ವಿಷಯದ ವಿವರಗಳಿಗೆ ದಾಟಿರಿ

ಅಕ್ಟೋಬರ್ 5, 2017

ಆಧ್ಯಾತ್ಮಿಕ ಪ್ರಗತಿ ಮತ್ತು ಭಾರತೀಯ ಸಂಸ್ಕೃತಿ

‍ನಿಲುಮೆ ಮೂಲಕ

ಡಾ. ಸಂತೋಷ್ ಕುಮಾರ್ ಪಿ.ಕೆ
ಶಿವಮೊಗ್ಗ.

ದೀನ್ ದಯಾಳ್ ಉಪಾಧ್ಯಾಯ, ಪ್ರಾಯಶಃ ಇವರ ಹೆಸರನ್ನು ನಮ್ಮ ಪೀಳಿಗೆ ಹೆಚ್ಚಾಗಿ ಕೇಳಿಲ್ಲ ಎಂದರೂ ತಪ್ಪಾಗಲಾರದು. ಇಂದಿನ ಭಾರತೀಯ ಜನತಾ ಪಕ್ಷದ ಮೂಲ ಪಕ್ಷವಾದ ಜನಸಂಘವನ್ನು ಸ್ಥಾಪಿಸಿದ ಮಹಾ ನಾಯಕ ದೀನ್ ದಯಾಳ್ ರವರು. ಯಾವುದೋ ರಾಜಕೀಯ ಲಾಭ ಅಥವಾ ವೈಯುಕ್ತಿಕ ಹಿತಾಸಕ್ತಿಗೋಸ್ಕರ ರಾಜಕೀಯ ಪಕ್ಷವನ್ನು ಅವರು ಹುಟ್ಟುಹಾಕಲಿಲ್ಲ. ಬದಲಾಗಿ, ಅವರಲ್ಲಿದ್ದ ಅಧಮ್ಯ ರಾಷ್ಟ್ರಪ್ರೇಮ ಹಾಗೂ ರಾಜಕೀಯ ಸ್ಥಿತ್ಯಂತರಗಳನ್ನು ಸಕಾರಾತ್ಮಕ ದಿಕ್ಕಿಗೆ ತೆಗೆದುಕೊಂಡು ಹೋಗುವ ಇರಾದೆಯಿಂದ ರಾಜಕೀಯ ಪಕ್ಷವನ್ನು ಕಟ್ಟಿದರು. ಇಂದಿನ ಬಹುತೇಕ ರಾಜಕಾರಣಿಗಳಿಗೆ ರಾಜಕಾರಣ ಮಾಡುವುದರಲ್ಲಿ ಕೌಶಲ್ಯವಿದೆಯೇ ಹೊರತು, ರಾಜಕೀಯವನ್ನು ಏಕೆ ಮಾಡಬೇಕು, ಅದರ ಫಲಿತಾಂಶಗಳೇನು ಎನ್ನುವ ಸಮಗ್ರ ಜ್ಞಾನ ಇರುವುದು ಅಪರೂಪ. ಆದರೆ ಇದಕ್ಕೆ ವ್ಯತಿರಿಕ್ತ ಎನ್ನುವಂತೆ, ಬಹಳ ಸ್ಪಷ್ಟವಾಗಿ ಸಂಸ್ಕೃತಿ ಹಾಗೂ ರಾಜಕಾರಣದ ಕುರಿತು ಅಪಾರ ಜ್ಞಾನವನ್ನು ಹೊಂದಿದ್ದ ವ್ಯಕ್ತಿ ಎಂದರೆ ಉಪಾಧ್ಯಾಯರು. ಸಂಸ್ಕೃತಿಯ ಆಳ ಅಗಲಗಳನ್ನು ಅಮೂಲಾಗ್ರವಾಗಿ ಬಲ್ಲಂತಹ ಹಾಗೂ ನಿರ್ಧಿಷ್ಟವಾಗಿ ರಾಜಕೀಯ ವ್ಯವಸ್ಥೆಯ ಉದ್ದೇಶ ಹಾಗೂ ಅದು ತಲುಪಬೇಕಾದ ಗುರಿಗಳನ್ನು ಸ್ಪಷ್ಟೀಕರಿಸಿದ ಮೊದಲ ಭಾರತೀಯ ವ್ಯಕ್ತಿ ಎಂದರೂ ಅತಿಶಯೋಕ್ತಿಯಾಗಲಾರದು. ಈ ಪುಟ್ಟ ಬರವಣಿಗೆಯಲ್ಲಿ ಅವರ ಕೆಲವು ವಿಚಾರಧಾರೆಗಳನ್ನು ಪರಿಚಯಿಸುವ ಮೂಲಕ ನಮ್ಮ ರಾಜಕೀಯ ವ್ಯವಸ್ಥೆಯನ್ನು ಅರ್ಥೈಸಿಕೊಳ್ಳುವ ಪ್ರಯತ್ನವನ್ನು ಮಾಡಲಾಗುತ್ತದೆ.

ಉಪಾಧ್ಯಾಯರನ್ನು ಸಾಂಸ್ಕೃತಿಕ ರಾಜಕಾರಣದ ಹರಿಕಾರ ಎಂದು ಯಾವುದೇ ಅನುಮಾನವಿಲ್ಲದೆ ಪರಿಗಣಿಸಬಹುದು. ಕಾರಣ, ಭಾರತ ಸ್ವತಂತ್ರಗೊಂಡ ನಂತರ, ರೂಪಿತವಾದ ರಾಜಕೀಯ ವ್ಯವಸ್ಥೆ ಮತ್ತದರ ಪರಿಕಲ್ಪನೆಗಳು ಭಾರತೀಯ ಸಂಸ್ಕೃತಿಗೆ ಒಗ್ಗುತ್ತವೆಯೇ ಎಂಬ ಬಹುದೊಡ್ಡ ಪ್ರಶ್ನೆ ಉಪಾಧ್ಯಾಯರನ್ನು ಕಾಡುತ್ತಲೇ ಇತ್ತು. ಆದ್ದರಿಂದಲೇ ಪಾಶ್ಚಾತ್ಯ ಪ್ರಣೀತ ಪರಿಕಲ್ಪನೆಗಳನ್ನು ಒರೆಗೆ ಹಚ್ಚುವ ಜೊತೆಜೊತೆಗೆ, ಭಾರತಕ್ಕೆ ಪರ್ಯಾಯ ವ್ಯವಸ್ಥೆ ಏನು ಎನ್ನುವ ಚಿಂತನೆಯನ್ನು ತಮ್ಮ ಜೀವಿತಾವಧಿಯಲ್ಲಿ ಬೆಳೆಸುತ್ತಾ ಬಂದರು. ಅವರು ಗುರುತಿಸಿದ ಮೊಟ್ಟಮೊದಲ ಸಮಸ್ಯೆ ಎಂದರೆ, ರಾಜಕಾರಣವು ಸಂಸ್ಕೃತಿ ರಹಿತವಾಗಿ ಶುಷ್ಕವಾಗಿ ಇದ್ದಿದ್ದು, ಅಂದರೆ, ಭಾರತೀಯ ಸಂಸ್ಕೃತಿಯ ಯಾವ ಅಂಶವನ್ನೂ ಒಳಗೊಳ್ಳದೆ ರಾಜಕೀಯ ವ್ಯವಸ್ಥೆ ಕಾರ್ಯ ನಿರ್ವಹಿಸುತ್ತಿದ್ದುದು ಅವರಿಗೆ ಆತಂಕವನ್ನೂ ಉಂಟುಮಾಡಿತ್ತು. ಆದ್ದರಿಂದಲೇ ರಾಜಕಾರಣದ ತಳಹದಿಯನ್ನು ಸೂಕ್ಷ್ಮವಾಗಿ ಪರಿಶೀಲಿಸುವ ಕಾರ್ಯಕ್ಕೆ ಚಾಲನೆ ನೀಡಿದರು. ಸಾಂಸ್ಕೃತಿಕ ರಾಜಕಾರಣ ಎಂದರೆ, ನಮ್ಮದೇ ಸಂಸ್ಕೃತಿಯ ಬುನಾದಿಯ ಮೇಲೆ ರಾಜಕೀಯ ವ್ಯವಸ್ಥೆ ರೂಪುಗೊಳ್ಳಬೇಕು ಎನ್ನುವುದು ಅವರ ಅಭಿಲಾಷೆಯಾಗಿತ್ತು. ಹಾಗಾದರೆ, ಅಸ್ತಿತ್ವದಲ್ಲಿದ್ದಂತಹ ರಾಜಕೀಯ ವ್ಯವಸ್ಥೆಯ ಸಮಸ್ಯೆಗಳಾದರೂ ಏನಾಗಿತ್ತು? ಅದಕ್ಕೆ ಪರ್ಯಾಯದ ಅವಶ್ಯಕತೆಯಾದರೂ ಏನಿತ್ತು? ಎನ್ನುವುದರ ಕುರಿತು ಅವರ ಆಲೋಚನೆಗಳನ್ನು ಮೆಲುಕು ಹಾಕುವ.

ಇಲ್ಲೊಂದು ಸ್ಪಷ್ಟನೆ ನೀಡಬೇಕಾಗುತ್ತದೆ; ಸಾಂಸ್ಕೃತಿಕ ರಾಜಕಾರಣವನ್ನು ಅರ್ಥೈಸಿಕೊಳ್ಳುವ ಮುನ್ನ ಸಂಸ್ಕೃತಿ ಎಂದರೇನು ಎಂದು ಮೊದಲೇ ಸ್ಪಷ್ಟಪಡಿಸಿಕೊಳ್ಳಬೇಕಾಗುತ್ತದೆ. ಸಾಮಾನ್ಯವಾಗಿ, ಸಂಸ್ಕೃತಿಯನ್ನು ವೇಷ ಭೂಷಣ, ಆಚಾರ ವಿಚಾರಗಳ ಮೂಲಕ ಗುರುತಿಸಲಾಗುತ್ತದೆ. ಅದಕ್ಕೂ ಹೆಚ್ಚಿನದಾಗಿ ಅದನ್ನೇ ಸಂಸ್ಕೃತಿ ಎಂದೂ ಸಹ ನಂಬಲಾಗುತ್ತದೆ. ಉದಾಹರಣೆಗೆ, ಗಂಧ/ತಿಲಕ ಇಡುವುದು, ಸೀರೆ ತೋಡುವುದು, ಪೂಜೆ ಪುನಸ್ಕಾರಗಳನ್ನು ಮಾಡುವುದು, ಗೋವುಗಳನ್ನು ರಕ್ಷಿಸುವುದು ಇತ್ಯಾದಿಗಳನ್ನು ಸಂಸ್ಕೃತಿ ಎಂದೇ ಬಿಂಬಿಸಲಾಗುತ್ತದೆ. ಆದರೆ ಸಂಸ್ಕೃತಿ ಎನ್ನುವುದು ಇದಕ್ಕಿಂತಲೂ ಭಿನ್ನವಾದುದು ಎಂದರೆ ಆಶ್ಚರ್ಯವಾಗುವ ಅಗತ್ಯವಿಲ್ಲ. ವೇಷ, ಆಚಾರಗಳೆಲ್ಲವೂ ಸಂಸ್ಕೃತಿಯ ಪ್ರತೀಕಗಳಷ್ಟೆ, ಅವುಗಳೇ ಸಂಸ್ಕೃತಿಯಲ್ಲ. ಇಂತಹ ಸ್ಪಷ್ಟತೆ ಉಪಾಧ್ಯಾಯರಿಗೂ ಇತ್ತು ಎನ್ನುವುದರಲ್ಲಿ ಯಾವ ಸಂಶಯವೂ ಇಲ್ಲ. ಪ್ರೊ.ಎಸ್.ಎನ್ ಬಾಲಗಂಗಾಧರ ರವರು ಅಧ್ಯಯನ ನಡೆಸಿ, ವಾದಿಸುವಂತೆ, ಸಂಸ್ಕೃತಿ ಎಂದರೆ ಅದೊಂದು ಕಲಿಕೆಯ ವಿಧಾನ, ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ, ಒಂದು ನಿರ್ಧಿಷ್ಟ ಪರಿಸರ, ಪ್ರದೇಶದಲ್ಲಿ ಜನಿಸಿದ ವ್ಯಕ್ತಿಯು ಹೇಗೆ ಬದುಕಬೇಕು, ಇತರರೊಂದಿಗೆ ಹೇಗೆ ವ್ಯವಹರಿಸಬೇಕು, ತನ್ನ ಬದುಕನ್ನು ಹೇಗೆ ಕಟ್ಟಿಕೊಳ್ಳಬೇಕು ಎಂದು ಕಲಿಸಿಕೊಡುವ ಪ್ರಕ್ರಿಯೆಯೇ ಸಂಸ್ಕೃತಿಯಾಗಿದೆ. ಸಂಸ್ಕೃತಿಗೆ ಬಹುಶಃ ಇದಕ್ಕಿಂತ ಉತ್ತಮವಾದ ವಿವರಣೆ ಇನ್ನೆಲ್ಲಿಯೂ ಇಲ್ಲ ಎನ್ನುವುದು ನನ್ನ ಓದಿನ ಮಿತಿಯಲ್ಲಿ ಇರುವ ಅಭಿಪ್ರಾಯ. ಉಪಾಧ್ಯಾಯರೂ ಸಹ ಸಂಸ್ಕೃತಿ ಹಾಗೂ ಸಾಂಸ್ಕೃತಿಕ ರಾಜಕಾರಣದ ಕುರಿತು ಮಾತನಾಡುವಾಗ, ಇಂತದ್ದೇ ಒಳನೋಟವನ್ನಿಟ್ಟುಕೊಂಡು ವಿಶ್ಲೇಷಿಸಿರುವುದು ವಿಶೇಷ.

ಭಾರತೀಯ ಸಂಸ್ಕೃತಿಯಲ್ಲಿ ಅದ್ಭುತವಾಗಿ ಸಿಗುವ ವಿಶಿಷ್ಟ ಸಂಗತಿಗಳೆಂದರೆ, ಸಮಗ್ರತೆ, ನಿರಾಸಕ್ತಿ, ಹಾಗೂ ಪರಸ್ಪರ ಸಹಕಾರ. ಉಪಾಧ್ಯಾಯರು, ಇವುಗಳ ಆಧಾರದ ಮೇಲೆ ಏಕಾತ್ಮ ಮಾನವತಾವಾದದ ಪರಿಕಲ್ಪನೆಯನ್ನು ಬೆಳೆಸಿದರು. ಭಾರತೀಯ ಸಂಸ್ಕೃತಿಗೂ ಏಕಾತ್ಮ ಮಾನವತಾವಾದಕ್ಕೂ ಅವಿನಾಭಾವ ಸಂಬಂಧವಿದೆ. ಹಾಗಾದರೆ ಏಕಾತ್ಮ ಮಾನವತವಾದ ಎಂದರೇನು? ಅವರದೇ ಮಾತುಗಳನ್ನು ಸರಳೀಕರಣಗೊಳಿಸಿ ಹೇಳುವುದಾದರೆ, ಮನುಷ್ಯನಿಗೆ ದೇಹ, ಮನಸ್ಸು, ಬುದ್ದಿ, ಹಾಗೂ ಆತ್ಮ ಎಂಬ ನಾಲ್ಕು ಅಂಶಗಳಿರುತ್ತವೆ. ಇವೆಲ್ಲವೂ ಮನುಷ್ಯ ದೇಹದ ಸಮಗ್ರ ಭಾಗಗಳು. ಈ ನಾಲ್ಕು ಸಂಗತಿಗಳಿದ್ದರೆ, ಪುರುಷಾರ್ಥಗಳಾದ ಧರ್ಮ, ಅರ್ಥ, ಕಾಮ ಹಾಗೂ ಮೋಕ್ಷಗಳನ್ನು ಸಾಧಿಸಲು ಅನುಕೂಲವಾಗುತ್ತದೆ. ದೇಹಕ್ಕೆ ಸಂಬಂಧಿಸಿದ ನಾಲ್ಕು ಸಂಗತಿಗಳನ್ನು ಬೇರೆ ಬೇರೆಯಾಗಿ ನೋಡಿದರೆ ಅದರಲ್ಲಿರುವ ಸಮಗ್ರತೆಯನ್ನು ನಾವು ಕಾಣಲು ಸಾಧ್ಯವಿಲ್ಲ. ಆರ್ಥಿಕ ಪ್ರಗತಿ ಮತ್ತದರ ಮಾದರಿಯು ವ್ಯಕ್ತಿ ಕೇಂದ್ರಿತವಾಗಿರಬೇಕು ಎನ್ನವುದು ಇದರ ಮೂಲ ಆಶಯ. ಇದರ ಅರ್ಥ ಇಷ್ಟಕ್ಕೆ ಸೀಮಿತವಾದುದಲ್ಲ, ಬದಲಿಗೆ ಇದನ್ನು ತಿಳಿಯಲು ಇನ್ನಷ್ಟು ವಿವರಣೆ ಬೇಕಾಗುತ್ತದೆ.

ಏಕಾತ್ಮ ಮಾನವತಾವಾದವನ್ನು ಪ್ರತಿಪಾದಿಸಲು ಉಪಾಧ್ಯಾಯರಿದ್ದ ಸಂದರ್ಭಗಳನ್ನು ಅರ್ಥೈಸಿಕೊಂಡರೆ, ಅವರ ಪರಿಕಲ್ಪನೆಯನ್ನು ಇನ್ನೂ ಚೆನ್ನಾಗಿ ಅರಿವಿಗೆ ತಂದುಕೊಳ್ಳಬಹುದು. ಪಾಶ್ಚಿಮಾತ್ಯ ರಾಷ್ಟ್ರದ ಪರಿಕಲ್ಪನೆಗಳನ್ನು ಹಾಗೂ ಭಾರತೀಯ ಸಂಪ್ರದಾಯವನ್ನು ಮುಖಾಮುಖಿ ಮಾಡುವ ಮೂಲಕ ತಮ್ಮ ವಿಚಾರಧಾರೆಯನ್ನು ಅವರು ಸ್ಪಷ್ಟ ಪಡಿಸುತ್ತಾ ಹೋಗುತ್ತಾರೆ. ಯಾವುದೇ ಸಮಾಜ ಪ್ರಗತಿ ಸಾಧಿಸಬೇಕಾದರೆ, ಅದಕ್ಕೆ ಒಂದಷ್ಟು ತಯಾರಿಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಅಂದರೆ ಅಗತ್ಯವಿರುವ ರಾಜಕೀಯ ವ್ಯವಸ್ಥೆ, ಸಂವಿಧಾನ, ಉದ್ದೇಶ ಗುರಿಗಳನ್ನು ಹೊಂದಿರುವ ಆರ್ಥಿಕ ವ್ಯವಸ್ಥೆ ಇನ್ನೂ ಮುಂತಾದವುಗಳನ್ನು ರೂಪಿಸಿಕೊಳ್ಳಬೇಕಾಗುತ್ತದೆ. ಇಂತಹ ತಯಾರಿಯನ್ನು ಪಾಶ್ಚಾತ್ಯ ರಾಷ್ಟ್ರಗಳು ತಮ್ಮದೇ ವಿಧಾನದಲ್ಲಿ ಮಾಡಿಕೊಂಡಿವೆ. ವ್ಯಕ್ತಿವಾದ, ಸಮಾಜವಾದ, ಪ್ರಜಾಪ್ರಭುತ್ವದಂತಹ ಸಾಂಸ್ಥಿಕ ರಚನೆಗಳನ್ನಿಟ್ಟುಕೊಂಡು ಪ್ರಗತಿಯತ್ತ ಸಾಗುತ್ತಿದ್ದೇವೆ ಎಂದು ಭಾವಿಸುತ್ತಿವೆ.

ಉಪಾಧ್ಯಾಯರಿಗೆ ಸಮಸ್ಯೆ ಪ್ರಾರಂಭವಾಗುವುದೇ, ಪಾಶ್ಚಾತ್ಯರು ಬೆಳೆಸಿರುವ ಮೇಲ್ಕಾಣಿಸಿದ ಪರಿಕಲ್ಪನೆಗಳಿಂದ ಹಾಗೂ ಸಾರ್ವತ್ರಿಕವಾಗಿ ಎಲ್ಲಾ ರಾಷ್ಟ್ರಗಳಿಗೂ ಅವುಗಳೇ ಪ್ರಗತಿಯ ಮಾದರಿ ಎಂದು ಬಿಂಬಿಸುತ್ತಾ ಅವುಗಳು ಎಲ್ಲೆಡೆ ಪಸರಿಸುವಾಗ. ಇಲ್ಲಿ ಪಾಶ್ಚಾತ್ಯ ಜಗತ್ತು ಎರಡು ದೊಡ್ಡ ಐಡಿಯಾಲಜಿಗಳ ಮೇಲೆ ವಿಭಜನೆಯಾಗಿದೆ. ಒಂದು ಪ್ರಜಾಪ್ರಭುತ್ವ ಮತ್ತೊಂದು ಸಮಾಜವಾದ. ರಷ್ಯಾ ಬೆಂಬಲಿತ ರಾಷ್ಟ್ರಗಳು ಸಮಾಜವಾದವನ್ನು ಅಪ್ಪಿಕೊಂಡರೆ, ಅಮೇರಿಕಾ ಬೆಂಬಲಿತ ರಾಷ್ಟ್ರಗಳು ಪ್ರಜಾಪ್ರಭುತ್ವವನ್ನು ಪ್ರಗತಿಯ ಅತ್ಯಂತಿಕ ಸಾಧನಗಳು ಎಂಬುದಾಗಿ ಪ್ರಚುರಪಡಿಸುತ್ತಾ ಬಂದಿವೆ. ಆದರೆ, ಉಪಾಧ್ಯಾಯರ ಪ್ರಕಾರ ಇವೆರಡೂ ವ್ಯವಸ್ಥೆಗಳು ವ್ಯಕ್ತಿ ಕೇಂದ್ರಿತವಾದವುಗಳಲ್ಲ. ಏಕೆಂದರೆ, ಪ್ರಜಾಪ್ರಭುತ್ವದಲ್ಲಿ ವ್ಯಕ್ತಿಗೆ ಮತದಾನದ ಹಕ್ಕನ್ನು ನೀಡಿದ್ದರೂ ಸಹ, ಉಳಿದೆಲ್ಲಾ ಹಕ್ಕುಗಳು ರಾಜ್ಯದ ಅಧೀನದಲ್ಲಿರುತ್ತವೆ ಜೊತೆಗೆ ಪ್ರಜಾಪ್ರಭುತ್ವವು ಬಂಡವಾಳಶಾಹಿತ್ವಕ್ಕೆ ಹೆಚ್ಚಾಗಿ ಬೆಂಬಲಿಸುವುದರಿಂದ, ಬಂಡವಾಳಶಾಹಿತ್ವವು ವ್ಯಕ್ತಿಯನ್ನು ಶೋಷಣೆಗೆ ತಳ್ಳುತ್ತದೆ. ಅಂದರೆ, ಉಳ್ಳವರು ಇಲ್ಲದವರು ಎಂಬ ವರ್ಗಗಳಾಗಿ ಮಾಸ್ಟರ್ ಸ್ಲೇವ್ ಎಂಬಿತ್ಯಾದಿ ರಚನೆಗಳು ಸಮಾಜದಲ್ಲಿ ಹೆಚ್ಚಾಗಿ ದೌರ್ಜನ್ಯಗಳು ಹೆಚ್ಚಾಗುತ್ತವೆ. ಕೊನೆಗೆ, ವ್ಯಕ್ತಿವಾದವನ್ನೇ ಬಂಡವಳವನ್ನಾಗಿ ಮಾಡಿಕೊಂಡ ಪ್ರಜಾಪ್ರಭುತ್ವ ಬಂಡವಾಳಕ್ಕಾಗಿ ವ್ಯಕ್ತಿವಾದವನ್ನು ನಾಮಕಾವಸ್ಥೆಯಾಗಿ ಪರಿವರ್ತಿಸಿಬಿಡುತ್ತದೆ. ಇದು ಪಾಶ್ಚಾತ್ಯ ಪ್ರಜಾಪ್ರಭುತ್ವದ ಸಮಸ್ಯೆಯಾದರೆ, ಮತ್ತೊಂದೆಡೆ, ವ್ಯಕ್ತಿಗಳ ದೌರ್ಜನ್ಯವನ್ನು ತಡೆಯಲು ಮಾರ್ಕ್ಸ್ ನಿಂದಾಗಿ ಸಮಾಜವಾದದ ಪರಿಕಲ್ಪನೆ ರೂಪುಗೊಂಡಿತು. ಆದರೆ, ಸಮಾಜವಾದದನ್ವಯ ಬಂಡವಾಳಶಾಹಿತ್ವ ಮತ್ತು ಅದರ ಶೋಷಣೆ ಎಲ್ಲಾ ಕೊನೆಗೊಂಡರೂ, ಸಮಾಜವಾದ ಅಸ್ತಿತ್ವಕ್ಕೆ ಬರುವಾಗ ವ್ಯಕ್ತಿಗಳಿಗೆ ಅಲ್ಲಿ ಸ್ಥಾನವೇ ಇರುವುದಿಲ್ಲ. ಅಂದರೆ ಆಸ್ತಿಯ ಒಡೆತನದ ಹಕ್ಕುಗಳನ್ನು ಸಂಪೂರ್ಣವಾಗಿ ವ್ಯಕ್ತಿಗಳಿಂದ ಬೇರ್ಪಡಿಸಲಾಗುತ್ತದೆ. ಇದರ ತಾತ್ಪರ್ಯ ಎಂದರೆ ಪ್ರಜಾಪ್ರಭುತ್ವವಾಗಲಿ, ಸಮಾಜವಾದವಾಗಲಿ ವ್ಯಕ್ತಿ ಕೇಂದ್ರಿತ ಎಂದು ಹುಸಿ ನಂಬಿಕೆಯನ್ನು ಹುಟ್ಟಿಸಿ ಅದಕ್ಕೆ ವಿರುದ್ಧವಾಗಿ ಬೆಳೆಯುತ್ತಾ ಬರುತ್ತಿವೆ ಹಾಗೂ ಪಾಶ್ಚಾತ್ಯ ರಾಷ್ಟ್ರಗಳು ಇಂತಹ ಭ್ರಮೆಯನ್ನು ಕಟ್ಟಿಕೊಂಡು ಪ್ರಗತಿಯನ್ನು ಸಾಧಿಸದೆ, ಪರ್ಯಾಯ ವ್ಯವಸ್ಥೆಗಳನ್ನು ಕಂಡುಕೊಳ್ಳದೆ ಇಂದು ಗೊಂದಲದಲ್ಲಿ ಮುಳುಗಿವೆ.

ಇಂತಹ ಗೊಂದಲಕ್ಕೆ ತೆರೆ ಎಳೆಯುವಲ್ಲಿ ಮತ್ತು ನಿಜವಾದ ಪ್ರಗತಿ ಸಾಧಿಸಲು ಅಂದರೆ ವ್ಯಕ್ತಿ ಕೇಂದ್ರಿತ ಆರ್ಥಿಕ ರಚನೆ ಮಾದರಿಯನ್ನು ರೂಪಿಸಬೇಕಾದರೆ ಅದಕ್ಕೆ ಭಾರತದಲ್ಲಿ ಉತ್ತರ ಸಿಗುತ್ತದೆ. ವಿಶ್ವವ್ಯಾಪಿಯಾಗಿ ಅನ್ವಯಿಸಬಹುದಾದಂತಹ ಮಾದರಿಗಳನ್ನು ನೀಡುವ ಶಕ್ತಿಯನ್ನು ಭಾರತ ಹೊಂದಿದೆ ಹಾಗೂ ಅದರ ಸಂಸ್ಕೃತಿ ವೈಶಿಷ್ಟ್ಯತೆ ಪಾಶ್ಚಾತ್ಯರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುವ ಶಕ್ತಿಯನ್ನು ಹೊಂದಿದೆ ಎನ್ನುವುದು ಉಪಾಧ್ಯಾಯರ ನಂಬಿಕೆಯಾಗಿತ್ತು.

ಹಾಗಾದರೆ ಅದು ಹೇಗೆ ಸಾಧ್ಯ? ಭಾರತೀಯ ಸಂಸ್ಕೃತಿಯಲ್ಲಿ ಅಂತದ್ದೇನಿದೆ? ಏಕತೆ ಭಾರತೀಯ ಸಂಸ್ಕೃತಿ ವಿಶಿಷ್ಟ ಸಂಗತಿಯಾಗಿದೆ. ವೈವಿಧ್ಯಮಯ ಸಂಪ್ರದಾಯ, ಆಚಾರ ವಿಚಾರಗಳಿದ್ದರೂ ಅವುಗಳಲ್ಲಿ ಏಕತೆಯಂತೂ ಸ್ಪಷ್ಟವಾಗಿದೆ ಎನ್ನುವುದು ಅವರ ಅಭಿಪ್ರಾಯವಾಗಿದೆ. ಒಂದು ನಿದರ್ಶನದ ಮೂಲಕ ವಿವರಿಸುವುದಾದರೆ, ಒಂದು ಮರ ಇದೆ ಎಂದಾದರೆ, ಅದಕ್ಕೆ ಕಾಂಡ, ರೆಂಬೆಗಳು, ಎಲೆಗಳು, ಹೂವುಗಳು, ಕಾಯಿಗಳು, ಹಾಗೂ ಹಣ್ಣುಗಳು ಹೀಗೆ ತರಹೇವಾರಿ ಬಣ್ಣ ಬಣ್ಣಗಳನ್ನು ವಿವಿಧ ಆಕಾರಗಳನ್ನು, ಗಾತ್ರಗಳನ್ನು ಹೊಂದಿರುವ ವಸ್ತುಗಳನ್ನು ಒಂದೇ ಮರದಲ್ಲಿ ಕಾಣಬಹುದು. ಅಂದರೆ ಮರವು ಒಂದೇ ಆದರೂ ಅದರಲ್ಲಿರುವ ಉಳಿದೆಲ್ಲಾ ಸಂಗತಿಗಳು ವಿಭಿನ್ನವಾದವು. ಆ ಏಕತೆಯ ಸೌಂದರ್ಯವು ವೈವಿಧ್ಯತೆಯಲ್ಲಿ ಸ್ಪಷ್ಟವಾಗಿ ಕಂಗೊಳಿಸುತ್ತದೆ. ಅಲ್ಲಿರುವ ವಿಭಿನ್ನ ಸಂಗತಿಗಳು ಒಂದಕ್ಕೊಂದು ವಿರುದ್ಧವಾಗಿರದೆ ಪೂರಕವಾಗಿರುವುದೇ ಏಕತೆಯ ವಿಶಿಷ್ಟತೆಯಾಗಿದೆ. ಇದನ್ನೇ ಭಾರತಕ್ಕೆ ಅನ್ವಯಿಸಿದರೆ ಸುಲಭವಾಗಿ ನಾವು ಅರ್ಥೈಸಿಕೊಳ್ಳಬಹುದಾಗಿದೆ. ಭಾರತದ ಏಕತೆಯ ಸೊಬಗು ಹಲವಾರು ಸಂಪ್ರದಾಯ, ಮತ, ಜಾತಿಗಳಾಗಿ ವಿಭಿನ್ನವಾಗಿರುವುದರಲ್ಲಿ ನಿಚ್ಚಳವಾಗಿ ಕಾಣಬಹುದಾಗಿದೆ.

ಪಾಶ್ಚಾತ್ಯ ಸಂಸ್ಕೃತಿಯಿಂದ ರೂಪುಗೊಂಡ ಪರಿಕಲ್ಪನೆಗಳ ಮತ್ತೊಂದು ದೊಡ್ಡ ಸಮಸ್ಯೆಯೆಂದರೆ, ಪ್ರತಿಯೊಂದು ಪ್ರಗತಿಯೂ ಸಹ ಸಂಘರ್ಷದಿಂದಲೇ ಆಗುತ್ತದೆ ಎನ್ನುವ ನಂಬಿಕೆಯನ್ನು ಹೊಂದಿರುವುದಾಗಿದೆ. ಅಂದರೆ, ಸಮಾಜದಲ್ಲಿರುವ ಹಲವಾರು ಗುಂಪುಗಳು ತಮ್ಮಲ್ಲಿ ಸಂಘರ್ಷವನ್ನು ಏರ್ಪಡಿಸಿಕೊಳ್ಳುವ ಮೂಲಕ ಉತ್ತಮವಾದ ಪರಿಕಲ್ಪನೆಗಳನ್ನು ಹುಟ್ಟಿಹಾಕಿ ಪ್ರಗತಿಯನ್ನು ಸಾಧಿಸುತ್ತವೆ ಎಂದು ಇದುವರೆಗಿನ ಸಿದ್ಧಾಂತಗಳು ತಿಳಿಸುತ್ತವೆ. ವ್ಯಕ್ತಿ ವ್ಯಕ್ತಿಗಳ ನಡುವೆ ಹಾಗೂ ವ್ಯಕ್ತಿ ಸಮಾಜದ ನಡುವೆ ಸಂಘರ್ಷಗಳು ಅನಿವಾರ್ಯ ಎನ್ನುವುದೇ ಪಾಶ್ಚಾತ್ಯ ರಾಷ್ಟ್ರಗಳ ಪ್ರಗತಿಯ ಮೂಲ ಮಾದರಿಯಾಗಿದೆ. ಆದ್ದರಿಂದರೆ ಭೌತಿಕ ಸುಖಕ್ಕೆ ಹೆಚ್ಚಿನ ಒತ್ತನ್ನು ಪಾಶ್ಚಾತ್ಯ ರಾಷ್ಟ್ರಗಳು ನೀಡುತ್ತಾ ಬಂದಿವೆ. ಇದನ್ನು ಮನುಷ್ಯನ ನಾಲ್ಕು ಅಂಗಗಳ ಪರಿಭಾಷೆಯಲ್ಲಿ ಹೇಳುವುದಾದರೆ, ದೇಹ ಮತ್ತು ಮನಸ್ಸು ಮಾತ್ರ ಪಾಶ್ಚಾತ್ಯರಿಗೆ ಪ್ರಧಾನವಾದವು. ಅಂದರೆ, ದೈಹಿಕ ಸುಖವನ್ನು ಸಾಧಿಸಲು ಹಾಗೂ ಆ ಸುಖದಿಂದಲೇ ಮಾನಸಿಕ ತೃಪ್ತಿ ಎಂಬ ಸೀಮಿತ ತಿಳುವಳಿಕೆಯನ್ನು ಪಾಶ್ಚಾತ್ಯ ಜಗತ್ತು ಹೊಂದಿದೆ. ಆದರೆ ಇಲ್ಲಿ ಯಾವುದೋ ಒಂದು ಪ್ರಮುಖವಾದ ಸಂಗತಿಯೊಂದು ತಪ್ಪಿಹೋಗಿದೆ. ಅದು ಯಾವುದು? ಅದೇ ಸಮಗ್ರತೆ.

ಈ ಮೊದಲೇ ಹೇಳಿದಂತೆ, ದೇಹ, ಮನಸ್ಸು, ಬುದ್ದಿ ಹಾಗೂ ಆತ್ಮ ಇವು ಮನುಷ್ಯನ ಅವಿಭಾಜ್ಯ ಸಂಗತಿಗಳು, ಅಂದರೆ ವ್ಯಕ್ತಿಯು ಪ್ರಗತಿಯನ್ನು ಸಾಧಿಸಬೇಕಾದರೆ ಆ ನಾಲ್ಕು ಸಂಗತಿಗಳ ಸಮಗ್ರತೆಯನ್ನು ಅರ್ಥಮಾಡಿಕೊಳ್ಳಬೇಕಾಗುತ್ತದೆ. ಪಾಶ್ಚಾತ್ಯರು ಬುದ್ದಿ/ಚಿತ್ತ, ಹಾಗೂ ಆತ್ಮವನ್ನು ಸಂಪೂರ್ಣವಾಗಿ ಮರೆತು ಐಹಿಕ ಸುಖಕ್ಕಾಗಿ ಹಾತೊರೆಯುತ್ತಿದ್ದಾರೆ. ಆದ್ದರಿಂದಲೇ ಅಲ್ಲಿ ಮಾನಸಿಕ ಖಿನ್ನತೆಯ ಕಾರಣಕ್ಕಾಗಿ ಸಾವನ್ನಪ್ಪಿದ ಜನರ ಸಂಖ್ಯೆ ಪೌರಾತ್ಯ ರಾಷ್ಟ್ರಗಳಿಗೆ ಹೋಲಿಸಿದರೆ ಅತೀ ಹೆಚ್ಚಾಗಿ ಕಂಡುಬರುತ್ತದೆ. ಇದಕ್ಕೆ ವಿಭಿನ್ನವಾಗಿ ಭಾರತದಲ್ಲಿ ಸಮಗ್ರತೆಯನ್ನು ನೋಡುವ ವಿಧಾನವೊಂದಿದೆ, ಅದನ್ನು ಅಳವಡಿಸಿಕೊಂಡರೆ ಮಾನವ ಎಲ್ಲಾ ರೀತಿಯ ಪ್ರಗತಿಯನ್ನು ಸಾಧಿಸಬಹುದಾಗಿದೆ. ನಮ್ಮ ಸಮಾಜದಲ್ಲಿ ದೈಹಿಕ ಸುಖ ಮುಖ್ಯವಾದರೂ ಸಹ ಅದೇ ಅತ್ಯಂತಿಕವಲ್ಲ ಎನ್ನುವುದೇ ಇಲ್ಲಿಯ ವೈಶಿಷ್ಟ್ಯ. ಅತ್ಯಂತಿಕ ಸುಖ ಎಂದರೆ ಅದು ಆತ್ಮದ ಅರಿವು, ದೇಹ, ಮನಸ್ಸು ಹಾಗೂ ಬುದ್ದಿಗಳನ್ನು ಬಳಸಿಕೊಂಡು ಆತ್ಮದ ತಿಳಿವನ್ನು ಪಡೆಯುವುದು ಇಲ್ಲಿನ ಸಂಸ್ಕೃತಿಯ ಗುರಿಯಾಗಿದೆ. ದೇಹದ ಅಗತ್ಯತೆ ಎಷ್ಟರ ಮಟ್ಟಿಗೆ ಎಂದರೆ ಗುರಿ ತಲುಪಲು ಇರುವ ಮಾರ್ಗವಷ್ಟೇ, ಆದರೆ ಪಾಶ್ಚಾತ್ಯರಿಗೆ ದೇಹ ಹಾಗೂ ಅದರ ಸುಖವೇ ಗುರಿ. ಇದನ್ನು ಆಧ್ಯಾತ್ಮದ ಪರಿಭಾಷೆಯಲ್ಲಿ ಹೇಳುವುದಾದರೆ ಇವೆಲ್ಲವೂ ಆನಂದಕ್ಕೆ ಇರುವ ಮಾರ್ಗಗಳು ಅಷ್ಟೇ, ಅವುಗಳೇ ಆನಂದವಲ್ಲ. ದೈಹಿಕ ಸುಖವೇ ಅತ್ಯಂತಿಕವಾಗಿದ್ದರೆ, ಒಬ್ಬಾತನಿಗೆ ಜೈಲಿನಲ್ಲಿ ಹಾಕಿ ಉತ್ಕೃಷವಾದ ಭೋಜನವನ್ನೇ ನೀಡಿದರೂ ಆತ ತೃಪ್ತಿ ಹೊಂದಲಾರ. ಆದರೆ ಪಶ್ಚಿಮವು ಈ ಸತ್ಯವನ್ನು ಅರಿಯುವಲ್ಲಿ ವಿಫಲವಾಗುತ್ತಿದೆ.
ಭಾರತವು ಮತ್ತಷ್ಟು ವಿಶಿಷ್ಟವಾದ ಸಂಗತಿಗಳನ್ನು ಬೆಳೆಸಿದೆ. ಪಾಶ್ಚಾತ್ಯರು ನಂಬಿರುವಂತೆ ಸಂಘರ್ಷವೇ ಪ್ರಗತಿಯ ಸಾಧನವಲ್ಲ ಬದಲಿಗೆ ಪರಸ್ಪರ ಸಹಕಾರ ತತ್ವವೇ ನಿಜವಾಗಿಯೂ ಪ್ರಗತಿಗೆ ಅಗತ್ಯ.

ಹಾಗಾದರೆ ಪರಸ್ಪರ ಸಹಕಾರ ಎಂದರೇನು? ಅದನ್ನು ಗುರುತಿಸುವುದು ಹೇಗೆ? ಅವರೇ ಹೇಳುವಂತೆ, ಒಬ್ಬ ವ್ಯಕ್ತಿಗೆ ಹಲವಾರು ಅಸ್ಮಿತೆ (ಐಡಿಂಟಿಟಿ)ಗಳಿರುತ್ತವೆ. ಅಂದರೆ ಕುಟುಂಬದ ಸದಸ್ಯನಾಗಿ, ಸಮುದಾಯದ ಸದಸ್ಯನಾಗಿ, ಯಾವುದೋ ಸಂಘ ಸಂಸ್ಥೆಗಳ ಸದಸ್ಯನಾಗಿ ಇರುತ್ತಾನೆ ಎಂದಿಟ್ಟುಕೊಳ್ಳಿ. ಆತ ಆ ಎಲ್ಲಾ ಜವಾಬ್ದಾರಿಗಳನ್ನು ಸಮರ್ಥವಾಗಿಯೇ ನಿಭಾಯಿಸುತ್ತಾನೆ ಏಕೆಂದರೆ ಅವೆಲ್ಲವನ್ನೂ ನಿಭಾಯಿಸುವ ಕಲೆಯನ್ನು ನಮ್ಮ ಸಂಸ್ಕೃತಿ ಸಮಾಜ ನಮಗೆ ಕಲಿಸಿಕೊಡುತ್ತದೆ. ಕುಟುಂಬದ ಸದಸ್ಯನಾಗಿ ಒಂದೆಡೆ ಇದ್ದು ಕುಟುಂಬಕ್ಕೆ ವಿರುದ್ಧವಾಗಿ ಯಾವುದೋ ಸಂಘಟನೆಯಲ್ಲಿ ಆತನಿಗೆ ಕಾರ್ಯ ನಿರ್ವಹಿಸಲು ಸಾಧ್ಯವಾಗುವುದಿಲ್ಲ. ಅವೆರಡನ್ನೂ ಒಟ್ಟೊಟ್ಟಿಗೆ ತೆಗೆದುಕೊಂಡು ಹೋಗುವ ಮೂಲಕ ಎರಡರಲ್ಲೂ ಭಾಗಿಯಾಗುತ್ತಾನೆ. ಇದೇ ರೀತಿ ಒಂದು ಪ್ರದೇಶದಲ್ಲಿರುವ ಹಲವಾರು ಸಂಘ ಸಂಸ್ಥೆಗಳು ಪರಸ್ಪರ ಸಹಕಾರದೊಂದಿಗೆ ಕಾರ್ಯ ನಿರ್ವಹಿಸಲು ಸಾಧ್ಯ, ಇದರಿಂದರೆ ನಿಜವಾದ ಪ್ರಗತಿ ಸಾಧ್ಯ. ವ್ಯಕ್ತಿ ಮತ್ತು ಸಮಾಜ ಪರಸ್ಪರ ವಿರುದ್ಧವಾದವು ಎನ್ನುವ ಭ್ರಮೆ ನಮ್ಮ ಸಮಾಜದಲ್ಲಿಲ್ಲ ಎನ್ನುವುದು ಉಪಾಧ್ಯಾಯರ ಅಭಿಪ್ರಾಯವಾಗಿದೆ. ಹಾಗಾಗಿ ವ್ಯಕ್ತಿಯ ಆಶೋತ್ತರಗಳಿಗೆ ಸಮಾಜ ಪೂರಕವಾಗಿದ್ದರೆ ಅಲ್ಲಿ ಪ್ರಗತಿಯ ಮಾದರಿಯನ್ನು ಕಾಣಬಹುದು.

ಕೊನೆಯದಾಗಿ, ಹೇಳಲಿಕ್ಕೆ ಸಾಕಷ್ಟು ವಿಷಯಗಳಿದ್ದರೂ, ಸದ್ಯಕ್ಕೆ ಲೇಖನಕ್ಕೆ ಇತಿಶ್ರೀ ಹಾಡಲು ಒಂದಷ್ಟು ಸಂಗತಿಗಳನ್ನು ಸಾರಾಂಶೀಕರಿಸಲಾಗುತ್ತದೆ. ಉಪಾಧ್ಯಾಯರು ವಿವೇಕಾನಂದ, ಅರವಿಂದೋ ನಂತರದಲ್ಲಿ ಆಧ್ಯಾತ್ಮಿಕ ಮಾರ್ಗದ ಮೂಲಕ ಏನನ್ನಾದರೂ ಸಾಧಿಸಬಹುದು ಎಂದು ತೋರಿಸಿಕೊಟ್ಟ ಮಹನೀಯರಾಗಿದ್ದಾರೆ. ಭಾರತೀಯ ಸಂಸ್ಕೃತಿಯ ನೈಜ ತಳಹದಿ ಇರುವುದೇ ಆಧ್ಯಾತ್ಮದಲ್ಲಿ ಎಂದರೆ ತಪ್ಪಲ್ಲ, ಅದರ ಎಳೆಯನ್ನು ಸಮರ್ಥವಾಗಿ ಹಿಡಿದು ಪ್ರಸ್ತುತ ರಾಜಕೀಯ ಸನ್ನಿವೇಶಗಳ ಸಮಸ್ಯೆಗಳನ್ನು ಹಾಗೂ ಅವುಗಳಿಗೆ ಪರ್ಯಾಯ ಮಾರ್ಗಗಳನ್ನು ಹುಡುಕವಲ್ಲಿ ಯಶಸ್ವಿ ಹೆಜ್ಜೆಯನ್ನು ಅವರು ಇಟ್ಟಿದ್ದಾರೆ. ವ್ಯಕ್ತಿ, ಹಾಗೂ ಸಮಾಜವನ್ನು ಯಾರೂ ಸಹ ಸೃಷ್ಟಿಸಲು ಸಾಧ್ಯವಿಲ್ಲ ಅವು ಸ್ವಾಭಾವಿಕವಾಗಿ ಬೆಳೆದು ಬರುವಂತವುಗಳು. ಆದ್ದರಿಂದಲೇ ಅಲ್ಲಿರುವ ಸಮಗ್ರತೆಯನ್ನು ನಾವು ಗುರುತಿಸಬೇಕು. ಆಗ ಮಾತ್ರವೇ ಪ್ರಗತಿಯ ಮಾದರಿಯನ್ನು ವಿಶ್ವಕ್ಕೆ ಭಾರತ ನೀಡಬಲ್ಲದು ಎನ್ನುವ ಆತ್ಮವಿಶ್ವಾಸ ಉಪಾಧ್ಯಾಯರದ್ದಾಗಿತ್ತು. ಈ ನಿಟ್ಟಿನಲ್ಲಿ ನಮ್ಮ ಆಧುನಿಕ ರಾಜಕೀಯ ಆಲೋಚನೆಗಳು ರೂಪುಗೊಂಡರೆ, ಉಪಾಧ್ಯಾಯರ ಶ್ರಮ ವ್ಯರ್ಥವಾಗದು ಎನ್ನುವುದು ನನ್ನ ಆಶಯ..

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments