ವಿಷಯದ ವಿವರಗಳಿಗೆ ದಾಟಿರಿ

ಅಕ್ಟೋಬರ್ 13, 2017

ತಡೆವವರು ಬನ್ನಿರೋ ಹೊಡೆವವರು ಬನ್ನಿರೋ ಎನ್ನುತ್ತಾ ಸಾಗುತ್ತಿದೆ #ಜನರಕ್ಷಾಯಾತ್ರೆ

‍ನಿಲುಮೆ ಮೂಲಕ

– ಸಂತೋಷ್ ತಮ್ಮಯ್ಯ

೨೯ ವರ್ಷದ ಹಿಂದೆ ಅವರು ಪಾಲಕ್ಕಾಡಿನಲ್ಲಿ ಸಂಘದ ಶಾರೀರಿಕ್ ಪ್ರಮುಖ್ ಆಗಿದ್ದ ವಿ.ಸುಧಾಕರನ್‌ರನ್ನು ಬಸ್ಸಿನಿಂದೆಳೆದು ಬರ್ಬರವಾಗಿ ಕೊಲೆಮಾಡಿದ್ದರು. ಸುಧಾಕರನ್ ಕೋಯಿಕ್ಕೋಡಿನ ಬಿಜೆಪಿಯ ಕಾರ್ಯಕರ್ತನೆಂಬುದೊಂದೇ ಕಾರಣ. ೨೧ ವರ್ಷದ ಹಿಂದೆ ತ್ರಿಶೂರಿನಲ್ಲಿ ಟಿ.ಎಸ್ ಸಂತೋಷ್ ಎಂಬ ಸಣ್ಣ ವ್ಯಾಪಾರಿಯನ್ನೂ ಕೊಂದರು. ಅದಕ್ಕೂ ಕಾರಣ ಬಿಜೆಪಿ ಕಾರ್ಯಕರ್ತ ಎಂಬುದೊಂದೇ. ೩೯ ವರ್ಷದ ಹಿಂದೆ ಕಣ್ಣೂರು ಜಿಲ್ಲೆಯ ಪನ್ನನೂರ್ ಚಂದ್ರನ್ ಎಂಬವರನ್ನು ಸಂಘ ಸ್ಥಾನದಲ್ಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಅದಕ್ಕೆ ಕಾರಣ ಕಮ್ಯುನಿಸ್ಟ್ ಗ್ರಾಮದಲ್ಲಿ ಶಾಖೆ ನಡೆಸಿದ ಎಂಬ ಒಂದೇ ಕಾರಣ. ೩೦ ವರ್ಷದ ಹಿಂದೆ ಕೋಯಿಕ್ಕೋಡಿನ ಬಿಎಂಎಸ್ ಕಾರ್ಯಕರ್ತ ಸಿ.ಕೆ ರಾಮಚಂದ್ರನ್ ಅವರನ್ನು ಮುಖದ ಗುರುತು ಕೂಡಾ ಸಿಗದಂತೆ ಕಮ್ಯುನಿಸ್ಟರು ಕೊಂದಿದ್ದರು. ಕಾರಣ, ಕಾರ್ಮಿಕ ಯೂನಿಯನ್ನುಗಳು ಕೇವಲ ಕಮ್ಯುನಿಸ್ಟರ ಸ್ವತ್ತು ಎಂಬ ಮತಾಂಧತೆ. ೧೫ ವರ್ಷದ ಹಿಂದೆ ವೃತ್ತಿಯಲ್ಲಿ ಡ್ರೈವರ್ ಅಗಿದ್ದ ಆರೆಸ್ಸೆಸ್ ಕಾರ್ಯಕರ್ತ ಉತ್ತಮನ್‌ರನ್ನೂ ಕಮ್ಯುನಿಸ್ಟರು ಹೀಗೇ ಕೊಂದಿದ್ದರು. ೧೨ ವರ್ಷಗಳ ಹಿಂದೆ ಕಣ್ಣೂರಿನ ಆರೆಸ್ಸೆಸ್ ಜಿಲ್ಲಾ ಬೌದ್ಧಿಕ್ ಪ್ರಮುಖ್ ಅಶ್ವಿನ್ ಕುಮಾರ್‌ರನ್ನೂ ಕಮ್ಯುನಿಸ್ಟರು ಧಾರುಣವಾಗಿ ಕೊಚ್ಚಿಹಾಕಿದ್ದರು.

೧೯೬೯ರಿಂದ ಕಮ್ಯುನಿಸ್ಟರು ಹೀಗೆ ಕೊಂದ ಆರೆಸ್ಸೆಸ್ ಮತ್ತು ಬಿಜೆಪಿ ಕಾರ್ಯಕರ್ತರ ಸಂಖ್ಯೆ ೨೮೪. ಈಗಿನ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಕಾರಕ್ಕೆ ಬಂದ ನಂತರ ನಡೆದ ಕೊಲೆಗಳ ಸಂಖ್ಯೆಯೇ ೧೪! ಎಲ್ಲಾ ಕೊಲೆಗಳಿಗೆ ಕಾರಣ ಕೇರಳದಲ್ಲಿ ಕಮ್ಯುನಿಸಮ್ಮಿಗೆ ಹೊರತಾದ ಯಾವುದೂ ಅಸ್ತಿತ್ವದಲ್ಲಿರಬಾರದು ಎಂಬ ಅಸಹನೆ, ರಾಷ್ಟ್ರೀಯತೆಯೆಂಬುದು ಅಳಿಯಬೇಕು, ಸಂಘರ್ಷ ಉಂಟಾಗಬೇಕು, ಮತೀಯ ದಾಹ. ಒಟ್ಟಾರೆ ಬಲಪಂಥೀಯರು ಹೆದರಿ ಮೂಲೆಸೇರಬೇಕು ಎಂಬುದು. ವಿಶೇಷವೆಂದರೆ ಕೇರಳದಲ್ಲಿ ಆರೆಸ್ಸೆಸ್ ಮತ್ತು ಬಿಜೆಪಿ ಕಾರ್ಯಕರ್ತರ ಕೊಲೆಗಳಾದಷ್ಟೂ ಅವೆರಡೂ ಬೆಳೆಯುತ್ತಲೇ ಇವೆ. ಹರಿದ ರಕ್ತವನ್ನೇ ಕಾರ್ಯಕರ್ತರು ಗಂಧದಂತೆ ಹಣೆಗೆ ಹಚ್ಚಿಕೊಂಡಿದ್ದಾರೆ. ವ್ಯಕ್ತಿಗಳ ಕೊಲೆಯಿಂದ ವಿಚಾರವಂತಿಕೆ ಸಾಯುವುದಿಲ್ಲ ಎಂಬುದಕ್ಕೆ ಕೇರಳ ಸಾಕ್ಷಿಯೆಂಬಂತೆ ಕಳೆದ ಹನ್ನೊಂದು ದಿನಗಳಿಂದ ನಡೆಯುತ್ತಿರುವ ಜನರಕ್ಷಾ ಯಾತ್ರೆಯಲ್ಲಿ ರಾಮಚಂದ್ರನ್ ಮಗಳು ದೇವಾಂಗನಾ ವಂದೇ ಮಾತರಂ ಹಾಡುತ್ತಾಳೆ, ತಲಶೇರಿ ಸಂತೋಷ್ ಮಗಳು ವಿಸ್ಮಯಾ ಕಣ್ಣೀರು ಹಾಕುತ್ತಾ ಪಾದಯಾತ್ರೆ ಮಾಡುತ್ತಿದ್ದಾಳೆ, ರಾಧಾಕೃಷ್ಣನ್ ಪತ್ನಿ ವಿಮಲಾ ಮೂಕವಾಗಿ ಪಾದಾಯಾತ್ರೆ ಸಾಗುತ್ತಿದ್ದಾರೆ, ಪಾನೂರು ಚಂದ್ರನ್ ಪತ್ನಿ ಅರುಂಧತಿ ನನ್ನಂಥ ದುಖಃ ಮತ್ತಾರಿಗೂ ಬರಬಾರದೆಂದು ಬಂದಿದ್ದೇನೆ ಎಂದು ಗುಡುಗುತ್ತಾರೆ, ದಿವಂಗತ ಉತ್ತಮನ್ ಅಪ್ಪನೂ, ಮಕ್ಕಳೂ ಯಾತ್ರೆಯಲ್ಲಿ ಪಾಲ್ಗೊಂಡು ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ. ಅಶ್ವಿನ್ ಕುಮಾರರ ವೃದ್ದ ತಾಯಿಯ ಮುಖದಲ್ಲಿ ಪುತ್ರಶೋಕಕ್ಕಿಂತಲೂ ಕಮ್ಯುನಿಸ್ಟರ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತದೆ. ಅಂದರೆ ಯಾವುದನ್ನು ಸಮೂಲ ನಿರ್ನಾಮ ಮಾಡಬೇಂದು ಕಮ್ಯುನಿಸ್ಟರು ಮತ್ತು ಜಿಹಾದಿಗಳು ರಕ್ತ ಚೆಲ್ಲಿದ್ದರೋ ಆ ಉದ್ದೇಶವಿನ್ನೂ ಕೇರಳದಲ್ಲಿ ಈಡೇರಿಲ್ಲ. ಈಡೇರುವುದೂ ಇಲ್ಲ ಎಂಬುದು ಯಾತ್ರೆಯ ಪ್ರತೀಹೆಜ್ಜೆಯೂ ಸಾರುತ್ತಿದೆ. ಜನರಕ್ಷಾ ಯಾತ್ರೆ ವಿಶೇಷವೆನಿಸುವುದು ಇಷ್ಟಕ್ಕೇ ಮಾತ್ರವಲ್ಲ. ಅದು ರಾಜಕೀಯ ನಡೆಯೂ ಅಲ್ಲ, ಕೇವಲ ಆಕ್ರೋಶದ ಉದ್ದೇಶವೂ ಅಲ್ಲ. ನಿಜಕ್ಕೂ ಅದೊಂದು ವೈಚಾರಿಕ ಸಂಘರ್ಷ.

ಏಕೆಂದರೆ ಈ ಕಮ್ಯುನಿಸಂ ಎಂಬುದು ರಕ್ತಪಿಶಾಚಿ ವಾಂಪೈರ್‌ನಂಥದ್ದು. ಜಗತ್ತಿನ ಎಲ್ಲೆಲ್ಲಿ ಕಮ್ಯುನಿಸಂ ಎಂಬ ಪದ ಬಳಕೆಯಲ್ಲಿದೆಯೋ ಅಲ್ಲೆಲ್ಲಾ ರಕ್ತದ ಹೊಳೆ ಹರಿದಿದೆ ಎಂದೇ ಅರ್ಥ. ಅಸಲಿಗೆ ನರಮೇಧಗಳೇ ಕಮ್ಯುನಿಸ್ಟರ ಮೂಲ ಪ್ರಣಾಳಿಕೆ. ಕಮ್ಯುನಿಸಂ ತಾನು ಬೇರೂರಿರುವಲ್ಲಿ ಮತ್ತೊಂದು ಸಂಗತಿ ಹುಟ್ಟುವುದನ್ನೆಂದೂ ಸಹಿಸುವುದಿಲ್ಲ. ತನ್ನನ್ನು ಒಪ್ಪದ ಎಲ್ಲವನ್ನೂ ಹಿಂಸೆಯ ಮೂಲಕ ಅಡಗಿಸಲು ಕಮ್ಯುನಿಸ್ಟರು ಶಕ್ತರು. ಅವರಿಗೆ ತಿಳಿದಿರುವುದೊಂದೇ ಮಾರ್ಗ. ಅದು ಹಿಂಸೆ. ಹಿಂಸೆಯಿಂದ ಭಯ ಸೃಷ್ಟಿಸಿ ಕ್ರಮೇಣ ಆವರಿಸಿಕೊಳ್ಳುವುದು ಅವರ ಜಾಯಮಾನ. ಹಾಗಾಗಿ ವಿಶ್ವದ ಎಲ್ಲೂ ನಮಗೆ ಕಮ್ಯುನಿಸಂ ವಿರುದ್ಧದ ಚಳವಳಿ ಯಶಸ್ವಿಯಾಗಿರುವುದನ್ನು ನೋಡಲಾಗುವುದಿಲ್ಲ. ಸಾಧಾರಣವಾಗಿ ಕಮ್ಯುನಿಸ್ಟ್ ವಿರೋಧಿಯೊಬ್ಬನ ಹೆಣ ಬಿದ್ದರೆ ಇಡೀ ಸಮಾಜ ನಿಷ್ಕ್ರೀಯಗೊಂಡು ಕಾಮ್ರೆಡುಗಳ ಕಾಲಕೆಳಗೆ ಬಿದ್ದುಕೊಳ್ಳುತ್ತದೆ. ಆದರೆ ಕೇರಳದಲ್ಲಿ ಕಮ್ಯುನಿಸಂ ವಿರುದ್ಧ ಚಳವಳಿ ನಡೆಯುತ್ತಿದೆ!

ಹಿಂದುತ್ವದ ಶಕ್ತಿ ಪ್ರದರ್ಶನ: ಕಳೆದ ೧೧ ದಿನಗಳಿಂದ ನಡೆಯುತ್ತಿರುವ ಜನ ರಕ್ಷಾ ಯಾತ್ರೆಯ ಜನಸಾಗರವನ್ನು ನೋಡಿದರೆ ಇದು ಕೇವಲ ಬಿಜೆಪಿಯ ಸಾಧನೆ ಮಾತ್ರ ಎನಿಸುವುದಿಲ್ಲ. ಕೇರಳದ ಪರಿಸ್ಥಿತಿ ಅದನ್ನೂ ದಾಟಿ ಬಹಳ ಮುಂದೆ ಸಾಗಿಯಾಗಿದೆ. ಏಕೆಂದರೆ ಹಿಟ್ಲರನ ಅವಸ್ತವಿಟ್ಜ್ ಕ್ಯಾಂಪ್ ಅನ್ನು ನೆನಪಿಸುವ ತಾಣಗಳನ್ನು ಕಮ್ಯುನಿಸ್ಟರು ನಿರ್ಮಿಸಿ ಅರೆಶತಮಾನಗಳೇ ಕಳೆದಿವೆ. ಅವರ ಮೊದಲ ಗುರಿ ಸಂಘದ ಶಾಖೆಗಳು. ಬಲಿದಾನಗಳಿಂದ ಕುಗ್ಗದೆ ರಾಷ್ಟ್ರೀಯತೆಯನ್ನು ಬೆಳೆಸಿದ ಸಂಘದ ಸ್ವಯಂಸೇವಕರ ಬದ್ಧತೆ ಕೇರಳದ ಸಾಮಾಜಿಕ ವಾತಾವರಣವನ್ನು ಕಾಪಾಡಿಕೊಂಡು ಬಂತು. ಆದರೂ ಅಪಾಯದ ಕತ್ತಿ ತೂಗುತ್ತಲೇ ಇತ್ತು. ರಾಜ್ಯದ ಕೊಲ್ಲಂ, ತಿರುವನಂತಪುರಂ, ಪಾಲಕ್ಕಾಡ್ ಮತ್ತು ಅಲೆಪ್ಪಿಗಳಲ್ಲಿ ಹಿಂದುಗಳ ಸಂಖ್ಯೆ ಶೇ.೭೦. ವಯನಾಡ್, ಕೊಟ್ಟಾಯಂ, ಕಾಸರಗೋಡು, ಕೋಝಿಕ್ಕೋಡ್, ತ್ರಿಶೂರ್, ಕಣ್ಣೂರು ಜಿಲ್ಲೆಗಳಲ್ಲಿ ಹಿಂದುಗಳ ಸಂಖ್ಯೆ ಶೇ.೫೦ರಿಂದ ೬೦ರಷ್ಟು. ಮಲ್ಲಪುರ ಸಂಪೂರ್ಣ ಮುಸಲ್ಮಾನ ಜಿಲ್ಲೆಯಾಗಿ ಬದಲಾಗಿದೆ. ೨೦೧೧ರ ಜನಗಣತಿಯ ಪ್ರಕಾರ ಕೇರಳದಲ್ಲಿ ಹಿಂದುಗಳ ಸಂಖ್ಯೆ ಶೇ.೫೪.೭೩ಕ್ಕಿಳಿದಿದೆ. ಈ ಐವತ್ನಾಲ್ಕು ಚಿಲ್ಲರೆ ಶೇಕಡಾದಲ್ಲಿ ಅ‘ದಷ್ಟು ಹಿಂದುಗಳು ತಲೆಕೆಟ್ಟ ಕಮ್ಯುನಿಸ್ಟರು. ಕೇರಳ ಕೈಬಿಡಲು ಇನ್ನೇನು ಬೇಕು? ಜನರಕ್ಷಾ ಯಾತ್ರೆ ಬಿಜೆಪಿಯ ಅಭಿಯಾನಕ್ಕಿಂತ ಮಿಗಿಲಾಗಿ ಕಾಣುವುದು ಈ ಲೆಕ್ಕಾಚಾರಗಳಿಂದ. ಈಗಲ್ಲದಿದ್ದರೆ ಮತ್ತೆಂದೂ ಇಲ್ಲ, ಮಾಡು ಇಲ್ಲವೇ ಮಡಿ ಎನ್ನುವ ಸಾಮಾನ್ಯನ ಭಾವನೆಯ ಪ್ರಕಟೀಕರಣವೇ ಜನರಕ್ಷಾ ಯಾತ್ರೆ.

ಈ ಹನ್ನೊಂದು ದಿನಗಳ ಯಾತ್ರೆ ಸಾಗಿದ ಮಾರ್ಗಗಳೆಲ್ಲವೂ ಹಿಂದೂ ಅಲ್ಪಸಂಖ್ಯಾತವಾಗಿರುವ ಮತ್ತು ಶೇ. ೫೦ರಷ್ಟಿರುವ ಪ್ರದೇಶಗಳಲ್ಲಿ. ಅಂಥಲ್ಲೂ ಯಾತ್ರೆಗೆ ಹರಿದುಬಂದ ಜನಸಾಗರವನ್ನು ಗಮನಿಸಿದರೆ ತಲೆಕೆಟ್ಟ ಹಿಂದುಗಳನ್ನು ಬಿಟ್ಟರೆ ಉಳಿದವರೆಲ್ಲರೂ ಅಲ್ಲಿ ಭಾಗವಹಿಸಿದಂತಿತ್ತು! ಒಂದು ಧ್ರಡ ನಿಶ್ಚಯ, ಒಂದು ಪ್ರತಿಜ್ಞೆ, ಒಂದು ರಂಗಕ್ಕಿಳಿಯುವ ಹುಮ್ಮಸ್ಸು, ಎದುರಿಸುವ ತಾಕತ್ತು, ಸ್ವಾಭಿಮಾನ ಪ್ರದರ್ಶನ, ಸಮಾಜ ಉಳಿಯಲು ಬೀದಿಗೆ ಬರಲೇಬೇಕಾದ ಅನಿವಾರ್ಯತೆಗಳನ್ನು ವಿಶ್ವಕ್ಕೆ ತೋರಿಸಬೇಕೆಂಬ ಧಾವಂತವಿದ್ದಂತೆ ಯಾತ್ರೆ ಸಾಗುತ್ತಿದೆ. ಏಕೆಂದರೆ ಮೊದಲೆಂದೂ ಕಮ್ಯುನಿಸ್ಟ್ ಕೊಲೆಗಳು ಇಷ್ಟು ದೊಡ್ಡ ಮಟ್ಟದಲ್ಲಿ ಎಲ್ಲೂ ಚರ್ಚೆಯಾಗಿರಲಿಲ್ಲ. ಗಮನವನ್ನು ಸೆಳೆದಿರಲಿಲ್ಲ. ಆತ್ಮಸ್ಥೈರ್ಯ ಈ ಮಟ್ಟಿಗೆ ಪ್ರದರ್ಶನವಾಗಿದ್ದೂ ಇರಲಿಲ್ಲ. ಇದುವರೆಗೆ ಹತ್ಯೆಯಾದ ಬಲಿದಾನಿಗಳ ಮೂವತ್ತಕ್ಕೂ ಹೆಚ್ಚಿನ ಕುಟುಂಬದವರು ಯಾತ್ರೆಯಲ್ಲಿ ಭಾಗವಹಿಸಿದ್ದಾರೆಂದರೆ ಕಮ್ಯುನಿಸ್ಟ್ ಹತ್ಯಾಕಾಂಡದ ತೀವ್ರತೆ ಅದೆಷ್ಟಿರಬಹುದು? ಮಲಯಾಳಿಗಳ ನೋವು ಅದೆಷ್ಟು ಹರಳುಗಟ್ಟಿರಬಹುದು? ಕಾಲಿಲ್ಲದ ಮೇಷ್ಟ್ರ, ಪುತ್ರಶೋಕದ ಅಜ್ಜಿಯ, ಸಾಮಾನ್ಯ ಸ್ವಯಂಸೇವಕನ ಸಮಾಜಿಕ ಬದ್ದತೆ ಅದೆಂಥದ್ದಿರಬಹುದು? ನಿಜವಾಗಿಯೂ ಈ ಯಾತ್ರೆ ಹಿಂದುತ್ವದ ಶಕ್ತಿ ಪ್ರದರ್ಶನ. ಏಕೆಂದರೆ ಆಡಳಿತಾರೂಢ ವಾಮಪಂಥೀಯರು ಕಾಂಗ್ರೆಸಿಗರನ್ನೂ, ಸಿಪಿಐಯವರನ್ನೂ ಹತ್ಯೆ ಮಾಡಿದ್ದರು. ನರಸತ್ತ ಇವರಿಗೆಲ್ಲಾ ಇಂದಿಗೂ ಒಂದರ್ಧ ಗಂಟೆಯ ಪ್ರತಿಭಟನೆಯನ್ನು ಮಾಡಲೂ ಸಾಧ್ಯವಾಗಿಲ್ಲ. ಕಮ್ಯುನಿಸಂ ಚಿಂತನೆ ಪ್ರಾಣಿಪಕ್ಷಿಗಳನ್ನು ಸುಟ್ಟು ಭಸ್ಮ ಮಾಡಿದ್ದರೂ ಇದುವರೆಗೆ ಯಾವ ಪ್ರಾಣಿಪ್ರೀಯರಿಗೂ ಕಮ್ಯುನಿಸ್ಟರ ಕ್ರೌರ್ಯದ ಬಗ್ಗೆ ಎದುರಾಡಲು ಧೈರ್ಯ ಬಂದಿಲ್ಲ. ಅದನ್ನು ಮಾಡಲು ಸಾಧ್ಯವಾಗುವುದು ಆರೆಸ್ಸೆಸ್ ಮತ್ತು ಬಿಜೆಪಿಗೆ ಮಾತ್ರ!

ರಾಷ್ಟ್ರೀಯತೆಯ ಯಾತ್ರೆ: ಕಮ್ಯುನಿಸಮ್ಮನ್ನು ಹಣಿಯಲು ರಾಷ್ಟ್ರೀಯತೆಗೆ ಮಾತ್ರ ಸಾಧ್ಯ ಎಂಬುದಕ್ಕೂ ಜನರಕ್ಷಾ ಯಾತ್ರೆ ಒಂದು ನಿದರ್ಶನ. ಯಾತ್ರೆಗೆ ಅಮಿತ್ ಷಾರಂಥ ನಾಯಕರು ಆಗಮಿಸಿ ಕೇರಳದ ಸಮಸ್ಯೆ ಭಾರತದ ಸಮಸ್ಯೆ ಬೇರೆಬೇರೆಯಲ್ಲ ಎಂದು ಘೋಷಿಸಿದರು. ವ್ಯವಸ್ಥೆಯಲ್ಲಿ, ಅಲಂಕಾರದಲ್ಲಿ, ಸಂಯಮದಲ್ಲೂ ಕಾರ್ಯಕರ್ತರು ಸಿದ್ಧಾಂತವನ್ನು ಮೆರೆದರು. ರಾಷ್ಟ್ರೀಯವಾದಿಗಳ ಈ ಶಿಸ್ತು ಕೂಡಾ ಕಮ್ಯುನಿಸ್ಟರನ್ನು ಕೆರಳಿಸಿತು. ಶಾಂತಿಯುತ ಯಾತ್ರೆಯನ್ನು ಕೂಡಾ ತಮ್ಮ ಎಂದಿನ ಕ್ರೌರ್ಯವನ್ನು ಬಳಸಿ ಹತ್ತಿಕ್ಕುವ ಪ್ರಯತ್ನಕ್ಕೂ ಕೈಹಾಕಿದರು. ಯಾತ್ರೆ ಸಾಗುವ ದಾರಿಯುದ್ದಕ್ಕೂ ಗೂಂಡಾಗಳ ಹೆಣಗಳ ಚಿತ್ರಗಳನ್ನು ಹಾಕಿಸಿ ಆರೆಸ್ಸೆಸ್‌ನಿಂದ ಬಲಿಯಾದವರು ಎಂದು ಅಸಹನೆ ಪ್ರದರ್ಶಿಸಿದರು. ದೇಶದ ಮೂಲೆ ಮೂಲೆಗಳಿಂದ ಜನ ಯಾತ್ರೆಯಲ್ಲಿ ಪಾಲ್ಗೊಂಡು ಬೆಂಬಲಕ್ಕೆ ನಾವೆಲ್ಲರಿದ್ದೇವೆಂದು ಧೈರ್ಯ ತುಂಬಿದರು. ಕರ್ನಾಟಕದ ಸಂಘಟಕರು ಮಲಯಾಳಿಗಳ ಬೆನ್ನ ಹಿಂದೆ ನಿಂತರು. ಯಾವ ಸಂಗತಿ ಸಮಸ್ತ ಭಾರತವನ್ನು ಒಗ್ಗೂಡಿಸಿದೆಯೋ ಅದು ಯಾತ್ರೆಯ ನೆಪದಲ್ಲಿ ನೆರೆದಿತ್ತು. ಯಾತ್ರೆಗೆ ತೆರಳಿದವರೆಲ್ಲರಿಗೂ ರಾಷ್ಟ್ರೀಯತೆಯ ವಿರಾಟ್ ಸ್ವರೂಪದ ದರ್ಶನವಾಯಿತು. ವೋಟಿನ ರಾಜಕಾರಣವೊಂದೇ ಚಳವಳಿಗಳನ್ನು ರೂಪಿಸುತ್ತದೆ ಎಂಬ ವಿಶ್ಲೇಷಕರ ವಾದಗಳೆಲ್ಲವೂ ಮಕಾಡೆ ಮಲಗಿದಂತೆ ಕಾಣುತ್ತಿತ್ತು. ಕೇರಳ ರಾಜಕೀಯದಲ್ಲಿ ರಾಷ್ಟ್ರೀಯವಾದಿ ಪಕ್ಷಕ್ಕೆ ಸೀಟುಗಳಿಲ್ಲದಿರಬಹುದು. ಎದೆಯಲ್ಲಿ ಕಿಚ್ಚಿಲ್ಲದಿದ್ದರೆ ಸೀಟುಗಳಿದ್ದರೆ ತಾನೇ ಏನು ಬಂತು? ಮೈಯೆಲ್ಲಾ ಪುಕ್ಕಲುತನವನ್ನು ಹೊದ್ದು ಪ್ರತಿ‘ಟನೆಯ ಕಾವನ್ನೇ ಕಳೆದುಕೊಂಡಿದ್ದರೆ ಅಕಾರವಿದ್ದರೇನು ಬಂತು?

ರಾಷ್ಟ್ರೀಯತೆಯ ಯಾತ್ರೆ ಮುಂದೆ ಸಾಗುತ್ತಿದೆ. ತಿರುವಂತಪುರದೆಡೆಗೆ ಹೋಗುತ್ತಿದೆ. ಪುತ್ರಶೋಕ ಹೊತ್ತವರು, ಕೈಕಾಲು ಕಳೆದುಕೊಂಡವರು, ಅಪ್ಪನಿಲ್ಲದ ತಬ್ಬಲಿಗಳು, ಪತಿ ಇಲ್ಲದ ವಿಧವೆಯರು, ಪತ್ನಿ ಇಲ್ಲದ ವಿಧುರರು ಸಾವಿರ ಸಾವಿರವಾಗಿ ಯಾತ್ರೆಯಲ್ಲಿ ಕೂಡಿಕೊಳ್ಳುತ್ತಿದ್ದಾರೆ. ಎಲ್ಲಾ ರಾಜ್ಯಗಳು ಒಂದಾದಂತೆ ಕಾಣುತ್ತಿದೆ. ಅಡಿಗರ ಕವನವೊಂದು ನೆನಪಾಗುತ್ತಿದೆ. ಇಡೀ ಜನರಕ್ಷಾ ಯಾತ್ರೆ ಇದೇ ಗುಂಗಲ್ಲಿ ಸಾಗುತ್ತಿದೆ.

ಕೋಟೆಗೋಡೆಗೆ ನಮ್ಮ ಹೆಣಗಳೇ ಮೆಟ್ಟಿಲು,
ನಮ್ಮ ಸಾವೇ ಹೊಸ ನಾಡ ತೊಟ್ಟಿಲು
ತಡೆವವರು ಬನ್ನಿರೋ ಹೊಡೆವವರು ಬನ್ನಿರೋ
ಕೆಡೆನುಡಿವ ಕೆಡೆಬಗೆವ ಕೆಡುಕು ಜನರೇ ಬನ್ನಿ

 

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments