ವಿಷಯದ ವಿವರಗಳಿಗೆ ದಾಟಿರಿ

ಡಿಸೆಂಬರ್ 5, 2017

ಮಾರ್ಕ್ಸ್ ವಾದ ಮತ್ತು ನೆಹರೂವಾದ ಗಾಂಧಿವಾದವನ್ನು ಕೊಂದಿತೇ?

‍ನಿಲುಮೆ ಮೂಲಕ

ಡಾ|| ಬಿ.ವಿ ವಸಂತ ಕುಮಾರ್
ಕನ್ನಡ ಪ್ರಾಧ್ಯಾಪಕರು
ಮಹಾರಾಣಿ ಮಹಿಳಾ ಕಾಲೇಜು
ಮೈಸೂರು

ಇಂದು ಕೇರಳ ಹಾಗೂ ಕರ್ನಾಟಕದಲ್ಲಿ ಕ್ರಮವಾಗಿ ಮಾರ್ಕ್ಸ್ ವಾದಿ ಹಾಗೂ ನೆಹರೂವಾದೀ ಪ್ರಭುತ್ವಗಳು ಆಳುತ್ತಿವೆ. ಈ ಎರಡೂ ರಾಜ್ಯಗಳಲ್ಲಿ ಸೈದ್ಧಾಂತಿಕವಾದ ಕಾರಣಗಳಿಗಾಗಿ ಹಿಂದೂ ಕಾರ್ಯಕರ್ತರ ಕೊಲೆಗಳು ಆಗುತ್ತಿವೆ ಎಂಬ ಚರ್ಚೆಗಳು ನಡೆಯುತ್ತಿವೆ. ಇದರೊಟ್ಟಿಗೆ ಕೇರಳ ಹಾಗೂ ಕರ್ನಾಟಕದ ಪಿ.ಎಫ್.ಐ ಸಂಘಟನೆಯು ಮುಸ್ಲಿಂ ಮೂಲಭೂತವಾದಿ ಹಾಗೂ ಭಯೋತ್ಪಾದನಾ ಚಟುವಟಿಕೆಗಳ ಸಂಗವಿರುವ ಸಂಘಟನೆಗಳ ಜೊತೆಗೆ ಹೆಸರು ತುಳುಕು ಹಾಕಿಕೊಂಡಿದೆ. ಈ ನಡುವೆ ದಕ್ಷಿಣ ಭಾರತದ ಹೆಸರಾಂತ ನಟ ಕಮಲಹಾಸನ್ ಹಿಂದೂ ಭಯೋತ್ಫಾದನೆಯ ಬಗ್ಗೆ ಹೇಳಿಕೆ ನೀಡುತ್ತಿದ್ದಾರೆ. ಅದನ್ನು ಮತ್ತೊಬ್ಬ ಕನ್ನಡದ ನಟ ಪ್ರಕಾಶ ರೈ ಸಮರ್ಥಿಸಿದ್ದಾರೆ. ಈ ಎಲ್ಲಾ ವಿದ್ಯಮಾನಗಳನ್ನು ಬಿಜೆಪಿಯ ರಾಜ್ಯ ನಾಯಕರು ಹಾಗೂ ರಾಷ್ಟ್ರ ನಾಯಕರು ಖಂಡಿಸಿ ಹೋರಾಟಕ್ಕಿಳಿದಿದ್ದಾರೆ.

ಇಂಥ ಸಂದರ್ಭದಲ್ಲಿ ಒಂದು ಕಾಲದ ಸಮಾಜವಾದದ ಗರಡಿಯಲ್ಲಿ ಪಳಗಿದ್ದಂಥ ಸಿದ್ಧರಾಮಯ್ಯನವರು ಕರ್ನಾಟಕದ ಕಾಂಗ್ರೇಸ್ ಮುಖ್ಯಮಂತ್ರಿಯಾಗಿ ಆಳುತ್ತಿದ್ದಾರೆ. ಕಮ್ಯುನಿಸ್ಟ್ ಸರ್ಕಾರವಿರುವ ಕೇರಳದ ವೇಣುಗೋಪಾಲ ಎಂಬುವವರು ಕರ್ನಾಟಕ ಕಾಂಗ್ರೆಸ್ಸಿನ ಉಸ್ತುವಾರಿಯಾಗಿದ್ದಾರೆ. ಇಂಥ ವರ್ತಮಾನದಲ್ಲಿ ರಾಮಮನೋಹರ ಲೋಹಿಯಾ ಅವರ ‘ಮಾಕ್ರ್ಸ್, ಗಾಂಧಿ ಸಮಾಜವಾದ’ ಭಾಗ-1 ಕೃತಿಯಲ್ಲಿನ ಕೆಲವು ಚಿಂತನೆಗಳು ಗಮನ ಸೆಳೆಯುತ್ತವೆ. ಬಾಲ್ಯದಲ್ಲೇ ಮಾರ್ಕ್ಸ್ ವಾದದಿಂದ ಪ್ರಭಾವಿತರಾಗಿ ಮುಂದೆ ಸಮಾಜವಾದದ ಚಿಂತಕರಾಗಿ, ಹೋರಾಟಗಾರರಾಗಿ ಭಾರತದ ಪ್ರಮುಖ ರಾಜಕೀಯ ನೇತಾರರಾಗಿ ಬೆಳಗಿದವರು ರಾಮಮನೋಹರ ಲೋಹಿಯಾ.

ಮಾರ್ಕ್ಸ್ ವಾದದಲ್ಲಿ ನಿಷ್ಪಾತನಾದವನು ಜೀವನದ ಇತರ ರಂಗಗಳಲ್ಲಿ ಸುಳ್ಳನೂ, ಒರಟು ನಡತೆಯವನೂ, ಮೋಸಗಾರನೂ, ಕೊಲೆಪಾತಕಿಯೂ ಆದಾನು; ಆದರೆ ಸ್ವಂತ ಸ್ವತ್ತನ್ನು ಮಾಡಿಕೊಳ್ಳುವುದರ ಬಗ್ಗೆ ಮಾತ್ರ ವ್ಯಾಮೋಹಗ್ರಸ್ತನಾಗಲಾರನು. ಇದು ಮಾರ್ಕ್ಸ್ ವಾದದ ಮಹಾನ್ ಸಾಧನೆ; (ಪುಟ 186, 187) ಎಂದಿದ್ದಾರೆ. ಈ ಮಾತು ಇಂದಿನ ಕೇರಳ ಕಮ್ಯುನಿಸ್ಟ್ ನಾಯಕರು ಮತ್ತು ಅವರ ಕಾರ್ಯಕರ್ತರ ಸೈದ್ಧಾಂತಿಕ ಬದ್ಧತೆ ಹಾಗೂ ಅದಕ್ಕಾಗಿ ಕೊಲೆಪಾತಕಿಗಳೂ ಆಗುತ್ತಿರುವ ವರ್ತಮಾನಕ್ಕೆ ಬರೆದ ಮುನ್ನುಡಿಯೇನೋ ಎಂದೆನಿಸುವಷ್ಟು ಸ್ಪಷ್ಟವಾಗಿದೆ. ಈ ಮಾತು ಸ್ಟಾಲಿನ್ ಆಡಳಿತದಿಂದ ಹಿಡಿದು ಬಂಗಾಳ ಕೇರಳದ ಕಮ್ಯುನಿಸ್ಟ್ ಆಡಳಿತಕ್ಕೂ ಅನ್ವಯಿಸುವಂತಿದೆ. ಕಾರ್ಲ್‍ಮಾಕ್ರ್ಸ್ ಕೊಲೆಗಾರರಾಗಲು ಹೇಳಲಿಲ್ಲ. ಆದರೆ ಅವನ ಒಡನಾಡಿಯಾಗಿದ್ದ ಲೆನಿನ್ ತನ್ನ ಅನುಯಾಯಿಗಳಿಗೆ “ಸಂಸದೀಯ ಅಂಗಗಳಲ್ಲಿ ಸೇರಿಕೊಂಡು ಅವುಗಳನ್ನು ಭಗ್ನಗೊಳಿಸಲಿಕ್ಕಾಗಿ ಕೆಲಸ ಮಾಡಿರಿ, ಕಾರ್ಮಿಕ ವರ್ಗದ ಗೆಲುವಿಗಾಗಿ ಸುಳ್ಳನ್ನು ಹೇಳಿರಿ ಹಾಗೂ ಮಧ್ಯೆ ಕೃಚಿತ್ತಾಗಿ ಕೊಲೆ, ಸುಲಿಗೆಗಳಿಗೆ ಕೊಂಚವೂ ಹೇಸಬೇಡಿರಿ” ಎಂದು ಹೇಳಿದನು (ಪುಟ 194) ಎಂದು ಲೋಹಿಯಾ ಉಲ್ಲೇಖಿಸಿದ್ದಾರೆ.

ಇದೇ ಕಮ್ಯುನಿಸ್ಟ್ ಪಕ್ಷದ ಕೇರಳದ ಅಂದಿನ ಮುಖ್ಯಮಂತ್ರಿ ಇ.ಎಂ.ಎಸ್ ನಂಬೂದರಿ ಪಾದ್ ಮತ್ತು ಲೋಕಸಭಾ ಸದಸ್ಯ ಎ.ಕೆ.ಗೋಪಾಲನ್ ಅವರು ಕಮ್ಯುನಿಸ್ಟ್ ಮುಖಂಡ ಟಿ.ಪಿ ರಣದಿವೆ ರವರು ಲಂಡನ್‍ನಲ್ಲಿ ಕೊಟ್ಟ ಹೇಳಿಕೆಯನ್ನು ಸಮರ್ಥಿಸುತ್ತಾ, 1969 ಆಗಸ್ಟ್ ನಲ್ಲಿ “ರಾಜ್ಯಾಂಗವನ್ನು ಒಳಗಿನಿಂದಲೇ ಭಂಗಗೊಳಿಸಲೆಂದೇ ನಾವು ಸರ್ಕಾರಗಳಲ್ಲಿ ಪ್ರವೇಶಿಸಿದ್ದೆವೆ” ಎಂದಿದ್ದಾರೆ. ಲೆನಿನ್‍ರ ಕರೆಯನ್ನು ಭಾರತದಲ್ಲಿ ಇಂದಿಗೂ ನಿಜ ಮಾಡುತ್ತಿದ್ದಾರೆ. ರಾಜ್ಯಾಂಗವನ್ನು ಭಂಗಗೊಳಿಸುವುದೆಂದರೆ ದೇಶವನ್ನೇ ಭಂಗಗೊಳಿಸಿದಂತಲ್ಲವೇ? ಇಂತಹ ಆದರ್ಶಗಳಿಂದ ಪ್ರೇರಿತವಾದ ಜವಾರಹ್ ಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಕುಮಾರ್ ಕನ್ಹಯ್ಯ ಅವರಿಂದ ಭಾರತ ಬರ್ಬಾದಾಗಲಿ, ಭಾರತದ ಸೈನಿಕರಿಂದ ಕಾಶ್ಮೀರ ಅಜಾದಿ ಆಗಲಿ ಎಂಬಂಥ ಘೋಷಣೆಗಳನ್ನಲ್ಲದೇ ಮತ್ತೇನನ್ನು ನಿರೀಕ್ಷಿಸಲು ಸಾಧ್ಯ? ಆದರೆ ರಾಷ್ಟ್ರದ ಸ್ವತಂತ್ರ್ಯಕ್ಕಾಗಿಯೇ ಹುಟ್ಟಿ, ಹೋರಾಡುತ್ತಾ ಬೆಳೆದ ರಾಷ್ಟ್ರೀಯ ಪಕ್ಷವಾದ ಕಾಂಗ್ರೇಸ್‍ನ ಮಾಜಿ ಗೃಹಮಂತ್ರಿ ಪಿ.ಚಿಂದಂಬರ್ ರವರು ಕಾಶ್ಮೀರ ಸ್ವತಂತ್ರವಾಗಲಿ, ಸ್ವಾಯತ್ತ್ತವಾಗಲಿ ಎಂಬ ಹೇಳಿಕೆ ನೀಡುವುದನ್ನು ಏನೆಂದು ಕರೆಯಬೇಕು? ಇದು ಆಕಸ್ಮಿಕವೋ? ಇದು ಉದ್ದೇಶಿತವೋ? ಸಾಂದರ್ಭಿಕವೋ? ಸೈದ್ಧಾಂತಿಕವೋ? ವರ್ತಮಾನದ್ದೋ? ಚಾರಿತ್ರಿಕವಾದದ್ದೋ? ಎಂಬುದನ್ನು ಪರಿಶೀಲಿಸಬೇಕಾಗುತ್ತದೆ. ಆ ಹಿನ್ನೆಲೆಯಲ್ಲಿ ಲೋಹಿಯಾ ಅವರ ಈ ಉಲ್ಲೇಖ ಮನನೀಯ:

“ಗಾಂಧಿವಾದ ಇವತ್ತು ತನ್ನ ಎರಡೂ ರೆಂಬೆಗಳಲ್ಲಿ ಕಾಣಿಸಿಕೊಳ್ಳುತ್ತದೆ. ಒಂದು ಸರ್ಕಾರದ್ದು, ಇನ್ನೊಂದು ಮಠೀಯವಾದದ್ದು. ಸರ್ಕಾರೀಯ ಮತ್ತು ಮಠೀಯ ಎಂಬ ಈ ಎರಡು ವಿಭಾಗಗಳು ಒಟ್ಟಾಗಿ ನಾವು ಅಧಿಕೃತವಾಗಿ ಸ್ವೀಕರಿಸಿರುವ ಗಾಂಧಿವಾದವಾಗಿ ಕಾಣಿಸಿಕೊಳ್ಳುತ್ತದೆ” (ಪುಟ 17). `ಇವತ್ತು ಈ ದೇಶದಲ್ಲಿ ಕಂಡು ಬರುತ್ತಿರುವುದು ಗಾಂಧಿವಾದವಾಗಿರದೇ ಗಾಂಧಿವಾದ ಹಾಗೂ ಮಾರ್ಕ್ಸ್ ವಾದದ ದುರ್ಬಲವಾದ ಮಿಶ್ರಣವಾಗಿದೆ ಎಂದು ಆಪಾದಿಸಲಾಗುತ್ತಿದೆ. ಈ ವಾದದಲ್ಲಿ ಹುರುಳಿಲ್ಲದಿಲ್ಲ’ (ಪುಟ 16) ಒಂದು ಅಹಿಂಸೆಯ ಸಿದ್ಧಾಂತವನ್ನು ಅಥವಾ ಪ್ರಜಾಪ್ರಭುತ್ವದ ಸಿದ್ಧಾಂತವನ್ನು ಮಾರ್ಕ್ಸ್ ವಾದ ಅಥವಾ ಕಮ್ಯೂನಿಸ್ಟರ ಆರ್ಥಿಕ ಸಿದ್ಧಾಂತದ ಜೊತೆಗೆ ಬೆರಕೆ ಮಾಡುವುದು ಮುಠ್ಠಾಳತನ.

ಭಾರತೀಯ ಸಮಾಜವಾದವು ಅನೇಕ ವರುಷಗಳಿಂದಲೂ ಈ ಗಾಂಧಿವಾದ ಅಥವಾ ಪ್ರಜಾಪ್ರಭುತ್ವದ ನಂಬಿಕೆಗಳನ್ನು ಹಾಗೂ ಕಮ್ಯುನಿಸಂ, ಮಾರ್ಕ್ಸ್ ವಾದದ ನಂಬಿಕೆಗಳನ್ನು ಬೆರೆಕೆ ಮಾಡುವ ಸಾಂಕ್ರಾಮಿಕ ರೋಗದಿಂದ ಸಾಕಷ್ಟು ನರಳಿದೆ. ಈ ನಿಷ್ಪ್ರಯೋಜಕವಾದ ಪ್ರಯತ್ನದಿಂದ ಮನುಷ್ಯನ ಮನಸ್ಸು ಕೊಳಕಾದ, ಕೆಲಸಕ್ಕೆ ಬಾರದ ಆಲೋಚನೆಗಳ ಹಗ್ಗವನ್ನು (ಕೆಲವಂಶವನ್ನು ಮಾರ್ಕ್ಸ್ ವಾದದಿಂದಲೂ ಕೆಲವಂಶವನ್ನು ಗಾಂಧಿವಾದದಿಂದಲೂ ತೆಗೆದು) ಹೊಸೆಯಬಹುದೇ ವಿನಃ ಇನ್ನೇನೂ ಮಾಡಲಾರದು (ಪುಟ 199) `ಕಮ್ಯುನಿಸ್ಟ್ ನಿಗೆ ಸುಳ್ಳು ಹೇಳಬೇಡವೆಂದು ಹೇಳುವುದು ನಿಷ್ಪ್ರಯೋಜಕ’ (ಪುಟ196) “ಒಬ್ಬ ಕಮ್ಯನಿಸ್ಟ್ ನೊಡನೆಯೋ ಮಾರ್ಕ್ಸ್ ವಾದಿಯೊಡನೆಯೋ ಒಳ್ಳೆಯ ನಡತೆ, ಕಾರುಣ್ಯಗಳ ಬಗ್ಗೆ ಚರ್ಚೆಗೆ ಇಳಿಯುವುದು ದೊಡ್ಡ ಮೂರ್ಖತನ. ಅವನ ಕ್ರೌರ್ಯಕ್ಕೆ ತಕ್ಕ ಬಹುಮಾನ ಕೊನೆಗೆ ಕಾದಿಲ್ಲವೆಂದು ತಿಳಿಸಬೇಕು. ಆಗಲಾದರೂ ಆತ ವಿಚಾರಪರನಾದಾನು” (ಪಟ 196, 197) ಎನ್ನುವ ಲೋಹಿಯಾ ರವರು ಗಾಂಧೀಜಿಯವರ ಶಿಷ್ಯರನ್ನು ಕುರಿತು “ಈ ಮುಂಚೆ ದ್ರ್ರಷ್ಟಾರನ ಶಿಷ್ಯರೂ ತಮ್ಮ ಮಾರ್ಗದಶಕನನ್ನೂ, ಆತನ ಸಿದ್ಧಾಂತವನ್ನು ಗಾಂಧೀಜಿಯವರ ಅನುಯಾಯಿಗಳಷ್ಟು ಕೆಟ್ಟದಾಗಿ ಅವಹೇಳನ ಮಾಡಿದ್ದಿಲ್ಲ. ಗಾಂಧೀಜಿಯವರ ಗೆಲುವಿನ ಕಾಲದಲ್ಲೇ ಅವರ ಅವಮಾನದ ಕಾಲವೂ ಶುರುವಾಯಿತೆಂದು ಹೇಳಬೇಕು. ಗಾಂಧೀಜಿಯವರ ಸಿದ್ಧಾಂತದ ಅವಹೇಳನದ ಜೊತೆ ಜೊತೆಗೇ ಅವರ ವ್ಯಕ್ತಿತ್ವದ ಅವಹೇಳನವೂ ಪ್ರಾರಂಭವಾಯಿತು. ಗಾಂಧೀಜಿಯವರಂಥ ಮಹಾನ್ ವ್ಯಕ್ತಿಯೊಬ್ಬರಿಗೆ ಅವರಿಗಿಂತಲೂ ಇನ್ನೊಬ್ಬ ದೊಡ್ಡವನಿದ್ದಾನೆಂದು ಘೋಷಿಸುವ ಶಿಷ್ಯರು ಇರಲಾರರು. ಬುದ್ಧ ಗಾಂಧೀಜಿಯವರಿಗಿಂತ ದೊಡ್ಡವನೋ ಅಲ್ಲವೋ ಎಂಬುದು ಪ್ರಶ್ನೆಯಲ್ಲ. ಪ್ರಾಯಶಃ ಆತ ಅವರಿಗಿಂತ ದೊಡ್ಡವನಿರಬಹುದು ಅಥವಾ ಇಲ್ಲದಿರಬಹುದು. ಗಾಂಧೀಜಿಯವರ ಶಿಷ್ಯರೇ ಸಮಯ ಸಿಕ್ಕಾಗಲೆಲ್ಲಾ ಗಾಂಧಿಗಿಂತ ಬುದ್ದ ದೊಡ್ಡವನೆಂದು ಪದೇ ಪದೇ ಹೇಳುತ್ತಾ ಇರುವಂಥ ಉದಾಹರಣೆ ಪ್ರಾಯಶಃ ಇತಿಹಾಸದಲ್ಲಿ ನಮಗೆ ಇನ್ನೊಂದು ಸಿಕ್ಕಲಾರದು. ಬುದ್ಧನಿಗೆ ಅಂಥ ಶಿಷ್ಯರಿರಲಿಲ್ಲ: ಕ್ರಿಸ್ತನಿಗಿರಲಿಲ್ಲ. ಸಾಕ್ರೇಟಿಸನಿಗಿರಲಿಲ್ಲ. ಮಾರ್ಕ್ಸ್ ಗೂ ಕೂಡ ಇರಲಿಲ್ಲ. ಪ್ರಾಯಶಃ ಗಾಂಧಿ ಅವರಿಗೆಲ್ಲ ಸರಿ ಸಮಾನವಲ್ಲದಿರಬಹದು. ಆ ಸರ್ಕಾರ ಗಾಂಧಿವಾದವು ಪ್ರತಿರೋಧಿ ತತ್ವವಾದ ಗಾಂಧೀ ವಾದವನ್ನು ಅಗತ್ಯವಾಗಿ ವಿರೋಧಿಸುತ್ತಲೇ ಇರುತ್ತದೆಂಬ ಅನುಮಾನವನ್ನು ಸುಲಭವಾಗಿ ನಿವಾರಿಸಲು ಸಾಧ್ಯವಿಲ್ಲ” (ಪುಟ 24, 25) ಎಂದು ಹೇಳುತ್ತಾ ಮತ್ತೊಂದೆಡೆ “ಇದರಲ್ಲಿ ಸರ್ಕಾರಿ ಗಾಂಧಿವಾದ ಹಾಗೂ ಮಠೀಯ ಗಾಂಧೀವಾದಗಳೆರಡೂ ಸೇರಿವೆ. ಯಾಕೆಂದರೆ, ಅವು ತಮ್ಮ ಇಡೀ ಜೀವನವನ್ನು ನುಡಿಯಲ್ಲಿ ಹೇಳಿದ್ದನ್ನು ನಡೆಯಲ್ಲಿ ನಿರಾಕರಿಸುವುದರಲ್ಲೇ ಕಳೆದಿವೆ” (ಪುಟ 62) ಎಂದಿದ್ದಾರೆ. “ಭಾರತದಲ್ಲಿ ಈವತ್ತು ಎರಡು ಪ್ರಧಾನವಾದ ತತ್ವಗಳು ಪ್ರಚಲಿತವಾಗಿವೆ. ಭ್ರಷ್ಟವಾದ ಟೊಳ್ಳು ಎಡಪಂಥೀಯವಾದ, ಅಂದರೆ ಮೇಲ್ವರ್ಗದವರ ಎಡಪಂಥೀಯವಾದ, ಹಾಗೂ ಆತ್ಮಗೌರವವಿಲ್ಲದಂಥ ದುರ್ಬಲವಾದ ಬಲಪಂಥೀಯವಾದ… ಏಷ್ಯಾದಲ್ಲಿ ಕಮ್ಯುನಿಸಂ, ದುರ್ಬಲವಾದ ಬಲಪಂಥೀಯವಾದ ಮತ್ತು ಭ್ರಷ್ಟ ಎಡಪಂಥದೊಡನೆ ಹೋರಾಡುವಂತಾಗಿದೆ. ಹೀಗಾಗಿ ಅದಕ್ಕೆ ಪೈಶಾಚಿಕ ದುರಾಸೆ ಬಂದಿದೆ. ಇದಕ್ಕಿರುವ ಒಂದು ಉತ್ತರವೆಂದರೆ ಬುಡ ಮಟ್ಟದಿಂದ ರೂಪುಗೊಳ್ಳುವ ಎಡಪಂಥೀಯವಾದ. ಈ ಎಡಪಂಥೀಯವಾದವು ಆಂತರಿಕ ಅನ್ಯಾಯಗಳನ್ನು ಅಹಿಂಸ ಪ್ರತಿರೋಧದ ಮೂಲಕ ಎದುರಿಸುವ ಶಕ್ತಿ ಪಡೆಯಬೇಕು. ತನ್ನ ದೇಶದ ಭೌಗೋಳಿಕ ಅಖಂಡತೆಗೆ ಧಕ್ಕೆ ಬಂದಾಗ ಈ ರಾಷ್ಟ್ರೀಯ ಕ್ರಾಂತಿಯನ್ನು ತನ್ನ ಹಾಗೂ ಮಿತ್ರ ಪಕ್ಷದ ಸೈನ್ಯಗಳ ಸಮಗ್ರ ಶಕ್ತಿಯ ಜೊತೆಗೆ ಒಗ್ಗೂಡಿಸಿ ಶತ್ರವನ್ನು ಬಗ್ಗು ಬಡಿಯಲು ಆಗ ಈ ಎಡಪಂಥೀಯವಾದಕ್ಕೆ ಸಾಧ್ಯವಾಗಬಹುದು” (ಪುಟ 63, 64) ಎಂದಿದ್ದಾರೆ.

ಭಾರತದ ಕಮ್ಯುನಿಸ್ಟ್ ರು ಕಾರ್ಲ್ ಮಾರ್ಕ್ಸ್ ನನ್ನು ಕಳೆದುಕೊಂಡು ಲೆನಿನ್, ಸ್ಟಾಲಿನ್, ಮಾವೋ ದಾರಿ ಹಿಡಿದು ಪಥ ಭ್ರಷ್ಟರಾದರೇ? ರಾಷ್ಟ್ರೀಯ ಕಾಂಗ್ರೇಸ್ ಮಹಾತ್ಮ ಗಾಂಧಿಜಿ, ವಲ್ಲಭಭಾಯಿ ಪಟೇಲ್, ಶಾಮಪ್ರಸಾದ್ ಮುಖರ್ಜಿ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಕೈಬಿಟ್ಟು ನೆಹರೂವಾದ, ಜಿನ್ನಾವಾದವನ್ನು ಆಲಂಗಿಸಿಕೊಂಡು ದುರ್ಬಲವಾಯಿತೇ? ಬಿಜೆಪಿ ಮತ್ತು ಆರ್.ಎಸ್.ಎಸ್ ಗಾಂಧೀಜಿ, ವಲ್ಲಭಭಾಯಿ ಪಟೇಲ್, ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಸ್ವೀಕರಿಸಿ ಆತ್ಮ ಗೌರವದಿಂದ ಪ್ರಭಲರಾದರೇ? ಮಾರ್ಕ್ಸ್ ವಾದ ಹಾಗೂ ನೆಹರೂ ವಾದಗಳು ಸೇರಿ ಗಾಂಧೀವಾದವನ್ನು ಕೊಂದವೇ? ಗಾಂಧೀಜಿಯನ್ನು ಕೊಂದ ಆರೋಪವನ್ನು ಪದೇ ಪದೇ ಎದುರಿಸುವವರು ಗಾಂಧೀವಾದ ಉಳಿಸಬಲ್ಲವೇ? ವಿಚಾರಣೀಯ!

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments