ನಂಬುಗೆಯೆಂಬ ಅಡಿಪಾಯದಲ್ಲಿ ವೈಚಾರಿಕತೆಯ ಸ್ಥಾನ
– ಸುಜಿತ್ ಕುಮಾರ್
ಮಾನವನ ದಿನನಿತ್ಯದ ಕಾರ್ಯಚಟುವಟಿಕೆಗಳನ್ನು ಎರಡು ವಿಧಗಳಾಗಿ ವಿಂಗಡಿಡಬಹುದು. ಒಂದು ವ್ಯಾವಹಾರಿಕ ಮತ್ತೊಂದು ಭಾವನಾತ್ಮಕವಾದದ್ದು. ಈ ಎರಡು ಚಟುವಟಿಕೆಗಳು ಹಾಗು ಅವುಗಳ ಮೂಲವಾಗಿರುವ ಗುಣಗಳು ಒಂದಕೊಂದು ಎಷ್ಟು ತದ್ವಿರುದ್ದವೋ ಅಷ್ಟೇ ಒಂದಕೊಂದು ಪೂರಕ. ಒಬ್ಬ ಮನುಷ್ಯ ತಾನು ಅದೆಷ್ಟೇ ಸಾತ್ವಿಕ ನಡವಳಿಕೆಯ ಮಹಾಪುರುಷನೇ ಆಗಿದ್ದರೂ ವ್ಯವಹಾರದ ವಿಷಯಕ್ಕೆ ಬಂದಾಗ ಅಲ್ಲಿ ಆತ ಮಹಾ ಚಾಣಕ್ಯನಾಗಿರುತ್ತಾನೆ. ಆತ ಒಬ್ಬ ಉತ್ತಮ ಸೇಲ್ಸ್ ಮ್ಯಾನ್ ಆಗಿದ್ದರೆ ಒಂದಲ್ಲ ಒಂದು ಬಗೆಯಲ್ಲಿ ತನ್ನ ಸರಕನ್ನು ಮಾರುವ ವ್ಯಾವಹಾರಿಕ ಜ್ಞಾನ, ಮಾತಿನ ತಂತ್ರಗಾರಿಕೆ, ನಿಪುಣತೆ ಹಾಗು ಇನ್ನು ಹಲವು ಹತಾರಗಳು ಆತನ ಬತ್ತಳಿಕೆಯಲ್ಲಿರುತ್ತವೆ. ಆ ಕೆಲಸವೊಂದನ್ನು ಮಾಡುವಾಗ ಆತ ತನ್ನ ಸಾತ್ವಿಕ ನಡವಳಿಕೆಯ ಭಾವನಾತ್ಮಕ ಗುಣವನ್ನು ಕೆಲಕಾಲದವರೆಗೆ ಎಲ್ಲೋ ಒಂದೆಡೆ ಭದ್ರವಾಗಿ ಮಲಗಿರಿಸಿ ಬರಬೇಕಾಗುತ್ತದೆ. ಇಲ್ಲವಾದಲ್ಲಿ ಇಂದಿನ ವ್ಯಾವಹಾರಿಕ ಪ್ರಪಂಚದಲ್ಲಿ ಆತನಂತಹ ವ್ಯಕ್ತಿಗಳು ‘ಮುಂದುವರೆದ’ ಅಥವಾ ‘ಬೆಳೆದ’ ಎಂದು ಕರೆಸಿಕೊಳ್ಳುವುದು ಕಷ್ಟ ಸಾಧ್ಯ. ಮುಂದಿರುವ ವ್ಯಕ್ತಿ ಸೇರಾದರೆ ಈತ ಸವಸೇರಾಗಿರಲೇಬೇಕು. ಇಂತಹ ಒಂದು ವ್ಯಾವಹಾರಿಕ ಗುಣ ಜಗತ್ತಿನ ಭಾಗಶಃ ಜನರ ಪ್ರಸ್ತುತ ವಸ್ತುಸ್ಥಿತಿ. ಇಲ್ಲಿ ಪ್ರತಿಯೊಂದು ವಿಷಯಗಳನ್ನು ಒರೆಹಚ್ಚಿ, ಪ್ರೆಶ್ನಿಸಿ, ಪರಿಕ್ಷಿಸಿ ನೋಡಲಾಗುತ್ತದೆ. ಕೊಳ್ಳುವ, ಕೇಳುವ, ನೋಡುವ ಅಲ್ಲದೆ ಆಡುವ ಮೊದಲೂ ವಿಷಯಗಳ ಪಚನಕ್ರಿಯೆ ಬಹುವಾಗಿ ಆಗುತ್ತದೆ.
ಅದೇ ಮಾನವನನಲ್ಲಿ ಇರುವ ಮತ್ತೊಂದು ಕಂಡೂ ಕಂಡರಿಯದಂತಹ ಗುಣವೇ ಭಾವನಾತ್ಮಕ ಗುಣ. ಇಲ್ಲಿ ಭಾವನೆಗಳದ್ದೇ ಮೇಲುಗೈ. ಇಲ್ಲಿ ಪ್ರೆಶ್ನಿಸುವ, ಪರೀಕ್ಷಿಸುವ ಗುಣಗಳಿಗೆ ಹೆಚ್ಚಾಗಿ ಆಸ್ಪದವಿರುವುದಿಲ್ಲ. ಯಾರೋ ಊದುವ ಪೀಪಿಗೆ ತಲೆಯಾಡಿಸುತ್ತಾ, ಅವರ ಜೈಕಾರಕ್ಕೆ ಜೈಕಾರವೊಂದು ತನಗರಿಯದಂತೆ ಒಳಗೊಳಗೆ ಮೂಡಿಬರುತ್ತದೆ. ಇಲ್ಲಿ ವಿಷಯಗಳ ಹೇರಿಕೆಗಿಂತ ಜನರಲ್ಲಿರುವ ಅಂತರಂಗದ ಮುಗ್ದತೆಯೇ ಪಾಪದ್ದು ಎನ್ನಬಹುದು. ಹಿರಿಯರು ಅಥವ ಹತ್ತಿರದವರು ಮಾಡುವ ಕಾರ್ಯಗಳು, ವಿಚಾರಗಳು ಇಲ್ಲಿ ಯಥಾವತ್ತಾಗಿ ಕಾಪಿಯೊಡಯಲ್ಪಡುತ್ತವೆ. ಏನು ಮಾಡುತ್ತಿದ್ದಾರೆ, ಏಕೆ ಮಾಡುತ್ತಿದ್ದಾರೆ ಎಂಬುದಕ್ಕಿಂತ
‘ಯಾರು’ ಮಾಡುತ್ತಿದ್ದಾರೆ ಎಂಬುದೇ ಮುಖ್ಯವಾಗಿರುತ್ತದೆ. ಅವರು ಸರಿ ಎಂದರೆ ಸರಿ, ತಪ್ಪೆಂದರೆ ತಪ್ಪು. ಈ ಬಗೆಯ ಒಂದು ಭಾವನಾತ್ಮಕ ಅಂಧತ್ವದ ಗುಣವದು.
ಈ ಎರಡು ಬಗೆಗಳನ್ನು ಇಲ್ಲಿ ಪ್ರಸ್ತಾಪಿಸಲು ಕಾರಣ ಬಹಳಷ್ಟಿದೆ. ಪ್ರಸ್ತುತ ಆಗುಹೋಗುಗಳನ್ನು ಗಮನಿಸಿದಾಗ ಈ ಎರಡೂ ಬಗೆಯ ಗುಣಗಳು ಹಾಗು ಅದರಿಂದ ಸಮಾಜದ ಮೇಲೆ ಬೀಳಬಹುದಾದ ಪರಿಣಾಮಗಳನ್ನು ನಿಸ್ಸಂದೇಹವಾಗಿ ಊಹಿಸಬಹುದಾಗಿದೆ. ಇಂದು ಕೋತಿ ತಾನು ಕೆಡುವುದಲ್ಲದೆ ಇಡೀ ವನವನ್ನೇ ಕೆಡಿಸಿತು ಅನ್ನುವ ಹಾಗೆ ಒಬ್ಬ ವ್ಯಕ್ತಿ ತನ್ನೊಳಗಿನ ನಂಬುಗೆ ಹಾಗು ವಿಚಾರಗಳನ್ನು ನನ್ನವರು ನಮ್ಮವರು ಎಂಬುವವರ ಮೇಲೆಲ್ಲಾ ಹರಿಸಲು ಆವಣಿಸುತ್ತಾನೆ. ನನ್ನವರು ನಮ್ಮವರು ಆಂದಮೇಲೆ ನನ್ನ ದಾರಿಯನ್ನೇ ಅನುಕರಿಸಬೇಕು ಎಂದು ಇಚ್ಛಿಸುತ್ತಾನೆ. ಆ ವಿಚಾರ ವ್ಯಕ್ತಿನಿಷ್ಠವಾಗಿರಬಹುದು, ವಸ್ತುನಿಷ್ಠವಾಗಿರಬಹದು ಅಥವಾ ಮತ್ತೇನೋ ಒಂದು ಆಗಿರಬಹುದು. ಉದಾಹರಣೆಗೆ ಪ್ರಸ್ತುತ ಆದ್ಯಾತ್ಮಿಕ ವಲಯದಲ್ಲಿ ಕಾಣಿಸಿಕೊಳ್ಳುವ , ದೇವರಿಗಿಂತ ಕೇವಲ ಇಂಚಷ್ಟೇ ಸಣ್ಣವರೋ ಅಥವಾ ಸರಿಸಮಾನರೋ ಅಥವಾ ಅವನಿಗಿಂತಲೂ ಮಿಗಿಲೋ ಎಂಬ ಒಂದು ಇಮೇಜ್ ಅನ್ನು ಅಂತಹವರು ತಾವಾಗಿಯೇ ಮೂಡಿಸಿಕೊಳ್ಳುವುದಕ್ಕಿಂತ ಹೆಚ್ಚಾಗಿ ಆತನ/ಆಕೆಯ ಹಿಂಬಾಲಕರೇ ಸಮಾಜದಲ್ಲಿ ಮೂಡಿಸಿಬಿಡುತ್ತಾರೆ. ಅಂತವರನ್ನು ಆದ್ಯಾತ್ಮಿಕ ಲೋಕದ ಉತ್ತುಂಗದಲ್ಲಿ ಕುರ್ಚಿಯಲ್ಲಿ ಕೂರಿಸಿಬಿಡುತ್ತಾರೆ. ಇಂದು ಮುಂದು ನೋಡದೆ ಅಪ್ಪ ಹಾಕಿದ ಆಲದ ಮರ ಎನ್ನುತ ಮನೆಯ ಇತರರೂ, ನೆರೆಹೊರೆಯವರು, ನೆಂಟರಿಷ್ಟರು ಸಹ ಅಂತಹ ಅನುಕರಣೆಯ ಅಯಸ್ಕಾಂತದೆಡೆ ಆಕರ್ಷಿತರಾಗುತ್ತಾರೆ.
ಭಾವನಾತ್ಮಕ ಗುಣ ಇಲ್ಲಿ ತನ್ನ ಕೈಚಳಕವನ್ನು ತೋರಿಸುತ್ತದೆ. ಹೀಗೆ ಅಂದು ಒಂದೆರೆಡು ಕುಟುಂಬಗಳಿಗೆ ದೇವರಂತೆ ಭಾಸವಾಗುವ ಈ ವ್ಯಕ್ತಿ ಬರಬರುತ್ತಾ ಒಂದು ಊರಿಗೆ, ಜಿಲ್ಲೆಗೆ ಅಷ್ಟೇ ಏಕೆ ಇಡೀ ದೇಶಕ್ಕೆ ದೇವರಂತಾಗಿ ಬಿಡುತ್ತಾನೆ. ಆಗ ಅವನ ಪ್ರವಚನಗಳೇನು? ಹಿತವಚನಗಳೇನು? ಅಬ್ಬಬ್ಬಾ! ಹೀಗೆ ಮಹಾ ಮೇಧಾವಿಗಳೆನಿಸಿಕೊಂಡವರು ಮುಂದೊಂದು ಸಿಂಹಾಸನದ ಮೇಲೆ ಕೂತು ಹೊಲಸು ಕೆಲಸ ಮಾಡಿದಾಗ, ಜನರಲ್ಲ ಹಿಡಿ ಹಿಡಿ ಶಾಪವನ್ನಾಕುತ್ತ ಮನಬಂದಂತೆ ಉಗಿಯತೊಡಗಿದಾಗ, ಪೊಲೀಸ್ ತನಿಖೆಗಳು ಇನ್ನಿಲ್ಲದಂತೆ ನೆಡೆಯತೊಡಗಿದಾಗ ಮಾತ್ರ ಆತನನ್ನು ಎತ್ತಿ ಮೇಲಕ್ಕೆ ಕೂರಿಸಿದವರ ಮುಖ ಕಪ್ಪಾಗುವಂತೆ ಮಾಡುತ್ತದೆ. ಹಣಸಂಪಾದನೆಯ ಬಿಸಿನೆಸ್ ಮ್ಯಾನ್ ಆಗಿ ,ಲಲನೆಯರ ಸ್ಥಾನ ಹಾಗು ಮನವನ್ನೂ ಕುಲಗೆಡಿಸುವ ಕಾಮಿಯಾಗಿ, ರಾಜಕಾರಣಿಗಳ ಜುಟ್ಟನ್ನು ಹಿಡಿದು ತಾನೇ ಪರೋಕ್ಷವಾಗಿ ಅಧಿಕಾರ ನೆಡೆಸುವ ನೇತಾರನಾಗಿ, ಸಿನಿಮಾ ನಟನಾಗಿ, ಒಟ್ಟಿನಲ್ಲಿ ಇಹವೆಲ್ಲ ನಶ್ವರವೆನ್ನುವ ಆತ ಅದೇ ನಶ್ವರ
ಲೋಕದಲ್ಲಿ ಕಪಟ ರಾಜನಂತೆ ಜೀವಿಸುತ್ತಾನೆ.
ಪ್ರಸ್ತುತ ಸುದ್ದಿಯಲ್ಲಿರುವ ಗುರ್ಮಿತ್ ರಾಮ್ ರಹೀಮ್ ಕೂಡ ಇಂತಹ ಅದ್ವಾನತೆಗೆ ಒಂದು ಉತ್ತಮ ಉದಾಹರಣೆ. ಅಲ್ಲದೆ ಹೀಗೆಯೇ ಹಿಂದೆಯೂ ಹತ್ತಾರು ನೂರಾರು ವ್ಯಕ್ತಿಗಳು ತಮ್ಮ ಸುಳ್ಳು ಪರದೆಯನ್ನು ಕಳಚಿ ಸಮಾಜದ ಮುಂದೆ ನಗ್ನವಾಗಿರುವ ಸಂದರ್ಭಗಳು ಅನೇಕ. ಹೀಗೆ ನಗ್ನವಾದ ನಂತರ ರಾಶಿ ರಾಶಿ ಶಪಿಸುವ ನಾವುಗಳು ಇದಕ್ಕೂ ಮೊದಲು ಅದೇ ವ್ಯಕ್ತಿತ್ವಗಳನ್ನು ಭಕ್ತಿಭಾವಗಳಿಂದ ಪೂಜಿಸುವಾಗ ಮಾತ್ರ ಎಳ್ಳಷ್ಟೂ ಅವರ ನಿಜಸ್ಥಿತಿಯ ಬಗ್ಗೆ ಯೋಚಿಸುವುದಿಲ್ಲ. ಆಗೆಲ್ಲ ನಮ್ಮ ವ್ಯಾವಹಾರಿಕ/ವೈಚಾರಿಕ ಜ್ಞಾನ ಸ್ಥಿರ ರಜೆಯಲ್ಲಿ ಮಜಾ ಮಾಡುತ್ತಿರುತ್ತದೆ ಹಾಗು ಕೇವಲ ಭಾವನಾತ್ಮಕ ಜ್ಞಾನ ನಮ್ಮನ್ನು ಆವರಿಸಿರುತ್ತದೆ.
ಇನ್ನು ಗೌರಿ ಲಂಕೇಶ್ ರವರ ಹತ್ಯೆಯ ನಂತರವೂ ಜರುಗುತ್ತಿರುವ ಹಲವು ಘಟನೆಗಳು ಹೆಚ್ಚಾಗಿ ಭಾವನಾತ್ಮಕ ನಿಲುವನ್ನೇ ತಾಳಿವೆ. ಎಡ, ಬಲ, ಕಸ, ಕಡ್ಡಿ ಎಂಬ ಹಳಸುಗಳನ್ನು ಬದಿಗಿಟ್ಟು ಕೇವಲ ಮಾನವೀಯ ದೃಷ್ಟಿಯಿಂದ ಈ ಕೃತ್ಯವನ್ನು ನೋಡಲಾಗದ ವ್ಯಕ್ತಿತ್ವಗಳು ಕಳೆದ ಒಂದು ವಾರದಿಂದ ಎಲ್ಲೆಡೆ ಕಾಣುತ್ತಿವೆ. ಕೃತ್ಯದ ತ್ವರಿತ ವಿಚಾರಣೆಗಿಂತ ಒಬ್ಬರು ಇನ್ನೊಬ್ಬರ ಮೇಲೆ ಕೆಸರೆರಚಿಗೊಳ್ಳುವುದರಲ್ಲೇ ದಿನಗಳು ಕಳೆಯುತ್ತಿವೆ. ನೀರಿಗೆ ಬಿದ್ದ ವ್ಯಕ್ತಿಯನ್ನು ಬದುಕಿಸುವುದ ಬಿಟ್ಟು ಸೆಲ್ಫ್ ಫೊಕ್ಲೆಯ್ಮ್ಡ್ ನ್ಯಾಯಾಲಯಗಳಂತಿರುವ ಟಿವಿ ಸ್ಟುಡಿಯೋಗಳ ಮುಂದೆ ನ್ಯಾಯಾಧೀಶರಂತೆ ವರ್ತಿಸುವ ಸಂಕುಚಿತ ಮನಸ್ಸುಗಳು ಹೀಜಲು ಬಾರದೆ ಕೇವಲ ಬಡಾಯಿ ಕೊಚ್ಚಿಕೊಳ್ಳುವ ವ್ಯಕ್ತಿತ್ವಗಳು.ಇಂತಹ ಚರ್ಚೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಕೊನೆಯಲ್ಲಿ ಮೂಡುವ ಅಂತಿಮ ಚೀರಾಟ ಹಾಗು ಶುರುವಲ್ಲಿ ಪ್ರಸ್ತಾಪಿಸಲಾಗುವ ವಿಷಯಕ್ಕೂ ಅಜಗಜಾಂತರ ವ್ಯತ್ಯಾಸವಿರುತ್ತದೆ. ಅದು ಕೇವಲ ಒಬ್ಬರನೊಬ್ಬರು ನಿಂದಿಸುವ, ಹಣಕಿಸುವ ಕಾರ್ಯಕ್ರಮವಾಗಿರುತ್ತದೆಯೇ ವಿನಃ ಅಲ್ಲಿ ವಿಷಯದ ಅಳವನ್ನು ಮುಟ್ಟುವ ಗೋಜಿಗಂತೂ ಹೋಗುವ ಮಾತೇ ಇಲ್ಲ. ಇನ್ನು ಇಂತಹ ಕಚ್ಚಾಟಕೂಟಗಳನ್ನು ರಾಜ್ಯದ, ದೇಶದ ಘನಂದಾರಿ ಸುದ್ದಿವಾಹಿನಿಗಳು ಬಿತ್ತರಿಸುವ ಅಷ್ಟೂ ತುಣುಕುಗಳನ್ನು ತದೇಕಚಿತ್ತದಿಂದ ನೋಡುವ ಜನತೆಯ ಮೇಲೆ ಬೀರುವ ಪರಿಣಾಮವಾದರೂ ಹೇಳತೀರದ್ದು. ಕುಂಬಳಕಾಯಿ ಕಾಯಿ ಕಳ್ಳ, ಕಳ್ಳನಾದರೆ ಮಾತ್ರ ಹೆಗಲು ಮುಟ್ಟಿ ನೋಡಿಕೊಳ್ಳಬೇಕಲಲ್ಲವೇ?! ಹಾಗಾದರೆ ಸತ್ಯ ಹೊರಬರುವ ಮುನ್ನವೇ ಊಹಾಪೋಹಗಳ ಕಾಲಹರಣವೇಕೆ?.
ಇಲ್ಲಿ ಯಾರೋ ಒಬ್ಬ ನಾಯಕನೆನಿಸಿಕೊಂಡವನು ತಳಬುಡ ಇಲ್ಲದೆಯೇ ನೀಡುವ ಒಂದು ಹೇಳಿಕೆ ಅದು ಸರಿಯೋ ತಪ್ಪೋ ಎಂದು ಪರೀಕ್ಷಿಸುವ ಗೋಜಿಗೂ ಹೋಗದೆ, ಅದೇ ವಾದವನು ಮೊಂಡವಾದವನ್ನಾಗಿ ಮಾಡಿಕೊಂಡು, ಬಾಯಿಗೆ ಬಂದಂತೆ ಅರಚಾಡಿ ತಮ್ಮ ರಾಜಕೀಯ ಲಾಭವನ್ನು ಮಾಡಿಕೊಳ್ಳುವ ಹಲವರನ್ನು ಹಿಂಬಾಲಿಸುವ ಅಂಧರ ಗುಣವೂ ಸಹ ಭಾವನಾತ್ಮಕವಾದದ್ದು. ಇಂದು ಜರುಗುವ ಪ್ರತಿಯೊಂದು ವಿದ್ಯಮಾನಗಳು ಜನಮಾಸದೊಳಗೆ ಸೇರುವಾಗ ಅದೆಷ್ಟರ ಮಟ್ಟಿಗೆ ರೂಪಾಂತರವಾಗಿರುತ್ತದೆ ಎಂದರೆ
ಮುಂದೊಂದು ದಿನ ಗೌರಿಯ ಹಂತಕರು ಸೆರೆಸಿಕ್ಕಿ ತಾವೇ ಆ ಕೊಲೆಯನ್ನು ಮಾಡಿರುವವರು ಎಂದರೂ ಈ ಒಂದು ಗುಂಪು ಅದನ್ನು ನಂಬದು. ಬದಲಾಗಿ ತಮ್ಮ ನಾಯಕ ಹೇಳಿದ್ದ ವ್ಯಕ್ತಿಗಳೇ ಅವನನ್ನು ಕೊಂದಿರುವರು ಎಂದೇ ವಾದಿಸುತ್ತಾರೆ.
ಯದ್ಯದಾಚಾರತಿ ಶ್ರೇಷ್ಠಸ್ತತ್ತ ದೇವೇತರೋ ಜನಃ ।
ಸ ಯತ್ಪ್ರಮಾಣಂ ಕುರುತೇ ಲೋಕಸ್ತದನುವರ್ತತೇ
ಭಗವದ್ಗೀತೆಯ ಮೇಲಿನ ಶ್ಲೋಕ ಅಕ್ಷರ ಸಹ ಇಲ್ಲಿ ನಿಜವೆನಿಸುತ್ತದೆ. ನಾಯಕನೆನಿಸಿಕೊಂಡವನು ಅದೇನನ್ನು ಅನುಸರಿಸುವನೋ ಅಥವಾ ಪ್ರವಚನ ಮಾಡವುವನೋ ಇತರರೂ ಸಹ ಅದನ್ನು ಹಾಗೆಯೇ ಪಾಲಿಸುವರು. ಆದ ಕಾರಣ ನಾಯಕನಾದವನ ನಡೆ ಹಾಗು ನುಡಿ ಇತರರಿಗೆ ಮಾದರಿಯಾಗಿರಬೇಕು. ಆದರ್ಶದಾಯಕವಾಗಿರಬೇಕು. ಅದೇನೆ ಇರಲಿ, ಮಾನವ ಹೆಚ್ಚಾಗಿ ತನ್ನ ಭಾವನಾತ್ಮಕ ವಿಚಾರಗಳಿಂದ ಗ್ರಹಿಸಿಕೊಳ್ಳುವ ವಿಚಾರಗಳನ್ನು ವ್ಯವಹಾರಿಕ ನೆಲೆಯಲ್ಲೂ ಒರೆ ಹಚ್ಚಿನೋಡಬೇಕು. ತಮ್ಮ ತನ, ತಮ್ಮ ಬುದ್ದಿ ಎಂಬುದಿರುವುದು ಅದಕ್ಕಾಗಿಯೇ ಅಲ್ಲವೇ?. ಪ್ರಸ್ತುತ ಸಾಮಾಜಿಕ ಜಾಲತಾಣಗಳ ಹಿನ್ನಲೆಯಲ್ಲಿ ಭಾರತದಂತಹ ದೇಶವೊಂದು ತನ್ನ ತನವನ್ನು ಕಳೆದುಕೊಳ್ಳದೆ ಬೆಳೆಯಬೇಕಾದರೆ ಅಲ್ಲಿ ಬಲವಾದ ವೈಚಾರಿಕ ನಿಲುವು ಅತ್ಯಗತ್ಯ. ಫೇಸ್ ಬುಕ್, ಟ್ವಿಟ್ಟರ್, ವಾಟ್ಸ್ ಆಪ್ ಗಳಲ್ಲಿ ಬರುವ ಪ್ರತಿಯೊಂದು ಸುದ್ದಿಗಳನ್ನು/ಹೇಳಿಕೆಗಳನ್ನು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ನಂಬುವ ಜಾಯಮಾನವನ್ನು ಕ್ಷೀಣಿಸಿಕೊಳ್ಳಬೇಕು. ಇಲ್ಲವಾದರೆ ಇನ್ನೂ ಲಕ್ಷಾಂತರ ರಾಮ್ ರಹೀಮರು ಈ ನೆಲದಲ್ಲಿ ಹುಟ್ಟಬಹುದು ಇಲ್ಲವೇ ದೇಶದ ಅದೆಷ್ಟೋ ಕೋಟಿ ಜನರೆಲ್ಲರೂ ಗೌರಿಯ ಹಂತಕರಾಗಬಹುದು!
Reference – ಪ್ರ.ವಾ. ಅರಿವು (ಆಗಸ್ಟ್/ಸೆಪ್ಟೆಂಬರ್ , ೨೦೧೭)
ಲೇಖನ ಆನಂದ ಕುಮಾರ ಸ್ವಾಮಿ ನಮಗೆ ಬೇಕಾದ ಬೆಳಕು – ಜೀವನದುದ್ದಕ್ಕೂ ಅಧ್ಯಯನ ಮಾಡುತ್ತ,ಧರ್ಮ-ಸಂಸಕೃತಿ-ಕಲೆ-ಅಧ್ಯಾತ್ಮ- ಸಮಾಜಕ್ಕೂ ಮನುಷ್ಯನಿಗೂ ಏರುವ ಸಂಬಂಧಗಳ ಬಗ್ಗೆ ಬೆಳಕು ಕಾಣಿಸಿದವರು. ಸನಾತನ ಧರ್ಮವನ್ನು ಆಳವಾದ ಒಳನೋಟಗಳಿಂದ ಅನುಸಂಧಾನಿಸಿದವರು. ಅಂಥವರ ದಾರ್ಶನಿಕತೆಯಾ ನೋಟ ನಮ್ಮ ಧೃಷ್ಠಿಕೋನವನ್ನು ವಿಸ್ತರಿಸಬಲ್ಲದು. ಇದೇ ಸೆ.೯ಕ್ಕೆ ಅವರು ತೀರಿಕೊಂಡು ಎಪ್ಪತ್ತು ವರ್ಷಗಳಾಗುತ್ತವೆ.
ಅವರ ಚಿಂತನೆ ಈಗಲೂ ನಮಗೆ ಪ್ರಸ್ತುತವಾಗಿದೆ……..
……….’ಜನರ ನಂಬಿಕೆಗಳನ್ನು ಪ್ರಶ್ನಿಸುತ್ತ ,ಅವರ ನಂಬಿಕೆಗಳನ್ನು ಅವೈಜ್ಞಾನಿಕ ಎಂದು ತಿರಸ್ಕರಿಸುವದು ವಿಜ್ಞಾನದ ಆರಾಧಕರ ಇಂದಿನ ಉತ್ಸಾಹವಾಗಿದೆ. ಆದರೆ ಅವರ ಅತಿಯಾದ ವರ್ತನೆಯು ಹೇಗಿದೆಯೆಂದರೆ ,ಒಂದು ಮೌಢ್ಯವನ್ನು ಕಿತ್ತೊಗೆದು ಅದರ ಸ್ಥಾನದಲ್ಲಿ ಮತ್ತೊಂದು ಮೌಢ್ಯವನ್ನು ಪ್ರತಿಷ್ಟಾಪಿಸುವದೇ ಆಗುತ್ತಿದೆ. ಹೀಗೇ ಆದರೆ ವಿಜ್ಞಾನವೂ ಕೂಡ ಮೌಢ್ಯದ ಸಿಂಹಾಸನವನ್ನು ಅಲ್ನ್ಕಾರಿಸಬೇಕಾಗುತ್ತದೆ ‘ ಎಂಬಂಥ ಮಾತನ್ನು ಬಹಳ ಹಿಂದೆಯೇ ಹೇಳಿದ್ದರು. ಭೌತವಿಜ್ಞಾನಿ ಡೇವಿಡ್ ಬಾಮ್.
ಇಲ್ಲಿ ಗಮನಿಸುವ ಮುಖ್ಯ ಅಂಶವೆಂದರೆ ಡೇವಿಡ್ ಬಾಮ್ ಜಿಡ್ಡು ಕೃಷ್ಣಮೂರ್ತಿ ಅವರ ಅನೇಕ ವರ್ಷಗಳ ( ಜೆ.ಕೆ. ಶಾಲೆಗಳನ್ನು ಸ್ಥಾಪಿಸುವಲ್ಲಿ ಕೂಡ ಮುಖ್ಯ ಪಾತ್ರವಹಿಸಿದವರು ) ಹತ್ತಿರದ ಒಡನಾಡಿ ಮಾತ್ರವಲ್ಲ ಅನೇಖ ಲೇಖನ, ಪುಸ್ತಕ ಬರೆದಿದ್ದರೆ. ಆದ್ದರಿಂದ ಜೆ.ಕೃಷ್ಣಮೂರ್ತಿ ಟೀಚಿಂಗ್ಸ್ ಬಹಳೇ ಇಂದು ಪ್ರಸ್ತುತ ಹಾಗೂ ತೀವ್ರ ಅವಶ್ಯವೆಂದು ಹೇಳಬಹುದು. ಮುಂಬಯಿಯಲ್ಲಿ ನಾನು ಸೇವೆಯಲ್ಲಿದ್ದಾಗ, ಅವರ ಲೆಕ್ಚರ್ ನೇರವಾಗಿ ಸುಮಾರು ೧೩-೧೫ ವರ್ಷ ( ೧೯೭೧-೧೯೮೫) ಕೇಳುವ ಸೌಭಾಗ್ಯವೆಂದೇ ತಿಳಿಯುತ್ತ, ಈಗ ಒಬ್ಬ ಹಿರಿಯ ನಾಗರಿಕನಾಗಿ ಅವರ ಟೀಚಿಂಗ್ಸ್ ‘ ಓದುವದೇ ಧ್ಯಾನ. ಜೀವನವೇ ಧ್ಯಾನ’ ಎಂದು ಹೇಳಲು ಸಂತೋಷವಾಗುತ್ತದೆ.
ಎಸ್. ದಿನ್ನಿ ಬೆಂಗಳೂರು ೯೪೪೯೮೯೦೯೮೧ ಇಮೇಲ್: sdd2025 @yahoo .co .in