ವಿಷಯದ ವಿವರಗಳಿಗೆ ದಾಟಿರಿ

ನವೆಂಬರ್ 4, 2017

ಶೃಂಗೇರಿ ಮಠದ ಮೇಲೆ ಮರಾಠರು ದಾಳಿ ಮಾಡಿದ್ದರೇ?

‍ನಿಲುಮೆ ಮೂಲಕ

ಮೂಲ ಲೇಖಕ : ಉದಯ್ ಕುಲಕರ್ಣಿ

ಅನುವಾದ : ರಾಕೇಶ್ ಶೆಟ್ಟಿ

ಹೈದರಾಲಿ,ಟಿಪ್ಪು ಸುಲ್ತಾನನಿಂದ ದೇವಾಲಯಗಳ ನಾಶದ ಬಗ್ಗೆ ಮಾತನಾಡಿದ ತಕ್ಷಣ ಶೃಂಗೇರಿ ಮಠದ ಮೇಲೆ ಮರಾಠರು ದಾಳಿ ಮಾಡಿದ್ದರು, ಟಿಪ್ಪು ಸ್ವಾಮೀಜಿಯವರ ಸಹಾಯಕ್ಕೆ ಬಂದಿದ್ದ ಎಂದು ಕಮ್ಯುನಿಸ್ಟರು ಮುಂದೆ ನಿಲ್ಲುತ್ತಾರೆ.ಹಾಗಿದ್ದರೆ ಈ ದುರ್ಘಟನೆಯ ಸತ್ಯವೇನು? ಈ ಘಟನೆಯ ಇನ್ನೊಂದು ಮಗ್ಗುಲನ್ನು ತಿಳಿಸುವ ಇತಿಹಾಸ ತಜ್ಞ ಉದಯ್ ಕುಲಕರ್ಣಿಯವರು ಸ್ವರಾಜ್ಯ ಮ್ಯಾಗಜಿನ್ನಿನಲ್ಲಿ ಬರೆದ ಲೇಖನ ನಿಲುಮಿಗರಿಗಾಗಿ – ನಿಲುಮೆ

ಟಿಪ್ಪುವಿನ ಮತಾಂಧತೆಯನ್ನು ತಮ್ಮ ರೆಡ್ ಕಾರ್ಪೆಟಿನ ಅಡಿಯಲ್ಲಿ ತೂರಿಸುವ ಅಭ್ಯಾಸವುಳ್ಳ ಕಮ್ಯುನಿಸ್ಟ್ ಇತಿಹಾಸಕಾರರು ಆತ ಸೆಕ್ಯುಲರ್ ಆಗಿದ್ದ ಎಂದು ತೋರಿಸಲು ಪದೇ ಪದೇ ಬಳಸುವದು ಮರಾಠರ ಸೈನ್ಯ ಶೃಂಗೇರಿ ಮಠದ ಮೇಲೆ ದಾಳಿ ಮಾಡಿ ಕೊಳ್ಳೆ ಹೊಡೆದ ನಂತರ ಟಿಪ್ಪು ಅದರ ಜೀರ್ಣೋದ್ಧಾರಕ್ಕೆ ಸಹಾಯ ಮಾಡಿದ ಎನ್ನುವುದಾಗಿದೆ. ಆದರೆ ಆ ದಿನ ನಿಜವಾಗಿಯೂ ನಡೆದಿದ್ದೇನು ಎನ್ನುವುದನ್ನು ‘Solstice at Panipat’ ಪುಸ್ತಕ ಲೇಖಕರು ಮತ್ತು ಇತಿಹಾಸಕಾರರಾದ ಉದಯ್ ಕುಲಕರ್ಣಿಯವರು ಲಭ್ಯವಿರುವ ಪುರಾವೆಗಳ ಸಹಿತ ವಿವರಿಸುತ್ತಾರೆ. 

“ಟಿಪ್ಪುವಿನ ನಡೆಗಳು ಸರಿಯಿಲ್ಲ. ಅಹಂಕಾರವೇ ತುಂಬಿರುವ ಆತ ಇತ್ತೀಚಿಗೆ ನೂರ್ ಮುಹಮ್ಮದನಿಗೆ ಬರೆದ ಪಾತ್ರದಲ್ಲಿ ತಾನು 50,000 ಹಿಂದುಗಳನ್ನು, ಮಹಿಳೆಯರು ಮಕ್ಕಳನ್ನು ಒಳಗೊಂಡಂತೆ ಇಸ್ಲಾಮ್ ಗೆ ಮತಾಂತರಿಸಿದ್ದೇನೆ. ಹಿಂದಿನ ಯಾವುದೇ ಪಡಿಶಾಹ್ ಅಥವಾ ವಜೀರ್ ಮಾಡಲಾಗದ್ದನ್ನು ನಾನು ಅಲ್ಲಾಹ್ ಕೃಪೆಯಿಂದ ಮಾಡಿದ್ದೇನೆ . ಹಳ್ಳಿಗೆ ಹಳ್ಳಿಯನ್ನೇ ಮತಾಂತರಿಸಿದ್ದೇನೆ ಎನ್ನುತ್ತಾನೆ” – ನಾನಾ ಫಡ್ನವಿಸ್ ಅವರು ಮಹಾಡ್ಜಿ ಸಿಂಧಿಯಾಗೇ ಬರೆದ ಪತ್ರ 5 September 1784.

ಥಾಮಸ್ ಡೇನಿಯಲ್ ಮತ್ತು  ಜೇಮ್ಸ್ ವೇಲ್ಸ್ ಅವರು ಬಿಡಿಸಿರುವ ಚಿತ್ರವೊಂದು ಪುಣೆಯ ಶನಿವಾರ್ ವಾಡದಲ್ಲಿ ಗಮನ ಸೆಳೆಯುತ್ತದೆ.ಬ್ರಿಟಿಷರ ಚಾರ್ಲ್ಸ್ ಎಂ ಮಾಲೆಟ್  ಮತ್ತು ಮರಾಠರ ನಡುವಿನ ಒಪ್ಪಂದದ ಚಿತ್ರವದು.  ಮಾಲೆಟ್ ವಿಶೇಷ ಆಸಕ್ತಿಯಿಂದ ಮಾಡಿಸಿದ ಈ ಚಿತ್ರವು, ಮರಾಠರು,ನಿಜಾಮರನ್ನು ಬ್ರಿಟಿಷ್ ಪಡೆಯೊಂದಿಗೆ ಸೇರಿಕೊಳ್ಳುವಂತೆ ಆತ ನಡೆಸಿದ ರಾಜತಾಂತ್ರಿಕತೆಯ ಪ್ರಾಮುಖ್ಯತೆಯನ್ನು ಹತ್ತು ವರ್ಷಗಳ ಹಿಂದೆ ಬ್ರಿಟಿಷರು ಹೊಂದಿದ್ದ ಮಿತ್ರ ಪಡೆಯನ್ನು ನೋಡುವ ಮೂಲಕ ಗಮನಿಸಬೇಕು. ಆ ಸಮಯದಲ್ಲಿ ಹೈದರಾಲಿಯ ಮರಾಠರ ಮಿತ್ರನಾಗಿದ್ದ. 1790 ರ ಸಮಯಕ್ಕಾಗಲೇ ಟಿಪ್ಪು ತನ್ನ ತಂದೆಯ ಹಳೆಯ ಮಿತ್ರಪಡೆಗಳಲ್ಲಿ ಅದೆಷ್ಟು ಆಕ್ರೋಶ ಮೂಡಿಸಿದ್ದನೆಂದರೆ ಅವರು ಬ್ರಿಟಿಷರೊಂದಿಗೆ ಕೈ ಜೋಡಿಸಿಬಿಟ್ಟಿದ್ದರು.

1790-1792ರ ನಡುವೆ ಟಿಪ್ಪುವಿನ ಮೇಲೆ ನಡೆದ ಯುದ್ಧದ ಸಮಯದಲ್ಲಿ, ಮರಾಠರ ಸೇನಾ ಮುಖ್ಯಸ್ಥ ರಘುನಾಥ ರಾವ್ ‘ದಾದಾ’ ಕುರುಂದ್ವಾಡ್ಕರ್ ಅವರ ಮೇಲ್ವಿಚಾರಣೆಯಲ್ಲಿದ್ದ ಸೇನೆಯ ತುಕಡಿಯೊಂದು ಶೃಂಗೇರಿಯ ಶಂಕರಾಚಾರ್ಯ ಮಠದ ಮೇಲೆ ದಾಳಿ ಮಾಡಿ, ಲೂಟಿಗೈದು ಹಾಳುಗೆಡವಿತ್ತು. ಇಂದಿಗೂ ಮಾಗದ ಗಾಯದಂತಿರುವ ಈ ದಾಳಿಯ ಹೊಣೆಯನ್ನು ಮರಾಠರು ಮತ್ತು ಪರಶುರಾಮ್ ಭಾವ್ ಪಟವರ್ಧನ್ ಅವರ ಮೇಲೆಯೇ ಹೊರಿಸಲಾಗಿದೆ.1791ರ ಸಮಯದಲ್ಲಿ ಮರಾಠರ ನಡುವೆ ಈ  ಅನಾಹುತದ ಸುತ್ತ  ನಡೆದಿರುವ ಪತ್ರ ವಿನಿಮಯಗಳ ಮೇಲೆ ಭಾಷಾ ಸಮಸ್ಯೆಯಿಂದಲೋ ಅಥವಾ ಉದ್ದೇಶಪೂರ್ವಕವಾಗಿಯೋ ಬೆಳಕು ಚೆಲ್ಲಲಾಗಿಲ್ಲ.

1774 ರಿಂದ ಒಂಭತ್ತು ವರ್ಷಗಳ ಅವಧಿಯಲ್ಲಿ ಬ್ರಿಟಿಷರು ಮತ್ತು ಹೈದರಾಲಿ-ಟಿಪ್ಪು ಜೊತೆಗೆ ನಡೆದ ಕದನದಲ್ಲಿ ಕೃಷ್ಣಾ – ತುಂಗಾಭದ್ರಾ ನದಿಯ ಆಸುಪಾಸಿನ ಜಾಗಗಳನ್ನು ಮಾರಾಠರು ಕಳೆದುಕೊಂಡಿದ್ದರು. 1784-85ರಲ್ಲಿ ಮರಾಠರೊಂದಿಗೆ ಮಾತುಕತೆ ನಡೆಸುತ್ತಲೇ ಅವರ ಸುಪರ್ಧಿಯಲ್ಲಿದ್ದ ಕ್ಷೇತ್ರಗಳ ಮೇಲೆ ದಾಳಿ ಮಾಡಿದ ಟಿಪ್ಪು, ನರಗುಂದದ ಮುಖ್ಯಸ್ಥನಾಗಿದ್ದ ವೆಂಕಟ್ ರಾವ್ ಭಾವ್ ಮತ್ತು ಆತನ ದಿವಾನ ಕಲೋಪಂತ್ ಪೇಟೆ ಇಬ್ಬರನ್ನು ಬಂಧಿಸಿ ಸರಪಳಿ ಬಿಗಿದು ನಡೆಸಿಕೊಂಡು ಹೋಗಿದ್ದ. ಟಿಪ್ಪು ಬಂಧನದಲ್ಲೇ ಪೇಟೆಯವರು ಅಸುನೀಗಿದ್ದರು. ಅದೇ ವರ್ಷ ನೂರ್ ಮುಹಮ್ಮದನಿಗೆ ಬರೆದ ಪತ್ರದಲ್ಲಿ, ಒಂದೇ ದಿನದಲ್ಲಿ ಅವತ್ತು ಸಾವಿರದಷ್ಟು ಹಿಂದುಗಳನ್ನು ಅವರ ಹೆಣ್ಣುಮಕ್ಕಳನ್ನು ಹೇಗೆ ಇಸ್ಲಾಮ್ಗೆ ಮತಾಂತರಿಸಿದೆ ಎಂದು ಖುಷಿಯಿಂದ ಬರೆದುಕೊಳ್ಳುತ್ತಾನೆ. ಧಾರವಾಡವನ್ನು ವಶಕ್ಕೆ ತೆಗೆದುಕೊಂಡು ಅಲ್ಲಿನ ಹಲವು ಹೆಣ್ಣುಮಕ್ಕಳನ್ನು ಹೊತ್ತೊಯ್ಯುತ್ತಾನೆ.ಟಿಪ್ಪುವಿನ ಈ ಆಕ್ರಮಣಕಾರಿ ಧೋರಣೆಯ ವಿರುದ್ಧ ಸಹಜವಾಗಿ ಪುಣೆಯ ಅರಮನೆಯಲ್ಲಿ ಕೋಪವೆದ್ದಿತ್ತು. ಕೋಪೋದ್ರಿಕ್ತ ನಾನಾ ಫಡ್ನವೀಸ್, ಪರಶುರಾಮ್ ಭಾವ್ ಜೊತೆಗೆ ಸೇರಿಕೊಳ್ಳುವಂತೆ ಹೋಳ್ಕರ್ ಅವರಿಗೆ ಆದೇಶಿಸುತ್ತಾರೆ.1786 ರಲ್ಲಿ ಟಿಪ್ಪು ವಿರುದ್ಧ ಸಮರ ಸಾರಿದ ಮರಾಠರು ಬಾದಾಮಿಯ ಕೋಟೆಯನ್ನು ವಶಕ್ಕೆ ಪಡೆದುಕೊಳ್ಳುತ್ತಾರೆ. ಆ ಸಮಯದಲ್ಲಿ ನಾನಾ ಮತ್ತು ಚಾರ್ಲ್ಸ್ ಮಾಲೆಟ್ ಕೂಡ ಬಾದಾಮಿಯಲ್ಲೇ ಇರುತ್ತಾರೆ. ನಾನಾ ಪುಣೆಗೆ ಹಿಂತಿರುಗಿದ ನಂತರ ತುಕ್ಕೋಜಿ ಹೋಳ್ಕರ್,ಪರಶುರಾಮ್ ಭಾವ್ ಮತ್ತು ಟಿಪ್ಪು ನಡುವೆ ಸಂಧಾನವೇರ್ಪಟ್ಟು 48 ಲಕ್ಷ ರೂಪಾಯಿಗಳನ್ನು ಕೊಡಲು ಮತ್ತು ಸೆರೆ ಸಿಕ್ಕವರನ್ನು ಬದಲಿಸಿಕೊಳ್ಳಲು ಅಂಕಿತ ಬೀಳುತ್ತದೆ.

1786ರಲ್ಲಿ ಇಂಗ್ಲಿಷರ ಸಹಾಯ ಕೇಳಿದ್ದ ನಾನಾ ಫಡ್ನವಿಸ್ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದ ಬ್ರಿಟಿಷರಿಗೆ 1790ರ ವೇಳೆಗೆ ಮರಾಠರ ಸಹಾಯ ಬೇಕಾಗಿತ್ತು. ಎಲ್ಲರೂ ಒಗ್ಗೂಡಿ ದಾಳಿಯಿಡುವ ತಂತ್ರಗಾರಿಕೆಯೊಂದು ಸಿದ್ಧವಾಗಿತ್ತು. ಲಾರ್ಡ್ ಕಾರ್ನ್ ವಾಲಿಸ್ ಅಖಾಡಕ್ಕಿಳಿದು ಚೆನ್ನೈ ತಲುಪಿಕೊಂಡಿದ್ದ. ಹರಿಪಂಥ ಫಡ್ಕೆ ನೇತೃತ್ವದಲ್ಲಿ ಮರಾಠ ಸೇನೆ ಪುಣೆಯಿಂದ ಹೊರಟಿತ್ತು.ಹೈದರ್-ಟಿಪ್ಪು ಆಕ್ರಮಣಕ್ಕೆ ಸಿಲುಕಿ ತಮ್ಮ ಬಂಧು ಬಾಂಧವರನ್ನೆಲ್ಲ  ಕಳೆದುಕೊಂಡಿದ್ದ ಪಟವರ್ಧನ್ ಸಹೋದರರು ಮತ್ತು ಪರಶುರಾಮ್ ಭಾವ್,ರಘುನಾಥ ರಾವ್ ‘ದಾದಾ’ ಅವರು ತುಕಡಿಗಳು ಜೊತೆಯಾದವು.

ಕಾರ್ನ್ ವಾಲಿಸ್ ಜೊತೆಗೆ ಶ್ರೀರಂಗಪಟ್ಟಣದ ಮುತ್ತಿಗೆಯ ಮುಖ್ಯ ಹೋರಾಟಕ್ಕೆ ಜೊತೆಯಾಗುತ್ತೇನೆ ಎಂದಿದ್ದ ಪರಶುರಾಮ್ ಭಾವ್,ಕಡೆಗೆ ಅದಕ್ಕಿಂತ ಹಿಂದಿನ ಯುದ್ಧದಲ್ಲಿ ಟಿಪ್ಪುವಿಗೆ ಕಳೆದುಕೊಂಡ ಪ್ರದೇಶಗಳನ್ನು ಪುನಃ ವಶಕ್ಕೆ ಪಡೆಯುವುದೇ ಮುಖ್ಯವೆಂದು ನಿರ್ಧರಿಸಿ ಏಪ್ರಿಲ್ 6,1791ರಲ್ಲಿ ಧಾರವಾಡದ ಕೋಟೆಯನ್ನು ಮರುವಶಪಡಿಸಿಕೊಂಡು, ತುಂಗಭದ್ರೆಯನ್ನು ದಾಟಿ ಹರಿಹರದಲ್ಲಿ ರಘುನಾಥ್ ರಾವ್ ಜೊತೆ ಕೊಡಿಕೊಂಡು ನಂತರ ಮಾಯಕೊಂಡ ಮತ್ತು ದಕ್ಷಿಣಕ್ಕಿದ್ದ ಚೆಂಗಿರಿಯನ್ನು ರಘುನಾಥ್ ರಾವ್ ನೇತೃತ್ವದಲ್ಲಿ ವಶಕ್ಕೆ ಪಡೆಯಲಾಯಿತು.

ಇದೇ ಸಮಯದ ಆಸುಪಾಸಿನಲ್ಲಿ ಮಿರಾಜಿನ ಬಾಳಾಸಾಹೇಬರಿಗೆ, ನೀಲಕಂಠ ಅಪ್ಪ (ರಘುನಾಥ್ ರಾವ್ ಅವರ ತಂದೆ) ಬರೆದ ಪತ್ರದಲ್ಲಿ, ಶೃಂಗೇರಿ ಮಠದ ಮೇಲೆ ನಡೆದ ದಾಳಿಯ ಬಗ್ಗೆ ಮೊದಲ ಮಾಹಿತಿಗಳು ಸಿಗುತ್ತವೆ.

“ದಾದಾ ಸಾಹೇಬನ ಸೈನ್ಯದಲ್ಲಿದ್ದ ಲಮಾನ್ ಮತ್ತು ಪಿಂಡಾರಿಗಳು ಶೃಂಗೇರಿ ಮಠದ ಮೇಲೆ ಆಕ್ರಮಣ ಮಾಡಿ ಲಕ್ಷಾಂತರ ರೂಪಾಯಿಗಳನ್ನು ಲೂಟಿ ಮಾಡಿ ಒಂದು ಆನೆಯನ್ನು ಕೊಂಡೊಯ್ದಿದ್ದಾರೆ. ಎಲ್ಲಾ ಸಂಪತ್ತನ್ನು ವಶಪಡಿಸಿಕೊಳ್ಳುವಂತೆ ನಾನು ದಾದಾ ಸಾಹೇಬನಿಗೆ ಪಾತ್ರ ಬರೆದಿದ್ದೇನೆ.”  ಎನ್ನುತ್ತದೆ ಪತ್ರ.

ಇದೇ ವಿಷಯವಾಗಿ ಏಪ್ರಿಲ್ ತಿಂಗಳ ಮಧ್ಯ ಭಾಗದಲ್ಲಿ ಬರೆಯಲಾಗಿರುವ ಮತ್ತೊಂದು ಪತ್ರದಲ್ಲಿ : “ಲೂಟಿಕೋರರನ್ನು ಬಂಧಿಸಲಾಗಿದೆ. ಜಂಬೂರ ಮತ್ತು ಆನೆಯನ್ನು ವಶಪಡಿಸಿಕೊಳ್ಳಲಾಗಿದೆ.ಈ ಅನಾಹುತಕ್ಕೆ ಮೂಲ ಕಾರಣರಾದ ಹತ್ತು ಹನ್ನೆರಡು ಅಪರಾಧಿಗಳನ್ನು ಸೆರೆಹಿಡಿಯಲಾಗಿದೆ.ಅದೇ ಸಮಯಕ್ಕೆ ದಾದಾ ಸಾಹೇಬರು ಪತ್ರ ಬರೆದು, ಆ ಅಪರಾಧಿಗಳು ತನ್ನ ಸೈನ್ಯಕ್ಕೆ ಸೇರಿದವರಾಗಿರುವುದರಿಂದ ಅವರಿಗೆ ತಾನೇ ಶಿಕ್ಷೆ ಕೊಡುವೆನೆಂದು ಹೇಳಿರುವುದರಿಂದ ಅವರನ್ನು ಮತ್ತು ಆನೆಯನ್ನು ಅವರಿಗೆ ಕಳುಹಿಸಿಕೊಡಲಾಗಿದೆ”.

May 14 ರಂದು ರಘುನಾಥ್ ರಾವ್ ಮಗ ತ್ರಿಯಂಬಕ್ ರಾವ್, ಮಿರಾಜಿನ ತನ್ನ ಸಂಬಂಧಿಗೆ ಬರೆದ ಪತ್ರದಲ್ಲಿ ” ಸೈನ್ಯವು ತುಂಗಭದ್ರೆಯನ್ನು ದಾಟುವ ಮೊದಲೇ, ಲಮಾನ್ ಮತ್ತು ಪಿಂಡಾರಿಗಳು ಶಿವಮೊಗ್ಗವನ್ನು ತಲುಪಿಕೊಂಡಿದ್ದರು. ಶೃಂಗೇರಿ ಮಠಕ್ಕೆ ನುಗ್ಗಿದವರೇ, ಸ್ವಾಮಿಯವರ ದಂಡ -ಕಮಂಡಲಗಳು ಸೇರಿದಂತೆ ಏನೊಂದನ್ನೂ ಬಿಡದೇ, ಹೆಣ್ಣುಮಕ್ಕಳ ಮಾನಭಂಗ ಮಾಡಿ ಹಿಂಸಿಸಿದರು. ಬಹಳಷ್ಟು ಹೆಣ್ಣುಮಕ್ಕಳು ಆತ್ಮಹತ್ಯೆ ಮಾಡಿಕೊಂಡರು. ಸ್ವಾಮಿಯವರ ನಿತ್ಯ ಪೂಜೆಯ ಮೂರ್ತಿಗಳು,ಲಿಂಗಗಳನ್ನು ಕೊಳ್ಳೆಹೊಡೆದಿದ್ದಾರೆ. ಆನೆಯನ್ನು ಲಮಾನಿಗಳು ಕದ್ದೊಯ್ದಿದ್ದಾರೆ. ಪ್ರಾಯಶ್ಚಿತ್ತಕ್ಕಾಗಿ ಕುಳಿತ ಸ್ವಾಮೀಜಿ ಐದು ದಿನ ಉಪವಾಸ ಮಾಡಿ ತನ್ನ ಪ್ರಾಣ ತ್ಯಜಿಸಿದರು…” (ಸ್ವಾಮೀಜಿ ಪ್ರಾಣ ತ್ಯಾಗ ಮಾಡಿದರೆಂಬ ಸಾಲುಗಳು ನಿಜವಲ್ಲ)

ಮುಂದುವರಿದು …  ” ಅಪ್ಪನಿಗೆ (ರಘುನಾಥ್ ರಾವ್ ) ಈ ವಿಷಯ ತಿಳಿದ ತಕ್ಷಣ ಲಮಾನಿಗಳನ್ನು ಬಂಧಿಸಲು ಸೈನಿಕರನ್ನು ಕಳುಹಿಸಿದರು. ಕದ್ದೊಯ್ದಿದ್ದ ಆನೆ ಸಿಕ್ಕಿದೆ. ಉಳಿದ ವಸ್ತುಗಳು ಪತ್ತೆಯಾಗಿಲ್ಲ”.

ಈ ವಿಷಯ ಹರಡಲು ಶುರುಮಾಡಿ, ಪುಣೆಯಲ್ಲಿ ನಾನಾ ಫಡ್ನವಿಸ್ ಕಿವಿಗೂ ತಲುಪಿತು. ನಾನಾ ಫಡ್ನವಿಸ್ ಸಹಾಯಕನಿಂದ 1791ರ ಡಿಸೇಂಬರ್ ತಿಂಗಳಲ್ಲಿ ರಘುನಾಥ್ ರಾವ್ ಅವರಿಗೆ ಬರೆದ ಪತ್ರದಲ್ಲಿ “… ಲಮಾನಿಗಳು ಮತ್ತು ಲೂಟಿಕೋರರು ಶೃಂಗೇರಿ ಮಠವನ್ನು ಲೂಟಿ ಮಾಡಿದ್ದಾರೆ. ಈ ಸುದ್ದಿ ಇಲ್ಲಿಗೂ ತಲುಪಿದೆ. ಈ ಕುರಿತ ಎಲ್ಲಾ ವಿವರಗಳನ್ನು ನೀಡತಕ್ಕದ್ದು. ಲೂಟಿಕೋರರು ನಾಲ್ಕೂ ದಿಕ್ಕುಗಳ ಮೂಲಕ ಆಕ್ರಮಣ ಮಾಡಿದರೆಂದು ಮತ್ತು ನೀವು ಅವರ ವಿರುದ್ಧ ಕ್ರಮ ಕೈಗೊಂಡಿದ್ದೀರಿ ಎಂದು ಬರೆದಿದ್ದೀರಿ. ಉಳಿದೆಲ್ಲ ಅಪರಾಧಿಗಳ ಮೇಲೂ ಇದೆ ರೀತಿಯ ಕ್ರಮ ಕೈಗೊಳ್ಳಬೇಕು’.

ನಾನಾ ಫಡ್ನವಿಸ್ ಉತ್ತರಿಸಿದ ಪಾತ್ರದಲ್ಲಿ “ಸ್ವಾಮೀಜಿಯವರ ಮಠದ ಮೇಲೆ ಆಕ್ರಮಣವಾಗಿದೆ ಮತ್ತು ಸ್ವಾಮಿಗಳು ಉಪವಾಸಕ್ಕೆ ಕುಳಿತಿದ್ದಾರೆ. ಈ ಸುದ್ದಿ ರಾಜ್ಯಕ್ಕೆ ಒಳ್ಳೆಯದಲ್ಲ. ಸ್ವಾಮಿಯವರ ಸಿಟ್ಟು ಒಳ್ಳೆಯದಲ್ಲ. ಈ ದುರ್ಘಟನೆಗೆ ಕಾರಣರಾದವರ ಮೇಲೆ ಕಠಿಣ ಕ್ರಮದ ಜೊತೆಗೆ ಸ್ವಾಮೀಜಿಯವರಿಗಾದ ನಷ್ಟವನ್ನು ತುಂಬಿಕೊಟ್ಟು ಅವರನ್ನು ಸಮಾಧಾನಿಸಿ ಆಶೀರ್ವಾದವನ್ನು ಪಡೆಯಬೇಕು”

ಮರಾಠರ ಸೇನೆಯಲ್ಲಿದ್ದ ಪಿಂಡಾರಿಗಳು, ಟಿಪ್ಪುವಿನ ಸೇನೆಯಲ್ಲಿದ್ದ ಬ್ಯಾಡರು ಸೇನೆಯ ಅಧಿಕೃತ ಭಾಗವಾಗಿರುತ್ತಿರಲಿಲ್ಲ ಮತ್ತು ಅವರಿಗೆ ಸಂಬಳವನ್ನು ನೀಡುತ್ತಲಿರಲಿಲ್ಲ.ಯುದ್ಧಗಳು ಮುಗಿದ ನಂತರ ಇವರು ಗೆದ್ದ ಜಾಗಗಳನ್ನು ಕೊಳ್ಳೆ ಹೊಡೆದು ತಮ್ಮ ತಮ್ಮಲ್ಲಿ ಹಂಚಿಕೊಳ್ಳುತ್ತಿದ್ದರು.

1792ರ ಏಪ್ರಿಲ್ 24ರಂದು ಲಾರ್ಡ್ ಕಾರ್ನ್ ವಾಲಿಸ್ ಪರವಾಗಿ, ಗವರ್ನರ್ ಜನರಲ್ ಬರೆದ ಪತ್ರದಲ್ಲಿ  – “… ಟಿಪ್ಪುವಿನ ಸೇನೆಯಲ್ಲಿದ್ದ ಬ್ಯಾಡರು,ಮರಾಠರ ಸೇನೆಯಲ್ಲಿದ್ದ ಪಿಂಡಾರಿಗಳು ಸೇನೆಯ ಅಧಿಕೃತ ಭಾಗವಾಗಿರಲಿಲ್ಲ.ಯಾವುದೇ ನೀತಿ ನಿಯಮಗಳಿಗೆ ಬದ್ಧರಾಗಿರದ ಇವರಿಂದಾಗುವ ಲೂಟಿ,ಹಾನಿಗಳೆಲ್ಲ ತಾತ್ಕಾಲಿಕ ತೊಂದರೆಗಳೆಂದು ಪರಿಗಣಿಸಲಾಗುತ್ತಿತ್ತು” ಎನ್ನಲಾಗಿದೆ.

1791ರಲ್ಲಿ ಮೂರೂ ಮಿತ್ರ ಪಡೆಗಳು ಶ್ರೀರಂಗಪಟ್ಟಣದ ಮುತ್ತಿಗೆಗೆ ಹೊರಟಿದ್ದವು. ಮರಾಠರ ಪ್ರತಿನಿಧಿಯ ವರದಿಯಂತೆ, ಟಿಪ್ಪು ಕಂಚಿಯಲ್ಲಿದ್ದ, ಈ ಹಿಂದಿನಂತೆ ಜನರಿಗೆ ಕಿರುಕುಳ ಕೊಡದೇ ತನ್ನ ತಂದೆ ಹೈದರಾಲಿಯ ಕಾಲಾವಧಿಯಲ್ಲಿ ಶುರುವಾಗಿದ್ದ  ಗೋಪುರದ ಕಾರ್ಯವನ್ನು ಪೂರ್ಣಗೊಳಿಸಲು ಈಗ ಟಿಪ್ಪು ಆದೇಶ ನೀಡಿದ್ದಾನೆ. ರಥೋತ್ಸವಕ್ಕೂ ಅನುಮತಿ ನೀಡಿದ್ದು ವಾರ್ಷಿಕ ಉತ್ಸವದಲ್ಲೂ ಕಂಚಿಯಲ್ಲಿ ಪಾಲ್ಗೊಂಡಿದ್ದ. ಕಾರ್ನ್  ವಾಲೀಸನು ಮದ್ರಾಸಿನಲ್ಲಿದ್ದಾನೆ, ಎರಡೂ ಕಡೆಯಿಂದಲೂ ಯುದ್ಧ ತಯಾರಿ ನಡೆಯುತ್ತಿದೆ.

ಶ್ರೀರಂಗಪಟ್ಟಣದ ಹಿಂದೂ ದೇವತೆಗಳಿಗೆ ಪೂಜೆ ಪುನಸ್ಕಾರಗಳನ್ನು ಮಾಡುವಂತೆ ಬ್ರಾಹ್ಮಣರಿಗೆ ಟಿಪ್ಪು ಆದೇಶಿಸಿದ್ದಾನೆ. ಹರಿಪಂಥ ಫಡ್ಕೆ ಬರೆದ ಪತ್ರದಲ್ಲಿ – ರಂಗಸ್ವಾಮಿ ಮತ್ತು ಶಿವ ದೇವಾಲಯಗಳಲ್ಲಿ ಬ್ರಾಹ್ಮಣರು ಟಿಪ್ಪುವಿನ ಆದೇಶದಂತೆ ಪೂಜೆಗಳನ್ನು ಮಾಡುತ್ತಿದ್ದಾರೆ. ಒಬ್ಬ ನೀರಿನಲ್ಲಿ ಕುಳಿತರೆ, ಉಳಿದ  40 ಜನರು ಬೇರೇನೋ ಆಚರಣೆ ಮಾಡುತ್ತಿದ್ದಾರೆ. ಶೃಂಗೇರಿ ಸ್ವಾಮೀಜಿಗಳನ್ನು ಇಲ್ಲಿಗೆ ಕರೆಸಿಕೊಂಡಿರುವ ಅವನು, ಸ್ವಾಮೀಜಿಗಳಿಗೆ ಚಿನ್ನದ ಮೂರ್ತಿಗಳನ್ನು, ನಲ್ವತ್ತು ಸಾವಿರ ರೂಪಾಯಿಗಳನ್ನು ಬ್ರಾಹ್ಮಣರ ಭೋಜನಕ್ಕಾಗಿ ಕೊಟ್ಟಿದ್ದಾನೆ’

ಟಿಪ್ಪುವಿನ ವಕೀಲ ಅಪ್ಪಾಜಿ ರಾಮ್ ಸಂಧಾನಕ್ಕಾಗಿ ಹಾತೊರೆಯುತ್ತಿದ್ದಾನೆ ಎನ್ನುತ್ತದೆ ಇನ್ನೊಂದು ಪತ್ರ.

1792ರ ಫೆಬ್ರವರಿ ತಿಂಗಳಲ್ಲಿ ಮಿತ್ರಪಡೆಗಳು ಶ್ರೀರಂಗಪಟ್ಟಣವನ್ನು ಸುತ್ತುವರೆದವು. ಕಾರ್ನ್ ವಾಲಿಸ್ ಟಿಪ್ಪುವನ್ನು ಸರ್ವನಾಶ ಮಾಡಲು ಉತ್ಸುಕನಾಗಿದ್ದರೇ, ನಿಜಾಮ ಮತ್ತು ಮರಾಠರ ಸೇನಾ ಮುಖ್ಯಸ್ಥ ಹರಿಪಂಥ ಆತನ್ನು ಸೋಲಿಸಿ ತಮ್ಮ ಹಿಡಿತದಲ್ಲಿಟ್ಟುಕೊಂಡರೆ ಸಾಕೆಂದು ಬಯಸಿದ್ದರು. ಟಿಪ್ಪು ವೀರಾವೇಶದಿಂದ ಹೋರಾಡಿದ್ದ. ಬ್ರಿಟಿಷ್ ಮತ್ತು ಟಿಪ್ಪು ಇಬ್ಬರನ್ನು ಅಂತದ್ದೊಂದು ಯುದ್ಧಕ್ಕೆ ಹೊಗಳುತ್ತಾನೆ ಹರಿಪಂಥ್. ಯುದ್ಧ ಮಾಡಿ ಮಾಡಿ ದಣಿದಿದ್ದ ಬ್ರಿಟಿಷರು ಒಪ್ಪಂದಕ್ಕೆ ಬರಲು ಮುಂದಾಗುತ್ತಾರೆ ಎಂದು  ಬರೆಯುತ್ತಾರೆ. ಬಿದನೂರು ಮತ್ತು ತುಂಗಭದ್ರೆಯ ಉತ್ತರಕ್ಕಿದ್ದ ಪ್ರದೇಶಗಳನ್ನೆಲ್ಲ ತನ್ನ ಕೈವಶ ಮಾಡಿಕೊಂಡ ಪರಶುರಾಮ್ ಭಾವ್ ಶ್ರೀರಂಗ ಪಟ್ಟಣ ತಲುಪಿದ ದಿನ ಟಿಪ್ಪುವಿನ ಮಕ್ಕಳನ್ನು ಕಾರ್ನ್ ವಾಲೀಸನಿಗೆ ಒತ್ತೆ ನೀಡಲಾಗಿತ್ತು.

ಒಟ್ಟಾರೆಯಾಗಿ, ಶೃಂಗೇರಿಯಲ್ಲಿ ನಡೆದ ದುರ್ಘಟನೆ ಮರಾಠರ ಯುದ್ಧದ ಭಾಗವೋ ಅಥವಾ ಯೋಜನೆಯೂ ಆಗಿರಲಿಲ್ಲ. ಅದು ಯುದ್ಧದಲ್ಲಿ ನೇರ ಭಾಗಿಯಾಗದ ಲೂಟಿ ಕೋರರ ಗುಂಪು ಮತ್ತು ಲಮಾನರಿಂದ ನಡೆದ ಕೆಲಸವಾಗಿತ್ತು. ಬಹಳಷ್ಟು ಪತ್ರ ದಾಖಲೆಗಳ ಮಾಹಿತಿವುಳ್ಳ ಇತಿಹಾಸ ತಜ್ಞ ವಿವಿ ಖರೆಯವರು ಹೇಳುವಂತೆ, ಶೃಂಗೇರಿ ಮಠ ಸುತ್ತ ಮುತ್ತಲಿನ ಶ್ರೀಮಂತರ ಪಾಲಿಗೆ ತಮ್ಮ ಸಂಪತ್ತನ್ನು ರಕ್ಷಿಸಲು ಸುರಕ್ಷಿತ ತಾಣವಾಗಿತ್ತು. ಬ್ರಾಹ್ಮಣ ಸೇನಾಪತಿಗಳ ನೇತೃತ್ವದ ಮರಾಠ ಸೇನೆಯಿಂದ ಮಠಕ್ಕೆ ಯಾವುದೇ ತೊಂದರೆಯಾಗದು ಎನ್ನುವುದು ಅವರ ನಂಬಿಕೆಯಾಗಿತ್ತು.

ಮರಾಠರ ಅಧಿಕೃತ ಸೇನೆಯಿಂದ ಮಠದ ಮೇಲೆ ದಾಳಿಯಾಗದಿದ್ದರೂ, ಯಾವುದೇ ನೀತಿ ನಿಯಮಗಳಿಗೆ ಬದ್ಧಲ್ಲರ ಪಿಂಡಾರಿಗಳಿಂದ ಇಂತಹ ಹೀನ ಕೃತ್ತ್ಯವೊಂದು ನಡೆದುಹೋಗಿತ್ತು. ಇದರಿಂದ ಕೆರಳಿದ್ದ ಮರಾಠ ನಾಯಕತ್ವ ಅಪರಾಧಿಗಳಿಗೆ ಶಿಕ್ಷೆಯನ್ನು ಮತ್ತು ಸ್ವಾಮೀಜಿಗಳಿಗೆ ಆದ ನಷ್ಟವನ್ನು ತುಂಬಿಕೊಡುವ, ಅವರನ್ನು ಸಮಾಧಾನಿಸುವ ಕೆಲಸವನ್ನು ವರ್ಷಗಳ ನಂತರವೂ ಮಾಡುತಿತ್ತು. 1791ರ ವೇಳೆಗೆ ಎಲ್ಲಾ ದಿಕ್ಕುಗಳಿಂದ ಸುತ್ತುವರೆಯಲ್ಪಟ್ಟಿದ್ದ ಟಿಪ್ಪು,ದೇವಸ್ಥಾನಗಳು ಮತ್ತು ಬ್ರಾಹ್ಮಣರ ಬಗ್ಗೆ ತನ್ನ ನೀತಿಗಳನ್ನು ಬದಲಾಯಿಸಿಕೊಂಡಿದ್ದ. ಟಿಪ್ಪುವಿನ ಹಿಂದಿನ ವರ್ತನಗೆಳ ಕಾರಣದಿಂದ ಆತನ ಅಧಿಕಾರಿಗಳ ಸಂಧಾನ ಪ್ರಯತ್ನಗಳು ಮರಾಠರ ಬಳಿ ನಡೆಯಲಿಲ್ಲ. ಮರಾಠರ ಪತ್ರಗಳಲ್ಲೂ ಆತನ ದುರ್ವರ್ತನೆಗಳನ್ನು ಬರೆಯಲಾಗಿದೆ.

ವರ್ತಮಾನದಲ್ಲಿ  ಘಟನೆಗಳನ್ನೇ ಬೇರೆ ಬೇರೆ ಅರ್ಥೈಸಿಕೊಳ್ಳುವ ಸಂಧರ್ಭವಿರುವಾಗ, ಇತಿಹಾಸದ ಪುಟಗಳ ವ್ಯಾಖ್ಯಾನ ಮಾಡುವುದು ತುಸು ಕಷ್ಟವೇ.  ಶೃಂಗೇರಿ ಮಠ ಮೇಲೆ ನಡೆದ ದಾಳಿಯು ಮರಾಠರ ಯುದ್ಧದ ಭಾಗವಾಗಿ ಅಥವಾ ನೀತಿ-ನಿರೂಪಣೆಯಲ್ಲಾಗಲಿ ಇರಲಿಲ್ಲ.ಅದೇ ರೀತಿ 1791 ರಲ್ಲಿ ಕಂಚಿಯ ದೇವಸ್ಥಾನದ ಮೇಲೆ ಟಿಪ್ಪುವಿಗೆ ಹುಟ್ಟಿಕೊಂಡ ಪ್ರೀತಿಯು ಆ ಕಾಲಘಟ್ಟದ ರಾಜಕೀಯ ಪರಿಸ್ಥಿತಿಯಿಂದ ಉಂಟಾಗಿದ್ದು. ಈಗಿನ ಓದುಗರು ಎರಡೂ ಘಟನೆಗಳನ್ನು, ಅವುಗಳು ಘಟಿಸಿದ context  ಮೂಲಕ ನೋಡಬೇಕು.

ಹೆಚ್ಚಿನ ಓದಿಗಾಗಿ

  1. Aitihasik Lekh sangraha Volume 9 by VV Khare
  2. Itihas sangraha by DB Parasnis
  3. Poona Residency Correspondence 1790-1793.
  4. Historical Records of Gwalior – GS Sardesai

ಅನುವಾದಕನ ಮಾತು :

ಶ್ರೀರಂಗ ಪಟ್ಟಣದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಗೋಪುರವನ್ನು ಕೆಡವಿ ಅಲ್ಲಿ ಗುಂಬಜ್ ನಿರ್ಮಿಸಿ ಅದನ್ನು ಮಸೀದಿ ಮಾಡಿದವನು ಟಿಪ್ಪು.ಇಂದಿಗೂ ಅದು ಸ್ಪಷ್ಟವಾಗಿ ಕಾಣುತ್ತದೆ ಸಾವಿರಾರು ಹಿಂದುಗಳನ್ನು,ಕ್ರೈಸ್ತರನ್ನು ಮತಾಂತರಿಸಿದ್ದ. ಮಂಗಳೂರಿನಲ್ಲಿ ಕ್ರೈಸ್ತರ ಮೇಲೆ ನಡೆಸಿದ್ದ ರಕ್ತದೋಕುಳಿ ಭೀಕರತೆಗೆ ನೆತ್ತರ ಕೆರೆ ಎಂಬ ಹೆಸರೇ ಟಿಪ್ಪು ಕ್ರೌರ್ಯಕ್ಕೆ ಸಾಕ್ಷಿಯಾಗಿ ನಿಂತಿದೆ.ಟಿಪ್ಪುವಿನ ಮತಾಂಧತೆ ಇತ್ತೀಚಿನ ದಿನಗಳಲ್ಲಿ ನಮಗೆ ಗೊತ್ತಿರುವಂತದ್ದೇ.ಟಿಪ್ಪುವಿನ ಅಪ್ಪ ಹೈದರಾಲಿ, ನಾಡಿನ ಅಧಿದೇವತೆ ತಾಯಿ ಚಾಮುಂಡೇಶ್ವರಿಯ ದೇವಸ್ಥಾನದ ಮೇಲೆಯೇ ದಾಳಿ ಮಾಡಿದ್ದನ್ನೂ ಕಮ್ಯುನಿಸ್ಟ್ ಇತಿಹಾಸಕಾರರು ನಮ್ಮಿಂದ ಮರೆಮಾಚಿದ್ದಾರೆ.

ಹೈದರಾಲಿಯಿಂದ ಚಾಮುಂಡೇಶ್ವರಿ ದೇವಸ್ಥಾನದ ಮೇಲೆ ಆಕ್ರಮಣ ನಡೆಯಲಿರುವ ಬಗ್ಗೆ ಗುಪ್ತ ಮಾಹಿತಿ ಪಡೆದ ರಾಜವಂಶಸ್ಥರು ಮತ್ತು ಅರ್ಚಕರು, ಗರ್ಭಗುಡಿಯನ್ನು ಕಲ್ಲಿನ ಇಟ್ಟಿಗೆಗಳಿಂದ ಮುಚ್ಚಿ, ಅದರ ಎದುರಿಗೆ ಮತ್ತೊಂದು ದೇವಿಯ ಮೂರ್ತಿಯನ್ನು ಇರಿಸಿ ಪೂಜೆ ಮಾಡಲಾರಂಭಿಸಿದ್ದರು.ಅಂದುಕೊಂಡಂತೆ ದೇವಸ್ಥಾನದ ಮೇಲೆ ದಾಳಿ ಮಾಡಿದ ಹೈದರನ ಮತಾಂಧ ಸೇನೆ ಗರ್ಭಗುಡಿಯ ಎದುರಿಗಿದ್ದ ತಾಯಿಯ ವಿಗ್ರಹವನ್ನು ಭಾಗಶಃ ಹಾಳು ಗೆಡವಿ ಕೇಕೆ ಹಾಕಿ ಹೊರಟು ಹೋಗಿತ್ತು.ಅರ್ಚಕರು ಮತ್ತು ರಾಜವಶಸ್ಥರ ಉಪಾಯದಿಂದಾಗಿ ತಾಯಿಯ ಮೂಲ ವಿಗ್ರಹಕ್ಕೇನೂ ಆಗಲಿಲ್ಲ. ಇಂದಿಗೂ ಈ ವಿಗ್ರಹವನ್ನು ಚಾಮುಂಡೇಶ್ವರಿ ದೇವಸ್ಥಾನದಲ್ಲಿ ನೋಡಬಹುದಾಗಿದೆ. ದಂಡನ ಚಾಮುಂಡವ್ವ ಎಂದು ಕರೆಯಲ್ಪಡುವ ಈ ದೇವಿಯ ವಿಗ್ರಹವು ದೇವಸ್ಥಾನ ಲಡ್ಡು ವಿತರಣಾ ಕೊಠಡಿಯಲ್ಲಿದೆ.

ಶೃಂಗೇರಿ ಮಠದ ಮೇಲೆ ಮರಾಠರ ಪಿಂಡಾರಿ,ಲಮಾನಿಗಳಿಂದಾದ ದಾಳಿಯ ಜೊತೆಗೆ ಹೈದರಾಲಿ ಚಾಮುಂಡೇಶ್ವರಿ ದೇವಸ್ಥಾನದ ಮೇಲೆ ಮತ್ತು ಟಿಪ್ಪು ಕೋಟೆ ಆಂಜನೇಯ ದೇವಸ್ಥಾನವನ್ನೇ ಮಸೀದಿ ಮಾಡಿದ್ದಕ್ಕೆ ತುಲನೆ ಮಾಡಿನೋಡಿ. ಮರಾಠರಿಗೆ ತಮ್ಮ ಸೇನೆಯ ಅಧೀನದಲ್ಲಿದ್ದವರಿಂದ ಆದ ಪ್ರಮಾದದ ಅರಿವಾಗಿತ್ತು ಮತ್ತು ಅದಕ್ಕೆ ತಕ್ಕಪ್ರಾಯಶ್ಚಿತ್ತದ ಮನಸ್ಸು ಅವರಲ್ಲಿತ್ತು. ಆದರೆ ಹೈದರಾಲಿ-ಟಿಪ್ಪುವಿನದ್ದು ಮತಾಂಧತೆಯ ಮನಸ್ಥಿತಿ, ವಿಗ್ರಹ,ದೇವಸ್ಥಾನ ಭಂಜನ ಕಾರ್ಯ ಅವರಿಗೆ ಇಸ್ಲಾಮನ್ನು ಹರಡುವ ಪವಿತ್ರ ಕಾರ್ಯದಂತೆ ಕಂಡಿತ್ತೇ ಹೊರತು ತಪ್ಪೆನಿಸಲಿಲ್ಲ. ಹೀಗಿದ್ದಾಗ್ಯೂ ಹೈದರಾಲಿ ಆಕ್ರಮಣ ಮಾಡಿದ್ದನ್ನು ಹೇಳಿದರೆ, ಮರಾಠರು ಮಾಡಿಲ್ಲವೇ ಎಂದು ಇತಿಹಾಸದ ಅರಿಯದೇ ಕೇಳಲು ಬರುತ್ತಾರಲ್ಲ ಈ ಜನರ ಮೆದುಳು ತುಕ್ಕು ಹಿಡಿದಿದೆಯೇ?

ಕೃಪೆ: ಸ್ವರಾಜ್ಯಮ್ಯಾಗ್. ಕಾಮ್   What Exactly Happened At Sringeri Math In April 1791?

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments