ವಿಷಯದ ವಿವರಗಳಿಗೆ ದಾಟಿರಿ

ನವೆಂಬರ್ 8, 2017

2

ರಾಜೀವ್ ಮಲ್ಹೋತ್ರ ಸಂವಾದ : ಅಯೋಧ್ಯೆ,ಸತಿ ಪದ್ಧತಿ ಮತ್ತಿತರ ವಿಷಯಗಳು – 1

‍ನಿಲುಮೆ ಮೂಲಕ

ಆಂಗ್ಲಮೂಲ : ಶ್ರೀ ರಾಜೀವ್ ಮಲ್ಹೋತ್ರ                                              

ಕನ್ನಡ ಅನುವಾದ : ಶ್ರೀ ಹುಲ್ಲುಮನೆ ಶ್ರೀಧರ

ಈ ಚರ್ಚೆಯಲ್ಲಿ ನಾನು ದೆಹಲಿ ವಿಶ್ವವಿದ್ಯಾಲಯದಲ್ಲಿ ಇತಿಹಾಸ ಮತ್ತು ರಾಜ್ಯಶಾಸ್ತ್ರವಿಭಾಗದ ಸಹ ಪ್ರಾಧ್ಯಾಪಕರಾಗಿರುವ ಶ್ರೀಮತಿ ಮೀನಾಕ್ಷಿ ಜೈನ್‌ರೊಂದಿಗೆ ಅವರ ಕೃತಿಗಳ ಬಗ್ಗೆ ವಿಚಾರಮಾಡಲಿದ್ದೇನೆ. ನಾನು ಶ್ರೀಮತಿ. ಮೀನಾಕ್ಷಿ ಜೈನ್‌ರನ್ನು ಸುಮಾರು ಎರಡು ದಶಕಗಳಿಂದ ಬಲ್ಲೆ. ಹಾಗೂ ಅವರನ್ನು ಇಂದಿನ ಭಾರತದಲ್ಲಿ ಒಬ್ಬ ಇತಿಹಾಸ ಮತ್ತು ರಾಜಕೀಯ ವಿಷಯಗಳ ಉತ್ತಮ ವಿದ್ವಾಂಸರೆಂದು ಗೌರವಿಸುತ್ತೇನೆ. ಅವರು ದೆಹಲಿಯಲ್ಲಿ ಶಲ್ಡನ್ ಪೊಲ್ಲಾಕ್‌ನ್ನು ಕುರಿತು ನಡೆದ ೨ನೇ ಸ್ವದೇಶೀ ಇಂಡಾಲಜಿ ಸಮ್ಮೇಳನದಲ್ಲಿ ಭಾಗವಹಿಸಿ, ಒಂದು ಅದ್ಭುತ ಲೇಖನವನ್ನು ಪ್ರಸ್ತುತಪಡಿಸಿದ್ದರು. ಅವರು ಮತ್ತು ನನ್ನಲ್ಲಿ ಇರುವ ಒಂದು ಸಾಮಾನ್ಯ ಅಂಶವೆಂದರೆ ಇಬ್ಬರೂ ನಮ್ಮೊಡನೆ ವಾದ ಮಾಡುವ, ನಮ್ಮನ್ನು ಉಪೇಕ್ಷೆ ಮಾಡುವ ಅಥವಾ ನಮ್ಮ ಹೆಸರೆತ್ತಿ ದೂಷಿಸುವ ಭಾರತೀಯ ಎಡಪಂಥದವರನ್ನು ಟೀಕಿಸಿದ್ದೇವೆ. ಕಳೆದ ಅನೇಕ ವರ್ಷಗಳ ಕಾಲ ಅವರ ಸಂಪರ್ಕವಿರಲಿಲ್ಲ, ಹಾಗಾಗಿ ಈ ಅವಕಾಶವು ನಮಗೆ ಬಹಳ ದಿನಗಳ ವಿಚಾರ ವಿನಿಮಯಕ್ಕೆ ಒದಗಿಬಂದಿದೆ ಎಂದು ತಿಳಿದಿದ್ದೇನೆ. ನಾವು ಭಾರತದ ಶೈಕ್ಷಣಿಕ ವಲಯದಲ್ಲಿ ಎಡಪಂಥೀಯರ ಪ್ರಾಬಲ್ಯ, ಅಯೋಧ್ಯೆ-ಬಾಬರಿ ಮಸೀದಿಯ ವಿವಾದ, ’ಸತಿ’ ಪದ್ಧತಿಯ ಬಗ್ಗೆ ಇರುವ ತಪ್ಪು ತಿಳುವಳಿಕೆಗಳು, ಮೂರ್ತಿಭಂಜನೆ ಮತ್ತು ಸ್ವದೇಶೀ ಇಂಡಾಲಜಿಯ ಸಂಶೋಧನಾ ವಲಯ ಇತ್ಯಾದಿ ಹಲವಾರು ವಿಚಾರಗಳನ್ನು ಚರ್ಚಿಸಿದೆವು.

ಭಾರತದ ಶೈಕ್ಷಣಿಕ ವಲಯದಲ್ಲಿ ಎಡಪಂಥೀಯರ ಪ್ರಾಬಲ್ಯ:

ಭಾರತೀಯ ಶಿಕ್ಷಣವಲಯದಲ್ಲಿ ಬುದ್ಧಿವಂತರಿಗೆ ನೀಡುವ ಪ್ರೋತ್ಸಾಹಧನದ ವಿಚಾರವಾಗಿ ಚರ್ಚಿಸುವಾಗ ಎಡಪಂಥದ ಪ್ರಬಲ ವಿದ್ವಾಂಸರಾದ ಇರ್ಫಾನ್ ಹಬೀಬ್ ಮತ್ತು ರೋಮಿಲಾ ಥಾಪರ್‌ರ ಅಡಿಯಲ್ಲಿ ಶಿಕ್ಷಣವಲಯದಲ್ಲಿ ಉಸಿರುಕಟ್ಟಿಸುವ ವಾತಾವರಣವು ಇತ್ತು ಎಂದು ಅವರು ಅಭಿಪ್ರಾಯಪಟ್ಟರು. ಅವರು ಶಿಕ್ಷಣವಲಯದಲ್ಲಿ ಸಹಾಯಧನವನ್ನು ನೀಡುವ ಎಲ್ಲ ಸಂಸ್ಥೆಗಳ ಮೇಲೆಯೂ ಮತ್ತು ಸಂಶೋಧನೆ ಮಾಡಲು ಬರುವ ಎಲ್ಲ ವಿದ್ಯಾರ್ಥಿಗಳೂ ಇವರ ಅಡಿಯಲ್ಲಿ, ಇವರ ದೃಷ್ಟಿಕೋನದ ಪ್ರಕಾರವೇ ಕೆಲಸ ಮಾಡುವಂತೆ ತಮ್ಮ ಸಂಪೂರ್ಣ ನಿಯಂತ್ರಣವನ್ನು ಚಲಾಯಿಸಿಕೊಂಡಿದ್ದರು. ಹೀಗಾಗಿ ಇವರ ವಿಚಾರಗಳನ್ನು ಬೆಂಬಲಿಸದವರಿಗೆ ಅಥವಾ ಬೇರೆ ಆಲೋಚನೆಯ ಧಾಟಿ ಹೊಂದಿದವರಿಗೆ ಯಾವ ಇತಿಹಾಸಕಾರನಾಗಿ ಅಥವಾ ವಿದ್ವತ್ತಿನಲ್ಲಿಯೂ ತಮ್ಮ ಗುರುತನ್ನು ಉಳಿಸಲು ದುಸ್ತರವಾಗುತ್ತಿತ್ತು. ಯಾರಾದರೂ ವಿಭಿನ್ನವಾದ ಅಥವಾ ವೈರುಧ್ಯದ ದೃಷ್ಟಿಕೋನವನ್ನು ಹೊಂದಿದ್ದರೆ ಅವರು ತಮ್ಮದೇ ಆದ ಮಾರ್ಗವನ್ನು ರೂಪಿಸಿಕೊಳ್ಳ ಬೇಕಾಗಿತ್ತು. ಆ ಮಾರ್ಗವು ಏಕಾಂಗಿಯಾಗಿದ್ದು ಅವರು ತಮ್ಮಷ್ಟಕ್ಕೆ ತಾವೇ ನಡೆಯಬೇಕಾಗಿತ್ತು.

ಭಾರತದ ಶಿಕ್ಷಣಕ್ಷೇತ್ರದಲ್ಲಿ ಎಡಪಂಥದ ಪ್ರಾಬಲ್ಯವು ಆರಂಭವಾದದ್ದು ಕಾಂಗ್ರೆಸ್ ಪಕ್ಷವು ತನ್ನ ಬಲವನ್ನು ಕಳೆದುಕೊಂಡು ’ಸಮ್ಮಿಶ್ರ ಸರ್ಕಾರ’ ರಚನೆಯಾದ ಕಾಲದಲ್ಲಿ. ಆ ಸಮಯದಲ್ಲಿ ಕಾಂಗ್ರೇಸ್ ಪಕ್ಷಕ್ಕೆ ಬೆಂಬಲಿಗರ ಅಗತ್ಯವಿದ್ದು ಅವರು ’ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ’ವನ್ನು ಆಯ್ದುಕೊಂಡರು. ಎಡಪಂಥೀಯರು ತಮ್ಮ ಸೈದ್ಧಾಂತಿಕ ಸ್ಥಾನವನ್ನು ಮುನ್ನುಗ್ಗಿಸುವಲ್ಲಿ ಬಹಳ ಚಾಣಾಕ್ಷರಾಗಿದ್ದರು. ಅಷ್ಟೇ ಅಲ್ಲದೆ ತಮ್ಮ ಎಡಪಂಥೀಯ ದೃಷ್ಟಿಕೋನದಿಂದ ಇತಿಹಾಸವನ್ನು ಭಾರತದಲ್ಲಿ ತಿದ್ದಲು ಶಿಕ್ಷಣ ಕ್ಷೇತ್ರವು ಎಷ್ಟು ಪ್ರಮುಖವೆಂದು ಅರಿತು ಅವರು ತಮಗಾಗಿ ಕೇವಲ ’ಶಿಕ್ಷಣ ಮಂತ್ರಾಲಯ’ವನ್ನು ಕೋರಿಕೊಂಡರು. ಆಗ ಶಿಕ್ಷಣ ಮಂತ್ರಾಲಯವನ್ನು, ಸಿ.ಪಿ.ಐ.ನ ಪ್ರತಿಷ್ಠಿತ ಸದಸ್ಯರಾಗಿದ್ದ ಪ್ರೊ. ನೂರುಲ್ ಹಸ್ಸನ್‌ರಿಗೆ ಒಪ್ಪಿಸಲಾಯಿತು. ಆಗ ಪ್ರೊ. ನೂರುಲ್ ಹಸ್ಸನ್‌ರು ತಮ್ಮ ತಂಡದೊಂದಿಗೆ ಮಾಡಿದ ಮೊದಲ ಕೆಲಸವೆಂದರೆ ಇತಿಹಾಸವನ್ನು ದಾಖಲಿಸಲು ಕಮ್ಯೂನಿಸ್ಟ್ ದೃಷ್ಟಿಕೋನವನ್ನು ಒಪ್ಪಿಕೊಳ್ಳದ ಎಲ್ಲ ಇತಿಹಾಸಕಾರರನ್ನೂ ಅನೂರ್ಜಿತಗೊಳಸಿದರು. ಬಹಳಷ್ಟು ಸಂಶೋಧನೆ ಮಾಡಿದ್ದ ಸಕ್ಷಮರಾದ, ಆರ್. ಸಿ. ಮುಜುಂದಾರ್ ಮತ್ತು ಜದುನಾಥ ಸರ್ಕಾರ್‌ರಂತಹ ಅನೇಕ ಎಡಪಂಥದವರಲ್ಲದ, ಇತಿಹಾಸಕಾರರ ಕೃತಿಗಳನ್ನು ಪಕ್ಕಕ್ಕೆ ಸರಿಸಲಾಯಿತು.

ಉದಾಹರಣೆಗೆ, ಜದುನಾಥ್ ಸರ್ಕಾರ್‌ರು ಭಾರತದ ಇತಿಹಾಸದಲ್ಲಿ ಆಡಳಿತ, ಕೃಷಿಗಳಂತಹ ಅನೇಕ ಸಾಮಾಜಿಕ ವಿಷಯಗಳ ಬಗ್ಗೆ ಮೊಗಲ್ ರಾಜವಂಶದ ವಿಚಾರದಲ್ಲಿ ವ್ಯಾಪಕವಾಗಿ ಪ್ರಯೋಗ ಸಿದ್ಧವಾದ ಅಧ್ಯಯನವನ್ನು ಮಾಡಿದ್ದರು. ಹಾಗಿದ್ದೂ ಎಡಪಂಥೀಯರು ಭಾರತದ ಇತಿಹಾಸವನ್ನು ಕುರಿತ ಸಾಕ್ಷಿಆಧಾರಿತ ಕೆಲಸವೆಲ್ಲವನ್ನೂ ನಗಣ್ಯವೆನ್ನುವಂತೆ ಮಾಡುವ ಪ್ರಯತ್ನ ನಡೆಸಿದರು. ಇತ್ತೀಚಿನ ತಮ್ಮ ಆತ್ಮಕಥೆಯಲ್ಲಿ ವಿದ್ವಾಂಸರಾದ ಜದುನಾಥ್ ಸರ್ಕಾರ್‌ರು ಟಿಪ್ಪಣಿಯಲ್ಲಿ ಇರ್ಫಾನ್ ಹಬೀಬ್‌ರು ತಮ್ಮ ’ಅಗ್ರಗೇರಿಯನ್ ಸಿಸ್ಟಂ ಆಫ್ ಮೊಗಲ್ ಇಂಡಿಯಾ’ {ಮೊಗಲರ ಆಳ್ವಿಕೆಯಲ್ಲಿ ಕೃಷಿ ವ್ಯವಸ್ಥೆ} ಎಂಬ ಪುಸ್ತಕದಲ್ಲಿ ಅವರನ್ನು ಒಂದು ಬಾರಿಯೂ ಉಲ್ಲೇಖಿಸಿಲ್ಲ ಎಂದು ಹೇಳಿದ್ದಾರೆ. ಮುಂದೆ ಎಡಪಂಥೀಯರು ಬರೆದ ವಿವರಣೆಗಳೊಡನೆ ಇದ್ದು ತೊಂದರೆಗೀಡು ಮಾಡುವ ಸತ್ಯಘಟನೆಗಳಿಂದಾಗಿ ಇಕ್ಕಟ್ಟನ್ನು ಎದುರಿಸುವ ಪ್ರಮೇಯವೇ ಬಾರದಂತೆ ಎಡಪಂಥದವರಲ್ಲದ ಇತಿಹಾಸಕಾರರನ್ನು ಇತಿಹಾಸದ ಪುಟಗಳಿಂದ ವ್ಯವಸ್ಥಿತವಾಗಿ ಅಳಿಸಿಹಾಕಲಾಗಿದೆ.

ಎಡಪಂಥದವರಲ್ಲದ ವಿದ್ವಾಂಸರಿಗೆ ಶೈಕ್ಷಣಿಕವಾಗಿ ಮುನ್ನಡೆಯುವುದು ಅಥವಾ ಅವರ ಸಂಶೋಧನಾ ಗ್ರಂಥವನ್ನು ಪ್ರಕಟಿಸುವುದು ಅತ್ಯಂತ ದುಸ್ತರವಾಗಿದೆ. ಅವರು ಯಾವ ಪ್ರಕಾಶಕನಲ್ಲಿ ಹೋದರೂ ಅವರ ಶೋಧಗ್ರಂಥವನ್ನು ವಿಮಶೆಗೆ ನೀಡಬೇಕಾಗಿರುತ್ತದೆ, ಆ ವಿಮರ್ಶಕರು ಒಳ್ಳೆಯ ವಿದ್ವಾಂಸರಾಗಿರುತ್ತಾರೋ ಇಲ್ಲವೋ ಅವರು ಎಡಪಂಥೀಯರಾಗಿದ್ದು ಪುಸ್ತಕ ಪ್ರಕಟಣೆಯನ್ನು ಮಾಡದೆಯೇ ಹಾಗೆಯೇ ಉಳಿಸಿಕೊಳ್ಳುವರು.

ನಾನು ಉಳಿದುಕೊಂಡದ್ದಕ್ಕೆ ಕಾರಣ, ನನಗೆ ಯಾರ ಛತ್ರಛಾಯೆಯೂ ಬೇಕಾಗಿರಲಿಲ್ಲ. ನಾನು ಉದ್ಯೋಗವನ್ನರಸುತ್ತಿರಲಿಲ್ಲ. ಒಂದು ಸಣ್ಣ ಕೆಲಸವಿದ್ದು ಅದರ ಆದಾಯ ನನಗೆ ಸಾಕಾಗಿತ್ತು. ನನ್ನ ಸಂಶೋಧನೆಯ ಗ್ರಂಥವನ್ನು ಪ್ರಕಟಿಸಲು ಬೇರೆ ವಿಧಾನವನ್ನು ನಾನು ಪ್ರಯತ್ನಿಸಲೇ ಇಲ್ಲ. ಏಕೆಂದರೆ ಅದು ಅಷ್ಟು ತಲೆನೋವಿನ ಕೆಲಸವಾಗಿತ್ತು ಎಂದು ತಿಳಿದಿದೆ. ನನ್ನ ಒಂದೊಂದು ಪುಸ್ತಕವೂ ಸಂಬಂಧ ಪಟ್ಟ ವಿಷಯದಲ್ಲಿ ಗಮನಾರ್ಹ ವಿಚಾರಗಳನ್ನು ನೀಡಿದೆ ಎಂದು ನನ್ನ ಅನಿಸಿಕೆಯಾಗಿದೆ ಆದರೆ ನನ್ನ ಪ್ರತಿಯೊಂದು ಪುಸ್ತಕವನ್ನೂ ಪ್ರಕಾಶಕರು ಪ್ರಕಟಿಸಲು ನಿರಾಕರಿಸಿದ್ದಾರೆ, ಏಕೆಂದರೆ ಕರಡು ಪ್ರತಿಯನ್ನು ಪರಿಶೀಲಿಸಿದವರು ಎಡಪಂಥೀಯ ವಿದ್ವಾಂಸರಾಗಿದ್ದರು. ಉದಾಹರಣೆಗೆ ಒಂದು ಪುಸ್ತಕದಲ್ಲಿ ಮಧ್ಯಕಾಲದ ಹಿಂದು-ಮುಸ್ಲಿಮರ ಸಂಬಂಧಗಳ ಬಗ್ಗೆ ವಿಸ್ತಾರವಾದ ವಿವರಗಳಿದ್ದವು, ಅದನ್ನು ಒಬ್ಬ ವಿಮಶಕರಿಗೆ ಕಳುಹಿಸಿದ್ದು, ಆ ವಿಮರ್ಷಕರು ಇದು ಬಹಳ ಗಂಭೀರವಾದ ಕೃತಿಯಾಗಿದೆ, ಇದುವರೆಗೆ ಇರುವ ಎಲ್ಲ ಲೇಖನಗಳ ಸಾರವೂ ಇದರಲ್ಲಿದೆ ಆದರೆ ನಾನು ಪ್ರಕಾಶಕರಿಗೆ ಇದು ಹಿಂದುಗಳ ದೃಷ್ಟಿಯಲ್ಲಿ ’ಹಿಂದು-ಮುಸ್ಲಿಂ’ ಸಂಬಂಧಗಳು ಎಂದು ಪ್ರಕಟಿಸಬೇಕೆಂದು ಸಲಹೆ ಮಾಡುತ್ತೇನೆ-ಎಂದರು. ಸಹಜವಾಗಿ ಪ್ರಕಾಶಕರು ಭೀತರಾಗಿ ’ಕ್ಷಮಿಸಿ, ಆದರೆ ಹಿಂದುಗಳ ದೃಷ್ಟಿಯಿಂದ ಎಂದಿರುವುದರಿಂದ ನಾನು ಈ ಪುಸ್ತಕವನ್ನು ಪ್ರಕಟಿಸಲಾರೆ.’ ಎಂದರು.

ನಾನು ಇನ್ನೂ ನಾಲ್ಕು ಪ್ರಕಾಶಕರುಗಳಲ್ಲಿ ನಾಲ್ಕು ಪುಸ್ತಕಗಳ ಪ್ರಕಟಣೆಗಾಗಿ ’ಕೈಬರಹ’ಪ್ರತಿಯನ್ನು ಕಳುಹಿಸಿ ಪ್ರಯತ್ನಿಸಿದಾಗ ಪ್ರತಿ ವ್ಯಕ್ತಿಯೂ ಇದು ಒಮ್ಮುಖವಾದ ಹೇಳಿಕೆಯನ್ನು ನೀಡುವುದರಿಂದ ಗಂಭೀರವಾದ ವಿಚಾರವಾಗಿದ್ದು ನಾವು ಪ್ರಕಟಿಸಲಾರೆವು ಎಂದು ನಿರಾಕರಿಸಿ ಹಿಂದಿರುಗಿಸಿದರು. ವಾಸ್ತವವಾಗಿ ಅಯೋಧ್ಯೆಯ ಮೇಲಿನ ನನ್ನ ಸಂಶೋಧನಾ ಗ್ರಂಥವೂ ನಾಲ್ಕು ಪ್ರಕಾಶಕ ಸಂಸ್ಥೆಗಳಿಂದ ನಿರಾಕರಿಸಲ್ಪಟ್ಟಿತ್ತು, ಆದರೆ ಅದು ಪ್ರಕಟಣೆಯನ್ನು ಕಾಣುವಂತೆ ಮಾಡಿದ್ದು ರಾಮಜನ್ಮಭೂಮಿಯ ಉತ್ಖನನದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದ ಭಾರತೀಯ ಪುರಾತತ್ವ ಇಲಾಖೆಯ ಮಧ್ಯಸ್ತಿಕೆಯೇ ಆಗಿದೆ.

ಅವರು ಕಂಡ ಭಾರತ:

ಮೀನಾಕ್ಷಿ ಜೈನ್‌ರು ’ಅವರು ಕಂಡ ಭಾರತ’ ಎಂಬ ವಿದೇಶೀ ಪ್ರವಾಸಿಗರು ಭಾರತವನ್ನು ಹದಿನೆಂಟನೆ ಶತಮಾನದ ಮಧ್ಯದಿಂದ ಹತ್ತೊಂಭತ್ತನೇ ಶತಮಾನದ ಮಧ್ಯದ ಕಾಲದಲ್ಲಿ ಸಂದರ್ಶಿಸಿದ ಪ್ರವಾಸ ಕಥನವನ್ನು ಮೂರು ಸಂಪುಟಗಳ ಅಧ್ಯಯನವನ್ನು ಮಾಡಿದ್ದಾರೆ. ಈ ಪ್ರವಾಸಿಗರು ಜಗತ್ತಿನ ವಿವಿಧ ಭಾಗಗಳಿಂದ ಭಾರತಕ್ಕೆ ಬಂದಿದ್ದರು. ಅವರು ಯುರೋಪ್‌ನಿಂದ, ಚೈನಾ, ದೂರ ಪೂರ್ವದಿಂದ, ಮುಸ್ಲಿಂ ದೇಶಗಳಿಂದ ಬಂದಿದ್ದರು. ನಿಜ ಹೇಳಬೇಕೆಂದರೆ ಬಹಳಷ್ಟು ಅರಬ್ ಮತ್ತು ಪರ್ಶಿಯನ್ ಬರಹಗಾರರೂ ಇದ್ದರು. ಈ ಸಂಶೋಧನೆಯ ಮೂಲ ಮೂಲಗ್ರಂಥಗಳ ಆಂಗ್ಲ ಅನುವಾದಗಳೇ ಆಗಿದ್ದವು. ಹಾಗೂ ಆವುಗಳನ್ನು ಪ್ರಪಂಚದ ಅನೇಕ ಗ್ರಂಥಾಲಯಗಳಿಂದ ಪಡೆದುಕೊಳ್ಳಲಾಗಿತ್ತು.

ಈ ಎಲ್ಲ ಉಲ್ಲೇಖಗಳಲ್ಲಿಯೂ ಭಾರತಕ್ಕೆ ಬಂದ ಪ್ರವಾಸಿಗರೆಲ್ಲರೂ ಭಾರತದ ಬಗ್ಗೆ ಅತ್ಯಂತ ಗೌರವವನ್ನು ಹೊಂದಿದ್ದರು ಎನ್ನುವುದು ಸ್ಪಷ್ಟವಾಗುತ್ತದೆ. ಅವರು ಭಾರತದಲ್ಲಿ ಕಂಡ ಅದ್ಭುತಗಳ, ಅದು ವಾಣಿಜ್ಯ ಸಮೃದ್ಧಿ, ಸಮಾಜದಲ್ಲಿ ಮಹಿಳೆಯರ ಸ್ಥಾನಮಾನ ಅಥವಾ ಸಮಾಜದ ಹರವಿನಲ್ಲಿ ಎರಡು ಆಯಾಮಗಳಲ್ಲಿ ಇದ್ದ ಜಾತಿ-ವರ್ಣ ವ್ಯವಸ್ಥೆಯ ಬಗ್ಗೆ ಆಶ್ಚರ್ಯವನ್ನು ಹೊಂದಿದ್ದರು. ನಂತರ ಬ್ರಿಟಿಷರು ಬಂದು ಒಂದೇ ಆಯಾಮದಲ್ಲಿ  ಇರುವ ಮೇಲು-ಕೀಳಿನ ಜಾತಿವ್ಯವಸ್ಥೆಯಲ್ಲಿ ನಿಲ್ಲಿಸಿ ಸಮಾಜವನ್ನು ಹಾಳುಗೆಡವಿದರು.

ಪಿಟ್ರೊ ಡೆಲ್ಲ ವಲ್ಲೆ ಎಂಬ ಒಬ್ಬ ಇಟಲಿಯ ಗೌರವಾನ್ವಿತ ವ್ಯಕ್ತಿ ತನ್ನ ಮೊದಲ ಭಾರತ ಪ್ರವಾಸದಲ್ಲಿ ದಕ್ಷಿಣ ಭಾರತವನ್ನು ಸಂದರ್ಶಿಸಿದ್ದನು. ಅವನು ಇರಾನ್‌ನ ಷಾಹ್‌ನನ್ನು ಸಂದರ್ಶಿಸಿ ಪರ್ಷಿಯಾದಿಂದ ಭಾರತಕ್ಕೆ ಬಂದಿದ್ದನು. {ಅವನಿಗೆ ’ದುಭಾಷಿ’ಯಾಗಿ ಬೇರೆ ಭಾಷೆಯವರು ಹೇಳಿದ್ದನ್ನು ಇಟಲಿಯವನಿಗೆ ಭಾಷಾಂತರಿಸಿ ಹೇಳುವವ ಒಬ್ಬನಿದ್ದನು.} ಆ ದಿನಗಳಲ್ಲಿ ದಕ್ಷಿಣ ಭಾರತದಲ್ಲಿ ಸ್ತ್ರೀಪ್ರಧಾನ/ ’ಮೆಟ್ರಿಲೀನಿಯಲ್’ ಸಮಾಜವು ದಕ್ಷಿಣದ ಕೆಲವು ಪ್ರಾಂತ್ಯಗಳಲ್ಲಿ ಪ್ರಚಲಿತವಿತ್ತು. ಪಿಟ್ರೊ ಸಂದರ್ಶಿಸಿದ ಗ್ರಾಮದ ಮುಖ್ಯಸ್ಥರು ಕೂಡ ಮಹಿಳೆಯಾಗಿದ್ದರು. ಅವರು ಸಂದರ್ಶಿಸಿದ ಸಮಯದಲ್ಲಿ ಆಕೆ ಒಂದು ಕಾಲುವೆಯನ್ನು ತೋಡುವ ಕಾರ್ಯವನ್ನು ನಿರೀಕ್ಷಣೆ ಮಾಡುವ ಕೆಲಸದಲ್ಲಿ ವ್ಯಸ್ತರಾಗಿದ್ದರೆಂದೂ ಬರೆದಿದ್ದಾರೆ. ಆಕೆಯನ್ನು ಭೇಟಿಮಾಡಲು ಪಿಟ್ರೊ ನಿರೀಕ್ಷಣಾ ಕ್ಷೇತ್ರಕ್ಕೇ ಹೋಗಿದ್ದು ಆಕೆಯು ಕಾರ್ಯನಿರತರಾಗಿರುವಾಗ ಸಾಮಾನ್ಯರಂತೆ ಉಡುಪು ಧರಿಸಿದ್ದು, ಬರಿಕಾಲಿನಲ್ಲಿಯೇ ಬಂದಿದ್ದರೆಂದಿದ್ದಾರೆ. ಪಿಟ್ರೊರನ್ನು ಆಶ್ಚರ್ಯಚಿಕಿತಗೊಳಿಸಿದ ವಿಚಾರವೆಂದರೆ ಆಕೆಗೆ ಆಗಿನ ಸಮಾಜಿಕ-ವಾಣಿಜ್ಯ ವಿದ್ಯಮಾನಗಳ ಸಂಪೂರ್ಣ ಪರಿಚಯವಿದ್ದುದು. ಆಕೆಯ ಸಮಾಜಿಕ-ವಾಣಿಜ್ಯ ವಿದ್ಯಮಾನಗಳ ತಿಳುವಳಿಕೆಯು ಇರಾನಿನ ಷಾಹ್‌ಗಿಂತ ಕಡಿಮೆಯೇನೂ ಇರಲಿಲ್ಲ.

ವಿದೇಶೀ ಪರ್ಯಟನಕಾರರ ವಿವರವಾದ ಬರವಣಿಗೆಯಿಂದ ತಿಳಿದುಬರುವುದೇನೆಂದರೆ ಅಂದು ಸಮಾಜದಲ್ಲಿ ಬ್ರಾಹ್ಮಣರ ಬಗ್ಗೆ ಅಪಾರ ಗೌರವು ತೋರಿಬರುತ್ತಿತ್ತು. ಇದು ’ಮುಖ್ಯಧಾರೆಯ’ವರು ಬರೆದಿರುವ ಕಥನಕ್ಕೆ ವಿರುದ್ಧವಾಗಿದೆ. ಎಡಪಂಥದ ತಾರತಮ್ಯ ಹೊಂದಿದ ಜಾತಿವಾದಿ ಚಿಂತಕರಾದ ಮುಖ್ಯಧಾರೆಯವರು ಅಂದಿನ ಸಮಾಜದಲ್ಲಿ ಕೆಳಜಾತಿಯವರೆಂದು ಕರೆಸಿಕೊಳ್ಳುವವರು ಬ್ರಾಹ್ಮಣರಿಂದ ದಬ್ಬಾಳಿಕೆಗೆ ಒಳಪಟ್ಟಿದ್ದರೆಂದು ಹೇಳಿದ್ದಾರೆ. ಸುಮಾರು ೧೭೬೬ರಲ್ಲಿ ಮದ್ರಾಸಿನ ಒಬ್ಬ ಆಂಗ್ಲ ಕಲೆಕ್ಟರ್ ಮದ್ರಾಸಿನಿಂದ ಕೆಲವು ನೂರು ಮೈಲುಗಳ ದೂರದ ಒಂದು ಗ್ರಾಮಕ್ಕೆ ಪ್ರಯಾಣ ಮಾಡಬೇಕಿದ್ದಾಗ ಅವನು ಒಂದು ಪಲ್ಲಕ್ಕಿಯನ್ನು ಮತ್ತು ಅದನ್ನು ಹೊರಲು ಜನರನ್ನೂ ಏರ್ಪಾಡು ಮಾಡಿಕೊಂಡಿದ್ದನು. ಅವರು ತಲುಪಬೇಕಾದ ಗ್ರಾಮವನ್ನು ತಲುಪಿದಾಗ ಪಲ್ಲಕ್ಕಿ ಹೊತ್ತವರು ರಸ್ತೆಯ ಪ್ರಯಾಣವಾದುದರಿಂದ ಮಣ್ಣು-ಧೂಳಿನಿಂದ ಕೊಳಕಾಗಿ ಹೋಗಿದ್ದರು. ಆ ಕಲೆಕ್ಟರ್ ಪಲ್ಲಕ್ಕಿಯಿಂದ ಕೆಳಗಿಳಿದಾಗ ಯಾರೂ ಅವನ ಕಡೆಗೆ ಗಮನ ಹರಿಸದೆ ಇದ್ದುದು ಅವನಿಗೆ ಆಶ್ಚರ್ಯತಂದಿತ್ತು. ನೆರೆದ ಜನರೆಲ್ಲರೂ ಪಲ್ಲಕ್ಕಿ ಹೊತ್ತು ಬಂದವರಿಗೆ ನಮಸ್ಕರಿಸುತ್ತಿದ್ದರು-ಏಕೆಂದರೆ ಅವರು ಬ್ರಾಹ್ಮಣರಾಗಿದ್ದರು. ಬ್ರಾಹ್ಮಣರು ಪಾರಂಪರಿಕವಾಗಿ ಭಾರತದ ಪರಂಪರೆ ಮತ್ತು ಜ್ಞಾನವ್ಯವಸ್ಥೆಯ ಪಾಲಕ-ರಕ್ಷಕರಾಗಿದ್ದಾರೆ. ಅವರಲ್ಲಿ ಯಾವ ರಾಜಕೀಯ ಬಲ ಇಲ್ಲದಿದ್ದರೂ ಅವರ ಮೇಲೆ ಭಾರತೀಯ ಸಮಾಜವು ಅತ್ಯಂತ ಗೌರವವನ್ನು ಹೊಂದಿತ್ತು.

ಇದು ಅತ್ಯಂತ ಮಹತ್ತ್ವದ ಸಂಶೋಧನೆಯಾಗಿದ್ದು, ಇವರ ಸಂಶೋಧನೆಯು ಈಗ ಪ್ರಚಲಿತವಿರುವ ಇತಿಹಾಸಕ್ಕೆ ನಮ್ಮ ಶಿಕ್ಷಣ ಇಲಾಖೆ ಬರೆದಿರವ ವಿವರಣೆಯನ್ನು ಪ್ರಶ್ನಿಸಿ ನಾವು ಭಾರತೀಯ ಸಮಾಜ ಮತ್ತು ಜಾತಿವಾದದ ಬಗ್ಗೆ ಹೊಂದಿರುವ ಕಲ್ಪನೆಗೆ ವಿರುದ್ಧವಾಗಿರುವ ಸತ್ಯನ್ನು ನಮ್ಮ ಮುಂದೆ ಪ್ರಕಟಿಸಬಲ್ಲದು. ಈ ವಿಚಾರದ ಬಗ್ಗೆ ಒಂದು ಸಮಿತಿಯ ಗಂಭೀರ ಅಧ್ಯಯನದ ಅಥವಾ ಒಂದು ಗಂಭೀರ ಸಮ್ಮೇಳನವನ್ನು ಆಯೋಜಿಸಿ ವಿದೇಶೀ ಪ್ರಯಾಣಿಕರ ಭಾರತವನ್ನು ಕುರಿತ ಬರವಣಿಗೆಗಳ ಮೂಲ ಸಂಶೋಧನೆಯನ್ನು ಯಾವುದೇ ಪೂರ್ವಾಗ್ರಹವಿಲ್ಲದೆ ಚರ್ಚಿಸುವ ಅಗತ್ಯವಿದೆ. ಇದು ಬಹಳ ಕುತೂಹಲಕಾರಿ ಮತ್ತು ಕಣ್ಣುತೆರೆಸುವ ಪ್ರಯೋಗವಾಗಿರುತ್ತದೆ-ಎಂದು ನನ್ನ ಭಾವನೆ.

ಅಯೋಧ್ಯೆಯ ವಿವಾದ:

ಇರ್ಫಾನ್ ಹಬೀಬ್ ಒಬ್ಬ ಎಡಪಂಥದ ಪ್ರಮುಖ ಪಂಡಿತ. ಇವರು ಇಂದಿಗೂ ಬಹಳ ವಿವಾದಾತ್ಮಕವಾಗಿರುವ ಅಯೋಧ್ಯೆಯ ವಿವಾದದ ಬಗ್ಗೆ ಬಹಳಷ್ಟು ಬರೆದಿದ್ದಾರೆ. ಅವರು ರಾಮಜನ್ಮಭೂಮಿಯ ಬಗ್ಗೆ ದೊರಕಿದ ಎಲ್ಲ ಸಾಕ್ಷ್ಯಗಳನ್ನೂ ಹಾಳುಮಾಡಿ, ನಾಶಮಾಡಿ ಅಥವಾ ಅಲ್ಲಗೆಳೆಯುವ ಎಲ್ಲ ಅವಕಾಶವನ್ನೂ ಉಪಯೋಗಿಸಿ ಕೊಂಡಿದ್ದಾರೆ. ಅಲಹಾಬಾದ ಉಚ್ಚ ನ್ಯಾಯಾಲಯದ ತೀರ್ಪು ಬಂದ ಕೆಲ ಸಮಯದ ನಂತರ ಅವರು ಒಂದು ಕರಪತ್ರವನ್ನು ಅಲಿಗಡ್ ಹಿಸ್ಟೋರಿಯನ್ಸ್ ಫ಼ೋರಂ ಪರವಾಗಿ ಬರೆದು ಪ್ರಕಟಿಸಿದ್ದು ಅದು ನ್ಯಾಯಾಲಯದ ತೀರ್ಪಿನ ಮೇಲೆ ಮಾಡಿದ ದೋಷಾರೋಪಣೆಯಾಗಿತ್ತು. ಹಾಗೂ ಕರಪತ್ರದಲ್ಲಿ ’ಸರ್ವೋಚ್ಛ ನ್ಯಾಯಾಲಯ’ವು ಈ ತೀರ್ಪನ್ನು ಅಲ್ಲಗೆಳೆಯುವುದು ಎಂದೂ ಹೇಳಲಾಗಿತ್ತು. ಮೀನಾಕ್ಷಿ ಜೈನ್‌ರು ಎಡಪಂಥದವರು ಘೋಷಿಸಿದ ಪ್ರತಿಯೊಂದು ಬಿಂದುವನ್ನೂ ನ್ಯಾಯಾಲಯ ಮತ್ತು ವಿದ್ವಾಂಸರುಗಳು ಅಸತ್ಯವೆಂದು ಕಂಡುಕೊಂಡರೆಂದು ತೋರಿಸಿದ್ದಾರೆ. ಎಡಪಂಥಗಳ ಪ್ರಕಾರ ಅಯೋಧ್ಯೆಯ ವಿವಾದವನ್ನು ಬ್ರಿಟಿಷರು ತಮ್ಮ ಒಡೆದು ಆಳುವ ನೀತಿಯಂತೆ ಹುಟ್ಟುಹಾಕಿದರು. ಅಯೋಧ್ಯೆಯಲ್ಲಿ ಇದಕ್ಕೂ ಮೊದಲು ದೇವಸ್ಥಾನ ಇದ್ದಿತೆಂಬ ಯಾವ ಪುರಾವೆಯೂ ಇರಲಿಲ್ಲವೆಂದೇ ವಾದಿಸುತ್ತಾರೆ. ವಿವಾದಿತ ಪ್ರದೇಶದಲ್ಲಿ ರಾಮನ ಪೂಜೆ ಎಂಬ ಬೆಳವಣಿಗೆಯು ಆರಂಭವಾದದ್ದೇ ೧೮-೧೯ನೇ ಶತಮಾನದಿಂದ ಈಚೆಗೆ ಎಂದು ಅವರ ಹೇಳಿಕೆ.

ಮೀನಾಕ್ಷಿ ಜೈನ್‌ರು ಅಲ್ಲಿ ಬೇಕಾದಷ್ಟು ದಾಖಲೆಗಳು ಎಡಪಂಥದವರ ವಾದವನ್ನು ಅಲ್ಲಗೆಳೆಯ ಬಲ್ಲವು ಎಂದು ಹೇಳಿದ್ದಾರೆ. ಬ್ರಿಟಿಷರು ’ಅವಧ್’ ಪ್ರಾಂತ್ಯದ ಮೇಲೆ ಆಡಳಿತವನ್ನು ’ಮೊದಲ ಸ್ವಾತಂತ್ರ ಸಂಗ್ರಾಮ’ದ ನಂತರ ೧೮೫೮ಲ್ಲಿ ನಂತರ ಪ್ರಾರಂಭಿಸಿದ್ದರು. ಆಗಿನಿಂದ ಅಯೋಧ್ಯೆಯ ವಿವಾದಕ್ಕೆ ಸಂಬಂಧಪಟ್ಟ ಎಲ್ಲ ದಾಖಲೆಗಳನ್ನೂ ಫೈಜಾಬಾದ್‌ನ ಜಿಲ್ಲಾ ನ್ಯಾಯಾಲಯದಲ್ಲಿ ಇರಿಸಲಾಗಿದೆ. ಇಂದಿಗೂ ೧೫೦ವರ್ಷಗಳ ನಂತರವೂ, ಅವು ಹಾಳಾಗದೆ ಉಳಿದುಕೊಂಡಿವೆ. ೧೮೫೮ರ ಸಾಲಿನ ಮೊದಲ ಸಂಬಂಧಪಟ್ಟ ದಾಖಲೆ ಎಂದರೆ ಅದು ಅಯೋಧ್ಯೆಯ ಥಾನೆದಾರನು ನೀಡಿದ ’ಪ್ರಾಥಮಿಕ ತನಿಖಾ ವರದಿ’-ಎಫ್.ಐ.ಆರ್. ಅದರ ಪ್ರಕಾರ ೨೫ ಸಿಖ್ಖರು ಬಾಬರಿ ಮಸೀದಿಯೊಳಗೆ ಪ್ರವೇಶಿಸಿ ’ಹವನ’ ಮತ್ತು ’ಪೂಜೆ’ಗಳನ್ನು ಪ್ರಾರಂಭಿಸಿದ್ದರು. ಎರಡು ದಿನಗಳ ನಂತರ ಬಾಬರಿ ಮಸೀದಿಯ ಮುತ್ತಾವಲಿ ಅಥವಾ ಮೇಲ್ವಿಚಾರಕ (ಸೂಪರಿನ್ಟೆಂಡೆನ್ಟ್) ಸಹ ಫೈಜಾಬಾದ್‌ನ ಕೋರ್ಟ್‌ನಲ್ಲಿ ಸಿಖ್ಖರು ಬಾಬರಿ ಮಸೀದಿಯಲ್ಲಿ ಪ್ರವೇಶಿಸಿದ್ದು, ಅವರು ಇದ್ದಿಲಿನಿಂದ ಗೋಡೆಗಳ ಮೇಲೆ ’ರಾಮ’ ಎಂದು ಬರೆದಿದ್ದು, ’ಹವನ’ ಮತ್ತು ’ಪೂಜೆ’ಗಳನ್ನು ಮಾಡುತ್ತಿರುವುದಾಗಿ ಒಂದು ದೂರನ್ನು ದಾಖಲಿಸಿದ್ದರು. ಅವರೂ ಸಹ ಈ ಘಟನೆ ನಡೆಯುವುದಕ್ಕೂ ಮೊದಲೇ ಹಿಂದೂಗಳು ಬಾಬರಿ ಮಸೀದಿಯ ಅಂಗಳ ಪ್ರಾಕಾರವನ್ನು, ತಮ್ಮ ದೇವರಾದ ಶ್ರೀರಾಮನ ಜನ್ಮಭೂಮಿ ಎಂದು ತಿಳಿಯುತ್ತಿದ್ದು, ತಮ್ಮ ನಿಯಂತ್ರಣದಲ್ಲಿಯೇ ಇಟ್ಟುಕೊಂಡಿದ್ದರು ಎಂಬುದನ್ನು ಧೃಢಪಡಿಸುತ್ತಾರೆ. ಅಲಹಾಬಾದ್ ಉಚ್ಚನ್ಯಾಯಾಲಯವು ’ಒಂದು ಮುಸ್ಲಿಂ ಮೂಲದಿಂದ ದೊರೆಯಲಾದ ೧೮೫೮ರಿಂದಲೂ ಸಾಕ್ಷಿಯಾಗಿ ಕೋರ್ಟನ ಒಳಗೂ-ಹೊರಗೂ ಇದ್ದ ಈ ದಾಖಲೆಯನ್ನು’ ಈ ವಿವಾದ ಪ್ರಕರಣದಲ್ಲಿ ಬಹಳ ಪ್ರಮುಖವಾದ ಸಂಗತಿ ಎಂದು ಪರಿಗಣಿಸುತ್ತದೆ.

೧೮೫೮ರಿಂದ ೧೯೪೯ರವರೆಗೆ ಅಂದರೆ ಬಾಬರಿ ಮಸೀದಿಯಲ್ಲಿ ದೇವತಾ ಮೂರ್ತಿಯನ್ನು ಸ್ಥಾಪಿಸುವವರೆಗೆ, ಅನೇಕ ನ್ಯಾಯಾಲಯದಲ್ಲಿ ಹಿಂದು ಮುಸ್ಲಿಂರ ನಡುವೆ ವಿವಾದಗಳು ಅಯೋಧ್ಯೆಯ ವಿಚಾರದಲ್ಲಿ ನಡೆದಿವೆ. ೧೮೮೮ರಲ್ಲಿ ಬಾಬರಿ ಮಸೀದಿಯ ಮತ್ತಾವಲಿಯು ಒಂದು ದೂರನ್ನು ದಾಖಲಿಸಿದ್ದು ಅದರಲ್ಲಿ ’ಇದುವರೆಗೆ ರಾಮ ನವಮಿ ಮತ್ತು ಕಾರ್ತೀಕ ಜಾತ್ರೆಯ ಸಂದರ್ಭದಲ್ಲಿ ಜಾತ್ರೆಗೆ ಬರುವ ಜನದಟ್ಟಣೆಗೆ ಅನುಕೂಲವಾಗಲೆಂದು ಹಿಂದುಗಳು ಪ್ರಸಾದದ, ಹಣ್ಣು-ಹೂವಿನ ಅಂಗಡಿಗಳನ್ನು ಮಸೀದಿಯ ಒಳಗೆ ಹಾಕಿಕೊಳ್ಳುತ್ತಿದ್ದು, ಅದರಿಂದ ಬರುವ ಆದಾಯವನ್ನು ಸಮನಾಗಿ ಪಾಲುಮಾಡಿ ಕೊಳ್ಳಲಾಗುತ್ತಿತ್ತು. ಅದು ಎರಡೂ ಪಕ್ಷಗಳಿಗೆ ಒಪ್ಪುವ ರೀತಿಯಲ್ಲಿತ್ತು. ಆದರೆ ಆ ವರ್ಷ ರಾಮಜನ್ಮ ಭೂಮಿಯ ಮಹಂತರು ಏಕಪಕ್ಷೀಯವಾಗಿ, ಬಾಬರಿ ಮಸೀದಿಯ ಅಧಿಕಾರಿಗಳ ಅಭಿಪ್ರಾಯವನ್ನು ಕೇಳದೆ, ಹಣದಲ್ಲಿ ಪಾಲುಕೊಡದಿರಲು ನಿರ್ಧರಿಸಿದ್ದರು. ಆಗ ಬಾಬರಿ ಮಸೀದಿಯ ಅಧಿಕಾರಿಗಳ ತಂಡವು ಬ್ರಿಟಿಷ್ ಅಧಿಕಾರಿಗಳನ್ನು ಮೊರೆಹೋಗಿ ಮೊದಲಿದ್ದಂತೆ ಶೇಕಡಾ ೫೦-೫೦ರಂತೆ ಪಾಲನ್ನು ಜಾರಿಗೊಳಿಸುವಂತೆ ಬೇಡಿಕೊಂಡಿದ್ದರು.

ಇತ್ತೀಚಿನ ಇಬ್ಬರು ಮುಸ್ಲಿಂ ಲೇಖಕರು ಅಯೋಧ್ಯೆಯ ವಿವಾದದ ಬಗ್ಗೆ ಕೃತಿಗಳನ್ನು ಪ್ರಕಟಿಸಿದ್ದಾರೆ. ಒಂದು ಆತ್ಮಕಥೆ ಕೆ.ಕೆ.ಮೊಹಮದ್‌ರದ್ದು. ಇವರು ಭಾರತೀಯ ಪುರಾತತ್ವ ಇಲಾಖೆಯಲ್ಲಿ ಸಂಶೋಧಕರಾಗಿದ್ದರು. ಅವರ ಪ್ರಕಾರ ೧೯೮೯ರಲ್ಲಿ ವಿವಾದವು ಉಲ್ಬಣಗೊಂಡಾಗ ಮುಸ್ಲಿಮರಲ್ಲಿ ಈ ಪ್ರದೇಶವು ಹಿಂದುಗಳಿಗೆ ಅತ್ಯಂತ ಮಹತ್ವದ ಪ್ರದೇಶವಾಗಿರುವುದರಿಂದ ಅದನ್ನು ಹಿಂದುಗಳಿಗೆ ವಹಿಸಿಕೊಡಬೇಕೆಂಬ ಬಲವಾದ ಚಿಂತನೆ-ಚರ್ಚೆಗಳು ನಡೆದಿದ್ದವು. ಆದರೆ ಎಡಪಂಥದ ಕೆಲವು ಇತಿಹಾಸ ತಜ್ಞರು ಅವರನ್ನು ಅದಕ್ಕೆ ವಿರುದ್ಧವಾಗಿ ’ಸಾಕ್ಷಿಗಳು ಮುಸ್ಲಿಮರ ಪರವಿದೆ, ಮೊಕದ್ದಮೆಯನ್ನು ನಡೆಸಬೇಕು’ ಎಂದು ಒಪ್ಪಿಸಿದರು. ಅದು ಎರಡೂ ಪಕ್ಷಗಳಿಗೆ ಸೌಹಾದಯುತವಾದ ಒಂದು ಸಮಾಧಾನವು ದೊರಕುತ್ತಿದ್ದುದು ತಪ್ಪಿದಂತಾಯಿತು. ಇದರಿಂದ ಎರಡೂ ಸಂಪ್ರದಾಯದವರೂ ಈ ವಿವಾದಕ್ಕೆ ಕೊನೆ ಹೇಳುವುದಕ್ಕೆ ಸಿದ್ಧವಾಗಿದ್ದರು, ಎಡಪಂಥದವರೇ ಹಿಂದು-ಮುಸ್ಲಿಮರ ನಡುವೆ ಕಂದರವನ್ನು ಸೃಷ್ಟಿಸಿರುವುದು ಎಂದು ತಿಳಿಯುತ್ತದೆ.

ಇನ್ನೊಂದು ಸಂಗತಿ ಎಂದರೆ ಶ್ರೀ. ಕಿಶೋರ್ ಕುನಾಲ್ ಎನ್ನುವವರು ಶ್ರೀ. ವಿ.ಪಿ.ಸಿಂಗ್ ಮತ್ತು ಶ್ರೀ ಚಂದ್ರಶೇಖರ್‌ರವರು ಪ್ರಧಾನಿಗಳಾಗಿದ್ದಾಗ ವಿಶೇಷ ಕರ್ತವ್ಯ ಅಧಿಕಾರಿಯಾಗಿದ್ದರು. ಇವರು ತಮ್ಮ ಸಾಕ್ಷ್ಯದಲ್ಲಿ ಅನೇಕ ಎಡಪಂಥೀಯರು ಹೇಗೆ ಎರಡೂ ಪಕ್ಷಗಳವರನ್ನು ಅನೇಕ ವಿಚಾರಗಳಲ್ಲಿ ದಾರಿತಪ್ಪಿಸಿದಿದ್ದಾರೆ ಎಂಬುದರ ಬಗ್ಗೆ ಆಂತರಿಕ ವಿಚಾರಗಳನ್ನು ಹೊರತಂದಿದ್ದಾರೆ.

ಬಾಬರಿ ಮಸೀದಿಯನ್ನು ಹೊಸ ಜಾಗದ ಮೇಲೆ ಕಟ್ಟಲಾಗಿತ್ತೆನ್ನಲು ಮಧ್ಯಕಾಲದ ಯಾವುದೇ ಪುರಾವೆಯೂ ದೊರೆತಿಲ್ಲ. ಎಲ್ಲ ಸ್ಪಷ್ಟ ಪುರಾವೆಗಳೂ ಶ್ರೀರಾಮರ ದೇವಾಲಯವನ್ನು ನಾಶಗೊಳಿಸಿಯೇ ಬಾಬರಿ ಮಸೀದಿಯನ್ನು ಕಟ್ಟಲಾಯಿತೆಂದು ಹೇಳುತ್ತವೆ. ೧೬ನೇ ಶತಮಾನದ ಪರ್ಷಿಯನ್ ಮೂಲಗಳ ಪ್ರಕಾರ ಅಯೋಧ್ಯೆಯು ಶ್ರೀರಾಮರ ಜನ್ಮಭೂಮಿ ಎಂದೇ ಪ್ರಸಿದ್ಧವಾಗಿತ್ತೆಂದು ಉಲ್ಲೇಖವಿದೆ. ಹದಿನಾರನೆಯ ಶತಮಾನದಲ್ಲಿ ಅಬ್ದುಲ್ ಫಜಲ್‌ರ ಲೇಖನದಲ್ಲಿ ಅಯೋಧ್ಯೆಯು ಶ್ರೀರಾಮರ ಜನ್ಮಭೂಮಿಯಾಗಿದ್ದರಿಂದ ಒಂದು ಪವಿತ್ರ ಸ್ಥಳವಾಗಿತ್ತು ಎಂದಿದ್ದಾರೆ. ೧೬೦೦ರಲ್ಲಿ ಅಕ್ಬರ್‌ನು ಆರು ’ಭಿಗಾ’ (ಸುಮಾರು ಒಂದೂವರೆ ಎಕರೆ) ಭೂಮಿಯನ್ನು ಹನುಮಾನ್ ತಿಲ್‌ಗೆ ಅವರಿಗೆ ಏನು ಅಗತ್ಯವೋ ಅದನ್ನು ನಿರ್ಮಿಸಿಕೊಳ್ಳಲು ನೀಡಿದ್ದರೆಂದು ಉಲ್ಲೇಖವಿದೆ, ಅದು ಪರ್ಷಿಯನ್ ಭಾಷೆಯಲ್ಲಿದೆ. ಈ ಅನುದಾನವನ್ನು ೧೭೨೩ರಲ್ಲಿ ನವೀಕರಿಸಬೇಕಿದ್ದು, ಆ ಬರಹವು ’ಅವನು (ಅನುದಾನ ಪತ್ರವನ್ನು ಬರೆದವನು) ಈ ಅನುದಾನವನ್ನು ಅಕ್ಬರ್‌ನ ಆದೇಶದ ಮೇರೆಗೆ ಶ್ರೀರಾಮ ಜನ್ಮಭೂಮಿಯಿಂದ ಬರೆಯುತ್ತಿರುವುದಾಗಿ’ ಉಲ್ಲೇಖಿಸಿದ್ದಾನೆ. ನಂತರ ಬಾಬರಿ ಮಸೀದಿಯ ಮುತ್ತಾವಲಿಯು ೧೮೫೦ರಲ್ಲಿ ಎರಡು ದೂರುಗಳನ್ನು ಬ್ರಿಟಿಷರಿಗೆ ಕಳುಹಿಸಿದ್ದು ಎರಡರಲ್ಲಿಯೂ ಅವನು ತನ್ನ ಸ್ಥಾನವನ್ನು ’ಮಸ್ಜಿದ್-ಇ-ಜನ್ಮಸ್ಥಾನ್’  ಎಂದೇ ಉಲ್ಲೇಖಿಸಿದ್ದಾನೆ. ಅಂದರೆ ’ಮಸೀದಿ-ರಾಮ ಜನ್ಮಸ್ಥಾನದಲ್ಲಿರುವ’ ಎಂದೇ ಹೇಳುತ್ತದೆ. ಅಸಂಖ್ಯ ಐತಿಹಾಸಿಕ ಸಾಖ್ಯಗಳು, ೧೮ನೇ ಶತಮಾನದಲ್ಲಿ ಮುಸ್ಲಿಮರಿಂದ ದಾಖಲಿತವಾಗಿರುವವೂ, ಸಹ ಈ ಸ್ಥಳವನ್ನು ’ಜನ್ಮಸ್ಥಾನ್’ ಎಂದೇ ಉಲ್ಲೇಖಿಸುತ್ತವೆ. ಮೊಹಮದ್ ಶೋಯ್ಬ್‌ರು ಬಾಬರಿ ಮಸೀದಿಯಲ್ಲಿ ದೊರೆತ ಶಿಲಾಶಾಸನದ ಬಗ್ಗೆ ನೀಡಿದ ವರದಿಯಲ್ಲಿ ಅವರು ಅಧ್ಯಯನ ನಡೆಸಿದ ಮೂರು ಶಾಸನಗಳಲ್ಲಿ ಒಂದರಲ್ಲಿ ’ಈ ಮಸೀದಿಯನ್ನು ಶ್ರೀರಾಮರ ದೇವಸ್ಥಾನದ ಸ್ಥಳದಲ್ಲಿ ಕಟ್ಟಲಾಗಿದೆ’ ಎಂದು ಸ್ಪಷ್ಟವಾಗಿ ಉಲ್ಲೇಖವಾಗಿರುವುದು. ಆದರೆ ವಿಚಾರವೇನೆಂದರೆ ಆ ಶಾಸನವನ್ನು ಬೇರೆ ಯಾರೂ ಕಂಡೇ ಇಲ್ಲ! ಹಾಗೆಯೇ ಆ ಶಾಸನದ ಸಾಕ್ಷ್ಯವನ್ನು ಅಲ್ಲಿಂದ ಯಾವಾಗ ಏಕೆ ತೆಗೆಯಲಾಗಿದೆ, ಅದನ್ನು ಸಾರ್ವಜನಿಕರಿಂದ ನೂರಾರು ವರ್ಷಗಳ ಕಾಲ ಏಕೆ ಮುಚ್ಚಿಡಲಾಗಿದೆ ಎಂಬುದು ಕುತೂಹಲಕಾರಿ ಸಂಗತಿಯಾಗಿದೆ.

ಇನ್ನೊಂದು ವಿವಾದ ಒಂದು ಶಾಸನದ ವಿಚಾರದಲ್ಲಿ ಎದ್ದಿತ್ತು. ಅದೆಂದರೆ ಎಡಪಂಥದವರು ೧೯೯೨ರಲ್ಲಿ ಆ ಶಾಸನವನ್ನು ಎಲ್ಲಿಂದಲೋ ತಂದು ಕೆಡವಲಾದ ಬಾಬರಿ ಮಸೀದಿಯಲ್ಲಿ ಇರಿಸಲಾಯಿತು ಎಂದು ಆರೋಪಿಸುತ್ತಿದ್ದಾರೆ. ಆದರೆ ಡಿಸೆಂಬರ್-೦೬ ೧೯೯೨ರಂದು ೫ ಅಡಿ ಉದ್ದ, ೨ ಅಡಿ ಅಗಲ ಇದ್ದ ಈ  ಶಾಸನವನ್ನು ಬಾಬರಿ ಮಸೀದಿಯ ಗೋಡೆಗಳಿಂದಲೇ ಹೊರತೆಗೆಯಲಾಗಿತ್ತು. ಆ ಶಾಸನದ ಬರಹವನ್ನು ’ಎ.ಎಸ್.ಐ’ನ ’ಹಸ್ತಪ್ರತಿ ಶಾಸ್ತ್ರ’ ವಿಭಾಗದವರು ಅಲಹಾಬಾದ್ ಉಚ್ಚನ್ಯಾಯಾಲಯದ ಆದೇಶದ ಮೇರೆಗೆ ಆ ಪುರಾತನ ಬರಹವನ್ನು ಓದಿದರು. ಅದರ ಪ್ರಕಾರ ಅಲ್ಲಿ ಇದ್ದುದು ಒಂದು ’ವಿಷ್ಣು-ಹರಿ’ ದೇವಸ್ಥಾನವಾಗಿತ್ತೆಂದೂ ದೇವಸ್ಥಾನದ ಎಲ್ಲ ವಿವರಗಳೊಂದಿಗೆ ಅದನ್ನು ಯಾರು ಯಾವಾಗ ಕಟ್ಟಿದರೆಂಬ ವಿವರವನ್ನೂ ಸ್ಪಷ್ಟವಾಗಿ ತಿಳಿಸಿದೆ. ಇದು ಶ್ರೀರಾಮರ ದೇವಸ್ಥಾನವನ್ನು ಕೆಡವಿಯೇ ಬಾಬರಿ ಮಸೀದಿಯನ್ನು ಕಟ್ಟಲಾಗಿತ್ತೆನ್ನುವುದಕ್ಕೆ ನಿರಾಕರಿಸಲಾಗದ ಪುರಾವೆಯಾಗಿದೆ. ಆದರೆ ಎಡಪಂಥೀಯರು ಅದರಲ್ಲೂ ವಿಶೇಷವಾಗಿ ಇರ್ಫಾನ್ ಹಬೀಬ್‌ರು ಈ ಶಾಸನವನ್ನು ಬಾಬರಿ ಮಸೀದಿಯ ಗೋಡೆಯಿಂದ ಪಡೆದುಕೊಂಡದ್ದಲ್ಲ, ಅದನ್ನು ಲಖ್ನೌನ ಸಂಗ್ರಹಾಲಯದಿಂದ ಕದ್ದುತಂದು ಇರಿಸಿದ್ದೆಂದೇ ವಾದಿಸಿದರು. ಇದು ಇನ್ನೊಂದು ಕುತೂಹಲಕಾರಿ ಪ್ರಶ್ನೆಗೆ ಎಡೆ ಮಾಡಿಕೊಡುತ್ತದೆ. ಸಾವಿರಾರು ಜನರು ನೆರೆದಿದ್ದ ಮಾಧ್ಯಮಗಳ ಎದುರು, ಪ್ರಕ್ಷುಬ್ದವಾತಾವರಣದ ಅಂದಿನ ದಿನ ಹೇಗೆ ಆ ಶಾಸನವನ್ನು ಅಲ್ಲಿಗೆ ತಂದು ಇರಿಸಲು ಸಾಧ್ಯ? ಅಲ್ಲದೇ ಬಹು ಮುಖ್ಯವಾಗಿ ’ಈ ಶಿಲಾಶಾಸನವನ್ನು ಲಖ್ನೌ ಸಂಗ್ರಹಾಲಯದಿಂದ ಯಾವಾಗ ಅಪಹರಿಸಲಾಗಿತ್ತು?’ ಎಂದು ಬಾರಿ ಬಾರಿಯೂ ಕೇಳಲ್ಪಟ್ಟ ಪ್ರಶ್ನೆಯ ಬಗ್ಗೆ ಎಡಪಂಥದವರು ಚಕಾರವೆತ್ತುವುದಿಲ್ಲ!

ಕಿಶೋರ್ ಕುನಾಲ್, ಒಬ್ಬ .ಐ.ಪಿ.ಎಸ್. ಅಧಿಕಾರಿಯಾಗಿದ್ದು, ಸಂಸ್ಕೃತ ಪಂಡಿತರೂ ಆಗಿದ್ದಾರೆ. ’ಪ್ರಧಾನ ಮಂತ್ರಿಗಳ ಕಛೇರಿ’ಯಲ್ಲಿ ಸಾಕಷ್ಟು ಪ್ರಭಾವಶಾಲಿಯಾಗಿದ್ದ ಅವರು ಲಖ್ನೌನ ಸಂಗ್ರಹಾಲಯ ದಿಂದ ಅಪಹರಿಸಲಾಗಿತ್ತೆನ್ನಲಾದ ಶಾಸನದ ಒಂದು ಫೋಟೋವನ್ನು ಸಂಪಾದಿಸಿದರು. ಮತ್ತು ಹೇಗೋ ಲಖ್ನೌ ಸಂಗ್ರಹಾಲಯದ ’ದಿನಚರಿ’ಯನ್ನು ಪರಿಶೀಲಿಸಲು ಅವಕಾಶ ಮಾಡಿಕೊಂಡರು. ಆ ದಿನಚರಿಯ ಪ್ರಕಾರ ಆ ಶಿಲಾಶಾಸನದಲ್ಲಿದ್ದ ವಿವರದ ಸಹಿತ ಅದನ್ನು ಲಖ್ನೌನ ಸಂಗ್ರಹಾಲಯಕ್ಕೆ ೧೯೫೩ರಲ್ಲಿ ಸೇರಿಸಲಾಗಿತ್ತು. ಆ ಶಿಲಾಶಾಸನವು ’ತ್ರೇತಕಥಾ’ ಎಂಬ ಇನ್ನೊಂದು ದೇವಸ್ಥಾನದ್ದಾಗಿದ್ದು ಅದರ ಒಕ್ಕಣೆ ವಿಷ್ಣು-ಹರಿ ಶಾಸನದ ಒಕ್ಕಣೆಯ ವಿವರಕ್ಕೆ ಹೊಂದುವಂತಿರಲಿಲ್ಲ. ಇಷ್ಟು ಕಣ್ಣೆದುರಿಗೆ ಇರುವ ಪುರಾವೆಗಳಿದ್ದೂ, ಎಡಪಂಥೀಯ ಇತಿಹಾಸ ತಜ್ಞರು ಈ ಪ್ರಶ್ನೆಗಳಿಗೆ ಎಂದೂ ಉತ್ತರಿಸಲಿಲ್ಲ. ಅಲ್ಲದೆ ತಮ್ಮ ವಿವರಗಳಿಗೆ ಎದುರಾದ ಎಲ್ಲ ಸಾಕ್ಷಿಗಳನ್ನು ನಿರ್ಲಕ್ಷಿಸಿದರು. ಅವರದ್ದು ಮೌನವಾಗಿದ್ದುಕೊಂಡೇ ಕೊಲ್ಲುವ ಯೋಜನೆ. ಮೀನಾಕ್ಷಿ ಜೈನರ ಪ್ರಕಾರ ಅಲಹಾಬಾದ್ ನ್ಯಾಯಾಲಯನಲ್ಲಿ ಸಲ್ಲಿಸಿರುವ ವಸ್ತುಗಳ ಆಧಾರದ ಮೇಲೆ ’ರಾಮ ಜನ್ಮಭೂಮಿ’ ವಿವಾದದ ಸಂದರ್ಭದಲ್ಲಿ ತೊಡಗಿಕೊಂಡ ಎಡಪಂಥೀಯರು ನಮ್ಮ ದೇಶದ ಮೂಲ ಇತಿಹಾಸದ ಬಗ್ಗೆ ಸಂಪೂರ್ಣವಾದ ಅಜ್ಞಾನದಲ್ಲಿದ್ದಾರೆ ಎಂದು ನಿರೂಪಿತವಾಗುತ್ತದೆ. ಆರು ಜನ ವಿದ್ವಾಂಸರು: ಇರ್ಫ಼ಾನ್ ಹಬೀಬ್, ಆರ್.ಎಸ್. ಶರ್ಮಾ, ರೋಮಿಲಾ ಥಾಪರ್, ಡಿ.ಎನ್. ಝಾ, ಸೂರಜ್ ಭನ್ ಮತ್ತು ಮಂಡಲ್. ಇವರು ಮುಂಚೂಣಿಯಲ್ಲಿದ್ದವರು. ಇವರಲ್ಲಿ ಇರ್ಫಾನ್ ಹಬೀಬ್‌ರು ಹೆಚ್ಚು ಚಟುವಟಿಕೆಯಿಂದ ಇದ್ದರು.

ಈ ಎಲ್ಲ ಎಡಪಂಥದ ವಿದ್ವಾಂಸರುಗಳು ಎರಡು ಜನಾಂಗಗಳ ನಡುವೆ ಇದ್ದ ಒಂದು ವಿವಾದವನ್ನು ಯುದ್ಧವಾಗಿ ಪರಿವರ್ತಿಸಿದರು. ಈ ವಿದ್ವಾಂಸರುಗಳ ನೆನಪು ಜನರ ಮನಸ್ಸಿನಿಂದ ಮರೆಯಾದರೂ ಜನಾಂಗಗಳ ನಡುವೆ ನಡೆದ ಘಟನೆಗಳು ಬಹಳ ಕಾಲ ಕಹಿಯನ್ನು ಮತ್ತೆ ಮತ್ತೆ ನೆನಪುಮಾಡಿಕೊಡುತ್ತಿರುತ್ತದೆ. ಅದನ್ನು ಮರೆತು ಮುಂದುವರಿಯುವುದು ಸಮಾಜಕ್ಕೆ ಕಷ್ಟಸಾಧ್ಯ. ಅವರು ಇದನ್ನು ’ಮತ ಭಂಡಾರ’ (ವೋಟ್ ಬ್ಯಾಂಕ್) ರಾಜಕೀಯವಾಗಿಸಿದರು. ಹೀಗಾಗಿ ’ಅಯೋಧ್ಯೆ’ ಎಂದರೆ ಉದ್ವೇಗದೊಂದಿಗೆ ಗಲಭೆಗಳು ಹಾಗೂ ಗುಂಪುಘರ್ಷಣೆಯನ್ನೂ ಪ್ರಚೋದಿಸುವಂತಾಗಿದೆ. ಹಿಂದು ಮತ್ತು ಮುಸ್ಲಿಮರ ದೃಷ್ಟಿಯಲ್ಲಿ ಇದು ಸಮಾಧಾನವೇ ಇಲ್ಲದ ಪ್ರತಿಷ್ಠೆ ಮತ್ತು ಮರ್ಯಾದೆಯ ಪ್ರಶ್ನೆಯಾಗಿದೆ. ಆದರೂ ಮೀನಾಕ್ಷಿ ಜೈನ್‌ರ ಪ್ರರಕಾರ, ಸೈದ್ಧಾಂತಿಕವಾಗಿ ಸಮರವನ್ನು ಗೆಲ್ಲಲಾಗಿದೆ. ಹೇಗೆಂದರೆ ಭವಿಷ್ಯದ ಭಾರತದಲ್ಲಿರುವ ಎಡಪಂಥೀಯ ಇತಿಹಾಸಕಾರರು ಈ ವಿಚಾರದಲ್ಲಿ ಆಸಕ್ತರಾಗಿರುವಂತೆ ತೋರುವುದಿಲ್ಲ. ಅವರ ಅಭಿಪ್ರಾಯ ಹೀಗಿದೆ :

ನನ್ನ ಅಭಿಪ್ರಾಯದಂತೆ, ಇಂದಿನ ಪರಿಸ್ಥಿತಿಯಲ್ಲಿ ನಮ್ಮ ಹಿಂದಿನ ತಪ್ಪುಗಳನ್ನು ಸರಿಪಡಿಸಿಕೊಳ್ಳಲಾಗುವಂತಹ ಲಕ್ಷಣವೆಂದರೆ, ಮುಂದಿನ ಪೀಳಿಗೆಯ ಯುವ ಎಡಪಂಥೀಯರು ಈ ರೀತಿಯ ಕದನಗಳನ್ನು ಅರಗಿಸಿಕೊಳ್ಳಬಲ್ಲವರಾಗಿಲ್ಲ. ಆದ್ದರಿಂದ ಅವರು ತಮ್ಮ ಸಂಶೋಧನೆಯನ್ನು ಇತರ ವಿವಾದರಹಿತ ಸಮಸ್ಯೆಗಳ ಕಡೆಗೆ ಕೇಂದ್ರಿಸುತ್ತಿದ್ದಾರೆ. ಅಂದರೆ ಮೂಲ ಕದನವನ್ನು ಈಗ ತಾತ್ವಿಕವಾಗಿ ಗೆದ್ದಿದ್ದೇವೆ……. ಅಂದರೆ ಈ ರೀತಿಯ ಕುತರ್ಕದ ಕದನವನ್ನು ಪಟ್ಟು ಹಿಡಿದು ಮುಂದುವರಿಸುವ ತಾಳಿಕೆಯುಳ್ಳವರು ಎಡಪಂಥದ ಮುಂದಿನ ಪೀಳಿಗೆಯಲ್ಲಿಲ್ಲ……..ಅಂದರೆ ಶೈಕ್ಷಣಿಕ ವಲಯದಲ್ಲಿ ಇರ್ಫಾನ್ ಹಬೀಬ್, ಆರ್. ಎಸ್. ಶರ್ಮ ಮತ್ತು ರೋಮಿಲಾ ಥಾಪರ್‌ರಂತಹ ಜಿಗುಟುತನದ ಮತ್ತು ಧೈರ್ಯವಂತರು ಯಾರೂ ಇಲ್ಲ. ಈಗಿನವರು ಸುರಕ್ಷಿತವಾಗಿ ಆಡಲು ಬಯಸುವರು. ಇದು ಇಂದಿನ ಪರಿಸ್ಥಿತಿ ಎಂದು ನನ್ನ ವಿಶ್ಲೇಷಣೆ.

ಸತಿ:

ಈಗ ನಾವು ಶ್ರೀಮತಿ ಮೀನಾಕ್ಷಿ ಜೈನ್‌ರ ಕುತೂಹಲಕಾರಿ ’ಸತಿ’ಯ ಪುಸ್ತಕ ಬಗ್ಗೆ ಮಾತನಾಡೋಣ. ’ಸತಿ: ಇವಾನ್‌ಜಲಿಕಲ್(ಕ್ರೈಸ್ತಮತವನ್ನು ಪ್ರಚಾರ/ಮತಾಂತರ ಮಾಡುವವರ ಸಮೂಹ), ಬ್ಯಾಪ್ಟಿಸ್ಟ್ ಮಿಶನರಿಗಳು (ಕ್ರೈಸ್ತಮತಕ್ಕೆ ಪರಿವರ್ತಿಸುವ ಸಂಸ್ಥೆ) ಮತ್ತು ಬದಲಾಗುತ್ತಿರುವ ವಸಾಹತುಶಾಹಿಯ ಪ್ರವಚನ’-ಇದು ಪುಸ್ತಕದ ಹೆಸರು. ’ಸತಿ’ ಶಬ್ದವನ್ನು ತಿಳಿಯದವರು ಯಾರೂ ಇಲ್ಲ, ಹಾಗೆಂದರೇನು ಎನ್ನುವುದನ್ನು ವಿವರಿಸುವ ಅಗತ್ಯವೂ ಇಲ್ಲ, ಏಕೆಂದರೆ ಅದನ್ನು ಹಿಂದುಧರ್ಮದ ಲಕ್ಷಣ ಹಾಗೂ ಹಿಂದುಗಳಲ್ಲಿದ್ದ ದುಷ್ಟ ಪದ್ಧತಿ ಎಂದು ನಮ್ಮ ತಲೆಯಲ್ಲಿ ತುಂಬಿಬಿಟ್ಟಿದ್ದಾರೆ. ವಿಲಿಯಂ ಬೆನ್ಟಿಂಕ್‌ನು ಮಾಡಿದ ಸ್ಮರಣೀಯ ಸುಧಾರಣೆ ಎಂದರೆ ’ಸತಿ’ಯನ್ನು ನಿಶೇಧಿಸಿದ್ದು ಎಂದು ಹೇಳುತ್ತಾರೆ. ಮೀನಾಕ್ಷಿ ಜೈನ್‌ರು ಈ ವಿಚಾರವಾಗಿ ಆಳವಾದ ಅಧ್ಯಯನ ನಡೆಸಿದ್ದಾರೆ. ಮತ್ತು ಸಾಧ್ಯವಾದ ಎಲ್ಲ ಉಲ್ಲೇಖಾತ್ಮಕ/ ಶಾಸನಾತ್ಮಕ, ನಿರೂಪಕ ಶಿಲಾಪುತ್ಥಳಿಗಳ ದಾಖಲೆಗಳನ್ನೂ ಪರಿಶೀಲಿಸಿದ್ದು ಅವುಗಳ ಆಧಾರದ ಮೇಲೆ ಆಶ್ಚರ್ಯಕರ ಸತ್ಯ ಸಂಗತಿಗಳನ್ನು ಹೊರತಂದಿದ್ದಾರೆ.

’ಸತಿ’ಯ ಮೊದಲ ’ಪ್ರತ್ಯಕ್ಷ ಸಾಕ್ಷಿ’ಯು ಅಲೆಗ್ಜಾಂಡರ್‌ನು ಹಿಂದಿರುಗುವ ಕಾಲದ್ದೆಂದು ಹೇಳಲಾಗಿದೆ. ಅವನ ಸಾಮಂತನೊಬ್ಬನ ಸೇನಾಧಿಕಾರಿ ಶಶಿ ಗುಪ್ತನೆಂಬುವನು ಇದ್ದಕ್ಕಿದ್ದಹಾಗೆ ಮರಣಿಸಿದ್ದನು. ಆಗ ಗ್ರೀಕ್ ಸೈನಿಕರಿಗೆ ಆಶ್ಚರ್ಯಕರ ವಿಚಾರವೊಂದು ಗಮನಕ್ಕೆ ಬಂದಿತು. ಅದೆಂದರೆ-ಶಶಿ ಗುಪ್ತನ ಪತ್ನಿಯರಿಬ್ಬರಲ್ಲಿ ಯಾರು ಸಹಗಮನ ಮಾಡಬೇಕೆಂದು ವ್ಯಾಜ್ಯನಡೆದಿತ್ತು!! ಇದು ಮೊದಲಿಗೆ ದಾಖಲಾದ ’ಸತಿ’ಯ ’ಪ್ರತ್ಯಕ್ಷ ಸಾಕ್ಷಿ’. ಅದರ ನಂತರದ ಸಾಕ್ಷಿ ದೊರೆಯುವುದು ಕ್ರಿಸ್ತ ಶಕ ೦೫ರಲ್ಲಿ ಮಧ್ಯಪ್ರದೇಶದಲ್ಲಿ ನಡೆದ ಒಂದು ಘಟನೆಯಾಗಿದ್ದು ನಂತರದ ಸಾಕ್ಷಿಯು ದೊರೆಯುವುದು ಕ್ರಿ.ಶ.೧೪ನೇ ಶತಮಾನದಲ್ಲಿ ಇಬಿನ್ ಬಟ್ಟುಟರು ಉಲ್ಲೇಖಿಸಿದುದೇ ಆಗಿದೆ. ಹೀಗೆ ’ಸತಿ’ಯು ನಡೆದ ಘಟನೆಗಳು ಅತ್ಯಂತ ವಿರಳವಾದದ್ದೇ ಆಗಿದೆ.

ಆದರೆ ಭಾರತಕ್ಕೆ ಹೊಸ ಮಾರ್ಗವನ್ನು ವಾಸ್ಕೋಡಗಾಮನು ಕಂಡು ಹಿಡಿದ ನಂತರ ಅನೇಕ ವಿದೇಶೀ ಪ್ರಯಾಣಿಕರು ಭಾರತಕ್ಕೆ ಪ್ರವಾಸ ಬಂದಿದ್ದು ಅವರು ಭಾರತದ ಬಗ್ಗೆ ಲೇಖನಗಳನ್ನು ಬರೆದಿದ್ದಾರೆ. ಏಕೆಂದರೆ ಯುರೋಪ್‌ನಲ್ಲಿ ಭಾರತದ ಬಗ್ಗೆ ವಿಚಾರಗಳನ್ನು ತಿಳಿಯಲು ಬಹಳ ಬೇಡಿಕೆ ಇದ್ದಿತು. ಯುರೋಪ್‌ನ ದೊಡ್ಡ ಮಾರುಕಟ್ಟೆಗೆ ಒದಗಿಸಲು ಭಾರತದ ಪ್ರವಾಸಕ್ಕೆ ಬಂದ ಪ್ರಯಾಣಿಕರು ಮತ್ತು ಬರಹಗಾರರು ವಿಚಿತ್ರ ಆಚರಣೆ ಮತ್ತು ಅತಿವಿರಳವಾದ ಸಂಗತಿಗಳಿಗೂ ಬಹಳ ಪ್ರಾಶಸ್ತ್ಯ ನೀಡಲಾರಂಭಿಸಿದರು. ’ಸತಿ’ ಅವುಗಳಲ್ಲಿ ಒಂದಾಗಿತ್ತು. ಹೀಗೆ ಅವರ ಬರವಣಿಗೆಯಲ್ಲಿ ’ಸತಿಯ ಘಟನೆಗಳು’ ಮುಖ್ಯ ಗ್ರಾಸವಾಯಿತು. ಆದರೂ ಎಲ್ಲ ಘಟನೆಗಳನ್ನೂ ಸಂದರ್ಭಗಳನ್ನೂ ಸೂಕ್ಷ್ಮವಾಗಿ ಅಧ್ಯಯನ ನಡೆಸಿದಾಗ ಅನೇಕ ಪ್ರವಾಸಿಗರು ಇನ್ನೊಬ್ಬರ ಕಥೆಯನ್ನು ತಮ್ಮದೆಂಬಂತೆ ಪ್ರಕಟಿಸಿದ್ದಾರೆ. ಆದ್ದರಿಂದ ’ಸತಿ’ಯ ಮಿಥ್ಯಾ ಕಥೆಗಳು ಯುರೋಪ್ ಜನರ ’ರೋಮಾಂಚನಕಾರಿ’ ಭಾರತದ ಕಥೆಯನ್ನು ಕೇಳುವ/ಓದುವ ಹಸಿವನ್ನು ನೀಗಿಸಲು ತಮ್ಮ ಲೇಖನಗಳ ವ್ಯಾಪಾರವನ್ನು ಹೆಚ್ಚಿಸಿಕೊಳ್ಳಲು ಸೃಷ್ಟಿಸಿರಿರುವುವೇ ಆಗಿವೆ. ವಾಸ್ತವವಾಗಿ ಘಟನೆಯಲ್ಲಿದ್ದು ಪ್ರತ್ಯಕ್ಷ ಕಂಡ ’ಸತಿ’ ಕಥೆಗಳು ಮಾತ್ರ ನಗಣ್ಯವಾಗಿವೆ. ಮೇಲಾಗಿ ಅಲ್ಲಿ ಉಲ್ಲೇಖಿಸಿರುವ ಘಟನೆಗಳ ವಿವರಗಳನ್ನು ನೋಡಿದರೆ ಅವುಗಳನ್ನು ಭಾರತದ ಯಾವ ಪ್ರದೇಶದಲ್ಲಿ ನಡೆದಿತ್ತೆಂದು ಸಹ ಹೇಳಲಾಗುವಂತಿಲ್ಲ.

೧೮-೧೯ನೇ ಶತಮಾನದವರೆಗೂ ಈ ಕಥೆಗಳು ಒಂದು ಮಿತಿಯಲ್ಲಿದ್ದಂತೆ ತೋರುವುವು. ನಂತರ ಈಸ್ಟ್ ಇಂಡಿಯಾ ಕಂಪನಿಯು ಕಾಲಿಟ್ಟ ಮೇಲೆ ಪರಿಸ್ಥಿತಿಯು ಬದಲಾಯಿತು. ಈಸ್ಟ್ ಇಂಡಿಯಾ ಕಂಪನಿಯವರು ಬಂಗಾಳದ ಮೇಲೀಕರಾದರು. ಅವರು ತಮ್ಮಲ್ಲಿಯೇ ಧೃಢವಾಗಿ ನಂಬಿದ್ದರು-ತಾವು ಭಾರತಕ್ಕೆ ಬಂದಿರುವುದು ಹಣವನ್ನು ದೋಚಲು, ಇಲ್ಲಿನ ಜನರಿಗೆ ನಾಗರೀಕತೆಯನ್ನು ಹರಡಲು ಅಲ್ಲ- ಎಂದು!! ಮೊದಮೊದಲು ಬಂದ ಅಧಿಕಾರಿಗಳು ಭಾರತೀಯ ಸಂಪ್ರದಾಯ, ಆಚರಣೆಗಳ ಮತ್ತು ಸಂಸ್ಥಾನಗಳ ಬಗ್ಗೆ ತುಂಬಾ ಆದರವನ್ನು ಹೊಂದಿ ಹೊಗಳಿದ್ದರು. ಕೆಲವು ಅಧಿಕಾರಿಗಳು ಭಾರತದಲ್ಲಿ ಬ್ರಿಟಿಷ್ ಆಡಳಿತವನ್ನು ಹೇರುವುಕ್ಕೆ ವಿರುದ್ಧವಾಗಿದ್ದರು. ಅವರು ಭಾರತದ ಅನೇಕ ಸಂಸ್ಥಾನಗಳು, ವಿಶೇಷವಾಗಿ ಮುಸ್ಲಿಂ ಆಕ್ರಮಣದ ಯುಗದಲ್ಲಿ, ನಿರ್ಲಕ್ಷ್ಯಕ್ಕೊಳಗಾಗಿದ್ದು ತ್ವರಿತವಾಗಿ ಅವುಗಳ ಪುನಃಚೇತನದ ಅಗತ್ಯವಿದೆ ಎಂದೂ ತಿಳಿದ್ದರು. ಆದರೆ ಅದು ಸ್ಥಾನೀಯ ವ್ಯವಸ್ಥೆಯಾದ್ದರಿಂದ ಅವು ಸ್ಥಿರವಾಗಿದ್ದು ಜನರು ಅದನ್ನು ಚೆನ್ನಾಗಿ ಅರಿತುಕೊಂಡಿದ್ದರು. ಅವರಿಗೆ ತಮ್ಮ ಸಂಸ್ಥಾನಗಳನ್ನು ಆಂಗ್ಲ ವ್ಯವಸ್ಥೆಯಿಂದ ಬದಲಿಸುವ ಅಗತ್ಯವು ತೋರಲಿಲ್ಲ. ಅವರ ಉದ್ದೇಶವು ಸಮಾಜವನ್ನು ಅದರ ಪಾಡಿಗೆ ಬಿಟ್ಟು ಹಣವನ್ನು ದೋಚುವುದೇ ಆಗಿತ್ತು.

ಆ ಸಮಯದಲ್ಲಿ ’ಮಿಶನರಿ’ಗಳು/ ’ಕ್ರಿಶ್ಚಿಯನ್‌ದ ಮತಪ್ರಚಾರಕ/ ಕ್ರಿಶ್ಚಿಯನ್ ಮತಕ್ಕೆ ಪರಿವರ್ತಕ’ರು ಭಾರತಕ್ಕೆ ಬರುವಂತಿರಲಿಲ್ಲ. ಅವರು ಭಾರತಕ್ಕೆ ಬಂದರೆ ಅವರನ್ನು ಮರು ಹಡಗಿನಲ್ಲಿ ಹಿಂದಕ್ಕೆ ಕಳುಹಿಸಲಾಗುತ್ತಿತ್ತು. ಆಗ ’ಮಿಶನರಿ’ಗಳು ಸಂಸತ್ತಿಗೆ ಹೋಗಿ ಭಾರತವು ಒಂದು ’ಕ್ರೈಸ್ತನ ಬಗ್ಗೆ ಅಜ್ಞಾನ ಹೊಂದಿರುವ’ ಹಾಗೂ ದುಷ್ಟ ಆಚರಣೆಗಳುಳ್ಳ ದೇಶವೆಂದೂ, ಮೃಗದಂತಹ ಭಾರತೀಯರನ್ನು ಬದಲಿಸಿ ನಾಗರೀಕತೆಯನ್ನು ಉಳಿಸಲು ’ಕ್ರಿಶ್ಚಿಯಾನಿಟಿ’ ಮಾತ್ರವೇ ಸಹಾಯಕವಾಗುವುದೆಂದೂ ಚಿತ್ರಿಸಲಾರಂಭಿಸಿದರು. ನಾನು ನನ್ನ ಓದುಗರಿಗೆ ಬ್ರಟಿಷರು ಭಾರತವನ್ನು ಕಾಲೊನೈಜ಼್ ಮಾಡಿಕೊಳ್ಳುವ ಆಲೋಚನೆ ಕ್ರಿಶ್ಚಿಯಾನಿಟಿಯಿಂದ ಬಂದದ್ದೆಂಬುದು ಸಂಪೂರ್ಣ ಸುಳ್ಳು ಎಂದು ತಿಳಿದುಕೊಳ್ಳಿರೆಂದು ಕೇಳಿಕೊಳ್ಳುತ್ತೇನೆ. ಈಸ್ಟ್ ಇಂಡಿಯಾ ಕಂಪನಿಯು ’ಮಿಶನರಿ’ಗಳು ಭಾರತಕ್ಕೆ ಬಂದು ಕಂಪನಿಯವರು ಹಣವನ್ನು ಹಿಂಡಿಕೊಳ್ಳುತ್ತಿದ್ದುದರಲ್ಲಿ ಅಡಚಣೆಯಾಗುವುದನ್ನು ಇಚ್ಛಿಸುತ್ತಿರಲಿಲ್ಲ. ಅವರು ಮಿಶನರಿಗಳು ಬಂದು ತಾವು ಭಾರತದಲ್ಲಿ ನಿರ್ಮಿಸಿದ ’ದೊಡ್ಡ ಹಣ ಮಾಡುವ ಯಂತ್ರ’ವನ್ನು ಕೆಡಿಸಲು ಇಚ್ಛಿಸುತ್ತಿರಲಿಲ್ಲ. ಅವರ ನಡುವೆ ಸಂಘರ್ಷವಿತ್ತು. ಪಾರ್ಲಿಮೆಂಟ್‌ನಲ್ಲಿ ಅವರು ವಿರೋಧ ಪಕ್ಷಗಳಾಗಿ ನಿಲ್ಲುತ್ತಿದ್ದರು. ಈಸ್ಟ್ ಇಂಡಿಯಾ ಕಂಪನಿಯು ಯಾವಾಗಲೂ ’ಮಿಶನರಿ’ಗಳನ್ನು ಭಾರತಕ್ಕೆ ಬರಲು ಬಿಟ್ಟರೆ ಅಲ್ಲಿ ಕ್ರಾಂತಿಯಾಗುವುದು ಅದು ಹಣದ ಹರಿವಿಗೆ ಅಡಚಣೆಯಾಗುವುದು ಎಂದು ವಾದಿಸುತ್ತಿದ್ದರು. ಆಗ ಮಿಶನರಿಗಳು ’ಕ್ರೈಸ್ತನ ಬಗ್ಗೆ ಅಜ್ಞಾನ ಹೊಂದಿರುವ’ ಭಾರತದಲ್ಲಿ ಆಗುತ್ತಿರುವ ಹಿಂಸೆ/ ಕ್ರೌರ್ಯಗಳನ್ನು ತಡೆಯಲು ತಮ್ಮ ಅಗತ್ಯವಿದೆ ಎಂದು ವಾದ ಮಂಡಿಸುತ್ತಿದ್ದರು.

ಹೀಗೆ ಅವರು ತಮ್ಮವಾದವನ್ನು ಪುಷ್ಟಿಯಾಗಿಸಲು ವರದಿಗಳನ್ನು ಉತ್ಪ್ರೇಕ್ಷೆ ಮಾಡಿ ೫೦,೦೦೦ ದಿಂದ ೧೦೦,೦೦೦ ಲಕ್ಷ ಹೆಣ್ಣುಮಕ್ಕಳು ’ಸತಿ’ಯಾಗಿರುವರೆಂದು ವಿಚಿತ್ರವಾ ಸೃಷ್ಟಿಸಲಾದ ಕಥೆಗಳನ್ನು ಹೇಳುವ ಕೆಲಸವನ್ನು ಮಾಡಿರುವರು. ಆಶ್ಚರ್ಯವೇನೆಂದರೆ, ಈ ಎಲ್ಲ ಘಟನೆಗಳ ವರದಿಗಳೆಲ್ಲವೂ ಬಂದಿರುವುದು ಎಂದೂ ’ಸತಿ’ ಪದ್ಧತಿಯನ್ನೇ ಹೊಂದಿರದ ಕೇವಲ ಬಂಗಾಳದಿಂದ. ’ಸತಿ’ಯೊಂದಿಗೆ ’ಜೌಹರ್’ ಪದ್ಧತಿಯನ್ನು ಹೊಂದಿದ್ದು ಉತ್ತರಭಾರತದ ರಾಜಸ್ಥಾನದ ಒಂದು ಪ್ರಾಂತ್ಯಕ್ಕೆ ಮಾತ್ರ ಸೀಮಿತವಾಗಿತ್ತು. ಆದ್ದರಿಂದ ಪ್ರತ್ಯಕ್ಷದರ್ಶಿ ವರದಿಗಳು ಇಂತಹ ಘಟನೆಗಳು ಅಪರೂಪವಾಗಿ ಅತ್ಯಂತ ವಿರಳವಾಗಿ ನಡೆದರೆ ಅದು ರಾಜಸ್ಥಾನದಲ್ಲಿ ನಡೆದಿತ್ತೆಂದಿದೆ. ಆದರೆ ಆಂಗ್ಲರು ಬಂಗಾಳದಲ್ಲಿ ಆಳುತ್ತಿದ್ದರು. ಆದರೂ ಅವರು ಬಂಗಾಳದಲ್ಲಿ ’ಸತಿ’ಗಳು ನಡೆದವೆಂಬ ರೋಮಾಂಚಕಾರಿ ಕಥೆಗಳನ್ನು ಸೃಷ್ಟಿಸುತ್ತಿದ್ದು ಅಮಾನವೀಯ ಘಟನೆಗಳು ನಡೆದ ದಾಖಲೆಗಳ (ಅಟ್ರಾಸಿಟಿ ಲಿಟ್ರೇಚರ್’ಗಳ) ಸುಂಟರಗಾಳಿಯನ್ನೇ ಎಬ್ಬಿಸುತ್ತಿದ್ದರು. ಭಾರತವು ಸ್ವತಂತ್ರವಾದ ನಂತರ ಇದುವರೆಗೆ ಸುಮಾರು ೪೦ ’ಸತಿ’ ಘಟನೆಗಳ ವರದಿಯಾಗಿವೆ. ಅದರಲ್ಲಿ ಮೂರರಲ್ಲಿ ಎರಡು ರಾಜಸ್ಥಾನದಲ್ಲಿ ನಡೆದಿದ್ದರೆ ಬಂಗಾಳದಲ್ಲಿ ಒಂದು ಘಟನೆಯೂ ನಡೆದಿಲ್ಲ. ಆದ್ದರಿಂದ ಮುಖ್ಯಧಾರೆಯ ಇತಿಹಾಸಕಾರರು ದಾಖಲಿಸಿರುವುದನ್ನು ಓದಿದರೆ ನಮಗೆ ಬೆನ್ಟಿಂಕ್‌ನು ’ಸತಿ’ಯನ್ನು ನಿಷೇಧಿಸಿದ ’ತತ್‌ಕ್ಷಣ’ ಬಂಗಾಳದಲ್ಲೆಲ್ಲಾ ’ಸತಿ’ಯು ನಿರ್ಮೂಲವಾಯಿತು’ ಎಂದು ನಂಬಬೇಕಾಗುತ್ತದೆ.

ಒಂದು ಕಾಲದಲ್ಲಿ ಆಂಗ್ಲ ಆಡಳಿತಕಾರರು, ಇಸ್ಲಾಂ ಹುಟ್ಟುವುದಕ್ಕೂ ಮೊದಲು, ಭಾರತೀಯ ನಾಗರೀಕತೆಯ ಬಗ್ಗೆ ಅಪಾರ ಗೌರವವನ್ನು ಹೊಂದಿದ್ದರು. ಆದರೆ ೧೮೦೦ರ ಆದಿಯಲ್ಲಿ, ಮೆಕಾಲೆಯ ಆಗಮನವು ಎಲ್ಲವನ್ನೂ ಬದಲಿಸಿತು. ಮೆಕಾಲೆಯು ಬರುವ ಮೊದಲು ಭಾರತೀಯ ಸಂಪ್ರದಾಯ, ಸಂಸ್ಥಾನಗಳು, ಆಚಾರ ವಿಚಾರಗಳನ್ನು ಬೇರು ಸಹಿತ ಕಿತ್ತೊಗೆದ ಕೀರ್ತಿ ’ರಾಜಾ ರಾಮ್ ಮೋಹನ್ ರಾಯ್’ಗೆ ಸಲ್ಲುತ್ತದೆ. ಅವರು ಆಂಗ್ಲರಿಗೆ ಮಾರಿಹೋಗಿದ್ದರು ಎನ್ನಿಸುತ್ತದೆ. ಅವರನ್ನು ಒಬ್ಬ ಖಳನೆಂದೇ ತಿಳಿಯುತ್ತೇನೆ. ಏಕೆಂದರೆ ಅವರು ಆಂಗ್ಲರಿಗೆ ಪತ್ರಬರೆದು ’ಆಂಗ್ಲ ಸಂಸ್ಥಾನಗಳು ಹಾಗೂ ಆಂಗ್ಲ ಶಿಕ್ಷಣ ವಿಧಾನದ ಲಾಭವು ಭಾರತವನ್ನು ಮೇಲೆತ್ತಲು ಬೇಕಾಗಿದೆ.’ ಎಂದು ಕೇಳಿಕೊಂಡಿದ್ದರು. ಅಂದರೆ ಆಂಗ್ಲ ಶಿಕ್ಷಣ ವಿಧಾನವು ಭಾರತಕ್ಕೆ ಬರಲು ಹಾಗೂ ನಮ್ಮ ಪುರಾತನ ವ್ಯವಸ್ಥೆಯನ್ನು ಒಟ್ಟೊಟ್ಟಿಗೇ ನಿವಾರಿಸುವ ಕಾರ್ಯವನ್ನು ನಮ್ಮವರೇ ಆರಂಭಿಸಿಕೊಟ್ಟಂತಾಯಿತು. ನಂತರ ಅದು ಮೆಕಾಲೆಯ ನಿಯಮದಂತೆ ಮುಂದುವರಿಯಿತು.

 

2 ಟಿಪ್ಪಣಿಗಳು Post a comment
  1. vasu
    ನವೆಂ 8 2017

    ರಾಜಾರಾಮ್ ಮೋಹನರಾಯ್ ಸಂಸ್ಕೃತ ಶಿಕ್ಷಣ ವಿರೋಧಿಗಳಾಗಿದ್ದರು. , ಕಲಕತ್ತಾದಲ್ಲಿ ಸಂಸ್ಕೃತ ಶಾಲೆಯನ್ನು ಆರಂಭಿಸಲು ಅಂದಿನ ಗವರ್ನರ್ ಉದ್ಧೇಶಿಸಿದಾಗ ಅದನ್ನು ವಿರೋಧಿಸಿದವರು ರಾಜಾರಾಮ್ ಮೋಹನ ರಾಯ್. ಆದರೆ ಅವರು ಮಿಷನರಿಗಳ ಮತಾಂತರ ಚಟುವಟಿಕೆಯನ್ನು ಸಹ ಬೆಂಬಲಿಸಲಿಲ್ಲ.
    ಈ ಕಾಲ ಖಂಡದಲ್ಲಿ ಇಂಗ್ಲೀಷರ ಶಿಕ್ಷಣ ವೈವಸ್ಥೆ, ಮತಾಂತರ ಇತ್ಯಾದಿಗಳಿಗೆ ಸೆಡ್ಡು ಹೊಡೆದ ಧೀಮಂತ ಎಂದರೆ ಸ್ವಾಮಿ ದಯಾನಂದ ಸರಸ್ವತಿ. ಮೋಹನ ರಾಯರು ಇಂಗ್ಲೀಷ್ ಶಿಕ್ಷಣ ಕ್ರಮ ಮತ್ತು ಯುರೋಪಿಯನ್ ಉದಾರತೆಯಿಂದ ಬಹಳವಾಗಿ ಪ್ರಭಾವಿತ ಗೊಂಡಿದ್ದರು. ಆದರೆ ದಯಾನಂದರು ಅಚ್ಛ ಭಾರತೀಯ ಶಿಕ್ಷಣ, ಮತ್ತು ಭಾರತೀಯ ಚಿಂತನೆಗಳಿಂದ ಪ್ರಭಾವಿತಗೊಂಡು ಹಿಂದೂ ಧರ್ಮದ ಕಾಯಕಲ್ಪಕ್ಕೆ ಕೈಹಾಕಿ ಸುಧಾರಣೆಯ ಅಗ್ರನಾಯಕರಾದರು, ಮೋಹನರಾಯರಿಗೆ ದೇಶಪ್ರೇಮ, ಸ್ವಾತಂತ್ರ್ಯ ಮುಂತಾದ ವಿಚಾರಗಳಲ್ಲಿ ಅಭಿರುಚಿಯಿರಲಿಲ್ಲ. ಅವರು ಬ್ರಿಟಿಷ್ ಆಡಳಿತದ ಬೆಂಬಲಿಗರಾಗಿದ್ದರು.ಆದರೆ ದಯಾನಂದರು ಭಾರತ ಸ್ವಾತಂತ್ರ್ಯ ಕ್ಕೆ ಕರೆ ಕೊಟ್ಟ ಪ್ರಪ್ರಥಮ ನಾಯಕರು, ಸ್ವದೇಶ, ಸ್ವದರ್ಮ ಗಳ ಭಾವನೆಯನ್ನು ಹುಟ್ಟುಹಾಕಿ ಸಮಾಜದಲ್ಲಿ ತಾವು ಸ್ಥಾಪಿಸಿದ ಆರ್ಯಸಮಾಜದ ಮೂಲಕ ಸಮಗ್ರ ಕ್ರಾಂತಿಗೆ ನಾಂದಿ ಹಾಕಿದರು, ಇಂದು ರಾಜಾರಾಮ್ ಮೋಹನ ರಾಯರು ಸ್ಥಾಪಿಸಿದ ಬ್ರಹ್ಮ ಸಮಾಜ ಇತಿಹಾಸದ ಪಳೆಯುಳೆಕೆಯಾಗಿ ಪರಿಣಮಿಸಿದೆ. ಆದರೆ ದಯಾನಂದರ ಆರ್ಯಸಮಾಜ ಭಾರತದಲ್ಲಿ 3000 ಕ್ಕೂ ಹೆಚ್ಚಿನ ಕಡೆ ತನ್ನ ಶಾಖೆಗಳನ್ನು ಸ್ಥಾಪಿಸಿ ಇಂದಿಗೂ ಭಾರತದಲ್ಲಿ ಸುಧಾರಣೆಯ ಮಹಾನ್ ಸಂದೇಶವನ್ನು ಕೊಡುತ್ತಿದೆ.

    ಉತ್ತರ

Trackbacks & Pingbacks

  1. ರಾಜೀವ್ ಮಲ್ಹೋತ್ರ ಸಂವಾದ : ಭಾಗ ೨ | ನಿಲುಮೆ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments