ಕಾರಂತ ಸಾಹಿತ್ಯ: ಪರಿಸರ ವಿನಾಶ ಮತ್ತು ವಲಸೆ ರಾಜಕಾರಣ (ಭಾಗ-೧)
ದೇವು ಹನೆಹಳ್ಳಿ
ಬಂಡಿಮಠ, ಹನೆಹಳ್ಳಿ ಗ್ರಾಮ,
ಬಾರಕೂರು, ಉಡುಪಿ ತಾಲೂಕು-ಜಿಲ್ಲೆ.
ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಕಾಲೇಜು ಯು.ಜಿ.ಸಿ ಅನುದಾನದಲ್ಲಿ ಸುಬ್ರಹ್ಮಣ್ಯದಲ್ಲಿ ಏರ್ಪಡಿಸಿದ ಎರಡು ದಿನಗಳ ವಿಚಾರಸಂಕಿರಣದಲ್ಲಿ ದಿನಾಂಕ 4-3-2017ರಂದು ಮಂಡಿಸಿದ ಲೇಖನ.
ಸತ್ಯಮೇವ ಜಯತೆ ನ ಅನೃತಂ ಎಂಬ ಪರಮ ಪವಿತ್ರ ಸುಳ್ಳಿನ ಕೃಪಾಛತ್ರದಡಿಯಲ್ಲಿ ಮಾತನಾಡುವುದು, ಬದುಕುವುದು ಅದೆಷ್ಟು ಸುಖದಾಯಕ ಎಂಬುದು ಕೇಂದ್ರ ಸಚಿವ ಕಿರಣ್ ರಿಜುಜು ಅವರಿಗೆ ಅರ್ಥವಾಗಿರಬಹುದು; ನ್ಯಾಯಮೂರ್ತಿ ಕರ್ಣನ್ ಅವರಿಗೆ ಬಲು ಚೆನ್ನಾಗಿಯೇ ಅರ್ಥವಾಗಿರಬೇಕು.*1 ಹಾಗೆಯೇ, Whatsapp, Facebookಗಳ ಕೆಮರಾ ಮುಂದೆ ಕರಕಲಾದ, ಹಳಸಲು ವಾಸನೆ ಬೀರುತ್ತಿರುವ ರೊಟ್ಟಿಯನ್ನು ಹಿಡಿದು `ದಂಗೆಯೆದ್ದ’ ಸೈನಿಕರಿಗೆ ಮೈಕೈ ನೋಯುವಂತೆ ಅರ್ಥವಾಗಿರಬಹುದು. ಇವತ್ತು ಅಂತಹ ಒಂದು ಹಳಸಲು ರೊಟ್ಟಿಯನ್ನು ನಿಮಗೆಲ್ಲ ಬಡಿಸಲು ನಿಂತಿದ್ದೇನೆ. ಅದು ಕನ್ನಡ ಸಾಹಿತ್ಯದಲ್ಲಿ ಶಿವರಾಮ ಕಾರಂತರು ಹಿಡಿದ ರೊಟ್ಟಿ. ಬಲು ಸ್ವಾದಿಷ್ಟ ರೊಟ್ಟಿಯೆಂದು ಬಾಯಲ್ಲಿ ಹೇಳುತ್ತಾ ಹಲವಾರು ಮಂದಿ ಕನ್ನಡದ ಸಾಹಿತಿಗಳು, ರಾಜಕಾರಣಿಗಳು, ಬುದ್ಧಿಜೀವಿಗಳು ಮತ್ತು ವಿಮರ್ಶಕರು ಮೂಗುಮುಚ್ಚಿಕೊಂಡೇ ಸವಿಸವಿದು ತಿಂದ ಕೊಳೆತ ರೊಟ್ಟಿ. King is naked ಎಂದು ಘೋಷಿಸಿಬಿಡುವುದು ಜಾಣತನವೂ ಅಲ್ಲ, ಲಾಭದಾಯಕವೂ ಅಲ್ಲ, politically correct, politically lucrative ಕೂಡಾ ಅಲ್ಲ. ಆದರೂ ಹೇಳುವ ಮನಸ್ಸು ಮಾಡಿದ್ದೇನೆ. ಕಳೆದುಕೊಳ್ಳುವುದಕ್ಕೆ ಏನೂ ಉಳಿದಿಲ್ಲ.
ಮಂಗಳೂರಿನಲ್ಲಿ ನಾಲ್ಕಾರು ವರ್ಷಗಳ ಹಿಂದೆ ಯಕ್ಷಗಾನಕ್ಕೆ ಸಂಬಂಧಪಟ್ಟಂತೆ ಒಂದು ಗೋಷ್ಠಿ ನಡೆದಿತ್ತು. `ಯಕ್ಷಗಾನಕ್ಕಾಗಿ ಕಾರಂತರು ಮಾಡಿದ್ದು ಅದೊಂದೇ. ಇದನ್ನು ಮಾಡಿಲ್ಲ, ಅದನ್ನು ಮಾಡಿಲ್ಲ; ತೆಂಕುತಿಟ್ಟಿಗಾಗಿ ಅವರೇನೂ ಮಾಡಿಲ್ಲ’ ಎಂಬಿತ್ಯಾದಿಯಾಗಿ ಆರೋಪಗಳು ನಡೆದವು. ಮಾತು ಹಳಿತಪ್ಪುತ್ತಿರುವುದನ್ನು ಕಂಡು ಹಿರಿಯ ಕಲಾವಿದ, ಯಕ್ಷಋಷಿ ಹೊಸ್ತೋಟ ಮಂಜುನಾಥ ಭಾಗವತರು `ಕಾರಂತರು ಅದನ್ನು ಯಾಕೆ ಮಾಡಿಲ್ಲ, ಇದನ್ನು ಯಾಕೆ ಮಾಡಿಲ್ಲ ಎಂದು ಕೇಳುವುದು ಸಮಂಜಸವಲ್ಲ, ಅದು ವ್ಯರ್ಥಾಲಾಪ; ಅವರು ಹಾಕಿಕೊಟ್ಟ ಹಾದಿಯಲ್ಲಿ ನಾವೇನು ಮಾಡಬಹುದು ಎಂದು ಯೋಚಿಸೋಣ’ ಎಂದರು.
ಯಕ್ಷಗಾನವಿರಲಿ, ಸಾಹಿತ್ಯದಲ್ಲಿಯೂ ಕಾರಂತರು ತೋರಿದ ಈ ಹಳಸಲು ರೊಟ್ಟಿಯನ್ನು ಮುಟ್ಟುವ, ಮುಂದುವರಿಸುವ, ದಾಟಿಸುವ ಧೈರ್ಯವನ್ನು ಯಾರೂ ತೋರಲಿಲ್ಲ. ಅವರನ್ನು `ಕೋಮುವಾದಿ’ ಎಂದು ಜರೆದರು ವಿನಃ ಆ ಕಾದಂಬರಿಯನ್ನು ಯಾವ ವಿಮರ್ಶಕನೂ ಎತ್ತಿಕೊಳ್ಳುವ ಧೈರ್ಯ ಮತ್ತು ಪ್ರಾಮಾಣಿಕತೆಯನ್ನು ತೋರಲಿಲ್ಲ. ಈ ಹಳಸಲು ರೊಟ್ಟಿಯೆಂದರೆ ವಲಸೆಯ ಹಿಂದಿರುವ ಮತೀಯ ರಾಜಕಾರಣ. ಇಡೀ ಸಹ್ಯಾದ್ರಿಯ ಅರಣ್ಯಭೂಮಿಯೆಲ್ಲಾ ಕೇರಳದ ಹತ್ತಾರು ಬ್ರಾಂಡ್‍ಗಳ ಚರ್ಚ್ ವಶವಾದ ಮತೀಯ ಸೆಕ್ಯುಲರ್ ರಾಜಕಾರಣ.
ಅದೇ ಊರು ಅದೇ ಮರ, ಕಾರಂತರು 70ರ ದಶಕದಲ್ಲಿ ಬರೆದ ಕಾದಂಬರಿ. ಕಾರಂತರ ಕ್ಲಾಸಿಕ್ ಕಾದಂಬರಿಗಳ ಸಾಲಲ್ಲಿ ನಿಲ್ಲುವ ಕಾದಂಬರಿ ಇದಲ್ಲ. ಈ ಕಾದಂಬರಿಯ ಕತೆಯ ಕಾಲಮಾನ ಬಲು ವಿಸ್ತಾರವಾದದ್ದು, ದೀರ್ಘವಾದದ್ದು. ಸರಿಸುಮಾರು 1850ರ ಸುಮಾರಿಗೆ ಆರಂಭವಾದ ಕತೆ 1980ರವರೆಗೂ ಚಾಚುತ್ತದೆ. ಮರಳಿಮಣ್ಣಿಗೆಯಂತೆ ಒಂದೇ ಕುಟುಂಬದ ಹಲವು ಪೀಳಿಗೆಗಳ ಕತೆಯೂ ಅಲ್ಲ. ಒಂದು ಕುಟುಂಬದ ಒಂದೆರಡು ಪೀಳಿಗೆಗಳ ಕತೆ ಮುಂದುವರೆಯುತ್ತದೆ, ಮುಗಿಯುತ್ತದೆ; ಮತ್ಯಾವುದೋ ಕುಟುಂಬದ ಒಂದೆರಡು ಪೀಳಿಗೆಗಳ ಕತೆ ಬರುತ್ತದೆ; ನಡುವೆ ದುತ್ತೆಂದು ಒಂದು ಕುಟುಂಬ, ಒಬ್ಬ ವ್ಯಕ್ತಿ ಬರುತ್ತಾರೆ, ಹೋಗುತ್ತಾರೆ. ನಡುವೆ, ಅಂದರೆ ಸುಮಾರು 1900 ರಿಂದ 20-30 ರ ಮೂರು ದಶಕಗಳ `ಖಾಲಿಸ್ತಾನ್’ ಕೂಡಾ ಇದೆ. ಹೊರಗಿನ ಹಣ ಬರಲು ಶುರುವಾದ 19ನೆಯ ಶತಮಾನದ ಎರಡನೆಯ, ಮೂರನೆಯ ದಶಮಾನದಲ್ಲಿ ಮತ್ತು ಸ್ವಾತಂತ್ರ್ಯಾನಂತರ Secular ಎಂದು ಕರೆಯಿಸಿಕೊಂಡ ಭಾರತದಲ್ಲಿ ತೊಡಗಿದ ಭಕ್ತಿಯ ವಿರೂಪದಿಂದ ಕಾದಂಬರಿ ತೊಡಗಿದರೂ ಕಾದಂಬರಿಯ ಮುಖ್ಯವಸ್ತು ಹಲವು ತರದ ವಲಸೆಗಳಿಂದ, ಲೋಲುಪತೆಗಳಿಂದ, ಜನಸಂಖ್ಯಾಸ್ಫೋಟದಿಂದ ನಿಸರ್ಗದ ಅವಯವಗಳು, ಸಂಪನ್ಮೂಲಗಳು ಯಾರ್ಯಾರಿಂದ, ಹೇಗೇಗೆ ಲೂಟಿಯಾಗುತ್ತಿವೆ, ನಾಶವಾಗುತ್ತಿವೆ ಎಂಬುದು.
ಯಾವುದೇ ಸಾಮಾಜಿಕ ಪಿಡುಗುಗಳ ಕುರಿತು ಮಾತನಾಡಲು ಕಷ್ಟವಾದಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿರುವ ಸುಳಿವನ್ನು ಕಾರಂತರು ಅಂದೇ ನೀಡಿದ್ದರು. ವಿಮರ್ಶೆಯಲ್ಲಿ politically correct ಧೋರಣೆಯನ್ನು ಟೀಕಿಸುವ ಮಾತುಗಳು ಕಾದಂಬರಿಯ ಮೊದಲ ಅಧ್ಯಾಯದಲ್ಲಿ ಬರುತ್ತವೆ. ಕಾದಂಬರಿ ಸಾಗಿದಂತೆ ಪರಿಸರ ವಿನಾಶಕ್ಕೆ ನಮ್ಮ, ನಮ್ಮನ್ನು ಆಳುವವರ ಮೌನ ಕೂಡಾ ಹೇಗೆ ಕಾರಣವಾಗಿಬಿಟ್ಟಿತು ಎಂಬುದನ್ನು ಕಾರಂತರು ಸರಳವಾಗಿ, ನಿರಾಡಂಬರವಾಗಿ, ನೇರ ಮಾತುಗಳಲ್ಲಿ ಹೇಳುತ್ತಾರೆ. ಸೌಮ್ಯ-ನಿಷ್ಠುರವಾದಿ ಗಾಂಧಿ ಗೋಪಾಲಯ್ಯ ಮತ್ತು ಒರಟು-ನಿಷ್ಠುರವಾದಿ ಲಕ್ಷ್ಮಣರಾಯರ ಪ್ರಾಮಾಣಿಕತೆ, ಸತ್ಯನಿಷ್ಠೆ, ಅಲ್ಪತೃಪ್ತಿ, ಕಾರ್ಯಕ್ಷಮತೆ, ದಕ್ಷತೆ ಇತ್ಯಾದಿ ಎಲ್ಲವೂ ಅಪ್ರಸ್ತುತವಾಗಿವೆ, ಲೇವಡಿಗೆ ಒಳಗಾಗಿವೆ. ಅಂತಹ politically correct ವಿದ್ಯಮಾನಗಳು ಇಂದು ಮಲೆತು ನಿಂತಿವೆ. ನಂತರದ ತಲೆಮಾರಿನ ಸಾಹಿತಿಗಳಿರಲಿ, ಸಾಮಾಜಿಕ ಕಾರ್ಯಕರ್ತರು, ಪರಿಸರವಾದಿಗಳು, ಆಳುವವರು, ನ್ಯಾಯಾಂಗ ಕೂಡಾ ಪ್ರಸ್ತಾಪಿಸುವ ಧೈರ್ಯವನ್ನು ಮಾಡಿಲ್ಲ.*2
ಪರಿಸರ ವಿನಾಶವನ್ನು ಈ ಕಾದಂಬರಿ ಪ್ರಸ್ತಾಪಿಸಿದೆ ಎಂಬ ಕಾರಣಕ್ಕೆ ಈ ಕಾದಂಬರಿ ಮುಖ್ಯವಾಗುವುದಲ್ಲ. ಪರಿಸರವಿನಾಶಕ್ಕೆ politically correct ನಿರ್ವೀರ್ಯ ಧೋರಣೆಯೇ ಕಾರಣ ಎಂಬುದನ್ನು ಹೇಳಿದ ಕಾರಣಕ್ಕೆ ಮತ್ತು ಹಲವಾರು ಮಿಥ್ಯಾಮೌಲ್ಯಗಳ ಮೂಲಕ ಈ ನಾಶವನ್ನು ಸಮರ್ಥಿಸಲಾಗುತ್ತದೆ ಎಂಬುದನ್ನು ಕಾರಂತರು ಗ್ರಹಿಸುತ್ತಾರೆ ಮತ್ತು ಯಾವ ಅಳುಕೂ ಇಲ್ಲದೆ, ಯಾವ ಲಾಭಾಪೇಕ್ಷೆ ಇಲ್ಲದೆ ಹೇಳುತ್ತಾರೆ ಎಂಬ ಕಾರಣಕ್ಕೆ ಈ ಕಾದಂಬರಿ ಮುಖ್ಯವಾಗುತ್ತದೆ. ಮತ್ತು, ಹಲವು ವಲಸೆಗಳ ಪರಿಣಾಮಗಳನ್ನು ಚಾರಿತ್ರಿಕವಾಗಿ, ಗುರುತಿಸುತ್ತಾ, ವಿಶ್ಲೇಷಿಸುತ್ತಾ ಸಾಗುತ್ತಾರೆ ಎಂಬ ಕಾರಣಕ್ಕೆ.
ಕಾರಂತರು ತಮ್ಮ ಹಲವು ಕಾದಂಬರಿಗಳಲ್ಲಿ ಪ್ರಕೃತಿಯ ವಿರಾಟ್ ಸ್ವರೂಪದ ವಿವಿಧ ಮಗ್ಗುಲುಗಳನ್ನು ಕಾಣುತ್ತಾರೆ, ವರ್ಣಿಸುತ್ತಾರೆ. ಎಲ್ಲವೂ ಒಂದೇ ಕಾದಂಬರಿಯಲ್ಲಿ ಏಕತ್ರಗೊಳಿಸಬೇಕೆಂಬ ಹಠವಿಲ್ಲ, ಅದು ಸಾಧ್ಯವೂ ಅಲ್ಲ ಎಂಬಷ್ಟು ಬಹುಮುಖಿಯಾದದ್ದು.
ಕುಡಿಯರ ಕೂಸು ಕಾದಂಬರಿಯಲ್ಲಿ ಪ್ರಕೃತಿ ಮತ್ತು ಪ್ರಕೃತಿಯ ಚೆಲುವು ಪರಿಪೂರ್ಣವಾದದ್ದು, ಅದನ್ನು ಆಸ್ವಾದಿಸುವ ಮನಸ್ಸು ಮುಗ್ಧವಾದದ್ದು. ಅಲ್ಲಿಯೂ ಕೃಷಿಯಿದೆ. ಆದರೆ ಅದು ಪರಿಸರದಿಂದ ಬೇರಾದದ್ದಲ್ಲ. ಆ ಕೃಷಿಯಲ್ಲಿ ಪರಿಸರದೊಂದಿಗೆ ಗುದ್ದಾಟವಿಲ್ಲ. ಬದುಕಲು ಪಟ್ಟಾ, ಖಾತಾ ಇತ್ಯಾದಿಗಳ ಅಗತ್ಯವಿಲ್ಲದ, ಪ್ರಕೃತಿಯೊಂದಿಗಿನ ತಾದಾತ್ಮ್ಯದ ಜೀವನ. ಆದರೆ ಅಲ್ಲಿ plantation ಕೃಷಿ ಪದ್ಧತಿ ಕಾಲಿಟ್ಟಿದೆ. ಅವರಿಗೇ ಅರಿವಿಲ್ಲದಂತೆ ಅವರು ಯಾರೋ ಹೊರಗಿನ ದಣಿಯೊಬ್ಬರ ಕೂಲಿಗಳಾಗಿಬಿಟ್ಟಿದ್ದಾರೆ. ಕೆಂಪಿಯ ರೂಪದಲ್ಲಿ, ರೂಪಕದಲ್ಲಿ ಪತನ ಆರಂಭವಾಗಿದೆ. ಆದರೆ ಕಾದಂಬರಿಯಲ್ಲಿ ವಿಶ್ವಾಸಕ್ಕೆ, ಭರವಸೆಗೆ ಅನುವು ಇದೆ. ಕಾದಂಬರಿಯ ಮೊದಮೊದಲ ವಾಕ್ಯಗಳಲ್ಲಿಯೇ ಮುಗ್ಧವಾಗಿ, ಪರಿಸರವನ್ನು ಭಾವನಾತ್ಮಕವಾಗಿ ಕಾಣುವ, ಅನುಭವಿಸುವ, ಕರಿಯ ಕೊನೆಯಲ್ಲಿ ಹಾಗೆಯೇ ಉಳಿದಿದ್ದಾನೆ, ಪಕ್ವವಾಗಿದ್ದಾನೆ; ಅಂದರೆ ವಿವೇಚನಾಬದ್ಧವಾಗಿ ಪರಿಸರವನ್ನು ಅನುಭವಿಸುವಷ್ಟು ಬೆಳೆದಿದ್ದಾನೆ. ಅಂದಿನ ದಣಿ ತೀರಿಕೊಂಡಿದ್ದಾರೆ. ಅವರ ಮಗ, ಇಂದಿನ ದಣಿ, ವಿವೇಕಶೀಲರು; ತಾವು ಇಲ್ಲಿನವರಲ್ಲ ಎಂಬುದನ್ನು ಅರಿತವರು; ಕುಡಿಯರ ಆಂತರಿಕ ವಿಷಯಗಳಲ್ಲಿ ತಲೆಹಾಕಬಾರದು ಎಂಬುದನ್ನು ಬುದ್ಧಿಪೂರ್ವಕವಾಗಿ ಕಂಡುಕೊಂಡವರು.
ಮುಂದುವರೆಯುತ್ತದೆ…..
Trackbacks & Pingbacks