ವಿಷಯದ ವಿವರಗಳಿಗೆ ದಾಟಿರಿ

ಡಿಸೆಂಬರ್ 1, 2017

1

ಭಾರತದ ಪ್ರಥಮ ಸ್ವಾತಂತ್ರ್ಯ ಹೋರಾಟಗಾರ ಯಾರು ಗೊತ್ತೇ CM ಸಿದ್ದರಾಮಯ್ಯನವರೇ?

‍ನಿಲುಮೆ ಮೂಲಕ

– ರಾಕೇಶ್ ಶೆಟ್ಟಿ

ಒಂದು ಸುಳ್ಳನ್ನು ಸತ್ಯವಾಗಿಸಲು ಏನು ಮಾಡಬೇಕು? ಮತ್ತೊಂದು,ಮಗದೊಂದು ಸುಳ್ಳಿನ ಸೌಧವನ್ನು ಕಟ್ಟುತ್ತಾ ಹೋಗಬೇಕು. ರಾಜ್ಯದ ತುಘಲಕ್ ದರ್ಬಾರಿನಲ್ಲಿ ನಡೆಯುತ್ತಿರೋದು ಅದೇ. ಶಾಂತವಾಗಿದ್ದ ಕರ್ನಾಟಕದಲ್ಲಿ ಅಶಾಂತಿಯ ವಾತಾವರಣ ಸೃಷ್ಟಿಸಲು ಕಾಂಗ್ರೆಸ್ ಮೊದಲು ಕೈಹಾಕಿದ್ದು ಟಿಪ್ಪು ಯುನಿವರ್ಸಿಟಿ ನಿರ್ಮಾಣದ ಯೋಜನೆಯ ಮೂಲಕ. ತೀವ್ರ ಪ್ರತಿರೋಧ ಬಂದ ನಂತರ ಅದು ಮೂಲೆ ಸೇರಿತ್ತು. ಸುಲ್ತಾನ್ ಸಿದ್ಧರಾಮಯ್ಯನವರು ಅಧಿಕಾರಕ್ಕೆ ಬಂದ ನಂತರ, ಮತ್ತೆ ಟಿಪ್ಪುವಿನ ಘೋರಿ ತೆಗೆಯಲು ನಿರ್ಧರಿಸಿದರು.ಬದುಕಿದ್ದಾಗಲೇ ಲಕ್ಷಾಂತರ ಜನರ ಮಾರಣಹೋಮ,ಮತಾಂತರ ಮಾಡಿದವನ ಆತ್ಮ ಶತಮಾನಗಳ ನಂತರ ಹೊರ ಬಂದರೆ ಸುಮ್ಮನಿದ್ದೀತೆ? ಮಡಿಕೇರಿಯಲ್ಲಿ ಟಿಪ್ಪು ಆಧುನಿಕ ಸೈನಿಕರಿಗೆ ಕುಟ್ಟಪ್ಪ ಬಲಿಯಾದರು. ಕಳೆದ ಮೂರು ವರ್ಷಗಳಿಂದ ನವೆಂಬರ್ ತಿಂಗಳು ಹತ್ತಿರ ಬಂದರೆ, ಕರ್ನಾಟಕದಲ್ಲಿ ಭೀತಿಯ ವಾತಾವರಣ ಸೃಷ್ಟಿಯಾಗುತ್ತಿದೆ. ಟಿಪ್ಪು ಸುಲ್ತಾನನಿಂದ ಹಿಡಿದು ಸಿದ್ಧರಾಮಯ್ಯನವರವರೆಗೂ ಈ ಭೀತಿಯ ವಾತಾವರಣ ಸೃಷ್ಟಿ ನಿಂತಿಲ್ಲ.ಸಜ್ಜನರ ಜಯಂತಿ ಮಾಡುತ್ತೇವೆಂದರೆ ಈ ನೆಲದ ಜನ ಆತನ ಜಾತಿ,ಧರ್ಮದ ಲೆಕ್ಕವಿಡದೆ ಸಂಭ್ರಮಿಸುತ್ತಾರೆ. ಸಂತ ಶಿಶುನಾಳ ಶರೀಫಜ್ಜ ನಮ್ಮ ಪಾಲಿಗೆ “ಸಂತ’ನಾಗಿಯೇ ಮುಖ್ಯವಾಗುತ್ತಾನೆಯೇ ಹೊರತು, ಷರೀಫ್ ಅನ್ನುವ ಕಾರಣಕ್ಕಲ್ಲ. ಇಂತಹ ಸೌಹಾರ್ದಕ್ಕೆ ಕೊಳ್ಳಿಯಿಟ್ಟವರು ಸಿದ್ಧರಾಮಯ್ಯನವರು. ಟಿಪ್ಪುವೆಂಬ ಮತಾಂಧನನ್ನು, ಸತ್ಯಸಂಧ,ಜನಾನುರಾಗಿ ಅಂತೆಲ್ಲ ಬಿಂಬಿಸಲು ಹೊರಟು ನಿಂತರು. ಉಂಡ ಮನೆಗೆ ದ್ರೋಹ ಬಗೆಯುವ ಬುದ್ಧಿಜೀವಿಗಳ ಸುಳ್ಳು ಇತಿಹಾಸದ ನಡುವೆ ಅವಿತುಕೊಂಡು, ಟಿಪ್ಪು ಸುಲ್ತಾನ ದೇಶದ ಪ್ರಪ್ರಥಮ ಸ್ವಾತಂತ್ರ್ಯ ಹೋರಾಟಗಾರ ಎಂದು ಖುದ್ಧು ಕರ್ನಾಟಕ ಸರ್ಕಾರವೇ ನಾಚಿಕೆ ಬಿಟ್ಟು ಸುಳ್ಳು ಜಾಹಿರಾತು ನೀಡಿತು. ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಅದನ್ನೇ ಟ್ವೀಟು ಮಾಡಿದರು.

ಹೌದೇ? ನಿಜವಾಗಿಯೂ ಟಿಪ್ಪು ಸುಲ್ತಾನ ಮೊದಲ ಸ್ವಾತಂತ್ರ್ಯ ಹೋರಾಟಗಾರನೇ? ಆತನೊಬ್ಬ ರಾಜನಲ್ಲವೇ? ರಾಜನೊಬ್ಬ ಪರಕೀಯರೊಂದಿಗೆ ಹೋರಾಡಿದ್ದನ್ನೇ ಸ್ವಾತಂತ್ರ್ಯ ಸಂಗ್ರಾಮವೆನ್ನುವುದಾದರೇ, ಈ ದೇಶದ ಪ್ರಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿಯಂತ ಇದ್ದರೆ ಅದು ಉಳ್ಳಾಲದ ರಾಣಿ ಅಬ್ಬಕ್ಕ ಮಾತ್ರವೇ.ರಾಣಿ ಅಬ್ಬಕ್ಕ ಪೋರ್ಚುಗೀಸರೊಂದಿಗೆ ಯುದ್ಧಕ್ಕಿಳಿದಾಗ, ಟಿಪ್ಪು ಸುಲ್ತಾನ ಬಿಡಿ ಅವರಪ್ಪ ಹೈದರನೇ ಹುಟ್ಟಿರಲಿಲ್ಲ.ಟಿಪ್ಪುವನ್ನು ಹಾಡಿ ಹೊಗಳಿದರೆ ಮುಸ್ಲಿಮರ ವೋಟು ಬುಟ್ಟಿಯಲ್ಲಿ ಬಂದು ಬೀಳುತ್ತದೆ. ರಾಣಿ ಅಬ್ಬಕ್ಕ ಮತ್ತವರ ವೀರ ಮೊಗವೀರ ಪಡೆಯ ಕತೆ ಹೇಳಿದರೆ ಸಿದ್ಧರಾಮಯ್ಯನವರಿಗೇನು ಲಾಭ ಹೇಳಿ? ಹಾಗಾಗಿಯೇ  ಖುದ್ದು ಮುಖ್ಯಮಂತ್ರಿ ಮತ್ತವರ ರಾಜ್ಯ ಸರ್ಕಾರ ಇತಿಹಾಸಕ್ಕೆ ಅಪಚಾರವೆಸಗಿರುವುದು.ಟಿಪ್ಪು ಸುಲ್ತಾನ, ಸುಲ್ತಾನ್ ಸಿದ್ಧರಾಮಯ್ಯನವರ ಬಗ್ಗೆ ಬರೆದು ಸಮಯ ವ್ಯರ್ಥ ಮಾಡುವ ಬದಲು, ಉಳ್ಳಾಲದ ವೀರರಾಣಿ ಅಬ್ಬಕ್ಕನ ಬಗ್ಗೆ ಹೇಳುತ್ತೇನೆ. ಆ ನಂತರ ಪ್ರಪ್ರಥಮ ಸ್ವಾತಂತ್ರ್ಯ ಹೋರಾಟಗಾರ ಪಟ್ಟ ಯಾರಿಗೆ ದಕ್ಕಬೇಕೆನ್ನುವುದನ್ನು ಓದುಗರೇ ನಿರ್ಧರಿಸಲಿ…

ಸ್ವಾತಂತ್ರ್ಯದ ದೀಪ ಹಚ್ಚಿದ ಮೊದಲ ಭಾರತದ ನಾರಿಯ ನೆನೆಯುತ್ತ…

’ಇತಿಹಾಸ ಯಾವಾಗಲು ಗೆದ್ದವರ ಸ್ವತ್ತು’ ಅನ್ನೋ ಮಾತಿದೆಯಲ್ಲ,ಆ ಮಾತು ನಿಜವೆ ಆಗಿದ್ದರೆ 15-16 ಶತಮಾನದಲ್ಲಿ ತನ್ನ ಪರಾಕ್ರಮಗಳಿಂದಾಗಿ ’ಯುರೋಪ್-ಪರ್ಷಿಯ’ಗಳಲ್ಲಿ ಪ್ರಖ್ಯಾತಳಾಗಿದ್ದ ನಮ್ಮ ’ಉಲ್ಲಾಳದ ರಾಣಿ ಅಬ್ಬಕ್ಕ’ ಅನ್ನೋ ಧೀರ ಹೆಣ್ಣು ಮಗಳ ಹೆಸರು ಇಂದು ಪ್ರತಿಯೊಬ್ಬ ಭಾರತೀಯನಿಗೂ ಗೊತ್ತಿರಬೇಕಿತ್ತು! ಆದರೆ ನಮ್ಮಲ್ಲಿ ಎಷ್ಟು ಜನಕ್ಕೆ ಗೊತ್ತಿದೆ ರಾಣಿ ಅಬ್ಬಕ್ಕಳ ಬಗ್ಗೆ? ಯಾರು ಈ ರಾಣಿ ಅಬ್ಬಕ್ಕ?

ಅಬ್ಬಕ್ಕ ಮೂಡಬಿದಿರೆಯ ರಾಣಿ.ಉಲ್ಲಾಳ ಅವಳ ರಾಜ್ಯದ ರಾಜಧಾನಿಯಾಗಿತ್ತು.ಚಿಕ್ಕ ವಯಸ್ಸಿನಿಂದಲೇ ಚುರುಕಾಗಿದ್ದ ಹುಡುಗಿಗೆ ಯುದ್ಧ ಕಲೆಗಳು ಸಿದ್ಧಿಸಿದ್ದವು.ಪ್ರಾಯಕ್ಕೆ ಬಂದಾಗ ಮಂಗಳೂರಿನ ಅರಸನೊಂದಿಗೆ ಮದುವೆಯಾಯಿತಾದಾದರೂ ಅದು ಮುರಿದು ಬಿತ್ತು.ಗಂಡ-ಹೆಂಡಿರ ನಡುವೆ ವಿರಸಕ್ಕೆ ಕಾರಣವಾಗಿದ್ದು ಅಬ್ಬಕ್ಕಳ ದೇಶ ಪ್ರೇಮ! ಹೌದು. ಅಬ್ಬಕ್ಕಳ ಪತಿರಾಯ, ಆಗಿನ ಕಾಲದಲ್ಲಿ ಗೋವಾವನ್ನ ಆಕ್ರಮಿಸಿಕೊಂಡು ನಂತರ ಕರಾವಳಿ ಹಾಗೆ ನಿಧಾನವಾಗಿ ಇಡೀ ಭಾರತವನ್ನ ಆಪೋಷನ ತೆಗೆದುಕೊಳ್ಳಲು ಕಾಯುತಿದ್ದ ’ಪೋರ್ಚುಗೀಸ್’ ಅನ್ನೋ ರಕ್ಕಸ ಪಡೆಯ ಜೊತೆ ಗುರುತಿಸಿಕೊಂಡಿದ್ದೇ,ಗಂಡನನ್ನ ಬಿಟ್ಟು ಬರಲು ಕಾರಣವಾಯಿತು.

ಖುದ್ದು ಆಕೆಯ ಗಂಡನನ್ನೆ ದಾಳವಾಗಿ ಬಳಸಿಕೊಂಡ ಪೋರ್ಚೂಗೀಸರು ಮೋಸದಿಂದ ಆಕ್ರಮಣ ಮಾಡಿದಾಗ ಅರಮನೆಯಿಂದ ತಪ್ಪಿಸಿಕೊಂಡ ರಾಣಿ ನಡು ರಾತ್ರಿಯಲ್ಲಿ ತನ್ನ ನಂಬುಗೆಯ ಸುಮಾರು 200 ಸೈನಿಕರ ಪಡೆಯನ್ನ ಬೆನ್ನಿಗಿಟ್ಟುಕೊಂಡು ಬಂದು,ಗೆಲುವಲ್ಲಿ ಮೈ ಮರೆತಿದ್ದ ಗಂಡನ ಸೇನೆ ಹಾಗೂ ರಕ್ಕಸ ಪಡೆಯ ಮೇಲೆ ಬಿದ್ದ ಪರಿಗೆ ವೈರಿಗಳ ರುಂಡಗಳು ಉರುಳಿಬಿದ್ದವು,ಉಳಿದ ಗಂಡನ ಕಡೆಯ ಸೈನಿಕರು ಅಬ್ಬಕ್ಕಳ ನಾಯಕತ್ವಕ್ಕೆ ಶರಣಾದರು.

ವಿಜಯನಗರ ಸಾಮ್ರಾಜ್ಯದ ಪತನದ ನಂತರ ಶುರುವಾದ ಆಂತರಿಕ ಕಲಹಗಳ ಲಾಭ ಪಡೆದ ಪೋರ್ಚುಗೀಸರು ಮಂಗಳೂರಿಗೂ ಕಾಲಿಟ್ಟಾಗಿತ್ತು.ಕೆಳದಿಯ ವೆಂಕಟಪ್ಪ ನಾಯಕ ನಿಧಾನವಾಗಿ ಪ್ರದೇಶವನ್ನ ತನ್ನ ಹಿಡಿತಕ್ಕೆ ತೆಗೆದುಕೊಳ್ಳುತಿದ್ದ ಕಾಲವದು.ಭಾರತದ ಮೆಣಸು,ಏಲಕ್ಕಿ,ಅಕ್ಕಿ ಹಾಗೂ ಇತರೆ ಸಾಂಬಾರು ಪದಾರ್ಥಗಳನ್ನ ಇಲ್ಲಿನ ವರ್ತಕರಿಂದ ಕಡಿಮೆ ಬೆಲೆಗೆ ಬಲವಂತವಾಗಿ ಕೊಂಡೊಯ್ದು ತಮ್ಮ ಸಾಮ್ರಾಜ್ಯವನ್ನ ಶ್ರೀಮಂತಗೊಳಿಸಿಕೊಳ್ಳುತಿದ್ದ ಪೋರ್ಚುಗೀಸ್ ರಕ್ಕಸ ಪಡೆಗೆ ’ಉಲ್ಲಾಳ’ ಎಂಬ ಪುಟ್ಟ ಬಂದರು ನಗರಿಯ ಮೇಲೆಯೆ ಸದಾ ಕಣ್ಣು.ಉಳಿದ ರಾಜರೆಲ್ಲ ರಕ್ಕಸ ಪಡೆಗೆ ಶರಣಾಗಿದ್ದರೆ, ರಾಣಿ ಅಬ್ಬಕ್ಕ ಮಾತ್ರ ಪೋರ್ಚೊಗೀಸರ ಆದೇಶಕ್ಕೆ ಸೊಪ್ಪು ಹಾಕದೆ, ಕ್ಯಾಲಿಕಟ್ಟಿನ ಜಾಮೊರಿನ್ಗಳ ಸಹಾಯದಿಂದ ತನ್ನ ಪ್ರದೇಶದ ಪದಾರ್ಥಗಳನ್ನು ಸೀದಾ ಅರಬ್ ದೇಶಗಳಿಗೆ ಕಳಿಸುತಿದ್ದಳು.ಸಹಜವಾಗೆ ಉಲ್ಲಾಳವು ಸಮೃದ್ಧವಾಗಿತ್ತು ಹಾಗೆ ಅರಬ್ ದೇಶದವರು ಕೂಡ ಪೋರ್ಚೂಗೀಸರಿಗಿಂತ ಅಬ್ಬಕ್ಕನ ಜೊತೆಯೆ ವ್ಯವಹಾರ ಮಾಡಲಾರಂಭಿಸಿದ್ದರು.ಇದರಿಂದ ಕೆರಳಿದ ರಕ್ಕಸ ಪಡೆ ಅಬ್ಬಕ್ಕಳ ಸರಕಿನ ಹಡಗುಗಳ ಮೇಲೆ ಆಕ್ರಮಣ ಮಾಡಿತ್ತು.

ಕುಪಿತಳಾದ ಅಬ್ಬಕ್ಕ ಸೀದಾ ನುಗ್ಗಿದ್ದು ಅದಾಗಲೆ ಪೋರ್ಚೂಗೀಸರಿಂದ ಲೂಟಿಯಾಗಿ ಬಂಧಿಯಾಗಿದ್ದ ’ಮಂಗಳೂರಿಗೆ’. ಅಬ್ಬಕ್ಕಳ ಆರ್ಭಟಕ್ಕೆ ಪೋರ್ಚೂಗೀಸರು ಹಿಮ್ಮೆಟ್ಟಿದ್ದರು ’ಮಂಗಳೂರು’ ಅಬ್ಬಕ್ಕಳ ತೆಕ್ಕೆಗೆ ಬಿತ್ತು.ರಕ್ಕಸ ಪಡೆಗೆ ಮುಖಭಂಗವಾಗಿತ್ತು.ಅಬ್ಬಕ್ಕ ಯುರೋಪ್ನಾದ್ಯಾಂತ ಮನೆ ಮಾತಾಗಿದ್ದಳು. ರಕ್ಕಸ ಪಡೆಯೊಂದಿಗೆ ಆಕೆಯದ್ದು ನಿರಂತರ ಸಂಘರ್ಷ.ಹಾಗೆ ಮತ್ತೊಂದು ಯುದ್ಧದಲ್ಲಿ ಮಂಗಳೂರು ರಕ್ಕಸರ ಪಾಲಾಗಿತ್ತು.ಬಂಗಾಡಿಯನ್ನ ವಶ ಪಡಿಸಿಕೊಂಡ ಕೆಳದಿಯ ನಾಯಕ,ಮಂಗಳೂರಿನ ಕಡೆ ಹೊರಟಾಗ, ಉಲ್ಲಾಳ ಸುಲಭದ ತುತ್ತಾಗಬಹುದು ಎಂದು ಎಣಿಸಿ ತಮ್ಮ ನೌಕಾ ಪಡೆಯ ಮೂಲಕ ಪೋರ್ಚೂಗೀಸರು ಆಕ್ರಮಣ ಮಾಡಿದರು.ತನ್ನ ನಿಷ್ಟಾವಂತ ಮೊಗವೀರ ಸೈನಿಕರನ್ನ ಚಿಕ್ಕ ದೋಣಿಗಳಲ್ಲಿ ಶತ್ರುಗಳ ನೌಕಾಪಡೆಯ ಬಳಿಗೆ ’ಶತ್ರುಗಳನ್ನ ಹಿಮ್ಮೆಟ್ಟಿಸಿ,ಸಮುದ್ರಕ್ಕೆ ಆಹಾರವಾಗಿಸಿ’ ಅನ್ನುವ ಘೋಷ ವಾಕ್ಯದೊಂದಿಗೆ ಸದ್ದಿಲ್ಲದೆ ಕಳಿಸಿದ್ದಳು ಅಬ್ಬಕ್ಕ! ಬಳಿ ಸಾಗಿದ ಸೈನಿಕರು ತೆಂಗಿನ ನಾರು,ಚಿಪ್ಪಿಗೆ ಬೆಂಕಿ ಹಚ್ಚಿ ಪೊರ್ಚೂಗೀಸರ ನೌಕಪಡೆಯನ್ನೆ ದ್ವಂಸ ಮಾಡಿದ್ದರು.ಮತ್ತೊಮ್ಮೆ ಬೆಚ್ಚಿ ಬಿದ್ದಿತ್ತು ಯುರೋಪ್!

ಬಹುಶಃ ಇದಕ್ಕೆ ಇರಬೇಕು ’ಸ್ಪಾನಿಶ್ ಆರ್ಮಡಾವನ್ನ ಸೋಲಿಸಿದ್ದ ಬ್ರಿಟನ್ನಿನ ಮೊದಲನೆ ಎಲಿಜಬೆತ್ಗಿಂತಲು ರಾಣಿ ಅಬ್ಬಕ್ಕ ಮುಂದಿನ ಸಾಲಲ್ಲಿ ನಿಲ್ಲುತ್ತಾಳೆ’ ಅಂತ ಇಟಲಿಯ ಯಾತ್ರಿಕ ’ಪಿಯಟ್ರೊ ಡಿ ವಿಲ್ಲೇ’ ವರ್ಣಿಸಿದ್ದು.

ಕೇವಲ ಯುದ್ಧ ಕಲೆ ಮಾತ್ರವಲ್ಲದೆ,ರಾಜತಾಂತ್ರಿಕತೆಯಲ್ಲು ನಿಪುಣಳಾಗಿದ್ದ ಅಬ್ಬಕ್ಕ, ಕೆಳದಿಯ ವೆಂಕಟಪ್ಪ ನಾಯಕ,ಬಿಜಾಪುರದ ಸುಲ್ತಾನ,ಕ್ಯಾಲಿಕಟ್ನ ಜಾಮೋರಿನ್ಗಳ ಜೊತೆ ಗೆಳೆತನ ಸಾಧಿಸಿದ್ದಳು.ಈ ನಾಲ್ವರ axis ನಿಂದಾಗಿ ಕೂಡ ಪೋರ್ಚೂಗೀಸರಿಗೆ ಅಬ್ಬಕ್ಕ ತಲೆನೋವಾಗಿದ್ದಳು.ಕಡೆಗೂ ಆಕೆಯ ಗಂಡನ ಮೋಸದಿಂದಲೆ ಆಕೆ ಸೋತಳು.ಯುದ್ಧದಲ್ಲಿ ಸೆರೆ ಸಿಕ್ಕ ಅಬ್ಬಕ್ಕ ಸೆರೆಮನೆಯಲ್ಲಿ ಕ್ರಾಂತಿಗೆ ಪ್ರಯತ್ನಿಸಿದಾಗ ರಕ್ಕಸ ಪಡೆಯ ಗುಂಡಿಗೆ ಬಲಿಯಾದಳು ಅನ್ನೋದು ಒಂದು ಮಾಹಿತಿಯಾದರೆ,ಮಾರಣಾಂತಿಕವಾಗಿ ಪೆಟ್ಟು ತಿಂದ ಅಬ್ಬಕ್ಕಳನ್ನ ಪೋರ್ಚೊಗೀಸರು ಮುಟ್ಟದಿರಲಿ ಎಂದು ಅವಳ ನೆಚ್ಚಿನ ಸೈನಿಕರು ಬೇರೆಡೆಗೆ ತಂದರು ಅಲ್ಲಿ ಆಕೆ ಅಸ್ತಂಗತಳಾದಳು ಅನ್ನೋದು ಇನ್ನೊಂದು ಮಾಹಿತಿ.

ಪರ್ಶಿಯಾದ ದೊರೆಯಿಂದ ಅಬ್ಬಕ್ಕಳ ಗುಣಗಾನ ಕೇಳಿದ್ದ ಇಟಾಲಿಯನ್ ಯಾತ್ರಿಕ ’ಪಿಯಟ್ರೊ ಡಿ ವಿಲ್ಲೇ’ ಅಬ್ಬಕ್ಕಳನ್ನ ಭೇಟಿ ಮಾಡಲೆಂದು ಬಂದ, ಪಕ್ಕದ ಊರಿಗೆ ಕೆಲಸದ ಮೇಲೆ ಹೋದ ರಾಣಿಯ ದಾರಿ ಕಾಯುತ್ತ ನಿಂತಿದ್ದ.೮-೧೦ ಜನರೊಂದಿಗೆ ’ಬರಿಗಾಲಲ್ಲಿ’ ಸಾಧಾರಣ ಸೀರೆಯನ್ನುಟ್ಟು ಬಂದು ನಿಂತಿದ್ದಳು ರಾಣಿ ಅಬ್ಬಕ್ಕ! ಪ್ರಪಂಚ ಯಾನ ಮಾಡಿಕೊಂಡು ಹಲವು ದೇಶದ ರಾಜ-ರಾಣಿಯರ ವೈಭವನ್ನ ಕಂಡು ಬಂದಿದ್ದ ವಿಲ್ಲೇ ಅಬ್ಬಕ್ಕಳ ಸರಳತೆಗೆ ದಂಗು ಬಡಿದು ಹೋಗಿದ್ದ.ಸಾಮಾನ್ಯ ಮಹಿಳೆಯಂತೆ ಕಾಣುವ ಈಕೆಯೇ ಏನು ಪೊರ್ಚುಗ್ರೀಸರ ಎಡೆಮುರಿ ಕಟ್ಟಿದವಳು?ಪರ್ಷಿಯಾದ ದೊರೆ ವರ್ಣನೆ ಮಾಡಿದ ಸಾಹಸಿ ಮಹಿಳೆ ಈಕೆಯೇನಾ ಅನ್ನುವ ಅನುಮಾನವು ಅವನನ್ನ ಬಹುಶಃ ಕಾಡದೆ ಇದ್ದಿರಲಾರದು!

ಕ್ರಮ ಬದ್ಧವಾದ ಭಾರತದ ಮೊದಲ ನೌಕಾಪಡೆಯನ್ನ ಕಟ್ಟಿದ ಶ್ರೇಯಸ್ಸು ಅಬ್ಬಕ್ಕಳಿಗೆ ಸಲ್ಲುತ್ತದೆ.ಹಾಗೆಯೆ ವಿದೇಶಿ ಆಕ್ರಮಣಕಾರರಿಂದ ಭಾರತಮಾತೆಯ ರಕ್ಷಣೆಗೆ ನಿಂತ “ಮೊಟ್ಟ ಮೊದಲ ಭಾರತ ನಾರಿ,ಸ್ವಾತಂತ್ರ್ಯ ಹೋರಾಟಗಾರ್ತಿ ರಾಣಿ ಅಬ್ಬಕ್ಕ”.

ಭಯ ಅಂದರೇನು ಅನ್ನುವುದೆ ತಿಳಿಯದ ಆಕೆಯನ್ನ ಜನ ’ಅಭಯ ರಾಣಿ’ ಅಂತ ಕರೆಯುತಿದ್ದರು.ಕಡೆಯ ಬಾರಿಗೆ ಯುದ್ಧದಲ್ಲಿ ’ಅಗ್ನಿವನ’ (ಬೆಂಕಿ ಬಾಣ) ಬಳಸಿದ ಕೀರ್ತಿಯು ಆಕೆಯದೆ ಅನ್ನುವ ಮಾತುಗಳಿವೆ.ಅಸಲಿಗೆ ಮೂರು ಜನ ಅಬ್ಬಕ್ಕರಿದ್ದರು.ಮೊದಲನೆಯ ರಾಣಿ ಅಬ್ಬಕ್ಕಳಿಗೆ ಇಬ್ಬರು ಹೆಣ್ಣು ಮಕ್ಕಳು ಇಬ್ಬರು ಬಹು ಪರಾಕ್ರಮಿಗಳು ಅದರಲ್ಲು ಎರಡನೆಯವಳು ಬಲಶಾಲಿ ಅನ್ನುವ ಮಾತಿದೆಯಾದರೂ.ತುಳು ಜನಪದದಲ್ಲಿ,ಭೂತಾರಧನೆಯಲ್ಲಿ ಮೂರು ಜನ ಅಬ್ಬಕ್ಕರಿಗೂ ಒಂದೆ ಸ್ಥಾನ ನೀಡಲಾಗಿದೆ.

ಯಥಾ ಪ್ರಕಾರ ಭಾರತದ ಇತಿಹಾಸ ಇಂತ ಮಹಾನ್ ಹೋರಾಟಗಾರ್ತಿಯನ್ನು ಕಡೆಗಣಿಸಿದೆ. ಅಲ್ಲೊಬ್ಬರು ಇಲ್ಲೊಬ್ಬರು ದನಿಯೆತ್ತಿದ್ದರಿಂದಾಗಿ ಮಂಗಳೂರಿನಲ್ಲಿ ಹಾಗೂ ಬೆಂಗಳೂರಿನ ಮೂಲೆಯಲ್ಲಿ ಅಬ್ಬಕ್ಕಳ ಪ್ರತಿಮೆ ಸ್ಥಾಪನೆಯಾಗಿತ್ತು.ರಸ್ತೆ ಅಗಲೀಕರಣ,ಮೆಟ್ರೋ ಕಾಮ್ಗಾರಿಗೆ ಸಿಕ್ಕು ಅದೀಗ ಕಳೆದುಹೋಗಿದೆ.ಪ್ರತಿವರ್ಷ ಉಲ್ಲಾಳದಲ್ಲಿ ಅಬ್ಬಕ್ಕ ಉತ್ಸವ ನಡೆಯುತ್ತದೆ,ಅಲ್ಲಿ ತೆಗೆದುಕೊಳ್ಳುವ ನಿರ್ಣಯಗಳು ಎಂದಿನ ಸರ್ಕಾರಿ ನಿಯಮದಂತೆ ಕಸದ ಬುಟ್ಟಿ ಸೇರುತ್ತವೆ.ಉದಾಹರಣೆಗೆ ಗುಲಾಮಿ ಗುರುತಿಗೆ ಅಂತಲೆ ಈಗಲು ನಾವು ಉಳಿಸಿಕೊಂಡಿರೋ ವಿಧಾನ ಸೌಧದ ಬಳಿಯೆ ಇರೋ ’Queens Road’ ಅನ್ನು ’ರಾಣಿ ಅಬ್ಬಕ್ಕ ರಸ್ತೆ’ ಅಂತ ಮಾಡಿ ಅನ್ನುವ ಒಂದು ನಿರ್ಣಯಕ್ಕೆ ಇನ್ನ ಮುಕ್ತಿ ಸಿಕ್ಕಿಲ್ಲ.ಪುಣ್ಯಕ್ಕೆ ೨೦೦೩ರಲ್ಲಿ ಭಾರತ ಅಂಚೆಯವರು ಆಕೆಯ ನೆನಪಿಗೆ ಸ್ಟಾಂಪ್ಗಳನ್ನ ಹೊರತಂದರಾದರೂ ಒಟ್ಟಾರೆಯಾಗಿ ಇಡೀ ಭಾರತೀಯರ ಮನದಲ್ಲಿ ಅಬ್ಬಕ್ಕಳನ್ನ ಸ್ಥಾಪಿಸಬೇಕಾಗಿದ್ದ ಕಾರ್ಯವನ್ನ ಭಾರತ ಸರ್ಕಾರ ಹಾಗೂ ಕರ್ನಾಟಕದ ರಾಜಕೀಯ ಪಕ್ಷಗಳು ಎಂದಿಗೂ ಮಾಡಿಲ್ಲ.

ಯಾವ ಸರ್ಕಾರ ಅಬ್ಬಕ್ಕಳನ್ನ ಮರೆತರೆ ಏನು,ಉಲ್ಲಾಳ ಸಮುದ್ರದ ಅಲೆ ಅಲೆಯು ಅಬ್ಬಕ್ಕಳ ಕತೆಯನ್ನ ಹೇಳುತ್ತಲೆ ಇರುತ್ತವೆ,ಹಾಗೆ ತುಳು ನಾಡಿನ ಜನಪದದಲ್ಲಿ,ಭೂತಾರಧನೆಯಲ್ಲಿ ಆಕೆ ಎಂದಿಗೂ ಅಮರಳಾಗಿರುತ್ತಾಳೆ.

ಸ್ವಾಮಿ ಸಿದ್ಧರಾಮಯ್ಯನವರೇ,ಇತಿಹಾಸ ಓದಿಕೊಳ್ಳಿ, ನಂತರ ಹೇಳಿ.ಭಾರತದ ಪ್ರಪ್ರಥಮ ಸ್ವಾತಂತ್ರ್ಯ ಹೋರಾಟಗಾರ ಯಾರು?ಇನ್ನ ಮುಂದೆಯಾದರೂ ಅಬ್ಬಕ್ಕಳನ್ನ ಭಾರತದ ಪ್ರಪ್ರಥಮ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿ ಅಂತ ಭಾರತ ಸರ್ಕಾರ ಘೋಶಿಸಲಿ,ಉಳಿದ ವೀರರಿಗೆ ಸಿಕ್ಕ ಸ್ಥಾನಮಾನ ಅಬ್ಬಕ್ಕಳಿಗೂ ಸಿಗಲಿ.ಅಬ್ಬಕ್ಕ ಉತ್ಸವ ಉಲ್ಲಾಳದಿಂದ ವಿಧಾನಸೌಧದ ಮೆಟ್ಟಿಲಿವರೆಗೂ ಬರುವಂತಾಗಲಿ.ಅದು ಈ ದೇಶದ ಸಮಸ್ತ ಮಹಿಳೆಯರಿಗೂ ಸಲ್ಲಿಸುವ ಗೌರವವಾಗುತ್ತದೆ.

1 ಟಿಪ್ಪಣಿ Post a comment
  1. ಬಸವರಾಜ.....
    ಆಗಸ್ಟ್ 13 2019

    ರಾಣಿ ಅಬ್ಬಕ್ಕ ದೇವಿಯ ದೇಶಭಕ್ತಿಯೂ ,ಹೋರಾಟದ ಕಿಚ್ಚು ಅಜರಾಮರ್…..

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments