ಜೀವಪರರದ್ದು ಮಾತ್ರ ಜೀವವೇ ಸಾರ್?
– ಡ್ಯಾನಿ ಪಿರೇರಾ,ಹಳ್ಳಿಮೈಸೂರು
ಈ ‘ಬುದ್ಧಿಜೀವಿ’ ಎಂಬ ಪದದ ಉಗಮ ಹೇಗಾಯಿತು? ಯಾರನ್ನು ಬುದ್ಧಿಜೀವಿ ಎನ್ನುತ್ತಾರೆ? ಬುದ್ಧಿಜೀವಿ ಎನ್ನಲು ಇರಬೇಕಾದ ಮಾನದಂಡಗಳೇನು? ಬುದ್ಧಿಜೀವಿ ಎನ್ನುವವ ನಿಜಕ್ಕೂ ಬುದ್ಧಿವಂತನೇ? ಅಥವಾ ಹಾಗೆ ಭಾವಿಸಲು ಪೂರ್ವ ಷರತ್ತುಗಳಿವೆಯೇ? ಒಂದೊಮ್ಮೆ ಆತ ಆತ್ಮಸಾಕ್ಷಿಯ ಕರೆಗೆ ಓಗೊಟ್ಟು ಮಾತಾಡಬಲ್ಲ ಸ್ಥಿತಪ್ರಜ್ಞನೇ? ಸತ್ಯವನ್ನು ನಿರ್ಭೀತಿಯಿಂದ ಹೇಳುವ ಸತ್ಯಸಂದನೇ? ಯಾವುದೇ ಒಂದು ನಿರ್ಧಿಷ್ಟ ಸಿದ್ಧಾಂತಕ್ಕೆ ಅಂಟಿಕೊಳ್ಳದೇ ಸತ್ಯವನ್ನು ಮಾತ್ರ ಅಂಜಿಕೆ ಇಲ್ಲದೇ ಹೇಳುವ ನಿಷ್ಠೂರವಾದಿಯೇ? ಎಂಬ ಪ್ರಶ್ನೆಗಳು ‘ಬುದ್ಧಿಜೀವಿ’ ಎಂದು ಪದ ಕೇಳಿದಾಗಲೆಲ್ಲ ಮನಸ್ಸಲ್ಲಿ ಮೂಡುತ್ತದೆ. ಅದಕ್ಕೆ ಕಾರಣವಿದೆ.
ಇತ್ತೀಚಿನ ದಿನಗಳಲ್ಲಿ ಇಂಥ ಯಾವುದೇ ಮಾನದಂಡಗಳನ್ನಿಟ್ಟುಕೊಳ್ಳದೇ ಬುದ್ಧಿಜೀವಿಗಳಾಗುವ ಪ್ರಯತ್ನ ನಡೆಯುತ್ತಿರುವುದು ಹೆಚ್ಚಾಗುತ್ತಿದೆ. ಅಂಥವರು ತಮ್ಮನ್ನು ತಾವು ಬುದ್ಧಿಜೀವಿ ಎಂದು ಹೇಳಿಕೊಳ್ಳದೆಯೂ ‘ಬುದ್ಧಿಜೀವಿ’ ಆಗಬಹುದೆಂದು ಪತ್ರಕರ್ತೆ ಗೌರಿ ಲಂಕೇಶರ ಹತ್ಯೆ ನಡೆದ ದಿನಗಳಿಂದ ದಕ್ಷಿಣ ಭಾರತದಲ್ಲಿ ಹೆಸರು ಮಾಡಿರುವ ನಟ ಪ್ರಕಾಶ್ ರೈ ಯವರು ಅವರ ಮಾತುಗಳಿಂದ ನಿರೂಪಿಸುತ್ತಿದ್ದಾರೆಂದು ಭಾಸವಾಗುತ್ತಿದೆ.
ಭಾರತೀಯ ಸಮಾಜ ಬುದ್ಧಿಜೀವಿಯಾದವರು, ಪ್ರಗತಿಪರ ಎಂದೆನಿಸಿಕೊಳ್ಳುವವರು ಸಮಾಜದಲ್ಲಿ ವಿಚಾರಶೀಲನೂ, ನ್ಯಾಯಪರನೂ ಅಳೆದು ತೂಗಿ ಸತ್ಯವನ್ನಷ್ಟೇ ಹೇಳಬಲ್ಲ ನಿಷ್ಠೂರ ಭಾವದವನಾಗಿರಬೇಕೆಂದು ಅಪೇಕ್ಷೆ ಪಡುತ್ತದೆ. ಆದರೆ ಪ್ರಕಾಶ ರೈ ಯಂಥ ನಟರು ಮಾಡುತ್ತಿರುವುದೇನು? ಅವರು ಮಾತಾಡುತ್ತಿರುವುದೇನು? ಇವರು ಒಬ್ಬ ಪ್ರಸಿದ್ಧ ನಟನಾಗಿ ಯಾವುದೋ ಕಾಲಬಾಹ್ಯ ಸಿದ್ಧಾಂತಕ್ಕೆ ಮನಸೋತು ಎಲ್ಲಾ ವರ್ಗಗಳಲ್ಲೂ ಅವರ ಅಭಿಮಾನಿಗಳಿದ್ದಾರೆ ಎಂಬುದನ್ನು ಮರೆತು. ಎಡಪಂಥೀಯ ಪೂರ್ವಗ್ರಹ ವಿಚಾರ ವಿಮರ್ಶೆಗೆ ಜೋತು ಬಿದ್ದು ಅವರ ಅಭಿನಯವನ್ನು ಮೆಚ್ಚುವವರಿಗೆ ಅವರು ಆಪಥ್ಯರಾಗುತ್ತಿದ್ದಾರೆ ಎನಿಸುತ್ತಿದೆ.
ಈ ಪ್ರಶ್ನೆ ಯಾಕೆ ಮೂಡುತ್ತಿದೆ ಎಂದರೆ ಕೆಲವು ದಿನಗಳ ಹಿಂದೆ ಪತ್ರಕರ್ತೆ ಗೌರಿ ಲಂಕೇಶರ ಹತ್ಯೆನಡೆಯಿತು. ಅದನ್ನು ಎಲ್ಲ ಪಕ್ಷಭೇದ ಮರೆತು ಖಂಡಿಸಿದ್ದೂ ಆಯಿತು. ಹತ್ಯೆಗೊಳಗಾದ ವ್ಯಕ್ತಿಯ ಬರವಣಿಗೆ ನಡೆ-ನುಡಿಯಿಂದ ಬೇಸತ್ತಿರುವ ಕೆಲವರು ಸ್ವಲ್ಪ ಅತಿ ಎನಿಸುವಷ್ಟು ಪ್ರತಿಕ್ರಿಯೆ ನೀಡಿದರೆ, ಅವರ ವಿರುದ್ಧದ ದನಿಯಾಗಿ ಆಕೆಯ ಧೈರ್ಯ-ಶೌರ್ಯವನ್ನು ಕೊಂಡಾಡುವ ಸಂಖ್ಯೆಯೂ ಸಾಕಷ್ಟಿತ್ತು. ಈ ನಡುವೆ ವಿಚಾರವಾದಿಗಳಿಂದ ತನಿಖೆ ನಡೆಯದೇ ತೀರ್ಪು ಹೊರಬಿತ್ತು. ಕೊಂದವರು- ಸಂಘಪರಿವಾರದವರು. ಇರಲಿ, ಬುದ್ಧಿಜೀವಿಗಳ ಈ ನಡವಳಿಕೆ ಸೋಜಿಗವೇನಲ್ಲ. ಈ ಆಪಾದನೆಯ ಹಿಂದೆ ವಿಚಾರವಾದಿಗಳ, ಬುದ್ಧಿಜೀವಿಗಳ, ಜೀವಪರರ ಅಸ್ಥಿತ್ವದ ಪ್ರಶ್ನೆಯಿದೆ ಎಂಬುದು. ಆದರೆ ಇಲ್ಲಿ ಚಿತ್ರ ನಟ ಪ್ರಕಾಶ್ ರೈ ಯವರ ಸ್ಥಿತಿ ಹಾಗಲ್ಲ. ಅವರಿಗೆ ಎಲ್ಲಾ ವರ್ಗಗಳಲ್ಲೂ ಅವರ ಅಭಿನಯವನ್ನು ಆಸ್ವಾಧಿಸುವ ಅಭಿಮಾನಿಗಳಿದ್ದಾರೆ. ಹಾಗಾಗಿ ಅವರು ಬುದ್ಧಿಜೀವಿಯಾಗಬೇಕಿಲ್ಲ. ಆದರೂ ಹತ್ಯೆ ಖಂಡಿಸುವ ಬರದಲ್ಲಿ ಅವರು ಕರ್ನಾಟಕದಲ್ಲಿ ಏನಾಗುತ್ತಿದೆ? ಇದು ಸೈದ್ಧಾಂತಿಕ ದ್ವೇಷದಿಂದ ಬಲಪಂಥೀಯರು ಈ ಹತ್ಯೆಯ ಹಿಂದಿದ್ದಾರೆ ಎಂಬ ಷರಾ ಬರೆದೇಬಿಟ್ಟರು. ಕರ್ನಾಟಕದಲ್ಲಿ ಏನಾಗುತ್ತಿದೆ ಎಂಬ ಪ್ರಶ್ನೆ ಸಹಜವಾಗಿತ್ತು. ಅವರು ಪ್ರಶ್ನೆಯನ್ನು ಕಾನೂನಾತ್ಮಕವಾಗಿ ಹೊಣೆ ಇರದ ದೇಶದ ಪ್ರಧಾನಿಯನ್ನು ಕೇಳಿದ್ದು ಪ್ರಶ್ನೆಯಲ್ಲಿ ಪ್ರಧಾನಿ ಇದಕ್ಕೆ ಉತ್ತರಿಸಬೇಕೆಂಬ ದಾರ್ಷ್ಟ್ಯವಿತ್ತು. ಹಾಗಾದರೆ ಸೈದ್ಧಾಂತಿಕ ಭಿನ್ನತೆ ಏನೇ ಇರಲಿ, ಹತ್ಯೆ ಮಾಡಿದವರು ಯಾರೆಂದು ಪತ್ತೆಮಾಡುವುದು ತನಿಖಾ ಸಂಸ್ಥೆಯೇ ಹೊರತು ಪರಸ್ಪರ ವಿರುದ್ಧವಾದ ಸಿದ್ಧಾಂತವಿರುವ ವ್ಯಕ್ತಿಗಳಲ್ಲ ಎನ್ನುವುದು ಈ ನಟನಿಗೆ ಗೊತ್ತಿಲ್ಲವೇ? ರೈ ಅವರನ್ನು ಜನರು ಒಪ್ಪಿರುವುದು ಅವರ ನಟನಾ ಪ್ರೌಢಿಮೆಯೇ ಅಥವಾ ಅವರ ಪೂರ್ವಗ್ರಹದಿಂದ ಕೂಡಿದ ಹಿಂದೂ ವಿರೋಧಿ ನೀತಿಯೇ?
ಬಹುಶಃ ಗೌರಿಯವರ ಹತ್ಯೆಯಂದು ಅವರು ಎತ್ತಿದ ಪ್ರಶ್ನೆಗಳು ಆವೊತ್ತಿನ ಅವರ ಆತ್ಮೀಯರೊಬ್ಬರ ಹತ್ಯೆಯ ಹಿನ್ನೆಲೆಯಲ್ಲಿ ಆಕ್ರೋಶದಿಂದ ಕೇಳಿದ ಪ್ರಶ್ನೆಗಳಿವು ಎಂದು ಭಾವಿಸಿ ಸುಮ್ಮನಾಗಬಹುದಿತ್ತು. ಆದರೆ ಭಾನುವಾರ ನಡೆದ ಡಿವೈಎಫೈ ನ 11ನೇ ರಾಜ್ಯ ಸಮ್ಮೇಳನದಲ್ಲಿ ಅವರು ಮತ್ತಷ್ಟು ಅಸಂಬಂದ್ದ ಪ್ರಶ್ನೆಗಳನ್ನು ಎತ್ತುವ ಮೂಲಕ ತಾನೊಬ್ಬ ಎಲ್ಲರನ್ನು ಒಳಗೊಂಡ ಕಲೆಯಿಂದ ಗೌರವಿಸಲ್ಪಡುವ ನಟ ಎಂಬುದನ್ನು ಮರೆತು ತಾನೊಬ್ಬ ‘ಬುದ್ಧಿಜೀವಿ’ ಎಂಬುದನ್ನು ನಿರೂಪಿಸಲೊರಟಂತಿತ್ತು!
ಅವರೇ ಹೇಳುವಂತೆ – ಗೌರಿ ಲಂಕೇಶ್ ರನ್ನು ಹತ್ಯೆ ಮಾಡಿದವರ ಕುರಿತು ಸುಳಿವುಗಳು ಇಲ್ಲದೇ ಇರಬಹುದು. ಆದರೆ ಅವರು ಹತ್ಯೆಯಾದ ಸಂದರ್ಭ ಸಂಭ್ರಮಿಸಿದವರು ಯಾರೆಂದು ನಮಗೆಲ್ಲಾ ತಿಳಿದಿದೆ. ಗೌರಿ ಹತ್ಯೆಯ ಕುರಿತು ಪ್ರಧಾನಿ ನರೇಂದ್ರ ಮೋದಿಯವರು ಮೌನವಾಗಿದ್ದಂತೆ ನಟಿಸಿ, ನನಗಿಂತ ಉತ್ತಮ ನಟರಾಗಿದ್ದಾರೆಂದು ವ್ಯಂಗ್ಯ ಮಾಡಿದ್ದಾರೆ. ಅಷ್ಟೇ ಅಲ್ಲ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥರನ್ನು ಹಾಗೂ ಅವರ ವೇಷ-ಭೂಷಣವನ್ನು ಅಪಹಾಸ್ಯಕ್ಕಿಳಿಸಿದ್ದಲ್ಲದೇ, ಅವರ ಪ್ರಶಸ್ತಿಗಳನ್ನು ನೀಡುವ ವ್ಯಂಗ್ಯದ ಮಾತಾಡಿದ್ದಾರೆ.
ಹೌದು ನೀವೊಬ್ಬ ಉತ್ತಮ ನಟ. ಅದರಲ್ಲಿ ಎರಡು ಮಾತಿಲ್ಲ. ಆದರೆ ಸಂಬಂಧವಿಲ್ಲದನ್ನು ಮಾತಾಡಿ ಬುದ್ಧಿಜೀವಿ ಅನಿಸಿಕೊಳ್ಳುವ ಅನಿವಾರ್ಯತೆ ನಿಮಗಿದೆಯೇ? ಈ ಹಿಂದೆ ನೀವೇ ಕೇಳಿದ ಪ್ರಶ್ನೆಗೆ ಈಗ ನೀವೇ ಉತ್ತರ ಕೊಡಬೇಕಾಗುತ್ತದೆ. ಇಲ್ಲಿ ಪ್ರಶ್ನೆಯೂ ನಿಮ್ಮದೇ, ಉತ್ತರವೂ ನಿಮ್ಮದೇ. ಅದು ಕರ್ನಾಟಕದಲ್ಲಿ ಮಾತ್ರವಲ್ಲ. ಕೇರಳದಲ್ಲೂ ಏನಾಗುತ್ತಿದೆ ಎಂಬುದು. ನೀವೊಬ್ಬ ಕಮ್ಯುನಿಷ್ಟ್ ಚಿಂತನೆಯಿರುವ ವ್ಯಕ್ತಿಯಾಗಿ ಈ ಪ್ರಶ್ನೆ ನಿಮಗೆ ಮೂಡಬೇಕಿಲ್ಲ!. ನಮಗೆ ಗೊತ್ತು ಕಾಮ್ರೆಡ್ ಗಳ ಪ್ರಶ್ನೆ ಹಾಗೂ ಉತ್ತರ ಹೇಗಿರುತ್ತದೆ ಎಂದು. ನೀವು ಒಬ್ಬ ಮಾನವೀಯ ಸಂವೇದನೆಯುಳ್ಳ ನಟನಾಗಿ! ಈ ಪ್ರಶ್ನೆ ಒಬ್ಬ ಪ್ರಜ್ಞಾವಂತನಾಗಿ, ಒಬ್ಬ ಕಲಾವಿದನಾಗಿ ನಿಮಗೆ ಎಂದೋ ಬರಬೇಕಿತ್ತು. ಅದು – ಪ್ರಶಾಂತ್ ಪೂಜಾರಿ, ಪ್ರವೀಣ್ ಪೂಜಾರಿ, ಮಾಗಳಿ ರವಿ, ರಾಜು ಕ್ಯಾತಮಾರಣಹಳ್ಳಿ, ರುದ್ರೇಶ್, ಶರತ್ ಮಡಿವಾಳ ಅದಕ್ಕಿಂತ ಮೊದಲು ಕುಟ್ಟಪ್ಪ ಇವರೆಲ್ಲಾ ಬೀದಿ ಹೆಣವಾದಾಗ ಇದನ್ನೆಲ್ಲ ಇಸ್ಲಾಮಿಕ್ ಮೂಲಭೂತವಾದಿಗಗಳು ಯಾಕೆ ಮಾಡುತ್ತಿದ್ದಾರೆ ಎಂದು. ಅದೆಂದೂ ಜಾಗೃತವಾಗದ ನಿಮ್ಮ ಸಾಕ್ಷಿಪ್ರಜ್ಞೆ ಗೌರಿ ಹತ್ಯೆ ನಡೆದಾಗ ಮಾತ್ರವೇಕೆ ಜಾಗೃತವಾಯಿತು? ಗೌರಿ ಹತ್ಯೆಯನ್ನು ನೀವು ಯಾರನ್ನು ತನಿಖೆಯಾಗದೆ ಶಿಕ್ಷೆ ನೀಡಲು ಹೊರಟಿದ್ದೀರೋ ಆ ಎಲ್ಲಾ ಹಿಂದು ಸಂಘಟನೆಗಳು ಗೌರಿ ಹತ್ಯೆಯನ್ನು ಖಂಡಿಸಿವೆ.ಅದೂ ಹತ್ಯೆ ನಡೆದ ಕೆಲವೇ ನಿಮಿಷಗಳಲ್ಲಿ. ನೀವು ಇಂದು ಯಾವ ವೇದಿಕೆಯಲ್ಲಿ ನಿಂತು ಅಸಂಬಧ್ಧ ಪ್ರಶ್ನೆಗಳನ್ನು ಕೇಳುತ್ತಿದ್ದೀರೋ ಅದಕ್ಕೆ ಸಂಬಂಧಪಟ್ಟು ಯಾವೊಬ್ಬ ಕಮ್ಯುನಿಷ್ಟ ಅಥವಾ ಮತೀಯ ಮೂಲಭೂತವಾದಿ ಹಿಂದೂ ಕಾರ್ಯಕರ್ತರ ಹತ್ಯೆಯನ್ನು ಖಂಡಿಸಿಲ್ಲ. ಹೋಗಲಿ ನೀವಾದರೂ ಖಂಡಿಸಿದ್ದೀರೇನು? ನೀವು ಯಾವ ಅಭಿವ್ಯಕ್ತಿ ಸ್ವಾತಂತ್ರ್ಯ, ಸಹಿಷ್ಣುತೆ ಬಗ್ಗೆ ಮಾತಾಡುತ್ತಿದ್ದೀರೋ ಅದೇ ಸಿದ್ಧಾಂತ ಹೇಳುವ ಎಡಪಂಥೀಯ ಸರ್ಕಾರ ಕೇರಳದಲ್ಲಿದೆ. ಅಲ್ಲಿ ಕಮ್ಯುನಿಷ್ಟರು ನಡೆಸಿದ ಹಿಂದೂ ಕಾರ್ಯಕರ್ತರ ಸಾಲು ಸಾಲು ಹತ್ಯೆಗಳ ಲೆಕ್ಕ ಉಂಟೆ? ನಿಮಗೆ ಎಂದಾದರೂ ಕೇರಳದಲ್ಲಿ ಏನಾಗುತ್ತಿದೆ ಎಂಬ ಪ್ರಶ್ನೆ ಬಂದಿದ್ದುಂಟೆ? ಯಾಕೆ ಸರ್ ಈ ಇಬ್ಬದಿ ನೀತಿ? ಜೀವಪರರದ್ದು ಮಾತ್ರ ಜೀವವೇ ಸಾರ್? ಸಮಾಜಪರ ಚಿಂತಕ, ಮನುಷ್ಯತ್ವಕ್ಕೆ ಮಿಡಿಯುವ ನಿಮ್ಮ ಮನ ನೀವು ಒಪ್ಪುವ ಸಿದ್ಧಾಂತದವರಿಗೆ ಮಾತ್ರವೇ ಮಿಡಿಯುವುದಾ ಸರ್? ಗೌರಿ ಹತ್ಯೆಯನ್ನು ಸಂಭ್ರಮಿಸಿದವರ ಬಗ್ಗೆ ಹೇಳಿದ್ದೀರಿ. ಯಾವಾಗಲೂ ಒಂದು ನಿರ್ದಿಷ್ಟ ಧರ್ಮದ ನಂಬಿಕೆಗಳನ್ನು ಹೀಯಾಳಿಸುವುದು, ಅದಕ್ಕೆ ಅಪ್ಪ-ಅಮ್ಮ ಇಲ್ಲ ಎನ್ನುವುದು, ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ ಕಾಶ್ಮೀರದ ಭಾರತ ವಿರೋಧಿ ಧೋರಣೆಯುಳ್ಳ ರಾಷ್ಟ್ರವಿರೋಧಿಗಳೊಂದಿಗೆ ಸಂಪರ್ಕ ಹೊಂದುವುದು, ತಮ್ಮದಲ್ಲದ ವಿಚಾರ ಹೊಂದಿರುವವರ ವಿರುದ್ಧ ಮಾನಹಾನಿ ಅವಾಚ್ಯ ಭಾಷೆ-ಶೀರ್ಷಿಕೆಯ ಶಬ್ಧಗಳನ್ನು ಬಳಸಿ ಲೇಖನ ಬರೆಯುವುದು, ಇವೆಲ್ಲವನ್ನು ಕಂಡು ನೋವು ಅನುಭವಿಸಿದವರಿಗೆ ಕೆಲವರ ಸಾವು ದುಃಖದ ಸಂಗತಿಯಾಗುವುದಿಲ್ಲ. ಏಕೆಂದರೆ ಅವರಿಗೂ ಅವರ ಧರ್ಮ, ಪರಂಪರೆ, ಆಚಾರ-ವಿಚಾರಗಳ ಬಗ್ಗೆ ಗೌರವವಿರುತ್ತದೆ. ಅದನ್ನು ಅವಮಾನಿಸಿದವರೊಂದಿಗೆ ಅವರ ಅಭಿವ್ಯಕ್ತಿ ಮೇಲ್ಮಟ್ಟದಲ್ಲಿರಬೇಕೆಂದು ನೀವೇಗೆ ನಿರಿಕ್ಷಿಸುತ್ತೀರಿ?
ನೆನಪಿರಲಿ ಸಾರ್, ನೀವೂ ಹಿಂದುವೇ. ವೈಚಾರಿಕ ವಿರೋಧವಿದೆ ಎಂಬ ಕಾರಣಕ್ಕೆ ಅವರ ಹತ್ಯೆಯನ್ನು ಸಂಭ್ರಮಿಸುವುದು ಹಿಂದುತ್ವದ ಚಿಂತನೆಯಲ್ಲ. ತನಿಖೆಯಾಗದೇ ಹತ್ಯೆಯ ಹಿಂದೆ ಹಿಂದು ಸಂಘಟನೆಗಳ ಕೈವಾಡವಿದೆ ಎಂದು ನಿಮ್ಮ ಚಿಂತನಾ ಲಹರಿಯನ್ನು ಹರಿಯ ಬಿಡುವ ಸ್ವಾತಂತ್ರ್ಯ ಮತ್ತು ತಮ್ಮನ್ನು ತಾವು ದೊಡ್ಡ ನಟನೆಂದು ಭಾವಿಸಿ, ನಿಮ್ಮ ಪ್ರಶಸ್ತಿಗಳನ್ನು ನಿಮಗಿಂತ ಮೇಲ್ಮಟ್ಟದಲ್ಲಿರುವವರಿಗೆ ಕೊಡುತ್ತೇನೆಂದು ಹೇಳುವ ದಾರ್ಷ್ಟ್ಯದ ಮಾತು ನಿಮ್ಮಂಥವರ ಬಾಯಿಯಿಂದಲೇ ಬರುವಾಗ ಇನ್ನು ಸಾಮಾನ್ಯ ಶ್ರದ್ಧಾವಂತರ ನಂಬಿಕೆಗಳ ಮೇಲೆ ಗೌರಿಯಂಥಹ ಪತ್ರಕರ್ತೆಯ ಮಾತು-ಬರವಣಿಗೆ ನೋವು ತಂದಾಗ ಅವರ ಪ್ರತಿಕ್ರಿಯೆ ಮೇಲ್ಮಟ್ಟದಲ್ಲಿರಬೇಕೆಂಬುದು ನಿಮ್ಮ ನಿರೀಕ್ಷೆ ಅತ್ಯಂತ ಬಾಲಿಶ ಎಂದೆನಿಸುವುದಿಲ್ಲವೇ ಸರ್ ?