್ಟಿದ ಬಾಲಕ, ಏನೇನೋ ಆದರ್ಶಗಳನ್ನು ನಂಬಿ ಶಾಖೆಯ ಶೀಟಿಗೆ ಸೆಟೆದು ನಿಂತು ದಕ್ಷ ಮಾಡುತ್ತಿದ್ದ ಯುವಕ, ಶಂಕರಾಚಾರ್ಯರ-ಚಂದ್ರಗುಪ್ತ-ಶ್ರೀಕ್ರಷ್ಣರ ಪುಸ್ತಕ ಬರೆದಿದ್ದ ಪ್ರಚಾರಕ, ನೆಹರೂರಂಥವರಿಗೂ ನಡುಕ ಹುಟ್ಟಿಸಿದ ಧೀಮಂತ, ಮೊನಚು ಅಕ್ಷರಗಳನ್ನು ಪೋಣಿಸುತ್ತಿದ್ದ ಪತ್ರಕರ್ತ, ಸೂರ್ಯನ ಕೆಳಗಿದ್ದ ಸಂಗತಿಗಳೆಲ್ಲವನ್ನೂ ತಜ್ಞತೆಯಿಂದ ಮಾತಾಡುತ್ತಿದ್ದ ವಾಗ್ಮಿ ಕಗ್ಗತ್ತಲ ರಾತ್ರಿಯಲ್ಲಿ ಯಾರದ್ದೋ ದ್ವೇಷಕ್ಕೆ ಬಲಿಯಾಗಿಹೋಗಿದ್ದರು. ಅವರು ಯಾರನ್ನು ತಾನೇ ದ್ವೇಷ ಮಾಡಿದ್ದರು? ಚೀನಾ ವಿವಾದದ ತಾರಕಕ್ಕೇರಿದ ಒಂದು ಸಂದರ್ಭದಲ್ಲಿ ಅವರು ನೆಹರೂರನ್ನೂ ಕೂಡಾ ಸಮರ್ಥಿಸಿಕೊಂಡಿದ್ದರು. ಕಾಂಗ್ರೆಸನ್ನು ನೇರವಾಗಿ ನೀವು ನಿಮ್ಮತನವನ್ನು ಮರೆಯಬೇಡಿ ಎಂದು ಎಚ್ಚರಿಸಿದ್ದರು. ಯಾವ ಪ್ರಾದೆಶಿಕತೆಯನ್ನೂ ಮರೆಯಬೇಡಿ ಎಂದಿದ್ದರು, ಕಮ್ಯುನಿಸ್ಟರೇ ತಿದ್ದಿಕೊಳ್ಳಿ ಎಂದಿದ್ದರು. ಅವರು ಯಾರಲ್ಲೂ ಕಾಲು ಕೆರೆದು ವಾದಕ್ಕೆ ಹೋಗಲಿಲ್ಲ. ಆದರೂ ಅವರನ್ನು ಕೊಂದರು. ಯಾರು ಕೊಂದರೆಂದು ಹೇಳೋಣ? ಅವರ ಅಂತಿಮದರ್ಶನಕ್ಕೆ ಬಂದಿದ್ದವರೆನ್ನುವುದೇ? ಹಫ್ತಾ ನೀಡಿ ಕೊಲೆ ಮಾಡಿಸಿದರೆನ್ನುವುದೇ? ಕೆಲವು ದೇಶಗಳಿಗೆ ಭಾರತದಲ್ಲಿ ದೀನದಯಾಳರಂಥವರು ಬದುಕಿರಬಾರದು ಎನಿಸಿತ್ತೇ? ಇಂದಿಗೂ ಆ ಸಾವಿಗೆ ಉತ್ತರ ಸಿಕ್ಕಿಲ್ಲ.
ಹಾಗಾಗಿ ಆ ಸಾವನ್ನು ಅವರ ಹುಟ್ಟುಹಬ್ಬದ ದಿನವೂ ಮರೆಯಬಾರದು. ದಧೀಚಿ ತನ್ನ ಬೆನ್ನುಮೂಳೆಯನ್ನು ಕೊಟ್ಟಾಕ್ಷಣ ದಧೀಚಿಯನ್ನು ಮರೆಯಲಾದೀತೇ?
ಆ ಕಾಲದಲ್ಲೂ ದೀನದಯಾಳರ ಸಾವಿನ ಸುದ್ಧಿ ದೇಶದ ಉದ್ದಗಲಕ್ಕೆ ವೇಗವಾಗಿ ಮುಟ್ಟಿತು. ಎಲ್ಲಾ ಸಭೆಗಳು, ಕಾರ್ಯಕಾರಿಣಿಯೂ ರದ್ದಾದವು. ಅವರ ಶರೀರವನ್ನು ಸಮೀಪದ ವಾರಣಾಸಿಗೆ ತರಲಾಯಿತು. ಗುರೂಜಿಯಂಥಾ ಸಂತನೇ ಆ ದೇಹವನ್ನು ನೋಡಿ ಕುಗ್ಗಿಹೋದರು. ಅವರ ಮುಖವನ್ನು ಅಪ್ಪಿಕೊಂಡರು. ವಿಷಾದದಿಂದ “ಬಹಳ ಜನಗಳು ಕುಟುಂಬವನ್ನು ನಡೆಸುತ್ತಾರೆ. ಅವರಿಗೆ ಮರಣದ ತೀವ್ರತೆ ಹೆಚ್ಚಾಗಿ ತಟ್ಟುತ್ತದೆ. ನಾನೇನೂ ಕುಟುಂಬವನ್ನು ನಡೆಸುತ್ತಿಲ್ಲ. ಆದರೂ ಈ ಮರಣ ನನ್ನನ್ನು ಅಲ್ಲಾಡಿಸಿದೆ” ಹಾಗಾದರೆ ದೀನದಯಾಳರು ಹೇಗೆ ಬದುಕಿದ್ದಿರಬಹುದು? ಅದೆಂಥಾ ವ್ಯಕ್ತಿತ್ವವಾಗಿರಬಹುದು? ವಾರಣಾಸಿಯಿಂದ ಅವರ ದೇಹವನ್ನು ವಿಮಾನದ ಮೂಲಕ ದೆಹಲಿಗೆ ಕೊಂಡೊಯ್ಯಲಾಯಿತು. ಬದುಕಿದ್ದಾಗ ಪ್ಯಾಸೆಂಜರ್ ರೈಲಿನ ಮೂರನೆ ದರ್ಜೆಯ ಪ್ರಯಾಣಿಕನ ನಿರ್ಜೀವ ದೇಹ ದೆಹಲಿ ತಲುಪಿದಾದ ಸಮಸ್ತ ದೆಹಲಿ ಶೋಕಸಾಗರದಲ್ಲಿ ಮುಳುಗಿತು. ಅಂಗಡಿಗಳು ಮುಚ್ಚಿದವು. ರಾಷ್ಟ್ರಪತಿ-ಪ್ರಧಾನಮಂತ್ರಿಗಳು ಅಂತಿಮ ದರ್ಶನ ಪಡೆದರು. ಶವಯಾತ್ರೆಯ ಹಿಂದೆ ಸೈನಿಕರು ಅಶ್ವಾರೋಹಿ ಸೈನಿಕರು ನಡೆದರು. ಗಾಯತ್ರಿ ಮಂತ್ರಗಳು ಪಠನವಾದವು. ಸಂಜೆ ಆರು ಗಂಟೆಯ ಹೊತ್ತಿಗೆ ಚಿತೆಗೇರಿದ ಪಂಡಿತ್‌ಜೀ ದೇಹ ಕೆಲವೇ ಗಂಟೆಗಳಲ್ಲಿ ಭಸ್ಮವಾಯಿತು. ಕೆಲದಿನಗಳು ಗಾಳಿಸುದ್ಧಿಗಳು ಹರಡಿದವು. ಕೊಂದವರು ಅವರಂತೆ, ಇವರಂತೆ ಎಂದು ಜನ ಮಾತಾಡಿಕೊಂಡರು. ಆದರೆ ಸಂಘವಾಗಲೀ, ಜನಸಂಘವಾಗಲೀ ಯಾರೊಬ್ಬರತ್ತವೂ ಬೊಟ್ಟು ಮಾಡಲಿಲ್ಲ. ಈಶ್ವರನೇ ಕರೆಸಿಕೊಂಡ ಎಂದುಕೊಂಡು ಅವರ ದಾರಿಯಲ್ಲಿ ನಡೆದರು.
ದೀನದಯಾಳರು ಹೇಗೆ ಬದುಕಿದ್ದರೋ ಹಾಗೆ ಅವರು ಸಾವಿನಲ್ಲೂ ಹಲವು ಸಂದೇಶಗಳನ್ನು ಕಾರ್ಯಕರ್ತರಿಗೆ ಬಿಟ್ಟುಹೋಗಿದ್ದರು. ಒಬ್ಬ ಸಂಘದ ಪ್ರಚಾರಕ ರಾಜಕೀಯ ಕ್ಷೇತ್ರದಲ್ಲಿ ಎಂಥಾ ಕತ್ತಿಯಂಚಿನಲ್ಲಿ ನಡೆಯಬೇಕು ಎನ್ನುವುದನ್ನು ತೋರಿಸಿದ್ದರು. ಕಾರ್ಯಕಾರಿಣಿಗಿಂತ ಬೇರಾವುದೂ ಮೇಲಲ್ಲ ಎಂದು ಹೇಳಿಹೋಗಿದ್ದರು. ಕಾರ್ಯಕರ್ತನ ಪ್ರವಾಸ ಹೇಗಿರಬೇಕೆಂದು ಹೇಳುತ್ತಲೇ ಮಹಾಪಯಣ ಮಾಡಿಬಿಟ್ಟಿದ್ದರು. ಶಾಖೆಗಳಲ್ಲಿ ದಧೀಚಿಯ ಕಥೆ ಹೇಳುತ್ತಾ ತಾವೇ ದಧೀಚಿಯಾಗಿದ್ದರು. ಅವರನ್ನು ಮರೆಯುವುದು ಸಾಧ್ಯವೇ ಇಲ್ಲವೆನ್ನುವಂತೆ ಬದುಕಿದರು ಮತ್ತು ಹಾಗೇ ಸತ್ತರು. ಅದಕ್ಕೇ ಅವರ ಜನ್ಮಶತಮಾನದ ಹಬ್ಬವನ್ನು ಇಂದು ಹಲವು ಸರ್ಕಾರಗಳು ಆಚರಿಸುತ್ತಿವೆ. ಅವರು ಬಿತ್ತಿದ ಬೀಜ ಹೆಮ್ಮರವಾಗಿದೆ. ಅದು ಹೇಗೆ ಹೆಮ್ಮರವಾಯಿತು ಎಂಬ ಮೂಲವನ್ನು ಹುಡುಕುತ್ತಾ ಹೋದರೆ ದೀನದಯಾಳರು ಸಿಗುತ್ತಾರೆ. ಇಂದಿನ ಕಾಂಗ್ರೆಸ್ ಮುಕ್ತವಾಗುತ್ತಿರುವ ಭಾರತ, ಕಮ್ಯುನಿಸ್ಟರ ಅಸಹನೆ, ಮುಂದುವರಿದ ಅವರ ರಕ್ತಪಾತ, ಚೀನಾ ತಂಟೆ, ಪಾಕ್ ಪ್ರಾರಬ್ದ, ಬಿಜೆಪಿಯಾದ ಜನಸಂಘದಲ್ಲಿ ಇಂದೇನಾಗುತ್ತಿದೆ, ಕಾಳೆಷ್ಟು ಜಳ್ಳೆಷ್ಟು, ಕಾರ್ಯಕಾರಿಣಿಯನ್ನು ಕಾರ್ಯಕರ್ತರು ಎಷ್ಟು ಗಂಭೀರವಾಗಿ ಪರಿಗಣಿಸುತ್ತಿದ್ದಾರೆ, ಏಕೆ ಗಂಭೀರವಾಗಿ ಪರಿಗಣಿಸಬೇಕು ಮುಂತಾದ ಸಿದ್ಧಾಂತಗಳ ವಿವರಣೆಗೆ ವಿಶ್ವಕೋಶ ದೀನದಯಾಳ ಉಪಾಧ್ಯಾಯರು.
ಇಂದು ದೇಶದ ಪ್ರತೀ ಭಾಜಪ ಕಾರ್ಯಾಲಯಗಳಲ್ಲಿ ದೀನದಯಾಳರ ಚಿತ್ರಪಟ ನೇತಾಡುತ್ತಿದೆ. ಅವನ್ನೆಲ್ಲಾ ನೋಡುವಾಗ, ದೀನದಯಾಳರ ಬಗ್ಗೆ ಎರಡಕ್ಷರ ಓದಿದವನಿಗೆ ಆ ಚಿತ್ರವೇನೋ ಹೇಳಲು ಹೊರಟಿದೆ ಎನಿಸದೇ ಇರದು. ಏಕೆಂದರೆ ಅವನಿಗದು ಬರೀ ಚಿತ್ರವಲ್ಲ, ಇನ್ನೇನೋ ಒಂದು. ಚಿತ್ರಕ್ಕಿಂತಲೂ ಮೇಲೆ. ದಧೀಚಿಗೆ ಹತ್ತಿರ.