ವಿಷಯದ ವಿವರಗಳಿಗೆ ದಾಟಿರಿ

ಅಕ್ಟೋಬರ್ 27, 2017

2

ಕ್ರೂರಿಯೇ ನಮ್ಮ ನಾಡಿನ ಆದರ್ಶ ವ್ಯಕ್ತಿಯಾಗಬೇಕೆ ?

‍ನಿಲುಮೆ ಮೂಲಕ

– ಡ್ಯಾನಿ ಪಿರೇರಾ

ಭಾರತದ ಇತಿಹಾಸದುದ್ದಕ್ಕೂ ವಿವಾದಾತ್ಮಕ ವ್ಯಕ್ತಿಗಳನ್ನು ಈ ರಾಷ್ಟ್ರದ ಜನಮಾನಸದಲ್ಲಿ ಸರ್ವಮಾನ್ಯ ಮಾಡಬೇಕೆಂಬ ಪ್ರಯತ್ನ ನಿರಂತರವಾಗಿ ನಡೆದಿದೆ. ಬದಲಾದ ವ್ಯವಸ್ಥೆಯಲ್ಲಿ ಆಳುವವರ ಮರ್ಜಿಗೆ ಸಿಲುಕಿದ ಇತಿಹಾಸಕಾರರು ಮಿಥ್ಯೆಯನ್ನು ಸತ್ಯವೆಂದು ತುರುಕುವ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ. ಅವರ ಸಿದ್ಧಾಂತಗಳ ಮೂಸೆಯಲ್ಲಿ ದೇಶಭಕ್ತರು ಖಳನಾಯಕರಾದರೆ, ಖಳನಾಯಕರು ಬೆಳಗಾಗುವದರೊಳಗೆ ದೇಶಭಕ್ತರಾಗಿ ರೂಪಾಂತರಗೊಂಡಿದ್ದಾರೆ! ಈ ಹಿನ್ನೆಲೆಯಲ್ಲಿ ಎಂದಿನಂತೆ ಟಿಪ್ಪು ಜಯಂತಿ ವಿವಾದ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಹಾಗಾಗಿ ಕೆಲವರಿಗೆ ಟಿಪ್ಪು ಜಾತ್ಯತೀತ ಮತ್ತೆ ಕೆಲವರಿಗೆ ಮತಾಂಧನಾಗಿ ಗೋಚರಿಸುತ್ತಿದ್ದಾನೆ. ಈ ದೇಶದ ವಿಚಿತ್ರವೇನೆಂದರೆ ಈ ದೇಶದಲ್ಲಿ ಮುಸಲ್ಮಾನರಲ್ಲೇ ಈ ದೇಶಕ್ಕೆ ಬಹುದೊಡ್ಡ ಕೊಡುಗೆಯನ್ನು ಕೊಟ್ಟ ಮಹನೀಯರಿದ್ದಾರೆ. ಅವರ್ಯಾರನ್ನೂ ಈ ಸಮಾಜ ಧರ್ಮದ ಹೆಸರಲ್ಲಿ ಗುರುತಿಸುವುದಿಲ್ಲ. ಅವರು ಇಸ್ಲಾಂ ಚಿಂತನೆಗಳೊಂದಿಗೆ ಬೆಳೆದರೂ ಬೆಳೆ ಬೆಳೆದಂತೆ ಅವರ ವಾಸ್ತವ ಬದುಕಿನ ತಮ್ಮ ಪ್ರಪಂಚವನ್ನು ವಿಶಾಲಗೊಳಿಸಿದ್ದರಿಂದ ಮುಸ್ಲೀಮೇತರರಲ್ಲೂ ಅವರು ಆದರಣೀಯರಾಗಿದ್ದಾರೆ. ದುರ್ದೈವವೆಂದರೆ ಅವರು ಹುಟ್ಟಿದ ಸಮಾಜದಲ್ಲೇ ಕಡೆಗಣಿಸಲ್ಪಟ್ಟಿರುವುದರಿಂದ ಈ ದೇಶದ ಸೆಕ್ಯುಲರ್ ಪಟ್ಟಿಯಲ್ಲಿ ಅವರಿಗೆ ಮಹತ್ವದ ಸ್ಥಾನವಿಲ್ಲ.

ಈ ದೇಶದಲ್ಲಿ ‘ಜಾತ್ಯತೀತ’ ಎನಿಸಿಕೊಳ್ಳುವವ ಅಲ್ಪಸಂಖ್ಯಾತ ಸಮಾಜದಲ್ಲಿ ಗೌರವಿಸಲ್ಪಡುವವನಾಗಬೇಕು ಎಂಬುದು ಸೆಕ್ಯುಲರ್ ವಲಯದಲ್ಲಿ ಅಘೋಷಿತ ಒಪ್ಪಂದವಿದೆ. ಇದೇ ಮತೀಯ ಸಾಮರಸ್ಯಕ್ಕೆ ತೊಡಕಾಗಿರುವ ಅಂಶ! ಈ ದೇಶದ ಅತ್ಯಂತ ಹೆಮ್ಮೆಯ ರಾಷ್ಟ್ರಪತಿಯಾಗಿದ್ದ ಸ್ವರ್ಗೀಯ ಡಾ. ಎ ಪಿ ಜೆ ಅಬ್ದುಲ್ ಕಲಾಂ ಒಬ್ಬ ಶ್ರದ್ಧಾವಂತ ಮುಸಲ್ಮಾನರಾಗಿದ್ದರು. ಅವರದು ಸರ್ವಧರ್ಮ ಸಮನ್ವಯಭಾವದ ಮೈವೆತ್ತರೂಪ. ಅವರು ಕರ್ಮಠ ಮುಸಲ್ಮಾನರಾಗಿರದ ಕಾರಣ ಅವರು ಹುಟ್ಟಿದ ಸಮಾಜದಲ್ಲಿ ಅವರು ಸರ್ವಮಾನ್ಯರಾಗಲಿಲ್ಲ! ಅವರ ಸರ್ವಧರ್ಮ ಸಮಭಾವವನ್ನು ಗೌರವಿಸಿ ಅವರನ್ನು ಆದರಿಸಿ ಗೌರವಿಸಿದ್ದು ಸಾಮಾನ್ಯ ಜನತೆ ಹಾಗೂ ಮಠ-ಮಾನ್ಯಗಳೇ. ಹಾಗಾಗಿ ಅವರ ವಿಚಾರಗಳ ಬಗ್ಗೆ ಘೋಷಿತ ಜಾತ್ಯತೀತರು ಕಲಾಂರ ಸಮನ್ವಯತೆಯನ್ನು ಮಾದರಿಯಾಗಿ ತೆಗೆದುಕೊಳ್ಳಲಿಲ್ಲ.

ಶಿಶುನಾಳ ಶರೀಫ ಹಿಂದೂ ಮುಸ್ಲಿಂ ಅನುಭಾವಿ. ಶರೀಫರನ್ನು ಕರ್ನಾಟಕದ ‘ಕಬೀರ್ ದಾಸ’ ಎಂದು ಕರೆಯಲಾಗುತ್ತದೆ. ಹಿಂದೂ, ಮುಸ್ಲಿಮರೆಂಬ ಭೇದವಿಲ್ಲದೆ ಎಲ್ಲರೂ ಅವರನ್ನು ಸಂತರೆಂದು ಪರಿಗಣಿಸಿದ್ದಾರೆ. ಕರ್ನಾಟಕದ ಮೊದಲನೆಯ ‘ಮುಸ್ಲಿಂ ಕವಿ’ ಎಂಬ ಖ್ಯಾತಿ ಅವರದ್ದು. ಈ ಸರ್ವಧರ್ಮ ಸಮನ್ವಯಕಾರ, ಮೇರು ವ್ಯಕ್ತಿತ್ವದ ಶರೀಫರು ಹಿಂದೂ ಮುಸ್ಲೀಮರ ನಡುವಿನ ಸಾಮರಸ್ಯದ ಕೊಂಡಿಯಾಗಬೇಕಾದವರು. ಶರೀಫರು ಭಾರತೀಯ ಮೌಲ್ಯವಾಗಿರುವ ಎಲ್ಲ ನಂಬಿಕೆಗಳನ್ನು ಗೌರವಿಸುವ ಮನೋಭೂಮಿಕೆಯಲ್ಲಿ ಬೆಳೆದವರಾದ್ದರಿಂದ ಅವರಲ್ಲೊಬ್ಬ ಮತಾಂಧನ ಸೃಷ್ಠಿ ಆಗಲೇ ಇಲ್ಲ. ಅವರು ಇಲ್ಲಿನ ಹಿಂದುಗಳೊಂದಿಗೆ ಸಮರಸರಾದರು. ಆದರೆ ಕರ್ಮಠರು ಇವರನ್ನು ದೂರವಿಟ್ಟ ಪರಿಣಾಮ ಅವರು ಸೆಕ್ಯುಲರ್ ವಲಯದ ಧ್ರುವತಾರೆಯಾಗಲಿಲ್ಲ.

ಖ್ಯಾತ ಕಾದಂಬರಿಕಾರ ಎಸ್ ಎಲ್ ಭೈರಪ್ಪನವರು ಹೇಳುತ್ತಾರೆ, “ಅಂದಿನ ದಿನದಲ್ಲಿ ಮೈಸೂರು ಅತ್ಯಂತ ಸುಂದರ, ಸ್ವಚ್ಚ ಊರಾಗಿತ್ತು. ಒಮ್ಮೆ ಬೆಳಗಿನ ಜಾವದಲ್ಲಿ ಒಬ್ಬ ಅಧಿಕಾರಿ ಕುದುರೆಯ ಮೇಲೆ ಕುಳಿತು ರಸ್ತೆ ಬದಿಗಳನ್ನು ಸ್ವಚ್ಛಮಾಡಿದ್ದಾರೋ ಇಲ್ಲವೋ ಎಂದು ಪರಿಶೀಲಿಸಲು ಬರುತ್ತಿದ್ದರು. ನಂತರದಲ್ಲಿ ತಿಳಿಯಿತು ಅವರು ಮೈಸೂರು ರಾಜ್ಯದ ದಿವಾನರಾದ ಮಿರ್ಜಾ ಇಸ್ಮಾಯಿಲ್” ಎಂದು. ಸರ್ ಸಿ. ವಿ. ರಾಮನ್ ಹೇಳುತ್ತಿದ್ದರು “ಮಿರ್ಜಾ ಇಸ್ಮಾಯಿಲ್ ಅವರ  ಸಂಭಾವ್ಯತೆ, ವೈಯಕ್ತಿಕ ಸೊಬಗು ಇವೆಲ್ಲಕ್ಕೂ ತಿಲಕವಿಟ್ಟ ಹಾಗೆ ಆಳವಾದ ಜ್ಞಾನ, ತಿಳುವಳಿಕೆ, ಹಾಸ್ಯಪ್ರಜ್ಞೆ, ಸಾಂಸ್ಕೃತಿಕ ಪ್ರಜ್ಞೆಗಳು ಅವರನ್ನು ಅತ್ಯಂತ ಶ್ರೇಷ್ಠ ಹಾಗೂ ಯಶಸ್ವೀ ಆಡಳಿತಗಾರನನ್ನಾಗಿ ರೂಪಿಸಿದ್ದವು” ಎಂದು. ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಸರ್ ಮಿರ್ಜಾ ಇಸ್ಮಾಯಿಲ್ ಅವರ ಜೊತೆಗಾರಿಕೆಯ ಅವಧಿ “ಮೈಸೂರು ಸಂಸ್ಥಾನದ ಸ್ವರ್ಣಕಾಲ” ಎಂದು ಬಣ್ಣಿತವಾಗಿದೆ. ವಿಭಿನ್ನ ಧರ್ಮಗಳ ನೆಲೆಯಿಂದ ಬಂದು ಸೋದರರಂತೆ ಒಂದುಗೂಡಿ ಕೆಲಸ ಮಾಡಿದ ಈ ಈರ್ವರ ಜೊತೆಗಾರಿಕೆಯನ್ನು ಮೆಚ್ಚಿ ಇದೋ ಇಲ್ಲಿದೆ ‘ರಾಮರಾಜ್ಯ’ ಎಂದು ಗಾಂಧಿಜೀ ವರ್ಣಿಸಿದ್ದರು.

ಸರ್ ಮಿರ್ಜಾ ಇಸ್ಮಾಯಿಲ್ ಅವರು ತಮ್ಮ ಅಧಿಕಾರಾವಧಿಯ ಪ್ರಮುಖ ಸಮಯವನ್ನು ಯಾವುದೇ ಗಲಭೆಗಳಿಗೆ ಅವಕಾಶವಿಲ್ಲದಂತೆ ನೋಡಿಕೊಂಡಿದ್ದರು. ಸ್ವಾತಂತ್ರ್ಯ ಹೋರಾಟದ ಅವಧಿಯ ಆ ಸಮಯದಲ್ಲಿ ಕಾಂಗ್ರೆಸ್ ಪದೇ ಪದೇ ಚಳುವಳಿಗಳನ್ನು ನಡೆಸುತ್ತಿತ್ತು. ಇಂತಹ ಸಂದರ್ಭದಲ್ಲಿ ರಾಷ್ಟ್ರೀಯ ನಾಯಕರಾದ  ಗಾಂಧಿ, ನೆಹರು ಅಂತಹ ನಾಯಕರೊಡನೆ ಮಹಾರಾಜರ ಸಂಪರ್ಕವನ್ನು ಮಿರ್ಜಾ ಇಸ್ಮಾಯಿಲ್ಲರು ಆತ್ಮೀಯವಾಗಿರಿಸಿದ್ದರು. ಈ ಚಳುವಳಿಗಳ ಸಮಯದಲ್ಲಿ ಯಾವುದೇ ಗಲಭೆಗಳು ಉಂಟಾಗದಂತೆ ಪರಿಸ್ಥಿತಿ ನಿಭಾಯಿಸುವುದು ಮಿರ್ಜಾ ಇಸ್ಮಾಯಿಲ್ಲರ ದಕ್ಷತೆಯನ್ನು ಅವಲಂಭಿಸಿತ್ತು. 1941ರಲ್ಲಿ ಜೈಪುರ ಸಂಸ್ಥಾನದಲ್ಲಿ ಅಧಿಕಾರ ವಹಿಸಿಕೊಂಡ ಸರ್ ಮಿರ್ಜಾ ಇಸ್ಮಾಯಿಲ್ ಅವರು, ಅಲ್ಲಿಯೂ ತಮ್ಮ ದಕ್ಷತೆಯ ಪ್ರಭಾವ ಬೀರಿದರು. ಇದರಿಂದಾಗಿ ಜಯಪುರ ನಗರ ಕೈಗಾರಿಕೋದ್ಯಮದ ಹೊಸ ಶಕೆಯನ್ನು ಕಂಡಿತು.     ಪಾಕಿಸ್ತಾನವನ್ನು ಆಧುನಿಕವಾಗಿ ನಿರ್ಮಿಸಬೇಕೆಂಬ ಬಯಕೆಯಿಂದ ಅಲ್ಲಿನ ಪ್ರಜೆಯಾಗಬೇಕೆಂದು ಆಹ್ವಾನಿಸಿದ ಮೊಹಮ್ಮದ್ ಆಲಿ ಜಿನ್ನಾರ ಕೋರಿಕೆಯನ್ನು ಸಾರಾಸಗಟಾಗಿ ತಳ್ಳಿಹಾಕಿದ ಸರ್ ಮಿರ್ಜಾ ಇಸ್ಮಾಯಿಲ್ ಅವರು, ನನಗೆ ಭಾರತದ ವಿಭಜನೆ ಆಗುವುದಕ್ಕೆ ಸ್ಪಷ್ಟ ವಿರೋಧವಿದೆ ಎಂದು ನೇರವಾಗಿ ತಿಳಿಸಿ ಜಿನ್ನಾ ಅವರಿಗೆ ನಿಷ್ಠುರರಾದರು.

1946ರಲ್ಲಿ ಹೈದರಾಬಾದಿನ ದಿವಾನರಾದ ಸರ್ ಮಿರ್ಜಾ ಇಸ್ಮಾಯಿಲ್ಲರು ಹೈದರಾಬಾದ್ ನಿಜಾಮನಿಗೆ ಯಾವುದೇ ತಕರಾರಿಲ್ಲದೆ ಭಾರತದ ಭಾಗವಾಗಲು ಮನವೊಲಿಸಲು ಪ್ರಯತ್ನಿಸಿದರು. ಆತ ಮಾತು ಕೇಳದೆ ಹೋದಾಗ ಕೆಲವು ತಿಂಗಳುಗಳಲ್ಲೇ ಕೆಲಸ ಬಿಟ್ಟು ಈಚೆ ಬಂದರು. ಇವರು ಭಾರತೀಯ ಸಮಾಜಕ್ಕೆ ಅದರಲ್ಲೂ ಕರ್ನಾಟಕಕ್ಕೆ ಕೊಟ್ಟ ಕೊಡುಗೆಗಳಿಂದ ಜಾತಿ ಮತ ಮೀರಿ ಗೌರವಿಸಲ್ಪಡುವ ಮಹಾನ್ ವ್ಯಕ್ತಿಗಳು. ಇವರು ಸರ್ವಧರ್ಮ ಸಮನ್ವಯತೆಯ ನೈಜ ಮಾದರಿ. ಮಾನ್ಯ ಮಿರ್ಜರು ಕರ್ಮಠ ಮುಸಲ್ಮಾನರಾಗಿರಲಿಲ್ಲ. ಹಾಗಾಗಿ ಸೆಕ್ಯುಲರ್ ವಲಯದಲ್ಲಿ ಅವರು ಪ್ರಸ್ತುತರಾಗಲಿಲ್ಲ. ಹಾಗಾಗಿ ಅವರನ್ನು ಸಮನ್ವಯದ ಆದರ್ಶವಾಗಿ ಸೆಕ್ಯುಲರ್ ವಲಯ ಸ್ವೀಕರಿಸಲಿಲ್ಲ.

ಮೇಲಿನವು ಕೆಲವು ಉದಾಹರಣೆಗಳು ಮಾತ್ರ. ಈ ರೀತಿ ಈ ದೇಶದಲ್ಲಿ ಜಾತಿ, ಮತ ಪಂಥಗಳನ್ನು ಮೀರಿದ್ದ ಮೇರುವ್ಯಕ್ತಿಗಳು ಮುಸ್ಲಿಂ ಸಮಾಜದಲ್ಲಿದ್ದಾರೆ ಎನ್ನುವುದು ಹೆಮ್ಮೆಯ ಸಂಗತಿಯೇ.

ಹಿಂದೂ-ಮುಸ್ಲಿಂ ಹೆಸರಲ್ಲಿ ದೇಶ ವಿಭಜನೆಯಾದಾಗ ಮುಸ್ಲಿಂ ಲೀಗಿನ ಪರವಾಗಿರುವ ಮುಸಲ್ಮಾನರು ದೇಶ ಬಿಟ್ಟು ಪಾಕಿಸ್ತಾನಕ್ಕೆ ತೆರಳಿದರು. ಧರ್ಮದ ಹಿನ್ನೆಲೆಯಲ್ಲಿ ದೇಶ ವಿಭಜನೆಗೊಂಡ ಮೇಲೆ ಅವರು ಅಲ್ಲಿಗೆ ತೆರಳುವುದು ನ್ಯಾಯಯುತವೇ ಆಗಿತ್ತು. ದೇಶದ ಅನೇಕ ರಾಜ್ಯಗಳಲ್ಲಿ ಮುಸ್ಲಿಂ ಲೀಗಿನ ಅಸಂಖ್ಯ ಸಮರ್ಥಕರಿದ್ದರು. ದೇಶ ವಿಭಜನೆಯಾದಾಗ ಜಿನ್ನಾ ಅವರ ಕಲ್ಪನೆಯ ಇಸ್ಲಾಮಿಕ್ ಸ್ವರ್ಗಕ್ಕೆ ಅವರನ್ನು ಕರೆದೊಯ್ಯಲಿಲ್ಲ. ಅವರು ಜಿನ್ನಾನನ್ನು ಶಪಿಸಿದ್ದುಂಟು. ಭಾರತದಲ್ಲಿ ಅವರು ಜೀವಿಸುವುದು ಅಪಮಾನಕರ ಎನಿಸಿತ್ತು.

ಆಗ ಅವರ ನೆರವಿಗೆ ಬಂದದ್ದು ನೆಹರು ಮತ್ತು ಇತರ ಕಾಂಗ್ರೆಸ್ಸಿನ ಮುಖಂಡರು. ಮುಸ್ಲಿಂ ಲೀಗಿನವರು ತಮ್ಮ ಪಕ್ಷ ಸೇರಬಹುದೆಂಬ ಆಹ್ವಾನವಿತ್ತರು. ಇದು ಮುಸ್ಲೀಂ ಲೀಗಿನ ಮುಖಂಡರಿಗೆ ಆನಂದ ತಂದಿತ್ತು. ಅವರಿಗೆ ನೆಹರು ಗಾಂಧಿ ಟೋಪಿ ಧರಿಸಿದ್ದ ಔರಂಗಜೇಬನಂತೆ ಕಂಡಿದ್ದರು. ಆಗಲೇ ಕಾಂಗ್ರೆಸ್ಸಿನ ಮುಖಂಡರು ಅವರಿಗೆ ಅನುಕೂಲಕರ ಸುಳ್ಳೊಂದನ್ನು ತೇಲಿ ಬಿಟ್ಟರು- “ಭಾರತದಲ್ಲಿನ ಅನೇಕ ಮುಸಲ್ಮಾನರಿಗೆ ಪಾಕಿಸ್ತಾನ ಬೇಕಾಗಿರಲಿಲ್ಲ. ಅವರಿಗೆ ಹಿಂದೂ- ಮುಸ್ಲಿಂ  ಐಕ್ಯತೆಯಲ್ಲಿ ವಿಶ್ವಾಸವಿತ್ತು” ಎಂದು. ಇಲ್ಲಿನ ಬಹತೇಕ ಮುಸ್ಲೀಮರು ಪಾಕಿಸ್ತಾನದ ಸಮರ್ಥಕರಾಗಿದ್ದರು ಎಂಬ ಸತ್ಯವನ್ನು ಅಳಿಸಿಹಾಕಲಾಯಿತು. ಈ ಘಾತುಕ ಮನಸ್ಥಿತಿಯೊಂದಿಗೆ ಕಮ್ಯುನಿಷ್ಟರೂ ಕೈ ಜೋಡಿಸಿದರು. ತಮಾಷೆ ಎಂದರೆ ಪಾಕ್ ಪರ ಹೋರಾಟ ಮಾಡಿದ್ದ ಮುಸ್ಲಿಂ ಮುಖಂಡರು ತಮ್ಮ ಅಪಾರ ಆಸ್ತಿಯನ್ನು ಬಿಟ್ಟು ಪಾಕಿಸ್ತಾನಕ್ಕೆ ಹೋಗುವ ಸ್ಥಿತಿಯಲ್ಲಿರಲಿಲ್ಲ. ಹಾಗಾಗಿ ನೆಹರು ಆಹ್ವಾನ ಅವರಿಗೆ ವರದಾನವಾಯಿತು. ಕಾಂಗ್ರೆಸ್ ಸೇರಿ ಸೆಕ್ಯುಲರ್ ಆಗಿದ್ದಷ್ಟೇ ಅಲ್ಲ, ದಿನ ಬೆಳಗಾಗುವಷ್ಟರಲ್ಲಿ ಈ ಪಾಕ್ ಸಮರ್ಥಕರು “ಭಾರತೀಯ ರಾಷ್ಟ್ರೀಯವಾದಿ”ಗಳಾಗಿ ರೂಪುಗೊಂಡರು. ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ದ್ರೋಹಿಗಳು ಒಂದೇ ದಿನದಲ್ಲಿ ದೇಶಭಕ್ತರಾಗಿ ಪರಿವರ್ತನೆಗೊಂಡರು. ದೇಶ ವಿಭಜನೆಯ ಹಿನ್ನೆಲೆಯಲ್ಲಿ ಪಾಕಿಸ್ತಾನಕ್ಕೆ ತೆರಳಿದ ಲಕ್ಷಾಂತರ ಮುಸ್ಲೀಮರು ಭಾರತಕ್ಕೆ ವಾಪಸ್ ಬಂದರು. ಇದಕ್ಕೆ ಗಾಂಧಿಜೀಯವರ ಬೆಂಬಲವೂ ಇತ್ತು. ನರಿ ಬುದ್ಧಿಯ ಮುಸ್ಲಿಂಲೀಗಿನ ನಾಯಕರ ಪರಿಚಯವಿದ್ದರಿಂದ ಅವರ ಬಗ್ಗೆ ಅನುಮಾನಪಟ್ಟ ಹಿಂದೂ ಮುಖಂಡರನ್ನು ‘ಕೋಮುವಾದಿ’ಗಳೆಂದು ಜರಿಯಲಾಯಿತು. ಇಲ್ಲಿದ್ದವರು ಜೊತೆಗೆ ಪಾಕಿಸ್ತಾನದಿಂದ ಬಂದ ಮುಸಲ್ಮಾನರು ಕಾಂಗ್ರೆಸ್ಸಿನ ಸಮರ್ಥಕರಾಗಿದ್ದರಿಂದ ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಕಾಂಗ್ರೆಸ್ ಆಳುವಂತಾಗಿದ್ದು ಇತಿಹಾಸ. ಅದರಲ್ಲಿ ಅನೇಕರು ಭಾರತದ ಆಡಳಿತದ ಸಾಂವಿಧಾನಿಕ ಹುದ್ದೆ ಅಲಂಕರಿಸಿದವರ ಸಂಖ್ಯೆಯೂ ಬಹಳ. ಹೀಗೆ ರಾಷ್ಟ್ರವಿರೋಧಿಗಳನ್ನು ಹಾಗೂ ಪ್ರತ್ಯೇಕತಾವಾದಿಗಳನ್ನು ಪ್ರೀತಿಸುವುದೇ ‘ಸೆಕ್ಯುಲರ್ ವಾದ’ ಅದನ್ನು ವಿರೋಧಿಸುವುದು ‘ಕೋಮುವಾದ’ ಎಂಬ ವ್ಯಾಖ್ಯಾನ ಮುಂದುವರೆಯಿತು.

ಇಷ್ಟೆಲ್ಲ ಮತೀಯವಾದಿ ಮನಸ್ಥಿತಿಯ ಪೋಷಣೆಯ ನಡುವೆಯೂ ಇಲ್ಲಿ ಅಸಂಖ್ಯ ದೇಶಭಕ್ತ, ಸರ್ವಧರ್ಮ ಸಮನ್ವಯತೆಯ ಅಪ್ಪುಗೆಯನ್ನು ಒಪ್ಪುವ ಮುಸಲ್ಮಾನ ಬಂಧುಗಳು ಈ ದೇಶದಲ್ಲಿದ್ದಾರೆ. ಆದರೆ ದೇಶ ವಿಭಜನೆಗೊಂಡ ತರುವಾಯ ಆ ಶ್ರೇಷ್ಠ ಹಾಗೂ ಸಮನ್ವಯಭಾವದ ‌ವಿಚಾರಗಳುಳ್ಳ ವ್ಯಕ್ತಿಗಳ ಎಲ್ಲರ ನಂಬಿಕೆಗಳನ್ನು ಗೌರವಿಸಿ ಮುನ್ನಡೆಸಿದ್ದ ಸಾಮರಸ್ಯದ ಸಂಕೇತವಾಗಿದ್ದ ಈ ಮುಸಲ್ಮಾನ ಮೇರು ಪುರುಷರನ್ನು ಮುನ್ನೆಲೆಗೆ ತಂದು ಅವರ ಆದರ್ಶದ ಬದುಕನ್ನು ಅವರ ಕೋಮು ಸಾಮರಸ್ಯದ ರೀತಿಯನ್ನು ಇಲ್ಲೇ ಉಳಿದ ನಮ್ಮ ಮುಸಲ್ಮಾನ ಬಂಧುಗಳಿಗೆ ಪರಿಚಯಿಸಬೇಕಾದ ಕೆಲಸವನ್ನೂ ಈ ದೇಶವನ್ನು ದೀರ್ಘಾವಧಿ ಆಳಿದ ಕಾಂಗ್ರೆಸ್ ಪಕ್ಷ, ಇತರೆ ಸೆಕ್ಯುಲರ್ ಪಕ್ಷಗಳಾಗಲೀ, ಎಡಪಂಥೀಯ ವಿಚಾರವಾದಿ ಬುದ್ಧಿಜೀವಿಗಳಾಗಲೀ ಮಾಡಲೇ ಇಲ್ಲ. ಇವತ್ತು ಇಡೀ ದೇಶದಲ್ಲೇ ಮತ ಸಾಮರಸ್ಯಕ್ಕೆ ನಿರ್ವಿವಾದವಾಗಿ ಹೆಸರಾಗಿರುವ ಕಬೀರದಾಸರು, ಶಿಶುನಾಳ ಶರೀಫರು, ಮಿರ್ಜಾ ಇಸ್ಮಾಯಿಲ್, ಉಸ್ತಾದ್ ಬಿಸ್ಮಿಲ್ಲಾಖಾನ್, ಡಾ. ಎ ಪಿ ಜೆ ಅಬ್ದುಲ್ ಕಲಾಂ, ಅಶ್ವಾಕ್ ವುಲ್ಲಾಖಾನ್ ರಂಥ ಸಂತ ಶ್ರೇಷ್ಠರು, ಸಮಾಜ ಸೇವಕರು, ವಿಜ್ಞಾನಿಗಳು, ಕ್ರಾಂತಿಕಾರಿಗಳನ್ನು ಆ ಸಮಾಜಕ್ಕೆ ಇನ್ನಷ್ಟು ಪರಿಚಯಿಸುವ ಮೂಲಕ ಅವರ ಸಾಮರಸ್ಯದ ದಿವ್ಯ ಸಂದೇಶವನ್ನು ನೀಡುವ ಹಿಂದು- ಮುಸ್ಲಿಂ- ಕ್ರೈಸ್ತರೆಲ್ಲರು ‘ಒಂದೇ ಭಾರತ ಮಂದಿರ’ ಎಂಬ ಸಂದೇಶವನ್ನು ಸಾರುವ ಅಪರೂಪದ ಅವಕಾಶವನ್ನು ಕೈ ಚೆಲ್ಲಿದ ಪರಿಣಾಮ ಸ್ವಾತಂತ್ರ್ಯ ಬಂದು 70 ವಸಂತಗಳು ಕಳೆದರೂ ಇಂದಿಗೂ ಜಾತಿ, ಮತಗಳ ಹೆಸರಲ್ಲಿ ಬಡಿದಾಡುವ ಸ್ಥಿತಿಯೇ ಮುಂದುವರೆದಿದೆ. ಇತಿಹಾಸದಿಂದ ಪಾಠ ಕಲಿಯುತ್ತಿಲ್ಲ ತುಷ್ಠೀಕರಣದ ವಿಷಫಲ ಮತ್ತಷ್ಟು ಹುಲುಸಾಗಿ ಬೆಳೆದಿದೆ. ಹಿಂದುಗಳ- ಕ್ರೈಸ್ತರ ನಂಬಿಕೆಗಳ ಮೇಲೆ ಗದಾಪ್ರಹರ ನಡೆಸಿ ಅವರನ್ನು ಮತಾಂತರ ಮಾಡಿ ಒಪ್ಪದವರನ್ನು, ಹತ್ಯೆಯಂಥ ಕ್ರೌರ್ಯ ನಡೆಸಿದ ಟಿಪ್ಪುವನ್ನು ಸಾಮರಸ್ಯದ ಸಂಕೇತವಾಗಿ ಸ್ವೀಕರಿಸಲೊರಟಿರುವುದು ಎಂಥಾ ವಿಡಂಬನೆ! ರಾಷ್ಟ್ರವಿರೋಧಿ ಮುಸ್ಲಿಂಲೀಗಿನ ಪಳಿಯುಳಿಕೆಗಳ ‘Darling’ ಆಗಿರುವ ಟಿಪ್ಪುವಿನ ಜನ್ಮದಿನ ಆಚರಿಸುವ ಮೂಲಕ ಅದೇ ವಿಭಜನಕಾರಿ ಮತಾಂಧನಿಗೆ ‘ಜಾತ್ಯತೀತ’ ಎನ್ನುವ ಪಟ್ಟನೀಡುವುದು ಎಷ್ಟು ಸರಿ? ಓಟಿಗಾಗಿ ಸ್ವಾತಂತ್ರ್ಯಕಾಲದ ಮತಾಂಧರನ್ನು ರಾಷ್ಟ್ರವಾದಿಗಳನ್ನಾಗಿಸುವ ತುಷ್ಠೀಕರಣದ ಮುಂದುವರೆದ ಭಾಗವೇ ಇದು ಎನ್ನಲು ಭಾರಿ ಜ್ಞಾನಬೇಕೆ? ಇನ್ನೆಷ್ಟುಕಾಲ ಈ ಸಾಮರಸ್ಯದ ನಾಟಕ? ಬೇವು ಬಿತ್ತಿದರೆ ಮಾವು  ಬರುತ್ತದೆಯೇ?!

2 ಟಿಪ್ಪಣಿಗಳು Post a comment
 1. s.dinni
  ಆಕ್ಟೋ 28 2017

  ಯಾರು ಕ್ರೂರಿಯೋ? ಇನ್ನೊಬ್ಬರಲ್ಲಿ ಏನು? ಎಂತು? ಯಾಕೆ?ಹೇಗೆ? ಇದೆಲ್ಲವೂ ನಮ್ಮಿಂದ ನಾವು ತಪ್ಪಿಸಿಕೊಳ್ಳುವ ಯತ್ನ. ಸ್ಪಷ್ಟ ಪಲಾಯನ . ಇಂತಹ ಅರ್ಥಹೀನ ( ದಯಾ ಮಾಡಿ ಯಾರು ಸರಿ ಯಾರು ತಪ್ಪು ಬದಿಗಿಡಿ . ಒಂದರಲ್ಲಿ ನಾನು ಇನ್ನೊಂದರಲ್ಲಿ ಇನ್ನೊಬ್ಬರವು ಕ್ರೂರಿ ಆಗಿರುತ್ತಾರೆ ಎಂಬುದನ್ನು ಮರೆಯದೆ ) ಹರಟೆ ( ಕೊನೆಯಲ್ಲಿ ಅಂತಗೊಳ್ಳುವದು). ಅದೇ ಶಕ್ತಿ,ಚೇತನ ‘ ನಮ್ಮನ್ನು ನಾವು ಶುದ್ಧೀಕರಿಸಿಕೊಳ್ಳುವಲ್ಲಿ ‘ ನೀನೀಗ ನೀನು ಬೆಳಕಾಗು’ ಎಂಬ ದರ್ಶನ ಶಾಸ್ತ್ರ ಮಾಡಿಕೊಳ್ಳುವದು
  ‘ ಒಂದೇ ಶ್ರೇಷ್ಠ ಮಾರ್ಗ’. ಉಳಿದದ್ದು ಎಲ್ಲ ಬರಿ ಆಡಂಬರ,ತೋರಿಕೆ ಅಷ್ಟೇ.

  ಉತ್ತರ
  • ಮಹೇಶ್
   ಆಕ್ಟೋ 30 2017

   ಸ್ವಾಮಿ ನಿಮ್ಮ ಈ ಮನಸ್ಥಿತಿ ಮರಳುಗಾಡಿನ ರಿಲಿಜಿಯನ್ ಹೇಳಿಕೊಡುವುದಿಲ್ಲವೆನ್ನುವುದನ್ನು ಮನಗಾಣಿರಿ

   ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments