ವಿಷಯದ ವಿವರಗಳಿಗೆ ದಾಟಿರಿ

ನವೆಂಬರ್ 10, 2017

1

ಬುದ್ದಿಜೀವಿ ಮತ್ತು ದೇವರು ಎದುರುಬದುರು

‍ನಿಲುಮೆ ಮೂಲಕ

– ಶ್ಯಾಮ್ ಭೀಮಗುಳಿ

ಹಿಂದೊಮ್ಮೆ ಬೆಂಗಳೂರು ಎಂಬ ಮಾಯಾ ನಗರಿಯಲ್ಲಿ ಒಬ್ಬ ‘ಬುದ್ದಿಜೀವಿ’ ಎಂದು ಕರೆಸಿಕೊಳ್ಳುವವ ಇದ್ದನಂತೆ. ಈತ ಬುದ್ದಿಜೀವಿಯಾದ ಕಾರಣ ಚಿಂತಕ, ಪ್ರಗತಿವಾದಿ ಇತ್ಯಾದಿ ವಿಶೇಷಣಗಳು ಜೊತೆಗೆ ಅಂಟಿಕೊಂಡುಬಿಟ್ಟಿತ್ತು. ಈತ ಸಹಜವಾಗಿ ಯಾವುದೇ ವಿಷಯದ ಬಗ್ಗೆ ನಿರರ್ಗಳವಾಗಿ ಮಾತಾಡುತ್ತಿದ್ದ. ಬರೆಯುತ್ತಿದ್ದ. ಈ ತಳಸ್ಪರ್ಶಿ ಸಾಹಿತ್ಯದಲ್ಲಿ ಎಷ್ಟು ಸತ್ವ ಇದೆ ಎಂದು ಅವನ ಜೊತೆಯವರು ನೋಡುತ್ತಿರಲಿಲ್ಲ, ಹಾಗೇ ಯಾವ ಸತ್ವ ಇದೆ ಎಂದೂ ವಿರೋಧಿಗಳು ಹುಡುಕುತ್ತ ಇದ್ದರು. ಆದರೂ ಪ್ರಸಿದ್ಧ ಆದ. ಎಲ್ಲರೂ ಅವನನ್ನು ಸಭೆ ಸಮಾರಂಭಗಳಿಗೆ ಮುಖ್ಯ ಅತಿಥಿಯಾಗಿ ಕರೆಸುತ್ತಿದ್ದರು. ಸಿಕ್ಕಿದ್ದೇ ಅವಕಾಶ ಎಂದುಕೊಂಡು ದೇವರು, ಧರ್ಮ ,ಆಚಾರ ವಿಚಾರ, ಪರಿಸರ, ಸಾಹಿತ್ಯ , ರಾಜಕೀಯ ಇತ್ಯಾದಿಗಳ ಬಗ್ಗೆ ಅದ್ಭುತವಾಗಿ ಮಾತಾಡುತ್ತಿದ್ದ. ಅದಕ್ಕೆ ತಲೆ ತೂಗುವವರು ಹಲವರು. ಒಟ್ಟಾರೆ ನ್ಯೂಟನ್ ನಿಂದ ನಕ್ಸಲ್ ವರೆಗೆ ಆತನ ಪಾಂಡಿತ್ಯ ಹರಡಿತ್ತು. ಕೆಲವೊಂದು ಸುದ್ದಿವಾಹಿನಿಗಳಿಗೆ ಆತ ನಿಲಯದ ಕಲಾವಿದ ಎನ್ನುವಂತೆ ಆಪ್ತನಾಗಿದ್ದ.

ಸಾಮಾನ್ಯವಾಗಿ ತನಗೆ ಸಿಕ್ಕಿದ ಯಾವುದೇ ಅವಕಾಶದಲ್ಲಿ ಆತ ದೇವರನ್ನು ಟೀಕಿಸದೆ ಇರುತ್ತಿರಲಿಲ್ಲ. ಯಾವುದೇ ವಿಷಯದ ಮಧ್ಯದಲ್ಲಿ ದೇವರನ್ನು ತಂದು ಆ ದೇವರನ್ನು ಬೈದು ಧರ್ಮವನ್ನು ತೆಗಳಿ  ಚಪ್ಪಾಳೆ ಗಿಟ್ಟಿಸುವುದು ಆತನ ಜಾಣ್ಮೆಗೆ ಸಾಕ್ಷಿ. ಅಲ್ಲೆಲ್ಲ ಸಾಮಾನ್ಯವಾಗಿ ಆತನ ತರ್ಕ ‘ನೀವು ದೇವರು ಸರ್ವ ಶಕ್ತ ಅಂತ ಹೇಳ್ತೀರಲ್ಲ, ಆ ದೇವರು ನನಗೆ ಸಿಕ್ಕಿದರೆ ಆತನಲ್ಲಿ ಅವನಿಗೂ ಎತ್ತಲಿಕ್ಕೆ ಸಾಧ್ಯವಾಗದ ಕಲ್ಲು ಒಂದನ್ನು ಸೃಷ್ಟಿ ಮಾಡಲು ಹೇಳುತ್ತೇನೆ. ದೇವರು ಹೇಗೆ ಗೆಲ್ಲುತ್ತಾನೆ ನೋಡುತ್ತೇನೆ ” ಅಂತ ಆಗಿರುತ್ತಿತ್ತು. ಅವನ ಈ ತರ್ಕದ ಮಾತಿಗೆ ಮುಂದ್ ಕುಳಿತವರಿಂದ ಜೋರು ಚಪ್ಪಾಳೆ ಮತ್ತು ಆತನ ಮುಖದಲ್ಲಿ ಗೆದ್ದೆ ಎನ್ನುವ ನಗು ಸಾಮಾನ್ಯ ಆಗಿತ್ತು. ಸಮಾರಂಭಗಳಲ್ಲಿ ಅವನ ಪ್ರಶ್ನೆಗಳಿಗೆ ಉತ್ತರ ಕೊಡಲು ಅವಕಾಶಗಳು ಇರುತ್ತಿರಲಿಲ್ಲ. ಪತ್ರಿಕೆಗಳಲ್ಲಿ ಬಂದದ್ದಕ್ಕೆ ಅವ ಉತ್ತರಿಸುತ್ತಾ ಇರಲಿಲ್ಲ. ಒಟ್ಟಾರೆ ಅವನದ್ದೇ ಒಂದು ರೀತಿಯ ‘ಹವಾ’ ಸೃಷ್ಟಿ ಮಾಡಿದ್ದ.

ಇಂತಿರಲು ಒಂದು ದಿನ ಅವನು ನಿತ್ಯದಂತೆ ಮನೆಯ ಬಳಿಯಿರುವ ಉದ್ಯಾನವನಕ್ಕೆ ವಾಯು ವಿಹಾರಕ್ಕೆ ಹೋಗಿದ್ದ. ಇತ್ತೀಚಿಗೆ ಆತನ ಆರೋಗ್ಯ ಸ್ವಲ್ಪ ಕೆಟ್ಟಿತ್ತು. ಹಾಗಾಗಿ ನಡೆದು ಸುಸ್ತಾಗಿ ಒಂದು ಮರದ ಕೆಳಗೆ ಕುಳಿತು ದಣಿವಾರಿಸಿಕೊಳ್ಳುತ್ತಿದ್ದ. ಎದುರಿಗೆ ಯಾರೋ ಪಕ್ಕನೆ ಬಂದು ನಿಂತ ಹಾಗೆ ಆಯ್ತು. ತಲೆ ಎತ್ತಿ ನೋಡಿದರೆ ಫೋಟೋದಲ್ಲಿ ಇರುವ ದೇವರಂತೆ ಕಾಣುವವ ನಾಲ್ಕು ಕೈಗಳೊಂದಿಗೆ ನಿಂತಿದ್ದಾನೆ. ಬೇರೆಯವರಾಗಿದ್ರೆ ಕಣ್ಣಲ್ಲಿ ನೀರು ಹರಿಸಿ ಆತನ ಕಾಲಿಗೆ ಬೀಳುತ್ತಿದ್ದರೋ ಏನೋ. ಎಷ್ಟಾದರೂ ಅದನ್ನೆಲ್ಲ ನಂಬದ ಜೀವಿ ಅವನಲ್ವ. ಹಾಗಾಗಿ ಒಂದು ಕ್ಷಣ ಆಶ್ಚರ್ಯದಿಂದ ಏನು ಮಾಡಬೇಕು ಎಂದು ತೋಚಲಿಲ್ಲ ಅಷ್ಟೇ.

ಅಷ್ಟರಲ್ಲಿ ಎದುರಿಗಿದ್ದ ಆಕಾರವೇ ”ಮಗೂ, ನಾನೇ ನೀನು ನಂಬದ ದೇವರು. ಇತ್ತೀಚೆಗೆ ನೀನು ಹೋದ ಕಡೆಯೆಲ್ಲ ದೇವರು ಸಿಕ್ಕಿದರೆ ಆತನಲ್ಲಿ ಏನೋ ಪ್ರಶ್ನೆ ಕೇಳಬೇಕು ಅಂತ ಸವಾಲು ಹಾಕುತ್ತಿದ್ದೆ ಅಲ್ವ. ನಿನಗೆ ಯಾಕೆ ನಿರಾಸೆ ಮಾಡಲಿ ಅಂತ ನಾನೇ ನಿನ್ನ ಮುಂದೆ ಬಂದಿದ್ದೇನೆ. ನಾನು, ನನ್ನ ಮಕ್ಕಳು ಏನು ಕೇಳಿದರು ಅವರಿಗೆ ನಿರಾಸೆ ಮಾಡದೆ ಅವರು ಕೇಳಿದ್ದನ್ನು ಕೊಡುತ್ತೇನೆ, ನೀನು ಬುದ್ದಿವಂತ ಎಂದು ಹೊಗಳಿಸಿಕೊಂಡವ. ನಿನ್ನ ಕೋರಿಕೆ ಏನು. ಈಡೇರಿಸುತ್ತೇನೆ”. ಎಂದದ್ದೇ ತಡ ನಮ್ಮ ಬುದ್ದಿ ಜೀವಿಯ ವೈಚಾರಿಕತೆ ಚುರುಕಾಯ್ತು. ದೇವರನ್ನೇ ಸೋಲಿಸುತ್ತೇನೆ ಎನ್ನುವ ಮಾತು ನೆನಪಾಯ್ತು. ಇದೆ ಅವಕಾಶ ಎಂದು ಖುಷಿ ಪಟ್ಟ .

ನೀನು ಸರ್ವ ಶಕ್ತ ದೇವರೇ ಅಂತ ಆದರೆ ನಿನಗೆ ಎತ್ತಲು ಸಾಧ್ಯವಾಗದ ಕಲ್ಲು ಒಂದನ್ನು ಸೃಷ್ಟಿ ಮಾಡು ನೋಡುವ. ಇದೇ ನನ್ನ ಸವಾಲು. ಪ್ರಶ್ನೆಯಲ್ಲಿ ಅಳುಕು, ಭಯ- ಭಕ್ತಿ ಯಾವುದು ಇರಲಿಲ್ಲ. ನೇರ ಪ್ರಶ್ನೆ, ಗೆದ್ದೇ ಗೆಲ್ಲುವೆ ಎನ್ನುವ ಭಾವ .

ಪುನಃ ಅದೇ ಮುಗುಳು ನಗೆ ದೇವರದು. ನಯವಾದ ಮಾತು. ಮಗೂ… ಪ್ರೀತಿಯ ಮಾತು ದೇವರಿಂದ. ವತ್ಸಾ ನಿನ್ನ ಇಚ್ಛೆಯಂತೆ ಆಗಲಿ ‘ತಥಾಸ್ತು’ ಎಂದು ದೇವರು ಪ್ರತೀ ಬಾರಿಯಂತೆ ಈ ಬಾರಿ ಹೇಳಲಿಲ್ಲ. ದೇವರಿಗೆ ಗೊತ್ತಿತ್ತು. ಅವನು ದೇವರ ಜೊತೆಗೆ ಸಂಸ್ಕೃತವನ್ನೂ ಇಷ್ಟ ಪಡುವುದಿಲ್ಲ ಅಂತ. ತನ್ನನ್ನು ನೆನೆದವರಿಗೆ ಏನು ಕೊಡಬೇಕು ಅಂತ ಅವನಿಗೆ ಗೊತ್ತಲ್ಲ. ಹಾಗಾಗಿ ಕನ್ನಡದಲ್ಲೇ ಮಾತಾಡಿದ. ನಿನ್ನ ಬಯಕೆಯಂತೆ ಆಗಲಿ. ನಿನ್ನ ಬಯಕೆಯನ್ನು ಈಡೇರಿಸುವುದು ನನ್ನ ಕೆಲಸ . ಇದೋ ನೋಡು ಸೃಷ್ಟಿ ಆರಂಭ ಆಗಿದೆ.  ದೇವರು ಹೇಳುತ್ತಿದ್ದ ಹಾಗೆ ಬುದ್ದಿ ಜೀವಿಯ ಕಾಲ ಬುಡದಲ್ಲಿ, ಒಂದು ಹಣ್ಣಿನ ಬೀಜ ಒಡೆದು ಮೊಳಕೆ ಹುಟ್ಟಿದ ಹಾಗೆ ನೆಲದ ಒಳಗಿನಿಂದ ಕಲ್ಲು ಒಂದು ಮೇಲಕ್ಕೆ ಮೇಲಕ್ಕೆ ಬೆಳೆಯುತ್ತ ಬಂತು. ಕ್ಷಣಮಾತ್ರದಲ್ಲಿ ನೆಲದಿಂದ ೧೦-೧೫ ಅಡಿ ಎತ್ತರ ಬೆಳೆದ ಬಂಡೆಕಲ್ಲು. ಅದರ ಮೇಲೆ ನಮ್ಮ ಬುದ್ದಿ ಜೀವಿ. ದೇವರು ಕೆಳಗೆ ನಿಂತಿದ್ದಾನೆ. ಕ್ಷಣಮಾತ್ರದಲ್ಲಿ ನಡೆದ ಘಟನೆಯಿಂದ ಏನು ತೋಚದೆ ಅವನು ಗಾಬರಿ ಆದ . ಬಂಡೆಯಿಂದ ಎಲ್ಲಿ ಕೆಳಗೆ ಬಿದ್ದು ಬಿಡುತ್ತೇನೋ ಎಂದು ಭಯದಿಂದ ಏ..  ಏ.. ಸಾಕು ನಿಲ್ಲಿಸು ನಿಲ್ಲಿಸು.. ಎಂದು ಕೂಗಿದ. ಬಂಡೆಕಲ್ಲು ಬೆಳೆಯುವುದು ನಿಂತಿತು. ಕೂಡಲೇ ಬಂಡೆಗಿಂತಲೂ ದೊಡ್ಡದಾಗಿ ಬೆಳೆದು ನಿಂತ ದೇವರು, ಒಂದು ಕೈಯಿಂದ ಬಂಡೆಯನ್ನು ಸಲೀಸಾಗಿ ಎತ್ತಿದ. ಇನ್ನೊಂದು ಕೈಯಿಂದ ಬಂಡೆಯ ಮೇಲೆ ಇನ್ನೂ ನಡುಗುತ್ತ ನಿಂತಿದ್ದ ಬುದ್ದಿಜೀವಿಯನ್ನು ಮೃದುವಾಗಿ ಎತ್ತಿ ನೆಲದಲ್ಲಿ ಇಳಿಸಿ ತಾನು ಅವನ ಎದುರಿಗೆ ಸಮನಾಗಿ ನಿಂತ.

ದೇವರೇ ಮಾತು ಮುಂದುವರಿಸಿದ. ಮಗೂ ನೋಡು. ನಾನು ನಿನ್ನ ಬಯಕೆಯಂತೇ ನಡೆಯುತ್ತೇನೆ ಎಂದು ಹೇಳಿದ್ದೆ. ನೀನು ಕಲ್ಲು ಸೃಷ್ಟಿ ಮಾಡಲು ಹೇಳಿದ ಹಾಗೆ ಅದನ್ನು ಸೃಷ್ಟಿ ಮಾಡಿದೆ. ನೀನು ಸಾಕು ನಿಲ್ಲಿಸು ಎಂದು ಹೇಳಿದ ಕೂಡಲೇ ನಿಲ್ಲಿಸಿದೆ. ನಿನ್ನ ಬಯಕೆಯಂತೆ ಅದನ್ನು ಎತ್ತಿಯೂ ತೋರಿಸಿದ್ದೇನೆ. ನೀನು ಬಯಸಿದ್ದರೆ ಕಲ್ಲನ್ನು ಇನ್ನು ದೊಡ್ಡ ಮಾಡುವ ಸಾಮರ್ಥ್ಯ ಇತ್ತು. ನೀನು ಸಾಕು ಸಾಕು ಎಂದು ಹೇಳಿದ ಮೇಲೆ ನಿನ್ನ ಇಚ್ಚೆಗೆ ವಿರುದ್ಧವಾಗಿ ನಾನು ನಡೆಯಲಾರೆ. ಈಗ ಸಮಾಧಾನ ಆಯ್ತಾ. ದೇವರ ಮುಖದಲ್ಲಿ ಅದೇ ಮಂದಹಾಸ ಮೃದುವಾದ ಮಾತು. ಬುದ್ಧಿ ಜೀವಿಯ ಮುಖದಲ್ಲಿ ಸೋತ ಭಾವ.  ಜೋರಾಗಿ ಕೂಗಿದ . ಇಲ್ಲಾ… ನೀನು ಮೋಸ ಮಾಡಿದ್ದೀ.. ದೇವರು ನಗುತ್ತ ಹೇಳಿದ. ನೋಡು ಮಗು ನೀನು ನಿನಗೆ ಎಷ್ಟು ದೊಡ್ಡ ಕಲ್ಲು ಬೇಕೋ ಅಷ್ಟು ದೊಡ್ಡ ಮಾಡಲು ಹೇಳಿದಿ. ನಾನು ಮಾಡಿದೆ.  ಆದನ್ನು ಎತ್ತಲು ಹೇಳಿದಿ, ನಾನು ಎತ್ತಿದೆ. ನಿನಗೆ ಬೇಕಿದ್ದರೆ ಇನ್ನೂ ದೊಡ್ಡ ಆಗುವಷ್ಟು ಹೊತ್ತು ಬಿಡಬಹುದಿತ್ತು. ನಾನು ನನ್ನ ಮಕ್ಕಳು ಹೇಳಿದ ಹಾಗೆ ಕೇಳುವವನು. ನಿನ್ನ ಬಯಕೆ ಈಡೇರಿಸಿದೆ. ದೇವರ ಸರಳ ಉತ್ತರ.

ನೀನು ಮೋಸ ಮಾಡಿ ಗೆದ್ದದ್ದು. ಕಲ್ಲಿನ ಮೇಲಿಂದ ನಾನು ಬೀಳುವ ಹಾಗೆ ಆಯ್ತು. ಅದಕ್ಕೆ ನಿಲ್ಲಿಸು ಅಂತ ಹೇಳಿದ್ದು. ಅದರ ಅರ್ಥ ಸಧ್ಯಕ್ಕೆ ನಿಲ್ಲಿಸು ಅಂತ. ಪಾಟಿ ಸವಾಲು ಆರಂಭಿಸಿದ ದೇವರೊಡನೆ. ದೇವರು ಮೃದುವಾಗಿ, ಕಂದಾ … ಭಸ್ಮಾಸುರನ ಕಥೆ ಗೊತ್ತಿಲ್ವ. ತಾನೇ ಶಕ್ತಿಶಾಲಿ ಬುದ್ಧಿವಂತ ಎಂದು ತಿಳಿದಿದ್ದ . ಆತ ಅದನ್ನು ಲೋಕದ ಒಳಿತಿಗೆ ಉಪಯೋಗಿಸಬಹುದಿತ್ತು. ಆದರೆ ಅಹಂಕಾರದಿಂದ, ಹುಂಬತನದಿಂದ ತನ್ನನ್ನು ತಾನೇ ಸುಟ್ಟುಕೊಂಡ. ನಾನು ಎಲ್ಲರಿಗು ಬುದ್ಧಿ ಕೊಡುತ್ತೇನೆ. ಅವರಲ್ಲಿ ಕೆಲವರಿಗೆ ಸ್ವಲ್ಪ ಜಾಸ್ತಿಯೇ ಕೊಡುತ್ತೇನೆ. ಅದನ್ನು ಹೇಗೆ ಉಪಯೋಗಿಸುತ್ತಾರೆ ಅಂತ ನೋಡುವುದಕ್ಕೆ. ಆದರೆ ನಿನಗೆ ಕೊಟ್ಟ ಆ ಹೆಚ್ಚಿನ ಬುದ್ಧಿಯನ್ನು ಅಹಂಕಾರದಿಂದ, ನಿನ್ನ ತರ್ಕ, ಮಾತಿನ ಮೋಡಿಯಿಂದ ಜನರ ಮಧ್ಯೆ ತಾರತಮ್ಯ, ದ್ವೇಷ- ಜಗಳ ಬೆಳೆಯುವ ಹಾಗೆ ಮಾಡಿದೆ. ದೇವರನ್ನು ನಂಬದ ನಿನ್ನ ತಂದೆಯ ಹೆಸರಿನಲ್ಲಿ ಸಂಘ ಕಟ್ಟಿದೆ. ಅದಕ್ಕೆ ಸಾಮರಸ್ಯದ ಕರೆ, ಸೌಹಾರ್ದದ ಕರೆ ಪ್ರಗತಿಪರರ ವೇದಿಕೆ, ಮೌಢ್ಯ ವಿರೋಧಿ  ಒಕ್ಕೂಟ ಅಂತೆಲ್ಲ ಹೆಸರಿಟ್ಟು ಜನರನ್ನು ವಿಭಜನೆ ಮಾಡಿದಿ. ನೀನು ಸರಿಯಾಗುತ್ತೀಯ ಎಂದು ಹಲವು ಅವಕಾಶಗಳನ್ನು ಕೊಟ್ಟೆ. ನ್ಯಾಯಾಲಯದಲ್ಲಿ ನಿನಗೆ ಸೋಲು ಬರುವ ಹಾಗೆ ಮಾಡಿ  ತಿದ್ದಿಕೊಳ್ಳುವ ಅವಕಾಶ ಕೊಟ್ಟೆ. ಆದರೆ ನೀನು ಬದಲಾಗಲಿಲ್ಲ. ಭಸ್ಮಾಸುರನನ್ನೇ ಕೊಂದ ನನಗೆ ನಿನ್ನನ್ನು ಸೋಲಿಸುವುದು ಯಾವ ಲೆಕ್ಕ ಹೇಳು. ನಿನ್ನನ್ನು ನೀನೆ ಸೋಲಿಸಿಕೊಂಡೆ. ಪುರಾಣದ ಕತೆಗಳನ್ನು ನಾನೇ ಸೃಷ್ಟಿ ಮಾಡಿ, ಮುಂದಿನ ಜನಾಂಗಕ್ಕೆ ತಪ್ಪು- ಸರಿ ತಿಳಿಸುವ ಮಾದರಿ ತೋರಿಸಿ ಕೊಟ್ಟಿದ್ದೆ. ಆದರೆ ನೀವು ಕಥೆಯಲ್ಲಿ ಕೊಂಕು ಹುಡುಕಿ ತಮಾಷೆ ಮಾಡಿದಿರಿ. ಪುರಾಣ ಎಲ್ಲ ಸುಳ್ಳು, ಮೇಲ್ವರ್ಗದವರು ಇತರರನ್ನು ತುಳಿಯಲು ಕಟ್ಟಿದ ಕಥೆ ಅಂತ ಜನರ ದಾರಿ ತಪ್ಪಿಸಿದಿ. ನಿನಗೆ ಇನ್ನೂ ಬದುಕುವ ಭ್ಯಾಗ್ಯ ಇದೆ. ನಿನ್ನ ಜಾಣತನವನ್ನು ಇನ್ನಾದರೂ ಲೋಕಕ್ಕೆ ಒಳ್ಳೆಯದನ್ನು ಮಾಡಲು ಉಪಯೋಗಿಸು.  ನಿನಗೆ ಒಳ್ಳೆಯದಾಗಲಿ. ದೇವರು ಹೇಳುವುದನ್ನೇ ಕೇಳುತ್ತ, ಕಣ್ಣು – ಬಾಯಿ ಬಿಟ್ಟು ನಿಂತಿದ್ದ ಬುದ್ದಿಜೀವಿಯ ಗಂಟಲಿನಿಂದ ಸ್ವರ ಬರುವುದರೊಳಗೆ ದೇವರು ಅವನ ಎದುರಿನಿಂದ ಮಾಯವಾಗಿದ್ದ . .

ಈ ಘಟನೆಯ ನಂತರ ನಮ್ಮ ಬುದ್ಧಿಜೀವಿ ಯಾವುದೇ ಸಭೆ ಸಮಾರಂಭಗಳಲ್ಲಿ ಕಾಣಿಸಿಕೊಂಡದ್ದು, ಪತ್ರಿಕೆಗಳಲ್ಲಿ ಅವರ ಹೇಳಿಕೆ ಪ್ರಕಟವಾದದ್ದು ಇದುವರೆಗೆ ವರದಿ ಆಗಿಲ್ಲ ಎಂಬಲ್ಲಿಗೆ ಈ ಕಥೆ ಮುಕ್ತಾಯ .

ಚಿತ್ರಕೃಪೆ :- previews.123rf.com

Read more from ಲೇಖನಗಳು
1 ಟಿಪ್ಪಣಿ Post a comment
  1. vasu
    ನವೆಂ 10 2017

    ……” ದೇವರು ಸರ್ವಶಕ್ತನಾದುದರಿಂದ ಅವನು ತಾನೇ ಎತ್ತಿ ಹಿಡಿಯಲಾರದ ವಸ್ತುವನ್ನು ರಚಿಸಬಲ್ಲನೇ? ಎಂದು ನಾವು ಪ್ರಶ್ನಿಸುತ್ತೇವೆ.” ಓಹೋ ರಚಿಸಬಲ್ಲ” ಎಂದು ನೀವು ಹೇಳಿದರೆ ಅವನು ಆ ವಸ್ತುವನ್ನು ಎತ್ತಿ ಹಿಡಿಯಲಾರ ಹೀಗೆ ಅವನ ಸರ್ವಶಕ್ತಿತ್ವ ಕುಂಠಿತವಾಯಿತು” ಎಂದು ಒಪ್ಪಬೇಕಾಗುತ್ತದೆ. ರಚಿಸಲಾರ ಎಂದರಂತೂ ಅವನ ಸರ್ವಶಕ್ತಿತ್ವಕ್ಕೆ ಚ್ಯುತಿ ಸ್ಪಷ್ಟ….. ಬೇರೆಯವರ ಸಹಾಯವಿಲ್ಲದೆ ತನ್ನ ಗುಣ, ಕರ್ಮ ಸ್ವಭಾವಕ್ಕೆ ಅನುಸಾರವಾಗಿ ಸೃಷ್ಟಿ ಸ್ಥಿತಿ ಲಯಗಳನ್ನು ಪ್ರವಾಹ ರೂಪದಲ್ಲಿ ಮಾಡುವುದೇ ಸರ್ವಶಕ್ತಿ { ವೇದೋಕ್ತ ಜೀವನ ಪಥ. .ರಚನಕಾರರು ಡಾ|| ಸುಧಾಕರ ಚತುರ್ವೇದಿ }

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments