ಎಚ್ಚರ..! ನಿಮ್ಮ ಸುತ್ತಲೂ ಇರುವರಿವರು…
– ಸುಜಿತ್ ಕುಮಾರ್
ಆ ವಯಸ್ಸೇ ಹಾಗೆ. ಅರೆ ಬರೆ ಬೆಂದ ಬಿಸಿನೆಸ್ ಪ್ಲಾನ್ ಗಳನ್ನೇ ಕನಸಿನ ಕೋಟೆಯನ್ನಾಗಿಸಿಕೊಂಡು ಅನುಷ್ಠಾನಗೊಳಿಸಲು ಸದ್ಯಕ್ಕಂತೂ ಸಾಧ್ಯವಿಲ್ಲದಿದ್ದರೂ ಮಾಡೇ ತೀರುತ್ತೇನೆಂಬ ಹೆಬ್ಬಯಕೆ. ತಿಂಗಳಿಗೆ ಒಂದಿಷ್ಟು ಪಾಕೆಟ್ ಮನಿ, ತಲೆಯ ತುಂಬೆಲ್ಲಾ ಬ್ರಾಂಡೆಡ್, ಹೈಗ್ರೇಡ್ ವಸ್ತುಗಳ ಕಾರುಬಾರು, ಊರು ಸುತ್ತಲು ಗೆಳೆಯನ ಸೆಕೆಂಡ್ ಹ್ಯಾಂಡ್ ಬೈಕು ಹಾಗು ಕ್ಲಾಸಿಗೆ ಬಂಕು ಹೀರೋಗಿರಿಗೆ ಸೊಂಪು! ಅಚ್ಚುಕಟ್ಟಾಗಿ ಓದಿ ಸ್ವಂತ ಕಾಲಮೇಲೆ ನಿಲ್ಲುವ ಕನಸ್ಸನ್ನು ಕಟ್ಟಿ ಹೆಗಲೇರಿಸಿ ಕಳುಹಿಸುವ ಪೋಷಕರ ವಾರಕ್ಕೋ ತಿಂಗಳಿಗೋ ತಳ್ಳುವ ಒಂದಿಷ್ಟು ಹಣವನ್ನು ‘ಇಂದು ಇಂದಿಗೆ.. ನಾಳೆ ನಾಳೆಗೆ’ ಎಂಬಂತೆ ಭಕ್ಷಿಸಿ, ತಿಂಗಳಾಂತ್ಯದ ವೇಳೆಗೆ ಅತಂತ್ರದ ಸ್ಥಿತಿಯ ಮುಸಿಯನಂತೆ ಪಿಳಿ ಪಿಳಿ ಕಣ್ಣುಗಳನ್ನು ಬಿಡುತ್ತಾ ಪಕ್ಕದ ಗೂಡಂಗಡಿಯ ಟೀ ಬನ್ನುಗಳನ್ನೇ ಎರಡೊತ್ತಿನ ಆಹಾರವನ್ನಾಗಿ ಮಾಡಿಕೊಂಡು ‘ಏನಾದ್ರು ಬಿಸಿನೆಸ್ ಮಾಡ್ಬೇಕು ಮಗಾ’ ಎನ್ನುತ ಕ್ಷಣಮಾತ್ರದಲ್ಲಿ ಅಂಬಾನಿಗಳಾಗಲು ಹವಣಿಸುತ್ತಾ ದಿನಕಳೆಯುವ ಯುವಕರೇ ಈ ಮಹಾ ಷಡ್ಯಂತ್ರದ ಸುಲಭದ ಬಲಿಪಶುಗಳು!
ಹೆಚ್ಚು ಕಡಿಮೆ ಕಳೆದ ಒಂದುವರೆ ದಶಕಗಳಿಂದ ವಿಶ್ವದಾದ್ಯಂತ ತನ್ನ ಕರಾಳ ಛಾಪನ್ನು ಮೂಡಿಸಿರುವ ಈ ಷಡ್ಯಂತ್ರಗಳಿಗೆ ಬಿಸಿನೆಸ್ ಎಂಬ ಲೇಪವನ್ನು ಬಳಿದಿರುವುದು ಶೋಚನೀಯ ಸಂಗತಿ. ಮೀಸೆ ಚಿಗುರುತ್ತಿರುವ, ಅರೆಪಕ್ವ ತಿಳಿವಳಿಕೆಯ ಅಮಾಯಕ ಯುವಕರ ನೆಮ್ಮದಿಯನ್ನು, ಕೆಲವೊಮ್ಮೆ ಜೀವನವನ್ನೇ ಹಾಳುಗೆಡವಿ ತನ್ನ ಜೋಳಿಗೆಯನ್ನು ತುಂಬಿಕೊಳ್ಳುವ ಈ ಷಡ್ಯಂತ್ರವನ್ನು ಮಲ್ಟಿ ಲೇವಲ್ ಮಾರ್ಕೆಟಿಂಗ್ (MLM) ಎಂದು ಕರೆಯಲಾಗುತ್ತದೆ. ಪ್ರಸ್ತುತ ಜಾರಿಯಲ್ಲಿರುವ ಪ್ರತಿಯೊಂದು MLMಗಳೂ ಇಂತಹ ಡೋಂಗಿ ಬಿಸಿನೆಸ್ ಗಳೆಂದು ಹೇಳಲಾಗದಿದ್ದರೂ ಮೇಲಿಂದ ಮೇಲೆ ಅವಲೋಕಿಸಿದರೆ ಇಂತವುಗಳ ಬಹುಪಾಲು ಕಾರ್ಯಚಟುವಟಿಕೆಗಳ ಗೂಡಾರ್ಥ ಅಮಾಯಕರನ್ನು ವಂಚಿಸುವುದೇ ಆಗಿರುತ್ತದೆ.
ವಾಚು, ಪರ್ಫ್ಯೂಮ್, ಔಷಧಿ, ಮುಖಕ್ಕೆ ಮೆತ್ತಿಕೊಳ್ಳುವ ಮೇಕ್ ಅಪ್ ಕಿಟ್ಗಳು, ಅಂತರ್ಜಾಲವನ್ನು ಜಾಲಾಡಿ ಅಲ್ಲೊಂದು ಇಲ್ಲೊಂದು ಪೇಜ್ಗಳನ್ನು ಬಟ್ಟಿ ಇಳಿಸಿ ಸಿದ್ಧಪಡಿಸುವ ಆನ್ಲೈನ್ ಕೋರ್ಸ್ಗಳು ಹಾಗು ಇನ್ನು ಹಲವು ಗುಜರಿ ಪ್ರಾಡಕ್ಟ್ಗಳು ಈ ಷಡ್ಯಂತ್ರದ ಮಂತ್ರದಂಡಗಳು. ಇವುಗಳ ಮಾರಾಟವೇ ಬಿಸಿನೆಸ್ ನ ವಹಿವಾಟು. ಅರೆ, ವಸ್ತುಗಳನ್ನು ಮಾರಿ ಹಣವನ್ನು ಗಳಿಸುವುದರಲ್ಲಿ ಇರುವ ತಪ್ಪೇನಾದರೂ ಎಂತಹದ್ದು ಎಂದು ನಮಗೆ ಅನಿಸದಿರುವುದಿಲ್ಲ. ಆದರೆ ಈ ವಸ್ತುಗಳ ಬೆಲೆಯನ್ನೇನಾದರೂ ಒಮ್ಮೆ ಕೇಳಿದರೆ ಮೂರ್ಛೆ ರೋಗಕ್ಕೂ ತುತ್ತಾಗುವ ಅಪಾಯಯವನ್ನೂ ತಳ್ಳಿಹಾಕಲಾಗುವುದಿಲ್ಲ! ಹೌದು. ಇದು ಹಾಲಿವುಡ್ ನಾಯಕನು ತೊಡುವ ವಾಚಿನ ಬ್ರಾಂಡ್ ಎಂದೂ, ಈ ಸುಗಂಧವರ್ಧಕ ಅಮೆಝನ್ ಕಾನನದ ಯಾವುದೊ ಒಂದು ಮರದ ಬೇರಿನ ತುದಿಯನ್ನು ಅರೆದು ಮಾಡಿರುವುದೆಂದೂ, ಈ ಗುಳಿಗೆಗಳು ಪ್ರಪಂಚದ ಸರ್ವರೋಗ ನಿವಾರಣೆಯ ಮಹಾಮದ್ದೆಂದೂ, ಈ ಆನ್ಲೈನ್ ಕೋರ್ಸ್ ವಿಶ್ವದ ಯಾವುದೇ ಮೂಲೆಯಲ್ಲೂ ದೊರಕುವುದಿಲ್ಲವೆಂದು ಹೀಗೆ ಇನ್ನೂ ಹಲವು ‘ಭಯಾ’ನಕ ಸತ್ಯಗಳನ್ನು ಒಂದರಿಂದೊಂದು ತಲೆಯ ತುಂಬಾ ತುಂಬಿಸಿ, ಸಾವಿರ ಲಕ್ಷ ಬೆಲೆಯುಳ್ಳ ಪ್ರೈಸ್ ಟ್ಯಾಗ್ ಗಳನ್ನ ಅವುಗಳ ಮೇಲಂಟಿಸಿ, ಕೊನೆಗೆ ಕೇಳುಗ ಮಹಾಶಯ ಪ್ರಸ್ತುತ ಕಾಲದ ವೈದ್ಯಕೀಯ, ಶಿಕ್ಷಣ, ತಾಂತ್ರಿಕ ಲೋಕವನ್ನೆಲ್ಲಾ ಸುಳ್ಳೆಂದು ಭ್ರಮಿಸುವಂತೆ ಮಾಡುತ್ತಾರೆ ಬಿಸಿನೆಸ್ ನ ಈ ಪ್ರಚಂಡ ಕಲಿಗಳು. ಅಸಲಿಗೆ ಇಷ್ಟೆಲ್ಲಾ ಪೀಪಿ ಊದುತ್ತಾ ಗಾಳವನ್ನು ಹಾಕಲು ಹವಣಿಸುವ ಆ ವ್ಯಕ್ತಿಗಳಿಗೆ ತಾವು ಮಾರಲು ಹೋಗುತ್ತಿರುವ ವಸ್ತುಗಳ ಕಿಂಚಿತ್ತೂ ನಿಜತ್ವದ ಅರಿವಿರುವುದಿಲ್ಲ ಎಂಬುದು ದುರದೃಷ್ಟಕರ ಸಂಗತಿ!
ಹೀಗೆ ಒಂದಿಷ್ಟು ಜನ ತಮ್ಮ ಗುಂಪೊಂದನ್ನು ಕಟ್ಟಿ, ಆ ಗುಂಪಿಗೆ ಮಹಾ ತಾಂತ್ರಿಕತೆಯ ಹೆಸರನ್ನೊಂದಿಟ್ಟು, ಕಸದ ತೊಟ್ಟಿಯಿಂದ ಹೆಕ್ಕಿ ತಂದಿರುವಂಥಹ ವಸ್ತುಗಳನ್ನು ಉಜ್ಜಿ ತೊಳೆದು ಆವುಗಳನ್ನು ತಮ್ಮ ಪ್ರಾಡಕ್ಟ್ಗಳೆಂದು ಘೋಷಿಸಿ, ಕಾನೂನು ಕಟ್ಟಳೆಗಳ ತಾಪತ್ರಯ ಬರದಂತೆ ಬೇಕಾದ ಎಲ್ಲಾ ಕಾಗದ ಪತ್ರಗಳನ್ನು ಸಿದ್ಧಪಡಿಸಿಕೊಂಡು, ( ಕೆಲ ಗುಂಪುಗಳು ಇನ್ನೂ ಒಂದೆಜ್ಜೆ ಮುಂದೆ ಹೋಗಿ ಲಾಯರು, ಅಧಿಕಾರಿಗಳನ್ನೇ ತಮ್ಮ ಪಾರ್ಟ್ನರ್ ಗಳನ್ನಾಗಿ ಮಾಡಿಕೊಳ್ಳುವುದೂ ಉಂಟು), ತಿಂಗಳಿಗೊಮ್ಮೆ ಮಹಾನಗರಗಳ ಯಾವುದಾದರೊಂದು ಭವ್ಯ ಹೋಟೆಲೊಂದನ್ನು ಗಂಟೆಗಳ ಲೆಕ್ಕದಲ್ಲಿ ಬಾಡಿಗೆಗೆ ಪಡೆದು, ಸೂಟು ಬೂಟುಗಳನ್ನು ಧರಿಸಿ ರಾಜಗಾಂಭೀರ್ಯದ ಮುಖವಾಡವನ್ನು ತೊಡಿಸಿ ಕೆಲವರನ್ನು ವೇದಿಕೆಯ ಮೇಲೆ ಕೂರಿಸಿ, ಅವರ ಯಶೋಗಾಥೆಯನ್ನು ಘಂಟೆಗಳ ಕಾಲ ಅರಚುತ್ತಾರೆ. ಹೀಗೆ ಅರಚುವಾಗ ಆ ಮಹಾನುಭಾವರ ಕಡುಕಷ್ಟದ ದಿನಗಳನ್ನು, ಕೊನೆಗೆ ತಮ್ಮ ಬಿಸಿನೆಸ್ ಅವರನ್ನು ದಿಗಂತವನ್ನು ಮುಟ್ಟುವಂತೆ ಮಾಡಿದ ‘ಕತೆ’ಯನ್ನು ಅದೆಷ್ಟೂ ಚನ್ನಾಗಿ ಬಣ್ಣಿಸುತ್ತಾರೆಂದರೆ ಮೂವಿಗಳಿಗೆ ಕತೆಯನ್ನು ಬರೆಯುವ ಚಿತ್ರಕತೆಗಾರನೂ ನಾಚಿ ನೀರಾಗಬೇಕು! ಅಷ್ಟೆಲ್ಲಾ ಭಾಷಣಗಳನ್ನು ಘಂಟೆಗಳ ಕಾಲ ಬಿಗಿದರೂ ಒಂತಿಷ್ಟೂ ತಮ್ಮ ಬಿಸಿನೆಸ್ ನ ಕಾರ್ಯಚಟುವಟಿಕೆಯ ಬಗೆಯಾಗಲಿ, ಆ ಪ್ರಾಡಕ್ಟ್ ಗಳ ಅಸಲಿಯತ್ತಾಗಲಿ ಅವರು ಬಾಯ್ತೆರೆಯುವುದಿಲ್ಲ. ಬದಲಿಗೆ ಅಲ್ಲಿ ನಡೆಯುವುದು ಕೇವಲ ಮಾತಿನ ಮಾಂತ್ರಿಕತೆ! ಕ್ಷಣಮಾತ್ರದಲ್ಲಿ ಕೋಟ್ಯಧಿಪತಿಗಳಾಗುವ ಕನಸ್ಸನ್ನು ಹೊತ್ತ ಅಮಾಯಕ ಬುದ್ಧಿಗಳ ಮನಃಪರಿವರ್ತನೆ.
ಕೆಲದಿನಗಳ ನಂತರ ಅಷ್ಟೂ ಜನರ ಬಳಿಗೆ ಒಬ್ಬೊಬ್ಬರಾಗಿ ತೆರಳುವ ತಂಡ ಕೂಡಲೇ ತಮ್ಮ ಬಿಸಿನೆಸ್ ಅನ್ನು ಒಳಹೊಕ್ಕಬೇಕೆಂದೂ ಇಂತಹ ಒಂದು ಸುವರ್ಣಾವಕಾಶವನ್ನು ಮಿಸ್ ಮಾಡಿಕೊಂಡರೆ ಮುಂದೆ ಅವರು ಪಶ್ಚಾತಾಪ ಪಡುತ್ತಾರೆಂದೂ, ಅಲ್ಲದೆ ಇಂದೇ ಸೇರಿಕೊಂಡರೆ ಅವರು ತಮ್ಮ ಬಿಸಿನೆಸ್ ನ ‘ಪಾರ್ಟನರ್ಸ್’ ಗಳಾಗುತ್ತಾರೆಂದು ಬೆಣ್ಣೆಯನ್ನು ಪರಿಪರಿಯಾಗಿ ಸವರುತ್ತಾರೆ. ಈಗಲೂ ಆ ಬಿಸಿನೆಸ್ ನ ಬಣ್ಣವನ್ನು ಬಿಚ್ಚುವುದಿಲ್ಲ. ಕೊನೆಗೆ ಕೇಳುಗ ಅವರ ಮಾಂತ್ರಿಕತೆಯ ಮಾತಿಗೂ, ಒತ್ತಾಯಕ್ಕೋ, ಅಥವಾ ‘ಮಗಾ, ನನ್ ಮೇಲೆ ನಿನ್ಗೆ ನಂಬಿಕೆ ಇಲ್ವಾ?’ ಎನ್ನುವ ಆ ಗೆಳೆಯನ ಆತ್ಮೀಯತೆಗೋ ಕರಗಿ ಅಸ್ತು ಎನ್ನುತ್ತಾನೆ. ತಾನು ಅಷ್ಟು ಇಷ್ಟು ಕೂಡಿಟ್ಟ ಅಥವಾ ಅಪ್ಪ ಅಮ್ಮರು ಕಷ್ಟಪಟ್ಟು ಕಳುಹಿಸಿಕೊಟ್ಟ ಹಣವನ್ನೆಲ್ಲ ಒಟ್ಟುಗೂಡಿಸಿ ಅವರ ಕೈಮೇಲಿತ್ತು ಸುಮ್ಮನಾಗುತ್ತಾನೆ. ಅಲ್ಲಿಯವರೆಗೂ ಆ ಬಿಸಿನೆಸ್ ನ ಅಸಲಿ ಸ್ಟ್ರಾಟರ್ಜಿ ಏನೆಂದು ಹೇಳದ ಆ ಗುಂಪು ಮುಂದೊಂದು ದಿನ ಗುಂಡಿಗೆ ಬಿದ್ದ ಆ ಅಮಾಯಕನನ್ನು ಬಳಿ ಕರೆದು ಇದು ನಮ್ಮ ಪ್ರಾಡಕ್ಟ್, ಇದನ್ನು ನೀನು ಇಬ್ಬರಿಗೆ ಮಾರಿದರೆ ನಿನಗೆ ಇಂತಿಷ್ಟು ಕಮಿಷನ್, ಅವರು ಮತ್ತಿಬ್ಬರಿಗೆ ಮಾರಿದರೆ ಅಲ್ಲಿಂದಲೂ ನಿನಗೆ ಕಮಿಷನ್ ಎಂದೂ ಅಣ್ಣ, ತಮ್ಮ, ಗೆಳೆಯ, ಗೆಳತಿ, ಗೆಳೆಯನ ಗೆಳಯರು, ಗೆಳತಿಯರು ಅಥವಾ ಅವರ ಬಂದು ಮಿತ್ರರು ಹಾಗು ಎಲ್ಲರನ್ನು ಹೇಗೆ ಪಟಾಯಿಸಕೊಳ್ಳಬೇಕು ಎಂಬ ಬಗೆಯನ್ನು, ಮಾತಿನ ಚಳಕವನ್ನೂ ಹೇಳಿ ಯುದ್ಧರಂಗಕ್ಕೆ ದಬ್ಬುವಂತೆ ಸಿಟಿಯ ಸಾಗರದೊಳಗೆ ಅವರನ್ನು ದಬ್ಬುತ್ತಾರೆ. ಕಾಲೇಜಿನ ವಾರ್ಷಿಕ ಫೀಸಿಗೋ, ಫೇಲಾದ ಪರೀಕ್ಷೆಯನ್ನು ಕಟ್ಟಲೋ, ಪುಸ್ತಕವನ್ನು ಕೊಳ್ಳಲೋ, ಗೃಹಿಣಿಯರಾದರೆ ತಾವು ಜೀವನವೆಲ್ಲ ಕೂಡಿಟ್ಟ ಪುಡಿಗಾಸನ್ನು ಇಂತಹ ಒಂದು ಬಲೆಗೆ ಕೆಡವಿಕೊಂಡ ಮೇಲೆ ಶತಾಯ ಗತಾಯ ಅದನ್ನು ಹಿಂಪಡೆದೆ ತೀರಲು ಹವಣಿಸುತ್ತಾರೆ. ತಮ್ಮ ಕೈಲಿರುವ ಪ್ರಾಡಕ್ಟ್ ಅದೆಂಥಹದ್ದು, ಅದರಿಂದಾಗುವ ಅಡ್ಡ ಪರಿಣಾಮಗಳೇನೂ ಲೆಕ್ಕಿಸದೆ ಸಿಕ್ಕ ಸಿಕ್ಕವರನ್ನೆಲ್ಲ ಪೀಡಿಸಲು ಶುರುವಿಡುತ್ತಾರೆ.
ಇಂತಹ MLM ಗಳ ಮತ್ತೊಂದು ರಣತಂತ್ರ ವೈಭವೀಕರಿಸುವಿಕೆ. ತಮ್ಮ ತಂಡದ ಒಂದಿಷ್ಟು ಜನರನ್ನು ಸಿಂಗಾಪುರ್, ಥೈಲ್ಯಾಂಡ್ ನಂತಹ ಜಾಗಕ್ಕೆ ಒಂದೆರಡು ದಿನಗಳ ಕಾಲ ಬಿಸಿನೆಸ್ ಟ್ರಿಪ್ ಗಳೆಂದು ಹೇಳಿ ಕಳುಹಿಸುವುದು. ಅಲ್ಲಿ ನಡೆಯುವ ಕಯಾಮತ್ತಾದರೂ ಎಂತಹದ್ದು ಅಂತೀರಾ. ಬಿಸಿನೆಸ್ ನ ನೆಪದಲ್ಲಿ ಒಂದೈನೂರು ರಾಶಿ ಸೆಲ್ಫಿಗಳನ್ನು ಹೊತ್ತು ತಂದು ಇಲ್ಲಿ ತಮ್ಮ ಫೇಸ್ಬುಕ್ ಪೇಜ್ಗಳ ಮೇಲೆ ವಾರಕೊಮ್ಮೆ ಧಾರವಾಹಿ ಎಪಿಸೋಡ್ಗಳಂತೆ ಬಿತ್ತರಿಸಿ ತಮ್ಮ ಬಹುಸಂಖ್ಯಾ ಆನ್ಲೈನ್ ಗೆಳೆಯರಿಗೆ ಹೊಟ್ಟೆ ಉರಿಯುವಂತೆ ಮಾಡಿ ಅವರಾಗಿಯೇ ಇವರನ್ನು ಸಮೀಪಿಸುವಂತೆ ಮಾಡುವುದು! ಅದೂ ಸಾಲದಕ್ಕೆ ಪ್ರಸಿದ್ಧ ಸಿನಿ ತಾರೆಯರೋ ಅಥವಾ ಆಟಗಾರರನ್ನು ಅತಿಥಿಗಳನ್ನಾಗಿ ಕರೆದು ಒಂದರಿಂದೊಂದು ಚಕಚಕ ಫೋಟೋಗಳನ್ನು ತೆಗೆದುಕೊಂಡು ತಮ್ಮ ವೆಬ್ಸೈಟ್ಗಳಲ್ಲಿ, ಫೇಸ್ಬುಕ್ ಪೇಜ್ ಗಳಲ್ಲಿ ತಮ್ಮ ಆ ಕಂಪನಿಯ ಲೋಗೋವನ್ನು ಸೇರಿಸಿರುವಂತಹ ಫೋಟೋವನ್ನು ಅಜರಾಮರವಾಗುವವಂತೆ ಹಾಕಿಕೊಳ್ಳುವುದು. ಆ ಸೆಲೆಬ್ರಿಟಿಗಳೋ ಸರಿ ತಪ್ಪು ಒಂದನ್ನೂ ಲೆಕ್ಕಿಸದೆ ಇವರೆಸೆಯುವ ಹಣದ ಆಸೆಗೆ ಕರೆದೆಡೆಯಲ್ಲ ನುಲಿಯುತ್ತ ಹೋಗುತ್ತಾರೆ. ಒಂದು ಕಾಲದ ಆಮೆಚುರ್ ಬಿಲಿಯರ್ಡ್ಸ್ ಚಾಂಪಿಯನ್, ಪದ್ಮಪ್ರಶಸ್ತಿಯ ವಿಜೇತ ಮೈಕಲ್ ಫೆರೇರ ರಂತಹವರೆ ಇಂತಹ ಕಂಪನಿಗಳ ಅತಿ ದೊಡ್ಡ ಶೇರ್ ಹೋಲ್ಡರ್ಗಳಾಗಿರುವುದೂ ದುರದೃಷ್ಟಕರ.
ಒಮ್ಮೆ ಈ ಷಡ್ಯಂತ್ರದ ಬಿಸಿನೆಸ್ ಗೆ ಬಿದ್ದರೆ ಆತ/ಅವಳು ಅಕ್ಷರ ಸಹ ಬೆನ್ನಿಗೆ ಬಿದ್ದ ಬೇತಾಳರಂತೆ ಜನರನ್ನು ಹಿಂಸಿಸತೊಡಗುತ್ತಾರೆ. ಬೆಸ್ಟ್ ಫ್ರೆಂಡ್, ಡೀಪ್ ಫ್ರೆಂಡ್, ಟ್ರು ಫ್ರೆಂಡ್ ಎಂಬೆಲ್ಲ ಅನ್ವರ್ಥ ನಾಮಗಳು ಹರಿದು ಅವರನ್ನು ಕಂಡರೆ ಬದ್ದವೈರಿಗಳಂತೆ ಮಾಡುತ್ತದೆ ಈ ಬಿಸಿನೆಸ್. ಓದು ಬರಹ ಬಿಟ್ಟು ಹಣಗಳಿಸಲು ಇಂತಹ ಶಾರ್ಟ್ ಕಟ್ ಗಳನ್ನು ಹಿಡಿಯುವ ಯುವಕರು ತಾವು ಮಾಡಲೊಗುತ್ತಿರುವ ಕಾರ್ಯ ಅದೆಷ್ಟರ ಮಟ್ಟಿಗೆ ಶಾಶ್ವತ ಎಂಬುದನ್ನು ಕೇಳಿಕೊಳ್ಳಬೇಕು. ಅಲ್ಲದೆ ಇಂತಹ ಗೊತ್ತು ಗುರಿ ಇಲ್ಲದ ಪುಡಾರಿ ಕಂಪನಿಗಳಿಗೆ ಪರವಾನಿಗೆ ನೀಡುವ ಸರ್ಕಾರಗಳು ಸಹ ಇತ್ತ ಕಡೆ ಗಮನಹರಿಸಬೇಕು.
It is wrong what is written here .the writer simply wrote like a story .
Govt has published a guidelines in gazet notification in sept 2016 many univercities introduced sylebus in mlm for commerce students .
The authour should have mentioned any one company name .he escaped from leagal action by not mentioning any one company name to cretisise the mlm business system .
Dear Sir,
If Snake looks like a piece rope that doesn’t mean it will not bite you. Whether it is writing a story or painting the colors, ‘concept’ is what that makes the theme sensible. I hope you this very well.
FYKI – Below are only few of the many scams which took place even after the so called notifications to the universities. If a govt is keen to introduce it in the syllabus to the universities don’t you think it is trying to aware the people against the fraud-ed procedures & companies? Also if you have read the article fully I have clearly written not all the companies are pooling the scam in the society but ‘most’ of their agenda is the same.
Also I would like to inform you that whatever the content you have just read in the article is not a mere imagination, its a bitter personal experience!
Some of the well known scams FYI :
https://economictimes.indiatimes.com/news/politics-and-nation/qnet-scam-padma-bhushan-awardee-and-former-world-billiards-champion-michael-ferreira-arrested/articleshow/54932288.cms
https://timesofindia.indiatimes.com/india/Speak-Asia-promoter-held-for-Rs-2200-crore-scam/articleshow/26434497.cms
Regards,
Sujith
ಉತ್ತಮ ಬರಹ. ನಾನು ಈ ಲೋಕಕ್ಕೆ ಕಾಲಿಟ್ಟು ಬಂದವನೇ. ಆರಂಭದಲ್ಲಿ ಗೆಳೆಯನೊಬ್ಬ ಇಂತದ್ದೇ ತಲೆ ಸವರುವ ಕಾರ್ಯಕ್ರಮವೊಂದಕ್ಕೆ ಕರೆದಿದ್ದ ನನಗೆ ಅದ್ಯಾವ ದೊಡ್ಡ ರೋಗ ಬಡಿದಿತ್ತೋ ಹೋಗಿ ಸೇರಿಕೊಂಡೆ .ಅದೂ ಆರೇಳು ಸಾವಿರ ಕೊಟ್ಟು ಆ ನಂತರ ಇವರ ವರಾತ ಶುರುವಾಯಿತು. ಅವರನ್ನು ಸೇರಿಸು ಇವರನ್ನು ಸೇರಿಸು, ಕೆಲಸ ಬಿಟ್ಟು ಫುಲ್ ಟೈಮ್ ಇದಕ್ಕೆ ಬಾ. ಆಫೀಸಿಗೆ ರಜೆ ಹಾಕಿ ಅಲ್ಲಿಗೆ ಬಾ ಇಲ್ಲಿಗೆ ಬಾ ಅಂತೆಲ್ಲ ಟಾರ್ಚರ್. ಅಷ್ಟರಲ್ಲಿ ನನಗು ಸಾಕಾಗಿತ್ತು . ಹಣವೂ ಹೋಗಿತ್ತು. ಆದರೆ ಈ ಬ್ಯುಸಿನೆಸ್ಸಿನಲ್ಲಿ ಏನೋ ಇದೆ ಎನಿಸಿ, ಇಂತದ್ದೇ ಮತ್ತೊಂದು ಬ್ಲೆಡ್ ಕಂಪೆನಿಗೆ ಕೈ ಹಾಕಿದೆ. ಅದು ೭೫೦ರೂಪಾಯಿಯ ಹೂಡಿಕೆ. ಕಡಿಮೆಯಲ್ವ ಒಂದು ಕೈ ನೋಡುವ ಅಂತ ಮಾಡಿದೆ. ಒಂದಷ್ಟು ದಿನ ಚೆನ್ನಾಗಿ ನಡೆಯಿತು. ಆ ನಂತರ ಕಂಪೆನಿಯನ್ನು ಮುಚ್ಚಿ ಓಡಿಹೋದರು (ಅವರೆಲ್ಲಿ ಓಡುತ್ತಾರೆ ,ಮತ್ತೊಂದು ಹೆಸರಿನ ಕಂಪೆನಿ ಮಾಡಿಕೊಂಡು ಯಾಮಾರಿಸಲು ಬರುತ್ತಾರೆ)
ನಿಜಕ್ಕೂ ಅದೊಂದು ಮೋಸದ ಲೋಕ.
ನಿಜ.. ನಿಮ್ಮ ಅನುಭವದ ರೆಫ್ಲೆಕ್ಷನ್ ಬಹಳಷ್ಟು ಜನರಲ್ಲಿ ಆಗಿದೆ. ತುಂಬಾ ಹತ್ತಿರದಿಂದ ಕಂಡಿರುವೆ 🙂
ಟೂರಿಸಂ ಪ್ಯಾಕೇಜ್ ಮೇಲೆ ಪ್ರವಾಸ ಹಾಗು ಅದರಲ್ಲಿ ಕೂಡಾ ಇಂತಿಷ್ಟು ಹಣ ಹೂಡುವಿಕೆಯ ಬ್ಯುಸಿನೆಸ್ ಅಂತಾರಲ್ಲ , ಅದರ ಬಗ್ಗೆ ಸ್ವಲ್ಪ ವಿವರಣೆ ಕೊಡಬಹುದೇ ?
This article is an eye opener for many naives and amateurs out there in the market!