ಅನಾಣ್ಯೀಕರಣ, ಎಡಪಂಥೀಯ ಬುದ್ಧಿಜೀವಿಗಳು ಮತ್ತು ಮಾಧ್ಯಮಗಳು
ಜಿ. ಪದ್ಮನಾಭನ್
ಸಹಾಯಕ ಪ್ರಾಧ್ಯಾಪಕ
ತಮಿಳು ಭಾಷೆ ಮತ್ತು ಅನುವಾದ ಅಧ್ಯಯನ ವಿಭಾಗ
ದ್ರಾವಿಡ ವಿಶ್ವವಿದ್ಯಾಲಯ,
ಕುಪ್ಪಂಆಂಧ್ರ ಪ್ರದೇಶ.
[ತಮಿಳಿನ ಖ್ಯಾತ ಸಾಹಿತಿ, ಚಿಂತಕ ಬಿ.ಜಯಮೋಹನ್‍ರವರು, ಈ ಹಿಂದೆ ತಮ್ಮ ವೆಬ್‍ಸೈಟ್‍ನಲ್ಲಿ ಅನಾಣ್ಯೀಕರಣ ಮತ್ತು ಬುದ್ಧಿಜೀವಿಗಳ ದ್ವಿಮುಖ ನೀತಿಯ ಬಗೆಗಿನ ಲೇಖನವೊಂದನ್ನು ಪ್ರಕಟಿಸಿದ್ದರು. ಅದನ್ನು ದ್ರಾವಿಡ ವಿಶ್ವವಿದ್ಯಾಲಯದ, ತಮಿಳು ಬಾಷೆ ಮತ್ತು ಅನುವಾದ ಅಧ್ಯಯನ ವಿಭಾಗದ, ಸಹಾಯಕ ಪ್ರಾಧ್ಯಾಪಕ ಶ್ರೀ ಜಿ.ಪದ್ಮನಾಭನ್ ಅವರು ಕನ್ನಡಕ್ಕೆ ತಂದಿದ್ದಾರೆ. ಅನಾಣ್ಯೀಕರಣಕ್ಕೆ ಒಂದು ವರ್ಷ ಸಂದ ಹಿನ್ನೆಲೆಯಲ್ಲಿ ಈ ಲೇಖನ ಮತ್ತೆ ಚರ್ಚೆಯಾಗುತ್ತಿದೆ.]
ನರೇಂದ್ರ ಮೋದಿಯವರು ಅಧಿಕಾರಕ್ಕೇರಿದ ದಿನದಿಂದಲೂ ಸಣ್ಣ ಅನುಮಾನದಿಂದಲೇ ಅವರನ್ನು ಗಮನಿಸುತ್ತಿದ್ದೇನೆ. ಅವರನ್ನು ಯಾವ ಬಗೆಯಲ್ಲೂ ಬೆಂಬಲಿಸಲಿಲ್ಲ. ಅವರ ರಾಜಕೀಯ ಉನ್ನತಿಯ ಸಮಯದಲ್ಲಿಯೂ ನನಗೆ ಆ ಅನುಮಾನ ಮುಂದುವರಿಯಿತು. ಆ ಕುರಿತು ನನ್ನ ಕಳವಳವನ್ನು ಹಲವು ಬಾರಿ ಈ ಹಿಂದೆ ಬರೆದಿದ್ದೆನೆ. ಯಾಕೆಂದರೆ ಒಂದು ವ್ಯವಸ್ಥೆಯ ತೂಕ ಏನು ಎಂದು ನನಗೆ ಗೊತ್ತು. ಅದನ್ನು ಸುಲಭದಲ್ಲಿ ಬದಲಾಯಿಸುವಂತಿಲ್ಲ. ಸಾಮಾಜಿಕ ಸಂಸ್ಥೆಗಳು ಆರ್ಥಿಕತೆ, ವೈಚಾರಿಕತೆ, ಎಲ್ಲವೂ ಹಾಗೆಯೇ. ಆದ್ದರಿಂದ ವ್ಯವಸ್ಥೆಯನ್ನು ಬದಲಾಯಿಸುವ ಬಗೆಗಿನ ಅವರ ಆವೇಶದ ಮಾತುಗಳನ್ನು, ಒಂದು ಸರಳ ರಾಜಕೀಯ ತಂತ್ರ ಎಂಬುದಕ್ಕಿಂತ ಹೆಚ್ಚಾಗಿ ನೋಡಬೇಕೆಂದೆನಿಸಿರಲಿಲ್ಲ. ಹಾಗೆಯೇ ಬಲಪಂಥೀಯ ಧಾರ್ಮಿಕ ಮೂಲಭೂತವಾದಿಗಳ ಬಗ್ಗೆ ನನಗೂ ಯಾವಾಗಲೂ ಅನುಮಾನವಿದೆ. ಒಂದು ಪುರಾತನವಾದ ಸಂಸ್ಕೃತಿ, ಸಮಾಜ ಹಾಗೇ ಇರಲು ಸಾಧ್ಯ. ಅದು ಬದಲಾವಣೆಗಳನ್ನು ತಿರಸ್ಕರಿಸುವ ಮನಸ್ಥಿತಿಯನ್ನು ಒಳಗೊಂಡಿರುವುದರ ಲಕ್ಷಣ. ಈ ವಲಯದವರ ಕಠೋರವಾದ ಸಮಾನತೆಯ ತಿರಸ್ಕರಣ, ಆಧುನಿಕತೆಯ ವಿರೋಧದ ಬಗ್ಗೆ ಯಾವಾಗಲೂ ನನಲ್ಲಿ ನಿಷ್ಠುರವಾದ ವಿಮರ್ಶೆಗಳಿವೆ. ಒಂದು ದಶಕದ ಕಾಲ ಅವರನ್ನು ವಿರೋಧಿಸಿ ನಾನು ಬರೆದ ಸುಮಾರು ನೂರಕ್ಕೂ ಹೆಚ್ಚಿನ ಲೇಖನಗಳಿವೆ. ಅವರು ಮೋದಿಯವರ ಸರ್ಕಾರದ ಹಿಂದೆ ಕೆಲಸ ಮಾಡಬಹುದು ಎಂಬ ಅನುಮಾನವಿತ್ತು. ಆದ್ದರಿಂದ ಒಂದು ಎಚ್ಚರಿಕೆಯಿಂದಲೇ ಮೋದಿಯವರ ರಾಜಕೀಯ ಏಳಿಗೆಯನ್ನು ಗಮನಿಸಿದೆ. ಬಲಪಂಥೀಯಕ್ಕೆ ವಿರುದ್ಧವಾದ ಎಲ್ಲಾ ಶಕ್ತಿಗಳಿಗೂ ನನ್ನ ಅನುಕಂಪವಿತ್ತು. ಅದರ ಜೊತೆ ಮೋದಿಯವರನ್ನು ವಿರೋಧಿಸುವವರ ಬಗ್ಗೆ ನನಗೆ ಒಂದು ಭರವಸೆಯೂ ಇತ್ತು. ಅವರು ಭಾರತದಲ್ಲಿ ಪ್ರಗತಿಪರ ಬದಲಾವಣೆಗಳನ್ನು ನಿರ್ಮಿಸಿದ ‘ಯೂರೋಪಿಕರಣದ’ ಮತ್ತು ಎಡಪಂಥೀಯ ಸಿದ್ಧಾಂತಗಳನ್ನು ಮುಂದುವರೆಸುತ್ತಾರೆ, ಅವರು ಭಾರತದ ನಿರ್ಮಾಣದಲ್ಲಿ ಪ್ರಮುಖವಾದ ಸ್ಥಾನ ಪಡೆಯುತ್ತಾರೆ ಎಂದು ನಂಬಿದ್ದೆ. ಇಂದೂ ಆ ನಂಬಿಕೆ ಉಳಿದಿದೆ. ಆದರೆ ಈಗ ನನ್ನ ಭರವಸೆ ಸ್ವಲ್ಪ ಕಂಪಿಸಿದೆ.
ಎಡಪಂಥೀಯ ಬುದ್ಧೀಜೀವಿಗಳು ಸೃಷ್ಟಿಸಿದ, ಅಸಹಿಷ್ಣುತೆಯ ಪ್ರಚಾರದ ಭರಾಟೆಯನ್ನು ಯಾರಾದರೂ ಮರೆಯಲಿಕ್ಕಾಗುತ್ತದೆಯೇ? ಆ ಪ್ರಚಾರ, ಮಾಧ್ಯಮಗಳಲ್ಲಿ ಮೂರು ತಿಂಗಳು ಮುಂದುವರೆಯಿತು. ಈ ಪ್ರಚಾರದ ಭರಾಟೆ ಎಷ್ಟಿತ್ತೆಂದರೆ, ಸರ್ಕಾರವನ್ನು ವಿರೋಧಿಸದೇ ಇರುವ ಎಲ್ಲಾ ಕಲಾವಿದರು, ಲೇಖಕರು ತೆಗಳಿಕೆಗೆ ಒಳಗಾಗಬೇಕಾಯಿತು! ಆದರೆ ಆ ಪ್ರಚಾರವನ್ನು ಮುಂದುವರೆಸಿದ ಬುದ್ಧಿಜೀವಿಗಳು, ಸರ್ಕಾರದಿಂದ ಬಹುಮಟ್ಟಿಗೆ ಅಕ್ರಮವಾಗಿ ಪಡೆದು ಅನುಭವಿಸುತ್ತಿರುವ ಸೌಲಭ್ಯಗಳ ಬಗ್ಗೆ ಚರ್ಚೆ ಆರಂಭವಾದ ಕೂಡಲೇ ಆ ಅಸಹಿಷ್ಣತೆಯ ಪ್ರಚಾರ ತಣ್ಣಗಾಯಿತು. ನಾನು ಇನ್ನೂ ಭರವಸೆ ಇಟ್ಟುಕೊಂಡಿರುವ ಪ್ರಗತಿಪರ ಶಕ್ತಿಗಳ ಮೇಲಿನ ಮತ್ತೊಂದು ದೊಡ್ಡ ನಿರಾಸೆ ಎಂದರೆ, ಅವುಗಳು ಇಂದು ಕಪ್ಪು ಹಣದ ರಕ್ಷಣೆಗೆ ನಿಂತಿರುವುದು!
ಚಾರಿತ್ರಿಕ ಅನಾಣ್ಯೀಕರಣ ಸಂದರ್ಭದಲ್ಲಿ ಹೀಗೆ ನಡೆದುಕೊಂಡ ಸಂಕುಚಿತ ಬುದ್ಧಿಗಾಗಿ ಅವರಲ್ಲಿ ಕೆಲವರಾದರೂ ನಾಳೆ ದುಃಖಿಸುತ್ತಾರೆ. ಕಪ್ಪು ಹಣದಿಂದ ಮಾಧ್ಯಮಗಳನ್ನು, ರಾಜಕೀಯ ಪಕ್ಷಗಳನ್ನು ಮತ್ತು ಅದರ ಪುಡಾರಿಗಳನ್ನು ಮಾತ್ರ ಕೊಂಡುಕೊಳ್ಳಬಹುದೆಂದು ನಂಬಲಾಗಿತ್ತು. ಆದರೆ ಅದಕ್ಕಿಂತ ಮೇಲಾಗಿ, ದೇಶದ ಬುದ್ಧಿಜೀವಿಗಳನ್ನು ಕೊಳ್ಳಬಹುದೆಂದು ಸಮಕಾಲೀನ ಸಂದರ್ಭ ನಮಗೆ ತೋರಿಸುತ್ತಿದೆ! ಭಾರತೀಯ ಚರಿತ್ರೆಯಲ್ಲಿ ಯಾವೊಂದು ರಾಜಕೀಯ ಪಕ್ಷದ ನಾಯಕರು ಹೀಗೆ, ಕಪ್ಪು ಹಣಕ್ಕೆ ಬೆಂಬಲವಾಗಿ ನಿಂತಿರಲಿಲ್ಲ. ಯಾವೊಬ್ಬ ಅರ್ಥಶಾಸ್ತ್ರಜ್ಞನೂ ಮುಕ್ತವಾಗಿ ಕಪ್ಪು ಹಣವನ್ನು ಬೆಂಬಲಿಸಿ ಮಾತಾಡಿರಲಿಲ್ಲ. ಬುದ್ಧಿಜೀವಿಗಳು ಅದಕ್ಕಾಗಿ ಕಣ್ಣೀರು ಸುರಿಸಿದ್ದಿಲ್ಲ. ಆದರೆ ಇಂದು ಎಡಪಂಥೀಯರು, ಕಪ್ಪು ಹಣದ ರಕ್ಷಣೆಗೆ ಮೋಸದ ಪ್ರಚಾರದಲ್ಲಿ ತೊಡಗಿಸಿಕೊಳ್ಳುವ ಒಂದು ಕಾಲವನ್ನು ನಾವು ಕಣ್ಣ ಮುಂದೆ ಕಾಣುತ್ತಿದ್ದೇವೆ. ಹೆಚ್ಚಾದರೆ ಆರು ತಿಂಗಳು ಈ ಪ್ರಚಾರ. ಒಂದು ದಿನ ಅದು ತನ್ನ ಬಿಸಿಯನ್ನು ಕಳೆದುಕೊಂಡು ಚರಿತ್ರೆಯಾಗಿ ಉಳಿಯುತ್ತದೆ. ಆಗ, ‘ಇವರು ಕಪ್ಪು ಹಣದ ಬೆಂಬಲಕ್ಕೆ ನಿಂತರು’ ಎಂಬುದನ್ನು ನಾವು ನೆನಸಿಕೊಂಡು ನಾಚುವೆವು. ನಾನು ಈ ಲೇಖನವನ್ನು ಆ ದಿನ ಮತ್ತೊಮ್ಮೆ ಪ್ರಚುರ ಪಡಿಸುವೆ. ಇದು ಎಂದೆಂದೂ ನಮ್ಮ ಮುಂದೆ ಒಂದು ಕಪ್ಪು ಚುಕ್ಕಿಯಾಗಿ ಉಳಿಯುತ್ತದೆ.
ಕರುಣಾನಿಧಿಯಂಥವರು, ಕಪ್ಪು ಹಣದ ಪರ ನಿಲ್ಲುವುದನ್ನು, ಆ ಬಗೆಗೆ ಪ್ರತಿಭಟನೆಗೆ ಕರೆಕೊಡುವುದನ್ನು ಸುಲಭವಾಗಿ ಅರ್ಥೈಸಿಕೊಳ್ಳಬಹುದು. ಆದರೆ, ಸೀತಾರಾಂ ಯಚೂರಿ, ಪ್ರಕಾಶ್ ಕಾರಟ್ ಮೊದಲಾದವರು ಅನಾಣ್ಯೀಕರಣ ನಿರ್ಧಾರವನ್ನು ವಿರೋಧಿಸುವುದನ್ನು ಅರ್ಥಮಾಡಿಕೊಳ್ಳುವುದಕ್ಕೆ ನಾವು ಇದುವರೆಗೂ ತಿಳಿದಿರುವ ಚಾತ್ರಿಕ ಪ್ರಜ್ಞೆ ಸಾಕಾಗುವುದಿಲ್ಲ. ತೀರಾ ಸಾಮಾನ್ಯರಿಗೂ ಅರ್ಥವಾಗುವಂತೆ, ಕಪ್ಪು ಹಣದ ಕುರಿತಾಗಿ ನಿರ್ದಾಕ್ಷಿಣ್ಯ ಕ್ರಮಕ್ಕೆ ಸರ್ಕಾರ ಮುಂದಾಗುತ್ತದೆಯೆಂದರೆ ಅದರ ಅರ್ಥ, ಆ ಕ್ರಮದ ತುರ್ತು ಈ ಹಿಂದಿಗಿಂತಲೂ ಬಲವಾಗಿತ್ತು ಎಂದೇ. ದೇಶದ ಆರ್ಥಿಕತೆಯ ಬಹುಪಾಲನ್ನು ಕಪ್ಪು ಹಣವೇ ನಿಯಂತ್ರಿಸುತ್ತದೆಂಬ ಮಾತುಗಳು ಸಾಮಾನ್ಯವಾಗಿದ್ದೂ, ಮುಂದಿನ ದಿನಗಳು ದೇಶದ ಆರ್ಥಿಕತೆಗೆ ಹೆಚ್ಚಿನ ಹಾನಿಯುಂಟು ಮಾಡುವುದಾಗಿತ್ತು. ಜಗತ್ತಿನಲ್ಲೇ ಹೆಚ್ಚು ಕಪ್ಪು ಹಣ ಹೊಂದಿರುವ ರಾಷ್ಟ್ರಗಳ ಪೈಕಿ ನಮ್ಮದು ಐದನೇ ಸ್ಥಾನವನ್ನು ಹೊಂದಿತ್ತು! ಇದಕ್ಕೆ ಕಾರಣ, ನಮ್ಮ ಸಾಮಾಜಿಕ ವ್ಯವಸ್ಥೆಯೇ ಭ್ರಷ್ಟಾಚಾರವನ್ನು ಪ್ರೋತ್ಸಾಹಿಸುವ ಮನಸ್ಥಿತಿಯನ್ನು ಹೊಂದಿರುವುದು. ಆದ್ದರಿಂದ ಕಪ್ಪು ಹಣ ಸರ್ಕಾರದ ದೋಷದಿಂದ ಮಾತ್ರವೇ ರೂಪಗೊಂಡಿರುವುದಲ್ಲ. ನಮ್ಮ ಆರ್ಥಿಕ ಅನೈತಿಕತೆಯ ಫಲ. ಎಲ್ಲೆಡೆಯೂ ರಶೀದಿ ಇಲ್ಲದೇ ವ್ಯಾಪಾರ ನಡೆಯುವುದು ನಮಗೆ ತಿಳಿದಿರುವುದೇ. ನಾವು ಪಡೆಯುವ ರಶೀದಿಗಳೂ ಸಹ ಹಲವು ಬಾರಿ ನಕಲಿ. ಹೆಚ್ಚಿನ ಕೊಡು–ಕೊಳ್ಳುವಿಕೆ ಎಲ್ಲವೂ ಕಪ್ಪು ಹಣದಿಂದಲೇ. ಆದರೆ ಕಪ್ಪು ಹಣ ಅಲ್ಲೆ ಎಲ್ಲೋ ಇದೆ ಎಂದು ನಂಬುವುದಕ್ಕೆ ನಾವು ಇಚ್ಛಿಸುತ್ತೇವೆ. ಈ ಕಪ್ಪು ಹಣದ ಆರ್ಥಿಕತೆ ಬಹಳ ದಿನ ಬೆಳೆಯುವ ಹಾಗಿಲ್ಲ. ಯಾಕೆಂದರೆ ಸಕಾರಾತ್ಮಕ ಆರ್ಥಿಕತೆಯಲ್ಲಿ ಲಾಭ ಎನ್ನುವುದು ಹೂಡಿಕೆಯಾಗಿ ಆಗಬೇಕು. ಕಪ್ಪು ಹಣದಲ್ಲಿ ಹಾಗೆ ಆಗುವುದು ಅಪರೂಪ. ಲಾಭ ಬಡ್ಡಿಗೆಂದು ಸುಳಿದಾಡುತ್ತದೆ. ರಿಯಲ್ ಎಸ್ಟೇಟ್ ಮತ್ತು ಚಿನ್ನದ ರೂಪದಲ್ಲಿ ಇಡಲಾಗುತ್ತದೆ. ಈ ಹಣ ಚಲಾವಣೆಯಲ್ಲಿರದೇ ಸಂಪತ್ತು ಹೂಡಿಕೆಯಾಗುವುದಿಲ್ಲ. ಹೀಗೆ ಸ್ಥಗಿತವಾದ ಸಂಪತ್ತೇ ದೇಶದ ಆರ್ಥಿಕತೆಗೆ ಪೆಟ್ಟನ್ನು ನೀಡುವುದು.
ಕಳೆದ ಹತ್ತು ವರ್ಷಗಳಿಂದ ಕಪ್ಪು ಹಣದಿಂದ ಬಂದ ಲಾಭವೇ, ಪರೋಕ್ಷವಾಗಿ ರಿಯಲ್ ಎಸ್ಟೇಟ್ ರೂಪ ಪಡೆದು, ಇಂದು ರಿಯಲ್ ಎಸ್ಟೇಟ್ ಊದಿಕೊಂಡಿದೆ. ಇಲ್ಲಿ ಪಟ್ಟಣಕ್ಕೆ ಸಮೀಪವಿರುವ ಭೂಮಿ ಆಸ್ತಿಯೂ ಸ್ವಲ್ಪವೂ ಹೊಂದಾಣಿಕೆಯಿಲ್ಲದೆ ಬೆಳೆದು ಬಂದುದಕ್ಕೆ ಕಾರಣ ಈ ಕಪ್ಪು ಹಣವೇ. ಇಂದು ಮೇಲೆ ಹೇಳಿದ ರಿಯಲ್ ಎಸ್ಟೇಟ್, ಹಿಂಸೆ ಇಲ್ಲದೆ, ರಾಜಕೀಯ ಇಲ್ಲದೇ ಮಾಡೋ ಹಾಗಿಲ್ಲ ಎಂಬುದೇ ಸತ್ಯ. ಬೃಹತ್ತಾಗಿರುವ ಕತ್ತಲು ಪ್ರಪಂಚ ಅದನ್ನು ಅಂಟಿಕೊಂಡಿದೆ. ಬಹುಪಾಲು ಕಪ್ಪು ಹಣವನ್ನು ನಗದು ರೂಪದಲ್ಲಿ ಮುಚ್ಚಿಡಲಾಗಿತ್ತು. ಕಾಗದ ನೋಟುಗಳಲ್ಲಿ ಬಹು ಪಾಲು ಹೀಗೆ ಸ್ಥಗಿತವಾಗಿತ್ತು. ಸ್ಥಗಿತವಾಗುವ ಸನ್ನಿವೇಶ ಎಂಬುದು ದೇಶದ ಆರ್ಥಿಕತೆ ಮೇಲೆ ದೊಡ್ಡ ಹೊಡೆತ. ಹೂಡಿಕೆಯೇ ಸ್ಥಗಿತಗೊಂಡು ಕೈಗಾರಿಕೆಗಳು ಉಸಿರುಗಟ್ಟುವ ಸ್ಥಿತಿಯನ್ನು ಎದುರಿಸುತ್ತಿದ್ದವು. ಕೆಲ ವರ್ಷಗಳಿಂದ ಹಲವು ಉದ್ಯಮಿಗಳು, ಅರ್ಥಶಾಸ್ತ್ರಜ್ಞರು ಈ ಕುರಿತು ಗಮನಸೆಳೆದಿದ್ದಾರೆ. ಐ.ಕೆ.ಗುಜ್ರಾಲ್ ಅವರ ಕಾಲಾವಧಿಯಲ್ಲಿ ನೋಟಿಗೆ ಕಾಗದ ಕೊಂಡುಕೊಳ್ಳುವುದರಲ್ಲಿ ಮಾಡಲಾಗಿದ್ದ ಒಂದು ದೊಡ್ಡ ತಪ್ಪು, ಹತ್ತು ವರ್ಷಗಳ ಕಾಲ ಮುಂದುವರೆಯಿತು.
ಪಾಕಿಸ್ತಾನ, ಚೀನಾ, ಮುಂತಾದ ರಾಷ್ಟ್ರಗಳೇ ಕಳ್ಳ ನೋಟುಗಳನ್ನು ಭಾರತದ ಆರ್ಥಿಕತೆಗೆ ಇಳಿಸಿದ ಸಮಯದಲ್ಲಿ ನಮ್ಮ ಸರ್ಕಾರಗಳು ಏನು ಮಾಡುವುದಕ್ಕೆ ಆಗಲಿಲ್ಲ. ಹವಾಲ ದುಡ್ಡನ್ನು ನಿಯಂತ್ರಿಸುವಲ್ಲಿಯೂ ನಮ್ಮ ವ್ಯವಸ್ಥೆ ಸಫಲವಾಗಲಿಲ್ಲ. ಯಾವುದೇ ವ್ಯವಹಾರಕ್ಕೂ ತೆರಿಗೆ ಪಾವತಿಸದೇ ಇಲ್ಲಿಗೆಯೇ ವಾಪಸ್ಸು ಬರುವ ನಮ್ಮ ಆರ್ಥಿಕತೆ ದೊಡ್ಡ ನಷ್ಟವನ್ನು ಎದುರಿಸುವಂತಾಯಿತು. ಕಳ್ಳ ನೋಟು, ಹವಾಲವನ್ನು ನಿಯಂತ್ರಿಸದೇ ಒಂದು ಹೆಜ್ಜೆಯೂ ಸಹ ಮುಂದಿಡುವ ಹಾಗಿಲ್ಲ ಎನ್ನುವ ಪರಿಸ್ಥಿತಿ ಬಂದು ಐದು ವರ್ಷಗಳೇ ಕಳೆದುಬಿಟ್ಟವು. ಆದರೆ ಮನಮೋಹನ್ ಸಿಂಗ್ ಅವರ ದುರ್ಬಲವಾದ ಸರ್ಕಾರಕ್ಕೆ ಯಾವ ಕ್ರಮಗಳನ್ನು ಕೈಗೊಳ್ಳಲು ಆಗಲಿಲ್ಲ. ಅನಾಣ್ಯೀಕರಣದ ಯೋಜನೆ ಮೂರು ವರ್ಷಗಳ ಹಿಂದೆಯೇ ಆರಂಭವಾದದ್ದು ಎಂಬುವುದನ್ನು ಯಾರಾದರೂ ಅರ್ಥೈಸಿಕೊಳ್ಳುತ್ತಾರೆ. ಜನ ಧನ್ ಮುಂತಾದ ಯೋಜನೆಗಳ ಮೂಲಕ ಭಾರತದಲ್ಲಿ ಬಹುಶಃ ಎಲ್ಲರಿಗೂ ಕಡ್ಡಾಯವಾಗಿ ಬ್ಯಾಂಕ್ ಖಾತೆ ಮತ್ತು ಡೆಬಿಟ್ ಕಾರ್ಡ ಕೊಡಲಾರಂಭಿಸಿದಾಗಿನಿಂದಲೇ ಈ ಯೋಜನೆ ಪ್ರಧಾನಿಗಳಿಗೆ ಇರಬೇಕೆನಿಸುತ್ತದೆ. ಆಗ ‘ಅನ್ನವೂ ಇಲ್ಲದವರಿಗೆ ಬ್ಯಾಂಕು ಖಾತೆಯೇ?’ಎಂದು ನಮ್ಮ ಬುದ್ಧಿಜೀವಿಗಳು ವ್ಯಂಗ್ಯವಾಡಿದ್ದರು. ಅವರೇ ಇಂದು ಬಡವರಿಗೆ ಬ್ಯಾಂಕು ಖಾತೆ ಯಾವುದು? ಎಂದು ರಾಗ ಹಾಡುತ್ತಿದ್ದಾರೆ.
ಹಾಗೆ ಬರುವ ಏಪ್ರಿಲ್‍ನಿಂದ GST ಸಹ ಜಾರಿಗೆಗೊಳ್ಳುತ್ತದೆ. ಭಾರತದ ಕೈಗಾರಿಕೆ- ವಾಣಿಜ್ಯ ಅರಿತವರಿಗೆ ಗೊತ್ತಾಗುತ್ತದೆ. GST ಬಹುದೊಡ್ಡ ಆರ್ಥಿಕ ಸುಧಾರಣೆಯೆಂದೇ ಹೇಳಲಾಗುತ್ತಿದೆ. ತೆರಿಗೆಯ ಎಲ್ಲಾ ಲೆಕ್ಕಗಳು ಒಂದೇ ಸ್ಥಳದಲ್ಲಿ ಸಂಗ್ರಹವಾಗುತ್ತದೆ. ಇದು ತೆರಿಗೆ ಕಳ್ಳರಿಗೆ ಇನ್ನಷ್ಟು ಬಿಸಿ ತುಪ್ಪವಾಗುವುದರಲ್ಲಿ ಸಂಶಯವಿಲ್ಲ. ನಿಜವಾಗಿ ಇಂದು ಉದ್ಯಮಿಗಳೇ GST ಗೆ ಸಹಕರಿಸುತ್ತಾರೆ. ಅವರು ಬೆಳೆಸುವ ಭೂತವೇ ರಾಜಕಾರಣಿಗಳು ಮತ್ತು ಅಧಿಕಾರಿಗಳು. ಆದರೆ ಇಂದು ಅವರು ತೆರಿಗೆ ಸಲ್ಲಿಸುವದಕ್ಕಿಂತ ಬಹು ಪಾಲು ಹಣವನ್ನು ಇವರಿಗೆ ಮಾಮೂಲಾಗಿ ಕೊಡಬೇಕಾಗುತ್ತದೆ. GST ಬಂದು ಸರ್ಕಾರ ತೆರಿಗೆ ಸಂಗ್ರಹಿಸುವ ಕ್ರಮ ಸುಲಭವಾಗಿಸಿದರೆ, ಅದು ದೇಶದ ಆರ್ಥಿಕತೆಗೆ ಮತ್ತೊಂದು ಕೊಡುಗೆ.
ಅನಾಣ್ಯೀಕರಣದಿಂದ ಏನೆಲ್ಲ ಆಗಬಹುದು?
1. ಬ್ಯಾಂಕ್ ಆಧಾರಿತ ವ್ಯವಹಾರವನ್ನು ಉತ್ತೇಜಿಸಿ ನಗದು ರಹಿತ ವ್ಯವಹಾರಕ್ಕೆ ಪ್ರೊತ್ಸಾಹಿಸುತ್ತದೆ. ಇದು ತೆರಿಗೆ ಸಂಗ್ರಹಕ್ಕೆ ಸಹಕಾರಿ. ಇದು ಸಂಪೂರ್ಣವಾಗಿ ನಡೆಯದೇ ಹೋದರೂ, ಶೇಕಡ 30ರಷ್ಟು ಯಶಸ್ವಿಯಾದರೂ ಬಹುದೊಡ್ಡ ಲಾಭವೇ.
2. ಕಪ್ಪು ನೋಟುಗಳಾಗಿಯೇ ಸ್ಥಗಿತಗೊಂಡಿದ್ದ ಹಣ, ಯಾವ ಬಗೆಯಲ್ಲಾದರೂ ಬಳಕೆಗೆ ಬರುತ್ತದೆ ಅದು ಆರ್ಥಿಕತೆಗೆ ಸಹಕಾರಿ.
3. ಕಳ್ಳ ನೋಟುಗಳಲ್ಲಿ ಹೆಚ್ಚು ಭಾಗ ಇಲ್ಲದೇ ಹೋಗುತ್ತವೆ. ಮತ್ತು ಅವು ಬರುವುದಕ್ಕೆ ಕೆಲವು ವರ್ಷಗಳಾಗಬಹುದು. ಅದುವರೆಗೆ ಆರ್ಥಿಕತೆ ಉಸಿರಾಡಲು ಸಾಧ್ಯ.
4. ತೆರಿಗೆ ಸಲ್ಲಿಸದೇ ಇರುವ ಕಳ್ಳಹಣದಲ್ಲಿ ಶೇಕಡ 20ರಷ್ಟು ಅದರೂ ತೆರಿಗೆಗೆ ಒಳಗಾದ ಹಣವಾಗಿ ಬದಲಾಗಬಹುದು. ಇಂದಿನ ಸನ್ನಿವೇಶದಲ್ಲಿ ಅದೇ ಬಹುದೊಡ್ಡ ಗೆಲುವು. ಆದ್ದರಿಂದ ಅನಾಣ್ಯೀಕರಣ ಒಂದು ನಿರ್ದಾಕ್ಷಿಣ್ಯವಾದ ಅಗತ್ಯ ಕ್ರಮ. ಎಡಪಂಥೀಯ ಸರ್ಕಾರಗಳೇ ಇಂತಹ ಕ್ರಮಕ್ಕೆ ಮುಂದಾಗುತ್ತವೆ ಎಂದುಕೊಳ್ಳುವಾಗ, ಬಲಪಂಥೀಯ ಸರ್ಕಾರದ ಮಹತ್ತರ ಕ್ರಮಕ್ಕೆ ಎಡಪಂಥೀಯರು ಬೀದಿಗೆ ಬಂದು ವಿರೋಧಿಸಿದ್ದು ಬಹುದೊಡ್ಡ ಅಚ್ಛರಿ!
ಇಂದು ಅನಾಣ್ಯೀಕರಣವನ್ನು ವಿರೋಧಿಸುವವರಲ್ಲಿ, ಕಪ್ಪು ಹಣ ಹೊಂದಿರುವವರು ತೆಗಳುವುದು ಸ್ವಾಭಾವಿಕವೇ! ಇನ್ನೊಂದು ಗುಂಪಿನವರು ಬರೀ ಮೋದಿಯನ್ನ ಸುಮ್ಮನೆ ವಿರೋಧಿಸುವವರು. ಅದೊಂದು ಮಾನಸಿಕ ಕಾಯಿಲೆಯಾಗಿಯೇ ಇಂದು ಬೆಳದಿದೆ! ಇದನ್ನು ಹೇಳಿದ ಕೊಡಲೇ ಕೆಲವರು, ‘ಮೋದಿ ಹೊರ ದೇಶದಲ್ಲಿರುವ ಕಪ್ಪುಹಣವನ್ನು ವಾಪಸ್ಸು ತರುವುದಾಗಿ ಹೇಳಿದ್ದರು. ಅದು ಏನಾಯಿತು? ಯಾಕೆ ಈ ಬಗ್ಗೆ ಮಾತಾಡುತ್ತಿಲ್ಲ?’ ಎಂದು ಪ್ರಶ್ನಿಸುತ್ತಾರೆ. ಕಪ್ಪುಹಣವನ್ನು ಬಿಡಿಸಿ ವಾಪಸ್ಸು ತರುವ ತಮ್ಮ ಯೊಜನೆಯನ್ನು ಹೇಳಿ ಅವರು ಅಧಿಕಾರಕ್ಕೆ ಬಂದರು. ಅದನ್ನೆ ಮಾಡುತ್ತಿದ್ದಾರೆ. ಆದರೆ ಕೆಲವರು ಮಾಧ್ಯಮವನ್ನು ದಾಳವಾಗಿಸಿಕೊಂಡು, ಮೋದಿಯನ್ನು ರಾಜಕೀಯದಿಂದಲೇ ನಿವೃತ್ತಿಗೊಳಿಸಲು ಸಂಚು ರೂಪಿಸುತ್ತಿದ್ದಾರೆ. ಹೊರದೇಶದ ಕಪ್ಪು ಹಣಕ್ಕೆ ಹೋಲಿಸಿದರೆ ಇಲ್ಲಿರುವ ಕಪ್ಪುಹಣ ತುಂಬಾ ಅಲ್ಪ ಪ್ರಮಾಣದ್ದೆಂದು ಎಲ್ಲರಿಗೂ ಗೊತ್ತು. ಹೊರದೇಶದ ಕಪ್ಪು ಹಣದ ಬಗ್ಗೆ ಮಾತ್ರ ಮಾತಾಡಲು ಯಾಕೆ ಇಚ್ಚಿಸುತ್ತೇವೆ? ಅದು ಅಲ್ಲೆಲ್ಲೋ ಇದೆ. ನಮ್ಮ ಸುತ್ತಲೂ ಇರುವ ಕಪ್ಪು ಹಣ ನಮಗೆ ದೊಡ್ಡ ಸಮಸ್ಯೆಯೇ ಅಲ್ಲ ಎಂದು ನಾವು ತಿಳಿದಿದ್ದೆವೆ ಮತ್ತು ಹಾಗೇ ಜನರನ್ನು ನಂಬಿಸಲು ಕೆಲವರು ಪ್ರಯತ್ನಿಸುತ್ತಿದ್ದಾರೆ. ಹೊರದೇಶದಲ್ಲಿರುವ ಕಪ್ಪು ಹಣವನ್ನು ತರುವುದು ನೂರಾರು ಅಂತರಾಷ್ಟೀಯ ಕಾನೂನುಗಳಿಂದ ಆಗಬೇಕಾದ ಸಂಕೀರ್ಣವಾದ ಕ್ರಮ. ಅದನ್ನು ತಂದ ನಂತರವೇ ಇಲ್ಲಿ ಕೈ ಹಾಕಬೇಕು ಅಲ್ಲಿಯವರೆಗೆ ಇದನ್ನು ಬಿಟ್ಟು ಬಿಡಬೇಕು ಎಂಬುದಾದರೆ ಇವರ ಉದ್ದೇಶವಾದರೂ ಏನು? ‘ನೋಟು ಅನಾಣ್ಯೀಕರಣದಿಂದ ಕಪ್ಪು ಹಣ ಇಲ್ಲವಾಗುತ್ತದೆಯೇ?’ ಎಂಬ ಪ್ರಶ್ನೆಯನ್ನು ಎಲ್ಲೆಡೆ ಕೇಳಲಾಗುತ್ತಿದೆ. ಸಂಪೂರ್ಣವಾಗಿ ಇಲ್ಲವಾಗುವುದಿಲ್ಲವೆಂದಿಟ್ಟುಕೊಂಡರೂ, ಸರ್ಕಾರ ಆ ಕುರಿತು ಯಾವುದೇ ಕ್ರಮ ತೆಗೆದುಕೊಳ್ಳದೇ, ಕೈಕಟ್ಟಿ ಕುಳಿತುಕೊಳ್ಳಬೇಕೆ? ಇದು ಭ್ರಷ್ಟರಲ್ಲಿ ಭೀತಿಯನ್ನಂತೂ ಸೃಷ್ಟಿಸಿದೆ. ಇದು ಒಂದು ರೀತಿಯಲ್ಲಿ ಅನಾಣ್ಯೀಕರಣದ ಯಶಸ್ಸೇ!
ಈ ಕಪ್ಪು ಹಣದ ವಿರುದ್ಧದ ಹೋರಾಟವನ್ನೂ ಇಂದು ಎಡಪಂಥೀಯ ಬುದ್ಧಿಜೀವಿಗಳು ಏಕೆ ವಿರೋಧಿಸುತ್ತಿದ್ದಾರೆಂದರೆ, ಒಂದು ಅವರು ಪ್ರಗತಿಪರಂತೆ ಕಾಣಿಸಿಕೊಳ್ಳುವ ಚಪಲ! ಇವರಲ್ಲಿ ಯಾರಿಗೂ ಎಡಪಂಥೀಯ ಆರ್ಥಿಕತೆಯಲ್ಲಿ ಆಸಕ್ತಿ ಇಲ್ಲ! ಮತ್ತು ಅವರು ಬಂಡವಾಳಶಾಹಿ ಆರ್ಥಿಕತೆಯಲ್ಲಿಯೇ ತೇಲಿ ವಿಹರಿಸುತ್ತಿದ್ದಾರೆ. ಮಾತಾಡುವಾಗ ಮಾತ್ರ ಬಣ್ಣ ಬಣ್ಣದ ಮಾತುಗಳಿಂದ ಬಡವರಪರ, ಜೀವಪರವೆಂದೆಲ್ಲಾ ಆಕಷರ್ಕವಾಗಿ ಅಬ್ಬರಿಸುತ್ತಾರೆ. ಕಣ್ಣೀರು ಸುರಿಸುತ್ತಾರೆ. ಎಂತಹ ಒಳ್ಳೇ ಮನಸ್ಸು ಎಂದು ನಾವು ಕರಗಬೇಕು! ಎರಡನೆಯದು, ಮೋದಿ ದ್ವೇಷ! ಅದಕ್ಕೆ ರಾಜಕೀಯ ಕಾರಣಗಳಿವೆ. ಎಡಪಂಥೀಯರಿಗೂ, ದ್ರಾವಿಡ ಜನಾಂಗದ ಪರವಾದಿಗಳಿಗೂ, ತಮಿಳು ರಾಷ್ಟ್ರವಾದವನ್ನು ಮಾಡಿಟ್ಟು ಭಾರತವನ್ನು ಬೇರ್ಪಡಿಸುವವರಿಗೂ ಅದು ಒಂದು ಮಾನಸಿಕ ಖಾಯಿಲೆಯಾಗಿಯೇ ಪರಿಣಿಮಿಸಿದೆ.ಮೋದಿಯವರನ್ನು ಉದಾರವಾದ ರಾಜಕಾರಣಿಗಳು ವಿರೋಧಿಸುವುದಕ್ಕೆ ಎಲ್ಲಾ ಕಾರಣವೂ ಇದೆ. ಅದನ್ನು ನಾನು ಒಪ್ಪಬಲ್ಲೆ. ಆದರೆ, ‘ಮೋದಿ ಭಾರತವನ್ನು ನಾಶಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಅವರು ತರುವ ಒಂದೊಂದು ಸುಧಾರಣೆಯೂ ಅಪರಾಧವೆ’ ಎನ್ನುವ ಮನಸ್ಥಿತಿ ಮಾತ್ರ ಅಸಹ್ಯಕರವಾದುದು. ಹಾಗೆ ಹೇಳುವುದಾದರೆ ಅವರನ್ನು ರಾಷ್ಟ್ರ ರಾಜಕಾರಣದವರೆಗೂ ಬೆಳೆಸಿಕೊಂಡು ಬಂದಿದ್ದು ಇಂತಹ ಮನಸ್ಥಿತಿಯೇ! ಉದಾರವಾದಿಗಳ ಈ ಅರ್ಥವಿಲ್ಲದ ಮೋದಿ ದ್ವೇಷವೇ ಇಂದು ಮೋದಿಯವರನ್ನು ಜನ ಇಷ್ಟಪಡಲು ಕಾರಣವಾಗಿದೆ.
ಕೊನೆಯದಾಗಿ, ‘ಮೋದಿಯವರು ಭಾರತವನ್ನು ನಾಶಗೊಳಿಸಲೆಂದೇ ಬಂದವರು’ ಎಂಬ ರೀತಿಯಲ್ಲಿ ಅನೇಕ ಲೇಖನಗಳನ್ನು ನಾನಾ ಪತ್ರಿಕೆಗಳಲ್ಲಿ ನೋಡಿದೆ. ಮೊದಲ ಪ್ಯಾರ ಓದಿದ ಕೂಡಲೇ, ಕೆಳಗೆ ನೋಡುವೆ ಬರೆದವರು ಯಾರೆಂದು? ಹೆಚ್ಚಾಗಿ ಮುಸ್ಲಿಂ ಹೆಸರು ಇರುವುದು. ಕೆಳಗಡೆ, ಅರ್ಥಶಾಸ್ತ್ರಜ್ಞರು, ರಾಜಕೀಯ ವಿಶ್ಲೇಷಕರು, ಸಂಶೋಧಕರು, ಪತ್ರಕರ್ತರು, ಲೇಖಕರು, ಓದುಗರು ಎಂಬ ಹಲವು ಗುರುತುಗಳು ಬೇರೆ! ಆದರೆ, ಇವರೆಲ್ಲರ ಅಭಿಪ್ರಾಯವೂ ಭಾವನೆಯೂ ಒಂದೇ! ಮೋದಿಯವರನ್ನು ಮುಸ್ಲಿಂರು ದ್ವೇಷಿಸುವುದನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ಆದರೆ, ಅನಾಣ್ಯೀಕರಣವೊಂದು ಆರ್ಥಿಕ ಸುಧಾರಣೆಯಾಗಿರುವಾಗ, ದ್ವೇಷದಿಂದಲೇ ತೀರ್ಮಾನಿಸಬೇಕೆ? ಆರ್ಥಿಕ ಕ್ರಮ, ಚಿಂತನೆ, ಅನುಷ್ಟಾನಗಳಲ್ಲಿ ಭಿನ್ನಾಭಿಪ್ರಾಯವಿರುವುದು ಸರಿ, ಒಪ್ಪಿಕೊಳ್ಳುತ್ತೆನೆ. ಆದರೆ ದಿನಪತ್ರಿಕೆಗಳ ತುಂಬಾ ಅನಾಣ್ಯೀಕರಣದ ವಿರುದ್ಧವಾಗಿಯೇ ಲೇಖನಗಳು ಬರುವುದಕ್ಕೆ ಏನು ಕಾರಣ? ಈ ಅನಾಣ್ಯೀಕರಣದ ಹಿಂದಿರುವ ಸಕರಾತ್ಮಕ ಅಂಶಗಳ ಕುರಿತಾಗಿ ಯಾವ ಪತ್ರಿಕೆಗಳು ಲೇಖನವನ್ನು ಪ್ರಕಟಿಸದಿರುವುದಕ್ಕೆ ಕಾರಣವೇನು? ಒಂದು ಆರ್ಥಿಕ ವಿದ್ಯಮಾನವನ್ನು ಸಹ ನಾವು ಮೂಲಭೂತವಾದ ಧಾರ್ಮಿಕ ದೃಷ್ಟಿಕೋನದಿಂದಲೇ ನೋಡಬೇಕೆ?
*ಅಂತಿಮವಾಗಿ ಮತ್ತೊಮ್ಮೆ ಹೇಳುತ್ತೇನೆ. ಇದೊಂದು ಬಲಪಂಥೀಯ ಸರ್ಕಾರ. ಮೋದಿಯವರ ಆರ್ಥಿಕ ಸುಧಾರಣಾ ಕ್ರಮಗಳು ಯಶಸ್ವಿಯಾಗಬಹುದೋ ಇಲ್ಲವೊ ಎಂಬುದರ ಬಗೆಗಿನ ಆರೋಗ್ಯಕರ ಚರ್ಚೆ ಒಳ್ಳೆಯದೇ. ಚರ್ಚಿಸುವವರು ಕಪ್ಪು ಹಣ, ಭ್ರಷ್ಟಾಚಾರದ ನಿಯಂತ್ರಣದ ಪರ್ಯಾಯ ಮಾರ್ಗಗಳನ್ನು ಮುಂದಿಡುವುದು ಉತ್ತಮ. ಆದರೆ ಭಾರತೀಯ ಆರ್ಥಿಕತೆ ನೆಲಕಚ್ಚಿದೆಯೆಂದು, ಮತ್ತು ಅದಕ್ಕೆ ಅನಾಣ್ಯೀಕರಣವೇ ಕಾರಣವೆಂದು ಪ್ರತಿ ಗುಂಪಿನವರು ಮಾಡುತ್ತಿರುವ ಕೆಳಮಟ್ಟದ ಪ್ರಚಾರ, ಅವೇಶದಿಂದ ಮಾಡುತ್ತಿರುವ ಸುಳ್ಳು ಪ್ರಚಾರ, ಭೀತಿಯನ್ನು ಎಬ್ಬಿಸುವ ಪ್ರಯತ್ನಗಳು ಯಾವ ಕಾರಣಕ್ಕೂ ಒಪ್ಪುವಂಥದ್ದಲ್ಲ. ಅನಾಣ್ಯೀಕರಣದಂಥ ಚಾರಿತ್ರಿಕ ಸನ್ನೀವೇಶದಲ್ಲಿ ಬುದ್ಧಿಜೀವಿಗಳು ಕಪ್ಪು ಹಣದ ಪರವಾಗಿ ನಿಂತಿರುವುದು ನಾಚಿಕೆಗೇಡಿನ ಸಂಗತಿ. ಇದಕ್ಕೆ ಎಡಪಂಥೀಯ ಪಕ್ಷಗಳು ಬೆಂಬಲ ನೀಡಿದ್ದು ಅವುಗಳ ಸಣ್ಣತನಕ್ಕೆ ಸಾಕ್ಷಿ. ಇದು ಎಡಪಂಥೀಯರ ಮಹಾ ನೈತಿಕತೆಯ ಅಧಃ ಪತನವೇ ಸರಿ!