ವಿಷಯದ ವಿವರಗಳಿಗೆ ದಾಟಿರಿ

ನವೆಂಬರ್ 12, 2017

ರಾಜೀವ್ ಮಲ್ಹೋತ್ರ ಸಂವಾದ : ಭಾಗ ೨

‍ನಿಲುಮೆ ಮೂಲಕ

ಆಂಗ್ಲಮೂಲ : ಶ್ರೀ ರಾಜೀವ್ ಮಲ್ಹೋತ್ರ                                              

ಕನ್ನಡ ಅನುವಾದ : ಶ್ರೀ ಹುಲ್ಲುಮನೆ ಶ್ರೀಧರ

ರಾಜೀವ್ ಮಲ್ಹೋತ್ರ ಸಂವಾದ : ಅಯೋಧ್ಯೆ,ಸತಿ ಪದ್ಧತಿ ಮತ್ತಿತರ ವಿಷಯಗಳು – 1

ಉದಾರವಾದಿಗಳು ಮತ್ತು ಕ್ರಿಶ್ಚಿಯನ್ ಮತಕ್ಕೆ ಸೇರಿಸಿಕೊಳ್ಳುವ/ ಪ್ರಚಾರಕರ (ಇವಾನ್ಜಲಿಸ್ಟ್‌ಗಳ) ನಡುವೆ ಹೊಂದಾಣಿಕೆ:

ಬ್ರಿಟಿಷ್ ಸಂಸತ್ತಿನಲ್ಲಿ ಎಡ್ವಿನ್ ಬೆರ್ಕ್ ಸ್ಪಷ್ಟವಾಗಿ ಹೇಳಿದ್ದಿದೆ- ’ಓಕ್ ಮರಗಳನ್ನು ಥೇಮ್ಸ್ ನದಿಯ ದಂಡೆಯಿಂದ ತೆಗೆದುಕೊಂಡು ಹೋಗಿ ಗಂಗಾನದಿಯ ದಂಡೆಯುದ್ದಕ್ಕೂ ನೆಡಲಾಗದು’ ಎಂದು. ಭಾರತೀಯ ಸಂಸ್ಥಾನಗಳು ಭಾರತೀಯರ ಅಗತ್ಯಗಳನ್ನು ಪೂರೈಸುತ್ತಿದ್ದವು. ಆ ಸಂಸ್ಥೆಗಳಲ್ಲಿ ಪುನರುಜ್ಜೀವನದ ಅಗತ್ಯವಿತ್ತೇ ವಿನಃ ಅವುಗಳನ್ನು ಬದಲಿಸುವ ಅಗತ್ಯವಿರಲಿಲ್ಲ. ಆಂಗ್ಲರಲ್ಲಿ, ಸಂಸತ್ತಿನಲ್ಲಿ ಹಾಗೂ ಭಾರತದ ಆಂಗ್ಲ ಅಧಿಕಾರಿಗಳಲ್ಲಿ ಒಂದು ಬಲವಾದ ಗುಂಪಿದ್ದು ಅವರು ಭಾರತೀಯ ಸಂಸ್ಥಾನಗಳನ್ನು ಮರುನಿರ್ಮಾಣ ಮಾಡಲಿಚ್ಛಿಸಿದ್ದರು. ನಮ್ಮ ಕುತೂಹಲಕ್ಕೆ ’ಸಂಪ್ರದಾಯವಾದಿಗಳು’ (ಕನ್ಸರ್ವೇಟಿವ್‌ಗಳು) ಗಂಭೀರತೆಯಿಂದ ಭಾರತೀಯ ಸಂಸ್ಥಾನಗಳನ್ನು ಹೇಗಿದ್ದವೋ ಹಾಗೆಯೇ ಬಿಡಬೇಕೆನ್ನುತ್ತಿದ್ದರು. ’ಆಂಗ್ಲ ಉದಾರವಾದಿಗಳು’ ಭಾರತದ ಸಂಸ್ಥಾನಗಳನ್ನು ಗೊಂದಲಮಯವಾಗಿಸಲು/ ಅವ್ಯವಸ್ಥಿತಗೊಳಿಸಲು ಇಚ್ಛಿಸಿದ್ದರು.

ನಾವು ’ಆಂಗ್ಲ ಉದಾರವಾದಿಗಳು’ ವ್ಯವಹರಿಸಲು ಸುಲಭರಾಗಿದ್ದರೆಂದೂ, ಅವರು ನಮ್ಮ ಕಡೆ ಇರುವರು ಎಂದೆಲ್ಲಾ ಭಾವಿಸಬಹುದು. ಆದರೆ ವಾಸ್ತವವಾಗಿ ಅವರು ’ಈ ಮಾನವ ಹಕ್ಕಿನ ದೊಡ್ಡ ಆಲೋಚನೆ’ಯನ್ನು ಹೊಂದಿರುವರು. ಜಾನ್ ಸ್ಟುಅರ್ಟ್ ಮಿಲ್, ಈ ಗುಂಪಿನ ಮುಂದಾಳುವಾಗಿದ್ದು ’ಉದಾರವಾದಿ ಚಳುವಳಿ’ಯ ಮುಖ್ಯಸ್ಥನೆಂದು ತಿಳಿಯಲಾಗಿತ್ತು. ಇವರೂ ’ಭಾರತೀಯ ಸಮಾಜವನ್ನು ಅಸ್ತವ್ಯಸ್ತಗೊಳಿಸುವ’ ಉದ್ದೇಶ ಹೊಂದಿರುವ ಹಲವರೊಂದಿಗೆ ಸೇರಿಕೊಂಡಿದ್ದರು. ಮಾನವ ಹಕ್ಕುಗಳ ಮುಖವಾಡದಲ್ಲಿ ಭಾರತದಲ್ಲಿ ಕಾರ್ಯಾಚರಣೆ ನಡೆಸುವ ಈ ಇಚ್ಛೆಯು ’ಭಾರತವನ್ನು ಕ್ರೈಸ್ತಮತಕ್ಕೆ ತರಬೇಕೆಂದು ಬಯಸುವವರ’ – ’ಇವಾನ್ಜಲಿಕಲ್’ಗಳ ಮತ್ತು ಜಾರ್ಜ ಮಿಲ್ ಮತ್ತು ಜಾನ್ ಸ್ಟುಅರ್ಟ್ ಮಿಲ್‌ರನ್ನೊಳಗೊಂಡ ’ಆಂಗ್ಲ ಉದಾರವಾದಿ’ಗಳ ನಡುವೆ ಹೊಂದಾಣಿಕೆಯನ್ನು ತಂದಿತು. ಅಂದರೆ ಕ್ರೈಸ್ತಮತಕ್ಕೆ ತರಬೇಕೆಂದು ಬಯಸುವ ’ಕ್ರಿಶ್ಚಿಯನ್ ಮಿಶನರಿ’ಗಳ ಮತ್ತು ’ಎಡಪಂಥದ ಉದಾರವಾದಿ’ಗಳ ನಡುವಿನ ಸಂಬಂಧವು ೧೮೦೦ ಶತಮಾನದ ಮಧ್ಯ ಕಾಲದಿಂದಲೇ ಇದೆ. ಆದ್ದರಿಂದ ಈ ಜನರ ಹೊಂದಾಣಿಕೆಯು ಕಾಕತಾಳೀಯವಲ್ಲ. ಇದು ಬಹಳ ಆಶ್ಚರ್ಯಕರವಾದದ್ದಾಗಿದೆ, ಏಕೆಂದರೆ ’ಸಂಪ್ರದಾಯವಾದಿ’ಗಳು ಬಂಡವಾಳಶಾಹಿಗಳಾಗಿದ್ದವರು ಭಾರತವನ್ನು ಅದು ಹೇಗಿತ್ತೋ ಹಾಗೆಯೇ ಮೆಚ್ಚಿಕೊಂಡಿದ್ದು ಅವರು ಕೇವಲ ಹಣಮಾಡಲಿಚ್ಛಿಸಿದ್ದರು. ಅವರಿಗೆ ಬೇರೆ ಯಾವುದರಲ್ಲಿಯೂ ಹಸ್ತಕ್ಷೇಪ ಮಾಡುವ ಆಸಕ್ತಿ ಇರಲಿಲ್ಲ. ನಮ್ಮ ಜನರು ಈಸ್ಟ್ ಇಂಡಿಯಾ ಕಂಪನಿಯನ್ನು ಕ್ರೈಸ್ತಮತ ಅಥವಾ ಮಿಶನರಿ ಚಟುವಟಿಕೆಯೊಂದಿಗೆ ಸಮನ್ವಯಗೊಳಿಸುತ್ತಾ/ ಸಂಬಂಧ ಕಲ್ಪಿಸುತ್ತಾ ಹೆಚ್ಚು ತಿಳಿಯದೆಯೇ ತಮ್ಮ ಮೂರ್ಖತನವನ್ನು ಪ್ರದರ್ಶಿಸುತ್ತಿರುತ್ತಾರೆ.

ಹೆಚ್.ಹೆಚ್.ವಿಲ್ಸನ್ನರು ಆಕ್ಫರ್ಡ್‌ಗೆ ಮೊದಲ ಸ್ಥಾನಿಕ (ಬೊಡೆನ್) ಪ್ರೊಫೆಸರ್ ಆಗಿ ಮರಳಿ ಹೋದ ಮೇಲೆ ಕೇಶವ್ ಸೇನ್‌ರ ಮೊಮ್ಮಗ ರಾಮ್ ಕಮಲ್ ಸೇನ್‌ರೊಂದಿಗೆ ಸಂಪರ್ಕವನ್ನು ಹೊಂದಿದ್ದರು. ಅವರೂ ಭಾರತೀಯರು ಸಂಸ್ಕೃತ ಶಿಕ್ಷಣವನ್ನು ಉಳಿಸಿಕೊಳ್ಳಬೇಕು, ಏಕೆಂದರೆ ಅವರ ರಾಷ್ಟ್ರೀಯತೆ ಹಾಗೂ ಗುರುತು ಸಂಸ್ಕೃತದೊಂದಿಗೆ ಜೊತೆಯಾಗಿದೆ-ಎಂದು ಹೇಳಿದ್ದರು. ಅವರು ಭಾರತೀಯರು ಇಂಗ್ಲಿಷ್ ಶಿಕ್ಷಣಕ್ಕೆ ವಿರೋಧವಾದ ಚಳುವಳಿಯನ್ನು ನಡೆಸಲು ತಮ್ಮ ಕೈಲಾದಷ್ಟು ಉತ್ತೇಜನ ನೀಡಿದರು. ಆದ್ದರಿಂದ ನಾವು ’ಈ ತೊಂದರೆಗಳಿಗೆ ಎಡಪಂಥದವರೇ ಕಾರಣ’ವೆಂದು ಎಡಪಂಥವನ್ನು ಬಹಳಷ್ಟು ಹಳಿಯುವ ವಿಚಾರಗಳು ವಾಸ್ತವವಾಗಿ ಹಿಂದೆ ನಮ್ಮವರೇ ಕೇಳಿ ಕರೆದು ತಂದವುಗಳಾಗಿವೆ. ಸ್ವಾತಂತ್ರ್ಯಾ ನಂತರ ಭಾರತೀಯರು ಪಶ್ಚಿಮದವರನ್ನು ಅನುಕರಿಸಿದರೆ ತಮಗೆ ಹೆಚ್ಚಿನ ಬೆಲೆ ಬರುವುದು / ತಾವು ಪ್ರಮುಖರಾಗುವರೆಂದು ಭಾವಿಸಲಾರಂಭಿಸಿದರು. ಆದ್ದರಿಂದ ’ಗೋರ ಸಾಬ್’ ಆಗುವುದು ಒಂದು ಗೌರವದ ’ಬ್ಯಾಡ್ಜ್’ ದೊರೆತಂತೆ, ಬಿಳಿಯನಾಗುವುದಕ್ಕೆ ಒಂದೇ ಹೆಜ್ಜೆ ಕಡಿಮೆ ಎನ್ನುವಂತೆ ತಿಳಿಯುವರು. ಹೀಗೆ ನಮ್ಮವರೇ ವಿದೇಶದಿಂದ ’ಆಮದು ಆಲೋಚನೆ’ಗಳನ್ನು ತಂದು ಹರಡಿರುವುದು.

ಮೂರ್ತಿಭಂಜನ / ದೇವಾಲಯಗಳ ಧ್ವಂಸ:

ಈಗ ನಾನು ಕ್ರಿಶ್ಚಿಯನ್ ಹಾಗೂ ಇಸ್ಲಾಮಿಕ್ ಅಭ್ಯಾಸವಾದ ’ಐಕನೊಕ್ಲಾಸಂ’ ಅಂದರೆ ’ಮೂರ್ತಿ ಭಂನಜ’ ’ವಿಗ್ರಹ ಧ್ವಂಸ’ ಅಥವಾ ದೇವಾಲಯಗಳ ಧ್ವಂಸ ಕೃತ್ಯದ ವಿಚಾರವಾಗಿ ಚರ್ಚಿಸುವೆನು. ಕ್ರಿಶ್ಚಿಯನ್ ಹಾಗೂ ಮುಸ್ಲಿಮರ ಸಿದ್ಧಾಂತದ ಪ್ರಕಾರ ಅವರು ಮೂರ್ತಿಗಳನ್ನು ಪುಡಿಮಾಡುವರು, ಸುಟ್ಟುಬಿಡುವರು ಅಥವಾ ಮೂರ್ತಿಗಳನ್ನು ಕದ್ದು ತೆಗೆದುಕೊಂಡು ಹೋಗುವರು. ಮೀನಾಕ್ಷಿ ಜೈನ್‌ರು ಯಾರೂ ಮಾಡದಿದ್ದ, ಹಿಂದಿನ ತಿಳುವಳಿಕೆಗಳನ್ನು ತಪ್ಪೆಂದು ನಿರೂಪಿಸಬಲ್ಲ, ವಿವಾದಾತ್ಮಕ ’ಪ್ರಪ್ರಥಮ ಸಂಶೋಧನೆ’ಯನ್ನು ಅತ್ಯಂತ ವಿಶಿಷ್ಟ ವಿಧಾನದಲ್ಲಿ ನಡೆಸಿದ್ದಾರೆ. ಎಡಪಂಥೀಯ ಭಾರತದ ಆರಂಭಿಕ ಇತಿಹಾಸಕಾರರಾಗಿದ್ದ ಮೊಹಮದ್ ಹಬೀಬ್ ಮತ್ತು ಅಲ್ಲಿಂದ ಮುಂದುವರಿದು ರೋಮಿಲ ಥಾಪರ್‌ರವರೆಗೆ ಎಲ್ಲರೂ ’ಮೂರ್ತಿಭಂಜನ’ದ ಕಾರ್ಯವನ್ನು ಹಾಗೂ ಅದರಿಂದಾದ ನಷ್ಟ ಮತ್ತು ಉದ್ದೇಶ ಪೂರ್ವಕ ಹಾನಿ ಉಂಟುಮಾಡಿದ್ದನ್ನು ಕನಿಷ್ಟ ಪ್ರಾಧಾನ್ಯದ ವಿಷಯವಾಗಿ ಪರಿಗಣಿಸಿದ್ದಾರೆ. ಅನೇಕ ಪಾಶ್ಚಾತ್ಯ ಇತಿಹಾಸಕಾರರೂ ಇವರ ದೃಷ್ಟಿಕೋನವನ್ನು ಸಮರ್ಥಿಸಿದ್ದಾರೆ. ಅವರ ಪ್ರಕಾರ ’ದೇವಾಲಯಗಳ ಧ್ವಂಸ’ವು ಆಂಗ್ಲರು ಹಿಂದು ಮತ್ತು ಮುಸ್ಲಿಮರು ಒಂದಾಗಿ ಇರದಂತೆ ಮಾಡಲು ಸೃಷ್ಟಿಸಿದ ಒಂದು ಸುಳ್ಳು ಕಥೆಯಾಗಿದೆಯಂತೆ. ರಿಚರ್ಡ್ ಇಟನ್‌ರು ’ಇಂಡೋ-ಮುಸ್ಲಿಂ ರಾಜ್ಯಗಳಲ್ಲಿ ದೇವಸ್ಥಾನಗಳ ವಿನಾಶ’ ಎಂಬ ಒಂದು ಅಂಕಣವನ್ನು ಪ್ರಕಟಿಸಿದ್ದಾರೆ. ಅದರಲ್ಲಿ ಅವರು ಒಂದು ಸಾವಿರ ವರ್ಷಗಳಲ್ಲಿ ಹೆಚ್ಚೆಂದರೆ ೮೦ ದೇವಸ್ಥಾನಗಳನ್ನು ಹಾಳುಮಾಡಲಾಗಿದೆ ಎಂದು ಉಲ್ಲೇಖಿಸಿದ್ದಾರೆ. ರಿಚರ್ಡ್ ಡೇವಿಸ್‌ರು ಬರೆದ ’ಭಾರತೀಯ ವಿಗ್ರಹಗಳ ಜೀವನ’ (ಲೈವ್ಸ್ ಆಫ್ ಇಂಡಿಯನ್ ಇಮೆಜಸ್) ಎಂಬ ಪುಸ್ತಕದಲ್ಲಿ ತುರ್ಕರು ಬರುವ ಮುಂಚಿನಿಂದಲೂ ದೇವಸ್ಥಾನಗಳನ್ನು ಹಾಳು ಮಾಡುವುದು ಮೂರ್ತಿಗಳನ್ನು ವಿರೂಪಗೊಳಿಸುವ, ಕಳ್ಳತನ ಮಾಡುವ ಆಚರಣೆ/ಪದ್ಧತಿಯು ಭಾರತದಲ್ಲಿದ್ದಿತಂತೆ. ಅದನ್ನೇ ತುರ್ಕರು ಮುಂದುವರಿಸಿದರಂತೆ. ಈಗ ಇರುವ ಶಲ್ಡನ್ ಪೊಲ್ಲಾಕ್‌ರೂ ಇತರರೊಂದಿಗೆ ಈ ವಿವರಣೆಯನ್ನು ಅನುಮೋದಿಸುತ್ತಾರೆ. ಅದಕ್ಕೆ ಅರ್ಥವೇನೆಂದರೆ ಹಿಂದುಗಳು ದೇವಸ್ಥಾನಗಳನ್ನು ಧ್ವಂಸಮಾಡಿದ್ದರೆಂದು ದೂರಬಾರದು, ಏಕೆಂದರೆ ಮುಸ್ಲಿಮರು ಬರುವ ಮೊದಲೂ ಹಿಂದುಗಳು ತಾವೇ ಆ ಕೆಲಸವನ್ನು ಮಾಡುತ್ತಿದ್ದರು ಎಂದು ಸೂಚನೆ.

ಮೀನಾಕ್ಷಿ ಜೈನ್‌ರು ಎಡಪಂಥೀಯರು ಉಲ್ಲೇಖಿಸಿದ ವಿಚಾರ ಮೂಲಗಳನ್ನು ವ್ಯವಸ್ಥಿತವಾಗಿ ಪರಿಶೀಲಿಸಿದ್ದಾರೆ. ಅವರಿಗೆ ತತ್‌ಕ್ಷಣ ಗಮನಕ್ಕೆ ಬಂದುದೇನೆಂದರೆ ಎಡಪಂಥೀಯರು ಉಲ್ಲೇಖಿಸಿದ ವಿಚಾರ ಮೂಲಗಳಲ್ಲಿ ಯಾವುದೂ ಹಿಂದೂ ಮೂಲಗಳಾಗಿರಲಿಲ್ಲ. ಅವರು ಹಿಂದು ಮೂಲಗಳನ್ನು ಉಲ್ಲೇಖಿಸುವುದನ್ನು ಬಿಟ್ಟು ಆಕ್ರಮಣಕ್ಕೆ/ ದಾಳಿಗೆ ಮೊದಲು ದೇವಸ್ಥಾನಗಳಿಂದ ಮೂರ್ತಿಗಳನ್ನು ಸ್ಥಾನಾಂತರ ಮಾಡಿದ ಹಾಗೂ ಆಕ್ರಮಣ/ ದಾಳಿಯ ಭೀತಿ ದೂರವಾದ ಮೇಲೆ ದೇವತಾ ಮೂರ್ತಿಯನ್ನು ಮರು ಪ್ರತಿಷ್ಠಾಪಿಸಿದ ಉಲ್ಲೇಖಗಳಿಗೆ ಸಂಶೋಧನೆ ನಡೆಸಿದರು.

ಒಂದು ಘಟನೆಯ ವಿವರ:

ಅಷ್ಟೆಲ್ಲಾ ಹಲ್ಲೆಗಳು ಹಿಂದುಗಳ ಮೇಲೆ ನಡೆಯುತ್ತಿದ್ದಾಗ ಹಿಂದುಗಳ ಉಲ್ಲೇಖಗಳೂ ಎಲ್ಲಿಯೋ ಒಂದು ಕಡೆ ಇದ್ದಿರಬೇಕಲ್ಲವೇ! ಹಿಂದುಗಳು ಆಧುನಿಕ ಇತಿಹಾಸಕಾರರಂತೆ ಬರೆದು ಇಟ್ಟಿಲ್ಲದಿರಬಹುದು, ಆದರೆ ಅವರು ತಮ್ಮ ಅನುಭವವನ್ನು ಎಲ್ಲಿಯೋ ಬೇರೆ ರೀತಿಯಲ್ಲಿ ಬರೆದಿರಬಹುದು ಎಂದು ನಾನು ಪ್ರಮಾಣ/ ಪುರಾವೆಗಳಿಗಾಗಿ ಹುಡುಕಲಾರಂಭಿಸಿದೆ. ನಂತರ ನಾನು ದೇವಸ್ಥಾನದ ಮೂಲ ವಿಗ್ರಹ/ ಮೂರ್ತಿಗೆ ಏನಾಯಿತೆಂದು ಕಂಡುಹಿಡಿಯಲು ಒಂದು ಉತ್ತಮವಾದ ಮಾರ್ಗವನ್ನು ಕಂಡುಕೊಂಡೆ. ದೇವಸ್ಥಾನಗಳು ದೊಡ್ಡ ಕಟ್ಟಡಗಳಾದುದರಿಂದ ಅವುಗಳನ್ನು ಕಾಪಾಡಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಮೂರ್ತಿಗಳನ್ನು ಕಾಪಾಡುವ ಪ್ರಯತ್ನಗಳು ನಡೆದಿವೆಯೇ? ಎಂದು ಹುಡುಕಲಾರಂಭಿಸಿದೆ. ಕೆಲವು ವಿದ್ವಾಂಸರು ಅಂತಹ ಕೆಲಸವನ್ನು ಮಾಡಿರುವರೆಂದು ಕಂಡುಕೊಂಡೆ. ಅಲ್ಲಿ ನಾನು ಹಿಂದುಗಳು ತಮ್ಮ ದೇವರ ಮೂರ್ತಿಗಳನ್ನು ಯಾವ ಮಟ್ಟಕ್ಕೆ ಹೋಗಿ ರಕ್ಷಿಸಿದ್ದಾರೆ ಎಂದು ಕಂಡುಕೊಂಡೆ. ಹಲವು ಶತಮಾನಗಳನ್ನು ಕಳೆದು ಆ ದೇವರುಗಳನ್ನು ಅವರು ಮತ್ತೆ ಅದೇ ದೇವಸ್ಥಾನದಲ್ಲಿ ಮತ್ತೆ ಪ್ರತಿಷ್ಠಾಪಿಸಲಾಗಿದೆ-ಎನ್ನುವುದನ್ನೂ ತಿಳಿದೆ.

ಅವರ ಈ ಸಿದ್ಧಾಂತವನ್ನು ನಿರೂಪಿಸಲು ಅವರು ಅನೇಕ ಉದಾಹರಣೆಗಳನ್ನು ನೀಡಿದ್ದಾರೆ. ಅದರಲ್ಲಿ ೯ನೇ ಶತಮಾನದಲ್ಲಿ ಕೊಲ್ಲಾಪುರದ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಮೊದಲು ಶಕ್ತಿಮಾತೆಯ ಪೂಜೆ ನಡೆಯುತ್ತಿತ್ತೆಂದು ಉಲ್ಲೇಖವಿದೆ. ದಕ್ಷಿಣ ಭಾರತದ ಮೇಲೆ ಇಸ್ಲಾಮಿನ ಆಕ್ರಮಣ ಆರಂಭವಾದಾಗ, ದೇವಸ್ಥಾನದಿಂದ ಮೂರ್ತಿಯು ಕಾಣೆಯಾಯಿತು. ದೇವಸ್ಥಾನದ ಕಟ್ಟಡವನ್ನು ಸ್ಥಾನೀಯ ಆಡಳಿತ ಅಧಿಕಾರಿಗಳ ಕಛೇರಿಯನ್ನಾಗಿ ಬಳಸಿಕೊಳ್ಳಲಾಯಿತು. ಕೆಲವು ಶತಮಾನಗಳ ನಂತರ ೧೮ನೇ ಶತಮಾನದಲ್ಲಿ ಕೊಲ್ಲಾಪುರವನ್ನು ಸಾಂಬಾಜಿ ದ್ವಿತೀಯರು ಆಳುತ್ತಿದ್ದ ಕಾಲದಲ್ಲಿ ಅವರು ದೇವತಾ ಮೂರ್ತಿಗಾಗಿ ಹುಡುಕಾಟವನ್ನು ಪ್ರಾರಂಭಿಸಿದರು. ಅವರು ಒಬ್ಬ ಆರಾಧಕನ ಮನೆಯಲ್ಲಿ ಮೂರ್ತಿ ಇರುವುದನ್ನು ತಿಳಿದು ಮೂರ್ತಿಯನ್ನು ಮತ್ತೆ ದೇವಸ್ಥಾನದಲ್ಲಿ ಪ್ರತಿಷ್ಠಾಪನೆ ಮಾಡಿದರು. ನಂತರ ಇಂದಿನವರೆಗೂ ಪೂಜಾದಿಗಳು ನಡೆದುಕೊಂಡು ಬರುತ್ತಿವೆ. ಆದ್ದರಿಂದ ಹಿಂದು ದೇವಸ್ಥಾನಗಳನ್ನು ಹಾಳುಮಾಡಿದ ಮೂರ್ತಿಗಳನ್ನು ವಿರೂಪಗೊಳಿಸಿದ, ಅಪವಿತ್ರ ಮಾಡಿದ ದಾಖಲೆಗಳು ಇಲ್ಲವೆಂದು ಹೇಳುವುದಕ್ಕೆ ಬದಲು ಯಾರಾದರೂ ಅದಕ್ಕೆ ಬೇರೆ ರೀತಿಯಲ್ಲಿ ದೇವರ ಮೂರ್ತಿಗಳನ್ನು ಅಡಗಿಸಿಟ್ಟು, ಬೇರೆ ಕಡೆ ಸ್ಥಾಪಿಸಿ ಮತ್ತೆ ಅದೇ ಸ್ಥಾನಕ್ಕೆ ತಂದು ಪ್ರತಿಷ್ಠಾಪಿಸಿದ ಘಟನೆಗಳ ಬಗ್ಗೆ ಶೋಧ ನಡೆಸಬೇಕು. ಇದನ್ನು ಗಮನಿಸಿದರೆ ಆ ರೀತಿ ಮಾಡಿರದಿದ್ದರೆ ಆ ಮೂರ್ತಿಗಳಗೆ ಒದಗಬಹುದಾಗಿದ್ದ ’ಘೋರ ಕೊನೆ’ ಹೇಗಾಗುತ್ತಿದ್ದಿತೆಂಬ ಕಲ್ಪನೆ ಮೂಡುತ್ತದೆ.

ಅದಕ್ಕಿಂತ ಹೆಚ್ಚಾಗಿ ಎಡಪಂಥದ ಇತಿಹಾಸ ತಜ್ಞರು ಹಿಂದುಗಳಲ್ಲಿಯೇ ಅವರ ದೇವಸ್ಥಾನಗಳ ಮೇಲೆ ಆಕ್ರಮಣ ನಡೆಸಿ ದೇವತಾ ಮೂರ್ತಿಗಳನ್ನು ತೆಗೆದುಕೊಂಡು ಹೋಗುವ ಪದ್ಧತಿ ಇದ್ದಿತೆಂದು ಹೇಳುವಾಗ ಅವರು ಹಿಂದು ರಾಜರುಗಳು ವಾಸ್ತವವಾಗಿ ದೇವರ ಮೂರ್ತಿಗಳನ್ನು ನಾಶಪಡಿಸುತ್ತಿದ್ದರೆಂದು ತಿಳಿದು ಹೇಳಿರುತ್ತಾರೆ. ಆದರೆ ಹಿಂದು ರಾಜರುಗಳು ವಾಸ್ತವವಾಗಿ ಹೊಂದಿದ್ದ ಉದ್ದೇಶವೆಂದರೆ ದೇವರನ್ನು ಬೇರೆ ಸ್ಥಳದಲ್ಲಿ ಪ್ರತಿಷ್ಠಾಪಿಸುವುದೇ ಆಗಿರುತ್ತದೆ. ಅದನ್ನು ತಮ್ಮದನ್ನಾಗಿಸಿಕೊಂಡು ಪೂಜೆಗಳನ್ನು ನಡೆಸುವುದಾಗಿರುತ್ತದೆ, ಇನ್ನೂ ಭವ್ಯವಾದ ದೇವಾಲಯದ ನಿರ್ಮಾಣ ಮಾಡುವುದಾಗಿರುತ್ತದೆ. ಅಂತಹ, ಅಂದರೆ ಹಿಂದು ರಾಜರು ತಮ್ಮ ಇಷ್ಟದೇವರ ಮೂರ್ತಿಯನ್ನು ಬೇರೆ ಸ್ಥಳದಿಂದ ತಂದು ಹೆಚ್ಚಿನ ಗೌರವವನ್ನು ನೀಡಿ, ಹೆಚ್ಚು ಭಾವನಾತ್ಮಕ ಹಾಗೂ ಆಧ್ಯಾತ್ಮಿಕ ಶಕ್ತಿಯ ಸ್ಥಾನ ನೀಡಿರುವ ಅರ್ಧ ಡಜ಼ನ್ ಘಟನೆಗಳಿರಬಹುದು ಅಷ್ಟೇ! ಆ ರಾಜರು ತಾವು ತೆಗೆದುಕೊಂಡು ಬಂದ ಮೂರ್ತಿಯನ್ನು ಹೆಚ್ಚು ಗೌರವ ಭಕ್ತಿಯಿಂದ ಪ್ರತಿಷ್ಠಾಪಿಸಿರುತ್ತಾರೆ. ಆದರೆ ಮುಸ್ಲಿಮರ ಅಭ್ಯಾಸವು ಇದಕ್ಕೆ ವಿರುದ್ಧವಾಗಿರುತ್ತದೆ. ಅವರು ದೇವರ ಮೂರ್ತಿಗಳನ್ನು ಭಗ್ನಮಾಡಿ, ಮುರಿದ ಮೂರ್ತಿಗಳನ್ನು ಅಲ್ಲಿಗೆ ಬರುವವರು ಅದರ ಮೇಲೆ ಘಟ್ಟಿಸಿ ನಡೆದು ಸವೆಸಿ ಧೂಳನ್ನಾಗಿಸಲೆಂದು ಮಸೀದಿಯ ಬಳಿ ನಡೆದಾಡುವ ದಾರಿಯಲ್ಲಿ ಹಾಕಿದ್ದಾರೆ. ಆದ್ದರಿಂದ ಹಿಂದು ರಾಜರ ಮೂರ್ತಿಯನ್ನು ವಶಕ್ಕೆ ತೆಗೆದುಕೊಳ್ಳುತ್ತಿದ್ದುದು ಮತ್ತು ಮುಸ್ಲಿಮ್ ಆಕ್ರಮಣಕಾರರು ಮೂರ್ತಿಗಳನ್ನು ನಾಶಮಾಡುತ್ತಿದ್ದುದರ ವಿಶ್ಲೇಷಣೆ ಮತ್ತು ಅವುಗಳ ನಡುವೆ ವ್ಯತ್ಯಾಸವೇ ಇಲ್ಲದೆ, ಸಮವಾಗಿದೆ ಎಂದೆನ್ನುವುದು ಶೈಕ್ಷಣಿಕವಾಗಿ ಅನ್ಯಾಯವಾದುದೂ ಅಸಮರ್ಪಕವಾದುದೂ ಆಗಿದೆ.

ಪ್ರತಿಭಟನೆಯ/ಪ್ರತಿವಾದ ಲೇಖನಗಳೇ ಇಲ್ಲದಿರುವುದು:

ನಾನು ಅನೇಕ ವಿಧವಾದ ಎದುರಾಳಿಗಳನ್ನು ಎದುರಿಸುತ್ತಿರುತ್ತೇನೆ.. ಅದರಲ್ಲಿ ಪಾಶ್ಚಿಮಾತ್ಯ ವಿದ್ವಾಂಸರುಗಳೂ ಇರುವರು. ಅವರನ್ನು ಅವರದ್ದೇ ನಾಡಿನಲ್ಲಿ, ಹಾಗೂ ಭಾರತದ ಎಡಪಂಥದವರನ್ನೂ ಎದುರಿಸಿದ್ದೇನೆ, ಹೇಳಬೇಕೆಂದರೆ ಭಾರತದ ಎಡಪಂಥದವರು ಪಾಶ್ಚಾತ್ಯರೊಂದಿಗೆ ಸೇರಿ ಕಾರ್ಯವೆಸಗುತ್ತಿದ್ದಾರೆ. ಹಿಂದು ವಿದ್ವಾಂಸರ ಪಕ್ಷದಲ್ಲಾದರೆ ನಾನು ಅನೇಕ ಸಮಸ್ಯೆಗಳನ್ನು ಗುರುತಿಸಿದ್ದೇನೆ. ಅವುಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳಲ್ಲಿ ಬಿರುಸು ಇಲ್ಲ, ಹೊಟ್ಟೆಕಿಚ್ಚು ಮತ್ತು ಶೈಕ್ಷಣಿಕ ಗುಣಮಟ್ಟದಲ್ಲಿ ಕಡಿಮೆ ಇರುವುದು ಮುಖ್ಯವಾದುವು. ನಾವು ಅನೇಕ ಸಭೆಗಳನ್ನು, ಸಮ್ಮೇಳನಗಳನ್ನು ಮತ್ತು ಮಂಥನಗಳನ್ನು ಆಯೋಜಿಸುತ್ತೇವೆ, ಬಹಳಷ್ಟು ಜನರು ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ನೀಡುವರು. ಎಲ್ಲರೂ ಭಾವನಾತ್ಮಕ ಘೋಷಣೆಗಳನ್ನು ಹೊರಹಾಕುವರಲ್ಲದೆ ಘನವಾದ ಸಂಶೋಧನೆಗಳನ್ನು ನಡೆಸಿ ಫಲವನ್ನು ಪ್ರಕಟಿಸುವ ಪ್ರಯತ್ನವನ್ನು ಮಾಡುತ್ತಿಲ್ಲ. ಮೀನಾಕ್ಷಿ ಜೈನ್‌ರೂ ಸಹ ಈ ಮಾತಿಗೆ ಸಮ್ಮತಿಸುತ್ತಾರೆ ಮತ್ತು ಅವರು ಹಿಂದುಗಳೆಂದು ಕರೆದುಕೊಳ್ಳುವ ಪಂಡಿತರುಗಳು ವಿದ್ವಾಂಸರುಗಳು ಸಂಶೋಧನೆಗಿಂತ ಘೋಷಣೆಗಳಿಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡುವರು ಎಂದು ಅಭಿಪ್ರಾಯ ಪಡುತ್ತಾರೆ. ಅವರು :

ಅನೇಕ ಬಾರಿ ನಾನು ಸಂಶೋಧನೆಯನ್ನು ಆರಂಭಿಸಿದಾಗ ಕೆಲವು ಪಶ್ಚಿಮದ ವಿದ್ವಾಂಸರನ್ನು ಭೇಟಿಯಾಗುತ್ತಿರುತ್ತೇನೆ, ಅವರು ’ನಮ್ಮ ಮತ್ತು ಎಡಪಂಥೀಯರ ಬರಹವನ್ನು ನೋಡಿ ನೀವು ಬಹಳಷ್ಟು ವಿಚಲಿತಗೊಂಡಿರುತ್ತೀರಿ, ದಯವಿಟ್ಟು ನಿಮ್ಮ ’ಪ್ರತಿಭಟನೆಯ ಲೇಖನ’ಗಳನ್ನು ನೀಡಿರಿ. ಅವುಗಳನ್ನು ನಾವು ಅಭ್ಯಾಸ ಮಾಡುತ್ತೇವೆ. ನಿಮ್ಮಿಂದ ಯಾವ ಪ್ರತಿಕ್ರಿಯೆಯೇ ಇಲ್ಲವಲ್ಲ’ ಎನ್ನುವರು ಎನ್ನುತ್ತಾರೆ..

ಈ ನಿಟ್ಟಿನಲ್ಲಿ ಭಾರತದ ಹೊಸ ಸರ್ಕಾರವೂ ಯಾವ ರೀತಿಯಲ್ಲಿಯೂ ಸಹಾಯ ಮಾಡಿಲ್ಲ, ಏಕೆಂದರೆ ನಾನು ಆಯಕಟ್ಟಿನ ಅಧಿಕಾರ ಸ್ಥಾನಗಳಲ್ಲಿ ಇನ್ನೂ ಯಾವುದೋ ಒಂದು ಪಕ್ಷಕ್ಕೆ ಅಥವಾ ರಾಜಕಾರಣಿಗೆ ನಿಷ್ಠರಾದ ಹಳೆಯ ’ಕಾವಲುಗಾರ’ರೇ ಇರುವುದನ್ನು ಕಂಡಿದ್ದೇನೆ. ಹೇಳಬೇಕೆಂದರೆ ಸ್ಥಾನಗಳನ್ನಲಂಕರಿಸಿರುವವರ ಪ್ರವಚನಗಳು ಇನ್ನೂ ಕೆಟ್ಟದಾಗಿಯೇ ಇರುತ್ತಿವೆ. ಅದಕ್ಕೆ ಸೇರಿದಂತೆ ಹಿಂದು ಸಂಸ್ಥೆಗಳು ಯಾವುದೇ ಒಂದು ವಿಷಯವನ್ನು ಕುರಿತು ಯಾವ ಗಣನೀಯ ಸಂಶೋಧನಾ ಕಾರ್ಯವನ್ನೂ ನಡೆಸಿಲ್ಲ, ಸಂಶೋಧನಾ ಗ್ರಂಥದ ಪ್ರಕಟಣೆಗೆ ಅಥವಾ ಒಂದು ಶೈಕ್ಷಣಿಕ ಫಲಿತಾಂಶಕ್ಕೆ ಸಹಾಯಕವಾಗಿಲ್ಲ. ಹೀಗಾಗಿ ಯಾರಾದರೂ ಅಧ್ಯಯನ ನಡೆಸಬೇಕೆಂದರೆ ಎಡಪಂಥದ ಪಂಡಿತರ ಸಂಶೋಧನೆಗಳನ್ನೇ ಆಧಾರವಾಗಿ ಬಳಸಬೇಕಾಗುತ್ತದೆ. ಏಕೆಂದರೆ ಅವರು ಅನೇಕ ಸಾಮಾಜಿಕ-ರಾಜಕೀಯ ಮತ್ತು ನಾಗರೀಕತೆಗಳ ವಿಚಾರಗಳಲ್ಲಿ ಬಹಳಷ್ಟು ಶೋಧಗ್ರಂಥಗಳನ್ನು ಪ್ರಕಟಿಸಿ ಪೇರಿಸಿದ್ದಾರೆ. ಆದ್ದರಿಂದ ನನ್ನಂತಹ ಮತ್ತು ಮೀನಾಕ್ಷಿಯವರಂತಹ ’ಸ್ವತಂತ್ರ ಸಂಶೋಧಕ’ರುಗಳು ಮಾತ್ರವೇ ಅಧಿಕೃತ ನಿಷ್ಠ, ವಿಷಯ ಕೇಂದ್ರಿತ ಸಂಶೋಧನಾ ಗ್ರಂಥಗಳನ್ನು ಪ್ರಕಟಿಸಿರುವುದು. ಸರಕಾರವಲ್ಲದಿದ್ದರೆ ಇದಕ್ಕೆ ಹಿಂದು ಸಂಸ್ಥೆಗಳು ಸಹಾಯ ಮಾಡಿರುವರೆಂದೇನೂ ಇಲ್ಲ. ನನಗೆ ಯಾರಿಂದಲೂ ಸ್ವಲ್ಪವೂ ಸಹಾಯ ದೊರಕಿಲ್ಲ.

ಆಚರಣೆಯಿಂದ ’ಹಿಂದು’ ಆಗಿರುವ ಒಳ್ಳೆಯ ವಿದ್ವಾಂಸರು ಮುಂದೆ ಬಂದರೆ ಮಾತ್ರವೇ ಒಂದು ಒಳ್ಳೆಯ ಧಾರ್ಮಿಕ ಸಂಶೋಧನಾ ಗ್ರಂಥಗಳ ಸಮುಚ್ಛಯವು ದೊರೆಯುವುದು. ಇದುವರೆಗೆ ಹಿಂದುಗಳು ಯಾವ ಒಳ್ಳೆಯ ವಿದ್ವಾಂಸರನ್ನೂ ಸಿದ್ಧಪಡಿಸಿಲ್ಲ. ’ವಿದ್ಯಾರ್ಥಿವೇತನ’/ ’ಸಂಶೋಧನಾ ಸಂಭಾವನೆ’ಯು ಬಹಳ ದೀರ್ಘಕಾಲದ ಯೋಜನೆಯಾಗಿದ್ದು ಬಹಳ ಸಂಪನ್ಮೂಲಗಳನ್ನು, ಹಣ ಮತ್ತು ಸಮಯದ ರೂಪದಲ್ಲಿ, ಹೂಡಬೇಕಾಗಿ ಬರುತ್ತದೆ. ಅನೇಕ ವಿದ್ವಾಂಸರಲ್ಲಿ ಸಾಕಷ್ಟು ಸ್ಪರ್ಧಾಕ್ಷಮತೆ ಇಲ್ಲ, ಹಾಗೂ ಅವರು ತಾರ್ಕಿಕ ವಾದಕ್ಕೆ ಬದ್ಧರಾಗಿರದೆ ಸಾಕಷ್ಟು ತಪವನ್ನಾಚರಿಸದೆ ಕೇವಲ ಪ್ರಚಾರವನ್ನು ಹೊಂದುವ ಆಸೆಯನ್ನು ಹೊಂದಿರುತ್ತಾರೆ. ಮೀನಾಕ್ಷಿ ಜೈನ್‌ರು ಸಂಶೋಧನೆಗೆ ಪ್ರೇರಣೆಯು ನಮ್ಮೊಳಗಿನಿಂದ ಬರಬೇಕು ಎಂಬುದನ್ನು ಗಮನಿಸಿ ಒಪ್ಪಿಕೊಳ್ಳುತ್ತಾರೆ. ಹಾಗೂ ಸಾಧಕನು ತಮ್ಮ ಸ್ಥಾನವನ್ನು ನ್ಯಾಯಯುತವಾಗಿ ಒಪ್ಪಿಕೊಳ್ಳಬೇಕು ಮತ್ತು ತ್ಯಾಗಕ್ಕೆ ಸಿದ್ಧರಿರಬೇಕು. ತ್ಯಾಗವೆಂದರೆ ತಮ್ಮ ಜೀವನದ ಅನೇಕ ವರ್ಷಗಳನ್ನು ಸಂಶೋಧನಾ ಗ್ರಂಥದ ಉತ್ಪಾದನೆಗೆ ಮೀಸಲಿಡಲು ಸಿದ್ಧರಿರಬೇಕು. ಅವರ ನಿಷ್ಠ ಶ್ರಮದ ಕಾರ್ಯಕ್ಕೆ ಯಾವ ಪ್ರಖ್ಯಾತಿ ಅಥವಾ ಭವ್ಯತೆಗಳ ಲೇಪವೂ ಇರುವುದಿಲ್ಲ.

ಅನೇಕ ವಿದ್ವಾಂಸರುಗಳು ಈ ಬೌದ್ಧಿಕ ಕಾರ್ಯವನ್ನು ಯಾವ ಸಿದ್ಧಾಂತವನ್ನು ಸೋಲಿಸಲು/ ಉರುಳಿಸಲು/ ಅಸ್ಥಿರಗೊಳಿಸಲು ಮಾಡುತ್ತಿರುವೆವೆಂಬ ಕಲ್ಪನೆಯನ್ನೂ ಹೊಂದಿಲ್ಲ. ಅವರು ಸರಿಯಾಗಿ ತಮ್ಮ ಎದುರಾಳಿಯ ’ಪೂರ್ವ ಪಕ್ಷ’ವನ್ನು ಮಾಡುವುದಿಲ್ಲ, ಅದೇ ಒಂದು ದೊಡ್ಡ ಸಮಸ್ಯೆ. ಕೆಲವರು ಸುಮ್ಮನೆ ನಿಷ್ಕ್ರಿಯರು ಅಥವಾ ಸ್ಪರ್ಧಾತ್ಮಕರಾಗಿರುವುದಿಲ್ಲ ಮತ್ತು ಬೇಗ ಅಭಿವೃದ್ಧಿ ಹೊಂದಲು ರಾಜಕೀಯ ವ್ಯಕ್ತಿಗಳ ಕೃಪಾದೃಷ್ಟಿಯನ್ನು ಪಡೆಯಲು ಹಾತೊರೆಯುತ್ತಾರೆ. ಕೆಲವರು ಕೃತಿಚೌರ್ಯ ಮತ್ತು ಅಪ್ರಕಟಿತ ಲೇಖನ/ ಬರಹಗಳಿಗೆ ಮೊರೆಹೋಗುತ್ತಾರೆ. ಅಲ್ಲಿ-ಇಲ್ಲಿಂದ ಲೇಖನಗಳ ಭಾಗಗಳನ್ನು ಆಯ್ದು ತಮ್ಮ ಲೇಖನವನ್ನು ಮಾಡಿಕೊಳ್ಳುವರು. ನಮ್ಮಲ್ಲಿ ಪೊಲ್ಲಾಕ್‌ರ ಕೃತಿಗಳನ್ನು ಟೀಕಿಸಲು ಹತ್ತು ವಿಚಾರಗಳಲ್ಲಿ, ಹತ್ತು ಸಮಿತಿಗಳು ಶ್ರಮಿಸುತ್ತಿದ್ದರೂ, ಅದಕ್ಕಾಗಿಯೇ ನಾವು ಇನ್ನೂ ಹೆಚ್ಚಿನ ಲೇಖನಗಳಿಗೆ ಆಹ್ವಾನಿಸಿದ್ದು ಲೇಖಕರಿಗೆ ಉತ್ತೇಜನ ಧನ ಮತ್ತು ನಿರ್ವಹಣಾ ಸಂಭಾವನೆಯನ್ನೂ ನೀಡಲು ಸಿದ್ಧರಿದ್ದೇವೆ. ಬಹುತೇಕ ಸ್ವಯಂ ಘೋಷಿತ ಹಿಂದು ಪಂಡಿತರು ಪೊಲ್ಲಾಕ್‌ರ ಕೃತಿಗಳನ್ನು ಅಧ್ಯಯನ ಮಾಡಿರುವುದಿಲ್ಲ ಹಾಗೂ ಅಧ್ಯಯನವನ್ನೇ ಮಾಡಲಿಚ್ಛಿಸುವುದಿಲ್ಲ. ಆದರೂ ಅವರು ಹೇರಳವಾಗಿ ಸಲಹೆಗಳನ್ನು ನೀಡಲಿಚ್ಛಿಸುತ್ತಾರೆ.

ಮೀನಾಕ್ಷಿ ಜೈನ್‌: ಅವರಲ್ಲಿ ಒಬ್ಬರಿಗೆ ನಾನು ಏನು ಹೇಳಿದೆನೆಂದರೆ ನಿಮಗೆ ಇರ್ಫಾನ್ ಹಬೀಬ್, ಮುಂತಾದವರ ವಿಚಾರ ತಿಳಿದಿದೆ. ಆದರೆ ಅವರ ನಂತರದ ಪೀಳಿಗೆಯ ಪಶ್ಚಿಮದ ವಿದ್ವಾಂಸರುಗಳ ವಿಚಾರವೇನು, ಇವರ ನಂತರ ಈ ಕಾರ್ಯಗಳನ್ನು ಮುಂದುವರಿಸುವವರು ಯಾರು.

ಎರಡನೇ ಪೀಳಿಗೆಯವರು ಈ ಸೈದ್ಧಾಂತಿಕ ಹೋರಾಟದಿಂದ ಹೊರಗೆ ಉಳಿಯಲು ನಿರ್ಧರಿಸಿದ್ದು ಅವರು ನಿಷ್ಠ ಸಂಶೋಧನೆಯನ್ನು ’ಶುದ್ಧ ಶೈಕ್ಷಣಿಕ ವಿಚಾರ’ಗಳಲ್ಲಿ ಮಾಡುತ್ತಿದ್ದಾರೆ. ಹೊಸ ಪೀಳಿಗೆಯ ಪಾಶ್ಚಿಮಾತ್ಯ ವಿದ್ವಾಂಸರು ಬಹಳಷ್ಟು ಸಂಶೋಧನಾ ಗ್ರಂಥಗಳನ್ನು ಉತ್ಪಾದಿಸಿದ್ದಾರೆ. ನಿಮಗೆ ’ನಾವೂ ಅವರನ್ನು ಎದುರಿಸಿ ನಿಲ್ಲಬೇಕು’ ಎನ್ನಿಸುವುದಿಲ್ಲವೇ? ಎಂದು ಹೇಳಿದೆ. ಆದರೆ ಇವರಿಗೆ ಅವರ ಹೆಸರುಗಳೂ ಸಹ ತಿಳಿಯದು!! ಎನ್ನುತ್ತಾರೆ.

ನನ್ನ ಕೃತಿಗಳ ಭಾಗಗಳನ್ನು ಇವರುಗಳೇ ತಮ್ಮ ಕೃತಿಯಲ್ಲಿ ಅವರು ಅದನ್ನು ಎಲ್ಲಿಂದ ಪಡೆದರೆಂಬ ಉಲ್ಲೇಖವನ್ನೂ ಮಾಡದೆ ಅಥವಾ ಸರಿಯಾದ ಮೌಲ್ಯವನ್ನೂ ನೀಡದೆ ತಮ್ಮ ಸಂಶೋಧನೆಯೇ ಎಂಬಂತೆ ಬಳಸಿಕೊಂಡಿದ್ದಾರೆ. ಅವರು ನನ್ನ ಲೇಖನವನ್ನು ನಕಲು ಮಾಡಿಕೊಂಡು ಅಜ್ಞಾನ ತುಂಬಿದ ರಾಜಕೀಯ ವಲಯದಲ್ಲಿ ಮುಂದುವರಿಯುತ್ತಾರೆ. ಈಗಿನ ಹಿಂದು ರಾಜಕೀಯ ವಲಯವು ಜ್ಞಾನದ ಅಭಾವವನ್ನು ಹೊಂದಿದೆ. ಆದ್ದರಿಂದ ಕೆಲವರು ಆ ಖಾಲಿ ಜಾಗವನ್ನು ತುಂಬುತ್ತಾ ತಾವು ಮುಂದುವರಿಯಲು ನೋಡುತ್ತಿರುತ್ತಾರೆ. ಅವರು ಅಪ್ರಾಮಾಣಿಕ ವಿಧಾನಗಳಿಂದ ತಮ್ಮ ಗುರಿಯನ್ನು ಸಾಧಿಸುತ್ತಾರೆ. ಇದು ಸಮಸ್ಯೆ!!

ಶ್ರೀಮತಿ ಮೀನಾಕ್ಷಿ ಜೈನ್‌ರು ಹಿಂದುಗಳು ಅದೆಷ್ಟು ಬೌದ್ಧಿಕವಾಗಿ ದುರ್ಬಲರಾಗಿದ್ದಾರೆಂಬುದನ್ನು ಕಂಡುಹಿಡಿದು ತೋರಿದ್ದಾರೆ. ಅದು ಬಹಳ ಆಶ್ಚರ್ಯವನ್ನುಂಟು ಮಾಡುತ್ತದೆ. ಇದಕ್ಕೆ ಮೊದಲು ಹಿಂದುಗಳು ಅತ್ಯಂತ ಪ್ರತಿಕೂಲ ಪರಿಸ್ಥಿತಿಯಲ್ಲಿ ಹಾಗೂ ಕಠಿಣ ವಾತಾವರಣದಲ್ಲಿಯೂ ಕ್ರಿಯಾಶೀಲರಾಗಿದ್ದವರು, ಸಮರ್ಪಕವಾಗಿ ಎದುರಾಳಿಯ ’ಪೂರ್ವಪಕ್ಷ’ವನ್ನು ಮಾಡಿದವರು, ಸಂದರ್ಭವನ್ನು ಹೇಗೆ ಎದುರಿಸಬೇಕೆಂದು ತಿಳಿದವರು, ತಮ್ಮ ಅಸ್ತಿತ್ವ ಮತ್ತು ಸಂಸ್ಕೃತಿಯನ್ನು ಕಾಪಾಡಿಕೊಂಡಿದ್ದರು. ಅವರು ಅತ್ಯಂತ ಎಚ್ಚರವಾಗಿದ್ದವರು ಮತ್ತು ತಮ್ಮ ಸಂಸ್ಕೃತಿ ನಾಗರೀಕತೆಯ ಮತ್ತು ಪರಂಪರೆಯ ಬಗ್ಗೆ ಅಭಿಮಾನವನ್ನು ಹೊಂದಿದ್ದವರು. ಈಗ ಹಿಂದುಗಳು ಇಷ್ಟು ನಿರ್ಬಲ/ದುರ್ಬಲರಾಗಿರುವುದು ಅವರ ರೀತಿಯಾಗಿ ಹೋಗಿದೆ. ಇದನ್ನು ನಾನು ’ಮೊರಾನೈಜೇಶನ್ ಆಫ್ ಹಿಂದೂಸ್’ ಅಂದರೆ ’ಹಿಂದುಗಳನ್ನು ಬೌದ್ಧಿಕವಾಗಿ ನಿರ್ವೀರ್ಯರನ್ನಾಗಿಸುವಿಕೆ’ ಎಂದು ಕರೆಯುತ್ತೇನೆ.

ಭವಿಷ್ಯದ ಸ್ವದೇಶೀ ಇಂಡಾಲಜಿಯ ಸರಣಿಗಳು:

ನಾವು ಭವಿಷ್ಯದ ಸ್ವದೇಶೀ ಇಂಡಾಲಜಿಯ ಸರಣಿಗಳನ್ನು, ಒಂದು ಗೊತ್ತಾದ ಹಿನ್ನೆಲೆಯ ಪರಂಪರೆ/ ಶಾಲೆಯಿಂದ ಬಂದಂತಹ ರೋಮಿಲಾ ಥಾಪರ್, ಇರ್ಫಾನ್ ಹಬೀಬ್ ಮತ್ತು ಅವರ ಶಿಷ್ಯರುಗಳಂತಹ ಇತಿಹಾಸಜ್ಞರ ಕಾರ್ಯಗಳನ್ನು ಅನೂರ್ಜಿತಗೊಳಿಸುವ ಸರಣಿಗಳನ್ನಾಗಿ ರೂಪಿಸುತ್ತಿದ್ದೇವೆ. ಅದಕ್ಕಾಗಿ ಶೋಧ ಲೇಖನಗಳನ್ನು ಆಹ್ವಾನಿಸಿದ್ದೇವೆ. ಹೀಗೆ ಹೊಸ ಯುವ ವಿದ್ವಾಂಸರುಗಳನ್ನು ಕರೆತಂದು ಉತ್ತೇಜಿಸುವುದು ಉದ್ದೇಶವಾಗಿದೆ. ನಾವು ವಿದ್ವಾಂಸರುಗಳನ್ನು ಸಿದ್ಧಪಡಿಸಬೇಕಾದರೆ ನಮಗೆ ನಿರ್ದಿಷ್ಟವಾದ ವಿಷಯದ ಅಗತ್ಯವಿರುತ್ತದೆ ಹಾಗೂ ನಾವು ಅತ್ಯುತ್ತಮ ಯುವ ಮೇಧಾವಿಗಳನ್ನು ಭಾರತದ ಇತಿಹಾಸಕಾರರನ್ನಾಗಿ ಮತ್ತು ಚಿಂತಕರನ್ನಾಗಿ ಹೊಂದಬೇಕೆಂದು ಆಶಿಸುತ್ತೇವೆ. ನಾವು ರೋಮಿಲ ಥಾಪರ್‌ರಂತಹ ಮಹಾನ್ ಯೋದ್ಧರನ್ನು ಅವರ ನೆಲದಲ್ಲಿಯೇ ಎದುರಿಸಲು ಕೇಂದ್ರಿತ ಕಾರ್ಯ ವಿಧಾನವನ್ನು ನಡೆಸಲಿಚ್ಛಿಸುತ್ತೇವೆ.

ಹೊಸ ಸರ್ಕಾರವು ಈ ಆಂತರಿಕ ಆಯಾಮಗಳನ್ನು ಮತ್ತು ಅದರ ರಾಜಕೀಯ ಮಹತ್ವವನ್ನು ಹಾಗೂ ಆ ಸಂಘಟನೆಗಳು ಹೇಗೆ ಕಾರ್ಯ ನೆರವೇರಿಸುವುವು ಎಂಬುದನ್ನೂ ಅರಿತಿಲ್ಲ. ಎಡಪಂಥದ ಇತಿಹಾಸಕಾರರು ಒಂದು ಪರಂಪರೆಯನ್ನೇ ಕಟ್ಟುತ್ತಿದ್ದಾರೆ. ಅದರಲ್ಲಿ ಕೆಲವೇ ಅನಾಸಕ್ತ ಹಿಂದುಗಳನ್ನು ಬಿತ್ತುವುದು ಯಾವ ಬದಲಾವಣೆಯನ್ನೂ ತರಲಾರದು. ಅದಕ್ಕಾಗಿ ನಮಗೆ ನಮ್ಮದೇ ಆದ ಗುರಿಯನ್ನು ಹೊಂದಿರಬೇಕಾಗುತ್ತದೆ. ನಮ್ಮವರೇ ಆದ ಯೋಜನೆಗಳನ್ನು ಹೊಂದಿದ ಸಾಧನೆಯ ಅನುಭವ ಹೊಂದಿದ ಜನರ ಅಗತ್ಯ ಇರುತ್ತದೆ. ಆದ್ದರಿಂದ ನಾವು ಒಂದು ಸಮ್ಮೇಳನವನ್ನು ದ್ರಾವಿಡಿಯನಿಜಂನಿಂದ ತಮಿಳುನಾಡನ್ನು ಮರಳಿ ಹೊಂದುವುದು ಎಂಬ ವಿಷಯವಾಗಿ ಆಯೋಜಿಸಿದ್ದೇವೆ. ಅದಕ್ಕಾಗಿ ನಮ್ಮಲ್ಲಿ ಸಕ್ಷಮ ’ಪುರಾತತ್ವಶಾಸ್ತ್ರ’ದ ಇತಿಹಾಸದ ಪಂಡಿತರಾದ ಪ್ರೊ. ನಾಗಸ್ವಾಮಿಯವರು ಶ್ರಮಿಸುತ್ತಿದ್ದಾರೆ. ನಾವು ಈ ದ್ರಾವಿಡಿಯನ್ ಸಂಚಾಲನೆಯಲ್ಲಿ ಮಿಶನರಿಗಳ ಪಾತ್ರವನ್ನೂ ಅರಿತಿರಲೇಬೇಕು, ಈ ವಿಚಾರದಲ್ಲಿ ಶೋಧ ಗ್ರಂಥಗಳನ್ನು ಹೊರತರುತ್ತೇವೆ.

ಇನ್ನೊಂದು ವಿಚಾರವೆಂದರೆ ’ಆಗಮ’ಗಳದ್ದು, ಏಕೆಂದರೆ ಆಗಮಗಳನ್ನು ಬಹಳವಾಗಿ ಉಪೇಕ್ಷೆ ಮಾಡಲಾಗಿದೆ. ಅವು ಹಿಂದು ಧಾರ್ಮಿಕ ಗ್ರಂಥಗಳ ಬಹಳ ಪಾಲನ್ನು ವ್ಯಾಪಿಸಿವೆ. ಆದ್ದರಿಂದ ನಾವು ’ಆಗಮ’ಗಳ ವಿಚಾರದಲ್ಲಿಯೂ ಒಂದು ಸಮ್ಮೇಳನವನ್ನು ಆಯೋಜಿಸುವೆವು. ನಂತರ ನಾವು ಭಾರತೀಯ ಐತಿಹಾಸಿಕರ ಬಗ್ಗೆ ಸಮ್ಮೇಳನವನ್ನು ಆಯೋಜಿಸುವೆವು. ಇಂದು ಭಾರತದ ರಾಷ್ಟ್ರೀಯ ಭದ್ರತೆಗೆ ಬೆದರಿಕೆ ಇದ್ದು ಅದಕ್ಕೆ ಕಾರಣವಾಗಿರುವ ವಿದೇಶೀ ಶಕ್ತಿಗಳನ್ನು ’ಭಾರತ ವಿಭಜಕ ಶಕ್ತಿ’ ಎಂದು ಕರೆಯುತ್ತೇವೆ, ಅವುಗಳನ್ನು ಕುರಿತ ಒಂದು ಕಾರ್ಯಕ್ರಮವನ್ನು ಹೊಂದಲಿಚ್ಛಿಸುತ್ತೇವೆ. ನಂತರ ಪಾರಂಪರಿಕ ಆರ್ಥಿಕ ನೀತಿಯ ಮೂಲಗಳನ್ನು ಕುರಿತ ಸಮ್ಮೇಳನವನ್ನು ಹೊಂದಿ ಅಲ್ಲಿ ನಮ್ಮ ’ಅರ್ಥಶಾಸ್ತ್ರ’, ’ವಾಣಿಜ್ಯ ಶಾಸ್ತ್ರ’, ’ರಾಜಕೀಯ ಶಾಸ್ತ್ರ’ಗಳು ಇಂದಿನ ಸಂದರ್ಭದಲ್ಲಿ ಹೇಗೆ ಉಪಯುಕ್ತವಾಗುವುವೆಂಬುದರ ಬಗ್ಗೆ ಚರ್ಚೆಗಳನ್ನು ನಡೆಸುವೆವು. ಪ್ರೊ. ವೈದ್ಯನಾಥನ್‌ರು ಈ ವಿಚಾರವನ್ನು ಕುರಿತು ಸಾಕಷ್ಟು ಸಂಶೋಧನೆಯನ್ನು ಮಾಡಿದ್ದಾರೆ. ಅವರು ನಮ್ಮ ಸಲಹಾ ಮಂಡಳಿಯಲ್ಲಿದ್ದು ಮುಂದಾಳುಗಳಾಗಿದ್ದಾರೆ. ನಾವು ವೈದಿಕ ಪರ್ಯಾವರಣ ನೀತಿಯನ್ನು ಕುರಿತು ಏನನ್ನಾದರೂ ಸಾಧಿಸಬೇಕೆಂದು ಆಲೋಚಿಸಿದ್ದೇವೆ. ಕೆಲವು ವೈದಿಕ ಆಚರಣೆಗಳನ್ನು ನಮ್ಮ ದೈನಂದಿನ ಚಟುವಟಿಕೆಯಲ್ಲಿ ಅಳವಡಿಸಿಕೊಂಡರೆ ನಮ್ಮ ವಾತಾವರಣವನ್ನು ಹಾಗೂ ಹಣವನ್ನು ಹಾಳುಮಾಡುವ ರಾಸಾಯನಿಕ ಉತ್ಪಾದನೆಗಳನ್ನು ಎದುರಿಸಬಹುದು.

ಈ ಒಂದೊಂದೂ ವಿಚಾರಗಳು ಬಹಳ ಪ್ರಮುಖವಾದುದು. ಅವು ಬಹಳಷ್ಟು ಸಾಧನೆಯನ್ನು ಅಪೇಕ್ಷಿಸುತ್ತವೆ. ನಮಗೆ ಈ ಕ್ಷೇತ್ರಗಳಲ್ಲಿ ಈಗಾಗಲೇ ಕಾರ್ಯನಿರ್ವಹಿಸಿದ ಹೆಚ್ಚು ವಿದ್ವಾಂಸರುಗಳ ಅಗತ್ಯವಿದೆ. ಅಂತಹವರನ್ನು ಹುಡುಕುವುದು ಬಣವೆಯಲ್ಲಿ ಸೂಜಿಯನ್ನು ಹುಡುಕಿದಂತೆ ಎನ್ನಿಸುತ್ತದೆ. ನಮ್ಮಲ್ಲಿರುವ ಪ್ರತಿಭೆಗಳನ್ನು ಹುಡುಕಿ ತೆಗೆದು, ಪೋಷಿಸಿ, ಅನೇಕ ವರ್ಷಗಳೇ ಆರೈಕೆ ಮಾಡಿ ’ಗೃಹ ಸಮೂಹ’/ ’ದೇಶೀತಂಡ’ವನ್ನು ಕಟ್ಟಬೇಕಾಗಿದೆ. ಇದು ಹಣ್ಣಿನ ಮರಗಳನ್ನು ನಡುವಂತಹ ಕೆಲಸ, ಇಂದು ನೆಟ್ಟ ಮರಗಳು ಮುಂದೆಂದೋ ಫಲನೀಡುವುವು. ಇದು ನಮ್ಮ ಕಾರ್ಯಯೋಜನೆಯಾಗಿದೆ.

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments