ವಿಷಯದ ವಿವರಗಳಿಗೆ ದಾಟಿರಿ

ನವೆಂಬರ್ 17, 2017

ಕಾರಂತ ಸಾಹಿತ್ಯ: ಪರಿಸರ ವಿನಾಶ ಮತ್ತು ವಲಸೆ ರಾಜಕಾರಣ (ಭಾಗ-೩)

‍ನಿಲುಮೆ ಮೂಲಕ

– ದೇವು ಹನೆಹಳ್ಳಿ
ಬಂಡಿಮಠ, ಹನೆಹಳ್ಳಿ ಗ್ರಾಮ,
ಬಾರಕೂರು, ಉಡುಪಿ ತಾಲೂಕು-ಜಿಲ್ಲೆ.

ಪರಿಸರ ವಿನಾಶ ಮತ್ತು ವಲಸೆ ರಾಜಕಾರಣ (ಭಾಗ-೧)
ಪರಿಸರ ವಿನಾಶ ಮತ್ತು ವಲಸೆ ರಾಜಕಾರಣ (ಭಾಗ-೨)

ಸ್ವಾತಂತ್ರ್ಯಾ ನಂತರದ ಭಾರತದಲ್ಲಿ ಇಬ್ಬರು, ಅಪ್ಪಳಸ್ವಾಮಿ ಮತ್ತು ಆರೋಕ್ಯಸ್ವಾಮಿ ಎಂಬ ಅಧಿಕಾರಿಗಳ ಹುನ್ನಾರದಲ್ಲಿ ಸಹ್ಯಾದ್ರಿಯ ಮಲೆ, ಇಳಿಜಾರು ಮತ್ತು ತಪ್ಪಲಿನ ಅರಣ್ಯವೆಲ್ಲ ಕೇರಳೀಯರ ವಶವಾದ ಪ್ರಸ್ತಾಪದೊಂದಿಗೆ ನಿರೂಪಣೆ ಮುಖ್ಯ ಮಜಲನ್ನು ತಲುಪುತ್ತದೆ. ಇದಕ್ಕೆ ಎರಡು ಮುಖ. ಒಂದು, ಅರಣ್ಯ ನಾಶ ಇನ್ನೊಂದು, ಸ್ಥಳೀಯರಿಗಾಗುವ ವಂಚನೆ. ಈ ಹಿಂದೆ ಹೇಳಿದ ಸೌಂದರ್ಯ, ಪರಿಪೂರ್ಣತೆ, ಪಂಥಾಹ್ವಾನ ಈ ಯಾವ ಸೆಲೆ, ಸೆಳೆತವೂ ಇಲ್ಲದ, ಲಾಭಕೋರತನವೊಂದೇ ಮಾರ್ಗದರ್ಶಿಯಾಗಿರುವ ರೂಕ್ಷ ಪ್ರಪಂಚದ ಒಂದು ಬೀಭತ್ಸ ಚಿತ್ರಣವನ್ನು ಈ ಕಾದಂಬರಿಯಲ್ಲಿ ಕಾಣುತ್ತೇವೆ. ಕಾರಂತರು ಬಳಸುವ ಅವರ ಇಷ್ಟದ ಪದ `ಚೆಲುವು’ ಒಮ್ಮೆಯೂ ಈ ಕಾದಂಬರಿಯಲ್ಲಿ ಬಂದಿಲ್ಲ. ಪರಿಸರ ನಾಶದ ಜತೆಗೆ ಹೊರಗಿನ ಜನರ ಅವ್ಯಾಹತ ನುಸುಳುವಿಕೆಯಿಂದ ಜನಸಂಖ್ಯಾನುಪಾತ demography, ಏರುಪೇರಾಗಿ ಸಾಂಸ್ಕೃತಿಕ ಅವನತಿಯನ್ನೂ ಕಾಣುತ್ತೇವೆ. ನಿಸರ್ಗವೆಂದರೆ ವಿಶ್ವಾತ್ಮಕ ವ್ಯಕ್ತಿತ್ವವೆಂಬ ಭಾವ ಅಳಿದು ಅದು ಕೇವಲ ಒಂದು ಕಚ್ಚಾವಸ್ತುಗಳ ಮಂಡಿ ಎಂದಾಯಿತು.

ಜಾಗತಿಕ ಮತೀಯ ರಾಜಕಾರಣದಲ್ಲಿ ಇದು ಹೊಸತಲ್ಲ. ವಲಸೆ ರಾಜಕಾರಣ ಮತ್ತು ಜನಸಂಖ್ಯಾ ರಾಜಕಾರಣ ಮತೀಯತೆಯ ಎರಡು ಪ್ರಮುಖ ಪ್ರವರ್ತಕಗಳು. ಎರಡು ಅಮೇರಿಕಾಗಳು, ಒಂದು ಆಫ್ರಿಕಾ, ಒಂದು ಆಸ್ಟ್ರೇಲಿಯಾ, Polynesia, ಅರ್ಧ ಏಶಿಯಾವನ್ನು ನುಂಗಿನೊಣೆದ ಕ್ರೈಸ್ತ ವಲಸೆ ರಾಜಕಾರಣದ ಒಂದು ಪುಟ್ಟ ಮಾದರಿ sample ಇದು – ಸಹ್ಯಾದ್ರಿಪ್ರದೇಶ Jacobite, Syrian, Pentecost, Marthoma ಇತ್ಯಾದಿ ಚರ್ಚ್‍ಗಳ ವಶವಾದದ್ದು. ಇದೊಂದು ಸುವ್ಯವಸ್ಥಿತ ಸಂಚು. Spanish ಮತ್ತು Portuguese ಎಂಬ ಎರಡು ಕಬಂಧಬಾಹುಗಳ ಮೂಲಕ ಕಾರ್ಯಾಚರಣೆ ಮಾಡುತ್ತಿದ್ದ ಚರ್ಚ್‍ಗೆ 200 ವರ್ಷ ಕಳೆದರೂ ಬ್ರಿಟಿಷರಿಂದಾಗಿ ಭಾರತವನ್ನು ನುಂಗುವುದು ಸಾಧ್ಯವಾಗಲಿಲ್ಲ. ಬ್ರಿಟಿಷರು ಹೋದ ಕೂಡಲೇ ನಮ್ಮವರೇ ಇಡೀ ಸಹ್ಯಾದ್ರಿಯನ್ನು ಚಿನ್ನದ ತಟ್ಟೆಯಲ್ಲಿ ಇಟ್ಟು ಚರ್ಚ್‍ನ ವಶಕ್ಕೆ ಕೊಟ್ಟರು. ಇಂದು ಕೇರಳ, ತಮಿಳುನಾಡು, ಕರ್ನಾಟಕದ ಮಲೆನಾಡಿನ ಬಹುಭಾಗ, ಪೂರ್ವಕರಾವಳಿಯ ಅರಕು ಕಣಿವೆ ಮುಂತಾದೆಡೆ, ಪೂರ್ವಾಂಚಲದ ಬಹುಪಾಲು ಅರಣ್ಯಭಾಗ ಚರ್ಚ್‍ನ ವಶದಲ್ಲಿವೆ. ಪಟ್ಟಾ ಅದರ ಹೆಸರಲ್ಲಿ ಇಲ್ಲ ಎಂಬುದೊಂದೇ ವ್ಯತ್ಯಾಸ. ಶಾಂತಸಾಗರವನ್ನೇ ಕೆಂಪಾಗಿಸಿದ ರಕ್ತ ಇಲ್ಲಿ ಹರಿದಿಲ್ಲ ಎಂಬುದಷ್ಟೇ ವ್ಯತ್ಯಾಸ.

ವಲಸೆ ಹೋದಾಗ ಅನನ್ಯತೆ ಯಾವುದು? ಸಂಸ್ಕೃತಿಗೆ ನೆಲದ ನಂಟಿರುತ್ತದೆ. ಮತಕ್ಕೆ ನೆಲದ ನಂಟಿರುವುದಿಲ್ಲ. ಅಂದರೆ ನೆಲದಿಂದ ಪಲ್ಲಟ ಹೊಂದಿದರೆ ಒಂದು ಜನಾಂಗಕ್ಕೆ ಸಂಸ್ಕೃತಿ ಅನನ್ಯತೆಯಾಗಿ ಉಳಿಯುವುದಿಲ್ಲ. ಮತವೇ ಅನನ್ಯತೆಯಾಗಿಬಿಟ್ಟರಂತೂ ಸಂಸ್ಕೃತಿ, ಪ್ರಕೃತಿ ಯಾವುದರ ಗೊಡವೆಯೂ ಇರುವುದಿಲ್ಲ. ದೇವರನ್ನಂತೂ ಕ್ರಾಟನ್ ಗಿಡದಂತೆ ಕಿತ್ತು ಎಲ್ಲೆಂದರಲ್ಲಿ ನೆಡಬಹುದು! ಹಾಗಾಗಿ ವಲಸೆ ಹೋಗುವವರ ಗಂಟಲ್ಲಿ ಹಿಟ್ಟಿಲ್ಲದಿದ್ದರೂ ದೇವರು ಇರುತ್ತದೆ! ಹಾಗಾಗಿ ವಟಪುರದಲ್ಲಿ ದೇವಾಲಯಗಳಿಗೆ ಬರವಿಲ್ಲ. ವಟಪುರವೆಂಬುದು ಇಂತಹ ಅನನ್ಯತೆಗಳ ಗೋರಿ. ಭಗ್ನಾವಶೇಷಗಳ ನಡುವೆಯೇ ಸ್ವಲ್ಪ ಜಾಗವನ್ನು ತೆರವುಗೊಳಿಸಿ ವೆಂಕಟರಮಣ ದೇವಾಲಯವನ್ನು ಕಟ್ಟಿಸುವ ಉಮೇದು ಮರ್ತಪ್ಪ ಪ್ರಭುಗಳಿಗೆ!

ನಂತರ ಎಲ್ಲೆಂಲ್ಲಿಂದಲೋ ಮುಸ್ಲಿಮರು ಬಂದರು; ಮಸೀದಿ ಬಂತು. ಕ್ರಿಶ್ಚಿಯನ್ನರು ಬಂದರು; ಚರ್ಚ್ ಬಂತು. ವಲಸೆ ಬಂದವರು ಜೋಪಡಿಯಲ್ಲಿ ಬದುಕಿದರೂ ಅವರನ್ನು`ಗಟ್ಟಿಗೊಳಿಸುವ’ ಚರ್ಚ್‍ಗಳು ಮಜಬೂತಾಗಿರುತ್ತವೆ. ಕಾರಂತರ ಕಾಲ ಮುಗಿಯುವ ಕಾಲಕ್ಕೆ ಪುತ್ತೂರು, ನಂತರ ಬೆಳ್ತಂಗಡಿ Diocese ಗಳಾದವು. ಇಲ್ಲಿ ಕಾರಂತರು `ಸರಕಾರದ ಕೃಪೆ’ ಎನ್ನುತ್ತಾರೆ. ಹಿಂದೆ, ಪ್ರಭುತ್ವ ಈ ವಲಸೆಗಳಲ್ಲಿ ಅದೆಷ್ಟು ಪ್ರಜ್ಞಾಪೂರ್ವಕವಾಗಿ ಶಾಮೀಲಾಗಿರುತ್ತಿದ್ದವೋ ಎಂಬುದನ್ನು ಈಗ ಹೇಳುವುದು ದುಸ್ತರ. ಹಿಂಸೆಯಿಂದ ವಲಸೆ ಹುಟ್ಟಿಕೊಳ್ಳುತ್ತಿತ್ತು ನಿಜ. ವಲಸೆ ಹೋಗಬೇಕು, ವಲಸೆಹೋಗಿಸಬೇಕು ಎಂಬುದು ಎಷ್ಟು ಪ್ರಜ್ಞಾಪೂರ್ವಕವಾಗಿ ನಡೆಯುತ್ತಿತ್ತು ಎಂದು ಹೇಳುವುದು ಕಷ್ಟ. ಇಂದಂತೂ ಯಾವ Denomination ನ ಸರಕಾರವಾದರೂ, ಎಲ್ಲಿನ ಸರಕಾರವಾದರೂ `ವಲಸೆ’ಯಲ್ಲಿ ಸಹಾಯಕವಾಗಿಯೋ, ಅಸಹಾಯಕವಾಗಿಯೋ ಶಾಮೀಲಾಗಿರುತ್ತವೆ.

ಬಾಂಗ್ಲಾದಿಂದ ಬಂದ ನಿರಾಶ್ರಿತರನ್ನು, ಅಕ್ರಮವಲಸಿಗರನ್ನು ಕಾರಂತರು ಪ್ರಸ್ತಾಪಿಸುತ್ತಾರೆ. ಶ್ರೀಲಂಕಾದಿಂದ ವಲಸೆಬರುತ್ತಿರುವ ತಮಿಳರಿಗಾಗಿ ಸುಳ್ಯಪರಿಸರದಲ್ಲಿ ರಬ್ಬರ್ ಪ್ಲಾಂಟೇಶನ್‍ಗಳು ಹುಟ್ಟಿಕೊಳ್ಳುತ್ತಿರುವುದನ್ನು, ಅದಕ್ಕಾಗಿ ಕಾಡು ತೆರವಾಗುತ್ತಿರುವುದನ್ನು ಕಾರಂತರು ಪ್ರಸ್ತಾಪಿಸುತ್ತಾರೆ.

ಎರಡು ಶತಮಾನಗಳ ಹಿಂದಿನವರೆಗಾದರೆ ವಲಸೆಹೋದವರು ಎಂತೋ ಏನೋ ಹೋದಲ್ಲಿ ತಂಗುತ್ತಿದ್ದರು. ಭಾರತದಲ್ಲಿ ಸಹಸ್ರಾರು ವರ್ಷಗಳಿಂದ ವಲಸೆ ಬಂದವರೆಲ್ಲ ಕಾಲಾಂತರದಲ್ಲಿ ಸ್ಥಳೀಯರೇ ಆಗಿಹೋದರು. ಆದರೆ ಯುರೋಪ್ ಮುಂತಾದೆಡೆ ಅಂತಾಗಲಿಲ್ಲ. ಅವರು ಹೊರಗಿನವರೇ ಆಗಿ ಉಳಿದುಬಿಟ್ಟರು. ಜಿಪ್ಸಿ, ರೋಮನಿ ಜನರು (ನಮ್ಮಲ್ಲಿನ ಲಂಬಾಣಿ ಅಥವಾ ಬಂಜಾರಾ ಬುಡಕಟ್ಟಿನವರು) ಹಿಂಸೆಗೆ ಗುರಿಯಾಗುತ್ತಾ ಬದುಕುತ್ತಿದ್ದಾರೆ.) ಕಳೆದೆರಡು ಶತಮಾನಗಳಿಂದ ಅಂತಾರಾಷ್ಟ್ರೀಯ ಗಡಿಗಳೆಲ್ಲ ಹೆಚ್ಚುಕಡಿಮೆ ಭದ್ರವಾಗಿ ರೂಪಿಸಲ್ಪಟ್ಟಿದ್ದರಿಂದ ಮತ್ತು ಜನಸಂಖ್ಯೆ ಅಗಾಧವಾಗಿ ಹೆಚ್ಚಿದ್ದರಿಂದ ಈಗ ವಲಸೆ ಹೋದವರು ನಿರಾಶ್ರಿತರೆಂಬ ಹಣೆಪಟ್ಟಿ ಅಂಟಿಸಿಕೊಂಡು ಅತಂತ್ರರಾಗಿಯೇ ಉಳಿಯುವ ಸ್ಥಿತಿ ನಿರ್ಮಾಣವಾಗಿದೆ. ಒಂದು ಅಂಕಿ ಅಂಶಗಳ ಪ್ರಕಾರ ಈ ವಿಶ್ವದಾದ್ಯಂತ 30 ಮಿಲಿಯಕ್ಕೂ ಅಧಿಕ ನಿರಾಶ್ರಿತರಿದ್ದಾರೆ.)

ಮಾನವ ಚರಿತ್ರೆಯಲ್ಲಿ ವಲಸೆ ಎಂಬುದು ರಕ್ತಸಿಕ್ತ ಅಧ್ಯಾಯ. ಪಶುಪಕ್ಷಿಪ್ರಾಣಿಗಳು ವಲಸೆಹೋಗುವುದು ಕೇವಲ ಮೂರು ಕಾರಣಗಳಿಗಾಗಿ. ಆಹಾರ, ವಂಶಾಭಿವೃದ್ಧಿ ಮತ್ತು ಬೆಚ್ಚನೆ ಅಥವಾ ಶೀತ ವಾತಾವರಣದಲ್ಲಿ ಬದುಕಲು. ಇದು ಸಂವತ್ಸರದ ಒಂದು ನಿರ್ದಿಷ್ಟ ಸಮಯದಲ್ಲಿ ನಡೆಯುತ್ತದೆ, ಎರಡು ನಿರ್ದಿಷ್ಟ ಪ್ರದೇಶಗಳ ನಡುವೆ ನಡೆಯುತ್ತದೆ. ಆದರೆ ಮನುಷ್ಯನ ವಿಷಯ ಹಾಗಲ್ಲ.

ಮಾನವ ನಾಗರೀಕತೆಯನ್ನು ರೂಪಿಸಿದ, ಜನಾಂಗ-ಜನಾಂಗಗಳನ್ನೇ ಇಲ್ಲವಾಗಿಸಿದ, ಭಾಷೆ-ಸಂಸ್ಕೃತಿಗಳನ್ನು ಪ್ರಭಾವಿಸಿದ, ನಾಶಗೊಳಿಸಿದ ಒಂದು ದೊಡ್ಡ ವಿದ್ಯಮಾನವೆಂದರೆ ವಲಸೆ. ವಲಸೆ ಎಂಬುದು ಅನಾದಿ ಕಾಲದಿಂದ ತೊಡಗಿ ಇಂದಿನ ತನಕ ಹತ್ತಾರು, ನೂರಾರು ರೂಪಗಳಲ್ಲಿ ಕಾಣಿಸಿಕೊಂಡಿದೆ.

ಇಂದು ನಾವು ಆಫ್ರಿಕಾ ಎಂದು ಕರೆಯುವ ಭೂಭಾಗದ ಪರ್ವತ ಪ್ರದೇಶದ ದಟ್ಟಕಾಡುಗಳಲ್ಲಿ ಮಿಲಿಯಾಂತರ ವರ್ಷಗಳ ಕಾಲ ಬದುಕಿ `ಬೋರ್’ `ನೀರಸ’ ಎಂದು ತಿಳಿದ ಒಂದು ನರವಾನರ, Ape,, ಅಕಸ್ಮಾತ್ ಮರ ಇಳಿದು ಬದುಕುವ ನಿರ್ಧಾರ ಮಾಡುವಲ್ಲಿಂದ ತೊಡಗಿ ನಿನ್ನೆಮೊನ್ನೆ Kansas ನ Pub ಒಂದರಲ್ಲಿ ಆಂಧ್ರದ ಹುಡುಗ ಶ್ರೀನಿವಾಸ್ ಕೂಚಿಬೊಟ್ಲನ ಎದೆಗೆ ಬಡಿದ ಗುಂಡಿನ ತನಕ ವಲಸೆಗೆ ನೂರಾರು ಮುಖಗಳು, ರೂಪಗಳು, ಕಾರಣಗಳು, ನಿಷ್ಕಾರಣಗಳು.

ಮರ ಇಳಿದು Homo Erects, Homo Neanderthal, Homo Sapiens,, ಎಂಬಿತ್ಯಾದಿ ಮನುಷ್ಯ ಎನ್ನಿಸಿಕೊಂಡ ನರವಾನರ ತನ್ನ ಪ್ರಸರಣಕ್ಕೆ ನಾಂದಿಹಾಡಿತು. ಆ ಹೊತ್ತಿಗೆ ಸರಿಯಾಗಿ ಭೂಮಿಯ ಮೇಲ್ಮೈ ಚಿಪ್ಪುಗಳು, plates, ಛಿದ್ರವಾಗಿ ಚದುರಲಾರಂಭಿಸಿ ಮನುಜಸಂಕುಲವೂ ಇತರ ಅಸಂಖ್ಯ ಜಂತುಗಳೊಂದಿಗೆ ಜಗತ್ತಿನ ಮೂಲೆಮೂಲೆಗೆ ಚದುರುವಂತಾಯಿತು. ಒಂದು ಪ್ರಬೇಧ ಹತ್ತು ಉಪಪ್ರಬೇಧಗಳಾಗಿ ಒಡೆಯುವಂತಾಯಿತು. ಸಸ್ಯಾಹಾರಿಯಾದ ಮನುಷ್ಯ ಬೆಂಕಿಯ ಉಪಯೋಗವನ್ನು ಮತ್ತು ಬೇಟೆಯನ್ನು ಕಲಿತ ಅನಂತರ ಅವನ ಗುಂಪುಗಳು ಅನಿವಾರ್ಯವಾಗಿ ಪಲ್ಲಟಗೊಳ್ಳಬೇಕಾಯಿತು. ಇದು ಪ್ರಾಣಿಗಳ ವಲಸೆಗಿಂತ ಭಿನ್ನ. ಮೊದಲು ಜನಾಂಗ ಅನಂತರ ಭಾಷಾ ಭೇದ, ತದನಂತರ ಕೃಷಿ ಮತ್ತು ನಾಗರಿಕತೆಗಳು ಹುಟ್ಟಿದ ಮೇಲೆ ಮನುಷ್ಯ ಪ್ರಬೇಧದಲ್ಲಿ ಗುಂಪುಗಾರಿಕೆ ಹೆಚ್ಚಿತು. ಅನೇಕ ತರಹದ ಈ ಗುಂಪುಗಳ ನಡುವೆ ಲಾಗಾಯ್ತಿನಿಂದ ಸಂಘರ್ಷ, ಯುದ್ಧ. ಯುದ್ಧದ ಕಾರಣದಿಂದ ವಲಸೆ, ನಿರಾಶ್ರಯ; ನಿರಾಶ್ರಯದಿಂದ ಮತ್ತೆ ವಲಸೆ, ಯುದ್ಧ.

ರಾಜಕೀಯ ಮತ್ತು ರಾಜ್ಯಗಳ ಉದಯದಿಂದ ಯುದ್ಧವೂ ಹೆಚ್ಚಿತು. ಯುದ್ಧಕ್ಕಾಗಿ ಕುದುರೆಕತ್ತೆಗಳನ್ನು ಸಾಕಲು ವಿಸ್ತಾರವಾದ ಭೂಮಿಯನ್ನು ತೆರವುಗೊಳಿಸಲಾಯಿತು. ಉತ್ತರ ಆಫ್ರಿಕಾ, ಮಧ್ಯ ಏಶಿಯಾದ ಹಲವು ವಿಸ್ತಾರ ಪ್ರದೇಶಗಳಲ್ಲಿ ಸಾವಿರಾರು ಕುದುರೆಗಳನ್ನು ಸಾಕಿ ಯುದ್ಧಭೂಮಿಗಳಿಗೆ ರಫ್ತು ಮಾಡುವುದೇ ಕಾಯಕವಾಯಿತು. ಅನೇಕ ಜನಸಮುದಾಯಗಳು ಈ ಕಾಯಕಕ್ಕಾಗಿಯೇ ವಲಸೆಹೋದರು. ಅದರಿಂದಾಗಿಯೇ ಹಲವು ಸಮುದಾಯಗಳು ಗುಳೆ ಏಳುವಂತಾಯಿತು. ಸಾವಿರಾರು, ಸಾವಿರಾರು ಹೆಕ್ಟೇರ್ ಅರಣ್ಯಭೂಮಿಯನ್ನು ಅದಕ್ಕಾಗಿ ತೆರವುಗೊಳಿಸಿ ಹುಲ್ಲುಗಾವಲನ್ನಾಗಿ, ಮರುಭೂಮಿಯನ್ನಾಗಿ ಪರಿವರ್ತಿಸಲಾಯಿತು. ಈ ಕುದುರೆಗಳ ಆಮದಿಗಾಗಿಯೆ ರೇವುಗಳು ಹುಟ್ಟಿಕೊಂಡವು.

ಪುಣ್ಯಭೂಮಿ ಭಾರತವೂ ಇದರಲ್ಲಿ ಹಿಂದೆ ಬೀಳಲಿಲ್ಲ. ಯುದ್ಧದಲ್ಲಿ ಹೋರಾಡಲು ಸಾವಿರಾರು ಆನೆಗಳನ್ನು ಹಿಡಿದು ಕೊಲ್ಲಲಾಯಿತು; ವಿಸ್ತಾರ ಅರಣ್ಯಭೂಮಿಯನ್ನು ನಾಶಗೊಳಿಸಲಾಯಿತು. ಸೈನಿಕರ ಗುರಾಣಿಯನ್ನಾಗಿ ಬಳಸುವ ಚಿಪ್ಪಿಗಾಗಿ ತುಂಗಭದ್ರಾ ಮತ್ತಿತರ ನದಿಗಳಲ್ಲಿ ಹೇರಳವಾಗಿ ಬದುಕಿದ್ದ ಬೃಹದ್ಗಾತ್ರದ ಆಮೆಗಳನ್ನು ಹೆಚ್ಚುಕಡಿಮೆ ನಿರ್ನಾಮ ಮಾಡಲಾಯಿತು. ಆನೆ ಮತ್ತು ಆಮೆಗಳನ್ನು ಹಿಡಿಯುವ ಕಾಯಕಕ್ಕಾಗಿಯೇ ಕೆಲವು ಸಮುದಾಯಗಳು ಕಾಡುಪ್ರದೇಶಕ್ಕೆ ವಲಸೆಹೋದವು. ಯುದ್ಧರಂಗದಲ್ಲಿ ಅನಾಥವಾಗಿ ಬಿದ್ದ ಚಿಪ್ಪು ಮತ್ತಿತರ ಸಾಮಗ್ರಿಗಳ ಸಂಗ್ರಹಕ್ಕಾಗಿಯೂ ತಾತ್ಕಾಲಿಕ ಮತ್ತು ಶಾಶ್ವತ ವಲಸೆ ನಡೆಯಿತು. ಸೈನ್ಯ ಸಾಗಾಟ ಸುಗಮವಾಗಲು ನದಿಗಳಲ್ಲಿ ಬದುಕಿದ್ದ ಮೊಸಳೆಗಳ ಮಾರಣಹೋಮ ಮಾಡಲಾಯಿತು. ಪಶ್ಚಿಮ ಕರಾವಳಿಯಲ್ಲಿ ಈಗ ಮೊಸಳೆಗಳು ನಿರ್ವಂಶವಾಗಿವೆ.

ಮರಾಠಾ, ಪೋರ್ಚುಗೀಸ್, ಬಿದನೂರು, ಕೆಳದಿ, ಬ್ರಿಟಿಷ್, ನಂತರ ನಮ್ಮದೇ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಯುದ್ಧ ಮತ್ತು ಆಡಳಿತದ ಹೆಸರಲ್ಲಿ ನಡೆದ ವಲಸೆ ಮತ್ತು ನೇಮಕವೆಂಬ ಬಿಡಿ ವಲಸೆಗಳ ವಿಶ್ಲೇಷಣೆಯನ್ನು ಕಾರಂತರು ಅದೇ ಊರು ಅದೇ ಮರ ಕಾದಂಬರಿಯಲ್ಲಿ ನಡೆಸುತ್ತಾರೆ. ಅವರೆಲ್ಲರಿಗೂ ಭೂಮಿ-ಮನೆ ಬೇಕು, ಕಟ್ಟಿಗೆ ಬೇಕು. ಕಾಡು ನಾಶವಾಗಬೇಕು. ಕಾದಂಬರಿಯ ಕೊನೆ ಮುಟ್ಟುವ ಹೊತ್ತಲ್ಲಿ ವಟಪುರ ಎಂಬ ಹಳ್ಳಿಯು ಕಾಡು, ಹಾಡಿ, ಮರ ಏನೂ ಇಲ್ಲದ ಬೆಂಗಾಡಾಗಿದೆ. ಕಾದಂಬರಿಯ ಆರಂಭದಲ್ಲಿ ಬೇಣದ ಗೋಳಿಮರದ ನೆರಳಲ್ಲಿ ನಿಂತ ರಾಮ ಭಟ್ಟರು ಅದನ್ನು ಸಹಸ್ರಾರು ಹಕ್ಕಿ ಮತ್ತು ಇತರ ಜೀವಿಗಳ ಆವಾಸ, ಆಶ್ರಯ ತಾಣವಾಗಿ ಗುರುತಿಸುತ್ತಾರೆ. ಕಾದಂಬರಿಯ ಕೊನೆಯಲ್ಲಿ ಮರವೆಂದರೆ ಬರೇ ಮೋಪು, ಕಟ್ಟಿಗೆ. ನಮಗೆ ಲಾಭ ತರುವ ರಬ್ಬರು, Cintenella ಹುಲ್ಲು, ಶುಂಠಿ, ಲಾವಂಚ, ಅಡಿಕೆ ಇತ್ಯಾದಿ ಬಿಟ್ಟು ಉಳಿದೆಲ್ಲ ಗಿಡಮರಗಳೆಲ್ಲ ಕಳೆಗಳೇ. ಪಶುಪಕ್ಷಿಗಳೆಲ್ಲ ಪ್ಲೇಟು ತಟ್ಟೆಗಳಿಲ್ಲದೆ, ನಡೆದಾಡಿಕೊಂಡು supply ಆಗುವ ಪಲ್ಯ ಸಾಂಬಾರುಗಳು. ಅಪ್ಪಳಸ್ವಾಮಿ ಮತ್ತು ಆರೋಕ್ಯಸ್ವಾಮಿ ನಮಗೆ ಇಷ್ಟನ್ನು ಕಲಿಸಿದರು, ನಾವು ಸಂತೋಷದಿಂದ ಕಲಿತೆವು. ವಟಪುರವೆಂದರೆ ದಕ್ಷಿಣ ಕನ್ನಡದ, ಕರ್ನಾಟಕದ, ಭಾರತ ದೇಶದ ಯಾವ ಹಳ್ಳಿಯೂ ಆಗಬಹುದು, ಪ್ರತಿ ಹಳ್ಳಿಯೂ ಆಗಬಹುದು. ಅದೇ ಊರು ಅದೇ ಮರ ಕಾದಂಬರಿಯಲ್ಲಿ ಕಾರಂತರು ಸಂಪೂರ್ಣವಾಗಿ, ವಿವರವಾಗಿ ವಿಶ್ಲೇಷಿಸಿದ ವಿಷಯಗಳಲ್ಲಿ ಕೆಲವು ಇಡಿಯಾಗಿ, ಬಿಡಿಯಾಗಿ ಮೂಜನ್ಮ, ನಾವು ಕಟ್ಟಿದ ಸ್ವರ್ಗ ಮುಂತಾದ ಕಾದಂಬರಿಗಳಲ್ಲೂ ಚರ್ಚೆಯಾಗುತ್ತವೆ.

ಗುಲಾಮಗಿರಿಯನ್ನು ಬಹುತೇಕ ಅವಲಂಬಿಸಿದ್ದ ಗ್ರೀಕ್ ಮತ್ತು ರೋಮನ್ ನಾಗರಿಕತೆ ಮತ್ತು ಚಕ್ರಾಧಿಪತ್ಯಗಳು ಕೂಡಾ ಅದಕ್ಕಾಗಿ ನಡೆಸಿದ ಯುದ್ಧಗಳು, ಪರಿಸರ ನಾಶ, ಹುಟ್ಟುಹಾಕಿದ ವಲಸೆಗಳು ಎಣೆಯಿಲ್ಲದ್ದು. ರೋಮನ್ ದೊರೆ ಪೋಂಪೆ ತನ್ನ ಪ್ರೇಯಸಿ ಕ್ಲಿಯೋಪಾತ್ರಾಳನ್ನು ಮೆಚ್ಚಿಸಲು 1500 ಸಿಂಹಗಳ ಮೆರವಣಿಗೆಯನ್ನು ಏರ್ಪಡಿಸಿದ್ದನಂತೆ. ಅಷ್ಟು ಸಿಂಹಗಳನ್ನು ಹಿಡಿಯುವಾಗ ನಡೆದ ವನ್ಯಜೀವಿಗಳ ಹತ್ಯೆ, ಅರಣ್ಯನಾಶ, ವಲಸೆ ಎಷ್ಟಿರಬಹುದು! ಇದೊಂದು ಚಿಕ್ಕ ಉದಾಹರಣೆ.

ಗುಲಾಮಗಿರಿ ಎಂದಾಗ ನೆನೆಪಾಗುವುದು ಅದೇ ಊರು ಅದೇ ಮರ ಕಾದಂಬರಿಯಲ್ಲಿ ಕಾರಂತರು ಚಿತ್ರಿಸುವ ಕೊರಗರ ಕರುಣಾಜನಕ ಸ್ಥಿತಿ. ಸುದೈವವಶಾತ್ ಯಾವ ವಿಮರ್ಶಕರೂ ಅದರ ಬಗ್ಗೆ ಮಾತನಾಡಿಲ್ಲ, ದಲಿತ ಚಿಂತಕರೂ ಅದನ್ನು ಗುರುತಿಸಲಿಲ್ಲ. ಕೇರಳದ ಚರ್ಚ್‍ಗಳಿಗೆ ಸಾವಿರಾರು ಎಕರೆ ಅರಣ್ಯಭೂಮಿ, ರೆವಿನ್ಯೂ ಭೂಮಿ ಕೊಡಮಾಡಿದ ನಮ್ಮ ಸರಕಾರಗಳಿಗೆ, ರಾಜಕೀಯ ಪಕ್ಷಗಳಿಗೆ ಕೊರಗ ಮೊದಲಾದ ಬಡವರಿಗೆ ಮೂಲನಿವಾಸಿಗಳಿಗೆ ಒಂದು ಸೆಂಟ್ಸ್ ಜಾಗವನ್ನೂ ನೀಡಲಾಗಲಿಲ್ಲ ಎನ್ನುತ್ತಾರೆ ಕಾರಂತರು.

ವಿಶ್ವದಾದ್ಯಂತ ಅದೆಷ್ಟೋ ಜನಸಮುದಾಯಗಳು ಪಶುಪಾಲನೆ ಮಾಡುತ್ತಾ, ಕುಮರಿ ಬೇಸಾಯ ಮಾಡುತ್ತಾ ಜಾಗದಿಂದ ಜಾಗಕ್ಕೆ ವಲಸೆ ಹೋದದ್ದನ್ನು ಕಾಣುತ್ತೇವೆ. ಅದೇ ರೀತಿ ಸಮುದಾಯದೊಳಕ್ಕೆ ಜನಸಂಖ್ಯೆ ಹೆಚ್ಚಿ ಒಡೆದು ವಲಸೆಹೋದ ಗುಂಪುಗಳು ಮತ್ತೆಲ್ಲಿಯೋ ಚಿಗುರಿ ಪ್ರತ್ಯೇಕ ಸಮುದಾಯಗಳೇ ಆದವು. ಬರಗಾಲದಿಂದ ವಲಸೆ ಹೋದ ಸಮುದಾಯಗಳು ಅನೇಕ.

ದಂಡೆತ್ತಿ ಹೋಗಿ ಅಲ್ಲಿಯೇ ಉಳಿದವರಿದ್ದಾರೆ, ತಮ್ಮ ಒಂದು ತುಕಡಿಯನ್ನು ಉಳಿಸಿ ಬಂದವರಿದ್ದಾರೆ. ಹಿಮಾಚಲಪ್ರದೇಶದ ಒಂದು ಹಳ್ಳಿಯಲ್ಲಿ ಇರುವ ಒಂದು ವಿಶಿಷ್ಟ ಜನಸಮುದಾಯವು ಅಲೆಕ್ಸಾಂಡರ್ ಚಕ್ರವರ್ತಿ ಭಾರತದಲ್ಲಿ ಉಳಿಸಿಹೋದ ತುಕಡಿಯ ಪೀಳಿಗೆಯವರು ಎಂಬ ಅಭಿಪ್ರಾಯವಿದೆ. ಮರಾಠಾ ಸೈನ್ಯ ಕೂಡಾ ಇಂತಹ ಕ್ರಮವನ್ನು ಪಾಲನೆ ಮಾಡಿದ್ದುಂಟು. ತಂಜಾವೂರಿನಲ್ಲಿರುವ ಸಂಸ್ಥಾನ ಆ ಬಗೆಯದ್ದು. ಗುಂಪುಗುಂಪುಗಳಾಗಿ ಹೋಗಿ ವೇತನ ಕೊಟ್ಟವರ ಸೈನ್ಯದಲ್ಲಿ ದುಡಿಯುತ್ತಿದ್ದ ಸಮುದಾಯಗಳೂ ಇದ್ದವು. ಮರಾಠಾ ಹೋರಾಟಗಾರರು, ನೇಪಾಳಿ ಗೂರ್ಖಾ ಸಮುದಾಯಗಳು ಅಂತವರು. ಒಂಥರಾ mercenaries ಇದ್ದ ಹಾಗೆ. ಅವರ ಸಾಂಸ್ಕೃತಿಕ ಅವನತಿ ಸಹಜವಾಗಿಯೇ ನಡೆಯುತ್ತದೆ.

ಬಲು ಹಿಂದಿನ ಚರಿತ್ರೆಯಲ್ಲಿ ಶುರುವಾಗಿ ಇಂದೂ ಮುಂದುವರಿಯುತ್ತಿರುವ ಒಂದು ದೊಡ್ಡ ನಿರಾಶ್ರಿತ-ವಲಸೆ ಸಮುದಾಯವೆಂದರೆ ಯುದ್ಧ ನಿರಾಶ್ರಿತರು, War Refugees.

ಮತಪಂಥ, ನಂಬಿಕೆ, ಆಚರಣೆ ಇತ್ಯಾದಿಗಳ ಇತಿಹಾಸದಲ್ಲಿ ಬಲುದೊಡ್ಡ ತಿರುವೆಂದರೆ ಎರಡು ವಿಸ್ತರಣಾವಾದಿ ಅಬ್ರಹಾಮಿಕ್ ಮತ, ರಿಲಿಜನ್‍ಗಳ ಉಗಮ. ಇಸ್ಲಾಂ ಮತ್ತು ಕ್ರೈಸ್ತ ಮತಗಳ ಚರಿತ್ರೆಯೆಂದರೆ ಅನೇಕ ಜನಾಂಗಗಳ ಮಾರಣಹೋಮ, ವಿಸ್ತಾರ ಭೂಭಾಗಗಳ ನಾಶ, ಸಂಸ್ಕೃತಿ, ಭಾಷೆ, ಆಚರಣೆಗಳ ವಿನಾಶಗಳ ಚರಿತ್ರೆ. ಅವರಿಬ್ಬರ ನಡುವಿನ ಜಗಳದಲ್ಲಿ, ಅಂದರೆ ಜೆಹಾದ್-ಕ್ರುಸೇಡ್ ಜುಗಲ್‍ಬಂಧಿಯಲ್ಲಿ ಯುರೋಪ್, ಆಫ್ರಿಕಾ, ಏಶಿಯಾ ಖಂಡಗಳೇ ಸ್ಮಶಾನ ಭೂಮಿಗಳಾಗಿವೆ. ಆ ಜುಗಲ್‍ಬಂಧಿ ಇನ್ನೂ ನಡೆಯುತ್ತಲೇ ಇದೆ. ಈ ಅಬ್ರಹಾಮಿಕ್ ವಿಸ್ತರಣಾವಾದಕ್ಕೆ imperialism ಗೆ, ಎರಡು ಆಯಾಮಗಳಿವೆ. ಒಂದು, ಹೊಸನಾಡುಗಳಿಗೆ ವಲಸೆಹೋಗಿ, ಮೂಲನಿವಾಸಿಗಳನ್ನು ಕೊಂದು ಅಥವಾ ಒಕ್ಕೆಲೆಬ್ಬಿಸಿ ಓಡಿಸಿ ಅವರ ಜಾಗವನ್ನು ಆಕ್ರಮಿಸುವುದು. ಇನ್ನೊಂದು, ವಲಸೆಹೋಗಿ ಅವರನ್ನು ಆಮಿಷ ಒಡ್ಡಿಯೋ, ಬಲಾತ್ಕರಿಸಿಯೋ ಮತಾಂತರಿಸಿ ತಮ್ಮವರನ್ನಾಗಿಸುವುದು. ಮತ್ತೆ ಹಾಗೆ ಮತಾಂತರವಾದವರು ವಿಸ್ತರಣಾವಾದವನ್ನು ಮುಂದುವರಿಸುತ್ತಾರೆ. ಎಲ್ಲಿಗೆ ಯಾವುದು ಸೂಕ್ತವೋ ಅದನ್ನು ಅನುಸರಿಸುವುದು. ಅತಿಕ್ರಮಣ ಮತ್ತು ವಶಪಡಿಸಿಕೊಳ್ಳುವಿಕೆ (Encroachment and Capture)) ಅಬ್ರಹಾಮಿಕ್ ಮತಗಳ ಮುಖ್ಯ ಸಿದ್ಧಾಂತ.

ಆಫ್ರಿಕಾದ ಉತ್ತರಭಾಗ ಸಂಪೂರ್ಣ ಅರಬರ ವಶವಾದರೆ, ಪೋರ್ಚುಗಲ್‍ನ ಸ್ವಲ್ಪ ಭೂಭಾಗ, ಯುರೋಪಿನ ಪೂರ್ವ, ಏಶಿಯದ ಬಹುಭಾಗ ವಹಾಬಿ ವಿಸ್ತರಣಾವಾದಕ್ಕೆ ಬಲಿಯಾಯಿತು. ನಾಶವಾದ ಪರಿಸರ, ಜನಾಂಗ, ಸಂಸ್ಕೃತಿಗಳ ಲೆಕ್ಕವಿಟ್ಟವರಿಲ್ಲ. Romani, Gypsy ಮತ್ತು Jews ಯಹೂದಿ ಜನರು ಮಿಲಿಯಾಂತರ ಸಂಖ್ಯೆಯಲ್ಲಿ ಕೊಲ್ಲಲ್ಪಟ್ಟರು; ಅಳಿದುಳಿದವರು ವಿಶ್ವದಾದ್ಯಂತ ಹಂಚಿಹೋಗಿದ್ದಾರೆ. ಇಡೀ ಜಗತ್ತಿನಲ್ಲಿ ನಡೆದ ಪರಿಸರ ಮತ್ತು ಸಂಸ್ಕೃತಿ ನಾಶ ಒಂದು ತೂಕವಾದರೆ ಚರ್ಚ್ ಮತ್ತು ಲೂಟಿಕೋರರು ಜತೆಯಾಗಿ ಎರಡು ಅಮೇರಿಕಾಗಳಲ್ಲಿ ನಡೆಸಿದ ನಾಶವೇ ಒಂದು ತೂಕ. ಕಳೆದ 3-4 ಶತಮಾನಗಳಲ್ಲಿ ಸ್ಪಾನಿಶ್ ಮತ್ತು ಪೋರ್ಚುಗೀಸ್ ಚರ್ಚ್ ಮತ್ತು ಲೂಟಿಕೋರರು ದಕ್ಷಿಣ ಅಮೇರಿಕಾ ಒಂದರಲ್ಲೇ ಕೊಂದು ಕಳೆದ ಜನರ ಸಂಖ್ಯೆ 120 ಮಿಲಿಯನ್‍ಗೂ ಅಧಿಕ. ಇನ್ನು ಪಶುಪಕ್ಷಿಪ್ರಾಣಿಗಳಿಗೆ ಲೆಕ್ಕವಿಲ್ಲ. ಬರಿದಾದ ಅರಣ್ಯ, ನಾಶವಾದ ನಿಸರ್ಗ ವ್ಯವಸ್ಥೆಗಳಿಗೂ ಲೆಕ್ಕವಿಲ್ಲ. ಹಲವಾರು ಜನಾಂಗಗಳೇ ನಾಮಾವಶೇಷವಾದವು. ಹಲವು ಜನಾಂಗಗಳಲ್ಲಿ ಬೆರಳೆಣಿಕೆಯ ಮಂದಿ ಉಳಿದಿದ್ದಾರೆ. ಉತ್ತರ ಅಮೇರಿಕಾದಲ್ಲಿ ಕೊಲ್ಲಲ್ಪಟ್ಟ ವಿವಿಧ Red Indian ಜನಾಂಗಗಳ ಜನರ ಸಂಖ್ಯೆ ಒಂದು ಅಂದಾಜಿನ ಪ್ರಕಾರ 30 ಮಿಲಿಯನ್. ಲೇಖಕ Charles Mann ಅವರ ಪ್ರಕಾರ ಇದು 100 ಮಿಲಿಯನ್. ಕೆಲವು ಜನಾಂಗಗಳು ಅಳಿದು ಹೋಗಿವೆ. ಒಂದೊಮ್ಮೆ ಇಡೀ ಉತ್ತರ ಅಮೇರಿಕಾದಾದ್ಯಂತ ಓಡಾಡಿಕೊಂಡಿದ್ದ Bison, Cougars, Reindeers, Puma ಎಲ್ಲವೂ ಬೆರಳೆಣಿಕೆಯಲ್ಲಿ ಉಳಿದುಕೊಂಡಿವೆ.

ವಲಸೆಯ ಈ ಎಲ್ಲ ಕಾರಣಗಳು ಒಂದರೊಳಗೊಂದು ಮಿಳಿತವಾಗಿ ಹತ್ತಲ್ಲ, ನೂರಲ್ಲ, ಸಾವಿರಾರು ರೂಪಗಳನ್ನು, ಪ್ರಮಾಣಗಳನ್ನು ಪಡೆದಿವೆ.

ಮುಖ್ಯವಾಹಿನಿಯ ಮಾಧ್ಯಮ ವಿಸ್ತರಣಾವಾದಿಗಳ ಜತೆಗೇ ಇದ್ದರೂ ಕೂಡಾ ಯುರೋಪಿನ ಸಂಸ್ಕೃತಿಯಲ್ಲಿ, ಬೌದ್ಧಿಕತೆಯಲ್ಲಿ ಹಾಸುಹೊಕ್ಕಾಗಿರುವ ಸತ್ಯಸಂಧತೆ, ವೈಜ್ಞಾನಿಕ ಮನೋಧರ್ಮ, ನಿರ್ಭಯತೆ, ಪ್ರಾಮಾಣಿಕತೆಗಳನ್ನು ಕದಲಿಸುವುದು ಈ ಮತಪಂಥಗಳಿಗೆ ಸಾಧ್ಯವಾಗಲಿಲ್ಲ. ಅವು ಎಷ್ಟೇ ಕ್ಷೀಣವಾಗಿದ್ದರೂ ಈ ವಿನಾಶವೆಲ್ಲ ಕಾಲಕಾಲಕ್ಕೆ ಅಷ್ಟೊ ಇಷ್ಟೋ ದಾಖಲಾಗಿವೆ. ಈ ಎಲ್ಲ ದಾಖಲೆಗಳನ್ನು ವಿಸ್ತರಣಾವಾದಿಗಳು ತಳ್ಳಿಹಾಕುತ್ತಾ ಬಂದಿದ್ದಾರೆ.

ತಮ್ಮೆಲ್ಲಾ ಅನ್ಯಾಯಗಳನ್ನು ಸಮರ್ಥಿಸಲು ಹಲವಾರು ಸಿದ್ಧಾಂತಗಳನ್ನು ರೂಪಿಸುತ್ತಾರೆ. ಅವುಗಳಲ್ಲಿ ಸೇವೆ ಒಂದು. (ಚರ್ಚ್‍ನ `ಸೇವೆ’ಯನ್ನು ಸತ್ಯವೆಂದು ಹೃದಯಪೂರ್ವಕವಾಗಿ ನಂಬಿದವರು ನಾವು ಮಾತ್ರ. ನಿಜವೆಂದರೆ ಪ್ರೊಟೆಸ್ಟಂಟ್ ಪಂಥ ಹುಟ್ಟಿಕೊಂಡಾಗ ತಾನು ಉಳಿದುಕೊಳ್ಳಲು ಕೆಥೋಲಿಕ್ ಚರ್ಚ್ ಹುಟ್ಟಿಸಿಕೊಂಡ ಒಂದು ಹತ್ಯಾರ ಅಷ್ಟೇ ಅದು. ಅದೇ Counter Reformation.) `ಮೂಢನಂಬಿಕೆ’ ಎಂಬುದು ಇನ್ನೊಂದು ಅಂತಹ ಹತ್ಯಾರ. ಮತಾಂತರವಾಗಲು ಒಪ್ಪದಿದ್ದಾಗ Barbarians, Cannibals ಎಂದು `ಸಾಬೀತು ಪಡಿಸಿ’ ಅವರನ್ನು ಕೊಂದುಕಳೆದದ್ದುಂಟು. ಯಾರು ಬಲಿಪಶುಗಳಾಗಿದ್ದಾರೆ, ಅವರಲ್ಲಿ ನೈಚ್ಯಭಾವ ಹುಟ್ಟುವ ಹತ್ತು ಹಲವು ಶಿಕ್ಷಣಗಳನ್ನು ಕೊಡುವುದು. ತಾವೇ ಮುಂದಾಗಿ Victim hood ಅನ್ನು ಆವಾಹಿಸಿಕೊಳ್ಳುವುದು. ಒಮ್ಮೆ ನೈಚ್ಯಭಾವ ಮತ್ತು Dhimmyism ನಮ್ಮ ಮನದಲ್ಲಿ ಹುಟ್ಟಿಕೊಂಡರೆ ಸಾಕು, ಬಿಡುಗಡೆ ಇಲ್ಲ. ನಮ್ಮನ್ನು ಕೊಂದುಕಳೆದವರೇ ನಮಗಿಂತ ದೊಡ್ಡ ಬಲಿಪಶುಗಳು ಎಂದು ಒಮ್ಮೆ ಅನ್ನಿಸಿಬಿಟ್ಟರೆ ಮುಗಿಯಿತು.

ಅಮೇರಿಕಾಗಳಲ್ಲಿ ನಡೆದ ಅನ್ಯಾಯಗಳನ್ನು ದಾಖಲಿಸಿದವರನ್ನು, ಪ್ರಶ್ನಿಸುವವರನ್ನು ಚರ್ಚ್ ಮತ್ತು ಅದರ ಪರವಾದ ಮುಂಚೂಣಿಯ ಮಾಧ್ಯಮಗಳು ಎಡಪಂಥೀಯರು, ದೈವವಿರೋಧಿಗಳು, heretics ಎಂದು ಕರೆಯುತ್ತಾ ಬಂದಿವೆ. ಉತ್ತರ ಅಮೇರಿಕಾದಲ್ಲಿ ನಡೆದ ನರಮೇಧವನ್ನು ದಾಖಲಿಸಿದ Charles Mannನ 1491: The Americas before Columbus, David Stannard ನ American Holocaust ಕೃತಿಗಳನ್ನು ಗೇಲಿ ಮಾಡುತ್ತಾರೆ, ವಿರೋಧೀ ಅಂಕಿಅಂಶಗಳನ್ನು ಸೃಷ್ಟಿಸುತ್ತಾರೆ. ಅವರನ್ನು ಕೊಂದದ್ದಲ್ಲ, ಅವರು cholera, influenza, Tuberculosis, gonorrhea, syphilis ಇತ್ಯಾದಿ ಕಾಯಿಲೆ ಬಂದು ತೀರಿಕೊಂಡರು ಎಂಬ Science fiction ಗಳನ್ನು ಸೃಷ್ಟಿಸುತ್ತಾರೆ. Holocaust ನಡೆದೇ ಇಲ್ಲ, ಅದು ಕಪೋಲಕಲ್ಪಿತ ಎಂದು ಹೇಳುವುದು ಇರಾನಿನ ಆಡಳಿತ ಮೊದಲಲ್ಲ. ಅಮೇರಿಕಾದಲ್ಲಿ “The myth of holocaust’ ಎಂದು ಪ್ರಚಾರ ಮಾಡುವ Christian lobby ಇದೆ. ಜಿಂಬಾಬ್ವೆ ದೇಶದ ಅಧ್ಯಕ್ಷ ರಾಬರ್ಟ್ ಮುಗಾಬೆಯನ್ನು ಇಡೀ ಐರೋಪ್ಯ ಮತ್ತು ಅಮೇರಿಕಾದ ಮಾಧ್ಯಮ ಪ್ರಜಾಪ್ರಭುತ್ವದ ವಿರೋಧಿಯನ್ನಾಗಿ, ದುಷ್ಟನನ್ನಾಗಿ ಚಿತ್ರಿಸಿವೆ. ಯಾಕೆಂದರೆ ದೇಶದ ನೆಲದ 95% ಭಾಗ ಶೇಕಡಾ 2ರಷ್ಟಿರುವ ಬಿಳಿಯರ ಕೈಯಲ್ಲಿದೆ. ಇಡೀ ದೇಶದ ಕರಿಜನರು ಬೆರಳೆಣಿಕೆಯ ಬಿಳಿಜನರ ಕೂಲಿಗಳು. ಇದನ್ನು ಆತ ಪ್ರಶ್ನಿಸುತ್ತಿದ್ದಾನೆ. (ಅದರರ್ಥ ಅವನು ಬಹಳ ಸುಭಗ ಎಂದೇನಲ್ಲ. ಆದರೆ ಆತ ಹೇಳುವ ಈ ವಿಚಾರ ಸರಿ.)

ಮುಂದುವರೆಯುತ್ತದೆ…

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments