ವಿಷಯದ ವಿವರಗಳಿಗೆ ದಾಟಿರಿ

ಅಕ್ಟೋಬರ್ 9, 2017

1

ಶಿಕ್ಷಣ ತಜ್ಞರಾಗಿ ಡಾ. ಶಿವರಾಮ ಕಾರಂತರು

‍ನಿಲುಮೆ ಮೂಲಕ

ಶ್ರೀಮತಿ ತುಳಸಿ ಶಿರ್ಲಾಲು
ಉಪನ್ಯಾಸಕರು
ವಿವೇಕಾನಂದ ಕಾಲೇಜ್ ಆಫ್ ಎಜುಕೇಶನ್ (ಬಿ.ಎಡ್)
ತೆಂಕಿಲ , ಪುತ್ತೂರು. ದ.ಕ.

ಡಾ. ಶಿವರಾಮ ಕಾರಂತರು ತಮ್ಮ ಮಾತು – ಬರವಣಿಗೆಗಳೆರಡರಲ್ಲೂ ದಶಕಗಳುದ್ದಕ್ಕೂ ಶಿಕ್ಷಣ ಎಂದರೆ ಏನು? ಯಾವುದು ಶಿಕ್ಷಣ? ಶಿಕ್ಷಣ ಹೇಗಿರಬೇಕು? ತರಗತಿಯ ಒಳಗಿನ ಶಿಕ್ಷಣ ಮತ್ತು ನಿತ್ಯ ಜೀವನದಲ್ಲಿ ಉಪಯೋಗ ಮೊದಲಾದ ವಿಷಯಗಳನ್ನು ಮತ್ತೆ ಮತ್ತೆ ಪರಿಷ್ಕರಿಸುತ್ತಾ, ಸ್ಪಷ್ಟಗೊಳಿಸುತ್ತಾ, ಪುನರ್ ರೂಪಿಸುತ್ತಿದ್ದರು. “ಓದು ಯಾಕೆ ಬೇಕು, ಬರಹ ಯಾಕೆ ಬೇಕು ಎಂದು ತಿಳಿಯದ ಮಕ್ಕಳನ್ನು ಕುಳ್ಳಿರಿಸಿಕೊಂಡು ಓದಿನಲ್ಲಿ ಸ್ವಾರಸ್ಯವಿದೆ, ಬರಹದಿಂದ ನಮ್ಮ ಮನಸ್ಸನ್ನು ತೋಡಿಕೊಳ್ಳುವುದಕ್ಕೆ ಬರುತ್ತದೆ ಎಂಬ ಉದ್ದೇಶ ಸಾಧಿಸಬೇಕು. ಇಲ್ಲಿ ಕಲಿತ ಗಣಿತ, ನಾಳೆ ನಡೆಸುವ ವಿವಿಧ ವ್ಯವಹಾರಗಳಲ್ಲಿ ಅನಿವಾರ್ಯ ಎಂಬ ಭಾವನೆಗೆ ಪೀಠಿಕೆ ಹಾಕಬೇಕು. ಮಕ್ಕಳಿಗೆ ಕಲಿಸುವ ವಿಜ್ಞಾನ, ಸಮಾಜಶಾಸ್ತ್ರ, ಚರಿತ್ರೆ ಭೂಗೋಳದಂತಹ ವಿಷಯಗಳು ಕೂಡಾ ನಾಳಿನ ಬುದ್ದಿಯ ಬೆಳವಣಿಗೆಗೆ, ಜ್ಞಾನ ಸಂಪಾದನೆಗೆ ಅವಶ್ಯಕವಾದ ತೃಷೆಯ ರೂಪವನ್ನು ಹೊಂದಿದಾಗ ಮಾತ್ರವೇ ಪ್ರಾಥಮಿಕ ಹಂತದಲ್ಲಿ ನಾವು ಕೊಡುವ ಸರಳ ಪಾಠಗಳು ತಮ್ಮ ಗುರಿಯನ್ನು ಸಾಧಿಸಬಹುದು ಇಲ್ಲವಾದರೆ ಇಲ್ಲ” ಎನ್ನುತ್ತಾರೆ. ಈ ಮಾತುಗಳೇ ಕಾರಂತರು ಶಿಕ್ಷಣವನ್ನು ಗ್ರಹಸಿಕೊಂಡ ಅವರ ಉದ್ದೇಶವನ್ನು ತಿಳಿದುಕೊಂಡ ಸೃಜನಾತ್ಮಕ ನೆಲೆಗೆ ಸಾಕ್ಷಿಯಾಗಿವೆ.

ಕಲಿಯುವ ಮಕ್ಕಳ ವಯಸ್ಸು, ಅವರ ಅಭಿರುಚಿ, ಆಸಕ್ತಿಗಳು ಮಕ್ಕಳ ಇತಿಮಿತಿಗಳನ್ನು ತಿಳಿದು ಅದರ ಮೂಲಕ ನಾವು ಕೊಡುವ ಶಿಕ್ಷಣದ ವಸ್ತು, ವಿಧಾನಗಳನ್ನು ನಿರ್ಣಯಿಸಬೇಕು ಎಂಬ ಕಾಳಜಿ ಕಾರಂತರಲ್ಲಿತ್ತು. ವರ್ತಮಾನದ ಶಿಕ್ಷಣ ಕ್ರಮಕ್ಕೆ ಕಾರಂತರು ಬಹು ಕಟುವಾಗಿಯೇ ಪ್ರತಿಕ್ರಿಯಿಸಿದ್ದರು. “ಪ್ರಾಥಮಿಕ ಶಾಲೆಯಿಂದ ವಿಶ್ವವಿದ್ಯಾಲಯದ ತನಕ ಓದಿದ ಬಹುಮಟ್ಟಿನ ವಿಷಯಗಳನ್ನು ವಿದ್ಯಾರ್ಥಿಗಳು ಓದುವುದು ಜ್ಞಾನದ ತೃಷೆಯಿಂದಲ್ಲ. ಅಂಥ ವಿಷಯಗಳಲ್ಲಿ ಪರೀಕ್ಷೆ ಪಾಸಾಗಿ ಆ ಸರ್ಟಿಫಿಕೇಟಿನ ವರಪ್ರಸಾದದಿಂದ ಪಡೆಯಬಹುದಾದ ನೌಕರಿಯ ಆಸೆಯಿಂದ ಎಂಬುದು ಗೊತ್ತಿದ್ದ ಸಂಗತಿ. ಹಿಂದೆ ತಾನು ಓದಿದ ಯಾವೊಂದು ವಿಷಯದಲ್ಲೂ ಅಭಿರುಚಿ ಹುಟ್ಟದೆ ಹೋದರೆ, ಅದರಿಂದ ಪ್ರಯೋಜನ ಸಿಗದೆ ಹೋದರೆ ನಾವು ಈತನಕ ಹೋದುದು ಕುರುಡು ದಾರಿ ಎಂಬುದು ಸ್ಪಷ್ಟವಾಗುತ್ತದೆ” ಎನ್ನುತ್ತಾರೆ.

ಕಾರಂತರ ಶೈಕ್ಷಣಿಕ ಚಿಂತನೆಗಳಲ್ಲಿ ಬಹಳ ಆಳವಾದ ಚಿಂತನಾ ಹೊಳಹುಗಳಿವೆ, ಒಳನೋಟವಿದೆ. ಭಾಷೆಯ ಕಲಿಕೆ ಹೇಗಿರಬೇಕು? ಕಲಿಕೆಯನ್ನು ಆಕರ್ಷಕಗೊಳಿಸುವುದು ಹೇಗೆ ಎಂಬುದಕ್ಕೆ ತಮ್ಮ ಕಾಲದ ಶಿಕ್ಷಣ ಕ್ರಮವನ್ನು ಎದುರಿಟ್ಟುಕೊಂಡೇ ಯೋಚಿಸುತ್ತಿದ್ದರು. ಯಾವ ವಯೋಮಾನದ ಮಕ್ಕಳಿಗೆ ಏನು ಕಲಿಸಿಕೊಡಬೇಕು ಎಂಬುದರ ಅರಿವಿಲ್ಲದೆ, ಯಾವುದೋ ಪಠ್ಯ ಪುಸ್ತಕವನ್ನು ಪಠ್ಯವಾಗಿಟ್ಟು ಕಂಠಸ್ಥಗೊಳಿಸಿ, ಸಂಧಿ ವಿಂಗಡಿಸಿ, ವ್ಯಾಕರಣವನ್ನು ಪ್ರತ್ಯೇಕಗೊಳಿಸಿ ತಿಳಿಸಿ ಕಲಿಸಿಕೊಡುವ ರೀತಿ ಮಕ್ಕಳಲ್ಲಿ ಉತ್ಸಾಹ ಬತ್ತಿ ಹೋಗುವಂತೆ ಮಾಡಿ, ಪುಸ್ತಕದ ಬಗೆಗೆ ವೈರಾಗ್ಯವೇ ಮೂಡುವ ಹಾಗೆ ಮಾಡುತ್ತದೆ ಎಂದರೆ ಇದು ವರ್ತಮಾನದ ಶಿಕ್ಷಣ ವ್ಯವಸ್ಥೆಯ ಅಪಮಾರ್ಗ ಎಂದೇ ಹೇಳುತ್ತಿದ್ದರು. ಪಠ್ಯದ ಮೂಲಕ ಮಕ್ಕಳೇ ಅಭಿರುಚಿಯನ್ನು ಬೆಳೆಸಲು ಸಾಧ್ಯವಾಗಬೇಕು. ಅಭಿರುಚಿಯನ್ನು ಬೆಳೆಸಲಾರದ ಶಿಕ್ಷಣ ವ್ಯರ್ಥವೆಂದೇ ತಿಳಿದಿದ್ದರು.

ಕಾರಂತರು ಭಾಷಾ ಕಲಿಕೆಯ ಬಗೆಗೆ ಹೇಳುವಾಗ ತಮ್ಮ ಕಾಲದ ಬೋಧನಾ ಕ್ರಮ ಹೇಗೆ ತಪ್ಪಿದೆ ಎಂಬುದನ್ನು ಉಲ್ಲೇಖಿಸುತ್ತಾರೆ. ಮಗುವಿಗೆ ತನ್ನ ಪರಿಸರ ಜ್ಞಾನವನ್ನು ಬೆಳೆಸುವುದು ತನ್ನ ಮಾತೃಭಾಷೆ. ಶೈಶವದಲ್ಲಿ ಮನಸ್ಸನ್ನು ರೂಪಿಸುವುದು ಮಾತೃಭಾಷೆಯೇ. ಹೀಗಾಗಿ ಅದನ್ನು 5-6 ವರ್ಷಗಳಲ್ಲಿ ಕಲಿಸಿ ಮುಗಿಸಿದ ಬಳಿಕ ಇನ್ನೊಂದು ಭಾಷೆಯನ್ನು ಕಲಿಸಬೇಕು ಎನ್ನುತ್ತಿದ್ದರು. “ಒಂದು ಭಾಷೆ ಸರಿಯಾಗಿ ಬರುವ ಮೊದಲು ಎರಡನೇ ಭಾಷೆ ಹೊರಿಸುವುದು ಮೂರ್ಖತನ. ನಿತ್ಯ ಕೇಳಿ ತಿಳಿಯುವ ಭಾಷೆಯನ್ನು ಕೇಳಿ ತಿಳಿಯುವ ರೀತಿಯಿಂದಲೇ ಕಲಿಸಬೇಕು. ಅದು ಬಿಡು ಅಕ್ಷರಗಳನ್ನು ಗುರುತಿಸಿಯಲ್ಲ, ಅರ್ಥಬದ್ಧ ಮಾತುಗಾರಿಕೆಯಿಂದ. ಇಲ್ಲಿ ನಮ್ಮ ಬೋಧನಾ ಕ್ರಮ ತಪ್ಪಿದೆ. a, b, c; C, D, E ಭಾಷೆಯ ಅಸ್ತಿವಾರವಾಗಲಾರದು” ಎನ್ನುತ್ತಿದ್ದರು. ಕಾರಂತರು ತಮ್ಮ ಕಾಲದ ಸರ್ಕಾರದ ಶಿಕ್ಷಣ ವ್ಯವಸ್ಥೆಯನ್ನು ವಿಮರ್ಶಿಸುತ್ತಲೇ ಅದಕ್ಕಿಂತ ಭಿನ್ನವಾದ ಮತ್ತು ಪರ್ಯಾಯವಾದ ಒಂದು ಪ್ರಯೋಗವನ್ನು ರೂಪಿಸಿದರು. ದೇಶದ ವಿದ್ಯಾಮಂಡಳಿಯವರು ರೂಪಿಸುತ್ತಿರುವ ಶಿಕ್ಷಣದ ಬಗೆಗೆ ಹೇಳುವಾಗ ಅದು Child Oriented ಆಗಿರಬೇಕು ಎಂದು ಬಯಸುತ್ತಲೇ ಹೀಗೆ ಹೇಳುತ್ತಾರೆ. “ನಾಲ್ಕೈದು ವರ್ಷದ ಮಕ್ಕಳ ಮೇಲೆ ಅವರ ಅಭಿರುಚಿಗೆ ಸಂಬಂಧವಿಲ್ಲದ ಯಾವತ್ತೂ ಕಗ್ಗವನ್ನು ಹೊರಿಸಿ ಅವರನ್ನು ಜೀವಂತ ಕೊಲ್ಲುತ್ತಿರುವ ಇಂದಿನ ಶಿಕ್ಷಣ ಶಿಕ್ಷಣವಲ್ಲ, ಇದು ಶಿಶುಹತ್ಯೆ. ಇಂಗ್ಲಿಷಿನಲ್ಲಿ ನಡೆಯುತ್ತಿರುವ ಕೆ.ಜಿ ನರ್ಸರಿಗಳೆಲ್ಲವೂ ಶಿಶು ಸ್ವಭಾವವನ್ನು ಕೊಲ್ಲುತ್ತಿರುವ ವ್ಯವಸ್ಥೆಗಳು. ಶಾಲೆ ಬೂಟ್ಸು, ಟೈ, ಕುರ್ಚಿ, ಕಂಠಪಾಠ, ಡ್ರಿಲ್‍ಗಳ ಯಂತ್ರ ಶಾಲೆಗಳಾಗಬಾರದು” ಎನ್ನುತ್ತಾರೆ.

ಕಾರಂತರಿಗೆ ತಮ್ಮ ಬಾಲ್ಯದ ಶಿಕ್ಷಣಕ್ರಮ ಹಾಗೂ ಇಂದಿನ ಶಿಕ್ಷಣ ಕ್ರಮದ ಬಗೆಗೆ ಸಹನೆಯಿಲ್ಲ. ಇಂದಿನ ಶಿಕ್ಷಣ ತೀರ ಯಾಂತ್ರಿಕವಾಗಿದೆ. ಮಕ್ಕಳ ಸ್ವ ಬುದ್ಧಿ, ಸೃಷ್ಟಿಕ್ರಿಯೆ, ವಿಚಾರಶೀಲತೆಗಳ ಬೆಳವಣಿಗೆಗೆ ಸ್ಥಾನ ಇಲ್ಲದಂತಾಗಿದೆ. ಕಾರಂತರೇ ಹೇಳುವಂತೆ ಜ್ಞಾನದ ಮೋಹ ವಿದ್ಯಾರ್ಥಿಗಳಲ್ಲಿ ಹುಟ್ಟಬೇಕೆಂಬ ದೃಷ್ಟಿಯಿಂದ ನಮ್ಮ ಶಿಕ್ಷಣ ಕ್ರಮ ರೂಪುಗೊಂಡಿಲ್ಲ. ಶಾಲೆಗಳಲ್ಲಿ ಒದಗಿಸಲಾಗುತ್ತಿರುವ ಶಾಸ್ತ್ರದ ಮಾಹಿತಿ ವಿದ್ಯಾರ್ಥಿಗಳಲ್ಲಿ ಜ್ಞಾನ ಪಿಪಾಸೆಯನ್ನು ಬೆಳೆಸುತ್ತಿಲ್ಲ ಎನ್ನುತ್ತಿದ್ದರು. ಶಿಕ್ಷಣದ ಉದ್ದೇಶದ ಸಂದರ್ಭದಲ್ಲಿ ಬಹಳ ಪ್ರಮುಖವಾಗಿ ಕಂಡು ಬರುವ ಎರಡೂ ಉದ್ದೇಶಗಳಾದ ಹೊಟ್ಟೆ ತುಂಬಿಸಬಲ್ಲ ವೃತ್ತಿಯನ್ನು ಒದಗಿಸಿಕೊಡುವುದು ಮತ್ತು ಮನೋವಿಕಾಸವನ್ನು ಉಂಟುಮಾಡುವುದು ಆಗಿದ್ದಾಗ, ಕಾರಂತರಿಗೆ ಈ ಎರಡೂ ಪ್ರಶ್ನೆಗಳು ಕೂಡ ಮಹತ್ವದ್ದಾಗಿ ಕಂಡಿವೆ. ಹೊಟ್ಟೆಪಾಡಿನ ದೃಷ್ಟಿಯಿಂದ ನೋಡಿದಾಗ ನಮ್ಮ ಶಿಕ್ಷಣ ಸ್ವಾವಲಂಬನೆಯನ್ನು ಬೆಳೆಸುತ್ತಿಲ್ಲ. ಅದು ಬದುಕಿಗೂ ಮನೋವೃತ್ತಿಗೂ ಸಂಬಂಧಿಸಿದ ಒಂದು ವ್ಯರ್ಥ ಹೋರಾಟವಾಗಿದೆ. ಬದುಕನ್ನು ಹೊಟ್ಟೆಯ ಪಾಡಿನ ಹೋರಾಟವನ್ನು ಎದುರಿಸುವ ದಿಟ್ಟತನವನ್ನು ನಮ್ಮ ಶಿಕ್ಷಣ ಪದವಿ ಗಳಿಸಿದವರಿಗೆ ಒದಗಿಸುತ್ತಿಲ್ಲ. ಸುಲಭ ಜೀವನದ ಭ್ರಾಮಕ ಆದರ್ಶಗಳನ್ನು ಮಾತ್ರ ಶಿಕ್ಷಣಾಲಯಗಳು ಸಾಧಿಸಿಕೊಂಡು ಬಂದಿವೆ ಎಂದು ಕಾರಂತರು ಕೊರಗುತ್ತಾರೆ. ಕಾರಂತರು ಶಿಕ್ಷಣದ ಗುರಿಗಳನ್ನು ಗುರುತಿಸುವಾಗ ಮೂರು ಮುಖ್ಯ ಅಂಶಗಳನ್ನು ಗುರುತಿಸುತ್ತಾರೆ. ವ್ಯಕ್ತಿ ವಿಕಾಸ, ವೃತ್ತಿ ವಿಕಾಸ ಹಾಗೂ ಸಾಮಾಜಿಕ ಹೊಂದಾಣಿಕೆ ಶಿಕ್ಷಣದ ಗುರಿ ಎಂದು ಗುರುತಿಸುತ್ತಾರೆ. “ವ್ಯಕ್ತಿಯಾದವನ ಆಂತರಿಕ ವಿಕಾಸ ಶಿಕ್ಷಣದ ಮೂಲ ಉದ್ದೇಶವೆನಿಸುತ್ತದೆ. ಶಿಕ್ಷಣವೆಂಬುದು ವ್ಯಕ್ತಿ ವಿಕಸನದಿಂದ ಆತನ ಮತ್ತು ಆತನ ವಿಸ್ತೃತ ಸಮಾಜದ ಹಿತ ಸಾಧನೆ ಎಂಬುದಾಗಿ ಹೇಳಬಹುದು. ಸ್ವಂತ ಜೀವನಕ್ಕೆ ವ್ಯಕ್ತಿಗೆ ಬೇಕಾದ ವೃತ್ತಿ ಶಿಕ್ಷಣಕೊಡುವುದು ಶಿಕ್ಷಣದ ಒಂದು ಮುಖವಾದರೆ, ಸಾಮಾಜಿಕ ತಿಳುವಳಿಕೆ ಒದಗಿಸುವುದು ಅದರ ಇನ್ನೊಂದು ಮುಖವಾಗಿದೆ. ವ್ಯಕ್ತಿಯು ಸಮಾಜ ಮತ್ತು ದೇಶದೊಡನೆ ಹೊಂದಿಕೊಳ್ಳುವುದಕ್ಕೆ ಬೇಕಾದ ಸತ್‍ಶೀಲವನ್ನು ರೂಪಿಸುವುದು ಶಿಕ್ಷಣದ ಮೂರನೆಯ ಮುಖ. ಈ  ಮೂರು ಮುಖಗಳುಳ್ಳ ಶಿಕ್ಷಣ ಎಲ್ಲರಿಗೂ ದೊರಕಬೇಕು” ಎಂದಿದ್ದರು.

ಕಾರಂತರ ಶಿಕ್ಷಣದ ಚಿಂತನೆ ಮತ್ತು ಪ್ರಯೋಗದ ಹಿಂದೆ ಒಂದು ಬಗೆಯ ಸ್ವಾನುಭವದ ಎಳೆಯಿತ್ತು. ಅದು ಬಹಳ ನಕಾರಾತ್ಮಕವಾದ ಬಗೆಯದ್ದು. ತನ್ನ ಬಾಲ್ಯದ ಶಿಕ್ಷಣದ ಲೋಪಗಳೇ ಅವರಲ್ಲಿ ಅದಕ್ಕಿಂತ ಭಿನ್ನವಾದ ಮತ್ತು ಪರ್ಯಾಯವಾದ ಹೊಸ ಬಗೆಯೊಂದರ ಶೋಧಕ್ಕೆ ಅವರನ್ನು ಉತ್ತೇಜಿಸಿರಬೇಕು. ಅವರು ತಮ್ಮ ‘ಸ್ಮೃತಿ ಪಟಲ’ದಲ್ಲಿ ಹೇಳಿಕೊಳ್ಳುವ ಕೆಲವು ಮಾತುಗಳು ಇದಕ್ಕೆ ಉದಾಹರಣೆಯಾಗಿ ನಿಲ್ಲಬಹುದು. “ಮೊದಲ ಪುಸ್ತಕದಲ್ಲಿ ‘ಅ-ಆ’ ದಿಂದ ಅಕ್ಷರ ಶುರುವಾಗುತ್ತದೆ. ಅಳಿಲು, ಆನೆಗಳ ಚಿತ್ರಗಳಿಂದ ಪ್ರಥಮ ಪಾಠ ತೊಡಗುತ್ತದೆ. ದುರ್ದೈವಕ್ಕೆ ‘ಅ’ ದಿಂದ ತೊಡಗುವ ಈ ಪುಸ್ತಕದ ಅಳಿಲು ನಮ್ಮ ಊರಿನ ಮಕ್ಕಳ ಪಾಲಿಗೆ ‘ಚಣಿಲು’ ಎಂಬ ಒಂದು ಪ್ರಾಣಿ. ಉಪಾಧ್ಯಾಯರು ಅದನ್ನು ‘ಅಳಿಲು’ ಎಂದು ನಮ್ಮ ಜಿಲ್ಲೆಯ ಮಕ್ಕಳಿಗೆ ಗಟ್ಟಿಯಾಗಿ ಪಾಠ ಹೇಳುವಾಗ ನಮ್ಮ ಊರಿನ ‘ಚಣಿಲು’ ‘ಅಳಿಲಾ’ಗಲೇ ಬೇಕಾಯಿತು”. “ರೂಪಾಯಿಯಿಂದ ಕಾಸಿನ ತನಕ ಮಾತ್ರವಲ್ಲದೆ ಬ್ರಿಟಿಷರ ‘ಪೌಂಡಿನಿಂದ ಪೆನ್ನಿ’ಯ ತನಕ ಕಲಿಯಬೇಕಿತ್ತು”. “ಶಾಲೆ ಮುಗಿಯುವ ಹೊತ್ತಿಗೆ ನಾವೆಲ್ಲರೂ ಒಕ್ಕೊರಲಿಂದ ‘ಗಾಡ್ ಸೇವ್ ದೀ ಕಿಂಗ್’ ಎಂದು ಗರ್ಜಿಸಿ ಹಾಡುತ್ತಿದ್ದೆವು. ಇಂಗ್ಲಿಷಿನ ಆ ಪದ್ಯದ ಅರ್ಥ ನಮಗೆ ಏನೇನೂ ಗೊತ್ತಿಲ್ಲವಾಗಿದ್ದರೂ, ಶಾಲೆ ಮುಗಿಯಿತೆಂಬ ಸಂತೋಷಕ್ಕೆ ಅದನ್ನು ಗಟ್ಟಿಯಾಗಿ ಕಿರುಚುತ್ತಿದ್ದೆವು” ಎನ್ನುತ್ತಾರೆ.

ಕಾರಂತರು ಬುದ್ಧಿ ಭಾವಗಳ ವಿಕಾಸಕ್ಕೆ ಹೆಚ್ಚಿನ ಮಹತ್ವ ನೀಡಿದ್ದಾರೆ. ತಮ್ಮ ಕಾಲದ ಶಿಕ್ಷಣ ವಿದ್ಯಾರ್ಥಿಗಳ ಬಾಲ್ಯ ಮತ್ತು ತಾರುಣ್ಯದಲ್ಲಿ ಯಾವುದೇ ಅಭಿರುಚಿ ಬೆಳೆಸುವಲ್ಲಿ ವಿಫಲವಾಗುತ್ತಿತ್ತು. ಇದರ ಪರಿಣಾಮವಾಗಿ ಶಿಕ್ಷಣ ಶಿಕ್ಷೆಯಾಗುತ್ತಿದೆ. ಬಾಲಕರ ಕಣ್ಣು ಕಿವಿಗಳು ತರಗತಿಗಳಲ್ಲಿ ಉಪಾಧ್ಯಾಯರನ್ನು ಕಾಣುವುದಕ್ಕೆ, ಕೇಳುವುದಕ್ಕೆ ಮೀಸಲಾಗಿದೆ. ಶಿಕ್ಷಣ ಪದ್ಧತಿ ಸಾರ್ಥಕವಾಗಬೇಕಾದರೆ ಮಕ್ಕಳ ಮನಸ್ಸು, ವಯಸ್ಸು, ಪರಿಸರಗಳ ಜ್ಞಾನ ಶಿಕ್ಷಣ ಕೊಡುವಾತನಿಗೆ ಇರಬೇಕು. ಆದರೆ ಮಗುವಿನ ಸ್ವಂತ ಮನಸ್ಸು ಅರಳಲು ಬೇಕಾದ ಆವರಣ, ಸಾಧನಗಳನ್ನು ಶಿಕ್ಷಣ ಕ್ರಮದಿಂದ ಕಳಚಿಬಿಟ್ಟ ಕಾರಣ, ಅವರಲ್ಲಿ ಆಸಕ್ತಿ ಹುಟ್ಟಿಸುವ ಹಾಗೆ ನಮ್ಮ ಶಿಕ್ಷಣ ಕ್ರಮ ಇಲ್ಲ ಎಂದು ಕಾರಂತರು ಟೀಕಿಸುತ್ತಾರೆ. ಕಾರಂತರು ವರ್ತಮಾನದ ಶಾಲೆಯ ಘೋರ ದುರಂತವನ್ನು ಉತ್ಪ್ರೇಕ್ಷೆ ಎನಿಸಬಹುದಾದಂತೆ, ಆದರೂ ಅದರಲ್ಲೊಂದು ವಾಸ್ತವದ ಮುಖ ಇರುವಂತೆ ಹೀಗೆ ಹೇಳುತ್ತಾರೆ. “ಇಂದಿನ ನಮ್ಮ ಶಾಲೆಗಳ ಅವಸ್ಥೆ ಏನು? ಅಕ್ಕನೊಡನೆ, ಅಣ್ಣನೊಡನೆ ಶಾಲೆಗೆ ಹೋಗುತ್ತೇನೆ ಎಂದು ಹೊರಟ ಚಿಕ್ಕ ಮಗುವೊಂದು ಎರಡನೇ ಬಾರಿಗೆ ಆ ಬಯಕೆಯನ್ನು ಮಾಡುವುದಿಲ್ಲ. ಆ ಮಗುವಿನ ಕಣ್ಣಿಗೆ ಶಾಲೆಯೊಂದು ನಗುವನ್ನು ಅಪಹರಿಸುವ ರಕ್ಕಸನಾಗಿ ಕಾಣುವುದು. ಮನೆಯಲ್ಲಿ ಸದಾ ನಗುತ್ತಾ, ಜಿಗಿಯುತ್ತಾ ಜೀವಿಸಿದ ಬಾಲಕನು ಒಂದು ವರುಷ, ವರುಷ ಏಕೆ? ಆರು ತಿಂಗಳ ಕಾಲ ಶಾಲೆಗೆ ಹೋದನೆಂದರೆ, ಅವನ ಮುಖವು ಶವದಂತಾಗುವುದು”. ಇದು ವರ್ತಮಾನದ ವಾಸ್ತವಕ್ಕೆ ಹಿಡಿದ ಕನ್ನಡಿಯಾಗಿದೆ. ಅಭಿರುಚಿ ಇಲ್ಲದೆ, ಅಭಿರುಚಿಯನ್ನು ಬೆಳೆಸದೆ ಶಿಕ್ಷಣ ಯಶಸ್ವಿಯಾಗುವುದಿಲ್ಲ, ಸಾರ್ಥಕವಾಗುವುದಿಲ್ಲ ಎಂಬುದನ್ನು ಕಾರಂತರು ಮತ್ತೆ ಮತ್ತೆ ಹೇಳುತ್ತಾರೆ.

ಪ್ರಾಥಮಿಕ ಶಿಕ್ಷಣ ಕಾರಂತರ ಆಸಕ್ತಿಯ ಕ್ಷೇತ್ರ. ಅವರ ಪ್ರಯೋಗ ಚಿಕ್ಕ ಮಕ್ಕಳ ಸಲುವಾಗಿಯೇ ಇತ್ತು. ಮಕ್ಕಳ ಇಂದ್ರಿಯ ಪ್ರಪಂಚವನ್ನು ಜಡಗೊಳಿಸಿ, ಅವರ ಭಾವ ಜೀವನವನ್ನು ಬರಡುಗೊಳಿಸುವ ಹತ್ತು ಮಕ್ಕಳಿಗೆ ಚೆನ್ನಾಗಿ ಕುಳಿತು ಆಡಲು ಜಾಗ ಇಲ್ಲದಲ್ಲೂ ಹಣ ಸುರಿದು ಶಿಶು ಸೇವೆಗೆ ಹೊರಟ ಬಾಲವಾಡಿಗಳ ಮೇಲೆ ಅವರು ಆಕ್ರೋಶವನ್ನು ವ್ಯಕ್ತಪಡಿಸುತ್ತಾರೆ. ಮಕ್ಕಳ ಕಿವಿ, ಕಣ್ಣು, ಮನಸ್ಸು ಬೆಳೆಸದ ಬಾಲವಾಡಿಗಳು ಮಕ್ಕಳ ಹಿಂಸಾಲಯಗಳು ಎಂದೇ ಹೇಳಿದ್ದರು. ಬಾಲವಾಡಿಗಳು ‘ಶಿಶು ಪಂಜರ’ಗಳೆಂದು ಹೇಳುತ್ತಾ, ಎಳೆಯ ಮಕ್ಕಳ ಮೇಲೆ ಶುಷ್ಕ ಪಾಠಗಳ ಹೊರೆ ಹೊರಿಸುವ ಹಿರಿಯರು ‘ಮಕ್ಕಳ ಪಾಲಿನ ಮೃತ್ಯು’ ಗಳೆಂದು ಹೇಳುತ್ತಿದ್ದರು. ಮೂರು – ಮೂರುವರೆ ವರ್ಷದ ಮಕ್ಕಳನ್ನು ತಂದು ಕೂಡಿಸಿ ಅವುಗಳ ಮೇಲೆ ಗಣಿತ, ವಿಜ್ಞಾನ ಮೊದಲಾದ ಕಠಿಣ ವಿಷಯಗಳ ಹೊರೆಯನ್ನು ಹೊರಿಸುವ ಹಿರಿಯರು ಎಂದೂ ಮಕ್ಕಳ ಹಿತಾಕಾಂಕ್ಷಿಗಳಲ್ಲ, ಅವರು “ಮಕ್ಕಳ ಪಾಲಿನ ಮೃತ್ಯುಗಳು” ಎಂದು ಟೀಕಿಸಿದ್ದರು.

ನಮ್ಮ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಗುವಿಗೆ ಕಲಿಯುವ ಸ್ವಾತಂತ್ರ್ಯವನ್ನು ನೀಡುತ್ತಿಲ್ಲ. ಬದಲಾಗಿ ಅದೊಂದು ಯಾಂತ್ರಿಕ ಕ್ರಿಯೆಯಾಗಿ ಹೋಗಿದ್ದು, ಶಿಸ್ತಿನ ಹೆಸರಲ್ಲಿ ಮಗುವಿನ ಸಹಜ ಸ್ವಭಾವವನ್ನು ಕಸಿದುಕೊಳ್ಳುವ ಕೆಲಸವನ್ನು ಮಾಡುತ್ತಿದೆ ಎಂದು ಹೇಳುತ್ತಾರೆ. ಉತ್ಪಾದಕ ಶಕ್ತಿಯನ್ನು ಬೆಳೆಸದೇ ಹೋಗುವ ಶಿಕ್ಷಣ ವ್ಯರ್ಥ ಪ್ರಯತ್ನ ಎನ್ನುತ್ತಾರೆ. ಹಳ್ಳಿಯ ಬಾಲಕರಿಗೆ ಕೊಡುವ ಶಿಕ್ಷಣವು ಅವರ ಗ್ರಾಮ ಜೀವನಕ್ಕೆ ಸಹಕಾರಿಯಾಗುವಂತಹದಿರಬೇಕು. ಅದು ಅವರ ಹೈಸ್ಕೂಲ್ ಶಿಕ್ಷಣಕ್ಕೆ ಅಡಿಗಲ್ಲು ಮಾತ್ರವಾಗಿರಬಾರದು ಬದಲಾಗಿ ಅಲ್ಲಿನ ಪಠ್ಯಗಳು ಅವರ ನಿತ್ಯಜೀವನಕ್ಕೆ ಪ್ರತ್ಯಕ್ಷವಾಗಿ ಇಲ್ಲವೇ ಪರೋಕ್ಷವಾಗಿ ಸಹಾಯವನ್ನುಂಟುಮಾಡುವಂತಿರಬೇಕು. ವೃತ್ತಿ ಪಾಠವು ಜೀವನಕ್ಕೆ ಸಹಾಯವಾಗಬೇಕು ಎನ್ನುತ್ತಾರೆ. ಹಾಗೆಯೇ ಪ್ರಸ್ತುತ ಇರುವ ಕ್ರಮವಾದ ಮೊದಲ ತರಗತಿಯಿಂದಲೇ ಬರೆಯಲು ಕಲಿಸುವ ಬದಲು, ಮೊದಲು ಓದಿನ ರುಚಿ ಹಿಡಿಸಿ, ಆ ಬಳಿಕ ಬರೆಯುವುದನ್ನು ಕಲಿಸಬೇಕು ಎಂದು ಹೇಳುತ್ತಾರೆ. ಓದುವುದಕ್ಕೆ ಬಂದ ಬಳಿಕವಷ್ಟೆ ಬರೆಯುವುದನ್ನು ಕಲಿಸಿದರಾಯಿತು ಎಂಬುದನ್ನು ಹೇಳುತ್ತಾರೆ.

ಕಲಿಕೆ – ಅಭಿರುಚಿ ಶಿಕ್ಷಣ ಕ್ರಮ ವರ್ತಮಾನದಲ್ಲಿ ಹೇಗಿದೆ ಎನ್ನುವುದನ್ನು ಹೇಳುವ ಕಾರಂತರು ವಿದ್ಯಾರ್ಥಿಗಳ ಮನೋಧರ್ಮ ಅರಿಯದೆಯೇ ಹಿರಿಯರು ತಮಗೆ ಮುಖ್ಯವೆಂದು ತೋರಿದ ಜ್ಞಾನವನ್ನು ಕಿರಿಯರ ತಲೆಯೊಳಗೆ ತುಂಬಿಸುವ ಪ್ರಯತ್ನವಾಗಿದೆ ಎಂದು ಹೇಳುತ್ತಲೇ, ಈ ಬಗೆಯ ವ್ಯವಸ್ಥೆ ಇದ್ದರೂ ಪರಿವರ್ತನೆ ಯಾಕೆ ಸಾಧ್ಯವಾಗುತ್ತಿಲ್ಲವೆಂದರೆ, “ನಮ್ಮ ವಿಶ್ವ ವಿದ್ಯಾಲಯಗಳಲ್ಲೆ, ಶಾಲೆಗಳಲ್ಲಿ ತಯಾರಿಸಲ್ಪಟ್ಟ ಮಿತ ದೃಷ್ಟಿಕೋನದ ಅಧ್ಯಾಪಕ, ಪ್ರಾಧ್ಯಾಪಕ ವರ್ಗದಿಂದ ಆ ಬಗೆಯ ಬದಲಾವಣೆಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ” ಎನ್ನುತ್ತಾರೆ. ಹಾಗಾದರೆ ಶಿಕ್ಷಣ ಮಾಡಬೇಕಾದ ಕಾರ್ಯವೇನು? ಎಂದು ಸಹಜವಾದ ಪ್ರಶ್ನೆ ಎದುರಾಗುತ್ತದೆ. ಕಾರಂತರು ಈ ಬಗೆಯ ಪ್ರಶ್ನೆಗೆ ಉತ್ತರಿಸುತ್ತಾ ಶಿಕ್ಷಣದ ಆದರ್ಶಗಳು ಏನು ಎಂಬುದನ್ನು ಹೀಗೆ ಹೇಳುತ್ತಾ ಮೂರು ಮುಖ್ಯವಾದ ಅಂಶಗಳನ್ನು ಗುರುತಿಸುತ್ತಾರೆ. ಅವುಗಳೆಂದರೆ;

1. “ಮಗುವಿನ ಅಭಿರುಚಿಯನ್ನು ತಿಳಿದು ಬೆಳೆಸುವುದು.
2. ಮಗುವಿಗೆ ಜ್ಞಾನಾಭಿರುಚಿಯಿಂದ ಹುಟ್ಟಿಸಿ ಆನಂದವನ್ನು ದೊರಕಿಸಿಕೊಳ್ಳುವುದಕ್ಕೆ ಸಹಾಯ ಮಾಡುವುದು.
3. ತನ್ನ ಅನುಭವವನ್ನು ಸಮಾಜಕ್ಕೆ ಅರ್ಪಿಸಲು ತರಬೇತಿ ಮಾಡುವುದು” ಎನ್ನುತ್ತಾರೆ.

ಅಭಿರುಚಿಗೆ ಪೋಷಣೆ ಮತ್ತು ಬೆಳವಣಿಗೆಗಳಾಗದಿದ್ದಲ್ಲಿ ಶಿಕ್ಷಣವು ಹೊರೆಯಾಗಿ ಶಾಲೆ ಅಥವಾ ಕಾಲೇಜು ಶಿಕ್ಷಣದ ನಂತರ ಅಧ್ಯಯನಶೀಲತೆ ಉಳಿಯುವುದಿಲ್ಲ. ಅದು ವ್ಯಕ್ತಿ ಮತ್ತು ಸಮಾಜಕ್ಕೆ ಎರಡಕ್ಕೂ ಪ್ರತಿಕೂಲ. ಕಾರಂತರು ಈ ಬಗೆಯ ಸಂಗತಿಗೆ ಒಂದು ಉದಾಹರಣೆಯನ್ನು ಹೀಗೆ ಕೊಡುತ್ತಾರೆ. ಒಂದು ಸಂದರ್ಶನದಲ್ಲಿ ಎಂ.ಎ ಮುಗಿಸಿ ಆರೆಂಟು ವರ್ಷಗಳಾದ ಉದ್ಯೋಗಾಕಾಂಕ್ಷಿಗೆ ಪ್ರಶ್ನೆ ಕೇಳಿದಾಗ “ಕಾಲೇಜು ಬಿಟ್ಟ ನಂತರ ಈ ಆರೆಂಟು ವರ್ಷಗಳಲ್ಲಿ ಹಾಗೆ ಓದಿಕೊಂಡ ವಿಷಯಗಳನ್ನು ಕುರಿತು ಮುಂದೆ ನೀವು ಯಾವ ಗ್ರಂಥ ಓದಿದಿರಿ ಎಂದು ಕೇಳಿದಾಗ ನನಗೆ ದೊರಕಿದ ಉತ್ತರ “ಚಂದಮಾಮ ಅಥವಾ ಅದರಂತಿರುವ ಒಂದೆರಡು ಪತ್ರಿಕೆಗಳ ಹೆಸರುಗಳು” ಎನ್ನುತ್ತಾ ತಮ್ಮ ವಿಷಯಗಳನ್ನು ಕುರಿತು ಅಸಕ್ತಿಯನ್ನು ಕೆರಳಿಸದೆ ಹೋದದ್ದು ಇದಕ್ಕೆ ಕಾರಣವೆಂದು ಕಾರಂತರು ಅರ್ಥೈಸುತ್ತಾರೆ.

ಅಭಿರುಚಿ ಕಾರಂತರ ಶಿಕ್ಷಣ ಪರಿಕಲ್ಪನೆಗಳಲ್ಲಿ ಬಹಳ ಪ್ರಮುಖ ಸ್ಥಾನವನ್ನು ಪಡೆದುಕೊಳ್ಳುತ್ತದೆ. ಕಾರಂತರು ತಾನು ಕಂಡ ಅನೇಕ ಶಾಲೆಗಳ ಸ್ಥಿತಿಯನ್ನು ಹೇಳುವಾಗ ಅಲ್ಲೆಲ್ಲಾ ಇರುವ ವಾತಾವರಣ ಹೆಚ್ಚಾಗಿ ನಿರುತ್ಸಾಹಗೊಳಿಸುವಂತಹದು. ಈ ಶಾಲೆಗಳಲ್ಲಿ ವಿದ್ಯಾರ್ಥಿಗಳ ಪಾತ್ರ ಕೇಳುವುದಕ್ಕೆ ಸೀಮಿತವಾಗಿರುವುದು, ತಮಗೆ ಪ್ರಸ್ತುತವಲ್ಲದ ಅಂಶಗಳು ಪಠ್ಯ ಕ್ರಮದಲ್ಲಿರುವುದು, ಇರುವ ವಿಷಯಗಳಲ್ಲಿ ಹಲವು ತಮ್ಮ ಗ್ರಹಣ ಶಕ್ತಿಗೆ ಎಟುಕದಿರುವುದು ಮೊದಲಾದವುಗಳಾಗಿವೆ. “ವಿದ್ಯಾರ್ಥಿಗಳ ಅನುಭವಕ್ಕೆ, ಗ್ರಹಣಶಕ್ತಿಗೆ ಎಟುಕದ ಯಾವ ವಿಷಯವನ್ನು ಹೇಳಿದರೂ ಅವರಿಂದ ನಿರುತ್ಸಾಹ ಹುಟ್ಟುತ್ತದೆ. ಶಿಕ್ಷಣ ಬರಡಾಗುತ್ತದೆ. ಮಕ್ಕಳ ಪಠ್ಯಕ್ರಮವನ್ನು ಏರ್ಪಡಿಸುವಾಗ ಅವರಿಗಾಗಿ ಗ್ರಂಥಗಳನ್ನು ಬರೆಯುವಾಗ, ಅವರಿಗೆ ತಿಳಿಯದ ವಿಷಯಗಳನ್ನು ಹೇಳಬೇಕಾಗಿ ಬಂದಾಗಲೆಲ್ಲ ತಿಳಿದ ವಿಷಯಗಳೊಡನೆ ನೇರವಾಗಿ ಸಂಬಂಧವನ್ನು ತೋರಿಸಿಯೇ ಅವರ ಅನುಭವದ ಪ್ರಯೋಜನವನ್ನು ಪಡೆದುಕೊಂಡು ಮುಂದುವರಿಯ ಬೇಕು” ಎನ್ನುತ್ತಾರೆ. ಅಂದರೆ ವಿದ್ಯಾರ್ಥಿಗಳಿಗೆ ತರಗತಿಗಳಲ್ಲಿ ಕೇಳಿದ ಪ್ರಶ್ನೆಗಳಿಗೆ ಉತ್ತರ ಹೇಳುವುದಕ್ಕೆ, ವಿದ್ಯಾರ್ಥಿಗಳ ಪಾತ್ರವನ್ನು ಸೀಮಿತಗೊಳಿಸದೆ ಪ್ರಶ್ನೆ ಕೇಳುವುದಕ್ಕೆ ಅವರನ್ನು ಪ್ರೋತ್ಸಾಹಿಸುವುದರಿಂದ ಅವರ ಉತ್ಸಾಹವನ್ನು ಕಾಪಾಡಿಕೊಳ್ಳಬಹುದು ಎನ್ಮ್ನತ್ತಾರೆ. ಈ ಚಿಂತನೆಯ ಹಿಂದೆ ಮಗುವಿನ ಮನಸ್ಸಿನ ಸಾಮರ್ಥ್ಯವನ್ನು ಗ್ರಹಿಸಿಕೊಂಡ ಒಂದು ಬಗೆಯ ತಜ್ಞತೆ ಇದೆ. ಮೊದಲು ಓದು, ಆ ಬಳಿಕ ಬರವಣಿಗೆ. ಇದು ಕಾರಂತರ ಗ್ರಹಿಕೆಯ ಶಿಕ್ಷಣದ ಕ್ರಮವಾಗಿತ್ತು. ಇದರ ಸಾಧ್ಯತೆಯನ್ನು ನಮ್ಮ ಆಧುನಿಕ ಕಾಲದ ಶಿಕ್ಷಣ ವ್ಯವಸ್ಥೆಯ ಬೇರೆ ಬೇರೆ ಹಂತದ, ಬೇರೆ ಬೇರೆ ಮುಖಗಳನ್ನು ಪ್ರಯೋಗಕ್ಕೆ ಒಳಪಡಿಸಬೇಕಾದ ಅವಶ್ಯಕತೆ ಇದೆ.

1 ಟಿಪ್ಪಣಿ Post a comment
  1. ಅಮೂಲ್ಯವಾದ ಅಭಿಪ್ರಾಯಗಳು.

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments