ವಿಷಯದ ವಿವರಗಳಿಗೆ ದಾಟಿರಿ

ಅಕ್ಟೋಬರ್ 21, 2017

1

ಮತ,ಪಂಥ,ಧರ್ಮ,Religion ಇತ್ಯಾದಿ… ಭಾಗ 1

‍ನಿಲುಮೆ ಮೂಲಕ

– ದೇವು ಹನೆಹಳ್ಳಿ,
ಬಾರಕೂರು, ಉಡುಪಿ

 

ಒಂದು ಕಲ್ಲನು ಕಡಿದು ಮತ್ತೊಂದು ಕಲ್ಲಿಗೆ

ಭೋಗವ ಕೊಟ್ಟಿಹೆನೆಂಬ ಅಜ್ಞಾನವಿದೇನೋ?

–  ಅಲ್ಲಮಪ್ರಭು

 

ಲಿಂಗಾಯತ, ವೀರಶೈವ ‘ಸ್ವತಂತ್ರಧರ್ಮ’ ಘೋಷಣೆ, ಮಾನ್ಯತೆ ಇತ್ಯಾದಿಗಳ ಕುರಿತು ವ್ಯಾಪಕ ಚರ್ಚೆ, ಗುದ್ದಾಟಗಳನ್ನು ಪ್ರಸ್ತಾಪಿಸುವ ಮೊದಲು ‘ನಾನು ಯಾರು’ ಎಂಬುದನ್ನು ಸ್ಪಷ್ಟಗೊಳಿಸುವುದು ಅಗತ್ಯ ಮತ್ತು ಒಳಿತು. ಕಳೆದೆರಡು ಸಾವಿರ ವರ್ಷಗಳಿಂದ ‘ನಾನ್ಯಾರು’ ಎಂಬುದು ನನ್ನ ಸಮಸ್ಯೆಯಾಗಿರಲಿಲ್ಲ. ಯಾಕೆಂದರೆ ನಾನು ಅಜ್ಞಾನಿ, ಮೂಢ. ಅದು ಯಾರಿಗೆ ಸಮಸ್ಯೆಯಾಯಿತೋ ಅವರೇ ನೀಡಿದ ವ್ಯಾಖ್ಯೆಗಳನ್ನು ಒಪ್ಪಿಕೊಳ್ಳುತ್ತೇನೆ. ಏಕೆಂದರೆ ಅದು ಅನಿವಾರ್ಯ. ಹೌದು, ನಾನು ಪೇಗನ್,ಕಾಫಿರ, ಹೀದನ್. ಅನಂತರ ಹಿಂದೂ ಎಂದರು. “ಹಿಂದೂ” ಎನ್ನಿಸಿಕೊಳ್ಳುವುದು ಕೂಡಾ ನನ್ನ ಅಗತ್ಯವಾಗಿರಲಿಲ್ಲ, ಕೋರಿಕೆಯಾಗಿರಲಿಲ್ಲ. (ಕುರಿಯನ್ನು ‘ಕುರಿ’ ಎನ್ನುವುದು ಕುರಿಯ ಅಗತ್ಯವೇನೂ ಅಲ್ಲವಲ್ಲ?!) ಆದರೂ ಒಪ್ಪಿಕೊಳ್ಳುತ್ತೇನೆ. ಈಗ ಎಸ್.ಎಂ. ಜಾಮದಾರ್, ಗೊ.ರು.ಚ., ರಂಜಾನ್ ದರ್ಗಾ, ಮಾತೆ ಮಹಾದೇವಿ, ಮೀನಾಕ್ಷಿ ಬಾಳಿ ಮೊದಲಾದ ಶರಣಶರಣೆಯರು, ಅಸಂಖ್ಯ ಮಠಾಧೀಶರು, ಸಿದ್ಧರಾಮಯ್ಯನವರ ಸರಕಾರದ ಮಂತ್ರಿಗಳು, ಚಿಂತಕರು, ಪ್ರಗತಿಪರರು, ಪತ್ರಕರ್ತರು, ವಿಚಾರವಾದಿಗಳು, ಬುದ್ಧಿಜೀವಿಗಳು, liberals ಮುಂತಾದವರು ಒಂದು ಕೈಯಲ್ಲಿ ನನ್ನ ಕತ್ತು ಹಿಡಿದು, ಇನ್ನೊಂದು ಕೈಯಲ್ಲಿ ಕತ್ತಿ ಹಿಡಿದು ‘ಭವಿ’ ಎಂದು ಕರೆಯುತ್ತಿದ್ದಾರೆ. ನಾನು ಅಜ್ಞಾನಿಯಲ್ಲವೇ? ಮಹಾಪ್ರಸಾದವೆಂಬೆನು! (ಭವಿ ಎಂದರೆ ಇಷ್ಟಲಿಂಗವನ್ನು ಪೂಜಿಸದವನು; ಲೌಕಿಕವನ್ನು, ಅಂದರೆ ಭವವನ್ನು ನೆಚ್ಚಿ ಮೋಕ್ಷ ಪಡೆಯಲಾರದವನು; ಪಾಪಿ ಇತ್ಯಾದಿ.)

ಸತ್ಯವೆಂದರೆ ಪೇಗನ್, ಹೀದನ್, ಕಾಫಿರ್, ಹಿಂದೂ, ಭವಿ ಎಂಬೆಲ್ಲಾ ಬಿರುದುಗಳಿಗೂ, ಪಾಪಿ, ಅಜ್ಞಾನಿ, ಅವಿಶ್ವಾಸಿ, ಕಳ್ಳ, ಮೂರ್ತಿಪೂಜೆ ಮಾಡುವ ಮೂರ್ಖ, ಕಂದಾಚಾರಿ, ಮೂಢ, ಅನಾಚಾರಿ, ಮಿಥ್ಯಾರಾಧಕ ಎಂಬೆಲ್ಲಾ ಪದನಾಮಗಳಿಗೂ ಅಂತಹ ವ್ಯತ್ಯಾಸವೇನೂ ಇಲ್ಲ! ಜತೆಗೆ ವೈಯಕ್ತಿಕವಾಗಿ ನಾನು ನಾಸ್ತಿಕ ಮತ್ತು ನಿರೀಶ್ವರಿ. (ನಿರೀಶ್ವರವಾದಿಯಲ್ಲ.) ಅದು ಕೂಡಾ ಕಳೆದ 2-3 ಸಾವಿರ ವರ್ಷಗಳಿಂದ ನಾನು, ನನ್ನಂತಹ ಅಸಂಖ್ಯ ಪೇಗನ್ನರಿಗೆ ಸಮಸ್ಯೆಯಾಗಿರಲಿಲ್ಲ; ಯಾವ ಪೇಗನ್ನರೂ ನನ್ನನ್ನು ಸಾರ್ವಜನಿಕವಾಗಿ ಸುಡಲಿಲ್ಲ.

ನಾವು ನಮ್ಮ ಅಜ್ಞಾನದಲ್ಲಿ ಸುಖವಾಗಿದ್ದರೂ, ನಮಗೆ ಅವು ಸಮಸ್ಯೆಯಾಗಿ ಕಂಡಿಲ್ಲದಿದ್ದರೂ ‘ಇತರರಿಗೆ’ ಯಾಕೆ ಸಮಸ್ಯೆಯಾದವು? ಇವೆಲ್ಲ ಹಲವು ದಿಕ್ಕಿನಿಂದ ಒಂದಾಗಿ, ಒಂದೊಂದಾಗಿ ಆರಂಭಗೊಂಡವು ಎನ್ನಬಹುದು.

ಕೆಲವು ಶತಮಾನಗಳ ಕಾಲ ಯುರೋಪ್ ಮತ್ತು ಮಧ್ಯಪ್ರಾಚ್ಯದ ಕ್ರೈಸ್ತ ಮತ್ತು ಮುಸ್ಲಿಂ ಮತೀಯ ಸೈನ್ಯಗಳು ಜಗತ್ತಿನ  ಮೂಲೆಮೂಲೆಗಳಲ್ಲಿ ಪೇಗನ್ ಮತ್ತು ಕಾಫಿರ ಸಮುದಾಯಗಳನ್ನು ಮತಾಂತರಿಸುವ, ಒಪ್ಪದಿದ್ದರೆ ಮಿಲಿಯನ್ಮಿಲಿಯನ್ ಸಂಖ್ಯೆಯಲ್ಲಿ ಕೊಲ್ಲುವ ಪವಿತ್ರ ಕಾರ್ಯದಲ್ಲಿ ನಿರತವಾಗಿದ್ದವು. ಎರಡು ಮುಖ್ಯ ಕಾರಣಗಳಿಗಾಗಿ ಅದು ಭಾರತ ಮತ್ತು ಚೀನಾಗಳಲ್ಲಿ ಸಾಧ್ಯವಾಗಲಿಲ್ಲ. ಒಂದು, ಪರ್ಶಿಯಾದ ಪೂರ್ವದಲ್ಲಿ  ಕೂಡಾ ಶಕ್ತಿಶಾಲಿ ರಾಜ್ಯ-ಸಾಮ್ರಾಜ್ಯಗಳಿದ್ದವು ಮತ್ತು ದೂರ-ಬಹುದೂರಕ್ಕೆ ಸೈನ್ಯ ಸಾಗಿಸುವುದು ಬಲು ದುಸ್ತರವಾಗಿತ್ತು. ಎರಡು, 18ನೇ ಶತಮಾನದ ಅನಂತರ ಯುರೋಪಿನ ಬುದ್ಧಿಜೀವಿಗಳು ಮತ್ತು ಕವಿಗಳು (ಭಾರತದ ಇಂದಿನ ಬುದ್ಧಿಜೀವಿ-ಕವಿಗಳಿಗೂ ಅವರಿಗೂ ಯಾವುದೇ ಸಂಬಂಧ-ಸಾಮ್ಯವಿಲ್ಲ.) ಚರ್ಚ್ ಮತ್ತು ಇಸ್ಲಾಂ ನಡೆಸುತ್ತಿದ್ದ ಈ ಅವ್ಯಾಹತ ಹತ್ಯಾಕಾಂಡಗಳನ್ನು ಸಹಿಸದಾದರು ಮತ್ತು ವಿರೋಧಿಸಲಾರಂಭಿಸಿದರು.

ಕೊಲ್ಲದೇ ಉಳಿಸಿದ ಮೇಲೆ, ಅವರ ‘ಜತೆ’ ಬದುಕುವುದು ಅನಿವಾರ್ಯ ಕರ್ಮವಾದ ಮೇಲೆ ಅವರಿಗೊಂದು ಹೆಸರು ಕೊಡಬೇಕಲ್ಲ? (ಕೊಂದು ಕಳೆಯುವುದಕ್ಕೂ ಕೂಡಾ ಹೆಸರು ಕೊಡುವ Academic ಶಿಸ್ತಿನವರು ಅವರು!) ಚೀನಾದವರನ್ನು `yellows’ ಎಂದು ಅಸಹ್ಯದಿಂದ ಕರೆದು ದೂರವಿಟ್ಟರು. ಸಿಂಧೂ ನದಿಯ ಆಸುಪಾಸು ಮತ್ತು ಪೂರ್ವದಲ್ಲಿದ್ದ ನಮ್ಮನ್ನು ಹೆಸರಿಸುವಾಗ ನಾಲಗೆ ತೊಡರಿ ‘Hindoos’ ಎಂದರು. ಹೆಸರು ಕೊಟ್ಟ ಮೇಲೆ ನಮಗೊಂದು Religion, ದೇವರು, ಪವಿತ್ರಗ್ರಂಥ ಎಲ್ಲವನ್ನೂ ಕೊಡುವ ಕಷ್ಟ, ಜವಾಬ್ದಾರಿ ಮತ್ತು ಔದಾರ್ಯಗಳನ್ನು ಅವರೇ ತೆಗೆದುಕೊಂಡರು. ಇಂದು ಭಾರತ, ಹಿಂದೂಸ್ಥಾನ, ಇಂಡಿಯಾ ಎಂದೆಲ್ಲ ಕರೆಯಿಸಿಕೊಳ್ಳುವ ಭೂಭಾಗವೇನಿದೆ ಅಲ್ಲಿ ಬದುಕುವ ನಮಗೂ, ಅವರು ನೀಡಿದ ವ್ಯಾಖ್ಯೆಗಳಿಗೂ ಯಾವುದೇ ಸಂಬಂಧವಿಲ್ಲ! ಸಂಬಂಧವಿಲ್ಲದ ವ್ಯಾಖ್ಯೆಗಳಿಗೆ ಹೊಂದಿಕೊಳ್ಳುವ ಅನಗತ್ಯ ಗೊಂದಲವನ್ನು ಅನುಭವಿಸುತ್ತಿದ್ದೇವೆ. ನಾವೆಲ್ಲ ಒಂದಾಗಿದ್ದ ಸೂತ್ರ ಆಗ ಅವರ ಅರಿವಿಗೆ ಬರದೆ ಏನೋ ಅಂದರು. ನಾವು ಅಜ್ಞಾನಿಗಳಲ್ಲವೇ, ಅದನ್ನು ಒಪ್ಪಿಕೊಂಡೆವು.

ನಾವೆಲ್ಲ ಒಂದಾಗಿದ್ದ ಈ ‘ಸೂತ್ರ’ ಯಾವುದು? ಆ ಸೂತ್ರವನ್ನು ಹೆಸರಿಸಿದ್ದು ಕೂಡಾ 18-19ನೇ ಶತಮಾನದ ಯುರೋಪಿನ ಮಾನವಶಾಸ್ತ್ರಜ್ಞರು. ನಿಜವೆಂದರೆ, ಭಾರತ ಮಾತ್ರವಲ್ಲ, ಕ್ರೈಸ್ತಪೂರ್ವ, ಇಸ್ಲಾಂಪೂರ್ವ ಜಗತ್ತಿನೆಲ್ಲೆಡೆ ಇದ್ದುದು ಅದೇ. ಆ ಸೂತ್ರ, ಆ ಅಸಂಖ್ಯ-ವೈವಿಧ್ಯಮಯವಾದ ನಂಬಿಕೆ ಮತ್ತು ಆರಾಧನೆಗಳ ವಿಸ್ತಾರವನ್ನು ಮೂರೇ ಮೂರು ಶೀರ್ಷಿಕೆಗಳಡಿ ತರಬಹುದು. ಅವೆಂದರೆ, ಚೈತನ್ಯ ಆರಾಧನೆ (Animism), ಪ್ರಕೃತಿ ಆರಾಧನೆ (Nature Worship) ಮತ್ತು ಪಿತೃ (ಪುರಾತನರು) ಆರಾಧನೆ (Worship of the Deceased).

(ಇತ್ತೀಚೆಗೆ ಈ ಆರಾಧನಾ ಕ್ರಮವನ್ನು ವೈಭವೀಕರಿಸಿ ಮಾತನಾಡುವ, ಭಾರತದಲ್ಲಿ ಮಾತ್ರವಿರುವುದು, ಇದ್ದುದು, ‘ನಾವಿದರಲ್ಲಿ ಔನ್ನತ್ಯವನ್ನು ಸಾಧಿಸಿದ ಕಾಲದಲ್ಲಿ ಯುರೋಪಿಯನ್ನರು ಗುಹೆಗಳಲ್ಲಿ ವಾಸಿಸುತ್ತಿದ್ದರು’ ಎನ್ನುವವರಿದ್ದಾರೆ. ಅದು ಅತಿರೇಕದ ಮಾತು. ಈಜಿಪ್ತ್, ಮೆಸಪಟೋಮಿಯಾ, (ಇಂದಿನ) ಇಟಲಿ, ಗ್ರೀಸ್, ಚೀನಾ, ಎಲ್ಲಕ್ಕಿಂತ ಮುಖ್ಯವಾಗಿ ಅರ್ಮೇನಿಯಾ ಮತ್ತು ಇಲ್ಯೀರಿಯಾಗಳು ದೈವ ಪರಿಕಲ್ಪನೆ, ಆರಾಧನಾ ಪದ್ಧತಿ, ಮತ್ತು ಅವುಗಳಿಗೆ ಬೇಕಾದ ಭೌತಿಕ ನಿರ್ಮಿತಿಯ ತಂತ್ರಜ್ಞಾನ ಪರಿಣತಿಯಲ್ಲಿ ನಮ್ಮಿಂದ ಬಹಳ ಮುಂದಿದ್ದವು.)

ಕ್ರೈಸ್ತ ಮತ್ತು ಮುಸ್ಲಿಂ ಮತಪಂಡಿತರು ಮತ್ತು ಪ್ರಚಾರಕರು ಲಾಗಾಯ್ತಿನಿಂದಲೂ ಬಲು ವಿಶ್ವಾಸದಿಂದ ನಂಬಿಕೊಂಡು ಬಂದ ಒಂದು ಅಭಿಪ್ರಾಯವೆಂದರೆ ಇಂತಹ ಆದಿಮ ಆಚರಣೆಯಿಂದ ತೇರ್ಗಡೆ ಹೊಂದಿ ಮತ(Religion)ವಾಗುವುದು ಒಂದು ತಾರ್ಕಿಕ ವಿಕಾಸ ಮತ್ತು ‘ಮಿಥ್ಯಾರಾಧನೆ’ಯಿಂದ ಮುಕ್ತಿ ಹೊಂದಿ ಮೋಕ್ಷಕ್ಕೆ ಭಾಜನರಾಗಲು ಅನಿವಾರ್ಯ. ನಾವು ಮುಕ್ತರಾದರೆ ಸಾಕೇ? ಇನ್ನೂ ಮಿಥ್ಯಾರಾಧನೆಯಲ್ಲಿ ತೊಳಲಾಡುತ್ತಿರುವವರನ್ನು ಪಾರುಗಾಣಿಸಬೇಕಲ್ಲ? ಒಂದೋ ಮತಾಂತರಿಸಿ ಜ್ಞಾನಿಗಳನ್ನಾಗಿಸಬೇಕು ಅಥವಾ ಕೊಂದು ಅವರು ಇನ್ನೂ ಬಹುಕಾಲ ಪಾಪದಲ್ಲಿ ಕೊಳೆಯದಂತೆ ಮಾಡಬೇಕು. ಅವರು ಸಜ್ಜನರಾದುದರಿಂದ ಅ ಜವಾಬ್ದಾರಿಯನ್ನು ನಮ್ಮ ಒಪ್ಪಿಗೆಯೂ ಇಲ್ಲದೆ ವಹಿಸಿಕೊಂಡು ಮಿಲಿಯಾಂತರ ಜನರನ್ನು ಕೊಂದು ಪುಣ್ಯಸಂಪಾದನೆ ಮಾಡಿಕೊಂಡರು. ಇದು ಮಾನವ ನಾಗರಿಕತೆಯ ವಿಕಾಸದ ಸಹಜ, ನಿಜ ಮತ್ತು ತಾರ್ಕಿಕ ಪ್ರಕ್ರಿಯೆ ಎಂಬುದು ಅವರ ವಿಶ್ವಾಸವಾಗಿತ್ತು.  ಅಂದರೆ ಒಂದು ಮತೀಯ ವ್ಯವಸ್ಥೆಯ ಪ್ರಧಾನ ಲಕ್ಷಣವೆಂದರೆ ತನ್ನ ಅನನ್ಯತೆಯ ಪ್ರತಿಪಾದನೆ-ಪ್ರಚಾರ ಮತ್ತು ಅನ್ಯ ಅನನ್ಯತೆಗಳ ನಿರಾಕರಣ-ಹನನ. (ಎಲ್ಲಾ ಮತಗಳು ಶಾಂತಿ, ಸಹಬಾಳ್ವೆಯನ್ನೇ ಬೋಧಿಸುತ್ತವೆ” ಎಂಬ ಪರಮಸುಳ್ಳನ್ನು ನಾವು ನಮ್ಮ ಮಕ್ಕಳಿಗೆ ಕಲಿಸುತ್ತಿದ್ದೇವೆ!)

ಆದರೆ 18-19ನೇ ಶತಮಾನಗಳ ಯುರೋಪಿನ ಮಾನವಶಾಸ್ತ್ರಜ್ಞರು ಇದಕ್ಕೆ ವ್ಯತಿರಿಕ್ತವಾದ ವಾದವನ್ನು ಮುಂದಿಟ್ಟರು. (ಅದು ಮಾನವಶಾಸ್ತ್ರದಲ್ಲಿ ಮಾತ್ರವಲ್ಲ, ಜೀವಶಾಸ್ತ್ರ, ಪರಿಸರಶಾಸ್ತ್ರಗಳಲ್ಲಿಯೂ ಅಷ್ಟೇ ಸರಿ.) ಸಹಜ ವಿಕಾಸ ಮತ್ತು ಸಾಮರಸ್ಯಕ್ಕೆ ವೈವಿಧ್ಯವೇ ತಳಹದಿ. ನಂಬಿಕೆ, ಆರಾಧನೆಗಳ ಬಹುತ್ವ ಮತ್ತು ಭಿನ್ನತೆಗಳನ್ನು ಇಸ್ಲಾಂ ಮತ್ತು ಕ್ರೈಸ್ತ ಮತಗಳು ನಿರಾಕರಿಸಿದ್ದೇ ಇಡೀ ಜಗತ್ತಿನ ಮತ್ತು ಅವರೊಳಗಿನ ಅಶಾಂತಿಗೆ ಕಾರಣವೆಂಬುದನ್ನು ಅವರು ಕಂಡುಕೊಂಡರು. ಮತಗಳ ಹುಟ್ಟೆಂದರೆ ಒಂದು ಆಕಸ್ಮಿಕ ದುರಂತ,Tragic aberration.ಕ್ರೈಸ್ತ ಮತ್ತು ಇಸ್ಲಾಂ ಮತಗಳು ಅಸುಹಿಷ್ಣುತೆಯಿಂದ ನಡೆಸಿದ ದಾರುಣ ಹತ್ಯಾಕಾಂಡಗಳಿಂದ ಭ್ರಮನಿರಸನಹೊಂದಿ ಯುರೋಪಿಯನ್ನರು ಚರ್ಚ್ನಿಂದ ವಿಮುಖರಾಗುತ್ತಿದ್ದಾರೆ. ಮತಾಂತರಕ್ಕೆ ದೇಣಿಗೆಯ ಹರಿವು ಕಡಿಮೆಯಾಗುತ್ತಿದೆ. ದಕ್ಷಿಣ ಅಮೇರಿಕಾ, ಉತ್ತರ ಅಮೇರಿಕಾ ಮತ್ತು ಆಸ್ಟ್ರೇಲಿಯಾಗಳ ಮೂಲನಿವಾಸಿಗಳ ರಕ್ಷಣೆಗೆ ಯುರೋಪಿಯನ್ನರು ಮುಂದಾಗುತ್ತಿದ್ದಾರೆ ಮತ್ತು ಆ ನಿಟ್ಟಿನಲ್ಲಿ ಅವರೇ ಚರ್ಚ್ನ ವಿರುದ್ಧ ಹೋರಾಡುತ್ತಿದ್ದಾರೆ! ತಾವು ಕಳೆದುಕೊಂಡ ಕ್ರೈಸ್ತಪೂರ್ವ ಆಚರಣೆಗಳನ್ನು ನೆನಪಿಸಿಕೊಳ್ಳುವ, ಅದನ್ನು ಪುನರುಜ್ಜೀವಿಸುವ ಯತ್ನಗಳು ನಡೆಯುತ್ತಿವೆ. (ಅಂತಹ ಯತ್ನಗಳು ಕೆಲವೊಮ್ಮೆ ಒರಟಾಗಿ, ಸರಳವಾಗಿಯೂ ಇರುತ್ತವೆ. ಅವುಗಳಲ್ಲಿ ಒಂದು ಹ್ಯಾರಿ ಪಾಟರ್ ಸರಣಿ. ಹ್ಯಾರಿ ಪಾಟರ್ಗೆ ಮೊದಲ ವಿರೋಧವನ್ನು ವ್ಯಕ್ತಪಡಿಸಿದ್ದೇ ವ್ಯಾಟಿಕನ್!)

(ಅದೇ ಇಸ್ಲಾಂ ಮತ್ತು ಕ್ರೈಸ್ತ ಮತಗಳ ಆಡೊಂಬೊಲದಲ್ಲಿಯೇ ಉಗಮವಾದ Communism ಅದೇ ಅಸಹಿಷ್ಣುತೆಯನ್ನು ಆವಾಹಿಸಿಕೊಂಡದ್ದು ಕಾಕತಾಳೀಯ ಅಲ್ಲದಿರಬಹುದು. ಕಮ್ಯೂನಿಸಂ ಸಿದ್ಧಾಂತವು ರಾಜಕೀಯ ವ್ಯವಸ್ಥೆಯಲ್ಲಿರಲಿ, ಸಾಹಿತ್ಯ ವಿಮರ್ಶೆಯಲ್ಲಿಯೂ ಕೂಡಾ Pluralism ಮತ್ತು Eclecticismಗಳನ್ನು  ನಿರಾಕರಿಸುತ್ತದೆ. ಕ್ರೈಸ್ತ Crusade ಮತ್ತು ಮುಸ್ಲಿಂ Jehadಗಳಷ್ಟೇ ಭವ್ಯವಾದ ರಕ್ತಪಾತವನ್ನು ಎಡಪಂಥೀಯರು ಜಗತ್ತಿನಾದ್ಯಂತ ನಡೆಸಿದ್ದಾರೆ. ಸೈಬೀರಿಯಾ, ಕಾಂಬೋಡಿಯಾದಿಂದ ತೊಡಗಿ ಪರಗಣ, ಕಣ್ಣೂರು ತನಕ ನೂರಾರು Gulagಗಳೆಂಬ ತೀರ್ಥಕ್ಷೇತ್ರಗಳಿವೆ ಕಮ್ಯೂನಿಸಂ ಎಂಬ Religionಗೆ.  ವರ್ಗತಾರತಮ್ಯ, ಶೋಷಣೆ ಇತ್ಯಾದಿಗಳ ಬಗ್ಗೆ ಚಿಂತನೆ ನಡೆಸಿದ್ದ ಕಾರ್ಲ್ ಮಾಕ್ಸ್, ಐರೋಪ್ಯರು ಭಾರತವನ್ನು ವಶಪಡಿಸಿಕೊಂಡು ವಸಾಹತುಗಳನ್ನು ಸ್ಥಾಪಿಸಿದ್ದನ್ನು ಸಮರ್ಥಿಸಿದ್ದ ಮತ್ತು ಮೂಢನಂಬಿಕೆ ಮತ್ತು ಕಂದಾಚಾರಗಳಲ್ಲಿ ತೊಳಲುವ ಭಾರತೀಯರನ್ನು ಪಾರುಗಾಣಿಸಲು ಅದು ಅನಿವಾರ್ಯ ಎಂದು ಪ್ರತಿಪಾದಿಸಿದ್ದ!)

‘ನಿಮ್ಮದೊಂದು ‘Religion’ ಎಂಬ ಸಂಚು ನಡೆಯುತ್ತಿದೆ. ಆದರೆ ಸಮಾನಾಂತರವಾಗಿ ಅದೇ ಹೊತ್ತಿಗೆ ನಮ್ಮದೊಂದು ಸರಿಯಾದ ಮತ ಅಲ್ಲ, ಒಂದು ಪವಿತ್ರಗ್ರಂಥವಿಲ್ಲ, ಬರೀ ಗೋಜಲು-ಗೋಜಲು, ನೂರಾರು ಪವಿತ್ರಗ್ರಂಥಗಳಿವೆ, ಒಬ್ಬ ಪ್ರವಾದಿಯಿಲ್ಲ, ನಮಗೊಂದು ಹುಟ್ಟಿದ ದಿನವಿಲ್ಲ, ನಿರ್ದಿಷ್ಟ ಪೂಜಾ ಕ್ರಮವಿಲ್ಲ, ಯಾವ ಆಚರಣೆ-ವಿಧಿಗಳೂ ಕಡ್ಡಾಯವಾಗಿಲ್ಲ, ಶಿಸ್ತಲ್ಲಿ ನಿಯಮಿತವಾಗಿ ದೇವಸ್ಥಾನಕ್ಕೆ ಹೋಗುವವರೂ ಇಲ್ಲ ಎಂಬಿತ್ಯಾದಿ ಕೀಳರಿಮೆಗಳನ್ನು ವ್ಯವಸ್ಥಿತವಾಗಿ ಹಬ್ಬಿಸಲಾಗುತ್ತಿದೆ, ನಾವದನ್ನು ಒಪ್ಪಿಕೊಂಡಿದ್ದೇವೆ. ವೈವಿಧ್ಯವನ್ನು ಗೊಂದಲವೆಂದು ಪರಿಗಣಿಸಲಾಗುತ್ತಿದೆ. ನಾಡಿನ ಖ್ಯಾತ ದಿನಪತ್ರಿಕೆಯಲ್ಲಿ ಓರ್ವ ಕ್ರಿಶ್ಚಿಯನ್ ಪಾದ್ರಿಯವರ ಅಂಕಣ ಬರಹ ಪ್ರಕಟವಾಗುತ್ತಿತ್ತು. ಅವರ ಹೆಚ್ಚಿನ ಅಂಕಣಗಳಲ್ಲಿ ಆಗಾಗ ‘ಬಹುಭಾಷಿಕ ನಾಡಿನ ಸಮಸ್ಯೆಯೆಂದರೆ…’, ‘ಬಹುಧರ್ಮಗಳ ದೇಶದ ಸಮಸ್ಯೆಯೆಂದರೆ…’ ಬಹುಸಂಸ್ಕೃತಿಯ, ಬಹುಜನಾಂಗೀಯ ದೇಶದ ಸಮಸ್ಯೆಯೆಂದರೆ…’ ಎಂಬ ಪದಪುಂಜಗಳನ್ನು ಸೇರಿಸುತ್ತಿದ್ದರು. ಯಾರಿಗೆ ಸಮಸ್ಯೆ? ಅವರಂತಹವರು ಲಾಗಾಯ್ತಿನಿಂದ ಹೇಳಿ ನಾವೂ ಅದನ್ನು ನಂಬುತ್ತಿದ್ದೇವೆ. ವ್ಯವಸ್ಥಿತ ಮತಗಳ ಹೆಚ್ಚುಗಾರಿಕೆಯನ್ನು ಬಿಂಬಿಸಲಾಗುತ್ತಿದೆ. ಅಂದಿನಿಂದ ಇಂದಿನವರೆಗೆ ಸಮಾಜ ಸುಧಾರಕರೆನ್ನಿಸಿಕೊಂಡವರೆಲ್ಲ ಆದಿಮ, ವೈಯಕ್ತಿಕ, ಕೌಟುಂಬಿಕ ಆಚರಣೆಗಳನ್ನು ಖಂಡಿಸಿದ್ದಾರೆಯೇ ವಿನಃ ಮತ ಆಚರಣೆಗಳನ್ನು ಖಂಡಿಸಿಲ್ಲ! ಯುರೋಪಿನಲ್ಲಿ Religion, ಮತವನ್ನು ತಿರಸ್ಕರಿಸುವುದು Secularism ಎಂದೆನ್ನಿಸಿದರೆ, ಭಾರತದಲ್ಲಿ ಸ್ಥಳೀಯವಾದ ನಂಬಿಕೆಗಳನ್ನು ತಿರಸ್ಕರಿಸಿ ವಿಸ್ತರಣಾವಾದಿ ಮತಗಳನ್ನು ಪುರಸ್ಕರಿಸುವುದು Secularism  ಎನ್ನಿಸಿದೆ!

“ಯಾವುದ್ರಿ ಅದು ಹಿಂದೂಧರ್ಮ? ಹಿಂದೂ ಧರ್ಮ ಸ್ಥಾಪಿಸಿದ್ದು ಯಾರು? ಯಾರಾದ್ರೂ ಹೇಳ್ತೀರಾ? ಕ್ರಿಶ್ಚಿಯಾನಿಟಿ ಗೊತ್ತು, ಇಸ್ಲಾಂ ಧರ್ಮ ಗೊತ್ತು… ಅಪ್ಪ-ಅಮ್ಮ ಇಲ್ಲದ ಧರ್ಮ ಇದು. ಇದಕ್ಕೆ ಬ್ರಿಟಿಷರು ಬಂದು ಹೆಸರಿಡುವ ತನಕ ಹೆಸರೂ ಇರಲಿಲ್ಲ. ಅದೂ ಒಂದು ಧರ್ಮ ಅಂತೀರೇನ್ರೀ… ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಜೈನ್ ಅಲ್ಲದವನು ಹಿಂದೂ…” ಇದು ಮಂಗಳೂರಿನ ಒಂದು ಸಾರ್ವಜನಿಕ ಸಭೆಯಲ್ಲಿ ದಿವಂಗತ ಗೌರಿ ಲಂಕೇಶ್ ಅವರು ಆಡಿದ ಮಾತು. ಇದನ್ನು ಅವರು ವಿಚಾರವಾದಿಯಾಗಿ ಹೇಳಿದರೋ, ಮಾನವಶಾಸ್ತ್ರಜ್ಞರಾಗಿ, ಇತಿಹಾಸಕಾರರಾಗಿ ಹೇಳಿದರೋ, ಲಿಂಗಾಯತ ಮತದ ಕಾರ್ಯಕರ್ತೆಯಾಗಿ ಹೇಳಿದರೋ ಎಂದು ಅರಿಯುವುದು ಕಷ್ಟ. ಅವರು ಲಿಂಗಾಯತ ಮತಸ್ಥರು ಎಂಬುದನ್ನು `ತಿಳಿದು’ ಲಿಂಗಾಯತ ಮಠಾಧೀಶರು ಅದೆಷ್ಟು ಸಂಭ್ರಮಿಸಿದ್ದರು! ಆದಿಮ ಆಚರಣೆಗಳನ್ನು ಖಂಡಿಸಿ, ಮತೀಯತೆಯನ್ನು ಪುರಸ್ಕರಿಸುವುದು ಪ್ರಗತಿಪರ ಧೋರಣೆ ಅನ್ನಿಸಿದೆ. ಈಗಲೂ ಕೂಡಾ ‘ಲಿಂಗಾಯತ ಧರ್ಮ’ ಆಂದೋಲನದಲ್ಲಿ ಲಿಂಗಾಯತ ಮಠಾಧೀಶರಿಗೆ ಹೆಗಲಿಗೆ ಹೆಗಲು ಕೊಟ್ಟು ದುಡಿಯುತ್ತಿರುವವರು ಪ್ರಗತಿಪರರು ಎನ್ನಿಸಿಕೊಂಡವರೇ. ‘ಲಿಂಗಾಯತ ಧರ್ಮ’ ಘೋಷಣೆ-ಬೇಡಿಕೆ-ಒತ್ತಾಯಗಳಿಗೆ ವೇದಿಕೆಯನ್ನು ಒದಗಿಸಿ ಕೊಟ್ಟಿರುವುದೂ ‘ಪ್ರಗತಿಪರರ ಪರ’ ಎನ್ನಿಸಿಕೊಂಡ ಪತ್ರಿಕೆಗಳೇ.

(Religion, ಮತಗಳ ವಿರುದ್ಧ ಮಾತನಾಡುವುದು Politically Correct  ಅಲ್ಲ, ಅಪಾಯಕಾರಿ ಕೂಡಾ. ಆದಿಮ ಆಚರಣೆಗಳ ಬಗ್ಗೆ ಯಾರೂ, ಏನೂ ಮಾತನಾಡಬಹುದು. (‘ಅಪ್ಪ-ಅಮ್ಮ ಇಲ್ಲದ್ದು’ – ಕೇಳುವವರಿಲ್ಲ!) `ಲಿಂಗಾಯತ ಧರ್ಮ’ ಕ್ಕಾಗಿ ಇಷ್ಟೆಲ್ಲಾ ಗದ್ದಲಮಾಡುತ್ತಿರುವ ಮಠಾಧೀಶರು, ಚಿಂತಕರು, ವಿಚಾರವಾದಿಗಳು, ಪತ್ರಕರ್ತರು ಯಾರೂ ಶತಮಾನಗಳ ಕಾಲ ಲಿಂಗಾಯತರ ಕೊಲೆಸುಲಿಗೆ, ಅತ್ಯಾಚಾರ, ಆಸ್ತಿಪಾಸ್ತಿ ನಾಶಮಾಡಿದ ಬಹಮನಿ ಸುಲ್ತಾನರು ಮತ್ತು ರಜಾಕಾರರ ಬಗ್ಗೆ ಚಕಾರವೆತ್ತಿಲ್ಲ ನೋಡಿ! ಜೆಹಾದಿಗಳ ದಾಳಿಗೆ ಸಿಲುಕಿ ಮಿಲಿಯಾಂತರ ಸಂಖ್ಯೆಯಲ್ಲಿ ನಾಶವಾಗಿ ತಾಯ್ನಾಡನ್ನು ಕಳೆದುಕೊಂಡು ಇಂದಿನ ಭಾರತದಲ್ಲಿ ಬದುಕುತ್ತಿರುವ ಲಂಬಾಣಿ ಮತ್ತು ಪಾರ್ಸಿ ಬುದ್ಧಿಜೀವಿಗಳು ಮತ್ತು `ವಿಚಾರವಾದಿಗಳು’ ಜೆಹಾದಿ ಮತೀಯರ ಪರವಾಗಿದ್ದಾರೆ ಮತ್ತು ಆಶ್ರಯಕೊಟ್ಟ ಭಾರತೀಯರನ್ನೇ ಕೋಮುವಾದಿಗಳೆಂದು, ಅಜ್ಞಾನಿಗಳೆಂದು ತಿರಸ್ಕರಿಸುತ್ತಾರೆ! ದೇಶವಿಭಜನೆಯ ಕಾಲದಲ್ಲಿ ಆಸ್ತಿಪಾಸ್ತಿ-ಬಂಧುಬಳಗವನ್ನು ಕಳೆದುಕೊಂಡು ಸಿಂಧ್ನಿಂದ ಓಡಿಬಂದ ರಾಜೇಂದ್ರ ಸಚ್ಚರ್ ‘ಯಾರಿಗೆ’ ವರದಿ ಕೊಟ್ಟರು!? ಗಿಲ್ಗಿಟ್ನಿಂದ ಓಡಿಬಂದ ಕುಲ್ದೀಪ್ ನಯ್ಯರ್ ತನ್ನೊಂದಿಗೆ ಓಡಿಬರಲಾಗದೆ ಹತರಾದ ಮೂರು ಮಿಲಿಯನ್ ಕಾಫಿರರಲ್ಲಿ ಓರ್ವನಿಗೂ ಮೋಂಬತ್ತಿ ಹಿಡಿಯಲಿಲ್ಲ!)

ಅದೇ ಹೊತ್ತಿಗೆ, ಆದಿಮ ಆಚರಣೆಗಳ ಅಗತ್ಯ, ಔನ್ನತ್ಯ, ಉಪಯುಕ್ತತೆ, ಸಾಂಸ್ಕೃತಿಕ  ಮಹತ್ವ ಮತ್ತು ಸೌಂದರ್ಯಗಳನ್ನು ಉದ್ದೇಶಪೂರ್ವಕವಾಗಿ ಮರೆಮಾಚಲಾಗುತ್ತಿದೆ. ತಮ್ಮನ್ನು ರಕ್ಷಿಸಿಕೊಳ್ಳಲು ಆದಿಮ ಜನಾಂಗಗಳು ವಿಶ್ವದಾದ್ಯಂತ (ಬಿಡಿಬಿಡಿಯಾಗಿ, ಗೊಂದಲಮಯವಾಗಿ) ಮಾಡಿದ ಎಲ್ಲಾ ಯತ್ನಗಳನ್ನು ವಿಸ್ತರಣಾವಾದಿ ಮತಗಳು ವ್ಯವಸ್ಥಿತವಾಗಿ ಮಟ್ಟಹಾಕಿದವು. ಮತಾಂತರವಾಗಲು ಒಪ್ಪದ ಆದಿವಾಸೀ ಸಮುದಾಯಗಳನ್ನು ಸುಳ್ಳುಸುಳ್ಳೇ Cannibals ಎಂದು ಕರೆದು ನಿರ್ನಾಮ ಮಾಡಿದ್ದಕ್ಕೂ, ಇಂದು ಮತಾಂತರವಾಗದ ಭಾರತೀಯ ಸಮುದಾಯಗಳನ್ನು ಕೋಮುವಾದಿಗಳೆಂದು ಕರೆಯುವುದಕ್ಕೂ ಅಂತಹ ವ್ಯತ್ಯಾಸವೇನೂ ಇಲ್ಲ!

ನೂರಾರು ವರ್ಷಗಳ ಕಾಲ ಕ್ರೈಸ್ತ-ಮುಸ್ಲಿಂ ಮತಪಂಡಿತರು ಹೇಳಿದ್ದನ್ನು ಕೇಳಿ ಕೇಳಿ ನಮ್ಮ ದೇವರುಗಳು ಮತ್ತು ಆಚರಣೆಗಳ ಬಗ್ಗೆ ನಾಚಿಕೆಪಡಲಾರಂಭಿಸಿದೆವು. ಮೂರ್ತಿಪೂಜೆ, ಹಿರಿಯರಿಗೆ ಎಡೆ, ಭೂತಕೋಲ, ನದಿಮರಗಿಡ, ಪಶುಪಕ್ಷಿಗಳ ಆರಾಧನೆ ಇತ್ಯಾದಿಗಳನ್ನು ನಾವೂ ಹಳಿಯಲಾರಂಭಿಸಿದೆವು. ‘ಮೂಢನಂಬಿಕೆ’ ಎಂಬ ಮತಪ್ರಚಾರಕರ ಹತ್ಯಾರವನ್ನು ಪಾಠ ಪುಸ್ತಕಕ್ಕೂ ತಂದೆವು. ಪುರಾತನ ರೋಮನ್ ಚಕ್ರವರ್ತಿಗಳು ಕ್ರೈಸ್ತಗುರುಗಳ ಆಣತಿಯಂತೆ ಪೇಗನ್ ಆಚರಣೆಗಳನ್ನು ನಿಷೇಧಿಸಿದ್ದಕ್ಕೂ, ಸಿದ್ಧರಾಮಯ್ಯನವರ ಮೂಢನಂಬಿಕೆ ನಿಷೇಧ ಕಾಯ್ದೆಗೂ, ಮಮತಾ ಬ್ಯಾನರ್ಜಿಯವರ ದುರ್ಗಾವಿಗ್ರಹ ವಿಸರ್ಜನೆ ಆದೇಶಕ್ಕೂ ಅಂತಹ ವ್ಯತ್ಯಾಸವೇನೂ ಇಲ್ಲ! ಹಿಂದೂ ಕಾಫಿರರ ಪಾಲಿಗೆ ಬುದ್ಧಿಜೀವಿಗಳಿಂದ, ಚಿಂತಕರಿಂದ, ‘ವಿಚಾರವಾದಿ’ ಗಳಿಂದ, ಎಡಪಂಥೀಯರಿಂದ, ಮಿಶನರಿ-ವಹಾಬಿಗಳಿಂದ (ಈಗ ಇಷ್ಟಲಿಂಗವಂತರಿಂದ), ಪತ್ರಕರ್ತರಿಂದ ದಿನದಿನವೂ, ಅನುಕ್ಷಣವೂ Inquisition! (ಮಾನ್ಯ ಎಂ.ಬಿ. ಪಾಟೀಲರು ಆರಾಧನೆಯ ಸ್ವರೂಪದಲ್ಲಿ ವೀರಶೈವರನ್ನು ಪ್ರಶ್ನಿಸುವ ಧಾಟಿ ಗಮನಿಸಿ. ‘ಪಂಚಾಚಾರ್ಯರು ಯಾಕೆ ನಿಮಗೆ’, ‘ನಿಮಗೆ ಮನೆದೇವರೆಂದು ಬೇರೆ ಇಲ್ಲವೇ’ಇತ್ಯಾದಿ.)

ಚಿತ್ರಕೃಪೆ : 123rf.com

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments