ವಿಷಯದ ವಿವರಗಳಿಗೆ ದಾಟಿರಿ

ನವೆಂಬರ್ 7, 2017

ಅರಮನೆ ಕಡತಗಳಲ್ಲೇ ಇದೆ ಟಿಪ್ಪು ದೌರ್ಜನ್ಯಕ್ಕೆ ಸಾಕ್ಷಿ

‍ನಿಲುಮೆ ಮೂಲಕ

– ಸಂತೋಷ್ ತಮ್ಮಯ್ಯ

ಸರಕಾರ ಹೊರಡಿಸುವ ಕೆಲವು ಗಜೆಟಿಯರುಗಳ ಪುಟ ತೆರೆದರೆ ಇವೆಷ್ಟು ಕೆಜಿ ತೂಗಬಹುದು ಎಂಬ ಭಾವನೆ ಬೇಡಬೇಡವೆಂದರೂ ಬಂದುಬಿಡುತ್ತದೆ. ಏಕೆಂದರೆ ಪ್ರಯೋಜನಕ್ಕಿಲ್ಲದ ಅವೇ ಹಳಹಳಿಕೆಗಳು, ಅಧಿಕೃತತೆಯಿಲ್ಲದ ಮಾಹಿತಿಗಳು, ವಿಕೃತಿಗೊಂಡ ಇತಿಹಾಸಗಳು ಆರಂಭವಾಗುವುದೇ ಈ ಗಜೆಟಿಯರುಗಳಿಂದ. ಸ್ವಾತಂತ್ರ್ಯಾ ನಂತರ ಪ್ರಕಟಗೊಂಡ ಯಾವುದೇ ಜಿಲ್ಲೆಯ ಗಜೆಟಿಯರುಗಳನ್ನು ಗಮನಿಸಿದರೂ ಸೆಕ್ಯುಲರ್ ವಾಸನೆ ಅವುಗಳ ಪುಟಗಳ ಒಳಗಳೊಳಗಿಂದ ರಪ್ಪನೆ ಬಡಿಯುತ್ತದೆ. ಕೊಡಗು ಗಜೆಟಿಯರುಗಳಲ್ಲಿ ಹಾಲೇರಿ ರಾಜರ ಉಲ್ಲೇಖಗಳಿರುತ್ತವೆ. ಆದರೆ ಟಿಪ್ಪುದಾಳಿಯ ಉಲ್ಲೇಖಗಳಿರುವುದಿಲ್ಲ. ಮೈಸೂರು ಗಜೆಟಿಯರುಗಳಲ್ಲಿ ಟಿಪ್ಪು ಗುಣಗಾನವಿರುತ್ತವೆಯೇ ಹೊರತು ಲಕ್ಷ್ಮಮ್ಮಣ್ಣಿಯ ಪ್ರಸ್ಥಾಪವಿರುವುದಿಲ್ಲ. ಮಂಡ್ಯ ಜಿಲ್ಲಾ ಗಜೆಟಿಯರುಗಳು ಇನ್ನೂ ಭಯಾನಕ. ಇತಿಹಾಸದ ಘಟನೆಗಳನ್ನು ವಿವರಿಸುತ್ತಾ ಅಲ್ಲಿ ಇಸವಿಗಳೇ ಮಾಯವಾಗುವ ಚಮತ್ಕಾರಗಳಿವೆ. ಅಂದರೆ ೧೭೫೦ರಿಂದ ೧೮೦೦ರವರೆಗಿನ ಯಾವ ಘಟನೆಗಳೂ ಮಂಡ್ಯ ಜಿಲ್ಲಾ ಗಜೆಟಿಯರುಗಳಲ್ಲಿಲ್ಲ. ಅಂದರೆ ೪ನೇ ಮೈಸೂರು ಯುದ್ಧದ ಪ್ರಮುಖ ಘಟನಾವಳಿಯಾಗಿ ದಾಖಲಾಗುವ ಮಳವಳ್ಳಿ ಯುದ್ಧದ ಬಗ್ಗೆ ಒಂದೇ ಒಂದು ಸಾಲೂ ಇಲ್ಲ. ಒಕ್ಕಲಿಗ ಪರಾಕ್ರಮದ ದಾಖಲೆಯನ್ನು ಅಳಿಸಿಹಾಕಲು ಗಜೆಟ್ ಪಂಡಿತರು ಒಂದು ಕಾಲಘಟ್ಟವನ್ನೇ ಎಗರಿಸಿಬಿಟ್ಟಿದ್ದಾರೆ! ಹಾಗಾಗಿ ಮಳವಳ್ಳಿ ಯುದ್ಧದ ಕುರುಹುಗಳಿದ್ದರೂ, ಇತಿಹಾಸ ಮೈಚೆಲ್ಲಿ ಬಿದ್ದಿದ್ದರೂ ಉರಿಗೌಡ ಮತ್ತು ದೊಡ್ಡನಂಜೇಗೌಡರ ಹೋರಾಟಗಳ ಉಲ್ಲೇಖಗಳು ಸಿಗುತ್ತಿಲ್ಲ. ಮಳವಳ್ಳಿ ಯುದ್ಧವನ್ನೇ ಹೇಳದ ಇಂಥ ಗಜೆಟಿಯರುಗಳನ್ನಿಟ್ಟುಕೊಂಡು ಮಂಡ್ಯ ಜಿಲ್ಲೆಗೇನು ಪ್ರಯೋಜನ? ಹಾಗಾಗಿ ಹಿಂದೆ ಮುಂದೆ ನೋಡದೆ ಸ್ವಾತಂತ್ರ್ಯಾ ನಂತರದ ಮಂಡ್ಯ ಜಿಲ್ಲಾ ಗಜೆಟಿಯರುಗಳನ್ನು ತೂಕಕ್ಕೆ ಹಾಕಬಹುದು. ಅಷ್ಟೇ ಅಲ್ಲ ಟಿಪ್ಪುಸುಲ್ತಾನ್ ಸಮರ್ಥಕರಿಗೆ ದೊಡ್ಡ ಬಲವನ್ನು ಈ ಗಜೆಟಿಯರುಗಳು ಒದಗಿಸುತ್ತಿವೆ. ಟಿಪ್ಪು ಕ್ರೂರತೆಯನ್ನು ಹುಡುಕುವವರಿಗೆ ಇವು ತೊಡಕಾಗುತ್ತಿವೆ.

ಆದರೂ ಮೈಸೂರು ಮತ್ತು ಟಿಪ್ಪುವಿನ ಕುರಿತು ಬ್ರಿಟಿಷ್-ಫ್ರೆಂಚ್ ಇತಿಹಾಸಕಾರದ್ದಲ್ಲದ ಅಧಿಕೃತ ದಾಖಲೆಗಳಿವೆ. ಅರಮನೆಯೇ ಅದನ್ನು ಛಾಪಿಸಿದೆ ಎನ್ನುವುದು ವಿಶೇಷ. ಬ್ರಿಟಿಷ್ ಇತಿಹಾಸಕಾರರ ಬರಹಗಳನ್ನು ದ್ವೇಷದ ಇತಿಹಾಸ ಎನ್ನುವವರು ಅರಮನೆ ಪ್ರಕಟಿಸಿದ ಈ ಇತಿಹಾಸಕ್ಕೆ ಏನನ್ನುವರು?

೧೮೮೦ರ ಹೊತ್ತಲ್ಲಿ ಮೈಸೂರಿನ ಮರಿಮಲ್ಲಪ್ಪ ವಿದ್ಯಾಸಂಸ್ಥೆಯ ಅಧ್ಯಕ್ಷರಾಗಿದ್ದವರು ವೆಂಕಟಕೃಷ್ಣಯ್ಯ ಎಂಬ ವಿದ್ವಾಂಸರು. ಅಧ್ಯಕ್ಷರಾಗಿದ್ದಾಗಲೇ ಅವರು ಹಿತಬೋಧಿನಿ ಎಂಬ ಮಾಸಪತ್ರಿಕೆಯನ್ನು ನಡೆಸುತ್ತಿದ್ದರು. ಆ ಪತ್ರಿಕೆಗೆ ಹಿರಿಯರಾದ ಅಂಬಿಲೆ ನರಸಿಂಗಯ್ಯಂಗಾರ್ ಅವರು ಲೇಖನಗಳನ್ನು ಬರೆಯುತ್ತಿದ್ದರು. ಒಂದು ಕಾಲದಲ್ಲಿ ಅರಮನೆಯಲ್ಲಿ ದರ್ಬಾರ್ ಬಕ್ಷಿಗಳಾಗಿದ್ದ ನರಸಿಂಗಯ್ಯಂಗಾರರ ಲೇಖನಗಳನ್ನು ಪಂಡಿತರು ಕಾದು ಓದುತ್ತಿದ್ದರು. ಮೈಸೂರಿನ ಇತಿಹಾಸದ ಬಗ್ಗೆ ತಜ್ಞತೆಯಿಂದ ಬರೆಯುತ್ತಿದ್ದ ಅವರ ಬರಹಗಳನ್ನು ಮಹಾರಾಜರು ಮೆಚ್ಚಿ ಕಡತಗಳನ್ನು ಒದಗಿಸುತ್ತಿದ್ದರು. ಮಹಾರಾಜರು ಪತ್ರಿಕೆಯಲ್ಲಿ ಪ್ರಕಟವಾದ ಲೇಖನಗಳನ್ನು ಪುಸ್ತಕ ರೂಪಕ್ಕೆ ತರಬೇಕೆಂದು ಆಜ್ಞೆಯನ್ನೂ ಮಾಡಿದ್ದರು. ಅದರ ಫಲವಾಗಿ “ಮೈಸೂರು ಸಂಸ್ಥಾನದ ಪ್ರಭುಗಳು-ಶ್ರೀಮನ್ಮಹಾರಾಜರ ವಂಶಾವಳಿ” ಪುಸ್ತಕ ರೂಪದಲ್ಲಿ ಪ್ರಕಟವಾಯಿತು. ೧೭೯೯ರಲ್ಲಿ ಮುಮ್ಮಡಿಯವರ ಪಟ್ಟಾಭಿಷೇಕದಿಂದ ಆರಂಭವಾಗುವ ಈ ಪುಸ್ತಕ ಆ ಕಾಲದ ರಾಜಕೀಯ ಗೊಂದಲ ಮತ್ತು ಅರಮನೆಯ ತಲ್ಲಣಗಳ ಬಗ್ಗೆ ಅಪರೂಪದ ಮಾಹಿತಿಯನ್ನು ಒಳಗೊಂಡಿದೆ. ಟಿಪ್ಪುಸುಲ್ತಾನ್ ಬಗ್ಗೆ ಅಧಿಕೃತ ಮಾಹಿತಿಯನ್ನು ಇದು ನೀಡುತ್ತದೆ. ಆದರೆ ಸರಕಾರಿ ಬರಹಗಾರರ ಕಣ್ಣಿಗೆ ಈ ಪುಸ್ತಕವಿನ್ನೂ ಬಿದ್ದಿಲ್ಲ!ಇವು ಆ ಪುಸ್ತಕದಲ್ಲಿರುವ ಕೆಲವು ಅಪರೂಪದ ಮಾಹಿತಿಗಳು.

ಸರ್ವಾಧಿಕಾರವನ್ನು ಮಾಡುತ್ತಿದ್ದ ಟಿಪ್ಪುಸುಲ್ತಾನನು ಕೆಲವು ದಿನ ದೊರೆಗಳವರ ಸನ್ನಿಧಾನದಲ್ಲಿ ಸ್ವಾಮಿನಿಷ್ಠೆಯಿಂದ ನಡೆದುಕೊಳ್ಳುತ್ತಿದ್ದನು. ಆದರೆ ಕೆಲವು ದಿನಗಳ ನಂತರ ಸ್ವಾಮಿನಿಷ್ಠೆಯನ್ನು ಮರೆತು, ತಾನು ಕೆಟ್ಟು ಹೋಗತಕ್ಕ ಬಗೆಯನ್ನು ತಿಳಿದುಕೊಳ್ಳದೆ ಯುಕ್ತಾಯುಕ್ತ ಆಲೋಚನೆಯನ್ನು ಮಾಡದೆ, ಬಲೈಶ್ವರ್ಯದಿಂದ ಮತ್ತನಾಗಿ, ದುರ್ಜನರ ದುರಾಲೋಚನೆಗೆ ಒಳಗಾಗಿ, ಸಜ್ಜನರನ್ನು ಕೆಡಿಸುತ್ತ ಉತ್ತಮರಾದ ಸಕಲಜಾತಿಯ ಜನರುಗಳನ್ನೂ ತನ್ನ ಜಾತಿಗೆ ಸೇರಿಸಿಕೊಳ್ಳತೊಡಗಿದನು. ರಾಜ್ಯದ ಸೀಮೆಯಲ್ಲಿರುವ ದೇವರುಗಳ ವಸ್ತ್ರಾಭರಣಗಳನ್ನು ತೆಗೆದುಕೊಂಡು ದೇವರುಗಳ ಅಂಗಭಂಗಗಳನ್ನು ಮಾಡಿ, ಗುಡಿಗೋಪುರಗಳನ್ನು, ಕಟ್ಟೆಕಾಲುವೆಗಳನ್ನು, ಧರ್ಮಕಾರ್ಯಗಳನ್ನು ನಾಶಮಾಡಿದನು. ದುಷ್ಟರಾದ ತನ್ನ ಜಾತಿಯ ಜನರಿಗೆ ಪ್ರಾಬಲ್ಯವನ್ನು ಕೊಟ್ಟು, ಅರಸುಗಳು ಮುಂತಾದ ಉತ್ತಮ ವರ್ಣಾಶ್ರಮದ ಜನರುಗಳ ಗ್ರಾಮಭೂಮಿ-ಸಂಬಳ ಮೊದಲಾದ ಜೀವನಗಳನ್ನು ತಪ್ಪಿಸಿ ದೇಶಭ್ರಷ್ಟರನ್ನಾಗಿ ಮಾಡಿದನು. ತನ್ನಲ್ಲಿ ಅಧಿಕಾರ ಮಾಡುತ್ತಲಿದ್ದ ಜನರುಗಳ ಅಪರಾಧಗಳಿಗೆ ಶಿಕ್ಷೆಯನ್ನು ಮಾಡಿಸದೆ, ಅಕವಾಗಿ ಅವರುಗಳಿಗೆ ಅಂಗಭಂಗಗಳನ್ನೂ ಪ್ರಾಣಾಂತಿಕ ಶಿಕ್ಷೆಗಳನ್ನೂ ಮಾಡಿಸುತ್ತಿದ್ದನು. ಹೀಗೆ ದುಷ್ಟಜನಗಳನ್ನು ಪ್ರಾಬಲ್ಯಕ್ಕೆ ತಂದು ಸಜ್ಜನರಿಗೆ ಅನೇಕ ಬಾಧೆಗಳನ್ನುಂಟುಮಾಡಿದನು. ದೊರೆಗಳವರ ಸಿಂಹಾಸನದಂತೆ ಅನೇಕ ನವರತ್ನಗಳಿಂದ ವ್ಯಾಘ್ರಪೀಠವನ್ನು ಮಾಡಿಸಿ ಅದರ ಮೇಲೆ ಕುಳಿತು ತಾನೇ ಬಾದಷಾಹ ಎಂದುಕೊಂಡನು.

ದಿನೇ ದಿನೇ ಹೆಚ್ಚಾಗುತ್ತಿದ್ದ ಆತನ ದುಷ್ಟತನದಿಂದ ಜನರು ಕ್ಷೋಭೆಗೊಳಗಾದರು. ಇದರಿಂದ ಬಹಳ ಚಿಂತಾಕ್ರಾಂತರಾಗಿ ಖಾಸಾ ಚಾಮರಾಜ ಒಡೆಯರು ಆತನ ನಾಶಕ್ಕೆ ಶ್ರೀಕಂಠಸ್ವಾಮಿಯವರ ಸನ್ನಿಧಾನದಲ್ಲಿ ಕೋಟಿ ಪಂಚಾಕ್ಷರಿ ಹೋಮ ಮಾಡಿಸಿದರು. ಖಾಸಾ ಚಾಮರಾಜರ ಪಟ್ಟದರಸಿ ಕೆಂಪನಂಜಪ್ಪಣ್ಣಿಯವರಿಗೆ ಪುತ್ರೋತ್ಸೋವದ ಸಮಾಚಾರವನ್ನು ಟಿಪ್ಪುಸುಲ್ತಾನನಿಗೆ ಹೇಳಿ ಕಳುಹಿಸಲಾಯಿತು. ಅವನು ಈ ವೃತ್ತಾಂತವನ್ನು ಕೇಳಿ ಚಿಂತಾಕ್ರಾಂತನಾದರೂ ಸಂತೋಷಗೊಂಡವನಂತೆ ನಟಿಸಿದನು. ಆದರೆ ಒಳಗೊಳಗೇ ಟಿಪ್ಪುಸುಲ್ತಾನನು ದೊರೆಗಳಲ್ಲಿ ಅತ್ಯಂತ ದ್ವೇಷವನ್ನು ಬೆಳೆಸಿಕೊಂಡನು.

ಮಹಾರಾಜರು ದುಷ್ಟನನ್ನು ನಿಗ್ರಹಿಸಲು ಮರ್ಮಜ್ಞರಾದ ಹೂಣ ದೇಶಾಪತಿಗಳಾದ ಸರದಾರಿಗೆ ಪತ್ರವನ್ನು ಬರೆದರು. ಆ ಪತ್ರದಲ್ಲಿ ಮಹಾಸ್ವಾಮಿಗಳು “ನಮ್ಮ ಚಾಕರನಾದ ಈ ಟಿಪ್ಪುಸುಲ್ತಾನನು ಬಹಳ ದುಷ್ಟತನವನ್ನು ಮಾಡುತ್ತಿರುವುದರಿಂದ ಇವನ ವಿಷಯದಲ್ಲಿ ಇಲ್ಲಿರತಕ್ಕ ಜನಗಳಿಗೆಲ್ಲಾ ದ್ವೇಷವಿರುವುದು. ಆದ ಕಾರಣ ನೀವು ಇವನನ್ನು ನಿಗ್ರಹಿಸಿ ಈ ರಾಜ್ಯವನ್ನು ಪೂರ್ವದಂತೆ ನಮ್ಮ ವಶಮಾಡಿ ಶಾಶ್ವತವಾದ ಕೀರ್ತಿಯನ್ನು ಸಂಪಾದಿಸಿಕೊಳ್ಳಬೇಕು ಮತ್ತು ನೀವು ಜಯವನ್ನು ಹೊಂದುವುದಕ್ಕೆ ಈ ಸಮಯವೇ ಅನುಕೂಲವಗಿರುವುದರಿಂದ ಶೀಘ್ರದಲ್ಲಿ ಬರುವಂತಾಗಬೇಕು.” ಎಂದು ಬರೆದಿದ್ದರು..

೧೭೯೬ರಲ್ಲಿ ಮಹಾಸ್ವಾಮಿಗಳು ಸ್ವರ್ಗಾರೋಪಣಗೈದಾಗ ಟಿಪ್ಪುಸುಲ್ತಾನನು ಹರ್ಷಗೊಂಡನು. ಇನ್ನು ಮೇಲೆ ನಿಷ್ಕಂಟಕವಾಗಿ ಸಕಲ ರಾಷ್ಟ್ರಾಪತ್ಯವು ತನ್ನ ಕೈವಶವಾಯಿತೆಂದು, ಪೂರ್ವಕ್ಕಿಂತ ಅಧಿಕವಾಗಿ ಸಜ್ಜನರುಗಳ ಬಾಧೆಯನ್ನೂ ದುರ್ಜನರುಗಳ ಪ್ರಾಬಲ್ಯವನ್ನೂ ಮಾಡಿ, ದೇವ ಬ್ರಾಹ್ಮಣರ ಕಂಟಕನಾಗಿ ಈ ಚಾಮರಾಜ ಒಡೆಯರವರ ಪುತ್ರರಿಗೆ ಪಟ್ಟಾಭಿಷೇಕವನ್ನು ಮಾಡಿಸದೆ, ಸ್ವಾಮಿದ್ರೋಹದಲ್ಲಿಯೇ ಆಸಕ್ತನಾಗಿದ್ದನು.

ಇಂಗ್ಲಿಷರೊಡನೆ ಜಯಿಸುವುದಕ್ಕೆ ಸಾಮರ್ಥ್ಯವಿಲ್ಲದೆ ಲಜ್ಜೆಯಿಂದ ಟಿಪ್ಪು ತನ್ನ ಇಬ್ಬರು ಮಕ್ಕಳನ್ನು ಒತ್ತೆ ಇಟ್ಟು, ಬ್ರಿಟಿಷರಿಗೆ ಕೊಡತಕ್ಕ ದ್ರವ್ಯಕ್ಕಾಗಿ ಅರಮನೆಯಲ್ಲಿದ್ದ ವಸ್ತ್ರಾಭರಣಗಳನ್ನು, ಪಾತ್ರೆಗಳನ್ನೂ ದೋಚಿದನು. ಅಲ್ಲದೆ ಸೀಮೆಯಲ್ಲಿದ್ದ ದೇವರುಗಳ ವಸ್ತ್ರಾಭರಣಗಳನ್ನೂ, ಪ್ರಜೆಗಳ ಒಡವೆಗಳನ್ನೂ ಬಲವಂತವಾಗಿ ತೆಗೆದುಕೊಂಡನು. ಮಕ್ಕಳನ್ನು ಒತ್ತೆ ಇಟ್ಟ ಆತನ ವರ್ತನೆಯನ್ನು ಇಂಗ್ಲಿಷರು ಲಜ್ಜೆಗೇಡಿ, ಹೇಡಿ ಎಂಬುದಾಗಿ ಬಣ್ಣಿಸಿದರು.

ಟಿಪ್ಪುವಿನ ಕೆಟ್ಟ ನಡತೆಯನ್ನು ಅರಿತ ಇಂಗ್ಲಿಷರು ಇನ್ನು ಮೇಲೆ ಇವನು ನಿಗ್ರಹಿಸುವುದಕ್ಕೆ ಯೋಗ್ಯನೇ ಹೊರತು ಉಪೇಕ್ಷೆ ಮಾಡುವುದಕ್ಕೆ ಯೋಗ್ಯನಲ್ಲ ಎಂದು ಪರ್ಯಾಲೋಚನೆ ಮಾಡಿ, ಸೇನಾಸಮೇತರಾಗಿ ಯುದ್ಧ ಸನ್ನದ್ಧರಾದ ಜನರಲ್ ಹ್ಯಾರಿಸ್, ವೆಲ್ಲೆಸ್ಲಿ ಮುಂತಾದ ಸರದಾರರನ್ನು ಕಳುಹಿಸಿದರು. ಈ ವರ್ತಮಾನವನ್ನು ತಿಳಿದ ಟಿಪ್ಪುಮೈಸೂರು ಕೋಟೆ ಪೇಟೆಗಳಲ್ಲಿದ್ದ ತ್ರಣೇಶ್ವರ ಲಕ್ಷ್ಮೀರಮಣ ಮುಂತಾದ ದೇವರ ಗುಡಿಗೋಪುಗಳನ್ನೂ ಅರಮನೆ ಮೊದಲಾದ ಸಮಸ್ತ ಜನರುಗಳ ಮನೆಗಳನ್ನೂ ಕೆಡವಿ, ಸುಟ್ಟುಹಾಕಿದನು. ಮೈಸೂರು ಕೋಟೆಗೆ ಪೂರ್ವಪಾರ್ಶ್ವದಲ್ಲಿದ್ದ ಕಾಡಬಸವನ ತಿಟ್ಟಿನ ಮೇಲೆ ಚಿಕ್ಕದಾಗಿ ಒಂದು ಕೋಟೆಯನ್ನು ಕಟ್ಟಿಸಿ ಅದಕ್ಕೆ ನಜರಾಬಾದ್ ಎಂಬುದಾಗಿ ಹೆಸರಿಟ್ಟನು. ಇನ್ನು ಕೆಲವು ಮನೆಗಳನ್ನು ಕಟ್ಟಿಸಿ ಮೈಸೂರು ಕೋಟೆ ಪೇಟೆಗಳಲ್ಲಿದ್ದ ಬ್ರಾಹ್ಮಣರು, ಸೆಟ್ಟಿ ವರ್ತಕರು ಮುಂತಾದ ಹಲವು ಕೋಮಿನ ಜನರ ಮನೆಗಳನ್ನು ಕೆಡವಿಸಿದನು. ಮೈಸೂರಿನ ಉತ್ತರಕ್ಕಿದ್ದ ಒಂದು ದಾರಿಯಲ್ಲಿ ಸುಬೇದಾರ ರಣ್ಣನ ತೋಟದ ಬಳಿ ನೀರು ಹರಿಯುವ ಹಳ್ಳದ ಸಮೀಪದಲ್ಲಿ ಅನೇಕ ಮನೆಗಳನ್ನು ಕಟ್ಟಿಸಿ ಅದಕ್ಕೆ ನವಾ ಷಹರ್ ಎಂದು ಹೆಸರಿಟ್ಟನು. ಶತ್ರುಗಳು ಬರುವ ದಾರಿಯಲ್ಲಿ ಪೇಟೆ ಮತ್ತು ಮನೆಗಳಿದ್ದರೆ ಅವರ ವಾಸ್ತವ್ಯಕ್ಕೆ ಬಳಕೆಯಾಗಬಹುದೆಂದು ಹೆದರಿ ಅದಕ್ಕೆಲ್ಲಾ ಬೆಂಕಿ ಹಾಕಿಸಿದನು. ಮೈಸೂರು ಕೆರೆ ಮುಂತಾದ ಜಲಾಶಯಗಳನ್ನು ಒಡೆಸಿ ದುಷ್ಟತನವನ್ನು ಮೆರೆದನು.

೧೭೯೯ರ ಮೇ ನಾಲ್ಕರಂದು ಯುದ್ಧ ಅಡಗಿದರೂ ಇಂಗ್ಲಿಷ್ ಸರದಾರರಿಗೆ ಟಿಪ್ಪುವಿನ ಪತ್ತೆ ಆಗದ ಕಾರಣ ತೋಪುಖಾನೆ ಮತ್ತು ಮನೆಗಳನ್ನು ಹುಡುಕಲಾಯಿತು. ಅಷ್ಟರಲ್ಲಿ ಶ್ರೀರಂಗಪಟ್ಟಣದ ಕೋಟೆ ಮೂಡಲ ಬಾಗಿಲ ಬಳಿ ಹೊಸಕಂದಕದ ಸಮೀಪದಲ್ಲಿ ಆತ ಗುಂಡು ತಗುಲಿ ಮೃತನಾದ ವರ್ತಮಾನವು ಬಂತು. ಆತನ ಬಂಧು ಜನರುಗಳನ್ನು ಕರೆಸಿ ಅದು ಸುಲ್ತಾನನೋ ಅಲ್ಲವೋ ಎಂದು ವಿಚಾರಿಸಲಾಗಿ ಅದು ಟಿಪ್ಪುವೇ ಎಂದು ಮಹಜರು ಮಾಡಲಾಯಿತು. ಸರದಾರರುಗಳು ಆತನ ಬಂಧು ಜನರನ್ನು ಸಂತೈಸಿ ನೀವು ವ್ಯಸನಪಡಬೇಡಿ, ನಿಮ್ಮಗಳ ರಕ್ಷಣೆ ಮಾಡುವೆವು ಅಂತಂದರು. ಆತನ ಜಾತಿಯ ಪ್ರಕಾರ ತೋಟದಲ್ಲಿ ತಂದೆ ತಾಯಿಗಳ ಸಮಾಧಿಯ ಪಕ್ಕದಲ್ಲೇ ಅತನನ್ನು ಹೂಳಲಾಯಿತು. ಆ ದಿನ ಅಖಂಡವಾಗಿ ವೃಷ್ಟಿಯಾಗಿ ಕಾವೇರಿಯು ತುಂಬಿಹರಿಯಿತು.

ಮುಮ್ಮಡಿ ಒಡೆಯರಿಗೆ ಪಟ್ಟಾಭಿಷೇಕದ ಸಮಯದಲ್ಲಿ ಜನರಲ್ ಹ್ಯಾರಿಸ್ ಅವರು ಪೂರ್ಣಯ್ಯನನ್ನು ಕರೆದು ನಾವು ಈಗ ದೊರೆಗಳ ಸನ್ನಿಧಿಯಲ್ಲಿ ನಿನಗೆ ಮಂತ್ರಿ ಪದವಿಯನ್ನು ಕೊಡಿಸುತ್ತಿದ್ದೇವೆ. ನೀನು ಇಂದು ಮೊದಲುಗೊಂಡು ಸಮಸ್ತ ಕಾರ್ಯಗಳಲ್ಲಿಯೂ ಜಾಗರೂಕನಾಗಿದ್ದು ದೊರೆಗಳಿಗೆ ಹಿತವನ್ನೇ ಆಚರಿಸುತ್ತ ಈ ಸಂಸ್ಥಾನದ ಪೂರ್ವ ಮರ್ಯಾದೆಯನ್ನು ಮೀರದೆ, ರಾಜಕೋಶವನ್ನು ವಿಚಾರಣೆ ಮಾಡತಕ್ಕದ್ದು. ನೀನು ಈ ರೀತಿಯಲ್ಲದೆ ಬೇರೆ ರೀತಿ ವರ್ತಿಸಿದರೆ ಸ್ವಾಮಿದ್ರೋಹ ಮಾಡಿದ ಜನಗಳಿಗೆ ಮಾಡತಕ್ಕ ಶಿಕ್ಷೆಗೆ ಗುರಿಯಾಗುವೆ. ನಿನ್ನ ಮನಸ್ಸಿನಲ್ಲಿ ಸುಲ್ತಾನನ ಮಗನಿಗೆ ರಾಜ್ಯವನ್ನು ಕೊಡಿಸಬೇಕೆಂದಿದ್ದ ಅಭಿಪ್ರಾಯ ತಿಳಿದಿದ್ದರೂ ಆ ಅಪರಾಧವನ್ನು ಕ್ಷಮಿಸಿ ಇಲ್ಲಿ ಮಂತ್ರಿಪದವಿಯನ್ನು ಕೊಡಿಸಿದ್ದೇವೆ ಎಂದು ಎಚ್ಚರಿಸಿದರು.

ದುರದೃಷ್ಟವೆಂದರೆ ಮೈಸೂರು ಸಂಸ್ಥಾನದ ಪ್ರಭುಗಳು-ಶ್ರೀಮನ್ಮಹಾರಾಜರ ವಂಶಾವಳಿ ಪುಸ್ತಕ ಯಾವ ಸಂಶೋಧನೆಗಳಿಗೂ ಆಕರ ಗ್ರಂಥವಾಗಲಿಲ್ಲ. ಏಕೆಂದರೆ ಟಿಪ್ಪುವನ್ನು ಮೈಸೂರಿನ ಹುಲಿಯಾಗಿಯೂ, ಸ್ವಾತಂತ್ರ್ಯ ಹೋರಾಟಗಾರನಾಗಿಯೂ, ಕನ್ನಡ ಪ್ರೇಮಿಯಾಗಿಯೂ ಬಿಂಬಿಸಬೇಕಿತ್ತು. ಮುಂದೊಂದು ದಿನ ಆತನ ಜನ್ಮದಿನವನ್ನು ಆಚರಿಸಬೇಕಾಗಿತ್ತು. ಮೈಸೂರಿನ ಬ್ರಾಹ್ಮಣರು, ಒಕ್ಕಲಿಗ ಗೌಡರು, ಸೆಟ್ಟಿ ವರ್ತಕರುಗಳನ್ನು ಟಿಪ್ಪು ಕೊಂದ ಎಂಬುದನ್ನು ಮರೆಮಾಚಬೇಕಿತ್ತು.

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments