ವಿಷಯದ ವಿವರಗಳಿಗೆ ದಾಟಿರಿ

ನವೆಂಬರ್ 9, 2017

1

ಕಾರಂತ ಸಾಹಿತ್ಯ: ಪರಿಸರ ವಿನಾಶ ಮತ್ತು ವಲಸೆ ರಾಜಕಾರಣ (ಭಾಗ-೨)

‍ನಿಲುಮೆ ಮೂಲಕ

ದೇವು ಹನೆಹಳ್ಳಿ
ಬಂಡಿಮಠ, ಹನೆಹಳ್ಳಿ ಗ್ರಾಮ,
ಬಾರಕೂರು, ಉಡುಪಿ ತಾಲೂಕು-ಜಿಲ್ಲೆ.

ಪರಿಸರ ವಿನಾಶ ಮತ್ತು ವಲಸೆ ರಾಜಕಾರಣ (ಭಾಗ-೧)

ಬೆಟ್ಟದ ಜೀವ ಕಾದಂಬರಿಯಲ್ಲಿ ಪರಿಸರ ಮನುಷ್ಯನಿಗೆ ಪಂಥಾಹ್ವಾನವನ್ನು ನೀಡುವಂತದ್ದು. ಪರಿಸರಕ್ಕೆ ಶರಣಾಗಿಯೇ ಪರಿಸರದ ಹಲವು ಘಟಕಗಳನ್ನು ಎದುರಿಸಿ ಬದುಕನ್ನು ಕಟ್ಟಿಕೊಳ್ಳುವ ಅನಿವಾರ್ಯ. ಪ್ರಜ್ಞಾಪೂರ್ವಕವಾಗಿ, ಮುಕ್ತ ಮನಸ್ಸಿನಿಂದ ಇದು ಸಾಧ್ಯವಾದರೆ ಬದುಕಿನ ಹಲವು ವಿಸಂಗತಿ-ವಿಕೃತಿಗಳನ್ನು ಸಂಯಮದಿಂದ ಸಹಿಸುವ ಶಕ್ತಿಯನ್ನು, ನಿರ್ವಿಕಾರಚಿತ್ತದಿಂದ ಬದುಕುವ ಸ್ಥೈರ್ಯವನ್ನು ಪಡೆಯುವುದನ್ನು ಕಾಣುತ್ತೇವೆ. ಬೆಟ್ಟದ ಜೀವ ಕಾದಂಬರಿಯಲ್ಲಿ ಪರಿಸರವನ್ನು ಗ್ರಹಿಸುವುದಕ್ಕಿಂತ ವ್ಯತಿರಿಕ್ತವಾಗಿ ಕಾಣುವುದು ಶನೀಶ್ವರನ ನೆರಳಿನಲ್ಲಿ ಕಾದಂಬರಿಯಲ್ಲಿ. ಇಲ್ಲಿನ ಕೆಲವು ಪಾತ್ರಗಳು, ಮುಖ್ಯವಾಗಿ ಕೃಷ್ಣ ಜೋಯಿಸರು, ಪ್ರಕೃತಿ ತಮ್ಮ ಬಯಕೆಯ ನೇರಕ್ಕೆ ಇರಬೇಕೆಂದು ಬಯಸುವವರು. ಭೂಸವೆತ, ಕಳೆ ಮುಂತಾದವುಗಳ ಬಗ್ಗೆ ಅವರ ಜತೆ ಮಾತನಾಡಿದ ನಿರೂಪಕ “ನಮ್ಮ ಯೋಚನೆಯಂತೆ ಲೋಕ ನಡೆಯಬೇಕಾದರೆ ಲೋಕವೆಲ್ಲ ನಮ್ಮ ಅಂಕೆಯಲ್ಲಿ ಇರಬೇಕು ಎಂದ ಹಾಗಾಯ್ತಲ್ಲವೇ?” ಎಂದು ಕೇಳುತ್ತಾನೆ.

ಮರಳಿ ಮಣ್ಣಿಗೆಯಲ್ಲಿ ನಿಸರ್ಗ ಪರಿಪೂರ್ಣವಾದದ್ದು ಮಾತ್ರವಲ್ಲ, ಮನುಷ್ಯ ತನ್ನ ಪರಿಪೂರ್ಣತೆಯನ್ನು ಸಾಧಿಸುವಲ್ಲಿ ಸಹಕಾರವನ್ನು ಮತ್ತು ಪಂಥಾಹ್ವಾನವನ್ನು ನೀಡುವಂತಾದ್ದು. ಇಂತಹ ಕ್ರಿಯೆಯಲ್ಲಿ ಕಡಲು ಮತ್ತು ಮಳೆ leitmotifಗಳಾಗಿ ಬರುವುದನ್ನು ಹಿರಿಯ ವಿಮರ್ಶಕ ಡಿ.ಎಲ್. ನರಸಿಂಹಾಚಾರ್ ಕಾರಂತರಲ್ಲಿ ಗುರುತಿಸುತ್ತಾರೆ. ಭೋರ್ಗರೆಯುವ ಭೌತಿಕ ಕಡಲು ಒಂದು ಕಡೆ; ಪ್ರಕ್ಷುಬ್ಧ ರೂಪಕವಾಗಿ ರಾಮನ ಆಂತರ್ಯದಲ್ಲಿ ಒಂದು ಕಡೆ. ಲೌಕಿಕ ತುಮುಲಗಳಲ್ಲಿ ಸಿಲುಕಿದ ಮನುಷ್ಯನ ಆಂತರ್ಯ ಪರಿಪೂರ್ಣತೆಗಾಗಿ ತುಡಿಯುವಾಗ ಕಡಲು, ಮಳೆ ಅವನಿಗೆ ಪಂಥಾಹ್ವಾನ ನೀಡುತ್ತವೆ, ಇಂಬು ನೀಡುತ್ತವೆ, ಮಾರ್ಗದರ್ಶನ ಮಾಡುತ್ತವೆ. ಪರಿಪೂರ್ಣತೆಯನ್ನು ಸಾಧಿಸುವ ಹಾದಿಯಲ್ಲಿ ಪ್ರಕೃತಿಯೊಂದಿಗಿನ ರಾಮನ ಅನುಸಂಧಾನ ಬೌದ್ಧಿಕವೂ ಹೌದು, ಭಾವನಾತ್ಮಕವೂ ಹೌದು.

ಅವನ ಓದು, ಅವನ ಸಂಗೀತ, ಅವನ ಕುಂಚ, ತಾಯಿಯೊಂದಿಗಿನ ಅವನ ಸಂಬಂಧ ಎಲ್ಲವೂ ಏಕತ್ರಗೊಳ್ಳುವುದು ಸಮುದ್ರದ ಮುಂದೆ. ಸಮುದ್ರದ ತೆರೆ ಎಲ್ಲ ದನಿಗಳ ಸಂಗಮ. ಅವನು ತನ್ನ ಪಿಟೀಲಿನ ಶ್ರುತಿ ಹಿಡಿಯುವುದು ಸಮುದ್ರದ ಭೋರ್ಗರೆತದ ಮುಂದೆ. (ಪ್ರಾಚೀನ ಗ್ರೀಕ್ ಸಾಹಿತ್ಯದ ಅನೇಕ ಕೃತಿಗಳಲ್ಲಿ ಸಮುದ್ರ ಯಾನವೆಂಬುದು leitmotif ಆಗಿತ್ತು. ಗ್ರೀಕ್ ಸಂಗೀತಗಾರರು ಮತ್ತು ಭಾಷಣಕಾರರು ಸಮುದ್ರದ ತೆರೆಗಳ ಮುಂದೆ ನಿಂತು ತಮ್ಮ ದನಿಯನ್ನು ಹದಗೊಳಿಸಿಕೊಳ್ಳಬೇಕಾಗಿತ್ತು.) ತೆರೆಯ ಬೆಳ್ನೊರೆ, ಸಮುದ್ರದ ನೀರು ಎಲ್ಲ ಬಣ್ಣಗಳ ಸಂಗಮ. ಬಾನು-ಭೂಮಿಗಳ ಅಗಣಿತ ಬಣ್ಣಗಳು ಪ್ರತಿಫಲನಗೊಳ್ಳುವುದೂ ಸಮುದ್ರದಲ್ಲಿಯೇ. ರಾಗ ಎಂಬ ಪದ ಸಂಗೀತಕ್ಕೂ ಬೇಕು, ಕುಂಚಕ್ಕೂ ಬೇಕು, ಮಾನವಸಂಬಂಧಕ್ಕೂ ಬೇಕು. ಕುಂಚಕ್ಕಿಂತ ಮೊದಲು ಕಮಾನು ಕಟ್ಟಿತು. “ರಾಮನು ಅವಳ (ತಾಯಿಯ) ಕೈಯಿಂದ ಅದನ್ನು ಎಳೆದುಕೊಂಡನು; ಅದನ್ನು ಬಿಗಿದು ಕಮಾನನ್ನೆಳೆದುಕೊಂಡನು. ತಂತಿಗಳ ಮೇಲೆ ಎರಡೇ ಎರಡು ಎಳೆತದಿಂದ ತೆಂಕು ಕೋಡಿಯಿಂದ ಬಡಗು ಕೋಡಿಯ ತನಕ ನೆಲವೇ ಅದುರಿದಂತೆ ಕಂಡಿತು… ರಾಮನ ಕೈಯು ಕಡಲಿನ ದನಿಗೆ ಶ್ರುತಿಗೂಡಿಸಿತು. ಮಳೆಗಾಳಿಯೊಂದರಂತೆ ರಾಮ ರಾಗದ ಸುಳಿಯೊಂದನ್ನು ಚಿಮ್ಮಿಸಿ, ಅದನ್ನು ಮೆಲುದೆರೆಗಳಂತೆ ಏರಿಸಿ – ಇಳಿಸಿ, ಹಾಸಿ – ಹರಡಿ ನಲಿಸುತ್ತಿದ್ದನು. ಬಾನಲ್ಲಿ ಬೆಳ್ಳಿ ಮೂಡಿದರೂ ರಾಮನ ಕೈ ತಡೆಯಲಿಲ್ಲ.” (ಮರಳಿ ಮಣ್ಣಿಗೆ; ಪುಟ 322) ಇದು ಒಬ್ಬ ತಾಯಿಯ ಮುಂದಾದರೆ ಇನ್ನೊಮ್ಮೆ ಮುಂಬಯಿಯಲ್ಲಿ ಆತನ ಇನ್ನೊಬ್ಬ ತಾಯಿ ನೋವಾಳ ಮುಂದೆ. “ಕಡಲಿನ ವಿಚಾರ ಹೇಳುವಾಗಲೆಲ್ಲ – `ಮುಂಬಯಿಯ ಮಲಿನ ಸಮುದ್ರವು ನನಗೆ ವ್ಯಥೆ ಕೊಡುತ್ತದೆ’ ಎನ್ನುತ್ತಿದ್ದ. ಹಾಗೆಯೇ ಮಾತನಾಡುತ್ತಾ ಎದುರಿಗೆ ಇರಿಸಿದ್ದ ಪಿಟೀಲನ್ನು ಎತ್ತಿ ಹಿಡಿದನು. ಅವನಿಗೆ ಕಡಲ ದಂಡೆಯ ತನ್ನ ಮನೆಯಲ್ಲಿ ತಾನೊಂದು ದಿನ ತಾಯನ್ನು ಕರೆದುಕೊಂಡು ಅರಾಲಿನ ಮೇಲೆ ಕುಳಿತು ರಾತ್ರಿಯಲ್ಲ ಏನೋ ಹಾಡನ್ನು ಬಾರಿಸಿದುದರ ನೆನಪಾಯಿತು. ಆ ನೆನಪಿನಿಂದ ಈಗಲೂ ಏನನ್ನೋ ಬಾರಿಸತೊಡಗಿದನು. ಹಾಗೆ ಎಷ್ಟು ಸಮಯ ಬಾರಿಸಿದನೋ ತಿಳಿಯದು. ಹೊರಗೆ ಹೋಗಿದ್ದ ನೋವಾಳ ತಂದೆಯೂ ಬಂದು, ಅವನ ಮುಂದೆ ಕುಳಿತಿದ್ದರು. ರಾಮ ಅವರು ಬಂದುದನ್ನು ಕಂಡು ಎಚ್ಚರವಾಗಿ ಬಾರಿಸುವುದನ್ನು ನಿಲ್ಲಿಸಿದ. ಆಗ ನೋವಾ, `ನಿಮ್ಮ ಊರಿನ ಕಡಲು ಅಷ್ಟು ಸುಂದರವಾದುದೇ!’ ಎಂಬ ಉದ್ಗಾರ ತೆಗೆದಳು. ಆ ದಿನ ನೋವಾ ಆನಂದಸ್ವರ್ಗದಲ್ಲಿ ತೇಲುತ್ತಿದ್ದಳು.” (ಮರಳಿಮಣ್ಣಿಗೆ; ಪುಟ 388) ರಾಮ ಐತಾಳ ತನ್ನ ಅನನ್ಯತೆಯನ್ನು ಕಟ್ಟಿಕೊಳ್ಳುವುದು ಕೋಡಿಯ ಕಿನಾರೆಯ ಮರಳರಾಶಿಯ ಮೇಲೆ.

ನೋವಾ, ನಾಗವೇಣಿ ಇಬ್ಬರಿಗೂ ಪರಿಪೂರ್ಣತೆಯನ್ನು ಸಾಧಿಸುವುದು ಸಾಧ್ಯವಾಗಲಿಲ್ಲ. ಏಕೆಂದರೆ ಅವರಿಗೆ ನೋವನ್ನು ದಾಟುವುದು ಸಾಧ್ಯವಾಗಲಿಲ್ಲ. ನೋವಾಳಿಗೆ ತನ್ನ ನೆಲವಿಲ್ಲ. ಲಚ್ಚನಿಂದಾಗಿ ನಾಗವೇಣಿಯ ಬದುಕೇ ಅಪೂರ್ಣ. “ಇಬ್ಬರೂ ಬಹಳ ಹೊತ್ತು ಮಾತನಾಡಲಿಲ್ಲ; ಕೊನೆಗೆ ರಾಮನು `ಅಮ್ಮ, ಏನಾದರೂ ನುಡಿಸು’ ಎಂದನು. ತಾಯಿ ಮೆಲ್ಲನೆ ಪಿಟೀಲನ್ನ ಹಿಡಿದು, ಹಳೆಯ ಹಾಡೊಂದನ್ನು ನುಡಿಸಿದಳು. ಏನು ಮಾಡಿದರೂ ಅದರ ಸೆಳೆವೆಲ್ಲ ನೋವು, ನರಳುವಿಕೆಗಳ ತಾಪವನ್ನು ಪ್ರತಿಫಲಿಸುತ್ತಿತ್ತು. ಅವಳಿಗೆ ಒಂದೊಂದು ಹಾಡನ್ನು ಮುಗಿಸಿ ಉಸ್ಸೆಂದು ಧ್ವನಿಗರೆಯುವುದೇ ಕೆಲಸವಾಗಿತ್ತು. ಈ ಜೀವದಲ್ಲಿ ಬೇಸರವೂ ಅಶ್ವತ್ಥ ಮರದಂತೆ ಎಲ್ಲೆಂದರಲ್ಲಿ ಬೇರುಬಿಟ್ಟಿತ್ತು.” (ಮರಳಿಮಣ್ಣಿಗೆ; ಪುಟ 364) ನೋವಾಳಿಗೆ ಮಾತು ಕೊಟ್ಟಿದ್ದರೂ ರಾಮನಿಗೆ ಚಿತ್ರ ಬರೆಯಲು ಸಾಧ್ಯವಾಗಲೇ ಇಲ್ಲ. ಆ ಕ್ಷಣ ಬಂತು. “ಅಂತು ಬಂದ ಮಳೆ, ಬಂದಷ್ಟು ತ್ವರೆಯಲ್ಲೇ ನಿಂತಿತು. ಅರೆತಾಸಿನ ಮಳೆಯಲ್ಲಿ ಕಡಲೇನೆ ಉಕ್ಕಿ ಹರಿದಷ್ಟು ನೀರಾಗಿತ್ತು. ಎದುರಿನ ಬೆಟ್ಟು, ನೀರಿನದೊಂದು ಕೆರೆಯಾಗಿತ್ತು. ಕೆರೆಯಂತೆ ಕಾಣುತ್ತಿದ್ದ ನೀರು, ಬಾನನ್ನೂ, ಹನೆಮರಗಳನ್ನೂ ತಲೆಕೆಳಗಾಗಿ ಬಿಂಬಿಸಿತ್ತು. ಆ ಶಾಂತ ನೆರಳಿನ ಆಟವು ಅಲ್ಲಿನದಾದರೆ, ಎದುರಿನ ಪಡುಗಡಲು, ತನ್ನ ಆವೇಶಕ್ಕೆ ತಾನೇ ನಕ್ಕು ಉರುಳುವಂತೆ ಕಾಣುತ್ತಿತ್ತು. ರಾಮ ಈಚಿಂದ ಆಚೆಗೆ ನಿಸರ್ಗದ ಶಾಂತಿಯಿಂದ ರೌದ್ರಕ್ಕೆ – ಕಣ್ಣು ತಿರುಗಿಸಿ ನೋಡುತ್ತಲೇ ಇದ್ದನು. ಆ ರಾತ್ರಿಯೆಲ್ಲ ಅವನು ಮೂಕನಾಗಿದ್ದನು. ಅವನ ಕಣ್ಣುಗಳ ಮುಂದೆ ಅಂದಿನ ಸಂಜೆಯ ಕಡಲು, ನಿಂತ ನೀರುಗಳೇ ಕುಣಿದಾಡುತ್ತಿದ್ದವು. ಮರುದಿನ ಬೆಳಿಗ್ಗೆ ಅವನು ಮನೆಯ ಚಾವಡಿಯಲ್ಲಿ ಕಾಗದವನ್ನು ಬಿಡಿಸಿ, ತನ್ನ ಹಿಂದಣ ಸಂಜೆಯ ಕನಸನ್ನು ಬರೆಯುತ್ತಿದ್ದನು. ದೆವ್ವದಂತಹ ನಾಲ್ಕು ಹನೆಮರಗಳು ನೆಲದಿಂದ ಬಾನನ್ನು ಸೀಳಿದ್ದುವು. ಎದುರಿಗೆ ಕಾಲಬುಡದಲ್ಲಿ ನಗುವ ಮೋಡಗಳನ್ನು ಬಿಂಬಿಸುತ್ತಿದ್ದ ವಿಶಾಲವಾದ ಹಾಳೆಯೊಂದಿತ್ತು. ಅದರಿಂದಾಚೆ ಕಡಲ ದಿನ್ನೆ, ಮುಂದೆ ರೌದ್ರವಾಗಿ ಹುಚ್ಚೆದ್ದು ನಗುತ್ತಿರುವ ಅಲೆಗಳು, ಅದರ ತೀರ ತೀರ ಹಿಂಗಡೆಯಲ್ಲಿ ಬಾನನ್ನು ಹೊಂಬೆಳಕಿನ ಆಗರವನ್ನಾಗಿ ಮಾಡಿದ ಸೂರ್ಯನ ಲೀಲೆ. ಊಟಕ್ಕೆ ತಾಯಿ ಕರೆಯುವ ತನಕವೂ ಅವನ ಕುಚ್ಚಿನ ಆಟ ಸಾಗಿತ್ತು. ನಾಗವೇಣಿ ಮಗನ ಕೈವಾಡವನ್ನು ನೋಡಿ ಮರುಳಾಗಿ ನಿಂತಿದ್ದಳು.” (ಮರಳಿಮಣ್ಣಿಗೆ; ಪುಟ 408) ಚಿತ್ರವನ್ನು ಮುಂಬಯಿಗೆ ಕಳುಹಿಸಿಯೆ ರಾಮ ಮದುವೆಗೆ ಹೆಣ್ಣು ನೋಡಲು ಬ್ರಹ್ಮಾವರಕ್ಕೆ ಹೋಗುತ್ತಾನೆ.

ಪ್ರಕೃತಿಯಲ್ಲಿ ತಾದಾತ್ಮ್ಯವನ್ನು ಹೊಂದಿ ಪರಿಪೂರ್ಣತೆಯನ್ನು ಸಾಧಿಸುವ ಹಾದಿಯಲ್ಲಿ ಮರಳಿ ಮಣ್ಣಿಗೆಯ ರಾಮನ ವ್ಯಕ್ತಿತ್ವದ ಮುಂದುವರಿದ ಭಾಗಗಳಾಗಿ ಕಾಣುವವರು ಸ್ವಪ್ನದ ಹೊಳೆಯ ಕೃಷ್ಣರಾಯ ಮತ್ತು ಮೊಗ ಪಡೆದ ಮನದ ವ್ಯಾಸ.

ಸ್ವಪ್ನದ ಹೊಳೆ ಪ್ರಕೃತಿ ವರ್ಣನೆಯಿಂದ ಭಾರವಾದ ಕಾದಂಬರಿ. ಈ ಕಾದಂಬರಿಯಲ್ಲಿ ಕಾರಂತರು ಚಿತ್ರಿಸಿದ ಪ್ರಕೃತಿವರ್ಣನೆ ಕನ್ನಡ ಕಥನ ಪರಂಪರೆಯಲ್ಲಿಯೇ ಅತಿವಿಲಕ್ಷಣವೂ, ಭಿನ್ನವೂ, ವಿಶಿಷ್ಟವೂ, ಚೇತೋಹಾರಿಯೂ, ಆದದ್ದು. ಏಕಕಾಲಕ್ಕೆ ಅದು ಪ್ರಕೃತಿವರ್ಣನೆಯೂ, ಪ್ರಕೃತಿಯ ಸ್ವಪ್ನವೂ, ಸೌಂದರ್ಯವರ್ಣನೆಯೂ, ಸೌಂದರ್ಯದ ಸ್ವಪ್ನವೂ, ಪ್ರಕೃತಿವರ್ಣನೆಯ ಸ್ವಪ್ನವೂ ಆಗಿದೆ. ಕಾದಂಬರಿಯು ಮನುಷ್ಯನ ಆದಿಮ ಬಯಕೆಗಳ ಕುರಿತದ್ದು. ಪ್ರಾಕೃತಿಕವಾದ, ದಿವ್ಯ ಅನುಭೂತಿಯನ್ನು ನೀಡುವ ಲೈಂಗಿಕ ಸುಖವನ್ನು ಭ್ರಷ್ಟಗೊಳಿಸುವ ಲೋಲುಪತೆ, ಸ್ವಾರ್ಥವನ್ನು ಕಾದಂಬರಿ ಶೋಧಿಸುತ್ತಾ ಹೋಗುತ್ತದೆ. ಹಾಗೆಯೇ ಆದರ್ಶ ಮತ್ತು ಋಜುತ್ವಗಳಿಗಾಗಿ ಅವನ ಅಂತರಂಗದ ಶೋಧ ಕೂಡಾ. ಇವೆರಡೂ ಶೋಧಗಳಿಗೆ ನಿಸರ್ಗದ ಚಲನಶೀಲ ಸೌಂದರ್ಯವೇ ಹಾದಿ. ಹಾದಿಯೆಂದರೆ ಸ್ವಪ್ನದ ಹೊಳೆ. ಆತ ನಿಸರ್ಗ ಸಹಜವಾದ ದಿವ್ಯಾನುಭೂತಿಗಾಗಿ ಹಂಬಲಿಸುತ್ತಾ ಕನಸು ಕಂಗಳಿಂದ ಲೋಕ ವ್ಯಾಪಾರವನ್ನು ಗಮನಿಸುತ್ತಾ ಅದೆಂತಹ ಸಮಚಿತ್ತವನ್ನೂ, ಔದಾರ್ಯವನ್ನೂ, ಒಳ್ಳೆಯತನವನ್ನೂ ಗಳಿಸುತ್ತಾನೆಂದರೆ ಕಳ್ಳಗುರುವಿನಿಂದ ಬಸಿರಾದ ಬನ್ಸಿ ಎಂಬ ಮುಗ್ಧ ಬಾಲೆಯನ್ನೇ ಮದುವೆಯಾಗುತ್ತಾನೆ.

ಮೊಗ ಪಡೆದ ಮನ ಇನ್ನೊಂದು ಬಗೆಯಲ್ಲಿ ವಿಶಿಷ್ಟ ಕಾದಂಬರಿ. ಕಲೆಯಲ್ಲಿ ಪ್ರಾವೀಣ್ಯವೋ, ಪರಿಪೂರ್ಣತೆಯೋ ಎಂಬ ಗೊಂದಲದಲ್ಲಿ ಬಿದ್ದ ವ್ಯಾಸ ಪರಿಪೂರ್ಣತೆಯನ್ನು ಸಾಧಿಸಲು ಕೋಡಿಯ ಕಡಲತೀರಕ್ಕೆ, ರಾಮ ಐತಾಳನ ಬಳಿಯೇ ಬರುವಂತಾದುದು ಕಥಾತಂತ್ರದ ದೃಷ್ಟಿಯಿಂದ ಮಾತ್ರವಲ್ಲ, ಕಥಾವಸ್ತುವಿನ ದೃಷ್ಟಿಯಲ್ಲಿಯೂ ವಿಶಿಷ್ಟವಾದುದು, ಔಚಿತ್ಯಪೂರ್ಣವಾದದ್ದು. ಇಲ್ಲವಾದರೆ ಆ ಕಾದಂಬರಿಯೊಳಗೇನೇ ರಾಮನಂತಹ ಇನ್ನೊಂದು ಪಾತ್ರವನ್ನು ಸೃಷ್ಟಿಸುವ `ಕೃತ್ರಿಮ’ಕ್ಕೆ ಇಳಿಯಬೇಕಾಗುತ್ತಿತ್ತು. ಆಗ ಕಾದಂಬರಿಯ ಬಂಧ ಸಡಿಲವಾಗುತ್ತಿತ್ತು.

ಮರಳಿ ಮಣ್ಣಿಗೆ ಬಂದು ಸರಿಸುಮಾರು ನಾಲ್ಕು ದಶಕಗಳ ಅನಂತರ ಬಂದದ್ದು ಅದೇ ಊರು ಅದೇ ಮರ. 20ನೆಯ ಶತಮಾನದ ದ್ವಿತೀಯಾರ್ಧದಲ್ಲಿ ಸಹ್ಯಾದ್ರಿಯ ಹರವಿನಲ್ಲಿ ಇಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಎಂದು ಕರೆಯಿಸಿಕೊಳ್ಳುವ ಭೂಭಾಗದ ತಪ್ಪಲಿನಲ್ಲಿ ಮತ್ತು ಇಳಿಜಾರಿನಲ್ಲಿ ಕೇರಳ ಮೂಲದ ನಾಲ್ಕೈದು ಚರ್ಚ್ ಪಂಗಡಗಳಿಂದ ನಡೆದ ಒತ್ತುವರಿ ಮತ್ತು ಅತಿಕ್ರಮಣ ಬೇಸಾಯವನ್ನು ಕುರಿತಿಟ್ಟು ಮಾತ್ರ ಕಾರಂತರು ಹೇಳಿದ್ದರೆ ಇದೊಂದು political propaganda, selective communal agenda ಇತ್ಯಾದಿ ಏನೇನೋ ಅನ್ನಿಸಿಕೊಳ್ಳಬಹುದಿತ್ತು. ಆದರೆ ಅಂತಾಗಲಿಲ್ಲ. ಕಾರಂತರು ವಲಸೆಯ ನಾನಾ ರೂಪಗಳನ್ನು ವಿಶಾಲವಾದ ಚಾರಿತ್ರಿಕ ಭಿತ್ತಿಯ ಮೇಲಿಟ್ಟು ವಿಶ್ಲೇಷಿಸುತ್ತಾರೆ. ಆಲದೂರು ಯಾನೆ ವಟಪುರವೆಂಬ ಗ್ರಾಮ-ಪಟ್ಟಣವು ಲಾಗಾಯ್ತಿನಿಂದ ಹೊಟ್ಟೆಪಾಡು, ಯುದ್ಧ, ನಿರಾಶ್ರಯ, ಭಿಕ್ಷಾಟನೆ ಮುಂತಾದ ಹತ್ತು ಹಲವು ಕಾರಣಗಳಿಂದ ಹೇಗೆ ವಲಸೆಗಳಿಗೆ ನೆಲೆಯಾಯಿತು ಎಂಬುದನ್ನು ರಾಮಭಟ್ಟರ ಮೂಲಕ ಕಾಣಿಸುತ್ತಾರೆ. ಪರಿಸರಕ್ಕೂ ಕೈಚಾಚುತ್ತಾರೆ, ಪುರಾಣಕ್ಕೂ ಕೈಚಾಚುತ್ತಾರೆ. ಆಲದೂರಿಗೆ ನೂರೆಂಟು ದಿಕ್ಕುಳಿಂದ ಪಶುಪಕ್ಷಿಗಳು ಬಂದು ತಂಗುತ್ತವೆ, ಸಂಸಾರ ನಡೆಸುತ್ತವೆ, ತೆರಳುತ್ತವೆ. ವಟಪುರಕ್ಕೆ ಅಗಸ್ತ್ಯರೂ ಬಂದುಹೋಗಿದ್ದರು! ಹಕ್ಕಿಪಕ್ಕಿಗಳು ಬಂದುಹೋದಂತೆ ನಿಯಮಿತವಾಗಿ ಬಂದು ಹೋಗುವ ಹಾಲಕ್ಕಿ ನರಸಣ್ಣನ ಸಂಸಾರವೂ ಬಂದುಹೋಗುತ್ತದೆ. ವಿಜಯನಗರ, ಕೆಳದಿ ಅರಸರ ದಂಡು ಬಂದದ್ದು, ದಂಡು ಹೋದ ಮೇಲೂ ಉಳಿದವರು; ಬಂದವರಿಂದ, ಬಂದುಳಿದವರಿಂದ ಅಳಿದುಹೋದ ಜೈನರನ್ನೂ ಕಾಣುತ್ತಾರೆ. ಈ ಎಲ್ಲ ವಲಸೆಗಳಿಗೆ ಹತ್ತಾರು ಕಾರಣಗಳು, ಹಿತಾಸಕ್ತಿಗಳು, ಅನಿವಾರ್ಯಗಳು, ಒತ್ತಡಗಳು. ಗೋಮಾಂತಕದಲ್ಲಿ ಪೋರ್ಚುಗೀಸರು ನಡೆಸಿದ ಮತೀಯ ಬರ್ಬರತೆಯಲ್ಲಿ ನಲುಗಿ ಓಡಿ ಬಂದ ಕೊಂಕಣಿಗರು ವರ್ತಮಾನದ ವಟಪುರದಲ್ಲಿ ಸಮಾಧಾನದ ಜೀವನ ನಡೆಸುತ್ತಿದ್ದಾರೆ.

ವಲಸೆ, ದಂಡಯಾತ್ರೆ, ಪಯಣ, ಯಾತ್ರೆ, ಹೊಟ್ಟೆಪಾಡು ಎಲ್ಲವೂ ಒಂದರೊಳಗೊಂದಾಗುತ್ತಾ, ಒಂದಕ್ಕೊಂದು ಕಾರಣವಾಗುತ್ತಾ ಸಾಗುತ್ತವೆ. ಎಲ್ಲಿಂದಲೋ ಬಂದು ನಾಲ್ಕು ದಿನವಿದ್ದು ಹೋಗುವವರು, ಎಲ್ಲಿಂದ ಬಂದರೋ ಅಲ್ಲಿಗೆ ಪುನಃ ಹೋಗದವರು, ಹೋಗಲಾಗದವರು, ಗೊತ್ತುಗುರಿಯಿಲ್ಲದೆ ಸಾಗುತ್ತಾ ಇರುವವರು… ಆಲದ ಮರವು ದಿಬ್ಬಣಕ್ಕೂ ನೆರಳು ಒದಗಿಸುತ್ತದೆ. ಕಾರಂತರ ಸೂಕ್ಷ್ಮದೃಷ್ಟಿ ವಧುವಿನ `ವಲಸೆ’ಯನ್ನೂ ಬಿಟ್ಟಿಲ್ಲ!

ಅನಾದಿಯಿಂದ ಇದಕ್ಕೆಲ್ಲ ಮೌನಸಾಕ್ಷಿಯಾಗಿರುವುದು, ನಿರ್ಲಿಪ್ತ ಆಸರೆಯಾಗಿರುವುದು ಆಲದ ಮರ. ನಿಸ್ಸಹಾಯಕರಾಗಿ, ಯಾವ ಪ್ರತಿಕ್ರಿಯೆಯನ್ನು ನೀಡಲಾಗದೆ, ಎಲ್ಲವನ್ನೂ ಗಮನಿಸುವವರು ರಾಮಭಟ್ಟರು.
ಯಾವ ಲೌಕಿಕ ಹಿತಾಸಕ್ತಿಯೂ ಇಲ್ಲದೆ ಸಾಕ್ಷಿಯಾಗಿ ನೆಲದ ಉದ್ದಗಲಕ್ಕೆ ನಡೆದಾಡಿದ ಓಡಲಮನೆಯ ಸುಬ್ರಾಯ ಹೆಗಡೆಯವರು. ಅವರಿಬ್ಬರೂ ಆಲದಮರದ ನೆರಳಲ್ಲಿ ಭೇಟಿಯಾದದ್ದು ಅರ್ಥಪೂರ್ಣ. ವಲಸೆ ಬಂದವರಿಗೆ ಸ್ಥಳೀಯರ ಬಗ್ಗೆ ಅನುಮಾನ. ಸ್ಥಳೀಯರಿಗೆ ವಲಸೆ, ವಲಸೆಗಾರರ ಬಗ್ಗೆ ಅನುಮಾನ. ಈ ಪರಿಸ್ಥಿತಿ ಬಲು ಮನೋಜ್ಞವಾಗಿ ಮೂಡಿಬಂದ ಸಂದರ್ಭವೆಂದರೆ ಮರ್ತಪ್ಪ ಪ್ರಭುಗಳು ಮತ್ತು ರಾಮಭಟ್ಟರು ತಮ್ಮ ಅಂತರಂಗವನ್ನು ತೆರೆದುಕೊಳ್ಳುವುದು ಯಾವ ಹಿತಾಸಕ್ತಿಯೂ ಇಲ್ಲದ ಸುಬ್ರಾಯ ಹೆಗಡೆಯವರ ಮುಂದೆ! ಜೀವನಪರ್ಯಂತ ಜತೆಗಿದ್ದ ಅವರಿಬ್ಬರು ಪರಸ್ಪರರ ಮುಂದೆ ಅಂತರಂಗವನ್ನು ತೆರೆದದ್ದಿಲ್ಲ. (ಯಾರು ಯಾರನ್ನು ನುಂಗುತ್ತಿದ್ದಾರೆ ಎಂಬ ಅನುಮಾನ!). ಅದೇ ರೀತಿ, ಸುಬ್ರಾಯ ಹೆಗಡೆಯವರು ತೆರೆದುಕೊಂಡದ್ದು ಕೂಡಾ ರಾಮಭಟ್ಟರ ಮುಂದೆ. ಇಡೀ ಯಾತ್ರೆಯಲ್ಲಿ ಯಾರ ಮನೆಗೂ ಹೋಗದ ಹೆಗಡೆಯವರು ಭಟ್ಟರ ಮನೆಗೆ ಊಟ ಸ್ವೀಕರಿಸಲು ದಾಕ್ಷಿಣ್ಯಪಡುವುದಿಲ್ಲ.

ಮುಂದುವರೆಯುತ್ತದೆ…

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments