ವಿಷಯದ ವಿವರಗಳಿಗೆ ದಾಟಿರಿ

ನವೆಂಬರ್ 14, 2017

ಇಸ್ರೇಲಿನಲ್ಲಿ ಮೈಸೂರಿನ ಅಶ್ವಾರೂಢರ ಅಟ್ಟಹಾಸ

‍ನಿಲುಮೆ ಮೂಲಕ

– ವಿಂಗ್ ಕಮಾಂಡರ್ ಸುದರ್ಶನ
sudarshanbadangod@gmail.com

1914 ರಲ್ಲಿ ಮೈಸೂರಿನ ಮಹರಾಜರಾದ ನಾಲ್ಮಡಿ ಕೃಷ್ಣರಾಜ ಒಡೆಯರ ಸೈನ್ಯದಲ್ಲಿ ಒಂದು ವಿಶೇಷ ಅಶ್ವಾರೂಢರ ದಳವಿತ್ತು. 29 ಸೈನ್ಯಾಧಿಕಾರಿಗಳ, 444 ಅಶ್ವಯೋಧರೊಂದಿಗೆ 526 ಶ್ರೇಷ್ಠ ಅರಬ್ಬೀ ಕುದುರೆಗಳ ಈ ಪಡೆಗೆ ವಿಶೇಷ ಗೌರವವಿತ್ತು. ಆಗಾಗಲೇ ಫಿರಂಗಿಗಳ, ಮಷೀನುಗನ್ನುಗಳ ಆಗಮನವಾಗಿ, ಕುದುರೆಗಳ ನಾಗಾಲೋಟದ, ಖರಪುಟದ ಶಬ್ದದ ಕಾಲ ಮುಗಿದೇ ಬಿಡ್ತೇನೋ ಎನ್ನುವ ಸಮಯವದು. ಹೈದ್ರಾಬಾದಿನ ನಿಜಾಮರ ಮತ್ತು ರಾಜಾಸ್ಥಾನದ ರಾಜರ ಸೈನ್ಯಗಳನ್ನು ಹೊರತು ಪಡಿಸಿದರೆ ಬೇರೆಲ್ಲೆಡೂ ಆಶ್ವಾರೂಢದ ದಳವೇ ಇರಲಿಲ್ಲ.

ಮೊದಲನೆ ವಿಶ್ವಯುದ್ಧದ ಅಲೆಯಾಗಲೇ ಎದ್ದಾಗಿತ್ತು. ಯೂರೋಪಿನ, ಆಫ್ರಿಕಾದೆಲ್ಲೆಡೆ ಸೈನ್ಯದ ಜಮಾವಣೆ ಭರದಿಂದ ಸಾಗುತ್ತಿತ್ತು. ಇದೇ ಸಮಯದಲ್ಲಿ ಬ್ರಿಟಿಷರು ಮೈಸೂರಿನ ಅಶ್ವಾರೂಢರೊಂದಿಗೆ, ಜೋಧಪುರ ಮತ್ತು ಹೈದರಾಬಾದಿನ ಅಶ್ವಾರೂಢರನ್ನು ಸೇರಿಸಿ ಮೇಜರ್ ದಲಪತ್ ಸಿಂಗ್ ಶೆಖಾವತ್ತರ ನೇತೃತ್ವದಲ್ಲಿ 33 ಹಡಗುಗಳಲ್ಲಿ ಭಾರತದ ಅಶ್ವಾರೂಢ ದಳವನ್ನು ಈಜಿಪ್ಟಿಗೆ ರವಾನಿಸಿ ಬಿಡುತ್ತಾರೆ.

ಈಜಿಪ್ಟಿನ ಸೂಯೆಜ್ ಕಾಲುವೆ ಅತ್ಯಂತ ಮಹತ್ತರ ಜಲಸಂಪರ್ಕದ ಕೊಂಡಿ. ಅದಕ್ಕೆ ನಿರಂತರ ರಕ್ಷಣೆ ನೀಡಲು ಮೈಸೂರಿನ ಆ ಅಶ್ವದಳದ ಸೇನೆಯನ್ನು ನಿಯೋಜಿಸಲಾಗಿತ್ತು. ಸುಮಾರು ಮೂರು ವರ್ಷಗಳ ಯಶಸ್ವೀ ಕಾರ್ಯ ನಿರ್ವಹಿಸಿದ ಈ ಮೈಸೂರಿನ ತಂಡಕ್ಕೆ 1918 ರ ಸೆಪ್ಟೆಂಬರಿನಲ್ಲಿ ಇನ್ನೊಂದು ಮಹತ್ತರ ಕಾರ್ಯಾಚರಣೆಯನ್ನು ವಹಿಸಲಾಗಿತ್ತು. ಅದೇ “ಹೈಫಾ” ಬಂದರನ್ನು ತುರುಕರಿಂದ ವಶಪಡಿಸಿಕೊಳ್ಳುವುದು.

ಸುಮಾರು 400 ವರ್ಷಗಳಿಂದ ತುರ್ಕಿಯ ಒಟ್ಟೊಮನ್ ಸಾಮ್ರಾಜ್ಯದ ಆಡಳಿತದಲ್ಲಿದ್ದ ಈ ಮುಖ್ಯ ಬಂದರನ್ನು ವಶಪಡಿಸಿಕೊಳ್ಳುವುದು ಬ್ರಿಟಿಷರ ಕದನ ತಂತ್ರದ ಬಹು ಮುಖ್ಯವಾದ ಅಂಗವಾಗಿತ್ತು. ಹೈಫಾ ಬಂದರಿನ ಭೌಗೋಳಿಕ ಪ್ರಾಮುಖ್ಯತೆಯನ್ನರಿತಿದ್ದ ಜರ್ಮನರು ಮತ್ತು ತುರುಕರು ಅಲ್ಲಿ ರಕ್ಷಣಾಪಡೆಗಳ ಕೋಟೆಯನ್ನೇ ನಿರ್ಮಿಸಿದ್ದರು. ಒಂದು ಕಡೆ ನದಿ, ಗುಡ್ಡಗಳ ಸಾಲು ಮತ್ತು ಪಶ್ಚಿಮಕ್ಕೆ ಸಮುದ್ರ. ಬೆಟ್ಟಗಳ ಮೇಲೆ ನೆಲೆಸಿದ್ದ ತುರುಕರ  ಸೈನ್ಯ  ಮತ್ತು ಜರ್ಮನರ ಮಷೀನು ಗನ್ನುಗಳು ನಾಲ್ಕೂ ಕಡೆ ಶತ್ರುಗಳ ಚಲನವಲನಗಳನ್ನು ಗಮನಿಸುತ್ತಿದ್ದರು. ಹಾಗಾಗಿ ಈ ಬಂದರನ್ನು ವಶಪಡಿಸುವುದಿರಲಿ ಒಬ್ಬೊಬ್ಬರಾಗಿ ಪ್ರವೇಶಿಸುವುದೂ ಕಷ್ಟಸಾಧ್ಯವಾಗಿತ್ತು. ಆಯಕಟ್ಟಿನ ಸ್ಥಳಗಳಲ್ಲಿ ಮಷೀನು ಗನ್ನುಗಳ ಪೋಸ್ಟ್, ಮತ್ತು ಮದ್ದು ಗುಂಡುಗಳ ಉಗ್ರಾಣಗಳನ್ನು ನಿರ್ಮಿಸಲಾಗಿತ್ತು.

ಬ್ರಿಟಿಷರು ಇನ್ನೇನು ಮಾಡುವುದು ಎಂದು ಯೋಚನೆಯಲ್ಲಿ ಮುಳುಗಿದ್ದಾಗ, ಮೇಜರ್ ದಲಪತ್ ಶೆಖಾವತ್ತರು ತಮ್ಮ ಯುದ್ಧತಂತ್ರವನ್ನು ಜನರಲ್ ಗಳಿಗೆ ವಿವರಿಸುತ್ತಾರೆ. ಅದರಂತೆ ಅಶ್ವರೂಢರ ಒಂದು ಪಡೆ ‘ಮೌಂಟ್ ಕಾರ್ಮೆಲ್ಲ್’ ಒಂದು ಗುಡ್ಡವನ್ನು ಕ್ಷಿಪ್ರವಾಗಿ ಹಿಂದಿನಿಂದ ಹತ್ತಿ ಅಲ್ಲಿಯ ಮಷೀನು ಗನ್ನುಗಳನ್ನು ವಶಪಡಿಸಿ ಕೊಳ್ಳುವುದು. ಬೆಟ್ಟದ ಮೇಲಿನ ಸೈನ್ಯವನ್ನು ನಿಷ್ಕ್ರಿಯಗೊಳಿಸುವ ಸಿಗ್ನಲ್ ಸಿಗುತ್ತಿದ್ದಂತೇ ಮೈಸೂರಿನ ಅಶ್ವಾರೂಢ ಪಡೆ ನಗರದ ಮುಖ್ಯದ್ವಾರದಿಂದ ಮಿಂಚಿನಂತೆ ನಾಗಾಲೋಟ ನಡೆಸಿ ಅಲ್ಲಿಯ ಸೈನಿಕರ ಮೇಲೆ ಹಲ್ಲೆ ನಡೆಸುವುದು. ಅಶ್ವರೂಢ ಸೈನಿಕರು ಬರೀ ಭರ್ಚಿ ಮತ್ತು ಖಡ್ಗಗಳೊಂದಿಗೆ ಮಷೀನು ಗನ್ನುಗಳ ವಿರುದ್ಧದ ಸಮರ !

23 ಸೆಪ್ಟಂಬರ್ ಪೂರ್ವ ನಿಯೋಜಿತ ತಂತ್ರದಂತೆ ಅಶ್ವಾರೂಢರ ಮಿಂಚಿನ ದಾಳಿ ನಡೆದೇ ಬಿಟ್ಟಿತು. ಕುದುರೆಗಳ ನಾಗಾಲೋಟದ ಈ ದಾಳಿಯಿಂದ ಕಕ್ಕಾಬಿಕ್ಕಿಯಾಗಿ ತುರುಕರ ಮತ್ತು ಜರ್ಮನರ ಸೈನಿಕರು ಮಷೀನು ಗನ್ನುಗಳ ದಾಳಿ ನಡೆಸಿದರೂ, ನಿರಂತರವಾಗಿ ಬರುತ್ತಿದ್ದ ಕುದುರೆ ಪಡೆಗಳನ್ನು ನೋಡಿ ಓಡಲು ಶುರುಮಾಡಿದರು.

ಕೆಲವೇ ಘಂಟೆಗಳಲ್ಲಿ ಹೈಫಾ ಬಂದರು ನಗರ ಬ್ರಿಟಿಷರ ವಶವಾಯಿತು. ಮುಂದೆ 1948 ರಲ್ಲಿ ಇಸ್ರೇಲಿನ ಸ್ಥಾಪನೆಯಾದ ನಂತರ ಇಸ್ರೇಲಿನ ಪ್ರಮುಖ ಬಂದರು ನಗರವಾಯಿತು. ಈ ಕಾರ್ಯಾಚರಣೆಯಲ್ಲಿ ಮೇಜರ್ ದಲಪತ್ ಶೆಖಾವತ್ತರು ವೀರಮರಣವನ್ನಪ್ಪಿದರು. ಮೈಸೂರಿನ ಹಲವಾರು ಅಶ್ವಾರೋಹಿ ಸೈನಿಕರೂ ಸಹ ಹತವಾದರು.

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಇಸ್ರೇಲಿನ ಭೇಟಿಯ ಸಮಯದಲ್ಲಿ ಈ ಸ್ಮಾರಕಕ್ಕೆ ಭೇಟಿನೀಡಿ ಗೌರವ ಸಲ್ಲಿಸಿದರು. ಇಸ್ರೇಲಿನ ಪಠ್ಯ ಪುಸ್ತಕಗಳಲ್ಲಿ ಈ ವೀರಗಾಥೆಯನ್ನು ಇಲ್ಲಿಯ ಮಕ್ಕಳಿಗೆ ಪರಿಚಯಿಸಲಾಗುತ್ತಿದೆ.
ಇಸ್ರೇಲಿನ ಸರ್ಕಾರ ಈಗ ಈ ಮೈಸೂರಿನ ಸಾಹಸೀ ಅಶ್ವಾರೂಢರ ಗೌರವಾರ್ಥವಾಗಿ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದ್ದಾರೆ.

ಇಸ್ರೇಲಿನಂತಹ ವೀರರ ನಾಡಿನಲ್ಲಿ ನಮ್ಮ ನಾಡಿನ ಶೂರರೂ ಪ್ರದರ್ಶಿಸಿದ ಪರಾಕ್ರಮ ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವಲ್ಲವೇ?

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments